ಹದಿನೇಳು ವರ್ಷದ ರವೀಂದ್ರನಾಥ, ಮತ್ತೆ ಮತ್ತೆ ಓದಿಸಿ ಬಾಯಿಪಾಠ ಮಾಡಿಸುವ ಇಂಗ್ಲೆಂಡ್ ನ ಶಿಕ್ಷಣದಿಂದ ಭ್ರಮನಿರಸನ ಹೊಂದಿ ಪದವಿ ಸರ್ಟಿಫಿಕೇಟ್ ದೊರೆಯುವ ಮೊದಲೇ ಓದು ನಿಲ್ಲಿಸಿ ಭಾರತಕ್ಕೆ ಮರಳಿದ್ದರು. ೧೯೦೧ರಲ್ಲಿ ಕೊಲ್ಕತ್ತಾದ ಗೌಜು ಗದ್ದಲಗಳಿಂದ ದೂರ, ನದಿ ತೊರೆಗಳ ಜುಳುಜುಳು ಕೇಳಿಸುವ, ನಿಬಿಡ ಮರಗಿಡಗಳ ಹಸಿರು ತುಂಬಿರುವ ನೈಸರ್ಗಿಕ ಮಡಿಲಿನ ಹಳ್ಳಿಯಲ್ಲಿ ಶಾಂತಿನಿಕೇತನ ವಿದ್ಯಾಲಯ ಆರಂಭಿಸಿದರು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ರವೀಂದ್ರನಾಥ ಟ್ಯಾಗೋರರ ಕುರಿತ ಬರಹ

 

“ಹಸ್ತಪ್ರತಿಯನ್ನು ನನ್ನೊಡನೆ ಹಲವು ದಿನಗಳವರೆಗೆ ತೆಗೆದುಕೊಂಡು ಓಡಾಡಿದ್ದೆ, ರೈಲಿನಲ್ಲಿ, ಬಸ್ಸಿನ ಮೇಲುಪ್ಪರಿಗೆಯಲ್ಲಿ, ಹೊಟೇಲುಗಳಲ್ಲಿ. ಓದು ನನ್ನನ್ನು ಎಷ್ಟು ಕಾಡುತ್ತಿದೆ ಎನ್ನುವುದನ್ನು ಸುತ್ತಲಿನವರಿಂದ ಅಡಗಿಸಲು ಬಹಳ ಸಲ ಹಸ್ತಪ್ರತಿಯನ್ನು ಮುಚ್ಚಿಡಬೇಕಾಗುತ್ತಿತ್ತು. ಈ ಅನುವಾದ ಹಲವು ವರ್ಷಗಳಿಂದ ಹೆಪ್ಪುಗಟ್ಟಿದ್ದ ನನ್ನ ರಕ್ತವನ್ನು ಕದಡಿದೆ, ಈ ಕಾವ್ಯವನ್ನು ಸಾಧ್ಯವಾಗಿಸಿದ ಆತನ ಜೀವನ, ಆತನ ಯೋಚನೆಗಳ ಹರಿವುಗಳ ಬಗ್ಗೆ ಯಾರಾದರೂ ಒಬ್ಬ ಭಾರತೀಯ ಪ್ರವಾಸಿ ಹೇಳದ ಹೊರತು ನನಗೆ ತಿಳಿಯುವುದಿಲ್ಲ…”

ಇಪ್ಪತ್ತನೆಯ ಶತಮಾನದ ಪ್ರಸಿದ್ಧ ಕವಿ ಯೇಟ್ಸ್, ಬಂಗಾಳಿ ಗದ್ಯಕಾವ್ಯ ಸಂಕಲನದ ಆಂಗ್ಲ ಅನುವಾದಕ್ಕೆ ಬರೆದ ಪರಿಚಯ ಲೇಖನದಿಂದ ಆಯ್ದ ಕೆಲವು ಸಾಲುಗಳಿವು. ಯೇಟ್ಸ್ ಮುನ್ನುಡಿ ಇರುವ “ಗೀತಾಂಜಲಿ” ಯ 750 ಪ್ರತಿಗಳು 1912ರಲ್ಲಿ “ಇಂಡಿಯನ್ ಸೊಸೈಟಿ ಆಫ್ ಲಂಡನ್” ಇಂದ ಮುದ್ರಣಗೊಂಡವು. ಪ್ರತಿಗಳು ಖಾಲಿಯಾದ ನಂತರ 1912ರಲ್ಲಿ ಲಂಡನ್ ನ “ಮ್ಯಾಕ್ ಮಿಲನ್ ” ಸಂಸ್ಥೆ ಮರುಮುದ್ರಣದ ಜವಾಬ್ದಾರಿ ಹೊತ್ತಿತು, ಅದೇ ವರ್ಷ ದೊರೆತ ನೊಬೆಲ್ ಸಾಹಿತ್ಯ ಪ್ರಶಸ್ತಿ ಇಡೀ ಭಾರತಕ್ಕೆ ಬಂಗಾಳಿಯ ಕವಿ ಸಾಹಿತಿ ನಾಟಕಕಾರ ಚಿತ್ರಕಾರ ಚಿಂತಕನನ್ನು ಮರುಪರಿಚಯ ಮಾಡಿತು. ಏಷ್ಯಾ ಯುರೋಪ್ ಅಮೆರಿಕ ಅಷ್ಟೇ ಏಕೆ, ಇಡೀ ಜಗತ್ತಿನ ದೇಶ ಭಾಷೆಗಳ ಗಡಿಯನ್ನು ಮೀರಿದ “ಅಂತಾರಾಷ್ಟ್ರೀಯ ಸಾಹಿತ್ಯತಾರೆ” ಯ ಹುಟ್ಟನ್ನು ಗುರುತಿಸಿದವು. ಇಂಗ್ಲಿಷ್ “ಗೀತಾಂಜಲಿಯ” ಮೂಲಕ ನೊಬೆಲ್ ಪ್ರಶಸ್ತಿ ದೊರೆತ ಸುದ್ದಿ ಕವಿ ರವೀಂದ್ರನಾಥ ಟ್ಯಾಗೋರರನ್ನು ತಲುಪುವಾಗ, ಅವರು ಶಾಂತಿನಿಕೇತನ ಶಾಲೆಯ ನಿತ್ಯದ ವಿದ್ಯಮಾನಗಳಲ್ಲಿ ತಣ್ಣಗೆ ಮುಳುಗಿದ್ದರು.

ಕೋಲ್ಕತ್ತಾದ ಪ್ರಸಿದ್ಧ ಟ್ಯಾಗೋರ್ ಮನೆತನದಲ್ಲಿ, ತಂದೆ ತಾಯಿಯರ ಹದಿನಾಲ್ಕನೆಯ ಮಗುವಾಗಿ ಜನಿಸಿದ ರವೀಂದ್ರನಾಥ, 1878ರಲ್ಲಿ ಲಂಡನ್ ನ ಯುನಿವರ್ಸಿಟಿ ಕಾಲೇಜಿನಲ್ಲಿ ಓದಲು ಭರ್ತಿಯಾದವರು. ಅಣ್ಣ ಸತ್ಯೇಂದ್ರನಾಥ ಆಗಲೇ ಇಂಗ್ಲೆಂಡ್ ಗೆ ಬಂದು ನಾಗರಿಕ ಸೇವೆಯ ಕಠಿಣ ಪರೀಕ್ಷೆಯನ್ನು ಪಾಸು ಮಾಡಿ, ಮುಂಬೈಯಲ್ಲಿ ವೃತ್ತಿಯಲ್ಲಿದ್ದರು. “ಐ ಸಿ ಎಸ್” ಪಾಸು ಮಾಡಿ ನೌಕರಿ ಹಿಡಿದ ಮೊತ್ತ ಮೊದಲ ಭಾರತೀಯ ಎನ್ನುವ ದಾಖಲೆಯೂ ಅವರದು. ಹದಿನೇಳು ವರ್ಷದ ರವೀಂದ್ರನಾಥ, ಮತ್ತೆ ಮತ್ತೆ ಓದಿಸಿ ಬಾಯಿಪಾಠ ಮಾಡಿಸುವ ಇಂಗ್ಲೆಂಡ್ ನ ಶಿಕ್ಷಣದಿಂದ ಭ್ರಮನಿರಸನ ಹೊಂದಿ ಪದವಿ ಸರ್ಟಿಫಿಕೇಟ್ ದೊರೆಯುವ ಮೊದಲೇ ಓದು ನಿಲ್ಲಿಸಿ ಭಾರತಕ್ಕೆ ಮರಳಿದ್ದರು. ೧೯೦೧ರಲ್ಲಿ ಕೊಲ್ಕತ್ತಾದ ಗೌಜು ಗದ್ದಲಗಳಿಂದ ದೂರ, ನದಿ ತೊರೆಗಳ ಜುಳುಜುಳು ಕೇಳಿಸುವ, ನಿಬಿಡ ಮರಗಿಡಗಳ ಹಸಿರು ತುಂಬಿರುವ ನೈಸರ್ಗಿಕ ಮಡಿಲಿನ ಹಳ್ಳಿಯಲ್ಲಿ ಶಾಂತಿನಿಕೇತನ ವಿದ್ಯಾಲಯ ಆರಂಭಿಸಿದರು. ಶಾಂತಿನಿಕೇತನ ವಿದ್ಯಾಲಯದ ಮೊತ್ತ ಮೊದಲ ತರಗತಿಯಲ್ಲಿ ಇದ್ದ ಐದು ಮಕ್ಕಳಲ್ಲಿ, ಟ್ಯಾಗೋರರ ಹಿರಿಯ ಮಗನೂ ಒಬ್ಬ.

ಇಂಗ್ಲೆಂಡ್ ನ ಆ ಕಾಲದ ಶಿಕ್ಷಣ ವ್ಯವಸ್ಥೆ ಭಾರತಕ್ಕೆ ಅನೇಕ “ಐ ಸಿ ಎಸ್” ಅಧಿಕಾರಿಗಳನ್ನು, ವಕೀಲರನ್ನು, ಉದ್ಯಮಿಗಳನ್ನು ನೀಡಿತ್ತು. ಆದರೆ ತನ್ನ ಶಿಕ್ಷಣ ಪದ್ಧತಿಯ ಬಗ್ಗೆ ತಿರಸ್ಕಾರ ಮೂಡಿಸಿ ಕಲಿಸುವಿಕೆಯ ವಿಶಿಷ್ಟ ಕಲ್ಪನೆ, ಮುಕ್ತ ವಾತಾವರಣ, ಪ್ರಕೃತಿಯ ನೇರ ಸಹವಾಸಗಳ ಬುನಾದಿಯ ಮೇಲೆ ವಿನೂತನ ಶಾಲಾ ವ್ಯವಸ್ಥೆಯನ್ನು ಕಟ್ಟಿ ಬೆಳೆಸಲು ಪ್ರೇರಣೆಯಾದುದು ಅದೇ ಮೊದಲು ಇರಬೇಕು.

ಭಾರತದಲ್ಲಿ ಬ್ರಿಟಿಷರ ಕಾಲದ ಸಿರಿವಂತರು ಪ್ರಭಾವಿಗಳು ತಮ್ಮ ಮಕ್ಕಳನ್ನು ಇಂಗ್ಲೆಂಡ್‌ನಲ್ಲಿ ಓದಿಸಿ ಪದವಿ ಗಳಿಸಿ ವಾಪಸ್ ಮರಳಿ ಪ್ರತಿಷ್ಠಿತ ನೌಕರಿ ಪಡೆಯುವುದು ಸಾಮಾನ್ಯವಾಗಿದ್ದ ಕಾಲದಲ್ಲಿಯೇ ಆಂಗ್ಲ ಶಿಕ್ಷಣವನ್ನು ಪ್ರತಿರೋಧಿಸಿ ಮರಳಿಬಂದುದು ಟ್ಯಾಗೋರರ ವ್ಯಕ್ತಿತ್ವ ಮತ್ತು ಚಿಂತನೆಗಳಿಗೆ ಸಾಕ್ಷಿ.

ಶಿಕ್ಷಣ, ಪದವಿ, ಪರೀಕ್ಷೆಗಳು ಟ್ಯಾಗೋರರನ್ನು ಮತ್ತೆ ಇಂಗ್ಲೆಂಡ್ ಗೆ ಕರೆಯಲಿಲ್ಲವಾದರೂ ಕಾವ್ಯ ಮತ್ತು ಸಾಹಿತ್ಯ ಇಂಗ್ಲೆಂಡ್ ಗೆ ಮತ್ತೆ ಬರಮಾಡಿಕೊಂಡಿತು. ಬರೇ ಇಂಗ್ಲೆಂಡಿಗೆ ಯುರೋಪಿಗೆ ಎಂದರೇನು, ಇಡೀ ಜಗತ್ತಿಗೆ ಟ್ಯಾಗೋರರನ್ನು ಪರಿಚಯಿಸುವ ಸೇತುವೆಯೂ ಆಯಿತು. 1912 ರ ಬೇಸಿಗೆಯಲ್ಲಿ ಮತ್ತೆ ಲಂಡನ್ನಿಗೆ ಬಂದದ್ದು ಪ್ರಖ್ಯಾತ ಚಿತ್ರಕಲಾವಿದ ಬರಹಗಾರ ವಿಮರ್ಶಕ ಭಾಷಣಕಾರ ಸರ್ ವಿಲಿಯಂ ರೋಥೆಸ್ಟೆಯ್ನ್ ರನ್ನು ಭೇಟಿಯಾಗಲು. ರೋಥೆಸ್ಟೆಯ್ನ್ ತಮ್ಮ ಭಾರತೀಯ ಸ್ನೇಹಿತರ ಮೂಲಕ ರವೀಂದ್ರನಾಥರ ಬರಹಗಳ ಕೆಲವು ಅನುವಾದಗಳನ್ನು ಓದಿದಾಗ ಆ ಬಂಗಾಳಿ ಸಾಹಿತಿಯ ಬಗ್ಗೆ ಕುತೂಹಲ ಹುಟ್ಟಿತ್ತು. ನಂತರ ಟ್ಯಾಗೋರರ ಕೆಲವು ಕವನಗಳ ಆಂಗ್ಲ ತರ್ಜುಮೆಗಳೂ ನೋಡಲು ಸಿಕ್ಕಿದಾಗ ಮನಮೋಹಕ ಬರವಣಿಗೆಯ ವ್ಯಕ್ತಿಯನ್ನು ಇಂಗ್ಲೆಂಡ್ ಗೆ ಬರುವಂತೆ ಆಹ್ವಾನಿಸಿದ್ದರು. ಇಂಗ್ಲೆಂಡ್ ನ ಪ್ರಸಿದ್ಧ ಕಲಾವಿದ ಬರಹಗಾರನ ಅಮಂತ್ರಣವನ್ನು ಸ್ವೀಕರಿಸಿದ ಟ್ಯಾಗೋರರು, ತಮ್ಮ ಇಬ್ಬರು ಸ್ನೇಹಿತರು ಹಾಗು ಮಗನೊಡನೆ ಹಡಗು ಹತ್ತಿದರು. ಪ್ರಯಾಣದುದ್ದಕ್ಕೂ ಬೆಂಗಾಲಿಯ “ಗೀತಾಂಜಲಿ” ಯ ಒಂದೊಂದೇ ಕವಿತೆ ನೋಟ್ ಪುಸ್ತಕದ ಹಾಳೆಗಳಲ್ಲಿ ಇಂಗ್ಲಿಷ್ ಮರುಹುಟ್ಟು ಪಡೆಯುತ್ತಿತ್ತು. ಲಂಡನ್ ಗೆ ಬಂದ ಮೇಲೆ ಹಾಂಪ್ ಸ್ಟೆಡ್ ಪ್ರದೇಶದ “ವಿಲ್ಲಾಸ್ ಆನ್ ದಿ ಹೀತ್” ನ ಮೂರನೆಯ ನಂಬ್ರದ ಮನೆಯಲ್ಲಿ ನೆಲೆಸಿದರು. ಇಲ್ಲಿ ವಾಸ್ತವ್ಯವನ್ನು ಹುಡುಕಿ ಕೊಟ್ಟ ವಿಲಿಯಂ ರೋಥೆಸ್ಟೆಯ್ನ್ ಕೂಡ ಹತ್ತಿರದ “ಓಕ್ ಹಿಲ್ ಪಾರ್ಕ್” ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ರೋಥೆಸ್ಟೆಯ್ನ್ ರ ಆ ಮನೆ ಅಳಿದು ಹೋಗಿದೆ, ಟ್ಯಾಗೋರರು ಇದ್ದ ಮನೆಯ ಗೋಡೆಯ ಮೇಲೆ ನೀಲಿ ಫಲಕ ಹೊಳೆಯುತ್ತಿದೆ. “1861-1941ರ ನಡುವೆ ಬದುಕಿದ್ದ ರಬೀಂದ್ರನಾಥ ಟ್ಯಾಗೋರ್ ಎನ್ನುವ ಭಾರತೀಯ ಕವಿ, 1912ರಲ್ಲಿ ಇದೇ ಮನೆಯಲ್ಲಿದ್ದರು” ಎಂದು ಎದುರಿನ ಬೀದಿಯಲ್ಲಿ ಹೋಗಿ ಬರುವವರಿಗೆಲ್ಲ ಕರೆಕರೆದು ನೆನಪಿಸುತ್ತಿದೆ.

(ಸರ್ ವಿಲಿಯಂ ರೋಥೆಸ್ಟೆಯ್ನ್ ರಚಿಸಿದ ಟ್ಯಾಗೋರರ ಚಿತ್ರ)

ಹದಿನೆಂಟನೆಯ ಶತಮಾನದಲ್ಲಿ ಲಂಡನ್ನಿನ ಹಾಂಪ್ ಸ್ಟೆಡ್ ನಲ್ಲಿ ಔಷಧೀಯ ಗುಣ ಇರುವ ನೀರಿನ ಬುಗ್ಗೆ ಕಂಡುಬಂದ ಮೇಲೆ, ಅಲ್ಲಿಗೆ ಭೇಟಿ ಮಾಡುವವರ, ವಸತಿ ಹೂಡುವವರ ಸಂಖ್ಯೆ ಹೆಚ್ಚಾಯಿತು. ಭವ್ಯ ಬಂಗಲೆಗಳು ನಿರ್ಮಿಸಲ್ಪಟ್ಟವು. ಹೆಸರಾಂತ ಬರಹಗಾರರು, ಕಲಾವಿದರು ಅಲ್ಲಿ ನೆಲೆಸಿದರು. ಕವಿ ಕೀಟ್ಸ್ ನ ಮನೆಯೂ ಇದೇ ಪ್ರದೇಶದಲ್ಲಿತ್ತು. ಪ್ರಸಿದ್ಧ ಸಾಹಿತಿ ಕಲಾವಿದರು ಇಲ್ಲಿದ್ದಾರೆಂಬ ಹೆಮ್ಮೆಯ ಜೊತೆಗೆ ವಿಶಾಲ ಹಸಿರು ಬಯಲು, ಮರಗಿಡಗಳು, ಈಜುಕೊಳ, ಕಾಲುವೆಗಳು ಹಾಂಪ್ ಸ್ಟೆಡ್ ನ ಅಲಂಕಾರವನ್ನು ವೃದ್ಧಿಸಿದವು. 1912ರಲ್ಲಿ ಟ್ಯಾಗೋರರು ಲಂಡನ್ ಗೆ ಬಂದಿಳಿದು, ಟ್ಯೂಬ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಗೀತಾಂಜಲಿಯ ಅನುವಾದ ಪ್ರತಿ ಇದ್ದ ಚೀಲ ಕಳೆದುಹೋಗಿತ್ತು. ಹಲವು ತಾಸುಗಳ ಕಳವಳ ಆತಂಕಗಳ ಹುಡುಕಾಟದ ನಂತರ ಯಾತ್ರಿಗಳು ಬಿಟ್ಟು ಹೋದ ವಸ್ತುಗಳನ್ನು ರಕ್ಷಿಸಿ ಇಡುವ ರೈಲ್ವೆ ವಿಭಾಗವನ್ನು ಸಂಪರ್ಕಿಸಿದಾಗ, ಕಾಣೆಯಾಗಿದ್ದ ಚೀಲ “ಬೇಕರ್ ಸ್ಟ್ರೀಟ್” ನಿಲ್ದಾಣದ ಕಚೇರಿಯಲ್ಲಿ ಸುರಕ್ಷಿತವಾಗಿ ಇರುವುದು ತಿಳಿಯಿತು. “ರೈಲ್ವೆ ಅಕಸ್ಮಿಕ”ವೊಂದು ಸುಖಾಂತ್ಯದಲ್ಲಿ ಮುಗಿದುದು ಹೇಗೆ ತಾನು ಯುರೋಪಿಯನ್ ಸಾಹಿತ್ಯ ಲೋಕದಲ್ಲಿ ಜಾಗ ಪಡೆಯುವಂತಾಯಿತು ಎಂದು ಟ್ಯಾಗೋರರು ಮುಂದೆ ವಿನೋದ ಮಾಡಿದ್ದಿದೆ.

ಹಾಂಪ್ ಸ್ಟೆಡ್ ವಾಸ್ತವ್ಯದಲ್ಲಿಯೇ ಟ್ಯಾಗೋರರು ರೋಥೆಸ್ಟೆಯ್ನ್ ರಿಗೆ ತಾವೇ ಇಂಗ್ಲಿಷ್ ಗೆ ಅನುವಾದಿಸಿದ “ಗೀತಾಂಜಲಿ”ಯನ್ನು ತೋರಿಸಿದ್ದು. ಕವಿತೆಗಳನ್ನು ಓದಿದ ರೋಥೆಸ್ಟೆಯ್ನ್ “ಅತೀಂದ್ರಿಯ ಅನುಭವ ನೀಡುವ ಹೊಸ ಬಗೆಯ ಕವಿ” ಎಂದು ಟ್ಯಾಗೋರರನ್ನು ಬಣ್ಣಿಸಿದ್ದರು. ಓದಿನ ಅನುಭವವನ್ನು ತಮ್ಮ ಆಂಗ್ಲ ಕವಿ ಸ್ನೇಹಿತರೊಡನೆ ಹಂಚಿಕೊಂಡು “ಕೊನೆಗೂ ಮತ್ತೊಬ್ಬ ಮಹಾನ್ ಕವಿ ನಮ್ಮ ನೆರೆಯಲ್ಲೇ ಇರುವಂತಿದೆ” ಎಂದಿದ್ದರು. “ಗೀತಾಂಜಲಿ”ಯಿಂದ ತೀವ್ರವಾಗಿ ಪ್ರಭಾವಿತರಾದ ರೋಥೆಸ್ಟೆಯ್ನ್, ಪ್ರತಿಯನ್ನು ಪ್ರಸಿದ್ಧ ಕವಿ ಯೇಟ್ಸ್ ಗೆ ಕಳುಹಿಸಿದರು. ಯೇಟ್ಸ್ ರ ಅನುಭವವೂ ರೋಥೆಸ್ಟೆಯ್ನ್ ರ ಅನುಭವವನ್ನೇ  ಹೋಲುವಂತಿತ್ತು. ಉತ್ಸಾಹದಲ್ಲಿ ಯೇಟ್ಸ್ ಲಂಡನ್ ಗೆ ಬಂದು, ಕವಿತೆಗಳನ್ನು ಮತ್ತೆ ಗಮನವಿಟ್ಟು ಓದಿದರು, ಸಣ್ಣಪುಟ್ಟ ತಿದ್ದುಪಡಿಗಳನ್ನು ಸೂಚಿಸಿದರು.

(ಸರ್ ವಿಲಿಯಂ ರೋಥೆಸ್ಟೆಯ್ನ್ ಮತ್ತು ರವೀಂದ್ರನಾಥ ಟ್ಯಾಗೋರರು)

ರೋಥೆಸ್ಟೆಯ್ನ್ ತಮ್ಮ ಭಾರತೀಯ ಸ್ನೇಹಿತರ ಮೂಲಕ ರವೀಂದ್ರನಾಥರ ಬರಹಗಳ ಕೆಲವು ಅನುವಾದಗಳನ್ನು ಓದಿದಾಗ ಆ ಬಂಗಾಳಿ ಸಾಹಿತಿಯ ಬಗ್ಗೆ ಕುತೂಹಲ ಹುಟ್ಟಿತ್ತು. ನಂತರ ಟ್ಯಾಗೋರರ ಕೆಲವು ಕವನಗಳ ಆಂಗ್ಲ ತರ್ಜುಮೆಗಳೂ ನೋಡಲು ಸಿಕ್ಕಿದಾಗ ಮನಮೋಹಕ ಬರವಣಿಗೆಯ ವ್ಯಕ್ತಿಯನ್ನು ಇಂಗ್ಲೆಂಡ್ ಗೆ ಬರುವಂತೆ ಆಹ್ವಾನಿಸಿದ್ದರು.

ಇಂಗ್ಲೆಂಡ್ ನ ಸಾಹಿತ್ಯ ವಲಯದಲ್ಲಿ ಟ್ಯಾಗೋರರ ಕವಿತೆಗಳು ಸುದ್ದಿಯಾಗಿದ್ದವು. ಕೆಲವರು ಟ್ಯಾಗೋರರಿಗೆ ಆಕ್ಸ್ ಫರ್ಡ್ ಅಥವಾ ಕೇಂಬ್ರಿಜ್ ಗಳಿಂದ ಗೌರವ ಪದವಿ ಕೊಡುವ ಬಗ್ಗೆ ಲಾರ್ಡ್ ಕರ್ಜನ್‌ರನ್ನು ಕೇಳಿದ್ದರು. ಭಾರತದಲ್ಲಿ ವೈಸ್‌ರಾಯ್ ಆಗಿದ್ದು ಲಂಡನ್ ಗೆ ಮರಳಿದ್ದ ಕರ್ಜನ್ ಆಗಷ್ಟೇ ಐದನೆಯ ಜಾರ್ಜ್ ಆಡಳಿತದಲ್ಲಿ ಹೊಸ ಪದವಿ ಸ್ವೀಕರಿಸಿದ್ದರು. “ಭಾರತದಲ್ಲಿ ರವೀಂದ್ರರಿಗಿಂತ ಪ್ರಸಿದ್ಧ ಗಣ್ಯ ಲೇಖಕರಿದ್ದಾರೆ, ಅವರಿಗೆ ಕೊಡದ ಗೌರವ ಟ್ಯಾಗೋರರಿಗೆ ಬೇಡ” ಎಂದು ಕರ್ಜನ್ ಸಲಹೆಯನ್ನು ತಿರಸ್ಕರಿಸಿದ್ದರು. ಟ್ಯಾಗೋರರ ಕಾವ್ಯ ಸಾಹಿತ್ಯಗಳ ಪರಿಣಾಮ ಮತ್ತು ಸಾಮರ್ಥ್ಯಗಳನ್ನು ತಿಳಿದಿದ್ದ ರೋಥೆಸ್ಟೆಯ್ನ್ ಗೆ ಇದು ವಿಷಾದ ಮೂಡಿಸಿತ್ತು.”ವಿಶ್ವಮಟ್ಟದಲ್ಲಿ ಟ್ಯಾಗೋರರ ಕಾವ್ಯವನ್ನು ಮೊಟ್ಟಮೊದಲು ಗುರುತಿಸುವ ಅವಕಾಶವನ್ನು ಇಂಗ್ಲೆಂಡ್ ಕಳೆದುಕೊಂಡಿತು” ಎಂದು ಪಶ್ಚತ್ತಾಪ ಪಟ್ಟಿದ್ದರು.

ಲಂಡನ್ ನ ಭಾರತೀಯ ಸಮಾಜದ ಸದಸ್ಯರಿಗೆ ಓದಲು ಅನುಕೂಲವಾಗುವಂತೆ ಆಯ್ದ 103 ಕವಿತೆಗಳಿರುವ ಗೀತಾಂಜಲಿಯ ನಿಯಮಿತ ಪ್ರತಿಗಳನ್ನು ಮುದ್ರಿಸುವಂತೆ ಕೋರಿಕೊಂಡರು. “Song Offerings” ಎನ್ನುವ ಆಂಗ್ಲ ಹೆಸರಿನಲ್ಲಿ ಬಂಗಾಳಿ ಗೀತಾಂಜಲಿ ಮರುಹುಟ್ಟು ಹಸ್ತಪ್ರತಿಯಿಂದ ಮುದ್ರಿತ ಪುಸ್ತಕದ ರೂಪ ಪಡೆಯಿತು. ಕವಿ ಯೇಟ್ಸ್, ಮುನ್ನುಡಿ ಬರೆದುಕೊಡಲು ಖುಷಿಯಿಂದ ಒಪ್ಪಿದರು. 1913ರ ಬೇಸಿಗೆಯಲ್ಲಿ ಗೀತಾಂಜಲಿಯ ಮೂಲಕ ಟ್ಯಾಗೋರರಿಗೆ ನೊಬೆಲ್ ಬಂದದ್ದು ಬರೇ ಭಾರತೀಯ ಕಾವ್ಯಚರಿತ್ರೆಯಲ್ಲಿ ಮಾತ್ರವಲ್ಲದೆ ಜಗತ್ತಿನ ಕಾವ್ಯದ ಇತಿಹಾಸದಲ್ಲೂ ದಾಖಲಾದ ವಿಶೇಷ ಮೈಲಿಗಲ್ಲು. ಟ್ಯಾಗೋರರು ಜಾಗತಿಕ ವಿದ್ಯಮಾನ ಆದರು. 18 ನವೆಂಬರ್ 1913, ಎಂದು ಮೇಲ್ತುದಿಯಲ್ಲಿ ನಮೂದಾಗಿರುವ ಟ್ಯಾಗೋರರ ಪತ್ರ ಶಾಂತಿನಿಕೇತನದಿಂದ ಹೊರಟು ಲಂಡನ್ನಿನಲ್ಲಿರುವ ಸ್ನೇಹಿತ ರೋಥೆಸ್ಟೆಯ್ನ್ ರನ್ನು ತಲುಪಿತು.

“ನೊಬೆಲ್ ಪ್ರಶಸ್ತಿ ಪಡೆದ ಸಂತಸದ ಸುದ್ದಿ ತಲುಪಿದಾಗ ನನ್ನ ಹೃದಯ ನಿಮ್ಮನ್ನು ಪ್ರೀತಿ ಮತ್ತು ಕೃತಜ್ಞತೆಗಳಿಂದ ನೆನೆಯಿತು. ನನ್ನೆಲ್ಲ ಸ್ನೇಹಿತರಲ್ಲಿ ನಿಮ್ಮಷ್ಟು ಯಾರೂ ಖುಷಿ ಪಟ್ಟಿರಲಿಕ್ಕಿಲ್ಲ ಎನ್ನುವುದು ಖಂಡಿತವಾಗಿ ಗೊತ್ತು. ಗೌರವಕ್ಕೆ ಗೌರವಕಿರೀಟ ಸಿಗುವುದು ನಮಗೆ ಅತಿಆಪ್ತರು ಎನಿಸಿದವರು ಈ ಬಗ್ಗೆ ತುಂಬಾ ಖುಷಿಯಾಗುತ್ತಾರೆ ಎಂದು ತಿಳಿದಾಗ. ಈ ನಡುವೆ ಜನರಲ್ಲಿ ಹುಟ್ಟಿರುವ ಉತ್ಸಾಹದ ಸುಂಟರಗಾಳಿಗೆ ನಾನು ಬೆಚ್ಚುತ್ತಿದ್ದೇನೆ. ಬಾಲಕ್ಕೆ ತಗಡಿನ ಡಬ್ಬಿ ಕಟ್ಟಿ, ಶಬ್ದವಿಲ್ಲದೆ ಸಣ್ಣ ಚಲನೆಯನ್ನೂ ಮಾಡಲಾಗದ ನಾಯಿಯ ಸ್ಥಿತಿಯಂತೆ ಆಗಿದೆ, ಎಲ್ಲಿ ಹೋದರೂ ಜನಜಂಗುಳಿ ಸದ್ದು ಸುತ್ತುವರಿಯುತ್ತದೆ. ರಾಶಿ ರಾಶಿ ಟೆಲಿಗ್ರಾಂಗಳು ಪತ್ರಗಳು ಉಸಿರು ಕಟ್ಟಿಸುತ್ತಿವೆ, ಅವುಗಳನ್ನು ಕಳುಹಿಸಿದ ಹೆಚ್ಚಿನವರು ನನ್ನ ಬಗ್ಗೆ ಇಲ್ಲಿಯ ತನಕ ಯಾವ ಸ್ನೇಹ ಭಾವವೂ ಇಲ್ಲದವರು, ನನ್ನ ಒಂದು ಸಾಲನ್ನೂ ಓದದವರು. ಈ ಎಲ್ಲ ಕೂಗುಗಳಿಂದ ಎಷ್ಟು ಬಳಲಿದ್ದೇನೆ ಎಂದು ನಿಮಗೆ ವಿವರಿಸಲಾರೆ. ಕೃತಕ ಅಭಿವ್ಯಕ್ತಿಯ ಮಹಾಪೂರಕ್ಕೆ ಅಂಜುತ್ತಿದ್ದೇನೆ. ನಿಜವಾಗಿಯೂ ಈ ಎಲ್ಲ ಜನರೂ ನನ್ನ ಗೌರವವನ್ನು ಗೌರವಿಸುತ್ತಿದ್ದಾರೆ, ನನ್ನನ್ನಲ್ಲ….” ಪತ್ರದಲ್ಲಿ ಮಾತ್ರವಲ್ಲದೇ ಸಾರ್ವಜನಿಕವಾಗಿಯೂ ತನ್ನ ಸುತ್ತಲಿನ ಟೊಳ್ಳು ಹೊಗಳಿಕೆಗಳನ್ನು ಟ್ಯಾಗೋರರು ಟೀಕಿಸುತ್ತಿದ್ದರು.

ಯೂರೋಪಿನ ಹೊರಗಿನ ಸಾಹಿತಿಗೆ ಮೊದಲು ನೊಬೆಲ್ ಸಾಹಿತ್ಯ ಪ್ರಶಸ್ತಿ ಬಂದುದು ಟ್ಯಾಗೋರರ ಮೂಲಕವೇ. ನೊಬೆಲ್ ದೊರಕಿದ ನಂತರ “ಮ್ಯಾಕ್ ಮಿಲನ್ ” ಪ್ರಕಾಶನ ಸಂಸ್ಥೆ ಟ್ಯಾಗೋರರ ಹಲವು ಕವಿತೆ, ಕತೆಗಳ ಇಂಗ್ಲಿಷ್ ಅನುವಾದಗಳನ್ನು ಪ್ರಕಟಿಸಿತು. ಟ್ಯಾಗೋರರ ಅನುವಾದಿತ ನಾಟಕಗಳು ಬ್ರಿಟಿಷ್ ಕಲಾವಿದರಿಂದ ಅಭಿನಯಿಸಲ್ಪಟ್ಟವು. ಪುಸ್ತಕಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಓದುಗರನ್ನು ಸೆಳೆದವು. ಅಮೆರಿಕ, ಜಪಾನ್, ಇರಾಕ್ ಇನ್ನಿತರ ದೇಶಗಳ ತಿರುಗಾಟಕ್ಕೆ ಕರೆ ಬಂದಿತು. ತಾವು ಸಂಚರಿಸಿದಲ್ಲಿ “ಯುದ್ಧ ಮತ್ತು ಅತಿರೇಕದ ರಾಷ್ಟ್ರೀಯತೆ”ಯ ವಿರುದ್ಧ ಟ್ಯಾಗೋರರು ಮಾತನಾಡುತ್ತಿದ್ದರು. ಬಹುಸಂಸ್ಕೃತಿಯ ವಕ್ತಾರರಾಗಿ “ಸಮಗ್ರ ಏಷ್ಯಾ” ನೋಟವನ್ನು ಅಳವಡಿಸಿಕೊಳ್ಳಲು ಹೇಳುತ್ತಿದ್ದರು. ಭಾರತದ ಆಧ್ಯಾತ್ಮಿಕ ಪರಂಪರೆ, ಶಿಕ್ಷಣದಲ್ಲಿ ಲಲಿತ ಕಲೆ, ತತ್ವಶಾಸ್ತ್ರ, ತನ್ನ ಕವಿ ಧರ್ಮದ ಬಗ್ಗೆ ಮಾತನಾಡುತ್ತಿದ್ದರು. ಪ್ರಸಿ‍ದ್ಧಿಯಿಂದ ತಿರುಗಾಟ ಹೆಚ್ಚಿತು. ತಿರುಗಾಟ ಹಾಗು ಪ್ರಸಿದ್ಧಿ ಎರಡರಿಂದ ಸಂಪತ್ತು ಹೆಚ್ಚಿತು. ನೊಬೆಲ್ ಪ್ರಶಸ್ತಿಯಿಂದ ದೊರೆತ ಹಣ, ನಂತರ ಗಳಿಸಿದ ಸಂಪತ್ತು ಎಲ್ಲವನ್ನು ಶಾಂತಿನಿಕೇತನ ಶಾಲೆ ಹಾಗು ವಿಶ್ವಭಾರತಿ ವಿದ್ಯಾಲಯಗಳಲ್ಲಿ ತೊಡಗಿಸಿದರು. ಈ ವಿದ್ಯಾಲಯಗಳು ಜಗತ್ತಿನ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ನೊಬೆಲ್ ದೊರೆತ ಎರಡು ವರ್ಷಗಳ ನಂತರ, 1915ರಲ್ಲಿ ಇಂಗ್ಲೆಂಡ್ ನ ರಾಜನಾಗಿದ್ದ ಐದನೆಯ ಜಾರ್ಜ್, ಪ್ರತಿಷ್ಠಿತ “ನೈಟ್ ಹುಡ್” ಪದವಿಯನ್ನು ನೀಡಿದ. ರವೀಂದ್ರನಾಥ ಟ್ಯಾಗೋರರ ಹೆಸರಿನ ಹಿಂದೆ “ಸರ್” ಸೇರಿಸಲ್ಪಟ್ಟಿತು. ಆದರೆ 1919ರಲ್ಲಿ ನಡೆದ ಜಲಿಯಾನ್ ವಾಲಾ ಭಾಗ್ ಹತ್ಯಾಕಾಂಡವನ್ನು ವಿರೋಧಿಸಿ ಟ್ಯಾಗೋರರು ಪದವಿಯನ್ನು ವಾಪಸು ಕೊಟ್ಟರು. ಕಾವ್ಯದ ಹಸ್ತಪ್ರತಿಯಿಂದ ಹಿಡಿದು ಪ್ರಶಸ್ತಿಗಳ ತನಕ, ಪಡೆದದ್ದು ಇಲ್ಲವಾಗುವುದು ಕಳೆದುಹೋಗುವುದು ಟ್ಯಾಗೋರರ ಜೀವನಚರಿತ್ರೆಯಲ್ಲಿ ಮತ್ತೆ ಮತ್ತೆ ಬಂದು ಹೋಗುವ ಕುತೂಹಲಕರ ಅಧ್ಯಾಯ ಇರಬೇಕು.

೧೯೧೩ರಲ್ಲಿ ದೊರೆತ ನೊಬೆಲ್ ಪದಕ 2004ರಲ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನದ ಸಂಗ್ರಹಾಲಯದಿಂದ ಕಳವಾಯಿತು. ಹಲವು ವರ್ಷಗಳ ತನಿಖೆಯಿಂದಲೂ ಮರಳಿ ಸಿಗದಿದ್ದಾಗ, ಸ್ವೀಡನ್ನಿನ ನೊಬೆಲ್ ಅಕಾಡಮಿ 2016ರಲ್ಲಿ ಪದಕಗಳ ಎರಡು ನಕಲುಗಳನ್ನು ಶಾಂತಿನಿಕೇತನ ಸಂಸ್ಥೆಗೆ ಕೊಟ್ಟಿತು.

ಇಷ್ಟೆಲ್ಲಾ ನಡೆಯುವಾಗ ಬಂಗಾಳದಲ್ಲಿ, ಉದ್ದ ನಿಲುವಂಗಿ ತೊಟ್ಟ ಮಿರಮಿರ ಹೊಳೆಯುವ ಉದ್ದ ಗಡ್ಡದ ದಾರ್ಶನಿಕ ಟ್ಯಾಗೋರರೂ, ಇಂಗ್ಲೆಂಡ್‌ನಲ್ಲಿ ಅವರ ಆಪ್ತ ಸ್ನೇಹಿತ ಸರ್ ವಿಲಿಯಂ ರೋಥೆಸ್ಟೆಯ್ನ್ ರು, ಇಬ್ಬರೂ ಇದ್ದಿದ್ದರೆ, ಶಾಂತಿನಿಕೇತನದಿಂದ ಈಗಷ್ಟೇ ಬರೆದ ಪತ್ರವೊಂದು ಲಂಡನ್ನಿನ ರೋಥೆಸ್ಟೆಯ್ನ್ ರ ವಸತಿಯ ವಿಳಾಸ ಹೊತ್ತು ಹೊರಟಿರುತ್ತಿತ್ತು.