ಒಮ್ಮೆ ಹೊರ ಜಗಲಿಯಲ್ಲಿ ಕುಳಿತು ಸುಮ್ಮನೆ ರಸ್ತೆ ನೋಡುತ್ತಿರಬೇಕಾದರೆ ಅಚಾನಕ್ಕಾಗಿ ಕೋಳಿ ವಿಚಿತ್ರವಾಗಿ ಶಬ್ದ ಹೊರಡಿಸಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಅನತಿ ದೂರದಲ್ಲೇ ಹದ್ದೊಂದು ನೆಲದ ಮಟ್ಟಕ್ಕೆ ಹಾರಿದ್ದು ಕಂಡಿತು. ಮರಿಗಳು ಅವಕ್ಕಾಗಿ ಹೇಂಟೆಯ ಹೊಟ್ಟೆಯೊಳಗಡೆ ಮುದುಡಿಕೊಂಡವು. ಎರಡು ಮರಿಗಳು ತುಂಬಾ ದೂರದಲ್ಲಿದ್ದರಿಂದ ಅವುಗಳಿಗೆ ಕೂಡಿಕೊಳ್ಳಲಾಗಲಿಲ್ಲ. ನಾನು ಇನ್ನೇನು ಗಿಡುಗಕ್ಕೆ ಆಹಾರವಾಗುವುದನ್ನು ತಪ್ಪಿಸಲು ಹಿಂದುಳಿದಿದ್ದ ಎರಡು ಮರಿಗಳ ಹತ್ತಿರ ಓಡಿದೆ. ನನ್ನನ್ನು ಕಂಡ ಕೂಡಲೇ ಕೆಳಕ್ಕಿಳಿದಿದ್ದ ಹದ್ದು ಮತ್ತೆ ಮೇಲೆ ಹಾರಿತ್ತು. ಒಂದು ಮರಿಯನ್ನು ಹೇಗೋ ಎತ್ತಿಕೊಂಡು ಹೇಂಟೆಯ ಗುಂಪಿನ ಜೊತೆ ಸೇರಿಸಿದೆ.
ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥಾನಕ

 

ಆ ದಿನ ವಿಜ್ಞಾನ ತರಗತಿಯಲ್ಲಿ ಕೀಟಾಹಾರಿ ಗಿಡಗಳ ಬಗ್ಗೆ ನಮಗೆ ಪಾಠವಿತ್ತು. ಅಧ್ಯಾಪಕರು ವಿವರಿಸುತ್ತಿದ್ದರು. ಈ ಜೀವ ಜಗತ್ತಿನ ಕೌತುಕಗಳ ಬಗ್ಗೆ ವಿವರಿಸುತ್ತಿದ್ದಂತೆ ರೋಮಾಂಚನಗೊಂಡು ಒಮ್ಮೆಲೆ ನಾನು ಸೆಟೆದು ನಿಂತಿದ್ದೆ. ಆ ದಿನದ ತರಗತಿಯಲ್ಲಿ ತಾರುಮಾರು ಪ್ರಶ್ನೆ ಹಾಕಿ ತರಗತಿಯನ್ನು ಇನ್ನಷ್ಟು ಕುತೂಹಲಕ್ಕೆ ತಳ್ಳಿದ್ದೆ. ಅವರು ‘ಅದು ಹೇಗೆ ಕೀಟಗಳನ್ನು ಹಿಡಿಯುತ್ತವೆ’ ಅನ್ನುವುದರ ಬಗ್ಗೆ ವಿವರಿಸುತ್ತಾ, ಆಫ್ರಿಕಾದ ಕಾಡಿಗೆ ಹೊಕ್ಕೇ ಬಿಟ್ಟರು. ಮತ್ತೆ ನಾನು ಕಿವಿಯೆರಡನ್ನೂ ಒತ್ತೆಯಿಟ್ಟು ಅಮೇಝಾನ್ ಕಾಡಿನಲ್ಲೇ ಲೀನವಾದೆ. ಆ ಅಧ್ಯಾಪಕರು ಮನುಷ್ಯನನ್ನೂ ತಿನ್ನುವ ಮಾಂಸಹಾರಿ ಗಿಡಗಳ ಬಗ್ಗೆ ವಿವರಿಸುತ್ತಿದ್ದರು. ಅಷ್ಟೊತ್ತಿಗೆ ಗಂಟೆ ಬಾರಿಸಿತು. ಅವರು ಅರ್ಧದಲ್ಲಿ ವಿವರಿಸುವುದನ್ನು ನಿಲ್ಲಿಸಿ ಕ್ಲಾಸಿನಿಂದ ಹೊರಟರು. “ಈ ಸಮಯದಲ್ಲೆಲ್ಲಾ ಯಾಕಾದರೂ ಗಂಟೆ ಬಾರಿಸುತ್ತಾರಪ್ಪಾ?” ಎಂದು ನನಗೆ ಕೋಪ ನೆತ್ತಿಗೇರಿತ್ತು. ಹೊರಗಡೆ ಸಣ್ಣಗೆ ಮಳೆ ಹನಿಯುತ್ತಿತ್ತು. ಬೆಚ್ಚಗೆ ಕುಳಿತು ಆ ದಿನ ಪೂರ್ತಿ ಎಲ್ಲಾ ತರಗತಿಯಲ್ಲೂ ಇದೇ ನೆನೆಯುತ್ತಾ ಮಾಂಸಹಾರಿ ಸಸ್ಯಗಳ ಹ್ಯಾಂಗೋವರ್ ಗೆ ಬಿದ್ದೆ.

ನನಗೆ ಇನ್ನೂ ಒಂದು ಪ್ರಶ್ನೆ ಕೇಳಲು ಬಾಕಿಯುಳಿದಿತ್ತು. ಕೀಟಾಹಾರಿ ಸಸ್ಯವೆಂದಾಗ ಮುಟ್ಟಿದ ಕೂಡಲೇ ಎಲೆ ಮಡಚಿಕೊಳ್ಳುವ ನಾಚಿಕೆ ಮುಳ್ಳು( ಮುಟ್ಟಿದರೆ ಮುನಿ) ಯಾಕೆ ಅದೇ ಪ್ರಭೇಧಕ್ಕೆ ಸೇರಿರಬಾರದು ಎಂಬ ಪ್ರಶ್ನೆ. ಇದೂ ಒಂದು ಥರದ ಮಾಂಸಹಾರಿಯೇ ಇರಬೇಕೆಂಬ ತೀರ್ಮಾನಕ್ಕೂ ಬಂದು ತಲುಪಿದೆ. ನಾವು ಮುಟ್ಟಿದರೆ ಮುನಿಯುವುದಾದರೆ ಅದರ ಎಲೆಯೊಳಗೆ ನುಸಿಯೋ ಸೊಳ್ಳೆಯೋ ಕುಳಿತುಕೊಂಡು ಬಿಟ್ಟರೆ ಯಾಕೆ ಎಲೆಯೊಳಗೆ ಸಿಲುಕಿ ಸತ್ತು ಅದಕ್ಕೇ ಆಹಾರವಾಗಬಾರದೆಂಬ ಸಂಶಯ ನನ್ನಲ್ಲಿ ಹುಟ್ಟಿಕೊಂಡಿತ್ತು.

ಆ ದಿನ ಸಂಜೆ ಮನೆಗೆ ಬಂದವನೇ ಬ್ಯಾಗು ಮೂಲೆಗೆಸೆದು ಅಂಗಳಕ್ಕೆ ಇಳಿದೆ. ಮಳೆ ಸ್ವಲ್ಪ ಕಡಿಮೆ ಇತ್ತು. ಆಗಷ್ಟೆ ಹೆಪ್ಪುಗಟ್ಟಿದ್ದ ಮೋಡಗಳನ್ನೆಲ್ಲಾ ಬದಿಗೆ ಸರಿಸಿ ಸೂರ್ಯ ಜಾಂಡೀಸ್ ರೋಗಿಯಂತಾಗಿ ಹೊರಡುವ ತಯ್ಯಾರಿಯಲ್ಲಿದ್ದ. ಅಲ್ಲೆ ಹರಿಯುತ್ತಿದ್ದ ಇರುವೆ ಸಾಲುಗಳಲ್ಲಿ ಒಂದೆರಡು ಜೀವಂತ ಇರುವೆಯನ್ನು ಎತ್ತಿ ತಂದೆ. ತಥಾ ಕಥಿತ ಸಸ್ಯದ ಎಲೆಯ ಮಧ್ಯೆ ಬರುವಂತಿರಿಸಿ ಸೂಕ್ಷ್ಮವಾಗಿ ಪರೀಕ್ಷಿಸತೊಡಗಿದೆ. ಬಹಳಷ್ಟು ತಡವಾಗಿಯೇ ಎಲೆಗಳು ಮುಚ್ಚಿಕೊಂಡವು. ಇರುವೆಗಳು ಸಲೀಸಾಗಿ ತಪ್ಪಿಸಿಕೊಂಡು ಹೊರ ಬಂದವು. ಇಷ್ಟಾಗಿಯೂ ಕುತೂಹಲ ಆರದಿರುವಾಗ ಒಂದೆರಡು ಇರುವೆಯನ್ನು ಕೊಂದು ಸಾವಧಾನವಾಗಿ ಎಲೆಗಳ ಮಧ್ಯೆ ಇಟ್ಟು ನೋಡಿದೆ. ಎಲೆ ಹೇಗೂ ಇರುವೆ ಶವವನ್ನು ಅಪ್ಪಿಕೊಂಡೇ ಮುಚ್ಚಿತು. ನನ್ನ ಖುಷಿಗೆ ಪಾರವಿರಲಿಲ್ಲ. ಅಬ್ಬಾ ಇನ್ನಾದರೂ ಈ ಸಸ್ಯಕ್ಕೆ ಆಹಾರವಾಗಿ ನನ್ನ ಸಂಶೋಧನೆ ಗೆಲ್ಲುತ್ತದೆಯೆಂಬ ಖುಷಿಯೊಂದಿಗೆ ಹಿಗ್ಗಿದೆ. ಇಳಿ ಸಂಜೆಯಾದ್ದರಿಂದ ಉಮ್ಮ ಅದಾಗಲೇ ಮೂರು ಬಾರಿ ಸ್ನಾನಕ್ಕೆ ಕರೆದಾಗಿತ್ತು. ಇನ್ನೊಂದು ಬಾರಿ ಕರೆಯುವಾಗಲೂ ಹೋಗದಿದ್ದರೆ ಬೆನ್ನು ಪುಡಿಯಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದ್ದರಿಂದ ನನ್ನ ಹುಚ್ಚಾಟವನ್ನು ಅರ್ಧಕ್ಕೆ ನಿಲ್ಲಿಸಿ ಬಚ್ಚಲು ಮನೆಗೋಡಿದೆ. ಸ್ನಾನ ಮಾಡುತ್ತಾ ಇರುವೆ ತಿನ್ನುವ ಮುಟ್ಟಿದರೆ ಮುನಿ ಗಿಡವನ್ನೇ ಅವಲೋಕಿಸುತ್ತಾ ಮದರಸಾಕ್ಕೆ ತಡವಾಗುವವರೆಗೂ ಬಚ್ಚಲು ಮನೆಯಲ್ಲಿ ಬಾಕಿಯುಳಿದೆ.

ಆ ರಾತ್ರಿ ತಂಗಿಯಂದಿರಿಗೆ ಕಥೆ ಹೇಳುವುದೇನು. ಅಮೆಝಾನ್ ಕಾಡಿನಲ್ಲಿ ಸ್ವತಃ ನುಗ್ಗಿ ಬಂದವನಂತೆ ಕಲ್ಪಿಸಿಕೊಂಡು ಮನುಷ್ಯನನ್ನೇ ತಿಂದು ಹಾಕುವ ಕಲ್ಪಿತ ಕಥೆಗಳನ್ನು ಹೇಳಿದೆ. ಆ ರಾತ್ರಿ ತುಂಬಾ ಅವೇ ಕನಸುಗಳು ಆಗಾಗ ಎಚ್ಚರವಾಗುವಷ್ಟು ಹೆದರಿಸುತ್ತಲೇ ಇದ್ದವು. ಮರುದಿನ ಬೆಳಗ್ಗೆ ಬೇಗ ಬಂದರೆ ಗಿಡ ಎಲೆ ಇದ್ದ ಹಾಗೇ ಬಿಡಿಸಿ ನಿಂತು ನನ್ನನ್ನೇ ಕಾಯುತ್ತಿತ್ತು. ನನಗಾದ ನಿರಾಶೆ ಅಷ್ಟಿಷ್ಟಲ್ಲ. “ಛೇ ಈ ಗಿಡ ಕೊನೆಗೂ ಇರುವೆ ತಿನ್ನಲೇ ಇಲ್ಲವಲ್ಲ” ಎಂದು ಬೇಸರದಿಂದ ಗಿಡದ ಸುತ್ತೂ ಇರುವೆಗಳ ಕಳೇಬರಕ್ಕಾಗಿ ಹುಡುಕಿದೆ. ಎಲ್ಲೂ ಇರುವೆಗಳ ಶವ ಕಾಣದಿದ್ದಾಗ ಇನ್ನಷ್ಟು ಸಮಾಧಾನವಾಗಿತ್ತು. ಆದರೆ ಪ್ರತ್ಯಕ್ಷವಾಗಿ ಇರುವೆ ತಿನ್ನುವುದನ್ನೊಮ್ಮೆ ನೋಡಲೇಬೇಕೆಂಬ ತೀರ್ಮಾನಕ್ಕೆ ಬಂದು ಇನ್ನಷ್ಟು ಇರುವೆಗಳನ್ನು ಕೊಂದು ತಂದು ಎಲ್ಲಾ ಎಲೆಗಳ ಮಧ್ಯೆ ಇರಿಸಿ ಅವುಗಳು ಎಲೆ ಮುಚ್ಚುವವರೆಗೂ ಕಾದೆ.

ಕೆಲವು ಇರುವೆಗಳು ಎಲೆ ಮುಚ್ಚುವುದರೊಳಗಾಗಿ ನೆಲಕ್ಕೆ ಬಿದ್ದರೂ ಹೆಚ್ಚಿನವು ಎಲೆಗಳ ಮಧ್ಯೆ ಉಳಿದವು. ಮತ್ತೆ ಪರೀಕ್ಷಿಸಲೇಬೇಕೆಂದು ದೂರದಲ್ಲೇ ಕುಳಿತು ಸಸ್ಯವನ್ನು ನೋಡುತ್ತ ನಿಂತೆ. ನಾನು ಬಿಟ್ಟು ಬಂದು ಸುಮಾರು ನಿಮಿಷಗಳ ಕಾಲ ಹಾಗೆಯೇ ಮುದುಡಿದ್ದ ಎಲೆಗಳು ಸ್ವಲ್ಪ ಸಮಯದ ತರುವಾಯ ಮೆಲ್ಲಗೆ ತೆರೆಯತೊಡಗಿತು. ಕುತೂಹಲ ತಾಳದೆ ಹತ್ತಿರ ಬಂದರೆ ಎಲ್ಲಾ ಇರುವೆಗಳು ನೆಲಕ್ಕೆ ಬಿದ್ದಿದ್ದವು. “ಅಯ್ಯೋ, ನನ್ನ ಸಂಶೋಧನೆ ಹಾಳಾಯಿತಲ್ಲ” ಎಂದು ತಿರುಗಿ ಬರುವುದೊರಳಗಾಗಿ ಹೇಂಟೆಯೊಂದು ತನ್ನ ಪರಿವಾರದೊಡನೆ ಬಂದು ಅಲ್ಲಿ ಸತ್ತು ಬಿದ್ದಿದ್ದ ಇರುವೆಗಳನ್ನೆಲ್ಲಾ ಸ್ವಾಹ ಮಾಡಲಾರಂಭಿಸಿತ್ತು. ಇರುವೆಗಳನ್ನು ತಿಂದದ್ದಕ್ಕೆ ಸಮಾಧಾನವಾಗದೆ ನಾಚಿಕೆ ಮುಳ್ಳನ್ನೆಲ್ಲಾ ಮತ್ತೆ ಮುದುಡುವಂತೆ ಮಾಡಿ ಅಲ್ಲೆಲ್ಲಾ ಕೆದರಿ ಹಾಕಿತ್ತು. ಅಂತೂ ನನ್ನ ಸಂಶೋಧನೆ ಸೋತ ಬೇಸರದಲ್ಲೋ, ಇವುಗಳ ಉಪಟಳದಿಂದಲೋ ಕೋಪ ಬಂದು ಅಲ್ಲೇ ಬಿದ್ದಿದ್ದ ಕೋಲೊಂದನ್ನು ಬೀಸಿ ಎಸೆದೆ. “ಕೋಕ್ಕೋ, ಕ್ಕೋ” ಎನ್ನುತ್ತಾ ಸ್ವಲ್ಪ ಎತ್ತರಕ್ಕೆ ಹೇಂಟೆ ಸ್ವಲ್ಪದರಲ್ಲೇ ಹಾರಿ ತಪ್ಪಿಸಿಕೊಂಡು ಬಿಟ್ಟಿತ್ತು. ಆದರೆ ನೆಲಕ್ಕೆ ಬಡಿದ ಕೋಲಿನ ತುಂಡು ನೇರ ಬಿದ್ದಿದ್ದು ಮರಿ ಕೋಳಿಯ ಮೇಲೆ. ಹೊಡೆತ ಅಷ್ಟೇನೂ ಬಲವಾಗಿರಲಿಲ್ಲವಿರಬೇಕು. ಆದರೂ ಆ ಕೋಳಿ ಮರಿ “ಚೀಂವ್ ಚೀಂವ್” ಎಂದು ಕಿರುಚಾಡಿ ಕುಂಟುತ್ತಾ ಪ್ರಜ್ಞೆ ತಪ್ಪಿ ಬಿತ್ತು. ಆ ಮರಿಯನ್ನು ನೋಡಿ ವಿಚಿತ್ರ ಶಬ್ದ ಹೊರಡಿಸಿ, ಅದನ್ನು ಅಲ್ಲೇ ಬಿಟ್ಟು ಉಳಿದ ಮರಿಗಳನ್ನು ಕಟ್ಟಿಕೊಂಡು ಹೆಂಟೆ ಹೊರಟೇ ಹೋಯಿತು. “ಛೇ , ಕೋಪದಲ್ಲಿ ಅನ್ಯಾಯವಾಗಿ ಈ ಮರಿಯನ್ನು ಕೊಂದೆನಾ?” ಅಂತ ಎದೆ ಡವಗುಟ್ಟತೊಡಗಿತ್ತು. ಕುಳಿತವನು ಎದ್ದು ಮೆಲ್ಲಗೆ ಅದರ ಹತ್ತಿರ ಹೋದೆ. ಬಿಳಿ ಬಣ್ಣದ ತುಪ್ಪಳ ಹೊಂದಿದ್ದ ಚಂದದ ಕೋಳಿ ಮರಿ ಕಣ್ಣು ಪಿಳಿ ಪಿಳಿ ಮಾಡುತ್ತಾ ಕಾಲು ಸೆಟೆದು ಆಕಾಶ ನೋಡುತ್ತಿತ್ತು. ಮೆಲ್ಲಗೆ ಎತ್ತಿಕೊಂಡು ಉಮ್ಮನ ಬಳಿಗೆ ಬಂದೆ.

“ಯಾ ರಬ್ಬೇ.. ಏನು ಮಾಡಿದೆ, ನಿಮಗೆಲ್ಲಾ ನಾಲ್ಕು ಬಿಡದಿದ್ರೆ ಬುದ್ಧಿಯೇ ಬರುವುದಿಲ್ಲ. ಇರು, ಅಬ್ಬ ಬರ್ಲಿ ನಿನಗೆ ಇವತ್ತು ಇದೆ” ಎಂದು ಹೆದರಿಸಿ ಕೋಳಿ ಮರಿಯನ್ನು ಕೈಯಿಂದ ಕಿತ್ತು ಕೊಂಡಿದ್ದರು.

“ಪಾಪ ಮಗು ಅಲ್ವಾ, ಏನೋ ಅಲ್ಲಿ ಹುಶಾರಿಲ್ಲದೆ ಬಿದ್ದ ಮರಿಯನ್ನು ಎತ್ತಿ ತಂದಿರಬೇಕು” ಎಂದು ಅಂಗಜನ ತಾಯಿ ಉಕ್ರಜ್ಜಿ ನನ್ನ ಪರವಾಗಿ ವಾದಿಸಿದ್ದರು. ಅಲ್ಲೇ ಬಿದ್ದಿದ್ದ ಬಕೆಟ್ ತೆಗೆದು ಅಮ್ಮನ ಕೈಯಿಂದ ಮರಿಯನ್ನು ಪಡೆದು ಬಕೆಟನ್ನು ಮುಚ್ಚಿ ಗೆರಟೆಯಲ್ಲಿ ನಾಲ್ಕು ಬಾರಿ ಸದ್ದು ಬರುವಂತೆ ಸುತ್ತಿದರು. ಮುಚ್ಚಿದ ಬಕೆಟ್ ತೆಗೆಯುವುದರೊಳಗೆ ಮರಿ ಮೆಲ್ಲಗೆ ಚೇತರಿಸಿಕೊಂಡು ಬಿಟ್ಟಿತ್ತು. ಮರಿ ಕೋಳಿ ಮೆಲ್ಲಗೆ ಕಣ್ಣು ಬಿಟ್ಟು ಸುತ್ತಲೂ ನೋಡುತ್ತಾ “ಚೀಂವ್, ಚೀಂವ್” ಎನ್ನುತ್ತಾ ಎರಡು ಬಾರಿ ಕೂಗಿತು. ಉಕ್ರಜ್ಜಿ ಸ್ವಲ್ಪ ನೀರು ಕುಡಿಸಿದರು. ಅಷ್ಟರಲ್ಲೇ ಕೋಳಿ ಮರಿ ಇನ್ನಷ್ಟು ಚೇತನ ಸಿಕ್ಕಂತೆ ವರ್ತಿಸತೊಡಗಿತು. ನಮಗೆ ಆ ದಿನಗಳಲ್ಲಿ ಇದೊಂದು ಪವಾಡವೇ ಸರಿ. ಸ್ವಲ್ಪ ಹೊತ್ತು ಅಲ್ಲೇ ಒಲೆಯ ಬದಿಯ ಬಿಸಿಯಲ್ಲಿ ಮಲಗಿಸಿದ ಬಳಿಕ ಸಂಪೂರ್ಣ ಚೇತರಿಸಿಕೊಂಡಿತ್ತು ಆ ಮುದ್ದು ಕೋಳಿಮರಿ.

ಆ ಘಟನೆ ನಡೆದು ಸುಮಾರು ದಿನಗಳೇ ಕಳೆದಿದ್ದವು. “ಅರೇ ಬೆಳಗ್ಗೆ ೧೧ ಮರಿಗಳಿದ್ದವು, ಈಗ ಒಂಬತ್ತೇ ಇದೆ” ಎಂದು ಉಮ್ಮ ಹೌಹಾರಿದ್ದರು. “ಯಾವುದೋ ದರಿದ್ರ ಕಾಗೆಯದ್ದೋ, ಹದ್ದಿನದ್ದೋ ಕೆಲಸ” ಎಂದು ಹಳಿಯುತ್ತಾ ಅಂಗಳ ಗುಡಿಸುವುದನ್ನು ಮುಂದುವರಿಸಿದ್ದರು. ಆ ದಿನದಿಂದ ನನಗೆ ನನ್ನ ಕಣ್ಣೆದುರಲ್ಲಿ ಕಾಣುವ ಕೋಳಿಗಳ ಮೇಲೆ ವಿಶೇಷ ಪ್ರೀತಿ. ಅವುಗಳನ್ನು ರಕ್ಷಿಸುವುದಕ್ಕಾಗಿ ಸದಾ ಒಂದು ಕಣ್ಣಿರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಹೇಳಿ ಕೊಟ್ಟಂತೆ ಹತ್ತಿರದ ಮರದಲ್ಲಿ ಕೋಳಿ ಮರಿಗಳಿಗಾಗಿ ಹೊಂಚು ಹಾಕುವ ಕಾಗೆಗಳಿಗೆ ಮತ್ತು ಗಿಡುಗನಿಗೆ ಕನ್ನಡಿಯ ಬೆಳಕು ತೋರಿಸಿ ಓಡಿಸುತ್ತಿದ್ದುದು ನನ್ನ ಕೆಲಸ. ಕನ್ನಡಿ ಹಿಡಿದ ಕೂಡಲೇ ಓಡಿ ಹೋಗುವ ಕಾಗೆ ಮತ್ತು ಗಿಡುಗಗಳ ವಿಚಿತ್ರ ಮನಸ್ಥಿತಿಯನ್ನು ಅರ್ಥೈಸುವುದು ಅತಿ ಕಠಿಣ.

ಆ ರಾತ್ರಿ ತಂಗಿಯಂದಿರಿಗೆ ಕಥೆ ಹೇಳುವುದೇನು. ಅಮೆಝಾನ್ ಕಾಡಿನಲ್ಲಿ ಸ್ವತಃ ನುಗ್ಗಿ ಬಂದವನಂತೆ ಕಲ್ಪಿಸಿಕೊಂಡು ಮನುಷ್ಯನನ್ನೇ ತಿಂದು ಹಾಕುವ ಕಲ್ಪಿತ ಕಥೆಗಳನ್ನು ಹೇಳಿದೆ. ಆ ರಾತ್ರಿ ತುಂಬಾ ಅವೇ ಕನಸುಗಳು ಆಗಾಗ ಎಚ್ಚರವಾಗುವಷ್ಟು ಹೆದರಿಸುತ್ತಲೇ ಇದ್ದವು. ಮರುದಿನ ಬೆಳಗ್ಗೆ ಬೇಗ ಬಂದರೆ ಗಿಡ ಎಲೆ ಇದ್ದ ಹಾಗೇ ಬಿಡಿಸಿ ನಿಂತು ನನ್ನನ್ನೇ ಕಾಯುತ್ತಿತ್ತು.

ಯಾಕೆಂದು ನೀವು ಕೇಳುವುದಾದರೆ ನನ್ನ ಇನ್ನೊಂದು ಅನುಭವವನ್ನು ನಿಮಗೆ ಹೇಳಲೇಬೇಕು. ಅದು ಇದಕ್ಕೆ ವ್ಯತಿರಿಕ್ತ. ಒಮ್ಮೆ ಬೆಂಗಳೂರಿನಲ್ಲಿ ಮಾತನಾಡುತ್ತಿರಬೇಕಾದರೆ ಒಮ್ಮಿಂದೊಮ್ಮಲೇ ನಮ್ಮ ಆಫೀಸಿನ ಹೊರಗಿನ ಗ್ಲಾಸಿನ ಮೇಲೆ “ಧಡ್” ಎಂದು ಜೋರಾಗಿ ಬಡಿದ ಸದ್ದು ಕೇಳಿ ಬಂತು. ಇನ್ನೇನು ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರಬೇಕೆಂದು ಅಂದಾಜು ಮಾಡಿ ನಾನು ನಿಂತಲ್ಲಿಗೆ ಬಗ್ಗಿದೆ. ಅರೆಕ್ಷಣದಲ್ಲಿ ಅದೇ ಅಂತರದಿಂದ ಪಾರಿವಾಳವೊಂದು ಮೇಲಕ್ಕೆ ಹಾರುವುದು ಕಂಡಿತು. ನನ್ನ ಅವಸ್ಥೆ ನೋಡಿ ಸಹೋದ್ಯೋಗಿಗಳು ಬಿದ್ದು ಬಿದ್ದು ನಗುವುದೊಂದೇ ಬಾಕಿ. “ಏನು ಮಾರಾಯಾ.. ಹಕ್ಕಿ ಬಂದು ಗಾಜಿಗೆ ಬಡಿದರೆ, ಬಾಂಬ್ ಬಿದ್ದಷ್ಟು ಹೆದರುತ್ತೀಯಲ್ಲ?” ಅಂತ ನನ್ನನ್ನು ತಮಾಷೆ ಮಾಡಿ ನಕ್ಕರು. ನನ್ನ ಪರಿಸ್ಥಿತಿಯ ಅರಿವಾಗಿ “ಸುಮ್ಮನೆ ಪಾರಿವಾಳ ಯಾಕೆ ಬಡಿಯಿತು” ಎಂಬುವುದರ ಬಗ್ಗೆ ವಿವರಣೆ ಕೊಡಬೇಕೆನಿಸಿತು. ಅದನ್ನವರು ಕೇಳುವ ಸ್ಥಿತಿಯಲ್ಲಿಲ್ಲದಿದ್ದುದರಿಂದ ಸುಮ್ಮನೆ ನನ್ನ ಪಾಡಿಗೆ ಚಿಂತಿಸುತ್ತಾ ಗಾಜಿಗೆ ಬಡಿದ ಹಕ್ಕಿಗಳ ಬಗ್ಗೆ ಚಿಂತಿಸುತ್ತಾ ಒಳಗೆ ಬಂದೆ. ತೇಜಸ್ವಿಯವರ ಪರಿಸರ ಕಥೆಗಳಲ್ಲಿ ತದ್ವತ್ತಾದ ಒಂದು ಅನುಭವದ ಪರಾಮರ್ಶೆ ಇದೆ. ಬಹುಶಃ ಹಕ್ಕಿಗಳಿಗೆ ತಮ್ಮದೇ ಪ್ರತಿಬಿಂಬದ ಗುರುತು ಇಲ್ಲದಿರುವುದರಿಂದ ಗಾಜಿನ ಪ್ರತಿಬಿಂಬ ಯಾವುದೋ ವೈರಿ ಇರಬೇಕೆಂದು ಅಂದಾಜು ಮಾಡಿ ಢಿಕ್ಕಿ ಹೊಡೆಯುತ್ತದಂತೆ. ಆದರೆ ಡಿಕ್ಕಿಯಾದ ಹಕ್ಕಿಗಳ ಅವಸ್ಥೆ ಒಮ್ಮೆ ಚಿಂತಿಸಿ, ಅಷ್ಟು ವೇಗವಾಗಿ ಬಂದು ಬಡಿಯುವಾಗಿನ ಅವುಗಳ ನೋವು ಹೇಗಿರಬಹುದು. ಅವಕ್ಕೆ ಅವುಗಳ ನೋವು ಅರ್ಥವಾಗುವುದಾಗಿದ್ದರೆ ಖಂಡಿತಾ ನಾವು ಅತಿ ಬೃಹತ್ ಗಾಜಿನ ಕಟ್ಟಡಗಳಿಗೆ ಪ್ರೋತ್ಸಾಹಿಸುತ್ತಿರಲಿಲ್ಲ.

ಏನೇ ಇರಲಿ, ಆದರೆ ಇಲ್ಲಿ ಕಾಗೆ ಓಡಿಸುವ ತಂತ್ರ ಇದಕ್ಕೂ ತದ್ವಿರುದ್ಧ. ಅದೇ ಗಾಜಿನಿಂದ ಪ್ರತಿಫಲಿಸಿದಾಗ ಅವಕ್ಕೆ ಬಂದು ಡಿಕ್ಕಿ ಹೊಡೆಯುವ ಬದಲು ನೋಡಿದ ಕೂಡಲೇ ಪೇರಿ ಕೀಳುವ ಆ ಮನಸ್ಥಿತಿ ಎಂತದ್ದು. ಬಹುಶಃ ಆ ಗಾಜಿನಿಂದ ಬರುವ ಬೆಳಕು ನೋಡಿ ಹೆದರುವವೋ ಹೇಗೆ? ಪ್ರಕೃತಿಯಲ್ಲಿ ಪ್ರಾಣಿಗಳ ಕೆಲವು ಪ್ರತಿಕ್ರಿಯೆಗಳಿಗೆ ಕಾರಣಗಳಂತೂ ನಿಗೂಢ.

ಒಮ್ಮೆ ಹೊರ ಜಗಲಿಯಲ್ಲಿ ಕುಳಿತು ಸುಮ್ಮನೆ ರಸ್ತೆ ನೋಡುತ್ತಿರಬೇಕಾದರೆ ಅಚಾನಕ್ಕಾಗಿ ಕೋಳಿ ವಿಚಿತ್ರವಾಗಿ ಶಬ್ದ ಹೊರಡಿಸಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಅನತಿ ದೂರದಲ್ಲೇ ಹದ್ದೊಂದು ನೆಲದ ಮಟ್ಟಕ್ಕೆ ಹಾರಿದ್ದು ಕಂಡಿತು. ಮರಿಗಳು ಅವಕ್ಕಾಗಿ ಹೇಂಟೆಯ ಹೊಟ್ಟೆಯೊಳಗಡೆ ಮುದುಡಿಕೊಂಡವು. ಎರಡು ಮರಿಗಳು ತುಂಬಾ ದೂರದಲ್ಲಿದ್ದರಿಂದ ಅವುಗಳಿಗೆ ಕೂಡಿಕೊಳ್ಳಲಾಗಲಿಲ್ಲ. ನಾನು ಇನ್ನೇನು ಗಿಡುಗಕ್ಕೆ ಆಹಾರವಾಗುವುದನ್ನು ತಪ್ಪಿಸಲು ಹಿಂದುಳಿದಿದ್ದ ಎರಡು ಮರಿಗಳ ಹತ್ತಿರ ಓಡಿದೆ. ನನ್ನನ್ನು ಕಂಡ ಕೂಡಲೇ ಕೆಳಕ್ಕಿಳಿದಿದ್ದ ಹದ್ದು ಮತ್ತೆ ಮೇಲೆ ಹಾರಿತ್ತು. ಒಂದು ಮರಿಯನ್ನು ಹೇಗೋ ಎತ್ತಿಕೊಂಡು ಹೇಂಟೆಯ ಗುಂಪಿನ ಜೊತೆ ಸೇರಿಸಿದೆ. ಎರಡನೇ ಮರಿಯ ಬಳಿಗೆ ಬರುವಷ್ಟರಲ್ಲಿ ಎಲ್ಲೋ ಅಡಗಿ ಕುಳಿತಿದ್ದ ಅದೇ ಹದ್ದು ಹಾರಿ ಬಂತು ನನ್ನ ಕಣ್ಣೆದುರಲ್ಲೇ ಬಲಿಷ್ಟ ಕಾಲುಗಳಿಂದ ಮರಿಯನ್ನು ಹಿಡಿದುಕೊಂಡಿತ್ತು. ಕೋಳಿ ಮರಿಯ ಆರ್ತನಾದ ಮುಗಿಲು ಮುಟ್ಟಿತ್ತು. ನಾನು ಹದ್ದಿನ ಹತ್ತಿರ ಬಂದು ಒಮ್ಮಲೆ ಕೈ ಬೀಸಿದೆ. ಹೆದರಿಕೊಂಡ ಗಿಡುಗ ಮರಿ ಎತ್ತಿ ಕೊಳ್ಳುವಲ್ಲಿ ಸ್ವಲ್ಪದರಲ್ಲೇ ಎಡವಿತು. ಹಿಡಿತ ತಪ್ಪಿ ಮರಿ ಬಿದ್ದು ಹೋಯಿತು. ಹದ್ದು ಹಾರಿ ಮೋಡಗಳ ಮಧ್ಯೆಲೀನವಾಯಿತು. ನಾನು ತಕ್ಷಣವೇ ಮರಿಯನ್ನೆತ್ತಿಕೊಂಡೆ. ಹದ್ದಿನ ಬಲಿಷ್ಟ ಕಾಲಿನ ಉಗುರುಗಳು ಕೋಳಿಮರಿಯ ಪುಟ್ಟ ಹೊಟ್ಟೆಯನ್ನು ಸೀಳಿಹಾಕಿದ್ದವು. ಅದರ ಕರುಳು ಹೊರಬಂದು ನೇತಾಡುತ್ತಿತ್ತು. ಮರಿಯನ್ನೆತ್ತಿಕೊಂಡು ಬಂದು ನೆಲದ ಮೇಲೆ ಮಲಗಿಸಿದೆ. ಬದುಕುಳಿಯುವುದು ಕಷ್ಟವೆಂಬುವಂತಿತ್ತು. ನನ್ನ ಕೈಯಿಂದ ಅದನ್ನು ರಕ್ಷಿಸಲಾಗಲಿಲ್ಲವೆಂಬ ಮರುಕದೊಂದಿಗೆ ಮರಿಯನ್ನೆತ್ತಿಕೊಂಡು ಮನೆಯೊಳಗಡೆ ಬಂದೆ. ನೀರು ಕುಡಿಸಿದೆ, ಸಂಜೆಯವರೆಗೂ ಒಲೆಯ ಬಿಸಿಯಲ್ಲಿ ತೂಕಡಿಸಿದ್ದ ಕೋಳಿಮರಿ ಆಮೇಲೆ ಸತ್ತು ಹೋಗಿತ್ತು.

ಕೋಳಿ ಮನುಷ್ಯ ಸ್ನೇಹಿ ಮತ್ತು ನಮ್ಮ ಹತ್ತಿರದ ಸಾಕು ಪಕ್ಷಿ. ಹಾರುವುದನ್ನೇ ಮರೆತುಬಿಟ್ಟ ಈ ಪಕ್ಷಿ ಮನುಷ್ಯನ ಸಂಗಾತಿಯಾಗಿ ಬದಲಾದ ಬಳಿಕ ನಡೆಯುವುದನ್ನೇ ಅಭ್ಯಾಸ ಮಾಡಿಕೊಂಡಿತು. ಮಾಂಸ, ಮೊಟ್ಟೆ ಇವುಗಳ ಉಪಯೋಗಕ್ಕಾಗಿಯೇ ಮನುಷ್ಯ ಇವುಗಳನ್ನು ತನ್ನ ಸಹಯೋಗಿಯಾಗಿ ಮಾಡಿಕೊಂಡಿದ್ದ. ಕಾಲ ಕ್ರಮೇಣ ಮಾಂಸಕ್ಕಾಗಿ ಬಾಯ್ಲರ್ ಕೋಳಿಯ ಸಂಸ್ಕೃತಿ ಪ್ರಾರಂಭವಾಗಿ ನಾಟಿ ಕೋಳಿಗಳಿಗೆ ಬರ ಬಂತು. ಈಗ ನಾಟಿ ಕೋಳಿಗಳು ಎಲ್ಲಿದೆ, ನಮ್ಮ ಮಕ್ಕಳ ಕಾಲಕ್ಕೆ ಅವುಗಳನ್ನೂ ಮೃಗಾಲಯದಲ್ಲಿ ನೋಡಬೇಕಾದಿತೋ ಏನೋ.

ಕೋಳಿಗಳು ಸಾಮಾನ್ಯವಾಗಿ ತುಂಬಾ ಸಾಧು ಜೀವಿಗಳು. ಆದರೆ ನನಗೊಂದು ವ್ಯತಿರಿಕ್ತ ಅನುಭವ ಮಾತ್ರ “ಎಲ್ಲ ಕೋಳಿಗಳೂ ಸಾಧುಗಳಲ್ಲ” ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿತ್ತು. ಆ ದಿನ ಮನೆಯ ಕೋಳಿಗಳಿಗೆ ಕಾಳು ಹಾಕುತ್ತಿದ್ದೆವು. ಕೂಟದಲ್ಲಿ ಒಂದು ದೊಡ್ಡ ಕೋಳಿ ಉಳಿದವುಗಳ ಜೊತೆ ರೌಡಿಸಂ ಮಾಡುತ್ತಾ ನಾವು ಹಾಕಿದ ಎಲ್ಲಾ ಗೋಧಿ ಕಾಳುಗಳನ್ನು ಸ್ವಾಹ ಮಾಡುತ್ತಿತ್ತು. “ನೀನು ಧೈರ್ಯವಿದ್ದರೆ ಆ ಹೇಂಟೆಯನ್ನು ಮುಟ್ಟಿ ನೋಡು” ಎಂದು ಅಕ್ಕ ನನಗೆ ಸವಾಲು ಹಾಕಿದ್ದಳು. “ಕೋಳಿ ಅಲ್ವಾ ಎಷ್ಟು ಜೋರಿರಬಹುದು, ಅದೂ ಕೂಡಾ ಹೇಂಟೆ” ಎಂದು ಮೃದುವಾಗಿಯೇ ಆ ಸವಾಲನ್ನು ಸ್ವೀಕರಿಸಿದ್ದೆ. ಅಲ್ಲೇ ಗೋಧಿ ತಿನ್ನುತ್ತಿದ್ದ ನೆರೆಮನೆಯ ಆ ದೈತ್ಯ ಹೇಂಟೆಯನ್ನು ಓಡಿಸಲು ಕೈ ಬೀಸಿದೆ. ಅದೆಲ್ಲಿ ಅಡಗಿತ್ತೋ ಅದರ ಗರ್ವ, ಹಾರಿ ನನ್ನ ಕೈಗೊಮ್ಮೆ ಜೋರಾಗಿ ಕುಟುಕಿತು. ಆಕಸ್ಮಿಕವೇನೋ ಎಂದು ಭಾವಿಸಿ ಇನ್ನಷ್ಟು ಹತ್ತಿರ ಹೋಗಿ ಇನ್ನೊಮ್ಮೆ ಜೋರು ಮಾಡಿದೆ. ಈ ಬಾರಿ ಜೋರಾಗಿ ಕುಟುಕಿದ್ದೇ ನನ್ನ ಕೈ ಚರ್ಮ ಸುಲಿದು ಕೈಯಲ್ಲಿ ಸಣ್ಣಗೆ ರಕ್ತ ಬರುತ್ತಿತ್ತು. “ಅಬ್ಬಾ ಈ ಹೇಂಟೆಯ ಅಹಂಕಾರವೇ” ಎಂದು ಕೈನೋವಿನಿಂದ ಚೀರುತ್ತಿರಬೇಕಾದರೆ ಅಕ್ಕ ಹಿಂದಿನಿಂದ ಮುಸಿ ಮುಸಿ ನಗುತ್ತಿದ್ದಳು. “ಈ ಹಿಂದೆ ನನಗೂ ಕುಟುಕಿದೆ, ಅದಕ್ಕಾಗಿಯೇ ಅದರ ಅಹಂಕಾರ ನಿನಗೂ ಗೊತ್ತಾಗಲಿ ಅಂದಿದ್ದು” ಎಂದಳು. ಕೋಳಿ ಅಂಕದಲ್ಲಿ ಕತ್ತಿ ಕಟ್ಟಿ ಪರಸ್ಪರ ಹೋರಾಡುವ ಕೋಳಿಗಳನ್ನು ಬಿಟ್ಟರೆ ನನ್ನ ಜೀವಮಾನದಲ್ಲಿ ಮೊದಲನೇ ಬಾರಿಗೆ ಅಷ್ಟು ಕ್ರೂರ ಕೋಳಿಯನ್ನು ನಾನು ನೋಡಿದ್ದು.

ಸಾಮಾನ್ಯವಾಗಿ ಕೋಳಿಗಳು ಬಹಳ ಸೂಕ್ಷ್ಮ. ತಮ್ಮ ಸುತ್ತ ಮುತ್ತಲಿನ ಪರಿಸರಕ್ಕೆ ಯಾವ ಅಪಯಕಾರಿ ಪ್ರಾಣಿ ಬಂದರೂ ವಿಚಿತ್ರವಾಗಿ ಕೂಗಿ ಮನೆಯವರನ್ನು ಎಚ್ಚರಿಸುವುದುಂಟು. ಸಣ್ಣ ಹಾವುಗಳು, ಎರೆಹುಳು, ಇತ್ಯಾದಿ ಹುಳ ಹುಪ್ಪಟೆಗಳನ್ನು ತಿಂದು ಪರಿಸರವನ್ನು ಸ್ವಚ್ಪವಾಗಿಡುವುದರಲ್ಲಿ ಇವುಗಳು ಪಾತ್ರ ಬಹುಮುಖ್ಯ.

ಒಮ್ಮೆ ಕರೆಂಟಿಲ್ಲದ ಮಧ್ಯರಾತ್ರಿ ನಮ್ಮ ಮನೆಯ ಹುಂಜವೊಂದು ಜೋರಾಗಿ ಅರಚಿಕೊಳ್ಳತೊಡಗಿತು. ಮನೆಯವರಿಗೆಲ್ಲಾ ದಿಗಿಲು. ಅಬ್ಬ ಎಚ್ಚರವಾಗಿ ಧೈರ್ಯದಿಂದ ಶಬ್ಧ ಬರುತ್ತಿದ್ದ ಬಚ್ಚಲು ಮನೆಯ ಕಡೆಗೆ ಹೋಗಬೇಕಾದರೆ ಹುಂಜದ ಪ್ರಾಣೋತ್ಕರಣ ಕೇಳುತ್ತಿತ್ತು. ಯಾವುದೋ ದೊಡ್ಡ ಪ್ರಾಣಿಯೇ ಹುಂಜವನ್ನು ಹಿಡಿದಿದೆಯೆಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ಬಚ್ಚಲು ಮನೆಯ ಒಳ ಹೋಗಲು ಅವರಿಗೂ ಧೈರ್ಯ ಸಾಲದು. ಬೆಳಕು ಹರಿವವರೆಗೂ ಕಾದರು. ಬೆಳಗ್ಗೆ ಬಚ್ಚಲು ಮನೆಗೆ ಹೋಗಬೇಕಾದರೆ ಆದಾಗಲೇ ಹುಂಜವನ್ನು ನುಂಗಿ ಅಡ್ಡಲಾಗಿ ದೊಡ್ಡ ಕನ್ನಡಿ ಹಾವು ಮಲಗಿತ್ತು. ಸಮಾನ್ಯವಾಗಿ ಹೆಬ್ಬಾವುಗಳು ಅಷ್ಟು ದೊಡ್ಡದಾದ ಕೋಳಿಗಳನ್ನು ನುಂಗುತ್ತವೆಯಾದರೂ ಕನ್ನಡಿ ಹಾವೇ ನುಂಗಬೇಕಾದರೆ ಅದರ ಗಾತ್ರವನ್ನೊಮ್ಮೆ ಊಹಿಸಿ ನೋಡಿ. ಐದನೇ ತರಗತಿಯಲ್ಲಿದ್ದ ನನ್ನ ಉದ್ದವನ್ನೂ ಮೀರಿಸುವಂತಿತ್ತು ಆ ಹಾವಿನ ಅಳತೆ. ನಾವು ಬೆರಗಾಗಿ ನೋಡುತ್ತಿರಬೇಕಾದರೆ ಅದು ಪ್ರೌಢ ಗಾಂಭೀರ್ಯದಿಂದ ತಲೆ ಕೊಂಕಿಸುವುದೇನು… ಅಬ್ಬಾ ಅಕ್ಷರಶಃ ನಾನು ಬೆವರಿ ಅಮ್ಮನ ಸೆರಗಿನಡಿ ಬಚ್ಚಿ ಕುಳಿತಿದ್ದೆ.

ಕೋಳಿ ಸಾಕಾಣಿಕೆ ಸುಲಭವಲ್ಲ. ಪ್ರತೀ ಸಂಜೆ ಅದನ್ನು ಗೂಡಿಗೆ ಕರೆದು ಕೂಡಿಸುವುದು ದೊಡ್ಡ ಸವಾಲು. “ಬೇಗ ಬೇಗ ಕೋಳಿಗಳನ್ನು ಮರದಿಂದ ಇಳಿಸು, ಇಲ್ಲದಿದ್ದರೆ ರಾತ್ರಿ ಮರದ ಮೇಲೆ ಟಿಕಾಣಿ ಹೂಡುತ್ತದೆ. ಮತ್ತೆ ಅದು ನರಿ ಹೊಟ್ಟೆಗೆ” ಎಂದು ತುಂಬಾ ಸಲ ಉಮ್ಮ ಅನ್ನುವುದಿದೆ. ಒಂದು ದಿನ ನಮ್ಮನೆಯ ಕೋಳಿಯೊಂದು ಎಷ್ಟು ಕರೆದರೂ ಬಾರದೆ ಮನೆಯ ಮಾಡಿಗೆ ಬಾಗಿದ್ದ ಸಪೋಟ ಮರದಲ್ಲೇ ಉಳಿದಿತ್ತು. ಸುಮಾರು ವಾರ ಅಲ್ಲೇ ತಂಗುವುದು ಅಭ್ಯಾಸ ಮಾಡಿಕೊಂಡ ಬಳಿಕ ಅಮ್ಮ ಅದರ ಪುಂಡಾಟಿಕೆಗೆ ಮಣಿದು ಅದನ್ನು ಹಾಗೇ ಬಿಟ್ಟಿದ್ದರು. ಒಂದು ದಿನ ಬೆಳಗ್ಗಾದರೆ ಅಡ್ರೆಸ್ಸೂ ಸಿಗದಂತೆ ಅದು ನಾಪತ್ತೆಯಾಗಿ ಬಿಟ್ಟಿತ್ತು.

ಉಮ್ಮ ಬೆಳ್ಳಂ ಬೆಳಗ್ಗೆಯೇ ಎದ್ದು “ಈ ಕೋಳಿಗಳಿಗೆ ಎಷ್ಟು ಹೇಳಿದ್ರೂ ಅರ್ಥವಾಗುವುದಿಲ್ಲ. ನರಿಗಳು ಬಂದ್ರೆ ಸುಮ್ನೆ ಬಿಡ್ತಾವಾ. ಹೊಯ್ಗೆಗೆ ಮೂತ್ರ ಮಾಡಿ ಬಾಲದಿಂದ ರಾಚಿದರೆ ಮತ್ತೆ ಅವಕ್ಕೆ ದೃಷ್ಟಿಯೇ ಹೋಗಿಬಿಡುತ್ತೆ. ಮತ್ತೆ ಮರದಿಂದ ಕೆಳಗೆ ಬಿದ್ದರೆ ಅವುಗಳ ಹೊಟ್ಟೆ ತುಂಬಿದಂತೆ. ಎಷ್ಟು ಕಷ್ಟಪಟ್ಟು ನಾವು ಅವುಗಳನ್ನು ಸಾಕಬೇಕು” ಎಂದು ಬೇಸರದಿಂದಲೇ ಹೇಳಿಕೊಂಡಿದ್ದರು. ಅಯ್ಯೋ ಅಷ್ಟು ದೊಡ್ಡ ಹುಂಜ ನರಿಯ ಬಾಯಿಗೆ ಹೋಯಿತೆಂದು ಮನೆಯಲ್ಲಿ ಸೂತಕ. ನಾನು ಬೆಳಕಾಗುವ ಮೊದಲೇ ಮದರಸಕ್ಕೆ ಹೋಗಬೇಕಾದ್ದರಿಂದ ನಾನು ಕೋಳಿ ಹೋದ ಬೇಸರದಲ್ಲೇ ನಡೆದು ಬರುತ್ತಿದ್ದೆ.


ಮಳೆ ಸಣ್ಣಗೆ ಬೀಳುತ್ತಿತ್ತು. ಮಬ್ಬುಗತ್ತಲೆ, ಮರಗಳು ಗವ್ವನೆ ನೆರಳು ತುಂಬಿ ದಾರಿಯನ್ನು ಇನ್ನಷ್ಟು ಕತ್ತಲಾಗಿಸಿದ್ದವು. ಅಷ್ಟರಲ್ಲೇ ಇಂಜಿರಿನ ಪೊದೆಗಳ ಮಧ್ಯೆ ಏನೋ ಚಲಿಸಿದಂತಾಯಿತು. ಹೆದರಿಕೆಯಿಂದಲೇ ಮೆಲ್ಲಗೆ ಟಾರ್ಚು ಹಾಯಿಸಿದೆ. ನಿಗಿ ನಿಗಿ ಹೊಳೆಯುವ ನೀಳಿ ಕಣ್ಣಿನ ನಾಯಿಯಾಕೃತಿಯೊಂದು ನನ್ನ ಲೈಟು ಬೆಳಕು ನೋಡಿ ಹೊರ ಬಂತು. ದಪ್ಪನೆಯ ಬಾಲ ಅಲ್ಲಾಡಿಸುತ್ತ ತನ್ನ ಚೂಪು ಮುಸುಡಿಯ ತುಂಬಾ ರಕ್ತ ಮೆತ್ತಿಕೊಂಡಿದ್ದ ಅದು ನನ್ನನ್ನು ಕಂಡು ದೂರ ಓಡಿಹೋಯಿತು. ನಾನು ಅದೇ ಮೊದಲ ಬಾರಿಗೆ ನರಿಯೊಂದನ್ನು ನೇರವಾಗಿ ನೋಡಿದ್ದೆ. ಪೊದೆಗಳ ಮಧ್ಯೆ ಟಾರ್ಚು ಹಾಯಿಸಿದೆ. ಆದಗಾಲೇ ಕೋಳಿಯ ಕಳೇಬರವೊಂದು ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ ರಕ್ತದೋಕುಳಿಯಲ್ಲಿ ಮಿಂದಿತ್ತು. ಹತ್ತಿರದಿಂದ ನೋಡಿದೆ, ಪುಕ್ಕ ನೋಡುತ್ತಿದ್ದಂತೆ ನಮ್ಮ ಕೋಳಿ ಎಂಬುವುದರಲ್ಲಿ ಯಾವ ಸಂಶಯವೂ ಉಳಿದಿರಲಿಲ್ಲ. ಬೇಸರದಿಂದಲೇ ಅಳುತ್ತಾ “ನರಿ ಹೇಗಪ್ಪಾ ಕೋಳಿಗಳ ಕಣ್ಣು ಕಾಣದಂತೆ ಮಾಡುವುದು” ಎಂದು ಉತ್ತರ ಸಿಗದೆ ಬೇಸರದಿಂದಲೇ ಮನೆಯತ್ತ ಹೊರಟು ಬಂದೆ.