ಆ ಪಂದ್ಯದಲ್ಲಿ ವಿವಿಎಸ್ 167 ರನ್ ಹೊಡೆದರು… ಚಚ್ಚಿದರು ಅನ್ನುವ ಪದ ಇನ್ನೂ ಸರಿಹೋಗಬಹುದು. ಮಿಕ್ಕವರ ಸ್ಕೋರ್? ಗಂಗೂಲಿ 25, ಬೋಲರ್‌ಗಳಾದ ಕುಂಬ್ಳೆ, ಶ್ರಿನಾಥ್ ತಲಾ 15! ಮಿಕ್ಕವರೆಲ್ಲರೂ ಒಂದು ಅಂಕಕ್ಕೆ ಔಟಾದರು! ಎಕ್ಸ್ಟ್ರಾಸ್ 21! ವಿಶೇಷವೆಂದರೆ ಆಸ್ಟ್ರೇಲಿಯಾದ ಹೆಸರಾಂತ ಬೋಲರ್‌ಗಳಾದ ಶೇನ್ ವಾರ್ನ್‌ 13 ಓವರ್‌ಗಳಿಗೆ 60 ರನ್ ಮತ್ತು ಫಾಸ್ಟ್ ಬೋಲರ್ ಬ್ರೆಟ್ ಲೀ 11 ಓವರ್‌ಗೆ 67 ರನ್‌ ಕೊಟ್ಟಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಕುರಿತ ಬರಹ ನಿಮ್ಮ ಓದಿಗೆ

ಜನವರಿ 1999 ರಲ್ಲಿ ಭಾರತ – ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಕಳಪೆ ಮಟ್ಟದ ಆಟವಾಡಿದ ಭಾರತ ಸೋಲಿನ ಕಡೆ ಧಾವಿಸುತ್ತಿತ್ತು. ಫಾಸ್ಟ್ ಬೋಲರ್ ಮೆಗ್ರಾತ್ನ ಬೋಲಿಂಗನ್ನು ಎದುರಿಸುವುದಕ್ಕೆ ಆಗದೆ ಭಾರತದ ಎರಡನೇ ಇನ್ನಿಂಗ್ಸಿನಲ್ಲೂ ತತ್ತರಿಸುತಿತ್ತು.

ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 150ಕ್ಕೆ ಕುಸಿದು, ಎದುರಾಳಿಯ ಕಡೆ ಇಬ್ಬರು ಶತಕಗಳನ್ನು ಬಾರಿಸಿ, ಅದರಲ್ಲೂ ಜಸ್ಟಿನ್ ಲಾಂಗರ್ 223, ಪಾಂಟಿಂಗ್ 141 ಹೊಡೆದು ಅದರ ಬಲದಿಂದ ಆಸ್ಟ್ರೇಲಿಯ 550 ರನ್ 5 ವಿಕೆಟ್ ನಷ್ಟಕ್ಕೆ ಹೊಡೆದಮೇಲೆ, ಭಾರತದ ಎರಡನೇ ಇನ್ನಿಂಗ್ಸ್ ಪ್ರಾರಂಭವಾಯಿತು. ಈ ಟೆಸ್ಟ್‌ನಲ್ಲಿ ಟೀಮುಗಳ ಆಟದ ಅಂತರ ಚೆನ್ನಾಗಿ ಸ್ಪಷ್ಟವಾಗುತ್ತಿತ್ತು. ಆಸ್ಟ್ರೇಲಿಯಾ ಇಂಡಿಯಾವನ್ನು ತನ್ನ ಕಪಿಮುಷ್ಟಿಯಲ್ಲಿ ಭದ್ರವಾಗಿ ಕಚ್ಚಿಕೊಂಡಿತ್ತು. ನುಸುಳಿಕೊಳ್ಳಲು ಅವಕಾಶವೇ ಇರಲಿಲ್ಲ.

ಸೋತರೂ ಹೇಗೆ ಸೋಲಬೇಕು ಅಂತ ಆಗಾಗ್ಗೆ ಚರ್ಚೆಗಳು ನಡೆಯುತ್ತೆ. ಸೋಲುವುದಕ್ಕೆ ನಿಯಮಗಳೇನೂ ಯಾರೂ ಈವರೆಗೆ ಬರೆದಿಲ್ಲ.. ಯುದ್ಧದಲ್ಲೂ ಕೊನೆಯ ಉಸುರಿರುವವರೆಗೂ ಹೊಡೆದಾಡಿ ವೀರ ಸ್ವರ್ಗ ಪಡೆದರು ಎಂದು ಹೇಳುತ್ತೇವೆ. ಸೋಲು ಸೋಲೆ, ಅನ್ನುವರಿಗೆ ಎಷ್ಟೋ ಸರ್ತಿ ಗೆದ್ದವನೇ ಸೋತು ಸತ್ತವನಿಗೆ ಕಂಬನಿ ಸುರಿಸುದ್ದುಂಟು; ಸೋತು ಸುಣ್ಣವಾದವನಿಗೆ ಶಭಾಷ್ಗಿರಿ ಕೊಟ್ಟಿದ್ದುಂಟು.

ಅಂತಹ ಮ್ಯಾಚ್ ಬಹಳ ವರ್ಷಗಳಾದಮೇಲೆ ನೋಡಲಿಕ್ಕೆ ಸಿಕ್ತು ಎಂದು ಗೆದ್ದ ಕಡೆಯವರು ವಿಶಾಲ ಮನಸ್ಸಿನಿಂದ ಹಾಡಿ ಹೊಗಳಿದರು ಈ ಟೆಸ್ಟ್ ಮುಗಿದಮೇಲೆ.

ಒಂದು ಕಾಲದಲ್ಲಿ ಭಾರತದ ಇನ್ನಿಂಗ್ಸನ್ನು ಯಾವಾಗಲೂ ಸುನಿಲ್ ಗವಾಸ್ಕರ್ ಓಪನರ್ ಆಗಿ ಶುರು ಮಾಡುತ್ತಿದ್ದರು. ಅನೇಕ ಘಟಾನುಘಟಿಗಳ ಫಾಸ್ಟ್ ಬೋಲರ್‌ಗಳನ್ನು ಎದುರಿಸಿದವರು. ಅವರು ರಿಟೈರ್ ಆದ ಮೇಲೆ ಬಹಳ ಕಾಲ ಭಾರತಕ್ಕೆ ಒಂದು ನಿರ್ದಿಷ್ಟ ಓಪನಿಂಗ್ ಆಟಗಾರರಿರಲಿಲ್ಲ. ಈ ಮ್ಯಾಚಿನಲ್ಲಿ ಅಂತಹ ಪರಿಸ್ಥಿತಿ ಇತ್ತು. ವಿವಿಎಸ್ ಲಕ್ಷ್ಮಣಗೆ ಓಪನರ್‌ ಆಗಿ ಆಡಲು ಹೇಳಿದ್ದರು. ಅವರಿಗೆ ಅದು ಅಷ್ಟು ಇಷ್ಟವಿರಲಿಲ್ಲ. ಬಲವಂತ ಮಾಘ ಸ್ನಾನ ಎಂದು ವಿವಿಎಸ್‌ಗೂ ಅದು ಗೊತ್ತಿತ್ತು.

ವಿವಿಎಸ್ ಲಕ್ಷ್ಮಣ್ ಒಳ್ಳೆಯ ಸ್ಟ್ರೋಕ್ ಪ್ಲೇಯರ್. ಅಂದರೆ ರನ್‌ಗಳು ಹೊಡೆಯುವ ಅವಕಾಶಕ್ಕಾಗಿ ಎದುರು ನೋಡುವ ಆಟಗಾರ. ಓಪನಿಂಗ್ ಬ್ಯಾಟರ್ ಅಂದರೆ ತನ್ನ ತಂಡಕ್ಕೆ ಹೊಸ ಬಾಲಿನ ವೇಗ, ಸ್ವಿಂಗ್ ಅನ್ನು ಗುರ್ತಿಸಿ ಧೈರ್ಯವಾಗಿ ಆಡಿ ಮುಂಬರುವ ತನ್ನ ಸಹೋದ್ಯೋಗಿಗಳಿಗೆ ಆಡಲು ಒಳ್ಳೆ ಅಡಿಪಾಯ ಹಾಕಿಕೊಡುವವರು. ರನ್ ನಿಧಾನವಾಗಿ ಬರುತ್ತೆ; ಈ ಎರಡಲ್ಲಿರುವ ವಿವಿಧತೆಯನ್ನು ಆವತ್ತು ಲಕ್ಷ್ಮಣ್ ತೊಡೆದು ಹಾಕಿದರು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ, ಇನ್ನೊಂದು ಕಡೆ ವಿವಿಎಸ್ ಬಾಲನ್ನು ಬೌಂಡರಿಗೆ ಕಳುಹಿಸುತ್ತಿದ್ದರು. ಅದೂ ಅವರ ಫಾಸ್ಟ್ ಬೋಲರ್ ಮೆಗ್ರಾತ್ನ ಬೋಲಿಂಗನ್ನು. ನೋಡುತ್ತಿರುವರಿಗೆ ಒಂದು ಸೋಜಿಗ; ಜಿಜ್ಞಾಸೆ. ಇಲ್ಲಿ ಎರಡು ಮ್ಯಾಚ್ ನಡೆಯುತ್ತಿದೆಯಾ ಹೇಗೆ ಎಂದು? ಭಾರತದ ಸೋಲು ನಿಶ್ಚಯವಾಗಿತ್ತು. ಆಸ್ಟ್ರೇಲಿಯ ಬಹಳ ದೊಡ್ಡ ಸ್ಕೋರನ್ನು ಕಲೆಹಾಕಿ ಭಾರತವನ್ನು ಪೂರ್ತಿ ಸುತ್ತುವರಿದಿತ್ತು. ಇದಕ್ಕೆ ತಕ್ಕ ಉದಾಹರಣೆ ಅಭಿಮನ್ಯುವಿನ ಕಥೆ. ತನ್ನ ಸುತ್ತಲೂ ರಾಜ ಮಹಾರಾಜರು, ಸೇನಾಧಿಪತಿಗಳು ಸುತ್ತುವರಿದಾಗಲೂ ಎಲ್ಲರನ್ನು ಕೊಚ್ಚುತ್ತಾ ಸಾಗಿದ ವೀರ. ತಾನು ಸೋಲಬಹುದು ಎಂಬ ಪರಿವೆಯೂ ಇಲ್ಲದೆ ಹೋರಾಡುವವನು ನಿಜವಾದ ವೀರ. ಅಂದು ವಿವಿಎಸ್‌ರ ಆಟ ಆ ಉನ್ನತ ಶ್ರೇಣಿಯನ್ನು ತಲುಪಿತ್ತು.

ಆ ಪಂದ್ಯದಲ್ಲಿ ವಿವಿಎಸ್ 167 ರನ್ ಹೊಡೆದರು… ಚಚ್ಚಿದರು ಅನ್ನುವ ಪದ ಇನ್ನೂ ಸರಿಹೋಗಬಹುದು. ಮಿಕ್ಕವರ ಸ್ಕೋರ್? ಗಂಗೂಲಿ 25, ಬೋಲರ್‌ಗಳಾದ ಕುಂಬ್ಳೆ, ಶ್ರಿನಾಥ್ ತಲಾ 15! ಮಿಕ್ಕವರೆಲ್ಲರೂ ಒಂದು ಅಂಕಕ್ಕೆ ಔಟಾದರು! ಎಕ್ಸ್ಟ್ರಾಸ್ 21! ಟೆಂಡೂಲ್ಕರ್, ದ್ರಾವಿಡ್ 10 ಕೂಡಾ ದಾಟಲಿಲ್ಲ. ತಂಡದ ಸ್ಕೋರ್ 261ರಲ್ಲಿ ವಿವಿಎಸ್ 167. 198 ಬಾಲ್‌ಗಳಲ್ಲಿ 167! ಅದರಲ್ಲಿ 108 ಬೌಂಡರಿಗಳಲ್ಲಿ ಬಂದ ರನ್‌ಗಳು. ವಿಶೇಷವೆಂದರೆ ಆಸ್ಟ್ರೇಲಿಯಾದ ಹೆಸರಾಂತ ಬೋಲರ್‌ಗಳಾದ ಶೇನ್ ವಾರ್ನ್‌ 13 ಓವರ್‌ಗಳಿಗೆ 60 ರನ್ ಮತ್ತು ಫಾಸ್ಟ್ ಬೋಲರ್ ಬ್ರೆಟ್ ಲೀ 11 ಓವರ್‌ಗೆ 67 ರನ್‌ ಕೊಟ್ಟಿದ್ದರು. ವಿವಿಎಸ್‌ರ ಧಾಳಿ ಅಷ್ಟು ಜೋರಾಗಿತ್ತು. ಐದು ವಿಕೆಟ್ ತೆಗೆದು ಮ್ಯಾಚ್ ಗೆಲ್ಲಲು ಬಹುಮಟ್ಟಿಗೆ ಕಾರಣರಾದ ಮೆಗ್ರಾತ್ ಕೂಡ 17 ಓವರ್‌ಗೆ 55 ರನ್ ಕೊಟ್ಟಿದ್ದರು. 167 ರನ್ ಹೊಡೆದು ಧೂಳೀಪಟ ಮಾಡಿ ಔಟಾದರು. ಲೆಕ್ಕ ಹಾಕಿದಂತೆ ಭಾರತ ಸೋತಿತು, ಆದರೆ ಈ ಸೋಲಿನ ಮಧ್ಯೆ ಭಾರತಕ್ಕೆ ಒಂದು ಅಪೂರ್ವ ರತ್ನ ಅಂದು ದೊರೆತಂತಾಯಿತು.

ಆಸ್ಟ್ರೇಲಿಯ ವಿರುದ್ಧವೇ ಯಾವಾಗಲೂ ತನ್ನ ಅತ್ಯುತ್ತಮ ಬ್ಯಾಟಿಂಗ್ ನೀಡುವುದರಿಂದ ವಿವಿಎಸ್ ಅವರನ್ನು ನೋಡಿದರೇನೇ ಬೆಚ್ಚಿ ಬೀಳುತ್ತಿದ್ದರಾ ಆ ತಂಡ ಅಂತ ಯಾರಾದರೂ ಅಂದುಕೊಂಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ! 1999 ಆದ ಮೇಲೆ ಭಾರತಕ್ಕೆ ಬಂದ ಆಸ್ಟ್ರೇಲಿಯ ಭಾರತವನ್ನು ಸ್ವದೇಶದಲ್ಲೆ ಮಟ್ಟ ಹಾಕುವ ಎಂಬ ಉದ್ದೇಶದಿಂದ 3 ಟೆಸ್ಟ್ ಆಡಲು ಬಂದಿತ್ತು. ಮೊದಲನೇ ಟೆಸ್ಟ್ ಸೋತ ಭಾರತ ಅವರ ಉದ್ದೇಶಕ್ಕೆ ಅಸ್ತು ಎಂದರು. ಎರಡನೇ ಟೆಸ್ಟಿನಲ್ಲಿ ಭಾರತದ ಕಳಪೆ ಪ್ರದರ್ಶನ ಮುಂದುವರಿಯಿತು. ಫಾಲೊ-ಆನ್ ಕೊಟ್ಟ ಆಸ್ಟ್ರೇಲಿಯ ತಾವು ಅಂದುಕೊಂಡಿದ್ದನ್ನು ಸಾಧಿಸಲು ಕೆಲವೇ ಘಂಟೆಗಳಿವೆ ಅಂದುಕೊಂಡಿರೋದಕ್ಕೂ ಸಾಧ್ಯ! 445 ರನ್‌ ಹೊಡೆದ ಆಸ್ಟ್ರೇಲಿಯ ವಿರುದ್ಧ ಭಾರತ ಮೊದಲನೇ ಇನಿಂಗ್ನಲ್ಲಿ 171ಕ್ಕೆ ಎಲ್ಲರೂ ಔಟಾದರೆ, ಎರಡನೆಯ ಇನಿಂಗ್ಸ್ನಲ್ಲಿ 97/2 ಆಗಿ ಅಲ್ಲಿಂದ ಸ್ಕೋರ್ 232/4 ಆಯಿತು. ಇನ್ನೇನು ಒಂದೆರೆಡು ವಿಕೆಟ್ ಬಿದ್ದರೆ ಆಟ ಮುಗಿಯಿತು ಅಂದುಕೊಳ್ಳುವ ವೇಳೆ. ಆದರೆ ಆದದ್ದೇ ಬೇರೆ. ನಾಲ್ಕನೇ ದಿನ ಲಕ್ಷ್ಮಣ್ ಮತ್ತು ದ್ರಾವಿಡ್ ಪೂರ್ತಿ ದಿನ ಬ್ಯಾಟ್ ಮಾಡಿ ಟೆಸ್ಟ್ ಕ್ರಿಕೆಟ್‌ಗೆ ಹೊಸ ದಾಖಲೆ ನಿರ್ಮಿಸಿದರು. ಕೊನೆಗೆ 5ನೇ ದಿವಸ 5ನೇ ವಿಕೆಟ್ ಬಿತ್ತು. ವಿವಿಎಸ್ 281 ರನ್ ಹೊಡೆದರೆ ದ್ರಾವಿಡ್ 180 ರನ್ ಹೊಡೆದರು! ಇದರಿಂದ ಆಸ್ಟ್ರೇಲಿಯಾದ ಜಂಘಾಬಲವೇ ಮುರಿದುಹೋಯಿತು. ಗೆಲ್ಲುವುದಕ್ಕೆ 384 ರನ್ ಬೇಕಾಗಿದ್ದ ಆಸ್ಟ್ರೇಲಿಯ ಕೇವಲ 212 ರನ್‌ಗೆ ಔಟಾದರು! ವಿವಿಎಸ್ ಮತ್ತು ದ್ರಾವಿಡ್‌ರ ಆಟ, ಸಂಕಟದ ಮಧ್ಯೆಯೂ ಎಷ್ಟು ಆಕರ್ಷಿಕವಾಗಿತ್ತೆಂದರೆ ಅವರ ನಾಲ್ಕು ಬೋಲರ್‌ಗಳ ಬೋಲಿಂಗಿಗೂ ತಲಾ 100 ರನ್ ಮೇಲೆ ಹೊಡೆದಿದ್ದರು! ಕ್ರಿಕೆಟ್ ಆಟದಲ್ಲೇ ಇದೊಂದು ಮಹತ್ವಪೂರ್ಣ ಟೆಸ್ಟ್ ಎಂದು ಐಸಿಸಿ, ತಜ್ಞರು ಮತ್ತು ವಿಮರ್ಶಕರು ಶ್ಲಾಘಿಸಿದರು.

ವಾಂಗಿಪುರಪು ವೆಂಕಟ ಸಾಯಿ ಲಕ್ಷ್ಮಣ್ ಉರುಫ್ ವಿವಿಎಸ್ ಲಕ್ಷ್ಮಣ್ ಭಾರತವನ್ನು 134 ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿ, 45.97ಸರಾಸರಿಯಲ್ಲಿ 8781 ರನ್ ಹೊಡೆದು ಒಬ್ಬ ಅತ್ಯಂತ ಶ್ರೇಷ್ಟ ಹಾಗೂ ಆಕರ್ಷಕ ಆಟಗಾರನೆಂದು ಮನ್ನಣೆ ಪಡೆದರು. 281 ಅವರ ಅತ್ಯಧಿಕ ಸ್ಕೋರಾಗಿತ್ತು. ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ ಅವರು 267 ಮ್ಯಾಚುಗಳನ್ನಾಡಿ 51.64 ಸರಾಸರಿಯಲ್ಲಿ 19730ರನ್ ಹೊಡೆದರು. ಅವರ ಅತ್ಯಧಿಕ ಸ್ಕೋರ್ 353 ಆಗಿತ್ತು. ಟೆಸ್ಟ್‌ನಲ್ಲಿ 17 ಶತಕಗಳು 56 ಅರ್ಧಶತಕಗಳು ಬಾರಿಸಿದರೆ, ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ ಅವರು 55 ಶತಕ ಮತ್ತು 98 ಅರ್ಧಶತಕಗಳನ್ನು ಬಾರಿಸಿದರು. ಸ್ಲಿಪ್ ಜಾಗದಲ್ಲಿ 135 ಕ್ಯಾಚ್‌ಗಳನ್ನು ಹಿಡೆದು ಒಳ್ಳೆಯ ಫೀಲ್ಡರ್ ಸಹ ಆಗಿದ್ದರು.

1996 ನವೆಂಬರ್‌ನಲ್ಲಿ ಟೆಸ್ಟ್ ಆಡಲು ಶುರುಮಾಡಿದ ಲಕ್ಷ್ಮಣ್‌ 2012 ಜನವರಿಯಲ್ಲಿ ಕೊನೆಯ ಟೆಸ್ಟ್ ಆಡಿ 16 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿದರು. 2002ರಲ್ಲಿ ಅವರನ್ನು ವಿಸ್ಡನ್ ಆ ವರ್ಷದ ಐದು ಶ್ರೇಷ್ಟ ಕ್ರಿಕೆಟರ್‌ಗಳಲ್ಲಿ ಒಬ್ಬರು ಎಂದು ಆಯ್ಕೆ ಮಾಡಿದರು. ಹೈದರಾಬಾದಿಗೆ ರಣಜಿ ಟ್ರೋಫಿ ಟೂರ್ನಮೆಂಟಿಗೆ ಆಡುತ್ತಿದ್ದ ವಿವಿಎಸ್ ಇಂಗ್ಲೆಂಡಿನ ಲಾಂಕಶಯರ್ ಕೌಂಟಿಗೆ ಆಡುತ್ತಿದ್ದರು.

*****

ವಾಂಗಿಪುರಪು ವೆಂಕಟ ಸಾಯಿ ಲಕ್ಷ್ಮಣ್ 1974ರ ನವೆಂಬರ್‌ 1ರಂದು ಶಾಂತಾರಾಂ ಮತ್ತು ಸತ್ಯಭಾಮ ಡಾಕ್ಟರ್‌ ದಂಪತಿಗೆ ಹುಟ್ಟಿದರು. ಅವರು ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಕುಟುಂಬದಲ್ಲಿ ಹುಟ್ಟಿದವರಾಗಿದ್ದರು. 6′ 1′ ಇದ್ದ ವಿವಿಎಸ್ ರಣಜಿ ಟ್ರೋಫಿಯಲ್ಲಿ ದ್ವಿಶತಕ, ತ್ರಿಶತಕಗಳನ್ನು ಬಾರಿಸಿ ಭಾರತದ ಟೀಮಿಗೆ ಪ್ರವೇಶ ಮಾಡಿದರು. ಅವರ ಆಟದ ಪ್ರತಿಭೆಯೆಂದರೆ ಅವರ ಮಣಿಕಟ್ಟಿನಿಂದ (ರಿಸ್ಟ್) ಆಡುತ್ತಿದ್ದ ಶೈಲಿ. ಅವರು ಎಂದೂ ಬಾಲನ್ನು ಜೋರಾಗಿ ಹೊಡೆದವರಲ್ಲ. ಅವರ ಮಣಿಕಟ್ಟಿನಿಂದ ಚೆಂಡನ್ನು ಎಲ್ಲಿಗೆ ಬೇಕೋ ಅಲ್ಲಿಗೆ ನಾಜೂಕಾಗಿ ತಟ್ಟಿ ಅದನ್ನು ಬೌಂಡರಿಗೆ ಕಳಿಸುವ ಕಲೆ ಅವರಿಗಿತ್ತು. ನೋಡುವವರಿಗೆ ಅದು ಆಟವಲ್ಲ, ಒಬ್ಬ ಮಾಂತ್ರಿಕ ತನಗೆ ಇಷ್ಟ ಬಂದಹಾಗಿ ಚೆಂಡನ್ನು ಎಲ್ಲಿಗೆ ಬೇಕೋ ಅಲ್ಲಿಗೆ ಹೋಗು ಎಂದು ಕಿವಿಯಲ್ಲಿ ಹೇಳಿ ಭುಜ ತಟ್ಟಿ ಕಳುಹಿಸುತ್ತಾನೆಂದು ಅವರ ಅನಿಸಿಕೆ! ಹೆಸರಾಂತ ಕ್ರಿಕೆಟ್ ಆಟಗಾರ ಮತ್ತು ಅವರೊಂದಿಗೆ ಆಡಿದವ ಸಚಿನ್ ಟೆಂಡೂಲ್ಕರ್ ಪ್ರಕಾರ ವಿವಿಎಸ್ ಚೆಂಡನ್ನು ಎಲ್ಲಿರಿಗಿಂತ ಒಂದು ಸೆಕೆಂಡ್ ಮುಂಚೆ ನೋಡುವುದರಿಂದ ಅವರಿಗೆ ಯಾವ ಬಾಲನ್ನು ಎಲ್ಲಿಗೆ ಆಡಬೇಕೆಂಬ ತಾಂತ್ರಿಕ ಶಕ್ತಿ ಸಿಗುತ್ತದೆಯೆಂದು ಹೇಳಿದ್ದಾರೆ. ಆದ್ದರಿಂದಲೇ ಅವರು ಎಷ್ಟೇ ಕಡಿಮೆ ಸ್ಕೋರ್ ಮಾಡಿದರೂ ಅದು ಆಕರ್ಷಣೀಯ ಎಂದು ಶ್ರೇಷ್ಟ ಆಟಗಾರರ ಭಾವನೆ. ಹೈದರಾಬಾದಿನ ಹಾಗೂ ಭಾರತದ ಪೂರ್ವ ಕಪ್ತಾನ್ ಅಝರುದ್ದೀನ್ ಅವರಿಗೂ ಮಣಿಕಟ್ಟಿನ ಬಳಸಿಕೊಂಡು ಚೆಂಡನ್ನು ಆಕರ್ಷಣೀಯವಾಗಿ ಬೌಂಡರಿಗೆ ಅಟ್ಟುವ ವಿದ್ಯೆ ಕರಕುಶಲವಾಗಿತ್ತು. ಬ್ಯಾಟಿಂಗ್‌ನಲ್ಲಿ 5ನೇ ಅಥವ 6 ನೇಯವರಾಗಿ ಬರುತ್ತಿದ್ದ ವಿವಿಎಸ್ ಎಷ್ಟೋ ಸರ್ತಿ ಕೊನೆಯಲ್ಲಿ ಬರುತ್ತಿದ್ದವರೊಡನೆ ಆಡಬೇಕಾಗಿದ್ದ ಪರಿಸ್ಥಿತಿ ಇರುತ್ತಿತ್ತು, ಅವರ ಜೊತೆಯಲ್ಲೇ ಪಾಲುದಾರಿಕೆಮಾಡಿ ವಿವಿಎಸ್ ಹಲವು ಸಲ ಭಾರತವನ್ನು ರಕ್ಷಿಸಿದ್ದೂ ಉಂಟು, ಗೆಲುವಿನ ಹಾದಿಯಲ್ಲಿ ಸೇರಿಸಿದ್ದೂ ಉಂಟು. ಅವರು ಬಹಳ ಸರ್ತಿ ಜೊತೆಗೆ ಆಡುವವರಿಲ್ಲದೆ ಅಜೇಯರಾಗಿ ಉಳಿದಿದ್ದಾರೆ.

ಅವರು ಆಡುವ ವೈಖರಿ, ಅವರ ಎತ್ತರದ ನಿಲುವು, ಆಕರ್ಷಕದ ಬ್ಯಾಟಿಂಗನ್ನು ಮಿಂಚಿಗೆ ಹೋಲಿಸಬಹುದು. ಎಂತಹ ಕತ್ತಲಲ್ಲೂ ಮಿಂಚು ಎಲ್ಲೆಲ್ಲೂ ಹರಡುತ್ತದೆ. ದೀಪವಾಗಿ ದಾರಿ ತೋರುತ್ತದೆ. ಆ ಕಲೆ ನಮ್ಮ ಇವತ್ತಿನ ಆಟಗಾರ ವಿವಿಎಸ್ ಲಕ್ಷಣ್‌ಗೆ ಇತ್ತು. ಮಿಂಚಿನ ಆಟಗಾರ ಎಂಬ ನಾಮಾಕಿಂತ ಅವರಿಗೆ ಚೆನ್ನಾಗಿ ಒಪ್ಪುತ್ತದೆ.

ಹೈದರಾಬಾದಿನಲ್ಲಿ ನೆಲಸಿರುವ ಲಕ್ಷ್ಮಣ್ ಐಪಿಎಲ್ ನಲ್ಲಿ ಆಡಿ, ಸನ್ ರೈಸರ್ಸ್ ಟೀಮಿಗೆ ಮಾರ್ಗದರ್ಶಕರಾಗಿ (ಮೆಂಟರ್) ಕೆಲಸ ಮಾಡಿದರು. ಈ ಮಧ್ಯೆ ರಾಹುಲ್ ದ್ರಾವಿಡ್ ಇಲ್ಲದಿರುವಾಗ ಭಾರತದ ಟೀಮಿನ ಕೋಚ್ ಆಗಿ ಟೀಮನ್ನು ನೋಡಿಕೊಂಡರು. ಈಗ ಬೆಂಗಳೂರಿನಲ್ಲಿರುವ ಬಿಸಿಸಿಐನ ಕ್ರಿಕೆಟ್ ಅಕಾಡಮಿಯ ಅಧ್ಯಕ್ಷರಾಗಿದ್ದಾರೆ. ಅವರು ಶೈಲಜ ಎಂಬುವರನ್ನು 2004ರಲ್ಲಿ ಮದುವೆಯಾಗಿ ಇಬ್ಬರು ಮಕ್ಕಳ ಜೊತೆ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.

******

ಗುಡುಗು, ಮಿಂಚು ಬಂದ ಮೇಲೆ ಎಷ್ಟೋ ಸರ್ತಿ ಸಿಡಿಲು ಬರಲೇಬೇಕಲ್ಲವೇ?

ಭಾರತದ ಕ್ರಿಕೆಟ್‌ನಲ್ಲಿ ಅಬ್ಬರಿಸಿ ಸಿಡಿಲನ್ನು ಕ್ರಿಕೆಟ್ ಮೈದಾನಕ್ಕೆ ಇಳಿಸಿದ ಕೀರ್ತಿ ಸಲ್ಲಬೇಕಾದ ವ್ಯಕ್ತಿ ನಮ್ಮ ಮುಂದಿನ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ! ಸಚಿನ್ ಟೆಂಡೂಲ್ಕರ್‌ಗೆ ಬೆನ್ನುನೋವು ಮತ್ತು ಕೈಯಲ್ಲಿ ನೋವು ಕಾಣಿಸಿಕೊಂಡು ಅದರ ಚಿಕೆತ್ಸೆಗೆ ಹೋದಾಗ ಆ ಜಾಗವನ್ನು ತುಂಬಿದ ಆಟಗಾರ ವೀರೇಂದ್ರ ಸೆಹ್ವಾಗ್.

ಭಾರತ 2004 ರಲ್ಲಿ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಂಡಿತು. ಆಗ ಅಲ್ಲಿ ಶೋಯೆಬ್ ಅಕ್ತರ್ ಪ್ರಪಂಚದ ವೇಗವಾಗಿ ಬೋಲಿಂಗ್ ಮಾಡುವರಲ್ಲಿ ಒಬ್ಬರೆಂದು ಪ್ರಸಿದ್ಧರಾಗಿದ್ದರು. ಅವರು ಗಂಟೆಗೆ 100 ಮೈಲಿ( 160.ಕಿ.ಮಿ ) ಬೋಲಿಂಗ್‌ನ ಗತಿ ದಾಖಲೆ ಮಾಡಿದ ಬೋಲರ್. ಅವರ ಬೋಲಿಂಗ್‌ನ ಬಗ್ಗೆ ನಿಜ ಮತ್ತು ಊಹಾಪೋಹಗಳು ಎಷ್ಟು ಹರಡಿತ್ತು ಎಂದರೆ, ಬ್ಯಾಟರ್‌ಗಳು ಅವರ ಬೋಲಿಂಗನ್ನು ಆಡಲು ಸಹಜವಾಗಿ ಹೆದರುತ್ತಿದ್ದರು.

ಆ ತರಹದ ಸ್ಥಿತಿಯಲ್ಲಿ ಭಾರತದ ಮೊದಲನೇ ಟೆಸ್ಟ್ ಬಹಳ ಆತಂಕದಿಂದ ಶುರುವಾಯಿತು ಎಂದು ಹೇಳಬಹುದು. ಆ ಆತಂಕ ನಿರಾಧಾರವಾದದ್ದು, ಪೊಳ್ಳು ಎಂದು ಸೆಹ್ವಾಗ್ ತೋರಿಸಿಕೊಟ್ಟರು!

ಆಕಾಶ್ ಚೋಪ್ರ ಜೊತೆ ಶುರುಮಾಡಿದ ಸೆಹ್ವಾಗ್ ತಮ್ಮ ಬತ್ತಳಿಕೆಯಲ್ಲಿ ಸಿಡಿಲು ಬರಿಸುವ ಯಂತ್ರ ಇದೆಯೆಂದು ಪಾಕಿಸ್ಥಾನದ ಆಟಗಾರರಿಗೆ, ಜನತೆಗೆ ಮತ್ತು ಪ್ರಪಂಚಕ್ಕೇ ಮೊದಲ ಬಾರಿ ತೋರಿಸಿಕೊಟ್ಟರು. ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಬಾಲಿಗೆ 30 ಹೊಡೆದರೆ ಅದು ಸರಿಯಾದ ಗತಿಯಲ್ಲಿ ಆಟ ಹೋಗುತ್ತಿದೆ ಎಂದು ಅರ್ಥ. 40 ಅಥವ 50 ಗೆ ಹೋದರೆ ಬಹಳ ಒಳ್ಳೆಯ ಗತಿ. ಒಳ್ಳೆಯ ಆಟಗಾರ ಸೆಂಚುರಿ ಹೊಡೆಯುವುದಕ್ಕೆ 220 ರಿಂದ 300 ಬಾಲ್‌ಗಳು ತೆಗೆದುಕೊಳ್ಳುವುದು ಸಾಮಾನ್ಯ.

ಭಾರತದ ಮೊದಲನೇ ವಿಕೆಟ್ ಆದ ಛೋಪ್ರ ಬಿದ್ದಾಗ ಸ್ಕೋರ್ 160 ಆಗಿತ್ತು. ಅದರಲ್ಲಿ ಛೋಪ್ರಾ 42 ಮಾಡಿದ್ದರು. ಮಿಕ್ಕ ಸ್ಕೋರ್ ಸೆಹ್ವಾಗ್ ಮಾಡಿದ್ದರು! 2ನೆ ವಿಕೆಟ್ 173ಕ್ಕೆ ಬಿತ್ತು. 3 ನೇ ವಿಕೆಟ್ ಬಿದ್ದಾಗ 126 ಓವರ್‌ಗಳಲ್ಲಿ ಭಾರತದ ಸ್ಕೋರ್ 509 ಆಗಿತ್ತು! ಸೆಹ್ವಾಗ್ 309 ಹೊಡೆದು ಔಟಾಗಿದ್ದರು! 309 ರನ್ ಕೇವಲ 375 ಬಾಲ್‌ಗಳಲ್ಲಿ ಹೊಡೆದಿದ್ದರು. 82.4% ಅವರ ಹೊಡೆತದ ಗತಿ! ನಾಲ್ಕು ಪಾಕಿಸ್ಥಾನದ ಬೋಲರ್‌ಗಳು 100 ಮೇಲೆ ರನ್ ಕೊಟ್ಟರು. ಅದರಲ್ಲಿ ಸಕ್ಲೇನ್ ಮುಸ್ಟಾಕ್ 204 ರನ್ ತೆರಬೇಕಾಯಿತು! ಆ ಬರಸಿಡಿಲಿನ ಹೊಡೆತದಿಂದ ಪಾಕಿಸ್ಥಾನಕ್ಕೆ ಎಂತಹ ಧಿಗ್ಭ್ರಮೆ ಆಯಿತೆಂದರೆ ಅದರಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ! ಸೆಹ್ವಾಗ್ ಕೈಯಲ್ಲಿ ಇರುವುದು ಬ್ಯಾಟ್ ಅಲ್ಲ ಅದು ಸಿಡಿಲು ಸಿಡಿಸುವ ಯಂತ್ರ ಅನ್ನುವ ಮಟ್ಟಕ್ಕೆ ಬಂತು ಅವರ ಬ್ಯಾಟಿಂಗ್!

ಭಾರತ 675/5 ಹೊಡೆದು ಅವರಿಗೆ ಆಡಲು ಆಮಂತ್ರಿಸಿತು. ಪಾಕಿಸ್ಥಾನ 407 ಮತ್ತು 216 ಹೊಡೆದು ಇನಿಂಗ್ಸ್ ಮತ್ತು 52 ರನ್‌ಗಳು ಕಡಿಮೆಯಾಗಿ ಸೋಲಬೇಕಾಯಿತು. ಹೀಗೆ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನ ನಕ್ಷೆಯನ್ನೇ ಬದಲಾಯಿಸುವುದಕ್ಕೆ ಮುಂದಾದರು.

ಮಾರ್ಚ್‌ 2008ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಚೆನ್ನೈನಲಿ ಆಡಿದ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಸ್ಕೋರ್ 540 ರನ್ ಮಾಡಿ ಭಾರತಕ್ಕೆ ದೊಡ್ಡ ಸವಾಲನ್ನು ಹಾಕಿತು. ಅದರಲ್ಲಿ ಹಷೀಮ್ ಆಮ್ಲ 159 ಮತ್ತು ಮೆಕೆನ್ಝಿ 94 ರನ್ ಹೊಡೆದರು.

ಭಾರತ ಎದೆಗುಂದದೆ ಆಡಿ 627 ರನ್ ಹೊಡೆದು ಮರು ಸವಾಲು ಹಾಕಿತು. ಸೆಹ್ವಾಗ್ 304 ಬಾಲ್‌ಗಳಲ್ಲಿ 319ರನ್ ಹೊಡೆದು ಅವರ ಬೋಲಿಂಗನ್ನು ಚೆಂಡಾಡಿದರು! ಅವರ ಬಿರುಸಿನ ಆಟ ಹೇಗಿತ್ತೆಂದರೆ ಅವರ ಸ್ಕೋರಿನ ಗತಿ 104.93 ಆಗಿತ್ತು! ಮೆಕೆನ್ಝಿಯ ಮತ್ತೊಂದು ಸೆಂಚುರಿಯಿಂದ ದಕ್ಷಿಣ ಆಫ್ರಿಕ 331 ಹೊಡೆದು ಪಂದ್ಯ ಸೋಲು/ಗೆಲುವು ಇಲ್ಲದೆ ಡ್ರಾನಲ್ಲಿ ಮುಕ್ತಾಯಗೊಂಡಿತು. ಎರಡನೇ ತ್ರಿಶತಕದಿಂದ ಸೆಹ್ವಾಗ್ ಅತ್ಯುತ್ತಮ ಶ್ರೇಷ್ಟ ಆಟಗಾರರಲ್ಲಿ ಒಬ್ಬರು ಎಂದು ಪ್ರಸಿದ್ಧರಾದರು.

ಡಿಸೆಂಬರ್ 2009ರಲ್ಲಿ ಶ್ರೀಲಂಕ ಭಾರತಕ್ಕೆ ಬಂದಾಗ ಮೂರನೆ ಟೆಸ್ಟ್ ಪಂದ್ಯ ಮುಂಬೈನ ಬ್ರೆಬೋರ್ನ ಸ್ಟೇಡಿಯಂನಲ್ಲಿ ನಡೆಯಿತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕ 393 ರನ್ ಗಳಿಸಿತು. ಭಾರತ ಅದಕ್ಕೆ ಬದಲಾಗಿ 726 ರನ್ ಹೊಡೆಯಿತು! ಸೆಹ್ವಾಗ್ 293 ರನ್ ಗಳಿಸಿದರು! ಅವರು ಸಿಕ್ಸರ್ ಹೊಡೆಯಲು ಹೋಗಿ ಕ್ಯಾಚ್ ಕೊಟ್ಟು ಔಟಾದರು. ಅವರ 293 ರನ್ ಕೇವಲ 254 ಬಾಲ್‌ಗಳಲ್ಲಿ ಹೊಡೆದು ಅವರ ಹೊಡೆತದ ತೀವ್ರ ಗತಿ 115.35 ಆಗಿತ್ತು! ಎರಡು ಬಾರಿ ತ್ರಿಶತಕ ಹೊಡೆದವರಲ್ಲಿ ಸೆಹ್ವಾಗ್ ಆಗಲೇ ಆಸ್ಟ್ರೇಲಿಯದ ಡಾನ್ ಬ್ರಾಡ್ಮನ್‌ರ ಜೊತೆಗಿದ್ದರು. ಮೂರನೇ ತ್ರಿಶತಕ ಹೊಡೆದಿದ್ದರೆ ಆಗ ಅವರೇ ಮೊದಲಿಗರಾಗುತ್ತಿದ್ದರು!

ಐದು ವಿಕೆಟ್ ತೆಗೆದು ಮ್ಯಾಚ್ ಗೆಲ್ಲಲು ಬಹುಮಟ್ಟಿಗೆ ಕಾರಣರಾದ ಮೆಗ್ರಾತ್ ಕೂಡ 17 ಓವರ್‌ಗೆ 55 ರನ್ ಕೊಟ್ಟಿದ್ದರು. 167 ರನ್ ಹೊಡೆದು ಧೂಳೀಪಟ ಮಾಡಿ ಔಟಾದರು. ಲೆಕ್ಕ ಹಾಕಿದಂತೆ ಭಾರತ ಸೋತಿತು, ಆದರೆ ಈ ಸೋಲಿನ ಮಧ್ಯೆ ಭಾರತಕ್ಕೆ ಒಂದು ಅಪೂರ್ವ ರತ್ನ ಅಂದು ದೊರೆತಂತಾಯಿತು.

ಪಾಕಿಸ್ಥಾನದ ಬೋಲಿಂಗ್‌ರ ರುಚಿಕಂಡಿದ್ದ ಸೆಹ್ವಾಗ್ ಮತ್ತೆ ಅಲ್ಲಿಗೆ ಹೋದಾಗ ದ್ವಿಶತಕವನ್ನು ಬಾರಿಸಿದರು. 2006ರಲ್ಲಿ ಪಾಕಿಸ್ಥಾನಕ್ಕೆ ಹೋದಾಗ ಹಿಂದಿನ ಸರ್ತಿ ಸೆಹ್ವಾಗ್‌ರ ಧಾಳಿಯನ್ನು ಅನುಭವಿಸಿದ್ದ ಪಾಕ್ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ಶತಕದ ಸಹಾಯದಿಂದ 679 ರನ್ ಹೊಡೆಯಿತು! ಮರಣಹೋಮವೆನ್ನುತ್ತಾರೆ ಆ ತರಹದ ಸ್ಕೋರ್ ನೋಡಿ! ಆದರೆ ಎದುರಾಳಿ ಸೆಹ್ವಾಗ್ ಮತ್ತೆ ಕಪ್ತಾನ್ ರಾಹುಲ್ ದ್ರಾವಿಡ್. ಅವರು ಮೊದಲನೇ ವಿಕೆಟ್‌ಗೆ 410 ರನ್ ಹೊಡೆದರು! ಸೆಹ್ವಾಗ್ 254, ದ್ರಾವಿಡ್ 128. ರನ್ ಗತಿಗಳನ್ನು ನೋಡಿ. ದ್ರಾವಿಡ್ 128, 233 ಬಾಲ್‌ಗಳಲ್ಲಿ 54,93%; ಸೆಹ್ವಾಗ್ 254 ರನ್ 247 ಬಾಲ್‌ಗಳಲ್ಲಿ, ರನ್ ಗತಿ 102.83! ಪ್ರತಿ ಬಾಲಿಗೂ ಒಂದು ರನ್ ಮೇಲೆ ಹೊಡೆದಿದ್ದರು ಸೆಹ್ವಾಗ್! ಇನ್ನು ಕೇವಲ 4 ರನ್ ಹೊಡೆದಿದ್ದರೆ ಅವರಿಬ್ಬರೂ ಆಗಿದ್ದ ಪ್ರಥಮ ವಿಕೆಟ್‌ಗೆ ವಿನೂ ಮಂಕಡ್ ಮತ್ತು ಪಂಕಜ್ ರಾಯ್ ಅವರ ದಾಖಲೆಯನ್ನು ಮುರಿದಿರುವರು! ಅದನ್ನು ಹೇಳಿದಾಗ ಸೆಹ್ವಾಗ್, ‘ಅಯ್ಯೊ! ಹಾಗಾಯಿತೇ! ಮುಂದಿನ ಸರ್ತಿ ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರುತ್ತೇನೆ’ ಅಂದರು!

ಅವರ ನಂಬಿಕೆ ಮತ್ತು ಆತ್ಮವಿಶ್ವಾಸ ಎಷ್ಟಿತ್ತೆಂದರೆ, ‘ಏನಾದರೂ ಸರಿ.. ಒಂದು ಕೈ ನೋಡಿಬಿಡುವ’ ಅನ್ನುವ ಸ್ವಭಾವ. ಛಲ. ಅದರಲ್ಲೂ ಓಪನರ್ ಆಗಿ ವಿಶ್ವದ ಅತಿ ಶ್ರೇಷ್ಟ ಮತ್ತು ಹೆದರಿಕೆ ಹುಟ್ಟಿಸುವ ಬೋಲರ್‌ಗಳನ್ನು ಎದುರಿಸುವಾಗ ಎಳ್ಳಷ್ಟೂ ಅಂಜದೆ ಅವರ ಬೋಲಿಂಗನ್ನು ಚೆಂಡಾಡುವ ಧೈರ್ಯ ಮತ್ತು ತಾಕತ್ತು. ಅವರ ಸ್ಕೋರ್‌ಗಳಲ್ಲಿ ಶೇಖಡ 80% ಎಲ್ಲಾ ಬೌಂಡರಿಗಳಿಂದಲೇ ಬರುತ್ತಿತ್ತು! ಫಾಸ್ಟ್ ಬೋಲರ್‌ಗಳು ಅವರಿಗೆ ಬೋಲ್ ಮಾಡಲು ಹೆದರುತ್ತಿದ್ದರು!

ಹೀಗೆ ಆಡುತ್ತಿದ್ದ ವೀರೇಂದ್ರ ಸೆಹ್ವಾಗ್ 2001 ರಿಂದ 2013 ತನಕ ಭಾರತಕ್ಕೆ ಟೆಸ್ಟ್ ಮ್ಯಾಚ್‌ಗಳಲ್ಲಿ ಪ್ರತಿನಿಧಿಸಿದರು. ನಜಫ್‌ಗಢದಿಂದ ಬಂದ ಅವರನ್ನು ಆತ್ಮೀಯವಾಗಿ, ‘ನವಾಬ್ ಅಫ್ ನಜಫ್ಘಡ್’ ಮತ್ತು ‘ಸುಲ್ತಾನ್ ಆಫ್ ಮುಲ್ತಾನ್’ ಎಂದು ಕರೆಯುತ್ತಿದ್ದರು.

ಬಲಗೈ ಆಟಗಾರರಾದ ಸೆಹ್ವಾಗ್ 104 ಟೆಸ್ಟ್‌ಗಳನ್ನಾಡಿ, 49.34 ಸರಾಸರಿಯಲ್ಲಿ 8586 ರನ್ ಹೊಡೆದರು. ಅವರ ಅತ್ಯುತ್ತಮ ಸ್ಕೋರ್ 319 ಆಗಿತ್ತು. ಆಶ್ಚರ್ಯದ ಮಾತೆಂದರೆ ಅವರ ಟೆಸ್ಟ್ ಸರಾಸರಿ ಫಸ್ಟ್ ಕ್ಲಾಸ್ ಮ್ಯಾಚ್‌ಗಳಿಗಿಂತ ಹೆಚ್ಚಾಗಿತ್ತು! ಅವರು ಫಾಸ್ಟ್ ಬೋಲರ್ಸ್‌ಗಳಿಗೆ ಸಿಂಹ ಸ್ವಪ್ನರಾಗಿದ್ದರು! ಅವರು 50 ಓವರ್ನ ಒಡಿಐ ಆಟದಲ್ಲೂ ದ್ವಿಶತಕ, 219 ರನ್ ಬಾರಿಸಿದ್ದರು. ಅವರು ಟೆಸ್ಟ್‌ಗಳಲ್ಲಿ 23 ಶತಕಗಳು 32 ಅರ್ಧ ಶತಕಗಳು ಹೊಡೆದರು.

ಅವರು ಬಲೆಗೈನ ಆಫ್ ಸ್ಪಿನರ್ ಕೂಡ ಆಗಿದ್ದರು. ಟೆಸ್ಟ್‌ನಲ್ಲಿ 40 ಮತ್ತು ಓಡಿಐನಲ್ಲಿ 96 ವಿಕೆಟ್ ತೆಗೆದಿದ್ದರು. ಅವರು 91 ಕ್ಯಾಚ್ ಹಿಡಿದಿದ್ದರು.

ಅವರೊಬ್ಬರೇ 300 ರನ್ ಹೊಡೆದ ಮೊದಲ ಭಾರತೀಯ. ಕರ್ನಾಟಕದ ಕರುಣ್ ನಾಯರ್ ಎರಡನೇ ಭಾರತೀಯ. ಅವರು ಇಂಗ್ಲೆಂಡಿನ ವಿರುದ್ಧ 2016ರಲ್ಲಿ 303 ರನ್ ಹೊಡೆದು ಅಜೇಯರಾಗಿದ್ದರು.

ಆಟದ ತಿರುವನ್ನೇ ಬದಲಾಯಿಸುವ ಶಕ್ತಿ ಸೆಹ್ವಾಗ್ ಅವರಿಗಿತ್ತು. ಅವರು ಔಟಾದ ತಕ್ಷಣ ಬೇರೆಯವರು ಔಟಾಗಿ ಕೆಲವು ಸಲ ಭಾರತ ಸೋತಿದೆ. ‘ಬಾಕ್ಸಿಂಗ್ ಡೆ’ ಎಂದು ಕರೆಯುವ ಟೆಸ್ಟ್‌ನಲ್ಲಿ 1995 26 ಡಿಸೆಂಬರ್ ಮ್ಯಾಚಿನಲ್ಲಿ 195 ಹೊಡೆದಿದ್ದ ಸೆಹ್ವಾಗ್ ಎಂದಿನಂತೆ ಸಿಕ್ಸರ್ ಹೊಡೆಯಲು ಹೋಗಿ ದುರದೃಷ್ಟವಶಾತ್ ಕ್ಯಾಚ್ ಕೊಟ್ಟು ಔಟಾದರು. ಅದಾದನಂತರ ಭಾರತದ ಎಲ್ಲಾ ವಿಕೆಟ್‌ಗಳು ಕುಸಿದುಬಿದ್ದು ಕೊನೆಗೆ ಭಾರತ ಸೋಲನ್ನು ಅನುಭವಿಸಬೇಕಾಯಿತು.

*****

ವೀರೇಂದ್ರ ಸೆಹ್ವಾಗ್ ಕಿಶನ್ ಮತ್ತು ಕೃಷ್ಣ ದಂಪತಿಗೆ ಅಕ್ಟೋಬರ್ 20 ರಂದು 1978ರಲ್ಲಿ ನಜಫ್ಘಡ್, ದೆಹಲಿಯಲ್ಲಿ ಹುಟ್ಟಿದರು. ಅವಿಭಕ್ತ ಕುಟುಂಬದಲ್ಲಿ ಮಮತೆ ಮತ್ತು ಪ್ರೀತಿಯಿಂದ ಬೆಳೆದ ‘ವೀರು’ ವಿಗೆ ಕ್ರಿಕೆಟ್ ಆಡಲು ಎಲ್ಲರ ಸಹಕಾರ ದೊರೆಯಿತು. ಬಹಳ ದೂರದಿಂದ ಬಸ್‌ನಲ್ಲಿ ಆಡಲು ನಿತ್ಯ ದೆಹಲಿಗೆ ಬರುತ್ತಿದ್ದರು.

ಅವರ ಬಿರುಸಿನ ಆಟದಿಂದ ಸೆಹ್ವಾಗ್‌ಗೆ ಮುಂದೆ ಬರಲು ಬಹಳ ಸಹಾಯವಾಯಿತು. ಅವರು ರನ್‌ಗಳನ್ನು ವೇಗದ ಗತಿಯಿಂದ ಹೊಡೆಯುತ್ತಿದ್ದ ಕಾರಣ ಅವರನ್ನು ಓಪನರ್ ಆಗಿ ಆಡಿಸಲು ಶುರು ಮಾಡಿದರು ಸೌರವ್ ಗಂಗೂಲಿ. ಅದು ಅವರ ಜೀವನದ ಒಂದು ಮುಖ್ಯ ತಿರುವಾಯಿತು.
ಒಂದು ಓಡಿಐ ಪಂದ್ಯದಲ್ಲಿ ಮಾರ್ಚ್‌ 2009ರಲ್ಲಿ ನ್ಯೂಝಿಲೆಂಡ್ ವಿರುದ್ಧ ಸೆಹವಾಗ್ 60 ಬಾಲುಗಳಲ್ಲಿ ಶತಕವನ್ನು ಬಾರಿಸಿದರು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂದೋರ್‌ನಲ್ಲಿ 149 ಬಾಲ್‌ಗಳಲ್ಲಿ 219 ರನ್ ಹೊಡೆದರು. ಅದು ದಾಖಲೆಯಾಗಿ ಬಹಳ ವರ್ಷ ಹಾಗೇ ಉಳಿದಿತ್ತು. ಅದನ್ನು ರೋಹಿತ್ ಶರ್ಮ ಮುರಿದರು.

ಸೆಹ್ವಾಗ್ ಭಾರತದ ಎರಡು ವಿಶ್ವಕಪ್ ವಿಜಯದಲ್ಲೂ, ಟಿ20 ಮೊದಲ ವಿಶ್ವ ಕಪ್ ದಕ್ಷಿಣ ಆಫ್ರಿಕಾ ಮತ್ತು ಮುಂಬೈ ಓಡಿಐ ಮ್ಯಾಚ್‌ಗಳಲ್ಲಿ ತಂಡದಲ್ಲಿ ಪಾಲ್ಗೊಂಡಿದ್ದರು.

ಸೆಹ್ವಾಗ್ 2004ರಲ್ಲಿ ಆರತಿ ಅಹ್ಲಾವತ್‌ರನ್ನು ಮದುವೆಯಾದರು. ಅವರಿಗೆ ಆರ್ಯವೀರ್ ಮತ್ತು ವೇದಾಂತ್ ಎಂಬ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಸೆಹ್ವಾಗ್‌ರಿಗೆ 2002ರಲ್ಲಿ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ 2010ರಲ್ಲಿ ಕೊಟ್ಟು ಸನ್ಮಾನಿಸಲಾಯಿತು. ವಿಸ್ಡನ್ ಪ್ರಶಸ್ತಿ (2008) ಮತ್ತು 2009ರಲ್ಲಿ ಅವರನ್‌’ ಪ್ಲೇಯರ್ ಅಫ್ ದ ಇಯರ್’ ಎಂದು ಘೋಷಿಸಲಾಯಿತು.

ಅವರು ವಿಪರೀತ ‘ಅಪೀಲ್’ ಮಾಡಿದರೆಂದು ಒಮ್ಮೆ ಅವರನ್ನು ಒಂದು ಮ್ಯಾಚ್ ಆಡಿಸಬಾರದೆಂದು ಐಸಿಸಿ ತೀರ್ಮಾನಗೊಂಡಿತ್ತು.

ಸೆಹ್ವಾಗ್ ಸುನಿಲ್ ಗವಾಸ್ಕರ್ ಜೊತೆಗೂಡಿ ಇತ್ತೀಚೆಗೆ ‘ಕಮಲ್ ಪಸಂದ್’ ಅನ್ನುವ ಮಿಶ್ರಿತ ಪುಡಿ – ಕ್ಯಾನ್ಸರ್ ಬರಬಹುದು ಎಂದು ವಿಜ್ಞಾನದ ಶಂಕೆ, ಟಿವಿಯಲ್ಲಿ ಜಾಹೀರಾತಿಗೆ ಬಂದಿರುವುದನ್ನು ಕಂಡು ಬಹಳ ಜನಕ್ಕೆ ಬೇಸರವಾಗಿದೆ. ಎಷ್ಟೋ ಕೋಟ್ಯಾಧಿಪತಿಗಳಾಗಿ ‘ಲೆಜೆಂಡ್’ ಎಂದು ಕರೆಯಲ್ಪಡುವ ಆಟಗಾರರಿಗೆ ಇನ್ನೂ ದುಡ್ಡಿನ ವ್ಯಾಮೋಹವೇ ಇಂತಹ ಜಾಹಿರಾತುಗಳಿಗೆ ಬಂದು ವಿಷವನ್ನು ಉಣಿಸಲು ಬರುತ್ತಾರಲ್ಲಾ ಎಂದು ಬೇಸರದ ಜೊತೆಗೆ ಕೋಪವೂ ಸಹ ಇದೆ. ಇವರಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವೆ, ಯಾಕೆಂದರೆ ಇವರನ್ನು ನೊಡಿ ಹುಡುಗರು ಅನುಕರಣೆ ಮಾಡುತ್ತಾರೆ ಎಂದು ಬಹಳಷ್ಟು ಜನ ಇವರನ್ನು ಪ್ರಶ್ನಿಸಿದ್ದಾರೆ.

ಹರ್ಯಾಣ ಝಜ್ಜಾರ್‌ನಲ್ಲಿ ‘ಸೆಹ್ವಾಗ್ ಇಂಟರ್ನ್ಯಾಷನಲ್ ಸ್ಕೂಲ್’ 2011ರಲ್ಲಿ ಸೆಹ್ವಾಗ್ ಶುರುಮಾಡಿದರು. ಸೆಹ್ವಾಗ್ ಅವರ ಹೆಸರಿನಲ್ಲಿ ಕನಿಷ್ಟ 50 ದಾಖಲೆಗಳಿವೆ!

ಎಲ್ಲಿಯ ತನಕ ಬಿರುಸಿನ ಹೊಡೆತ ಇರುತ್ತೋ ಅಲ್ಲಿ ಸೆಹ್ವಾಗ್ ಅವರ ಕೊಡುಗೆಯನ್ನು ಜನರು ಸ್ಮರಿಸುತ್ತಾರೆ. ಕ್ರಿಕೆಟ್ ಚೆಂಡು ಚಿಮ್ಮಿ ಬೌಂಡರಿಗೆ ಹಾರುವುದನ್ನು ಜನರು ಕಾತುರದಿಂದ ಎದುರು ನೋಡುತ್ತಾರೆ. ಆ ಸಮಯದಲ್ಲಿ ಸೆಹ್ವಾಗ್ ಆಡುತ್ತಿದ್ದರೆ ಕ್ರಿಕೆಟ್ ನೋಡುತ್ತಿರುವರಿಗೆ ದೀಪಾವಳಿ ಬಂದಿತೆಂದು ಸುಗ್ಗಿಯೋ ಸುಗ್ಗಿ! ಅದರಲ್ಲೂ ಟೆಸ್ಟ್ ಮ್ಯಾಚ್‌ನಲ್ಲಿ ಹೀಗಾದರೆ ಜನಗಳು ಅದನ್ನು ನೋಡಿ ಪರವಶವಾಗುವುದರಲ್ಲಿ ಸಂದೇಹವೇ ಇಲ್ಲ.

ಭಾರತದ ಮಹಾನ್ ಕ್ರಿಕೆಟರ್‌ಗಳಿಬ್ಬರಾದ ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಯಾವಾಗ ಬೇಕಾದರೂ ಕ್ರಿಕೆಟ್ ಮೈದಾನದಲ್ಲಿ ಗುಡುಗು, ಮಿಂಚು ಮತ್ತು ಸಿಡಿಲುಗಳನ್ನು ಸುರಿಸುವ ಶಕ್ತಿಯುಳ್ಳ ಧೀಮಂತರು. ಅವರಿಬ್ಬರೂ ಭಾರತದ ಕ್ರಿಕೆಟ್ ಏಳಿಗೆಗೆ ಸಲ್ಲಿಸಿದ ಸೇವೆ ಅಪಾರ. ಅವರಿಬ್ಬರಿಗೂ ಕ್ರಿಕೆಟಾಯದ ನಮೋ ನಮಹ!