ಪುರಾಣಕ್ಕಿಂತ ಐತಿಹಾಸಿಕವಾಗಿ ಹೆಚ್ಚಿನ ಮಹತ್ವ ಪಡೆದ ಈ ಕುಬಟೂರು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ಸಮೀಪವಿದೆ. ಕೈಟಭೇಶ್ವರ ದೇವಾಲಯವಿರುವ ಕುಬಟೂರಿಗೆ ಕುಪ್ಪತ್ತೂರು, ಕೋಟಿಪುರ ಮೊದಲಾದ ಹೆಸರುಗಳೂ ಇವೆ. ಕ್ರಿ.ಶ. ಮೂರನೆಯ ಶತಮಾನದ ಬನವಾಸಿಯ ಕದಂಬರಿಂದ ಮೊದಲುಗೊಂಡು ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಹಾಗೂ ಕೆಳದಿಯ ನಾಯಕರವರೆಗೆ ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಹೊಯ್ಸಳ ವಿನಯಾದಿತ್ಯನ ಆಡಳಿತವಿದ್ದ ಕ್ರಿ.ಶ. ಹತ್ತನೇ ಶತಮಾನದ ಕೊನೆಯ ವೇಳೆಗೆ ಕೈಟಭೇಶ್ವರ ದೇಗುಲ ನಿರ್ಮಾಣವಾಗಿರಬಹುದು. ಕಲ್ಯಾಣ ಚಾಲುಕ್ಯರು ನಿರ್ಮಿಸಿದ ದೇವಾಲಯಗಳ ಮಾದರಿಯನ್ನೇ ಇಲ್ಲಿ ಅನುಸರಣೆಮಾಡಲಾಗಿದ್ದರೂ ಪ್ರಾರಂಭಕಾಲದ ಹೊಯ್ಸಳಶಿಲ್ಪಕಲೆಯ ಛಾಯೆಯನ್ನೂ ಕಾಣಬಹುದು.
ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹದಿನೆಂಟನೆಯ ಕಂತು

 

‘ನಿನ್ನ ಶೌರ್ಯವನ್ನು ಮೆಚ್ಚಿಕೊಂಡಿದ್ದೇವೆ. ನಿನಗೇನು ವರ ಬೇಕು ಕೇಳಿಕೋ’ ಹೀಗೆಂದು ಯಾರು ಯಾರಿಗೆ ಹೇಳಿದರು? ಯಾವನೋ ರಾಕ್ಷಸನಿಗೆ ಶಿವನೋ ಬ್ರಹ್ಮನೋ ಹೇಳಿರಬೇಕು ತಾನೇ! ಅಲ್ಲ. ಹೀಗೆ ಮೈಯುಬ್ಬಿಸಿ ಹೇಳಿದವರು ಮಧುಕೈಟಭರೆಂಬ ರಾಕ್ಷಸರು. ಅವರು ವರಕೊಡಲು ಹೊರಟಿದ್ದು ಬೇರಾರಿಗೂ ಅಲ್ಲ, ಸ್ವತಃ ವಿಷ್ಣುವಿಗೇ. ತಮ್ಮೊಂದಿಗೆ ದೀರ್ಘಕಾಲ ಸೆಣಸಿದ ವಿಷ್ಣುವಿನ ‘ಹರಸಾಹಸ’ ಮಧುಕೈಟಭರ ಪ್ರಶಂಸೆಗೆ ಪಾತ್ರವಾಗಿತ್ತು. ವಿಷ್ಣು ಅವರಿಬ್ಬರನ್ನೂ ಕೊಲ್ಲಲು ಸಾಧ್ಯವಾಗುವಂತೆ ವರ ಬೇಕೆಂದು ಕೇಳಿದ. ಪ್ರಳಯಕಾಲವಾದುದರಿಂದ ಎಲ್ಲೆಲ್ಲೂ ನೀರು ತುಂಬಿತ್ತಂತೆ. ನೀರಿಲ್ಲದ ಕಡೆ ತಮ್ಮನ್ನು ಕೊಲ್ಲಬಹುದು ಎಂದು ರಾಕ್ಷಸರು ಉಪಾಯ ಹೇಳಿಕೊಟ್ಟಮೇಲೆ ವಿಷ್ಣು ಅವರಿಬ್ಬರನ್ನೂ ತನ್ನ ತೊಡೆಯ ಮೇಲೆಯೇ ಸೆಳೆದುಕೊಂಡು ಕೊಂದನಂತೆ.

ಶಿವಪುರಾಣದಲ್ಲಿ ಬರುವ ಈ ಕಥೆ ಮಧುಕೈಟಭರು ಅಪ್ರತಿಮ ಶಿವಭಕ್ತರಾಗಿದ್ದರೆಂದೂ ಹೇಳುತ್ತದೆ. ಅವರ ಭಕ್ತಿಗೆ ಮೆಚ್ಚಿದ ಶಿವ ಮಧುಕೇಶ್ವರನಾಗಿ ಬನವಾಸಿಯಲ್ಲೂ ಕೈಟಭೇಶ್ವರನಾಗಿ ಸನಿಹದ ಕುಬಟೂರಿನಲ್ಲೂ ನೆಲೆನಿಂತನಂತೆ.

ಪುರಾಣಕ್ಕಿಂತ ಐತಿಹಾಸಿಕವಾಗಿ ಹೆಚ್ಚಿನ ಮಹತ್ವ ಪಡೆದ ಈ ಕುಬಟೂರು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ಸಮೀಪವಿದೆ. ಕೈಟಭೇಶ್ವರ ದೇವಾಲಯವಿರುವ ಕುಬಟೂರಿಗೆ ಕುಪ್ಪತ್ತೂರು, ಕೋಟಿಪುರ ಮೊದಲಾದ ಹೆಸರುಗಳೂ ಇವೆ. ಕ್ರಿ.ಶ. ಮೂರನೆಯ ಶತಮಾನದ ಬನವಾಸಿಯ ಕದಂಬರಿಂದ ಮೊದಲುಗೊಂಡು ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಹಾಗೂ ಕೆಳದಿಯ ನಾಯಕರವರೆಗೆ ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಹೊಯ್ಸಳ ವಿನಯಾದಿತ್ಯನ ಆಡಳಿತವಿದ್ದ ಕ್ರಿ.ಶ. ಹತ್ತನೇ ಶತಮಾನದ ಕೊನೆಯ ವೇಳೆಗೆ ಕೈಟಭೇಶ್ವರ ದೇಗುಲ ನಿರ್ಮಾಣವಾಗಿರಬಹುದು. ಕಲ್ಯಾಣ ಚಾಲುಕ್ಯರು ನಿರ್ಮಿಸಿದ ದೇವಾಲಯಗಳ ಮಾದರಿಯನ್ನೇ ಇಲ್ಲಿ ಅನುಸರಣೆಮಾಡಲಾಗಿದ್ದರೂ ಪ್ರಾರಂಭಕಾಲದ ಹೊಯ್ಸಳಶಿಲ್ಪಕಲೆಯ ಛಾಯೆಯನ್ನೂ ಕಾಣಬಹುದು.

ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಕೈಟಭೇಶ್ವರ ಎಂದು ಕರೆದಿದೆ. ಆದರೆ, ಶಾಸನಗಳಲ್ಲಿ ಕೋಟೀಶ್ವರ ಎಂದು ಹೆಸರಿಸಿದ್ದು ಊರಿನ ಹೆಸರೂ ಕೋಟಿಪುರ ಎಂದಿತ್ತು. ಗರ್ಭಗುಡಿಯ ಮೇಲಿನ ಗೋಪುರ ಚಾಲುಕ್ಯಶೈಲಿಯದು. ನಾಲ್ಕು ಸ್ತರಗಳ ಶಿಖರದ ಮೇಲೆಲ್ಲ ಸಿಂಹಮುಖವನ್ನು ಹೊತ್ತ ಚಿಕ್ಕಕೋಷ್ಠಗಳಲ್ಲಿ ದೇವತೆಯರು ಇಲ್ಲವೆ ಪುಟ್ಟಗೋಪುರದಂತಹ ಕೀರ್ತಿಮುಖಗಳು ಅಲಂಕರಿಸಿವೆ. ಮೇಲಿನ ಕಳಶವೂ ಆಕರ್ಷಕವಾಗಿದೆ. ಗೋಪುರದಿಂದ ಮುಂದಕ್ಕೆ ಚಾಚಿಕೊಂಡ ಸುಕನಾಸಿ, ಅದರ ಮುಂದಕ್ಕೆ ವಿಶಾಲವಾದ ಮುಖಮಂಟಪ. ನಕ್ಷತ್ರದ ಆಕರದಲ್ಲಿ ಹರಡಿಕೊಂಡ ಈ ಮಂಟಪಕ್ಕೆ ಮೂರುಕಡೆ ಪ್ರವೇಶದ್ವಾರಗಳು. ಮಂಟಪದ ಒಳಭಾಗದಲ್ಲಿ ಸೊಗಸಾದ ಕಂಬಗಳು.

ತಿರುಗಣೆಯಂತ್ರದಲ್ಲಿ ತಯಾರಾದ ಈ ಕಂಬಗಳ ಹೊಳಪು ಕಣ್ಸೆಳೆಯುತ್ತದೆ. ಮುಖಮಂಟಪದ ಅಂಚಿನಲ್ಲಿ ಸುತ್ತಲೂ ಒರಗುಗೋಡೆಯಿರುವ ಕಕ್ಷಾಸನ. ಇಲ್ಲೂ ಸುತ್ತ ಇರುವ ಕಂಬಗಳು ಕಡಿಮೆ ಎತ್ತರದವು. ಕಕ್ಷಾಸನದ ಹೊರಭಾಗದಲ್ಲಿ ಗೋಡೆಯುದ್ದಕ್ಕೂ ಕೆತ್ತಿರುವ ಪುಷ್ಪಾಕೃತಿಗಳೂ, ಪುಟ್ಟ ಗೋಪುರಗಳೂ ದೇಗುಲದ ಅಂದವನ್ನು ಹೆಚ್ಚಿಸಿವೆ. ಒಳಛಾವಣಿಯತ್ತ ಕಣ್ಣುಹಾಯಿಸಿದರೆ ಹೊಯ್ಸಳ ದೇಗುಲಗಳಲ್ಲಿ ಕಂಡುಬರುವ ಚಿತ್ರವಿನ್ಯಾಸಗಳ ಭುವನೇಶ್ವರಿಯನ್ನು ಕಾಣಬಹುದು. ಮಂಟಪದೊಳಗಿರುವ ದೇವಕೋಷ್ಠಗಳಲ್ಲಿ ಗಣಪತಿ, ಸಪ್ತಮಾತೃಕೆಯರು, ವಿಷ್ಣು, ಮಹಿಷಾಸುರಮರ್ದಿನಿಯರ ವಿಗ್ರಹಗಳಿವೆ.

ಗರ್ಭಗುಡಿಯ ಬಾಗಿಲ ಅಕ್ಕಪಕ್ಕ ಜಾಲಂಧ್ರ (ಕಿಟಕಿ) ಗಳಿವೆ. ದ್ವಾರದ ಚೌಕಟ್ಟಿನಲ್ಲಿ ಗಜಲಕ್ಷ್ಮಿಯನ್ನು ಕಾಣಬಹುದು. ಮಂಟಪದಲ್ಲಿ ಶಿವಲಿಂಗಕ್ಕೆ ಇದಿರಾಗಿ ಕುಳಿತ ನಂದಿಯ ವಿಗ್ರಹವು ಸರಳಕೆತ್ತನೆಯದಾದರೂ ಮುದ್ದಾಗಿ ಕಾಣುತ್ತದೆ.

ಮುಖಮಂಟಪದ ಸುತ್ತ ಛಾವಣಿಯ ಇಳಿಜಾರು ಇಡೀ ಕಟ್ಟಡದ ಅಂದವನ್ನು ಹೆಚ್ಚಿಸಿದೆ. ಛಾವಣಿಯ ಮೇಲುಗಡೆ ಸುತ್ತ ಕಟ್ಟಿರುವ ಕೈಪಿಡಿಯಲ್ಲಿ ನರಸಿಂಹ, ಗರುಡವಾಹನ ವಿಷ್ಣು, ದುರ್ಗೆ, ಬ್ರಹ್ಮ, ವೃಷಭಾರೂಢ ಶಿವಪಾರ್ವತಿಯರು ಮೊದಲಾದ ಶಿಲ್ಪಗಳನ್ನು ಕೆತ್ತಲಾಗಿದ್ದು ಶತಮಾನಗಳ ನಂತರವೂ ಅಂದಗೆಡದೆ ಉಳಿದುಕೊಂಡು ಬಂದಿರುವುದೊಂದು ವಿಶೇಷ. ಗುಡಿಯನ್ನೂ ಹೊರಗಿನ ವಿಶಾಲ ಆವರಣವನ್ನೂ ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದಿರುವ ಇಲಾಖೆಯ ಕಾರ್ಯ ಪ್ರಶಂಸಾರ್ಹವಾಗಿದೆ. ಗುಡಿಯ ಆವರಣದಲ್ಲಿ ಒಂದೆರಡು ಚಿಕ್ಕಗುಡಿಗಳೂ ವೀರಗಲ್ಲುಗಳೂ ಇದ್ದು ಪ್ರದೇಶದ ಇತಿಹಾಸಕ್ಕೆ ಸಾಕ್ಷಿಯಾಗಿವೆ.

ಪೂರ್ವಕಾಲದಲ್ಲಿ ಕುಬಟೂರು ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದಿತಂತೆ. ಈ ನಾಡನ್ನು ಆಳಿದ ಅರಸರು ಈ ಪ್ರಾಂತ್ಯದಲ್ಲಿ ಅನೇಕ ಗುಡಿಗಳನ್ನು ಕಟ್ಟಿದ್ದಾರೆ. ಇಲ್ಲೇ ಕ್ರಿ.ಶ. 9ನೇ ಶತಮಾನದಲ್ಲಿ ರಾಷ್ಟ್ರಕೂಟರಿಂದ ನಿರ್ಮಿತವಾದ ರಾಮೇಶ್ವರ ದೇವಾಲಯವಿದೆ. ಸನಿಹದ ಗುಡಿಯೊಂದರಲ್ಲಿ ಇರಿಸಲಾಗಿರುವ ನರಸಿಂಹನ ವಿಗ್ರಹವೊಂದು ಪ್ರಾಚೀನ ಮಾದರಿಯ ದ್ವಿಬಾಹುವಿಗ್ರಹಗಳಲ್ಲಿ ಒಂದಾಗಿದೆ. ಕುಬಟೂರಿಗೆ ಭೇಟಿಕೊಡುವ ಸಂದರ್ಭದಲ್ಲಿ ಈ ಎಲ್ಲ ಐತಿಹಾಸಿಕ ಸ್ಥಳಗಳನ್ನು ಮರೆಯದೆ ನೋಡಿ.