ಗೂಡು ಕಟ್ಟುವ ಆಟ

ದೌಡು ಕಟ್ಟು ನೀ,
ಗೂಡು ಬಿಟ್ಟು ದಿನಗಳಾದವು, ಕೇಳುತ್ತಾಳೆ ಮಗಳು.
ಹಕ್ಕಿಯಾಗಬೇಕು, ಹಾರಬೇಕು
ರೆಕ್ಕೆ ಮಾಡಿಕೊಂಡು ನಿನ್ನ.

ಗಾಳಿ ಮೆಟ್ಟುವ ನಮ್ಮಿಬ್ಬರ ಕಸುವಿಗೆ
ಆ ಆಕಾಶ ಸಾಕ್ಷಿಯಾಗಬೇಕು ಅಪ್ಪ.

ಈ ಗಾಳಿ ಎಷ್ಟೊಂದು ಕಪಟಿ ಅಲ್ಲವೇ!
ಒಳಗೊಳಗೆ ನಗುತ, ತೂಗುತ
ಇಬ್ಬರ ಉಸಿರನು ದೂರಾಗಿಸಿದೆ
ಮೊಲೆ ಹೀರುವಾಗಂತೂ ನಿನ್ನ ಹೆಜ್ಜೆಸಪ್ಪಳಕೆ
ಮೇಲಿಂದಮೇಲೆ ಕಣ್ತೆರೆಯುವಂತೆ ಮಾಡುತ್ತದೆ

ಮೊಲೆಯ ಭಾರವೋ! ಅದು ಅಷ್ಟೇ
ತೇಲಿ-ವಾಲಿ ಗೇಲಿಮಾಡುತದೆ ಅಪ್ಪ.
“ಬಹುಶಃ ನಿನ್ನ ಯಾವ ಅಪ್ಪುಗೆಯ
ಸೋಲಿರಬಹುದು ಭಾರಕೆ?”
ರಕುತ, ಶಕುತಿ, ಪ್ರೀತಿ ಬೆರೆತ ಭಾರ ಎದೆಯ ಹಾಲು
ಬರಪೂರ ಉಣಿಸುವ ರಾಣಿಯಿವಳು,
ಮತ್ತೇ ನಿನ್ನ ಪಾಲು?
ಅವಳು ಪಿಳ್ಳಂಗೋವಿ ಊದುವಳು
ನಾನು ಕರುಳ ಹಾಡು ಹಾಡುವಳು.
ಮೊಲೆಯೋ? ಭಾರವೇ ಭಾರ, ತೂಕದ ಹಂಗಿಲ್ಲವದಕೆ ಅಪ್ಪ.
ಆಕಾಶಕಾರುವ ಆಸೆಗೆ ರೆಕ್ಕೆಯಾಗು ಬಾ.
“ರೆಕ್ಕೆಗಳೆಂದರೆ ನನಗೇನೋ ಭರವಸೆ”
ನೆಲದ ಗುತ್ತಿಯಿಂದ ಮುಕ್ತವಾಗಿಸುವ ಭರವಸೆ.
ನಭದಲೊಂದು ಗೂಡು ಕಟ್ಟುವ ಭರವಸೆ.
ನಭವೆಂದರೆ ನೆಲದಂತಲ್ಲ ಅಪ್ಪ
ಅದೊಂದು ಏಕತಾನತೆಯ ಶೂನ್ಯವೃತ್ತ.
ಅಳುವ, ನಗುವ, ಹೊಳೆವ ಆಟಕೆ
ಅದು ಮತ-ಪಂಥಗಳ ಭಿನ್ನ ಕಾಯವಿರದ ಶೂನ್ಯ.

ದೌಡು ಕಟ್ಟು ನೀ,
ಕಾಯುತ್ತಿದ್ದೇನೆ, ಬಿಗಿ ಅಪ್ಪುಗೆಗಾಗಿ
ರೆಕ್ಕೆಗಳ ಬೆಚ್ಚನೆ ತೆಕ್ಕೆಗಾಗಿ.
ಗಾಳಿ ಮೆಟ್ಟಿ, ಗೂಡುಕಟ್ಟುವ ಆಟಕೆ ರುಜುವಾಗೋಣ ಬಾ ಅಪ್ಪ

ನಾಗರಾಜ ಪೂಜಾರ ಮೂಲತಃ  ಹೂವಿನಹಡಗಲಿಯ ಮಾಗಳದವರು.
ವೃತ್ತಿಯಿಂದ ಶಿಕ್ಷರಾಗಿದ್ದು ಪ್ರಸ್ತುತ ದೇವದುರ್ಗದ ಸೋಮನಮರಡಿ ಪ್ರೌಢ ಶಾಲೆಯಲ್ಲಿ ಕಾರ್ಯವನಿರ್ವಹಿಸುತ್ತಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದು, ಕವಿತೆ ನೆಚ್ಚಿನ ಸಾಹಿತ್ಯ ಪ್ರಕಾರ.
‘ಅಪ್ಪನ ಗಿಲಾಸು’ ಎಂಬ ಇವರ ಕವನ ಸಂಕಲನ ಸಧ್ಯದಲ್ಲೇ ಪ್ರಕಟವಾಗಲಿದೆ.