ಮುದ್ರಾಡಿ ಕೃಷ್ಣ ಶೆಟ್ಟರೆಂದರೆ ಸದಾ ಸುದ್ದಿಯಲ್ಲಿದ್ದ ಗಣ್ಯವ್ಯಕ್ತಿಯೇನಲ್ಲ. ಆದರೆ ಬಹರೈನ್ ಕನ್ನಡಿಗರಿಗೆ ಸದಾ ಬೇಕಾಗಿದ್ದ ಪ್ರೀತಿ ಪಾತ್ರರಾಗಿದ್ದ ಸರಳ ವ್ಯಕ್ತಿ. ಪುಟ್ಟದೊಂದು ಟೈಲರ್ ಅಂಗಡಿ ಇಟ್ಟುಕೊಂಡು ಅವರು ಕಳೆದ 21 ವರ್ಷಗಳಿಂದ ಬಹರೈನ್ ನಲ್ಲಿ ಜೀವನ ಸಾಗಿಸುತ್ತಿದ್ದರು. ತಮ್ಮೂರನ್ನು, ಪ್ರೀತಿ ಪಾತ್ರರನ್ನು ಬಿಟ್ಟು ಬಂದು ಸದಾ ದುಡಿಮೆಯಲ್ಲಿಯೇ ತೊಡಗಿಕೊಂಡು ಬಾಳುವ ಕರ್ನಾಟಕದ ಕರಾವಳಿಯ ಬೃಹ ತ್ ಸಮುದಾಯದ ಪ್ರತಿನಿಧಿಯಂತೆ ಗೋಚರಿಸುತ್ತಿದ್ದರು. ಅವರು ಇತ್ತೀಚೆಗೆ ಅಗಲಿದಾಗ, ಕಾಡಿದ ನೋವನ್ನೇ ಬರಹವಾಗಿಸಿದ್ದಾರೆ ಬಹರೈನ್ ನಿವಾಸಿ, ಕನ್ನಡಿಗ ವಿನೋದ್.

ತಮ್ಮವರ ಏಳಿಗೆಗಾಗಿ ದುಡಿಯುವುದು ವಿಶೇಷವೆಂದೇನಲ್ಲ. ಆದರೆ ನಿರಂತರ ತಮ್ಮವರನ್ನೂ, ತಮ್ಮೂರನ್ನು ಬಿಟ್ಟು ಬಂದು ದುಡಿಮೆ ಮಾಡುವುದು ಸರಳವೂ ಅಲ್ಲ. ಕರ್ನಾಟಕದ ಕರಾವಳಿ ಭಾಗದಿಂದ ಕೊಲ್ಲಿ ರಾಷ್ಟ್ರಗಳಿಗೆ ದುಡಿಮೆಗಾಗಿ ತೆರಳುವ ಬೃಹತ್ ಸಮುದಾಯವೇ ಇದೆ. ತಮ್ಮೂರಿನಲ್ಲಿ, ‘ಫಾರಿನ್ ನಿಂದ ಬಂದವರು’ ಎಂಬ ಕ್ರೆಡಿಟ್ಟು ಹೊತ್ತುಕೊಳ್ಳುವ ಅವರಿಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬಹುದಾದ ಸ್ನೇಹಿತರ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಉದಾಹರಣೆಗೆ ಊರಿನಲ್ಲೇ ಒಂದು ವೃತ್ತಿಯಲ್ಲಿರುವ ವ್ಯಕ್ತಿಯು ತನ್ನ ವೃತ್ತಿಯ ಕಷ್ಟಗಳನ್ನು ಸಂಸಾರದ ಕಷ್ಟಗಳನ್ನು ಹಂಚಿಕೊಳ್ಳಲು ಸಮಾನ ಮನಸ್ಕ ಸ್ನೇಹವಲಯವು ದೊಡ್ಡದಾಗಿರುತ್ತದೆ. ಆದರೆ ಹೀಗೆ ದೂರದ ನಾಡಿನಲ್ಲಿ ನಿರಂತರ ದುಡಿಯುತ್ತ ಬದುಕು ಸಾಗಿಸುವವರಿಗೆ ಕಷ್ಟಗಳನ್ನು ಹಂಚಿಕೊಳ್ಳುವ ಸ್ನೇಹ ವಲಯ ಬಹಳ ಕಿರಿದಾದುದು.

ಮುದ್ರಾಡಿ ಕೃಷ್ಣ ಶೆಟ್ಟರು ಉಡುಪಿಯ ಮುದ್ರಾಡಿಯವರಾದರೂ, ಬಹರೈನ್ ನಲ್ಲಿ ಅನೇಕ ಮಂದಿ ಕನ್ನಡಿಗರ ಕಷ್ಟಗಳಿಗೆ ಕಿವಿಯಾದವರು. ಸಮಸ್ಯೆಗಳಿಗೆ ಅವರ ಬಳಿ ದೊಡ್ಡ ಪರಿಹಾರ ಇಲ್ಲದಿರಬಹುದು. ಆದರೆ ಆಲಿಸುವ ಕಿವಿಗಳು ಅವರದಾಗಿತ್ತು. ಅವರೊಡನೆ ಮಾತನಾಡಿ ಹಗುರಾಗುತ್ತಿದ್ದವರು ಅನೇಕರು.

ನನ್ನ ರೂಮಿಂದ ಹತ್ತು ಹೆಜ್ಜೆ ಅಷ್ಟೇ ದೂರದಲ್ಲಿದೆ ಮುದ್ರಾಡಿ ಕೃಷ್ಣ ಶೆಟ್ಟರ ಟೈಲರ್ ಶಾಪ್. ಸಪೂರವಾದರೂ ಎತ್ತರ ನಿಲುವು. ಶ್ಯಾಮಲ ವರ್ಣ. ಪರಿಚಯದವರು ಕಂಡರೆ ಮುಖವರಳಿಸಿ, ಲವಲೇಷವೂ ಕಪಟವಿಲ್ಲದ ಕಲ್ಮಷವಿಲ್ಲದ ನಗೆ. ಅವರಿದ್ದ ಕಡೆ ಆತ್ಮೀಯತೆಯ ವಿದ್ಯುತ್ ಪ್ರವಾಹ. ಅವರ ವಲಯ ಹೊಕ್ಕರೆ ಆಹ್ಲಾದ. ಅಲ್ಲಿ ದುಗುಡ, ದುಮ್ಮಾನ, ಬೇಸರಗಳಿಗೆ ಜಾಗವಿಲ್ಲ. ಸಜ್ಜನರು ಎಂದರೆ ಹೀಗೇ ಇರುತ್ತಾರೇನೋ. ಚಿಕ್ಕ ವಯಸ್ಸಿನಲ್ಲೆ ಬಹ್ರೇನ್ ಗೆ ಬಂದು, ಚಿಕ್ಕ ಪುಟ್ಟ ಟೈಲರಿಂಗ್ ಕೆಲಸ ಮಾಡಿ, ನಂತರ ತಮ್ಮದೆ ಟೈಲರ್ ಶಾಪ್ ಆರಂಭಿಸಿದರು. ಆಗೆಲ್ಲಾ ರೆಡಿಮೇಡ್ ಬಟ್ಟೆ ಅಷ್ಟು ಜನಪ್ರಿಯ ಆಗಿರಲಿಲ್ಲ. ಅರಬಿಗಳಿಗೆ ದೊಡ್ಡ ನಿಲುವಂಗಿಗಳು, ಬುರ್ಖಾಗಳು, ಸೂಟ್ ಗಳು, ಜೊತೆಗೆ ಕೆಲಸ ಮಾಡಲು ಇಬ್ಬರು ಮೂವರು ಟೈಲರ್ಗಳು, ೨೪ ಗಂಟೆ ಕೆಲಸ.

ತಮ್ಮ ಶಾಪ್ ಪಕ್ಕದಲ್ಲೆ ಚಿಕ್ಕ ಮನೆ. ಓಡಾಡಲಿಕ್ಕೆ ಸೈಕಲ್. ಸ್ವಯಂಪಾಕ. ಹೀಗೆ‌ ದುಡಿದ ಹಣ ಸಂಗ್ರಹಿಸಿ ಬಾಂಬೆಯಲ್ಲಿ ಚಿಕ್ಕದೊಂದು ಫ್ಲಾಟ್ ತಕ್ಕೊಂಡಿದ್ದರು. ಮಗಳು ಡಿಗ್ರಿ, ಮಗ ನಿಟ್ಟೆಯಲ್ಲಿ ಇಂಜಿನಿಯರಿಂಗ್ ಸೇರಿದ್ದಷ್ಟೆ. ಇದೆಲ್ಲ ಹಳೆ ಕತೆ.

ನಾನು ಅವರನ್ನು ಭೇಟಿ ಮಾಡುವ ವೇಳೆಗೆ ಎರಡು ಹಳೆಯ ಹೊಲೆಯೊ ಮಶೀನ್ ಗಳ ಮಧ್ಯದಲ್ಲಿ ಒಂದು ಟೇಬಲ್ ಹಾಕಿದ್ದರು. ಬಾಗಿಲಿನ ಬಲ ಪಕ್ಕದಲ್ಲಿ ಗೋಡೆಗೆ ಹೊಂದಿಕೊಂಡಂತೆ ಒಂದು ಬೆಂಚು. ಅದರ ಎದುರು ಎರಡು ಸ್ಟೀಲ್ ಕುರ್ಚಿಗಳು. ಬೆಂಚ್ ಮೇಲೆ ಆಗ ತಾನೆ ಬಂದ ಫ್ರೆಶ್ಶಾದ ಹಿಂದಿನ ದಿನದ ಉದಯವಾಣಿ! ಮಲಯಾಳಂ ಪೇಪರ್ ಮಾತ್ರ ಆ ದಿನದ್ದು ಅದೇ ದಿನ ಬೆಳಗ್ಗೆ ಆರಕ್ಕೆ Good morning. ಮಿಕ್ಕವೆಲ್ಲಾ ಬಾಸೀ‌ ರೋಟೀ.

ಆದರೆ ಈಗ ಕಾಲ ಬದಲಾಗಿದೆ. ಹಿಂದಿನ ಲವಲವಿಕೆ ಮಾಸುತ್ತ ಬಂದಿದೆ. ಯಾಕೆಂದರೆ ಈಗ ರೆಡಿಮೇಡ್ ಜೀನ್ಸ್ ಪ್ಯಾಂಟು, ಟೀಶರ್ಟ್ನ ಟ್ರೆಂಡ್ ಚಾಲ್ತಿಯಲ್ಲಿದೆ. ಹಾಗಾಗಿ ಅವರಿಗೆ ಬರೀ‌ ಬಟ್ಟೆ ರಿಪೇರಿ ಕೆಲಸಗಳೇ ಬರುತ್ತಿದ್ದರು. ಆದಾಯ ಏಕ್ದಂ ಪಾತಾಳಕ್ಕೆ ಇಳಿದು ಹೋಗಿತ್ತು. ಮಗಳು ಹೇಗೊ ಒಂದು ಕೆಲಸ ಗಳಿಸಿದ್ದರಿಂದ ಅವರ ಆದಾಯಕ್ಕೆ ಕೊಂಚ ಇಂಬು ದೊರೆತಿತ್ತು.

ಮಗಳು ಕೆಲಸಕ್ಕೆ ಸೇರಿದ ದಿನ ನನಗೆ ನೆನಪಿದೆ. ‘ಭಟ್ರೆ.. ಮಗಳು ಕೆಲಸಕ್ಕೆ ಸೇರಿದ್ದಾಳೆ’ ಎಂದು ಹೇಳುವಾಗ ಅವರು ಅಳೋದೊಂದು ಬಾಕಿ. ನಾನೊ ಫುಲ್ಲು ಉಲ್ಟಾ.. ‘ಸ್ವಾಮಿ ಕೃಷ್ಣ ಶೆಟ್ರೆ, ಎಂಥಾ ಜನಾರೀ ನೀವು? ಈಗಿನ ಕಾಲ್ದದಲ್ಲಿ ಹೆಣ್ಣು ಮಕ್ಕಳು ಪೈಲಟ್ ಆಗ್ತಾರೆ. ರಾಕೆಟ್ ಉಡಾಯಿಸ್ತಾರೆ. ಆದ್ರೆ ನೀವೊ, ಮಗಳು ಕೆಲಸಕ್ಕೆ ಸೇರಿದ್ದಾಳೆ ಅಂತ ಅಳುತ್ತ ಕುಳಿತರೆ ಹೇಗೆ. ಮಗಳೇ ಶಭ್ಬಾಶ್ ಅನ್ನಬೇಕಪ್ಪ ನೀವು..’ ಎಂದಾಗ ಅವರಿಗೂ ಕೊಂಚ ಗೆಲುವೆನಿಸಿತು. ಹೌದಲ್ಲಾ. ನಾನೂ ಆಲೋಚನೆಯನ್ನು ಸರಿ ಮಾಡಿಕೊಳ್ಳಬೇಕು ಎನ್ನುತ್ತ ‘ಭಟ್ರೆ.. ಬಲೆ ಚಾ ಪರ್ಕ’ ಎಂದರು.

ಶೆಟ್ಟರು ತಮ್ಮಂದಿರಿಬ್ಬರನ್ನು ತಮ್ಮ ಪರಿಚಯದ ಹೋಟೆಲ್ನಲ್ಲಿ ಚಿಕ್ಕ‌ ಕೆಲಸಕ್ಕೆ ಸೇರಿಸಿದ್ದಾರೆ. ಕ್ರಿಕೆಟ್ ಮ್ಯಾಚ್ ಇದ್ದಾಗ ಅವರ ಮನೆಯೊಳಗೆ ಸಂತೆ ಮಾಡಿಕೊಂಡು ಖುಷಿಪಡುತ್ತಿದ್ದರು. ಸುಮಾರು ೧೦ – ೧೫ ಜನರು ಸೇರಿಕೊಂಡು ಬಾಯಿ ತುಂಬಾ ತುಳು ಮಾತನಾಡಿಕೊಂಡು ಮ್ಯಾಚ್ ನೋಡುತ್ತಿದ್ದರು. ನನಗೆ ತುಳು ಬರುವುದಿಲ್ಲ. ಹಾಗಾಗಿ ಅವರ ಮಾತಿನ ಮಧ್ಯೆ ಒಂದೆರಡು ಸಾಲು ಕನ್ನಡ ಸೇರಿಕೊಳ್ಳುತ್ತಿತ್ತು. “ಭಟ್ರೆ.. ನೀವ್ ಪ್ರಯೋಜನ ಇಲ್ಲ ಮಾರಾಯ್ರೆ… ನಮ್ ಭಾಷೆ ತುಳು ಹೇಗೆ ಬಿಟ್ರಿ ನೀವು?” ಎಂದು ಕೇಳುತ್ತಿದ್ದರು.

ಇಂಡ್ಯಾ ವಿಕೆಟ್ ಕಳಕೊಳ್ಳೋಕೆ ಶುರುವಾಯ್ತೋ. ಅಷ್ಟೆ. ‘ನೀವ್ ಕೂತ್ಕಡೆ ಇಂದ ಏಳ್ಬೇಡಿ ಮಾರಾಯ್ರೆ. ನೀವ್ ಎದ್ರೆ ಇನ್ನೊಬ್ಬ ಔಟ್ ಆಗ್ತಾನೆ’ ಎಂದು ನನಗೆ ಹೇಳುತ್ತಿದ್ದರು. ಮತ್ತೆ ಅವರೆಲ್ಲ ಹೇಗೆ ಆಟವಾಡಬೇಕಿತ್ತು ಎಂದು ದೀರ್ಘ ವಿಶ್ಲೇಷಣೆ ನಡೆಯುತ್ತಿತ್ತು ಮತ್ತು ಅದು ಒಂದು ವಾರದಷ್ಟು ದೀರ್ಘ ಸಾಗುತ್ತಿತ್ತು.

ಅವರ ಅಂಗಡಿಗೆ ಕಾಸಿಲ್ಲದೆ ಉದಯವಾಣಿ ಓದಕ್ಕೆ ಬರೋ ಜನ ತುಂಬಾ. ಒಬ್ಬ ಭೂಪ ಉದಯವಾಣಿ ಬರೋದಕ್ಕೆ ಸರಿಯಾಗಿ ಐದು ನಿಮಿಷ ಮುಂಚೆ ಬಂದು ಕುಳಿತುಬಿಡುತ್ತಿದ್ದ. ಕರಾವಳಿ ಕಡೆಯ ಜನರಿಗೆ ಅಪರೂಪವೆಂಬ ಸ್ವಭಾವ. ಭಾರೀ ಮೌನಿ. ಪೇಪರ್ ಬಂದಾಗ. ಶಿಸ್ತಾಗಿ ಬಾಗಿಲಲ್ಲಿ ಇಸ್ಕೊಂಡು ೧೫ ನಿಮಿಷ ಓದಿ ಮಡಚಿ ಪಕ್ಕಕ್ಕಿಟ್ಟು ಹೊರಟುಬಿಡುತ್ತಿದ್ದ. ಶೆಟ್ರೆ ಮೊದಲು ಪೇಪರ್ ಓದೋದು ಅವರಲ್ವಾ… ಎಂದು ಪ್ರಶ್ನಿಸಿದ್ದಕ್ಕೆ ಒಮ್ಮೆ,`ಎಂತ ಮಾಡುದು ಮಾರ್ರೆ. ನನ್ ಶಾಪ್ ಪಂಚಾಯ್ತಿ ಕಟ್ಟೆ ಎಂದು ಹೇಳುತ್ತಿದ್ದರು. ಹೀಗೆ ಶ್ರೀಮಂತರಂತೆ ಭಾರೀ ಗತ್ತಿನಿಂದ ದಂಪತಿಗಳಿಬ್ಬರು ಬಂದು ಪೇಪರ್ ಓದುತ್ತಿದ್ದರು. ಶೇರ್ ಮಾರ್ಕೆಟ್ ನಲ್ಲಿ ಎಲ್ಲಾ ನಷ್ಟವಾಯಿತು ಎಂದು ಅಲವತ್ತುಕೊಳ್ಳುತ್ತಿದ್ದರು.

ಹೆಂಡತಿ ಅಲ್ಲಿಯೇ ಸಲಹೆ ಕೊಡುತ್ತಿದ್ದರು. ಇನ್ನು ಮುಂದೆ ಭೂಮಿಗೆ ಹಣ ಹೂಡಬೇಕು ..ಅಂತ. ಇದೆಲ್ಲ ಟೆನ್ಶನ್ ಆಗ್ತಿದೆ. ಬ್ಯಾಂಕಲ್ಲೇ ದುಡ್ಡು ಬಿದ್ದಿರ್ಲಿ ಅಂತ ಗಂಡ ಹೇಳುತ್ತಿದ್ದರು. ಇಷ್ಟೊಂದು ದುಡ್ಡು ಇಟ್ಟುಕೊಂಡಿರುವ ಕುಬೇರ ಮತ್ತು ಲಕ್ಷ್ಮೀ ದೇವಿಯಂತಹ ವ್ಯಕ್ತಿಗಳನ್ನು ಕಂಡು ನನಗೆ ಅಚ್ಚರಿಯಾಗುತ್ತಿತ್ತು.

(ಮುದ್ರಾಡಿ ಕೃಷ್ಣ ಶೆಟ್ಟರು)

ಹಿಂದಿನ ಲವಲವಿಕೆ ಮಾಸುತ್ತ ಬಂದಿದೆ. ಯಾಕೆಂದರೆ ಈಗ ರೆಡಿಮೇಡ್ ಜೀನ್ಸ್ ಪ್ಯಾಂಟು, ಟೀಶರ್ಟ್ನ ಟ್ರೆಂಡ್ ಚಾಲ್ತಿಯಲ್ಲಿದೆ. ಹಾಗಾಗಿ ಅವರಿಗೆ ಬರೀ‌ ಬಟ್ಟೆ ರಿಪೇರಿ ಕೆಲಸಗಳೇ ಬರುತ್ತಿದ್ದರು. ಆದಾಯ ಏಕ್ದಂ ಪಾತಾಳಕ್ಕೆ ಇಳಿದು ಹೋಗಿತ್ತು. ಮಗಳು ಹೇಗೊ ಒಂದು ಕೆಲಸ ಗಳಿಸಿದ್ದರಿಂದ ಅವರ ಆದಾಯಕ್ಕೆ ಕೊಂಚ ಇಂಬು ದೊರೆತಿತ್ತು.

ಶೆಟ್ರು ಏನ್ ಮಾತಾಡಿದ್ರು ಸ್ವಾರಸ್ಯವಾಗಿ ಮಾತಾಡೋವ್ರು. ಮಾತಾಡಿದ್ರೆ ಕತೆ ಹೇಳಿದ ಹಾಗೆ ಇರುತ್ತದೆ. ಎದುರು ಕೂತವರು ಮಂತ್ರಮುಗ್ಧರಾಗುವಂತೆ. ಅವರ ಮದುವೆಯ ಕತೆಯನ್ನ ಪ್ರಾಯಶಃ ಬಹ್ರೇನ್ ನ ಎಲ್ಲಾ ಕನ್ನಡಿಗರು ಕೇಳಿರಬಹುದು. ಅವರು ಹುಡುಗಿಯನ್ನು ನೋಡಲು ಮುದ್ರಾಡಿ ಪಕ್ಕದ ಊರಿಗೆ ಹೋಗುತ್ತಾರೆ. ಜ್ಯೂಸು, ಶರಬತ್ತು ಅಂತ ಹುಡುಗಿ ನೋಡಿದ ಶಾಸ್ತ್ರ ಆಯ್ತು. ಶೆಟ್ರು ಮತ್ತು ಹುಡುಗಿ ಇಬ್ಬರೇ ಮಾತಾಡಲು ಮನೆಯಿಂದ ಹೊರಗೆ ಬರ್ತಾರೆ.

ಹುಡುಗಿ‌ ಸ್ವಲ್ಪ ಜೋರು ಇದ್ದ ಹಾಗೆ ಅನಿಸಿತು. ‘ಬಹ್ರೇನ್ ನಲ್ಲಿ ಎಂತ ಕೆಲಸ ಮಾಡ್ತೀರಿ?’ ಎಂದು ಕೇಳಿಯೇ ಬಿಟ್ಟಳು.
“ಟೈಲರ್.”
“ಎಂತ ಎಲ್ಲಾ ಹೊಲೀತೀರೀ?…”
“ಎಲ್ಲಾ ತರವೂ”
“ಹ್ಹುಃ.. ಇದುವರೆಗು ಒಬ್ಬ ಟೈಲರ್ ನನ್ನ ಬ್ಲೌಸ್ ಸರಿಯಾಗಿ‌ ಹೊಲೆದಿಲ್ಲಾ…”
“ನಾನು ಹೊಲೆದು ಕೊಡ್ತೆ”
“ನೋಡುವಾ ಅದೇನ್ ಹೊಲೀತೀರೊ.. ಒಂದ್ ಹಳೇದ್ ಕೊಡ್ತೆ.. ಅಳ್ತೆ ಹೇಳ್ತೆ..”
“ಸ್ಯಾಂಪಲ್ಲೂ ಬೇಡ.. ಅಳ್ತೆನೂ ಬೇಡ, ಛಾಲೆಂಜ್, ಹಾಂಗೆ ಹೊಲೀತೆ..”
ಎಂದು ಹೇಳಿಬಿಟ್ಟಿದ್ದರು. ಬಟ್ಟೆ‌ಯನ್ನೂ ತಾವೇ ತಂದು, ಅಂದಾಜಿಗೆ ಒಂದು ರವಿಕೆ ಹೊಲಿದು, ಮರುದಿವಸ ಹುಡುಗಿಯ ಮನೆಗೆ ಹೋಗಿ ಕೊಟ್ಟರು. ಅದೃಷ್ಟವೇ
ಅಲ್ಲದೇ ಮತ್ತೇನೂ ಅಲ್ಲ. ಭಂಡಧೈರ್ಯದಿಂದ ಹೊಲಿದ ರವಿಕೆ ಆಕೆಗೆ ಇಷ್ಟವಾಗಿತ್ತು. ಆಕೆಯೇ ಸೇರಕ್ಕಿ ಒದ್ದು ಮನೆಗೆ ಬಂದಳು. ಇಂದಿಗೂ ಅದೇ ಮಾತು, ‘ನೀವ್ ಹ್ಯಾಗ್ ಹೊಲೆದ್ರಿ.. ಇಷ್ಟು ಚೆನ್ನಾಗಿ ಯಾರೂ ಹೊಲೆದಿರಲಿಲ್ಲ!”

ಶೆಟ್ಟರು ಪ್ರತೀ ಶುಕ್ರವಾರ ಬೆಳಗ್ಗೆ ಒಂದ್ಸಾರಿ ಹೆಂಡತಿಗೆ ಫೋನ್ ಮಾಡ್ತಿದ್ರು. ಆಗಿನ ಕಾಲದಲ್ಲಿ ಟೆಲಿಫೋನ್ ಕರೆಗೆ ನಿಮಿಷಕ್ಕೆ ೩೦ ರೂ. ಗಂಡ ಹೆಂಡತಿ ಇಬ್ಬರೂ ಹೆಚ್ಚು ಓದಿದವರಲ್ಲಾ. ‘ಹಲೋ… ಮೈ ಡಾರ್ಲಿಂಗ್.. ಹೌ ಆರ್ ಯೂ ?’ ಅಂತ ಕೇಳುವುದು.

ಆ ಕಡೆಯಿಂದ ನಗೆ ಬುಗ್ಗೆ. ತುಳುವಿನಲ್ಲಿ ಮಾತುಕತೆ. ಇದೆಲ್ಲಾ ತರ್ಲೆ ಬೇಡ. ದುಡ್ದಂಡ ಸರಿಯಾಗಿ ಮತಾಡಿ ಅಂತಿರಬೇಕು. ಈ ತರ್ಲೆ ಶೆಟ್ರು ಕೇಳ್ಬೇಕಲ್ಲಾ “ಐ ಲವ್ ಯೂ”.. ಒಂದೇ ಕ್ಷಣ ಮೌನ ಅಷ್ಟೆ.. ಆ ಕಡೆ ಇಂದ ಕಾಜೋಲ್ ಗೊಳೋ ಅಂತ ಅಳುವ ದನಿ . ಮೃದು ಹೃದಯಿ ಶೆಟ್ಟರೂ ಅತ್ತುಬಿಡುತ್ತಿದ್ದರು.

ಶೆಟ್ಟರಿಗೆ ಊರಲ್ಲಿ ಎಲ್ಲವೂ ಸುರಳೀತವಾಗಿ ನಡೆಯುತ್ತಿಲ್ಲ ಎಂದು ಗೊತ್ತಿದ್ದರೂ ಏನೂ ಮಾಡಲಾರದ ಅಸಹಾಯಕತೆ. ಕಾಲೇಜು ಸೇರಿದ್ದ ಮಗ ಓದಿನಲ್ಲಿ ಹಿಂದೆ ಬಿದ್ದ. ಅಷ್ಟೇ ಅಲ್ಲ ಈ ಕಾಲೇಜು ಬೇಡ ಅಂತ ಮನೆಗೇ ಬಂದಿದ್ದ. ಫೀಸೂ ಕಟ್ಟಿರಲಿಲ್ಲ. ‘ಅಪ್ಪ ಫಾರಿನ್ ನಲ್ಲಿ ಇದ್ದರೂ ಫೀಸು ಕಟ್ಟಲು ಆಗುವುದಿಲ್ಲವಾ..’ ಎಂಬ ಕೊಂಕು ಬೇರೆ. ಈ ನೋವನ್ನು ಶೆಟ್ರು ನನ್ನ ಬಳಿ ಹೇಳಿಕೊಂಡರು. ‘ಊರಿನ ಬ್ಯಾಂಕಲ್ಲಿ ಸ್ವಲ್ಪ ಹಣವಿತ್ತು. ಆದರೆ ಪಾಸ್ ಬುಕ್ ಇಲ್ಲ. ಬ್ಯಾಂಕಿಗೆ ಫೋನ್ ಮಾಡಿದರೆ ಎಷ್ಟು ಹಣವಿದೆ ಎಂದು ಗೊತ್ತಿಲ್ಲಾ ಎನ್ನುತ್ತ ಫೋನ್ ಕುಕ್ಕಿದರು. ಏನ್ ಮಾಡೋದು ಭಟ್ರೇ?’

ನಾನು ಫೋನ್ ಮಾಡಿದೆ. ನಾನೇ ಕೃಷ್ಣ ಶೆಟ್ಟಿ ಎಂದು ಹೇಳಿಕೊಂಡು, ಬ್ಯಾಲೆನ್ಸ್ ಎಷ್ಟಿದೆ ನೋಡಿ..ಎಂದು ಕಡಕ್ಕಾಗಿ ಹೇಳಿದೆ. ಆಕಡೆಯಿಂದ ಸ್ಪಷ್ಟ ಉತ್ತರ ಬಂತು. ‘35 ಸಾವಿರ…’
ಶೆಟ್ರಿಗೆ ಭಾರೀ ಖುಷಿ ಆಯಿತು.

ಒಮ್ಮೆ ಶೆಟ್ಟರ ತಂದೆಗೆ ಹುಶಾರಿಲ್ಲ ಎಂಬ ಸಂದೇಶ ಬಂತು. ಆದರೆ ಊರಿಗೊಮ್ಮೆ ಹೋಗಲು ಶೆಟ್ರ ಬಳಿ ಹಣವಿರಲಿಲ್ಲ. ತಮ್ಮಂದಿರು ಅಲ್ಲೇ ಇದ್ದರಲ್ಲ, ಟಿಕೇಟಿಗೆ ಸ್ವಲ್ಪ ಹಣ ಹೊಂದಿಸಲು ಹೇಳಿದರೆ, ಅವರೆಲ್ಲ ಚೀಟಿ ಕಟ್ಲಿಕ್ಕುಂಟು, ಆರ್ ಡಿ ಕಟ್ಲಿಕ್ಕುಂಟು ಅಂತ ಜಾರಿ ಕೊಂಡರು. ಶೆಟ್ಟರ ನಗು ಮಾತು, ಹಾಸ್ಯವಿಲ್ಲದೇ ಅಂಗಡಿ ಬರಿದಾಗಿತ್ತು.

ಕೊನೆಗೆ 100 ದಿನಾರ್ ಸಾಲ ಪಡೆದು ಊರಿಗೆ ಹೋಗಿ ಬಂದರು. ಬಂದ ಮೇಲೆಯೂ ನಗು ಮೂಡಲಿಲ್ಲ. ಶೆಟ್ರೇ..ನೀವೇ ಒಮ್ಮ ವೈದ್ಯರನ್ನು ಕಂಡು ಬನ್ನಿ. ಯಾಕೋ ಬಳಲಿದ್ದೀರಿ ಎಂದು ಸಲಹೆ ಮಾಡಿದೆ. ಕೊನೆಗೆ ಒತ್ತಾಯದ ಮೇಲೆ ಅವರು ವೈದ್ಯರ ಬಳಿ ಹೋಗಲು ಒಪ್ಪಿದ್ದರು.

ಹಾಗೆ ಒಂದು ದಿನ ಸಂಜೆ ಹೊಲಿಗೆ ಅಂಗಡಿ ಬಂದ್ ಆಗಿತ್ತು. ‘ಅರೆ ಹೇಳದೇ ಎಲ್ಲಿಗೆ ಹೋದರಪ್ಪಾ..’ ಎಂದು ಅವರಿವರ ಬಳಿ ವಿಚಾರಿಸಲು ಶುರು ಮಾಡಿದೆ. ನನಗಿಂತ 25 ವರ್ಷ ಚಿಕ್ಕವರಾದ ಶೆಟ್ಟರು ಬಹು ದೂರ ಹೋಗಿಬಿಟ್ಟಿದ್ದರು.

ಜನರ ಪ್ರೀತಿ ಗಳಿಸಿದ್ದ ಶೆಟ್ಟರು ಹೋದ ಸುದ್ದಿ ಕೇಳಿದ್ದೇ ಜನ ಸಾಗರವೇ ಸೇರಿತ್ತು. ಬಹರೈನ್ ಕನ್ನಡ ಸಂಘದಲ್ಲಿ ಆಯೋಜಿಸಿದ ಶ್ರದ್ಧಾಂಜಲಿ ಸಭೆಯು ಕಿಕ್ಕಿರಿದು ತುಂಬಿತ್ತು.

ಎಲ್ಲೋ ಹುಟ್ಟಿ, ಎಲ್ಲೋ ಕಾಣದ ಊರಿಗೆ ಬಂದು ಸ್ನೇಹ ಸಂಪಾದಿಸಿಕೊಂಡು ಬಾಳುವೆ ನಡೆಸಿದ ಶೆಟ್ಟರ ನೆನಪು ಈಗಲೂ ಕಾಡುತ್ತದೆ. ಅವರು ನನ್ನ ಬದುಕಿನ ಅವಿಭಾಜ್ಯ ಅಂಗವಾಗಿದ್ದರು ಎಂಬುದು ಅವರು ಅಗಲಿದ ಮೇಲೆ ಅರಿವಿಗೆ ಬಂತು. ಅಂಗಡಿ ಮುಂದೆ ಹಾದು ಹೋಗುವಾಗ, ಹಾಯ್ ಭಟ್ರೇ ಎಂದು ಕರೆದ ಹಾಗೆ ಅನಿಸುತ್ತದೆ. ಅವರ ಸ್ನೇಹಪರ ನಡೆಯಿಂದಾಗಿ, ಆ ಅಂಗಡಿಯ ಮೂಲಕ ನನಗೂ ಅನೇಕರ ಪರಿಚಯವಾಗಿತ್ತು. ನನ್ನ ಸ್ನೇಹವಲಯವೂ ವಿಸ್ತರಿಸಿತ್ತು.


ಅವರ ಕಿರಿದಾದ ಕೊಠಡಿಯನ್ನು ಜಾಲಾಡಿ, ದಾಖಲೆ ಪತ್ರಗಳು, ಎಲ್ಲೈಸಿ ಬಾಂಡ್ ಮುಂತಾದುವುಗಳನ್ನು ಮುದ್ರಾಡಿಗೆ ಪೋಸ್ಟ್ ಮಾಡಿದೆ. ಪ್ರೀತಿಯ ಕ್ಷಣಗಳು, ಸ್ನೇಹದ ನುಡಿಗಳು ಮಾತ್ರ ಭಾರವಾಗಿ ನನ್ನೆದೆಯಲ್ಲಿ ಉಳಿದಿದೆ. ಅವರ ಜೀವನ ಪ್ರೀತಿ ಮಾತ್ರ ನನಗೆ ಸದಾ ಸ್ಫೂರ್ತಿ.