ಕ್ಲಾಸು ಮುಗಿದು ಮೊದಲು ಸಕಲೇಶನಿರುವ ಹಾಸ್ಟೆಲ್ ಕಡೆ ಹೋಗಬೇಕೆಂದು ಚಿಂತಿಸುತ್ತ ಕುಳಿತ. ಆಮೇಲೆ ಶೀತಲ್ ಮತ್ತು ಮೃಣಾಳಿನಿಯನ್ನು ನೋಡಿಕೊಂಡು ಬರಬೇಕು. ಪಿಕ್‍ನಿಕ್‍ ನ ಘೋರವಾದ ಅನುಭವದಿಂದ ಆತ ಇನ್ನೂ ಚೇತರಿಸಿಕೊಂಡಿರಲಿಲ್ಲ. ಒಮ್ಮೆಲೆ ಎಲ್ಲ ಪೂರ್ತಿ ಬದಲಾಗಿಬಿಟ್ಟಿತ್ತು. ಈ ಕ್ಲಾಸಿಗೂ, ಈ ಅಧ್ಯಾಪಕರಿಗೂ, ಇಲ್ಲಿ ಕೂತಿರುವ ಸಹಪಾಠಿಗಳಿಗೂ ತನಗೂ ಏನೇನೂ ಸಂಬಂಧವಿಲ್ಲದ ಹಾಗೆ ಅವನಿಗನಿಸಿತು. ಅದು ಹೇಗೋ ಕ್ಲಾಸು ಮುಗಿಯುವವರೆಗೆ ಕಾದದ್ದಾಯಿತು.
ಕೆ.ವಿ. ತಿರುಮಲೇಶ್‌ ಅವರ ಹೊಸ ಕಾದಂಬರಿ “ಮುಸುಗು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ

 

ಸುಮನ್ ರೆಡ್ಡಿ ಡಾಕ್ಟರರಲ್ಲಿಗೆ ಹೋದಾಗ ಅವನಿಗೆ ಸಣ್ಣಕೆ ಜ್ವರ ಬರುತ್ತಿದ್ದುದು ನಿಜ. ಫ್ಯಾಮಿಲಿ ಡಾಕ್ಟರು ಶ್ಯಾಮಲ ಕುಮಾರ್ ಅವನನ್ನು ಮಂಚದ ಮೇಲೆ ಮಲಗಿಸಿ ಗಾಯವನ್ನು ಪರೀಕ್ಷಿಸಿದರು. ನಂತರ ಅವನನ್ನು ಕುಳಿತುಕೊಳ್ಳಲು ಹೇಳಿ ಸ್ಟೆತಸ್ಕೋಪಿನಿಂದ ನಾಡಿ ಬಡಿತ ಆಲಿಸಿದರು. ಆಳದಿಂದ ಉಸಿರು ತೆಗೆಯಲು ಹೇಳಿದರು. ಹಾಗೆ ತೆಗೆದಾಗ ಸುಮನ್ ಕೆಮ್ಮುವುದಕ್ಕೆ ಸುರುಮಾಡಿದ. ಥರ್ಮೊಮೀಟರಿನಿಂದ ಜ್ವರ ಅಳೆದದ್ದೂ ಆಯಿತು. ಆದರೆ ಡಾಕ್ಟರರಿಗೆ ರೆಡ್ಡಿಯ ನೋವಿನ ಕಾರಣ ತಿಳಿಯುವುದಕ್ಕೆ ಇದಾವುದರ ಅಗತ್ಯವೂ ಇರಲಿಲ್ಲ.
“ಗುಂಡಿನೇಟು ತಾಗಿದ್ದು ಯಾವಾಗ?” ಎಂದು ಕೇಳಿದರು.

ಡಾಕ್ಟರರ ನೇರ ಪ್ರಶ್ನೆಗೆ ಸುಮನ್ ತತ್ತರಿಸಿಹೋದ. ತಡವರಿಸಿದ. ಪಿಕ್‍ನಿಕ್‍ ಗೆ ಹೋಗಿದ್ದಾಗ ಕಲ್ಲಿನ ಕಣಿವೆಯೊಳಕ್ಕೆ ಬಿದ್ದು ಗಾಯವಾಯಿತು ಎಂದು ಹೇಳಿದ್ದ. ಡಾಕ್ಟರರು ಈ ಕತೆಯನ್ನು ನಂಬಿದ ಹಾಗೆ ತೋರಿತ್ತು.

ಈತ ಮಾತಾಡದೆ ಇದ್ದುದನ್ನು ಕಂಡು ಡಾಕ್ಟರರು “ಉತ್ತರಿಸದೆ ಇದ್ದರೆ ನೀನು ಬೇರೆ ಕಡೆ ಹೋಗಬೇಕಾಗುತ್ತದೆ, ಸುಮನ್” ಎಂದರು.
“ಎರಡು ದಿನ” ಎಂದ ಸುಮನ್.

“ಎಲ್ಲ ಟ್ರಾಜಿಡಿಗಳಲ್ಲೂ ಒಂದು ಲಕ್ ಇದ್ದೇ ಇರುತ್ತೆ. ನೀನು ಕೂಡ ಲಕ್ಕಿಯೆ.”

“ಇದರಲ್ಲಿ ಲಕ್ ಏನು ಬಂತು, ಡಾಕ್ಟರ್?”

“ಡಬ್ಲಿ” ಎಂದರು ಡಾಕ್ಟರು.

ಸುಮನ್ ಅರ್ಥವಾಗದೆ ಅವರ ಮುಖ ನೋಡಿದ.

“ಒಂದು: ಬುಲೆಟ್ ಕಾಲಿನ ಎಲುಬಿಗೆ ತಾಗದೆ ಮಾಂಸವನ್ನಷ್ಟೆ ಹರಿದುಹೋದ್ದು. ಇನ್ನೊಂದು: ಇವತ್ತೇ ನೀನಿಲ್ಲಿಗೆ ಬಂದುದು. ಯಾಕೆಂದರೆ ಇನ್ನೊಂದು ದಿನ ತಡವಾಗುತ್ತಿದ್ದರೆ ಗಾಂಗ್ರೀನ್ ಸುರುವಾಗಿಬಿಡುತ್ತಿತ್ತು. ನಂತರ ಕಾಲು ಕುಯ್ದುಹಾಕಬೇಕಾಗುತ್ತಿತ್ತು. ಒಂದು ಕಾಲಿನಲ್ಲಿ ಹೋಗುವುದು ಇಷ್ಟವೇ ನಿನಗೆ?”

“ಡಾಕ್ಟರ್! ಒಂದು ವಿನಂತಿ” ಎಂದ ಸುಮನ್.

“ಯಾರಿಗೂ ಹೇಳಬಾರದು. ಮುಖ್ಯವಾಗಿ ಅಪ್ಪನಿಗೆ, ಅದೇ ತಾನೆ?”

“ಹೌದು.”

“ಇಲ್ಲ. ಆದರೆ ಇದು ಆದದ್ದಾದರೂ ಹೇಗೆ?”

“ಇರಲಿ ಅಂತ ಪಿಕ್‍ನಿಕ್‍ ಗೆ ಗನ್ ಒಯ್ದಿದ್ದೆ. ತಪ್ಪಾಗಿ ಗನ್ ಸಿಡಿದುಹೋಯಿತು, ಡಾಕ್ಟರ್!”

“ಇನ್ನೀಗ ನೀನು ನಿಜ ಹೇಳಿದರೂ ಸುಳ್ಳೇ ಹೇಳಿದರೂ ನನಗೆ ಮುಖ್ಯವಾಗುವುದಿಲ್ಲ. ಚಿಕ್ಕದೊಂದು ಆಪರೇಶನ್ ಮಾಡಬೇಕಾಗಿದೆ.”

“ಆಪರೇಶನೇ!”

“ಭಯಕ್ಕೆ ಕಾರಣವಿಲ್ಲ. ವೈದ್ಯಕೀಯ ಭಾಷೆಯಲ್ಲಿ ಸಣ್ಣದೊಂದು ಮಾಂಸ ಕೊಯ್ಯುವುದಕ್ಕೂ ಆಪರೇಶನ್ ಎಂದೇ ಹೆಸರು. ಇದೂ ಅಷ್ಟೆ. ಹೇಗಿದ್ದರೂ ಗುಂಡು ತಾಗಿದಷ್ಟು ನೋಯುವುದಿಲ್ಲ. ತಾಯಿಗೆ ಹೇಳಿದ್ದೀಯ?”

“ಗಾಯವಾದ ಸಂಗತಿ ಹೇಳಿದ್ದೇನೆ. ಹೇಗಾಯಿತು ಎಂದು ಹೇಳಿಲ್ಲ. ಹೇಳಿದರೆ ವಿನಾ ಕಾರಣ ಗಾಬರಿಯಾಗುತ್ತಾರೆ.”

“ಹುಡುಗರು ಓದಿಕೊಳ್ಳಲಿ ಎಂದು ಕಾಲೇಜಿಗೆ ಕಳಿಸುತ್ತಾರೆ. ಅಲ್ಲಿ ನೀವೆಲ್ಲ ಏನು ಮಾಡಿಕೊಳ್ತೀರಿ? ಇರಲಿ. ಪ್ರತಿಯೊಬ್ಬ ವ್ಯಕ್ತಿಯೂ ತಾನಾಗಿಯೇ ಕಲಿಯಬೇಕಾಗುತ್ತದೆ. ಇದೇ ಮನುಷ್ಯಾವಸ್ಥೆ… ಪ್ರತಿ ಮಗುವೂ ಶಾಲೆಗೆ ಹೋಗಬೇಕು, ಪ್ರತಿ ಮಗುವೂ ಭಾಷೆ ಕಲಿಯಬೇಕು, ಪ್ರತಿ ಮಗುವೂ ಮಗ್ಗಿ ಕಲಿಯಬೇಕು… ನಾನು ಕಲಿತಿದ್ದೇನೆ, ನೀನು ಕಲಿತಿದ್ದೀ, ಎಲ್ಲರೂ ಕಲಿತಿದ್ದಾರೆ..”

ಹೀಗೆ ಹೇಳುತ್ತಲೇ ಅವರು ಕಾರ್ಯ ತತ್ಪರರಾದರು. ಒಬ್ಬ ನರ್ಸ್ ಬಂದಳು. ಒಂದೆರಡು ಇಂಜೆಕ್ಷನುಗಳನ್ನು ಚುಚ್ಚಿದಳು.

“ಸ್ಪೀಲ್ ಬರ್ಗ್‍ನ ಜೊರಾಸಿಕ್ ಪಾರ್ಕ್ ನೋಡಿದ್ದೀಯ?” ಎಂದರು ಡಾಕ್ಟರು ಸುಮನ್‍ ಗೆ.

“ನೋಡಿದ್ದೇನೆ…”

“ನಾನಿನ್ನೂ ನೋಡುವುದಕ್ಕೆ ಆಗಿಲ್ಲ. ಆದರೆ ನೋಡುವ ಬಯಕೆ ಇದೆ. ಮನೆಯಲ್ಲಿ ಎಲ್ಲರೂ ನೋಡಿದ್ದಾರೆ. ಎಷ್ಟೋ ಸಾವಿರ ಮಂದಿ ಬೇರೆ ಬೇರೆ ದೇಶಗಳಲ್ಲಿ ನೋಡಿದ್ದಾರೆ. ಸ್ಪೀಲ್‍ಬರ್ಗ್ ಬಗ್ಗೆ ಒಬ್ಬರು ಬರೆದ ಲೇಖನದಲ್ಲಿನ ಒಂದು ಮಾತು ನೆನಪಿಗೆ ಬರುತ್ತದೆ ನನಗೆ. ಈ ಫಿಲ್ಮ್ ನೋಡಿದವರಿಗೆಲ್ಲ ಸಾಮಾನ್ಯವಾಗಿರುವ ಗುಣ ಯಾವುದು ಎನ್ನುವ ಮಾತು. ಯಾವುದು ಹೇಳು ನೋಡೋಣ… ಯಾವುದೆಂದರೆ ಇವರೆಲ್ಲ ಒಮ್ಮೆ ಚಿಕ್ಕ ಮಗುವಾಗಿದ್ದವರೇ ಎನ್ನುವುದು! ನಿಜವಲ್ಲವೇ?”

“ನಿಜ ಸಾರ್”

ಮಾತಾಡುತ್ತಲೇ ಅವರು ಅವನ ಕಾಲಿನ ಕೆಟ್ಟ ಮಾಂಸವನ್ನು ಕತ್ತರಿಸಿಹಾಕಿದರು. ಸುಮನ್‍ ಗೆ ನೋವಿನಿಂದ ಕೂಗುವ ಹಾಗನಿಸಿತು. ತಡೆದುಕೊಂಡ. ಕಣ್ಣು ಕತ್ತಲೆ ಬಂದಂತಾಯಿತು. ಆದರೂ ಬ್ಯಾಂಡೇಜು ಹಾಕಿದ ನಂತರ ಸ್ವಲ್ಪ ಆರಾಮ ಅನಿಸಿತು. ಗಾಯ ಗುಣವಾಗುವ ತನಕ ಎರಡು ದಿನಗಳಿಗೊಮ್ಮೆ ಬಂದು ನರ್ಸಿನ ಕೈಯಿಂದ ಬ್ಯಾಂಡೇಜು ಬದಲಾಯಿಸಿಕೊಳ್ಳಬೇಕೆಂದು ಡಾಕ್ಟರರು ತಾಕೀತು ಮಾಡಿದರು. ನಂತರ ಕೆಲವು ಮಾಮೂಲಿ ಆ್ಯಂಟಿಬಯಾಟಿಕ್ಸ್ ಮಾತ್ರೆಗಳನ್ನು ಬರೆದುಕೊಟ್ಟು ಅವನನ್ನು ಕಳಿಸಿದರು.

ಸುಮನ್ ತನ್ನ ಕೋಣೆ ಹೊಕ್ಕು ಕುಳಿತುಬಿಟ್ಟವ ಎರಡು ದಿನ ಹೊರಗಿಳಿಯಲಿಲ್ಲ. ಎರಡನೇ ದಿನ ಮತ್ತೆ ಬ್ಯಾಂಡೇಜು ಬದಲಾಯಿಸುವುದಕ್ಕೆ ದವಾಖಾನೆಗೆ ಹೋಗಿ ಬಂದ. ಕಾಲುನೋವು ಸ್ವಲ್ಪಮಟ್ಟಿಗೆ ಇಳಿದಿತ್ತು. ಡಿಪಾರ್ಟ್‍ಮೆಂಟ್ ಕಡೆ ಹೋಗದೆ ಎಷ್ಟು ದಿನ ಹೀಗಿರುವುದು ಸಾಧ್ಯ ಎಂದುಕೊಂಡ. ಮನಸ್ಸು ಉದ್ವಿಗ್ನವಾಗಿತ್ತು. ಹೋಗಿ ಸಕಲೇಶನ ಭೇಟಿಯಾಗುವುದು ಅಗತ್ಯವಾಗಿತ್ತು. ಅದೇ ರೀತಿ ಶೀತಲ್ ಮತ್ತು ಮೃಣಾಳಿನಿಯನ್ನು ಕೂಡ. ಆದರೆ ಯಾವ ಮುಖದಿಂದ ಅವರನ್ನೆಲ್ಲ ನೋಡುವುದು? ಮರುದಿನ ಯುನಿವರ್ಸಿಟಿ ಕಡೆ ಬೈಕು ತೆಗೆದುಕೊಂಡು ಹೋದ. ಕ್ಲಾಸುಗಳು ನಿಧಾನವಾಗಿ ಸುರುವಾದ ಲಕ್ಷಣಗಳು ಕಂಡುಬಂದುವು. ಸಕಲೇಶ ಸಿಗುತ್ತಾನೆಯೇ ಎಂದು ಅವನ ಡಿಪಾರ್ಟ್‍ಮೆಂಟಿಗೆ ಹೋಗಿ ನೋಡಿದ. ಸಕಲೇಶ ಕಾಣಿಸಲಿಲ್ಲ. ಆಮೇಲೆ ಏನು ಮಾಡುವುದಕ್ಕೂ ತೋಚದೆ ತನ್ನ ಕ್ಲಾಸಿಗೆ ಹೋಗಿ ಯಾವುದೋ ಒಂದು ಪಾಠ ಕೇಳಿಸಿಕೊಂಡ. ಇಂಟರ್‍ವಲ್‍ ನಲ್ಲಾದರೂ ಸಕಲೇಶ ಸಿಗುತ್ತಾನೋ ಎಂದು ಪ್ರಯತ್ನಿಸಿ ನಿರಾಶನಾದ. ಶೀತಲ್ ಕೂಡ ಬಂದಿರಲಿಲ್ಲ. ಅವಳಾದರೆ ತಾನು ಬರುವುದಿಲ್ಲವೆಂದು ತಿಳಿಸಿದ್ದಳು.

ಕ್ಲಾಸು ಮುಗಿದು ಮೊದಲು ಸಕಲೇಶನಿರುವ ಹಾಸ್ಟೆಲ್ ಕಡೆ ಹೋಗಬೇಕೆಂದು ಚಿಂತಿಸುತ್ತ ಕುಳಿತ. ಆಮೇಲೆ ಶೀತಲ್ ಮತ್ತು ಮೃಣಾಳಿನಿಯನ್ನು ನೋಡಿಕೊಂಡು ಬರಬೇಕು. ಪಿಕ್‍ನಿಕ್‍ ನ ಘೋರವಾದ ಅನುಭವದಿಂದ ಆತ ಇನ್ನೂ ಚೇತರಿಸಿಕೊಂಡಿರಲಿಲ್ಲ. ಒಮ್ಮೆಲೆ ಎಲ್ಲ ಪೂರ್ತಿ ಬದಲಾಗಿಬಿಟ್ಟಿತ್ತು. ಈ ಕ್ಲಾಸಿಗೂ, ಈ ಅಧ್ಯಾಪಕರಿಗೂ, ಇಲ್ಲಿ ಕೂತಿರುವ ಸಹಪಾಠಿಗಳಿಗೂ ತನಗೂ ಏನೇನೂ ಸಂಬಂಧವಿಲ್ಲದ ಹಾಗೆ ಅವನಿಗನಿಸಿತು. ಅದು ಹೇಗೋ ಕ್ಲಾಸು ಮುಗಿಯುವವರೆಗೆ ಕಾದದ್ದಾಯಿತು. ನಂತರ ಮಾತಿಗಿಳಿದವರಿಂದ ತಪ್ಪಿಸಿಕೊಂಡು ಹೊರ ಬರುತ್ತಿದ್ದಂತೆ ಯಾರೋ ಒಬ್ಬ “ಸುಮನ್! ನಿನಗೊಂದು ಕಾಗದ ಇದೆ ನೋಡು!” ಎಂದಹಾಗಾಯಿತು. ನೋಡಿದರೆ ಪ್ಯಾನೆಲಿಗೆ ಸಿಕ್ಕಿಸಿದ್ದ ಕಾಗದವೊಂದು ಕಣ್ಣಿಗೆ ಬಿತ್ತು. ಅದನ್ನೆತ್ತಿಕೊಂಡು ಒಂದಷ್ಟು ದೂರ ಹೋಗಿ ಒಡೆದು ನೋದಿದ. ಸಕಲೇಶನ ಕಾಗದ!

ಇವತ್ತೇ ನೀನಿಲ್ಲಿಗೆ ಬಂದುದು. ಯಾಕೆಂದರೆ ಇನ್ನೊಂದು ದಿನ ತಡವಾಗುತ್ತಿದ್ದರೆ ಗಾಂಗ್ರೀನ್ ಸುರುವಾಗಿಬಿಡುತ್ತಿತ್ತು. ನಂತರ ಕಾಲು ಕುಯ್ದುಹಾಕಬೇಕಾಗುತ್ತಿತ್ತು. ಒಂದು ಕಾಲಿನಲ್ಲಿ ಹೋಗುವುದು ಇಷ್ಟವೇ ನಿನಗೆ?

ಸಕಲೇಶ ಬರೆದಿದ್ದ:

“ಪ್ರಿಯ ಸುಮನ್,
ಈ ಕಾಗದ ನೋಡಿ ನಿನಗೆ ಆಶ್ಚರ್ಯವೆನಿಸಬಹುದು. ಇದನ್ನು ಬರೆಯುವ ಕೊನೆ ಗಳಿಗೆವರೆಗೆ ನನಗೇ ಈ ಕುರಿತು ಸ್ಪಷ್ಟವಾದ ಅರಿವಿರಲಿಲ್ಲ. ಈ ಕಾಗದ ನಿನ್ನ ಕೈಗೆ ಸಿಗುತ್ತದೆ ಅಂದುಕೊಳ್ಳುವೆ. ನೀನಿದನ್ನು ಓದುವ ವೇಳೆಗೆ ನಾನು ಬಹಳ ದೂರ ಹೋಗಿರುತ್ತೇನೆ. ಎಲ್ಲಿಗೆ ಹೋಗುತ್ತೇನೆ, ಏನು ಮಾಡುತ್ತೇನೆ ಎಂಬ ಬಗ್ಗೆ ನನಗಿನ್ನೂ ಯಾವ ಯೋಚನೆಯೂ ಇಲ್ಲ. ಈ ನನ್ನ ನಿರ್ಧಾರದಿಂದ ನಿಮಗೆಲ್ಲ ಬಹಳ ಬೇಸರವಾಗಬಹುದೆಂದು ನನಗೆ ಗೊತ್ತಿದೆ. ಆದರೆ ನಾನೀ ಕುರಿತು ನಿಸ್ಸಹಾಯಕ. ಯೂನಿವರ್ಸಿಟಿಯಲ್ಲಿದ್ದುಕೊಂಡು ಮೊದಲಿನ ತರ ವರ್ತಿಸುವುದು ಇನ್ನು ಮುಂದೆ ನನ್ನಿಂದ ಅಸಾಧ್ಯ. ನಿನಗೇ ಗೊತ್ತಿರುವಂತೆ ಅರಿವಿನ ಹುಡುಕಾಟದಲ್ಲಿ ಯುನಿವರ್ಸಿಟಿಗೆ ಬಂದವನು ನಾನು. ಈ ಅರಿವಿನಿಂದ ಏನೂ ಉಪಯೋಗವಿಲ್ಲದಂತೆ ನನಗೀಗ ಅನಿಸಿದೆ ಮಾತ್ರವಲ್ಲ, ನನ್ನ ಒಟ್ಟಾರೆ ನಂಬಿಕೆಗಳೆಲ್ಲ ಬುಡಮೇಲಾದ ಹಾಗೆ ತೋರುತ್ತಿದೆ. ಈ ಕುರಿತು ಇಷ್ಟು ಬರೆದರೆ ಸಾಕು. ನಿನಗೆ ಎಲ್ಲವೂ ಗೊತ್ತಾಗುತ್ತದೆ.

ಇಲ್ಲಿ ನನ್ನನ್ನು ಕಾಡುವ ಸಮಸ್ಯೆಯೆಂದರೆ ಪಿಕ್‍ನಿಕ್‍ ನ ಆ ಅನುಭವ ನಮಗೆಲ್ಲರಿಗೂ ಒಟ್ಟಿಗೇ ಆಗಿದ್ದು ಇದನ್ನು ನಾನೊಬ್ಬನೇ ವಿಶೇಷವಾಗಿ ತೆಗೆದುಕೊಳ್ಳುತ್ತಿದ್ದೇನೆ ಎನ್ನುವ ಭಾವನೆ ಬರುವುದು. ಈ ತರದ ಯಾವುದೇ ಈಗೋ ಸಮಸ್ಯೆಯಿಂದಾಗಿ ನಾನು ಈ ನಿರ್ಧಾರ ತೆಗೆದುಕೊಂಡದ್ದಲ್ಲ. ನಿಜ ಹೇಳಬೇಕೆಂದರೆ ನಾನು ಯಾವುದನ್ನೂ ತಿಳಿಯಾಗಿ ಯೋಚಿಸಲಾರದ ಸ್ಥಿತಿಯಲ್ಲಿದ್ದೇನೆ. ಮಬ್ಬಿನಲ್ಲಿ ನಡೆಯುತ್ತಿರುವಂತೆ ತೋರುತ್ತದೆ. ಮುಂದೆ ಇರುವ ಆಳ ಎತ್ತರಗಳ ಪರಿವೆಯಿಲ್ಲದೆ ನಡೆಯುವವನ ಹಾಗೆ. ಆದರೂ ಹೊಡೆತ ತಿಂದದ್ದು ನಾವು ಯಾರೂ ಅಲ್ಲ. ಹೊಡೆತ ತಿಂದವಳು ಮೃಣಾಳಿನಿ. ಅವಳು ಪಟ್ಟ ಯಾತನೆ ಅಘೋರವಾದ್ದು. ನಾನಿನ್ನು ಅವಳಿಗೆ ಹೇಗೆ ಮುಖ ತೋರಿಸಲಿ? ಮುಖವಾಡ ಕಳಚಿದರೂ ನನ್ನ ಮೋರೆಯಲ್ಲೊಂದು ಮುಖವಾಡ ಇದ್ದೇ ಇರುತ್ತದೆ. ಮುಖವಿಲ್ಲದವನಾಗಿದ್ದೇನೆ ನಾನು. ನಾನಿದನ್ನೆಲ್ಲ ಎದುರಿಸಲಾರದೆ ಹೊರಟು ಹೋಗುತ್ತಿದ್ದೇನೆ. ಬೇಕಾದರೆ ಹೇಡಿಯೆನ್ನು, ಸ್ವಾರ್ಥಿಯೆನ್ನು, ಏನು ಬೇಕಾದರೂ ಎನ್ನು.

ಸುಮನ್, ನನ್ನದೊಂದು ಕೋರಿಕೆ. ಈ ವಿಷಯ ನಿನ್ನಲ್ಲೆ ಇದ್ದರೆ ಸಾಕು. ಸಾಧ್ಯವಿದ್ದರೆ ಮೃಣಾಳಿನಿಯನ್ನು ಹೋಗಿ ಕಾಣು. ಅವಳಿಗದು ಇಷ್ಟವಿಲ್ಲವೆಂದು ನಿನಗನಿಸಿದರೆ ಬೇಡ. ಮೃಣಾಳಿನಿಗೆ ಕೂಡ ನನ್ನ ಈ ತೀರ್ಮಾನದ ಕುರಿತು ನೀನೇನೂ ಹೇಳಕೂಡದು. ಆದರೆ ಶೀತಲ್ ಇದ್ದಾಳೆ, ನೀನಿದ್ದೀ. ಮೃಣಾಳಿನಿ ತನ್ನ ಜೀವಕ್ಕೆ ಏನೂ ಮಾಡಿಕೊಳ್ಳದ ಹಾಗೆ ನೋಡಿಕೊಳ್ಳಿ. ಹಾಗೆಂದು ನೀನು ನನಗೆ ಮಾತುಕೊಡಬೇಕು. ನಾನು ಮೃಣಾಳಿನಿ-ಯನ್ನು ನೋಡುವ ಧೈರ್ಯವಾದ ದಿನ ವಾಪಸ್ಸಾಗುವೆ. ಅದಕ್ಕೆ ಮೊದಲು ನಾನು ನನ್ನ ಕಳೆದುಹೋದ ಮುಖವನ್ನು ಕಂಡುಕೊಳ್ಳಬೇಕಾಗಿದೆ… ನನಗೆ ನನ್ನ ಮನೆಯವರ ಕುರಿತು ಏನೂ ಅನಿಸುವುದಿಲ್ಲವೇ ಎಂದು ನೀನು ಭಾವಿಸಬಹುದು—ಆದರೆ ಅದನ್ನೆಲ್ಲ ಚಿಂತಿಸುವ ಸ್ಥಿತಿಯಲ್ಲಿ ನಾನೀಗ ಇಲ್ಲ.
ನಿನ್ನ
ಸಕಲೇಶ”

ಸಕಲೇಶನ ಈ ಕಾಗದ ಓದಿ ಮುಗಿಸುತ್ತಿರಬೇಕಾದರೆ ಯಾರು ಯಾರೋ ಪರಿಚಿತ ಹುಡುಗರು “ಹಲೋ ಸುಮನ್!” ಎಂದು ಎಡತಾಕುವುದಕ್ಕೆ ಮೊದಲಾದರು. ಇವರಿಂದ ತಪ್ಪಿಸಿಕೊಂಡು ಅತ್ಯಂತ ವ್ಯಗ್ರ ಮನಸ್ಥಿತಿಯಲ್ಲಿ ಬೈಕಿನ ಕಡೆ ಬರುತ್ತಿದ್ದಾಗಲೇ ಕೃಷ್ಣಕಾಂತ್ ಸಿಕ್ಕಿದ್ದು. ಈಗ ತಾನು ತುರ್ತು ಕೆಲಸದಲ್ಲಿದ್ದೇನೆಂದು ನಟಿಸಿ ಅವನಿಂದ ತಪ್ಪಿಸಿಕೊಂಡು ರೋಡಿಗೆ ಬಂದದ್ದಾಯಿತು. ಆದರೆ ಎಲ್ಲಿಗೆ ಹೋಗಬೇಕೆಂದೇ ತಿಳಿಯಲಿಲ್ಲ. ಕ್ಯಾಂಪಸಿನಿಂದ ಬಹಳ ದೂರ, ಯಾರಿಗೂ ಯಾರ ಪರಿಚಯವೂ ಇರದ ಜಾಗಕ್ಕೆ, ಯಾರು ಯಾರನ್ನೂ ಮಾತಾಡಿಸದ ಕಡೆ ಹೋಗಬೇಕೆನಿಸಿತು. ಬೈಕಿನಲ್ಲಿ ಕುಳಿತುಕೊಂಡೇ ಯಾವುದೋ ಒಂದು ಮಾರ್ಗವನ್ನು ಹಿಡಿದು ತುಂಬ ದೂರ ಸಾಗಿದ್ದಾಯಿತು. ಒಂದೆಡೆ ನಿಲ್ಲಿಸಿ ಗುಡ್ಡವೇರಿದರೆ ಅಲ್ಲಿಂದ ಬಿಟ್ಟು ಬಂದ ನಗರದ ಕೆಲವು ರೇಖೆಗಳು ಕಾಣಿಸಿದುವು. ಅಲ್ಲೇ ತುಸು ಹೊತ್ತು ಕೂತಿದ್ದಂತೆ ಒಬ್ಬ ದನಗಾಹಿ ತನ್ನ ಮಂದೆಯನ್ನು ಹೊಡೆದುಕೊಂಡು ಮೇಲಕ್ಕೆ ಬರುತ್ತಿರುವುದು ಕಾಣಿಸಿತು. ಹೆಚ್ಚು ಹುಲ್ಲಿರುವ ಇನ್ನೊಂದು ಕಡೆಗೆ ಅವನು ದನಗಳನ್ನು ಸಾಗುತ್ತಿದ್ದ. ಸಮೀಪಿಸುತ್ತ ಸಮಯ ಎಷ್ಟಾಯಿತೆಂದು ಕೇಳಿದ. “ಹನ್ನೆರಡು ಗಂಟೆ” ಎಂದ ಸುಮನ್. “ಒಹೋ! ನಾನೂ ಹಾಗೆ ಅಂದುಕೊಂಡೆ. ನೆರಳು ಕಾಣಿಸುವುದೇ ಇಲ್ಲ” ಎಂದು ಚಕ್ ಚಕ್ ಎನ್ನುತ್ತ ಆ ವ್ಯಕ್ತಿ ದನಗಳನ್ನು ಎಬ್ಬಿಕೊಂಡು ಗುಡ್ಡದಾಚೆ ಇಳಿದು ಹೊರಟು ಹೋದ.

“ಸಕಲೇಶ! ನನಗೆ ಅರ್ಥವಾಗುತ್ತೆ” ಎಂದ ಸುಮನ್ ತನಗೆ ತಾನೆ. ಮುಖವನ್ನು ಕಳೆದುಕೊಂಡವ ಅವನೊಬ್ಬನೆ ಆಗಿರಲಿಲ್ಲ. ಕಳೆದ ಮುಖವನ್ನು ಮತ್ತೆ ಗಳಿಸಬೇಕು…. ಹಾಗನಿಸಿದ್ದೇ ಸುಮನ್‍ ಗೆ ಮತ್ತೆ ಅಲ್ಲಿ ಕೂಡಬೇಕೆನಿಸಲಿಲ್ಲ. ಎದ್ದು ವಾಪಸು ಬಂದ.

ಮೃಣಾಳಿನಿ! ಹೌದು, ಅವಳನ್ನು ಹೋಗಿ ಕಾಣಬೇಕು. ಅದೂ ಯಾವ ಮುಖದಲ್ಲಿ? ತನ್ನನ್ನು ಕಾಣುವುದಕ್ಕೆ ಅವಳಿಗೆ ಮನಸ್ಸಿಲ್ಲದೇ ಇದ್ದರೆ? ಸಕಲೇಶನ ಕುರಿತು ಏನೆಂದು ಹೇಳುವುದು? ತನ್ನ ಕಾಲಿನ ಗಾಯದ ಕಾರಣ ಸುಮನ್‍ ಗೆ ಮೃಣಾಳಿನಿಯನ್ನು ಹೋಗಿ ಕಾಣುವುದು ಇದುವರೆಗೆ ಸಾಧ್ಯವಾಗಿರದಿದ್ದರೂ ಶೀತಲ್‍ ಗೆ ಈ ಕೆಲಸ ಆತ ಈಗಾಗಲೆ ವಹಿಸಿಕೊಟ್ಟಿದ್ದ. ತಾನು ಇರುಳು ಹಗಲು ಆಕೆಯ ಜತೆ ಇದ್ದು ನೋಡಿಕೊಳ್ಳುತ್ತೇನೆ, ಡಾಕ್ಟರರಲ್ಲಿಗೂ ಕರೆದುಕೊಂಡು ಹೋಗುತ್ತೇನೆ ಎಂದು ಶೀತಲ್ ಭರವಸೆ ಕೊಟ್ಟಿದ್ದಳು. ಮೃಣಾಳಿನಿಯನ್ನು ಯಾವತ್ತೂ ಒಂಟಿಯಾಗಿ ಬಿಡಬಾರದು ಎಂದು ಸುಮನ್ ಶೀತಲ್‍ ಗೆ ಹೇಳಿದ್ದ. ಅದರಂತೆ ಶೀತಲ್ ಈಗ ಕ್ಲಾಸಿಗೂ ಬರದೆ ಹಾಸ್ಟೆಲಿನಲ್ಲೆ ಉಳಿದುಕೊಂಡಿದ್ದಳು. ಆದರೂ ತಾನು ಹಾಸ್ಟೆಲಿಗೆ ಹೋಗಿ ಮೃಣಾಳಿನಿಯನ್ನೂ ಶೀತಲಳನ್ನೂ ನೋಡಿಕೊಂಡು ಬರಬೇಕಾದ್ದು ಅಗತ್ಯವೆನಿಸಿತು ಸುಮನ್‍ ಗೆ. ಆದರೆ ಕಿತ್ತು ತಿನ್ನುವ ಕಾಲಿನ ನೋವನ್ನು ಸ್ವಲ್ಪವಾದರೂ ಉಪಶಮನ ಮಾಡಿಕೊಳ್ಳಬೇಕಾಗಿತ್ತು.

ಇಂಥ ಸಂದಿಗ್ಧದಲ್ಲಿ ಸುಮನ್ ಇದ್ದಾಗಲೇ ಕೃಷ್ಣಕಾಂತ್ ಅವನನ್ನು ಹುಡುಕಿಕೊಂಡು ಮನೆಗೇ ಬಂದುದು.

ಮನೆಗೆ ಬಂದ ಕೃಷ್ಣಕಾಂತ್‍ ಗೆ ಸಮಾಧಾನ ಹೇಳಿ ಕಳಿಸಿಕೊಟ್ಟ ನಂತರ ಸುಮನ್ ಮತ್ತೊಮ್ಮೆ ಸಕಲೇಶನ ಕಾಗದ ತೆಗೆದು ಓದಿದ. ಈಗಾಗಲೆ ಅದನ್ನವನು ಹಲವು ಸಲ ಓದಿಯಾಗಿತ್ತು. ಈಗ ಓದುತ್ತಿದ್ದಂತೆ ಹೊಸ ವಿಷಯವೊಂದು ಹೊಳೆದಂತಾಯಿತು. ಇಲ್ಲ, ಈತ ಎಲ್ಲಿಗೇ ಹೋದರೂ ವಾಪಸು ಬಂದೇ ಬರುತ್ತಾನೆ. ಮೃಣಾಳಿನಿಯ ಕುರಿತಾದ ಅವನ ಕಾಳಜಿ ಎಳ್ಳಷ್ಟೂ ಕಮ್ಮಿಯಾಗಿಲ್ಲ. ಕಮ್ಮಿಯೇನು ಬಂತು, ಅದು ಜಾಸ್ತಿಯೇ ಆಗಿದೆ. ಆಕೆ ಕುರಿತು ಎಲ್ಲಿ ಹೋದರೂ ಅವನು ಚಿಂತಿಸದೆ ಇರಲಾರ.

“ಸಕಲೇಶ! ನೀನು ಬಂದೇ ಬರುತ್ತೀ. ನೀನು ಕಾಗದದಲ್ಲಿ ಬರೆದಂತೆ ನೀನೇನು ಮಾಡುತ್ತಿದ್ದೀ ಎಂದು ನಿನಗೇನೆ ಸ್ಪಷ್ಟವಿಲ್ಲ.”

ಕಾಗದದ ಕ್ಯಾನ್ಸಲೇಷನ್ ಮೊಹರನ್ನು ಇನ್ನೊಂದು ಸಲ ನೋಡಿದ. ಯುನಿವರ್ಸಿಟಿ ಪೋಸ್ಟಾಫೀಸು. ಇದು ಬರೆದು ಅಂಚೆ ಪೆಟ್ಟಿಗೆಯಲ್ಲಿ ಹಾಕಿಬಿಟ್ಟು ಸಕಲೇಶ ತೆರಳಿದ್ದ. ಈ ಕಾಗದದ ಕುರಿತಾದರೂ ಅವನು ಚಿಂತಿಸದೆ ಇರುತ್ತಾನೆಯೆ ಅಂದುಕೊಂಡ ಸುಮನ್.

(ಕೃತಿಯ ಹೆಸರು: ಮುಸುಗು (ಕಾದಂಬರಿ), ಲೇಖಕರು: ಕೆ.ವಿ. ತಿರುಮಲೇಶ್, ಬೆಲೆ: 250/- ಮೊದಲ, ಪ್ರಕಾಶನ: ಅಭಿನವ)