ಆ ತರಗತಿಯಲ್ಲಿ ಬೋಧಿಸಬೇಕಾದ ಪಾಠವನ್ನು ಅಂದಿನ ಮಟ್ಟಕ್ಕೆ ಮುಂದೂಡಿ ಇಂಥ ಅದೆಷ್ಟು ಮಕ್ಕಳು ಹೀಗೆ ಹಿಂಸೆ ಅನುಭವಿಸುತ್ತಿದ್ದಾರೋ ಅನಿಸಿ ನಡೆದ ಎಲ್ಲವನ್ನೂ ಮತ್ತಷ್ಟು ನನ್ನ ಆ ದಿನಗಳ ಉದಾಹರಣೆ ಕೊಟ್ಟು, ಆ ದಿನಗಳಲ್ಲಿ ಆಗುವ ಬದಲಾವಣೆಗಳೇನು, ಹೇಗೆ ಸಿದ್ಧವಿರಬೇಕು, ಸಮಸ್ಯೆಗಳಾದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದೆಲ್ಲ ತಿಳಿಸಿ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಿ ಎಂದಿದ್ದೆ. ಅಷ್ಟು ದಿನ ಗಣಿತ ಪಾಠ ಮಾಡುತ್ತಿದ್ದ ನನ್ನನ್ನು ಕಿಲೋಮೀಟರು ದೂರದಲ್ಲಿಟ್ಟು ಮಾತನಾಡಿಸುತ್ತಿದ್ದ ಮಕ್ಕಳೆಲ್ಲ ಬಂದು ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಲು ಶುರುವಿಟ್ಟರು.
“ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ
ಅದೊಂದು ದಿನ ಹತ್ತನೇ ತರಗತಿ ಮುಗಿಸಿ 9ನೇ ತರಗತಿಯತ್ತ ಕಾರಿಡಾರ್ನಲ್ಲಿ ನಡೆದು ಹೋಗುತ್ತಿರುವಾಗ ಅಲ್ಲಲ್ಲಿ ನೆಲದ ಮೇಲೆ ಮತ್ತು ಗೋಡೆಯ ಮೇಲೆ ಕೆಂಪು ಚಿತ್ತಾರ ಮೂಡಿರುವುದನ್ನು ಗಮನಿಸಿದೆ. ಹೆಣ್ಣುಮಕ್ಕಳ ಶಾಲೆಯಲ್ಲಿ ಇವೆಲ್ಲ ಸಹಜ ಎಂದುಕೊಳ್ಳುತ್ತಾ ತರಗತಿಯೊಳಗೆ ಹೋದವಳು ಈ ವಿಷಯವನ್ನು ಎಲ್ಲರ ಮುಂದೆ ಚರ್ಚಿಸುವುದು ಸರಿಯಲ್ಲ ಅನಿಸಿ ತರಗತಿಯ ಲೀಡರ್ ಅನ್ನು ಕರೆದು ವಿಚಾರಿಸಿದೆ. ಕಳೆದ ಅವಧಿಯಲ್ಲಿ ಅವರು ಘಟಕ ಪರೀಕ್ಷೆ ಬರೆಯಲು ತರಗತಿಯ ಹೊರಗೆ ಕುಳಿತಿದ್ದು ಆ ಕಲೆ ಇರುವ ಜಾಗದಲ್ಲಿ ಕುಳಿತಿದ್ದ ಹುಡುಗಿ ಯಾರೆಂದು ಹೇಳಿದಳು. ಸ್ವಲ್ಪ ಹೊತ್ತಿನ ಬಳಿಕ ಆಕೆಯನ್ನ ಈ ವಿಷಯವಾಗಿ ವಿಚಾರಿಸಿದೆ. ಗಾಬರಿಗೊಂಡು ಅಳಲು ಆರಂಭಿಸಿಬಿಟ್ಟಳು. ನನಗೂ ಸ್ವಲ್ಪ ಕಸಿವಿಸಿ ಆದರೂ ಕೇಳಬಾರದಿತ್ತೇನೋ ಅಂದೆನಿಸಿತು. ಆದರೆ ಅವಳ ಶಿಕ್ಷಕಿಯಾಗಿ ಆಕೆಯ ಸಮಸ್ಯೆಯ ಬಗ್ಗೆ ಕೇಳದೆ ಹೋದರೆ ನಾನು ಮಾಡುವ ಪಾಠವು ವ್ಯರ್ಥವೇ ಸರಿ ಅನಿಸಿ ಆಕೆಯನ್ನ ಪಕ್ಕಕ್ಕೆ ಕರೆದುಕೊಂಡು, ನಿನಗೊಂದು ಕಥೆ ಹೇಳ್ತೀನಿ ಕೇಳು ಎಂದು ಒಂದು ಕಥೆ ಹೇಳಲು ಶುರು ಮಾಡಿದೆ.
ನಾನು ನಿನ್ನ ಹಾಗೆ ಪ್ರೌಢಶಾಲೆಯಲ್ಲಿ ಓದುವಾಗ ಮುಟ್ಟಿನ ದಿನಗಳಲ್ಲಿ ಬಹಳ ಮುಜುಗರ ಪಟ್ಟುಕೊಳ್ತಾಯಿದ್ದೆ. ಒಂದು ಸಲ ನಮ್ಮ ಗಣಿತ ಮಾಸ್ಟರ್ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಸ್ನೇಹಿತರನ್ನು ಬೋರ್ಡ್ ಮೇಲೆ ಲೆಕ್ಕ ಬಿಡಿಸಲು ಕರೆದರು. ಆಕೆ ಲೆಕ್ಕ ಬಿಡಿಸುವಾಗ ಅವಳ ಲಂಗದ ಹಿಂಭಾಗದಲ್ಲಿ ಆಗಿದ್ದ ಕೆಂಪು ಕಲೆಗಳನ್ನು ಕಂಡ ನಾವೆಲ್ಲ ನಗಲು ಆರಂಭಿಸಿಬಿಟ್ಟೆವು. ಮೇಷ್ಟ್ರಿಗೂ ಹೇಳಲು ಮುಜುಗರ ಅನಿಸಿ ಸುಮ್ಮನಿದ್ದರು. ಸ್ವಲ್ಪ ಹೊತ್ತು ಅವಳಿಗೆ ನಾವು ಯಾಕೆ ನಗುತ್ತಿದ್ದೇವೆ ಅನ್ನೋದು ಗೊತ್ತಾಗಲೇ ಇಲ್ಲ. ಆಗ ನಾನು ಸನ್ನೆ ಮಾಡಿ ಅವಳ ಲಂಗದ ಕಡೆ ತೋರಿಸಿದೆ. ತಕ್ಷಣ ಅವಳು ತನ್ನ ಲಂಗವನ್ನು ಮುಂದಕ್ಕೆ ಎಳೆದುಕೊಂಡು ನೋಡಿದಳು. ಅಲ್ಲಿದ್ದ ಕೆಂಪು ಕಲೆ ನೋಡಿ ಅವಳಿಗೆ ಗಾಬರಿಯಾಗಲಿಲ್ಲ, ನಾಚಿಕೆ ಪಡಲಿಲ್ಲ, ಅಳಲಿಲ್ಲ. ಬದಲಾಗಿ ಕೋಪ ಮಾಡಿಕೊಂಡಳು ಎನ್ನುವಾಗ ನನ್ನ ಮುಂದೆ ಕತೆ ಕೇಳುತ್ತಾ ನಿಂತಿದ್ದ ಹುಡುಗಿಯ ಮುಖದಲ್ಲಿ ಆಶ್ಚರ್ಯ. ಮುಂದುವರೆಸಿದೆ. ಅವಳು “ನೀವೆಲ್ಲಾ ಹುಡುಗೀರು ತಾನೇ. ಒಂದು ಹುಡುಗಿಗೆ ಹೀಗಾದಾಗ ಸಹಾಯ ಮಾಡೋದು ಬಿಟ್ಟು ನಗ್ತಾ ಇದ್ದೀರಾ ಶೇಮ್ ಆನ್ ಯು” ಎಂದು ನಮ್ಮೆಲ್ಲರನ್ನು ಬೈದು ವಾಶ್ ರೂಮಿನತ್ತ ಓಡಿ ಹೋದಳು. ಆಗ ನನಗೆ ಬಹಳಾ ಬೇಸರವಾಗಿ ನನ್ನ ಸ್ನೇಹಿತೆಗೆ ಕ್ಷಮೆ ಕೇಳಿದ್ದೆ. ಎಂಬ ಕಥೆಯೊಂದನ್ನ ಹೇಳಿ, ಮುಟ್ಟು ಸಹಜ ಕ್ರಿಯೆ. ಅದು ಪ್ರತಿ ಹೆಣ್ಣಿನ ಜೀವನದ ಒಂದು ಭಾಗ. ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತು. ಇಂಥ ಸಮಯದಲ್ಲಿ ಒಮ್ಮೊಮ್ಮೆ ಹೀಗೆ ಕಲೆಯಾಗೋದು ಕೂಡ ಸಹಜ. ಹಾಗಾಗಿ ಅದೇನೋ ಮಹಾಪರಾಧ ಅನ್ನೋ ಹಾಗೆ ನಾವ್ಯಾಋೂ ಕೀಳರಿಮೆ ಬೆಳೆಸಿಕೊಳ್ಳೋ ಅವಶ್ಯಕತೆ ಇಲ್ಲ ಮಗಳೇ ಅನ್ನುವ ಹೊತ್ತಿಗೆಲ್ಲ ಬಾಡಿದ್ದ ಮುಖ ದಾಸವಾಳದಂತೆ ಅರಳಿತ್ತು.
ಇನ್ನಷ್ಟು ಹತ್ತಿರ ಬಂದು ಸಾರೀ ಮಿಸ್. ಅದು ನಾನೆ ಮಾಡಿರೋ ಕಲೆ. ಪರೀಕ್ಷೆ ಬರೆವಾಗ ಎದ್ದು ಹೋದ್ರೆ ಎಲ್ಲರೂ ನೋಡ್ತಾರೆ ನಗ್ತಾರೆ ಅಂತ ಎದ್ದು ಹೋಗ್ಲಿಲ್ಲ. ಎಲ್ಲರೂ ಹೋದಾಗ ಮೇಲೆದ್ದೆ. ಆದ್ರೆ ಆಕಡೆ ಇಂದ sir ಬರೋದು ನೋಡಿ ಗೋಡೆಗೆ ಒರಗಿ ನಿಂತೇ ಆಗ ಗೋಡೆಗೂ ಕಲೆಯಾಗಿ ಹೋಗಿದೆ. ಮುಟ್ಟಿನ ದಿನಾಂಕ ಇನ್ನೂ ದೂರ ಇದೆ ಯಾಕಾಯಿತೋ ಗೊತ್ತಿಲ್ಲ. ಯಾರ ಬಳಿಯೂ ಪಾಡ್ ಇರಲಿಲ್ಲ. ಮತ್ತೆ ಶಾಲೆಯಲ್ಲೂ ಶುಚಿ ಪ್ಯಾಡ್ ಬರೋದು ನಿಂತು ಹೋಗಿದೆ. ಕೊನೆಗೆ ಲಂಚ್ ಬ್ಯಾಗಲ್ಲಿದ್ದ ಸಣ್ಣ ಟವೆಲ್ ಅನ್ನೇ ಉಪಯೋಗಿಸಿಕೊಂಡೆ ಎನ್ನುವಾಗ ನನ್ನ ಕರುಳು ಹಿಂಡಿದಂತಾಯಿತು. ಸಮಸ್ಯೆ ಹೇಳಿಕೊಳ್ಳುತ್ತಾ ಸ್ವಲ್ಪ ಹಗುರಾದ ಅವಳಿಗೆ ಸ್ಯಾನಿಟರಿ ಪ್ಯಾಡ್ ತರಿಸಿಕೊಟ್ಟೆ. ಅದಾದಮೇಲೆ ಆಕೆ ತಾನೇ ಹೋಗಿ ಒಂದು ಬಟ್ಟೆ ತಂದು ಅವಳು ಕೂತಿದ್ದ ಜಾಗವನ್ನು ಮತ್ತು ಗೋಡೆಯನ್ನು ಶುಚಿ ಮಾಡಿ ಅದೆಷ್ಟು ಆತ್ಮವಿಶ್ವಾಸದಲ್ಲಿ ಹೋಗಿ ತರಗತಿಯೊಳಗೆ ಕುಳಿತುಕೊಳ್ಳುವಾಗ ನನಗದೇನೋ ಒಂದು ನಮೂನೆಯ ಹೆಮ್ಮೆ ಅನಿಸಿತ್ತು.
ಆ ತರಗತಿಯಲ್ಲಿ ಬೋಧಿಸಬೇಕಾದ ಪಾಠವನ್ನು ಅಂದಿನ ಮಟ್ಟಕ್ಕೆ ಮುಂದೂಡಿ ಇಂಥ ಅದೆಷ್ಟು ಮಕ್ಕಳು ಹೀಗೆ ಹಿಂಸೆ ಅನುಭವಿಸುತ್ತಿದ್ದಾರೋ ಅನಿಸಿ ನಡೆದ ಎಲ್ಲವನ್ನೂ ಮತ್ತಷ್ಟು ನನ್ನ ಆ ದಿನಗಳ ಉದಾಹರಣೆ ಕೊಟ್ಟು, ಆ ದಿನಗಳಲ್ಲಿ ಆಗುವ ಬದಲಾವಣೆಗಳೇನು, ಹೇಗೆ ಸಿದ್ಧವಿರಬೇಕು, ಸಮಸ್ಯೆಗಳಾದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದೆಲ್ಲ ತಿಳಿಸಿ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಿ ಎಂದಿದ್ದೆ.
ಅಷ್ಟು ದಿನ ಗಣಿತ ಪಾಠ ಮಾಡುತ್ತಿದ್ದ ನನ್ನನ್ನು ಕಿಲೋಮೀಟರು ದೂರದಲ್ಲಿಟ್ಟು ಮಾತನಾಡಿಸುತ್ತಿದ್ದ ಮಕ್ಕಳೆಲ್ಲ ಬಂದು ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಲು ಶುರುವಿಟ್ಟರು.
ಅದರಲ್ಲೊಬ್ಬಾಕೆ ನನ್ನ ಕೊಠಡಿಗೆ ಬಂದವಳು ತನ್ನ ಸಮಸ್ಯೆಯನ್ನು ಹೇಳದೆ ಹೆದರುತ್ತ ನಿಂತಿದ್ದಳು. ನಾನೆ ಆಕೆಯ ಕೊರಳು ಬಳಸಿ ಅಕ್ಕನಂತೆ ಸ್ವಲ್ಪ ಅಕ್ಕರೆಯಿಂದ ಮಾತನಾಡಿಸಿದಾಗ ತನ್ನ ಈ ವಿಚಿತ್ರ ಸಮಸ್ಯೆಯೊಂದನ್ನು ಮುಂದಿಟ್ಟಳು.
ಆಕೆ ಎಂಟನೇ ತರಗತಿಯಲ್ಲಿ ಋತುಮತಿಯಾಗಿದ್ದು. ಅಲ್ಲಿಂದ ಇಲ್ಲಿಯವರೆಗೂ ಎಲ್ಲಿ ಲಂಗಕ್ಕೆ ಕಲೆಯಾಗಿಬಿಡುವುದೋ, ಎಲ್ಲಿ ಯಾರಾದರೂ ನೋಡಿ ನಕ್ಕುಬಿಡಬಹುದೊ ಎಂದು ಪ್ರತಿನಿತ್ಯವೂ ಅಂದರೆ ತಿಂಗಳ ಮೂವತ್ತೂ ದಿನಗಳು ಪ್ಯಾಡ್ ಬಳಸುತ್ತಿರುವುದಾಗಿ ಮತ್ತು ಎರೆಡೆರಡು ಮೂರು ಮೂರು ಒಳಉಡುಪು ಧರಿಸುತ್ತಿರುವುದಾಗಿ ಮತ್ತು ಇದರಿಂದ ಸೋಂಕು ಉಂಟಾಗಿ ನೋವು ಅನುಭವಿಸುತ್ತಿದ್ದರು ಈ ಸಮಸ್ಯೆಯಿಂದ ಹೊರ ಬರಲು ಆಗುತ್ತಿಲ್ಲ ಎಂಬುದನ್ನು ಹೇಳಿಕೊಂಡಳು. ಆಕೆಯ ಸಮಸ್ಯೆ ಏನೆಂದರೆ ದಿನಾಂಕ ತಪ್ಪಿ ಏನಾದರೂ ಮುಟ್ಟಾಗಿ, ಕಲೆಯಾಗಿ ಅವಮಾನವಾಗಿಬಿಟ್ಟರೆ ಎನ್ನುವ ಆತಂಕ. ಆಕೆಗೆ ಗೊತ್ತು ತಿಂಗಳಿಗೊಮ್ಮೆ ಆ ದಿನಾಂಕ ಹತ್ತಿರ ಬಂದಾಗ ಮಾತ್ರ ಹುಷಾರಾಗಿದ್ದರೆ ಸಾಕು ಎಂಬುದು. ಆದರೂ ಪ್ಯಾಡ್ ಇಲ್ಲದೇ ಹೊರಗೆ ಬರಲಾಗುತ್ತಿಲ್ಲ. ಹಾಗೇನಾದರೂ ಹೊರಗೆ ಬಂದುಬಿಟ್ಟರೆ ಆತಂಕದಲ್ಲೇ ಸಾಯುವಂತೆ ಆಗುತ್ತದೆ ಎಂದು ಹೇಳಿದಳು. ಈ ಸಮಸ್ಯೆಗೆ ವರ್ಷ ತುಂಬಿ ಮರವಾಗಿ ಬೆಳೆದಂತೆ ಕಾಣಿಸುತ್ತಿತ್ತು. ಹಾಗಾಗಿ ನಾನು ಸಾಕಷ್ಟು ಹೇಳಿದೆ. ಆದರೂ ಅದೇಕೋ ಅವಳ ಮನಸ್ಸು ಒಪ್ಪಿದಂತೆ ಅನಿಸದೆ ಆಕೆಯ ಪೋಷಕರನ್ನು ಕರೆಸಿ ಮಾತನಾಡಿ ಆಸ್ಪತ್ರೆಯಲ್ಲಿ ಕೌನ್ಸೆಲ್ಲಿಂಗ್ ಕೊಡಿಸಿದ ಮೇಲೆ ಆಕೆ ಎಲ್ಲರಂತೆ ಲವಲವಿಕೆಯಿಂದ ಇದ್ದಾಳೆ.
ತರಗತಿಯಲ್ಲಿ ಮಕ್ಕಳೊಂದಿಗೆ ಸ್ನೇಹಿತೆಯಾಗಿ, ಅಕ್ಕನಾಗಿ, ಅಮ್ಮನಾಗಿ ಒಂದಷ್ಟು ಹರಟಿದರೂ ಸಾಕು ಎಷ್ಟೋ ಸಮಸ್ಯೆಗಳೂ ಬಾಯಿ ತೆರೆಯುತ್ತವೆ. ಸಮಸ್ಯೆ ಒಮ್ಮೆ ತನ್ನನ್ನು ತಾನು ಗುರುತಿಸಿಕೊಂಡರೆ ಪರಿಹಾರ ಸಿಕ್ಕಂತೆಯೇ. ಈಗೀಗ ಮಕ್ಕಳ ಇಂಥ ಸಮಸ್ಯೆಗಳಿಗೆ ಪರಿಹಾರವಾಗುತ್ತಿರುವುದು ನನ್ನೊಳಗಿನ ಆತ್ಮಕ್ಕೊಂದು ತೃಪ್ತಿ ತಂದುಕೊಟ್ಟಿದೆ.
ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ನಾವು ಊಹಿಸಲಾಗದ ಅದೆಷ್ಟೋ ಸಮಸ್ಯೆಗಳಿರುತ್ತವೆ. ಮುಟ್ಟಿನ ಸಮಯದಲ್ಲಿ ಸ್ವಚ್ಛವಾಗಿರಲು ಬಾರದೆ ಸೋಂಕಿಗೆ ಒಳಗಾಗಿರುವುದು, ಆ ಭಾಗದ ಅನಗತ್ಯ ಕೂದಲನ್ನು ತೆಗೆಯಲು ಬಾರದೆ ಅದರಿಂದ ತುರಿಕೆ, ಗಾಯಗಳಾಗಿ ಮತ್ತೊಂದು ಸಮಸ್ಯೆ ತಂದಿಟ್ಟುಕೊಳ್ಳುವುದು, ಭಯ ಆತಂಕ, ಖಿನ್ನತೆ ಇತ್ಯಾದಿ. ಇಂತವುಗಳನ್ನೆಲ್ಲ ಎದುರಿಸಬೇಕೆಂದರೆ ಪೋಷಕರ ಪಾತ್ರ ಬಹು ದೊಡ್ಡದು. ಹೆಣ್ಣುಮಕ್ಕಳಿಗೆ ತಾಯಿಯಾದವಳು, ಗಂಡುಮಕ್ಕಳಿಗೆ ತಂದೆಯಾದವನು ಮೊದಲೇ ಈ ಬಗೆಗಿನ ಮಾಹಿತಿ ನೀಡಿದ್ದರೆ ಎಷ್ಟೋ ಸಮಸ್ಯೆಗಳು ಕಡಿಮೆಯಾಗುತ್ತದೆ.
ಇತ್ತೀಚೆಗೆ ನಿರ್ಮಾಣಗೊಂಡಿರುವ ಅಸಹಜ ಸ್ಥಿತಿಯೊಂದು ಮಕ್ಕಳನ್ನಿರಲಿ ನಮ್ಮನ್ನೂ ಚಿಂತೆಗೀಡು ಮಾಡುತ್ತಿದೆ. ತಮ್ಮ ದೇಹದಲ್ಲಾಗುವ ಬದಲಾವಣೆಗಳನ್ನ ಗುರುತಿಸಲು ಬಾರದೆ ಇರುವಂತ ವಯಸ್ಸಿನಲ್ಲಿ ಅಂದರೆ ಹೆಣ್ಣುಮಕ್ಕಳು ತಮ್ಮ ಒಂಬತ್ತನೇ ಅಥವಾ ಹತ್ತನೇ ವಯಸ್ಸಿನಲ್ಲೇ ಋತುಮತಿಯಾಗುತ್ತಿರುವುದು. ಬಾಲ್ಯ ಒಂಬತ್ತು ವರ್ಷಕ್ಕೆ ಕೊನೆ ಉಸಿರಳೆಯುತ್ತಿರುವುದು.
ಈ ಬಗ್ಗೆ ಪೋಷಕರಿಗೂ ಗೊಂದಲ. ಮಗಳಿನ್ನೂ ಹನ್ನೆರಡಾಗಿಲ್ಲ. ಆಕೆ ಇನ್ನೂ ಪುಟ್ಟ ಬಾಲೆ ಎಂದು ಆಕೆಯೊಂದಿಗೆ ಈ ವಿಷಯವಾಗಿ ಚರ್ಚಿಸದೆ ಇರುವುದು, ಅವರನ್ನು ಮಾನಸಿಕವಾಗಿ ತಯಾರು ಮಾಡದೆ ಇರುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಮಕ್ಕಳ ದೈಹಿಕ ಬದಲಾವಣೆ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡುವುದು ತಾಯಿಯ ಬಹು ದೊಡ್ಡ ಜವಾಬ್ದಾರಿ. ಕೆಂಪು ಕೆಟ್ಟದ್ದಲ್ಲ ಅನ್ನುವ ಮನವರಿಕೆ ಮಾಡಿಕೊಟ್ಟರೆ ಮಕ್ಕಳಿಗೆ ಒಂದಷ್ಟರ ಮಟ್ಟಿಗೆ ಆತಂಕ, ಖಿನ್ನತೆಗಳಿಂದ ತೊಂದರೆ ತಪ್ಪುತ್ತದೆ.
ಮಾಲತಿ ಶಶಿಧರ್ ಚಾಮರಾಜನಗರದವರು. ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರೆಯುವುದು ಮತ್ತು ಓದುವುದು ಇವರ ಹವ್ಯಾಸಗಳು