ಬೆಂಗಳೂರಿನಲ್ಲಿ ಇನ್ನೂ ಕೆಲಸದಲ್ಲಿದ್ದ ಅವರಿಗೆ ಕೃಷಿಯ ಹುಚ್ಚು. ಅವರಿಗೆ ಮನೆಯಲ್ಲಿ ಹೊಲ ಇದ್ದರೂ ಕೂಡ ಮಾಡಲಾಗದ ಪರಿಸ್ಥಿತಿ. ಅವರ ತಂದೆ ಹೊಲ ಮಾಡಲು ಕೊಡುತ್ತಿರಲಿಲ್ಲ. ಬೆಂಗಳೂರಿನಲ್ಲಿ ಆರಾಮಾಗಿ ಇರು, ನಮ್ಮ ಹಾಗೆ ಯಾಕೆ ಕಷ್ಟ ಪಡುತ್ತೀಯ ಎಂಬುದು ಒಂದು ಕಾರಣವಾದರೆ, ಅವರಿಗೆ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದರು ಅನ್ನುವುದು ಇನ್ನೊಂದು ಬಲವಾದ ಕಾರಣ! ಕೃಷಿಕ ಅಂತ ಗೊತ್ತಾದರೆ ಅವರ ಮದುವೆ ಆಗಲು ಸಾಧ್ಯವೇ ಇರಲಿಲ್ಲ! ಅರೆ ಯಕಶ್ಚಿತ ಒಬ್ಬ ರೈತನನ್ನು ಮದುವೆಯಾಗಲು ಹುಡುಗಿಯರಿಗೇನು ಹುಚ್ಚೆ?!
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

ಹಿಂದಿನ ರಾತ್ರಿಯಿಡೀ ಮಳೆ ಹೊಡೆದಿತ್ತು. ಬೆಳಿಗ್ಗೆ ಕೂಡ ಬರುವುದು-ಹೋಗುವುದು ಎಂಬ ಕಣ್ಣು ಮುಚ್ಚಾಲೆಯಲ್ಲಿ ತೊಡಗಿತ್ತು. ಮಳೆ ಬರುತ್ತಿದ್ದರೆ ಹೊಲಕ್ಕೆ ಹೋಗುವುದು ಕಷ್ಟ, ಅಲ್ಲಿ ಹೋಗಿ ಏನು ಮಾಡುವುದು?! ಎಂಬ ನೆಪ ನಮಗೆ ಸಾಕಾಗಿತ್ತು! ಹೀಗಾಗಿ ಅವತ್ತು ರಜೆ ಹಾಕಿದ್ದೆವು. ಶಂಭುಲಿಂಗ ಮಾವನಿಗೆ ಮಾತ್ರ ರಜೆ ಇಲ್ಲ. ಅವರು ತಮ್ಮಷ್ಟಕ್ಕೆ ತಾವು ಬನಿಯನ್ನು ಹಾಕಿ ತೋಟದ ಕಾಯಕದಲ್ಲಿ ತೊಡಗಿದ್ದರು.

“ಕಡಿಗೆ ಹೆಗಡೇರು ಎಂತ ಮಾಡ್ತಾ ಇದ್ರಿ…” ಅಂತ ಮಾತಿಗೆಳೆದೆ.

“ಗುರುಪ್ರಸಾದ್ ಎದ್ಯನೋ.. ಎಲ್ಲಿ ನಿನ್ನ ಶಿಷ್ಯ.. ಸೂರ್ಯ ಎದ್ರೂ ಇವನು ಏಳ್ತನಿಲ್ಯಲೋ ಮಾರಾಯ” ಅಂತ ನಾಗಣ್ಣ ತಡವಾಗಿ ಉದಯಿಸುವುದರ ಬಗ್ಗೆ ಕಾಲೆಳೆದರು. ತಮಾಶೆಗೆ ನಕ್ಕು ಸ್ಪಂದಿಸಿದ ನಾನು.. ಬೆಂಗಳೂರಿನಿಂದ ಇವತ್ತು ಇನ್ನೊಬ್ಬ ಶಿಷ್ಯ ಬರ್ತಾ ಇದ್ದಾನೆ ಮಾವ” ಅಂದೆ..

ಅವತ್ತು ನಮ್ಮ ಬೆಳೆಸಿರಿ ರೈತ ಬಳಗದ ಇನ್ನೊಬ್ಬ ಸದಸ್ಯ ವಿನೋದ ಬರುವವರಿದ್ದರು. ಬೆಂಗಳೂರಿನಲ್ಲಿ ಇನ್ನೂ ಕೆಲಸದಲ್ಲಿದ್ದ ಅವರಿಗೆ ಕೃಷಿಯ ಹುಚ್ಚು. ಅವರಿಗೆ ಮನೆಯಲ್ಲಿ ಹೊಲ ಇದ್ದರೂ ಕೂಡ ಮಾಡಲಾಗದ ಪರಿಸ್ಥಿತಿ. ಅವರ ತಂದೆ ಹೊಲ ಮಾಡಲು ಕೊಡುತ್ತಿರಲಿಲ್ಲ. ಬೆಂಗಳೂರಿನಲ್ಲಿ ಆರಾಮಾಗಿ ಇರು, ನಮ್ಮ ಹಾಗೆ ಯಾಕೆ ಕಷ್ಟ ಪಡುತ್ತೀಯ ಎಂಬುದು ಒಂದು ಕಾರಣವಾದರೆ, ಅವರಿಗೆ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದರು ಅನ್ನುವುದು ಇನ್ನೊಂದು ಬಲವಾದ ಕಾರಣ! ಕೃಷಿಕ ಅಂತ ಗೊತ್ತಾದರೆ ಅವರ ಮದುವೆ ಆಗಲು ಸಾಧ್ಯವೇ ಇರಲಿಲ್ಲ! ಅರೆ ಯಕಶ್ಚಿತ ಒಬ್ಬ ರೈತನನ್ನು ಮದುವೆಯಾಗಲು ಹುಡುಗಿಯರಿಗೇನು ಹುಚ್ಚೆ?! ಹೀಗಾಗಿಯೇ ವಿನೋದ ಅವರು ತಮ್ಮ ಹೊಲದಲ್ಲಿ ಏನಾದರೂ ಮಾಡುವ ಮೊದಲು ನನ್ನ ಜೊತೆಗಿನ ಕೃಷಿ ಪಯಣಕ್ಕೆ ಸಿದ್ಧರಾಗಿದ್ದರು. ಮದುವೆಯಾಗಿ ಮುಂದೊಂದು ದಿನ ಹೆಂಡತಿಯನ್ನು ಒಪ್ಪಿಸಿ ಕೃಷಿಗೆ ಪೂರ್ತಿ ಸಮಯ ಇಳಿಯುವ ಭರವಸೆ ಅವರಿಗಿತ್ತು. ಮುಂದಿನ ಮಾತು ಮುಂದೆ, ಈಗಲೇ ಹುಡುಗಿಗೆ ಹಾಗೆಲ್ಲ ಹೇಳಿ ತಲೆ ಕೆಡಿಸಬೇಡಿ. ಮದುವೆನೇ ಬೇಡ ಅಂದುಬಿಟ್ಟಾಳು ಅಂತ ಅವರಿಗೆ ಎಚ್ಚರಿಸಿದ್ದೆ.

“ಅದೆಂತ ಶಿಷ್ಯಂದಿರ ಬಳಗವೋ ಮಾರಾಯ ನಿಂದು!” ಅಂತ ಮಾವನಿಗೆ ಅಚ್ಚರಿಯಾಗಿತ್ತು. ಹಳ್ಳಿಯಲ್ಲಿನ ಎಷ್ಟೋ ಹುಡುಗರು ಕೃಷಿ ಬೇಡ ಎಂದು ಪಟ್ಟಣ ಸೇರುತ್ತಿರುವಾಗ ನಮ್ಮಂಥವರು ವಾಪಸ್ಸು ಬರುತ್ತಿರುವುದು ಅವರಿಗೆ ತುಂಬಾ ಖುಷಿ ಕೊಟ್ಟಿತ್ತು. ತಮ್ಮ ಪೀಳಿಗೆಯ ನಂತರವೂ ಅಲ್ಲೊಂದು ಹೊಸ ರೈತ ಬಳಗ ಸೃಷ್ಟಿಯಾಗುತ್ತಿದೆ ಎಂಬ ಆಶಾ ಭಾವನೆ ಅವರಲ್ಲಿ ಬಂತೇನೋ.

ನಾಗಣ್ಣ ಚೊಕ್ಕ ಬೆಂಗಳೂರಿಗರಾದರೆ ವಿನೋದ ಪಕ್ಕಾ ಬಯಲುಸೀಮೆಯವರು! ವಿನೋದರ ಮಾತುಗಳೇ ವಿನೋದಮಯ! ಅವರ ಕನ್ನಡ ಸ್ವಲ್ಪ ಬೆಳಗಾವಿ – ಬಾಗಲಕೋಟಿ ಕನ್ನಡ. ಇಬ್ಬರೂ ಶಿಷ್ಯಂದಿರ ಕತೆ ಹೇಳುವ ಶೈಲಿ ನನಗೆ ತುಂಬಾ ಇಷ್ಟ ಕೂಡ! ಈಗಾಗಲೇ ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದಿಳಿಯಬೇಕಿದ್ದ ಅವರು ಇನ್ನೂ ಯಾಕೆ ಬರಲಿಲ್ಲ ಅಂತ ಅವರಿಗೆ ಒಂದು ಫೋನು ಮಾಡಿದೆ.
“ಹೇಳ್ರಿ ಸರ್ರss…”

“ಎಲ್ಲ್ಯದೀರಿ .. ನಾವು ಕಾಯಕತ್ತೀವಿ ಇಲ್ಲೇ… ನಾಗಣ್ಣ ಭಾರಿ excite ಆಗ್ಯಾರ, ನೀವು ಬರ್ತೀರಿ ಅಂತ…” ಅಂದೇ.

“ಹಹಹ ಹೌದೇನ್ರಿ… ಬಸ್ಸು ಸ್ವಲ್ಪ ಲೇಟ್ ಆತ್ರ್ಯಾ… ಇಲ್ಲೇ ಹತ್ರ ಅದೀನ್ ತೊಗೋರಿ ಸರ್…” ಅಂತ ಅವರು ಹೇಳುವುದಕ್ಕೂ ಹೆಗಡೇರ ಸಾಕುನಾಯಿಗಳ ದಂಡು ಕೂಗುವುದಕ್ಕೂ ಸರಿ ಹೋಯ್ತು. ಬೊಗಳುವ ನಾಯಿಗಳು ಕಚ್ಚುವುದಿಲ್ಲ ಅಂತಾರಾದ್ರೂ ನನಗೆ ನನ್ನ ಶಿಷ್ಯನ ಮೇಲಿನ ಕಾಳಜಿಯಿಂದ ಅವುಗಳಿಗೆ ಗದರಿ ಅವರು ನಮ್ಮೋರು ಕಣ್ರೋ ಅಂತ ಸಿಗ್ನಲ್ ಕೊಟ್ಟೆ. ಅವೂ ಬಾಲ ಅಲ್ಲಾಡಿಸುತ್ತ ವಿನೋದರ ಪ್ರೀತಿ ಗಳಿಸಲು ಶುರು ಮಾಡಿದವೆನ್ನಿ.

ವಿನೋದ್ ಬ್ರೋ (ನಾಗಣ್ಣ ಅವರನ್ನು ಕರೆಯುತ್ತಿದ್ದ ರೀತಿ ಅದು) ಬಂದಾರೆ ಅಂತ ತಿಳಿಯುತ್ತಲೇ ನಾಗಣ್ಣ ಎದ್ದು ಕೂತು ನಿಚ್ಚಳವಾದರು. ಬೆಂಗಳೂರು ಬಿಟ್ಟು ನಾವೂ ಕೆಲವು ದಿನಗಳಾಗಿತ್ತು. ಅಲ್ಲಿನ ವಿಷಯಗಳನ್ನು ಕೇಳಿ ತಿಳಿದೆವು. ಸಧ್ಯಕ್ಕೆ ಯಾವುದೇ underpass ಗಳು, ಅಪಾರ್ಟ್ ಮೆಂಟ್ ಗಳು ಮಳೆಗೆ ಮುಳುಗಿಲ್ಲ ಅಂತ ತಿಳಿದು ಸಂತಸ ಪಟ್ಟೆವು. ಹಳ್ಳಿಯಲ್ಲಿ ಇದ್ದರೆ ಯಾವುದೇ ಸಮಾಚಾರಗಳು ನಮ್ಮನ್ನು ಕಂಗೆಡಿಸುವುದಿಲ್ಲ. ಯಾಕಂದರೆ ಅವುಗಳನ್ನು ನೋಡಲು ಸಮಯ ಇರುವುದಿಲ್ಲ.

ಹಳ್ಳಿಯಲ್ಲಿನ ಎಷ್ಟೋ ಹುಡುಗರು ಕೃಷಿ ಬೇಡ ಎಂದು ಪಟ್ಟಣ ಸೇರುತ್ತಿರುವಾಗ ನಮ್ಮಂಥವರು ವಾಪಸ್ಸು ಬರುತ್ತಿರುವುದು ಅವರಿಗೆ ತುಂಬಾ ಖುಷಿ ಕೊಟ್ಟಿತ್ತು. ತಮ್ಮ ಪೀಳಿಗೆಯ ನಂತರವೂ ಅಲ್ಲೊಂದು ಹೊಸ ರೈತ ಬಳಗ ಸೃಷ್ಟಿಯಾಗುತ್ತಿದೆ ಎಂಬ ಆಶಾ ಭಾವನೆ ಅವರಲ್ಲಿ ಬಂತೇನೋ.

ವಿನೋದ ಅವರಿಗೆ ನಾವಿದ್ದ ಮನೆ ಹಾಗೂ ಶಂಭುಲಿಂಗ ಮಾವನ ತೋಟವನ್ನೆಲ್ಲ ತೋರಿಸಿದೆವು. ಅದು ನಮ್ಮದೇ ತೋಟ ಇದ್ದಂತೆಯೇ ಅವರು ಕೂಡ ಸಂಭ್ರಮಿಸಿದರು. ಬ್ರೋ ಬಂದ ಖುಷಿಯಲ್ಲಿ ಅವತ್ತು ನಾಗಣ್ಣ ವಿಶೇಷ ಅಡಿಗೆ ಮಾಡಿದ್ದರು. ಜೊತೆಗೊಂದು ಅಕ್ಕಿಯ ಪಾಯಸ ಕೂಡ! ನಾವು ಮೂವರು ಒಟ್ಟಿಗೆ ಸೇರಿದ್ದು ಅದು ಎರಡನೇ ಸಲವಾಗಿತ್ತು. ಅವರನ್ನು ಹೊಲಕ್ಕೆ ಮರುದಿನ ಕರೆದೊಯ್ಯುವ ಯೋಜನೆ ಇತ್ತು. ಇವತ್ತು ಮಳೆಯಿತ್ತಲ್ಲ, ಹೀಗಾಗಿ ಬೆಚ್ಚಗೆ ಮನೆಯಲ್ಲೇ ಕುಳಿತು ಹರಟೆ ಕೊಚ್ಚಿದೆವು. ಅವರಿಗೂ ಹೊಲದಲ್ಲಿ ಬೆಳೆಯುವ ವಿಧಾನದ ಕುರಿತು ಹೇಳಿದೆ.
ಅವರು ಮೊದಲ ಬಾರಿ ಮಲೆನಾಡಿನ ತೋಟದ ಮನೆಯಲ್ಲಿ ಅವತ್ತು ಮಲಗುವವರಿದ್ದರು. ಬಯಲು ಸೀಮೆಯವರಾದ ಅವರಿಗೆ ಇದೆಲ್ಲ ಹೊಸ ಅನುಭವ. ಹೊರಗೆ ಕೇಳುತ್ತಿದ್ದ ತರ ತರಹದ ಶಬ್ದಗಳು ಅವರನ್ನು ನಿದ್ದೆ ಕೆಡಿಸಿದ್ದವು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ನಾಗಣ್ಣ ರಾತ್ರಿ ಗೊರಕೆ ಹೊಡೆಯುತ್ತಿದ್ದರೆ ವಿನೋದ ಪಿಳಿ ಪಿಳಿ ಕಣ್ಣು ಬಿಟ್ಟು ಎಚ್ಚರವಾಗೆ ಇದ್ದರು. ನಾಗಣ್ಣನ ಗೊರಕೆ ನನ್ನನ್ನೂ ನಿದ್ದೆಯಿಂದ ಇಟ್ಟಿತ್ತಲ್ಲ ಹೊರಕ್ಕೆ!

ನಿದ್ದಿ ಬರವಲ್ದೇನ್ರಿ ವಿನೋದ್ ಅಂದೇ…
ಎಲ್ಲಿ ನಿದ್ದಿ ರೀ ಸರ್ರ ಈ ನಮೂನಿ ಸೌಂಡ್ ಬರ್ತಾವು ಎಲ್ಲಾ ಕಡಿ… ಅಷ್ಟೊತ್ತಿಗೆ ಹಂಚಿನ ಮೇಲೆ ದುಡು ದುಡು ಅಂತ ಶಬ್ದ! ಈಗ ಅವರು ಅಕ್ಷರಶಃ ಬೆವೆತೆ ಹೋದರು. ಸರ್ರ ಇದೇನ್ರಿ? ದೆವ್ವನೂ ಅದಾವೋ ಏನೋ ಇಲ್ಲೆ.. ಅಂದರು.

ನಾನು ನಕ್ಕು ಹೇಳಿದೆ.. ಒಂದು ದೆವ್ವ ಅಲ್ಲಿ ನೋಡಿ ಗೊರಕೆ ಹೊಡಿತಾ ಇದೆ, ಇನ್ನೊಂದು ನಿಮ್ಮ ಜೊತೆ ಮಾತಾಡ್ತಾ ಇದೆ ಅಂತ ನಕ್ಕೆ… ಒಂದು ದೊಡ್ಡ ಅಳಿಲು ಹಂಚಿನ ಮೇಲೆ ಓಡಿ ಆದ ಸದ್ದು ಅದು .. ದೆವ್ವ ಗಿವ್ವ ಏನೂ ಇಲ್ಲ ಮಕ್ಕೋರಿ ಸುಮ್ನ.. ಅಂತ ಗದರಿದೆ.
ನಾಗಣ್ಣ ಇದ್ಯಾವುದರ ಪರಿವೆಯೇ ಇಲ್ಲದೆ ಗೊರಗೊರ ಅಂತ ಸೌಂಡ್ ಸ್ಲೀಪ್ ನಲ್ಲಿದ್ದರು!

ಬೆಳಿಗ್ಗೆ ಎದ್ದು ಚಾ ಮಾಡಿ ವಿನೋದ್ ಅವರಿಗೂ ಕೊಟ್ಟೆ… ಅವರು ಬೇಗ ಏಳುತ್ತಿದ್ದರು. ನಾಗಣ್ಣ ಅವರನ್ನು ಎಬ್ಬಿಸಿ ಕರೆದೊಯ್ಯುವುದೆ ಒಂದು ಸಾಹಸ. ಆದರೆ ಒಮ್ಮೆ ಎದ್ದರೆಂದರೆ ಆಮೇಲೆ ಹೊಲದಿಂದ ವಾಪಸ್ಸು ಕರೆತರುವುದು ಇನ್ನೂ ದೊಡ್ಡ ಸಾಹಸ! ಅಂತೂ ಇಂತೂ ಎಲ್ಲರೂ ತಯಾರಾಗಿ ಹೊಲಕ್ಕೆ ಹೊದೆವೆನ್ನಿ!
ವಿನೋದ ಅವರದು ಬೆಳಿಗ್ಗೆ ಕೆಲವು ಮೀಟಿಂಗ್ ಇರುತ್ತಿದ್ದವು. ಅದನ್ನು ಹೊಲದಿಂದಲೇ ಅವರು ನಿರ್ವಹಿಸಿದರು. ಹಾಗೆ ಅಲ್ಲಿ ಇದ್ದುಕೊಂಡೇ ಆಫೀಸ್ ಕೆಲಸ ಮಾಡುತ್ತಾ ಕೃಷಿ ಮಾಡುವ ಸಡಗರವೆ ಬೇರೆ. ವಿನೋದ ಅದಕ್ಕೆ ನಾಂದಿ ಹಾಡಿದ್ದರು.

ಸುಮಾರು ಐವತ್ತು ಅಡಿಕೆ ಸಸಿಗಳನ್ನು ನೆಡಲು ಗುದ್ದು ಹೊಡೆಸಬೇಕಿತ್ತು. ಗುಡ್ಡಪ್ಪ ಅನ್ನುವ ಒಬ್ಬರನ್ನು ರಾಮಚಂದ್ರ ಮಾವ ಪರಿಚಯಿಸಿದ್ದರು. ಸಣ್ಣ ಪುಟ್ಟ ಕೆಲಸ ಇದ್ರೆ ಮಡಿ ಕೊಡ್ತಾ ಅಂತ ಹೇಳಿದ್ದರು. ಅವರಿಗೆ ಫೋನ್ ಮಾಡಿ ಹೊಲಕ್ಕೆ ಕರೆಸಿದೆವು.

ನಮ್ಮ ಹೊಲದಲ್ಲಿ ಅಷ್ಟೆಲ್ಲ ಮಳೆ ಬಿದ್ದಿರಲಿಲ್ಲವಾದ್ದರಿಂದ ಗುದ್ದು ಹೊಡೆಯಲು ಹದವಾಗಿತ್ತು. ಮಾಡಿ ಕೊಡ್ತೀನಿ ತೊಗೋರಿ ಅಂತ ಗುಡ್ಡಪ್ಪ ಆಶ್ವಾಸನೆ ಕೊಟ್ಟರು. ಗುದ್ದು (ಗುಂಡಿ) ಹೊಡೆಯಲು ಒಂದು ಯಂತ್ರ ಇದೆಯಂತಲೂ ಅದರಲ್ಲೇ ಹೊಡಿಯುವೆ ಅಂತ ಹೇಳಿದರು. ನನಗೆ ಈ ತರಹದ ಯಂತ್ರಗಳು ಇರುವ ವಿಷಯ ತಿಳಿದು ಖುಷಿಯಾಯ್ತು. ಆ ಯಂತ್ರದಲ್ಲಿ ಯಾವುದೇ ತರಹದ ಗುಂಡಿ ಮಾಡಬಹುದಿತ್ತು. ಅಡಿಕೆಗಾಗಿ ಪ್ರತಿ ಒಂಬತ್ತು ಫೀಟ್ ಅಂತರದಲ್ಲಿ ಒಂದೊಂದು ಗುಂಡಿ ಬೇಕಿತ್ತು. ಆಮೇಲೆ ನಡುವೆ ೪.೫ ಫೀಟ್ ಅಂತರದಲ್ಲಿ ಬಾಳೆ ಹಾಕಬೇಕಿತ್ತು. ಅವರು ಯಂತ್ರವನ್ನು ತಂದು ಎರಡೇ ಗಂಟೆಗಳಲ್ಲಿ ಬೇಕಾದ ಗುಂಡಿಗಳನ್ನು ಮಾಡಿ ಹೋದರು.

ನೈಸರ್ಗಕ ಕೃಷಿ ವಿಧಾನದಲ್ಲಿ ಆಳವಾದ ಗುಂಡಿಗಳು ನಿಷಿದ್ಧ. ಸಸಿಯ ಬೇರು ಮುಳುಗುವಷ್ಟು ಆಳಕ್ಕೆ ಗುದ್ದು ತೆಗೆದರೆ ಸಾಕು ಎಂಬುದು ನಾನು ತಿಳಿದ ಸತ್ಯವಾಗಿತ್ತು. ಗುಡ್ಡಪ್ಪ ಹೊಡೆದ ಗುದ್ದುಗಳು ತುಂಬಾ ಆಳಕ್ಕೆ ಇದ್ದವಾದರೂ ಅವುಗಳಲ್ಲಿ ಹೊಲದಲ್ಲೇ ಇದ್ದ ಸಾವಯವ ತ್ಯಾಜ್ಯಗಳಾದ ಎಲೆ, ಹುಲ್ಲು ಹಾಗೂ ಸ್ವಲ್ಪ ಮಣ್ಣನ್ನು ಸೇರಿಸಿ ಅರ್ಧಕ್ಕೆ ತುಂಬಿ ಸಸಿಗಳನ್ನು ನೆಟ್ಟೆವು. ಅದು ಮತ್ತೊಂದು ಸಡಗರದ ಸಮಯ! ಮಳೆಗಾಲ ಆಗಿದ್ದರಿಂದ ಸಧ್ಯಕ್ಕೆ ಅವುಗಳಿಗೆ ನೀರನ್ನು ಕೊಡುವ ತಲೆ ಬಿಸಿ ಇರಲಿಲ್ಲ. ಮುಂದೆ ನೀರಿನ ವ್ಯವಸ್ಥೆ ಮಾಡೋಣ ಅಂತ ಅಂದುಕೊಂಡೆ.

ಅಷ್ಟೊತ್ತಿಗೆ ಗೌಡರು ಬಂದರು. ಎಷ್ಟು ಗಿಡ ಹಚ್ಚೀರಿ ಅಂತ ವಿಚಾರಿಸಿದ ಅವರು ಐವತ್ತು ಗಿಡದಾಗ ಎನಾಕ್ಕೈತಿ ರೀ .. ೬೦೦ ಗಿಡ ಅರೆ ಹಚ್ಚಬೇಕು, ಅಂದರ ಒಂದ್ ಚೊಲೋ ಇನ್ಕಮ್ ಬರತೈತಿ. ನಾಲ್ಕು ವರ್ಷ ಹಿಂದ ಹಚ್ಚಿದ್ರ ಇಷ್ಟೊತ್ತಿಗೆ ಇಪ್ಪತ್ತ್ ಲಕ್ಷ ಎಣಸ್ತಿದ್ರಿ ಅಂತ ಮತ್ತೆ ಭೂತ ಕಾಲಕ್ಕೆ ಹೋದರು. ನಾನು ಇನ್ನೂ ನೈಸರ್ಗಿಕ ಕೃಷಿ ಕಲಿಯುತ್ತಿದ್ದ ಹಸುಳೆ. ನನಗೆ ಮೊದಲು ಚಿಕ್ಕದಾಗಿ ಮಾಡಿ ನೋಡಬೇಕಿತ್ತು. ಯಾರು ಏನೇ ಹೇಳಿದರೂ ನನಗೆ ಆತ್ಮ ವಿಶ್ವಾಸ ಬರುವವರೆಗೂ ನಾನು ದೊಡ್ಡದಾಗಿ ದುಡ್ಡು ಹಾಕಿ ಕೈ ಸುಟ್ಟುಕೊಳ್ಳುವ ಯಾವುದೇ ಆಲೋಚನೆ ನನಗಿರಲಿಲ್ಲ! ಗೌಡರಿಗೆ ಹೂಂ ಗುಟ್ಟಿ … ನೀವು ಎಷ್ಟು ಅಡಿಕಿ ಸಸಿ ಹಾಕೀರಿ ಅಂತ ಕೇಳಿದೆ. ಅವರು ತಮ್ಮ ಖಾಲಿ ಹೊಲವನ್ನೊಮ್ಮೆ ದಿಟ್ಟಿಸಿದರು. ತಾವು ಇನ್ನೂ ತೋಟವನ್ನೇ ಮಾಡಿರಲಿಲ್ಲ. ಅಷ್ಟಾದರೂ ನನಗೆ ಹೇಳಿದ್ದರಲ್ಲ! ಅವರ ಧೈರ್ಯ ಮೆಚ್ಚಬೇಕು. ನಾನು ಹಾಗೆ ಕೇಳುತ್ತಲೇ ಮಾತನ್ನು ಬೇರೆಡೆಗೆ ಹೊರಳಿಸಿ ಅಲ್ಲಿಂದ ಕಾಲು ಕಿತ್ತರು.

ನನಗೆ ಹೊಲದಲ್ಲಿ ಒಂದು ಬೇವಿನ ಮರ ಇರಬೇಕು ಎಂಬ ಆಸೆ. ಬೇವಿನ ಸಸಿ ತಂದಿಟ್ಟುಕೊಂಡಿದ್ದೆ. ಅದನ್ನು ವಿನೋದ್ ಅವರ ಕೈಯಲ್ಲಿ ಅವತ್ತು ನೆಡಿಸಿದೆವು. ಜೀವಾಮೃತ ಈಗಾಗಲೇ ತಯಾರಾಗಿತ್ತು. ಅದನ್ನೂ ಗಿಡಗಳಿಗೆಲ್ಲ ಸುರಿದೆವು. ಆ ಐವತ್ತು ಗಿಡಗಳಲ್ಲಿ ಎಷ್ಟನ್ನು ಉಳಿಸಿ ಬೆಳೆಸುತ್ತೇವೆ ಎಂಬುದರ ಮೇಲೆ ನನ್ನ ಮುಂದಿನ ಯೋಜನೆ ನಿರ್ಧರವಾಗಬೇಕಿತ್ತು. ಗಿಡ ನೆಡುವುದೊಂದೇ ಅಲ್ಲ ಅದನ್ನು ಪೋಷಿಸುವುದು ತುಂಬಾ ಮುಖ್ಯ.
ಮಿಕ್ಕ ಮೂರುವರೆ ಎಕರೆ ಜಗದಲ್ಲಿ ಏನು ಮಾಡುವುದು ಎಂಬುದು ಇನ್ನೂ ನಿರ್ಧಾರ ಆಗಿರಲಿಲ್ಲ.

(ಮುಂದುವರಿಯುವುದು)