ಹಾಸಿಕೊಳ್ಳುತ್ತಿದ್ದ ಹಾಸಿಗೆಗಳನ್ನು ಅದಕ್ಕೆಂದು ಹಾಸಿ ಮೆತ್ತನೆಯ ಹಾಸಿಗೆ ಸಿದ್ಧವಾಯಿತು. ಅದನ್ನು ಅದರೊಳಗೆ ಕಳಿಸಿ ಹೊರಗಿನಿಂದ ಚಿಲಕ ಹಾಕಿದರೆ ಎಷ್ಟೊತ್ತು ಮಲಗಲೇ ಇಲ್ಲ! ನಮ್ಮನ್ನೇ ನೋಡುತ್ತ ಕೂತು ಬಿಟ್ಟಿತ್ತು. ನಾವು ಮಲಗುವ ಕೋಣೆಯಲ್ಲಿ ಎರಡು ಕಣ್ಣುಗಳು ನಮ್ಮ ಮೇಲೆಯೇ ನೆಟ್ಟಿವೆ ಎಂದರೆ ನಮಗೆ ನಿದ್ದೆಯಾದರೂ ಹೇಗೆ ಬಂದೀತು? ಅದೂ ಕತ್ತಲಲ್ಲಿ ಹೊಳೆಯುವ ಅದರ ಕಣ್ಣುಗಳು! ಅವತ್ತು ರಾತ್ರಿಯೆಲ್ಲ ಆಗಾಗ ಎದ್ದು ನೋಡುತ್ತ, ಅದಕ್ಕೇನಾದರೂ ತೊಂದರೆಯಾಗುತ್ತಿದೆಯೇ ಎಂದು ಕಳವಳ ಪಡುತ್ತ ಸರಿಯಾಗಿ ನಿದ್ರೆಯೇ ಆಗಲಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಎರಡನೆಯ ಕಂತು
ನಾಯಿಗಳನ್ನು ನಾಯಿಗಳು ಎಂದು ಸಂಭೋದಿಸುವ ಕಾಲ ಮುಗಿದಿದೆ. ನಾನು ಚಿಕ್ಕವಳಿದ್ದಾಗ ಯಾರಿಗಾದರೂ ಅಪಮಾನ ಮಾಡಬೇಕು ಎಂತಿದ್ದರೆ ‘ಥೂ ನಾಯಿ’ ಎನ್ನುತ್ತಿದ್ದರು. ಆದರೆ ಈಗ ನಾಯಿಗಳು ಶ್ರೇಷ್ಟ ಎಂದು ರುಜುವಾತಾಗಿ ಯಾರಿಗಾದರೂ ನಾಯಿ ಎಂದರೆ ಕಿಮ್ಮತ್ತು ಕೊಟ್ಟಂತೆಯೇ ಲೆಕ್ಕ. ಆ ಕಾಲದಲ್ಲಿ ನಾಯಿಗಳು ಹಿತ್ತಲು, ಅಂಗಳದಲ್ಲಿ ಓಡಾಡಿಕೊಂಡು ಹಾಕಿದ್ದನ್ನು ತಿಂದು ಇವತ್ತು ಈ ಮನೆ ನಾಳೆ ಇನ್ನೊಂದು ಮನೆ ಎಂಬಂತೆ ಓಡಾಡುತ್ತಿದ್ದವು. ಈಗ ಹಾಗಿಲ್ಲ.. ನಾಯಿಗಳು ಮನೆಯೊಳಗೆ, ಸೋಫಾದ ಮೇಲೆ ಬಂದು ಪವಡಿಸಿಕೊಳ್ಳುವಷ್ಟು ಮನುಷ್ಯರ ಹೃದಯವನ್ನು ಗೆದ್ದು ಬಿಟ್ಟಿವೆ. ಈ ಗೆಲುವು ಹೀಗೆ ಮುಂದುವರೆದರೆ ಒಂದು ದಿನ ಅವುಗಳು ನಮ್ಮ ಕುತ್ತಿಗೆಗೆ ಹಗ್ಗ ಹಾಕಿ ಎಳೆದುಕೊಂಡು ಹೋಗುವಷ್ಟು ಬುದ್ಧಿವಂತರಾಗುತ್ತವೇನೋ ಎನ್ನಿಸುತ್ತದೆ ನನಗೆ.
ನಮ್ಮ ಮನೆಯಂಗಳಕ್ಕೆ ಚಂದಿರ ಬಂದು ಇಳಿದ ಎಂದು ಹೇಳಿದೆನಲ್ಲ.. ಆ ಕೂಸು ಬಂದ ಕೂಡಲೇ ನಮ್ಮೆದುರಿಗೆ ಧುತ್ತೆಂದು ಎದುರಾಗಿದ್ದು ಅವನನ್ನು ಯಾವ ಹೆಸರಿನಿಂದ ಕರೆಯಬೇಕು ಎಂಬ ಪ್ರಶ್ನೆ. ನಾನು ಮತ್ತೆ ಚಾರ್ಲೀ ಸಿನಿಮಾವನ್ನೇ ನೆನಪಿಸಿಕೊಳ್ಳುತ್ತೇನೆ. ಅದರಲ್ಲಿ ಧರ್ಮ ನಾಯಿಯ ಹೆಸರು ಏನು ಅಂತ ಕೇಳಿದರೆ ತ್ಚು ತ್ಚು ಅಂತ ಹೇಳುತ್ತಾನಲ್ಲ ಹಾಗೇ ನಾವು ಆ ಸಮಯದಲ್ಲಿ ಬಾಯಿಗೆ ಬಂದ ಹೆಸರನ್ನು ಹೇಳುತ್ತಿದ್ದೆವು. ನಾನು ನಾಯಿ ಎಂದೆ. ನಮ್ಮಮ್ಮ ರಾಜಾ ಎಂದಳು. ಆ ಸಮಯದಲ್ಲಿ ನನಗೆ ನಾಯಿಗಳ ಮೇಲೆ ಮಮಕಾರವೇನೂ ಇರಲಿಲ್ಲವಾದ್ದರಿಂದ ನನಗೆ ಅದಕ್ಕೊಂದು ಹೆಸರು ಹುಡುಕಬೇಕು ಎಂಬಂತಹ ಆಸಕ್ತಿಯೇನೂ ಇರಲಿಲ್ಲ. ಕೊನೆಗೆ ಅದಕ್ಕೆ ಕೂರಾ ಎಂದು ಕರೆಯುವುದು ಎಂದಾಯಿತು. ಅಜ್ಜನ ಮನೆಯಲ್ಲಿ ಬಾಲ್ಯದಲ್ಲಿ ಒಡನಾಡಿದ ಕೂರ ಎಂಬ ನಾಯಿಯ ನೆನಪಿನಿಂದಾಗಿ ಆ ಹೆಸರನ್ನು ಸಮರ್ಥ ಆಯ್ದುಕೊಂಡಿದ್ದರು. ಅಲ್ಲಿಗೆ ಆ ಕೂಸಿಗೆ ಕೂರಾ ಎಂದು ನಾಮಕರಣವಾಯಿತು.
ಮೊದಲ ದಿನವೇ ಕೂರಾ ಎಂದು ಕರೆದಾಗ ಅದು ತಿರುಗಿ ನೋಡುತ್ತದೆ ಎಂದು ನಾನು ಭಾವಿಸಿದ್ದೆ. ಹಾಗಾಗಲಿಲ್ಲ. ಹೆಸರು, ದೇಶ, ಧರ್ಮ, ಬಣ್ಣ ಎಂದು ನಾವು ಮಾಡಿಕೊಂಡಿದ್ದು. ಈ ಎಲ್ಲವನ್ನು ನಮ್ಮೊಳಗೆ ನಿಧಾನವಾಗಿ ಬಿತ್ತಲಾಗುತ್ತದೆ. ಅದು ಬೇರೂರಿ ಅದೇ ಸರಿಯೆಂಬ ಸಸಿ ನಮ್ಮೊಳಗೆ ಬೆಳೆಯತೊಡಗುತ್ತದೆ. ನಾವು ಸಹ ಹಸುಳೆಗಳಾಗಿದ್ದಾಗ ನಮ್ಮ ಹೆಸರಿನಿಂದ ಕೂಗಿದರೆ ತಿರುಗಿ ನೋಡುತ್ತಿರಲಿಲ್ಲವೇನೋ.. ಎಲ್ಲರೂ ತೊಟ್ಟಿಲ ಬಳಿ ಬಂದು ಅದೇ ಹೆಸರನ್ನು ಕೂಗಿ ಕೂಗಿ ತಲೆಯೊಳಗೆ ಆ ಪದ ಬೇರೂರಿ ಕೊನೆಗೆ ಅವರೆಲ್ಲ ನನ್ನನ್ನೇ ಕೂಗುತ್ತಿದ್ದಾರೆ ಎಂದು ಅರಿವಾಗಿ ಆ ಹೆಸರು ಕೇಳಿ ಬಂದಾಗಲೆಲ್ಲ ಪ್ರತಿಕ್ರಿಯಿಸಲು ಶುರು ಮಾಡುತ್ತೇವೆ. ಕೂರಾನಿಗೂ ಹಾಗೆಯೇ ಆಗಿತ್ತು. ಅವನ ತಲೆಯಲ್ಲಿ ತಾನೇ ಕೂರಾ ಎಂದು ಅರಿವಾಗಲು ಸ್ವಲ್ಪ ಸಮಯ ಬೇಕಿತ್ತು. ಹಾಗಾಗಿ ನಾವು ಕೂರಾ ಎಂದು ಕೂಗಿದರೂ ಅದು ತನಗಲ್ಲ ಎಂಬಂತೆ ತನಗೆ ಮನಸ್ಸು ಬಂದಂತೆ ಹೋಗುತ್ತಿತ್ತು.
ಕೂರಾನಿಗೆ ಮಲಗಲು, ವಿಶ್ರಾಂತಿಗೆಂದು ಕ್ರೇಟ್ ಎಂಬ ಕಬ್ಬಿಣದ ಪಂಜರವೊಂದನ್ನು ತಂದಿದ್ದೆವು. ಅದು ಎಷ್ಟು ದೊಡ್ಡದಿತ್ತೆಂದರೆ ಅದರಲ್ಲಿ ನಾನು ಸಹ ಆರಾಮಾಗಿ ಒಳ ಹೊಕ್ಕು ವಿಶ್ರಮಿಸಬಹುದಿತ್ತು. ಅವನು ನಮ್ಮ ಮನೆಗೆ ಬಂದ ಮೊದಲ ದಿನ ಅವನನ್ನು ಎಲ್ಲಿ ಮಲಗಿಸುವುದು ಎಂದು ಚರ್ಚಿಸಿದ್ದೆವು. ಹಾಲ್‌ನಲ್ಲಿ ಮಲಗಿಸಲು ಸಮರ್ಥ್ ಒಪ್ಪಲಿಲ್ಲ. ಆ ಸಮಯದಲ್ಲಿ ಬಂದಿದ್ದ ಅಮ್ಮ ತಾನು ಆಗಾಗ ಬಂದು ಅದನ್ನು ವಿಚಾರಿಸಿಕೊಳ್ಳುವುದಾಗಿ ಹೇಳಿದರೂ ಅವರಿಗೆ ಸಮಾಧಾನವಾಗಲಿಲ್ಲ. ಕೊನೆಗೆ ನಾವು ಮಲಗುತ್ತಿದ್ದ ಕೋಣೆಯಲ್ಲಿಯೇ ಅದು ಮಲಗಲಿ ಎಂದಾಯಿತು. ಮಣಭಾರದ ಕಬ್ಬಿಣದ ಕ್ರೇಟ್ ಅನ್ನು ನಾವಿಬ್ಬರು ಎತ್ತಿಕೊಂಡು ಹಾಲ್‌ನಿಂದ ಮಲಗುವ ಕೋಣೆಗೆ ಸ್ಥಳಾಂತರಿಸಿದೆವು. ನಾವು ಹಾಸಿಕೊಳ್ಳುತ್ತಿದ್ದ ಹಾಸಿಗೆಗಳನ್ನು ಅದಕ್ಕೆಂದು ಹಾಸಿ ಮೆತ್ತನೆಯ ಹಾಸಿಗೆ ಸಿದ್ಧವಾಯಿತು. ಅದನ್ನು ಅದರೊಳಗೆ ಕಳಿಸಿ ಹೊರಗಿನಿಂದ ಚಿಲಕ ಹಾಕಿದರೆ ಎಷ್ಟೊತ್ತು ಮಲಗಲೇ ಇಲ್ಲ! ನಮ್ಮನ್ನೇ ನೋಡುತ್ತ ಕೂತು ಬಿಟ್ಟಿತ್ತು. ನಾವು ಮಲಗುವ ಕೋಣೆಯಲ್ಲಿ ಎರಡು ಕಣ್ಣುಗಳು ನಮ್ಮ ಮೇಲೆಯೇ ನೆಟ್ಟಿವೆ ಎಂದರೆ ನಮಗೆ ನಿದ್ದೆಯಾದರೂ ಹೇಗೆ ಬಂದೀತು? ಅದೂ ಕತ್ತಲಲ್ಲಿ ಹೊಳೆಯುವ ಅದರ ಕಣ್ಣುಗಳು! ಅವತ್ತು ರಾತ್ರಿಯೆಲ್ಲ ಆಗಾಗ ಎದ್ದು ನೋಡುತ್ತ, ಅದಕ್ಕೇನಾದರೂ ತೊಂದರೆಯಾಗುತ್ತಿದೆಯೇ ಎಂದು ಕಳವಳ ಪಡುತ್ತ ಸರಿಯಾಗಿ ನಿದ್ರೆಯೇ ಆಗಲಿಲ್ಲ. ಪಾಪ ಅದಕ್ಕೂ ಹೊಸ ಮನೆಯಲ್ಲಿ ನಿದ್ರೆಯೇ ಬರಲಿಲ್ಲವೇನೋ.. ನಾವು ಅದನ್ನು ಕೂಸಿನ ಹಾಗೆ ನೋಡಿಕೊಳ್ಳಲಿದ್ದೇವೆ ಎಂಬುದು ಅದಕ್ಕೂ ನಿಧಾನವಾಗಿ ಅರ್ಥವಾಗುವುದರಲ್ಲಿತ್ತು.
ಅಮೇರಿಕಾದಲ್ಲಿ ನಾಯಿಗಳನ್ನು ಸಾಕಬೇಕೆಂದರೆ ಅವುಗಳಿಗೆ ಬೇಸಿಕ್ ಸವಲತ್ತುಗಳನ್ನು ಕೊಡಲೇಬೇಕು. ಇಲ್ಲದೇ ಇದ್ದರೆ ಸಾಕಲೇಬಾರದು ಎನ್ನುತ್ತಾರೆ ಇಲ್ಲಿಯ ಜನ. ಕೂರಾನ ಕ್ರೇಟ್ ರಾತ್ರಿಯಲ್ಲಿ ಮಲಗುವ ಕೋಣೆಯಲ್ಲಿ, ಹಗಲಲ್ಲಿ ಹಾಲ್‌ಗೆ ಸ್ಥಳಾಂತರವಾಗುತ್ತಿತ್ತು. ರಾತ್ರಿಯೇನೋ ಅದರಲ್ಲಿ ಮಲಗಿಸಿ ಚಿಲಕ ಹಾಕುತ್ತಿದ್ದೆವು. ಆದರೆ ಹಗಲಿನಲ್ಲಿ ಏನು ಮಾಡಿದರೂ ಅವನು ಅದರೊಳಗೆ ಹೋಗುತ್ತಿರಲಿಲ್ಲ. ಗೂಗಲ್ ಗುರು, ಯುಟ್ಯೂಬ್ ವಿಡಿಯೋಗಳನ್ನು ನೋಡಿದಾಗ ನಾಯಿಗಳು ಪಪ್ಪಿಯ ವಯಸ್ಸಿದ್ದಾಗ ಅಂದರೆ ಒಂದರಿಂದ ಒಂದೂವರೆ ವಯಸ್ಸಿನಲ್ಲಿದ್ದಾಗ ಈ ಕ್ರೇಟ್ ಅಭ್ಯಾಸ ಮಾಡಿದರೆ ಅವುಗಳಿಗೆ ಅದು ರೂಢಿಯಾಗುತ್ತದೆ. ಇಲ್ಲದೇ ಹೋದರೆ ದೊಡ್ಡವಾದ ಏನೂ ಮಾಡಿದರೂ ಅವು ಮಾತು ಕೇಳುವುದಿಲ್ಲ ಎಂದೆಲ್ಲ ನೋಡಿದಾಗ ನಮಗೆ ಹೆದರಿಕೆಯಾಗಿ ಏನಾದರಾಗಲಿ ಅದಕ್ಕೆ ಕ್ರೇಟ್ ಅಭ್ಯಾಸ ಮಾಡಲೇಬೇಕು ಎಂದು ಪಣ ತೊಟ್ಟವರಂತೆ ಸಿದ್ಧರಾಗಿದ್ದೆವು. ಕ್ರೇಟ್ ಒಳಗೆ ಬಿಸ್ಕೆಟ್ ಇಟ್ಟರೆ ಒಳಗೆ ಹೋಗಿ ಅದನ್ನು ತಿಂದು ಮತ್ತೆ ಹೊರಗೆ ಬಂದು ಬಿಡುತ್ತಿದ್ದ. ಅವನು ಒಳಗೆ ಹೋದಾಗ ಹೊರಗಿನಿಂದ ಚಿಲಕ ಹಾಕಿ ಬಿಟ್ಟರೆ ಇನ್ನೂ ಸರಿಯಾಗಿ ಬೊಗಳಲು ಬರದೇ ಇದ್ದ ಆ ಪುಟ್ಟ ಬಾಯಿಯಲ್ಲಿ ಫುಸಕ್ ಫುಸಕ್ ಅಂತ ಸದ್ದು ಶುರುವಾಗುತ್ತಿತ್ತು. ಪಾಪ ಅದಕ್ಕೆ ಹಿಂಸೆಯಾಗುತ್ತಿದೆಯೇನೋ ಎಂದು ನಾವು ಬಾಗಿಲು ತೆರೆದರೆ ಚಂಗನೇ ಹೊರಗೆ ನೆಗೆತ! ಕೊನೆಗೆ ನಾವೇ ಸೋತೆವು. ಅದಕ್ಕೆ ಹಿಂಸೆ ಕೊಡಬಾರದೆಂದು ಮನೆಯ ತುಂಬ ಅಲೆಯಲು ಬಿಟ್ಟೆವು. ಇಡೀ ಮನೆಯನ್ನು ತನ್ನದಾಗಿಸಿಕೊಂಡು ಅವನು ಮೂಗಿನಡಿಯಲ್ಲಿ ನಮಗೆ ಕಾಣದಂತೆಯೇ ವಿಜಯದ ನಗೆ ಬೀರಿದ್ದ.
ಬಹಳಷ್ಟು ತರಬೇತಿಗಳನ್ನು ಪಪ್ಪಿ ವಯಸ್ಸಿನಲ್ಲಿಯೇ ಕೊಡಬೇಕು ಎಂದು ನಾವು ನೋಡಿದ್ದೆವು. sit, come, eat, go, no ಈ ತರಹದ ಬೇಸಿಕ್ ಕಮ್ಯಾಂಡ್‌ಗಳನ್ನು ಸಹ ಆ ವಯಸ್ಸಿನಲ್ಲಿಯೇ ಸರಿಯಾಗಿ ನೀಡಿದರೆ ಅವು well-behaved ನಾಯಿಗಳಾಗುತ್ತವೆ ಎಂದಿತ್ತು. ನಾಯಿಗಳನ್ನು ಮನುಷ್ಯರಂತೆ ವರ್ತಿಸುವ ಹಾಗೆ ಮಾಡುವ ಹುನ್ನಾರ ಇದು ಎಂದು ನನಗನ್ನಿಸುತ್ತಿತ್ತು. ಆದರೂ ಈ well-behaved ನಾಯಿಗಳಿಗೆ ಅಮೇರಿಕಾದಲ್ಲಿ ಬಹಳ ಕಿಮ್ಮತ್ತು. ಮಾತು ಕೇಳದ, ಬೊಗಳುವ, ಬೇರೆ ನಾಯಿಗಳೊಂದಿಗೆ ಜಗಳವಾಡುವ ನಾಯಿಗಳೆಂದರೆ ಇವರಿಗೆ ಆಗಿ ಬರುವುದಿಲ್ಲ. ತಿರಸ್ಕಾರದಿಂದ ನೋಡುತ್ತಾರೆ. ಹಾಗಾಗಿ ನಾಯಿ ಮಾಲೀಕರಿಗೆ ತಮ್ಮ ನಾಯಿಗಳನ್ನು ತರಬೇತಿ ಮಾಡುವ ಒತ್ತಡವಿರುತ್ತದೆ. ನಾನಂತೂ ಪ್ರತಿ ದಿನ ಬೆಳಿಗ್ಗೆ ತುಂಡು ಬಿಸ್ಕೆಟ್ ಹಿಡಿದು ಅದರ ಜೊತೆಗೆ sit, eat ಎಂದು ಶುರು ಮಾಡುತ್ತಿದ್ದೆ. ಅದೂ ದೂರದಿಂದಲೇ! ಹತ್ತಿರ ಬಂದರೆ ಅದು ನನ್ನನ್ನು ಕಚ್ಚಿಯೇ ಬಿಡುತ್ತದೇನೋ ಎಂದು ಓಡುತ್ತಿದ್ದೆ. ಅದರ ಹಲ್ಲು ಸಕ್ಕರೆಯ ಹರಳಿಗಿಂತಲೂ ಸಣ್ಣವಿದ್ದವು ಆಗ.
(.. ಮುಂದುವರೆಯುತ್ತದೆ)
(ಹಿಂದಿನ ಕಂತು: ಕೂರಾ ಪುರಾಣ ಶುರು…)
ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ.