ಏಳೆಂಟು ವರ್ಷಗಳ ಹಿಂದೆ ಗೌರಿಹಬ್ಬದಲ್ಲಿ ಬಳೆ ಕೊಳ್ಳಲಿಕ್ಕೆಂದು ಮೂಡಿಗೆರೆ ಪೇಟೆ ಬೀದಿಗೆ ಹೋದೆ. ಅಲ್ಲೊಬ್ಬರು ಈ ಗೊಬ್ಬೆ ಸೀರೆ ಉಟ್ಟವರು ವಯಸ್ಸಾದ ಮಹಿಳೆ ಮೊಮ್ಮಕಳೊಟ್ಟಿಗೆ ಹೋಗುತ್ತಿದ್ದರು. ಅವರು ತುರುಬಿಗೆ ಕುಪ್ಪಿಗೆ  ಎಂಬ  ಆಭರಣ ಸಿಕ್ಕಿಸಿಕೊಂಡಿದ್ದರು. ಮತ್ತು ಕಿವಿಗೆ ಹಾಕಿದ್ದ ಬುಗುಡಿಯಿಂದ ಬಂದ ಬಂಗಾರದ ಸರ ಕುಪ್ಪಿಗೆಗೆ ಸೇರಿಕೊಂಡಂತೆ ಇತ್ತು. ಮೆಲ್ಲಗೆ ಅವರ ಹಿಂದೆಯೇ ಒಂದಷ್ಟು ದೂರ ನಡೆದೆ. ಆ ಆಭರಣದ ಚೆಂದ ನೋಡಿದೆ. ಮನಸ್ಸಿಗೆ ಚೆಂದವಾಯಿತು. ಅಂದು ಇಂತಹ ಉಡಿಗೆ ತೊಡಿಗೆಯವರೇ ಪೇಟೆ ಬೀದಿಯಲ್ಲಿ ಕಾಣಸಿಗುತ್ತಿದ್ದರು. 
ಇಂದಿನ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ  ಹಳೆಕಾಲದ ಮೂಡಿಗೆರೆ ಮತ್ತು ಅಲ್ಲಿನ ಚಳಿಯ ಕುರಿತು  
ರಾಜೇಶ್ವರಿ ತೇಜಸ್ವಿ ಬರೆದ ಬರಹ

 

ಅಬ್ಬಬ್ಬ! ಮೂಡಿಗೆರೆ ಚಳಿಯೆಂದರೇ ನಡುಕ. ಎದೆಯ ಗೂಡನ್ನೂ ಸೀಳಿಕೊಂಡು ಹೊಕ್ಕುತ್ತೆ ಚಳಿ. ಈಗ ಬಿಸಿಲೂ ಚುರುಕು. ಚಳಿಯೂ ಜೋರು. ನಮ್ಮಲ್ಲಿ ಅಕ್ಟೋಬರ್‌ನಲ್ಲಿಯೂ ಒಂದೊಂದು ಮಳೆ ಬರುತ್ತೆ. ಮೋಡ ಇದ್ದಾಗ ಚಳಿ ಇರೋಲ್ಲ. ಈ ಸಮಯದಲ್ಲಿ ಯಾವತ್ತೋ ಒಂದೊಂದು ಸಲ ಈ ಫ್ರಾಸ್ಟ್ ಅಂತ ಟಿ.ವಿ.ಯಲ್ಲಿ ವಿದೇಶದಲ್ಲಿ ನೋಡ್ತೀವಲ್ಲ ಅಂತಹದ್ದು ತೆಳ್ಳಕೆ ಬೀಳುತ್ತೆ. ಇದು ನೋಡಲು ತುಂಬಾ ಸೊಗಸು. ಆದರೆ ಆಗ ವಿಪರೀತ ಥಂಡಿ. ಹೊರಗೆ ಹೋದರೆ ನಮ್ಮ ಮುಂದೆ ನಿಂತಿರೋವ್ರೆ ಕಾಣೋಲ್ಲ. ಗಿಡ ಮರಗಳೂ ಕಾಣಿಸೋಲ್ಲ. ಇದು ಸ್ವಲ್ಪ ಕಾಲ ಮಾತ್ರ ಇರುತ್ತೆ. ಒಂದು ಸಲ ನಮ್ಮ ಮಗಳನ್ನು ಶಾಲೆಗೆ ಬಿಡಲು ಮೂಡಿಗೆರೆಗೆ ಕಾರಿನ ದೀಪ ಹಚ್ಚಿಕೊಂಡೇ ನಾನು ಡ್ರೈವ್ ಮಾಡಬೇಕಾಯಿತು. ಊರೇ ಕಾಣ್ತಾ ಇಲ್ಲ. ಬಾಳ ಚಲೋ ಇರುತ್ತೆ ಆದರೆ ಬಾಳ ಥಂಡಿ. ಆಮೇಲೆ ಚಳಿ ಇನ್ನೂ ಜೋರಾಗುತ್ತೆ. ಬೆಳಿಗ್ಗೆ ಎದ್ದ ಕೂಡಲೆ ಪಾತ್ರೆ, ಪರಟಿ, ಡಬ್ಬಿ ಏನು ಮುಟ್ಟಿದರೂ ಫ್ರಿಡ್ಜ್ ಒಳಗೆ ಕೈ ಹಾಕಿದ ಹಾಗಾಗುತ್ತೆ. ನಲ್ಲಿ ನೀರಿಗೆ ಕೈ ಒಡ್ಡಿದರೆ ಹಾಗೇ ಕೈ ಹಿಂದಕ್ಕೆ ವಾಪಾಸು ಬರುತ್ತೆ. ಮೂಳೆ ನೋವು ಬರುವಷ್ಟು ಥಂಡಿ ನೀರು. ಹೊತ್ತು ಏರಿದರೂ ಚಳಿ ಇರುತ್ತೆ. ತರಗತಿಯಲ್ಲಿರುವ ಮಕ್ಕಳ ಹಲ್ಲು ಕಟಕಟ ಅಂತ ಒಬ್ಬರಾದ ಮೇಲೊಬ್ಬರು ಕಟಕಟಿಸೋದು ನಿಂತಮೇಲೆ ಪಾಠ ಶುರು ಮಾಡಲಿಕ್ಕಾಗೋದಂತೆ. ಇಂತಹ ಛಳಿ ಇದ್ದರೂ ಮೊನ್ನೆ ಚೆನ್ನೈನಲ್ಲಿ ಡಿಪ್ರೆಷನ್ ಬಂದ ಕೂಡಲೆ ಇಲ್ಲಿ ಮೋಡ ಕವಿಯಿತು. ಚಳಿ ಹೋಯಿತು. ನಾಲ್ಕೇ ದಿವಸ. ಮಳೆ ಮಾಯ. ಗಡಗಡ ನಡುಗಿಸಿತು ಚಳಿ ಮತ್ತೆ.

ಇಂತಹ ಚಳಿ ನವೆಂಬರಿನಿಂದ ಫೆಬ್ರವರಿ ಪೂರ್ತಿ ಇರುತ್ತೆ. ಆದರೆ ನಾಲ್ಕು ತಿಂಗಳೂ ಒಂದೇ ಸಮ ಇರೋಲ್ಲ. ಈ ಸಮಯಕ್ಕೆ ಸರಿಯಾಗಿ ಗಿಡಗಳಲ್ಲಿ ಕಾಫಿ ಹಣ್ಣಾಗಿ ಕೆಂಪಗೆ ಫಳಫಳ ಅಂತ ರೂಪಾಯಿ ಹೊಳೆಯುತ್ತಲಿರುತ್ತೆ. ಮಾಗಿಯ ಮೊದಲ ಅಧ್ಯಾಯ ಕಾಫಿಪಿಕ್ಕಿಂಗ್ ಶುರುವಾಗುತ್ತೆ. ಹಣ್ಣನ್ನೇ ಆರಿಸಿ ಬಿಡಿಸುವುದರಿಂದ ಪಿಕ್ಕಿಂಗ್ ಎನ್ನುವರು. ಇದು ಕಷ್ಟಕರವಲ್ಲದಿದ್ದರೂ ಹಣ್ಣು ಬಿಡಿಸಿ ಒಣಗಿಸಿ ಗೋಣಿ ಚೀಲ ತುಂಬಿಸಿ ಲಾರಿ ಲೋಡ್ ಮಾಡುವ ಹಂತಕ್ಕೆ ಬರಬೇಕಾದರೆ ದೊಡ್ಡ ಪ್ರೊಸೀಜರ್ ಇದೆ.

ಕಾಫಿ ಬೆಳೆಯನ್ನು ಅಗ್ರೋ ಇಂಡಸ್ಟ್ರಿ ಎಂದು ಪರಿಗಣಿಸಿದ್ದಾರೆ. ಕಾಫಿ ಮಾರ್ಕೆಟಿಂಗ್‌ದೇ ಬೇರೆ ಭಾಗ. ಹಿಂದೆ ಇದ್ದ ಮಾರ್ಕೆಟಿಂಗ್ ರೀತಿ ಇಂದಿನ ಎಫ್.ಎಸ್.ಕ್ಯೂ. ಮಾರಾಟದ ವ್ಯವಸ್ಥೆ ಬಗ್ಗೆ ಮತ್ತು ಕಾಫಿ ಕಾರ್ಮಿಕರ ಪರಿಸ್ಥಿತಿಯನ್ನು ಮುಂದೆ ನಾವು ತಿಳಿಯೋಣ. ಈಗ ಪಿಕ್ಕಿಂಗ್ ಮತ್ತು ಸಂಸ್ಕರಣೆ ನೋಡೋಣಂತೆ.

ಪಿಕ್ಕಿಂಗ್ ಶುರು ಮಾಡುವಷ್ಟರಲ್ಲಿ ಕಣವನ್ನು ಸಿದ್ಧಗೊಳಿಸಬೇಕಾಗುತ್ತದೆ. ಸಣ್ಣ ಬೆಳೆಗಾರರು ನೆಲದ ಮೇಲಿನ ಹುಲ್ಲು ಕಸ ತೆಗೆದು ಮಟ್ಟಸ ಮಾಡಿ ಸೆಗಣಿ ಸಾರಿಸಿ ಕಣ ಮಾಡಿಕೊಳ್ಳುತ್ತಾರೆ. ದೊಡ್ಡ ಬೆಳೆಗಾರರು ಹೆಂಚಿನ ಟೈಲ್ಸ್ ಕೂರಿಸಿ ಕಣ ಮಾಡಿಕೊಂಡಿರುತ್ತಾರೆ. ಕಾಫಿ ಕಾಯಿಗಳು ಒಟ್ಟಿಗೇ ಹಣ್ಣಿಗೆ ಬರುವುದಿಲ್ಲ. ಮೊದಲೆರಡು ಸುತ್ತಿನಲ್ಲಿ ಹಣ್ಣನ್ನು ಮಾತ್ರ ಬಿಡಿಸುವರು. ಆಳುಗಳು ಸೊಂಟಕ್ಕೆ ಒಂದು ಗೋಣಿ ಚೀಲವನ್ನು ಕಟ್ಟಿಕೊಂಡಿರುತ್ತಾರೆ. ಬಲಕ್ಕೆ ಅದರ ಬಾಯಿ ಬರುವಂತೆ. ಬರೀ ಹಣ್ಣುಗಳನ್ನೇ ಆಯ್ದು ಬಿಡಿಸಿ ಚೀಲದೊಳಕ್ಕೆ ಬಿಡುತ್ತಾರೆ. ಕೆಲಸದ ವೇಳೆ ಮುಗಿಯುತ್ತಿದ್ದಂತೆ ಹಣ್ಣನ್ನು ಕಣಕ್ಕೆ ತಂದನಂತರ ತೋಟದ ರೈಟ್ರು ಕೆ.ಜಿ. ಲೆಕ್ಕದಲ್ಲಿ ತೂಗಿ ಅಂದಂದೇ ಲೆಕ್ಕ ಬರೆದಿಡುವರು.

ಗ್ರಾಹಕರ ಬಳಕೆಗೆ ಸಿದ್ಧವಾಗಿ ಬರುವ ಕಾಫಿ ಬೀಜದಲ್ಲಿ ಪಾರ್ಚುಮೆಂಟು ಕಾಫಿ ಬೀಜ ಮತ್ತು ಚೆರ್ರಿ ಕಾಫಿ ಜೀಜವೆಂದು ಎರಡು ಬಗೆಗಳಿವೆ. ಕಾಫಿಹಣ್ಣಿನ ಸಿಪ್ಪೆಯನ್ನು ಬಿಡಿಸಿ ಸಂಸ್ಕರಿಸಿದ ಬೀಜವನ್ನು ಪಾರ್ಚಮೆಂಟ್ ಕಾಫಿ ಎನ್ನುವರು. ಈ ವೆರೈಟಿಗೆ ಹೆಚ್ಚು ಬೆಲೆ ಸಿಕ್ಕುತ್ತೆ. ಮತ್ತು ಹೆಚ್ಚು ರುಚಿಯೂ ಹೌದು. ಹಣ್ಣಿನ ಸಿಪ್ಪೆಯನ್ನು ಚಿದುಕಿಸುವ ಯಂತ್ರಕ್ಕೆ ಪಲ್ಪರ್ ಎನ್ನುವರು. ಕಣಕ್ಕೆ ತಂದ ಹಣ್ಣನ್ನು ಪಲ್ಪರ್ ಯಂತ್ರಕ್ಕೆ ನೀರಿನೊಟ್ಟಿಗೆ ಹಾಯಿಸುವರು. ಹೀಗೆ ಮಾಡಿದಾಗ ಸಿಪ್ಪೆ ಮತ್ತು ಬೀಜ ಬೇರ್ಪಡುತ್ತದೆ. ಈ ಸಿಪ್ಪೆಯನ್ನು ಸ್ವಲ್ಪ ಕಾಲದ ನಂತರ ಗೊಬ್ಬರವಾಗಿ ಉಪಯೋಗಿಸುತ್ತಾರೆ. ಸಿಪ್ಪೆಯಿಂದ ಬೇರ್ಪಟ್ಟ ಬೀಜವು ಲೋಳೆಯಿಂದ ಕೂಡಿರುತ್ತದೆ. ಅದನ್ನು ದೊಡ್ಡ ಸಿಮೆಂಟ್ ತೊಟ್ಟಿಯಲ್ಲಿ ಕೊಳೆಯಲು ಹಾಕಿರುತ್ತಾರೆ. ಎರಡು ದಿವಸದ ನಂತರ ಮತ್ತೆ ನೀರು ಹಾಯಿಸಿಕೊಂಡು ತುಳಿದು ಲೋಳೆ ಹೋಗುವಂತೆ ತೊಳೆದು ಕತ್ತ ಅಥವ ಪ್ಲಾಸ್ಟಿಕ್ ಶೀಟ್ ಮೇಲೆ ಹರಡಿ ಒಣಗಿಸುತ್ತಾರೆ. ಬಿಳಿ ಬಣ್ಣ ಮತ್ತು ಶುಚಿತ್ವವನ್ನು ಕಾಪಾಡಲಿಕ್ಕಾಗಿ ಕತ್ತದ ಮೇಲೆ ಒಣಹಾಕುತ್ತಾರೆ. ಹೀಗೆ ಸಂಸ್ಕರಣಾ ಘಟಕಗಳನ್ನು ದೊಡ್ಡ ಕಾಫಿ ತೋಟಗಳವರು ದೊಡ್ಡ ದೊಡ್ಡ ಎರಡು ಮೂರು ಸಿಮೆಂಟ್ ತೊಟ್ಟಿಗಳಿರುವ ಪಲ್ಪರ್ ಹೌಸ್ ಎಂದೇ ಕಟ್ಟಿಕೊಂಡಿರುತ್ತಾರೆ. ವಿದ್ಯುಚ್ಛಾಲಿತ ಯಂತ್ರವನ್ನು ಅಳವಡಿಸಿರುತ್ತಾರೆ. ಸಣ್ಣ ತೋಟದವರು ಉಪಯೋಗಿಸಲು ಕೈಯಿಂದ ಓಡಿಸುವ ಯಂತ್ರವೂ ಲಭ್ಯವಿದೆ. ಇದನ್ನು ಟಿಲ್ಲರ್‌ಗೆ ಅಳವಡಿಸಿಕೊಂಡೂ ಉಪಯೋಗಿಸುವರು.

ದೊಡ್ಡ ತೋಟದವರು ಕಾಫಿ ಪಲ್ಪ ಮಾಡಿದ ನಂತರ ಬರುವ ದುರ್ವಾಸನೆಯ ವಿಷಯುಕ್ತ ನೀರನ್ನು ನದಿಗಳಿಗೆ ಬಿಡುತ್ತಾರೆ. ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ದೊಡ್ಡ ಮಟ್ಟದಲ್ಲಿ ನೀರು ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟಲು ಅನೇಕ ವಿಧಿ ವಿಧಾನಗಳನ್ನು, ಕಾನೂನುಗಳನ್ನೂ ಮಾಡಿದ್ದರೂ ತಡೆಗಟ್ಟುವುದು ಸಮರ್ಪಕವಾಗಿ ನಡೆಯುತ್ತಿಲ್ಲ. ಈಗ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸ್ಕ್ವಾಡ್‌ಗಳನ್ನು ನೇಮಿಸಿ ಪಲ್ಪರ್ ಹೌಸ್‌ಗಳನ್ನು ಸೀಸ್ ಮಾಡುವ ಕ್ರಮವನ್ನೂ ತೆಗೆದುಕೊಳ್ಳುತ್ತಿದ್ದಾರೆ.

ಹಣ್ಣು ಬಿಡಿಸಿದ ನಂತರ ಉಳಿದ ಹಸಿರು ಕಾಯಿಗಳನ್ನು ಬಿಡಿಸಿ ತಂದು ಕಣದಲ್ಲಿ ಒಣಗಿಸುವರು. ಇದಕ್ಕೂ ನಿರ್ದಿಷ್ಟವಾದ ತೂಕದ ನಿಯಮಾನುಸಾರವನ್ನೇ ಅನುಸರಿಸಲಾಗುತ್ತದೆ. ಅನಂತರ ಕಸಕಡ್ಡಿಧೂಳು ಇಲ್ಲದಂತೆ ಚೀಲ ತುಂಬಿ ಸಿದ್ಧಮಾಡುವರು. ಇದನ್ನು ಚೆರ್ರಿ ಕಾಫಿಯೆಂದು ವಿಂಗಡಿಸುವರು. ಈ ವೆರೈಟಿಯನ್ನು ಎರಡನೇ ದರ್ಜೆಯ ಕಾಫಿಯೆಂದು ವಿಂಗಡಿಸುವರು. ಇದರ ಬೆಲೆ ಪಾರ್ಚಮೆಂಟ್ ಕಾಫಿಯ ಅರ್ಧದಷ್ಟಕ್ಕೆ ನಿಗದಿsಗೊಳ್ಳುತ್ತದೆ. ಅದರಷ್ಟು ರುಚಿಯೂ ಬರುವುದಿಲ್ಲವೆಂದು ಹೇಳುವರು.

ಹಲವಾರು ವರ್ಷಗಳ ಹಿಂದಿನಿಂದ ಬಂದಿದ್ದ ಈ ಸಂಸ್ಕರಣಾ ವಿಧಾನದಲ್ಲಿಯೂ ಈವತ್ತಿನ ಟೆಕ್ನಾಲಜಿಯನ್ನು ಬಳಸಿಕೊಂಡು ಬದಲಾವಣೆ ಕಾಣುತ್ತೇವೆ. ಹಣ್ಣನ್ನು ಪಲ್ಪಮಾಡಿ ಎರಡುದಿನ ಕಳೆದ ನಂತರ ತೊಳೆಯುವ ಬದಲು ಇನ್‌ಸ್ಟೆಂಟೇನಿಯಸ್ ತೊಳೆಯುವ ಯಂತ್ರವನ್ನು ಬಳಸುತ್ತಾರೆ. ಬೀಜವನ್ನು ನೇರವಾಗಿ ಕಣದಲ್ಲಿ ಒಣಹಾಕಬಹುದು.

ಈ ಎರಡೂ ಬಗೆಯ ಕಾಫಿ ಬೀಜವನ್ನು ಅಳೆದು ಚೀಲಗಳಿಗೆ ತುಂಬಿ ಕಾಫಿ ಕ್ಯೂರಿಂಗ್ ಕಾರ್ಖಾನೆಗಳಿಗೆ ಕಳಿಸುತ್ತಾರೆ. ಇಲ್ಲಿ ಪ್ರತಿಯೊಬ್ಬರ ಕಾಫಿಯನ್ನೂ ಬೇರೆ ಬೇರೆಯಾಗಿ ಇಟ್ಟಿದ್ದು ಒಬ್ಬೊಬ್ಬರದಾಗಿ ಹಸನುಮಾಡಿ ವಿಂಗಡಿಸುವರು. ಇದು ಸಂಸ್ಕರಣಾ ಘಟಕದ ಒಂದು ವಿಹಂಗಮ ನೋಟ.

ಕೇರೆ ಹಾವು, ನವಿಲು ಮತ್ತು ಮೂಡಿಗೆರೆ ಎಂಬ ಚಿಕ್ಕ ಊರು

 ಐದು ದಶಕಗಳ ಹಿಂದೆ ಬೆಂಗಳೂರಿನಿಂದ ನನ್ನ ತೌರಿನವರು ಮೂಡಿಗೆರೆಗೆ ಬಂದಾಗ ಇದ್ದ ವಾತಾವರಣಕ್ಕೂ ಈಗಿನ ಪರಿಸ್ಥಿತಿಗೂ ಅಜಗಜಾಂತರ. ಆಗ ನೋಡಲು ಹೆದರಿಕೆಯಾಗುವಷ್ಟು ಅರಣ್ಯ ದಟ್ಟವಾಗಿತ್ತು. ಈಗ ಎಲ್ಲೆಲ್ಲೂ ಕಾಡು ಕಡಿದು ಬೇಲಿ ಹಾಕಿಕೊಂಡು ತೋಟ ಮಾಡಿದ್ದಾರೆ. ಮನೆ ಸುತ್ತಲ ಕಾಡಿನಲ್ಲಿ ನವಿಲು, ಹಾರುಬೆಕ್ಕು, ಕಬ್ಬೆಕ್ಕು, ಕಾಡುಹಂದಿ, ಕಾಡುಕುರಿ, ಬರ್ಕ ಎಲ್ಲ ಇದ್ದುವು. ಕಾಟಿಗಳ ಹಿಂಡೇ ಮನೆ ಎದುರಿನ ಅಂಗಳದಲ್ಲಿ ನುಗ್ಗಿ ಹೋಗುತ್ತಿದ್ದವು. ಈಗ ಅವು ಯಾವೂ ಕಾಣಸಿಗುವುದಿಲ್ಲ. ಎಲ್ಲೊ ಒಮ್ಮೊಮ್ಮೆ  ನವಿಲು ಕೇಕೆ ಹಾಕುತ್ತವೆ. ಒಂದು ರಾತ್ರಿ ಜೋರು ಮಳೆ ಸುರಿಯುತ್ತಿದ್ದಾಗ ಬೆದೆಗೆ ಬಂದ ಕಾಡು ಕುರಿಯೊಂದು ಹ್ಹಾ ಹ್ಹಾ ಎಂದು ಭಯಂಕರವಾಗಿ ಕೂಗುತ್ತಾ ಮನೆಯ ಪಕ್ಕದಲ್ಲೇ ಹೋಗಿತ್ತು. ಅದನ್ನು ಕೇಳಿದ ನಾನು ಹೆದರಿ ನಡುಗಿ ಹೋಗಿದ್ದೆ.

ಇತ್ತೀಚೆಗೆ ಎಲ್ಲೆಡೆ ಆಗಿರುವಂತೆ ಇಲ್ಲಿಯೂ ನವಿಲುಗಳು ಹೆಚ್ಚಾಗಿ, ಅವು ಕೂಗುವ ಸದ್ದು ಸದಾ ಕೇಳುತ್ತಿರುತ್ತೆ. ಅಷ್ಟೇ ಅಲ್ಲ ಮನೆ ಪಕ್ಕದ ರಂಜದ ಮರದ ಮೇಲೆ ಎರಡು ಮೂರು ನವಿಲುಗಳು ಸಂಜೆ ಹೊತ್ತು ಬಂದು ಗೊತ್ತು ಕೂರುತ್ತವೆ. ಯಾವಾಗಲಾದರೂ ಒಂದೊಂದು ಸಲ ಗಂಡು ನವಿಲು ಉದ್ದಗರಿ ಬಿಚ್ಚಿಕೊಂಡು ಮನೆ ಹಿಂದಿನ ಅಂಗಳದಲ್ಲಿ ಓಡಾಡುವುದನ್ನು ನೋಡುತ್ತೇವೆ. ಅವು ಬಹಳ ಸೂಕ್ಷ್ಮ, ನಮ್ಮ ನೆರಳು ಅಲ್ಲಾಡಿದ್ದು ಗೊತ್ತಾದರೆ ಸಾಕು ನಡೆದುಕೊಂಡೇ ಹೋಗಿ ಕಾಡೊಳಗೆ ಮರೆಯಾಗುತ್ತವೆ.

ಇಲ್ಲಿ ಕಾಂಕ್ರೀಟ್ ಕಾಡು ಇಲ್ಲ. ಹಸಿರು ಕಾಡಿದೆ. ಹಾಗಾಗಿ ಹಾವುಗಳು ಇವೆ. ಮಳೆಗಾಲ ಮುಗಿದಿದೆ. ಚಳಿಗಾಲಕ್ಕೆ ಕಾಲಿಟ್ಟಿರುವೆವು. ಛಳಿ ಛಳಿ ಅಂತಿರಬೇಕಾದರೆ ಒಳ್ಳೆ ಬಿಸಿಲು ಚುರುಕಾದ ಬಿಸಿಲು ಬರುತ್ತೆ. ಈ ಬಿಸಿಲು ಕಾಯಿಸುವುದು ಹಾವಿಗೂ ಇಷ್ಟ. ಪೇಟೆಗೆ ಹೋಗೋಣೆಂದು ಬಾಗಿಲು ತೆಗೆದರೆ ತುಸುವೇ ದೂರದಲ್ಲಿ ಉದ್ದುದ್ದ ಹಾವು ಬಿಸಿಲಿಗೊರಗಿರುತ್ತೆ. ಜಂಘಾಬಲವೇ ಉಡುಗಿ ಹೋಗುತ್ತೆ. ಮನೆ ಪಕ್ಕ  ಹಾವು ಅಂದರೆ ಏನು! ಸಾಮಾನ್ಯವಾಗಿ ಅದು ಕೇರೇ ಹಾವಾಗಿರುತ್ತೆ. ನಮ್ಮ ಸಪ್ಪಳ ತಿಳಿದು ಸೊಯ್ಯಂತ ವೇಗವಾಗಿ ಹರಿದು ಹೋಗುತ್ತೆ. ಕೇರೇ ಹಾವು ಅಂಥ ಅಪಾಯಕಾರಿ ಏನೂ ಅಲ್ಲ. ಆಗೊಮ್ಮೆ ಈಗೊಮ್ಮೆ ಕಟ್ಟ್ಹಾವೂ, ನಾಗರ ಹಾವೂ ನೋಡುತ್ತೇವೆ. ಯಾವಾಗಲಾದರೂ ಒಂದೊಂದು ಸಲ ಮನೆ ಒಳಗೂ ಬರುತ್ತವೆ. ಸಿಮೆಂಟು ನೆಲವಾಗಿರುವುದರಿಂದ ಅವಕ್ಕೆ ಹರಿದಾಡಲು ಕಷ್ಟ. ಅಲ್ಲದೆ ಮನೆ ನಾಯಿಗಳೂ ಇರುತ್ತವೆ. ಇನ್ನು ಮನೆ ಹಿಂಬಾಗದಲ್ಲಿ, ಕಣದಲ್ಲಿ ಬಟ್ಟಂ ಬೇಸಿಗೆಯಲ್ಲಿ ಜೋಡಿಹಾವು ಜಾಗರ ಆಡ್ತಿರುತ್ತವೆ. ಅದೂ ಎರಡು ಮೂರು ದಿವಸ, ಆಮೇಲೆ ನಾಪತ್ತೆ. ಹಾವುಗಳ ಬಗ್ಗೆ ನಮ್ಮ ಎಚ್ಚರಿಕೆ ನಮಗಿರಬೇಕು. ಪಕ್ಕದ ಕೆರೆಯಲ್ಲಿ ನೀರು ಹಾವು ಸಾಮಾನ್ಯ. ಗಿಡದ ಮೇಲೆ ಹಸಿರು ಹಾವು ಒಂದೊಂದು ಸಲ ಕಾಣಸಿಗುತ್ತೆ. ಈ ಹಸಿರು ಹಾವು ಬಂದು ಕಣ್ಣಿಗೇ ಕುಕ್ಕುತ್ತವೆ ಅಂತ ಹೇಳ್ತಾರಪ್ಪ! ಏನೋ ಗೊತ್ತಿಲ್ಲ. ಇಲ್ಲೆ ಮೊನ್ನೆ ಒಬ್ಬರು ರಸ್ತೆ ಮೇಲೆ ನಾಗರಹಾವು ಹೋಗಿತ್ತೆಂದು ತಪ್ಪಿಸಲು ಹೋಗಿ ಆಕ್ಸಿಡೆಂಟ್‌ಗೆ ಒಳಗಾದರು.

(ಮಂಜನ ಮಗಳು ಚೆನ್ನಿ ಪ್ಯಾಟೆ ಬೀದಿಗೆ ಬಂದಾಗ ಎಲ್ಲಾ ತಹಬಂದಿಯಲ್ಲಿತ್ತು. ಕುಪ್ಪುಸದೊಳಗೆ ತುರುಕಿ ಸೀರೆಗಂಟಿನಲ್ಲಿ ಮೂಟೆ ಕಟ್ಟಿದ್ದ ಹದಿನಾರರ ಹರಯ ಸಹ, ಬಿಸಿಲೇರುತ್ತ ಬಂದಂತೆ ಎಲ್ಲ ಹದ್ದುಬಸ್ತು ಮೀರಿ ಕುತ್ತಿಗೆಯ ಮೇಲೆ ಬೆವರಿಳಿದು ಹಣೆಮೇಲೆ ದಪ್ಪ ಕೂರಿಸಿದ ಕುಂಕುಮ ಇಳಿಯುತ್ತಾ ತಿಲಕವಾಗಿ ಕೊನೆಗೆ ನಾಮದ ಕಡೆಗೆ ಮುಂದುವರಿಯುತ್ತ ಹೋಯ್ತು.-ತೇಜಸ್ವಿ)

ಇನ್ನು ಮೂಡಿಗೆರೆ ಊರಿನ ಬಗ್ಗೆ. ಹಿಂದೆ ಇದೊಂದು ನಿರ್ಜನ ಕುಗ್ರಾಮ. ಯಾವಾಗಲೋ ಒಂದೊಂದು ಬಸ್ಸು ಬಂದು ಹೋಗುತ್ತಿದ್ದವು. ಪೇಟೆ ಬೀದಿಯಲ್ಲೂ ಸಹ ಕೇವಲ ನಾಲ್ಕಾರು ಜನ ಓಡಾಡುವುದು ಕಾಣುತ್ತಿತ್ತು. ಅಂದು ಅಲ್ಲಿ ಓಡಾಡುತ್ತಿದ್ದ ಗಂಡಸರು ಮಹಿಳೆಯರು (ಗೌಡರು, ಗೌಡತಿಯರು) ಇಂದು ಆಂಟಿಕ್ನಂತಾಗಿದ್ದಾರೆ. ಅಂದಿನ ಅವರ ವೇಷಭೂಷಣ ಈಗ ಎಲ್ಲೂ ಕಾಣಸಿಗಲಿಕ್ಕಿಲ್ಲ. ಮಂಡಿ ಮುಚ್ಚುವಷ್ಟು ಒಂಟಿ ಪಂಚೆ, ಬಿಳಿ ಶರ್ಟು, ಕರಿಕೋಟು, ತಲೆಮೇಲೆ ಸ್ವಲ್ಪ ಎಣ್ಣೆ ಹಿಡಿದಂತ ಕರಿಟೋಪಿ. ಶ್ರೀಮಂತ ಗಂಡಸರು ಶರ್ಟಿನೊಂದಿಗೆ ಒಂದು ಖಾಕಿ ಚಡ್ಡಿ. ತಲೆಯಮೇಲೆ ಕಪ್ಪು ಟೋಪಿ. ಹೆಂಗಸರು(ಒಕ್ಕಲಿಗರಲ್ಲಿ) ನೆರಿಗೆಗಳನ್ನು ಮುಂದೆ ಮಾಡಿ ಸೆರಗನ್ನು ಮಾತ್ರ ಕೊಡಗರಂತೆ ಉಡುತ್ತಿದ್ದರು. ಇದನ್ನು ಗೊಬ್ಬೆ ಸೀರೆ ಎಂದು ಕರೆಯುತ್ತಿದ್ದರು. ಅವರು ಧರಿಸುತ್ತಿದ್ದ ಆಭರಣಗಳು ಇಂದು ನೋಡಲಿಕ್ಕೂ ಕಾಣಸಿಗೋಲ್ಲ. ಏಳೆಂಟು ವರ್ಷಗಳ ಹಿಂದೆ ಗೌರಿಹಬ್ಬದಲ್ಲಿ ಬಳೆ ಕೊಳ್ಳಲಿಕ್ಕೆಂದು ಮೂಡಿಗೆರೆ ಎಂ.ಜಿ. ರಸ್ತೆ (ಪೇಟೆ ಬೀದಿ)ಗೆ ಹೋದೆ. ಅಲ್ಲೊಬ್ಬರು ಈ ಗೊಬ್ಬೆ ಸೀರೆ ಉಟ್ಟವರು ವಯಸ್ಸಾದ ಮಹಿಳೆ ಮೊಮ್ಮಕಳೊಟ್ಟಿಗೆ ಹೋಗುತ್ತಿದ್ದರು. ಅವರು ತುರುಬಿಗೆ ಕುಪ್ಪಿಗೆ ಸಿಕ್ಕಿಸಿಕೊಂಡಿದ್ದರು. ಮತ್ತು ಕಿವಿಗೆ ಹಾಕಿದ್ದ ಬುಗುಡಿಯಿಂದ ಬಂದ ಬಂಗಾರದ ಸರ ಕುಪ್ಪಿಗೆಗೆ ಸೇರಿಕೊಂಡಂತೆ ಇತ್ತು. ಮೆಲ್ಲಗೆ ಅವರ ಹಿಂದೆಯೇ ಒಂದಷ್ಟು ದೂರ ನಡೆದೆ. ಆ ಆಭರಣದ ಚೆಂದ ನೋಡಿದೆ. ಮನಸ್ಸಿಗೆ ಚೆಂದವಾಯಿತು. ಅಂದು ಇಂತಹ ಉಡಿಗೆ ತೊಡಿಗೆಯವರೇ ಪೇಟೆ ಬೀದಿಯಲ್ಲಿ ಕಾಣಸಿಗುತ್ತಿದ್ದರು.

ಆ ಕಾಲದಲ್ಲಿ ದೊಡ್ಡ ವಿಶಾಲವಾದ ಅಂಗಡಿಗಳಿದ್ದವು. ಅಂಗಡಿ ಮಧ್ಯದಲ್ಲಿ ಒಂದು ದಪ್ಪದಾರ ಇಳಿಬಿಟ್ಟಿರುತ್ತಿದ್ದರು. ಒಬ್ಬ ಬ್ಯಾರಿ ಅಥವಾ ಕಾಕಾ ಅಲ್ಲಿ ನಿಂತಿರುತ್ತಿದ್ದರು. ಸಣ್ಣ ಸಣ್ಣ ಹಲಗೆ ಕಪಾಟುಗಳನ್ನು ತೆಳ್ಳಗೆ ಇಳಿಜಾರಿನಂತೆ ಮಾಡಿ ಜೋಡಿಸಿಟ್ಟಿರುತ್ತಿದ್ದರು. ಈರುಳ್ಳಿ ಬೆಳ್ಳುಳ್ಳಿ, ಮಂಗಳೂರು ಕಾಫಿಬೆಲ್ಲ ವಗೈರೆ ದಿನಸಿ ಸಾಮಾನುಗಳನ್ನು ಅವುಗಳಲ್ಲಿ ತುಂಬಿಟ್ಟಿರುತ್ತಿದ್ದರು. ಕ್ರಮೇಣ ಎಲ್ಲವೂ ಬದಲಾಯಿತು. ಮೂಡಿಗೆರೆಯೂ ನಮ್ಮ ದೇಶದ ಎಲ್ಲಾ ಪೇಟೆಗಳಂತೆಯೇ ಅಂಗಡಿಗಳ ಊರಾಗಿದೆ. ಬೆಂಗಳೂರು ಅಂಗಡಿಗಳಂತೆಯೇ ಕಾಣುತ್ತಿದೆ. ಅಂಗಡಿಗೆ ಯಾವ ಸಮಯದಲ್ಲಿ ಹೋದರೂ ಜನರ ನೂಕು ನುಗ್ಗಲು ಇರುತ್ತೆ. ನಮ್ಮೂರಿನ ಬೇಕರಿ ಬಗ್ಗೆ ಒಂದು ಮಾತು. ಬೇಕರಿ ಟ್ರೈನಿಂಗ್ ಸೌಲಭ್ಯವಿರುವುದರಿಂದ ಇಂದಿನ ಯಾವ ಕುಗ್ರಾಮಕ್ಕೆ ಹೋದರೂ ಒಳ್ಳೆ ಬ್ರೆಡ್ಡು ಸಿಗುತ್ತೆ. ಆದರೆ ಮೂಡಿಗೆರೆ ಅಯ್ಯಂಗಾರ್ಸ್ ಬೇಕರಿ ಬ್ರೆಡ್ಡು ಮಾತ್ರ ಬೆಂಗಳೂರಿನ ಬ್ರೆಡ್ಡಿಗಿಂತಲೂ ಚೆನ್ನಾಗಿರುತ್ತೆಂದು ಎಲ್ಲರೂ ಹೊಗಳುವವರೆ.

ಈಗೆಲ್ಲ ನಮ್ಮ ರಸ್ತೆಗಳು ಬಹಳ ಹಾಳಾಗಿವೆ. ಎಲ್ಲ ರಸ್ತೆಗಳಂತೆ ಏನೇನೂ ಸರಿಯಿಲ್ಲ. ಅವು ಅಗಲ ಕಿರಿದಾಗಿ ಅಲ್ಲಲ್ಲೇ ರಸ್ತೆಯ ಮಧ್ಯದಲ್ಲಿ ಹೊಂಡದೋಪಾದಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಕಂಡು ಬರುತ್ತವೆ. ಇದು ಶ್ರೀಮಂತ ತಾಲ್ಲೂಕು. ಪ್ಲಾಂಟರ್ಸ್ ಕ್ರೇಜು ವಿಪರೀತ. ಪ್ಲಾಂಟರುಗಳಲ್ಲಿ ಒಂದೆರಡು ಕಾರು ಹೊಂದುವುದು ಸಾಮಾನ್ಯವಾಗುತ್ತಿದೆ. ಹಾಗಾಗಿ ವಾಹನಗಳ ದಟ್ಟಣೆ ಹೆಚ್ಚಿದೆ. ರಿಪೇರಿ ವರ್ಕ್‌ಷಾಪುಗಳೂ ತಲೆಯೆತ್ತಿವೆ. ದಾರಿಯುದ್ದಕ್ಕೂ ನಿಂತಿರುವ ಮುರುಕಲು ವಾಹನಗಳ ದೆಸೆಯಿಂದ ಇಡೀ ಊರು ದೊಡ್ಡ ಗುಜರಿಯಂತೆ ಕಾಣುತ್ತಿದೆ.

ನಮ್ಮ ಮೂಡಿಗೆರೆ ಸಣ್ಣ ಊರು. ಜನ ಸಂಖ್ಯೆಯೂ ಅಷ್ಟಕ್ಕಷ್ಟೆ. ಅಂತಹದರಲ್ಲೂ ಪೇಟೆ ಬೀದಿಯಲ್ಲಿ ಸುಮಾರು ಚಿನ್ನಾಭರಣ ಅಂಗಡಿಗಳಿವೆ. ಹಾಗೂ ಇಲ್ಲಿ ದೊರೆಯುವ ಆಭರಣಗಳ ಮಾದರಿಗಳಂತೂ ಬಹಳ ವಿಶಿಷ್ಟ.