ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ.
ಕೆ. ಎನ್. ಲಾವಣ್ಯಪ್ರಭಾ ಕವನ ಸಂಕಲನ “ಸ್ಪರ್ಶ ಶಿಲೆ”ಯ ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ

ಸ್ಪರ್ಶ ಶಿಲೆ ಎಂಬ ವಿನೂತನ ಶೀರ್ಷಿಕೆ ಹೊತ್ತ ಕೃತಿಯ ಕರ್ತೃ, ನಾಡಿನ ಪ್ರಬುದ್ಧ ಕವಯತ್ರಿ ಡಾ. ಕೆ. ಎನ್. ಲಾವಣ್ಯಪ್ರಭಾ. ಅಂತಃಕರಣವನ್ನು ಪ್ರಾಮಾಣಿಕವಾಗಿ ತೆರೆದಿಟ್ಟು ಯಾವುದೇ ವೈಭವೀಕರಣವಿಲ್ಲದ ವಸ್ತುನಿಷ್ಠ ನಿರೂಪಣೆಯ ಕವಿತೆಗಳ ಗುಚ್ಛವಿದು. ಇಲ್ಲಿ ನೆಲದ ನೋವಿದೆ, ಪ್ರೀತಿಯ ಪ್ರತೀಕ ಕೃಷ್ಣನ ಹದವಾದ ನವಿರು ಪ್ರೀತಿಯಿದೆ, ಬುದ್ಧನ ಮೌನಕ್ಕೆ ಅರ್ಥವಿದೆ, ವರ್ಷಧಾರೆಯ ಪುಳಕವಿದೆ, ಪ್ರಕೃತಿಗೂ ಜೀವ ತುಂಬಿ ಭಾಷ್ಯ ಬರೆದಿದ್ದಾರೆ ಜೊತೆಗೆ ವಿಶೇಷವಾಗಿ ಶಿಲೆಗು ಜೀವ ತುಂಬಿ ಭಾವಪರವಶರಾಗಿದ್ದಾರೆ. ತಮ್ಮೊಳಗೆ ಬಚ್ಚಿಟ್ಟ ಮೌನಕ್ಕೆಲ್ಲ ಸಾವಧಾನದಿಂದ ಕವಿತೆಯ ಮೂಲಕ ಅರ್ಥ ನೀಡಿದ್ದಾರೆ. ಕವಿತೆ ಓದಿದ ನಂತರ ಖುಷಿಯ ಅನುಭೂತಿಯ ಅನುಭವವಾಗುತ್ತದೆ. ಮಹಿಳೆಯ ಮನಸ್ಸು ಅನುಭವಿಸುವ ತಣ್ಣನೆಯ ತಲ್ಲಣಗಳ ಸಾಲುಗಳು ಇಲ್ಲಿನ ಕವಿತೆಗಳಲ್ಲಿ ತುಂಬಾ ಅಪ್ಯಾಯಮಾನವಾಗಿದೆ.

(ಡಾ. ಕೆ. ಎನ್. ಲಾವಣ್ಯಪ್ರಭಾ)

“ಭೂಮಿ ಇವಳು / ಒಡಲುರಿಗೆ ಒಳಗೆಲ್ಲೋ ಮಾಯಿಗಟ್ಟಿ / ನಿಂತ ಕಣ್ಣ ಹನಿಯನ್ನೆಲ್ಲ ಹಿಂಗಿ ಮುರುಟಿ ತನ್ನೊಳಗೆ ತಾನೆ ಜ್ವಾಲಾಮುಖಿ ಇವಳು / ಮೇಲೆ ತಣ್ಣಗಿನ ಯಮುನೆಯಾದವಳು. ಹೀಗೆ ‘ಇವಳನ್ನು’ ಭೂಮಿಯಾಗಿ ಪರಿವರ್ತಿಸಿ ಹೇಳಿ ಅಚ್ಚರಿಗೊಳಿಸುತ್ತಾರೆ. ಹೆಣ್ಣೆಂಬ ಕ್ಷಮಯಾ ಧರಿತ್ರಿಗೆ ಅನ್ವರ್ಥ ನಾಮವೇ ಈ ಭೂಮಿಯೆಂಬ ಸತ್ಯವನ್ನು “ಭೂಮಿ ಇವಳು” ಎಂಬ ಚಂದನೆಯ ಕವಿತೆಯಲ್ಲಿ ಅನಾವರಣಗೊಳಿಸುತ್ತಾರೆ. ಹೆಣ್ಣು ಮತ್ತು ಪ್ರಕೃತಿಯ ಧ್ಯಾನ ಇಲ್ಲಿನ ಹಲವಾರು ಕವಿತೆಗಳಲ್ಲಿವೆ. ಬೀಸುವ ಗಾಳಿಗೆ ಹಸಿರೆಲೆ ಬಳ್ಳಿ ತೊನೆದಾಡಿ / ಹನಿದ ಸೋನೆ ಮಳೆಗೆ ಮಣ್ಣು ಗಂಧವ ತೀಡಿ ನಿರ್ವಾತದಲ್ಲು ಬೆಳಕ ಝರಿ ಹರಿದಾಡಿ… ಹೀಗೆ ಸಾಗುವ ಪ್ರಕೃತಿ ಲೋಕ ಬೃಂದಾವನಕ್ಕೆ ತೆರಳುತ್ತದೆ. ಬೃಂದಾವನದ ವರ್ಣನೆ ವರ್ಣನಾತೀತ. ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ. ಅಂದರೆ ಪ್ರಕೃತಿಯೆಡೆಗಿನ, ನಮ್ಮನ್ನು ಕಾಯುವ ಶಕ್ತಿಯೆಡೆಗಿನ ಮೋಹದ ಕವಿತೆಗಳು.

ಕಾವ್ಯದ ಹಲವಾರು ಸವಾಲುಗಳನ್ನು ಮೀರಿ ಬೆಳೆದು ನಿಂತ ಸೃಷ್ಠಿಯೆ ಇವರ ಕವಿತೆಗಳು. ಇಲ್ಲಿನ ರಸ್ತೆ ಕವಿತೆ ಅದಮ್ಯ ಜೀವನಕಾಂಕ್ಷೆಯನ್ನೂ, ಜೀವನೋತ್ಸಾಹವನ್ನು ಹುಟ್ಟು ಹಾಕುವಂತಿದೆ. ಜೀವನದ ಹಾದಿಯ ಸಹಜ ಏರಿಳಿತಗಳನ್ನು, ಸಹಜ ತಾತ್ವಿಕತೆಯೊಂದಿಗೆ ಈ ಕವಿತೆಯಲ್ಲಿ ನಿರೂಪಿಸುತ್ತಾರೆ. ಅದೆಷ್ಟೋ ತಿರುವುಗಳ / ಅಸಂಖ್ಯ ಉಬ್ಬು ತಗ್ಗುಗಳ ಕೊನೆ ಮೊದಲಿಲ್ಲದ ದಾರಿಗಳೊಳಗೆ / ಹೂತು ಹೋದ ಸತ್ಯಗಳ / ಹಾದು ಹೋದ ಹೆಜ್ಜೆಗಳೆಲ್ಲವನ್ನು ಬಲ್ಲ ಮಲ್ಲನಾದರು…. ಹೀಗೆ ಸಾಗುವ ಕವಿತೆಯಲ್ಲಿ ರಸ್ತೆಯನ್ನು “ಈ ಘಳಿಗೆ ರಸ್ತೆ ತನ್ನ ಪಾಲಿಗೆ ಅದ್ಭುತ ತತ್ವಜ್ಞಾನಿ” ಎಂದು ಕರೆದಿದ್ದಾರೆ. ಹೀಗೆ ಇಲ್ಲಿನೆಲ್ಲ ಕವಿತೆಗಳು ಲವಲವಿಕೆಯ ಭಾಷೆಯಿಂದಾಗಿ ಓದುಗ ಸ್ನೇಹಿಯಾಗಿದೆ. ಕವಿತೆಗಳನ್ನು ಓದಿದಾಗ ನಮಗನಿಸುವುದು ಏನೆಂದರೆ, ಆಗ ತಾನೇ ಅನುಭವಿಸಿದ ತಲ್ಲಣಗಳು, ಪ್ರಕೃತಿಯ ಚೆಲುವನ್ನು, ಅಂತರಾಳದ ಭಕ್ತಿ ಇವನ್ನೆಲ್ಲ ತಾಜಾವಾಗಿಯೆ ಕವಿತೆಗಳಿಗೆ ಇಳಿಸಿಬಿಟ್ಟಿದ್ದಾರೆ. ಏಕೆಂದರೆ ಇಲ್ಲಿನ ಕವಿತೆಗಳ ವಸ್ತುಗಳಿಗೆ ಅತ್ಯಂತ ಜೀವಕಳೆ ಇದೆ. ಹಾಗಾಗಿ ಇವು ಯಾವತ್ತಿಗೂ ತನ್ನ ಹೊಸತನವನ್ನು ಹಾಗೆಯೇ ಉಳಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

“ದಾರಿಯಲ್ಲಿ ಸಾಲು ಸಾಲಾಗಿ ಬರುವ ಎಲ್ಲ ಬೇಸರಗಳು/ ನಲಿವಿಗೆ ದಾರಿಯಂತೆ.. ಹೀಗೆ ಸಾಗುವ ಕವಿತೆಯಲ್ಲಿ, ಯಾಕೆ ನಲಿವಿಗೆ ದಾರಿ ಎಂಬುದಾಗಿ ಹೇಳಿ ನಮ್ಮ ಚಿಂತೆಯನ್ನು ತೇಜೋಹಾರಿಯಾಗಿ ಮಾಡಿ ಬಿಡುತ್ತಾರೆ. ಸಂಕಲನದ ಚೆಲುವ ಕವಿತೆಯಂತು ಮಾರ್ಮಿಕವಾಗಿದೆ. ಅನೂಹ್ಯವಾದ ಚೆಲುವ ನಾರಾಯಣನ ಕರುಣೆಯಲ್ಲಿ ಭಕ್ತಿರಸ ಉಕ್ಕಿ ಬರುತ್ತದೆ. ಇತಿಹಾಸದ ಸಾಕ್ಷ್ಯಗಳಿಲ್ಲದಿದ್ದರೂ ಹೊರಗಮ್ಮ ದೇವಿಯ ವಿಹ್ವಲ ಪ್ರೀತಿ ಮನ ಮಿಡಿಯುವಂತೆ ಇಲ್ಲಿ ಪಡಿಮೂಡಿದೆ.

ಒಟ್ಟಿನಲ್ಲಿ ಸಂಪೂರ್ಣ ಸ್ಪರ್ಶ ಶಿಲೆಯಲ್ಲಿ ಸತ್ವ ಇದೆ. ಭಾವನಾತ್ಮಕವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಕವಿತೆಯ ಒಳನೋಟವನ್ನು ತಾತ್ವಿಕವಾಗಿ ನಮಗೆ ಹೇಳುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಬದುಕು ಮತ್ತು ಪ್ರಕೃತಿಯನ್ನು ಅನುಸಂಧಾನಿಸುತ್ತಲೆ ರಚಿಸಿದ ಹದವಾದ ಭಾವ, ಭಾಷೆಯ ಕವಿತೆಗಳು ನಮ್ಮಲ್ಲೂ ಹೊಸ ಸಂವೇದನೆಯನ್ನು, ಚೈತನ್ಯವನ್ನು ಹುಟ್ಟು ಹಾಕುತ್ತವೆ. ಮೈಸೂರಿನ ಕವಿತಾ ಪ್ರಕಾಶನದಿಂದ ಈ ಸಂಕಲನ ಪ್ರಕಟಗೊಂಡಿದೆ.

(ಕೃತಿ: ಸ್ಪರ್ಶ ಶಿಲೆ, ಲೇಖಕರು: ಕೆ.ಎನ್.‌ ಲಾವಣ್ಯಪ್ರಭಾ, ಪ್ರಕಾಶಕರು: ಕವಿತಾ ಪ್ರಕಾಶನ, ಮೈಸೂರು, ಬೆಲೆ: 70/-)