ಬಾದಾಮಿ ಐಹೊಳೆಗಳ ಗುಹೆಗಳನ್ನು ಕಡೆಯುವ ವೇಳೆಗಾಗಲೇ ಆ ರೂವಾರಿಗಳಿಗೆ ಸುಮಾರು 800 ವರ್ಷಗಳ ಪರಂಪರೆಯ ಹಿನ್ನೆಲೆ ಇದ್ದಿತು. ಕಲ್ಪನೆ ಮತ್ತು ರೂಪಿಸುವ ಕುಶಲತೆಯೂ ಬೆಳೆಯಿತು: ಒಳ ಮತ್ತು ಹೊರ ಭಿತ್ತಿಗಳ ಅಲಂಕರಣವು ಸೇರ್ಪಡೆಗೊಂಡಿತು. ಚಾಲುಕ್ಯರ ರೂವಾರಿಗಳು ತಮ್ಮ ಪೂರ್ವಸೂರಿಗಳ ವಾರಸುದಾರರಂತೆ ತಮ್ಮ ಕರಕುಶಲತೆಯನ್ನು ಮೆರೆದರು. ಪರಂಪರೆಗೆ ಋಣಿಗಳಾಗಿಯೂ ತಮ್ಮದೇ ಆದ ಅನುಭವ, ಸ್ಥಳೀಯ ಪರಿಕರ, ಮಾಧ್ಯಮಗಳಿಂದ ಅನನ್ಯ ದೃಶ್ಯ ಲೋಕವನ್ನೇ ಸೃಷ್ಟಿಸಿದರು.
ಚಿತ್ರಕಲಾವಿದ ಪುಂಡಲೀಕ ಕಲ್ಲಿಗನೂರು ಅವರ “ಚಾಲುಕ್ಯರ ಶಿಲ್ಪಕಲೆ” ಶಿಲ್ಪಕಲಾ ಪುಸ್ತಕಕ್ಕೆ ಕೆ.ವಿ. ಸುಬ್ರಹ್ಮಣ್ಯ ಬರೆದ ಮುನ್ನುಡಿ

 

ಕನ್ನಡದ ಸಾಂಸ್ಕೃತಿಕ ಪರಂಪರೆಯ ಹಿನ್ನೋಟವನ್ನು ನೋಡುವಾಗ, ಅದರ ಇನ್ನು ಎಷ್ಟೋ ಮುಖಗಳೊಂದಿಗೆ ಮುಖಾಮುಖಿಯಾಗುವ ಮಹತ್ವಾಕಾಂಕ್ಷೆಯ ಅಪೂರ್ವ ಸಾಹಸಿಗರ ಅಗತ್ಯ ಕಾಣುತ್ತೇವೆ. ಈ ನೋಟಕ್ಕೆ ನೇರವಾಗುವಂತೆ, ಪೂರಕವಾಗಿ ನಮ್ಮ ಮುಂದೆ ಕಾಣುವ ಪುಂಡಲೀಕ ಕಲ್ಲಿಗನೂರು ಅವರ, ಅನನ್ಯ “ಚಾಲುಕ್ಯರ ಶಿಲ್ಪಕಲೆ: ಬಾದಾಮಿ ಐಹೊಳೆ ಪಟ್ಟದಕಲ್ಲು ಮತ್ತು ಮಹಾಕೂಟ” ಪುಸ್ತಕವು ಮೂಡಿಬಂದಿದೆ. ಪುಸ್ತಕದ ಒಳಹೊಕ್ಕಂತೆ ಕಾಣುವ ದೃಶ್ಯಾಕ್ಷರ ಲೋಕಗಳು ಆನಂದದ ಜೊತೆಗೆ, ಬೆರಗನ್ನೂ ಉಂಟುಮಾಡುತ್ತವೆ. ಈ ಪುಸ್ತಕದತ್ತ ಕಣ್ಣು ಹಾಯಿಸುತ್ತಲೇ, ನನ್ನ ಮನಸ್ಸಿನಲ್ಲಿ ಹಾದುಹೋದ ಚಾಲುಕ್ಯ ಸಾಮ್ರಾಜ್ಯದ ಮಹಾನ್ ದೃಶ್ಯಕಲಾ ಸಂಸ್ಕೃತಿಯ ನೋಟಗಳು ಹತ್ತು: ಹಲವು.

(ಪುಂಡಲೀಕ ಕಲ್ಲಿಗನೂರು)

ಆದಿಮ ಮತ್ತು ವಿಶಿಷ್ಟ ಐತಿಹಾಸಿಕ ಪರಂಪರೆಯನ್ನು ಭೂಮಿಕೆಯನ್ನಾಗಿಸಿಕೊಂಡ ತಮ್ಮ ಮಹತ್ವಾಕಾಂಕ್ಷೆಯ ದೇವಾಲಯ ವಾಸ್ತು ಮತ್ತು ಶಿಲ್ಪ ಶೈಲಿಗಳನ್ನು ಚಾಲುಕ್ಯರು ಕಂಡುಕೊಂಡರು. ವಿಶ್ವವೇ ಬೆರಗುಗಣ್ಣುಗಳಿಂದ ನೋಡುವಂತಹ ಸೃಷ್ಟಿಗಳಿಗೆ ಕಾರಣರಾದರು. ಹಾಗಾಗಿಯೇ ಅವರ ದೇವಾಲಯ ವಾಸ್ತುಶಿಲ್ಪಗಳು ವಿಶ್ವಪರಂಪರೆಯ ಸಂರಕ್ಷಿತ ಸ್ಮಾರಕಗಳಾಗಿವೆ. ಬಾದಾಮಿಯ ಸುತ್ತಮುತ್ತಲೂ ಹತ್ತಾರು ಆದಿಮ ಗುಹಾ ಚಿತ್ರನೆಲೆಗಳಿದ್ದು ಇನ್ನೂ ಗುರುತಿಸಲ್ಪಡದ ಹಲವು ನೆಲೆಗಳಿವೆ: ಇರಲಿ. ವಿಶ್ವಪರಂಪರೆಯ ಸಂರಕ್ಷಿತ ನೆಲೆಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದ ಭೀಮ್ ಬೇಡ್ಕಾಗೆ ಬಾದಾಮಿಯು ಸಮಕಾಲೀನ, ಎಂದ ದಿ.ಪ್ರೊ.ವಿಷ್ಣುವಾಕನ್ಕರ್ ರವರಿಂದ ಗುರುತಿಸಲ್ಪಟ್ಟಿರುವ ಹಲವು ಚಿತ್ರನೆಲೆಗಳಿವೆ. ಈ ಪ್ರದೇಶದಲ್ಲಿ ಹಲವರು ಆದಿಮ ಕಲಾ ಇತಿಹಾಸ ಅನ್ವೇಷಕರು ಅಡ್ಡಾಡಿ ಅನ್ವೇಷಿಸಿ ಹೋಗಿದ್ದಾರೆ. ಐಹೊಳೆಯ ಮೇಗುತಿ ಗುಡ್ಡದಲ್ಲಿಯು ಆದಿಮ ಚಿತ್ರಗಳಿವೆ. ಒಂದೆಡೆಯಂತೂ ನೋಡುವುದೇ ಕಷ್ಟವಾಗಿರುವ ಸ್ಥಳದಲ್ಲಿ ರೇಖಾಚಿತ್ರಗಳನ್ನು ಹೇಗೆ ಚಿತ್ರಿಸಿರಬಹುದು ಎಂಬ ಕುತೂಹಲವು ಉಂಟಾಗಬಲ್ಲದು; ಇರಲಿ.

ಮಹಾನ್ ಯೋಧನಾಗಿದ್ದ 2ನೆಯ ಪುಲಕೇಶಿಯ ಕಾಲಕ್ಕೆ, ಆಂಧ್ರಪ್ರದೇಶಕ್ಕೆ ‘ಪೂರ್ವ ಚಾಲುಕ್ಯ’ರ ಒಂದು ಕೊಂಬೆಯು ಚಾಚಿಕೊಂಡರೆ, ಮತ್ತೊಂದು ಕೊಂಬೆಯು ಅವನ ಮಗನ ಕಾಲಕ್ಕೆ ದಕ್ಷಿಣ ಗುಜರಾತಿಗೂ ಹಬ್ಬಿತು. ಹೀಗೆ ಇಡೀ ದಕ್ಷಿಣ ಭಾರತದಲ್ಲಿ ಚಾಲುಕ್ಯರ ಪ್ರಭಾವ ಇದ್ದಿತು. ಈ ಸಂಪರ್ಕಗಳು ಈ ಎಲ್ಲ ಪ್ರದೇಶಗಳ ನಡುವಿನ ಪ್ರಜಾರಾಜಕಾರಣವನ್ನೇ ಅಲ್ಲದೆ, ಸಾಂಸ್ಕೃತಿಕ ರಾಜಕಾರಣವನ್ನೂ ತೀವ್ರವಾಗಿ ಪ್ರಭಾವಿಸಿದವು. ಪುರಾಣಗಳ ಎಲ್ಲ ಕೌತುಕಗಳನ್ನು, ಸಂಕೇತ ರೂಪಗಳನ್ನು ದೇವತೆಗಳೊಂದಿಗೆ ಸಂಭಾಷಿಸುವಂತೆ ಕೆಂಗಾವಿ ಬಣ್ಣದ ಬೆಟ್ಟ – ಬಂಡೆಗಳನ್ನೆಲ್ಲ ಶಿಲ್ಪ ಸದೃಶ್ಯವಾಗಿ ಕಂಡವರು ಚಾಲುಕ್ಯರು. ಕೆಂಗಾವಿ (red-ochre) ಬಣ್ಣದ ದೇಗುಲಗಳು ಬಾದಾಮಿ ಪಟ್ಟದಕಲ್ಲು ಐಹೊಳೆ ಮತ್ತು ಮಹಾಕೂಟಗಳಲ್ಲಿ ರೂಪಗೊಂಡಿವೆ. ಪೂರ್ವ ಚಾಲುಕ್ಯರ ಕೊಡುಗೆಯಾಗಿ, ದೂರದ ಆಲಂಪುರ, ಸತ್ಯವೊಲು ಮತ್ತು ಮಹಾನಂದಿ ಮೊದಲಾದ ನೆಲೆಗಳಲ್ಲಿಯೂ ಈ ದೇವಾಲಯ ಪ್ರಯೋಗಗಳು ಗರಿಗೆದರಿದವು. ಚಾಲುಕ್ಯ ದೇವಾಲಯ ವಾಸ್ತು ರುವಾರಿ/ಶಿಲ್ಪಿ ಗಳು ‘ಸುಪ್ರಭೇದಾಗಮ,’ ‘ಶಿಲ್ಪರತ್ನ’ಗಳಲ್ಲಿ ಉಲ್ಲೇಖಿತ ನಾಗರ, ವೇಸರ ಮತ್ತು ದ್ರಾವಿಡ ಮೂರೂ ಶೈಲಿಗಳಲ್ಲಿ ನಿರ್ಮಿಸಿದ್ದಾರೆ. ತಮ್ಮ ದೇವಾಲಯ ವಾಸ್ತು ರೂವಾರಿ ಮತ್ತು ಶಿಲ್ಪಿಗಳ ಅಸಾಮಾನ್ಯ ಪೋಷಕರಾಗಿದ್ದ ಚಾಲುಕ್ಯರು, ಅಶಾಶ್ವತ ಲೋಕದಲ್ಲಿ ಶಾಶ್ವತ ದೇಗುಲಗಳನ್ನು ನಿರ್ಮಿಸಿದ್ದು, ಮುಂದಿನವರು ಅನುಸರಿಸಬಹುದಾದ ಹಾದಿಯಂತಿತ್ತು!

ಉತ್ತರ ಕರ್ನಾಟಕದ ಜೀವಧ್ವನಿಯನ್ನು ಅರಗಿಸಿಕೊಂಡ ಚಾಲುಕ್ಯರು, ಕೆಲವೊಮ್ಮೆ ತಮ್ಮ ರಾಜಧಾನಿಯನ್ನು ಕಳೆದುಕೊಂಡರೂ ಹಲವು ಶತಮಾನಗಳ ಕಾಲ ಒಂದು ಮನೆತನವಾಗಿ ಆಳಿದರು. ಅವರ ದೈವಿಕತೆಯ ದೇವಾಲಯ ವಾಸ್ತುಶಿಲ್ಪ ಧ್ಯಾನವು, ಅಲ್ಲೆಲ್ಲಾ ನಡೆದಾಡುವವರಿಗೆ ನಿಗೂಢ ಕೌತುಕವನ್ನು ಉಂಟುಮಾಡುತ್ತದೆ. ಮೌರ್ಯರ ನಂತರ ಕ್ರಿಸ್ತಶಕ 543 ರಿಂದ ಹಲವು ಬೆಳವಣಿಗೆಗಳ ನಡುವೆ ರಾಷ್ಟ್ರಕೂಟರಿಂದ ಆಕ್ರಮಿಸಲ್ಪಡುವವರೆಗೆ ಅಂದರೆ, ಕ್ರಿಸ್ತಶಕ 753 ರವರೆಗೆ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ದೇವಾಲಯ ವಾಸ್ತುಶಿಲ್ಪದ ಎಲ್ಲ ಬೆಳವಣಿಗೆಗಳಿಗೆ ತಮ್ಮನ್ನು ತೆರೆದುಕೊಂಡರು. ಈ ಅಂಶಕ್ಕೆ ಉದಾಹರಣೆಯಾಗಿ, ಅವರ ಎಲ್ಲ ಪ್ರಯೋಗಗಳಿಗೆ ನೆಲೆಯಾಗಿ ಐಹೊಳೆಯು ನಮ್ಮ ಮುಂದೆ ಇದೆ. ಇಲ್ಲಿ ನಡೆದ ಎಲ್ಲ ಪ್ರಯೋಗಗಳು ಪಟ್ಟದಕಲ್ಲು, ಬಾದಾಮಿ, ಮಹಾಕೂಟ ಹಾಗೂ ವಿಷ್ಣುವರ್ಧನನ ಮೂಲದ ಪೂರ್ವ ಚಾಲುಕ್ಯರ ಆಳ್ವಿಕೆಯ ಆಂಧ್ರ ಪ್ರದೇಶದ ಆಲಂಪುರ, ಸತ್ಯವೋಲು, ಮತ್ತು ಮಹಾನಂದಿಗಳಲ್ಲಿ ಕಾಣಿಸಿಕೊಂಡವು: ಬಹುತೇಕ ಔತ್ತಮ್ಯವನ್ನು ಸಾಧಿಸಿದವು. ಮೂಲತಃ ಮೂರೂ ಶಿಖರ ಶೈಲಿಗಳು ಭೌಗೋಳಿಕ ಕಾರಣಗಳಿಗಾಗಿ ರೂಪಿಸಲ್ಪಟ್ಟಿದ್ದರೂ, ಎಲ್ಲ ಕಡೆ ಈ ಎಲ್ಲ ಶೈಲಿಗಳ ದೇಗುಲಗಳು ಇವೆ. ಐಹೊಳೆಯು ಈ ದೃಷ್ಟಿಯಿಂದ ಗಣನೀಯವಾಗಿದೆ. ಅದೊಂದು ವೈವಿಧ್ಯಮಯ ವಾಸ್ತುಶಿಲ್ಪ ಶೈಲಿಗಳ, ಗೋಡೆಗಳು ಇಲ್ಲದ, ಮ್ಯೂಸಿಯಂ ನಂತಿದೆ!

ನಾಗರ ಶೈಲಿಯ ದೇವಾಲಯ ಶಿಖರಗಳೇ ಇರಬೇಕಾಗಿದ್ದ ಹಿಮಾಲಯ ಮತ್ತು ವಿಂದ್ಯಪರ್ವತಗಳ ನಡುವೆ ನಾಗರ ಮತ್ತು ದ್ರಾವಿಡ ಶೈಲಿಗಳ ಸಮ್ಮಿಳಿತ ಗುಪ್ತರ ದೇವಾಲಯಗಳೂ ಇವೆ, ಎಂಬುದು ಅಸಹಜವೇನೂ ಅಲ್ಲ. ಇಡಿಯಾಗಿ ನೋಡಿದರೆ, ಮೌರ್ಯರ ನಂತರದ ಚಾಲುಕ್ಯ ಮತ್ತು ಪಲ್ಲವರ ಸಂದರ್ಭದ ಹಿಂದೂ ದೇವಾಲಯ ವಾಸ್ತುಶಿಲ್ಪಗಳ, ವಿಶಿಷ್ಟ ವೈವಿಧ್ಯಮಯ ಸೃಷ್ಟಿಶೀಲತೆಯ ದೇವಾಲಯಗಳು ಚಾಲುಕ್ಯರ ಸಾಮ್ರಾಜ್ಯದಲ್ಲಿ ಸುಂದರವಾಗಿ ಸಂಗ್ರಹಗೊಂಡವು. ಚಾಲುಕ್ಯರು ಚೌಕಾಕಾರದ ರಚನೆಯ ಮೇಲಿನ ಶಿಖರ ಮತ್ತು ದೇವಾಲಯಗಳ ಸುತ್ತಲಿನ ಭಿತ್ತಿಗಳಲ್ಲಿ ಅವರದೇ ಆದ ವಿಶಿಷ್ಟ ಗುರುತಿನ ವಿಶಿಷ್ಟ ಶೈಲಿಯ ಚಿಕ್ಕ ಆಕಾರದ ಉಬ್ಬುಶಿಲ್ಪ ಕಥಾನಕಗಳು ನಿರೂಸಲ್ಪಟ್ಟಿವೆ: ಮಹಾಕೂಟದ ಮಹಾಕೂಟೇಶ್ವರ ದೇವಾಲಯ ಇಲ್ಲಿ ನೆನಪಾಗುತ್ತದೆ.

ಉತ್ತರದ ಮತ್ತು ದಕ್ಷಿಣದ ದೇವಾಲಯಗಳ ಶೈಲಿ ಮತ್ತು ಶಿಲ್ಪಿಗಳನ್ನು ಚಾಲುಕ್ಯರು ಮಹತ್ವಾಕಾಂಕ್ಷೆಯಿಂದ ದುಡಿಸಿಕೊಂಡಿರುವ ಸೂಚನೆಗಳಿವೆ. ಈ ಅವಧಿಗಿಂತಲೂ ಮೊದಲೇ ಉತ್ತರದ ಸಾಂಚಿ, ಬರ್ ಹುತದ ಆಚೆಗೂ ತಮ್ಮ ಆಳ್ವಿಕೆಯ ಬಾಹುಗಳನ್ನು ಚಾಚಿದ್ದ ಆಂಧ್ರದ ಶಾತವಾಹನರಿಂದ ಆರಂಭಿಸಲ್ಪಟ್ಟ ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿ ಕಟ್ಟಿದ ದೇಗುಲಗಳ ತಳಪಾಯದ ಕುರುಹುಗಳು ಉತ್ಖನನಗೊಂಡಿವೆ. ಶಾತವಾಹನರ ನಂತರ, ಕೆಲವು ಕಥಾನಕಗಳು, ರೂಪಕಗಳು, ಸಂಕೇತಗಳು, ದೇವಾಲಯಗಳನ್ನು ತಂದೆಯಿಂದ ಮಗನಿಗೆ, ಮಗನಿಂದ ಮಗನಿಗೆ, ಹೀಗೆ ಚಾಲುಕ್ಯರ ಶಿಲ್ಪಿಗಳಿಗೆ ಹಸ್ತಾಂತರಿಸಲ್ಪಟ್ಟಿರಬಹುದು ಎಂದು ಹೇಳಲಾಗಿದೆ. ಪೂರ್ವದ ಚಾಲುಕ್ಯರು ಆಂಧ್ರದ ಸಂಪರ್ಕದಲ್ಲಿ, ಪಶ್ಚಿಮದ ಚಾಲುಕ್ಯರು ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಆಪ್ತತೆಯಲ್ಲಿದ್ದರು. ಸಮ್ಮಿಶ್ರ ಶೈಲಿಯ ದೇಗುಲಗಳಲ್ಲಿ ನಿರ್ಮಾಣ ಕಲ್ಪನೆಯೇ ವಿಶಿಷ್ಟ, ಎದುರಿಸಿರಬಹುದಾದ ಸವಾಲುಗಳೂ ಹಲವು. ಆದರೂ ಉತ್ತರದ ಶಿಖರ, ದಕ್ಷಿಣದ ಶೈಲಿಯ ದೇಗುಲದೊಂದಿಗೆ ಕಸಿ, ಬೌದ್ಧ ಗುಹಾಲಯವಾಸ್ತು, ಭಿತ್ತಿಶಿಲ್ಪಗಳು ಅಥವಾ ಉಬ್ಬುಶಿಲ್ಪಗಳು, ವರ್ಣಾಲಂಕಾರ ಮತ್ತು ಚಿತ್ರಕಥಾನಕ, ಇತ್ಯಾದಿಗಳನ್ನು ಉತ್ತಮವಾಗಿ ಅರಗಿಸಿಕೊಂಡಿದ್ದ ಶಾತವಾಹನರ ರೂವಾರಿ ಮತ್ತು ಶಿಲ್ಪಿಗಳ ಹಾದಿಯಲ್ಲಿ ನಡೆದು ನಮ್ಮವರು ಬಿತ್ತಿದರು.

ಚಾಲುಕ್ಯರ ದೇವಾಲಯ ವಾಸ್ತುಶಿಲ್ಪ ಬೆಳವಣಿಗೆಯಲ್ಲಿ ವಿಹಾರಗಳ ಪಾತ್ರವು ಗಣನೀಯ. ಬಾದಾಮಿ ಮತ್ತು ಐಹೊಳೆಗಳ ಗುಹಾದೇಗುಲಗಳು ಇಲ್ಲಿ ನೆನಪಾಗುತ್ತವೆ. ಇವುಗಳಿಗೆ ಮಹಾರಾಷ್ಟ್ರದ ಬೌದ್ಧ ವಿಹಾರಗಳೇ ಮಾದರಿಗಳು. ಬಾದಾಮಿ ಮತ್ತು ಐಹೊಳೆಗಳ ಎಲ್ಲ ಗುಹೆಗಳು, ಸನ್ಯಾಸಿಗಳ ವಿಹಾರಗಳ ವಿನ್ಯಾಸವೇ ಆಗಿವೆ. ಎರಡನೆಯ ಹಂತದಲ್ಲಿ, ವಿಹಾರಗಳ ಒಳಗಡೆಗೆ ಪೂಜಾ ಮಂದಿರಗಳನ್ನು ಅಳವಡಿಸಲಾಯಿತು. ಅಜಂತಾ ಎಲ್ಲೋರಗಳ ವಿಹಾರಗಳಂತೆ, ನಂತರದ ಬೆಳವಣಿಗೆಗಳಲ್ಲಿ ಶಿಲ್ಪಿಗಳ ಕರಕುಶಲತೆ ಮತ್ತು ದೇವಾಲಯವಾಸ್ತು ರೂವಾರಿಗಳ ಕಲ್ಪನಾಚಾತುರ್ಯವನ್ನೂ ದುಡಿಸಿಕೊಳ್ಳಲಾಯಿತು. ಪೂರ್ವತೀರ ಮತ್ತು ನಮ್ಮ ಪಶ್ಚಿಮದ ತೀರ ಪ್ರದೇಶಗಳಲ್ಲಿನ ಬೆಳವಣಿಗೆಗಳು ಬೇರೆಯೇ ಆಗಿವೆ. ವಾಣಿಜ್ಯ ವ್ಯಾಪಾರಗಳು ಇದ್ದ ರಾಜಕಾರಣದ ಸಾಂದರ್ಭಿಕ ಸಂಕೇತದಂತೆ, ಐಹೊಳೆಯ ದುರ್ಗಿ ದೇಗುಲದ ಉಬ್ಬುಶಿಲ್ಪ ಒಂದರಲ್ಲಿ ಹಡಗಿನ ಪ್ರಯಾಣದ ಸುಂದರ ಕಲ್ಪನೆ ಘನೀಭವಿಸಿದೆ.

ಬಾದಾಮಿ ಐಹೊಳೆಗಳ ಗುಹೆಗಳನ್ನು ಕಡೆಯುವ ವೇಳೆಗಾಗಲೇ ಆ ರೂವಾರಿಗಳಿಗೆ ಸುಮಾರು 800 ವರ್ಷಗಳ ಪರಂಪರೆಯ ಹಿನ್ನೆಲೆ ಇದ್ದಿತು. ಕಲ್ಪನೆ ಮತ್ತು ರೂಪಿಸುವ ಕುಶಲತೆಯೂ ಬೆಳೆಯಿತು: ಒಳ ಮತ್ತು ಹೊರ ಭಿತ್ತಿಗಳ ಅಲಂಕರಣವು ಸೇರ್ಪಡೆಗೊಂಡಿತು. ಚಾಲುಕ್ಯರ ರೂವಾರಿಗಳು ತಮ್ಮ ಪೂರ್ವಸೂರಿಗಳ ವಾರಸುದಾರರಂತೆ ತಮ್ಮ ಕರಕುಶಲತೆಯನ್ನು ಮೆರೆದರು. ಪರಂಪರೆಗೆ ಋಣಿಗಳಾಗಿಯೂ ತಮ್ಮದೇ ಆದ ಅನುಭವ, ಸ್ಥಳೀಯ ಪರಿಕರ, ಮಾಧ್ಯಮಗಳಿಂದ ಅನನ್ಯ ದೃಶ್ಯ ಲೋಕವನ್ನೇ ಸೃಷ್ಟಿಸಿದರು.

ದಕ್ಷಿಣದ ಪಲ್ಲವರು ಮತ್ತು ಉತ್ತರದ ಹರ್ಷವರ್ಧನನಂತಹ ಸಶಕ್ತ ವಿರೋಧಿಗಳ ನಡುವೆ, ಆರನೆಯ ಶತಮಾನದ ಮಧ್ಯಭಾಗದಿಂದ ಎರಡು ಶತಮಾನಗಳ ಕಾಲ ತಮ್ಮ ರಾಜಕೀಯ ಏಕತೆಯನ್ನು ಪಶ್ಚಿಮದ ಚಾಲುಕ್ಯರು ಸಾಧಿಸಿದ್ದರೆಂಬ ವರ್ಣರಂಜಿತ ಇತಿಹಾಸವು, ದೃಶ್ಯಕಲೆಯ ಇತಿಹಾಸದ ದೃಷ್ಟಿಯಿಂದಲೂ, ಈ ಮೊದಲೇ ಉಲ್ಲೇಖಿಸಿರುವಂತೆ ವಿಖ್ಯಾತ: ವೈಭವಯುತ. ಚೀನೀ ಪ್ರವಾಸಿ ಹ್ಯೂಎನ್ಸಾಂಗ್ ದಕ್ಷಿಣದ ಪಲ್ಲವರ ಹಾಗೂ ಎರಡನೆಯ ಪುಲಕೇಶಿಯ ( ಕ್ರಿ. ಶ. 610 – 642 ) ಆಳ್ವಿಕೆಯ ಭೂಭಾಗಗಳನ್ನು ಹಾದುಹೋದ ಉಲ್ಲೇಖಗಳು ಇವೆ. ಅವನು ಹಾಗೆ ಹೋದ ಕೂಡಲೇ ಪಲ್ಲವರ ಒಂದನೆಯ ನರಸಿಂಹವರ್ಮನು, ಚಾಲುಕ್ಯರ ಸಾಮ್ರಾಜ್ಯವನ್ನು ಆಕ್ರಮಿಸಿ ಬಾದಾಮಿಯನ್ನು ತನ್ನದಾಗಿಸಿಕೊಂಡನು. ಅನಂತರ ಬಾದಾಮಿಯು ಎಷ್ಟುಕಾಲ ಪಲ್ಲವರ ಅಧೀನದಲ್ಲಿತ್ತು ಎಂಬುದು ಅಸ್ಪಷ್ಟ! ಹಲವು ರಾಜಕೀಯ ಸ್ಥಿತ್ಯಂತರಗಳ ನಂತರ ಬಂದ, 1ನೆಯ ವಿಕ್ರಮಾದಿತ್ಯನು, (ಕ್ರಿ.ಶ. 655 – 682) ರಾಜ್ಯವನ್ನು ಶತ್ರುಗಳಿಂದ ರಕ್ಷಿಸಿ ಭದ್ರಪಡಿಸಿದನು. ನಂತರದಲ್ಲಿ ಅವನ ಮಗ ವಿನಯಾದಿತ್ಯನು (ಕ್ರಿಸ್ತಶಕ 682 – 696) ನಾಡನ್ನು ನೋಡಿಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಅವನ ರಾಣಿ ವಿನಯವತಿಯು, ಬಾದಾಮಿಯ ಜಂಬುಲಿಂಗ ದೇವಾಲಯದಲ್ಲಿ ಮೂರು ಮೂರ್ತಿಗಳನ್ನು ಪ್ರತಿಷ್ಠಾಪಿಸಿದಳು. ಪಲ್ಲವರ ರಾಜಧಾನಿ ಕಾಂಚೀಪುರದಿಂದ ಆಕೆಯ ಮಗನು, ಎರಡನೆಯ ವಿಕ್ರಮಾದಿತ್ಯನು (ಕ್ರಿ. ಶ.733 -744) ಹಿಂತಿರುಗುತ್ತಲೇ ವಿಜಯಾದಿತ್ಯನು ಪಟ್ಟದಕಲ್ಲಿನಲ್ಲಿ, ವಿಜಯೇಶ್ವರ ದೇವಾಲಯವನ್ನು ಕಟ್ಟಿಸಿದನು. ಕಲಚೂರಿ ವಂಶದ (ಮಹಾರಾಷ್ಟ್ರದ ಎಲಿಫೆಂಟಾ ಗುಹಾಲಯಗಳಿಗೆ ಕಾರಣವಾದ ರಾಜವಂಶ ಇದೆಂದು ಹೇಳಲಾಗುತ್ತಿದೆ) ಇಬ್ಬರು ಸಹೋದರಿಯರು ಎರಡನೆಯ ವಿಕ್ರಮಾದಿತ್ಯನ ರಾಣಿಯರಾಗಿದ್ದು, ಇಬ್ಬರೂ ದೇಗುಲಗಳನ್ನು ಕಟ್ಟಿಸಿದರು! ಹಿರಿಯ ಸಹೋದರಿ ಲೋಕಮಹಾದೇವಿಯು ಪಟ್ಟದಕಲ್ಲಿನಲ್ಲಿ ಲೋಕೇಶ್ವರ ದೇವಾಲಯವನ್ನು, ಕಿರಿಯ ಸಹೋದರಿ, ತ್ರೈಲೋಕಮಹಾದೇವಿಯು (ಎರಡನೇ ಕೀರ್ತಿವರ್ಮನ ತಾಯಿ), ಪಟ್ಟದಕಲ್ಲಿನಲ್ಲಿ ತ್ರೈಲೋಕೇಶ್ವರ, ಬೃಹತ್ ಕಲ್ಲಿನ ದೇವಾಲಯವನ್ನು ನಿರ್ಮಿಸಿದಳು. ಆ ವಿಕ್ಷಿಪ್ತ, ವಿಶಿಷ್ಟ ಸಂದರ್ಭವೂ ಸಹ ಸಹಜವಾಗಿಯೇ, ಪಲ್ಲವರ ರಾಜಧಾನಿಯಾಗಿದ್ದ ಕಾಂಚಿಪುರದ ರೂವಾರಿ/ಶಿಲ್ಪಿಗಳು ನಮ್ಮವರೊಂದಿಗೆ, ಕೆಲಸ ಮಾಡುವ ಸಂದರ್ಭಗಳನ್ನು ಸೃಷ್ಟಿಸಿತು. ನಂತರದಲ್ಲಿ, ರಾಷ್ಟ್ರಕೂಟರ ಪ್ರಾಬಲ್ಯದ ನಡುವೆ ಸುಮಾರು ಎರಡು ಶತಮಾನಗಳ ಕಾಲ ಕಳೆದು ಹೋಗಿದ್ದ ಚಾಲುಕ್ಯರು, ಶಕ್ತಿ ಕುಂದಿದ್ದ ರಾಷ್ಟ್ರಕೂಟರ ಪಳೆಯುಳಿಕೆಯ ಸಾಮ್ರಾಜದ ಮೇಲೆ, ಪುನಹ ಕ್ರಿಸ್ತಶಕ 974 ರಲ್ಲಿ, ಎರಡನೆಯ ತೈಲಪನ ಕಾಲದಲ್ಲಿ ಆಳ್ವಿಕೆಯನ್ನು ಆರಂಭಿಸಿದರು.

ಇಡಿಯಾಗಿ ನೋಡಿದರೆ, ಮೌರ್ಯರ ನಂತರದ ಚಾಲುಕ್ಯ ಮತ್ತು ಪಲ್ಲವರ ಸಂದರ್ಭದ ಹಿಂದೂ ದೇವಾಲಯ ವಾಸ್ತುಶಿಲ್ಪಗಳ, ವಿಶಿಷ್ಟ ವೈವಿಧ್ಯಮಯ ಸೃಷ್ಟಿಶೀಲತೆಯ ದೇವಾಲಯಗಳು ಚಾಲುಕ್ಯರ ಸಾಮ್ರಾಜ್ಯದಲ್ಲಿ ಸುಂದರವಾಗಿ ಸಂಗ್ರಹಗೊಂಡವು. ಚಾಲುಕ್ಯರು ಚೌಕಾಕಾರದ ರಚನೆಯ ಮೇಲಿನ ಶಿಖರ ಮತ್ತು ದೇವಾಲಯಗಳ ಸುತ್ತಲಿನ ಭಿತ್ತಿಗಳಲ್ಲಿ ಅವರದೇ ಆದ ವಿಶಿಷ್ಟ ಗುರುತಿನ ವಿಶಿಷ್ಟ ಶೈಲಿಯ ಚಿಕ್ಕ ಆಕಾರದ ಉಬ್ಬುಶಿಲ್ಪ ಕಥಾನಕಗಳು ನಿರೂಸಲ್ಪಟ್ಟಿವೆ.

ಚಾಲುಕ್ಯರ ವಾಸ್ತು ರೂವಾರಿಗಳು ಭಾರತೀಯ ಪರಂಪರೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಹಾಗಾಗಿಯೇ, ಪ್ರಾರಂಭದಲ್ಲಿ ದೊಡ್ಡ ಗುಂಪುಗಳಲ್ಲಿ, ಈ ನೆಲೆಗಳಲ್ಲಿ, ಉತ್ತರದ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳನ್ನು ಕಾಣಬಹುದು. ಭಾರತದ ಇತರ ಭಾಗಗಳೊಂದಿಗೆ, ಗಣನೀಯವಾಗಿ ದಕ್ಷಿಣದ ಪಲ್ಲವರೊಂದಿಗೆ ಇದ್ದ ಸಾಂಸ್ಕೃತಿಕ ಸಂಬಂಧದ ಪ್ರಭಾವವು ಪ್ರಾರಂಭದ ದೇವಾಲಯಗಳಲ್ಲಿ ಕಾಣುವುದು ಸಹಜವೇ ಆಗಿದೆ. ಅಧಿಕಾರವನ್ನು ಉಳಿಸಿಕೊಳ್ಳಲು ನೆರೆಯ ರಾಜ್ಯಗಳೊಂದಿಗೆ ಹೋರಾಡುತ್ತಲೇ ಇದ್ದ ಸಂದರ್ಭಗಳ ನಡುವೆಯೂ, ದೇವಾಲಯಗಳು ಸೃಷ್ಟಿಗೊಳ್ಳುತ್ತಿದ್ದವು ಎಂಬುದರ ಹಿಂದೆ ಚಾಲುಕ್ಯರ ಕಲಾಪ್ರೇಮವು ಅಪೂರ್ವವಾಗಿ ಕಾಣುತ್ತದೆ. ಈ ಕಲಾ ಪ್ರೇಮವೇ ದಕ್ಷಿಣಭಾರತದ ಕೇಂದ್ರ ಸ್ಥಾನದಲ್ಲಿ ಆಮದು ಪ್ರಭಾವಗಳು ಪರಸ್ಪರ ವೈರುಧ್ಯಮಯ ಎನಿಸಿದರೂ, ಅಪೂರ್ವ ಅನನ್ಯತೆಯನ್ನು ಸಾಧಿಸಿದಂತಹ ದೇವಾಲಯ ವಾಸ್ತುಶಿಲ್ಪ ಸೃಷ್ಟಿಗೆ ಕಾರಣವಾದವು. ಪ್ರಾರಂಭದ ಇಟ್ಟಿಗೆ, ಗಾರೆ ಮತ್ತು ಮರಗಳ ನಂತರ, ಕ್ರಿಸ್ತಶಕ ಎರಡು ಮೂರನೆಯ ಶತಮಾನಗಳ ಹೊತ್ತಿಗೆ, ಕಲ್ಲಿನ ಬಳಕೆಯು ದೊಡ್ಡ ರೀತಿಯಲ್ಲಿ ಕಾಣಿಸಿಕೊಂಡಿತು. ಬಾಗಿಲುವಾಡ, ಕಂಬಗಳು, ಸೂರು, ಭಿತ್ತಿ, ತಳಪಾಯ ಹಾಗೂ ವಿಗ್ರಹ ಅಥವಾ ಮೂರ್ತಿ ಶಿಲ್ಪಗಳಲ್ಲಿ ಆ ಹಿಂದಿನ ಭಾರತೀಯ ವಾಸ್ತು ಮತ್ತು ಶಿಲ್ಪ ಶಾಸ್ತ್ರಗಳ ಸೂತ್ರಗಳು ಘನೀಭವಿಸಿವೆ. ದೇವಾಲಯ ವಾಸ್ತು ಮತ್ತು ಉಬ್ಬುಶಿಲ್ಪ ಸಂಯೋಜನೆಗಳು, ವಿವಿಧ ಧರ್ಮ, ವಿಭಿನ್ನ ದೇವತಾ ರೂಪಗಳ ಸೃಷ್ಟಿಶೀಲತೆಯಲ್ಲಿ, ಅಡಕಗೊಳಿಸಿರುವ ಸಾಂಕೇತಿಕ ರೂಪಗಳು, ಜ್ಯಾಮಿತೀಯ ಅಲಂಕಾರ ವಿನ್ಯಾಸ ಇತ್ಯಾದಿಗಳು, ಸೌಂದರ್ಯ ಶಾಸ್ತ್ರವನ್ನು ಅರಗಿಸಿಕೊಂಡಂತೆ ಮೂಡಿಬಂದಿವೆ.

ಹೂಮಾಲೆ ಹಿಡಿದ, ಆಗಸದಲ್ಲಿ ತೇಲುವ ಉಬ್ಬು ಶಿಲ್ಪಗಳನ್ನು ಭರ್‍ಹುತ್, ಸಾಂಚಿ, ಗಾಂಧಾರ, ಅಮರಾವತಿ, ನಾಗಾರ್ಜುನಕೊಂಡ ಹಾಗೂ ಚಾಲುಕ್ಯರ ಕ್ಷೇತ್ರಗಳಲ್ಲಿ ಮತ್ತು ಆಂಧ್ರಪ್ರದೇಶದ ಇನ್ನೂ ಹಲವು ದೇವಾಲಯಗಳಲ್ಲಿ ವೈಭವೀಕರಿಸಲಾಗಿದೆ. ನಂತರ ಎಲ್ಲೋರಾದ ರಾಷ್ಟ್ರಕೂಟರ 16ನೇ ಗುಹಾದೇಗುಲದಲ್ಲಿಯು ಕಾಣಬಹುದು. ಹಾಗೆಯೇ ಮಕರ, ವಿದ್ಯಾಧರ, ಗಣ ಮತ್ತಿತರ ಹಲವಾರು ಸಂಕೇತ ರೂಪಗಳು ಅಷ್ಟೇ : ಕಾಲಕಾಲಕ್ಕೂ ಸಮಕಾಲೀನ ಶಿಲ್ಪಿಗಳಿಂದ ನಾವೀನ್ಯತೆ ಮತ್ತು ಜೀವಂತಿಕೆಯಿಂದ ಕಾಣಿಸಿಕೊಂಡಿವೆ. ಇವೆಲ್ಲವುಗಳ ಇಡೀ ಸೊಗಸು ಬಹುಮುಖ್ಯವಾಗಿ ಐಹೊಳೆ, ಪಟ್ಟದಕಲ್ಲು, ಮಹಾಕೂಟ ಬಾದಾಮಿಗಳಲ್ಲಿ ಬಿತ್ತರಗೊಂಡು ವಿಖ್ಯಾತವೂ ಆಯಿತು.

ಏಳನೇ ಶತಮಾನದ ಅಂತ್ಯದ ವೇಳೆಗೆ, ನೆರೆಯ ಪಲ್ಲವರ ಕಾಂಚೀಪುರ ಮತ್ತು ಮಹಾಬಲಿಪುರಂಗಳಲ್ಲಿ, ಈ ಬೆಳವಣಿಗೆಗಳು ಹಲವು ಹೊಸ ಸಾಧ್ಯತೆಗಳನ್ನು ದೇವಾಲಯ ವಾಸ್ತುಶಿಲ್ಪ – ಮೂರ್ತಿಶಿಲ್ಪ – ದೇವಾಲಯ ಆವರಣಗಳಲ್ಲಿ ಕಂಡುಕೊಳ್ಳಲು ಕಾರಣ ವಾದವು. ಗೋಡೆ /ಭಿತ್ತಿಗಳಲ್ಲಿನ ಅರ್ಧ ಶಿಲ್ಪಗಳು ಅಥವಾ ಭಿತ್ತಿಶಿಲ್ಪಗಳೆನ್ನಿ, ಇವುಗಳನ್ನು ಬಾದಾಮಿಯ ಚಾಲುಕ್ಯರು ಹಲವು ನೆಲೆಗಳಲ್ಲಿ ಮಹತ್ವಾಕಾಂಕ್ಷೆಯಿಂದ ವೈಭವೀಕರಿಸಿದ್ದಾರೆ. ಉಬ್ಬುಶಿಲ್ಪ ದೃಶ್ಯಾನುಭವದ ಪರಾಕಾಷ್ಠೆಯಂತೆ ದೇವಾಲಯ ವಾಸ್ತು- ರೂವಾರಿಗಳೊಂದಿಗೆ ಶಿಲ್ಪಿಗಳ ಸಹಯೋಗವು ಸಾಧಿತವಾಗಿದೆ. ಐಹೊಳೆಯ ರಾವಣಫಡಿಯ ಸೂರಿನಲ್ಲಿ ಚಿತ್ರಗಳ ತುಣುಕುಗಳ ಜೊತೆಜೊತೆಗೆ ಹಾರುವ ಗಂಧರ್ವರ ಉಬ್ಬುಶಿಲ್ಪಗಳು ಸುಂದರ. ಇಲ್ಲಿ ಬಹುಮುಖ್ಯವಾಗಿ ಭಿತ್ತಿಗಳಲ್ಲಿನ ಉಬ್ಬುಶಿಲ್ಪಗಳು ತಮ್ಮ ಬೃಹದತೆ, ವಿಶಿಷ್ಟ ಒರಟುತನ ಮತ್ತು ಮಹತ್ವತೆಗಳೊಂದಿಗೆ ಆಕರ್ಷಿಸುತ್ತವೆ. ಒಳಹೊಕ್ಕರೆ ಎಡಭಾಗದಲ್ಲಿ ಅರ್ಧನಾರೀಶ್ವರ ಶಿಲ್ಪವು ಗಾಂಭೀರ್ಯದಲ್ಲಿ ಮಿಂದಿದೆ. ಗಣೇಶ ಮತ್ತು ಸಪ್ತಮಾತೃಕೆಯರೊಂದಿಗೆ, ತನ್ನದೇ ಆದ ಕಾಲಾತೀತ, ವಿಖ್ಯಾತ ನಟನದಲ್ಲಿ ತಲ್ಲೀನನಾಗಿರುವ ನಟರಾಜ ಶಿಲ್ಪದ ಭಂಗಿಯು, ಕಾವ್ಯಮಯ, ಚಲನಶೀಲ, ಅತಿ ನಾಟಕೀಯ! ಶಿವಲಿಂಗದ ಬದಿಯ ಮಹಿಷಾಸುರಮರ್ದಿನಿಯ ಉಬ್ಬುಶಿಲ್ಪವು ದುರ್ಗಿಗುಡಿ ಮತ್ತು ಬಾದಾಮಿಯ ಮಹಿಷಾಸುರ ಮರ್ದಿನಿ ಶಿಲ್ಪ ಕ್ಕಿಂತಲೂ ವಿಭಿನ್ನವಾಗಿದೆ. ಕಾವ್ಯಮಯ, ಚಲನಶೀಲ, ಗಣಶಿಲ್ಪ ಪಟ್ಟಿಕೆಗಳು ಇಲ್ಲಿ ವಿಶಿಷ್ಟವಾಗಿವೆ. ಇಲ್ಲಿಂದ ನೇರವಾಗಿ ಕಾಣುವ ವಿಶಿಷ್ಟ, ವಿಖ್ಯಾತ ವಾಸ್ತುಶಿಲ್ಪ ಶೈಲಿಯ, ದುರ್ಗಿಗುಡಿಗೆ ಹೊರಟರೆ, ಅಲ್ಲಿನ ಹೊರ ಪ್ರದಕ್ಷಿಣ ಪಥದಲ್ಲಿರುವ ಹಲವು ಶಿಲ್ಪಗಳು, ಚಾಲುಕ್ಯರ ಶಿಲ್ಪಿಗಳ ಕಲ್ಪನೆ ಮತ್ತು ಕುಶಲತೆಗಳನ್ನು ಬಿಂಬಿಸುತ್ತವೆ. ವೃಷಭವಾಹನಶಿವ ಹಾಗೂ ಮಹಿಷಾಸುರಮರ್ದಿನಿಯ ಉಬ್ಬು ಶಿಲ್ಪಗಳ ಸೌಂದರ್ಯವು ದೈವಿಕ ದೃಶ್ಯಧ್ಯಾನದ ಅನುಭವ ನೀಡಬಲ್ಲದು. ಮೇಗುತಿ ದೇವಾಲಯದ ಬೆಟ್ಟದ ಹಿಂದಿನ ಜೈನ ಗುಹೆಯೊಂದರಲ್ಲಿನ ಭಿತ್ತಿಯ ಉಬ್ಬುಶಿಲ್ಪಗಳೂ, ಕಡೆದಿರುವ ಅಲಂಕರಣ ವಿನ್ಯಾಸಗಳು ಆಹ್ಲಾದಕಾರಿ. ಅಭಿವ್ಯಕ್ತಿ ತೀವ್ರತೆಯಿಂದಲೇ ಈ ವಿನ್ಯಾಸಗಳು ಸಂಯೋಜನೆಗೊಂಡಿವೆ. ವಿಜಯಾದಿತ್ಯನ ಕೊಡುಗೆಯಿಂದ (ಕ್ರಿ.ಶ.708) ನಿರ್ಮಿಸಲ್ಪಟ್ಟಿರುವ ಹುಚ್ಚಿಮಲ್ಲಿ ಗುಡಿಯ ಉಬ್ಬುಶಿಲ್ಪ, ಕಾರ್ತಿಕೇಯ ಮತ್ತು ವಿನ್ಯಾಸ, ಅಲಂಕರಣಗಳು ಗಣನೀಯ. ಉಳಿದಂತೆ ಲಾಡಖಾನ್ ದೇವಾಲಯ ತನ್ನ ವಿಖ್ಯಾತ ವಾಸ್ತುಶಿಲ್ಪ ಶೈಲಿಯ ದೃಷ್ಟಿಯಿಂದ ಗಮನಾರ್ಹ : ಸಂಯೋಜನೆ ಸಾಂಗತ್ಯವು ಅಪೂರ್ವ. ವಿಶಿಷ್ಟ ಬೆಳಕಿಂಡಿಗಳನ್ನು ಭಿತ್ತಿಗಳಲ್ಲಿ ಅಳವಡಿಸಿರುವ ರೀತಿಯು ಗಮನಾರ್ಹ. ಕಂಬಗಳ ಮೇಲಿನ ಉಬ್ಬುಶಿಲ್ಪಗಳು ಚಾಲುಕ್ಯರ ಶಿಲ್ಪಿಗಳ ಕುಶಲತೆಯನ್ನು ಮೆಚ್ಚುವಂತೆ ಮಾಡುತ್ತವೆ. ಬಾದಾಮಿಯ ನಾಲ್ಕು ಗುಹಾ ದೇಗುಲಗಳು ತಮ್ಮ ಭಿತ್ತಿಗಳಲ್ಲಿ ಅಲಂಕರಿಸಿಕೊಂಡಿರುವ ಶಿಲ್ಪಗಳಿಂದ ವಿಖ್ಯಾತವಾಗಿವೆ. ಕೆಂಗಾವಿ ಬಣ್ಣದ (red-ochre) ಮರಳುಗಲ್ಲಿನಲ್ಲಿ ದೇವಾಲಯ ವಾಸ್ತು ರೂವಾರಿಗಳ/ಶಿಲ್ಪಿಗಳ ಕುಶಲತೆಯ ಪರಾಕಾಷ್ಠೆಯ ಮತ್ತೊಂದು ಮಜಲನ್ನು ಇಲ್ಲಿ ಕಲಾಭಿಮಾನಿಗಳು ಅನುಭವಿಸಬಹುದು.

ಹಾಗೆಯೇ ಭೂತನಾಥ, ಜಂಬುಲಿಂಗ, ಮೇಗಣ, ಕೆಳಗಣ ಶಿವಾಲಯಗಳು ಸಹ ಚಾಲುಕ್ಯರ ಶಿಲ್ಪವೈಭವ ಮತ್ತು ವೈವಿಧ್ಯತೆಗಳಿಗೆ ಉದಾಹರಣೆಗಳಂತಿವೆ. ಬಹುಮುಖ್ಯವಾಗಿ ಮಂಗಳೇಶನ (ಕ್ರಿಸ್ತಶಕ 597 – 610) ಕಾಲದಲ್ಲಿ ರೂಪುಗೊಂಡ ಮೂರನೆಯ ಗುಹಾಲಯದಂತೆಯೇ, ಒಂದು ಮತ್ತು ಎರಡನೆಯ ಗುಹಾಲಯಗಳೂ ಬಾದಾಮಿಯ ಚಾಲುಕ್ಯರ ಶಿಲ್ಪ ಶೈಲಿಗೆ ಅತ್ಯುತ್ತಮ ಉದಾಹರಣೆಗಳಂತೆ ಮೂಡಿಬಂದಿವೆ. ಬೆಟ್ಟ ಮತ್ತು ಬಂಡೆಗಳನ್ನು ಕಡೆದು ವಿಹಾರ, ದೇಗುಲಗಳನ್ನು ಸೃಷ್ಟಿಸುವ ಪರಂಪರೆಯನ್ನು ಅರಗಿಸಿಕೊಂಡ ಇಲ್ಲಿನ ವಾಸ್ತುಶಿಲ್ಪಿಗಳು, ಆ ಅನುಭವವನ್ನು ಪ್ರಯೋಗಿಸಿ ಯಶಸ್ವಿಯೂ ಆದರು. ಒಂದು ಮತ್ತು ಎರಡನೆಯ ಗುಹಾಲಯಗಳಿಗಿಂತಲೂ ತನ್ನ ವಿಸ್ತೀರ್ಣವನ್ನು ಹೆಚ್ಚಿಸಿಕೊಂಡ ಮೂರನೆಯ ಗುಹಾಲಯವು, ಬೃಹತ್ ಉಬ್ಬುಶಿಲ್ಪ ಮತ್ತು ಅಪರೂಪಕ್ಕೆ ಭಿತ್ತಿಚಿತ್ರ ತುಣುಕುಗಳನ್ನು ಹೊಂದಿರುವ ಅಪೂರ್ವ ಗುಹಾಲಯ. ಚಿತ್ರಗಳು ಬಹುತೇಕ ಮಾಸಿ ಕಪ್ಪಾಗಿಹೋಗಿವೆ. ಅಸಾಮಾನ್ಯ ಆಸಕ್ತಿಯ, ತೀವ್ರತೆಯ ಕಣ್ಣುಗಳಿಗೆ ಮಾತ್ರ ಕಾಣುವಂತೆ ಅರಮನೆಯ 2 – 3 ದೃಶ್ಯಗಳ ತುಣುಕುಗಳು ಉಳಿದುಕೊಂಡಿವೆ. ಆಸಕ್ತರು ಚಾಲುಕ್ಯ ಚಿತ್ರಕಾರರ ಮೂಲ, ಕೆಂಗಾವಿ ಬಣ್ಣದ ರೇಖಾ ಮಾದರಿಗಳನ್ನು ಗಮನಿಸಬಹುದು. ಪ್ರಖರವಾಗಿರುವ ಬಣ್ಣಗಳ ಅಲಂಕಾರದ ವಿನ್ಯಾಸಗಳನ್ನಂತೂ ತಲೆ ಎತ್ತಿ ಎಲ್ಲರೂ ನೋಡಬಹುದು.

ಒಂದನೆಯ ಗುಹಾಲಯದ ಹೊರಭಿತ್ತಿಯಲ್ಲಿ ನಟರಾಜನ ಕಾಲಾತೀತ ನೃತ್ಯವಿದೆ. ತನ್ನ ದೇಹ ಮತ್ತು 16 ಹಸ್ತಗಳನ್ನು ದುಡಿಸಿಕೊಂಡಿರುವ ಐಹೊಳೆಯ ನಟರಾಜನಷ್ಟು ನಾಟಕೀಯವಲ್ಲದ, ಆದರೆ ಗಾಂಭೀರ್ಯಮಯ ನಾಟ್ಯ ಭಂಗಿಗೆ ಮನಸೋಲದವರು ಯಾರು? ಆದರೂ ಆ ಇಡೀ ರೂಪ ವೈಭವದ ನಡುವೆ, ಆ ಅಸಾಮಾನ್ಯ ಮುಖವನ್ನು ನಮ್ಮ ಶಿಲ್ಪ ಸೂಕ್ಷ್ಮಜ್ಞರು, ಇನ್ನಷ್ಟು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ.

ಈ ಎಲ್ಲ ಗುಹಾಲಯಗಳಲ್ಲಿಯೂ ಗಣಗಳ ವಿಶಿಷ್ಟ ಅಲಂಕೃತ ಸಾಲುಗಳನ್ನು ಸುಂದರವಾಗಿಯೇ ಹೊಂದಿಸಲಾಗಿದೆ. ಹಾರುವ ಗಂಧರ್ವರು ಈ ಗುಹೆಗಳಲ್ಲಿ ಆನಂದವನ್ನೇ ಉಂಟುಮಾಡುತ್ತಾರೆ. ಉಳಿದಂತೆ ಪ್ರೇಮಪೂರ್ಣ ದಂಪತಿಗಳ ಶೃಂಗಾರ ಸದೃಶ್ಯ ಭಂಗಿಗಳು ನೋಡುಗರನ್ನು ಆಕರ್ಷಿಸದೆ ಇರವು. ಬೃಹತ್ ಆಕಾರದ ಮಾನವರೂಪಿ ದೇಹದಲ್ಲಿ, ಸಿಂಹದ ಶಕ್ತಿಯನ್ನು ತುಂಬಿಕೊಂಡ ನರಸಿಂಹ, ವಿಷ್ಣು ಮತ್ತು ಶಿವನ ಏಕರೂಪವಾದ ಹರಿಹರ, ಶೇಷನಾಗನ ಮೇಲೆ ವೈಭವದಿಂದ ಕುಳಿತಿರುವ ವಿಷ್ಣು, ವರಾಹಮೂರ್ತಿ, ವೈಭವೋಪೇತ ತ್ರಿವಿಕ್ರಮ ಉಬ್ಬುಶಿಲ್ಪಗಳ ಜೊತೆಜೊತೆಗೆ, ನಾಲ್ಕನೆಯ ಗುಹಾಲಯದ ಜೈನ ತೀಥರ್ಂಕರರ ಉಬ್ಬುಶಿಲ್ಪಗಳೂ ನೋಡುಗರನ್ನು ಆಕರ್ಷಿಸುತ್ತವೆ. ಮಹಾಕೂಟದ ಮಹಾಕೂಟೇಶ್ವರ, ಸಂಗಮೇಶ್ವರ ಮೊದಲಾದ ದೇವಾಲಯ ಸಂಕೀರ್ಣದಲ್ಲಿ ಚಾಲುಕ್ಯರದೇ ಆದ ವಿಶಿಷ್ಟ ಚಿಕಣಿ (ಮಿನಿಯೇಚರ್) ಉಬ್ಬುಶಿಲ್ಪ ಕಥಾನಕ ಪಟ್ಟಿಕೆಗಳ ಸಾಲು ಇದೆ. ಲಕುಲೀಶ ಅರ್ಧನಾರೀಶ್ವರ, ವರಾಹ ಮೊದಲಾದ ಬೃಹತ್ ಉಬ್ಬುಶಿಲ್ಪಗಳಿವೆ. ಮಲಪ್ರಭಾ ನದಿಯ ಬದಿಯಲ್ಲಿಯೇ ಇರುವ ಪಟ್ಟದಕಲ್ಲು ಚಾಲುಕ್ಯರ ದೇವಾಲಯವಾಸ್ತುಶಿಲ್ಪ ಮತ್ತು ಶಿಲ್ಪ ಸೃಷ್ಟಿಯ ಪರಾಕಾಷ್ಠೆಯಂತಹ ಸೃಷ್ಟಿಗಳನ್ನು ಹೊಂದಿದೆ. ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ, ಕಾಶಿ ವಿಶ್ವನಾಥ, ಪಾಪನಾಥ ಇತ್ಯಾದಿ ದೇಗುಲಗಳು, ಹಲವು ಐತಿಹಾಸಿಕ ಸಂದರ್ಭ ಮತ್ತು ಕಾರಣಗಳಿಗಾಗಿ ಕಟ್ಟಲ್ಪಟ್ಟಿವೆ. ಪಲ್ಲವರ ಕಂಚಿಯಲ್ಲಿ ವಿಜಯಸಾಧಿಸಿ ಬಂದ ಎರಡನೆಯ ವಿಕ್ರಮಾದಿತ್ಯನ ನೆನಪಿಗೆ, ಅವನ ಇಬ್ಬರು ರಾಣಿಯರು ಮೇಲೆ ಉಲ್ಲೇಖಿಸಿರುವ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನು ನಿರ್ಮಿಸಿದರು. ಈ ಮೊದಲೇ ಉಲ್ಲೇಖಿಸಿರುವಂತೆ, ಪ್ರಾರಂಭದಲ್ಲಿ, ಈ ದೇಗುಲಗಳನ್ನು ಲೋಕೇಶ್ವರ ಮತ್ತು ತ್ರೈಲೋಕೇಶ್ವರ ಎಂದು ಕರೆಯಲಾಗುತ್ತಿತ್ತು. ವಿರೂಪಾಕ್ಷ ದೇವಾಲಯದ ಭಿತ್ತಿ, ಸೂರು, ಮತ್ತು ಕಂಬಗಳ ಅವಕಾಶಗಳಲ್ಲಿ (space) ಚಾಲುಕ್ಯರ ಶೈಲಿಯ ವಿಶಿಷ್ಟ ಶಿಲ್ಪಗಳಿವೆ. ಮಲ್ಲಿಕಾರ್ಜುನ ದೇವಾಲಯದ ಮಹಿಷಾಸುರಮರ್ದಿನಿಯ ದುಂಡು ಶಿಲ್ಪದಲ್ಲಿ ಮಹಿಷಾಸುರನ ದಾನವ ರೂಪ ಕಲ್ಪನೆ ಗಮನಾರ್ಹ.

ಚಾಲುಕ್ಯರ ಈ ದೇವಾಲಯ ವಾಸ್ತುಶಿಲ್ಪದ ಶೈಲಿಯ ಸಾಹಸ ಕ್ರಮಗಳನ್ನು, ಇಡಿಯಾಗಿ ನೋಡಿದರೆ ಮಲಪ್ರಭಾ ನದಿಯ ಕಣಿವೆಯ ಅತ್ತಿತ್ತ ಹರಡಿಕೊಂಡಿರುವ ಈ ದೇವಾಲಯ ವಾಸ್ತುಶಿಲ್ಪಗಳು ಹಲವಾರು ಕಿಲೋಮೀಟರುಗಳ ಅಂತರದ ನಡುವೆಯೂ, ಹಲವು ವಾಸ್ತುಶಿಲ್ಪಶಾಸ್ತ್ರೀಯ ಸೂತ್ರಗಳನ್ನು, ದೈವಿಕ ನಂಬಿಕೆಗಳನ್ನು, ಅರಗಿಸಿಕೊಂಡು ಜೀವಂತವಾಗಿರುವಂತೆ ಕಟ್ಟಲ್ಪಟ್ಟಿವೆ. ಐಹೊಳೆಯ ರಾವಣಫಡಿಯ ಶಿವಲಿಂಗದ ಮೇಲ್ಭಾಗದ ಕೇಂದ್ರದಿಂದ, ಪ್ರವೇಶದ್ವಾರದ ಮೂಲಕ ಹೊರಗೆ ನೇರವಾಗಿ ನೋಡಿದರೆ, ನಮ್ಮ ಕಣ್ಣಿನ ನೋಟವು ರಾವಣ ಫಡಿಯ ದ್ವಾರವನ್ನು ದಾಟಿ ದೂರದ ದುರ್ಗಿಗುಡಿಯ ಶಿಖರವನ್ನು ಸ್ಪರ್ಶಿಸುವಂತೆ ಸರಳರೇಖೆಯಲ್ಲಿ ಹರಿಯುತ್ತದೆ !

ಇನ್ನು ದೂರದ ಪೂರ್ವದ ಚಾಲುಕ್ಯರ ಆಳ್ವಿಕೆಯಲ್ಲಿದ್ದ, ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಸಂಗಮ ಕ್ಷೇತ್ರವಾದ ಆಲಂಪುರದಲ್ಲಿಯೇ ಅಲ್ಲದೆ ಇನ್ನು ಕೆಲವು ನೆಲೆಗಳಲ್ಲಿ ಅವರ ನಿರ್ಮಾಣದ ದೇಗುಲಗಳಿವೆ. ಬಹುಮುಖ್ಯವಾಗಿ ಆಲಂಪುರದಲ್ಲಿರುವ ದೇಗುಲಗಳು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿವೆ. ನೀರಿನ ಮುಳುಗಡೆಯ ಅತಂಕದಲ್ಲಿದ್ದ ಬಹುಮುಖ್ಯ ದೇವಾಲಯವೊಂದನ್ನು ತೆರವುಗೊಳಿಸಿ, ಸಾಗಿಸಿ ಮರುಜೋಡಿಸಿ ಸುಂದರವಾಗಿ ನಿರ್ಮಿಸಲಾಗಿದೆ. ಅಲ್ಲಿನ ಎಲ್ಲ ದೇಗುಲಗಳ ಉಬ್ಬುಶಿಲ್ಪಗಳಲ್ಲಿ, ಶಿಲ್ಪಿಗಳ ಕುಶಲತೆ ಮತ್ತು ಸೌಂದರ್ಯಾತ್ಮಕ ಸೃಷ್ಟಿಶೀಲತೆಗಳು ಇವೆ. ಒಂದೇ ವಂಶದ ಆಳ್ವಿಕೆಯಿಂದ ಎರಡು ಪ್ರದೇಶಗಳಲ್ಲಿಯೂ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಸಾಮಾನ್ಯರ ಲಿಪಿಯಾಗಿ ಬಳಸಲಾಗುತ್ತಿತ್ತು. ಪ್ರಾರಂಭದ ಭೌದ್ದ, ಜೈನ ಪ್ರಭಾವಗಳನ್ನು ಮೀರಿ ಶಿವ-ವಿಷ್ಣು ದೇಗುಲಗಳು ಮಧ್ಯ – ದಕ್ಷಿಣ ಭಾರತದ ಚಾಲುಕ್ಯರ ಆಳ್ವಿಕೆಯ ಪ್ರದೇಶಗಳಲ್ಲಿ ಕಟ್ಟಲ್ಪಟ್ಟವು. ಚಾಲುಕ್ಯರು, ಜೈನ ಮತ್ತು ಹಿಂದೂ ಧಾರ್ಮಿಕ ದೇವಾಲಯ ಮಾಧ್ಯಮದ ಸಾಂಸ್ಕೃತಿಕ ರಾಜಕಾರಣವನ್ನು ತಮ್ಮ ಮತ್ತು ಜನರ ಸಂತೋಷಕ್ಕೆ ಪೂರಕವಾಗಿ, ಅತ್ಯುನ್ನತ ಆಶಯದಿಂದ ದುಡಿಸಿಕೊಂಡರು. ಆನಂತರ ಈ ದಕ್ಷಿಣ ಭಾರತದ, ದೇವಾಲಯ ವಾಸ್ತುಶಿಲ್ಪ ಸೃಷ್ಟಿಯ ಅನುಭವವನ್ನು, ತಮ್ಮದೇ ಆದ ರೀತಿಗಳಲ್ಲಿ ದುಡಿಸಿಕೊಂಡ ಚೋಳ, ಹೊಯ್ಸಳ, ವಿಜಯನಗರ ನಾಯಕರು, ತಮ್ಮ ಕೊಡುಗೆಗಳಿಂದ ವಿಭಿನ್ನ ಬೃಹದತೆ, ಕುಶಲತೆ, ಕಲಾತ್ಮಕತೆ ಮತ್ತು ಔನ್ನತ್ಯಗಳನ್ನು ಸಾಧಿಸಿದರು. ಉತ್ತರದ ಶೈಲಿಯ ಅಭಿವೃದ್ಧಿಗೊಂಡ ವಿಶಿಷ್ಟ, ಸ್ಥಳೀಯ ಪ್ರಭಾವಶಾಲಿ ಪರಂಪರೆಯ ಜೀವಧ್ವನಿಯನ್ನು ಅರಗಿಸಿಕೊಂಡ, ಪ್ರಾರಂಭದ ಚಾಲುಕ್ಯರ ದೇವಾಲಯಗಳು ಬಹುತೇಕ ಇತರೆಡೆ ಕಾಣೆಯಾಗಿವೆಯಾದರು, ಬಾದಾಮಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆ ಮತ್ತು ಆಲಂಪುರಗಳಲ್ಲಿ ವಿಶ್ವವೇ ಬೆರಗುಗೊಂಡು ನೋಡುವಂತೆ ಸಂರಕ್ಷಿಸಲ್ಪಟ್ಟಿವೆ ! ಈ ಅಪೂರ್ವ ದೇವಾಲಯ ವಾಸ್ತುಶಿಲ್ಪ ನೆಲೆಗಳಲ್ಲಿ ನಡೆದಾಡಿ, ದೇವಾಲಯ ದೃಶ್ಯಕಲಾ ಇತಿಹಾಸದ ಅಧ್ಯಯನ ಮಾಡಿರುವ, ಪುಂಡಲೀಕ ಕಲ್ಲಿಗನೂರ ಅವರ ಸಾಹಸಮಯ ಪ್ರಯತ್ನಗಳು ಹಲವು. ಈ ಹಿನ್ನೆಲೆಯಲ್ಲಿ ನೋಡುಗ/ಓದುಗರು ಇನ್ನೂ ಹಲವು ರೀತಿಗಳಲ್ಲಿ, ಚಾಲುಕ್ಯರ ಶಿಲ್ಪಕಲೆಯನ್ನು ನೋಡಬಹುದಾದ ದಾರಿಗಳನ್ನು ಅನ್ವೇಷಿಸಿಕೊಳ್ಳಬಹುದೆನ್ನಿಸುತ್ತದೆ. ಪುಂಡಲೀಕರ ವಿಶಿಷ್ಟ ಕ್ಯಾಮರಾ ಕಣ್ಣಿನ, ಸುಂದರ ದೃಶ್ಯ ಮತ್ತು ಅಕ್ಷರ ಮೂಲದ ಈ ಪುಸ್ತಕದಲ್ಲಿ, ಚಾಲುಕ್ಯರ ನವರಸ ಭಾವಗಳ ದೇವಾಲಯವಾಸ್ತು ಮತ್ತು ಶಿಲ್ಪಗಳ ನೂರಾರು ಚಿತ್ರಗಳು, 125 ಕ್ಕೂ ಹೆಚ್ಚಿನ ಶೀರ್ಷಿಕೆಗಳ ಅವಕಾಶದ ಅಡಿ ಅನಾವರಣಗೊಂಡಿವೆ.

(ಕೆ.ವಿ. ಸುಬ್ರಹ್ಮಣ್ಯ)

ಕನ್ನಡ ದೃಶ್ಯಕಲಾ ಸಾಹಿತ್ಯದಲ್ಲಿ ಅಪರೂಪವಾಗಿರುವ, ಮಹತ್ವಕಾಂಕ್ಷೆಯ ಜೊತೆಜೊತೆಗೆ ವಿನಯವನ್ನೂ ಕೆ. ವಿ. ಪುಂಡಲೀಕ ಕಲ್ಲಿಗನೂರ ಅವರು ಅರಗಿಸಿಕೊಂಡಿರುವುದು, ಕನ್ನಡ ದೃಶ್ಯಕಲಾ ಸಾಹಿತ್ಯಕ್ಕೆ ಗೌರವವನ್ನು ತಂದು ಕೊಡಬಲ್ಲದು. ಹಾಗಾಗಿಯೇ, ಇದೊಂದು “ ದೊಡ್ಡ ಸಾಗರ ಸದೃಶ್ಯ ಕಲಾಕೀರ್ತಿಯ, ಒಂದು ಮಗ್ಗುಲಿನ ಒಂದಿಷ್ಟು ಅಳಿಲು ಪ್ರಯತ್ನ ಈ ಕೃತಿ. ಇದು ಪ್ರಾರಂಭವೂ ಅಲ್ಲ, ಅಂತ್ಯವೂ ಅಲ್ಲ…” ಎಂದೇ ತಮ್ಮ ಪುಸ್ತಕವನ್ನು, ಅವರು ನಿರಚನೆಯ ತಾತ್ವಿಕತೆಯಲ್ಲಿ ಗ್ರಹಿಸಿದ್ದಾರೆ. ಮುಖ್ಯವಾಗಿ ತಮ್ಮ ಬಹುಸಂಖ್ಯೆಯ ಅಧ್ಯಾಯಗಳಲ್ಲಿ ಅವರು, (1) ಚಾಲುಕ್ಯರ ಕಲೆಯಲ್ಲಿ ಈಗಾಗಲೇ ಎಲ್ಲರೂ ನೋಡುತ್ತ ಬಂದಿರುವ ನೋಟಗಳನ್ನು ವಿಭಿನ್ನವಾಗಿ ಕಾಣಿಸಿರುವುದು ಗಮನಿಸುವಂತಿದೆ. ಜೊತೆಗೆ (2 ) ಶೋಧನಾತ್ಮಕ, ಕೌತುಕಮಯ ಅಧ್ಯಾಯಗಳನ್ನೂ ಅವರು ಶ್ರಮ ವಹಿಸಿ ರೂಪಿಸಿದ್ದಾರೆ.

ಮೊದಲನೆಯ ಪ್ರಕಾರದಲ್ಲಿ ನೂರಕ್ಕೂ ಹೆಚ್ಚು ಮುಖ್ಯವಾದ ಶೀರ್ಷಿಕೆಗಳೇ ಇವೆ. ಅವುಗಳಲ್ಲಿ ಕೆಲವು : ಪುಟ 16ರ ‘ಮೊದಲನೆಯ ಗುಹಾಲಯ ಶಿವನ ಆಡುಂಬೊಲ’, ಪುಟ 89ರ ‘ ತ್ರಿಮೂರ್ತಿಗಳು ಮತ್ತು ತೀಥರ್ಂಕರರು, ‘ಪುಟ 100 ರ ‘ಕುಬ್ಜ ಗಣಂಗಳ ಹಾಸ್ಯ-ಲಾಸ್ಯ , ‘ ಪುಟ 131ರ ‘ಜಂಬುಲಿಂಗ ದೇವಾಲಯ ,’ ಪುಟ 103 ರ ‘ವಿರೂಪಾಕ್ಷ ದೇವಾಲಯ, ‘ ಪುಟ 112 ರ ‘ಭೂತನಾಥ ದೇವಾಲಯ ಗುಚ್ಛ ,’ ಪುಟ 146 ರ ‘ಹುಚ್ಚಿ ಮಲ್ಲಿ ಗುಡಿ, ‘ ಪುಟ 162 ರ ಪ್ರಣಯದ ಗುಂಗಿನಲ್ಲಿ ‘, ಪುಟ 166ರ ‘ಕಂಬಗಳಲ್ಲಿ ಸಲ್ಲಾಪದ ಶಿಲ್ಪಕಲೆ,’ ಪುಟ 171ರ, ‘ಲಾಡಖಾನ್ ದೇವಾಲಯ,’ ಪುಟ 176ರ ‘ ರಾಜಲಾಂಛನ ಮತ್ತು ನರಸಿಂಹ, ‘ಪುಟ 196ರ ‘ಹುಚ್ಚಪ್ಪಯ್ಯನ ಮಠದ ಪ್ರೇಮ ಪರಾಕಾಷ್ಠೆಯ ಶಿಲ್ಪಗಳು’, ಪುಟ 392 ರ ‘ ಪಾಪನಾಥೇಶ್ವರ ದೇವಾಲಯದ ಭಿತ್ತಿಯ ರಾಮಾಯಣದ ಕಥಾ ಪಟ್ಟಿಕೆಗಳು, ‘ಪುಟ 200 ರ ‘ಮೇಗುತಿ ಗುಡಿ’, ಪುಟ 202ರ ‘ಬೌದ್ಧವಿಹಾರ’, ಪುಟ 208ರ ‘ರಾವಣಫಡಿ’ ಪುಟ 288 ರ ‘ವೀರಭದ್ರ ಮತ್ತವನ ಯಜ್ಞಮರ್ಮ’, ಪುಟ 242ರ ‘ ಕಾಶಿವಿಶ್ವೇಶ್ವರ ದೇವಾಲಯ’ ’ಪುಟ 412ರ ‘ ಜೈನಬಸದಿ, ಇತ್ಯಾದಿಗಳ ಜತೆಜತೆಗೇ ‘ಮಹಾಕೂಟ ಕೇಂದ್ರಿತ ಕಾಳಮುಖರು’, ‘ಸಿದ್ದನಕೊಳ್ಳ‘ ಮೊದಲಾದವು ಇವೆ.

ಎರಡನೆಯ ಪ್ರಕಾರದಲ್ಲಿ, ಪುಟ 129ರ ‘ಕೊಲ್ಲಾಪುರದ ಮಹಾಲಕ್ಷ್ಮಿ’, ಪುಟ 464ರ ‘ಕಪ್ಪೆ ಅರಭಟ್ಟನ ಶಾಸನದ ಆರ್ಭಟ’, ‘ಕರ್ನಾಟಕದಲ್ಲಿ ಜೈನ ಧರ್ಮ’, ‘ ಚಾಲುಕ್ಯ ಶಿಲ್ಪಿಗಳು ಮತ್ತು ಶಿಲ್ಪ ವಿಶೇಷತೆ, ‘ ಶಂಕರಲಿಂಗನ ಗುಂಡು ಬೆಟ್ಟದ ಕೌತುಕ, ‘ ‘ ಕಾಳಿದಾಸನ ಸಾಹಿತ್ಯಕ್ಕೆ ಬಾದಾಮಿ ಚಾಲುಕ್ಯ ಶಿಲ್ಪಕಲೆಯ ನಂಟು,’ ‘ಚಾಲುಕ್ಯ ಶಿಲ್ಪಿಗಳು ಮತ್ತು ಶಿಲ್ಪ ವಿಶೇಷತೆ,’ ‘ಚಾಲುಕ್ಯರ ಯುದ್ಧ ತರಬೇತಿ ತಾಣಗಳು, ‘ ‘ ತೆರೆದ ಗ್ರಂಥವಾಗಿ ದೇವಾಲಯಗಳು’ ‘ದಕ್ಷಯಜ್ಞಕ್ಕೆ ಆಹ್ವಾನಿತರು ಯಾರು ಯಾರು? ‘ ‘ ಲಜ್ಜಾಗೌರಿ ಶಿಲ್ಪಗಳು’, ‘ಅರ್ಧನಾರೀಶ್ವರ ಶಿಲ್ಪದ ವಿಶೇಷತೆ,’ ‘ಶಾತವಾಹನ ಬೌದ್ಧರ ಮೂಲದ ಪರಂಪರೆಯ ಆರಂಭ,’ ‘ಚಾಲುಕ್ಯ ಸಾಮ್ರಾಜ್ಯದ ಸ್ತ್ರೀಯರು’, ‘ಚಾಲುಕ್ಯರಲ್ಲಿ ಗೃಹಿಣಿಯರ ಸ್ಥಾನಮಾನ’, ‘ ಶಿಲ್ಪಿ ನರಸೋಬನ ಸ್ವಾಭಿಮಾನ ಶಾಸನ,’ ಇತ್ಯಾದಿಗಳಿರುವುದು ಒಂದು ವಿಶೇಷ. ಇಡಿಯಾಗಿ ಈ ಪ್ರಕಟಣೆಯು ವಿಶಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಅರಗಿಸಿಕೊಂಡಿರುವುದರ ಜೊತೆಜೊತೆಗೆ, ಬಹುಮುಖ್ಯವಾಗಿ ಸಾಹಿತ್ಯ ಮತ್ತು ಶಿಲ್ಪಗಳ ಅಧ್ಯಯನಶೀಲ, ಸಂಶೋಧನಾತ್ಮಕ ದೃಶ್ಯ – ದರ್ಶನಗಳ ಪುಸ್ತಕ ರೂಪದ ಪ್ರದರ್ಶನಾಂಗಣವಾಗಿ ರೂಪುಗೊಂಡಿದೆ. ತಾಂತ್ರಿಕವಾಗಿಯೂ ಔನ್ನತ್ಯವನ್ನು ಸಾಧಿಸಿರುವ ಇಲ್ಲಿನ ಛಾಯಾಚಿತ್ರಗಳು, ಚಾಲುಕ್ಯರ ಶಿಲ್ಪಕಲಾ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ನೋಡುಗರನ್ನು ಆಹ್ವಾನಿಸುವಂತಿವೆ. ಇಂತಹ ಮಹತ್ವಾಕಾಂಕ್ಷೆಯ ಸಾಹಸಗಳಿಗೆ ವಿಶ್ವದ ಎಲ್ಲಾ ಕಲಾಭಿಮಾನಿಗಳ ಪ್ರೀತಿಯ ಪ್ರೋತ್ಸಾಹ ಇರುತ್ತದೆ ಎಂಬ ನಂಬಿಕೆ ನನ್ನದು.

(ಕೃತಿ: ಚಾಲುಕ್ಯರ ಶಿಲ್ಪಕಲೆ, ಲೇಖಕರು: ಪುಂಡಲೀಕ ಕಲ್ಲಿಗನೂರು, ಪ್ರಕಾಶಕರು: ಕನ್ನಡ ಪ್ರಕಾಶನ, ಬೆಲೆ: 2450/-)