Advertisement
ಚಳಿಚಳಿ ಎನ್ನದಿರಿ!: ವಿನತೆ ಶರ್ಮಾ ಅಂಕಣ

ಚಳಿಚಳಿ ಎನ್ನದಿರಿ!: ವಿನತೆ ಶರ್ಮಾ ಅಂಕಣ

ಮರದಿಂದ ಮನೆ ಕಟ್ಟುವುದು ಅಂದರೆ ಅದಕ್ಕೆ ಅದೆಷ್ಟು ಮರಗಳ ಆಹುತಿಯಾಗುತ್ತದೆ ಎಂದೆನಿಸಬಹುದು ನಿಮಗೆ. ನಿಜ. ವಸಾಹತುಶಾಹಿ ಬ್ರಿಟಿಷರ ಸಂಸ್ಕೃತಿಯಿಂದ ಬಂದ ಮನೆ ಕಟ್ಟುವ ಪರಂಪರೆಗೆ ಮತ್ತು ಕೈಗಾರೀಕರಣಕ್ಕೆ ಮೊದಮೊದಲು ಸಾವಿರಾರು ಎಕರೆ ಪ್ರದೇಶಗಳ ಕಾಡುಗಳು ಆಹುತಿಯಾದವು. ಇದನ್ನು ಲಾಗಿಂಗ್ ಅನ್ನುತ್ತಾರೆ. ಎರಡು ಶತಮಾನಗಳ ಕಾಲ ಆ ರೀತಿ ಟ್ರೀ ಲಾಗಿಂಗ್ ನಡೆಯಿತು. ಖಂಡ-ದೇಶದ ಕಾಡುಗಳು, ವನ್ಯಜೀವಿಗಳು ವಿನಾಶದ ಅಂಚಿಗೆ ಬಂದಾಗ ಸಮಾಜವು, ಸರ್ಕಾರಗಳು ಎಚ್ಚೆತ್ತುಕೊಂಡು ಲಾಗಿಂಗ್ ನಿಲ್ಲಿಸಿ, recycling ಪದ್ಧತಿಯನ್ನು ಆಚರಣೆಗೆ ತಂದರು
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಆಸ್ಟ್ರೇಲಿಯಾದಲ್ಲೀಗ ಚಳಿಯಪ್ಪಾ ಚಳಿ. ನಾವು ಜೂನ್ ತಿಂಗಳಿಂದ ಆಗಸ್ಟ್ ತನಕ ಇರುವ ಮೂರು ತಿಂಗಳ ಚಳಿಗಾಲದ ಮಧ್ಯದಲ್ಲಿದ್ದೀವಿ. ನೀವು ಆಸ್ಟ್ರೇಲಿಯಾ ಭೂಪಟವನ್ನು ತೆರೆದು ಈ ಖಂಡ-ದೇಶದ ಹವಾಗುಣಗಳನ್ನು ಹುಡುಕಿದರೆ ನಿಮಗೆ ಸಿಗುವುದು ಏಕಕಾಲಕ್ಕೆ ಇರುವ ಚಳಿ-ಬಿಸಿ-ಮಳೆ ವರ್ತಮಾನ. ದೇಶದ ನೆತ್ತಿಗೆ ಮತ್ತು ಪಶ್ಚಿಮ ಭಾಗಕ್ಕೆ ಹೋದರೆ ಅಲ್ಲಿ ಈಗಲೂ ಬಿಸಿಲು ಹೊಡೆಯುತ್ತಿದೆ. ಪಶ್ಚಿಮದಲ್ಲೇ ಕೆಳಗಿಳಿದರೆ ಅಲ್ಲಿ ಸಿಗುವ ಪರ್ತ್ ನಗರದಲ್ಲಿ ರಾತ್ರಿ ಕಡುಚಳಿ ಕಾಡುತ್ತಿದೆಯಂತೆ. ನಮ್ಮ ಕಡೆ ಪೂರ್ವದಲ್ಲಿ ಸ್ವಲ್ಪ ಕೆಳಕ್ಕೆ ಅಂದರೆ ನಮ್ಮ ರಾಣಿರಾಜ್ಯಕ್ಕೆ ಬಂದರೆ ಬಿಸಿ-ಚಳಿ ಮಿಶ್ರಣವಿದೆ. ಹಾಗೆಯೇ ಪೂರ್ವದಲ್ಲಿ ಬ್ರಿಸ್ಬೇನ್‌ನಿಂದ ಕೆಳಗಿಳಿದರೆ ಖಂಡಿತವಾಗಿಯೂ ಅಬ್ಬಬ್ಬಾ ಚಳಿ! ದೇಶದ ಪೂರ್ತಿ ಅಲ್ಲಲ್ಲಿ ಮಳೆಯೂ ಬೀಳುತ್ತಿದೆ. ನಾವು ವಲೊಂಗೊಂಗ್ ಪಟ್ಟಣದಲ್ಲಿ ವಾಸಿಸುತ್ತಿದ್ದಾಗ ಅಲ್ಲಿನ ಚಳಿ ಕೊರೆತ, ಧಾರಾಳ ಮಳೆಯ ನೆನಪಾಗುತ್ತಿದೆ.

ಈಗ ಏಕಕಾಲದಲ್ಲಿ ಎಲ್ಲಾ ಋತುಗಳೂ ಅನುಭವಕ್ಕೆ ಬರುತ್ತವೆ. ನನಗಂತೂ ಇಡೀ ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಸಿಕ್ಕುವ ಸ್ವೆಟರ್ ಹಾಕಿಕೊಳ್ಳುವ ಅವಕಾಶ ತುಂಬಾ ಇಷ್ಟವಾದದ್ದು. ನಾವೆಲ್ಲಾ ಚಳಿಗಾಲಕ್ಕಾಗಿ ಕಾಯುತ್ತಿರುತ್ತೀವಿ. ವಾರಾಂತ್ಯದಲ್ಲಿ ದಿನಕರನ ರಶ್ಮಿಗಳಿಗೆ ಮುಖವೊಡ್ಡುವುದು ಮುದಕೊಡುತ್ತದೆ.  ಈ ಅನುಭವದ ಮಜಲುಗಳು ಮನಸ್ಸಿಗೆ ತಾಕುವುದು ಬಿಸಿಲಿನಲ್ಲಿ ಕೂತು ಸುತ್ತಲಿರುವ ಹೂ ಸಂಪತ್ತನ್ನು ನೋಡಿದಾಗ. ಚಳಿಗೆ ಕೆಲಮರಗಳ ಎಲೆಗಳು ಉದುರಿ ಅವು ಬೋಡುಬೋಡಾಗಿದ್ದಾಗ ಇನ್ನೂ ಕಳೆಕಳೆಯಾಗಿ ಸಂಭ್ರಮಿಸುತ್ತಿರುವ ಹೂ ವಿಧಗಳನ್ನು ಕಂಡರೆ ಉಲ್ಲಾಸ ಗರಿಗೆದರುತ್ತದೆ. ಬರಲಿರುವ ವಸಂತದ ಹೂವಿನೋಕಳಿಯನ್ನು ಸ್ವಾಗತಿಸಲು ಸಜ್ಜಾಗುತ್ತದೆ.

ಪಕ್ಕದ ಮನೆಯಾತ ಸೌದೆ ಒಡೆಯುತ್ತಿದ್ದ. ಅವರ ಮನೆಯಲ್ಲಿ fireplace ಇದೆ. ಅದರಲ್ಲಿ ನಿಜವಾದ ಮರದ ಸೌದೆ ತುಂಡುಗಳನ್ನು ಉರಿಸುವುದು ಅವರಿಗೆ ಇಷ್ಟ. ಇಲ್ಲಿ ಸೌದೆ ತುಂಡುಗಳನ್ನು ಒಂದು ಚೀಲಕ್ಕೆ ೧೫, ೨೦ ಡಾಲರಿನಂತೆ ಮಾರುತ್ತಾರೆ. ಈ ವರ್ಷ ಚಳಿ ಜಾಸ್ತಿ ಇರುತ್ತದೆ ಎಂದಿದ್ದ ಹವಾಮಾನ ಇಲಾಖೆಯ ವರದಿಯನ್ನು ಅನುಸರಿಸಿ ಅವನು ಒಂದು ಚಿಕ್ಕ ಟ್ರಕ್ ಗಟ್ಟಲೆ ಸೌದೆ ತುಂಡುಗಳನ್ನು ಕೊಂಡು ಶೇಖರಿಸಿದ್ದ. ಅವನು ಸೌದೆ ಸೀಳುತ್ತಿದ್ದಾಗ ನನ್ನ ಗಂಡ ಮತ್ತು ನಾನು ಗಡಿಬಿಡಿಯಿಂದ ಓಡಾಡುತ್ತಾ ಮನೆಯ ಮುಂದಿನಂಗಳ, ಹಿತ್ತಲಿನಲ್ಲಿ ಇರುವ ಮರಗಳಿಗೆ ಕ್ರಾಪ್ ಕಟ್ ಮಾಡುತ್ತಿದ್ದೆವು. ಇದು ಪ್ರತಿ ಚಳಿಗಾಲದಲ್ಲೂ ನಡೆಯುವ ಕಾರ್ಯಕ್ರಮ. ಹಿಪ್ಪುನೇರಳೆ, ಸೀಬೆ, ದಾಳಿಂಬೆ, cassava, ನುಗ್ಗೆ ಇತ್ಯಾದಿ ಮರಗಳ ಕೊಂಬೆಗಳು ಮತ್ತು ಒಂದೆರೆಡು ಆಸ್ಟ್ರೇಲಿಯನ್ ನೇಟಿವ್ ಮರಗಳು ನಮ್ಮ ಗರಗಸಕ್ಕೆ ಸಿಕ್ಕಿದವು. ನುಗ್ಗೆ ಮರದ ದಪ್ಪನೆ ತುಂಡುಗಳನ್ನು ನಮ್ಮ ಗಾರ್ಡನಿಂಗ್ ಗುಂಪಿಗೆ ಕೊಟ್ಟೆ.

ಆಸ್ಟ್ರೇಲಿಯಾದಲ್ಲಿ ಬಹುತೇಕ ಮನೆಗಳನ್ನು ಮರದಿಂದ ಕಟ್ಟಿದ್ದಾರೆ. ಇದಕ್ಕೆ ಮುಖ್ಯಕಾರಣ ಆಸ್ಟ್ರೇಲಿಯಾದ ಮರುಭೂಮಿ ಒಣಹವೆ ಗುಣ. ಮನೆಯಲ್ಲಿ ಗಾಳಿ ಆಡಬೇಕೆಂದರೆ ಅದನ್ನು ಮರದಿಂದ ಕಟ್ಟಿರಬೇಕು. ಮನೆಯ ಸುಭದ್ರತೆಗೆ, ಅದು ಬೀಳದಿರಲು ಆಯಕಟ್ಟು ಜಾಗಗಳಲ್ಲಿ ಸ್ಟೀಲ್ ಕಂಬಗಳನ್ನು ಸ್ಥಾಪಿಸುತ್ತಾರೆ. ಈ ಕಂಬಗಳು ಮನೆಯ ಅಸ್ಥಿಪಂಜರ. ಇದನ್ನು ಸುತ್ತುವರೆಸಿ ಕಟ್ಟಡ ಕಟ್ಟುತ್ತಾರೆ. ಮನೆಯ  ಹೊರಗಿನ ಮೈಕವಚ, ನೆಲಕ್ಕೆ ಮರದ ಬಳಕೆ. ಮನೆಯ ಒಳಗಿನ ಗೋಡೆಗಳಿಗೆ giprock ಎನ್ನುವ ಕೈಗಾರಿಕಾ ವಸ್ತುವಿನ ಬಳಕೆ. ಇದನ್ನು ಬಿಟ್ಟರೆ ಸಿಮೆಂಟ್, ಕಾಂಕ್ರೀಟ್, ಇಟ್ಟಿಗೆ ಮುಂತಾದವುಗಳ ಬಳಕೆ ಅತ್ಯಂತ ಕಡಿಮೆ. ಇನ್ನೊಂದು ಕಾರಣ ಕಟ್ಟಡದಲ್ಲಿ ಕಬ್ಬಿಣ ಮುಂತಾದ ಲೋಹಗಳನ್ನು ತುಂಬಾ ಬಳಸಿದರೆ ಅವು ಚಳಿಗೆ, ಬಿಸಿಲಿಗೆ ಕುಗ್ಗುತ್ತವೆ, ಹಿಗ್ಗುತ್ತವೆ. ಇದರಿಂದ ಅಪಾಯ. ಮರದ ತುಂಡುಗಳು ಅಪಾಯವನ್ನು ನಿವಾರಿಸುತ್ತವೆ.

ಭಾರತದಲ್ಲಿರುವಂತೆ ಕಾಂಕ್ರೀಟ್ ಮನೆ ಕಟ್ಟಬೇಕೆಂದರೆ ಅದಕ್ಕೆ ಇಲ್ಲಿನ ಅನೇಕ ಬಿಲ್ಡಿಂಗ್ ಕಂಪನಿಗಳು ಒಪ್ಪುವುದಿಲ್ಲ. ಒಂದು ವೇಳೆ ಕಾಂಕ್ರೀಟ್ ಮನೆ ಕಟ್ಟಿದರೆ ಅದು ಬಹಳ ದುಬಾರಿಯಾಗುತ್ತದೆ. ತಂಪುಗಾಳಿ, ಶಾಖ ಕೊಡುವ ಏರ್ ಕಂಡೀಷನರ್ ಇರಬೇಕು. ಕಾಂಕ್ರೀಟ್ ಕಟ್ಟಡ ನಿರ್ಮಾಣದಲ್ಲಿ ಉಪಯೋಗಿಸುವ ಲೋಹ, ಮರ, ಸಿಮೆಂಟ್, ಕೈಗಾರೀಕರಣದಿಂದ ತಯಾರಾದ ವಸ್ತುಗಳು ಇವೆಲ್ಲವನ್ನೂ ಕುರಿತು ಆಲೋಚಿಸಿದರೆ ಈ ದೇಶದಲ್ಲಿ recyled ಮರದಿಂದ ಕಟ್ಟುವ ಕಟ್ಟಡಗಳೇ ವಾಸಿ ಎನಿಸುತ್ತದೆ.

ಮರದಿಂದ ಮನೆ ಕಟ್ಟುವುದು ಅಂದರೆ ಅದಕ್ಕೆ ಅದೆಷ್ಟು ಮರಗಳ ಆಹುತಿಯಾಗುತ್ತದೆ ಎಂದೆನಿಸಬಹುದು ನಿಮಗೆ. ನಿಜ. ವಸಾಹತುಶಾಹಿ ಬ್ರಿಟಿಷರ ಸಂಸ್ಕೃತಿಯಿಂದ ಬಂದ ಮನೆ ಕಟ್ಟುವ ಪರಂಪರೆಗೆ ಮತ್ತು ಕೈಗಾರೀಕರಣಕ್ಕೆ ಮೊದಮೊದಲು ಸಾವಿರಾರು ಎಕರೆ ಪ್ರದೇಶಗಳ ಕಾಡುಗಳು ಆಹುತಿಯಾದವು. ಇದನ್ನು ಲಾಗಿಂಗ್ ಅನ್ನುತ್ತಾರೆ. ಎರಡು ಶತಮಾನಗಳ ಕಾಲ ಆ ರೀತಿ ಟ್ರೀ ಲಾಗಿಂಗ್ ನಡೆಯಿತು. ಖಂಡ-ದೇಶದ ಕಾಡುಗಳು, ವನ್ಯಜೀವಿಗಳು ವಿನಾಶದ ಅಂಚಿಗೆ ಬಂದಾಗ ಸಮಾಜವು, ಸರ್ಕಾರಗಳು ಎಚ್ಚೆತ್ತುಕೊಂಡು ಲಾಗಿಂಗ್ ನಿಲ್ಲಿಸಿ, recycling ಪದ್ಧತಿಯನ್ನು ಆಚರಣೆಗೆ ತಂದರು. ಈಗಲೂ ಕಟ್ಟಡಗಳನ್ನು ಕಟ್ಟುವುದು recycled ಮರಗಳಿಂದ ಅಥವಾ ಕಟ್ಟಡ ಕೆಲಸಕ್ಕೆಂದೇ ಬೆಳೆಸಲಾಗುವ ಮರಗಳನ್ನು ಬಳಸಿಕೊಂಡು. ಆಯೋಜಿತ ಪ್ರದೇಶಗಳಲ್ಲಿ ಉದ್ದೇಶಪೂರ್ವವಾಗಿ ಇಂತಹ ಮಾನವನಿರ್ಮಿತ ಕಾಡುಗಳನ್ನು ಬೆಳೆಸುತ್ತಾರೆ. ಇಂತಿಂಥಾ ಕೆಲಸಗಳಿಗೆ ಇಂತಿಂಥಾ ಮರಗಳು ಬೇಕು ಎಂದು ಕರಾರುವಕ್ಕಾದ ಯೋಜನೆಗಳನ್ನು ಜಾರಿಗೆ ತಂದು ಮರಗಳನ್ನು ಬೆಳೆಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಎಲೆಕ್ಟ್ರಿಕ್ ಕಂಬ. ಆಸ್ಟ್ರೇಲಿಯಾದ ಉದ್ದಗಲಕ್ಕೆ ಸಿಗುವ ಈ ಕಂಬಗಳು ಉದ್ದನೆ ಒಂದು ಮರದ ಕಾಂಡ. ಚಳಿಗೆ, ಮಳೆಗೆ, ಬಿಸಿಲಿಗೆ ಇವು ಹೆದರುವುದಿಲ್ಲ. ಈ ರೀತಿಯ ಜಾಗರೂಕತೆ ಬಳಕೆಯಿಂದ ನೈಸರ್ಗಿಕ ಕಾಡುಗಳಿಗೆ ರಕ್ಷಣೆ ಸಿಗುತ್ತದೆ.

Recycling ಎನ್ನುವುದು ಆಸ್ಟ್ರೇಲಿಯಾದಲ್ಲಿ ಎಲ್ಲರೂ ಜಪಿಸುವ ದೊಡ್ಡ ಮಂತ್ರ. ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದುಕೊಳ್ಳುತ್ತಾರೆ. ತಮಗೆ ಬೇಡವಾದ, ಅಗತ್ಯವಿರದ ವಸ್ತುವನ್ನು ಚಾರಿಟಿ ಸಂಸ್ಥೆಗಳಿಗೆ ಕೊಡುವುದು ಒಂದು ಸಂಪ್ರದಾಯ. ಆ ಸಂಸ್ಥೆಗಳು ಉತ್ತಮ ಗುಣಮಟ್ಟದ, ಮರುಬಳಕೆಗೆ ಸೂಕ್ತವಾದ ವಸ್ತುಗಳನ್ನು ಆರಿಸಿ, ಅವನ್ನು ಸಂಸ್ಕರಿಸಿ ತಮ್ಮದೇ ಆದ Op Shop ಗಳಲ್ಲಿ ಕಡಿಮೆ ಬೆಲೆಗೆ ಮಾರುತ್ತಾರೆ. ಈ ವಸ್ತುಗಳಲ್ಲಿ ಉಡುಗೆತೊಡುಗೆ, furniture, ಅಡುಗೆಮನೆ ವಸ್ತುಗಳು, ಫ್ಯಾಷನ್, ಆಭರಣಗಳು, ಗಾರ್ಡನಿಂಗ್, ಮರದ ವಸ್ತುಗಳು ಎಂಬಂತೆ ಎಲ್ಲವೂ ಇರುತ್ತವೆ. ಅವನ್ನು ಕೊಳ್ಳುವುದರಲ್ಲಿ ಬಡವ ಶ್ರೀಮಂತ ಎನ್ನುವ ಭೇದಭಾವವಿಲ್ಲ ಎನ್ನುವುದು ವಿಶೇಷ. Op Shop Trail ಎನ್ನುವುದು ಕೂಡ ಒಂದು ಸಂಪ್ರದಾಯ. ಆಗಾಗ ಸ್ನೇಹಿತರ ಗುಂಪುಗಳು ಸರಣಿ ಶಾಪ್ ಗಳಿಗೆ ಭೇಟಿ ಕೊಡುವ ಒಂದು ಇವೆಂಟ್ ಕೂಡ ನಡೆಸುತ್ತಾರೆ.

ನಮ್ಮ ಆಸ್ಟ್ರೇಲಿಯಾದಲ್ಲಿ ಮರದಿಂದ ಮನೆ ಕಟ್ಟುವುದು ಅಗತ್ಯ. ಇಷ್ಟಕ್ಕೂ ಮರದಿಂದ ಕಟ್ಟಿದ ಮನೆ ಎಂದರೆ ಅದು ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾಗಿಲ್ಲ. Log Cabin ಸಂಸ್ಕೃತಿ ಬಹು ಪುರಾತನವಾದದ್ದು. ಉತ್ತರಧ್ರುವದ ಅನೇಕ ದೇಶಗಳಲ್ಲಿ ಮರದ ಮನೆ, ಕಟ್ಟಡಗಳು ಸರ್ವೇಸಾಮಾನ್ಯ. ಯೂರೋಪಿನ Scandinavian ದೇಶಗಳಲ್ಲಿ ಇರುವ ಮರದ ಮನೆಗಳು ನೋಡಲು ಬಹು ಸುಂದರ. ಅದರಲ್ಲೂ ಸ್ವಿಟ್ಜರ್ಲ್ಯಾಂಡ್ ನಲ್ಲಿ ನೋಡಸಿಗುವ ಮರದ ಮನೆಗಳು ಬಲು ಮುದ್ದಾಗಿರುತ್ತವೆ. ಅದೇ ರೀತಿ ನಮ್ಮ ಕಡೆ ನ್ಯೂಝಿಲ್ಯಾಂಡ್ ದೇಶದಲ್ಲಿ ಇರುವ ಮರಮನೆಗಳು, ಅಲ್ಲಿನ ಚಳಿಗಾಲದ ಅನುಭವ ಮಾತಿನ ಶಬ್ದಗಳಿಗೆ ಸಿಗುವುದಿಲ್ಲ.

ಇದೆ ರೀತಿ ಕೆನಡಾ, ಅಮೆರಿಕಾ ದೇಶಗಳಲ್ಲಿ log cabin ಅಂದರೆ ಜನರಿಗೆ ಬಲುಪ್ರೀತಿ. ತಮ್ಮ ಚಳಿಗಾಲದ, ಬೇಸಿಗೆಯ ರಜಾ ದಿನಗಳನ್ನು log cabin ನಲ್ಲಿ ಕಳೆಯುವುದು ಎಂದರೆ ಅದು ಬಹಳ ವಿಶೇಷವೆಂಬ ಭಾವನೆ. ಹಿಮಪರ್ವತ ಪ್ರಾಂತ್ಯಗಳಲ್ಲಿ ಇರುವ ಮರಮನೆಗಳಿಗೆ ಇತಿಹಾಸದಲ್ಲಿ, ಸಾಹಸ ಅನುಭವಗಳಲ್ಲಿ, ಜಾನಪದ ಕಥೆ, ಹಾಡುಗಳಲ್ಲಿ ಇರುವ ಸ್ಥಾನಮಾನ ದೊಡ್ಡದು. ಒಮ್ಮೆ Lord of the Rings ಚಲನಚಿತ್ರ ಸರಣಿಯನ್ನು ನೆನಪಿಸಿಕೊಳ್ಳಿ. ಆಗ ಚಳಿಗೊಂದು ಮಹಾತ್ಮೆ ಇರುವುದು ಅರ್ಥವಾಗುತ್ತದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ