ಕವಿ ಸುಮತೀಂದ್ರ ನಾಡಿಗರಿಗೆ ಎಪ್ಪತ್ತೈದು ಎಂದು ಪತ್ರಿಕೆಗಳಲ್ಲಿ ಓದಿ ಅಚ್ಚರಿಯಾಯಿತು. ಎಲ್ಲಾದರೂ ಉಂಟೆ? ಇಪ್ಪತ್ತೈದು ಎಂದು ಇರಬೇಕಾದುದು ಅಕ್ಷರ ತಪ್ಪಾಗಿ ಎಪ್ಪತ್ತೈದು ಆಗಿರಬೇಕು! ಯಾಕೆಂದರೆ ನಾಡಿಗರಿಗೆ ಎಷ್ಟೇ ವಯಸ್ಸಾದರೂ ಅದು ಇಪ್ಪತ್ತೈದನ್ನು ದಾಟುವುದಿಲ್ಲ! ಅಷ್ಟೊಂದು ಲವಲವಿಕೆ, ಜೀವನೋತ್ಸಾಹ ಇಟ್ಟುಕೊಂಡ ಕವಿ ಇವರು. ಆದರೆ ಇವರ ಮಟ್ಟಿಗೆ ಲವಲವಿಕೆ ಎಂದೂ `ಲವ್ ಲವಿಕೆ’ ಆಗಲಿಲ್ಲ; ಅಮೇರಿಕದಲ್ಲಿ ಇದು ಆಗುವ ಸಂಭವವಿದ್ದಾಗಲೇ, ಬಹುಶಃ ಅದೇ ಕಾರಣಕ್ಕೆ, ಅವರು ಪಿಎಚ್.ಡಿ. ಮುಗಿಸದೆ ಭಾರತಕ್ಕೆ ಮರಳಿದರು. ಇದನ್ನವರು ತಮ್ಮ `ದಾಂಪತ್ಯಗೀತೆ’ಯಲ್ಲಿ ಸೂಚಿಸಿದ್ದಾರೆ. ಮದಿರೆ ಮತ್ತು ಮಾನಿನಿಯರಲ್ಲಿ ನಾಡಿಗರು ಎರಡನೇದನ್ನು ತ್ಯಜಿಸಿ ಪುರುಷೋತ್ತಮರಾದರೂ ಮೊದಲನೆಯದನ್ನು ತ್ಯಜಿಸಿ ಮರ್ಯಾದಸ್ತರಾಗಲಿಲ್ಲ. ನಾನು ನಾಡಿಗರನ್ನು ಮುಖತಃ ಭೇಟಿಯಾಗದೆ ಹಲವಾರು ವರ್ಷಗಳಾಗಿವೆ; ಆದರೂ ನಾನು ಹೈದರಾಬಾದಿನಲ್ಲಿದ್ದಾಗ ಕೆಲವೊಮ್ಮೆ ಅವರ ಜತೆ ಫೋನ್ ನಲ್ಲಿ ಮಾತಾಡಿದ್ದಿದೆ. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೆಲವು ಸಲ ನಾಡಿಗರ ಫೋನ್ ಕರೆ ಬರುತ್ತಿತ್ತು; ಅಷ್ಟರಲ್ಲಿ ಅವರ ಮಾತು ತೊದಲುವುದಕ್ಕೆ ಸುರುವಾಗಿರುತ್ತಿತ್ತು. ಕ್ಷಮಿಸಿ, ನಾಡಿಗ್ ಅತ್ಯಂತ ಸಾಚಾ ಮನುಷ್ಯ; ಯಾವ ಸೋಗೂ ಅವರಿಗೆ ಹಿಡಿಸುವುದಿಲ್ಲ. ಆದ್ದರಿಂದ ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಂಡು ಮುಕ್ತವಾಗಿಯೇ ಇದೆಲ್ಲ ಬರೆಯುತ್ತಿದ್ದೇನೆ.

ನಾಡಿಗರನ್ನು ನಾನು ಮೊದಲು ಭೇಟಿಯಾದುದು ಅರುವತ್ತರ ದಶಕದ ಕೊನೆಯಲ್ಲಿ, ಅಡಿಗರ ಐವತ್ತನೇ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಸಾಹಿತ್ಯೋತ್ಸವವಾಗಿ ಆಚರಿಸಿದಾಗ ಎಂದು ಕಾಣುತ್ತದೆ. ನಾಡಿಗ್, ಅನಂತಮೂರ್ತಿ, ಲಂಕೇಶ್, ಬಹುಶಃ ಶಾಂತಿನಾಥ ದೇಸಾಯಿ ಎಲ್ಲರೂ ಒಂದೇ ಹೋಟೆಲಿನಲ್ಲಿ ಇಳಿದುಕೊಂಡಿದ್ದರು. ಸಮೀಪದ ಕಾಸರಗೋಡಿನವನೂ ಆ ಕಾಲಕ್ಕೆ ಕವಿತಾಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದವನೂ ಆದ ನಾನೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದು ಅದೇ ಹೋಟೆಲಿನಲ್ಲಿ ತಂಗಿದ್ದೆ. ಅದು ನವ್ಯಸಾಹಿತ್ಯದ ಪ್ರಾದುರ್ಭಾವದ ಕಾಲ. ಈ ಹೊಸ ಸಾಹಿತ್ಯದ ಘಟಾನುಘಟಿಗಳನ್ನು ಮುಖತಾ ನಾನು ಅದೇ ಮೊದಲ ಬಾರಿ ಭೇಟಿಯಾಗುತ್ತಿದ್ದುದು. ಎಳೆಯನ ಅಳುಕು ನನ್ನಲ್ಲಿತ್ತು. ಆಗ ಈತ ಎಳೆಯ, ಅಪ್ರಸಿದ್ಧ ಎಂಬ ಯಾವ ಭೇದಭಾವವೂ ಇಲ್ಲದೆ, ಕಾವ್ಯಾಸಕ್ತ ಎಂಬ ಒಂದೇ ಕಾರಣಕ್ಕೆ ನನ್ನನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡವರು ನಾಡಿಗರು. ಮಾತ್ರವಲ್ಲ ನನಗೆ ಇತರರ ಜತೆಯೂ ಬೆರೆಯುವುದಕ್ಕೆ ಅವಕಾಶಮಾಡಿಕೊಟ್ಟರು. ನಾಡಿಗರ ನಿರ್ವ್ಯಾಜ ಕಾವ್ಯಪ್ರೇಮ ಕಂಡು ನನಗೆ ಖುಷಿಯಾಯಿತು. ಸದಾ ಹಸನ್ಮುಖಿ, ತನ್ನನ್ನು ತಾನೇ ನಗಾಡುವ ವ್ಯಕ್ತಿ, ತಾನು ನಾಡಿಗನ ನಕಲು, ನೆಗೆಟಿವ್ ಎಂದು ಹೇಳಿಕೊಳ್ಳುವವರು. ಅಂದಿನಿಂದಲೇ ನನಗೆ ನಾಡಿಗರ ಗೆಳೆತನ ಸುರುವಾದ್ದು. ನಂತರದ ದಿನಗಳಲ್ಲಿ ನಮ್ಮ ನಡುವೆ ಹಲವು ಪತ್ರಗಳು ಆಚೀಚೆ ಹರಿದಾಡಿವೆ. ಆದರೂ ನಮ್ಮ ನಮ್ಮ ಕಾರ್ಯಕ್ಷೇತ್ರಗಳು ಬದಲಾದಂತೆ ಇದು ನಿಂತುಹೋಯಿತು. ನಾಡಿಗರು ಈ-ಮೇಲ್, ಇಂಟರ್ ನೆಟ್ ಮುಂತಾದವನ್ನು ಬಳಸುವುದಿಲ್ಲ. ದೂರವಿರುವ ನಾನು ಟೆಲಿಫೋನ್ ಮಾಡುವುದು ಕಷ್ಟವಾಗುತ್ತದೆ. ಹೀಗೆ ನಮ್ಮ ಸಂಪರ್ಕ ಕಡಿಯುತ್ತ ಬಂತು.

ಈ ಮಧ್ಯೆ ನಾನೆಲ್ಲಾದರೂ ಅಪರೂಪಕ್ಕೆ ಬೆಂಗಳೂರು ಕಡೆ ಹೋದರೆ ಅವರ ಮನೆಗೆ ಹೋಗಲೇಬೇಕೆನ್ನುವುದು ಅವರ ಹಟ. ನನಗೆ ಸಮಯವೇ ಅಲ್ಪ; ಅದರಲ್ಲಿ ಅವರ ದೂರದ ಮನೆಗೆ ಹೋಗುವುದು ಕಷ್ಟವಾಗುತ್ತಿತ್ತು; ಆದರೂ ಹೋಗಿದ್ದೇನೆ. ಅವರ ಮತ್ತು ಮಾಲತಿ ನಾಡಿಗರ ಆತಿಥ್ಯ ಸ್ವೀಕರಿಸಿದ್ದೇನೆ. ನಾಡಿಗ್ ಮತ್ತು ನಾನು ಭೇಟಿಯಾದಾಗಲೆಲ್ಲ ಕವಿತೆ, ಕವಿಮಿತ್ರರು, ಪ್ರಕಟಣೆ ಇತ್ಯಾದಿಗಳ ಕುರಿತಾಗಿಯೇ ಮಾತು. ನಾಡಿಗರ ಬಳಿ ಯಾವಾಗಲೂ ಕವಿತೆಗಳು ಇದ್ದೇ ಇರುತ್ತವೆ. ಅವುಗಳನ್ನು ಅವರು ನಿರ್ಭಿಡೆಯಾಗಿ ಓದುತ್ತಾರೆ. ನನ್ನದು ಸಂಕೋಚ ಸ್ವಭಾವ; ನಾನು ನನ್ನ ಬಳಿ ಕವಿತೆಗಳನ್ನು ಇರಿಸಿಕೊಂಡಿರುವುದಿಲ್ಲ. ನನ್ನ ಕವಿತೆಗಳನ್ನು ಇತರರಿಗೆ ಓದಿ ಹೇಳುವುದಂತೂ ನನ್ನಿಂದ ಆಗದ ಕೆಲಸ. ನಾಡಿಗರ ಸಮಗ್ರ ಕಾವ್ಯ ಸಮೀಕ್ಷೆ ನಡೆಸುವುದಕ್ಕೆ ನನ್ನಿಂದ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಅವರ ಮಹತ್ವದ ಕವನ `ಪಂಚಭೂತಗಳು’ ಬಗ್ಗೆ ನಾನು ಲೇಖನವೊಂದನ್ನು ಬರೆದಿದ್ದೇನೆ. ಅದರ ಪ್ರಾಯೋಗಿಕತೆಯನ್ನು ನಾನು ಇಷ್ಟಪಟ್ಟಿದ್ದೆನೆ.

ಲವಲವಿಕೆಯುಳ್ಳ ಮನುಷ್ಯನೇ ಕವಿಯಾಗಬಲ್ಲ, ಪ್ರಯೋಗಗಳನ್ನೂ ಮಾಡಬಲ್ಲ. `ಪಂಚಭೂತಗಳು’ ಮೊದಲಿನ `ದಾಂಪತ್ಯಗೀತೆ’ ಕೂಡಾ ಒಂದು ಪ್ರಯೋಗವೇ; ಇದಕ್ಕೆ ಬೇಂದ್ರೆಯವರ `ಸಖೀಗೀತ’ ಒಂದು ಮಾದರಿಯಾಗಿರಬಹುದು; ನರಸಿಂಹಸ್ವಾಮಿಯವರ ದಾಂಪತ್ಯಪ್ರೀತಿಯ ಕವಿತೆಗಳು ಇನ್ನೊಂದು. ಆದರೆ ನಾಡಿಗರ ಗೀತೆಗಳು ಇವಕ್ಕಿಂತ ಭಿನ್ನವೂ ಹೌದು; ಅವು ವರ್ಡ್ಸ್ ವರ್ತ್ ನ ಪ್ರಿಲ್ಯೂಡ್ ತರದ ಜೀವನಚರಿತ್ರೆ ಕೂಡಾ, ಎಂದರೆ ಬದುಕನ್ನೇ ಕವಿತೆಯಾಗಿಸುವ ಪ್ರಯೋಗ. ಕವಿತೆಯನ್ನು ಬದುಕಾಗಿಸಿದ ಮನುಷ್ಯನಿಂದ ಮಾತ್ರವೇ ಬದುಕನ್ನು ಕವಿತೆಯಾಗಿಸುವುದು ಸಾಧ್ಯ. ನಾಡಿಗ್ ಇಂಥವರ ಸಾಲಿಗೆ ಸೇರಿದವರು. ಅವರಿಗೆ ಜೀವನವೇ ಒಂದು ಕಾವ್ಯ. ಹಾಗೆಂದು ಅವರು ತೇಲುಗಣ್ಣಿನ ವಾಸ್ತವದೂರ ಕಾವ್ಯವ್ಯಸನಿಯೂ ಅಲ್ಲ.

ಯಾಕೆಂದರೆ ನಾಡಿಗರು ಏಕಕಾಲದಲ್ಲಿ ಸ್ವರ್ಗಮರ್ತ್ಯಗಳಲ್ಲಿ ಓಡಾಡಬಲ್ಲರು. ಬಿಳಿಗೂದಲಿನ ನಾಡಿಗ ಒಬ್ಬ `ಕಪ್ಪುದೇವತೆ’. ಬಹಳ ಕಾರ್ಯಚತುರರೂ ಹೌದು. ಬಹುಶಃ ಬೆಂಗಳೂರಿನಂಥ ನಗರದಲ್ಲಿ ಅವರಂಥ ಬಡ ಹಿನ್ನೆಲೆಯವರು ಜೀವಿಸಬೇಕಾದರೆ ಹಾಗಿರಲೇಬೇಕು ಎನಿಸುತ್ತದೆ. ಆದರೂ ನಾಡಿಗರು ಉದಾರಿ, ಪರೋಪಕಾರಿ, ನಿಸ್ವಾರ್ಥಿ. ಹಿಂದೆ ಮುಂಬೈಯಲ್ಲಿದ್ದಾಗ ನಾಡಿಗ್, ಶಾಂತಿನಾಥ ದೇಸಾಯಿ ಮುಂತಾದವರು ಎಮ್.ಎನ್.ರಾಯ್ ಪ್ರಭಾವಕ್ಕೆ ಒಳಗಾದರು. ಪ್ರತಿಯೊಂದು ರಾಜಕೀಯ ಶಕ್ತಿಗೂ ಅದರದೇ ದಿನ ಬರುತ್ತದೆ. ಕರ್ನಾಟಕದಲ್ಲಿ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ನಾಡಿಗರ ದೆಸೆ ಉತ್ತಮವಾಯಿತು. ಯಾಕೆಂದರೆ ಬೊಮ್ಮಾಯಿ ಕೂಡಾ ಒಬ್ಬ ರಾಯಿಸ್ಟ್ ಆಗಿದ್ದ ವ್ಯಕ್ತಿ. ನಾಡಿಗರು ತಮ್ಮ ರಾಜಕೀಯ ಪ್ರಭಾವವನ್ನು ಸ್ವಾರ್ಥಕ್ಕೆ ಬಳಸಿಕೊಂಡರು ಎನ್ನುವುದು ಸಲ್ಲದು. ಅವರಿಗೆ ಏನೇನು ಸಿಕ್ಕಿತೋ (ಉದಾಹರಣೆಗೆ, ಎನ್.ಬಿ.ಟಿ. ಚೇರ್ಮನ್ ಶಿಪ್) ಅದೆಲ್ಲದಕ್ಕೂ ಅವರು ಯೋಗ್ಯರೇ; ಮಾತ್ರವಲ್ಲ, ಅವೆಲ್ಲವೂ ಅವರಿಗೆ ಮೊದಲೇ ಸಿಗಬೇಕಿತ್ತು. ತಮ್ಮ ಪ್ರಭಾವ ಬಳಸಿ ತಮ್ಮಿಂದ ಏನು ಸಾಧ್ಯವೋ ಅದನ್ನು ನಾಡಿಗರು ಬೇರೆಯವರಿಗಾಗಿ ಮಾಡುತ್ತಿದ್ದರು; ಅಡಿಗ, ದಿವಾಕರ್ ಮುಂತಾದವರಿಗೆ ಅವರು ಮಾಡಿದ ಸಹಾಯ ಇತರರಿಗೊಂದು ಆದರ್ಶವಾಗಬೇಕು. ಈಗಲೂ ನಾಡಿಗರಲ್ಲಿ ಅಂಥ ಕೈನೀಡುವ ಗುಣವಿದೆ: ನಿನ್ನ ಹಸ್ತಪ್ರತಿಗಳು ಏನೇನು ಇವೆ, ಅವನ್ನೆಲ್ಲ ಪ್ರಕಟಿಸುವುದಕ್ಕೆ ನಾನು ಏರ್ಪಾಡು ಮಾಡುತ್ತೇನೆ ಎಂದು ನನಗೆ ಹಲವು ಬಾರಿ ಅಂದಿದ್ದಾರೆ. ನಾನು ಮಾತ್ರ ಅವರ ಔದಾರ್ಯವನ್ನು ಬಳಸಿಕೊಳ್ಳುವುದು ಸಾಧ್ಯವಾಗಿಲ್ಲ.

ಇತರರಿಗೆ ಸಹಾಯ ಮಾಡಬೇಕು ಎಂಬ ಇರಾದೆಗಾಗಿಯೇ ನಾಡಿಗರಿಗೆ ಒಂದು ತರದ ಇಂಪ್ರೆಸಾರಿಯೋ ಗುಣ ಬಂದಿರುವುದು. ಅವರು ಪ್ಲಾನ್ ಮಾಡುತ್ತಾರೆ, ಅದೊಂದು ಗುಫ್ತಗೂ, ಆಗ ಅದಕ್ಕೊಂದು ಪಿತೂರಿಯ ಲಕ್ಷಣ ಕಾಣಿಸಿದರೆ ಆಶ್ಚರ್ಯವಿಲ್ಲ! (ತನಗೆ ಸಿಗದಿದ್ದರೂ ಪರವಾಯಿಲ್ಲ, ಇತರರಿಗೆ ಸಿಗಬೇಕೆನ್ನುವ ಧಾರಾಳತನವನ್ನು ಶಾಂತಿನಾಥ ದೇಸಾಯರಲ್ಲೂ ನಾನು ಕಂಡಿದ್ದೇನೆ.) ಮತ್ತು ಇದು ಕೇವಲ ಸಾಹಿತ್ಯಕ್ಕೆ ಸೀಮಿತವೂ ಅಲ್ಲ; ಜೀವನದ ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿದುದು. ನನಗಿನ್ನೂ ಮದುವೆಯಾಗಿರದಿದ್ದಾಗ, ನಾಡಿಗ್ ನನಗೊಂದು ಮದುವೆ ಮಾಡಿಸಿಬಿಡಬೇಕು ಎಂದು ಶ್ರಮಿಸಿದ್ದಿದೆ. ನಂತರ ನನಗೆ ಗೊತ್ತಾದುದು ಸ್ವತಃ ನಾಡಿಗರಿಗೆ ಮದುವೆಯಾಗದೆ ಇದ್ದ ಸಂದರ್ಭದಲ್ಲಿ ಶಾಂತಿನಾಥ ದೇಸಾಯಿ ಕೂಡಾ ಇಂಥ ಪ್ರಯತ್ನ ನಡೆಸಿ ಸೋತಿದ್ದರು ಎನ್ನುವುದು! ದೇಸಾಯಿ ಈ ಬಗ್ಗೆ ಒಂದು ಕತೆಯನ್ನೇ ಬರೆದಿದ್ದಾರೆ. (ನಾಡಿಗರದೂ ಒಂದು ಪದ್ಯವಿದೆ `ಮದುವೆಯಾಗಲ್ಲ’ ಎಂದೇನೋ ಅದರ ಹೆಸರು.) ಮುಗ್ಧ ಓದುಗರಿಗೇನು ಗೊತ್ತು ಯಾವ ಕತೆಯ ಹಿಂದೆ ಯಾವ ಕತೆಯಿದೆ, ಯಾವ ಕವಿತೆಯ ಹಿಂದೆ ಯಾವ ವ್ಯಥೆಯಿದೆ ಎನ್ನುವುದು! ಪಿ. ಲಂಕೇಶ್ ಅವರ `ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ’ ಎನ್ನುವ ಕತೆಯೊಂದಿದೆ: ಇದರಲ್ಲಿ ಅನಂತಮೂರ್ತಿ ಬರುತ್ತಾರೆ, ಪ್ರೊಫೆಸರ್ ಸಿಡಿಎನ್ ಬರುತ್ತಾರೆ, ಬೇರೆ ಹೆಸರಿನಿಂದ; ಲಂಕೇಶರ `ಬಿರುಕು’ವಿನಲ್ಲೂ ಇವರಿದ್ದಾರೆ. ಅಂತೆಯೇ ಲಂಕೇಶ್ ಜತೆ ಜಗಳವಾದ ನಂತರ ನಾಡಿಗ್ `ಕಾರ್ಕೋಟಕ’ ಎಂಬ ಕತೆ ಬರೆದು ಲಂಕೇಶ್ ಮೇಲಿನ ಕೋಪ ಪ್ರಕಟಿಸಿಕೊಂಡುದೂ ಇದೆ.

ಈ ಸಿಟ್ಟು ಸೆಡವುಗಳು ಕೂಡಾ ನಾಡಿಗರದೊಂದು ಸ್ವಭಾವ: ಮನುಷ್ಯರು ಕೇವಲ ಮನುಷ್ಯರು ಎನಿಸುತ್ತದೆ. ಮನುಷ್ಯರಲ್ಲಿರುವ ಒಳ್ಳೆಯ ಗುಣಗಳೇ ನಮಗೆ ಕಾಣಿಸಬೇಕು, ಯಾಕೆಂದರೆ ಆದರ್ಶ ಕವಿ, ಆದರ್ಶ ಸಾಹಿತಿ ಎಲ್ಲೂ ಇಲ್ಲ. ನಾಡಿಗರು ಸಿಟ್ಟಾದರೆ ತೀರಾ ಮಗುವಿನಂತೆ ವರ್ತಿಸುತ್ತಾರೆ, ಬಯ್ಯುತ್ತಾರೆ, ವೈಚಾರಿಕವಾಗಿ ಯೋಚಿಸುವುದೇ ಇಲ್ಲ. ನಮ್ಮ ಕಾಲದ ಅದ್ಭುತಗಳನ್ನು ನೋಡಿ: ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಕಂಬಾರ, ನಿಸ್ಸಾರ್ ಅಹಮ್ಮದ್, ಚಂದ್ರಶೇಖರ ಪಾಟೀಲ, ಅರವಿಂದ ನಾಡಕರ್ಣಿ, ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದ ಹಲವು ಶ್ರೇಷ್ಠ ಸಾಹಿತಿಗಳು ಅಡಿಗೋತ್ತರ ಕಾಲದಲ್ಲಿ ಬಂದು ಕನ್ನಡದಲ್ಲಿ ಆಧುನಿಕತೆ ಸ್ಥಿರಗೊಳ್ಳುವಂತೆ ಮಾಡಿದರು. ಇವರಲ್ಲಿ ನಾಡಿಗರಿಗೆ ಅವರದೇ ಆದ ಸ್ಥಾನವಿದೆ. ಎಲ್ಲರೂ ತಂತಮ್ಮ ವೈಯಕ್ತಿಕ ಕೊಡುಗೆಗಾಗಿ ಮಹತ್ವದವರು. ಯಾರೂ ಇನ್ನೊಬ್ಬರಂತೆ ಬರೆದವರಲ್ಲ, ಅನುಸರಿಸಿದವರೂ ಅಲ್ಲ. ಆದರೆ ಇವರಲ್ಲಿ ಹಲವರ ನಡುವೆ ಹೊರ ಜಗಳ, ಒಳಜಗಳಗಳು ಕೂಡ ನಡೆದಿವೆ. ನಾಡಿಗರು ಅನಂತಮೂರ್ತಿ, ಲಂಕೇಶ್, ನಿಸ್ಸಾರ್, ಚಂದ್ರಶೇಖರ ಪಾಟೀಲ, ಡಿ.ಆರ್. ನಾಗರಾಜ್ ಮುಂತಾದವರ ಜತೆ ಯಾವ ಯಾವ ಕಾರಣಕ್ಕೋ ಜಗಳಾಡಿದ್ದಾರೆ, ನಂತರ ರಾಜಿಮಾಡಿಕೊಂಡಿದ್ದಾರೆ. ಅನಂತಮೂರ್ತಿಯವರ `ಮೌನಿ’ ಅಮೇರಿಕನ್ ಕಾದಂಬರಿಕಾರ ಬರ್ನಾರ್ಡ್ ಮಲಮೂಡ್ ನ ಕತೆಯೊಂದರ ಚೌರ್ಯ ಎಂದು ನಾಡಿಗ್ ಘೋಷಿಸಿದರು; ನಂತರ ಅನಂತಮೂರ್ತಿಯವರ ಕೈಯಿಂದಲೇ ತಮ್ಮ ಕವನಸಂಕಲನವೊಂದಕ್ಕೆ ಮುನ್ನುಡಿ ಬರೆಸಿಕೊಂಡರು. ಈ ಪತ್ತೇದಾರಿ ಗುಣವೂ ನಾಡಿಗರದೊಂದು ವೈಶಿಷ್ಟ್ಯ; ಬೇಂದ್ರೆ ತಮ್ಮ ಕಾವ್ಯಕ್ಕೆ ಮರಾಠಿಯಿಂದ ಅದೆಷ್ಟನ್ನು ಪಡೆದುಕೊಂಡರು ಎನ್ನುವುದನ್ನು ನಾಡಿಗರು ತಮ್ಮ ಸಂಶೋಧನೆಯಿಂದ ಕಂಡುಹಿಡಿದಿದ್ದಾರೆ. ಖುದ್ದಾಗಿ ಬೇಂದ್ರೆ ಇದನ್ನೆಲ್ಲೂ ಹೇಳಿಕೊಂಡಿಲ್ಲ. ಇದು ನಿಜಕ್ಕೂ ಬೇಂದ್ರೆ ಸಾಹಿತ್ಯ ಅಧ್ಯಯನಕ್ಕೆ ನಾಡಿಗರ ಕೊಡುಗೆ. ಇಂಥ ದಫ್ತರಗಳು ಅವರ ಬಳಿ ಇನ್ನಷ್ಟು ಇರುವುದು ಸಾಧ್ಯ. ನಾಡಿಗರು ಪ್ರೀತಿಸಿದರೆ ತುಂಬಾ ಪ್ರೀತಿಸುತ್ತಾರೆ, ಕೋಪಿಸಿದರೆ ಅಷ್ಟೇ ತೀವ್ರತೆಯಿಂದ ಕೋಪಿಸುತ್ತಾರೆ. ಈಚೆಗೆ ಬೆಂಗಳೂರಲ್ಲಿ ನಾಡಿಗರ ಕುರಿತು ನಡೆದ ಸಮಾರಂಭದಲ್ಲಿ ಚಂದ್ರಶೇಖರ ಪಾಟೀಲ್ ಭಾಗವಹಿಸಿದ್ದರು ಎನ್ನುವುದು ಪಾಟೀಲರೇ ಬರೆದ ಲೇಖನವೊಂದರಲ್ಲಿ ಓದಿ ನನಗೆ ಖುಷಿಯಾಯಿತು. ಪಾಟೀಲರೂ ಒಬ್ಬ ಶ್ರೇಷ್ಠ ಕವಿ, ಅಷ್ಟೇ ವಿಲಕ್ಷಣ ವ್ಯಕ್ತಿ. ಸಂಕ್ರಮಣ ಪತ್ರಿಕೆಯ ಮೊದಲ ಸಂಚಿಕೆಯನ್ನು ನಾಡಿಗರೇ ಉದ್ಘಾಟಿಸಿದರು ಎಂದು ಪಾಟೀಲರು ಈ ಲೇಖನದಲ್ಲಿ ಉಲ್ಲೇಖಿಸುತ್ತಾರೆ. ಖಾರವಾದ ಬಿಚ್ಚು ಮಾತಿಗೆ ಹೆಸರಾದ ಪಾಟೀಲ್ ಈ ಲೇಖನವನ್ನು ಮಮತೆಯಿಂದಲೇ ಬರೆದಿದ್ದಾರೆ. ಮನುಷ್ಯರು ಜಗಳಾಡುವುದು ನನಗೆ ಗಾಬರಿ ತರುತ್ತದೆ, ರಾಜಿಯಾಗುವುದು ಸಂತೋಷ ತರುತ್ತದೆ; ಇದರರ್ಥ ನಾವು ಪರಸ್ಪರ ತಾತ್ವಿಕ ನಿಲುವುಗಳಲ್ಲಿ ರಾಜಿಮಾಡಿಕೊಳ್ಳಬೇಕೆಂದಲ್ಲ. ಪಾಟೀಲ್ ತಮ್ಮ ಲೇಖನದಲ್ಲಿ ತಾವು ಮೊದಲಿಂದಲೂ ಟೀಕಿಸುತ್ತ ಬಂದಿರುವ ನಾಡಿಗರ ಹಿಂದೂ ರಾಷ್ಟ್ರೀಯತೆಯ ಒಲವನ್ನು ಟೀಕಿಸಲು ಮರೆತಿಲ್ಲ. ಆದರೆ ಇದು ವೈಯಕ್ತಿಕತೆಯನ್ನು ಮೀರಿದ ಸಂಗತಿ.

ನಾಡಿಗರ ಈ ಒಲವು ನನಗೂ ಅಚ್ಚರಿ ಹುಟ್ಟಿಸಿದೆ. ಯಾಕೆಂದರೆ ನಾನು ತಿಳಿದುಕೊಂಡ ನಾಡಿಗರೇ ಬೇರೆ. ಆ ನಾಡಿಗರು ನವ್ಯದ ಕ್ರಾಂತಿಕಾರಿ ಕವಿ; ಎಲ್ಲಾ ತರದ ಕಟ್ಟುಕಟ್ಟಳೆಗಳನ್ನೂ ಕಿತ್ತೊಗೆಯುವ ಕವಿ. ನವ್ಯದ ನಾಯಕ ಅಡಿಗರೂ ಕೂಡಾ ಕ್ರಾಂತಿಕಾರಿ ಕವಿಯೇ; ಆದರೆ ಆದರ್ಶವೊಂದನ್ನು ಇಟ್ಟುಕೊಂಡು ಸಮಕಾಲೀನ ಸಮಾಜದ ವಿರುದ್ಧ ಬಂಡೆದ್ದವರು. ಅವರ ಆದರ್ಶ ಮುಂಗಾಮಿಯಾಗಿದ್ದೂ ಹಿಂಗಾಮಿತನದಿಂದ ತಪ್ಪಿಸಿಕೊಳ್ಳಲಿಲ್ಲ. ಸುವರ್ಣಯುಗದ ಕಲ್ಪನೆಯೇ ಆಧುನಿಕ ವಿಚಾರಕ್ಕೆ ಒಗ್ಗದ್ದು; ಆದರೂ ಅಡಿಗರು ಅಂಥದೊಂದು ಯುಗವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಒಂದು ರೂಪಕವಾಗಿಯಾದರೂ ಅವರಿಗೆ ರಾಮಾಯಣ ಮಹಾಭಾರತಗಳು ಆದರ್ಶವಾಗಿದ್ದುವು. ನಾಡಿಗರು ಅಡಿಗರನ್ನು ಬಹಳ ಮೆಚ್ಚಿಕೊಂಡವರು; ಅಡಿಗರ ಕವಿತೆಗಳಿಗೆ ಪ್ರಪ್ರಥಮವಾಗಿ ಪ್ರವೇಶಿಕೆ ಬರೆದವರೂ ಅವರೇ. ಅಡಿಗಾನಂತರ ನಾಡಿಗರು ನವ್ಯದಿಂದ ದೂರವಾಗುವುದನ್ನು ಕಾಣುತ್ತೇವೆ. `ಉದ್ಘಾಟನೆ’, `ಭಾವಲೋಕ’ ಮುಂತಾದ ಕವನಸಂಕಲನಗಳಲ್ಲಿ ಇದರ ಸೂಚನೆಗಳೂ ಇವೆ, ವ್ಯಕ್ತ ಹೇಳಿಕೆಗಳೂ ಇವೆ. ನವ್ಯ ಭಾವಶೂನ್ಯವಾಗಿದೆ, ಕವಿತೆಗೆ ಭಾವನೆಯೇ ಮುಖ್ಯ ಎನ್ನುವುದು ನಾಡಿಗರ ವಾದವಾಗಿತ್ತು. ನವ್ಯದ ಗದ್ಯತೆ ಮತ್ತು ವೈಚಾರಿಕತೆಯ ವಿರುದ್ಧ ಹೊಸ ದಾರಿಗಳನ್ನು ಕಂಡುಕೊಂಡುದು ನಾಡಿಗರು ಮಾತ್ರವೇ ಅಲ್ಲ; ಚಂದ್ರಶೇಖರ ಕಂಬಾರರು ದೇಸಿಯನ್ನು ಹಿಡಿದರು, ಪಾಟೀಲರು ಬಂಡಾಯವನ್ನು ಎತ್ತಿಕೊಂಡರು, ತೇಜಸ್ವಿ ಅನುಭವಮೂಲ ವಾಸ್ತವತೆಯತ್ತ ಹೊರಳಿದರು. ಭಾವಲೋಕವನ್ನು ಪ್ರವೇಶಿಸಬೇಕೆಂದು ಹೊರಟ ನಾಡಿಗರು ಅದರಲ್ಲಿ ಯಶಸ್ವಿಯಾದರೇ?

ಇಲ್ಲ, ನಾಡಿಗರ ವ್ಯಕ್ತಿತ್ವಕ್ಕೆ ಭಾವವಾಗಲಿ ಗೇಯವಾಗಲಿ ಹಿಡಿಸುವಂಥದು ಆಗಿರಲಿಲ್ಲ. ಅವರ ವ್ಯಕ್ತಿತ್ವ ಇದೆಲ್ಲಕ್ಕಿಂತ ದೊಡ್ಡದೊಂದನ್ನು ಎಳಸುತ್ತಿತ್ತು: ಬಹುಶಃ ಆರ್ಷೇಯತೆಯನ್ನು. ಪ್ರಾಚೀನ ಹಿಂದೂ ಋಷಿಮುನಿಗಳ ಮಾರ್ಗ ಅದು; ಸನ್ಯಾಸಿಯದಲ್ಲ, ಗೃಹಸ್ಥನದು. ಶಂಕರರದಲ್ಲ, ಮಂಡನಮಿಶ್ರರದು. ಆದ್ದರಿಂದಲೇ `ದಾಂಪತ್ಯಗೀತೆ’, ಆದ್ದರಿಂದಲೇ `ಪಂಚಭೂತಗಳು’, ಆದ್ದರಿಂದಲೇ ಅವರು ಸದ್ಯ ಬರೆಯುತ್ತಿರುವ `ಶ್ರೀವತ್ಸಸ್ಮೃತಿ’: ಇದೆಲ್ಲ ಪ್ರಯತ್ನಗಳೂ ಮುಂದಿನದೊಂದು ಉತ್ತಮ ಸಮಾಜವನ್ನು ಹಿಂದಣ ಆದರ್ಶಕಲ್ಪನೆಯ ಮೇಲೆ ಕಟ್ಟುವ ವಿಧಾನ; ಎಂದರೆ ಅಡಿಗರು ಸೂಚಿಸಿದ ನೀಲಿನಕಾಶೆಯ ಮೇಲೆ ನಾಡಿಗರು ಕಟ್ಟಡವೊಂದನ್ನು ಕಟ್ಟುತ್ತಿದ್ದಾರೆ ಎನಿಸುತ್ತದೆ. ಇದಕ್ಕೆ ಅವರು ಪುರಾತನದ ಆರ್ಷತೆಯನ್ನು ಬಳಸಿಕೊಂಡಿದ್ದಾರೆ ನಿಜ, ಆದರೆ ಅಷ್ಟಕ್ಕೆ ಅವರೊಬ್ಬ ಮೂಲಭೂತವಾದಿಯೆಂದು ಹೇಳಲಾಗದು. ಅಡಿಗರಾಗಲಿ ನಾಡಿಗರಾಗಲಿ ರೂಪಿಸಬಯಸುವ ಭವಿಷ್ಯ ಎಲ್ಲ ಜಾತಿಮತ ಮತ್ತು ವರ್ಗದವರಿಗೋಸ್ಕರ ಎಂದು ನನ್ನ ಭಾವನೆ. ನಾಡಿಗರು ದಲಿತ-ಬಂಡಾಯದ ಬ್ಯಾಂಡ್ ವ್ಯಾಗನ್ ಏರಲಿಲ್ಲ; ಆದರೆ ದಲಿತ ಕವಿ ಸಿದ್ಧಲಿಂಗಯ್ಯನಂಥವರ ಬಗ್ಗೆ ಅವರಿಗೆ ಸದ್ದುಗದ್ದಲವಿಲ್ಲದ ಪ್ರೀತಿಯಿದೆ.

ನಾಡಿಗರ ಮುಂಬರುವ `ಶ್ರೀವತ್ಸಸ್ಮೃತಿ’ (ಅದರ ಹೆಸರು ಇದೇ ರೀತಿ ಇರುತ್ತದೋ ಗೊತ್ತಿಲ್ಲ) ಹೇಗೆ ಬರುತ್ತದೆ ಎನ್ನುವುದು ನನಗೆ ತಿಳಿಯದು. ನಾನು ಊರಲ್ಲಿದ್ದಾಗ ಅವರು ಈ ಕಾವ್ಯದ ಕೆಲವು ಪುಟಗಳನ್ನು ನನಗೆ ಕಳಿಸಿಕೊಟ್ಟಿದ್ದರು. ಓದಿ ನನಗನಿಸಿದ್ದನ್ನು ಟಿಪ್ಪಣಿ ಮಾಡಿ ವಾಪಸು ಮಾಡಿದೆ. ನನಗನಿಸಿದ್ದು: ನಾಡಿಗರು ಜನರಿಗೆ ಹೇಗೆ ಜೀವಿಸಬೇಕು ಎಂಬುದನ್ನು ತಿಳಿಸುತ್ತ ಹೋಗುತ್ತಾರೆ, ಇದೊಂದು ತರದ ಪ್ರವಚನ. `ಪಂಚಭೂತಗಳ’ಲ್ಲೂ ಅವರು ಇದನ್ನು ಮಾಡಿದ್ದಾರೆ. ಕನ್ನಡದಲ್ಲಿ ಉಪದೇಶಕಾವ್ಯಗಳ (didactic poetry) ದೊಡ್ಡ ಪರಂಪರೆಯೇ ಇದೆ: ಶಿವಶರಣರ ಹಲವು ವಚನಗಳು, ದಾಸರ ಕೀರ್ತನೆಗಳು, ತತ್ವಪದಗಳು, ತ್ರಿಪದಿಗಳು, ಶತಕಗಳು, ಜನಪದ ಹಾಡುಗಳು ಮತ್ತು ನಮ್ಮದೇ ಕಾಲದ ಡಿ.ವಿ.ಜಿ.ಯ `ಮಂಕುತಿಮ್ಮನ ಕಗ್ಗ’ ಈ ಮಾರ್ಗಕ್ಕೆ ಸೇರಿದಂಥವು. ನಾಡಿಗರು ಈ ಮಹಾಕಾವ್ಯದ ಹೆಸರೇ ಹೇಳುವಂತೆ ಹಳೆ ಮಾದರಿಯ ಮೇಲೆ ಹೊಸಕಾಲಕ್ಕೆ ಹೊಂದುವಂಥ `ಸ್ಮೃತಿ’ಯೊಂದನ್ನು ಬರೆಯುತ್ತಿದ್ದಾರೆ. ಎಲ್ಲಾ ಬಿಟ್ಟು ಅವರು ಯಾಕೆ ಇಂಥ `ಸ್ಮೃತಿ’ಯೊಂದನ್ನು ಬರೆಯಲು ಹೊರಟರು ಎನ್ನುವುದಕ್ಕೆ ಅವರ ಒಟ್ಟಾರೆ ವ್ಯಕ್ತಿತ್ವದಲ್ಲೇ ಸಮಾಧಾನವಿದೆ: ನಾಡಿಗರು ಒಬ್ಬ ಸಮಗ್ರ ವ್ಯಕ್ತಿ; ಎಂದರೆ ಜೀವನವನ್ನು ಇಡಿಯಾಗಿ ನೋಡುವವರು. ಆದ್ದರಿಂದಲೇ ಅವರು ಕೈಯಾಡಿಸದ ಪ್ರಕಾರಗಳಿಲ್ಲ: ಕಾವ್ಯವೇ ಅಲ್ಲದೆ, ಮಕ್ಕಳ ಸಾಹಿತ್ಯ, ಕನ್ನಡ ಬಾಲಪಾಠ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಲೇಖನ, ಅನುವಾದ, ಸಾಹಿತ್ಯ ಸಂಪಾದನೆ ಇತ್ಯಾದಿ ಹತ್ತು ಹಲವು ಸಂಗತಿಗಳು. ನಾಡಿಗರ ಆಸಕ್ತಿ ಮನುಷ್ಯಸಮಾಜದ ಒಟ್ಟಾರೆ ಬೆಳವಣಿಗೆ: ದಾಂಪತ್ಯ ಅದರ ಕೀಲಿಗೈ. ದಾಂಪತ್ಯ ಚೆನ್ನಾಗಿದ್ದರೆ ಕುಟುಂಬ ಚೆನ್ನಾಗಿರುತ್ತದೆ. ಕುಟುಂಬವನ್ನು ಉದ್ಧರಿಸಿದರೆ ವ್ಯಕ್ತಿಯನ್ನು, ವ್ಯಕ್ತಿಯ ಮೂಲಕ ಸಮಾಜವನ್ನು, ಸಮಾಜದ ಮೂಲಕ ರಾಷ್ಟ್ರವನ್ನು ಬೆಳೆಸಬಹುದು ಎನ್ನುವ ಧೋರಣೆ ಕಾಣುತ್ತದೆ. ಕಾವ್ಯಕ್ಕೂ ವ್ಯಕ್ತಿವಿಕಸನಕ್ಕೂ ವ್ಯತ್ಯಾಸವಿಲ್ಲವೇ ಎಂದು ನಾವು ಕೇಳಬಹುದು. ಅಂತಿಮವಾಗಿ ಇಲ್ಲ ಎನ್ನಬಹುದು ನಾಡಿಗರು; ಅಥವ ಅವರಲ್ಲಿ ಇನ್ನೊಂದು ಸಮಾಧಾನ ಇದೆಯೋ ಏನೋ. ಕಾವ್ಯದ ಗುರಿ ಮೋಕ್ಷ ಎನ್ನುವವರಿದ್ದಾರೆ. ಅದಾದರೆ ಬಹುದೊಡ್ಡ ಮಾತಾಯಿತು. ನನ್ನಂಥವರಿಗಂತೂ ಕಾವ್ಯದ ಗುರಿಯ ಬಗ್ಗೆ ನಿರ್ದಿಷ್ಟವಾದ ಅರಿವಿಲ್ಲ. `ಜನ ಬದುಕಲೆಂದು’ ಎನ್ನಬಹುದು. ಆದರೆ ಏನೀ ಮಾತಿನ ಅರ್ಥ? ಆರ್ಥಿಕ, ಸಾಮಾಜಿಕ, ನೈತಿಕ ಬೆಳವಣಿಗೆಯೇ? ಈ ಎಲ್ಲ ವಿಚಾರಗಳೂ ತಾವಾಗಿ ಎಷ್ಟು ಉತ್ತಮವಾಗಿದ್ದರೂ, ಇವು ಯಾವುದಕ್ಕೂ ಕಾವ್ಯವನ್ನು ನಿರ್ಬಂಧಿಸುವುದು ಸರಿಕಾಣುವುದಿಲ್ಲ.

ಈ ಕಾರಣಕ್ಕೆ ಉಪದೇಶಕಾವ್ಯ ನಿಜಕ್ಕೂ ಕಾವ್ಯವೇ ಅಲ್ಲ ಎನ್ನುವವರಿದ್ದಾರೆ; ಆದರೂ ಇಲ್ಲಿ ಉಲ್ಲೇಖಿಸಿದ ಹಲವಾರು ಕೃತಿಗಳಲ್ಲಿ ಸಾಕಷ್ಟು ಕಾವ್ಯಾತ್ಮಕತೆ ಇದೆ. ನಾಡಿಗರೂ ಇದನ್ನು ತರಬಹುದು. ನಾಡಿಗರಿಗೆ ನಾನು ಬರೆದುದು `ಪಂಚಭೂತಗಳು’ ಕೃತಿಯ ಪರಿಶೀಲನೆಯಲ್ಲಿ ಮಾಡಿದಂಥ ಒಂದು ವಿಷಯವನ್ನೇ: ನೀತಿ ಮತ್ತು ಕಾವ್ಯವನ್ನು ಒಂದಾಗಿಸುವಲ್ಲಿನ ಸಮಸ್ಯೆ. ಕವಿತೆಯಾಗಲಿ ಕಾವ್ಯವಾಗಲಿ ಬರೆಯುವವರು ತಾವು ಕವಿತೆ ಬರೆಯುತ್ತೇವೆ, ಕಾವ್ಯ ಬರೆಯುತ್ತೇವೆ ಎಂದು ಹೊರಡುವುದಿಲ್ಲ; ಕವಿತೆ ಮತ್ತು ಕಾವ್ಯ ಪರಿಣಾಮವಾಗಿ ಬರಬೇಕಲ್ಲದೆ ಉದ್ದೇಶವಾಗಬಾರದು. ಲಕ್ಷ್ಮೀಶನಂಥ ಕವಿ ಅಲ್ಲಲ್ಲಿ ಕಾವ್ಯಕ್ಕಾಗಿ ಕಾವ್ಯ ಬರೆಯುವಂತೆ ತೋರುತ್ತದೆ; ರಾಘವಾಂಕ ಹಾಗಲ್ಲ, ಕಾವ್ಯ ಅವನಿಗೆ ಪರಿಣಾಮವಾಗಿ ಬರುವಂಥದು. ನವ್ಯ ಸಾಹಿತ್ಯ ತಿರಸ್ಕರಿಸಿದ್ದೇ ಕಾವ್ಯಾತ್ಮಕತೆಯನ್ನು; ನಾಡಿಗರ ಸಮಸ್ಯೆ ಕಾವ್ಯಾತ್ಮಕತೆಯಲ್ಲ, ಗದ್ಯತೆ. ನೀತಿ, ಉಪದೇಶ ಮುಂತಾದವಕ್ಕೆ ಗದ್ಯ ಸರಿಯಾದ ವಿಧಾನ, ಪದ್ಯವಲ್ಲ; ಆದರೆ ಅತ್ತ ಕಾವ್ಯಾತ್ಮಕತೆಗೂ ಹೋಗದೆ ಇತ್ತ ಗದ್ಯತೆಗೂ ಸಾಗದೆ ಇಂಥ ಕಾವ್ಯವನ್ನು ಬರೆಯುವುದು ಹೇಗೆ? ಡಿ.ವಿ.ಜಿ. ಅದಕ್ಕೆ ಚೌಪದಿಯ ಕಟ್ಟೊಂದನ್ನು ಹಾಕಿಕೊಂಡರು; ಒಂದೊಂದು ಪದ್ಯವೂ ಇಡಿಯಾಗಿ, ಪ್ರಾಸ, ಲಯ, ಉಪಮೆ, ರೂಪಕ ಮುಂತಾದವನ್ನು ಇರಿಸಿಕೊಂಡು, ಆದರೆ ತತ್ವಪದವಾಗಿ. ನಾಡಿಗರು ಆಧುನಿಕ ಕವಿಯಾಗಿ ಮುಕ್ತಛಂದಸ್ಸನ್ನು ಇಷ್ಟಪಡುವವರು; ಆದರೆ ಈ ಛಂದಸ್ಸಿನಲ್ಲಿ ತತ್ವೋಪದೇಶ ಹೇಳಹೊರಟಾಗ ಅದು ತೀರಾ ಗದ್ಯರೂಪ ಪಡೆದುಕೊಳ್ಳುತ್ತದೆ. ಉಪಮೆ, ರೂಪಕ ಮುಂತಾದ ಅಲಂಕಾರಗಳನ್ನು ರೂಪಿಸುವುದು ಮಾತ್ರ ಉಳಿದ ದಾರಿ. ಅಥವಾ ಸಂಸ್ಕೃತದ ಯೋಗಸೂತ್ರಗಳಂತೆ ಅರ್ಥಗರ್ಭಿತವಾಗಿ ಹೇಳುವುದು-ಕನ್ನಡ ಭಾಷೆಗೆ ಅದು ಒಗ್ಗುತ್ತದೋ ನನಗೆ ತಿಳಿಯದು. ಈ ಸಮಸ್ಯೆಯನ್ನು ನಾಡಿಗರು ಹೇಗೆ ನಿಭಾಯಿಸುತ್ತಾರೆ ಎಂದು ನಾನು ಕುತೂಹಲದಿಂದ ಎದುರು ನೋಡುತ್ತೇನೆ; ಅವರು ಕಳಿಸಿದ್ದ ಪುಟಗಳಲ್ಲಿ ನನಗೆ ಇದಕ್ಕೆ ಉತ್ತರ ಸಿಕ್ಕಿರಲಿಲ್ಲ. ಆದರೆ ಮಹತ್ವದ ಸಂಗತಿಗಳನ್ನು ಮಾಡಲು ಯತ್ನಿಸಿ ಅದರಲ್ಲಿ ಸೋಲುವುದು ಕೂಡಾ ಒಂದು ಗೆಲುವೇ ಎಂದು ತಿಳಿದುಕೊಂಡವನು ನಾನು. ಆದ್ದರಿಂದ ನಾಡಿಗರ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಬೆಂಬಲ ಮತ್ತು ಶುಭಾಶಯ.