“ಸಂಘರ್ಷದ ಹಾದಿಯನ್ನು ಪ್ರಾಯದಿಂದಲೂ ತುಳಿಯುತ್ತ ಬಂದ ರಾಮಯ್ಯ ಬದುಕು ಕಲಿಸಿದ ಪಾಠಗಳಿಂದ ತನ್ನದೇ ಆದ ಆಧ್ಯಾತ್ಮವನ್ನು ರೂಢಿಸಿಕೊಂಡವರು. ಹಾಗಾಗಿ ಇವರ ಕವಿತೆಗಳಲ್ಲಿ ಥಟ್ಟನೆ ಅನುಭಾವದ ಛಾಯೆಗಳು ಓದುಗರ ಮುಂದೆ ಹಾದುಹೋಗುತ್ತವೆ. ಕವಿಯಲ್ಲಿ ಅನುಭಾವವೆಂದರೆ ಬದುಕಿನಿಂದ ವಿಮುಖವಾದ ಯಾವುದೋ ಕಂತೆಯಲ್ಲ, ಅದು ಎಲ್ಲವನ್ನೂ ಒಳಗೊಳ್ಳುವ ಒಂದು ಸ್ಥಿತಿ.ದಲಿತ ಸಂಘರ್ಷ ಸಮಿತಿಯ ಕಲಾ ವಿಭಾಗಕ್ಕೆ ಅವರು ಕೊಟ್ಟ ಬಹುದೊಡ್ಡ ಸಂಪತ್ತಿನ ಹಾಡುಗಳಲ್ಲಿ ಅಗತ್ಯವಾಗಿ ಕಂಡುಕೊಳ್ಳಬೇಕಾಗಿದ್ದ ಲಯವನ್ನು ರಾಮಯ್ಯ ಹಾಗೆಯೇ ಕಾವ್ಯಕ್ಕೂ ವಿಸ್ತರಿಸಿಕೊಂಡು ಬಂದಿರಬೇಕು.”
ಕೋಟಿಗಾನಹಳ್ಳಿ ರಾಮಯ್ಯನವರ ‘ನನ್ನಜ್ಜ’ ಕವಿತಾ ಸಂಕಲನದ ಕುರಿತು ವಿಜಯರಾಘವನ್ ಟಿಪ್ಪಣಿಗಳು.

 

ವಿಮರ್ಶೆಯ ಹೆಸರಿನಲ್ಲಿ ಬರುವ ಓದುಗಳು ಕೃತಿಯ, ಕವಿಯ ಮಹತ್ವವನ್ನು ಗಮನಿಸುವ ಕೆಲಸಕ್ಕೆ ತಿಲಾಂಜಲಿ ಇಡುತ್ತಿರುವ ಸಂದರ್ಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯನಂಥವರ ಕಾವ್ಯವನ್ನು ಕುರಿತು ಟಿಪ್ಪಣಿಯೊಂದನ್ನು ಸಿದ್ಧಪಡಿಸುವುದು ಅಗಾಧವೆನ್ನಿಸುತ್ತದೆ. ಕಾದಂಬರಿಯನ್ನು ಓದಿದಂತೆ ಕವಿತೆಯನ್ನು ಓದಲಾಗುವುದಿಲ್ಲ. ಬಿಡಿಬಿಡಿ ಕವಿತೆಗಳ ಓದಿನ ಮುಖ್ಯ ಧಾತುವನ್ನು ಕಾಣದೆ ಟಿಪ್ಪಣಿ ಬರೆಯುವುದು ವ್ಯರ್ಥವೆಂದು ನಾನಾದರೂ ತಿಳಿದಿದ್ದೇನೆ. ನನಗೆ ಒಬ್ಬ ಕವಿಯ ಎಲ್ಲಾ ಕವಿತೆಗಳನ್ನು ಕುರಿತು ಗಮನ ಹರಿಸದೆ ಸಾಮಾನ್ಯೀಕರಿಸಿ ಮಾತನಾಡುವುದು ನನಗೆ ಅಷ್ಟೊಂದು ಪ್ರಿಯವಲ್ಲ. ಏಕೆಂದರೆ ಒಂದೊಂದು ಕವಿತೆಯೂ ಕವಿಯ ಮಾನಸಿಕ ಜಗತ್ತಿನ ಪೂರ್ಣಬಿಂಬ. ಅದು ಕವಿಯ ಅವಯವ ಸಮೂಹವಲ್ಲ. ಹಾಗಾಗಿ ಎಲ್ಲಾ ಕವಿತೆಗಳನ್ನು ಬಿಡಿಬಿಡಿಯಾಗಿ ಓದಿ ಗ್ರಹಿಸಿದ ನಂತರ ಅವುಗಳನ್ನು ಸಾವಯವ ರೀತಿಯಿಂದ ಒಟ್ಟುಗೂಡಿಸುವುದು ಕಾವ್ಯಕ್ಕೆ ಸಲ್ಲುವ ಗೌರವ. ಒಟ್ಟು ಕಾವ್ಯದ ಬಗ್ಗೆ ಸ್ತುತಿಯ ಅಥವಾ ನಿರಾಕರಣೆಯ ಬೀಸು ಹೇಳಿಕೆ ತಕ್ಕುದಲ್ಲ. ಈ ಮಾತುಗಳನ್ನು ನೆನಪಿನಲ್ಲಿರಿಸಿ ರಾಮಯ್ಯನವರ ಕವಿತೆಗಳ ಓದಿಗೆ ತೊಡಗಿದ್ದೇನೆ.

ಹನ್ನೊಂದು ಪುಟಗಳಲ್ಲಿ ಜಾಜಿ ಬಳ್ಳಿಯ ತರಹ ಹಬ್ಬಿರುವ `ಒಂದು ತರಗೆಲೆಯ ಗೋರಿ ಗೀತಾ’ ಎಂಬ ಕವಿತೆ ರಾಮಯ್ಯನವರ ನನ್ನಜ್ಜ ಸಂಕಲನದಲ್ಲಿರುವ ಮೊದಲನೆಯ ಕವಿತೆ.
ತರಗೆಲೆ ಮಾತ್ರ
ತೂರಿ ಬರುವಷ್ಟು
ಕಿರಿದಾದ ಕರುಣೆಯ ಬಾಗಿಲ
ಬೆಳಕಿಂಡಿಯೊಳಗಿಂದ ತೂರಿ ಬಂದ ಎದೆಗೀತ …. ರಾಮಯ್ಯನವರಿಗೆ ದಕ್ಕಿದೆ.

ನನಗೋ ಇದೋ ಸಾಕು
ನನ್ನ ಗೋರಿಯ ದಾರಿಯನರಿಯಲು
ಗಾಳಿ ಲೀಲೆಯಲ್ಲಿ ತೇಲಿಬಂದ ಈ ತರಗೆಲೆಯ ಗೋರಿ.
ಯಾರಳುವಿನ ದನಿಯದು
ಕಂದನದೋ ಕಟುಕನದೋ.
ಕರುಳ ಕವಲಾದ
ಒಡಹುಟ್ಟು ಗುಟ್ಟಿನಲ್ಲಿ
ಅಥವ ಇರಬಹುದೆ ನನ್ನ ಕ್ರೌರ್ಯದ ಕೈ
ಕಿತ್ತೆಸೆದ ಕುಡಿ ಭ್ರೂಣದ ಕನವರಿಕೆ.
ಹೇ ಮತಿಗೇಡಿ ಕಣ್ಣಲ್ಲಿರಲಿ
ಮುಂದಿರುವ ನೂರಾರು ಕಂದರಗಳು
ಈಸಿ ಹಿಂದಕ್ಕೆ….

ಇವು ಕವಿತೆಯ ಶರೀರದಿಂದ ಹೆಕ್ಕಿಕೊಂಡ ಸಾಲುಗಳು. ಅಕ್ಕಮಹಾದೇವಿ, ಬಸವಣ್ಣ, ಕದಳಿ ಮುಂತಾಗಿ ಬಿಡುಗಡೆಯ ಚಿತ್ರಗಳನ್ನು ತನ್ನೊಳಗೆ ಕೂಡಿಸಿಕೊಳ್ಳುತ್ತಾ ನಡೆಯುವ ಈ ದೀರ್ಘಕವಿತೆಯಲ್ಲಿ ಎದೆಯಾಳದ ನೋವನ್ನು ಹುಣ್ಣಾದ ಎದೆಬಡಿದುಕೊಂಡು ವಿಮೋಚನೆಗೊಳ್ಳುವ ಹಾದಿಯ ಪುನರಾನ್ವೇಷಣೆಯಲ್ಲಿ ತಾನು ಮತ್ತು ತನ್ನ ಜನಾಂಗಕ್ಕೆ ಎರವಾದ ದಿನದಿನದ ಅನುದಿನದ ಸಂಕಟಗಳನ್ನು ನೆನಪಿಸಿಕೊಳ್ಳುತ್ತಲೇ ಎಲ್ಲ ಕಷ್ಟಕೋಟಲೆಗಳನ್ನು ತುಂಡುತುಂಡು ಪ್ರತಿಮೆಗಳ ಮೂಲಕ ರಾಮಯ್ಯ ಕಟ್ಟಿಕೊಳ್ಳುತ್ತಾರೆ. ಇದರೊಟ್ಟಿಗೆ ತಾವು ಹೋರಾಟದ ಹಾದಿಯಲ್ಲಿ ಅನುಭವಿಸಿದ ಇಕ್ಕಟ್ಟುಗಳನ್ನು ಎದುರಿಸಿದ ಬಿಕ್ಕಟ್ಟುಗಳನ್ನು ಸಹ ಕಟ್ಟುತ್ತಲೇ ಯಾರೂ,
ಬರಲಿಲ್ಲ ನೆರವಿಗೆ
ಇರುವ ಒಂದು ಬೇಕಲ್ಲ ಉಳಿವಿಗೆ
ಜೀವ ಜೀವ ಕದಳಿಗೆ – ಎಂಬ ಎದೆಕಲಕುವ ಮಾತಿನೊಂದಿಗೆ ಕವಿತೆಯನ್ನು ಮುಗಿಸುತ್ತಾರೆ.

`ಎಲ್ಲಿದ್ದಾರೆ ಬೇಂದ್ರೆ’ ಕವಿತೆ ಬೇಂದ್ರೆಯವರ ಕವಿತೆಯ ಸಾಲುಗಳ ಬೆನ್ನುಹತ್ತಿ ಒಟ್ಟು ಬೇಂದ್ರೆ ಕಾವ್ಯದ ಸಂಭ್ರಮವನ್ನು ದಾಖಲಿಸುತ್ತಾ ಜೊತೆಗೆ ಕವಿಯ ದಿನಗಳು ಕಳೆದ ಬಳಿಕ ಆ ಮಾಂತ್ರಿಕ ಕೊಳಲನ್ನು, ಕೊಳಲ ನಾದವನ್ನು ಕಳೆದುಕೊಂಡ ಪೀಳಿಗೆ ಪಟ್ಟುಕೊಳ್ಳುವ ಲುಕ್ಸಾನಿನ ನೋವನ್ನು ಹಿಡಿದಿಡುತ್ತದೆ. ಇಡೀ ಕಾವ್ಯದ ಕೊನೆಯ ಸಾಲುಗಳು ಕವಿ ಹಿರಿಯ ಕವಿಯ ಘನತೆಯನ್ನು ಕಂಡರಿಸುವ ಪ್ರಯತ್ನದಲ್ಲಿದೆ.

ಮನುಷ್ಯ ಗೈರುಹಾಜರಾದ ಬಳಿಕ ನಿಸರ್ಗ ಮಾತ್ರ ಕುಡಿದೀಪವೊಂದನ್ನು ಮಣ್ಣುಗೂಡಿ ಗರ್ಭದಲ್ಲಿಟ್ಟು ಬೆಳಗುತ್ತಿದೆ ನಡು ಇರುಳ ಸೊಡರು ಕವಿತೆ. ಹಿರೋಶಿಮಾ ನಾಗಸಾಕಿ ಪಟ್ಟಣಗಳ ಮೇಲಿನ ಅಣುಬಾಂಬ್ ದಾಳಿಯ ಬಳಿಕ ನಿಸರ್ಗ ತನ್ನನ್ನು ತಾನು ನವೀಕರಿಸಿಕೊಳ್ಳುತ್ತದಾದರೂ ಮನುಷ್ಯ ಬದುಕು ನವೀಕರಣಗೊಳ್ಳುವ ಬಗೆ ಇಲ್ಲ. ಆ ಸುಟ್ಟ ಚಟ್ಟಗಳಂತೆಯೆ ಚಟ್ಟದ ಮೇಲೆ ಇರುವ ಆಕಾರವು ಕೂಡ ಬೆಂದು ಹೋಗಿದೆ. ಒಂದು ನೋವನ್ನು ಹೀಗೂ ಹೇಳಬಹುದು ಎಂಬ ಸಾಧ್ಯತೆಯನ್ನು ಬಿಡಿಸಿ ಕೊಡುವ ಈ ಕವಿತೆ ಕೊಳಲ ನಾದವನ್ನು ಕಳೆದುಕೊಂಡ ಮನುಷ್ಯ ಕುಲವೊಂದರ ಕಳೇವರದ ವರ್ಣನೆಯಂತಿದೆ.

ಸಂಘರ್ಷದ ಹಾದಿಯನ್ನು ಪ್ರಾಯದಿಂದಲೂ ತುಳಿಯುತ್ತ ಬಂದ ರಾಮಯ್ಯ ಬದುಕು ಕಲಿಸಿದ ಪಾಠಗಳಿಂದ ತನ್ನದೇ ಆದ ಆಧ್ಯಾತ್ಮವನ್ನು ರೂಢಿಸಿಕೊಂಡವರು. ಹಾಗಾಗಿ ಇವರ ಕವಿತೆಗಳಲ್ಲಿ ಥಟ್ಟನೆ ಅನುಭಾವದ ಛಾಯೆಗಳು ಓದುಗರ ಮುಂದೆ ಹಾದುಹೋಗುತ್ತವೆ. ಕವಿಯಲ್ಲಿ ಅನುಭಾವವೆಂದರೆ ಬದುಕಿನಿಂದ ವಿಮುಖವಾದ ಯಾವುದೋ ಕಂತೆಯಲ್ಲ, ಅದು ಎಲ್ಲವನ್ನೂ ಒಳಗೊಳ್ಳುವ ಒಂದು ಸ್ಥಿತಿ. ಕಾಯುತ್ತಿದೆ ಹೆಬ್ಬಾಗಿಲು ಎಂಬ ಕವಿತೆ ಮಾನವನ ಎದೆಯನ್ನೇ ಹೆಬ್ಬಾಗಿಲಿಗೆ ಪ್ರತೀಕವಾಗಿಸಿ ತಾಯಿಗಂಗೆ ಒಂದಿಲ್ಲೊಂದು ದಿನ ಅಲ್ಲಿಗೆ ಬಂದೆ ಬರುವಳು ಎಂಬ ಹುಂಬ ನಂಬಿಕೆಯಲ್ಲಿ ಕಾಯುತ್ತಿರುವ ಮಾನವನೆದೆಯ ಚಿತ್ರವನ್ನು ಕಟ್ಟಿಕೊಡುತ್ತದೆ. ಎಂಥದಿದ್ದೀತು ಕಾಯುವ ಎದೆ, ಹೇಗೆ ಇದ್ದೀತು ಎಂಬುದನ್ನು ಹೇಳುತ್ತದೆ ಕುಣಿವ ಮರಿ ನವಿಲಗರಿ ಬಣ್ಣ ಕಣ್ಣು ತುಂಬಿಕೊಂಡು ಎಂಬ ಸಾಲಿನಲ್ಲಿರುವ ಹಬ್ಬದ ಲಯದ ನಡಿಗೆ ಲಯರಾಹಿತ್ಯದ ಹಾದಿಯ ಕವಿಗಳು ಗಮನಿಸಬೇಕಾದ ನಡೆ. ಈ ಬಗೆಯ ನಡಿಗೆ ರಾಮಯ್ಯನವರ ಕವಿತೆಗಳೆಲ್ಲ ಕಡೆಯೂ ಕಂಡುಬರುತ್ತದೆ ನೋಡಿ: ತೂರಿ ಬರಬಹುದೆ ತುಳಿವ ಪಾದಗಳಡಿ ನಲುಗಿ ಮಣ್ಣಾದ ಹೆಸರಿಲ್ಲದ್ದೊಂದು ಹೂಪಕಳೆ ಹಾರಿ. ಇದು ಬೇಂದ್ರೆ ಅವರ ಕಾವ್ಯ ರಾಮಯ್ಯನವರ ಮೇಲೆ ಮಾಡಿದ ಪ್ರಭಾವ ಇದ್ದೀತು. ಹಾಗೆಯೇ ದಲಿತ ಸಂಘರ್ಷ ಸಮಿತಿಯ ಕಲಾ ವಿಭಾಗಕ್ಕೆ ಅವರು ಕೊಟ್ಟ ಬಹುದೊಡ್ಡ ಸಂಪತ್ತಿನ ಹಾಡುಗಳಲ್ಲಿ ಅಗತ್ಯವಾಗಿ ಕಂಡುಕೊಳ್ಳಬೇಕಾಗಿದ್ದ ಲಯವನ್ನು ರಾಮಯ್ಯ ಹಾಗೆಯೇ ಕಾವ್ಯಕ್ಕೂ ವಿಸ್ತರಿಸಿಕೊಂಡು ಬಂದಿರಬೇಕು.

ಮನುಷ್ಯ ಗೈರುಹಾಜರಾದ ಬಳಿಕ ನಿಸರ್ಗ ಮಾತ್ರ ಕುಡಿದೀಪವೊಂದನ್ನು ಮಣ್ಣುಗೂಡಿ ಗರ್ಭದಲ್ಲಿಟ್ಟು ಬೆಳಗುತ್ತಿದೆ ನಡು ಇರುಳ ಸೊಡರು ಕವಿತೆ. ಹಿರೋಶಿಮಾ ನಾಗಸಾಕಿ ಪಟ್ಟಣಗಳ ಮೇಲಿನ ಅಣುಬಾಂಬ್ ದಾಳಿಯ ಬಳಿಕ ನಿಸರ್ಗ ತನ್ನನ್ನು ತಾನು ನವೀಕರಿಸಿಕೊಳ್ಳುತ್ತದಾದರೂ ಮನುಷ್ಯ ಬದುಕು ನವೀಕರಣಗೊಳ್ಳುವ ಬಗೆ ಇಲ್ಲ. ಆ ಸುಟ್ಟ ಚಟ್ಟಗಳಂತೆಯೆ ಚಟ್ಟದ ಮೇಲೆ ಇರುವ ಆಕಾರವು ಕೂಡ ಬೆಂದು ಹೋಗಿದೆ. ಒಂದು ನೋವನ್ನು ಹೀಗೂ ಹೇಳಬಹುದು ಎಂಬ ಸಾಧ್ಯತೆಯನ್ನು ಬಿಡಿಸಿ ಕೊಡುವ ಈ ಕವಿತೆ ಕೊಳಲ ನಾದವನ್ನು ಕಳೆದುಕೊಂಡ ಮನುಷ್ಯ ಕುಲವೊಂದರ ಕಳೇವರದ ವರ್ಣನೆಯಂತಿದೆ.

`ಮಹಾನಗರದ ಫುಟ್ ಪಾತ್ ಗಳು’ ಕವಿತೆಯಲ್ಲಿ ಚರಂಡಿಯನ್ನು ಚರಿತ್ರೆ ಕುದಿವ ಬಾಂಡಿ ಎಂದು ರಾಮಯ್ಯ ಚಿತ್ರಿಸುತ್ತಾರೆ. ಮಹೋನ್ನತ ನಾಗರೀಕತೆಯ ಸೃಷ್ಟಿಯಾಗಿರುವ ಫುಟ್ ಪಾತ್ ಗಳು ಏನು ಹೇಳುತ್ತವೆ ಅನಿಸುತ್ತಿರುವಾಗಲೇ ಕವಿತೆ ಪಾತಾಳದಾಳದ ರಣಹದ್ದು ಹರಡಿದಾಗ ರೆಕ್ಕೆ ಆಕಾಶದಗಲ ಎಂದು ಅಮೆರಿಕದತ್ತ ಇಸ್ರೇಲಿನತ್ತ ಹಾರಿಬಿಡುತ್ತದೆ. ಶ್ರೀಲಂಕೆಗೂ ಹೋಗಿ ತಮಿಳು ಹೋರಾಟಗಾರರ ತಟ್ಟಿ ಬರುತ್ತದೆ. ಡಿಪೋದಲ್ಲಿ ಅಕ್ಕಿ ಪಡೆದ ಹುಡುಗ ಚೆಲ್ಲಿಹೋದ ಅಕ್ಕಿ ಕಾಳಿನ ಚಿತ್ರವು ಬರುತ್ತದೆ. ಒಂದೊಂದು ಚಿತ್ರವೂ ಒಂದೊಂದು ಪ್ರತ್ಯೇಕ ಕವಿತೆ ಆಗಬಹುದಾಗಿದ್ದ ಕಡೆಯೂ ಎಲ್ಲವೂ ಒಂದೇ ಕಡೆ ದುಡಿಯುವಂತೆ ರಾಮಯ್ಯ ಪ್ರಯತ್ನಿಸಿದ್ದಾರೆ. ಉದಾಹರಣೆಗೆ ಈ ಚಿತ್ರ ನೋಡೋಣ: ಜಡೆಯಿಂದ ಜಾರಿಬಿದ್ದ ಕೊಳೆಗೇರಿ ಮನೆಗೆಲಸದ ಕನಸ ಕಿಶೋರಿ ಒಬ್ಬಳು ಯಜಮಾನನ ಮನೆಯಂಗಳದಿ ಕದ್ದ ಗುಲಾಬಿ ಮೊಗ್ಗು ಎಂಬ ಮಾತು ಕವಿತೆಯಲ್ಲಿ ಎರಡು ಸಾಲಿನಲ್ಲಿ ಬಿಮ್ಮನೆ ಕುಂತು ಬಿದ್ದಿದೆ. ಇಂತಹ ಚೂರುಗಳು ರಾಮಯ್ಯನವರ ನೋಟಕ್ಕೆ, ಗ್ರಹಿಕೆಗೆ ಒಳ್ಳೆಯ ಉದಾಹರಣೆಗಳು. ಹಾಗೆಯೇ ಯಾಕೋ ಬಿಡಿಬಿಡಿಯಾಗಿ ನಿರ್ವಹಿಸಲಾಗದೆ ಒಂದೇ ಪೂಸಲು ಪೆಟ್ಟಿಗೆಯಲ್ಲಿ ಎಲ್ಲವನ್ನೂ ತುಂಬಿ ಹೊರೆ ಹೊತ್ತುಕೊಂಡು ಊರೂರು ಅಲೆಯುವ ಹೆಣ್ಣಿನ ಚಿತ್ರದಂತೆ ಈ ಕವಿತೆ ಕಾಣುತ್ತದೆ. ಸದ್ದಾಮನ ಗರಿಗರಿ ಇಸ್ತ್ರಿ ಸಮವಸ್ತ್ರ ತುಂಡು, ಗಿರಾಕಿಗೆ ಬಳಿದುಕೊಂಡ ಗಾಢ ಬಣ್ಣ ತುಟಿ ಬಣ್ಣ ಕರಗಿ ಹರಿದ ನಿಜದ ನೆರಳು ಕೂಡ ಫುಟ್ ಪಾತಿನ ಮೇಲೆ ಕಾಣಬಹುದು ಎನ್ನುವ ರಾಮಯ್ಯ ನಗರ ಸಂಸ್ಕೃತಿ ಮತ್ತು ಅದು ಸೃಷ್ಟಿ ಮಾಡಿದ ಅಮಾನುಷ ಜಗತ್ತನ್ನು ಕುರಿತು ಕವಿತೆಯುದ್ದಕ್ಕೂ ಮಾತನಾಡುತ್ತಾರೆ. ಹೆಜ್ಜೆ ಮೇಲೆ ಕಣ್ಣಿಟ್ಟು ನಡೆದವರಿಗೆ ಒಂದೇ ಒಂದಾದರೂ ಇಂತಹುದು ಕಾಣಿಸಬಹುದು ಎಂದು ರಾಮಯ್ಯ ಸಂಕಟದಿಂದಲೇ ಹೇಳುತ್ತಾರೆ. ಬಹುಶಃ ಅವರು ಬೆಟ್ಟದ ಮೇಲೆ ಅಲಾಯಿದ ಬದುಕುವುದಕ್ಕೆ ತೆಗೆದುಕೊಂಡ ನಿರ್ಧಾರದ ಹಿಂದೆ ಈ ಮಹಾನಗರಗಳ ಮೋಸವು, ಹಿಂಸೆಯು, ಕಪಟತನವು ಕಾರಣವಿದ್ದೀತು ಎಂದು ಭಾವಿಸಲು ಕಾರಣವಿದೆ.

`ಶರಣು ಇರುವೆ ಶರಣು’ ಇರುವೆಯನ್ನು ಕುರಿತು ಹೇಳುತ್ತಲೇ ಬೇರೆ ದಿಕ್ಕಿಗೆ ಹೊರಳುತ್ತದೆ. ಅದು ಇದ್ದಲ್ಲಿ ಇರದಂತೆ, ಬಿದ್ದಲ್ಲಿ ಬೆಳೆವಂತೆ, ಹೆಗ್ಗಲ್ಲ ಎದೆಯಲ್ಲೂ ರಂಗೋಲಿ ಚಿಗುರಿಟ್ಟು ನಡೆ ಕಲಿಸಿಕೊಟ್ಟಂತ ಕಾರುಣ್ಯ ನದಿ ಯಾವುದು ಎಂದು ಕೇಳುತ್ತದೆ. ಈ ಇರುವೆಯಂತಹ ಬದುಕು ಮಾನವನಿಗೂ ಬೇಕು. ಅದಕ್ಕೆಂದೇ ಅದರ ಉಳಿವಿನ ಗುಟ್ಟೇನು ಧರೆ ಮರೆಯ ಆ ಕೈ ಯಾವುದು ಎಂದು ರಾಮಯ್ಯ ಅನ್ವೇಷಣೆಯಲ್ಲಿ ತೊಡಗುತ್ತಾರೆ. ದಲಿತ ಸಂಸ್ಕೃತಿಯಿಂದ ದೇವರು ಮತ್ತು ಸೃಷ್ಟಿ ರಹಸ್ಯ ಇವುಗಳನ್ನು ಯಾರು ಕೂಡ ಕಿತ್ತುಕೊಳ್ಳಲಾಗದು. ಈ ಕವಿತೆಯ ಕೊನೆ ಅದನ್ನು ತಡಕಾಡುವಂತೆ ಇದೆ. ಇರುವೆಯ ನಡೆ ಸರಳ ಹಾಗೂ ಸುಂದರ. ಜಗತ್ತಿನಲ್ಲಿ ಸರಳವೇ ಸುಂದರ. ಸರಳ ಬದುಕಿನ ಜೀವಗಳ ಪುರಾಣಗಳು ಸಹ.

`ನನ್ನಜ್ಜ’ ಕವಿತೆಯಲ್ಲಿ ತನ್ನ ಹಿರೀಕರ ಸಾಲನ್ನ ಒಂದು ಪ್ರತಿಮೆಯಾಗಿಸಿ ಬದುಕಿನ ಆಧ್ಯಾತ್ಮವನ್ನು ಅದರ ಎಲ್ಲ ಕಾರ್ಪಣ್ಯಗಳ ಜೊತೆಗೆ ರಾಮಯ್ಯ ಕಡೆಯುತ್ತಾರೆ. ನನ್ನಜ್ಜ ಹೂಗಾರ, ನನ್ನಜ್ಜ ಮಾಲಿಗೂ ಮೊದಲು ಜಾಡಮಾಲಿ, ನನ್ನಜ್ಜ ಕಟುಕ, ನನ್ನಜ್ಜ ಘನರಹಿತ ರೂಪರಹಿತ ಮಳೆಕಾಡಿನ ಶಬ್ದ, ಅರಬ್ಬಿನ ಮರುಳುಗಾಡಲ್ಲಿ ನಡೆದವನು, ನೇಗಿಲಯೋಗಿ, ನನ್ನಜ್ಜ ಬುದ್ಧ, ಮಹಮದ, ಸಿದ್ಧ ರಸಸಿದ್ಧ, ಯೇಸು, ಜೀವವೃಕ್ಷದ ಚಿಗುರು, ಅವನ ನಡೆಯದು ಮೃದು ಮಧುರ ಪ್ರೇಮ ಕಾವ್ಯದ ಗುಲಾಬಿ ಅತ್ತರಿನ ಘಮಲು – ಈ ಚಿತ್ರಗಳಲ್ಲಿ ಬದಲಾಗುವ ಕ್ರಮವೊಂದನ್ನು ಅಂತಿಮವಾಗಿ ಕಾಣುವ ಪರಿಪೂರ್ಣತೆಯ ಚಿತ್ರವಾಗಿ ಒಟ್ಟು ಬದುಕನ್ನು ಪರಿಭಾವಿಸುವ ಮನೋಧರ್ಮ ಬಹಳ ಮೆಚ್ಚತಕ್ಕದ್ದು. ಆದರೆ ಈ ಬಗೆಯ ಆಗ್ರ್ಯಾನಿಕ್ ಆದ ಬಂಧವನ್ನು ಬಂಡೆಗಳು ಮನುಷ್ಯರಂತೆ ಚಲಿಸುವುದಿಲ್ಲ ಎಂಬ ಕವಿತೆಯಲ್ಲಿ ಕಾಣಲಾಗುವುದಿಲ್ಲ. ತಮ್ಮ ಕಾವ್ಯದಲ್ಲಿ ಬುದ್ಧ ಬಸವ ಅಂಬೇಡ್ಕರ್ ಮುಂತಾದವರ ತತ್ತ್ವ ಪ್ರಣೀತವಾದ ಬಿಡುಗಡೆಯ ಹಾದಿಯನಂಬಿ ನಡೆವಲ್ಲಿನ ದಲಿತ ಸಮಾಜಗಳ ಸಂವೇದನೆಗಳನ್ನು ಸಂದಿಗ್ಧತೆಯನ್ನು, ಅನುಮಾನಗಳನ್ನು ಗುರುತಿಸುವ ಪ್ರಯತ್ನವನ್ನು ಬಹಳ ಕಡೆ ರಾಮಯ್ಯ ಮಾಡುತ್ತಾರೆ. ಸಮಾಜವನ್ನು ಏಕಶಿಲಾರೂಪದಲ್ಲಿ ನೋಡುವುದನ್ನು ರಾಮಯ್ಯನವರ ಕಾವ್ಯ ನಿರಾಕರಿಸುತ್ತದೆ. ಆದ್ದರಿಂದ ಬಂಡೆಗಳು ಕವಿತೆಯು ತನ್ನ ಹೆಸರಿಗೆ ವಿರುದ್ಧವಾಗಿ ಸಾಧ್ಯತೆಯ ಪ್ರತಿರೂಪವಾಗಿ ಕಂಡುಬರುತ್ತವೆ.

ಕಿ.ರಂ ತೀರಿಕೊಂಡ ಸಂದರ್ಭದಲ್ಲಿ ಅವರನ್ನು ಕುರಿತು ಕವಿತೆಗಳು ಬಂದವು. ಹಾಗೆ ಬಂದ ಕವಿತೆಗಳಲ್ಲಿ ಒಳ್ಳೆಯ ಕವಿತೆ ಇರಬೇಕಿತ್ತು ಇನ್ನು ಕಿ.ರಂ.,
ಏನೇನೋ ಕಥೆ ಹಬ್ಬಿದೆ ಗಾಳಿಯಲ್ಲಿ
ಪದ್ಯ ಜೋಗಿ ಹೀರಿ ಭಟ್ಟಿ ಸಾರಾಯಿ ಗುಟುಕೊಂದು
ಹಿಂಡುತ್ತಿರುವವನಂತೆ ಕಗ್ಗಲ್ಲ ಕಾವ್ಯದಲ್ಲೂ ಎದೆಹಾಲು
ಮರಿ ಕವಿಗಳಿಗೆ…
ಎಂತಹ ಬೇಸಾಯಗಾರನೀತ
ತನ್ನದಲ್ಲದ ತೋಟಗಳಲ್ಲಿ ಹೂವರಳಲೆಂದವ
ಹಂದರ ತಪ್ಪಿದ ಕವಿಬಾಲ ಬಳ್ಳಿಗಳಿಗೆ
ಎದೆ ಚಪ್ಪರವನೆತ್ತಿ ಕೊಟ್ಟವ
ಹಾಗೆ ಬಿಡುಬೀಸು ಬಿಟ್ಟು ಕೊಟ್ಟವ
ಇರಬೇಕಿತ್ತು ಇನ್ನೂ ಕಿ ರಂ
ಹೀರಲು ಈ ವಿಸ್ಕಿ ರಂ….
ಬಹುಶಃ ಇದಕ್ಕಿಂತ ಉತ್ತಮ ಶ್ರದ್ಧಾಂಜಲಿ ಬರೆಯುವುದು ಕಷ್ಟವೇನೋ. ಹಾಗೆಯೇ ಈ ಕವಿತೆ ಕಿ.ರಂ ಕಾವ್ಯವನ್ನು ಆರಾಧಿಸುತ್ತಿದ್ದ ಬಗೆಯನ್ನು ಅವರು ವಚನಗಳ ಅಥವಾ ಪ್ರಾಚೀನ ಕನ್ನಡ ಪಠ್ಯಗಳನ್ನು ಅವರು ಅನುಸಂಧಾನ ಮಾಡುತ್ತಿದ್ದ ವಿಧಾನವನ್ನು ಕುರಿತ ವಿವರ ರಾಮಯ್ಯನವರ ಕಣ್ತಪ್ಪಿಸಿಬಿಟ್ಟಿದೆ ಎನಿಸುತ್ತದೆ.

ನನ್ನಜ್ಜ ಕವಿತೆಯಲ್ಲಿ ತನ್ನ ಹಿರೀಕರ ಸಾಲನ್ನ ಒಂದು ಪ್ರತಿಮೆಯಾಗಿಸಿ ಬದುಕಿನ ಆಧ್ಯಾತ್ಮವನ್ನು ಅದರ ಎಲ್ಲ ಕಾರ್ಪಣ್ಯಗಳ ಜೊತೆಗೆ ರಾಮಯ್ಯ ಕಡೆಯುತ್ತಾರೆ. ನನ್ನಜ್ಜ ಹೂಗಾರ, ನನ್ನಜ್ಜ ಮಾಲಿಗೂ ಮೊದಲು ಜಾಡಮಾಲಿ, ನನ್ನಜ್ಜ ಕಟುಕ, ನನ್ನಜ್ಜ ಘನರಹಿತ ರೂಪರಹಿತ ಮಳೆಕಾಡಿನ ಶಬ್ದ, ಅರಬ್ಬಿನ ಮರುಳುಗಾಡಲ್ಲಿ ನಡೆದವನು, ನೇಗಿಲಯೋಗಿ, ನನ್ನಜ್ಜ ಬುದ್ಧ, ಮಹಮದ, ಸಿದ್ಧ ರಸಸಿದ್ಧ, ಯೇಸು, ಜೀವವೃಕ್ಷದ ಚಿಗುರು, ಅವನ ನಡೆಯದು ಮೃದು ಮಧುರ ಪ್ರೇಮ ಕಾವ್ಯದ ಗುಲಾಬಿ ಅತ್ತರಿನ ಘಮಲು – ಈ ಚಿತ್ರಗಳಲ್ಲಿ ಬದಲಾಗುವ ಕ್ರಮವೊಂದನ್ನು ಅಂತಿಮವಾಗಿ ಕಾಣುವ ಪರಿಪೂರ್ಣತೆಯ ಚಿತ್ರವಾಗಿ ಒಟ್ಟು ಬದುಕನ್ನು ಪರಿಭಾವಿಸುವ ಮನೋಧರ್ಮ ಬಹಳ ಮೆಚ್ಚತಕ್ಕದ್ದು.

ಪ್ರಾಯಶಃ ಎಲ್ಲ ಲೇಖಕರಿಗೂ ತಮ್ಮ ಸಾಹಿತ್ಯವನ್ನು ಕುರಿತು ಮಾತನಾಡುವುದು ಅಗತ್ಯವಾಗುತ್ತದೆ. ಕವಿಗಳಂತೂ ತಮ್ಮ ಕಾವ್ಯ ಸೃಷ್ಟಿಯ ತಲ್ಲಣಗಳನ್ನು, ಸಂಭ್ರಮವನ್ನು ಕುರಿತು ಕನಿಷ್ಠ ಎಲ್ಲಾದರೂ ಒಂದು ಕಡೆ ಹೇಳಿಕೊಂಡೇ ಇರುತ್ತಾರೆ. ನನ್ನ ಕವಿತೆ ಈ ಸಾಲಿಗೆ ಸೇರುವ ಕವಿತೆ. ಆದರೆ ಮೊದಲಲ್ಲೆ ಕವಿತೆ ಬೇರೆ ಕವಿಗಳ ಕವಿತೆಗಿಂತ ಬೇರೆಯೇ ಆದ ಹಾದಿಯನ್ನು ತುಳಿಯುತ್ತದೆ. ನನ್ನ ಕವಿತೆ ಕಂಚು ಮಿಂಚು ಅಚ್ಚುಮೆಚ್ಚು ಕಾಸಿಲ್ಲದೆ ಕೊಳ್ಳಲಾಗದೆ ಬಿಟ್ಟು ಬಂದ ಬಿಟ್ಟು ಬಂದ ಚಿನಾಲ್ ಪಟ್ಟೆ ಸೀರೆ ಸೆರಗಂಚು ಎಂದು ಬಗೆಯುವ ಕವಿತೆಯ ಚಿತ್ರವೇ ಹೇಳುತ್ತದೆ ಇದೊಂದು ಬಹಳ ಚೆಂದವಾಗಿ ಕಟ್ಟಿದ ಕವಿತೆ ಎಂದು. ಕೊನೆಗೆ ತನ್ನನ್ನು ನಿರಸನಗೊಳಿಸಿಕೊಳ್ಳುವ ಕವಿತೆಯ ಅಂತ್ಯ ನಿಜಕ್ಕೂ ಅನುಭಾವಿ ನೆಲೆಯದ್ದು. ಬೆಳಗು ಬತ್ತಿಯ ನೆತ್ತಿ ಕಿಟ್ಟ ಕಟ್ಟಿದ್ದಲ್ಲಿ ಕ್ಷಮಿಸಿ, ಬೆಳಕಿನ ಅದಷ್ಟೇ ಪಾಲು ನಿಮಗೆ ಕಿಟ್ಟ ಚಟ್ಟ ಇರಲಿ ಎಂಬ ನುಡಿ ತನ್ನದೇ ಆದ ಓದುವ ಕ್ರಮವನ್ನು ಬೇಡುತ್ತದೆ.

ಪದ್ಯ ಪದ್ಯ ದಿಕ್ಕು ತಪ್ಪಬಾರದು ಸಂಬಂಧದಂತೆ ಕವಿತೆ ರೈಟರ್ಸ್ ಬ್ಲಾಕ್ ಬಗ್ಗೆ ಹೇಳುತ್ತದೆ ಅನ್ನಿಸುವಷ್ಟರಲ್ಲಿ ದಮನದ ಚಿತ್ರವೊಂದನ್ನು ಮುಂದಿಡುವ ಮೂಲಕ ನಮ್ಮನ್ನು ಕುರಿತು ಬೇರೆ ಏನನ್ನೋ ಹೇಳಲು ತೊಡಗುತ್ತದೆ. ನೆಲಕ್ಕೋ ಗೋಡೆಗೂ ಎತ್ತಿ ಒತ್ತಿ ಹಿಡಿದು ಮುಖ ಅದುಮಿ ಹಿಡಿದಿವೆ ಬೆನ್ನಿಗೊದ್ದಿರುವ ಸಾಲು ಕಾಲು ಬಲ ಸ್ವಪ್ನ ಸೀಮೆಯ ಹಂದಿ ನಾನು… ಹೀಗೆ ನಮ್ಮ ಗಮನವನ್ನು ದಿಕ್ಕುಗೆಡಿಸಿದರು ಕವಿತೆಯ ಉದ್ದೇಶ ಸಂಬಂಧವಾಗಲಿ ಕವಿತೆಯಾಗಲಿ ದಿಕ್ಕು ತಪ್ಪಬಾರದು ಎಂಬುದರ ನಿಶ್ಚಿತ ಗುರಿಯ ಪ್ರತಿಪಾದನೆಯೆ ಆಗಿದೆ. ಇದಕ್ಕೆ ಕಾವ್ಯ ಇಲ್ಲಿಯವರೆಗೂ ಏನನ್ನು ಮಾಡದೆ ಹೋಗಿರುವುದು ಮುಖ್ಯ ಕಾರಣವಾಗಿದೆ. ಪದ್ಯಗಳು ದಿಕ್ಕು ಹಲವು ತೋರಲಾರವು ಎನ್ನುವುದನ್ನು ಈಗ ಅನುಭವದಿಂದ ಕಲಿತಿದ್ದೇನೆ ಎನ್ನುವ ರಾಮಯ್ಯ ಮುಂದುವರಿದು ಹೊಸ ಹುಟ್ಟಿಗೆ ತೊಟ್ಟಿಲು ಕೂಡ ಆಗಬಹುದು ಕವಿತೆ ಎನ್ನುವುದರ ಮೂಲಕ ಕಾವ್ಯದ ಸಾಧ್ಯತೆಯನ್ನು ಕುರಿತು ಆಶಾಭಾವದ ಎಳೆಯನ್ನು ಎದೆಯಲ್ಲಿ ಇಟ್ಟುಕೊಂಡಿರಬೇಕಾಗುವುದನ್ನು ಕುರಿತು ಹೇಳುತ್ತಾರೆ. ಕಾವ್ಯ ಮತ್ತು ಸಂಬಂಧಗಳು ಉಳಿಯಬೇಕು. ತನ್ನನ್ನು ತಾನೆ ಕೊಂದುಕೊಳ್ಳದೆ, ಯಾರಾದರೂ ಎತ್ತಿ ಎದೆಯ ತೊಟ್ಟಿಲಲ್ಲಿಟ್ಟು ಜೋಗುಳ ಹಾಡುವವರಿಗೂ ಎಂಬ ಅವರ ಮಾತೊಂದು ಸುಂದರ ಅನುಭೂತಿ.

`ತೇಲಿದೆ ಚಂದ್ರನ ಕಳೇಬರ’ ಸರಿಯಲಿಸಂ ಸಿದ್ಧಾಂತವನ್ನು ಕಣ್ಣಿನಲ್ಲಿ ಇಟ್ಟುಕೊಂಡು ಚಂದ್ರನನ್ನು ನೋಡಿದ ರೀತಿಯಲ್ಲಿ ರಚಿತವಾಗಿದೆ. ಏನೇ ಆಗಲಿ ಚಂದ್ರ ದುಂಡಗೆ ಇದ್ದರೇನೇ ಚಂದ ಎಂಬ ಪಾರಂಪರಿಕ ಸೌಂದರ್ಯ ಮೀಮಾಂಸೆ ಕವಿತೆಯ ಒಳಗಡೆ ಬಂದು ಸರಿಯಲಿಸಂನ ಆಶಯಗಳಿಗೆ ಸ್ವಲ್ಪ ಕುಂದನ್ನು ಉಂಟುಮಾಡಿದರೂ ಉಳಿದ ಎಲ್ಲೆಡೆಯೂ ಕವಿತೆ ವಾಸ್ತವಕ್ಕೆ ಮತ್ತು ಭ್ರಮೆಗೆ ತಾಕಲಾಡುತ್ತಾ ಕೊನೆಗೆ ಭ್ರಮೆಯಲ್ಲೇ ತಂಗುತ್ತದೆ. ಇಂತಹ ಕವಿತೆಗಳ ಆಶಯಗಳನ್ನು ಮೊದಲ ನೋಟದ ಓದಿಗೆ ಕಂಡುಕೊಳ್ಳುವುದು ಕಷ್ಟ. ಕಾವ್ಯ ನಿರ್ಮಾಣದ ಹಿಂದೆ ನಿಶ್ಚಿತ ಉದ್ದೇಶ ಇರುವುದಂತೂ ರಾಮಯ್ಯನವರ ಕವಿತೆಗಳ ಓದಿನಿಂದ ಸ್ಪಷ್ಟವಾಗುತ್ತದೆ. ಚಂದ್ರನನ್ನು ಹೆಣ್ಣಿನ ಮುಖಕ್ಕೆ ತಂದು ಚಂದ್ರಮುಖಿಯಾಗಿಸುವದನ್ನು ಚಿಂತಿಸುವ ಕಾವ್ಯವೇ ಅದನ್ನು ಮುಂದೆ ಆಕಾಶದಲ್ಲಿ ತೇಲುವ ಕೂಸಿನ ಕಳೇಬರದಂತೆ ಭಾವಿಸುವಲ್ಲಿ ಒಂದು ಸಂಕೀರ್ಣ ಅಭಿವ್ಯಕ್ತಿಯನ್ನು ನಾವು ಕಾಣಬಹುದು.

ಸೂಕ್ಷ್ಮಪ್ರಜ್ಞೆಯ ದಲಿತನೊಬ್ಬನಲ್ಲಿ ತನ್ನ ಕಣ್ಣೆದುರಿನಲ್ಲಿಯೇ, ನಡೆಯುತ್ತಲೇ ಇರುವ ವಿದ್ಯಮಾನಗಳು ಯಾವ ರೀತಿಯ ಅಂತರ್ಯುದ್ಧವನ್ನು ಹುಟ್ಟುಹಾಕಬಹುದು ಎನ್ನುವ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ದಲಿತ ಕಾವ್ಯವನ್ನು ಪ್ರವೇಶಿಸಬೇಕು ಎನ್ನುವ ಪೂರ್ವನಿಯೋಜನೆಯನ್ನು ಇದು ಹೇಳುತ್ತದೆಯೇ ಹೇಳದೆ ಬಿಡುತ್ತದೆಯೇ ಎನ್ನುವುದು ಕೂಡ ಪರಿಶೀಲನಾರ್ಹ. ಬಸವ, ಬುದ್ಧ, ಅಂಬೇಡ್ಕರ್, ಗಾಂದಿ ಇವರು ಪ್ರತಿಪಾದಿಸಿದ ಆಶಯ ಅಥವಾ ಧರ್ಮ ಸೀಮಾತೀತವಾದದ್ದು. ಆದ್ದರಿಂದ ಅವರ ನಂತರದ ಉತ್ತರದಾಯಿತ್ವವನ್ನು ಹೆಗಲಲ್ಲಿ ಹೊತ್ತುಕೊಂಡ ನಾವು ಸೀಮೋಲ್ಲಂಘನ ಮಾಡಲು ಎಂದಿಗೂ ಸಾಧ್ಯವಿಲ್ಲ. ಆದರೆ ಈ ಸೀಮೆಗಳನ್ನು ಆಧುನಿಕ ಪ್ರಜ್ಞೆಯ ಮುಖಾಂತರ ವಿಸ್ತರಿಸಿಕೊಂಡು ಹೋಗುವುದು ಸಾಧ್ಯವಿದೆ. ಸ್ವಾತಂತ್ರ್ಯಾನಂತರದ ಇಷ್ಟು ದಿನಗಳ ಕಾಲದಲ್ಲೂ ಅದು ಸಾಧ್ಯವಾಗಿಲ್ಲ ಎಂದರೆ ನಮ್ಮ ಮನೋಭೂಮಿಕೆಯಲ್ಲಿನ ಪರಿವರ್ತನೆಗಳು ಮೇಲೆ ಕಂಡ ಮಹನೀಯರ ಮನದಿಚ್ಛೆಯಂತೆ ಆಗುತ್ತಿಲ್ಲ. ಇಂದು ಶೋಷಕ ವರ್ಗ ಎಂದಿಗಿಂತಲೂ ಹೆಚ್ಚು ಧ್ರ್ರುವೀಕೃತವಾಗುತ್ತಿದೆಯೇ ಎಂಬ ಶಂಕೆ ಯಾವ ಪ್ರಜ್ಞಾವಂತರನ್ನು ಕೂಡ ಕಾಡದೆ ಬಿಡದು. ಇದು ಪ್ರಜ್ಞಾವಂತ ದಮನಿತ ದಲಿತರನ್ನು ಕಾಡುವ ಬಗೆ ನಿಜಕ್ಕೂ ಹೃದಯವೇಧಿಯಾದದ್ದು. ಇಂತಹ ವೇದನೆ ಮತ್ತು ಸಂಘರ್ಷ ರಾಮಯ್ಯನವರ ಕಾವ್ಯವನ್ನು ರೂಪಿಸಿರಲು ಸಾಕು. ಹಾಗಾಗಿ ದುಂಡು ಚಂದಿರ ಅತ್ತಿತ್ತ ಅಮುಕಿ ಹಿಂಸೆಗೀಡಾಗಿ ಕೋಲು ಚಂದಿರನೆ ಆಗುವುದು. ಇಡೀ ತೇಲಿದೆ ಚಂದ್ರನ ಕಳೇಬರ ಎಂಬ ಈ ಕವಿತೆ ಸಾಲ್ವಡಾರ್ ಡಾಲಿಯ ಕಲಾಕೃತಿಯಂತೆ ಕಂಡುಬರುತ್ತದೆ. ಇಂತಹ ಅನ್ಯೋಕ್ತಿ ವಿಧಾನಗಳಿಂದ ಕಾವ್ಯ ರಚಿಸುವ ದಲಿತ ಕವಿಗಳ ಸಾಲಿಗೆ ರಾಮಯ್ಯ ತಡವಾಗಿ ಸೇರಿಕೊಂಡಿದ್ದಾರೆ. ಹೋರಾಟದ ಹಾಡುಗಳನ್ನು ಬರೆಯುವ ನೇರ ಮನಮುಟ್ಟುವ ಧಾಟಿಗೂ ಕಾವ್ಯ ಬರೆಯುವ ರೀತಿಗೂ ಸ್ಪಷ್ಟವಾದ ಅಂತರವನ್ನು ರಾಮಯ್ಯ ಕಾಯ್ದುಕೊಂಡಿದ್ದಾರೆ. ಈ ಅಂತರವೇ ಶ್ರೇಷ್ಠ ಮಟ್ಟದಲ್ಲಿ ಕಾವ್ಯದ ಅಭಿವ್ಯಕ್ತಿಗೆ ಕಾರಣವಾಗಿದೆ ಎಂದು ಹೇಳಬಹುದು.

ರಾಮಯ್ಯನವರ ಕೆಲವು ಕವಿತೆಗಳಲ್ಲಿ ನಡಿಗೆಯ ಬದಲಿಗೆ ಓಡುವ ಗತಿ ಕಂಡುಬರುತ್ತದೆ ಉದಾಹರಣೆಗೆ `ವಿರಾಮ ಕಾಲ ಆರಾಮ ಕಾಲ’ವನ್ನು ನೋಡಬಹುದು. ಇಲ್ಲಿನ ಪ್ರತಿ ಚಿತ್ರವೂ ಯಾವುದೋ ಧಾವಂತದಲ್ಲಿ ಚಲಿಸುತ್ತಲೇ ಇರುತ್ತದೆ. ಈ ನಡಿಗೆಯಲ್ಲೇ ಮೊದಲು ಅನ್ನಭಾಗ್ಯದ ಫಲವ ನೆನೆದು, ಬಳಿಕ ಅಂದಿನ ಶ್ರಮಸಂಸ್ಕೃತಿಯ ಗುರುತಿಸಿ, ಬಳಿಕ ಒಟ್ಟು ಚರಿತ್ರೆಯನ್ನೇ ಒಳಗೊಂಡಂತೆ ನೆನಪಿಸುತ್ತಾ ಭಾರವಾಗುತ್ತಾ ಕಟ್ಟಕಡೆಗೆ ಬುದ್ಧರು ಆಗುವುದು ಎಂಬ ಈ ಪಾಕವನ್ನು ಗಮನಿಸುವ ರಾಮಯ್ಯ ನಡಿಗೆಗೆ ಬಳಿಕ ಹಿಂದಿರುಗುತ್ತಾರೆ. ಸೇಡಿನ ಚಿಗುರಿನ ಕುಡಿ ಮುರಿಯುತ್ತಲೇ ಇದ್ದಲ್ಲಿ ಬುದ್ಧನೆಂಬ ಬುದ್ಧ ಬಂದೇ ಬರುತ್ತಾನೆ; ಇರುವಲ್ಲಿಗೆ ಬರುತ್ತಾನೆ ಎಂಬ ನಂಬಿಕೆ ಬಹಳ ಇತ್ಯಾತ್ಮಕವಾಗಿಯು ವಿಮರ್ಶಾತ್ಮಕವಾಗಿಯೂ ಕಂಡುಬರುತ್ತದೆ. ಅದರ ಜೊತೆಗೆ ತಮ್ಮ ಈ ಪೂರ್ವಿಕ ನೆಲೆಗದ್ದುಗೆಗಳಿಗೆ ಸಿದ್ಧಗೊಳಿಸುವ ಶುದ್ಧ ಹಂಬಲವನ್ನು ನಮ್ಮ ಮುಂದಿಡುವ ರಾಮಯ್ಯ ಅದರ ಮುಂದಿನ ಗತಿಯ ಬಗ್ಗೆ ನಿರಾಶೆಯಿಂದಲೇ ಮಾತನಾಡುತ್ತಾರೆ. ಹೇಳಿದರೂ ಬೋಧವಾಗುವುದೇನು ಈ ಆರಾಮ ವಿರಾಮ ಕಾಲದಲ್ಲಿ ವಿರಮಿಸುತ್ತಿರುವ ಸುಖಬೋಧ ನವಬೋಧ ಬುದ್ಧರಿಗೆ ಎನ್ನುತ್ತಾರೆ. ಇಂದಿನ ವಾಸ್ತವಗಳಿಗೆ ರಾಮಯ್ಯ ಸ್ಪಂದಿಸುವ ವಿಧಾನವಾಗಿ ಇದು ಕಂಡುಬರುತ್ತದೆ. ವಾಸ್ತವವಾಗಿ ಚಳುವಳಿಗಳು ಏಕೋ ದಿಕ್ಕು ತಪ್ಪಿ ಎತ್ತೆತ್ತಲೋ ನೋಡುತ್ತಿರುವಾಗ ಈ ಎಚ್ಚರ ಬಹಳ ಮಹತ್ವದ ಸೂಚನೆಯನ್ನು ಕೊಡುತ್ತಿದೆ.

ಪದ್ಯ ಪದ್ಯ ದಿಕ್ಕು ತಪ್ಪಬಾರದು ಸಂಬಂಧದಂತೆ ಕವಿತೆ ರೈಟರ್ಸ್ ಬ್ಲಾಕ್ ಬಗ್ಗೆ ಹೇಳುತ್ತದೆ ಅನ್ನಿಸುವಷ್ಟರಲ್ಲಿ ದಮನದ ಚಿತ್ರವೊಂದನ್ನು ಮುಂದಿಡುವ ಮೂಲಕ ನಮ್ಮನ್ನು ಕುರಿತು ಬೇರೆ ಏನನ್ನೋ ಹೇಳಲು ತೊಡಗುತ್ತದೆ. ನೆಲಕ್ಕೋ ಗೋಡೆಗೂ ಎತ್ತಿ ಒತ್ತಿ ಹಿಡಿದು ಮುಖ ಅದುಮಿ ಹಿಡಿದಿವೆ ಬೆನ್ನಿಗೊದ್ದಿರುವ ಸಾಲು ಕಾಲು ಬಲ ಸ್ವಪ್ನ ಸೀಮೆಯ ಹಂದಿ ನಾನು… ಹೀಗೆ ನಮ್ಮ ಗಮನವನ್ನು ದಿಕ್ಕುಗೆಡಿಸಿದರು ಕವಿತೆಯ ಉದ್ದೇಶ ಸಂಬಂಧವಾಗಲಿ ಕವಿತೆಯಾಗಲಿ ದಿಕ್ಕು ತಪ್ಪಬಾರದು ಎಂಬುದರ ನಿಶ್ಚಿತ ಗುರಿಯ ಪ್ರತಿಪಾದನೆಯೆ ಆಗಿದೆ. ಇದಕ್ಕೆ ಕಾವ್ಯ ಇಲ್ಲಿಯವರೆಗೂ ಏನನ್ನು ಮಾಡದೆ ಹೋಗಿರುವುದು ಮುಖ್ಯ ಕಾರಣವಾಗಿದೆ.

ದೇಶ ವಿಭಜನೆಯ ಕಾಲಕ್ಕೆ ನಡೆದ ಮೈಂಡ್ಲೆಸ್ ಹಿಂಸೆಯನ್ನು ವರ್ಣಿಸುವ `ಭೂಪಟಗಳು ಹರಿದುಕೊಳ್ಳುತ್ತವೆ’ ಎಂಬ ಕವಿತೆ ಕೊನೆಗೆ ಕಂಡರಿಸುವುದು ಒಂದು ಅನಾದಿ ಸತ್ಯವನ್ನು. ಅದೆಂದರೆ ವಿಭಜನೆಗಳು ಯಾತಕ್ಕಾದರೂ ಸಂಭವಿಸಿರಲಿ, ಮನದಂಗಣದ ಭೂಪಟಗಳು ಹರಿದುಕೊಳ್ಳುತ್ತವೆ. ಹೀಗೆ ಹೇಳಿಕೊಳ್ಳುತ್ತಾ ಬಿರಿದು ನೆಲ ನೇಗಿಲ ಕುಳಕ್ಕೆ ಹದಕ್ಕೆ ತಕ್ಕಂತೆ ಸಿರಿ ಸಮೃದ್ಧ ಫಸಲಿಗೆ ಎಂಬ ತಿರುವು ತಲುಪುವುದು ಇತ್ಯಾತ್ಮಕ ಚಿಂತನೆಯ ಪ್ರತೀಕವಾಗಿದೆ ಎನಿಸಿದರೂ ತರ್ಕಾತೀತವೆನಿಸುತ್ತದೆ. ಕವಿ ಮತ್ತೆ ಮತ್ತೆ ಹಿಂತಿರುಗುವುದು ಹಿಂಸೆಯ ನಿರರ್ಥಕತೆಗೆ. ಪ್ರಾಯಶಃ ಈ ಸಂಧರ್ಭದಲ್ಲಿ ಎಲ್ಲಾ ಸೂಕ್ಷ್ಮ ಬರಹಗಾರರು ತಾಳಲೇಬೇಕಾದ ನಿಲುವು ಹಿಂಸೆಯ ನಿರಾಕರಣೆಯೊಂದೇ.

ಸರ್ವಸಮಾನತೆಯನ್ನು ಅದರ ಅತ್ಯುನ್ನತ ಸ್ತರದಲ್ಲಿ ಬಿತ್ತಿದ ಬಸವಣ್ಣನ ಕೂಡಲಸಂಗಮಕ್ಕೆ ಒದಗಿರುವ ಸ್ಥಿತಿಯ ಬಗ್ಗೆ ಬರೆದ ಕವಿತೆ `ಕೂಡಲಸಂಗಮ’. ಕಲ್ಯಾಣದಲ್ಲಿ ಸತ್ತು ಮತ್ತೆ ಹುಟ್ಟಿದ ಬಸವನ ಎಮ್ಮೆಯ ರೂಪಕವನ್ನು ಕವಿ ಇಲ್ಲಿ ಬಳಸುತ್ತಾರೆ. ಈಗ ಮಗುಚಲಾಗಿದೆ ಗತಚರಿತ್ರೆ ಪುಟ ಖುರಪುಟ/ ಮುಳುಗಿ ಮರೆಯಾಗಿದೆ ಹಿಂದಣ ಎಲ್ಲ ಎಲ್ಲೆ ಹೆಜ್ಜೆಗುರುತು ಎನ್ನುವ ಕವಿ ಕೇಳುವ ಪ್ರಶ್ನೆ ಮಾಂತ್ರಿಕ ರಸ ರಸಾಯನ ಚಿಮ್ಮಿ ಉಗುಳು ಪಿಚಕಾರಿ ಹೋಳಿ ಐಕ್ಯಕ್ಕೆ ತಾವು ಇನ್ನೆಲ್ಲಿ ಬೇಕಲ್ಲ ಕುಂಭ ಕುಚ ಯೋನಿ ಜೋಡಿ ಜೋಡಿ. ಇಂತಹ ಕೂಡಲ ಸಂಗಮದಲ್ಲಿ ಯಾರದೋ ತೀಟೆಗೆ ಆಗುವ ನಡೆಯುವ ಸೆಮಿನಾರುಗಳ ವಿಡಂಬನೆಯನ್ನು ಕೂಡ ಇಲ್ಲಿ ಕವಿ ಮಾಡಿದ್ದಾರೆ. ಸುತ್ತಮುತ್ತಿನದೆಲ್ಲವನ್ನು ಬಾಚಿತಬ್ಬಿಕೊಳ್ಳುವಂತಹ ನೀಳ ಕವಿತೆಗಳಲ್ಲಿ ಸಾಮಾನ್ಯವಾಗಿ ಕವಿ ಎದುರಿಸುವ ಸಮಸ್ಯೆ ಎಂದರೆ ಕವಿತೆಯ ಇಂಟೆಗ್ರಿಟಿಯನ್ನು ಕಾಪಾಡಿಕೊಳ್ಳುವುದು ಮತ್ತು ವಾಚಾಳಿತನದಿಂದ ಅದನ್ನು ಮುಕ್ತಗೊಳಿಸುವುದು. ಮಾತಿನ ಭರದಲ್ಲಿ ಅತ್ಯಂತ ಪ್ರಸ್ತುತ ಮತ್ತು ಮುಖ್ಯವಾದ ಮಾತು ಕೂಡ ಮಾತುಗಳ ನಡುವೆ ಅಡಗಿಹೋಗುತ್ತದೆ. ಒಂದು ವ್ಯಾಪಕವಾದ ಎಡಿಟಿಂಗ್ ಮಾಡುವ ಉದ್ದೇಶ ಕವಿಗೆ ಇಲ್ಲ ಎಂಬುದು ಬಹಳ ಕವಿತೆಗಳ ಓದಿನಿಂದ ಶ್ರುತವಾಗುತ್ತದೆ. ಕೂಡಲಸಂಗಮ ಕವಿತೆ ಒತ್ತಾಗಿ ಹೆಣೆಯಲ್ಪಟ್ಟ ನಾಲ್ಕೂವರೆ ಪುಟದ ಕವಿತೆ. ರಾಮಯ್ಯನವರ ವಿಚಾರ ಮಂಡನೆಯ ಕ್ರಮವೇ ಒಂದರ ಸುತ್ತ ಇರುವ ಎಲ್ಲ ಸಂಗತಿಗಳನ್ನು ಬಾಚಿತಬ್ಬಿಕೊಳ್ಳುವುದು. ಈ ಪ್ರಕ್ರಿಯೆಯಲ್ಲಿ ಸಹಜವಾಗಿ ಬೇಕಾದ ಬೇಡವಾದ ಪೂರಕ ಮಾರಕ ಸಂಗತಿಗಳೆಲ್ಲ ನಿಬಿಡವಾಗಿ ಕವಿತೆಯೊಳಗೆ ಸೇರಿಕೊಂಡುಬಿಡುತ್ತವೆ. ಇದೊಂದು ಬಗೆಯ ಮಾತಿನ ಜಾತ್ರೆಯಾಗಿ ಪರಿಣಮಿಸುತ್ತದೆ.

ಕವಿತೆಗಳ ಉದ್ದಕ್ಕೂ ಒಂದು ಆತಂಕ ಅಂತರ್ಗತವಾಗಿ ಹರಿಯುವುದನ್ನು ಅದಕ್ಕೆ ತಕ್ಕಂತ ಸಂಧರ್ಭ ಸೃಷ್ಟಿಯನ್ನು ನಾವು ಇವರ ಕವಿತೆಗಳಲ್ಲಿ ಸ್ಪಷ್ಟವಾಗಿ ಗಮನಿಸಬಹುದು ಅದಕ್ಕೆ ಗುರುತು ಟ್ರಾಫಿಕ್ ಜಾಮಿನಲ್ಲಿ ಸೂರ್ಯ ಎಂಬ ಕವಿತೆ. ಟ್ರಾಫಿಕ್ ಜಾಮಿನಲ್ಲಿ ಕುಂತಿಯನ್ನು ಒಂದು ದಡದಲ್ಲಿ ನಿಲ್ಲಿಸಿ, ಮತ್ತೊಂದು ದಡದಲ್ಲಿ ಸೂರ್ಯನನ್ನು ಸಿಕ್ಕಿಸಿ ಅಲ್ಲಿನ ಆತಂಕವನ್ನು ನುಡಿಗೆ ಇಳಿಸಿ ಸುಟ್ಟ ಚಟ್ಟಗಳ ಹಿರೋಶಿಮಾ ನಾಗಸಾಕಿ ಪಟ್ಟಣಗಳು ಘನಘೋರ ಕುಲುಮೆಯಲ್ಲಿ ಬೇಯುವಿಕೆಯನ್ನು ಚಿತ್ರಿಸುವ ಕವಿ ಕೇಂದ್ರವೊಂದನ್ನು ಕವಿತೆಗೆ ಒದಗಿಸಲು ಮರೆತಿದ್ದಾರೆ ಎಂಬ ಕೊರಗು ಓದುಗನನ್ನು ಕಾಡುತ್ತದೆ.

ಎಲ್ಲೋ ಒಂದು ಕಡೆ ರಾಮಯ್ಯನವರನ್ನು ಕುರಿತು ಯಾರೋ ಹೇಳಿದ ಮಾತು ಅವರು ಇನ್ನೂ ಅರಕೋಣಂನಿಂದ ಪಯಣಿಸುತ್ತಲೇ ಇದ್ದಾರೆ ಎಂದು. ದಾರಿಯ ನೆನಪು ಮರುಕಳಿಸುವುದು ಒಂದು ಬಗೆ ವಲಸೆಯ ಹಕ್ಕಿಯ ಪಾಡಿನಂತಹುದು. `ಕಣಿ ಕೆಳಗಿನವನು’ ಕವಿತೆ ಆ ಆತಂಕಗಳ ರೂಪಕಗಳನ್ನು ಬಳಸಿ ಸಂಕಟದಿಂದ ಅದರ ಮೂಲಾಗ್ರಗಳನ್ನು ಶೋಧಿಸುತ್ತದೆ. ಕಣಿವೆಯ ಕೆಳಗೆ ಎಂಬುದೊಂದು ರೂಪಕವಾಗಿ ಕೆಳಜಾತಿಯ ಸಂಕಟಗಳನ್ನು ಒಂದೊಂದೂ ವಿವರಗಳಲ್ಲಿ ಕವಿತೆ ದಾಖಲಿಸುತ್ತದೆ.
ಸಹಪಂಕ್ತಿಯಲ್ಲಿ ಕೂತಾಗ
ತಟ್ಟೆಯ ಬದಲಿಗೆ ಎಲೆಯನಿತ್ತಾಗ ಒಡಹುಟ್ಟು
ಅತ್ತಾಗ ಉದುರಿದ ಕಣ್ಣೀರ ಮುತ್ತನೆ ಕಲಸಿ ತಿಂದಾಗ
ಲೆಕ್ಕಿಸಲಾಗುವುದೇನು ಅನ್ನ ಕಾಣದ ಹಸಿದ ಹೊಟ್ಟೆ
ದುಡಿಯಲಾರದ ರೆಟ್ಟೆ
ಬಯಸಬಹುದೇನು ಮಾನಾಪಮಾನಗಳ ಬೆಳ್ಳಿತಟ್ಟೆ…..
ಈ ಮಾತುಗಳನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕು. ಇಷ್ಟೆಲ್ಲ ಹಿಂಸೆಗಳು ಕೊನೆಗೆ ಒಂದು ಅನುಭವವನ್ನು ತನ್ನದಾಗಿಸಿಕೊಂಡ ಕವಿಯನ್ನು ಕೊಂಡೊಯ್ಯುವುದು ಆದರೂ ಎಲ್ಲಿಗೆ? ರಾಮಯ್ಯ ಹೇಳುತ್ತಾರೆ
ಅರಿವಾಗಿದೆ ಈಗ
ಕವನ ಕಣ್ಣ ಕಲ್ಲಾಗಿಸದೆ
ಚೆಂಡು ಹೂಗಳನ್ನು ಬಳಸಿ ಬಾಣ
ಜಗ್ಗಿ ಎದೆಬಿಲ್ಲಿಗೆ…
… ಎಂದು. ರಾಮಯ್ಯನವರ ಕಾವ್ಯ ಸಾರ್ಥಕವಾಗುವುದು ಕಣಿ ಕೆಳಗಿನವನು ಕವಿತೆಯಲ್ಲಿನ ಅನುಭವಗಳಂಥನ್ನು ರೂಪಕಗಳನ್ನಾಗಿಸುವಲ್ಲಿ.

`ಹುಚ್ಚಿನ ಆರಂಭ ಮತ್ತು ಅಂತ್ಯ’ ಕವಿತೆ ಕೂಡ ಇತರೆ ದೀರ್ಘ ಕವಿತೆಗಳಂತೆ ಚಿತ್ರಗಳನ್ನು ಬಾಚಿಬಾಚಿ ತುಂಬಿತುಂಬಿಕೊಳ್ಳುತ್ತಾ ಸಾಗುತ್ತದೆ. ಮೊದಲು ಹೇಳಿದಂತೆ ಜಾಜಿ ಮಲ್ಲಿಗೆ ಬಳ್ಳಿಗಳು ಹೆಣೆದುಕೊಳ್ಳುತ್ತಾ ಸಾಗಿದಂತೆ. ಉದಾಹರಣೆಗೆ ಈ ಮಾತು ನೋಡೋಣ: ಆದರೆ ಟಿವಿ ಚಾನೆಲ್ ಹುಚ್ಚಿಗೆ ಅದ್ಯಾವ ಕಲಿಕೆಯಿದೆಯೋ
ಆ ಶಿವನೇ ಬಲ್ಲ ಹರಹರ ಶ್ರೀ ಚೆನ್ನ ಸೋಮೇಶ್ವರ
ಸೋಮೇಶ್ವರನ ಶತಕಗಳು ಎಷ್ಟಿದ್ದರೂ
ಸಮವೇನು ತೆಂಡೂಲ್ಕರ್ ಶತಕಕ್ಕೆ…
ಹೀಗೆ ಚಿತ್ರದಿಂದ ಚಿತ್ರಕ್ಕೆ ಸರಪಣಿಯ ರೀತಿ ಕವಿತೆಯು ಸಾಗುತ್ತಾ ಹೋಗುತ್ತದೆ. ಪ್ರಜ್ಞೆಯಲ್ಲಿ ದಾಖಲಾಗಿರುವ ತಲ್ಲಣದ ಚಿತ್ರಗಳೆಲ್ಲವನ್ನೂ ಎಳೆತಂದು ಕವಿತೆಯಲ್ಲಿ ಇಟ್ಟ ಕಾರಣ ಎಲ್ಲವೂ ಇಡಿಕಿರಿದು ಯೋಚನೆಯ ನಡೆಗೆ ಬೇಕಾದ ಅವಕಾಶವನ್ನು ಒದಗಿಸದೇ ಹೋಗುವುದರಿಂದ ಕವಿತೆಯ ಕೇಂದ್ರವನ್ನು ಅನ್ವೇಷಿಸಲು ಸಾಧ್ಯವಾಗುವುದಿಲ್ಲ. ಕೊನೆಯಲ್ಲಿ ಕವಿ ಹೇಳುವ ವಿಶ್ವದ ಎಲ್ಲ ಕಡೆ ದಲಿತರದ್ದೇ/ ನಮ್ಮದೇ ಮನೆಯಲ್ಲಿ. ಹೆಣ್ಣಾಗಿದ್ದರಂತೂ ಎಲ್ಲೆಡೆ ದುಪ್ಪಟ್ಟು ಎನ್ನುವ ಸಾಲುಗಳಿಗೆ ಸಮರ್ಪಕವಾದ ಸಮರ್ಥನೆ ಕವಿತಾ ಶರೀರದಲ್ಲಿ ಒದಗುವುದಿಲ್ಲ.

ಸುತ್ತಮುತ್ತಿನದೆಲ್ಲವನ್ನು ಬಾಚಿತಬ್ಬಿಕೊಳ್ಳುವಂತಹ ನೀಳ ಕವಿತೆಗಳಲ್ಲಿ ಸಾಮಾನ್ಯವಾಗಿ ಕವಿ ಎದುರಿಸುವ ಸಮಸ್ಯೆ ಎಂದರೆ ಕವಿತೆಯ ಇಂಟೆಗ್ರಿಟಿಯನ್ನು ಕಾಪಾಡಿಕೊಳ್ಳುವುದು ಮತ್ತು ವಾಚಾಳಿತನದಿಂದ ಅದನ್ನು ಮುಕ್ತಗೊಳಿಸುವುದು. ಮಾತಿನ ಭರದಲ್ಲಿ ಅತ್ಯಂತ ಪ್ರಸ್ತುತ ಮತ್ತು ಮುಖ್ಯವಾದ ಮಾತು ಕೂಡ ಮಾತುಗಳ ನಡುವೆ ಅಡಗಿಹೋಗುತ್ತದೆ. ಒಂದು ವ್ಯಾಪಕವಾದ ಎಡಿಟಿಂಗ್ ಮಾಡುವ ಉದ್ದೇಶ ಕವಿಗೆ ಇಲ್ಲ ಎಂಬುದು ಬಹಳ ಕವಿತೆಗಳ ಓದಿನಿಂದ ಶ್ರುತವಾಗುತ್ತದೆ. ಕೂಡಲಸಂಗಮ ಕವಿತೆ ಒತ್ತಾಗಿ ಹೆಣೆಯಲ್ಪಟ್ಟ ನಾಲ್ಕೂವರೆ ಪುಟದ ಕವಿತೆ. ರಾಮಯ್ಯನವರ ವಿಚಾರ ಮಂಡನೆಯ ಕ್ರಮವೇ ಒಂದರ ಸುತ್ತ ಇರುವ ಎಲ್ಲ ಸಂಗತಿಗಳನ್ನು ಬಾಚಿತಬ್ಬಿಕೊಳ್ಳುವುದು.

ರಾಮಯ್ಯ ವಿಚಾರವನ್ನು ಕಾವ್ಯದ ಶರೀರಕ್ಕೆ ತರುವಲ್ಲಿ ಭಿನ್ನ ಸಂರಚನೆಗಳ ಪ್ರಯತ್ನವನ್ನು ಮಾಡುತ್ತಾರೆ. ಅದು ವಿಡಂಬನಾತ್ಮಕವಾಗಿದ್ದರೆ ರೂಪುಗೊಳ್ಳುವ ಕವಿತೆಗಿಂತ ಒಡಲಿನ ಕಿಚ್ಚಿಗೆ, ಒಡಲಿನ ಸಂಕಟಕ್ಕೆ ಮಾತಾಗಿ ಬರುವ ಕವಿತೆ ಎಷ್ಟೋ ಪರಿಣಾಮಕಾರಿಯಾಗಿ ಇರುತ್ತದೆ ಎನ್ನುವ ಸಂಗತಿ ತುಲನಾತ್ಮಕವಾಗಿ ನಮ್ಮ ಕಣ್ಮುಂದೆ ಬರುತ್ತದೆ. ಇಷ್ಟಾದರೂ ಭವಿಷ್ಯದ ಬಗ್ಗೆ ರಾಮಯ್ಯ ತಡೆಯುವ ನಿಲುವು ಬಹುಪಾಲು ನೇತ್ಯಾತ್ಮಕವಾದದ್ದೆ ಎಂಬ ಸಂಶಯಕ್ಕೆ ಇಂಬುಕೊಡುವಂತೆ ಕೆಲವು ಚಿತ್ರಗಳಿವೆ. ಅಯ್ಯೋ ಮಣ್ಣ ಹಣತೆಗಳ ಚೀತಾ ಒಡಲು ಉರಿದು ಹೋಗುವುದೊಂದೇ ವಿಧಿ ರೆಕ್ಕೆ ಬೂದಿಯಾಗಿಸಿಕೊಂಡು ಎಂಬಂಥಹ ಚಿತ್ರಗಳನ್ನು ಗಮನಿಸಬಹುದು.

`ಪದ್ಯಗಳೂ ಕುಂಟುತ್ತವೆ’ ಕವಿತೆ ತನ್ನ ಉದ್ದೇಶವನ್ನು ಸಫಲಗೊಳಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಇದ್ದರೂ ಇಲ್ಲದಂತಿರುವ ವಾಚಾಳಿತನ, ಇಡುಕಿರಿಯದ ಸಂಕೇತಗಳು ಮತ್ತು ಪ್ರತಿಪಾದಿಸಲು ಇರುವ ವಿಚಾರವನ್ನು ಸ್ಪಷ್ಟವಾಗಿ ಕಣ್ಣಮುಂದೆ ಇರಿಸಿಕೊಂಡು ಇರುವುದು. ಈ ಸಾಲುಗಳನ್ನು ಗಮನಿಸಿ:
ಯಾರದೋ ಪುಣ್ಯಾತ್ಮ
ಪಾದಗಳು ತುಳಿದಾಗ ಉದುರಿದ ಚೆಲ್ಲು ಕಾಳುಗಳು…
ಕಾಳಿನಲ್ಲಿ ಕಾಳಿ ಕಂಡಂತಾಗಿ ಕೈಮುಗಿದು ಶರಣೆಂದು
ಉದುರಿಸಿಕೊಂಡೆ ಅಂಗಾಲಿಗೆ ಅಂಟಿ ಬಂದದ್ದಷ್ಟನ್ನು
ಪದ್ಯಗಳು ಜೊತೆಗೂಡಿ ಉದುರಬೇಕೆ ಕಾಳುಕಾಳೂ
ಅಂಗಾಲ ಎದೆ ಭೂಮಿಯಿಂದ…
ಕಣ್ಣಿಗೊತ್ತಿ ಎತ್ತಿ ತಂದು ಇದೋ ಮುಂದಿಟ್ಟಿದ್ದೇನೆ
ಒಂದು ಕಾಳು
ಹಸಿ ಭತ್ತ … ಬಿಸಿ ಬೆಲ್ಲ ಜೊತೆಗೂಡಿದಾಗ….

ರಾಮಚಂದ್ರಶರ್ಮರು ತಮ್ಮ ಒಂದು ಕವಿತೆಯಲ್ಲಿ ಹೇಳುತ್ತಾರೆ: ಒಂದೊಂದು ಕವನವೂ ಭರವಸೆಯ ವ್ಯವಸಾಯ/ ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ ಎಂದು. ಇಲ್ಲಿ ನೆಲದ ಸ್ಪರ್ಶದಿಂದ ಮೇಲೆ ಬಂದ ಪದ್ಯ ಕಾಳಂತೆ ಸಫಲವಾಗುವುದು ಬಹಳ ಮುಖ್ಯವಾದ ಮೋಟಿಫ್ ಆಗುತ್ತದೆ. ಯಾವುದರ ಬಗ್ಗೆಯೂ ಅಲಕ್ಷ್ಯ ಸಲ್ಲ ಕವಿತೆ ಪುರಾಣದ ನೆವದಲ್ಲಿ ಹಿಂಸೆಯ ವೈಭವೀಕರಣವನ್ನು ಖಂಡಿಸುತ್ತದೆ. ಹಿಂಸೆಯ ಹಲವು ಬಗೆಗಳ ಪ್ರಸ್ತಾವ ಕವಿತೆಯುದ್ದಕ್ಕೂ ಬರುತ್ತದೆ; ಆದರೆ ಅದೇ ದುರ್ಬಲ ಹೆಣಿಗೆಯ ಕಷ್ಟದಲ್ಲಿ.

`ರುದ್ರನಾಟಕದ ಸೀನರಿ’ ಎಂಬ ಕವಿತೆ ನಮ್ಮ ಮುಂದಿನ ಜಗತ್ತನ್ನು ಒಂದು ದೃಶ್ಯವನ್ನಾಗಿ ತೆರೆದಿಡುತ್ತದೆ. ಒಟ್ಟು ಕಾವ್ಯವೇ, ಕಾವ್ಯದ ದುರಂತ ಅಂಶವೇ ಕಣ್ಣ ಮುಂದೆ ಸೀನರಿಯಾಗಿ ಇಲ್ಲಿ ಇಳಿಬಿದ್ದಿದೆ.
ಕವಿತೆ ಹೇಳುವುದು ನಾಳೆಗೊಂದು ಈ ರುದ್ರನಾಟಕದ ಸೀನರಿಯ ಬದಲು
ಹಾಗೆ ಖಾಲಿ ಬಿಟ್ಟಿರಲಿ ಯಾರಾದರೂ ಕನಸಿಗರು ಬಂದು ತುಂಬಿಕೊಳ್ಳಲು
ತಮ್ಮೆದೆಯಲ್ಲಿ ಕೂಡಿಟ್ಟ ಮಕರಂದ ಬಣ್ಣಗಳ ಸುಂದರ ಸೀನರಿ
ಎಳೆಯ ಕಣ್ಣುಗಳಿಗೆ ಇಳಿದು ಬಣ್ಣ ಹಿಂಡು ನವಿಲಾಡುವಂತೆ…
ಎಂದು. ಬಹುಶಃ ಈ ಸಾಲುಗಳಲ್ಲಿ ವ್ಯಕ್ತವಾಗುವ ಕಾವ್ಯಾತ್ಮಕ ಸಂವೇದನೆ ಇಡೀ ಕವನದ ಉದ್ದಕ್ಕೂ ವ್ಯಕ್ತವಾಗಿದ್ದರೆ ಈ ಕವಿತೆಯ ನಡೆಯೇ ಬೇರೆಯಾಗುತ್ತಿತ್ತು.

ಸಾನೆಟ್ಟಿನಂತೆ ಶಿಲ್ಪ ಹೊಂದಿದ ಕವಿತೆ ಕೊನೆಯ ಆಸೆ. ನೆಲದ ನೆಲೆಯಿಂದ ಹೊರಡುವ ಇಂಥ ಕವಿತೆಗಳು ಯಾವುದೇ ಬಗೆಯ ಮಿದುಳ ಸಹವಾಸವಿಲ್ಲದೆ ಹೃದಯ ತಟ್ಟಬಲ್ಲವು. ಮೈಯ್ಯಾರದಲ್ಲಿ ನಡೆವ ಚಿತ್ರ ಬಿಡಿಸಿ/ ಕೊಡಬೇಕು ಮುಂಗೋಳಿ ನಾಳೆಗಳಿಗೆ ತೆರೆವ ಕಣ್ಣು ಕಣ್ಣುಗಳಿಗೆ… ಎಂಬಲ್ಲಿ ಕವಿ ರಾಮಯ್ಯನವರ ಕಾವ್ಯರಚನಾ ಸಾಮಥ್ರ್ಯ ಎದ್ದು ಕಾಣುತ್ತದೆ

ಇಂಥದೇ ಕವಿತೆ `ಅವರು ತೆರೆದಷ್ಟೂ ಕಣ್ಣು ಅಗಲ’. ಹೇಳಬೇಕಾದುದ್ದನ್ನು ಕ್ಲುಪ್ತವಾಗಿ ಹೇಳುವ ಈ ಕವಿತೆ ತನ್ನನ್ನು, ತನ್ನ ಒಡನಾಟದ ರೂಪದಲ್ಲಿರುವ/ಇದ್ದ ಆತಂಕ ಕಾರಣಗಳನ್ನು ತನ್ನಲ್ಲಿ ಇಟ್ಟುಕೊಂಡಿದೆ. ಸಾವಧಾನದ ನಡೆ ಮತ್ತು ನಿಂತು ಯೋಚಿಸುವ ವ್ಯವಧಾನ ಇಲ್ಲಿ ಗಮನಿಸಬಹುದಾದ ಅಂಶಗಳು. ಇಷ್ಟೇ ಅವಕಾಶಗಳನ್ನು ಸೃಷ್ಟಿಸಿದ ನೋಟಕ್ಕೆ ಹೆಣ್ಣು ಮತ್ತು ಕಜ್ಜಾಯ ಯಾಕೋ ಸಾಮಾನ್ಯವಾಗಿ ಎನಿಸುವಂತೆ ಕೊನೆಯಾಗುತ್ತದೆ. ಮೊದಲ ಭಾಗ ಹುಟ್ಟಿಸುವ ಕುತೂಹಲವನ್ನು ಕಡೆತನಕ ಉಳಿಸಿಕೊಳ್ಳುವುದಿಲ್ಲ. ಏಕೆಂದರೆ ಸಂಘರ್ಷದ ಹಾದಿಯಲ್ಲಿ ಹೆಣ್ಣು ಕೂಡ ಅಲಕ್ಷ್ಯಕ್ಕೆ ಒಳಗಾದವಳು. ಅವಳ ಶೋಕೇಸಿನ ಬ್ರಾಕಟ್ಟಿನ ವಿವರಣೆ ಭೌತಿಕ ನೆಲೆಯಲ್ಲಿ ಉಳಿದುಬಿಡುತ್ತದೆ. ರಾಮಯ್ಯನವರ ಸಾಂಸ್ಕೃತಿಕ ವ್ಯಾಖ್ಯಾನ ಈ ನೋಟಕ್ಕೆ ಲಭ್ಯವಾಗಿಲ್ಲ.

ಎಲ್ಲೋ ಒಂದು ಕಡೆ ರಾಮಯ್ಯನವರನ್ನು ಕುರಿತು ಯಾರೋ ಹೇಳಿದ ಮಾತು ಅವರು ಇನ್ನೂ ಅರಕೋಣಂನಿಂದ ಪಯಣಿಸುತ್ತಲೇ ಇದ್ದಾರೆ ಎಂದು. ದಾರಿಯ ನೆನಪು ಮರುಕಳಿಸುವುದು ಒಂದು ಬಗೆ ವಲಸೆಯ ಹಕ್ಕಿಯ ಪಾಡಿನಂತಹುದು. ಕಣಿ ಕೆಳಗಿನವನು ಕವಿತೆ ಆ ಆತಂಕಗಳ ರೂಪಕಗಳನ್ನು ಬಳಸಿ ಸಂಕಟದಿಂದ ಅದರ ಮೂಲಾಗ್ರಗಳನ್ನು ಶೋಧಿಸುತ್ತದೆ. ಕಣಿವೆಯ ಕೆಳಗೆ ಎಂಬುದೊಂದು ರೂಪಕವಾಗಿ ಕೆಳಜಾತಿಯ ಸಂಕಟಗಳನ್ನು ಒಂದೊಂದೂ ವಿವರಗಳಲ್ಲಿ ಕವಿತೆ ದಾಖಲಿಸುತ್ತದೆ.

`ಜೈ ಭೀಮ್ ಕಾಮ್ರೇಡ್’ ನೇರವಾಗಿ ಅಂಬೇಡ್ಕರ್ ಅವರನ್ನು ಉದ್ದೇಶಿಸಿ ನುಡಿಯತೊಡಗುತ್ತದೆ.
ಪ್ರಿಯ ಅಂಬೇಡ್ಕರ್
ಓಹ್ ಪಾತ್ರವಿಲ್ಲದ ಪ್ರಕ್ಷುಬ್ಧ ನದಿಗಳ ಕಲರವವೇ
ಕುದಿವ ಜ್ವಾಲಾಗ್ನಿ ರವರವವೆ….
ಎಂದು ಆರಂಭವಾಗಿ ಅಲ್ಲಿಂದ ಮುಂದೆ ಅಂಬೇಡ್ಕರರ ವ್ಯಕ್ತಿತ್ವದ ಸಾಧನೆಯ ವಿವರಣೆಗೆ ಪಡೆದುಕೊಳ್ಳುತ್ತದೆ. ಈ ವಿವರಣೆ ಅಂಬೇಡ್ಕರರ ಮಹತ್ಸಾಧನೆಗಳನ್ನು ಕ್ಲುಪ್ತವಾಗಿ ಬಣ್ಣಿಸುತ್ತದೆ. ಜೊತೆಗೆ ಕವಿ ತುಲನೆಯೊಂದಕ್ಕೆ ತೊಡಗಿಕೊಳ್ಳುತ್ತಾರೆ. ಸಂಘರ್ಷದ ಹಾದಿಯಲ್ಲಿ ಕವಿಯ ಮತ್ತು ಅಂಬೇಡ್ಕರರ ನಂಟನ್ನು ಕವಿತೆ ಹೇಳುವ ಬಗೆ ಹೀಗಿದೆ: ನೀನಿಟ್ಟ ಕೋಟಿ ಮೊಟ್ಟೆಯ ಕುರುಹು ನಾನು/ ಚಿಪ್ಪೊಡೆದು ಹೊರಬಂದ ಒಂದು ಮರಿ ಮೀನು… ಈ ಕವಿತೆ ವ್ಯಕ್ತಪಡಿಸುವ ಆತಂಕವನ್ನು ಯಾವ ಬಲೆಯಲಿ ಸಿಕ್ಕಿ ಬಿದ್ದೆಯೋ ಏನೋ ಕುಲ ಬಳಗ ಎಂಬಲ್ಲಿ ಕಾಣಬಹುದು. ಬಾಂಧವ್ಯದ ವ್ಯಾಪಕತೆಯ ಚಿತ್ರಣವೊಂದು ಕವಿತೆಯಲ್ಲಿ ದೊರಕುತ್ತದೆ. ಈ ಬಗೆಯ ಆತ್ಮಾನುಸಂಧಾನದಿಂದ ಶುರುವಾದ ಕವಿತೆ ಅಂಬೇಡ್ಕರ್ ನಂತರದ ಅಂಬೇಡ್ಕರವಾದವನ್ನು ಅದರಿಂದ ಸಮಷ್ಟಿಯ ಬದಲಿಗೆ ಉಂಟಾದ ವ್ಯಕ್ತಿಯ ಉದ್ಧಾರವನ್ನು ಬಾಬಾ ಸಾಹೇಬ್ ಜಿ ಯ ಔರಂಗಜೇಬ್ ಜಿಯಾ ಔರಾದ್ ಕಿ ಬೇಟಿ ಮಾಯಾ ಬೆಹೆನ್ ಜಿ ಐಯಾಮ್ ಟೆರಿಬಲೀ ಸಾರಿ ಫಾರ್ ಯು ಎಂದು ವಿಷಾದದಿಂದ ಹೇಳುತ್ತಾರೆ. ಇಲ್ಲಿನ ಸಾಮಾಜಿಕ ರಾಜಕೀಯ ಮಜಲುಗಳನ್ನು ಸೂಕ್ಷ್ಮವಾಗಿಯೇ ಗಮನಿಸಬೇಕಾಗುತ್ತದೆ. ಏಕೆಂದರೆ ಕವಿ ಕಂಡಿರುವುದು ಕಂದುತ್ತಿರುವ ದೀಪದಂತೆ ಭಾಸವಾಗುತ್ತದೆ.

ನೀ ತೋರು ಬೆರಳೆತ್ತಿ ತೋರಿದ
ದಿಗ್ದಿಗಂತಗಳಿಗೆ ಹಾರಿ ಹೋದ
ಪಾರಿವಾಳಗಳೀಗ ಹದ್ದು ಹಾಗೆ ಕಾಗೆ ಗೂಗೆ ಡೇಗೆ…
ಕವಿತೆಯ ಕೊನೆಯಂತು ಅತ್ಯದ್ಭುತವಾದದ್ದು:
ನೀರುಂಡ ನೆಲಕ್ಕೆ
ಎದೆಹಾಲ ಹೊಲಕೆ
ಚೆಲ್ಲಬಹುದಿತ್ತಲ್ಲ ಒಂಚೂರು ನಿಟ್ಟುಸಿರು ಕಣ್ಣೀರು
ನೀರವ ರಾತ್ರಿಯ ಆ ನಿಮ್ಮ ನಿತ್ಯದಾತ್ಮರೋಧನದಂತೆ.

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)

`ಸೂತಕದ ಸುದ್ದಿ’ ಮತ್ತೊಂದು ಸಾರ್ಥಕ ಕವಿತೆ. ಒಡಲಲ್ಲಿ ದುಃಖ ಆತಂಕಗಳನ್ನು ಹೊತ್ತು ಕವಿತೆ ನಿಧಾನಕ್ಕೆ ಆ ಆತಂಕವನ್ನು ಅನಾವರಣಗೊಳಿಸುತ್ತಾ ಸಾಗುತ್ತದೆ. ಮಸಣ ಭೂಮಿಗಳ ಚಾಕರಿಗೆ ಕೊಟ್ಟ ಹೆಗಲು/ ಹರಿದುಕೊಳ್ಳಲು ಆಗುವುದೇ ಬಗಲ ತೊಗಲು… ಎಂಬ ಪ್ರಶ್ನೆಯೊಂದಿಗೆ ಮುಗಿಯುವ ಕವನ ಉಳಿಸುವ ವಿಷಣ್ಣತೆ ಅಗಾಧವಾದದ್ದು.

`ಬಣ್ಣಗಳು ಮತ್ತು ಬಣ್ಣಗಳು’ ಕವಿತೆ ಬಣ್ಣಗಳ ಹುಟ್ಟಿನ ಬಗ್ಗೆ ಮಾತನಾಡುತ್ತಲೇ ರೇಸಿಸಮ್ನ ಅಥವಾ ಅದಕ್ಕಿಂತ ಕ್ರೂರವಾದ ಇನ್ನೊಂದು ವ್ಯವಸ್ಥೆಯನ್ನು ಕುರಿತು ಮಾತನಾಡುವುದಕ್ಕೆ ತೊಡಗುತ್ತದೆ. ಈ ಬಣ್ಣಗಳು ಒಳಗಿರುವುದನ್ನು ಅಥವಾ ನಮ್ಮದೇ ಬಿಂಬಗಳನ್ನು ನೀರ ಕನ್ನಡಿಯಂತೆ ಏಕೆ ತೋರುವುದಿಲ್ಲ ಎಂದು ಕೇಳಿಕೊಳ್ಳುತ್ತದೆ. ಜೊತೆಗೆ ಕವಿಗೆ ಅರಿವಿದೆ: ಅದು ಒಳಗೊಳ್ಳದ ಹಾಗೆ ತಮ್ಮೊಳಗೆ ಇನ್ನೊಂದನ್ನು ಮನುಷ್ಯ ರಕ್ತವನ್ನೇ ಹೀರಿ ಮತ್ತಷ್ಟು ಗಾಢವಾಗುವುದಕ್ಕೆ ಎನ್ನುತ್ತಾರೆ. ಬಹುಶಃ ಕವಿಗೆ ಒಂದು ಆಶಾಭಾವವಿದೆ. ಅದೆಂದರೆ ಈ ವರ್ಣ ಅಥವಾ ಜಾತಿವ್ಯವಸ್ಥೆಗೆ ಕೊನೆಗೊಂದು ದಿನ ಇತಿಹಾಸದ ಡಸ್ಟ್ಬಿನ್ಗೆ ಸೇರಿಹೋದಲ್ಲದೆ ಬೇರೆ ಭವಿಷ್ಯವೇ ಇಲ್ಲ ಎನ್ನುವುದು. ಬಹಳ ಕಾಂಪ್ಯಾಕ್ಟ್ ಆದ ಕವಿತೆ ಇದು. ಇಂತಹ ಕವಿತೆಗಳಲ್ಲಿ ರಾಮಯ್ಯನವರ ನಿಜವಾದ ಪ್ರತಿಭೆ ಹೊರಹೊಮ್ಮುವುದು. ಉಳಿದೆಡೆ ಅವು ಕೇಳಿಕೆಯಲ್ಲಿ ಅಲ್ಲಲ್ಲಿ ಬರುವ ಶರೀರದಾಚೆಯ ಒಂದೊಂದು ಸೀನಿನಂತೆ ಆಗಿಬಿಡುತ್ತವೆ. ಈ ಕವಿತೆ ಬರೆದ ರಾಮಯ್ಯ ಯೇಸುವಿನ ಕೊನೆ ಭೋಜನ ಎಂಬ ಕವಿತೆಯನ್ನು ಏಕೆ ಬರೆದರು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

`ಯಾರು ಸಿದ್ಧ’ ಎಂಬ ಕವಿತೆಯು ಮೂರು ಪುಟಕ್ಕಿಂತ ದೊಡ್ಡದಾಗಿದೆ. ಇದು ಸಂಘರ್ಷವೊಂದರ ಅವನತಿಯ ಕುರಿತ ಕಳವಳ ಎಂಬ ಅನುಮಾನಕ್ಕೆ ಒಳಗೆ ಬೆರೆತಿರುವ ಶತ್ರುವಿನ ಹೊರತು ಹೊರಗಿನ ಯಾವ ಶತ್ರುವಿನ ಮೇಲೆ ಯುದ್ಧ ಗೆಲ್ಲುವುದು? ಆದರೆ ಯುದ್ಧವಂತೂ ಆಗಲೇಬೇಕು ಎಂಬ ಮಾತುಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇಂಥ ಒಳಗಿನ ಶತ್ರುಗಳ ದಮನವೂ ಅಗತ್ಯವಾಗಿ ಅವರಿಗೆ ಕಂಡುಬಂದಿದೆ. ಹೋರಾಟದ ತುರ್ತನ್ನು ಕುರಿತು ಕವಿ ಕೊಡುವ ಕರೆ ಸಂದರ್ಭದ ಸಾರ್ವಕಾಲಿಕ ತುರ್ತನ್ನು ಹೇಳುವಂತಿದೆ. ಸೌಂದರ್ಯ ಲಹರಿ ಲೀಲಾ ವಿಳಾಸಕ್ಕೆ/ ಇಲ್ಲ ಕಿಂಚಿತ್ತೂ ಹೊತ್ತು/ ಗೆಲ್ಲುವುದಷ್ಟೇ ಗೊತ್ತು ಗುರಿ… ಈ ಆಹ್ವಾನದ ಪರಿಯೆ ಸೊಗಸಾಗಿದೆ. ಸಿದ್ಧವಿರುವವರು ಎಲ್ಲಾ ಬನ್ನಿ ಶರಣು/ ಸಿದ್ಧವಿರದವರು ಶರಣು ಹೋಗಿಬನ್ನಿ.

ಸಂಘರ್ಷದ ಹಾದಿಯಲ್ಲಿ ಕವಿಯ ಮತ್ತು ಅಂಬೇಡ್ಕರರ ನಂಟನ್ನು ಕವಿತೆ ಹೇಳುವ ಬಗೆ ಹೀಗಿದೆ: ನೀನಿಟ್ಟ ಕೋಟಿ ಮೊಟ್ಟೆಯ ಕುರುಹು ನಾನು/ ಚಿಪ್ಪೊಡೆದು ಹೊರಬಂದ ಒಂದು ಮರಿ ಮೀನು… ಈ ಕವಿತೆ ವ್ಯಕ್ತಪಡಿಸುವ ಆತಂಕವನ್ನು ಯಾವ ಬಲೆಯಲಿ ಸಿಕ್ಕಿ ಬಿದ್ದೆಯೋ ಏನೋ ಕುಲ ಬಳಗ ಎಂಬಲ್ಲಿ ಕಾಣಬಹುದು. ಬಾಂಧವ್ಯದ ವ್ಯಾಪಕತೆಯ ಚಿತ್ರಣವೊಂದು ಕವಿತೆಯಲ್ಲಿ ದೊರಕುತ್ತದೆ. ಈ ಬಗೆಯ ಆತ್ಮಾನುಸಂಧಾನದಿಂದ ಶುರುವಾದ ಕವಿತೆ ಅಂಬೇಡ್ಕರ್ ನಂತರದ ಅಂಬೇಡ್ಕರವಾದವನ್ನು ಅದರಿಂದ ಸಮಷ್ಟಿಯ ಬದಲಿಗೆ ಉಂಟಾದ ವ್ಯಕ್ತಿಯ ಉದ್ಧಾರವನ್ನು ಬಾಬಾ ಸಾಹೇಬ್ ಜಿ ಯ ಔರಂಗಜೇಬ್ ಜಿಯಾ ಔರಾದ್ ಕಿ ಬೇಟಿ ಮಾಯಾ ಬೆಹೆನ್ ಜಿ ಐಯಾಮ್ ಟೆರಿಬಲೀ ಸಾರಿ ಫಾರ್ ಯು ಎಂದು ವಿಷಾದದಿಂದ ಹೇಳುತ್ತಾರೆ.

ಷೇಕ್ಸ್ ಪಿಯರ್ ಕವಿಯ ನಾಟಕ ಜೂಲಿಯಸ್ ಸೀಸರ್. ರೋಮ್ನ ಸರ್ವಾಧಿಕಾರಿ ಚಕ್ರಾಧಿಪತಿ ಜೂಲಿಯಸ್ ಸೀಸರ್ನ ಪರಮಾಪ್ತ ಸ್ನೇಹಿತನಾದ ಮಾರ್ಕಸ್ ಜೂನಿಯಸ್ ಬ್ರೂಟಸ್ ಸೆನೆಟರ್ಗಳ ಜೊತೆಗೂಡಿ ಅವನನ್ನು ಹತ್ಯೆ ಮಾಡಲು ಬಂದಾಗ ಸೀಸರನ ಬಾಯಿಂದ ಬರುವ ಮಾತು Et to brute. ಆ ಮಾತು ಮಾರ್ಕಸ್ ಮೇಲಿದ್ದ ಸೀಜರನ ಎಲ್ಲ ವಿಶ್ವಾಸಗಳು ಮುಳುಗಿ ಹೋದ ಗಳಿಗೆಯನ್ನು ಕಣ್ಣಮುಂದೆ ನಿಲ್ಲಿಸುತ್ತದೆ. ಇದನ್ನು ಹಿನ್ನೆಲೆಯಾಗಿ ಇರಿಸಿಕೊಂಡು ರಾಮಯ್ಯ ಯೂ ಟೂ ಎಂಬ ಕವಿತೆ ಬರೆದಿದ್ದಾರೆ ಇದು ಸಾಮಾಜಿಕ ನೆಲೆಯಲ್ಲಿ ಹಾಗೂ ವೈಯಕ್ತಿಕ ನೆಲೆಯಲ್ಲಿ ಆವಾಹಿಸಬಹುದಾದ ಕವಿತೆ. ಇದರ ಹಿಂದೆಯೂ ಈ ಬಗೆಯ ಮಾನಸಿಕ ದೈಹಿಕ ಹಿಂಸೆಗಳ, ವಂಚನೆಗಳ ಕುರಿತ ಎಚ್ಚರ ಘನವಾಗಿ ಪ್ರಕಟವಾಗಿದೆ.

`ಕ್ಷಣಕ್ಷಣವೂ ಕವಿತೆ’ ಒಂದು ಸಂಕೀರ್ಣ ಸ್ಥಿತಿಯನ್ನು ಕುರಿತು ಹೇಳುತ್ತದೆ. ಮೊದಲ ಭಾಗದಲ್ಲಿ ಒಂದು ವಿಷಾದವಿದೆ. ಎರಡನೆಯ ಭಾಗದಲ್ಲಿ ಒಂದು ಏನೂ ಮಾಡಲಾಗದ ವಿಷಣ್ಣ ಭಾವವಿದೆ. ಇದಕ್ಕೂ ಚಳವಳಿಯ ರಾಮಯ್ಯನವರ ನಿಜ ಬದುಕಿಗೂ ಏನಾದರೂ ಸಂಬಂಧವಿದ್ದೀತೆ ಎಂದು ಯೋಚಿಸಲು ಸಹ ಸಾಧ್ಯವಾಗುತ್ತದೆ. ಕಾರಣ ಚಳವಳಿಗಳನ್ನು ಕೂಸನ್ನು ನುಂಗಿದ ಅವ್ವ ಎಂದು ಭಾವಿಸಲಾಗುತ್ತದೆ. ಒಂದು ಇಟ್ಟಿಗೆ ತುಂಡಿನ ಚರಿತ್ರೆ ಕವಿತೆಯ ಕೊನೆಯಲ್ಲಿ ಏಕಲವ್ಯನ ಹೆಸರು ಯಾವ ಗೋರಿಕಲ್ಲಿನ ಮೇಲೆ ಕಾಣಬರುವುದಂತೂ ಅಸಂಭವ ಎನ್ನುತ್ತದೆ. ಆದರೆ ಭಾರತೀಯ ಕಾವ್ಯ ಪರಂಪರೆ ಏಕಲವ್ಯನನ್ನು ಅಥವಾ ಅಂಥವರನ್ನು ಪೋಷಿಸಿಕೊಂಡೇ ಬಂದಿದೆ. ಹಾಗಾಗಿ ಬಹುತ್ವಕ್ಕೆ ಒಂದು ಮಾದರಿಯಾಗಿಯೂ ನಮ್ಮ ಕಾವ್ಯಗಳನ್ನು ಕಾಣಬಹುದಾಗಿದೆ.

ಥಟ್ಟನೆ ಬೋದಿಲೇರನ ಕಾವ್ಯದ ನೆನಪು ತರುವ ಓ ನನ್ನ ನೋವಿನ ಮೂಲ ಕವಿತೆ ಒಂದು ಬಗೆಯ ನಿರಾಶೆಯನ್ನು ಒಡಲಲ್ಲಿಟ್ಟುಕೊಂಡಿದೆ. ಮನುಷ್ಯನು ಆಗ ಹೊರಟವನು ಶಿಲುಬೆ ಏರಲೇಬೇಕಾಗುತ್ತದೆ. ಗೆದ್ದಲು ಹುಳುಗಳು ನಿಜ ನುಡಿಯುತ್ತಿವೆ ಎಂಬ ಮಾತು ಮೇಲಿನ ಮಾತನ್ನು ಸಮರ್ಥಿಸುತ್ತದೆ. ಇಂತಹ ನಿರಾಶೆ ಇದ್ದೂ ಸಹ ಎಲ್ಲೋ ಏನೋ ಒಳ್ಳೆಯದು ಆಗಲಿದೆ ಎನ್ನುವ ನಂಬಿಕೆಯನ್ನು ವ್ಯಕ್ತಪಡಿಸುವ ಕವಿತೆ ಎಷ್ಟೊಂದು ನದಿಗಳು ಹರಿಯುತ್ತಿರಬಹುದು.

`ಕವಿತೆ ನಿನ್ನ ರೇಟು ಎಷ್ಟು’ ಎನ್ನುವ ಕವಿತೆ ರಾಮಯ್ಯನವರ ಮನೋಧರ್ಮಕ್ಕೆ ಹೊಂದಾಣಿಕೆಯಾಗದ ಕವಿತೆ. ಚಂದ್ರಶೇಖರ ಪಾಟೀಲರ ತರಹೆ ವಿಡಂಬನೆ ಮಾಡುವ ಈ ಕವಿತೆ ಯಶಸ್ವಿಯಾಗದ ಹೋಗಿದೆ. ಶುಚಿಗೊಳಿಸುವವರು ಯಾರು ಎಂಬ ಮಾತಿನ ಕವಿತೆಯು ದಲಿತ ಸಾಹಿತ್ಯದ ಧಾತುಗಳನ್ನು, ಅಲ್ಲಿನ ಕೃತಿಗಳ ಪ್ರಮುಖ ಪಾತ್ರಗಳನ್ನು ಒಳಗೊಂಡು ಬೆಳೆಯುತ್ತದೆ. ಆದರೆ ಚಿತ್ರಗಳ ಹೆಸರಷ್ಟೇ ಕಂಡು ಅದರ ಹಿನ್ನೆಲೆ ಅರಿಯದವರಿಗೆ ಗೊಂದಲ ಮಾತ್ರ ಉಳಿಯುತ್ತದೆ. ಅಂತೆಯೇ ದೊಡ್ಡ ಅವಕಾಶ ಒಂದನ್ನು ಹುಟ್ಟು ಹಾಕಿದ ಒಂದು ಪಾದುಕಾ ಪುರಾಣ ಸಡಿಲ ಬಂಧದಿಂದ ಉದ್ದೇಶಿತ ಪರಿಣಾಮವನ್ನು ಹುಟ್ಟು ಹಾಕುವುದಿಲ್ಲ.

ಒಟ್ಟು ಸಂಕಲನವನ್ನು ಓದಿದಾಗ ಕವಿಗೆ ತಾನು, ತನ್ನ ಮೂಲ; ತನ್ನ ಆಧುನಿಕ ಮನಸ್ಸು ಮತ್ತು ಜಾತಿ; ತಾನು ಮತ್ತು ಸಮಾಜ; ತಾನು ಮತ್ತು ಸಹಚರರ ಸಂಬಂಧ; ಕವಿ ಮತ್ತು ತನ್ನ ಸ್ವಾನುಸಂಧಾನ ಇವುಗಳನ್ನು ಕಾವ್ಯದ ಮೂಲಕ ಕಟ್ಟಿಕೊಡಲು ತೀವ್ರವಾದ ಆಕಾಂಕ್ಷೆ ಇದೆ ಎನ್ನುವುದನ್ನು ಮನಗಾಣಬಹುದು. ಅಂತೆಯೇ ತೀವ್ರ ವಿಷಾದ ಒಂದನ್ನು ಅನುಭವಿಸುತ್ತಿರುವ ಚಳವಳಿಕಾರ ಒಬ್ಬನ ಆತ್ಮಚರಿತ್ರೆಯಂತೆ ನೋಡಬಹುದು. ಈ ನಿಟ್ಟಿನಲ್ಲಿ ಲಕ್ಷ್ಮೀಪತಿ ಕೋಲಾರ ಬರೆದ ಮುನ್ನುಡಿಯ ಮೊದಲ ಮೂರು ಪ್ಯಾರಾಗಳನ್ನು ನೋಡಬಹುದು. ಪ್ರವೇಶಿಕೆ ಬರೆದ ಕೆ.ವಿ ನೇತ್ರಾವತಿ ರಾಮಯ್ಯನವರ ಕಾವ್ಯವನ್ನು ಕುರಿತು ಒಂದು ವ್ಯಾಪಕ ಹಿನ್ನೆಲೆಯನ್ನು ಒದಗಿಸಿದ್ದಾರೆ. ಸಂಘರ್ಷದ ಹಿನ್ನೆಲೆಯಲ್ಲಿ ಕವಿತೆಯನ್ನು ಪ್ರವೇಶಿಸಲು ಇದರಿಂದ ಅನುಕೂಲ.

ರಾಮಯ್ಯನವರ ಒಟ್ಟು ಬರವಣಿಗೆಯನ್ನು ಓದುವ ಕ್ರಮದ ಬಗ್ಗೆ ನುಡಿವ ಆಕೆ ಇಲ್ಲಿನ ಕವಿತೆಗಳಲ್ಲಿ ವಸ್ತು ವಿಶಿಷ್ಟತೆಯನ್ನು ಕಾಯ್ದುಕೊಳ್ಳುವುದು ಇವರ ಕವಿತೆಗಳ ವಿಶೇಷತೆಗಳ ಇನ್ನೊಂದು ಮಗ್ಗುಲು. ದೇಸೀ ಜ್ಞಾನದ ಅರಿವು, ನೆಲ ಸೊಗಡಿನ ಪರಿಭಾಷೆಗಳು, ಜನಪದರ ವಿವೇಕ, ಅಂಬೇಡ್ಕರ್ ವೈಚಾರಿಕ ಎಚ್ಚರ, ಬುದ್ಧನ ತಾಯ ಕರುಣೆ, ಹುಸೇನಜ್ಜನು ತೋರಿದ ದಿಕ್ಕುಗಳು ರಾಮಯ್ಯ ಸರ್ ಅವರ ಬೌದ್ಧಿಕತೆಗೆ ಬೇರುಗಳ ಆಗಿವೆ ಎಂದು ಅವರು ಬರೆಯುತ್ತಾರೆ. ಈ ಹುಸೇನ್ ಅಜ್ಜ ಒಬ್ಬ ಸೂಫಿ ವಿವೇಕಿ. ರಾಮಯ್ಯನವರ ಕುಟೀರವಿರುವ ಎಡೆಯಿಂದ ಕೊಂಚ ದೂರದಲ್ಲಿ ಹುಸೇನ್ ಅಜ್ಜನಿದ್ದ ಮಸೀದಿ ಇದೆ. ಜೀವಕಾರುಣ್ಯದ ಬೇರುಗಳು, ಹೋರಾಟದ ದೆಸೆಯಿಂದ ಮಾನವ ಹೃದಯಗಳಲ್ಲಿ ಬೇರು ಬಿಟ್ಟಿದ್ದ ರಾಮಯ್ಯನವರಲ್ಲಿ ಅವು ಕುಡಿಯೊಡೆಯಲು ಹುಸೇನ್ ಅಜ್ಜ ಎರೆದ ಜೀವಜಲ ಮುಖ್ಯಪಾತ್ರವನ್ನು ವಹಿಸಿರುವುದಾಗಿ ರಾಮಯ್ಯನವರು ಈ ಸಂಕಲನದ ಬಿಡುಗಡೆಯ ಸಂದರ್ಭದಲ್ಲಿ ಆಡಿದ ಮಾತುಗಳಿಂದ ಹೃದ್ಯವಾಗಿದೆ. ಈ ಮಾತಿನ ಮೇಲೆ ಇದೊಂದು ಬಗೆಯ ಸುಂದರ ಸಮಾಗಮವಾಗಿ ಒಟ್ಟು ರಾಮಯ್ಯನವರ ಧರ್ಮವನ್ನೇ ಪುನಾರೂಪಿಸಿದೆ ಎನ್ನಬಹುದು.

ದೇವನೂರು ಮಹಾದೇವ ಅವರ ಸಾಹಿತ್ಯ ಕೃತಿಗಳಲ್ಲಿ ಕಡೆದಿಟ್ಟ ಪಾತ್ರಗಳು ರಾಮಯ್ಯನವರ ಕಾವ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು ಎಂದು ನಾನು ಯೋಚಿಸಿದ್ದೇನೆ. ಪ್ರಾಯಶಃ ದಲಿತ ಸಾಹಿತ್ಯಕ್ಕೆ ಮಹದೇವ ಕೊಟ್ಟಂತಹ ಅಮೂಲ್ಯ ರೂಪಕಗಳು ಆ ಪಾತ್ರಗಳು ಮತ್ತು ಆ ಪಾತ್ರಗಳ ಜೊತೆ ಬರುವ ಕಂಬಳಿ, ದೀಪ, ಗೋಡೆಯ ಮೇಲಿನ ಚಿತ್ರ ಮುಂತಾದವು. ದಲಿತ ಸಾಹಿತ್ಯಕ್ಕೆ ಅವು ಹೊಸ ಸಂಕೇತಗಳನ್ನು ಕೊಟ್ಟವು. ಹಾಗಾಗಿ ಅವುಗಳಷ್ಟು ಸಮರ್ಥವಾಗಿ ತಮ್ಮ ಉದ್ದೇಶಗಳನ್ನು ಬೇರೆ ಏನೂ ಈಡೇರಿಸಿಲ್ಲವೆಂಬ ಶಂಕೆ ನನಗಿದೆ. ಹಾಗಾಗಿಯೇ ರಾಮಯ್ಯ ಆ ರೂಪಕಗಳನ್ನು ತಮ್ಮ ಕಾವ್ಯದಲ್ಲಿ ಬಳಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ.

ದಲಿತ ಕಾವ್ಯ ತನ್ನಷ್ಟಕ್ಕೆ ಹಾಕಿಕೊಂಡ ಚೌಕಟ್ಟನ್ನು ಹಲವು ದಲಿತ ಕವಿಗಳು ದಾಟಿ ಹೊರಬಂದಿದ್ದಾರೆ ಅಥವಾ ಆ ಎಲ್ಲೆಗಳನ್ನು ವಿಸ್ತರಿಸಿಕೊಂಡಿದ್ದಾರೆ. ರಾಮಯ್ಯನವರ ಕಾವ್ಯ ದಾಟಿ ಬಂದದ್ದಾಗಿದೆ ಮತ್ತು ಅತ್ಯಂತ ಸಹಜ ಮನಸ್ಸಿನ ಮಾನವೀಯ ತುಡಿತಗಳಿಗೆ ಕೊಟ್ಟ ದನಿಯಾಗಿದೆ. ಮಾತು ಮಾತು ಬೆಳೆಸುವ ಜಟಾರೂಪಿ ಕವಿತೆಗಳಿಗಿಂತ ಅವರ ಸಣ್ಣ ಮತ್ತು ಫೋಕಸ್ಡ್ ಆದ ಕವಿತೆಗಳು ರಾಮಯ್ಯನವರ ಕಾವ್ಯನಿರ್ಮಾಣ ಶಕ್ತಿಗೆ ಉದಾಹರಣೆಗಳು. ಇಷ್ಟು ವರ್ಷಗಳ ಕಾಲ ಕಾವ್ಯ ಬರೆಯದೆ ಇದ್ದರು ಕಾವ್ಯವನ್ನ ಬದುಕುತ್ತಿದ್ದ ರಾಮಯ್ಯ ಥಟ್ಟನೆ ಎಂಟನೇ ತಾರೀಕು ಬೆಟ್ಟದ ಮೇಲೆ ಪುಸ್ತಕ ಬಿಡುಗಡೆ ಎಂದರು. ಅಲ್ಲಿ ಹೋದಾಗ ಪುಸ್ತಕ ಬಿಡುಗಡೆ ಮಾಡಿ ಎಂದರು ಆಯೋಜಕರು. ಅಂದು ಮಾತನಾಡಲು ಯಾವುದೇ ತಯಾರಿಯಿಲ್ಲದ ನಾನು ಮನಸ್ಸಿನಲ್ಲೇ ಈ ಕಾವ್ಯದ ಬಗ್ಗೆ ಬರೆಯಬೇಕೆಂದು ತೀರ್ಮಾನಿಸಿದೆ. ಈ ಓದು ಹಲವು ಸೂಕ್ಷ್ಮಗಳಿಗೆ ನನ್ನ ಮನಸ್ಸನ್ನು ತೆರೆದಿದೆ.