“ಮಾಧವ ಚಿಕ್ಕವನಿರುವುದರಿಂದ ನಾವು ಉಳಿದ ಹೋಟೆಲ್ಲಿನವರೂ ಕೂಡ ತಾವಾಗಿಯೇ ನಮ್ಮಬಳಿ ನೀವು ತಡವಾಗಿ ಚೆಕ್ ಔಟ್ ಮಾಡಿ ಎಂದರು. ನಾನು ಚೆಕ್ ಔಟ್ ಮಾಡಿ ಹೊರಟಾಗ ಒಮ್ಮೆಲೇ ಜೋರಾಗಿ ಆಲಿಕಲ್ಲು ಮಳೆ ಪ್ರಾರಂಭವಾಯಿತು. ಹೋಟೆಲ್ ನವರು ಅವರಾಗಿಯೇ ಮುಂದೆ ಬಂದು ನಮ್ಮಬಳಿ ‘ಈಗ ಮಗುವನ್ನು ಕರೆದುಕೊಂಡು ಹೊರಗೆ ಹೋಗಬೇಡಿ, ಇಲ್ಲಿಯೇಇರಿ’ ಎಂದು ನಮ್ಮನ್ನು ಅಲ್ಲಿಯೇ ಇರಿಸಿಕೊಂಡರು. ಗ್ರೀಸ್ ಗೂ ಬೇರೆ ದೇಶಕ್ಕೂ ಕಂಡ ವ್ಯತ್ಯಾಸವೆಂದರೆ, ಬೇರೆ ದೇಶದಲ್ಲಾಗಿದ್ದರೆ ನಾವಾಗಿಯೇ ‘ನಾವಿಲ್ಲಿ ಮಳೆ ನಿಲ್ಲುವತನಕ ಇರಬಹುದಾ’ ಎಂದು ಕೇಳಿದರೆ ಖಂಡಿತ ಇಲ್ಲವೆನ್ನುತ್ತಿರಲಿಲ್ಲ, ಆದರೆ ಗ್ರೀಸ್ ನಲ್ಲಿ ಅವರಾಗಿಯೇ ಸಹಾಯಹಸ್ತ ಚಾಚುವುದನ್ನು ನೋಡಿ ಭಾರತೀಯರಂತೆಯೇ ಇವರೂ ಸಹ ಅನಿಸಿತು.” 
ಸೀಮಾ ಎಸ್ ಹೆಗಡೆ  ಅಂಕಣ.

ಕೆಲ ತಿಂಗಳುಗಳ ಹಿಂದೆ ನಾವು ಗ್ರೀಸ್ ದೇಶಕ್ಕೆ ಗೆ ಭೇಟಿಯಿತ್ತಿದ್ದೆವು. ಗ್ರೀಸ್ ಹಲವಾರು ದ್ವೀಪಗಳನ್ನು ಹೊಂದಿರುವ ಸುಂದರವಾದ ದೇಶ. ನೆದರ್ಲ್ಯಾಂಡ್ಸ್ ನ ಚಳಿ ಅಭ್ಯಾಸವಾಗಿದ್ದ ನಮಗೆ ಗ್ರೀಸ್ ನಲ್ಲಿ ವಿಮಾನದಿಂದ ಇಳಿದ ತಕ್ಷಣವೇ ಹಿತವೆನಿಸಿದ್ದು ಅಲ್ಲಿಯ ಬೆಚ್ಚನೆಯ ಮೆಡಿಟರೇನಿಯನ್ ಹವಾಮಾನ. ಅದನ್ನು ನಾವು ಮೊದಲೇ ಊಹಿಸಿದ್ದೆವು. ಆದರೆ ಮುಂದೆ ನಡೆದಿದ್ದೆಲ್ಲ ನಮ್ಮ ಊಹೆಗೆ ಮೀರಿದ್ದು!

ಮೊದಲೇ ನಾವು ಕಾಯ್ದಿರಿಸಿದ್ದ ಟ್ಯಾಕ್ಸಿ ಚಾಲಕ, ನಮ್ಮ ಟೂರ್ ಗೈಡ್ ವಿಮಾನ ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿದ್ದರು. ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾ ಅಲ್ಲೇ ಅಂಗಡಿಯಿಂದ ಎರಡು ನೀರಿನ ಬಾಟಲಿಗಳನ್ನು ಕೊಂಡು ನಮ್ಮ ಕೈಗಿತ್ತರು. ನಾನು, ನನ್ನ ಗಂಡ ರಾಜೀವ ಆಶ್ಚರ್ಯದಿಂದ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು. ಯುರೋಪಿನ ಸುಮಾರು ಇಪ್ಪತೈದಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿದ್ದೇವೆ, ಆದರೆ ಇದೇ ಮೊದಲ ಬಾರಿ ಯಾರೋ ಬರಮಾಡಿಕೊಂಡವರು ನಮಗೆ ನೀರು ಕೊಟ್ಟಿದ್ದು! ಉಳಿದೆಲ್ಲಾ ದೇಶಗಳಲ್ಲಿ ನೀರನ್ನು ಕೇಳಿ ಕೇಳಿ ಪಡೆಯಬೇಕು. ಗ್ರೀಸ್ ನಲ್ಲಿ ಮೆಡಿಟರೇನಿಯನ್ ಹವಾಗುಣವಾದ್ದರಿಂದ ಈ ರೀತಿ ಮಾಡುತ್ತಾರೆ ಎಂದುಕೊಳ್ಳುವುದಕ್ಕೆ ಆಸ್ಪದವಿರಲಿಲ್ಲ. ಏಕೆಂದರೆ ಆಗಲೇ ಇಟಲಿ, ಪೋರ್ಚುಗಲ್, ಸ್ಪೇನ್ ಗಳಲ್ಲಿ ಸುತ್ತಾಡಿದ್ದೇವೆ, ಆದರೆ ನೀರಿನ ವಿಚಾರದಲ್ಲಿ ಅವರೆಲ್ಲರೂ ಉತ್ತರ ಯೂರೋಪಿಯನ್ನರ ತರವೇ ವರ್ತಿಸಿದ್ದರು. ಆದ್ದರಿಂದ ಇದು ವಿಶೇಷವೆನಿಸಿತು.

ಕಾರಿನಲ್ಲಿ ಕುಳಿತ ನಂತರ ಅವರು ತಮ್ಮ ಪೂರ್ತಿ ಪರಿಚಯ ಹೇಳಿಕೊಂಡರು. ಅವರ ಹೆಸರು ದೆಮೊಸ್ತೆನಿಸ್, ಆದರೆ ಅವರನ್ನು ಎಲ್ಲರೂ ಕರೆಯುತ್ತಿದ್ದುದು ಮಾಕಿಸ್ ಎಂದು. ಅವರು ಹದಿನೇಳನೆಯ ವರ್ಷದವರಿದ್ದಾಗ ಅವರ ಗೆಳೆಯರು ಅವರನ್ನು ಮಾಕೀಸ್ ಎಂದು ಕರೆಯಲು ಪ್ರಾರಂಭಿಸಿದರಂತೆ, ನಂತರ ಅದೇ ಶಾಶ್ವತವಾಯಿತಂತೆ. ಗ್ರೀಸ್ ನಲ್ಲಿ ಈ ರೀತಿ ಆಗುವುದು ತುಂಬಾ ಸಾಮಾನ್ಯವಂತೆ.

ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾ ಅಲ್ಲೇ ಅಂಗಡಿಯಿಂದ ಎರಡು ನೀರಿನ ಬಾಟಲಿಗಳನ್ನು ಕೊಂಡು ನಮ್ಮ ಕೈಗಿತ್ತರು. ನಾನು, ನನ್ನ ಗಂಡ ರಾಜೀವ ಆಶ್ಚರ್ಯದಿಂದ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು. ಯುರೋಪಿನ ಸುಮಾರು ಇಪ್ಪತೈದಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿದ್ದೇವೆ, ಆದರೆ ಇದೇ ಮೊದಲ ಬಾರಿ ಯಾರೋ ಬರಮಾಡಿಕೊಂಡವರು ನಮಗೆ ನೀರು ಕೊಟ್ಟಿದ್ದು! ಉಳಿದೆಲ್ಲಾ ದೇಶಗಳಲ್ಲಿ ನೀರನ್ನು ಕೇಳಿ ಕೇಳಿ ಪಡೆಯಬೇಕು.

(ಬೇಯಿಸಿದ ಕಾಳಿನ ಪಲ್ಯ)

ಮಧ್ಯಾಹ್ನವಾಗಿತ್ತು. ನೀವು ಊಟ ಮಾಡಬೇಕಲ್ಲಾ ಎಂದರು ಮಾಕಿಸ್. ರಾಜೀವ ನನ್ನ ಮುಖ ನೋಡಿದರು -ನೀನೇ ವಿವರಣೆಕೊಡು ಎನ್ನುವ ಅರ್ಥದಲ್ಲಿ. ನಾನು ಇವರಿಗೆ ಹೇಗೆ ವಿವರಿಸಬೇಕು ಎಂದು ಹಿಂಜರಿಯುತ್ತಾ ‘ನಾವು ಸಸ್ಯಾಹಾರಿಗಳು… ನಾವು ತಿನ್ನುವಂಥದು ಏನಾದರೂ ಸಿಗಬಹುದಾ…’ ಎಂದು ರಾಗ ಎಳೆದೆ. ಹಲವಾರು ಬಾರಿ ಯುರೋಪಿಯನ್ನರಿಗೆ ಸಸ್ಯಾಹಾರಿಗಳು ಎಂದರೆ ಯಾರು ಎಂಬುದನ್ನು ವಿವರಿಸಿ ಅರ್ಥಮಾಡಿಸ ಬೇಕಾಗುತ್ತದೆ. ಈಗೀಗ vegetarianism, veganism ಹೆಚ್ಚಾಗುತ್ತಿರುವುದರಿಂದ ನನ್ನ ಕೆಲಸ ಸ್ವಲ್ಪ ಸುಲಭವಾಗುತ್ತಿದೆ! ಆದರೆ ಹಲವಾರು ಬಾರಿ ಹೋದಲ್ಲೆಲ್ಲಾ ಹೋಟೆಲ್ ಗಳಲ್ಲಿ ನಾವು ತಿನ್ನುವಂಥದು ಸಿಗದಿರುವುದರಿಂದ ಸೂಪರ್ ಮಾರ್ಕೆಟ್ಟಿಗೆ ಹೋಗಿ ಬ್ರೆಡ್, ಬೆಣ್ಣೆ, ಹಣ್ಣು ಮೊಸರು ಕೊಂಡು ತಿಂದುಬಿಡುತ್ತೇವೆ. ಇಲ್ಲೂ ಕೂಡ ಹಾಗೆಯೆ ಮಾಡಬೇಕಾಗುತ್ತದೆ ಎಂಬ ನಿರೀಕ್ಷೆಯಲ್ಲಿ ‘ಎಲ್ಲಾದರೂ ಸೂಪರ್ ಮಾರ್ಕೆಟ್ ಸಿಕ್ಕರೆ… ‘ ಎನ್ನುತ್ತಿದ್ದ ನನ್ನ ವಾಕ್ಯವನ್ನು ಮಾಕಿಸ್ ಪೂರ್ಣಗೊಳಿಸಲು ಬಿಡದೇ ‘ಸಸ್ಯಾಹಾರಿಗಳಾದರೇನಾಯಿತು, ನೀವೂ ಊಟ ಮಾಡಬೇಕಲ್ಲಾ’ ಎಂದರು. ಮುಂದುವರೆಸಿ, ‘ಗ್ರೀಸ್ ನಲ್ಲಿ ಸಿಗುವಷ್ಟು ಸಸ್ಯಾಹಾರಿ ಊಟ-ತಿಂಡಿ ನಿಮಗೆ ಯೂರೋಪಿನಲ್ಲೆಲ್ಲೂ ಸಿಗುವುದಿಲ್ಲ’ ಎಂದರು. ಮಾಂಸಾಹಾರ ಸೇವಿಸುವ ಗ್ರೀಕರು ಇಂದಿಗೂ ಕೂಡ ವಾರದಲ್ಲಿ ಕೆಲವು ದಿನ (ಅವರ ಯಾವುದೋ ದೇವರ ವಾರಗಳಂದು) ಮಾಂಸಾಹಾರ ಸೇವಿಸುವುದಿಲ್ಲವಂತೆ. ಇದು ಹಳೆಯ ತಲೆಮಾರಿನ ಜನರಲ್ಲಿ ಇವತ್ತೂ ಚಾಲ್ತಿಯಲ್ಲಿದೆಯಂತೆ, ಆದರೆ ಇಂದಿನ ತಲೆಮಾರಿನ ಜನರು ಇದನ್ನು ಪಾಲಿಸುವುದಿಲ್ಲವಂತೆ. ಭಾರತೀಯ ಪದ್ಧತಿಗೆ ಎಷ್ಟು ಸಾಮ್ಯ ಅನಿಸಿತು. ಮಾಕಿಸ್ ನಮಗೆ ಹಲವಾರು ತಿನಿಸುಗಳ ಬಗ್ಗೆ ಚುಟುಕು ಮಾಹಿತಿಕೊಟ್ಟರು. ಅನ್ನತುಂಬಿ ಬೇಯಿಸಿದ ಟೊಮೇಟೊ (stuffed tomato) ಅವರ ಪ್ರಮುಖ ಸಸ್ಯಾಹಾರಿ ಅಡುಗೆಗಳಲ್ಲೊಂದಂತೆ. ನೀವೇ ಅನುಭವಿಸಿ ನೋಡಿ ಎಂದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರು.

(ಅಥೆನ್ಸ್ ನಲ್ಲಿನ ಅಥೆನಾ ದೇವತೆಯ ದೇವಾಲಯ)

ನಾವು ಉಪಹಾರ ಗೃಹವೊಂದನ್ನು ಹೊಕ್ಕು ಒಂದೆಡೆ ಕುಳಿತೆವು. ವೇಟ್ರೆಸ್ ಬಂದವಳೇ ಹೆಲೋ ಎನ್ನುತ್ತಾ ನೀರು ತಂದಿಟ್ಟಳು! ಇದು ನಮ್ಮಲ್ಲಿಯಂತೆಯೇ ಗ್ರೀಕರ ಸಂಸ್ಕೃತಿ ಎನಿಸಿತು. ಪುನಃ ಒಳಹೋಗಿ ಬಂದು ನಮ್ಮ ಮೂರು ವರ್ಷದ ಮಗ ಮಾಧವನ ಕೈಗೆ ಕಿತ್ತಳೆ ಹಣ್ಣೊಂದನ್ನು ಇತ್ತಳು! ಪುನಃ ಆಶ್ಚರ್ಯ! ಇಲ್ಲವಾದರೆ ಯುರೋಪ್ ನಲ್ಲಿ ಇಂಥ ಸನ್ನಿವೇಶಗಳನ್ನು ಊಹಿಸಲೇಬೇಡಿ. ಪುಕ್ಕಟೆಯಂತೂ ಏನೂ ಸಿಗಲಾರದು! ಮೆನು ಮೇಲೆ ಕಣ್ಣಾಡಿಸಿದೆವು; ನಂಬಲಸಾಧ್ಯ! ಎಷ್ಟೊಂದು ರುಚಿಕರವಾದ ಸಸ್ಯಾಹಾರದ ಆಯ್ಕೆಗಳು! ಒಂದೆರಡನ್ನು ಆರ್ಡರ್ ಮಾಡಿದೆವು. ನಮ್ಮದಿನ್ನೇನು ತಿಂದು ಮುಗಿಯುತ್ತಿದ್ದಂತೆಯೇ ಕಾಂಪ್ಲಿಮೆಂಟರಿ ಐಸ್ ಕ್ರೀಂ ಎನ್ನುತ್ತಾ ಮೂರು ಪುಟ್ಟ ಐಸ್ ಕ್ರೀಂ ತಂದಿಟ್ಟಳು. ಬಿಲ್ ಗೆ ಹಣಕೊಟ್ಟು ಬರುವಾಗ ನಾವು ‘ಊಟ ತುಂಬಾ ಚೆನ್ನಾಗಿತ್ತು’ ಅಂತ ಅವರಿಗೆ ಹೇಳಿ ಹೊರಬಿದ್ದೆವು. ಪುನಃ ಕಾರಿನಲ್ಲಿ ಕುಳಿತು ಇದನ್ನೆಲ್ಲಾ ಆಶ್ಚರ್ಯದಿಂದ ಮಾಕಿಸ್ ಗೆ ವಿವರಿಸಿದೆವು. ಅವರಿಗೆ ಆಶ್ಚರ್ಯವೇನೂ ಆಗಲಿಲ್ಲ. ‘ಇದು ತೀರಾ ಸಾಮಾನ್ಯ’ ಎಂದರು. ನಾವು ‘ಗ್ರೀಸ್ ದೇಶ ಆರ್ಥಿಕವಾಗಿ ಕಷ್ಟದಲ್ಲಿದೆ, ಜನರು ಹಣಕಾಸಿನ ತೊಂದರೆಯಲ್ಲಿದ್ದಾರಲ್ಲಾ, ಆದರೂ ಏಕೆ ಪುಕ್ಕಟೆಯಾಗಿ ಎಲ್ಲವನ್ನೂ ಕೊಡುತ್ತಾರೆ’ ಎಂದೆವು. ಅದಕ್ಕವರು ‘ಹಣಕಾಸಿನ ತೊಂದರೆಗೂ ಅತಿಥಿ ಸತ್ಕಾರಕ್ಕೂ ಸಂಬಂಧವೇ ಇಲ್ಲ’ ಎಂದುಬಿಟ್ಟರು. ಅವರ ಆ ಮಾತು ನಮ್ಮನ್ನು ಯೋಚಿಸುವಂತೆ ಮಾಡಿತು. ಮುಂದಿನ ಎರಡು-ಮೂರು ದಿನಗಳಲ್ಲಿ ಹಲವಾರು ಬಗೆಯ ಸಸ್ಯಾಹಾರಿ ಊಟದ ರುಚಿ ನೋಡಿದೆವು, ಹೋದಲ್ಲೆಲ್ಲಾ ಅದೇ ರೀತಿಯ ಆತಿಥ್ಯ.

ನಾವು ‘ಗ್ರೀಸ್ ದೇಶ ಆರ್ಥಿಕವಾಗಿ ಕಷ್ಟದಲ್ಲಿದೆ, ಜನರು ಹಣಕಾಸಿನ ತೊಂದರೆಯಲ್ಲಿದ್ದಾರಲ್ಲಾ, ಆದರೂ ಏಕೆ ಪುಕ್ಕಟೆಯಾಗಿ ಎಲ್ಲವನ್ನೂ ಕೊಡುತ್ತಾರೆ’ ಎಂದೆವು. ಅದಕ್ಕವರು ‘ಹಣಕಾಸಿನ ತೊಂದರೆಗೂ ಅತಿಥಿ ಸತ್ಕಾರಕ್ಕೂ ಸಂಬಂಧವೇ ಇಲ್ಲ’ ಎಂದುಬಿಟ್ಟರು. ಅವರ ಆ ಮಾತು ನಮ್ಮನ್ನು ಯೋಚಿಸುವಂತೆ ಮಾಡಿತು.

ನಾವು ಮಾಕಿಸ್ ಜೊತೆ ಎರಡು ದಿನ ಪೂರ್ತಿ ತುಂಬಾ ಸುತ್ತಾಡಿದೆವು. ಎಷ್ಟೊಂದು ವಿಷಯಗಳನ್ನು ಚರ್ಚಿಸಿದೆವು. ಅವರು ನಮಗೆ ಗ್ರೀಕ್ ಪುರಾಣಗಳ ಬಗ್ಗೆ ಹಲವಾರು ವಿಷಯಗಳನ್ನು ವಿವರಿಸಿದರು. ಅವರ ಒಬ್ಬ ಸ್ನೇಹಿತ ಗ್ರೀಸ್ ನಲ್ಲೇ  ನೆಲೆಸಿರುವ ಭಾರತೀಯರಂತೆ. ಹಾಗಾಗಿ ಅವರಿಗೆ ನಮ್ಮ ಪುರಾಣಗಳ ಬಗೆಗಿನ ಜ್ಞಾನವೂ ಇತ್ತು. ‘ಗ್ರೀಕ್ ಮತ್ತು ಹಿಂದೂ ಪುರಾಣಗಳಲ್ಲಿ ಎಷ್ಟೊಂದು ಸಾಮ್ಯತೆ ಇದೆ ಅಲ್ಲವಾ’ಎಂದರು. ನಮಗೂ ಹಾಗೆಯೇ ಅನಿಸಿದ್ದು ನಿಜ. ನಮ್ಮಂತೆಯೇ ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಾಣುವ ಕಲ್ಪನೆ ಗ್ರೀಕರದ್ದೂ ಕೂಡ. ನಮ್ಮಲ್ಲಿಯಂತೆಯೇ ಹಲವಾರು ಬೃಹದಾಕಾರದ ದೇವಾಲಯಗಳು. ದುರದೃಷ್ಟವಶಾತ್ ಎಷ್ಟೋ ದೇವಾಲಯಗಳು ಇಂದು ಶಿಥಿಲ ಸ್ಥಿತಿಯಲ್ಲಿವೆ.

(ಆಲಿವ್ ಮರಗಳು)

ನಮಗೆ ತೆಂಗಿನ ಮರವೆಂದರೆ ಹೇಗೆ ಆದರವೋ, ಗ್ರೀಕರಿಗೆ ಆಲಿವ್ ಮರವೆಂದರೆ ಅಷ್ಟೇ ಆದರ, ಪವಿತ್ರ. ಅವರು ಅದನ್ನೆಂದೂ ಕಡಿಯುವುದಿಲ್ಲವಂತೆ. ಮರ ಹಳೆಯದಾಗಿ ಇಳುವರಿ ನಿಂತರೆ ಅದನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ transplant ಕೂಡ ಮಾಡುತ್ತಿದ್ದರಂತೆ. ಗ್ರೀಸ್ ನ ತುಂಬಾ ಎಲ್ಲೆಲ್ಲಿ ನೋಡಿದರೂ ಆಲಿವ್ ಮರಗಳು ಕಾಣಸಿಗುತ್ತವೆ, ರಾಜಧಾನಿ ಅಥೆನ್ಸ್ ನಲ್ಲೂ ಕೂಡ. ಆದರೆ ಈಗೀಗ ಆಲಿವ್ ಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚುತ್ತಿರುವ ಕಾರಣ ದೊಡ್ಡ ಪ್ರಮಾಣದಲ್ಲಿ ಅದನ್ನು ಬೆಳೆಸುತ್ತಾರಂತೆ, ಆಗ ಮರಗಳು ಹಳೆಯದಾದಂತೆ ಕಡಿಯುತ್ತಾರಂತೆ.

ಹಲವಾರು ವರ್ಷಗಳ ಹಿಂದೆ ಅಲ್ಲೂ ಕೂಡ ಭಾರತೀಯರಂತೆ ಹಿರಿಯರು ನಿರ್ಧರಿಸಿ ವಿವಾಹವಾಗುವ ಪದ್ಧತಿ ಇತ್ತು ಎಂಬುದನ್ನು ಕೇಳಿ ಆಶ್ಚರ್ಯವಾಯಿತು! ಹುಡುಗ ಮದುವೆಯ ವಯಸ್ಸಿಗೆ ಬಂದಾಗ ಅವನ ತಂದೆ ‘ನೀನು ಈ ಹುಡುಗಿಯನ್ನು ಮದುವೆಯಾಗಬೇಕು’ಎಂದು ಖಡಾಖಂಡಿತವಾಗಿ ಹೇಳುತ್ತಿದನಂತೆ, ಹುಡುಗ ಸಮ್ಮತಿಸುತ್ತಿದ್ದನಂತೆ. ಆದರೆ ಈಗ ಈ ಪದ್ಧತಿ ಪೂರ್ತಿಯಾಗಿ ಮರೆಯಾಗಿದೆಯಂತೆ. ನಾವು ‘ನಿಮ್ಮ ಈ ಪದ್ಧತಿಗಳನ್ನೆಲ್ಲ ನೋಡಿದಾಗ ನಮ್ಮ ಸಂಸ್ಕೃತಿಯ ಅನುಭಾವವಾಗುತ್ತಿವೆ’ ಎಂದಿದ್ದಕ್ಕೆ ಮಾಕಿಸ್, ‘ನಿಜ ಹೇಳಬೇಕೆಂದರೆ ನಾವು ಯೂರೋಪಿನಲ್ಲಿದ್ದೂ ಕೂಡ ಪೂರ್ತಿ ಯುರೋಪಿಯನ್ನರಂತಿಲ್ಲ, ಏಷಿಯಾ ಖಂಡದಲ್ಲಿರಬೇಕಿದ್ದ ನಮ್ಮ ದೇಶವನ್ನು ಕಿತ್ತು ತಂದು ಯೂರೋಪಿನಲ್ಲಿ ಅಂಟಿಸಿದಂತಿದೆ’ ಎಂದರು.

ಬೀಳ್ಕೊಡುವ ಮೊದಲು ಮಾಕಿಸ್ ಮಾಧವನಿಗೆ ಗ್ರೀಸ್ ಬಗ್ಗೆ ಚಿಕ್ಕಪುಸ್ತಕವೊಂದನ್ನು ಉಡುಗೊರೆಯಾಗಿ ಕೊಟ್ಟು ‘ಈ ಪುಸ್ತಕ ಮುಂದೆ ನಿನಗೆ ಗ್ರೀಸ್ ಗೆ ಬರಲು ಪ್ರೇರಣೆಯಾಗಲಿ’ ಎನ್ನುತ್ತಾ ಅವನನ್ನು ಮುದ್ದಿಸಿ ಅವನ ತಲೆ ನೇವರಿಸಿ ‘ಚೆನ್ನಾಗಿ ಬಾಳು’ ಎಂದು ಆಶೀರ್ವಾದ ಮಾಡಿ ಹೋದರು. ಯುರೋಪ್ ನಲ್ಲಿ ಎಲ್ಲೆಲ್ಲೂ ಕೇಳಸಿಗುವುದು ಪ್ರಮುಖವಾಗಿ ‘ಗುಡ್ ಮಾರ್ನಿಂಗ್, ಗುಡ್ ಆಫ್ಟರ್ ನೂನ್, ಗುಡ್ ಈವನಿಂಗ್ ಮತ್ತು ಹ್ಯಾವ್ ಅ ನೈಸ್ ಡೇ’ ಗಳು ಮಾತ್ರ. ಆದರೆ ಗ್ರೀಸ್ ನಲ್ಲಿ ಮಾಧವನಿಗೆ ಹಲವಾರು ಆಶೀರ್ವಾದಗಳೂ ಲಭಿಸಿದವು!

ನಾವು ‘ನಿಮ್ಮ ಈ ಪದ್ಧತಿಗಳನ್ನೆಲ್ಲ ನೋಡಿದಾಗ ನಮ್ಮ ಸಂಸ್ಕೃತಿಯ ಅನುಭಾವವಾಗುತ್ತಿವೆ’ ಎಂದಿದ್ದಕ್ಕೆ ಮಾಕಿಸ್ ‘ನಿಜ ಹೇಳಬೇಕೆಂದರೆ ನಾವು ಯೂರೋಪಿನಲ್ಲಿದ್ದೂ ಕೂಡ ಪೂರ್ತಿ ಯುರೋಪಿಯನ್ನರಂತಿಲ್ಲ, ಏಷಿಯಾ ಖಂಡದಲ್ಲಿರಬೇಕಿದ್ದ ನಮ್ಮ ದೇಶವನ್ನು ಕಿತ್ತು ತಂದು ಯೂರೋಪಿನಲ್ಲಿ ಅಂಟಿಸಿದಂತಿದೆ’ ಎಂದರು.

(ಗ್ರೀಸ್ ನ ಡೆಲ್ಫಿಯಲ್ಲಿನ ಥೀಯೇಟರ್ ನ ಪಳೆಯುಳಿಕೆಗಳು)

ಎಲ್ಲಾದರೂ ದಾರಿ ಕೇಳಿದರೆ, ಏನಾದರೂ ಸಹಾಯ ಕೇಳಿದರೆ ಗ್ರೀಕರು ಉಳಿದ ಯುರೋಪಿಯನ್ನರಿಗಿಂತ ಭಿನ್ನರು ಎಂಬುದು ಸ್ಪಷ್ಟವಾಗುತ್ತದೆ. ಅವರು ಸಹಾಯಕ್ಕೆ ಸದಾ ಸಿದ್ಧರಿರುವಂತೆ ಕಂಡುಬರುತ್ತಾರೆ. ಮರಳಿ ಬರಲು ನಮ್ಮ ವಿಮಾನ ಸಂಜೆ ತಡವಾಗಿ ಇತ್ತು. ಮಾಧವ ಚಿಕ್ಕವನಿರುವುದರಿಂದ ನಾವು ಉಳಿದ ಹೋಟೆಲ್ನವರೂ ಕೂಡ ತಾವಾಗಿಯೇ ನಮ್ಮ ಬಳಿ ನೀವು ತಡವಾಗಿ ಚೆಕ್ ಔಟ್ ಮಾಡಿ ಎಂದರು. ನಾನು ಚೆಕ್ ಔಟ್ ಮಾಡಿ ಹೊರಟಾಗ ಒಮ್ಮೆಲೇ ಜೋರಾಗಿ ಆಲಿಕಲ್ಲು ಮಳೆ ಪ್ರಾರಂಭವಾಯಿತು. ಹೋಟೆಲ್ ನವರು ಅವರಾಗಿಯೇ ಮುಂದೆ ಬಂದು ನಮ್ಮ ಬಳಿ ‘ಈಗ ಮಗುವನ್ನು ಕರೆದುಕೊಂಡು ಹೊರಗೆ ಹೋಗಬೇಡಿ, ಎಂದು ನಮ್ಮನ್ನು ಅಲ್ಲಿಯೇ ಇರಿಸಿಕೊಂಡರು. ಗ್ರೀಸ್ ಗೂ ಬೇರೆ ದೇಶಕ್ಕೂ ಕಂಡ ವ್ಯತ್ಯಾಸವೆಂದರೆ, ಬೇರೆ ದೇಶದಲ್ಲಾಗಿದ್ದರೆ ನಾವಾಗಿಯೇ ‘ನಾವಿಲ್ಲಿ ಮಳೆ ನಿಲ್ಲುವತನಕ ಇರಬಹುದಾ’ ಎಂದು ಕೇಳಿದರೆ ಖಂಡಿತ ಇಲ್ಲವೆನ್ನುತ್ತಿರಲಿಲ್ಲ, ಆದರೆ ಗ್ರೀಸ್ ನಲ್ಲಿ ಅವರಾಗಿಯೇ ಸಹಾಯಹಸ್ತ ಚಾಚುವುದನ್ನು ನೋಡಿ ಭಾರತೀಯರಂತೆಯೇ ಇವರೂ ಸಹ ಅನಿಸಿತು.

ಅಥೆನ್ಸ್ ನಿಂದ ಹೊರಡಲು ಇನ್ನು ಕೆಲವೇ ಗಂಟೆಗಳು ಉಳಿದಿದ್ದವು. ನಮಗೆ Lycabettus ಎಂಬ ಬೆಟ್ಟದ ತುದಿಗೆ ಹೋಗಿ ಬರಲು ತುಂಬಾ ಮನಸ್ಸಿತ್ತು, ಆದರೆ ನಡೆಯುತ್ತಾ ಹತ್ತಿದರೆ ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು. ನಾವು ಏನು ಮಾಡುವುದು ಎಂದು ವಿಚಾರ ಮಾಡುತ್ತಿರುವಷ್ಟರಲ್ಲೇ ಒಬ್ಬ ಟ್ಯಾಕ್ಸಿ ಚಾಲಕ ತಾನಾಗಿಯೇ ನಮ್ಮ ಬಳಿ ಬಂದು ಮಾತಿಗೆ ತೊಡಗಿ, ‘ಎಲ್ಲಿಗೆ ಹೋಗಬೇಕು? Lycabettusಗೆ ಹೋಗುವುದಾದರೆ ನಾನು ಕರೆದುಕೊಂಡು ಹೋಗುತ್ತೇನೆ. ನೀವು ಅಲ್ಲೆಲ್ಲಾ ಸುತ್ತಾಡಿ ಬರುವವರೆಗೆ ಕಾಯುತ್ತಿದ್ದು ನಿಮ್ಮನ್ನು ಮರಳಿ ಇಲ್ಲಿಗೇ ಕರೆತಂದು ಬಿಡುತ್ತೇನೆ’ ಎಂದ. ನಮ್ಮ ಕೆಟ್ಟ ಬುದ್ಧಿ ಒಮ್ಮೆ ತನ್ನ ಕೆಲಸ ಮಾಡಿತು- ‘ತಾನಾಗಿಯೇ ಮಾತನಾಡಿಸುತ್ತಾ ಬಂದಿದ್ದಾನೆಂದರೆ ಎಂಥವನೋ ಏನೋ, ನಮಗೆ ಗೊತ್ತಿಲ್ಲ ಎಂಬುದನ್ನು ದುರುಪಯೋಗ ಮಾಡಿಕೊಂಡು ಹೆಚ್ಚು ಹಣ ಸುಲಿಗೆ ಮಾಡಿದರೆ?’ ಆದರೂ ಒಂದೇ ಕ್ಷಣದಲ್ಲಿ ನಿರ್ಧಾರ ಮಾಡಿದೆವು. ಆದದ್ದು ಆಗಲಿ, ಪುನಃ ಇಲ್ಲಿಗೆ ಬರುತ್ತೇವೋ ಇಲ್ಲವೋ. ಬಂದಾಗಲೇ ಇಷ್ಟವಿರುವ ಜಾಗವನ್ನು ನೋಡಿಕೊಂಡೇ ಹೋಗೋಣ ಎಂದು. ಆತನ ಟ್ಯಾಕ್ಸಿಯಲ್ಲಿ ಕುಳಿತೆವು. ಆತನೂ ಭಾರತದ ಬಗ್ಗೆ ನಮ್ಮ ಜೊತೆ ಮಾತನಾಡುತ್ತಾ ಹೆಚ್ಚು ಕಮ್ಮಿ ಬೆಟ್ಟದ ತುದಿಯವರೆಗೆ ಕರೆದುಕೊಂಡು ಹೋದ. ಅಲ್ಲಿಂದ ತುತ್ತ ತುದಿಯವರೆಗೆ ನಾವು ನಡೆದುಕೊಂಡು ಹೋದೆವು. ಕೆಲಕಾಲ ಅಲ್ಲಿದ್ದು ಆತನ ಟ್ಯಾಕ್ಸಿಯಲ್ಲಿಯೇ ಹಿಂದಿರುಗಿದೆವು. ಜಾಸ್ತಿ ದುಡ್ಡನ್ನೂ ಕೇಳಲಿಲ್ಲ. ‘ಸುಖವಾಗಿರಿ’ ಎಂದು ನಮಗೆ ಆಶೀರ್ವಾದ ಮಾಡಿ ಹೊರಟುಹೋದ. ಒಂದು ಕ್ಷಣ ನಾವೇ ಆತನ ಬಗ್ಗೆ ಕೆಟ್ಟ ಆಲೋಚನೆ ಮಾಡಿ ಸಣ್ಣವರಾದೆವೇನೋ  ಅನಿಸಿತು.

(ಮಾಕಿಸ್ ಜೊತೆ ಮಾಧವ)

ಆತನೂ ಭಾರತದ ಬಗ್ಗೆ ನಮ್ಮ ಜೊತೆ ಮಾತನಾಡುತ್ತಾ ಹೆಚ್ಚು ಕಮ್ಮಿ ಬೆಟ್ಟದ ತುದಿಯವರೆಗೆ ಕರೆದುಕೊಂಡು ಹೋದ. ಅಲ್ಲಿಂದ ತುತ್ತ ತುದಿಯವರೆಗೆ ನಾವು ನಡೆದುಕೊಂಡು ಹೋದೆವು. ಕೆಲಕಾಲ ಅಲ್ಲಿದ್ದು ಆತನ ಟ್ಯಾಕ್ಸಿಯಲ್ಲಿಯೇ ಹಿಂದಿರುಗಿದೆವು. ಜಾಸ್ತಿದುಡ್ಡನ್ನೂ ಕೇಳಲಿಲ್ಲ. ‘ಸುಖವಾಗಿರಿ’ ಎಂದು ನಮಗೆ ಆಶೀರ್ವಾದ ಮಾಡಿ ಹೊರಟುಹೋದ. ಒಂದು ಕ್ಷಣ ನಾವೇ ಆತನ ಬಗ್ಗೆ ಕೆಟ್ಟ ಆಲೋಚನೆ ಮಾಡಿ ಸಣ್ಣವರಾದೆವೇನೋ ಅನಿಸಿತು.

 ಇಡಿ ಯುರೋಪನ್ನು ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಂಗಡಿಸಿದರೆ- ನಾವು ನೋಡಿದಂತೆ, ಅನುಭವಿಸಿದಂತೆ ಉತ್ತರಕ್ಕೆ ಹೋದಂತೆಲ್ಲಾ ಚಳಿ ಜಾಸ್ತಿ, ಮಬ್ಬು ವಾತಾವರಣ. ಅದರ ಜೊತೆಗೇ ಜನರ ಆತ್ಮೀಯತೆ, ಇನ್ನೊಬ್ಬರ ಜೊತೆ ಬೆರೆಯುವಿಕೆ ಕಡಿಮೆಯಾಗುತ್ತದೆ. ದಕ್ಷಿಣಕ್ಕೆ ಬಂದಂತೆಲ್ಲಾ ಬೆಚ್ಚನೆಯ ವಾತಾವರಣ, ಹೆಚ್ಚು ಸೂರ್ಯನ ಬೆಳಕು. ಜನರೂ ಕೂಡ  ಬೇಗನೆ ಆತ್ಮೀಯರಾಗುತ್ತಾರೆ. ಎಲ್ಲೆಡೆ ಉತ್ಸಾಹಭರಿತ ವಾತಾವರಣ ಕಾಣಿಸುತ್ತದೆ, ಅನುಭವಕ್ಕೆ ಬರುತ್ತದೆ. ಆದರೆ ಗ್ರೀಸ್ ಮಾತ್ರ ಭಾರತದ ಜನರ ಆತ್ಮೀಯತೆಯನ್ನು ನೆನಪು ಮಾಡಿತು. ಮಾಕಿಸ್ ಹೇಳಿದಂತೆ ಯುರೋಪಿನಲ್ಲಿದ್ದರೂ ಪೂರ್ತಿ ಯೂರೋಪಿಗೆ ಸೇರಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ. ಒಟ್ಟಾರೆ ಹೇಳುವುದಾದರೆ ಭಾರತೀಯರ ಮನೆಗಳಲ್ಲಿ ಸಿಗುವಂತಹ ಅತಿಥಿ ಸತ್ಕಾರ ಮತ್ತು ಆತ್ಮೀಯತೆ ಗ್ರೀಸ್ ನ ಹೋಟೆಲ್, ಉಪಹಾರ ಗೃಹಗಳಲ್ಲೂ ದೊರೆತವು!

Lycabettus ತುದಿಯಿಂದ ಕಾಣುವ ಅಥೆನ್ಸ್ ನ ವಿಹಂಗಮನೋಟ (ಚಿತ್ರಗಳು: ರಾಜೀವ ಭಟ್)