ಮಗಳೊಂದಿಗೆ ಒಂದು ದಿನ ಕಳೆಯುವ ಸುಖ ಈ ಎಲ್ಲ ವೈಭವಕ್ಕಿಂತ ಮಿಗಿಲಾದುದು ಎಂದು ಕನಸು ಕಾಣುತ್ತ ದಿನ ಮುಗಿಸುತ್ತಿರುತ್ತಾಳೆ ನತಾಲ್ಯಾ. ಅಷ್ಟರಲ್ಲಿ ಅವಳ ಮರಿ ದೆಲ್, ಅಂದರೆ ಪತಿ ದೇವರ ಆಗಮನವಾಗುತ್ತದೆ. ಸಣ್ಣದೊಂದು ಕೆಲಸದಲ್ಲಿದ್ದ ಆಕೆಯ ಗಂಡ ನಿಕಿಟಿನ್ ಹೆಂಡತಿ ಪ್ರಸಿದ್ಧಳಾಗುತ್ತಲೇ ಕೆಲಸ ಬಿಟ್ಟು ಅವಳ ಹಣದಲ್ಲೇ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ನತಾಲ್ಯಾ ಎಷ್ಟು ಬಿಡಿಸಿಕೊಳ್ಳಲು ಯತ್ನಿಸಿದರೂ ಮತ್ತೂ ಅಂಟಿಕೊಳ್ಳುತ್ತಿದ್ದಾನೆ.
‘ಕಾವ್ಯಾ ಓದಿದೆ ಹೊತ್ತಿಗೆ’ ಅಂಕಣದಲ್ಲಿ ತಾವು ಓದಿದ ಸುಪ್ರಸಿದ್ಧ ಕಥೆಗಾರ ಆಂಟನ್‌ ಚೆಕೋವ್‌ರ ಏಳು ಕತೆಗಳ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

ಆಂಟನ್ ಚೆಕೊವ್ ಜಗತ್ತು ಕಂಡ ಮೇಧಾವಿ ಕಥೆಗಾರ, ನಾಟಕಕಾರ. 1860ರಲ್ಲಿ ಹುಟ್ಟಿ ತಮ್ಮ ನಲವತ್ನಾಲ್ಕು ವರ್ಷಗಳ ಅಲ್ಪ ಜೀವಿತಾವಧಿಯಲ್ಲಿ ಅವರು ಬರೆದದ್ದು ನೂರಾರು ಸಣ್ಣಕತೆಗಳನ್ನು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು “ವೈದ್ಯಕೀಯ ನನ್ನ ಹೆಂಡತಿಯಾದರೆ, ಸಾಹಿತ್ಯ ನನ್ನ ಪ್ರೇಯಸಿಯಿದ್ದಂತೆ. ಒಬ್ಬಳ ಸಂಗ ಬೇಸರವಾದಾಗ ಇನ್ನೊಬ್ಬಳ ಬಳಿ ಹೋಗುವೆ” ಎಂದು ಹೇಳಿದ ಮಾತು ಅವರ ಹೆಸರಿನ ಜೊತೆಗೇ ತಳುಕು ಹಾಕಿಕೊಂಡಷ್ಟು ಜನಪ್ರಿಯವಾದದ್ದು. ವೈಯಕ್ತಿಕವಾಗಿ ಇಂಥ ಹೇಳಿಕೆಗಳ ಬಗ್ಗೆ ತಕರಾರಿದ್ದರೂ ಎಲ್ಲವನ್ನೂ ಮೀರಿ ಅವರ ಅಪೂರ್ವ ಕಥನಕಲೆಗೆ ಮಾರು ಹೋಗಿದ್ದೂ ಸತ್ಯ.

ಜಗತ್ತಿನೆಲ್ಲೆಡೆ ಸಾಹಿತ್ಯದ ವಿದ್ಯಾರ್ಥಿಗಳಿಗೆ ‘ಚೆಕೊವ್ ಗನ್’ಎಂಬ ಪದಗುಚ್ಛ ಕೇಳಿದ ತಕ್ಷಣ ಅದರ ತಾತ್ಪರ್ಯ ಹೊಳೆದುಬಿಡುತ್ತದೆ. “ಕಥನಕ್ಕೆ ಸಂಬಂಧ ಪಡದ ಅಂಶಗಳನ್ನೆಲ್ಲ ಹೊಡೆದುಹಾಕಿ. ಮೊದಲನೆಯ ಅಧ್ಯಾಯದಲ್ಲಿ ಗೋಡೆಯ ಮೇಲೆ ರೈಫಲ್ಲೊಂದು ತೂಗುತ್ತಿತ್ತು ಅಂತ ಬರೆದಿದ್ದರೆ, ಎರಡನೆಯ ಅಥವಾ ಮೂರನೆಯ ಅಧ್ಯಾಯದಲ್ಲಿ ಆ ರೈಫಲ್ಲಿನಿಂದ ಗುಂಡೊಂದು ಹಾರಿರಬೇಕು. ಹಾಗಾಗಲಿಲ್ಲ ಅಂದರೆ ಆ ರೈಫಲ್ಲು ಆ ಗೋಡೆಯ ಮೇಲೆ ತೂಗಬೇಕಿಲ್ಲ” ಅಂದಿರುವುದು ಅವರಿಲ್ಲವಾಗಿ ನೂರಿಪ್ಪತ್ತು ವರ್ಷಗಳ ನಂತರವೂ ಹೊಸ ಬರಹಗಾರರಿಗೆ ಮಹತ್ವದ ಪಾಠವಾಗಿದೆ.

“ನಾನು ಕಾಲವಾದ ನಂತರ ನನ್ನ ಕತೆಗಳು ಸುಮಾರು ಏಳು ವರ್ಷಗಳ ಕಾಲ ಚಲಾವಣೆಯಲ್ಲಿರುತ್ತವೇನೋ ಅಷ್ಟೇ” ಅಂದಿದ್ದರಂತೆ ಚೆಕೊವ್ ಸ್ನೇಹಿತರೊಬ್ಬರ ಬಳಿ. ಈ ಕತೆಗಳನ್ನು ಬರೆದು ಮುಗಿಸಿ ಒಂದೂವರೆ ಶತಮಾನದ ನಂತರವೂ ಹೊಸ ಕಂಪನಗಳನ್ನು ಏಳಿಸುತ್ತಲೇ ಇದೆ ಚೆಕೊವ್‌ರ ಕಥನ ಪ್ರಪಂಚ. ಎಲ್ಲರ ನುಡಿಗಳಲ್ಲೂ ನಲಿದಾಡುವ ಅವರ ‘ಲೇಡಿ ವಿಥ್ ದ ಡಾಗ್,’ ‘ವಾರ್ಡ್ ನಂಬರ್ ಸಿಕ್ಸ್’ ಮುಂತಾದ ಕತೆಗಳನ್ನು ಬಿಟ್ಟು, ಯಾವುದೇ ಕ್ರಮವಿರದೇ ಕಣ್ಣು ಮುಚ್ಚಿ ಆಯ್ದುಕೊಂಡ ಏಳು ಕತೆಗಳನ್ನು ಇಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರುವೆ.

ಆಂಟನ್ ಚೆಕೊವ್ 1882 ರಿಂದ 1885ರ ವರೆಗೆ ಬರೆದ ನೂರಾರು ಬರಹಗಳಲ್ಲಿ ಈ ಏಳು ಕತೆಗಳೂ ಸೇರಿವೆ. ವಿವರಿಸಲಾರದ ಅದೃಶ್ಯ ತಂತುವೊಂದು ಈ ಕತೆಗಳನ್ನು ಬೆಸೆದಿದೆ ಎಂದು ಭ್ರಮಿಸಿರುವುದು ನನ್ನದೇ ಖುಷಿಗೆ ಇದ್ದರೂ ಇದ್ದೀತು.

ಹೆಡ್ ಆಫ್ ದ ಫ್ಯಾಮಿಲಿ

ಸ್ಟಿಫನ್ ಸ್ಟಿಫನಿವಿಚ್ ಈ ಮನೆಯ ಹೆಡ್ ಆಫ್ ದ ಫ್ಯಾಮಿಲಿ. ಸಾಂಪ್ರದಾಯಿಕ ಅರ್ಥದಲ್ಲಿ ಯಜಮಾನ. ಒಂದು ಸಂಜೆ ಇಸ್ಪೀಟಾಟದಲ್ಲಿ ಸೋತು ಕುಡಿದ ಮತ್ತಿನಲ್ಲಿ ಬಂದವನೇ ಮನೆಯ ಎಲ್ಲರ ಮೇಲೂ ಸಿಡಿಮಿಡಿಗೊಳ್ಳುತ್ತಾನೆ. ಅವನ ಕೋಪಕ್ಕೆ ಸ್ಪಷ್ಟ ಕಾರಣವೇ ಇಲ್ಲ. ಹೆಂಡತಿ, ಮಗ, ಮಗನಿಗೆ ಪಾಠ ಕಲಿಸುವ ಗವರ್ನೆಸ್, ಅಡಿಗೆಯವರು… ಹೀಗೆ ಆತನ ಮಾತಿನ ಪ್ರಹಾರಕ್ಕೆ ಎಲ್ಲರೂ ಬಲಿಯಾಗಬೇಕಾಗುತ್ತದೆ. ಅವನ ಹಣದಿಂದ ಮಾತ್ರವೇ ಈ ಮನೆ ನಡೆಯುತ್ತಿರುವುದು, ಆ ಕಾರಣಕ್ಕಾಗಿ ಎಲ್ಲರೂ ತನ್ನನ್ನು ಸಹಿಸಿಕೊಳ್ಳಬೇಕು ಎಂಬ ‘ಅನ್-ಸೆಡ್’ ಧೋರಣೆಯೂ ಅವನ ವ್ಯಕ್ತಿತ್ವದಲ್ಲಿ ಬೆರೆತು ಹೋಗಿದೆ.

ಮುಂಜಾನೆ ಎದ್ದು ಕಣ್ಣು- ಮನಸ್ಸು ತಿಳಿಯಾಗುವಾಗ ಹಿಂದಿನ ದಿನ ತಾನು ಆಡಿದ ಮಾತುಗಳು, ಮಾಡಿದ ಪ್ರಮಾದ ನೆನಪಾಗಿ ಮನೆಯವರಿಗೆ ಮುಖ ಕಾಣಿಸಲೇ ಮುಜುಗರವಾಗುತ್ತದೆ. ಕತೆಯ ಕೊನೆಗೆ ಮಗನ ಜೊತೆಗೆ ಆದ ರಾಜಿಯಲ್ಲೂ ಒಂದು ಕೃತಕತೆ ಕಾಣುತ್ತದೆ. ಒಬ್ಬ ವ್ಯಕ್ತಿಯನ್ನು ಯಜಮಾನನ ಸ್ಥಾನದಲ್ಲಿ ಕೂರಿಸಿದಾಗ ಅಥವಾ ಆತನೇ ಹಾಗೆ ನಂಬಿ ಕುಳಿತಾಗ ಅವನು ಘಾಸಿಗೊಳಿಸುವ ಲೋಕವನ್ನು ಕಥೆಗಾರ ಇಲ್ಲಿ ತೆರೆದಿಟ್ಟಿದ್ದಾರೆ.

ಅ ಟ್ರಾಜಿಕ್ ಆಕ್ಟರ್

ತಮ್ಮ ಊರಿಗೆ ನಾಟಕ ತಂಡವೊಂದರ ಜೊತೆಗೆ ಬಂದ ಫೆನೊಗೆನೊವ್ ಎಂಬ ದುರಂತ ನಾಯಕನ ನಟನೆಗೆ ಮರುಳಾಗಿ ಅವನೊಂದಿಗೆ ಓಡಿ ಬಂದ ಮಾಶಾ ಎಂಬ ಹುಡುಗಿಯ ಕತೆಯಿದು. ಪ್ರೇಮದ ಮತ್ತಿನಲ್ಲಿ ಓಡಿ ಬಂದ ಮಾಶಾಳ ಮುಗ್ಧತೆ ಮಾಸಲು ಬಹಳ ದಿನಗಳು ಬೇಕಾಗುವುದಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಫೆನೊಗೆನೊವ್ ಹೆಂಡತಿಯನ್ನು ಹಣಕ್ಕಾಗಿ ಹೊಡೆಯಲು ಶುರು ಮಾಡುತ್ತಾನೆ. “ಪಪ್ಪಾ, ನನ್ನನ್ನು ಕ್ಷಮಿಸು. ಹಣ ಕಳಿಸಿಕೊಡು. ಇವನು ನನ್ನನ್ನು ತುಂಬಾ ಹೊಡೆಯುತ್ತಾನೆ” ಎಂಬ ಒಕ್ಕಣೆಯಿರುವ ಪತ್ರವನ್ನು ಮಾಶಾ ತಂದೆಗೆ ಪದೇ ಪದೇ ಬರೆಯುತ್ತಲೇ ಇದ್ದಾಳೆ. ಅನಿವಾರ್ಯವಾಗಿ ಅವಳೂ ತಂಡದ ನಾಟಕಗಳಲ್ಲಿ ಪಾತ್ರ ಮಾಡಲೇ ಬೇಕಾಗುತ್ತದೆ. ನಿಜದಲ್ಲಿ ದೂರವಿರುವ ಗಂಡನನ್ನು ರಂಗದ ಮೇಲೆ ತನಗೆ ಹತ್ತಿರ ತರಲು ಪ್ರಯತ್ನಿಸಿ ಅಲ್ಲಿಯೂ ಸೋಲುತ್ತಾಳೆ.

“ಕಥನಕ್ಕೆ ಸಂಬಂಧ ಪಡದ ಅಂಶಗಳನ್ನೆಲ್ಲ ಹೊಡೆದುಹಾಕಿ. ಮೊದಲನೆಯ ಅಧ್ಯಾಯದಲ್ಲಿ ಗೋಡೆಯ ಮೇಲೆ ರೈಫಲ್ಲೊಂದು ತೂಗುತ್ತಿತ್ತು ಅಂತ ಬರೆದಿದ್ದರೆ, ಎರಡನೆಯ ಅಥವಾ ಮೂರನೆಯ ಅಧ್ಯಾಯದಲ್ಲಿ ಆ ರೈಫಲ್ಲಿನಿಂದ ಗುಂಡೊಂದು ಹಾರಿರಬೇಕು. ಹಾಗಾಗಲಿಲ್ಲ ಅಂದರೆ ಆ ರೈಫಲ್ಲು ಆ ಗೋಡೆಯ ಮೇಲೆ ತೂಗಬೇಕಿಲ್ಲ”‌

ಅನ್ ಅನಿಗ್ಮಾಟಿಕ್ ನೇಚರ್

ಟ್ರೇನಿನಲ್ಲಿ ಸಿಕ್ಕ ಸುಂದರಿಯೊಬ್ಬಳ ಕತೆ. ಯುವ ಕಥೆಗಾರನಿಗೆ ಎದುರಾಗಿ ಕುಳಿತ ಅವಳು ಆತನೊಂದಿಗೆ ತನ್ನ ಮನಸ್ಸು ಬಿಚ್ಚುತ್ತಾಳೆ. “ಚಿಕ್ಕಂದಿನಿಂದ ಬಡತನದಲ್ಲಿ ಬೆಳೆದ ನಾನು ಹಣಕ್ಕಾಗಿ ಸಿರಿವಂತನೊಬ್ಬನನ್ನು ವರಿಸಿದೆ. ಆಗ ನಾನು ಏನನ್ನು ತಾನೇ ಮಾಡಲು ಸಾಧ್ಯವಿತ್ತು! ಆಗ ಎಂತೆಂಥ ಕಷ್ಟ ಪಟ್ಟಿದ್ದೇನೆ ಎಂದು ಹೇಳಲೂ ಸಾಧ್ಯವಿಲ್ಲ. ಆದರೀಗ ಆತ ತೀರಿ ಹೋಗಿದ್ದಾನೆ. ಈಗಲಾದರೂ ನನ್ನಿಷ್ಟದವನನ್ನು ವರಿಸಲು ಆಸೆಯಿದೆ. ಆದರೆ ಅದೂ ಸಾಧ್ಯವಾಗುತ್ತಿಲ್ಲ..”

“ಏಕೆ? ನಿನ್ನ ದಾರಿಗಡ್ಡವಾಗಿದ್ದು ಏನು?”

“ಇನ್ನೊಬ್ಬ ಮುದುಕ ಜನರಲ್‌ನಿದ್ದಾನೆ.. ಬಹಳ ಶ್ರೀಮಂತ..” ಎಂಬಲ್ಲಿ ಕತೆ ಮುಗಿಯುತ್ತದೆ. ಶಬ್ದಗಳಲ್ಲಿ ಹೇಳಲಾಗದ ಎಷ್ಟೊಂದು ಭಾವಗಳನ್ನು ಹೇಳದೆಯೂ ಸಂವಹಿಸುವ ಕ್ರಮ ಆಕರ್ಷಕವಾಗಿದೆ.

ದ ಹಂಟ್ಸ್‌ಮ್ಯಾನ್

ಯೆಗೊರ್ ವ್ಲಸಿಯಿಚ್ ಮತ್ತು ಪೆಲಾಗಿಯಾ ಬಹಳ ಹಿಂದೆ ಮದುವೆಯಾದವರು. ಆತ ಬೇಟೆ, ಕೋವಿ ಎಂದು ಬೂಟು ಧರಿಸಿ ಕಾಡು ಸುತ್ತುವ ಶೋಕಿ ಮನುಷ್ಯ. ಆಕೆ ಸಾದಾ ಸೀದಾ ರೈತಾಪಿ ಹೆಣ್ಣುಮಗಳು. ಎಷ್ಟೋ ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ಹೆಂಡತಿಗೆ ಹೊಡೆದು, ಬೈದು ಆತ ಅಲ್ಲಿಂದ ಮಾಯವಾಗಿದ್ದಾನೆ. ವರ್ಷಗಳ ನಂತರ ಅಕಸ್ಮಾತಾಗಿ ಸಿಕ್ಕಿದಾಗ ಗಂಡ ಹೆಂಡತಿಯರ ನಡುವಿನ ಮಾತುಕತೆಯೇ ಈ ಕತೆ. ಇಲ್ಲಿ ಮೂಡಿರುವ ಗಂಡನ ತಾತ್ಸಾರ ಮತ್ತು ಹೆಂಡತಿಯ ಮುಗ್ಧ ಪ್ರೇಮ ನೆನಪಿಟ್ಟುಕೊಳ್ಳುವಂತಿದೆ.

ಅ ಡಾಟರ್ ಆಫ್ ಅಲ್ಬಿಯಾನ್

ಗ್ರಾಯಬೊವ್ ಮತ್ತು ಒತ್ಸೊವ್ ಸ್ನೇಹಿತರು. ಬಹಳ ದಿನಗಳ ನಂತರ ಭೇಟಿಯಾಗುತ್ತಿದ್ದಾರೆ. ಒತ್ಸೊವ್ ಬಂದಾಗ ಗ್ರಾಯಬೊವ್ ಮನೆಯಲ್ಲಿರದೇ ಸಮೀಪದ ಕೆರೆಯಲ್ಲಿ ಮೀನು ಹಿಡಿಯುತ್ತ ಕುಳಿತಿದ್ದಾನೆ. ಅವನ ಜೊತೆ ಅವನ ಮಕ್ಕಳಿಗೆ ಪಾಠ ಹೇಳಲು ಗೊತ್ತಾದ ವಿಲ್ಕಾ ಕೂಡ ಇದ್ದಾಳೆ. ರಷ್ಯನ್ ಭಾಷೆ ಬರದ ಅಬ್ಬಿಯನ್ ಅಂದರೆ ಇಂಗ್ಲೀಷ್ ಯುವತಿ ಆಕೆ. ದಿನವೂ ಇದೇ ಹೊತ್ತಿಗೆ ಗ್ರಾಯಬೊವ್ ಮತ್ತು ವಿಲ್ಕಾ ಮೀನು ಹಿಡಿಯಲು ಬರುತ್ತಾರೆ. ಗೆಳೆಯನೊಟ್ಟಿಗೆ ಮಾತನಾಡುವಾಗ ವಿಲ್ಕಾನ ಕುರಿತು ಉಪೇಕ್ಷೆಯನ್ನೇ ಪ್ರಕಟಿಸುತ್ತಾನೆ ಗ್ರಾಯಬೊವ್. ಅವನ ಮಾತು- ಕೃತಿಗಳ ಹಿಂದೆ ಬೇರೊಂದು ಅರ್ಥವಿದೆಯೇ ಎಂದು ಚಕಿತಗೊಳ್ಳುವಂತಿದೆ.

ಅ ಕುಕ್ಸ್ ವೆಡ್ಡಿಂಗ್

ಗ್ರಿಶಾ ಎಂಬ ಪುಟ್ಟ ಬಾಲಕನ ಕಣ್ಗಳಿಂದ ನೋಡಿದ ಕತೆಯಿದು. ಗ್ರೀಶಾನ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಪೆಲಗೆಯಾಳ ಮದುವೆಯ ಮಾತುಕತೆ ನಡೆದಿದೆ. ಪೆಲಗೆಯಾಳ ಇಷ್ಟದ ಹೊರತು ಅಲ್ಲಿ ಎಲ್ಲ ಬಗೆಯ ಸಂವಾದವೂ ನಡೆದು ಹೋಗಿದೆ. ಅಕ್ಕ ಪಕ್ಕದ ಮನೆಯ ಅಡುಗೆಯವರೂ, ನರ್ಸ್‌ಗಳೂ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಿರುವಾಗ ಒಂದು ದಿನ ಗ್ರೀಶಾ ಏಳುವ ಮುನ್ನವೇ ಮುಂಜಾನೆ ಅಡುಗೆ ಮನೆಯಲ್ಲೇ ಪೆಲಗೆಯಾಳ ಮದುವೆ ನಡೆದು ಹೋಗಿದೆ. ತಕ್ಷಣವೇ ಅವಳ ಗಂಡ ಪೆಲಗೆಯಾಳ ಮೇಲೆ ಮತ್ತು ಅವಳ ಸಂಬಳದ ಮೇಲೆ ಹಕ್ಕು ಚಲಾಯಿಸುವುದನ್ನು ಕಂಡು ಗ್ರೀಶಾನಿಗೆ ಕೋಪವೂ, ಅಸಹಾಯಕತೆಯೂ ಒತ್ತಿ ಬರುತ್ತದೆ.

ಮರಿ ದೆಲ್

ನತಾಲ್ಯಾ ಒಬ್ಬ ಹೆಸರಾಂತ ಒಪೆರಾ ಸಿಂಗರ್. ಮಗಳು ದೂರದ ಅಜ್ಜಿಮನೆಯಲ್ಲಿದ್ದಾಳೆ. ಮಗಳೊಂದಿಗೆ ಒಂದು ದಿನ ಕಳೆಯುವ ಸುಖ ಈ ಎಲ್ಲ ವೈಭವಕ್ಕಿಂತ ಮಿಗಿಲಾದುದು ಎಂದು ಕನಸು ಕಾಣುತ್ತ ದಿನ ಮುಗಿಸುತ್ತಿರುತ್ತಾಳೆ ನತಾಲ್ಯಾ. ಅಷ್ಟರಲ್ಲಿ ಅವಳ ಮರಿ ದೆಲ್, ಅಂದರೆ ಪತಿ ದೇವರ ಆಗಮನವಾಗುತ್ತದೆ. ಸಣ್ಣದೊಂದು ಕೆಲಸದಲ್ಲಿದ್ದ ಆಕೆಯ ಗಂಡ ನಿಕಿಟಿನ್ ಹೆಂಡತಿ ಪ್ರಸಿದ್ಧಳಾಗುತ್ತಲೇ ಕೆಲಸ ಬಿಟ್ಟು ಅವಳ ಹಣದಲ್ಲೇ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ನತಾಲ್ಯಾ ಎಷ್ಟು ಬಿಡಿಸಿಕೊಳ್ಳಲು ಯತ್ನಿಸಿದರೂ ಮತ್ತೂ ಅಂಟಿಕೊಳ್ಳುತ್ತಿದ್ದಾನೆ. ಕುಟುಂಬದೊಳಗೇ ನಡೆಯುವ ಅರ್ಥಹೀನ ಹಿಂಸೆ ಮತ್ತು ಕೇವಲ ಪದಗಳಲ್ಲೇ ಮನಸ್ಸು ಛಿದ್ರವಾಗಿಸುವ ಕ್ರಿಯೆ ಈ ಕತೆಯಲ್ಲಿ ಧಾರುಣವಾಗಿ ಮೂಡಿ ಬಂದಿದೆ.

ಈ ಏಳೂ ಕಥೆಗಳಲ್ಲಿ ಸ್ತ್ರೀ ಪಾತ್ರಗಳನ್ನು ಚೆಕೊವ್ ನಿರ್ವಹಿಸಿದ ರೀತಿ ಇಷ್ಟವಾಯಿತು. ಹತ್ತೊಂಬತ್ತನೆಯ ಶತಮಾನದ ರಷ್ಯಾ ದೇಶದ ಜನಜೀವನ ಮತ್ತು ಅಲ್ಲಿನ ಒಂದು ಕಾಲದ ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ ಒಳನೋಟಗಳನ್ನು ಆಡಂಬರವಿಲ್ಲದ ಭಾಷೆಯಲ್ಲಿ, ವಿಶಿಷ್ಟ ಹಾಸ್ಯಪ್ರಜ್ಞೆಯೊಂದಿಗೆ ಕಟ್ಟಿದ್ದು ಅಪೂರ್ವವಾಗಿದೆ.