ಇದೊಂದು ಭಿನ್ನವಾದ ಕಳವು. ಮೊದಲೇ ಇಂತಹ ಊರಲ್ಲಿ ನಾಟಕ, ಬಯಲಾಟ ಅಥವಾ ಪಾರಿಜಾತ ನಡೆಯುವ ಸುದ್ದಿ ತಿಳಿದು, ಆ ನಾಟಕದ ರಾತ್ರಿ ಕಳ್ಳತನ ಮಾಡುವುದಕ್ಕೆ ಆಯಾ ಊರುಗಳಲ್ಲಿ ಮೊದಲೇ ಸುತ್ತಿ ಶ್ರೀಮಂತರ ಮನೆಗಳನ್ನು ಗುರುತು ಮಾಡಿ ತುಡುಗು ಮಾಡುತ್ತಿದ್ದರು. ಮುಖ್ಯವಾಗಿ ಹಿಂದೆ ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಾಟಕಗಳು ನಡೆಯುತ್ತಿದ್ದುದರಿಂದ ಇದರ ಲಾಭವನ್ನು ಗಂಟಿಚೋರರು ತುಡುಗು ಮಾಡಲು ಬಳಸುತ್ತಿದ್ದರು.
ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಐದನೆಯ ಕಂತು ಇಲ್ಲಿದೆ.

 

ಗಂಟಿಚೋರರು ‘ಕಳ್ಳತನಕ್ಕೆ’ ತುಡುಗು ಎಂದೇ ಕರೆಯುವುದು. ಈ ತುಡುಗುತನಕ್ಕೆ ಅಂಟಿಕೊಂಡ ನಂಬಿಕೆಯ ಲೋಕವೊಂದು ಇದೆ. ಅಂತೆ ತುಡುಗುತನದ ವಿಶಿಷ್ಟತೆಗಳು ಈ ಸಮುದಾಯಕ್ಕೇ ಅನನ್ಯವಾದ ಗುರುತುಗಳಾಗಿವೆ. ಮುಖ್ಯವಾಗಿ ತುಡುಗು ಮಾಡುವುದಕ್ಕೆ ಸಂತೆ, ಜಾತ್ರೆ, ತೇರು, ದೇವಸ್ಥಾನ, ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್ ಒಳಗೊಂಡಂತೆ ಎಲ್ಲೆಲ್ಲಿ ಜನರು ಹೆಚ್ಚು ಸೇರುತ್ತಾರೋ ಅಂತಹ ಕಡೆಗಳಲ್ಲಿ ತುಡುಗು ಮಾಡುತ್ತಿದ್ದರು. ಆರಂಭದಲ್ಲಿ ಗಂಟಿಚೋರರಲ್ಲಿ ರಾತ್ರಿಯ ವೇಳೆ ತುಡುಗು ಮಾಡುವುದು ನಿಷಿದ್ಧವಾಗಿತ್ತು. ಆದರೆ ಕಾಲಾನಂತರ ರಾತ್ರಿಯ ತುಡುಗು ಚಾಲ್ತಿಗೆ ಬಂತು. ರಾತ್ರಿಯ ತುಡುಗಿನಲ್ಲಿ ಮನೆಗಳಿಗೆ ಕನ್ನ ಹಾಕುವುದು, ದರೋಡೆ ಮಾಡುವುದನ್ನು ಮಾಡತೊಡಗಿದರು. ಈ ಸಮುದಾಯದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳೂ ಸಹ ತುಡುಗು ಮಾಡುತ್ತಿದ್ದರು. ಇವರ ಕಾರ್ಯಕ್ಷೇತ್ರ ಸೀಮಿತವಾಗಿತ್ತು. ಹಗಲಿನ ಕಳವಾಗಿತ್ತು. ಶಿಶುನಾಳ ಶರೀಫರು ಇವರನ್ನೇ ಗಂಟಿಚೌಡೇರು ಎಂದಿರುವ ಸಾಧ್ಯತೆ ಇದೆ. ಜಾತ್ರೆ, ಸಂತೆ, ರೈಲ್ವೆ ನಿಲ್ದಾಣ ಮುಂತಾದ ಕಡೆ ಜನಸಂದಣಿ ಇರುವ ಕಡೆಗಳಲ್ಲಿ ಮಹಿಳೆಯರು ತುಡುಗು ಮಾಡುತ್ತಿದ್ದರು.

ರಾಮಥಡಿ:

ಇದು ಒಂದು ತುಡುಗು ವಿಧಾನ. ಇದರಲ್ಲಿ ಬಂಗಾರದ ನೀರು ಕೂಡಿಸಿದ ಬೆಳ್ಳಿ ಅಥವಾ ತಾಮ್ರದ ಸಾಮಾನುಗಳನ್ನು ಬಂಗಾರವೆಂದು ನಂಬಿಸಿ ಇವನ್ನು ಕೊಟ್ಟು ಅವರ ಬಂಗಾರದ ವಡವೆಗಳನ್ನು ತುಡುಗು ಮಾಡುತ್ತಿದ್ದರು. ಇದರ ಕ್ರಮವೆಂದರೆ ಒಂದು ಬಂಗಾರದ ಗಟ್ಟಿಯನ್ನು ತೋರಿಸಿ, ನಮಗೆ ಕಷ್ಟವಿರುವುದಾಗಿಯೂ ಈ ಗಟ್ಟಿಯನ್ನು ಮಾರುವುದಕ್ಕೆ ಭಯವಿರುವುದಾಗಿಯೂ, ಈ ಗಟ್ಟಿ ಮೂರ್ನಾಲ್ಕು ತೊಲ(ಮೂವತ್ತು ಗ್ರಾಂ) ಇರುವುದಾಗಿಯೂ, ಇದನ್ನು ತೆಗೆದುಕೊಂಡು ನಿಮ್ಮ ಚೈನನ್ನೋ, ಉಂಗುರವನ್ನೋ ಕೊಟ್ಟರೆ ಈ ಗಟ್ಟಿಯನ್ನು ಕೊಡುವುದಾಗಿ ನಂಬಿಸಿ ತುಡುಗು ಮಾಡುತ್ತಿದ್ದರು. ಈ ಬಂಗಾರದ ಗಟ್ಟಿಗೆ ರಾಮಥಡಿ ಎಂದು ಕರೆಯುತ್ತಿದ್ದರು. ಹೀಗೆ ನಂಬಿದ ಜನರು ತಮ್ಮ ಒಡವೆಗಳಿಗೆ ಪ್ರತಿಯಾಗಿ ಬಂಗಾರದ ಗಟ್ಟಿಯನ್ನು ಪಡೆಯುತ್ತಿದ್ದರು. ಆ ಬಂಗಾರದ ಗಟ್ಟಿಯನ್ನು ಅಕ್ಕಸಾಲಿಗರೋ ಅಥವಾ ಬಂಗಾರದ ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದರೆ ಅದು ನಕಲಿ ಆಗಿರುತ್ತಿತ್ತು. ಇದೇ ರಾಮಥಡಿಗೆ ಹಣವನ್ನೂ ಪಡೆಯುತ್ತಿದ್ದರು.

ಚಿನಿ ಹಾಕುವುದು:

ಇದು ಕೂಡ ಮೇಲೆ ಹೇಳಿದ ಹಾಗೆ ನಕಲಿ ಬಂಗಾರದ ಗಟ್ಟಿಯನ್ನು ದಾರಿಯಲ್ಲಿ ಶ್ರೀಮಂತರು ನಡೆಯುವಾಗ ಅವರನ್ನು ಹಿಂಬಾಲಿಸಿ ಅವರ ಮುಂದೆ ಕಾಣುವಂತೆ ‘ಬಂಗಾರದ ಗಟ್ಟಿ’(ಚಿನಿ)ಯನ್ನು ಉದುರಿಸಿಕೊಂಡು ಹೋಗುತ್ತಾರೆ. ಇದನ್ನು ನೋಡಿದ ಶ್ರೀಮಂತ ಆ ಬಂಗಾರದ ಗಟ್ಟಿಯನ್ನು ತೆಗೆದುಕೊಳ್ಳುವಷ್ಟರಲ್ಲಿ ಉದುರಿಸಿಕೊಂಡು ಮುಂದೆ ಹೋದವನು ಅಚಾನಕ್ ಹಿಂದೆ ಬಂದು ನಂದು ಸ್ವಾಮಿ ಎಂದು ಗದರುತ್ತಾನೆ. ವಾದವಿವಾದ ಆದ ಮೇಲೆ ಸ್ವಾಮಿ ಇದು ನನಗೆ ಎಲ್ಲೋ ಒಂದು ಕಡೆ ಸಿಕ್ಕಿತ್ತು, ಇದನ್ನು ಮಾರಲು ಧೈರ್ಯವಿಲ್ಲ, ನಿಮ್ಮಲ್ಲಿರುವ ಬಂಗಾರದ ವಸ್ತುವನ್ನು ಕೊಟ್ಟು ಇದನ್ನು ತೆಗೆದುಕೊಳ್ಳಿ ಎಂದು ನಯವಾಗಿ ಮಾತನಾಡುತ್ತಾನೆ. ಶ್ರೀಮಂತ ಅರೆ ಇಷ್ಟು ಬಂಗಾರದ ಗಟ್ಟಿಗೆ ನನ್ನದೊಂದು ಚೈನೋ ಉಂಗುರವೋ ಏನು ಮಹಾ ಎಂದು ಕೊಡುತ್ತಾರೆ. ಹೀಗೆ ಚಿನಿ ಹಾಕಿ ಮೋಸ ಮಾಡಿ ಕಳವು ಮಾಡುವ ಮಾದರಿಯೊಂದಿತ್ತು.

(ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಮಾದರಿ)

ವೇಷಧಾರಿ ಕಳವು:

ಹಿಂದಿನ ಸರಣಿಯಲ್ಲಿ ವಿದ್ಯುತ್ ಚೋರನ ಬಗ್ಗೆ ಪ್ರಸ್ತಾಪಿಸಿದಂತೆ, ತುಡುಗು ಮಾಡುವುದಕ್ಕೆ ಈ ಸಮುದಾಯ ವಿವಿಧ ವೇಷ ಧರಿಸುವುದು, ನಟಿಸುವುದೂ ಇತ್ತು. ಈ ಬಗೆಯ ಕಳವು ಇದ್ದ ಬಗ್ಗೆ ಎಂ. ಕೆನಡಿಯವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ. ಇದರಲ್ಲಿ ನಾನಾ ವಿಧದ ವೇಷಗಳನ್ನು ಹಾಕುತ್ತಿದ್ದರು. ಶ್ರೀಮಂತರ ವೇಷ ಧರಿಸಿ ರೈಲಿನಲ್ಲಿ ಫಸ್ಟ್ ಕ್ಲಾಸ್ ಟಿಕೆಟ್ ತೆಗೆಸಿ ಪ್ರಯಾಣ ಮಾಡುವುದು. ಸಾಮಾನ್ಯವಾಗಿ ಫಸ್ಟ್ ಕ್ಲಾಸ್‍ನಲ್ಲಿ ಶ್ರೀಮಂತರು ಉತ್ತಮಸ್ಥರು ಪ್ರಯಾಣಿಸುತ್ತಿರುತ್ತಾರೆ. ಇಂಥವರನ್ನು ಗುರುತಿಸಿ ಅವರ ಹಣ ಸಂಪತ್ತನ್ನು ಗುರುತಿಸಿ ತುಂಬಾ ಚಾಕಚಕ್ಯತೆಯಿಂದ ಕಳವು ಮಾಡುತ್ತಿದ್ದರು.

ಅಂತೆಯೇ ಜೋಯಿಸರ ವೇಷವನ್ನು ಹಾಕಿ ಕಳವು ಮಾಡುವ ಬಗ್ಗೆಯೂ ಕ್ಷೇತ್ರಕಾರ್ಯದಲ್ಲಿ ಮಾಹಿತಿ ಸಿಕ್ಕಿತು. ಜೋಯಿಸರ ಹಾಗೆ ವೇಷ ಹಾಕಿ ಊರಿನ ಶ್ರೀಮಂತರ ಪೂರ್ವಾಪರಗಳನ್ನೆಲ್ಲಾ ತಿಳಿದುಕೊಂಡು ಅವರಿಗೆ ಜೋತಿಷ್ಯ ಎಂ. ಕೆನಡಿಯವರು ಹೇಳುವ ನೆಪದಲ್ಲಿ ಅವರ ಮನೆಗೆ ಪ್ರವೇಶಿಸಿ, ನಂಬುವಂತೆ ಜ್ಯೋತಿಷ ಹೇಳಿ ವಂಚಿಸಿ ತುಡುಗು ಮಾಡುವ ವಿಧಾನದಲ್ಲಿಯೂ ಕೆಲವರು ಪರಿಣತರಿದ್ದರೆಂದು ಹೇಳುತ್ತಾರೆ. ಕೆಲವೊಮ್ಮೆ ಪೊಲೀಸರ ವೇಷ ಹಾಕಿ ಕಳವು ಮಾಡಿದ ಕೆಲವು ಪ್ರಸಂಗಗಳೂ ಇವೆ.

(ಎಂ.ಕೆನಡಿಯವರು ಗುರುತಿಸಿದ ವೇಷಧಾರಿ ಗಂಟಿಚೋರರು)

ರಾತ್ರಿಯ ತುಡುಗಿನಲ್ಲಿ ಮನೆಗಳಿಗೆ ಕನ್ನ ಹಾಕುವುದು, ದರೋಡೆ ಮಾಡುವುದನ್ನು ಮಾಡತೊಡಗಿದರು. ಈ ಸಮುದಾಯದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳೂ ಸಹ ತುಡುಗು ಮಾಡುತ್ತಿದ್ದರು. ಇವರ ಕಾರ್ಯಕ್ಷೇತ್ರ ಸೀಮಿತವಾಗಿತ್ತು. ಹಗಲಿನ ಕಳವಾಗಿತ್ತು. ಶಿಶುನಾಳ ಶರೀಫರು ಇವರನ್ನೇ ಗಂಟಿಚೌಡೇರು ಎಂದಿರುವ ಸಾಧ್ಯತೆ ಇದೆ.

ಪಾತ್ರಧಾರಿ ಕಳವು:

ಇದೊಂದು ಭಿನ್ನವಾದ ಕಳವು. ಗಂಟಿಚೋರ್ ಸಮುದಾಯದಲ್ಲಿ ನಾಟಕ ಕಲಾವಿದರು ಅದರಲ್ಲಿಯೂ ಬಯಲಾಟ ಪಾರಿಜಾತದ ಪ್ರತಿಭಾವಂತ ಕಲಾವಿದರಿದ್ದರು. ಈ ಕಲಾವಿದರು ಒಂದು ಹಳ್ಳಿಯಲ್ಲಿ ಬಯಲಲ್ಲೇ ಮನೋರಂಜನೆಗಾಗಿ ಬಯಲಾಟದ ತುಣುಕನ್ನೋ, ಪಾರಿಜಾತದ ಒಂದು ಪ್ರಸಂಗವನ್ನೋ ಆಯೋಜಿಸುತ್ತಿದ್ದರು. ಇಂತಹ ಕಡೆಗಳಿಗೆ ಹಳ್ಳಿಯ ಜನರೆಲ್ಲಾ ಜಮಾಯಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಈ ಮೊದಲೇ ನಿರ್ಧರಿಸಿದಂತೆ ಕೆಲವರು ಕೆಲವು ಗುರುತಿಸಿಕೊಂಡಿದ್ದ ಮನೆಗಳನ್ನು ಕಳವು ಮಾಡುತ್ತಿದ್ದರು.

ಇದು ಇನ್ನೊಂದು ರೀತಿಯಲ್ಲಿ ನಡೆಯುತ್ತಿತ್ತು. ಈಗಾಗಲೆ ಮೊದಲೇ ಇಂತಹ ಊರಲ್ಲಿ ನಾಟಕ, ಬಯಲಾಟ ಅಥವಾ ಪಾರಿಜಾತ ನಡೆಯುವ ಸುದ್ದಿ ತಿಳಿದು, ಆ ನಾಟಕದ ರಾತ್ರಿ ಕಳ್ಳತನ ಮಾಡುವುದಕ್ಕೆ ಆಯಾ ಊರುಗಳಲ್ಲಿ ಮೊದಲೇ ಸುತ್ತಿ ಶ್ರೀಮಂತರ ಮನೆಗಳನ್ನು ಗುರುತು ಮಾಡಿ ತುಡುಗು ಮಾಡುತ್ತಿದ್ದರು. ಮುಖ್ಯವಾಗಿ ಹಿಂದೆ ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಾಟಕಗಳು ನಡೆಯುತ್ತಿದ್ದುದರಿಂದ ಇದರ ಲಾಭವನ್ನು ಗಂಟಿಚೋರರು ತುಡುಗು ಮಾಡಲು ಬಳಸುತ್ತಿದ್ದರು.

ವಿಶಿಷ್ಟ ಮಾದರಿಯ ಕಳವು:

ಗಂಟಿಚೋರ್ ಸಮುದಾಯದಲ್ಲಿ ಕೆಲವು ವಿಶಿಷ್ಟವಾದ ಕಳವು ಮಾಡುವ ನಿಪುಣರಿದ್ದಾರೆ. ಇವರು ತಮಗೇ ವಿಶಿಷ್ಟವಾದ ಮಾದರಿಯನ್ನು ಜನಪ್ರಿಯಗೊಳಿಸಿರುತ್ತಾರೆ. ಇಂತಹ ಕೆಲವರ ಕಳ್ಳತನದ ಮಾದರಿಯನ್ನು ಹೆಸರಲ್ಲೇ ಗುರುತಿಸುವುದನ್ನು ಕಾಣಬಹುದು. ಅದರಲ್ಲಿ ಸಾಯಬ್ಯೂತಾತ್ಯನ ತುಡುಗುತನದ ಮಾದರಿಯೊಂದು ವಿಶಿಷ್ಟವಾಗಿದೆ. ಈತನು ಇಲಿಗಳನ್ನು ಸಾಕಿದ್ದನು. ಈ ಇಲಿಗಳನ್ನು ಗೋಧಿ, ರಾಗಿ, ನವಣೆ ಹೊಲಗಳಲ್ಲಿ ರಾತ್ರಿಯ ಹೊತ್ತು ಬಿಟ್ಟು ಬರುತ್ತಿದ್ದ. ಇಲಿಗಳು ತೆನೆಗಳನ್ನು ಕತ್ತರಿಸಿ ಬಿಲದಲ್ಲಿ ಸಂಗ್ರಹಿಸಿಡುತ್ತಿದ್ದವು. ಇಂತಹ ಸಂದರ್ಭದಲ್ಲಿ ತಾತಾ ಇಲಿ ಹಿಡಿಯುವ ನೆಪದಲ್ಲಿ ಹೊಲಗಳಿಗೆ ಹೋಗಿ ಇಲಿಬಿಲದ ತೆನೆಗಳನ್ನೆಲ್ಲಾ ಸಂಗ್ರಹಿಸಿ, ಇಲಿ ಹಿಡಿದುಕೊಂಡು ಬರುತ್ತಿದ್ದನು. ಈತ ಸುಗ್ಗಿ ಮುಗಿವ ಹೊತ್ತಿಗೆ ಒಂದು ವರ್ಷಕ್ಕೆ ಆಗುವಷ್ಟು ದವಸ ಧಾನ್ಯಗಳನ್ನು ಇದೇ ಮಾದರಿಯಲ್ಲಿ ಸಂಗ್ರಹಿಸುತ್ತಿದ್ದುದಾಗಿ ಸಮುದಾಯದ ಹಿರಿಯರು ಹೇಳುತ್ತಾರೆ.

ಅಂತೆಯೇ ಕುಳ್ಡ ವೆಂಕಟಪ್ಪನ ಮಾದರಿಯೊಂದು ಪ್ರಸಿದ್ಧಿ ಹೊಂದಿತ್ತು. ಈತನ ಕುಟುಂಬವೇ ಕಳ್ಳತನ ಮಾಡುತ್ತಿತ್ತು. ಈತನ ಬಳಿ ಬಲಿಷ್ಠವಾದ ನಾಯಿಗಳಿದ್ದವು. ಈತ ಗುಂಪುಗಳಲ್ಲಿ ಕಳ್ಳತನ ಮಾಡದೆ ಒಂಟಿಯಾಗಿ, ಕೆಲವೊಮ್ಮೆ ಮನೆಯವರೊಂದಿಗೆ ತುಡುಗು ಮಾಡುತ್ತಿದ್ದ. ತುಂಬಾ ಬಲಿಷ್ಠವಾದ ದೇಹದ ಮೈಕಟ್ಟನ್ನು ಹೊಂದಿದ್ದನೆಂದು ಹೇಳುತ್ತಾರೆ. ಈತನ ತುಡುಗುತನದ ಚಾಕಚಕ್ಯತೆ ಯಾರಿಗೂ ಬರುವುದಿಲ್ಲ ಎನ್ನುವುದು ಈ ಭಾಗದವರ ನಂಬಿಕೆ. ತುಡುಗು ಮಾಡಿ ತಪ್ಪಿಸಿಕೊಳ್ಳುವಾಗ ಕವಣೆ ಕಲ್ಲನ್ನು ಬಳಸುತ್ತಿದ್ದ. ಕೊನೆಗೆ ಪೊಲೀಸರ ಕೈಗೆ ಸಿಕ್ಕು ಆತನ ಒಂದು ಕಣ್ಣನ್ನು ಕಿತ್ತರೂ ಆತ ಕಳ್ಳತನ ಮಾಡುತ್ತಿದ್ದ ಎನ್ನುವುದು ಆತನ ಬಗ್ಗೆ ಇರುವ ಹೆಗ್ಗಳಿಕೆಯ ಮಾತು(ಎಸ್.ವಿ ಹಲ್ದಿಪುರ್: 1914:18).

ಗಮನ ಬೇರೆಡೆ ಸೆಳೆಯುವ ತಂತ್ರ:

ಗಂಟಿಚೋರರ ವಿಶೇಷವೆಂದರೆ ಗಮನವನ್ನು ಬೇರೆಡೆ ಸೆಳೆದು ತುಡುಗು ಮಾಡುವ ವಿಧಾನ ತುಂಬಾ ಪ್ರಭಾವಶಾಲಿಯಾದುದು. ಈ ತಂತ್ರವನ್ನು ಹಲವು ರೀತಿಯಲ್ಲಿ ಮಾಡುತ್ತಿದ್ದ ಬಗ್ಗೆ ಸಮುದಾಯದ ಹಿರಿಯರು ಹೇಳುತ್ತಾರೆ. ಮುಖ್ಯವಾಗಿ ಈ ತಂತ್ರವನ್ನು ಸಂತೆ ಕಳ್ಳತನದಲ್ಲಿ ಮಹಿಳೆಯರು ಹೆಚ್ಚು ಬಳಸುತ್ತಿದ್ದರು. ಇದರ ಕೆಲವು ಮಾದರಿಗಳನ್ನು ನೋಡುವುದಾದರೆ, ಸಂತೆಯಲ್ಲಿ ಒಂದು ಗಂಟನ್ನು ಕಾಯುತ್ತ ಕುಳಿತವರ ಮುಂದೆ ನೋಟನ್ನಾಗಲಿ, ನಾಣ್ಯವನ್ನಾಗಲಿ ಕಾಣುವಂತೆ ಬೀಳಿಸಿ ಮುಂದೆ ಹೋಗುವುದು, ಆಗ ಆ ಗಂಟು ಅಥವಾ ಚೀಲ ಕಾಯುತ್ತಿದ್ದವರು ಬಿದ್ದ ಹಣವನ್ನು ತೆಗೆದುಕೊಳ್ಳಲು ಬರುತ್ತಿದ್ದಂತೆ ಮತ್ತೊಬ್ಬರು ಆ ಗಂಟನ್ನು ಮಾಯ ಮಾಡುತ್ತಿದ್ದರು. ಇದು ದೇವಸ್ಥಾನದ ನದಿಗಳಲ್ಲಿ ಬಟ್ಟೆ ಚೀಲ ಎಲ್ಲವನ್ನು ಒಂದೆಡೆ ಇಟ್ಟು ನದಿಗೆ ಇಳಿದು ಸ್ನಾನ ಮಾಡುವಾಗಲೂ ಮುಂತಾದ ಸಂದರ್ಭವನ್ನು ಬಳಸಿ ಗಮನವನ್ನು ಬೇರೆಡೆ ಸೆಳೆಯುವ ಹಲವು ತಂತ್ರಗಳನ್ನು ಈ ಸಮುದಾಯದ ಸದಸ್ಯರು ಮಾಡುತ್ತಿದ್ದರು. ಇದರಲ್ಲಿ ಇವರಿಗೆ ನಿಪುಣತೆ ಇರುತ್ತಿತ್ತು.

ರೈಲ್ವೆ ಕಳವು:

ಸಾಮಾನ್ಯವಾಗಿ ರೈಲ್ವೆ ಜಂಕ್ಷನ್ ಇರುವ ಕಡೆಯೇ ಕ್ರಿಮಿನಲ್ ಟ್ರೈಬ್ಸ್ ಸೆಟಲ್‌ಮೆಂಟ್‌ಗಳನ್ನು ಸ್ಥಾಪಿಸಲಾಗಿತ್ತು. ಕಾರಣ ಬ್ರಿಟಿಷ್ ಆಡಳಿತವು ಭಾರತದ ಸಂಪತ್ತನ್ನು ಸಾಗಿಸಲು ರೈಲ್ವೆ ಸಾರಿಗೆಯನ್ನು ಅವಲಂಬಿಸಿತ್ತು. ಹೀಗೆ ಸಂಪತ್ತಿನ ಸಂಗ್ರಹ ಮತ್ತು ಸಾಗಾಟಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಸೆಟಲ್‌ಮೆಂಟ್ ವಾಸಿಗಳ ಅಗತ್ಯವೂ ಇತ್ತು. ಹಾಗಾಗಿ ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ರೈಲ್ವೆಯನ್ನು ಹೆಚ್ಚು ಅವಲಂಬಿಸಿದ್ದರ ಪರಿಣಾಮವೂ ಹೌದು. ಹೀಗಾಗಿ ಗಂಟಿಚೋರ್ ಸಮುದಾಯಕ್ಕೆ ರೈಲ್ವೆ ಸಂಪರ್ಕ ಬಂದಾದ ನಂತರ ಅದರಲ್ಲಿಯೂ ತುಡುಗುತನವನ್ನು ಆರಂಭಿಸಿದ್ದರು. ಇವರು ರೈಲುಗಳ ವೇಷಧಾರಿ ಕಳವನ್ನು ಮಾಡುತ್ತಿದ್ದರು. ಶ್ರೀಮಂತರ ವೇಷ ಹಾಕಿ, ಫಸ್ಟ್ ಕ್ಲಾಸ್ ಟಿಕೇಟ್ ತೆಗೆದು ಸಜ್ಜನ ಪ್ರಯಾಣಿಕರಂತೆ ಪ್ರಯಾಣ ಬೆಳೆಸಿ, ಆಯಾ ಬೋಗಿಗಳಲ್ಲಿ ಸಿರಿವಂತರ ಸೂಟ್‌ಕೇಸ್, ಬ್ಯಾಗು ಮುಂತಾದವನ್ನು ಕಳವು ಮಾಡುತ್ತಿದ್ದರು. ಇವರ ವೇಷವನ್ನು ಯಾರೊಬ್ಬರೂ ಗುರುತಿಸುವಂತಿರಲಿಲ್ಲ. ರೈಲಿನಲ್ಲಿ ರಾಜ್ಯಪಾಲರೊಬ್ಬರ ಬ್ಯಾಗ್ ಕಳವು ಮಾಡಿದ್ದು ಮತ್ತು ಗದಗ ಹುಬ್ಬಳ್ಳಿ ಭಾಗದಲ್ಲಿ ಲಕ್ಷ್ಮಿ ಎಕ್ಸ್‌ಪ್ರೆಸ್ ರೈಲ್ ರಾಬರಿ ಮಾಡಿದ್ದು ಹೆಚ್ಚು ಸುದ್ದಿಯಾಗಿತ್ತು. ಹೀಗೆ ಗಂಟಿಚೋರ್ ಸಮುದಾಯ ಕಳವು ಮಾಡಲು ರೈಲು ಮತ್ತು ರೈಲ್ವೇ ಸ್ಟೇಷನ್ ಕೂಡ ಒಂದು ಬಗೆಯ ತುಡುಗಿನ ತಾಣಗಳಾಗಿದ್ದವು.

(ಚಿತ್ರಗಳು: ಲೇಖಕರ ಸಂಗ್ರಹದಿಂದ)