Advertisement
ಕೆಟಿಎಸ್ ಜೊತೆ ನನ್ನ ಒಡನಾಟ

ಕೆಟಿಎಸ್ ಜೊತೆ ನನ್ನ ಒಡನಾಟ

ಅವರು ಅಷ್ಟು ದೊಡ್ಡ ಸಾಹಿತಿ ಆಗಿದ್ದರೂ ಒಂದಷ್ಟು ಹಮ್ಮು ಬಿಮ್ಮಿಲ್ಲದೆ, ಫೋಟೋಕ್ಕೆ ನಿಂತುಕೊಂಡರು. ಹಾಗೆ ಪೇಯಿಂಟಿಂಗ್ ಬಗ್ಗೆ ಅವರು ಕೇಳಿದ ಪ್ರಶ್ನೆಗಳು ಅವರು ಆ ವಯಸ್ಸಿನಲ್ಲೂ ತಿಳಿದುಕೊಳ್ಳುವ ಹಂಬಲ ಮತ್ತು ಗೊತ್ತಿಲ್ಲದನ್ನು ಕೇಳಿ ತಿಳಿದುಕೊಳ್ಳುವ ಅವರ ಪ್ರಾಮಾಣಿಕತೆ ಬಗ್ಗೆ ನನಗೆ ದಿಗ್ಭ್ರಮೆ ಹುಟ್ಟಿಸಿತ್ತು. ಹೀಗೆ ತೇಜಸ್ವಿಗೆ ಯಾರೋ ಹೇಳಿದ್ದರಂತೆ ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದೆ ಎಂದು. ತೇಜಸ್ವಿಗೆ ಅದೇನೋ ಕುತೂಹಲ. ಒಂದು ದಿನ ನನ್ನ ಕರೆದು ‘ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದಂತಲ್ಲಾ..? ಕುಡಿಯೋಣ್ವಾ’ ಎಂದರು. ನನಗೋ ನಗು.
ಕೆ.
ಟಿ. ಶಿವಪ್ರಸಾದ್  ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

‘ರೇಖೆ ಎಳೆಯಲು ಕಷ್ಟವಾಗುತ್ತಿದೆ. ತುಂಬಾ ನೆನಪಾಗುತ್ತಾರೆ ಕಣೋ ತೇಜಸ್ವಿ. ಏನೋ ಅವನ ರೈಟಿಂಗ್. ಇದು ಅವನು ಮೊದಲು ಬರೆದಿದ್ದು. ಅವನ ಬರವಣಿಗೆ ಅದ್ಭುತ. ಇವನ ಬರವಣಿಗೆಯಲ್ಲ ಟೈಮ್ ಮತ್ತು ಸ್ಪೇಸ್ ಎಲ್ಲೆಡೆ ಇದೆ. ಎಲ್ಲವೂ ದುಃಖ ಅನುಸಂಧಾನ ಮೀಮಾಂಸೆಯ ಬರವಣಿಗೆ.  ಹೀಗೆ ಯಾರೂ ಬರೆಯಲು ಸಾಧ್ಯವಿಲ್ಲ. ನನ್ನ ಪ್ರಕಾರ ಹೆಮ್ಮಿಂಗ್ ವೇ ಗಿಂತ ಗ್ರೇಟ್ ಕಣೋ ಅವನು, ಅವನ ಹಾಗೆ ಯಾರು ಬರೆಯಲು ಸಾಧ್ಯವಿಲ್ಲ’ ಎಂದರು.

‘ಹೌದಾ..!’ ಎಂದು ಅಚ್ಚರಿಯಿಂದ ಕೇಳಿದೆ.

‘ನಮ್ಮ ಕುವೆಂಪು ಶಿಷ್ಯರಿಗೆ ಬೇಜಾರಾದರೂ ಪರವಾಗಿಲ್ಲ ತೇಜಸ್ವಿ ಕುವೆಂಪುಗಿಂತ ದೊಡ್ಡ ರೈಟರ್ ಕಣಯ್ಯ’ ಎಂದರು.

ಕುವೆಂಪು ಅವರನ್ನು ಜಾಸ್ತಿ ಓದಿಕೊಳ್ಳದ ನಾನು ಹೌದು ಹೌದೆಂದು ತಲೆ ಆಡಿಸಿದೆ.

‘ಆದ್ರೂ ಆ ಕುವೆಂಪು ಎಂಥಾ ದೊಡ್ಡ ಮನುಷ್ಯನೆಂದು ಹೇಳ್ತಿನಿ ಕೇಳು ಒಂದು ಘಟನೆ’

‘ನನಗಾಗ ಕ್ಯಾಮೆರಾ ಹುಚ್ಚು ಹಿಡಿದಿತ್ತು. ಪೇಯಿಂಟಿಂಗ್ ಕೂಡ ಮಾಡುತ್ತಿದ್ದೆ. ತೇಜಸ್ವಿ ಆಗಲೆ ನನಗೆ ಹತ್ತಿರವಾಗಿದ್ದ. ಕುವೆಂಪು ಚೆನ್ನಾಗಿ ಗೊತ್ತಿತ್ತಾದರೂ ಒಡನಾಟ ಕಡಿಮೆ ಇತ್ತು. ಒಂದು ದಿನ ತೇಜಸ್ವಿ ಅವರ ಮನೆಗೆ ಕರೆದುಕೊಂಡು ಹೋದ.

ಕುವೆಂಪು ಕುಳಿತು ಏನೋ ಓದುತ್ತಿದ್ದರು.

ತೇಜಸ್ವಿ ನನ್ನ ತೋರಿಸಿ ‘ಅಣ್ಣಾ ಇವ್ರು ಕೆ.ಟಿ. ಶಿವಪ್ರಸಾದ್ ಅಂಥಾ ಆರ್ಟಿಸ್ಟ್’ ಎಂದು ಪರಿಚಯಿಸಿದರು.

ನಮಸ್ಕಾರ್ ಸಾರ್ ಎಂದೆ.

ಒಮ್ಮೆ ನನ್ನ ಮುಖ ನೋಡಿದ ಕುವೆಂಪು, ಹಾಗೆ ಕತ್ತು ಬಗ್ಗಿಸಿ ಓದಲು ಪ್ರಾರಂಭಿಸಿದರು.

ಹೆಗಲಿಗೆ ಕ್ಯಾಮೆರಾ ಹಾಕಿಕೊಂಡಿದ್ದ ನಾನು ಎಲ್ಲಿ ಏನನ್ನುತ್ತಾರೋ ಎಂದು ಭಯ ಪ್ರಾರಂಭವಾಯಿತು.

ಹಾಗೆ ಓದುತ್ತಿದ್ದವರು ನನ್ನ ಹತ್ತಿರ ಕರೆದು ‘ಶಿವಪ್ರಸಾದ್ ಅದೇನು ನೀವು ಬಿಡಿಸುತ್ತೀರಲ್ಲಾ… ಪೇಯಿಂಟಿಂಗ್, ಹತ್ತಿರ ಹೋದ್ರೆ ಅದೇನೋ ಬೇರೆ ರೀತಿ ಕಾಣುತ್ತದೆ, ದೂರ ಹೋದರೆ ಮತ್ತೊಂದು ರೀತಿ ಕಾಣುತ್ತದೆ ಅದು ಹೇಗೆ ಸಾಧ್ಯ?’ ಅದು ಹೇಗೆ ಬರೆಯುತ್ತೀರಿ..?  ಅದು ಹೇಗೆ ಸಾಧ್ಯ..? ಏನನ್ನುತ್ತಾರೆ ಅದಕ್ಕೆ ನಿಮ್ಮ ಆರ್ಟಿಸ್ಟ್ ಭಾಷೆಯಲ್ಲಿ?’

ಸಣ್ಣ ಮಕ್ಕಳಂತೆ ಕೇಳಿದ್ದು ನನಗೆ ಅಚ್ಚರಿ ತಂದಿತ್ತು.

ಇಷ್ಟು ದೊಡ್ಡ ಸಾಹಿತಿಗಳು ಹೀಗೆ ಸಣ್ಣ ವಿಷಯವನ್ನು ಮಕ್ಕಳಂತೆ ಕೇಳಿದ್ದನ್ನು ನೋಡಿ ಷಾಕ್ ಆಗಿತ್ತು.

ನಂತರ ಅವರಿಗೆ, ‘ಇದಕ್ಕೆ ಇಂಪ್ಯಾಸ್ಟೋ ಮೆಥಡ್ ಎನ್ನುತ್ತಾರೆ. ಅದರಲ್ಲಿ ಕೆಲಸ ಮಾಡಬೇಕಾದರೆ ನಾವು ಕಲರ್ ದಪ್ಪಗೆ ಹಾಕುತ್ತೇವೆ. ಹಾಗಾಗಿ ದೂರ ಹೋದರೆ ದಪ್ಪದಾಗಿ ಕಾಣುತ್ತದೆ. ಹತ್ತಿರ ಅಸ್ಪಷ್ಟ’ ಎಂದೆ.

ಹೌದಾ..? ಎಂದು ಅಚ್ಚರಿ ಪಟ್ಟರು.

ಇದ್ದಕ್ಕಿದ್ದಂತೆ ತೇಜಸ್ವಿ ‘ಅಣ್ಣಾ ರೆಡಿಯಾಗಿ. ಶಿವಪ್ರಸಾದ್ ಒಂದೆರಡು ಫೋಟೋ ತೆಗೆಯುತ್ತಾನೆ’ ಎಂದರು.

ನನಗೋ ದಿಗಿಲು. ಇಷ್ಟು ದೊಡ್ಡವರ ಫೋಟೋ ನಾನು ತೆಗೆಯುವುದಾ..?

ಆದರೆ ಕುವೆಂಪು ಒಂದಷ್ಟೂ ಕಸಿವಿಸಿ ಪಟ್ಟುಕೊಳ್ಳಲಿಲ್ಲ.

ತೇಜಸ್ವಿಯ ಆಜ್ಞೆಗೆ ಮರು ಮಾತಾಡಲೂ ಇಲ್ಲ.

ಎದ್ದು ನಿಂತವರೇ,  “ಶಿವಪ್ರಸಾದ್ ಹೇಗೆ ನಿಂತುಕೊಳ್ಳಲಿ..?” ಎಂದು ರೆಡಿಯಾದರು.

ನನಗೆ ಅದೊಂದು ಮರೆಯಲಾರದ ಘಟನೆ.

ಅವರು ಅಷ್ಟು ದೊಡ್ಡ ಸಾಹಿತಿ ಆಗಿದ್ದರೂ ಒಂದಷ್ಟು ಹಮ್ಮು ಬಿಮ್ಮಿಲ್ಲದೆ, ಫೋಟೋಕ್ಕೆ ನಿಂತುಕೊಂಡರು. ಹಾಗೆ ಪೇಯಿಂಟಿಂಗ್ ಬಗ್ಗೆ ಅವರು ಕೇಳಿದ ಪ್ರಶ್ನೆಗಳು ಅವರು ಆ ವಯಸ್ಸಿನಲ್ಲೂ ತಿಳಿದುಕೊಳ್ಳುವ ಹಂಬಲ ಮತ್ತು ಗೊತ್ತಿಲ್ಲದನ್ನು ಕೇಳಿ ತಿಳಿದುಕೊಳ್ಳುವ ಅವರ ಪ್ರಾಮಾಣಿಕತೆ ಬಗ್ಗೆ ನನಗೆ ದಿಗ್ಭ್ರಮೆ ಹುಟ್ಟಿಸಿತ್ತು.

ಹೀಗೆ ತೇಜಸ್ವಿಗೆ ಯಾರೋ ಹೇಳಿದ್ದರಂತೆ ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದೆ ಎಂದು. ತೇಜಸ್ವಿಗೆ ಅದೇನೋ ಕುತೂಹಲ. ಒಂದು ದಿನ ನನ್ನ ಕರೆದು ‘ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದಂತಲ್ಲಾ..? ಕುಡಿಯೋಣ್ವಾ’ ಎಂದರು.

ನನಗೋ ನಗು.

ಸರಿ, ಇನ್ನು ಯಾಕೆ ತೇಜಸ್ವಿ ಕುತೂಹಲ ಕಡಿಮೆ ಮಾಡುವುದು ಎಂದು ಒಂದು ಕಡೆ ಹೋದೆವು. ಒಂದು ಕ್ವಾಟರ್ ತೆಗೆದುಕೊಂಡು ಹೋಗಿ ಹೋಟೆಲ್ ಒಂದರಲ್ಲಿ ಟೀ ಹೇಳಿ ಕುಳಿತುಕೊಂಡೆವು.

ನನಗೋ ಒಳಗೊಳಗೆ ನಗು, ಕುಡೀಲಿ… ಗೊತ್ತಾಗುತ್ತೆ ಎಂದು ಸುಮ್ಮನಿದ್ದೆ.

ಸ್ಟೀಲ್ ಗ್ಲಾಸ್‌ಗೆ ಟೀ ಹಾಕಿಕೊಂಡು, ಕ್ವಾಟರ್‌ನಲಿದ್ದ ಬ್ರಾಂಡಿ ಬಸಿದ. ಅದು ಯಾವುದೋ ಕಲರ್‌ಗೆ ತಿರುಗಿತು. ತೇಜಸ್ವಿ ಮುಖವನ್ನೇ ನೋಡಿದೆ. ಮುಖ ಸಪ್ಪಗಾದಂತಾಯ್ತು.

ಟೇಸ್ಟ್ ನೋಡೋಣ್ವಾ ಎಂದು ಎತ್ತಿದ. ಒಂದು ಸಿಪ್ ಕುಡಿದಿದ್ದಷ್ಟೆ..? ಏನೋ ಇದು, ಥೂ ಎಂದು ಉಗಿದ. ನಕ್ಕು ಟೀಯೂ ಬೇಡ ಎಂದ ಇಬ್ಬರೂ ನಕ್ಕು ಅಲ್ಲಿಂದ ಬಂದೆವು.

ಹೀಗೆ ಯಾರೋ ಹೇಳಿದರು ಎಂದು  ಒಮ್ಮೆ ಬಿಯರ್ ತೆಗೆದುಕೊಂಡು ಕತ್ತೆ ಉಚ್ಚೆ ಇದ್ದಂಗೈತಲೋ ಎಂದು ಗೋಳಾಡಿದ್ದ.

ಅವನಿಗೆ ಎಲ್ಲವನ್ನೂ ಪರೀಕ್ಷಿಸಿ ನೋಡುವ ಹಂಬಲ. ಅವನೇ ಒಂದು ವಿಸ್ಮಯ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ