ಹಟ್ಟಿಯ ಅಂಗಳಕ್ಕೆ ಬಂದವನೆ ಸಡನ್ನಾಗಿ ನಿಂತುಕೊಂಡೆ. ಅಪ್ಪ ಎದುರಿಗೆ ನಿಂತಿದ್ದಾನೆ. ಭೀಮನ ಗದೆಯಂತ ಕೋಲು ಹಿಡಿದು ತೇಪೆಯ ಅಂಗಿಯ ತೊಟ್ಟು.. ಸಿಟ್ಟಿಗೆ ಮುಖ ನಡುಗುತ್ತಿದೆ… ಕೈಯಲ್ಲಿನ ಕೋಲು ಕುಣಿಯುತ್ತಿದೆ. ನನಗೆ ಎಲ್ಲವೂ ಅರ್ಥವಾಗಿತ್ತು. ಅಪ್ಪನಿಗೆ ನಾನು ಹಣ ತೆಗೆದುಕೊಂಡಿದ್ದು ಗೊತ್ತಾಗಿದೆ. ಪಕ್ಕದಲ್ಲಿ ಅಕ್ಕ ನಿಂತಿದ್ದಳು. ಅವಳ ಮುಖದಲ್ಲಿ ನಗು ನೋಡಿ ಅರ್ಥವಾಯಿತು. ಓ.. ನಾನು ಬೆಳಿಗ್ಗೆ ತೆಗೆದುಕೊಳ್ಳುವಾಗ ಇವಳು ನೋಡಿರಬೇಕು. ಅಪ್ಪನಿಗೆ ಊಟ ಮಾಡಿದ ಮೇಲೆ ಬೀಡಿ ಸೇದುವ ಚಟ. ಜೇಬಿನಲ್ಲಿದ್ದ ಹಣದಲ್ಲಿ ಬೀಡಿ ತಂದು ಸೇದುವ ಎಂದು ನೋಡಿದ್ದಾನೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ನಾಲ್ಕನೆಯ ಕಂತು ನಿಮ್ಮ ಓದಿಗೆ

ಶಾಲೆ ಅದರ ಪಾಡಿಗೆ ಅದು ನಡೆಯುತ್ತಿತ್ತು. ಅನ್ನಕ್ಕೆ ಕಷ್ಟಪಡುತ್ತಿದ್ದ ದಿನಗಳವು. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಕಷ್ಟ ಮಾಡಿಯೇ ನಮ್ಮನ್ನು ಸಾಕುತಿದ್ದರು. ಸಿರಿವಂತಿಕೆಯ ಯಾವ ಐಭೋಗವು ನಮ್ಮತ್ತಿರ ಸುಳಿಯಲು ಸಾಧ್ಯವಿರಲಿಲ್ಲ. ಹಾಗಂತ ಹೊಟ್ಟೆ ಕಟ್ಟುವಷ್ಟು ತೀರ ಕನಿಷ್ಟದ ಬಡತನವೇನೂ ನಮ್ಮನ್ನು ಅಮರಿಕೊಂಡಿರಲಿಲ್ಲ. ಸ್ವಾಭಿಮಾನಿಗಳಾದ ನನ್ನ ಜನ್ಮದಾತರು ಇದ್ದುದರಲ್ಲಿಯೆ ಬದುಕುವುದನ್ನು ಕಲಿಸಿದ್ದರು. ಅನುಕೂಲವಿರುವ ಮನೆಯಿಂದ ಬರುವ ಮಕ್ಕಳು ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಕಿರಾಣಿ ಅಂಗಡಿಗಳಲ್ಲಿ ಕುರುಕಲು ತಿಂಡಿಯನ್ನ ತಿನ್ನುತ್ತಿರುವಾಗ ಆಸೆಯ ಕಣ್ಣುಗಳಿಂದ ನೋಡುತ್ತಿದ್ದೆವು. ಆದರೆ ಕೇಳುವ ಪ್ರಯತ್ನ ಮಾಡುತ್ತಿರಲಿಲ್ಲ. ಸ್ವಾಭಿಮಾನವ ಮರೆತ ಮಾತು ನಾಲಿಗೆಯ ತುದಿಯವರೆಗೂ ಬಂದು ವಾಪಾಸ್ಸಾಗುತ್ತಿತ್ತು. ಆದರೆ ಅವರು ತಿನ್ನುವುದನ್ನು ನೋಡುವಾಗ “ತಿನ್ನೋದನ್ನ ನೋಡಬ್ಯಾಡ್ರಪ್ಪ ನಮಗೆ ಹೊಟ್ಟೆ ನೋವು ಬರುತ್ತೆ” ಅನ್ನುತ್ತಿದ್ದರು. ಈಗ ಅದೆಲ್ಲ ನೆನಪಾದರೆ ತಮಾಷೆಯಾಗಿ ಕಾಣಬಹುದು. ಆದರೆ ಅಂದು ಅಂಥ ಮಾತುಗಳೆಲ್ಲ ಮನಸ್ಸಿನ ಮೇಲೆ ಆಘಾತವುಂಟು ಮಾಡುತ್ತಿತ್ತು. ಅರಳುವ ಹೂಗಳು ಬಿರುಗಾಳಿಗೊ ಕೀಟದ ಆಕ್ರಮಣಕ್ಕೊ ಅಥವಾ ಮನುಷ್ಯ ಕ್ರೌರ್ಯಕ್ಕೋ ತುತ್ತಾಗಿ ಮುದುಡಿ ಒಣಗುವಂತೆ ಆಘಾತಗಳಿಗೆ ಮಕ್ಕಳ ಮನಸ್ಸು ಮುದುಡಿ ಬಾಡಿಹೋಗುವ ಅಪಾಯವೆ ಹೆಚ್ಚು. ತಿನ್ನುವವರ ಆಹಾರ ನೋಡಿದರೆ ನಿಜವಾಗಲೂ ಹೊಟ್ಟೆನೋವು ಬರುತ್ತ ಇವತ್ತಿಗೂ ಗೊತ್ತಿಲ್ಲ. ಬೇರೆಯವರು ತಿನ್ನಬೇಕಾದರೆ ನಿಂತುಕೊಳ್ಳಬಾರದು ಎನಿಸಿತು. ನಂತರ ಆಸೆಯಿಂದ ನೋಡುವುದನ್ನು ಬಿಟ್ಟೆವು. ಆಗೆಲ್ಲ ದೇವರ ಮೇಲೆ ಕೋಪ ಜಾಸ್ತಿಯಾಗುತ್ತಿತ್ತು. ನಮಗೂ ಅಂತಹ ಅನುಕೂಲಗಳಿದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರವರು ಪಡೆದುಕೊಂಡು ಬಂದ ಬದುಕು ಅವರವರದು ಎಂದು ಮನೆಯಲ್ಲಿ ಹೇಳುತ್ತಿದ್ದಾಗ ಸುಮ್ಮನಾಗುತ್ತಿದ್ದೆವು.

ನಾಣ್ಯಕ್ಕೂ ಮೌಲ್ಯವಿದ್ದ ಕಾಲವದು. ನೋಟಗಳನ್ನು ನೋಡುವುದೆ ಅಪರೂಪ ನಮಗೆ. ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದದ್ದು ಒಂದು ರೂಪಾಯಿ ಹಾಗೂ ಎರಡು ರೂಪಾಯಿ ನೋಟು ಮಾತ್ರ. ಅವೆ ನಮ್ಮ ಮನೆಯ ದೊಡ್ಡ ನೋಟುಗಳು (ಈಗಂತು ಬಿಡಿ ದೊಡ್ಡ ನೋಟುಗಳದ್ದೆ ಸಾಮ್ರಾಜ್ಯ) ಒಂದು ಪ್ರಸಂಗವನ್ನು ಹೇಳಲೇಬೇಕು. ಬೇಸಿಗೆಯ ರಜಾ ದಿನಗಳಲ್ಲಿ ನಾವು ಮನೆಯಲ್ಲಿಯೇ ಇರುತ್ತಿರಲಿಲ್ಲ. ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಆಟ ಆಟವಷ್ಟೆ ನಮ್ಮ ಪರಮೋಚ್ಛ ಗುರಿ ಎಂಬಂತೆ ಒಂದಲ್ಲ ಒಂದು ಆಟದಲ್ಲಿ ಮಗ್ನರಾಗುತ್ತಲೆ ಇರುತ್ತಿದ್ದೆವು. ಎಷ್ಟು ಚಂದದ ಬಾಲ್ಯವದು, ಈಗಿನಂತೆ ರಜಾ ದಿನದಲ್ಲೂ ನಾನು ಆ ಸಬ್ಜೆಕ್ಟ್ ಹೋಂವರ್ಕ್ ಮಾಡ್ಬೇಕು ಇದು ಅರ್ಧ ಬರ್ದಿದ್ದೇನೆ. ಮ್ಯಾತಮೆಟಿಕ್ಸ್ ಇನ್ನೊಂದಿಷ್ಟಿದೆ ಅನ್ನುತ್ತಲೆ ತನ್ನ ಬಾಲ್ಯದ ಸ್ವಚ್ಛಂದ ಮುಕ್ತ ಸಮಯವನ್ನು ಜಿಜ್ಞಾಸೆಯಲ್ಲಿ ಕಳೆದು ಯಾಂತ್ರಿಕವಾಗಿ ಬದುಕುವುದು ಯಾರಿಗೆ ಬೇಕು. ಇಂತಹ ಬಾಲ್ಯ ನಮ್ಮದಲ್ಲ. ಅದರಲ್ಲೂ ಹಳ್ಳಿಗಳಲ್ಲಿ ಅದರ ಸೊಬಗೆ ಬೇರೆ. ಗೋಲಿ ಆಡುವುದು, ಬುಗುರಿ ಆಡುವುದು, ಜೀರ್ಜಿಂಬೆ ಹಿಡಿದು ಅದು ಎಷ್ಟು ಮೊಟ್ಟೆ ಇಟ್ಟಿದೆ ಎಂದು ನೋಡುವುದು ಅದಕ್ಕೆ ಪ್ರತಿದಿನವು ಜಾಲಿ ಸೊಪ್ಪು ಹಾಕುವುದು ಅವೆಲ್ಲವೂ ಖುಷಿಯ ಕೊಡುವ ಸಂಗತಿಗಳೆ ಆಗಿದ್ದವು.

ಗೋಲಿ ಆಡುವುದೆಂದರೆ ಅಚ್ಚು ಮೆಚ್ಚಿನ ಕೆಲಸ. ಗೆದ್ದಗೋಲಿಗಳೆಲ್ಲ ಜೇಬು ಸೇರುತ್ತಿದ್ದರೆ ಜೇಬು ಭಾರವಾಗಿ ಜಗ್ಗಿದರೆ ಅದನ್ನು ಎಲ್ಲರಿಗೂ ತೋರಿಸಿಕೊಂಡು ಓಡಾಡುವುದೆ ಒಂದು ಆನಂದ ಸಂಭ್ರಮ. ಒಂದೊಂದು ಸಾರಿ ಸೋತು ಗೋಲಿಗಳೆಲ್ಲ ಖಾಲಿಯಾಗುತ್ತಿದ್ದವು. ಅವುಗಳನ್ನು ಗೆಲ್ಲುವವರೆಗೆ ಸಮಾಧಾನವಿರುತ್ತಿರಲಿಲ್ಲ. ಒಮ್ಮೆ ನನ್ನಲ್ಲಿದ್ದ ಎಲ್ಲಾ ಗೋಲಿಗಳನ್ನು ಸೋತಿದ್ದೆ ಹೊಸದಾಗಿ ಗೋಲಿ ತೆಗೆದುಕೊಳ್ಳಲು ನನ್ನ ಬಳಿ ಹಣವೂ ಇರಲಿಲ್ಲ. ಯಾರನ್ನು ಕೇಳುವುದು? ನನ್ನ ಗೆಳೆಯರೆಲ್ಲ ನನ್ನದೆ ಪರಿಸ್ಥಿತಿ ಹೊಂದಿರುವ ಬಡತನದ ಹಿನ್ನೆಲೆಯ ಕೂಸುಗಳೆ. ಅವರಿಗೆ ಹಣ ಎಲ್ಲಿಂದ ಬರಬೇಕು. ಚಡಪಡಿಸಿದೆ ಆ ರಾತ್ರಿಯೆಲ್ಲಾ ಒದ್ದಾಡಿದೆ ನಿದ್ರೆಯೆ ಬರಲಿಲ್ಲ. ಬೆಳಿಗ್ಗೆ ಅಮ್ಮನ ಧ್ವನಿ ಕೇಳಿದ ಮೇಲೆ ನಾನು ಕಣ್ಣು ಬಿಟ್ಟದ್ದು. ಆಗಲೇ ಎದುರಿನ ಮೊಳೆಗೆ ನೇತಾಕಿದ್ದ ಅಪ್ಪನ ತೇಪೆಯ ಅಂಗಿ ಕಂಡದ್ದು. ಆಸೆಯ ಅಲೆಯೊಂದು ತೇಲಿ ಮನದಮೂಲೆಯಲಿ ಅಪ್ಪಳಿಸಿದಂತಾಗಿ ಅಪ್ಪನ ಜೇಬಲ್ಲಿ ಹಣವಿರಬಹುದೆ ಎಂಬ ಆಸೆ ಮೂಡಿತು. ಛೆ.. ಛೆ.. ಇರಲಾರದು ಎನ್ನಿಸಿತು. ಹೊತ್ತಿನ ಊಟಕ್ಕೆ ಹೋರಾಡುತಿದ್ದ ಅಪ್ಪ ಹಣವಿನ್ನೆಲ್ಲಿ ಜೇಬನಲ್ಲಿರಿಸಿಕೊಂಡಾನು ಎಂಬ ಯೋಚನೆ ಬಂದರೂ ಒಮ್ಮೆ ನೋಡಿದರೆ ತಪ್ಪೇನು ಎಂದು ಯೋಚಿಸಿ ಹೋಗಿ ಸೀದಾ ಜೇಬಿಗೆ ಕೈ ಹಾಕಿದೆ. ಅರೆ ಇಪ್ಪತ್ತು ಪೈಸೆಯ ಎರಡು ನಾಣ್ಯಗಳು ಕಂಡವು. ಅದರಲ್ಲಿ ಒಂದು ನಾಣ್ಯವನ್ನ ತೆಗೆದುಕೊಂಡು ಜೇಬಿಗೆ ಸೇರಿಸಿದೆ. ಯಥಾಸ್ಥಿತಿ ಅಮ್ಮ ಕೂಲಿ ಹೋದಳು.

ನಾನೊಂದಿಷ್ಟು ಊಟ ಮಾಡಿ ಆಟ ಆಡುವುದಕ್ಕೆ ಹೋದೆನು. ಅಪ್ಪ ಮನೆಯಲ್ಲಿಯೇ ಇದ್ದ. ಅವನಿನ್ನು ತನ್ನ ಜೇಬು ನೋಡಿಕೊಂಡಿರಲಿಲ್ಲ ಎಂಬುದನ್ನು ಗಮನಿಸಿದ್ದೆ. ನಾಪತ್ತೆಯಾಗಿರುವ ಹಣವನ್ನು ನಾನೇ ಎಗರಿಸಿದ್ದು ಎಂದು ಗೊತ್ತಾದರೆ ನನಗೆ ಗೂಸಾ ಗ್ಯಾರಂಟಿ ಅನ್ನೋದು ಖಾತ್ರಿಯಾಗಿತ್ತು. ಹಾಗಾಗಿ ಮನೆಯಿಂದ ಹೊರಟವನೆ ಸೀದಾ ಕಿರಾಣಿ ಅಂಗಡಿಗೆ ಹೋಗಿ ಐದು ಪೈಸೆಗೆ ಒಂದು ಗೋಲಿಯಂತೆ ನಾಲ್ಕು ಗೋಲಿಗಳನ್ನು ತೆಗೆದುಕೊಂಡೆ. ಗೆಳೆಯರೆಲ್ಲ ಒಂದೆಡೆ ಸೇರಿದೆವು. ಗೋಲಿ ಗೆಲ್ಲುವ ಆಟ ಪ್ರಾರಂಭವಾಯಿತು. ಆಯತಾಕಾರದಲ್ಲಿ ಗೆರೆ ಎಳೆದು ಅದರಲ್ಲಿ ಆಟಕ್ಕೆ ಬರುವವರ ಒಂದೊಂದು ಗೋಲಿಗಳನ್ನು ಇಟ್ಟು ಒಂದು ದಿಕ್ಕಿನಲ್ಲಿ ಗೊತ್ತಾದ ಸ್ಥಳದಿಂದ ಗೋಲಿಯನ್ನು ಎಸೆದು ಏರಿಳಿತಕ್ಕೆ ಅನುಸಾರವಾಗಿ ಆಯತಾಕಾರದಲ್ಲಿರುವ ಗೋಲಿಗಳನ್ನು ಹೊರಗೆ ಬರುವಂತೆ ಗುರಿಯಿಟ್ಟು ಹೊಡೆಯಬೇಕು. ಹೀಗೆ ಅದರಲ್ಲಿರುವ ಗೋಲಿಗಳನ್ನು ಒಬ್ಬೊಬ್ಬರಾಗಿ ಹೊಡೆದು ಗೆಲ್ಲುವ ಆಟವದು. ಯಾರೂ ಗೆಲ್ಲದಿದ್ದರೆ ಪುನರಾವರ್ತಿತವಾಗುವುದು ನಿಯಮ. ನನ್ನಲ್ಲಿರುವ ಗೆಲ್ಲಬೇಕೆಂಬ ಹಪಹಪಿತನ ಈ ಹಿಂದೆ ಸೋತ ಕಿಚ್ಚು ನನ್ನನ್ನು ಗುರಿಯಿಟ್ಟು ಹೊಡೆಯುವಂತೆ ಮಾಡಿತು. ಅರ್ಧತಾಸು ಕಳೆಯುವುದರೊಳಗೆ ಗೋಲಿಗಳನ್ನೆಲ್ಲ ಗೆದ್ದಿದ್ದೆ ಗೆಳೆಯರ ಗೋಲಿಗಳೆಲ್ಲ ಖಾಲಿಯಾಗಿದ್ದವು. ಅವುಗಳಲ್ಲಿ ಹೊಸ ಹೊಸ ಗೋಲಿಗಳನ್ನು ವಾಪಸ್ಸು ಕಿರಾಣಿ ಅಂಗಡಿಯವನು ಐದು ಪೈಸೆಗೆ ಎರಡರಂತೆ ಕೊಂಡುಕೊಳ್ಳುತ್ತಿದ್ದ. ಅದರಲ್ಲಿ ಕೆಲವನ್ನು ವಾಪಸ್ಸು ಕೊಟ್ಟು ಅಪ್ಪನ ಜೇಬಿಗೆ ಇಪ್ಪತ್ತು ಪೈಸೆ ಇಡಬೇಕು ಅಂದ್ಕೊಂಡಿದ್ದೆ. ಗೆದ್ದ ಖುಷಿಯಲ್ಲಿ ಎಲ್ಲವನ್ನು ಮರೆತಿದ್ದೆ. ಜೇಬಿನ ತುಂಬ ಗೋಲಿಗಳಿದ್ದವು. ಅವುಗಳನ್ನು ಅಕ್ಕನಿಗೆ ತೋರಿಸಿ ಒಂದಿಷ್ಟು ಗೋಳಾಡಿಸಬೇಕು ಅಂದುಕೊಂಡು ಮನೆಗೆ ಓಡೋಡಿ ಬಂದಿದ್ದೆ.

ಒಮ್ಮೆ ನನ್ನಲ್ಲಿದ್ದ ಎಲ್ಲಾ ಗೋಲಿಗಳನ್ನು ಸೋತಿದ್ದೆ ಹೊಸದಾಗಿ ಗೋಲಿ ತೆಗೆದುಕೊಳ್ಳಲು ನನ್ನ ಬಳಿ ಹಣವೂ ಇರಲಿಲ್ಲ. ಯಾರನ್ನು ಕೇಳುವುದು? ನನ್ನ ಗೆಳೆಯರೆಲ್ಲ ನನ್ನದೆ ಪರಿಸ್ಥಿತಿ ಹೊಂದಿರುವ ಬಡತನದ ಹಿನ್ನೆಲೆಯ ಕೂಸುಗಳೆ. ಅವರಿಗೆ ಹಣ ಎಲ್ಲಿಂದ ಬರಬೇಕು. ಚಡಪಡಿಸಿದೆ ಆ ರಾತ್ರಿಯೆಲ್ಲಾ ಒದ್ದಾಡಿದೆ. ನಿದ್ರೆಯೆ ಬರಲಿಲ್ಲ.

ಹಟ್ಟಿಯ ಅಂಗಳಕ್ಕೆ ಬಂದವನೆ ಸಡನ್ನಾಗಿ ನಿಂತುಕೊಂಡೆ. ಅಪ್ಪ ಎದುರಿಗೆ ನಿಂತಿದ್ದಾನೆ. ಭೀಮನ ಗದೆಯಂತ ಕೋಲು ಹಿಡಿದು ತೇಪೆಯ ಅಂಗಿಯ ತೊಟ್ಟು.. ಅವನ ಕಣ್ಣು ಕೆಂಪಾಗಿವೆ, ಸಿಟ್ಟಿಗೆ ಮುಖ ನಡುಗುತ್ತಿದೆ… ಕೈಯಲ್ಲಿನ ಕೋಲು ಕುಣಿಯುತ್ತಿದೆ. ನನಗೆ ಎಲ್ಲವೂ ಅರ್ಥವಾಗಿತ್ತು. ಅಪ್ಪನಿಗೆ ನಾನು ಹಣ ತೆಗೆದುಕೊಂಡಿದ್ದು ಗೊತ್ತಾಗಿದೆ. ಪಕ್ಕದಲ್ಲಿ ಅಕ್ಕ ನಿಂತಿದ್ದಳು. ಅವಳ ಮುಖದಲ್ಲಿ ನಗು ನೋಡಿ ಅರ್ಥವಾಯಿತು. ಓ.. ನಾನು ಬೆಳಿಗ್ಗೆ ತೆಗೆದುಕೊಳ್ಳುವಾಗ ಇವಳು ನೋಡಿರಬೇಕು. ಅಪ್ಪನಿಗೆ ಊಟ ಮಾಡಿದ ಮೇಲೆ ಬೀಡಿ ಸೇದುವ ಚಟ. ಜೇಬಿನಲ್ಲಿದ್ದ ಹಣದಲ್ಲಿ ಬೀಡಿ ತಂದು ಸೇದುವ ಎಂದು ನೋಡಿದ್ದಾನೆ. ಇಪ್ಪತ್ತು ಪೈಸೆ ಇಲ್ಲದ್ದು ನೋಡಿ ಅಕ್ಕನನ್ನು ಕೇಳಿದ್ದಾನೆ. ಅವಳು ತನ್ನ ಮೇಲೆ ಬರುವುದೆಂದು ತಿಳಿದು ನಾನು ತೆಗೆದುಕೊಂಡಿದ್ದನ್ನು ತಿಳಿಸಿದ್ದಾಳೆ. ಗ್ರಹಚಾರಕ್ಕೆ ನಾನು ಅದೇ ಸಮಯಕ್ಕೆ ಹೋಗಿದ್ದೇನೆ. ಕೇಳದೆ ತೆಗೆದುಕೊಂಡನಲ್ಲಾ ಎಂಬ ಕೋಪ ಅಪ್ಪನನ್ನು ‘ನಖಶಿಖಾಂತ’ ಉರಿಯುವಂತೆ ಮಾಡಿತ್ತು. ಇನ್ನೊಮ್ಮೆ ಇಂತಹ ತಪ್ಪು ಮಾಡಬಾರದೆಂದು ಆತನ ಎಣಿಕೆಯಾಗಿತ್ತು. ಹಣಕ್ಕೆ ಬಡತನವಿದ್ದರೂ ಅಪ್ಪ ಶಿಸ್ತಿನ ಮನುಷ್ಯ.

ನನಗೆ ಬೇರೆ ದಾರಿ ಇರಲಿಲ್ಲ. ಓಡಿಹೋಗೋಣವೆಂದರೆ ಅಪ್ಪನ ಕೈಯಲ್ಲಿನ ಕೋಲನ್ನು ಎಸೆದರೆ ಏನಾಗುವುದೋ ಎಂದು ಯೋಚಿಸುವಾಗಲೆ, ಊರಿನಿಂದ ಬಂದ ದೊಡ್ಡಮ್ಮ ಬಿಡಪ್ಪ ಮಗೀನ್ನ ಏನು ಮಾಡ್ಬೇಡ ಏನೋ ಹುಡುಗ್ ಬುದ್ದಿ ಅಂಗ್ ಮಾಡೈತಿ ಎಳೆಮಗು ಬಾಯಲ್ಲೇಳಿದ್ರೆ ಸಾಕು ಅಂದ್ಕಂಡು ಒಳಗಿನಿಂದ ಬರುವುದಕ್ಕೂ ಅಪ್ಪ ಕೋಲನ್ನು ಎತ್ತಿ ಬೀಸುವುದಕ್ಕೂ ಸರಿಯಾಯಿತು. ದೊಡ್ಡಮ್ಮ ಬಂದವಳೆ ನನ್ನನ್ನು ರಬಕ್ಕನೆ ಎಳೆದುಕೊಂಡಳು. ಕೋಲಿನ ತುದಿ ಬಲ ತೋಳಿಗೆ ಬಿತ್ತು. ಇಷ್ಟು ಸಾಕಾಗಿತ್ತು ಸಹಾಯಕ್ಕೆ ದೊಡ್ಡಮ್ಮ ಇದ್ದಳು. ಇಲ್ಲಿಯವರೆಗೂ ಇದ್ದ ಭಯ ಅಳುವಿನ ರೂಪ ಪಡೆದು ಅರಚುವುದಕ್ಕೆ ಶುರು ಮಾಡಿದೆ. ಅಪ್ಪನ ಕೋಪ ಕಡಿಮೆಯಾಗಿರಲಿಲ್ಲ. ಅಲ್ಲೊಂದು ಇಲ್ಲೊಂದು ಏಟುಗಳು ಬಿದ್ದವು. ಅಂತೂ ದೊಡ್ಡಮ್ಮನಿಂದ ನನ್ನ ರಕ್ಷಣೆಯಾಗಿತ್ತು. ಎರಡ್ಮೂರು ಕಡೆ ಬಾಸುಂಡೆಗಳು ಬಿದ್ದಿದ್ದವು. ಇನ್ನೊಮ್ಮೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಮಾತಾಯಿತು. ಆದರೆ ಏಟಿನ ನೋವಿಗೆ ದುಖ್ ದುಖ್ಖಿಸಿ.. ಅತ್ತೆ. ದೊಡ್ಡಮ್ಮ ಅಳು ನಿಲ್ಲಲಿ ಎಂದು ಎಂಟಾಣೆ (ಐವತ್ತು ಪೈಸೆ) ಕೊಟ್ಟಳು ನನಗೂ ಖುಷಿಯಾಯಿತು. ಸ್ವಲ್ಪ ಹೊತ್ತಿನಲ್ಲೆ ಅಳುವುದನ್ನು ನಿಲ್ಲಿಸಿದೆ. ಅಕ್ಕನ ಜೊತೆ ಹೊರಗಡೆ ಆಟ ಆಡ್ಕೊ ಹೋಗು ಎಂದು ದೊಡ್ಡಮ್ಮನೆ ಕಳಿಸಿದಳು. ಬಾಲ್ಯವೆ ಅಂತಹದು ಯಾವುದು ಮನಸ್ಸಿನಲ್ಲಿರುವುದಿಲ್ಲ ಎಲ್ಲವೂ ಕ್ಷಣಿಕ ಅಷ್ಟೆ.

ಆಟವಾಡುತ್ತಲೆ ನನಗೆ ಅರಿವೆ ಇಲ್ಲದೆ ದೊಡ್ಡಮ್ಮ ಕೊಟ್ಟಿದ್ದ ಎಂಟಾಣೆ ನಾಣ್ಯವನ್ನು ಬಾಯಿಯಲ್ಲಿ ಹಾಕ್ಕಿಕೊಂಡು ನಾಲಿಗೆಯಿಂದ ಅತ್ತಿಂದಿತ್ತ ಇತ್ತಿಂದತ್ತ ಆಡಿಸುತ್ತಲೆ ಇರುವಾಗಲೇ ಆಗಾಗ ಬರುತ್ತಿದ್ದ ನಿಟ್ಟುಸಿರಿಗೆ ನಾಣ್ಯವು ನಾಲಿಗೆ ತುದಿಯ ಹಿಂದಕ್ಕೆ ಹೋಗುತ್ತಿತ್ತು. ಒಮ್ಮೆ ದೀರ್ಘವಾಗಿ ಎಳೆದುಕೊಂಡ ಉಸಿರಿಗೆ ಗಂಟಲಿನ ಮುಂಭಾಗದಲ್ಲಿ ನಾಣ್ಯ ಅಡ್ಡವಾಗಿ ಸಿಕ್ಕಿಕೊಂಡಿತು. ನಾನು ಗಾಬರಿಯಾಗಿ ಕಿರುಚುವುದಕ್ಕೆ ಪ್ರಾರಂಭಿಸಿದೆ. ಉಸಿರಾಟದ ತೇಕು ಪ್ರಾರಂಭವಾಯಿತು. ಸುತ್ತಲಿದ್ದವರೆಲ್ಲರೂ ಗಾಬರಿಯಾಗಿದ್ದರು. ಕೂಲಿಯಿಂದ ಬಂದಿದ್ದ ಅಮ್ಮ ಅಳುವುದಕ್ಕೆ ಪ್ರಾರಂಭಿಸಿದ್ದಳು. ಬೆಳಿಗ್ಗೆ ಅಷ್ಟೊಂದು ಕೋಪದಲ್ಲಿದ್ದ ಅಪ್ಪ ಸ್ತಂಭೀಭೂತನಾಗಿದ್ದ. ಮುಖದಲ್ಲಿ ಗಾಬರಿ ಎದ್ದು ಕಾಣುತ್ತಿತ್ತು. ನನ್ನ ದೊಡ್ಡಮ್ಮ ಸ್ವಲ್ಪ ಗಟ್ಟಿಗಿತ್ತಿ. ಅವಳೇನು ಓದಿದವಳಲ್ಲ. ನಾನು ಅಳುತ್ತಲೇ ಇದ್ದೆ. ಅಳಬೇಡ ಅದು ಜಾರಿ ಹೋಗುತ್ತದೆ ಸ್ವಲ್ಪ ಹೊತ್ತು ಸುಮ್ಮನಿರು ಎಂದು ಬಲವಾಗಿ ನನ್ನ ತಲೆಯನ್ನು ಹಿಡಿದಳು ನಿಧಾನವಾಗಿ ಬೆರಳನ್ನು ತೂರಿಸಿ ಗಂಟಲಿನಿಂದ ಸ್ಲಲ್ಪವೆ ಸ್ವಲ್ಪವೆ ಹೊರತೆಗೆಯುವುದಕ್ಕೆ ಪ್ರಯತ್ನಿಸಿದಳು. ಮನೆಯಲ್ಲಿ ಅಸ್ಪತ್ರೆಗೆ ಕರೆದೊಯ್ಯುವುದೆ ಸೂಕ್ತ ಎಂಬ ಚರ್ಚೆ ಪ್ರಾರಂಭವಾಗಿತ್ತು. ಹಣ ಹೊಂದಿಸಬೇಕೆಂಬ ಚಿಂತೆ ಅಪ್ಪನನ್ನು ಹೈರಣಾಗಿಸಿತ್ತು. ಅಮ್ಮ ಅತ್ತು ಅತ್ತು ಸುಮ್ಮನಾಗಿದ್ದಳು. ನನ್ನ ಅದೃಷ್ಟಕ್ಕೆ ಅದು ಗಂಟಲಿನ ತುದಿಯಲ್ಲಿ ಅಡ್ಡಲಾಗಿತ್ತು ಸ್ವಲ್ಪ ಸ್ವಲ್ಪವೆ ಉಸಿರಾಡುತ್ತಿದ್ದೆ. ತಲೆ ಮೇಲೆತ್ತಿದರೆ ನಾಣ್ಯ ಜಾರಿ ಹೋಗುವ ಸಂಭವವೇ ಹೆಚ್ಚು. ತಲೆಯನ್ನು ಬಗ್ಗಿಸಿ ದೊಡ್ಡಮ್ಮ ಪ್ರಯತ್ನಿಸುತ್ತಲೆ ಇದ್ದಳು. ಒಂದೆರಡು ಬಾರಿಗೆ ಅದನ್ನು ಮುಂದು ಮುಂದಕ್ಕೆ ಜರುಗಿಸಿಕೊಂಡಳು. ಅವಳಿಗೂ ಕಾನ್ಪಿಡೆಂಟ್ ಹೆಚ್ಚಾಯಿತು ಅನಿಸುತ್ತದೆ ಅಡ್ಡಲಾಗಿದ್ದ ನಾಣ್ಯಕ್ಕೆ ಕೊಂಡಿಯಂತೆ ಬೆರಳು ಬರುವಷ್ಟು ಮುಂದೆ ನಾಣ್ಯ ಮುಂದಕ್ಕೆ ಚಲಿಸಿತ್ತು. ದೊಡ್ಡಮ್ಮ ತಡಮಾಡಲಿಲ್ಲ ಒಮ್ಮೆಲೆ ಜೋರಾಗಿ ನಾಣ್ಯವನ್ನು ಗಟ್ಟಿಯಾಗಿ ಎಳೆದಳು. ನಾಣ್ಯವು ಹೊರಗಡೆ ಅಷ್ಟುದೂರದಲ್ಲಿ ಬಿದ್ದಿತ್ತು. ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋಗಿತ್ತು.

ಬಾಯಿ ಸ್ವಲ್ಪ ಹೊತ್ತು ನೋಯುತಿತ್ತು ನಂತರ ಅದು ಶಮನವಾಯಿತು. ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ದೊಡ್ಡಮ್ಮನ ಈ ಕಾರ್ಯಕ್ಕೆ ಎಲ್ಲರೂ ಹೊಗಳಿದರು. ಕಷ್ಟ ಕಾಲದಲ್ಲಿ ಧೈರ್ಯ ಕಳೆದುಕೊಳ್ಳಬಾರದು ಎನ್ನುವುದಕ್ಕೆ ಈ ಘಟನೆಯೆ ಸಾಕ್ಷಿಯಾಗಿದೆ. ಎಂಟಾಣೆ ನೋಡಿದಾಗಲೆಲ್ಲ ಈ ಘಟನೆ ನನಗೆ ಮತ್ತೆ ಮತ್ತೆ ನೆನಪಾಗುತ್ತದೆ. ಮಗನಿಗೆ ಯಾವುದೆ ತೊಂದರೆ ಆಗಲಿಲ್ಲ ಅನ್ನೊ ಕಾರಣಕ್ಕೆ ಅಮ್ಮನಿಂದ ಅದೆ ಎಂಟಾಣೆ ಹರಕೆಯ ಕಾಣಿಕೆಯಾಯಿತು. ಯಾವ ದೇವರ ಹುಂಡಿಗೆ ಸೇರಿತೊ ಗೊತ್ತಿಲ್ಲ…

(ಮುಂದುವರೆಯುವುದು)