ಶ್ರೀಮಂತರಿಗೆ ಮತ್ತು ಮಧ್ಯಮವರ್ಗದವರಿಗೆ ಸಕ್ಕರೆಯ ಹುಚ್ಚು ಹಿಡಿದಿತ್ತು. ಬಾಬು ಮಾಮಾ ತನ್ನದೇ ರೀತಿಯಲ್ಲಿ ಪ್ಲ್ಯಾನ್ ಮಾಡಿದ. ನಾವು ಮೊದಲಿಗೆ ಇದ್ದ ಮದ್ದಿನಖಣಿ ಓಣಿಯಲ್ಲಿನ ನಮ್ಮ ಪರಿಚಯಸ್ಥರ ಮನೆಗೆ ಹೋಗಿ ‘ನಮಗೆ ಸಕ್ಕರೆ ಬೇಡ, ನಿಮಗೆ ಬೇಕಾದರೆ ತಂದು ಕೊಡುವುದಾಗಿ ತಿಳಿಸುತ್ತಿದ್ದ. ಅವರು ಕೈಚೀಲದೊಂದಿಗೆ ರೇಷನ್ ರೇಟಿಗಿಂತಲೂ ಹೆಚ್ಚಿಗೆ ಹಣ ಕೊಡುತ್ತಿದ್ದರು. ಆ ಮೇಲೆ ಕೈಚೀಲವೂ ಇಲ್ಲ, ಸಕ್ಕರೆಯೂ ಇಲ್ಲ. ಹೀಗೆ ದಿನಕ್ಕೊಬ್ಬರಾದರೂ ನಮ್ಮ ಮನೆ ಹುಡುಕಿಕೊಂಡು ಬರುತ್ತಿದ್ದರು. ಆದರೆ ಆತ ಮಾತ್ರ ಮನೆ ಕಡೆ ತಲೆ ಹಾಕುತ್ತಿರಲಿಲ್ಲ.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಇಪ್ಪತ್ಮೂರನೆಯ ಕಂತು

 

ಅಸಹಾಯಕತೆ, ಸ್ವಾಭಿಮಾನ, ಛಲ, ಕೃತಜ್ಞತೆ, ಕರುಣೆ, ತಿರಸ್ಕಾರ, ಆತ್ಮೀಯತೆ, ಧೂರ್ತತನ, ಕ್ರೌರ್ಯ, ತಣ್ಣನೆಯ ಕ್ರೌರ್ಯ, ಕಪಟತನ, ಸುಳ್ಳು, ಮೋಸ ಮುಂತಾದವು ಜನರ ಬದುಕಿನ ಭಾಗವಾಗಿರುತ್ತವೆ. ಅಂಥ ಅದೆಷ್ಟೋ ಘಟನೆಗಳು ನಮ್ಮ ಜೀವನದಲ್ಲಿ ಬಂದು ಹೋಗುತ್ತವೆ ಎಂಬ ಭಾವದೊಂದಿಗೆ ನಾವು ನಮ್ಮ ಬದುಕಿನಲ್ಲಿ ಇವೆಲ್ಲವುಗಳ ಜೊತೆಗೆ ಸಾಗಬೇಕಾಗುತ್ತದೆ. ಇಂಥ ಅನೇಕ ಘಟನೆಗಳು ಕಾಲ ಕಳೆದಂತೆಲ್ಲ ನೆನಪಾಗಿ ಸುಖ ದುಃಖ ಕೊಡುವಲ್ಲಿ ತಲ್ಲೀನವಾಗುತ್ತವೆ.

ನಮ್ಮ ನಾವಿಗಲ್ಲಿ ಮನೆಯ ಪಕ್ಕದ ಮನೆಯಲ್ಲಿ ಬಾಡಿಗೆಗೆ ಬಂದ ನೀಲಮ್ಮ ಜೀವನೋತ್ಸಾಹದಿಂದ ಕೂಡಿದ ಮಹಿಳೆಯಾಗಿದ್ದಳು. ಮನೆ ಹತ್ತಿರದ ಬೀದಿನಾಯಿಗಳ ಬಗ್ಗೆ ಅವಳ ಕಾಳಜಿ ವಿಶೇಷವಾಗಿತ್ತು. ಅವಳಿಗೊಬ್ಬಳು ನಾವಿ ಸಮಾಜದ ಮಿತಭಾಷಿ ಗೆಳತಿಯಿದ್ದಳು. ‘ಇವಳು ಹೇಳುವುದು, ಅವಳು ಕೇಳುವುದು.’ ಹೀಗೆ ಅವರ ಗೆಳೆತನ ಸಾಗಿತ್ತು. ಆಕೆ ಸಾಧಾರಣ ವ್ಯಕ್ತಿತ್ವದ ಮುಗ್ಧ ಮಹಿಳೆಯಾಗಿದ್ದಳು. ಇಬ್ಬರು ಮಕ್ಕಳ ತಾಯಿಯಾಗಿದ್ದ ನೀಲಮ್ಮನದು ಆಕರ್ಷಕ ವ್ಯಕ್ತಿತ್ವ. ಮಾತಿನಲ್ಲಿ ಮಾಧುರ್ಯ. ಸ್ವಭಾವದಲ್ಲಿ ದಿಲ್‌ದಾರ್. ಆ ಇಬ್ಬರೂ ಗೆಳತಿಯರು ಸದಾ ಜೊತೆಯಲ್ಲಿರುತ್ತಿದ್ದರು. ಆದರೆ ಆಕೆ ಸಮೀಪದಲ್ಲೇ ಇದ್ದ ತಮ್ಮ ಸಂಬಂಧಿಕರ ಕುಟುಂಬವೊಂದರ ಜೊತೆ ಮಾತು ಬಿಟ್ಟಿದ್ದಳು. ನಾವಿಗಲ್ಲಿ ಹಿಂದಿನ ಮಠಪತಿ ಗಲ್ಲಿ ಮೂಲಕ ಐದು ನಿಮಿಷದಲ್ಲಿ ಆ ಸಂಬಂಧಿಕರ ಮನೆಗೆ ಹೋಗಬಹುದಿತ್ತು. ಆದರೆ ನೀಲಮ್ಮ ಎಂದೂ ಹೋಗಲಿಲ್ಲ. ಅವರ ಬಗ್ಗೆ ಏಕೆ ತಿರಸ್ಕಾರವಿತ್ತೋ ಗೊತ್ತಿಲ್ಲ.

ಮನೆಯ ಎದುರುಗಡೆ ಇದ್ದ ಆ ಜಿಪುಣ ಹಾಗೂ ಸಿಡುಕು ಸ್ವಭಾವದ ಕಿರಾಣಿ ಅಂಗಡಿಕಾರನಿಗೂ ನೀಲಮ್ಮನಿಗೂ ಅದು ಹೇಗೋ ಸಂಬಂಧ ಬೆಳೆಯಿತು. ಆಕೆಯ ಗಂಡ ಪೋಸ್ಟ್ ಆಫೀಸಿನಲ್ಲಿ ಯಾವುದೋ ಸಣ್ಣ ನೌಕರಿಯಲ್ಲಿದ್ದ. ಆತ ಮೌನಿಯಾಗಿದ್ದು ಸಂಭಾವಿತನಾಗಿದ್ದ. ಬೆಳಿಗ್ಗೆ ಸೈಕಲ್ ಮೇಲೆ ಹೋದರೆ ಸಾಯಂಕಾಲ ಮನೆಗೆ ಬರುತ್ತಿದ್ದ. ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಇವರ ಸಂಬಂಧ ಮುಂದುವರಿಯಿತು. ತನಗೂ ಇದಕ್ಕೂ ಸಂಬಂಧವಿಲ್ಲದಂತೆ ನೀಲಮ್ಮನ ಗೆಳತಿ ಇದ್ದಳು. ಗಲ್ಲಿಯಲ್ಲಿ ಇಂಥ ಸಂಬಂಧಗಳ ಬಗ್ಗೆ ಗಾಸಿಪ್‌ ಇದ್ದರೂ ಯಾರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಒಂದು ದಿನ ಅವಳು ಸಂಬಂಧಿಕರ ಮದುವೆಗೆ ಹೋಗುವುದಕ್ಕಾಗಿ ಆ ಅಂಗಡಿಕಾರನಿಂದ ಬಂಗಾರದ ಚೈನು ಮತ್ತು ಉಂಗುರವನ್ನು ಕಡ ಪಡೆದಳು. ಆದರೆ ಮದುವೆಗೆ ಹೋಗಿ ಬಂದ ಮೇಲೆ ವಾಪಸ್ ಕೊಡಲಿಲ್ಲ. ಅವನೋ ಪಬ್ಲಿಕ್ ಆಗಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ಆತ ಹಾಗೂ ಹೀಗೂ ಪ್ರಯತ್ನ ಮಾಡಿದರೂ ಆಕೆ ಜಪ್ ಎನ್ನಲಿಲ್ಲ. ‘ಆ ಒರಟು ಸ್ವಭಾವದ ಜಿಪುಣನಿಗೆ ಒಳ್ಳೆಯ ಪಾಠ ಕಲಿಸಿದಳು’ ಎಂದು ಕೆಲವರು ಒಳ ಒಳಗೆ ಖುಷಿಪಟ್ಟಿದ್ದೂ ಉಂಟು.

ಮುಂದೆ ಒಂದು ವರ್ಷದೊಳಗೆ ನೀಲಮ್ಮನಿಗೆ ಕ್ಯಾನ್ಸರ್ ಆಯಿತು. ಅವಳು ಆಸ್ಪತ್ರೆಯಲ್ಲಿ ಸಾವಿನ ದಾರಿಯಲ್ಲಿದ್ದಳು. ಆಗ ಸಮೀಪದಲ್ಲೇ ಇದ್ದ ಆಕೆಯ ಸಂಬಂಧಿಕರು ನೋಡಲು ಹೋದರು. ಅವರನ್ನು ನೋಡಿದ ಕೂಡಲೆ ನೀಲಮ್ಮ ತಿರಸ್ಕಾರದಿಂದ ಆಚೆ ಮುಖ ತಿರುಗಿಸಿದಳು. ಅದೇ ಸಂದರ್ಭದಲ್ಲಿ ನಾನೂ ನನ್ನ ತಾಯಿಯ ಜೊತೆ ನೋಡಲು ಹೋಗಿದ್ದೆ. ಆಕೆ ಮುಖ ತಿರುಗಿಸಿದ ಸಂದರ್ಭದಲ್ಲೇ ಕೊನೆ ಉಸಿರು ಎಳೆದಿದ್ದಳು. ಅದೇನೇ ಇದ್ದರೂ ಗಲ್ಲಿಯ ಜನರ ಜೊತೆ ಅವಳು ಸ್ನೇಹಮಯಿಯಾಗಿದ್ದಳು. ಹೀಗಾಗಿ ಬಹಳ ಜನ ಕಣ್ಣೀರಿಟ್ಟರು.

*****

ಗಣಪತಿ ಮಾಮಾ (ಜಿ.ಬಿ. ಸಜ್ಜನ್ ಸರ್) ಮನೆಯಲ್ಲಿ ಮಹಿಳೆಯೊಬ್ಬಳು ಮನೆಗೆಲಸ ಮಾಡಿಕೊಂಡಿದ್ದಳು. ಸರ್ ಮನೆ ಎದುರಿಗಿನ ಕಾಕಾ ಕಾರ್ಖಾನೀಸರ ಬೋರ್ಡಿಂಗಿನ ಎಡ ಪಕ್ಕದಲ್ಲಿನ ಚಾಳದಲ್ಲಿ ಆ ಮಹಿಳೆಯ ಮನೆ ಇತ್ತು. ಒಂದು ದಿನ ಮಧ್ಯಾಹ್ನ ಹಯಾತಬಿ ಎಂಬ ಮಹಿಳೆ ಆ ಚಾಳದಿಂದ ಹೊರಗೆ ಗಾಬರಿಯಿಂದ ಅಳುತ್ತ ಓಡಿ ಬಂದು ‘ಮಧ್ಯಾಹ್ನದಲ್ಲಿ ಸೂರ್ಯಾ ಮುಳಗಿದಾ’ ಎಂದು ಜೋರಾಗಿ ಅಳತೊಡಗಿದಳು. ನಾವು ಮಕ್ಕಳು ಆಗ ರಸ್ತೆ ಮೇಲೆ ಲಗೋರಿ ಆಡುತ್ತಿದ್ದೆವು. ಕೂಡಲೆ ಏನಾಯಿತೆಂದು ಚಾಳದಲ್ಲಿ ಓಡಿಹೋದೆವು. ಸರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆ ಮಹಿಳೆ ನೇಣು ಹಾಕಿಕೊಂಡಿದ್ದಳು!

ಅದಕ್ಕೆ ಕಾರಣ ನಂತರ ತಿಳಿಯಿತು. ನನ್ನ ವಯಸ್ಸಿನ ಆಕೆಯ ಹುಡುಗ ಸರ್ ಮನೆಯಲ್ಲಿ ಏನೋ ಕದ್ದಿದ್ದ. ಬಹುಶಃ ಚಿನ್ನದ ಸರ ಇರಬಹುದು. ಋಜು ಸ್ವಭಾವದ ಆ ಹೆಣ್ಣುಮಗಳ ಬಗ್ಗೆ ಗೌರವವಿದ್ದ ಸರ್ ಮನೆಯವರಾಗಲಿ, ಸರ್ ಆಗಲಿ ಅವಳಿಗೆ ಅಪಮಾನವಾಗದಂತೆ ನಡೆದುಕೊಂಡಿದ್ದರು. ಆದರೆ ಈ ಘಟನೆಯಿಂದಾದ ಖಿನ್ನತೆಯಿಂದ ಅವಳಿಗೆ ಹೊರ ಬರಲಿಕ್ಕಾಗಲಿಲ್ಲ.

ಲಗೋರಿ ಆಟ

ನಮ್ಮ ಮನೆ ಎದುರಿಗಿನ ನಾವಿಗಲ್ಲಿ ರಸ್ತೆಯ ಆರಂಭದಲ್ಲಿ, ಸೇದೂ ಬಾವಿಯ ಪಕ್ಕದಲ್ಲೇ ಒಂದು ಮುಸ್ಲಿಮರ ಸಣ್ಣ ಚಾಳ ಇತ್ತು. ಆ ಚಾಳಿನ ಮಾಲೀಕರು ಬಜಾರಲ್ಲಿ ಡಬ್ಬಿ ಬೆಸೆಯುವ ಅಂಗಡಿ ಇಟ್ಟಿದ್ದರು. ತಂದೆ ಮಗ ಅಲ್ಲಿ ತಮ್ಮ ಕಾಯಕದಲ್ಲಿ ತಲ್ಲೀನರಾಗಿರುತ್ತಿದ್ದರು. ಅವರ ಮನೆಯಲ್ಲಿ ಒಬ್ಬ ಹಿರಿಯ ವಯಸ್ಸಿನ ದೂರದ ಸಂಬಂಧದ ನಿರ್ಗತಿಕ ಮಹಿಳೆ ಇದ್ದಳು. ಮನೆಯ ಒಡತಿ ಮತ್ತು ಆಕೆಯ ಸೊಸೆಯ ಜೊತೆ ಮನೆಗೆಲಸ ಮಾಡಿಕೊಂಡಿದ್ದಳು.

ಒಂದು ದಿನ ಅವರ ಮನೆಯಲ್ಲಿ ಚಿನ್ನದ ಸರ ಮಾಯವಾಗಿದ್ದು ತಿಳಿದು ಬಂದಿತು. ಅದು ಎಲ್ಲಿ ಇಟ್ಟಿದ್ದ ಬಗ್ಗೆ ಕೂಡ ಮನೆಯವರಿಗೆ ನೆನಪಿಲ್ಲ. ಹೀಗಾಗಿ ಎಲ್ಲ ಕಡೆ ಹುಡುಕಾಡಿದರೂ ಸಿಗಲಿಲ್ಲ. ಮನೆಯವರೆಲ್ಲ ಹತಾಶರಾದರು. ಆ ನಿರ್ಗತಿಕ ಆದರೆ ಸಾತ್ವಿಕ ಮಹಿಳೆಗೆ ಕೇಳುವುದು ಬಹಳ ಕಷ್ಟದ ಕೆಲಸವಾಗಿತು. ನಂತರ ಮನೆಯ ಹಿರಿಯ ವ್ಯಕ್ತಿ ಚಿನ್ನದ ಸರ ಕುರಿತು ಆ ಮಹಿಳೆಗೆ ಕೇಳಿಯೆಬಿಟ್ಟರು. ಅವಳು ಮೌನವಾಗಿದ್ದಳು. ರಾತ್ರಿ ಚಾಳ ಪಕ್ಕದಲ್ಲೇ ಇರುವ ಸೇದೂ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು! ಮುಂದೆ ಎಷ್ಟೋ ದಿನಗಳ ನಂತರ ಟ್ರಂಕಲ್ಲಿ ಆ ಮನೆಯ ಹಿರಿಯ ಏನೋ ಹುಡುಕುವಾಗ ಆ ಚಿನ್ನದ ಸರ ಸಿಕ್ಕಿತು!

ಕಮಲಾ ಎಂಬ ಸುಂದರ ಯುವತಿಯದು ಸ್ವಲ್ಪ ದೊಡ್ಡ ಮನೆ ಇತ್ತು. ಅವರ ಅಣ್ಣಂದಿರು ಒಂದಿಷ್ಟು ಆಧುನಿಕವಾದ ಕೇಶಕರ್ತನಾಲಯ ಇಟ್ಟುಕೊಂಡು ಚೆನ್ನಾಗಿ ದುಡಿಯುತ್ತಿದ್ದರು. ಕಮಲಾ ಅಂತಃಕರಣದ ಯುವತಿಯಾಗಿದ್ದಳು. ನನ್ನ ತಾಯಿಯನ್ನು ಕಂಡರೆ ಅವಳಿಗೆ ಎಲ್ಲಿಲ್ಲದ ಪ್ರೀತಿ. ಅವಳು ತನ್ನ ಸುಸಂಸ್ಕೃತ ನಡೆನುಡಿಗಳಿಂದ ಗಲ್ಲಿಯ ಜನರ ಗೌರವಕ್ಕೆ ಪಾತ್ರಳಾಗಿದ್ದಳು. ತಮ್ಮ ಮನೆಯ ಪಕ್ಕದಲ್ಲೇ ಇದ್ದ ಒಂದು ಕೋಣೆಯನ್ನು ಅವಳ ಮನೆಯವರು ಬಾಡಿಗೆಗೆ ಕೊಟ್ಟಿದ್ದರು. ಬಾಡಿಗೆಗೆ ಬಂದ ಯುವಕ ಯಾರದೋ ಅಂಗಡಿಯಲ್ಲಿ ಗುಮಾಸ್ತನಾಗಿದ್ದ. ಪೈಜಾಮಾ, ಬಿಳಿಷರ್ಟು ಮತ್ತು ಕರಿಟೋಪಿ ಆತನ ದೈನಂದಿನ ಡ್ರೆಸ್ ಆಗಿತ್ತು. ಕೈಯಲ್ಲಿ ಒಂದೂವರೆ ಗೇಣುದ್ದುದ ಲೆದರ್ ಬ್ಯಾಗ್ ಇದ್ದು ಆತ ಮೌನವಾಗಿ ಹೋಗುವುದು ಬರುವುದು ಮಾಡುತ್ತಿದ್ದ.

ಒಂದು ದಿನ ರಾತ್ರಿ ಕಮಲಳ ಅಣ್ಣಂದಿರು ಅವನನ್ನು ಬಡಿದು ಓಡಿಸಿದರು. ಅಂದೇ ರಾತ್ರಿ ಗಾಂವಟಿ ವೈದ್ಯೆಯನ್ನು ಕರೆದು ಆಕೆಯ ಗರ್ಭಪಾತ ಮಾಡಿಸಿದರು. ಬೆಳಗಾಗುವುದರೊಳಗಾಗಿ ಇದೆಲ್ಲ ಟಾಂಟಾಂ ಆಗಿತ್ತು. ಮುಂದೆ ಒಂದು ವರ್ಷ ಕಳೆಯುವುದರೊಳಗಾಗಿ ಹಳ್ಳಿಯ ವೃದ್ಧ ವಿಧುರನಿಗೆ ಅವಳನ್ನು ಮದುವೆ ಮಾಡಿಕೊಟ್ಟರು. ಅವಳು ಒಂದು ಗಂಡು ಮಗು ಹಡೆದ ಸ್ವಲ್ಪೇ ದಿನಗಳಲ್ಲಿ ಬೇನೆಬಿದ್ದು ತೀರಿಕೊಂಡಳು.

*****

ನನ್ನ ಸೋದರಮಾವ ಬಾಬು ಮಾಮಾನಿಗೆ ಬಾಗಲಕೋಟ್ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕ ಕೆಲಸ ಕೊಡಿಸುವ ಬಗ್ಗೆ ನನ್ನ ಅಜ್ಜಿ ಬಹಳ ಪ್ರಯತ್ನ ಪಟ್ಟಳು. ಯಾರೋ ಒಬ್ಬ ಮುಸ್ಲಿಂ ಹಿರಿಯರು ಸಹಾಯ ಮಾಡಿದರು. ಬಹಳ ದಿನಗಳ ಪ್ರಯತ್ನದ ನಂತರ ಕೆಲಸ ಸಿಕ್ಕಿತು. ಆಗ ನಮ್ಮ ಮನೆಯವರಿಗಾದ ಸಂತೋಷ ಅಷ್ಟಿಷ್ಟಲ್ಲ. ಈ ಕೆಲಸದಿಂದ ಆತ ಒಂದು ನೆಲೆಗೆ ಹತ್ತಿದ ನಂತರ ಮದುವೆ ಮಾಡುವ ಕನಸು ನನಸಾಗುವ ದಿನಗಳು ಸಮೀಪಿಸಿದ ಹಾಗೆ ಅನಿಸಿತು. ಅಂದಿನ ಅಖಂಡ ವಿಜಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ ಸಿಮೆಂಟ್ ಕಾರ್ಖಾನೆ ಅದೇ ಆಗಿತ್ತು. ಅಲ್ಲಿ ಬಾಬು ಮಾಮಾಗೆ ಕಾರ್ಮಿಕ ಕೆಲಸ ಸಿಕ್ಕಿದ್ದು ದೊಡ್ಡ ಸಾಧನೆ ಎಂದೇ ತಿಳಿಯಬೇಕು. ಬದುಕಿಗೆ ಭದ್ರತೆ ನೀಡುವ ಇಂಥ ಒಂದು ಕೆಲಸ ಸಿಕ್ಕ ಮೇಲೆ ಅವನು ಸುಧಾರಿಸುತ್ತಾನೆ ಎಂದು ಅಜ್ಜಿ ಭಾವಿಸಿದ್ದಳು. ಆದರೆ ಮಗ ಅಂಥ ಯಾವ ಯೋಚನೆಗಳಿಲ್ಲದವನಾಗಿದ್ದ. ಅವನಿಗೆ ವಿಜಾಪುರ ಬಿಟ್ಟು ಹೋಗುವ ಮನಸ್ಸು ಇರಲಿಲ್ಲ. ಹೊಟೇಲ್ ಕೆಲಸಕ್ಕೆ ಹೊಂದಿಕೊಂಡಿದ್ದ. ಆದರೆ ಇಲ್ಲಿ ಸಿಗುವ ಕೂಲಿಗಿಂತ ನಾಲ್ಕುಪಟ್ಟು ಕೂಲಿ ಮತ್ತು ಎಲ್ಲ ರೀತಿಯ ಭವಿಷ್ಯದ ಭದ್ರತೆಯನ್ನು ಸಿಮೆಂಟ್ ಕಾರ್ಖಾನೆ ಕೊಡುತ್ತಿತ್ತು. ಉಂಡಾಡಿತನವೇ ಆತನ ಜೀವನವಿಧಾನವಾಗಿದ್ದರಿಂದ ಇದಾವುದರ ಪ್ರಜ್ಞೆ ಆತನಿಗಿರಲಿಲ್ಲ. ಹಾಗೂ ಹೀಗೂ ಮಾಡಿ ಅವನನ್ನು ವಿಜಾಪುರದಿಂದ ಬಾಗಲಕೋಟೆಗೆ ಕಳುಹಿಸಲಾಯಿತು.

ಅಜ್ಜಿಯ ಜೀವನದಲ್ಲಿ ಇದೊಂದು ದೊಡ್ಡ ಸಾಧನೆ ಆಗಿತ್ತು. ಮಗನ ರೊಟ್ಟಿ ತುಪ್ಪದಲ್ಲಿ ಬಿತ್ತು ಎಂದು ಅವಳು ಭಾವಿಸಿದಳು. ಆದರೆ ಆತ ಸಿಮೆಂಟ್ ಕಾರ್ಖಾನೆಯಲ್ಲಿ 15 ದಿನ ಕೂಡ ಕೆಲಸ ನಿರ್ವಹಿಸಲಿಲ್ಲ. ವಾಪಸ್ ಬಂದು ಏನೇನೋ ನೆಪ ಹೇಳಿದ. ಸಿಮೆಂಟ್ ತಯಾರಾಗುವ ಬೆಂಕಿಯಲ್ಲಿ ಸುಡುವ ಸುಣ್ಣದ ಕಲ್ಲುಗಳ ಉಂಡೆಗಳು ಸಿಡಿಯುವುದರಿಂದ ಕೆಲಸಗಾರರು ಸಾಯುವಂಥ ಘಟನೆಗಳು ನಡೆಯುತ್ತವೆ ಎಂದು ಮುಂತಾಗಿ ಹೇಳುತ್ತ ನನ್ನ ಅಜ್ಜಿಗೆ ಅಂಜಿಸಿದ. ರಾತ್ರಿ ಪಾಳಿಯಲ್ಲಿ ದೆವ್ವಗಳು ಕಾಣುತ್ತವೆ ಎಂದು ತಿಳಿಸಿದ. ಇದನ್ನೆಲ್ಲ ಕೇಳಿದ ಅಜ್ಜಿ ಇದ್ದೊಬ್ಬ ಮಗ ಹೇಗಾದರೂ ಕಣ್ಣ ಮುಂದೆ ಇರಲಿ ಎಂದು ಸುಮ್ಮನಾದಳು.

(ಬಾ(ಹ)ರವಾಲಾ)

ನಾವಿಗಲ್ಲಿ ಮನೆಯ ಪಕ್ಕದ ಮನೆಯಲ್ಲಿ ಬಾಡಿಗೆಗೆ ಬಂದ ನೀಲಮ್ಮ ಜೀವನೋತ್ಸಾಹದಿಂದ ಕೂಡಿದ ಮಹಿಳೆಯಾಗಿದ್ದಳು. ಮನೆ ಹತ್ತಿರದ ಬೀದಿನಾಯಿಗಳ ಬಗ್ಗೆ ಅವಳ ಕಾಳಜಿ ವಿಶೇಷವಾಗಿತ್ತು. ಅವಳಿಗೊಬ್ಬಳು ನಾವಿ ಸಮಾಜದ ಮಿತಭಾಷಿ ಗೆಳತಿಯಿದ್ದಳು. ‘ಇವಳು ಹೇಳುವುದು, ಅವಳು ಕೇಳುವುದು.’ ಹೀಗೆ ಅವರ ಗೆಳೆತನ ಸಾಗಿತ್ತು.

ಅವನು ಹೋಟೆಲ್‍ನಲ್ಲಿ ‘ಬಾರವಾಲಾ’ ನೌಕರಿ ಮಾಡುವುದಕ್ಕೇ ಯೋಗ್ಯನಾಗಿದ್ದ. ಈ ನೌಕರಿಯಲ್ಲಿ ಓಡಾಟವೊಂದು ಬಿಟ್ಟರೆ ಯಾವುದೇ ತೊಂದರೆ ಇರಲಿಲ್ಲ. ಓಡಾಟ ಅವನಿಗೆ ಇಷ್ಟವೂ ಆಗುತ್ತಿತ್ತು. ಚಹಾ, ಪುರಿ, ದೋಸೆ, ಸಿರಾ, ಉಪ್ಪಿಟ್, ಬೋಂಡಾ, ಇಡ್ಲಿ, ವಡೆ ಮುಂತಾದ ಪದಾರ್ಥಗಳನ್ನು ಆರ್ಡರ್ ಮಾಡಿದವರಿಗೆ ಹೊಟೇಲ್‌ನಿಂದ ತಂದು ಕೊಡುವುದು ಅವನಿಗೆ ಒಂದು ರೀತಿಯ ಖುಷಿಯ ಕೆಲಸವೇ ಆಗಿತ್ತು. ಅನೇಕ ಜನರ ಜೊತೆ ಹೇಳುವುದು, ಕೇಳುವುದು, ಮಾತನಾಡುವುದು ಅವನಿಗೆ ಪ್ರಿಯವಾಗಿದ್ದವು. ಹೋಟೆಲ್ ಊಟ, ರಾತ್ರಿ ಅಲ್ಲೇ ಮಲಗುವುದು ಅವನಿಗೆ ಸೇರುತ್ತಿತ್ತು. ಕುಡಿಯುವ ಮತ್ತು ಬಜಾರಿ ಹೆಂಗಸರ ಚಟ ಇರಬಹುದು ಎಂಬ ಸಂಶಯವೂ ಅಜ್ಜಿಗೆ ಇತ್ತು. ಅದೇನೇ ಇದ್ದರೂ ನನ್ನ ಬಗ್ಗೆ ಬಾಬು ಮಾಮಾಗೆ ಬಹಳ ಪ್ರೀತಿ ಇತ್ತು. ಅಲ್ಲೀಬಾದಿಯಿಂದ ವಿಜಾಪುರಕ್ಕೆ ಬರುವವರೆಗೆ ನಾವು ಜೊತೆಯಲ್ಲೇ ಇದ್ದೆವಲ್ಲ. ಹೀಗಾಗಿ ಭಾವನಾತ್ಮಕ ಸಂಬಂಧವೂ ಬೆಳೆದಿತ್ತು.

ಸರಳಾಯ ಅವರ ಕೆಫೆಲೈಟ್ ಹೋಟೆಲ್‌ನಲ್ಲಿ ಉಪ್ಪಿಟ್ಟು ಬಹಳ ರುಚಿಯಾಗಿರುತ್ತಿತ್ತು. ಬಾಬು ಮಾಮಾ ಅಲ್ಲಿ ಬಾರವಾಲಾ ಆಗಿದ್ದಾಗ ಅಲ್ಲಿಗೆ ಹೋಗುತ್ತಿದ್ದೆ. ಪೂರಿ ತಿನ್ನುವುದಕ್ಕಾಗಿಯೆ ನಾನು ಬಂದದ್ದು ಎಂಬುದು ಅವನಿಗೆ ಗೊತ್ತಾಗುತ್ತಿತ್ತು. ಅದನ್ನೇ ಕೊಡಿಸುತ್ತಿದ್ದ. ಇಂಡಿ ರೋಡಿನಲ್ಲಿದ್ದ ಒಂದು ಬಡ ಮತ್ತು ಕೆಳಮಧ್ಯಮವರ್ಗದ ಗಿರಾಕಿಗಳ ಹೋಟೆಲ್‌ನಲ್ಲಿ ಆತ ಸಪ್ಲೈಯರ್ ಆಗಿದ್ದಾಗ ನಾನು ಅಲ್ಲಿಯೂ ಹೋಗುತ್ತಿದ್ದೆ. ಅಲ್ಲಿಯ ಪಫ್ ಮತ್ತು ಚಿರೋಟಿ ಮುಂತಾದವು ಖುಷಿ ಕೊಡುತ್ತಿದ್ದವು. ಎಲ್ಲ ಕಡೆ ಹೊಟೇಲ್ ಮಾಲೀಕರು ಅವನ ಹೆಸರಿಗೆ ಬಿಲ್ ಹಚ್ಚಿ ಪಗಾರದಲ್ಲಿ ಮುರಿದುಕೊಳ್ಳುತ್ತಿದ್ದರು.

ಗ್ರೀನ್ ಹೊಟೇಲ್ ಷೋಕೇಸ್‌ನಲ್ಲಿ ಎಲ್ಲ ತೆರನಾದ ಸಿಹಿ ತಿಂಡಿಗಳನ್ನು ಇಡುತ್ತಿದ್ದರು. ಅವುಗಳಲ್ಲಿ ನನಗೆ ಬಹಳ ಪ್ರಿಯವಾದದ್ದು ಗುಲಾಬ್‌ ಜಾಮೂನು ಇಟ್ಟ ಗಾಜಿನ ದೊಡ್ಡ ಭರಣಿ. ಟೇಬಲ್ ಟೆನಿಸ್ ಗಾತ್ರದ ಆ ಗುಲಾಬ್‌ ಜಾಮೂನುಗಳು ಕಾಫಿ ಬಣ್ಣದವುಗಳಾಗಿದ್ದು ಸಕ್ಕರೆ ಪಾಕದಲ್ಲಿ ಬಹಳ ಆಕರ್ಷಕವಾಗಿದ್ದವು. ರಸ್ತೆ ಮೇಲೆ ಆ ಷೋಕೇಸ್ ಎದುರಿಗೆ ನಿಂತು ತದೇಕ ಚಿತ್ತದಿಂದ ಆ ಗುಲಾಬ್  ಜಾಮೂನುಗಳ ಗಾಜಿನ ಭರಣಿಯನ್ನೇ ನೋಡುತ್ತಿದ್ದೆ. ಜೀವನದಲ್ಲಿ ಒಮ್ಮೆಯಾದರೂ ಗುಲಾಬ್‌ ಜಾಮೂನು ತಿನ್ನುವ ಬಯಕೆ ಬಹಳವಾಗಿತ್ತು. ಬಾಬು ಮಾಮಾ ಹೋಟೆಲ್ ಕೆಲಸಕ್ಕೆ ಸೇರಿದ ಮೇಲೆ ಆ ಆಸೆ ಈಡೇರಿತು.

ಅವನ ದೊಡ್ಡ ಸಮಸ್ಯೆ ಎಂದರೆ ದಾರಿಹೋಕನಂತೆ ಬದುಕು ಸಾಗಿಸುವುದು. ಒಂದೇ ಕಡೆ ನೆಲೆನಿಲ್ಲುವ ಸ್ವಭಾವ ಅವನದಾಗಿರಲಿಲ್ಲ. ಬೇರೆ ಬೇರೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಕೆಲವೊಂದು ಸಲ ಎಲ್ಲಿಯೂ ಕೆಲಸ ಮಾಡದೆ ಸುಮ್ಮನೆ ತಿರುಗುತ್ತಿದ್ದ. ತನ್ನ ಜೀವನಶೈಲಿಯಿಂದ ಬೇರೆಯವರಿಗೆ ಸಮಸ್ಯೆ ಆಗುವುದೆಂಬ ಪ್ರಜ್ಞೆ ಆತನಿಗಿರಲಿಲ್ಲ. ತನ್ನ ತಾಯಿ (ನನ್ನ ಅಜ್ಜಿ) ತನಗಾಗಿ ಎಷ್ಟು ಯೋಚನೆ ಮಾಡುತ್ತಾಳೆ ಎಂಬುದರ ಬಗ್ಗೆ ಆತನಿಗೆ ಅರಿವು ಇರಲಿಲ್ಲ. ಪರಿಸ್ಥಿತಿಯಿಂದ ಪಾರಾಗಲು ಏನಾದರೊಂದು ಸುಳ್ಳು ಹೇಳುವುದು ಅವನ ಚಾಳಿ ಆಗಿತ್ತು. ವಿಚಿತ್ರವೆಂದರೆ ಅವನಿಗೆ ಸಿಟ್ಟೇ ಬರುತ್ತಿರಲಿಲ್ಲ.

ಅಜ್ಜಿ

ಅಜ್ಜಿಯ ಜೀವನದ ಗುರಿ ಅವನನ್ನು ಸುಧಾರಿಸುವುದೇ ಆಗಿತ್ತು. ಮನಸ್ಸಿನಲ್ಲಿ ಎಷ್ಟೊಂದು ನೋವು ತುಂಬಿಕೊಂಡಿದ್ದರೂ ಎಂದೂ ವ್ಯಕ್ತಪಡಿಸಲಿಲ್ಲ.

ಆ ಕಾಲದಲ್ಲಿ ಸರ್ಕಾರ ಸಕ್ಕರೆ ಮೇಲೆ ನಿರ್ಬಂಧ ಹೇರಿತ್ತು. ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಕಡಿಮೆ ದರದಲ್ಲಿ ಸಕ್ಕರೆ ಸಿಗುತ್ತಿತ್ತು. ನಾವು ಬಡವರು ರೇಷನ್ ಅಂಗಡಿಯಲ್ಲಿ ಸಕ್ಕರೆ ಖರೀದಿಸಿ, ಬಜಾರಲ್ಲಿ ಸಕ್ಕರೆ ಅಂಗಡಿಯಲ್ಲಿ ಹೆಚ್ಚಿನ ಬೆಲೆಗೆ ಮಾರಿ ಬಂದ ಹಣದಿಂದ ಮನೆಗೆ ಬೇಕಾದ ದಿನಸಿ ಖರೀದಿ ಮಾಡುತ್ತಿದ್ದೆವು.

ಶ್ರೀಮಂತರಿಗೆ ಮತ್ತು ಮಧ್ಯಮವರ್ಗದವರಿಗೆ ಸಕ್ಕರೆಯ ಹುಚ್ಚು ಹಿಡಿದಿತ್ತು. ಬಾಬು ಮಾಮಾ ತನ್ನದೇ ರೀತಿಯಲ್ಲಿ ಪ್ಲ್ಯಾನ್ ಮಾಡಿದ. ನಾವು ಮೊದಲಿಗೆ ಇದ್ದ ಮದ್ದಿನಖಣಿ ಓಣಿಯಲ್ಲಿನ ನಮ್ಮ ಪರಿಚಯಸ್ಥರ ಮನೆಗೆ ಹೋಗಿ ‘ನಮಗೆ ಸಕ್ಕರೆ ಬೇಡ, ನಿಮಗೆ ಬೇಕಾದರೆ ತಂದು ಕೊಡುವುದಾಗಿ ತಿಳಿಸುತ್ತಿದ್ದ. ಅವರು ಕೈಚೀಲದೊಂದಿಗೆ ರೇಷನ್ ರೇಟಿಗಿಂತಲೂ ಹೆಚ್ಚಿಗೆ ಹಣ ಕೊಡುತ್ತಿದ್ದರು. ಆ ಮೇಲೆ ಕೈಚೀಲವೂ ಇಲ್ಲ, ಸಕ್ಕರೆಯೂ ಇಲ್ಲ. ಹೀಗೆ ದಿನಕ್ಕೊಬ್ಬರಾದರೂ ನಮ್ಮ ಮನೆ ಹುಡುಕಿಕೊಂಡು ಬರುತ್ತಿದ್ದರು. ಆದರೆ ಆತ ಮಾತ್ರ ಮನೆ ಕಡೆ ತಲೆ ಹಾಕುತ್ತಿರಲಿಲ್ಲ. ಹೀಗೆ ಕೆಲದಿನಗಳವರೆಗೆ ಯಾವುದೇ ಹೋಟೆಲ್ ಕೆಲಸ ಮಾಡದೆ ದಿನ ದೂಡಿದ.

ಇಂಥ ಘಟನೆಗಳು ನನ್ನ ತಂದೆಗೆ ನೋವುಂಟು ಮಾಡುತ್ತಿದ್ದವು. ಆದರೂ ಅವರು ಏನೂ ಹೇಳುತ್ತಿದ್ದಿಲ್ಲ. ತಮ್ಮ ಅತ್ತೆಗೆ (ನನ್ನ ಅಜ್ಜಿಗೆ) ಅವರು ಜೀವನದಲ್ಲಿ ಒಂದು ಶಬ್ದವೂ ಹೇಳಲಿಲ್ಲ. ಅವರಿಬ್ಬರ ಮಧ್ಯದ ಸೂಕ್ಷ್ಮತೆ ಅಗಾಧವಾದುದು. ಅವರು ಅತ್ತೆ ಅಳಿಯ ಆಗಿರದೆ ತಾಯಿ ಮಗನಂತೆ ಇದ್ದರು. ಮನೆಯ ಎಲ್ಲ ವ್ಯವಹಾರ ಮೌನ ಸಹಕಾರದೊಂದಿಗೆ ನಡೆಯುತ್ತಿತ್ತು. ಬಾಳೆಹಣ್ಣು, ಮಾವಿನಕಾಯಿ ಮಾರುವ ಮೂಲಕ ಹಣ ಕೂಡಿಸುತ್ತ, ಹಬ್ಬ ಮುಂತಾದ ಖರ್ಚಿನ ವಿಷಯಗಳನ್ನು ಅಜ್ಜಿ ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದಳು. ದೈನಂದಿನ ಬದುಕಿನ ಬಗ್ಗೆ ತಂದೆ ಯೋಜನೆ ರೂಪಿಸಿದರೆ. ದೊಡ್ಡ ಖರ್ಚುವೆಚ್ಚಗಳ ಬಗ್ಗೆ ಅಜ್ಜಿ ವರ್ಷವಿಡೀ ಹಣ ಕೂಡಿಸುತ್ತ ನಿಭಾಯಿಸುತ್ತಿದ್ದಳು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಪ್ರಜ್ಞೆಯುಳ್ಳವರಿಗೆ ಸಾಲ ಮಾಡುವ ಪ್ರಶ್ನೆಯೆ ಬರುವುದಿಲ್ಲ.

ಅವಿಶ್ರಾಂತ ಬದುಕಿನಿಂದ ಕೂಡಿದ ನಮ್ಮ ಮನೆಯ ಆರ್ಥಿಕ ವ್ಯವಸ್ಥೆ ಕೊರತೆಯಲ್ಲೂ ಸುವ್ಯವಸ್ಥಿತವಾಗಿತ್ತು. ಅದಕ್ಕೆ ತದ್ವಿರುದ್ಧವಾಗಿ ಬಾಬು ಮಾಮಾನ ಆರ್ಥಿಕ ವ್ಯವಸ್ಥೆ ಇತ್ತು. ಅವನ ಮದುವೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತು. ಅವನ ಮದುವೆಯ ಖರ್ಚನ್ನು ನಿಭಾಯಿಸುವ ಶಕ್ತಿ ನಮಗೆ ಇದ್ದಿದ್ದಿಲ್ಲ. ಹಣ ಕೂಡಿಸುವುದು ಅವನಿಗೆ ಗೊತ್ತಿರಲಿಲ್ಲ. ಅವನ ಮದುವೆಯನ್ನು ಅದು ಹೇಗೆ ಹಣ ಸಂಗ್ರಹಿಸಿ ಮಾಡಿದರೋ ಗೊತ್ತಿಲ್ಲ. ನಮ್ಮಂಥ ಕಡುಬಡವರ ಮನೆಯ ಸುಂದರ ಹುಡುಗಿ ಅವನ ಹೆಂಡತಿಯಾಗಿ ಮನೆ ಸೇರಿದಳು. ಮನೆಯಲ್ಲಿ ಮಾರಲು ಒಂದು ಗುಂಜಿ ಬಂಗಾರ ಕೂಡ ಇರಲಿಲ್ಲ. (ಅದಾವುದೋ ಕಾಲದ ಒಂದು ರುಳಿ ಮಾತ್ರ ಇತ್ತು. ಆ ಬೆಳ್ಳಿಯ ವಸ್ತುವನ್ನು ಮಾತ್ರ ಅದೇಕೋ ಮಾರಲಿಲ್ಲ.)

ಈ ಮದುವೆ ವಿಚಾರದಲ್ಲಿ ನನ್ನ ತಂದೆಗೆ ಒಂದು ರೀತಿಯ ಸಂತೃಪ್ತಿ ಇತ್ತು. ನನ್ನ ಅಜ್ಜಿಯ ಋಣ ತೀರಿಸಿದ ಸಂತೋಷ ಇದ್ದಿರಬೇಕು.
ಆಗ ಬೇಸಿಗೆ ಕಾಲ. ನಾವೆಲ್ಲ ಅಂಗಳದಲ್ಲಿ ಮಲಗುತ್ತಿದ್ದೆವು. ಅಮ್ಮ ಅಜ್ಜಿ ಮತ್ತು ತಂಗಿ ಅಂಗಡಿಯ ಮುಂಗಟ್ಟಿನಲ್ಲಿ ಮಲಗಲು ಶುರು ಮಾಡಿದರು. ನವದಂಪತಿ ಮನೆಯೊಳಗೆ ಮಲಗುತ್ತಿದ್ದರು. ಮರುದಿನವೇ ರಂಪಾಟ ಶುರುವಾಯಿತು. ಅವನ ಹೆಂಡತಿ ಅಳುತ್ತಿದ್ದಳು. ನನ್ನ ತಾಯಿ ಎಷ್ಟು ಕೇಳಿದರೂ ಹೇಳಲಿಲ್ಲ. ಅಕ್ಕಪಕ್ಕದ ಒಂದಿಬ್ಬರು ಹೆಣ್ಣುಮಕ್ಕಳನ್ನು ಕರೆಸಿದಳು. ಅವರು ರಮಿಸಿ ಕೇಳಿದರು. ರಾತ್ರಿ ಗಂಡ ರವಿಕೆ ತೆಗೆಯಲು ಒತ್ತಾಯಿಸಿದ ಎಂದು ಹೇಳಿ ಮತ್ತೆ ಅಳತೊಡಗಿದಳು. ಹುಚ್ಚಿ ಅಳಬೇಡ ಎಂದು ಅವರು ಹೇಳಿ ನಗುತ್ತ ಹೊರಟು ಹೋದರು.

ಸೂಫಿಯೊಬ್ಬರ ದರ್ಗಾ (ಸಮಾಧಿ ಸ್ಥಳ)

ಬಾಬು ಮಾಮಾ ನಾವಿಗಲ್ಲಿಯಿಂದ ಸ್ವಲ್ಪದೂರದಲ್ಲಿ ಮನೆ ಬಾಡಿಗೆ ಹಿಡಿದಿರುವುದಾಗಿ ಒಂದು ದಿನ ತಿಳಿಸಿದ. ಮದುವೆಯಾಗಿ ಎರಡು ತಿಂಗಳೂ ಕಳೆದಿರಲಿಲ್ಲ. ಕೈಯಲ್ಲಿ ಚಿಕ್ಕಾಸು ಇಲ್ಲದವ ಅದು ಹೇಗೆ ಮನೆ ಮಾಡಿದ ಎಂದು ಮನೆಯಲ್ಲಿದ್ದವರೆಲ್ಲ ಗಾಬರಿಗೊಂಡರು. ಸ್ವಂತ ಕಾಲ ಮೇಲೆ ನಿಲ್ಲುವ ಬುದ್ಧಿ ಬಂದು ಚೆನ್ನಾಗಿ ಸಂಸಾರ ಮಾಡಬಹುದು ಎಂಬ ಭರವಸೆಯಿಂದ ಮನೆಯವರು ಒಂದಿಷ್ಟು ಹೊಸ ಮನೆಗೆ ಬೇಕಾದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟರು.

ಆ ಕಾಲದಲ್ಲಿ ಮನೆಗೆ ಅಡ್ವಾನ್ಸ್ ಕೊಡುವ ಪದ್ಧತಿ ಇರಲಿಲ್ಲ. ತಿಂಗಳು ಮುಗಿದ ಮೇಲೆ ಬಾಡಿಗೆ ಕೊಡುವ ಪದ್ಧತಿ ಇತ್ತು. ಸಹಜ ಸುಳ್ಳುಗಾರನಾಗಿದ್ದ ಆತ ನಂಬಿಸುವಲ್ಲಿ ನಿಸ್ಸೀಮನಾಗಿದ್ದ. ಅಂತೂ ಅವರು ಹೊಸ ಮನೆಯಲ್ಲಿ ಸಂಸಾರ ಹೂಡಿದರು. ಬರುವ ಒಂದನೇ ತಾರೀಖಿಗೆ ಬಾಡಿಗೆ ಕೊಡುವುದಾಗಿ ಮನೆಯ ಮಾಲೀಕರಿಗೆ ನಂಬಿಸಿದ್ದ. ಅದೇ ರೀತಿ ಹಾಲಿನವರಿಗೆ ಮತ್ತು ಕಿರಾಣಿ ಅಂಗಡಿಯವರಿಗೆ ತಿಳಿಸಿದ್ದ. ಆದರೆ ಒಂದನೇ ತಾರೀಖು ಬಂದ ದಿನ ಆತ ಏನೇನೋ ಸಬೂಬು ಹೇಳುತ್ತ ಕೆಲದಿನಗಳನ್ನು ಕಳೆದ. ಹಾಲಿನವರು, ಕಿರಾಣಿ ಅಂಗಡಿಯವರು, ಮನೆ ಮಾಲಿಕರು ಕಿರಿಕಿರಿ ಮಾಡುತ್ತಿದ್ದರು. ಹಾಗೂ ಹೀಗೂ ಅವರನ್ನು ನಂಬಿಸುತ್ತ ಕೆಲ ದಿನಗಳನ್ನು ದೂಡಿದ. ಪರಿಸ್ಥಿತಿ ವಿಪರೀತಕ್ಕೆ ಹೋದ ನಂತರ ಕೊನೆಗೊಂದು ದಿನ ಮನೆ ಬಿಟ್ಟು ಹೋದವನು ಎಲ್ಲಿಗೆ ಹೋದನೋ ಗೊತ್ತಾಗಲಿಲ್ಲ.

ಸೂಫಿ

ಅವನ ಹೆಂಡತಿ ಒಂದೆರಡು ತಿಂಗಳು ನಮ್ಮ ಮನೆಯಲ್ಲಿದ್ದು ಕಾಯ್ದಳು. ಆತನು ಬರುವ ಲಕ್ಷಣಗಳು ಕಾಣಲಿಲ್ಲ. ಕೊನೆಗೆ ಅವಳು ತವರುಮನೆಗೆ ಹೋದಳು. ಮನೆಯಲ್ಲಿನ ವಿಪರೀತ ಬಡತನ ಆ ನಿರಕ್ಷರಿ ಹೆಣ್ಣುಮಗಳಿಗೆ ಮುಂಬೈ ದಾರಿ ತೋರಿಸಿತು! ಬಹಳ ದಿನಗಳ ನಂತರ ಈ ವಿಚಾರ ನಮ್ಮ ಮನೆಯವರಿಗೆ ಗೊತ್ತಾಯಿತು. ಆ ಮುಗ್ಧ ಹುಡುಗಿಯ ಬದುಕು ಹೀಗಾಗಿದ್ದಕ್ಕೆ ಮನೆಯವರೆಲ್ಲ ಮರುಗಿದರು. ನನ್ನ ಅಜ್ಜಿ ಇಷ್ಟೆಲ್ಲ ದುಃಖ ಮತ್ತು ಹತಾಶೆಯನ್ನು ಅದು ಹೇಗೆ ಸಹಿಸಿಕೊಂಡಿದ್ದಳೋ ಗೊತ್ತಿಲ್ಲ.

ಬಹಳ ವರ್ಷಗಳ ನಂತರ ಬಾಬು ಮಾಮಾ ಫಕೀರನಾಗಿ ಫಕೀರರ ಗುಂಪಿನಲ್ಲಿ ಅಜ್ಮೇರ್‌ನಲ್ಲಿ ಇದ್ದಾನೆಂಬುದು ತಿಳಿದುಬಂದಿತು. ನಮ್ಮ ಮನೆಯವರಿಗೆ ಗೊತ್ತಿದ್ದ ಯಾರೋ ಅಜ್ಮೇರ್‍ಗೆ ಹೋದಾಗ ಅವನನ್ನು ಕಂಡು ಮಾತನಾಡಿಸಿದ್ದರು. ಊರಿಗೆ ಬಂದ ನಂತರ ನಮ್ಮ ಮನೆಗೆ ಸುದ್ದಿ ತಲುಪಿಸಿದರು. ಮತ್ತೆ ಕೆಲವರ್ಷಗಳ ನಂತರ ಆತನ ಸಾವಿನ ಸುದ್ದಿ ಬಂದಿತು. ಆ ಸುದ್ದಿಯನ್ನು ಯಾರು ತಂದರೋ ನೆನಪಿಲ್ಲ.

ಅಜ್ಜಿ ಎಲ್ಲ ಕೇಳಿಯೂ ಕೇಳದಂತೆ ಇದ್ದಳು. ಈ ಸುದ್ದಿ ತಲುಪಿದ ಕೆಲ ತಿಂಗಳುಗಳ ನಂತರ ಅಜ್ಮೇರ್‍ನಿಂದ ಒಬ್ಬ ಸೂಫಿ ಬಂದಿದ್ದರು. ಬಹಳ ಜನ ಅವರ ಮುರೀದ್ (ಅನುಯಾಯಿ) ಆದರು. ನನ್ನ ಅಜ್ಜಿ ಕೂಡ ಅವರಿದ್ದಲ್ಲಿಗೆ ಹೋಗಿ ಮುರೀದ್ ಆದಳು. ಅದಕ್ಕಾಗಿ ಬೇಕಾದ ಎಲ್ಲ ವಸ್ತುಗಳನ್ನು ಮತ್ತು ಸ್ವಲ್ಪ ಹಣ ಒಯ್ದಿದ್ದಳು. ಬದುಕು ಎಂದಿನಂತೆ ಮುಂದುವರಿಯಿತು.

(ಚಿತ್ರಗಳು: ಸುನೀಲಕುಮಾರ ಸುಧಾಕರ)