ಗಾಲಿಬನ ನೆನಪುಗಳು

ಧಂಗೆಯ ದಿನಗಳಲ್ಲಿ ಬದುಕಿದ್ದ ಉರ್ದು ಭಾಷೆಯ ಅನುಪಮ ಕವಿ ಗಾಲಿಬ್ ಮಹಾ ವಿಕ್ಷಿಪ್ತ ಮನುಷ್ಯ. ಅವನ ಸ್ವಭಾವದ ಎಡವಟ್ಟುಗಳ ಜೊತೆಗೆ ಅವನ ಕಾಲದ ಕೇಡುಗಳೂ ಸೇರಿಕೊಂಡು ಅಲ್ಲೋಲಕಲ್ಲೋಲಗೊಳಿಸುವ ಕವಿತೆಗಳು ಅವನಿಂದ ಬಂದವು. ಕನ್ನಡದ ಅನುಪಮ ವಿಮರ್ಶಕ, ಕಥೆಗಾರ ರಾಜೇಂದ್ರ ಚೆನ್ನಿ ಈ ದಿನಗಳಲ್ಲಿ ಗಾಲಿಬನ ಜೀವವನ್ನು ತಮ್ಮೊಳಗೆ ಆವಾಹಿಸಿಕೊಂಡು ಕುಳಿತಿದ್ದಾರೆ. ಎರಡು ಮೂರು ಕಂತುಗಳಲ್ಲಿ ಕೆಂಡಸಂಪಿಗೆಯಲ್ಲಿ ಈ ಆವಾಹನೆಯ ಕುರಿತು ಬರೆಯಲಿದ್ದಾರೆ.

ಹೇಗೆ ನೋಡಿದರೂ ಗಾಲಿಬ್ ಮಹಾವಿಕ್ಷಿಪ್ತ ವ್ಯಕ್ತಿ ಮಾತ್ರವಲ್ಲ; ವಿಕ್ಷಿಪ್ತತೆಯ ಮೂಲ ಮಾದರಿಯೇ ಎನ್ನಬಹುದು. ಉರ್ದುವಿನಲ್ಲಿ ತನ್ನ ಅತ್ಯುತ್ತಮ ಎಲ್ಲಾ ಕಾವ್ಯವನ್ನು ತನ್ನ ಹತ್ತೊಂಭತ್ತನೆಯ ವಯಸ್ಸಿನೊಳಗೆ ಅವನು ಬರೆದು ಪೂರೈಸಿದ್ದ. ಎಪ್ಪತ್ತೆರಡನೇ ವಯಸ್ಸಿನಲ್ಲಿ ಸಾಯುವ ಕೆಲವು ತಿಂಗಳು ಮೊದಲು ಆ ಕಾವ್ಯದ ಪುಸ್ತಕವನ್ನು (ದೀವಾನ್) ತಿದ್ದಿ ಪರಿಷ್ಕರಿಸುತ್ತಲೇ ಇದ್ದ. ಆದರೆ, ಉರ್ದುವಿನಲ್ಲಿ ಬರೆದ ಕಾವ್ಯ ಸ್ವತಃ ಅವನಿಗೆ ಮುಖ್ಯವೆನಿಸಿರಲಿಲ್ಲ. ಏನಿದ್ದರೂ ತನ್ನ ಪರ್ಷಿಯನ್ ಕಾವ್ಯದ ಪರಿಪೂರ್ಣತೆ ಅದಕ್ಕೆ ಬರಲಾರದು ಎಂದು ಭಾವಿಸಿದ್ದ. ಬದುಕಿನ ಕೊನೆಯ ದಿನದವರೆಗೂ ಪ್ರತಿದಿನ ಬರುತ್ತಿದ್ದ ಗೆಳೆಯರ ಎಲ್ಲಾ ಪತ್ರಗಳಿಗೂ ಉತ್ತರಿಸುತ್ತಿದ್ದ. ಅದ್ಭುತವಾದ, ಆಧುನಿಕವಾದ, ಆಡುಮಾತಿನ ಗಂಧವಿದ್ದರೂ ಪರಿಶುದ್ಧವಾದ, ಅವನ ವ್ಯಕ್ತಿತ್ವದ ಮುಖ್ಯ ಅಂಶಗಳಾಗಿದ್ದ ವ್ಯಂಗ್ಯ, ಆತ್ಮಾಭಿಮಾನ, ದುರಂತ ಪ್ರಜ್ಞೆ, ಹಾಸ್ಯ ಇವೆಲ್ಲವನ್ನೂ ಹದವಾಗಿಸಿಕೊಂಡ ಉರ್ದುವಿನಲ್ಲಿ ಆತನ ಅಭಿವ್ಯಕ್ತಿಯಿತ್ತು. ಅವನ ಪತ್ರಗಳ ಉರ್ದುವಿನಿಂದಲೇ ಆಧುನಿಕ ಉರ್ದು ಗದ್ಯಕ್ಕೆ ಒಂದು ಖಚಿತ ರೂಪ ಬಂದಿತು. ಜೀವನದ ಬಹುಪಾಲು ದಿನಗಳನ್ನು ಅವನಿಗೆ ಬರಬೇಕಾಗಿದ್ದ ಪಿಂಚಣಿ ದುಡ್ಡಿಗಾಗಿ, ಗೌರವ ಸಂಭಾವನೆಯ ಹಣಕ್ಕಾಗಿ ಪರದಾಡುತ್ತಲೇ ಕಳೆದ. ಎಷ್ಟೋ ದಿನಗಳ ಕಾಲ ದುಡ್ಡಿಲ್ಲದ್ದರಿಂದ ಬೆಳಿಗ್ಗೆ-ರಾತ್ರಿ ಕುಡಿಯುತ್ತಿದ್ದ ಮದ್ಯವನ್ನು ರೇಶನ್ ಮಾಡಿಕೊಂಡು ಕುಡಿದು, ಮಾಂಸದೂಟವನ್ನು ಬಿಟ್ಟು ಫಕೀರನಂತೆ ಬದುಕಬೇಕಾಗಿತ್ತು. ದೊಡ್ಡ ಕುಟುಂಬ (ಆದರೆ ಅವನಿಗೆ ಮಕ್ಕಳಿರಲಿಲ್ಲ) ಕ್ಕಾಗಿ ಸಾಲ ಮಾಡಿ, ಸಾಲ ಕೊಡಲಾಗದೇ ಬಂಧನದ ವಾರೆಂಟ್ ಬರುವುದರಲ್ಲಿತ್ತು. ಆದರೆ, ಅಂದಿನ ದೆಹಲಿಯಲ್ಲಿ ಶ್ರೇಷ್ಠ ಕವಿಯನ್ನು ಬಂಧಿಸುವುದು ಅನಾಗರಿಕವೆಂದುಕೊಳ್ಳಲಾಗುತ್ತಿದ್ದರಿಂದ ಅವನು ಗೃಹಬಂಧನದಲ್ಲಿ ಕಾಲಕಳೆದ. ಚಳಿಗಾಲದಲ್ಲಿ ಅಗ್ಗಷ್ಟಿಕೆ ಹಚ್ಚಲಾಗದೇ ಕೀಲುಗಳಲ್ಲೆಲ್ಲಾ ನೋವು ಬಂದು ನರಳಿದ. ಬದುಕಿನ ಕೊನೆಯ ತಿಂಗಳಲ್ಲಿ ಅವನಿಗೆ ಬಹಳ ವರ್ಷದಿಂದ ಧನಸಹಾಯ ಮಾಡುತ್ತಿದ್ದ ರಾಮ್‌ಪುರದ ನವಾಬನಿಗೆ ಪತ್ರ ಬರೆದು ತಾನು ಮಾಡಿರುವ ೧೨,೦೦೦ ರೂಪಾಯಿ ಸಾಲವನ್ನು ತೀರಿಸಲು ಹಣ ಕೇಳಿಕೊಂಡ. ಅದು ಸಾಧ್ಯವಾಗಲಿಲ್ಲ. ಹೀಗಾಗಿ ನದಿಯ ಆಚೆಗಿನ ಕುಲೀನ ಟುರ್ಕಿಗಾಗಿ ಕುಟುಂಬದ aristocratic ಮೂಲದ ಈ ಸೂಫಿ ಕವಿ ಸಾಲಗಾರನಾಗಿಯೇ ಸತ್ತ. ಆದರೆ, ತಾನು ಬರೆಯುತ್ತಿದ್ದ ಕಾವ್ಯದ ಶ್ರೇಷ್ಠತೆಯ ಬಗ್ಗೆ, ತನ್ನ ಪ್ರತಿಭೆಯ ಬಗ್ಗೆ ಹಾಗೂ ಬಹುಪಾಲು ಕವಿಗಳ ದಡ್ಡತನದ ಬಗ್ಗೆ ಸಂಪೂರ್ಣವಾದ ನಂಬಿಕೆಯಿತ್ತು.

ಅವನ ಸ್ವಭಾವದ ಎಡವಟ್ಟುಗಳು ಮಾತ್ರವಲ್ಲ; ಅವನ ದುರಂತಕ್ಕೆ ಅವನು ಬದುಕಿದ ಕೇಡುಗಾಲವೂ ಕಾರಣವಾಗಿತ್ತು. ಕೊನೆಯ ಮೂಘಲ್ ಬಾದಷಾಹನಾದ ಕವಿ ಬಹಾದ್ದರೂರ್ ಶಾ ಜಫರ್‌ನ ಆಸ್ಥಾನದ ಪ್ರಸಿದ್ಧ ಕವಿಯಾಗಿದ್ದ ಗಾಲಿಬ್ ಬಾದಶಾಹಿಯ ಅವಸಾನವನ್ನು ಮೊದಲೇ ಗ್ರಹಿಸಿದ್ದ. ಆಧುನಿಕ ಮನಸ್ಸಿನವನಾಗಿದ್ದ ಗಾಲಿಬ್‌ನಿಗೆ ಬಾದಶಾಹಿಗೆ ಕೊನೆಗಾಲ ಬಂದಿದ್ದು ಬ್ರಿಟಿಷರ್ ಆಳ್ವಿಕೆ ಪ್ರಬಲವಾಗುತ್ತಿದ್ದುದು ಗಂಡಾಂತರವಾಗಿ ಕಂಡಿರಲಿಲ್ಲ. ಆ ಕಾಲದ ಅತ್ಯಂತ ಮೇಧಾವಿಗಳಲ್ಲಿ ಒಬ್ಬನಾದ ಗಾಲಿಬ್‌ನಿಗೆ ಬ್ರಿಟಿಷರು ವಿಜ್ಞಾನದಲ್ಲಿ ಮಾಡಿದ ಸಾಧನೆಯ ಪರಿಚಯವಿತ್ತು. ಆ ಬಗ್ಗೆ ಗೌರವವಿತ್ತು. ಆದರೆ ಅವನ ಹಾಗೂ ಎಲ್ಲರ ನಿರೀಕ್ಷೆಯನ್ನು ತಲೆಕೆಳಗು ಮಾಡುವಂತೆ ೧೮೫೭ರ ಸಿಪಾಯಿ ದಂಗೆ ಶುರುವಾಯಿತು. ದೆಹಲಿ ರಣರಂಗವಾಯಿತು. ದಂಗೆ ಎದ್ದವರ ಬಗ್ಗೆ ಗಾಲಿಬ್‌ನಿಗೆ ಪ್ರೀತಿ ಇರಲಿಲ್ಲ. ಅವರನ್ನು ಕಪ್ಪು ಹೃದಯದವರು ಎಂದೇ ಕರೆಯುತ್ತಿದ್ದ. ಮುಖ್ಯವಾಗಿ ಅವರಿಂದಾಗಿ ಆಗಲೇ ಅಭದ್ರವಾಗಿದ್ದ ಅವನ ಬದುಕು ಮೂರಾಬಟ್ಟೆಯಾಗಿದ್ದರಿಂದ ಅವನು ಕಳವಳದಲ್ಲಿದ್ದ. ಬಹಾದ್ದೂರ್ ಶಾ ಜಫರ್‌ನ ಆಸ್ಥಾನ ಕವಿಯಾಗಿದ್ದವನು ಝಾಕ್ ಕಾವ್ಯನಾಮದಿಂದ ಬರೆಯುತ್ತಿದ್ದ, ಗಾಲಿಬ್‌ನ ಪ್ರಕಾರ ಸಾಮಾನ್ಯ ದರ್ಜೆಯ ಕವಿ. ಪ್ರವಾಸಿಗರ ಮುಸಾಫಿರ್‌ಖಾನಾದ ಮ್ಯಾನೇಜರ್‌ನ ಭಾಷೆಯಲ್ಲಿ ಅವನು ಬರೆಯುತ್ತಿದ್ದ ಎಂದು ಗಾಲಿಬ್‌ನ ನಿರ್ಣಯ. ಭಾದಶಹಾ ಸ್ವತಃ ಒಳ್ಳೆಯ ಕವಿಯೆಂದು ಪ್ರಸಿದ್ಧನಾಗಿದ್ದ. ಆದರೆ ಶ್ರೇಷ್ಠತೆಯ ವ್ಯಸನವಿದ್ದ ಗಾಲಿಬ್‌ನಿಗೆ ಅವನ ಕಾವ್ಯದ ಬಗ್ಗೆ ಗೌರವವಿರಲಿಲ್ಲ. ಜಫರ್‌ನಿಗೂ ಗಾಲಿಬ್‌ನ ಶ್ರೇಷ್ಠತೆ ಅರ್ಥವಾಗಿರಲಿಲ್ಲ. ಆದರೆ, ಹೇಗೋ ಗಾಲಿಬ್‌ನ ಅಭದ್ರ ಜೀವನಕ್ಕೆ ಬಾದಶಾಹನ ಅವಶ್ಯಕತೆಯಿತ್ತು. ಆದರೆ, ದಂಗೆಯ ಬಿರುಗಾಳಿ ಎಲ್ಲವನ್ನೂ ಪಲ್ಲಟಗೊಳಿಸಿತು.

ಗಾಲಿಬ್ ಗಾಲಿಬ್ ದಂಗೆಯ ದಿನಗಳ ಬಗ್ಗೆ ಒಂದು ಕಥನವನ್ನು ಬರೆದ. ಆದರೆ, ಹೋರಾಟಗಾರರನ್ನು ಹಿಮ್ಮೆಟ್ಟಿಸಿದ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯಗಳಿಂದ ಗಾಲಿಬ್ ದಂಗಾಗಿಬಿಟ್ಟ. ನೇರವಾಗಿ ಬರೆಯಲಾಗದಿದ್ದರೂ ಅವನ ಕಣ್ಣೆದುರಿಗೇ ಅವಸಾನಗೊಂಡ ದುರ್ಬಲ ಆದರೆ ಅತ್ಯಂತ ನಾಗರಿಕ, ಸುಶಿಕ್ಷಿತ ಸೂಕ್ಷ್ಮ ಸಂವೇದನೆಯ ದೆಹಲಿಯ ಸಂಸ್ಕೃತಿ ಮತ್ತು ಅದರ ಬದಲಾಗಿ ಅನುಷ್ಠಾನಕ್ಕೆ ಬಂದ ಬ್ರಿಟಿಷ್ ಸಾಮ್ರಾಜ್ಯಷಾಹಿಯ ಕ್ರೌರ್ಯದ ಬಗ್ಗೆ ಗಾಲಿಬ್‌ನ ಪತ್ರಗಳು ಅಂಚಿನಲ್ಲಿ ಬರೆದ ಅಂತರಂಗದ ಟಿಪ್ಪಣಿಗಳಾಗಿವೆ. ಅವನ ವೈಯಕ್ತಿಕ ಅಸಹಾಯಕತೆ, ದುರಂತಗಳು ಭಾರತದ ಚರಿತ್ರೆಯ ಬಹು ದುರಂತಮಯ ಪಲ್ಲಟವೊಂದರ ದುರಂತಗಳಾಗುತ್ತವೆ. ಗಾಲಿಬ್‌ನ ಆತ್ಮೀಯ ಗೆಳೆಯರಲ್ಲಿ ಅನೇಕರಿಗೆ ನೇಣುಹಾಕಲಾಯಿತು. ಅನೇಕರು ಬೀದಿಪಾಲಾದರು; ಉಳಿದವರು ಎಲ್ಲಿಯೋ ತಲೆಮರೆಸಿಕೊಂಡರು. ದೆಹಲಿಯ ಎಲ್ಲಾ ಜನರನ್ನೂ ಬ್ರಿಟಿಷರು ಹೊರದಬ್ಬಿದ ಮೇಲೆ ಗಾಲಿಬ್‌ನಂಥ ಅಸಹಾಯಕ ಮುದುಕರು ಮಾತ್ರ ದೆಹಲಿಯ ಸಾವಿಗೆ ಸಾಕ್ಷಿಗಳಾಗಿದ್ದರು. ಬೆಳಿಗ್ಗೆ ಎಂದರೆ ರಾತ್ರಿಗೆ ಭರವಸೆ ಇಲ್ಲದೆ ಗಾಲಿಬ್ ಬಸವಳಿದಿದ್ದ. ಅವನು ಆಸೆಪಟ್ಟಂತೆ ಬ್ರಿಟಿಷರು ಅವನ ಪ್ರತಿಭೆಯನ್ನು ಮನ್ನಣೆ ಮಾಡುವ ಸಾಧ್ಯತೆ ಇರಲಿಲ್ಲ. ಮೈತುಂಬಾ ಬೊಕ್ಕೆಗಳೆದ್ದು, ಕೈ ನಡುಗುತ್ತಿದ್ದ ಗಾಲಿಬ್ ಆಗಲೂ ಪತ್ರಗಳನ್ನು ಉತ್ತರಿಸುತ್ತಿದ್ದ. ಮುಖ್ಯವಾಗಿ ಯುವ ಕವಿಗಳ ಕಾವ್ಯದ ಕರಡುಗಳನ್ನು ತಿದ್ದುತ್ತಲಿದ್ದ. ತುಂಬಾ ಒತ್ತಾಯಿಸಿ ಮುನ್ನುಡಿ ಬರೆಯಲು ಹೇಳಿದವರಿಗೆ ಅತ್ಯಂತ ನಾಜೂಕಿನ ಶೈಲಿಯಲ್ಲಿ ಏನನ್ನೂ ಹೇಳದೇ ಬರೆದುಕೊಡುತ್ತಿದ್ದ. ಎಂಥ ಸಾಲುಗಳನ್ನು ಓದಿದರೂ ಮುಶಾಯರಾಗಳಲ್ಲಿ ಎಲ್ಲರೂ ವಾಹ್ ವಾಹ್ ಅನ್ನುತ್ತಿದ್ದರೆ ಗಾಲಿಬ್ ಕಲ್ಲುಗೊಂಬೆಯಂತೆ ಸುಮ್ಮನಿರುತ್ತಿದ್ದ. ಶ್ರೇಷ್ಠವಾದದ್ದು ಕಂಡರೆ ತಲೆಯ ಮೇಲೆ ಹೊತ್ತುಕೊಂಡು ಕುಣಿದುಬಿಡುತ್ತಿದ್ದ. ತಾನು ಮೆಚ್ಚಲಾಗದ ಕಾವ್ಯ ಬರೆದವರ ಜೊತೆ ಅತ್ಯಂತ ಆತ್ಮೀಯ ಸಂಬಂಧವನ್ನು ಇಟ್ಟುಕೊಳ್ಳುತ್ತಿದ್ದ. ತನ್ನ ಇಳಿಗಾಲದಲ್ಲಿ ಕೂಡ ಓದಿದ ಪುಸ್ತಕವೊಂದರಲ್ಲಿ ಕಂಡುಬಂದ ಪರ್ಷಿಯನ್ ತಪ್ಪು ಬಳಕೆಗಳನ್ನು ಖಂಡಿಸಿ ಬರೆದ. ಅದರಿಂದಾಗಿ ಅವನ ಮೇಲೆ ಮುಗಿಬಿದ್ದ ಕವಿ ವಿಮರ್ಶಕರು ಪತ್ರಿಕೆಗಳ ಮೂಲಕ ಅನಾಮಧೇಯ ಪತ್ರಗಳ ಮೂಲಕ ಅತ್ಯಂತ ಅಶ್ಲೀಲ ಭಾಷೆಯಲ್ಲಿ ಅವನನ್ನು ಜರೆದರು. ಅಂಥ ಒಂದು ಪತ್ರಕ್ಕೆ ಅವನ ಪ್ರತಿಕ್ರಿಯೆಯೆಂದರೆ- ಈ ಜನರಿಗೆ ಬೈಗುಳವೂ ಸರಿಯಾಗಿ ಗೊತ್ತಿಲ್ಲ. ತಾಯಿಯ ಜೊತೆಗೆ ಅಸಹ್ಯ ಸಂಬಂಧ ಇದೆಯೆಂಬುದು ಬೈಗುಳವಿರಬೇಕೋ ಅಲ್ಲವೋ ಎನ್ನುವುದು ಗೊತ್ತಿಲ್ಲದ ದಡ್ಡ ಜನ. ಆದರೆ, ಒಂದು ಸಾರಿ ತುಂಬಾ ಬೇಸರಿಸಿ ಮಾನಹಾನಿ ದಾವೆಯನ್ನು ಹೂಡಿದ. ಅಲ್ಲಿ ಸಾಕ್ಷಿ ಹೇಳಲು ಬಂದ ಅವನಿಗೆ ಪರಿಚಿತರಾಗಿದ್ದ ಕೆಲವು ಮೌಲ್ವಿಗಳು ಹಾಗೂ ಕೆಲವು ಗಣ್ಯರು ಗಾಲಿಬ್ ಮಹಾಕುಡುಕನೆನ್ನುವುದು ನಿಜವಾಗಿರುವುದರಿಂದ ಅವನ ಬಗ್ಗೆ ಇತರರು ಬರೆದದ್ದು ಮಾನಹಾನಿಯಾಗಲಾರದು ಎಂದು ಸಾಕ್ಷಿ ಹೇಳಿದರು. ಇಷ್ಟಾದರೂ ಗಾಲಿಬ್ ಆ ಪುಸ್ತಕದ ಬಗೆಗಿನ ತನ್ನ ಟೀಕೆಯನ್ನು ವಾಪಸ್ಸು ತೆಗೆದುಕೊಳ್ಳಲಿಲ್ಲ. ಏಕೆಂದರೆ, ತನ್ನ ಹಾಗೆ ಪರ್ಷಿಯನ್ ಭಾಷೆಯಲ್ಲಿ ಯಾರಿಗೂ ಪರಿಣಿತಿಯಿಲ್ಲವೆಂಬುದು ಅವನ ನಂಬಿಕೆಯಾಗಿತ್ತು. ಮತ್ತು ಅದು ಸರಿಯಾಗಿತ್ತು.

ದೆಹಲಿ ಕಾಲೇಜಿನ ಪುನರ್‌ರಚನೆಯಾದಾಗ ಅಲ್ಲಿ ಪ್ರೊಫೆಸರ್ ಹುದ್ದೆ ಖಾಲಿ ಇತ್ತು. ಗಾಲಿಬ್‌ನಿಗೆ ಕರೆ ಹೋಯಿತು. ಹುಟ್ಟು ಆರಿಸ್ಟೋಕ್ರಟ್ ಆಗಿದ್ದ ಗಾಲಿಬ್ ಪಲ್ಲಕ್ಕಿಯಲ್ಲಿ ಕುಳಿತು ಅಲ್ಲಿಗೆ ಹೋಗಿ ಅಲ್ಲಿಯ ಬ್ರಿಟಿಷ್ ಅಧಿಕಾರಿ ಹೊರಬಂದು ಬರಮಾಡಿಕೊಳ್ಳುತ್ತಾರೆಂದು ಕಾಯುತ್ತಲಿದ್ದ. ಹಾಗೆ ಮಾಡಲಾಗದೇ ಅಂತೂ ಕೊನೆಗೂ ಹೊರಬಂದ ಬ್ರಿಟಿಷ್ ಅಧಿಕಾರಿ ಗಾಲಿಬ್‌ನಿಗೆ ಹೇಳಿದ: ‘ನೀವು ಖಾಸಗಿ ಭೇಟಿಗೆ ಬಂದಿದ್ದರೆ ನಾನು ಹೊರಬಂದು ಗೌರವಿಸಿ ಕರೆದುಕೊಂಡು ಹೋಗುತ್ತಿದ್ದೆ. ಆದರೆ ಅಭ್ಯರ್ಥಿಯಾಗಿ ಬಂದಿದ್ದರಿಂದ ನಮ್ಮ ನಿಯಮಗಳು ಅದನ್ನು ಅನುಮತಿಸುವುದಿಲ್ಲ.’ ‘ಹಾಗಿದ್ದರೆ ಕ್ಷಮಿಸಿ’ ಎಂದು ಗಾಲಿಬ್ ಪಲ್ಲಕ್ಕಿಯಲ್ಲಿ ವಾಪಸ್ಸು ಹೊರಟುಹೋದ. ಸಿಗಬಹುದಾಗಿದ್ದ ಭದ್ರತೆಗಿಂತ ಅವನಿಗೆ ತನ್ನ ಮರ್ಯಾದೆ (ಅವನು ಕಲ್ಪಿಸಿಕೊಂಡಂತೆ) ಮುಖ್ಯವಾಗಿತ್ತು. ಕೆಲಸ ಸಿಗದಿದ್ದರ ಬಗ್ಗೆ ತುಂಬಾ ಬೇಸರವೇನೂ ಅವನಿಗೆ ಆದಂತೆ ತೋರುವುದಿಲ್ಲ. ಸೂಫಿ ನಂಬಿಕೆಗಳು ಬಲವಾಗಿದ್ದ ಗಾಲಿಬ್‌ನಿಗೆ ಸಾಂಪ್ರದಾಯಿಕ ಮುಸ್ಲಿಂ ಧರ್ಮದ ಬಗ್ಗೆ ಆಸಕ್ತಿಯೇ ಇರಲಿಲ್ಲ. ರಂಜಾನ್ ಕಾಲದಲ್ಲಿ ಉಪವಾಸವನ್ನು ಮಾಡುತ್ತಿರಲಿಲ್ಲ. ಆದರೆ ದೈವದ ಬಗ್ಗೆ ವಿಚಿತ್ರವಾದ, ಗಾಢವಾದ ನಂಬಿಕೆಯಿತ್ತು. ಹೀಗಾಗಿ ಒಂದು ಶೇರ್‌ನಲ್ಲಿ ಗಾಲಿಬ್‌ನೂ ಕೂಡಾ ಸಂತನೇ ಎನ್ನಬಹುದಾಗಿತ್ತು, ಆದರೆ ಅವನು ಮದ್ಯ ಕುಡಿಯುತ್ತಾನೆ ಎಂದು ಹೇಳಿಕೊಂಡ. ಅದಕ್ಕೆ ಬಾದಶಾಹ ಜಫರ್‌ನ ಪ್ರತಿಕ್ರಿಯೆಯೆಂದರೆ ಇಲ್ಲ, ಗಾಲಿಬ್ ಕುಡಿಯದಿದ್ದರೂ ಅವನಿಗೆ ಸಂತನೆನ್ನುತ್ತಿರಲಿಲ್ಲ ಗಾಲಿಬ್‌ನ ಮರುಪ್ರತಿಕ್ರಿಯೆ ಹೀಗಿತ್ತು; ‘ಇಲ್ಲ, ಬಾದಶಾಹರಿಗೆ ನಾನು ಸಂತನೆಂದು ಗೊತ್ತಿದೆ. ಆದರೆ ಸಂತನೆಂದರೆ ಅದು ತನ್ನ ತಲೆಗೇರಿಬಿಡಬಾರದು’ ಎಂದು ಅವರು ಹೇಳುತ್ತಿಲ್ಲ.

ಅವನು ಸಂತನೂ ಹೌದು; ಕುಡುಕನೂ ಹೌದು; ಫಕೀರನೂ ಹೌದು; ಆರಿಸ್ಟೋಕ್ರಟ್ ಕೂಡಾ ಹೌದು. ಶ್ರೇಷ್ಠವಲ್ಲದ್ದನ್ನು ಬರೆಯಬಾರದೆಂಬುದು ಅವನ ವ್ರತ. ಆದರೆ ನವಾಬರುಗಳ ಆಶ್ರಯವಿಲ್ಲದೇ ಬದುಕಲೂ ಆಗುತ್ತಿರಲಿಲ್ಲ. ಹೀಗಾಗಿ ಅವಧದ ಹಿರಿಯ ನವಾಬನ ಬಗ್ಗೆ ಬರೆದ ಪ್ರಶಂಸಾಪದ್ಯವನ್ನು ಬಳಸದೇ ಇಟ್ಟುಕೊಂಡಿದ್ದ ಗಾಲಿಬ್ ಅವನ ನಂತರ ಬಂದ ನವಾಬನಿಗೆ ಅದೇ ಪ್ರಶಂಸಾ ಪದ್ಯವನ್ನು ಸಲ್ಲಿಸಿದ; ಹೆಸರು ಮಾತ್ರ ಬದಲಾಯಿಸಿ. ಗಾಲಿಬ್‌ನ ಸಮಜಾಯಿಷಿಯೆಂದರೆ ಹಿರಿಯ ನವಾಬನ ಬದಲು ಕಿರಿಯ ನವಾಬನನ್ನು (ನನ್ನ ಪದ್ಯವಲ್ಲ) ಇರಿಸಿದ್ದು ತಪ್ಪಲ್ಲವಲ್ಲ, ಸ್ವತಃ ದೇವರೇ ಹಾಗೆ ಮಾಡಲಿಲ್ಲವೇ? ಅಷ್ಟಕ್ಕೂ ಅದನ್ನು ನಾನು ಬರೆದದ್ದು ಭಿಕ್ಷೆ ಕೇಳಲಿಕ್ಕೆ ತಾನೆ?

ಮಾವಿನ ಹಣ್ಣುಗಳ ಬಗ್ಗೆ ತೀವ್ರ ವ್ಯಾಮೋಹವಿದ್ದ ಗಾಲಿಬ್ ಒಂದು ಸಾರಿ ಬಾದಶಾಹ ಜಫರ್‌ನೊಂದಿಗೆ ಅವರ ಮಾವಿನ ತೋಪಿನೊಳಗೆ ನಡೆದಾಡುತ್ತಿದ್ದಾಗ ಮಾವಿನ ಹಣ್ಣುಗಳ ತೀರ ಹತ್ತಿರ ಹೋಗಿ ಅವುಗಳ ಮೇಲೆ ಏನನ್ನೋ ಓದಿದ ಹಾಗೆ ಮಾಡತೊಡಗಿದ. ಜಫರ್ ‘ಏನು ಮಾಡುತ್ತಿದ್ದೀಯಾ ಗಾಲಿಬ್?’ ಎಂದಾಗ ಗಾಲಿಬ್ ಹೇಳಿದ; ‘ಸ್ವಾಮಿ ಪ್ರತಿಯೊಂದು ಮಾವಿನ ಹಣ್ಣಿನ ಮೇಲೆ ಅದನ್ನು ತಿನ್ನುವ ಭಾಗ್ಯವುಳ್ಳವನ ಹೆಸರನ್ನು – ಇವನು ಬಿನ್ – (ಅವನ ತಂದೆ) – ಬಿನ್ ಅವನ ಅಜ್ಜ ಹೀಗೆ ಬರೆದಿರುತ್ತಾರಂತೆ. ನಾನು ನನ್ನ ಅಪ್ಪ ಅಥವಾ ಅಜ್ಜರ ಹೆಸರು ಅಕಸ್ಮಾತ್ತಾಗಿ ಇಲ್ಲಿ ಯಾವುದೋ ಮಾವಿನ ಹಣ್ಣಿನ ಮೇಲಿದೆಯಾ ಎಂದು ಹುಡುಕುತ್ತಿದ್ದೆ’. ಏನೂ ಹೇಳದೇ ನಕ್ಕ ಬಾದಶಹಾ ಜಫರ್ ಮರುದಿನ ಗಾಲಿಬ್‌ನ ಮನೆಗೆ ಮಾವಿನ ಹಣ್ಣಿನ ಬುಟ್ಟಿಯೊಂದನ್ನು ಕಳಿಸಿದ.

ಭಾರತದ ದಂಗೆಕೋರ ಸಿಪಾಯಿಗಳನ್ನೆಲ್ಲಾ ಕೊಂದು ತಮ್ಮನ್ನು ಪ್ರತಿಷ್ಠಾಪಿಸಿಕೊಂಡ ಬ್ರಿಟಿಷರು ಹಾಸಿಗೆಯಿಂದ ಏಳಲೂ ಕಷ್ಟವಾಗಿದ್ದ ಜಫರ್‌ನನ್ನು ಬಂಧಿಸಿ ರಂಗೂನ್‌ನ ಜೈಲಿನಲ್ಲಿಟ್ಟು ಅವನಿಗೆ ಹೇಗಿದ್ದರೂ ಬರಲಿದ್ದ ಸಾವಿಗೆ ಕಾರಣರಾದರು. ಅವನ ೨೧ ಮಕ್ಕಳಲ್ಲಿ ಓಡಿ ಹೋದ ಇಬ್ಬರನ್ನು ಬಿಟ್ಟು ಇನ್ನೆಲ್ಲರನ್ನೂ ಕೊಂದರು. ದುರ್ಬಲವೂ, ಅತಿಲೋಲುಪವೂ ಆಗಿದ್ದರೂ ಅಂದಿನ ಜಗತ್ತಿನ ಅತಿದೊಡ್ಡ ಮೇಧಾವಿಗಳನ್ನು ಹೊಂದಿದ್ದ, ಆ ಕಾಲದ ಅತಿಶ್ರೇಷ್ಠ ವಿದ್ಯಾಕೇಂದ್ರಗಳಾಗಿದ್ದ ಮದರಸಾಗಳನ್ನು ಹೊಂದಿದ್ದ, ಬೆಳಗಿನವರೆಗೂ ಕಾವ್ಯ ಕೇಳುತ್ತಿದ್ದ ಜನರ ದೆಹಲಿ ಸಂಸ್ಕೃತಿ ನಿರ್ನಾಮವಾಯಿತು. ಮತ್ತೆ ನಿರ್ಧನನಾದ ಗಾಲಿಬ್ ಪದ್ಯಗಳ ಕರಡುಗಳನ್ನು ತಿದ್ದುತ್ತಲೇ ಒಂದು ದಿನ ಸಾವನ್ನಪ್ಪಿದ.
ಆ ಮತ್ತ ರಾತ್ರಿಗಳ ಉನ್ಮಾದಗಳೆಲ್ಲಿ ಹೋದವು
ಎದ್ದುಬಿಡು ಈಗ. ಬೆಳಗು ಹರಿಯುವ ಹೊತ್ತು
ಇನ್ನು ಕನಸು ಕಾಣುವುದಿಲ್ಲ

[ಟಿಪ್ಪಣಿ: ಕೆಲವು ದಿನಗಳಿಂದ ನಾನು ಓದುತ್ತಿರುವ Ghalib, Life and Gazals (Oxford University Press) ಎನ್ನುವ  a Ralf Russel  ನ ಪುಸ್ತಕ ಹಾಗೂ William Darlympleನ The Last Moghal  ಪುಸ್ತಕಗಳನ್ನೇ ಧ್ಯಾನಿಸುತ್ತಾ ಬರೆದದ್ದು. ಇದರಲ್ಲಿ ಸ್ವಂತದ್ದು ಇಲ್ಲದಿದ್ದರೆ ತುಂಬಾ ಸಂತೋಷ

 

ಇಸಾಬೆಲ್ ಅಯೆಂದೇ ಬರೆದ ಇವಾಲೂನಾ

ಪ್ರೊಫೆಸರ್ ರಾಜೇಂದ್ರ ಚೆನ್ನಿ ಬರೆಯುವ ಲೋಕದ ಅತ್ಯುತ್ತಮ ಕಥಾ ಬರಹಗಳ ಕುರಿತ ಸರಣಿ ಇನ್ನು ಮುಂದೆ ಕೆಂಡಸಂಪಿಗೆಯಲ್ಲಿ ಕಂತುಕಂತಾಗಿ ಮೂಡಿಬರಲಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುವ ಇಸಾಬೆಲ್ ಅಯೆಂದೇಯವರ ಕಾದಂಬರಿ ‘ಇವಾ ಲೂನಾ’ದ ಕುರಿತ ಈ ಬರಹದೊಂದಿಗೆ ಈ ಸರಣಿ ಆರಂಭಗೊಳ್ಳುತ್ತಿದೆ.

`ನನ್ನ ಹೆಸರು ಈವಾ, ಅಂದರೆ ಜೀವನ…’ ಹೀಗೆ ಶುರುವಾಗುತ್ತದೆ ಇವಾ ಲೂನಾಳ ವಿಚಿತ್ರವಾದ ಕಥೆ. ಅದನ್ನು ಅವಳು ತನ್ನ ಜೀವನ ಚರಿತ್ರೆಯ ಹಾಗೆ ಹೇಳುತ್ತಾ ಹೋಗುತ್ತಾಳೆಯಾದರೂ ಹಾಗಂತ ಎಲ್ಲವನ್ನೂ ನಂಬುವ ಹಾಗಿಲ್ಲ. ಏಕೆಂದರೆ, ಅವಳು ಕತೆಗಾರ್ತಿ. ಚಿಕ್ಕ ಹುಡುಗಿಯಾದಾಗಿನಿಂದ ತನ್ನ ಕಲ್ಪನೆಯಲ್ಲಿ ಕತೆಗಳನ್ನು ನೇಯುತ್ತಾ ಅವುಗಳನ್ನು ಹೇಳುವುದರ ಮೂಲಕವೇ ಬದುಕುವ ದಾರಿ ಕಂಡುಕೊಂಡವಳು. ಕತೆ ಹೇಳುವುದು ಅವಳಿಗೆ ಬಳುವಳಿಯಾಗಿ ಬಂದಿದ್ದು ಅವಳ ತಾಯಿಯಿಂದ. ತಾಯಿ ಕೊನ್ಸುಯಲೋ ಕೂಡ ಕತೆಗಳ ಮೂಲಕವೇ ತನ್ನ ಜಗತ್ತನ್ನು ಸೃಷ್ಟಿಮಾಡಿಕೊಂಡಿದ್ದವಳು. ಹಾಗಂತ ಈ ಕಥೆಯಲ್ಲಿ ನಿಜ ಯಾವುದು? ಕಲ್ಪನೆಯಿಂದ ಬಂದದ್ದು ಯಾವುದು? ಎಂದು ಕೇಳುವುದರಿಂದ ಪ್ರಯೋಜನವಿಲ್ಲ. ಏಕೆಂದರೆ, ಇಲ್ಲಿ ವಾಸ್ತವವೂ ಕೂಡ ಕತೆಗಳಿಂದಲೇ ಸೃಷ್ಟಿಯಾಗುತ್ತದೆ.

ಇವಾ ಲೂನಾ ಚಿಲಿ ದೇಶದ, ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುವ ಇಸಾಬೆಲ್ ಅಯೆಂದೇ  ಬರೆದ ಕಾದಂಬರಿ. ಅಯೆಂದೆ ಕೂಡ ಲ್ಯಾಟಿನ್ ಅಮೇರಿಕನ್ ದೇಶಗಳ ಮಾಂತ್ರಿಕ ವಾಸ್ತವವಾದಿ ಕಾದಂಬರಿ ಸಂಪ್ರದಾಯದಲ್ಲಿ ಬರೆಯುವ ಲೇಖಕಿ. ಈ ಸಂಪ್ರದಾಯವು ಒಂದು ರೀತಿಯಲ್ಲಿ ಪುರುಷಕೇಂದ್ರಿತವಾದುದು. ಅಷ್ಟು ಮಾತ್ರವಲ್ಲ, ಲ್ಯಾಟಿನ್ ಅಮೇರಿಕನ್ ಸಮಾಜಗಳು ಆಧುನಿಕ ಯುಗದಲ್ಲಿಯೂ machismo ಎನ್ನುವ ಹೆಸರಿನಲ್ಲಿ ಪುರುಷತ್ವವನ್ನು ಆರಾಧಿಸುವ ಸಂಪ್ರದಾಯ ಹೊಂದಿವೆ. ಇದು ಅನೇಕ ಛದ್ಮರೂಪಗಳಲ್ಲಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಸಾಹಿತ್ಯವೂ ಸೇರಿದಂತೆ ಸಂಸ್ಕೃತಿಯ ಕ್ಷೇತ್ರದಲ್ಲಿ ಪುರುಷ ಪ್ರಾಧಾನ್ಯವು ಬಲಿಷ್ಠವಾಗಿದೆ. ಇವುಗಳ ಮಧ್ಯೆ ಸ್ತ್ರೀಪರ ಚಿಂತನೆ, ಸ್ತ್ರೀವಾದಿ ಚಳುವಳಿಗಳೂ ಬೆಳೆದುಬಂದದ್ದು ವಿಶೇಷವಾಗಿದೆ. ಇಂಥ ಸನ್ನಿವೇಶದಲ್ಲಿ ಯಾವುದೇ ಸಿದ್ಧಾಂತವನ್ನೂ ಹೆಚ್ಚಾಗಿ ಅನುಸರಿಸದೇ, ಅಪಾರವಾದ ಜೀವನ ಪ್ರೀತಿಯಿಂದ ಬರೆಯುವ ಅಯೆಂದೇ ತಮ್ಮ ಕಾವ್ಯಮಯ ಶೈಲಿ, ಪ್ರಯೋಗಶೀಲ ಕಥನಕ್ರಮ ಹಾಗೂ ಸ್ವಚ್ಛಂದದಿಂದಾಗಿ ಆಕರ್ಷಕವಾದ ಕತೆ, ಕಾದಂಬರಿಗಳನ್ನು ಬರೆದಿದ್ದಾರೆ. ಹೆಣ್ಣಿನ ಜೀವನೋತ್ಸಾಹ, ಲೈಂಗಿಕತೆ, ಪ್ರೀತಿಯ ಹುಡುಕಾಟ ಇವುಗಳನ್ನು ಎಗ್ಗಿಲ್ಲದಂತೆ ವರ್ಣಿಸುವುದರ ಮೂಲಕ ಪರೋಕ್ಷವಾಗಿ ಪುರುಷ ಪ್ರಾಧಾನ್ಯವನ್ನು ಪ್ರಶ್ನಿಸಿದ್ದಾರೆ.

ಅರೇಬಿಯನ್ ನೈಟ್ಸ್ ನ ಶಹರಜಾದೆಯಂತೆ ಇವಾ ಲೂನಾಳಿಗೆ ಕೂಡ ಕತೆ ಹೇಳುವುದರ ಮೂಲಕವೇ ಬದುಕಬೇಕಾಗಿದೆ. ಕತೆಗಳ ಮೂಲಕ ಕಷ್ಟಕರವಾದ ತನ್ನ ಬದುಕನ್ನು ಸಹನೀಯವಾಗಿ ಮಾತ್ರವಲ್ಲ ರೋಚಕವಾಗಿಸಿಕೊಳ್ಳುತ್ತಾಳೆ. ಅವಳ ತಾಯಿ ಕೊನ್ಸುಯಲೋ ಮತ್ತು ಇಂಡಿಯನ್ ಬುಡಕಟ್ಟಿನ ಅಪರಿಚಿತನ ಸಂಗದಿಂದಾಗಿ ಹುಟ್ಟಿದ ಇವಾಳ ಬಾಲ್ಯ ಸಾಮಾನ್ಯವಾದುದಲ್ಲ. ಶವಗಳನ್ನು ಕೊಳೆಯದಂತೆ ರಕ್ಷಿಸುವ ವಿದ್ಯೆ ಬಲ್ಲ ವೈದ್ಯನೊಬ್ಬನ ಸಹಾಯಕಳಾದ ಕೊನ್ಸುಯಲೋ ಇವಾಳನ್ನು ಬೆಳೆಸುವುದು ಶವಗಳು, ಅರ್ಥವಾಗದ ಲ್ಯಾಟಿನ್ ಭಾಷೆಯ ಗ್ರಂಥಗಳು ಹಾಗೂ ವಿಕ್ಷಿಪ್ತ ವೈದ್ಯನ ಗೊಣಗಾಟಗಳ ಮಧ್ಯೆ. ತಾಯಿಯಿಂದ ಬದುಕುವ ಛಲವನ್ನೂ ಕತೆಗಾರಿಕೆಯನ್ನು ಪಡೆವ ಇವಾ ತಾಯಿಯ ಸಾವಿನ ನಂತರ ವಿಚಿತ್ರ ಸನ್ನಿವೇಶಗಳಲ್ಲಿ, ವಿಕ್ಷಿಪ್ತ ಹೆಂಗಸರ ದೇಖರೇಖಿಯಲ್ಲಿ ಬೆಳೆಯುತ್ತಾಳೆ. ಅದರಲ್ಲಿ ಒಬ್ಬಳು ಅಧಿಕಾರಿಗಳಿಗೆ, ಪೊಲೀಸರಿಗೆ ಸೇರಿದಂತೆ ಎಲ್ಲರಿಗೂ ಬೇಕಾದ ವೇಶ್ಯಾವಾಟಿಕೆಯನ್ನು ನಡೆಸುವವಳು. ಅಲ್ಲಿ ಬಾಲ್ಯದ ಸ್ನೇಹಿತನ ಸಹಾಯದಿಂದ ಇವಾ ಬದುಕುವ ಗಟ್ಟಿಗತನವನ್ನು ಕಲಿಯುತ್ತಾಳೆ.

ಅಲ್ಲಿಂದಾಚೆಗೆ ಅವಳ ಅಲೆಮಾರಿ ಜೀವನದ ಒಂದೊಂದೇ ಘಟ್ಟಗಳು ಶುರುವಾಗುತ್ತವೆ. ಪ್ರತಿ ಹಂತದಲ್ಲಿಯೂ ವಿಕ್ಷಿಪ್ತ ವ್ಯಕ್ತಿತ್ವ ನಡವಳಿಕೆ ಹಾಗೂ ನಂಬಿಕೆಗಳ ಹಲವಾರು ವ್ಯಕ್ತಿಗಳ ಸಂಗಾತಿತನದಲ್ಲಿ ಇವಾ ಬೆಳೆಯುತ್ತಾಳೆ. ತನ್ನ ವ್ಯಕ್ತಿತ್ವ, ಲೈಂಗಿಕತೆ ಹಾಗೂ ಪ್ರೀತಿಯ ತೀವ್ರತೆಗಳನ್ನು ಕಂಡುಕೊಳ್ಳುತ್ತಾಳೆ. ಮಧ್ಯಮವರ್ಗದ ಹೆಣ್ಣು ತೀರಾ ಸಾಮಾನ್ಯವಾದ ಕೌಟುಂಬಿಕ ಸಂದರ್ಭಗಳಲ್ಲಿ ಬೆಳೆದು ಪ್ರಬುದ್ಧಳಾಗುವುದನ್ನು ಜೇನ್ ಆಸ್ಟೆನ್ ತನ್ನ ಕಾದಂಬರಿಗಳಲ್ಲಿ ವರ್ಣಿಸುವುದರಿಂದ, ಇವಾ ಲೂನಾ ಇಂಥ ಮಾದರಿಯನ್ನು ಅದ್ಭುತವಾಗಿ ಅಣಕುಮಾಡಿ ಬುಡಮೇಲು ಮಾಡುತ್ತದೆ. ಇದೂ ಇವಾಳ ಶಿಕ್ಷಣದ ಕತೆಯೇ. ಆದರೆ ಪ್ರಕ್ಷುಬ್ಧ ದೇಶವಾದ ಚಿಲಿಯ ಗಲ್ಲಿಗಳಲ್ಲಿ, ವೇಶ್ಯಾವಾಟಿಕೆಗಳಲ್ಲಿ, ಕ್ರಾಂತಿಕಾರಿಗಳ ಶಿಬಿರಗಳಲ್ಲಿ ಈ ಶಿಕ್ಷಣ ನಡೆಯುತ್ತದೆ. ಇವಾ ಸುರಕ್ಷಿತ ಮಧ್ಯಮವರ್ಗದ ನಯ-ನಾಜೂಕಿನ ಹೆಣ್ಣು ಮಗು ಅಲ್ಲ. ಚಿಲಿ ದೇಶದ ರಾಜಕೀಯದಂತೆ ಅತಾರ್ಕಿಕವಾಗಿ ಬದಲಾಗುವ ಬದುಕಿನ ಸನ್ನಿವೇಶಗಳಲ್ಲಿ ಬದುಕಲಿಕ್ಕಾಗಿ ಏನನ್ನೂ ಮಾಡಲು ಸಿದ್ಧಳಿರುವ ಗಟ್ಟಿಗಿತ್ತಿ ಅವಳು. ಅವಳ ಶಿಕ್ಷಕರು ಧಾರ್ಮಿಕ ಹುಚ್ಚಿನ ಎಲ್ಟಿರಾ, ವೇಶ್ಯಾವಾಟಿಕೆಯ ಒಡತಿಯಾದ ಪೆತ್ರೋನಾ, ಬೀದಿಗಳ್ಳನಾದ ನರಾನೋ, ಉಭಯಲಿಂಗಿಯಾದ ………… ಮುಂತಾದವರು.

ಇಡೀ ಕಾದಂಬರಿ ಮಧ್ಯಮವರ್ಗದ ಸಜ್ಜನಿಕೆಯ ಮೌಲ್ಯಗಳನ್ನು ಅಕ್ಷರಶಃ ಚಿಂದಿ ಉಡಾಯಿಸುತ್ತದೆ. ಅಷ್ಟು ಮಾತ್ರವಲ್ಲ, ವ್ಯಕ್ತಿತ್ವ, ಗುರುತು ಇವೇ ಮುಂತಾದ ಜಡವಾದ ಪರಿಕಲ್ಪನೆಗಳನ್ನೇ ಛಿದ್ರಗೊಳಿಸುತ್ತದೆ. ಇವಾಳ ಗೆಳೆಯ ಗೆಳತಿಯರು ಹಲವಾರು ಜನಾಂಗ, ದೇಶ ಹಾಗೂ ಧರ್ಮಗಳಿಗೆ ಸೇರಿದವರು. ಅವರಾರಿಗೂ ರಾಷ್ಟ್ರ, ಸಮಾಜ ಧರ್ಮಗಳ ಗುರುತುಗಳು ಮುಖ್ಯವಾಗಿಲ್ಲ. ಒಂದು ರೀತಿಯಲ್ಲಿ ಇವೆರೆಲ್ಲರದೂ ತಮ್ಮದೇ ಆದ ಗುಪ್ತ ಸಮಾಜ. ಸ್ವೀಕೃತ ಮೌಲ್ಯಗಳ ದೃಷ್ಟಿಯಲ್ಲಿ ಹಾಗೂ ರಾಷ್ಟ್ರದ ಕಾನೂನಿನ ದೃಷ್ಟಿಯಲ್ಲಿ ಇವರೆಲ್ಲ ಅಪರಾಧಿಗಳಿರಬಹುದು. ಆದರೆ, ಪ್ರೀತಿ, ಗೆಳೆತನ, ಸಾಹಸಪ್ರಿಯತೆ ಹಾಗೂ ವೈಯಕ್ತಿಕ ಸಂಬಂಧಗಳ ನಿಷ್ಠೆಯಿಂದ ತಮ್ಮದೇ ವಿಚಿತ್ರ ನೈತಿಕತೆ ಉಳ್ಳವರು.

ಸ್ವತಃ ಇವಾಳಿಗೆ ಒಂದೇ ವ್ಯಕ್ತಿತ್ವವಿಲ್ಲ. ಅವಳು ಹರಿವ ನದಿಯಂತೆ ಪಾತ್ರ ಬದಲಾಯಿಸುತ್ತಾಳೆ. ಅವಳೇನು ಸ್ತ್ರೀವಾದಿಯೂ ಅಲ್ಲ, ಕ್ರಾಂತಿಕಾರಿಯೂ ಅಲ್ಲ. ಗಂಡಸಿನ ಪ್ರೀತಿ ಅವಳಿಗೆ ಬೇಕು. ಅದನ್ನು ಮುಕ್ತವಾಗಿ, ಸ್ವಚ್ಛಂದವಾಗಿ ಹುಡುಕಿ ಪಡೆಯುತ್ತಾಳೆ. ಅವಳಿಗೆ ನೈತಿಕ ಕಟ್ಟಳೆಗಳ ಬಂಧನವಿಲ್ಲ. ಏಕೆಂದರೆ, ಅವಳ ಹೆಸರೇ ಇವಾ – ಜೀವನ.

ಇವಾಳ ರೋಚಕ, ಸಾಹಸಮಯ ಬದುಕಿನ ಹಿನ್ನೆಲೆಯಾಗಿ ಚಿಲಿ ದೇಶದ ರಾಜಕೀಯವಿದೆ. ಹಲವಾರು ಸರ್ವಾಧಿಕಾರಿಗಳು, ಮಿಲಿಟರಿ ಆಡಳಿತಗಾರರು ಕಾದಂಬರಿಯಲ್ಲಿ ವ್ಯಂಗ್ಯಚಿತ್ರಗಳಂತೆ ಬಂದುಹೋಗುತ್ತಾರೆ. ಅವರಿಂದಾಗಿ ಚಿಲಿ ಯಾವಾಗಲೂ ಪ್ರಕ್ಷುಬ್ಧವಾಗಿ ವಿಪ್ಲವಗಳಿಂದ ಕೂಡಿರುತ್ತದೆ. ಕಾದಂಬರಿ ಈ ಹುಚ್ಚು ರಾಜಕೀಯವನ್ನು ಅದ್ಭುತವಾಗಿ ವಿಡಂಬನೆ ಮಾಡುವುದರ ಮೂಲಕ ವಿದ್ರೋಹದ ಕೆಲಸವನ್ನು ಮಾಡುತ್ತದೆ. ಇವಾಳಂಥ, ಅವಳ ಸಂಗಾತಿಯಂಥ ಜನಸಾಮಾನ್ಯರನ್ನು ತನ್ನ ತೆವಲುಗಳಿಗಾಗಿ ಬೇಟೆಯಾಡುವ, ಬಂಧಿಸುವ ಕ್ರೂರ ರಾಜಕೀಯವನ್ನು ಕಾದಂಬರಿ ವಿಡಂಬನೆಯ ಮೂಲಕ ಗುರುತಿಸುತ್ತದೆ. ಹೀಗಾಗಿ ಇಡೀ ಕಾದಂಬರಿ ಸ್ವೀಕೃತ ಮೌಲ್ಯಗಳು, ಅಧಿಕಾರಸ್ಥ ರಾಜಕೀಯ ಹಾಗೂ ಲೈಂಗಿಕ ಕಟ್ಟಳೆಗಳನ್ನು ಭಗ್ನಗೊಳಿಸುತ್ತದೆ.

ಇವಾ ಲೂನಾ ಕಾದಂಬರಿಯ ಆಕರ್ಷಣೆಯಿರುವುದು ಅದರ ಕಥನದ ರಂಜಕ, ಉತ್ಸಾಹಭರಿತ ಶೈಲಿಯಲ್ಲಿ ಮತ್ತು ಭಾಷೆಯ ಅಪೂರ್ವವಾದ ಶಕ್ತಿಪೂರ್ಣತೆಯಲ್ಲಿ. ಅಯೆಂದೆ ಅವರ ಭಾಷೆ ಸಹಜವಾಗಿಯೇ ರೂಪಕನಿಷ್ಠವಾದ ಭಾಷೆ. ವಸ್ತುಪ್ರಪಂಚವನ್ನು, ಮನುಷ್ಯಪ್ರಪಂಚವನ್ನು ಕಣ್ಣಿಗೆ ಮೂರ್ತವಾಗಿ ಚಿತ್ರಕಟ್ಟುವಂಥ ರೂಪಕ ಭಾಷೆ. ಅಲ್ಲದೇ ನಿರೂಪಕಿಯಾದ ಇವಾ ಲೂನಾಳ ಸೃಜನಶೀಲ ಕಲ್ಪನಾಶಕ್ತಿ ಬರಡು ವಾಸ್ತವವನ್ನು ತನ್ನ ಬಣ್ಣಗಳಿಂದ ಚಂದವಾಗಿಸದೇ ನೋಡುವುದಿಲ್ಲ. ಹೀಗಾಗಿ ಇವಾ ಲೂನಾ ಕಾದಂಬರಿಯನ್ನು ಓದುವುದೆಂದರೆ ತನ್ನ ಸಂಪೂರ್ಣ ಶರೀರದೊಂದಿಗೆ ಅವತರಿಸಿರುವ ಕಾದಂಬರಿ ಪ್ರಪಂಚವೊಂದನ್ನು ಪ್ರವೇಶಿಸಿದಂತೆ.

ಜೋಸೆಫ್ ಕಾನ್ರಾಡ್ ತೋರಿದ ಕತ್ತಲ ಹೃದಯ

ಶ್ರೇಷ್ಠ ಇಂಗ್ಲಿಷ್ ಕಾದಂಬರಿಕಾರರಲ್ಲಿ ಒಬ್ಬನಾದ ಜೋಸೆಫ್ ಕಾನ್ರಾಡ್ ಬರೆದ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕಾದಂಬರಿಯ ನಿರೂಪಕ ಮಾರ್ಲೋವ್ ತಾನು ಹೇಳಲಿರುವ ಕತೆಯ ಮುನ್ನುಡಿಯಾಗಿ ದೂರದಲ್ಲಿ ಕಾಣುತ್ತಿದ್ದ ಲಂಡನ್ ನಗರದ ಬೆಳಕುಗಳ ಕಡೆಗೆ ಬೆರಳು ಮಾಡಿ ಇದು ಕೂಡ ಭೂಮಿಯ ಮೇಲಿನ ಕತ್ತಲೆಯ ಸ್ಥಳಗಳಲ್ಲಿ ಒಂದಾಗಿತ್ತು ಎನ್ನುತ್ತಾನೆ. ಕತೆಯ ಘಟನೆಗಳು ಆಫ್ರಿಕಾದ ಕಾಂಗೋ ಪ್ರದೇಶದಲ್ಲಿ ನಡೆಯುವುದರಿಂದಾಗಿ ಅದನ್ನೇ ‘ಕತ್ತಲೆಯ ಹೃದಯ’ವೆಂದು ಓದುಗರು ಭಾವಿಸುವುದು ಸಹಜವಾಗಿದೆ. ಆದರೆ, ಯುರೋಪಿನ ನಾಗರಿಕತೆಯ ಅತ್ಯುನ್ನತ ಸಂಕೇತವಾದ ಲಂಡನ್ ಕೂಡ ಕತ್ತಲೆಯ ಸ್ಥಳವಾಗಿದ್ದು ಹೇಗೆ? ಇಡೀ ಕಾದಂಬರಿ ಚರಿತ್ರೆಯ ಅತ್ಯಂತ ಕರಾಳ ಮುಖವಾದ ವಸಾಹತುಷಾಹಿಯನ್ನು ಅರ್ಥಮಾಡಿಸಿಕೊಡುವ ಕ್ರಮವೇ ಆಗಿದೆ. ಸಭ್ಯತೆ, ನಾಗರಿಕತೆ, ಪ್ರಗತಿ, ವಿಜ್ಞಾನ ಇವುಗಳ ಹೆಗ್ಗಳಿಕೆ ಇರುವ ಯುರೋಪು ‘ಕತ್ತಲೆಯ ಖಂಡ, ಅನಾಗರಿಕ ಜಗತ್ತು’ ಎಂದು ವರ್ಣಿಸಿರುವ ಆಫ್ರಿಕಾವನ್ನು ತನ್ನ ವಸಾಹತುವನ್ನಾಗಿಸಿಕೊಂಡಿತು. ವಸಾಹತುಷಾಹಿ ಆಳ್ವಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಅದು ಅನಾಗರಿಕರನ್ನು ನಾಗರಿಕರನ್ನಾಗಿ ಮಾಡುವ ಚಾರಿತ್ರಿಕ ಕೆಲಸವೆಂದು ಹೇಳಿತು. ನಾಗರಿಕ ಪ್ರಗತಿಯ ಮುಂಚೂಣಿಯಲ್ಲಿರುವ ತಾನು ಏಷಿಯಾ ಆಫ್ರಿಕಾದಂಥ ಕತ್ತಲೆಯ ಖಂಡಗಳನ್ನು ಬೆಳಕಿನೆಡೆಗೆ ತರುವ ಗುರುತರ ಜವಾಬ್ದಾರಿಯನ್ನು ಬಿಳಿಯ ಮನುಷ್ಯನ ಹೆಗಲ ಮೇಲಿನ ಭಾರವೆಂದು (white man’s burden) ಕರೆಯಿತು.

ವಾಸ್ತವವೆಂದರೆ ಏಷಿಯಾ, ಆಫ್ರಿಕಾ ಖಂಡಗಳ ಹಾಗೂ ಇತರ ಪ್ರದೇಶಗಳ ಸಂಪತ್ತನ್ನು ಲೂಟಿ ಮಾಡಿದ್ದು, ಅಲ್ಲಿಯ ಜನಸಮುದಾಯಗಳ ಜೀವನವನ್ನೇ ಪಲ್ಲಟಗೊಳಿಸಿದ್ದು, ಆ ನೆಲದ ಸಂಸ್ಕೃತಿಗಳನ್ನು ನಾಶ ಮಾಡಿದ್ದು, ವಸಾಹತುಷಾಹಿಯ ಕರಾಳ ಸಾಧನೆಯಾಗಿದೆ. ಆದ್ದರಿಂದಲೇ ವಸಾಹತುವಾಗಿದ್ದ ಆಫ್ರಿಕಾದ ಕಾಂಗೋ ಕತ್ತಲೆಯ ಹೃದಯವಲ್ಲ. ಸಾಮ್ರಾಜ್ಯಶಾಹಿ ಕ್ರೌರ್ಯದ ಕೇಂದ್ರವಾಗಿದ್ದ ಇಂಗ್ಲೆಂಡ್.  ಕಾನ್ರಾಡ್‌ನ ಕಾದಂಬರಿಯಲ್ಲಿ ಈ ವ್ಯಂಗ್ಯವು ಅತ್ಯಂತ ದಟ್ಟವಾಗಿ ಮೂಡಿಬರುತ್ತದೆ.

ಮಾರ್ಲೋವ್ ತನ್ನ ಸಂಗಾತಿಗಳಿಗೆ ಹೇಳುವ ಕತೆ ಕುರ್ಜ್ (Kurtz) ಎಂಬ ವ್ಯಕ್ತಿಗೆ ಸಂಬಂಧಿಸಿದ್ದು. ಜಗತ್ತಿನ ಯಾವುದೇ ಮೂಲೆಗೂ ಹೊರಡಲು ಸಿದ್ಧನಿರುವ ಮಾರ್ಲೋವ್ ತನ್ನ ಚಿಕ್ಕಮ್ಮನ ಸಹಾಯದಿಂದ ಬೆಲ್ಜಿಯಂ ಕಂಪನಿಯೊಂದರಲ್ಲಿ ಕೆಲಸ ಪಡೆದುಕೊಂಡು ಕಾಂಗೋ ಪ್ರದೇಶಕ್ಕೆ ಪ್ರಯಾಣ ಮಾಡುತ್ತಾನೆ. ಅಲ್ಲಿ ಕಂಪನಿಗೆ ಸೇರಿದ ಹಲವಾರು ‘ಸ್ಷೇಷನ್’ಗಳು ಅಂದರೆ ದಾಸ್ತಾನು, ಕಚೇರಿ, ಮಳಿಗೆ ಎಲ್ಲವೂ ಆಗಿರುವ ಸಣ್ಣ ಕೇಂದ್ರಗಳಿವೆ. ಅವುಗಳ ಮೇಲುಸ್ತುವಾರಿ ಕುರ್ಜ್‌ನದು. ಅವನು ತನ್ನ ಕಂಪನಿಗಾಗಿ ಕಾಂಗೋ ಪ್ರದೇಶದಿಂದ ದಂತವನ್ನು ಸಂಗ್ರಹಿಸಿಕೊಡುವ ಕೆಲಸದಲ್ಲಿ ಈಗಾಗಲೇ ಹೆಸರು ಮಾಡಿದ್ದಾನೆ. ಆತನ ಪ್ರತಿಭೆ, ವ್ಯಕ್ತಿತ್ವ, ಆದರ್ಶಗಳ ಬಗ್ಗೆ ಮಾರ್ಲೊವ್‌ನಿಗೆ ಸಿಕ್ಕ ಎಲ್ಲರಿಗೂ ಮೆಚ್ಚುಗೆ ಇದೆ. ಆದರೆ, ದಂತದ ಹುಡುಕಾಟದಲ್ಲಿ ಆಫ್ರಿಕಾದ ಕಾಂಗೋವಿನ ಅರಣ್ಯಗಳ ಮಧ್ಯದ ಕತ್ತಲೆಯ ಹೃದಯವನ್ನು ತಲುಪಿದ ಕುರ್ಜ್‌ನಿಗೆ ಕಾಯಿಲೆಯಾಗಿದೆ. ಅಲ್ಲದೇ ಏನೋ ಆಗಬಾರದ್ದು ಆಗಿದೆ ಎನ್ನುವ ಗಾಳಿಮಾತುಗಳಿವೆ.

ಮಾರ್ಲೋವ್ ಕಾಂಗೋ ಪ್ರದೇಶದಲ್ಲಿ ತನ್ನ ಏಣಿಹಡಗಿನಲ್ಲಿ ಅಲ್ಲಿಯ ಮಹಾನ್ ನದಿಯಲ್ಲಿ ಪ್ರಯಾಣಿಸುತ್ತಾ ಬಂದಹಾಗೆ ಅವನಿಗೆ ವಿಚಿತ್ರವಾದ ಅನುಭವಗಳಾಗುತ್ತವೆ. ಒಂದು ಕಡೆ ನದಿಯ ದಂಡೆಯ ಮೇಲಿನ ಕಾಡಿನಲ್ಲಿ ಬಚ್ಚಿಟ್ಟುಕೊಂಡು ಹಡಗಿನ ಮೇಲೆ ಬಾಣಗಳ ಮಳೆಗರೆವ  ಜನರಿದ್ದಾರೆ. ಯುರೋಪಿನ ಸುಶಿಕ್ಷಿತ ಸಭ್ಯನಾದ ಮಾರ್ಲೋವ್‌ನ ಕಣ್ಣಿಗೆ ಅವರು ಕುತೂಹಲ, ಭಯ ಹಾಗೂ ಕೆಲವೊಮ್ಮೆ ಜಿಗುಪ್ಸೆಯ ವಸ್ತುಗಳಾಗಿದ್ದಾರೆ. ಅವನು ಆ ಕಪ್ಪುಜನರನ್ನು ಮಾನವ ಇತಿಹಾಸದ ಆದಿಯುಗದ ಬಿಂಬಗಳಾಗಿ ನೋಡುತ್ತಾನೆ. ಆದರೆ, ಅದೇ ಹೊತ್ತಿಗೆ ಯುರೋಪಿನ ಕಂಪನಿಗಳ ಎಲ್ಲಾ ಸೇವೆಗಳನ್ನು ಮಾಡಿ ಬಸವಳಿಯುವವರು ಅವರೇ. ಒಂದು ಆಘಾತಕಾರಿ ಸನ್ನಿವೇಶದಲ್ಲಿ ಜೀವಂತ ಹೆಣಗಳಂತಾಗಿ ಬಳಲಿ ಹೋಗಿರುವ ಇಂಥ ಕಪ್ಪುಕೆಲಸಗಾರರು ಒಬ್ಬೊಬ್ಬರೇ ಮರದ ಕೆಳಗೆ ನೆಲಕಚ್ಚುವುದರ ವರ್ಣನೆ ಇದೆ. ಅವರ ಒಡೆಯರಾಗಿ ಕಂಪನಿಯ ವ್ಯಾಪಾರಕ್ಕಾಗಿ ಬರುವ ಮಾರ್ಲೋವ್, ಕುರ್ಜ್‌ನಂತ ಬಿಳಿಯರನ್ನು ಕೂಡ ಸ್ವತಃ ಮಾರ್ಲೋವ್ ಕೋಡಂಗಿಗಳಂತೆ, ಹಾಸ್ಯಾಸ್ಪದ ನಾಟಕವೊಂದರ ಪಾತ್ರಧಾರಿಗಳಂತೆ ಕಾಣುತ್ತಾನೆ. ಒಂದು ಕಡೆ ಕನಸು, ಆದರ್ಶ, ನಾಗರಿಕತೆಯ ಬಗ್ಗೆ ಮಾತನಾಡುವ ಇವರು ಭಾಗವಹಿಸುತ್ತಿರುವುದು ಕಪ್ಪುಜನರಿಂದ ದಂತವನ್ನು ಕಸಿದುಕೊಳ್ಳುವ ಮಹಾಕಾರ್ಯದಲ್ಲಿ. ಕಾದಂಬರಿಯಲ್ಲಿ ಓದುಗರ ಕಣ್ಣು, ಕಿವಿ ಎಲ್ಲವೂ ಆಗಿರುವ ಮಾರ್ಲೋವ್ ವಸಾಹತುಷಾಹಿಯ ಅಸಂಗತತೆಯನ್ನು ಸೂಕ್ಷ್ಮವಾಗಿ ಬಯಲಿಗೆಳೆಯುತ್ತಾನೆ. ಕಾಂಗೋವಿನ ಅಬೇಧ್ಯ ಅರಣ್ಯ ಪ್ರದೇಶದ ಒಳಹೋಗುತ್ತಿರುವ ಮಾರ್ಲೋವ್‌ನಿಗೆ ವ್ಯಾಪಾರದ ಹೆಸರಲ್ಲಿ ನಡೆಯುತ್ತಿರುವ ವಸಾಹತುಷಾಹಿ ದಮನ ಮತ್ತು ಅದರ ಅಮಾನವೀಯ, ಅಸಂಗತ ಮುಖಗಳ ಪರಿಚಯ ಆಗುತ್ತಲೇ ಹೋಗುತ್ತದೆ. ಉದ್ದಕ್ಕೂ ಭೇಟಿಯಾಗುವ ಬಿಳಿಯರ ಪ್ರಕಾರ ಕುರ್ಜ್ ಒಬ್ಬ ಆದರ್ಶವಾದಿ ದೃಷ್ಟಾರ, ಒಬ್ಬ ಸಾಂಸ್ಕೃತಿಕ ನಾಯಕ. ಯುರೋಪಿನ ನಾಗರಿಕತೆಯನ್ನು ಕಾಂಗೋವಿಗೆ ತರಬಲ್ಲ ಸಾಮರ್ಥ್ಯ ಉಳ್ಳವನು.

ಕೊನೆಗೂ ಕತ್ತಲೆಯ ಹೃದಯವನ್ನು ತಲುಪಿದಂತೆ ಮಾರ್ಲೋವ್ ಕುರ್ಜ್ ಇರುವ ಕೇಂದ್ರ ಸ್ಟೇಷನನ್ನು ತಲುಪುತ್ತಾನೆ. ದೂರದಿಂದ ಕುರ್ಜ್‌ನ ವಸತಿಗೃಹವನ್ನು ದುರ್ಬೀನಿನಿಂದ ನೋಡಿದ ಅವನಿಗೆ ಆಘಾತವೆಂದರೆ ಅವನ ಮನೆಯ ಸುತ್ತಲಿನ ಬೇಲಿಯ ಕಂಬಗಳ ಮೇಲೆ ಕಪ್ಪುಜನರ ಕತ್ತರಿಸಿದ ತಲೆಗಳಿವೆ! ಸ್ವತಃ ಕುರ್ಜ್ ಅಲ್ಲಿಯ ಜನರಿಗೆ ನಾಯಕನೂ ಆಗಿದ್ದಾನೆ, ಶತ್ರುವೂ ಆಗಿದ್ದಾನೆ. ಅಂದರೆ ಯುರೋಪಿನ ಭವ್ಯನಾಗರಿಕತೆಯ ವಾರಸುದಾರನಾದ ಕುರ್ಜ್ ಅಲ್ಲಿಯ ಕಪ್ಪುಜನರ ‘ಅನಾಗರಿಕ’ ನಂಬಿಕೆ, ಆಚರಣೆಗಳ ಭಾಗವಾಗಿಬಿಟ್ಟಿದ್ದಾನೆ. ಮಾರ್ಲೋವ್‌ನ ಕಣ್ಣಿಗೆ ಇದು ನೈತಿಕ ಅಧಃಪತನವಾಗಿ ಕಾಣುತ್ತದೆ. ಆದರ್ಶವಾದಿ ಕುರ್ಜ್ ತನ್ನ ಮನುಷ್ಯಸ್ವಭಾವದೊಳಗೂ ಇರುವ ಕತ್ತಲೆಯನ್ನು ಗೆಲ್ಲಲಾಗದೇ, ತನ್ನ ಪ್ರವೃತ್ತಿ, ಅದಮ್ಯ ಆಸೆಗಳಿಂದಾಗಿ ತನ್ನ ನಾಗರಿಕತೆಯನ್ನು ತೊರೆದುಬಿಟ್ಟಿದ್ದಾನೆ.

ಮಾರ್ಲೋವ್ ಹೀಗೆ ಅಂದುಕೊಂಡರೆ ಕಾದಂಬರಿ ಇನ್ನೂ ದೊಡ್ಡ ಸತ್ಯವನ್ನು ಹೇಳುತ್ತದೆ. ದಂತದ ವ್ಯಾಪಾರಕ್ಕಾಗಿ ಕಪ್ಪುಜನರ ಮೇಲೆ ಮಾಡುವ ದೌರ್ಜನ್ಯ ಮತ್ತು ನಾಗರಿಕತೆಯ ಭವ್ಯ ಮೌಲ್ಯಗಳು ಎರಡನ್ನೂ ಒಟ್ಟಿಗೇ ನಿಭಾಯಿಸುವ ವಸಾಹತುಷಾಹಿ ಧೋರಣೆಯಲ್ಲಿಯೇ ಬಿರುಕಿದೆ. ವೈರುಧ್ಯವಿದೆ. ಹೀಗಾಗಿ ಈ ವಸಾಹತುಷಾಹಿಯೇ ಕುರ್ಜ್‌ನ ಅಮಾನವೀಕರಣಕ್ಕೆ ಕಾರಣವಾಗಿದೆ. ವಸಾಹತುಷಾಹಿ ಆಳುವವರನ್ನೂ ಆಳ್ವಿಕೆಗೆ ಒಳಗಾಗುವವರನ್ನೂ ಏಕಕಾಲಕ್ಕೇ ಅಮಾನವೀಯಗೊಳಿಸುತ್ತದೆ. ಭವ್ಯವಾದ ಮಾತುಗಳ ಗಿಲೀಟು ಆವರಣದೊಳಗೆ ಅದು ಪೊಳ್ಳಾಗಿದೆ. ಮಾರ್ಲೋವ್‌ನ ಕೈಗೆ ಸಿಕ್ಕುವ ಕುರ್ಜ್‌ನ ಬರಹ ಇದರ ಮಾರ್ಮಿಕವಾದ ದ್ಯೋತಕವಾಗಿದೆ. ಅದರ ಉದ್ದಕ್ಕೂ ಆಡಂಬರದ ಪದಗಳಲ್ಲಿ ತನ್ನ ಕೆಲಸವನ್ನು ನಾಗರಿಕಗೊಳಿಸುವ ಕೆಲಸ (civilians mission) ಎಂದು ಹೇಳಿಕೊಳ್ಳುವ ಕುರ್ಜ್ ಆ ಬರಹದ ಕೊನೆಯ ಟಿಪ್ಪಣಿಯಾಗಿ ತನ್ನ ಸಂದೇಶವನ್ನು ಒಂದು ಚರಮವಾಕ್ಯದ ರೂಪದಲ್ಲಿ ಕೊಟ್ಟಿದ್ದಾನೆ. ಈ ಅನಾಗರಿಕರನ್ನು ಕೊಂದುಹಾಕಿ (massacre the brutes). ಪೊಳ್ಳು ಆದರ್ಶಗಳಿಗೂ, ಕಪ್ಪುಜನರ ಬಗ್ಗೆ ಇರುವ ಈ ಜನಾಂಗೀಯ ದ್ವೇಷಕ್ಕೂ ಇರುವ ವ್ಯತ್ಯಾಸದ ಮೂಲಕ ಕಾನ್ರಾಡ್ ವಸಾಹತುಷಾಹಿಯ ವೈರುಧ್ಯವನ್ನು ವರ್ಣಿಸುತ್ತಾನೆ.

ಮಾರ್ಲೋವ್‌ನನ್ನು ಭೇಟಿಯಾದಾಗ ಕುರ್ಜ್ ಆಗಲೇ ಸಾವಿನ ದಾರಿಯಲ್ಲಿದ್ದಾನೆ. ಅವನ ಪ್ರಜ್ಞೆ ಬಿರುಕುಗೊಂಡಿದೆ. ದಂತದ ಆಮಿಷದಲ್ಲಿ ಅವನು ಕಪ್ಪುಜನರನ್ನು ಕೊಂದಿದ್ದಾನೆ; ದಾಳಿ ಮಾಡಿದ್ದಾನೆ. ವ್ಯಾಪಾರಿಯಾಗಿ ಬಂದವನು ರಾಜನಾಗಲು ಹೋಗಿ ಎಡಬಿಡಂಗಿಯಾಗುತ್ತಾನೆ. ಮಾರ್ಲೋವ್‌ನ ಹಡಗಿನಲ್ಲಿ ಕನಸು, ದುಃಸ್ವಪ್ನಗಳ ಮಧ್ಯೆ ಸಾವನ್ನಪ್ಪುತ್ತಾನೆ. ಅಪಾರ ಧೀಶಕ್ತಿ ಇದ್ದ ಕುರ್ಜ್‌ನ ದುರಂತವು ವಸಾಹತುಷಾಹಿಯ ದುರಂತವಾಗಿ ಹೊಮ್ಮುತ್ತದೆ. ಕಾಂಗೋವಿನಿಂದ ಮರಳಿಬಂದ ಮಾರ್ಲೋವ್‌ನಿಗೆ ಕುರ್ಜ್‌ನ ಕೊನೆಯ ಮಾತುಗಳು ಮರೆಯಲಾಗುವುದಿಲ್ಲ. ಅವನು ಹೇಳಿದ್ದು; “The horror, The horror” . . ಬಹುಷಃ ತನ್ನೊಳಗೇ ಅಡಗಿಕೂತಿದ್ದ ಕತ್ತಲೆಯ ಹೃದಯವನ್ನೂ, ಅಷ್ಟೇ ಭೀಭತ್ಸವಾದ ವಸಾಹತುಷಾಹಿಯನ್ನು ಅನುಭವಿಸಿದ ಕುರ್ಜ್ ಹೀಗೆ ಹೇಳುತ್ತಾನೆ. ಆದರೆ, ಮಾರ್ಲೋವ್ ಕುರ್ಜ್‌ನ ಪ್ರಿಯತಮೆಯನ್ನು ಭೇಟಿಯಾದಾಗ ಈ ಸತ್ಯವನ್ನು ಹೇಳಲು ಹಿಂಜರಿಯುತ್ತಾನೆ. ಕುರ್ಜ್‌ನ ಬಾಯಿಂದ ಕೊನೆಗೆ ಬಂದದ್ದು ಅವಳ ಹೆಸರು ಎಂದು ಸುಳ್ಳು ಹೇಳುತ್ತಾನೆ.

ಇಂಗ್ಲೆಂಡ್‌ನ ಸಾಮ್ರಾಜ್ಯಷಾಹಿಯ ಏರುಗಾಲದಲ್ಲಿ ಬದುಕಿ ಬರೆದ ಕಾನ್ರಾಡ್‌ನ ಈ ಕೃತಿ ವಸಾಹತುಷಾಹಿಯ ಅತ್ಯಂತ ಮಾರ್ಮಿಕ ಕಥನವೆಂದು ಪ್ರಸಿದ್ಧವಾಗಿದೆ. ಇಡೀ ಕತೆಯೇ ದುಃಸ್ವಪ್ನದ ಸಂಕೀರ್ಣವಾದ ಸಾಂಕೇತಿಕತೆಯಿಂದ ಕೂಡಿದೆ. ಈ ಕೃತಿಯ ಬಗ್ಗೆ ನೈಜೀರಿಯಾದ ಶ್ರೇಷ್ಠ ಕಾದಂಬರಿಕಾರ ಚಿನುವಾ ಅಚೀಬೆ ಎತ್ತಿದ ವಿವಾದವೂ ಇಂದು ಪ್ರಸಿದ್ಧವಾಗಿದೆ. ಅಚೀಬೆಯ ಪ್ರಕಾರ ವಸಾಹತುಷಾಹಿವಿರೋಧಿ ಕೃತಿಯನ್ನು ಬರೆದ ಕಾನ್ರಾಡ್ ತನ್ನ ಜನಾಂಗೀಯ ಪೂರ್ವಗ್ರಹಗಳನ್ನು ಮೀರಲಿಲ್ಲ. ಏಕೆಂದರೆ, ಈ ಕೃತಿಯಲ್ಲಿ ಆಫ್ರಿಕಾ ಮನುಷ್ಯನಾಗರಿಕತೆಯ ಆದಿಯ ಸ್ಥಿತಿಯಾಗಿ ವರ್ಣಿತವಾಗಿದೆ. ಅಲ್ಲಿ ಬರುವ ಕಾಂಗೋವಿನ ಕಪ್ಪುಜನರು ನೆರಳುಗಳಾಗಿ, ಪ್ರಾಣಿಗಳ ಹಾಗೆ ವರ್ಣಿತರಾಗಿದ್ದಾರೆ. ಅವರಿಗೆ ವ್ಯಕ್ತಿತ್ವವೂ ಇಲ್ಲ; ಚರಿತ್ರೆಯೂ ಇಲ್ಲ. ಸ್ವಂತದ ಬುದ್ಧಿಶಕ್ತಿಯೂ ಇಲ್ಲ. ಹೀಗಾಗಿ ಬಿಳಿಯರ ವಸಾಹತುಷಾಹಿಯನ್ನು ವಿಮರ್ಶಿಸುವ ಈ ಕೃತಿಯಲ್ಲಿ ಕಪ್ಪುಜನರು ಯುರೋಪಿನ ಜನಾಂಗೀಯ ಪೂರ್ವಗ್ರಹಗಳಿಗೆ ಅನುಗುಣವಾಗಿದ್ದಾರೆ. ಆದ್ದರಿಂದಲೇ ಚಿನುವಾ ಅಚೀಬೆ ಪ್ರಕಾರ ಕಾನ್ರಾಡ್ ಒಬ್ಬ bloody racist. ಈ ಮಾತು ವಿವಾದದ ಬಿರುಗಾಳಿಯನ್ನೇ ಹುಟ್ಟುಹಾಕಿತು. ಕಾನ್ರಾಡ್ ಕಪ್ಪುಜನರನ್ನು ವ್ಯಕ್ತಿಗಳಾಗಿ ಗ್ರಹಿಸಲಾರದ ಸಂವೇದನೆಯುಳ್ಳವನು ಎನ್ನುವುದು ನಿಜವಿರಬಹುದು. ಆದರೆ, ಈ ಕೃತಿಯಲ್ಲಿ ಅವನ ವಸಾಹತುಷಾಹಿ ವಿರೋಧ ಉಜ್ವಲವಾಗಿರುವುದೂ ಅಷ್ಟೇ ಸತ್ಯವಾಗಿದೆ.

ಕಾನ್ರಾಡ್ ಕತ್ತಲೆಯಾದ ಹೃದಯವನ್ನು ಸಾಮ್ರಾಜ್ಯಷಾಹಿಯಲ್ಲಿ ಕಂಡ ಕಾಲದಲ್ಲಿಯೇ ಗಾಂಧೀ ಇಡೀ ಪಶ್ಚಿಮ ನಾಗರಿಕತೆಯ ಈ ಮುಖವನ್ನು ರಾಕ್ಷಸೀಸ್ವರೂಪಿಯಾಗಿ ಕಂಡಿದ್ದರಲ್ಲವೇ?

ಆರ್‌ವೆಲ್‌ ತೋರಿದ ಪ್ರಾಣಿಗಳ ರಾಜ್ಯ

ಇಪ್ಪತ್ತನೆಯ ಶತಮಾನ ಹಲವಾರು ಕ್ರಾಂತಿಗಳನ್ನು, ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಗಳನ್ನು, ಭಾರತದಲ್ಲಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಳನ್ನು ಕಂಡ ಸಂಕ್ರಮಣ ಕಾಲ. ಆದರೆ, ಅದು ಅತ್ಯಂತ ಕ್ರೂರವಾದ, ಅಮಾನವೀಯವಾದ ಸರ್ವಾಧಿಕಾರಿ ಪ್ರಭುತ್ವಗಳನ್ನು ಅನುಭವಿಸಿದ ಕರಾಳ ಯುಗವೂ ಹೌದು. ರಾಜಕೀಯ ಸಿದ್ಧಾಂತ, ಜನಾಂಗ ದ್ವೇಷದ ಕಥನಗಳು, ಸರಕಾರಗಳ ಅಧೀನದಲ್ಲಿದ್ದ ಪ್ರಬಲವಾದ ಪ್ರಚಾರ ಮಾಧ್ಯಮಗಳು, ಮಿದುಳ ಮಾರ್ಜನ ಇವೆಲ್ಲವುಗಳನ್ನೂ ಬಳಸಿಕೊಂಡು ಇಂಥ ಬರ್ಬರವಾದ ಸರ್ವಾಧಿಕಾರಗಳನ್ನು ಸಮರ್ಥಿಸಲಾಯಿತು. ಸರ್ವಾಧಿಕಾರಿ ಮತ್ತು ಅವನ ದುಷ್ಟಕೂಟ ಅವರ ಬೆಂಬಲಕ್ಕಿರುವ ಅಧಿಕಾರಶಾಹಿ ಹಾಗೂ ಮಾಧ್ಯಮಗಳಿಂದಾಗಿ ಸಾವಿರಾರು ಜನ ಪ್ರಜೆಗಳು ತಮ್ಮ ಎಲ್ಲಾ ಸ್ವಾತಂತ್ರ್ಯಗಳನ್ನು ಕಳೆದುಕೊಂಡರೂ ತಾವು ಸ್ವಾತಂತ್ರ್ಯ, ಸಮಾನತೆಗಳುಳ್ಳ ರಾಮರಾಜ್ಯದಲ್ಲಿ ಬದುಕಿದ್ದೇವೆ ಎನ್ನುವ ಭ್ರಮೆಯಲ್ಲಿ ನಾಶವಾಗಿದ್ದು ಈ ಯುಗದ ಭೀಕರ ದುರಂತ.

ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್, ಇಟಲಿಯಲ್ಲಿ ಬೆನಿಟೋ ಮುಸೋಲಿನಿ ಮತ್ತು ರಶಿಯಾದಲ್ಲಿ ಜೋಸೆಫ್ ಸ್ಟಾಲಿನ್ ಇವರುಗಳು ವ್ಯಕ್ತಿಗಿಂತ ಪಕ್ಷ, ಸಿದ್ಧಾಂತ ಹಾಗೂ ರಾಷ್ಟ್ರಗಳು ಸಾರ್ವಭೌಮವೆನ್ನುವ ಹೆಸರಿನಲ್ಲಿ ಪ್ರಜೆಗಳ ಎಲ್ಲಾ ನಾಗರಿಕ ಸ್ವಾತಂತ್ರ್ಯಗಳನ್ನು, ಮಾನವಹಕ್ಕುಗಳನ್ನು ತುಳಿದುಹಾಕಿದರು. ಅವರಲ್ಲೂ ಎಲ್ಲಾ ಬಗೆಯ ಶೋಷಣೆ ಹಾಗೂ ಅಸಮಾನತೆಯನ್ನು ಹೋಗಲಾಡಿಸುವ ಆದರ್ಶವಿಟ್ಟುಕೊಂಡ ಕಮ್ಯೂನಿಸ್ಟ್ ಸಿದ್ಧಾಂತದ ತಳಪಾಯದ ಮೇಲೆ ನಡೆದ ರಶಿಯಾದ ಕ್ರಾಂತಿ ಭವಿಷ್ಯದಲ್ಲಿ ಹಿಂಸಾಪರವಾದ ಸರ್ವಾಧಿಕಾರಕ್ಕೆ ಎಡೆಮಾಡಿಕೊಡುತ್ತದೆಯೆಂದು ಯಾರೂ ನಂಬಿರಲಿಲ್ಲ.

ಲೆನಿನ್‌ನ ನೇತೃತ್ವದಲ್ಲಿ ಬೋಲ್‌ಶೇವಿಕ್ ಕ್ರಾಂತಿ ನಡೆದು ರಶಿಯಾದ ಸಮಾಜ ವಿಶ್ವದ ಮೊದಲ ಆಧುನಿಕ ಕಮ್ಯೂನಿಸ್ಟ್ ಸಮಾಜವಾಗುತ್ತದೆ ಎಂದು ಬಹುಜನರು ಕನಸು ಕಂಡಿದ್ದರು. ಲೆನಿನ್‌ನ ಅನಿರೀಕ್ಷಿತ ಸಾವಿನ ನಂತರದ ಅಧಿಕಾರಕ್ಕಾಗಿ ನಡೆದ ತಿಕ್ಕಾಟದಲ್ಲಿ ಗೆದ್ದ ಸ್ಟಾಲಿನ್ ಒತ್ತಾಯ, ಹಿಂಸೆ ಇವುಗಳ ಮೂಲಕವಾದರೂ ಸರಿಯೇ ಸಮಾಜವಾದಿ ಅಭಿವೃದ್ಧಿಶೀಲ ರಶಿಯಾವನ್ನು ಕಟ್ಟುತ್ತೇನೆ ಎಂದು ಹೊರಟವನು ಕಟ್ಟಿದ್ದು ಮಾತ್ರ ಅತ್ಯಂತ ಪ್ರಬಲ ಪಾರ್ಟಿಯನ್ನು, ಅದರ ಬಂಟನಾದ ರಾಕ್ಷಸಿಸ್ವರೂಪಿ ಅಧಿಕಾರಶಾಹಿಯನ್ನು ಮತ್ತು ಲಕ್ಷಗಟ್ಟಲೆ ಅಮಾಯಕರನ್ನು ಮಾನವ ನಾಗರಿಕತೆ ಕಲ್ಪಿಸಿಕೊಳ್ಳಲಾಗದಂಥ ಹಿಂಸೆಗೆ ಒಳಪಡಿಸಿದ ನರಕಗಳಾದ ಲೇಬರ್ ಕ್ಯಾಂಪ್ ಗಳೆಂದು ಕರೆದ ಸೆರೆಮನೆಗಳನ್ನು. ವರ್ಗಗಳೇ ಇಲ್ಲದ ಸಂಪೂರ್ಣ ಸಮಾನತೆಯನ್ನು ಸಾರಿದ್ದ ಸಿದ್ಧಾಂತವನ್ನು ತನ್ನ ಸರ್ವಾಧಿಕಾರಿ ವ್ಯಕ್ತಿತ್ವದ ಸಮರ್ಥನೆಗೆ ಬಳಸಿಕೊಂಡು ತನ್ನ ಸುತ್ತಲೂ, ಬಲುಕ್ರೂರವಾದ ಅಧಿಕಾರ ಕೇಂದ್ರವನ್ನು ಕಟ್ಟಿಕೊಂಡ. ಸಮಾನತೆಯ ಸಿದ್ಧಾಂತಗಳು ಅಸಮಾನತೆಯನ್ನು, ವರ್ಗವಿನಾಶದ ಹೋರಾಟಗಳು ಹೊಸ ಬಲಿಷ್ಟ ವರ್ಗವನ್ನು ಸೃಷ್ಟಿಸಿದ ದುರಂತ ವ್ಯಂಗ್ಯವನ್ನು ಕಂಡ ಜಗತ್ತಿನ ಚಿಂತಕರು, ಬರಹಗಾರರು ರಾಜಕೀಯ ಸಿದ್ಧಾಂತಗಳಲ್ಲಿ ನಂಬಿಕೆಯನ್ನೇ ಕಳೆದುಕೊಂಡು ತಬ್ಬಲಿತನ ಅನುಭವಿಸಿದರು.

ಆದರೆ ಒಬ್ಬ ಬರಹಗಾರ ತನ್ನ ಕಾಲದ ಈ ರಾಜಕೀಯ ದುಃಸ್ವಪ್ನಗಳಿಗೆ, ಅಮಾಯಕ ಪ್ರಜೆಗಳ ಹೇಳಲಾಗದ ಅಳಲುಗಳಿಗೆ ತನ್ನ ತೀಕ್ಷ್ಣ ವಿಡಂಬನೆ, ಅಪೂರ್ವ ಒಳನೋಟಗಳುಳ್ಳ ಕಲ್ಪನಾಶಕ್ತಿಯಿಂದ ಶಾಶ್ವತವಾದ ಸಾಹಿತ್ಯದ ರೂಪವನ್ನು ಕೊಟ್ಟ. ಅವನು ಬರೆದ ಕಾದಂಬರಿಗಳು ತಮ್ಮ ಕಾಲದ ಘೋರವಾದ ರಾಜಕೀಯದ ಹಿಂಸೆಯನ್ನು, ಪಲ್ಲಟಗಳನ್ನು ಅನ್ಯೋಕ್ತಿ (allegory) ವಿಧಾನದ ಮೂಲಕ ವಿಡಂಬಿಸಿ ಹೇಳಿದವು.

೧೯೪೫ರಲ್ಲಿ ‘ಎನಿಮಲ್ ಫಾರ್ಮ್’ ಎನ್ನುವ ಚಿಕ್ಕ ಗಾತ್ರದ, ಅದ್ಭುತವಾದ ಧ್ವನಿಪೂರ್ಣತೆ ಇರುವ ಕಾದಂಬರಿಯನ್ನು ಬರೆದ ಜಾರ್ಜ್ ಆರ್‌ವೆಲ್‌ನೆ ಈ ಬರಹಗಾರ. ತನ್ನ ಬದುಕಿನಲ್ಲೂ, ಬರಹದಲ್ಲೂ ತಾನು ಹುಟ್ಟಿದ ಇಂಗೆಂಡ್‌ನ ಸಾಮ್ರಾಜ್ಯಶಾಹಿಯನ್ನು ತೀವ್ರವಾಗಿ ವಿರೋಧಿಸುತ್ತ, ಅತ್ಯಂತ ಗಟ್ಟಿಯಾದ ಪಾರದರ್ಶಕವಾದ ಸುಂದರ ಗದ್ಯದಲ್ಲಿ ಬರೆದ ಆರ್‌ವೆಲ್ ಅವನ ಕಾಲದ ಶ್ರೇಷ್ಠ ರಾಜಕೀಯ ಬರಹಗಾರ ಮಾತ್ರನಲ್ಲ. ತನ್ನ ‘೧೯೮೪’ ಎನ್ನುವ ಕಾದಂಬರಿಯಲ್ಲಿ ಭವಿಷ್ಯದಲ್ಲಿ ಹುಟ್ಟಲಿರುವ ಸರ್ವಾಧಿಕಾರಿ ಸಮಾಜಗಳ ಭೀಭತ್ಸ ಸ್ವರೂಪವನ್ನು ಖಚಿತವಾಗಿ ಕಲ್ಪಿಸಿ ಬರೆದ.

‘ಎನಿಮಲ್ ಫಾರ್ಮ್’ ಕೃತಿಯನ್ನು ಆತ ‘fairy tale’ ಎಂದು ಕರೆದಿದ್ದರೂ ಅದು ತನ್ನ ಎಲ್ಲಾ ಮುಖ್ಯ ಘಟನೆಗಳನ್ನು, ಪಾತ್ರಗಳನ್ನು ಇಪ್ಪತ್ತನೆ ಶತಮಾನದ ರಾಜಕೀಯವನ್ನು ಸಂಕೇತಿಸುವ ವಿನ್ಯಾಸವುಳ್ಳ ಅನ್ಯೋಕ್ತಿ ಕಥನ. ಮಕ್ಕಳಿಗೆ ಹೇಳಬಹುದಾದ ಪ್ರಾಣಿಗಳ ಜಗತ್ತಿನ ಈ ಕಾದಂಬರಿ ತನ್ನ ಸರಳವಾದ ನಿರೂಪಣೆಯ ಮೂಲಕವೇ ಸಂಕೀರ್ಣವಾದ ಸತ್ಯಗಳನ್ನು ಹೇಳುತ್ತದೆ. ಕತೆ ನಡೆಯುವುದು, ಮೇನರ್ ಫಾರ್ಮ್ ಎನ್ನುವ ಪ್ರಾಣಿಗಳ ಫಾರ್ಮ್ ಒಂದರಲ್ಲಿ. ಅದರ ಒಡೆಯನಾದ ಜೋನ್ಸ್ ಎನ್ನುವ ಬೇಜವಾಬ್ದಾರಿ ಸ್ವಭಾವದ ಕುಡುಕನ ಕಿರುಕುಳದಿಂದ ರೋಸಿಹೋಗಿದ್ದ ಪ್ರಾಣಿಗಳಿಗೆ ವೃದ್ಧ ಮೇಜರ್ ಎನ್ನುವ ಹಂದಿ ಪ್ರಾಣಿಗಳ ಸಮಾನತೆಯ ಸಿದ್ಧಾಂತವನ್ನು ಪ್ರಾಣಿಪ್ರಭುತ್ವದ ತತ್ವಗಳನ್ನು ಹಾಗೂ ಎಲ್ಲಕ್ಕೂ ಮಿಗಿಲಾಗಿ ಮನುಷ್ಯನನ್ನು ಹೊರಹಾಕುವ ಅಗತ್ಯವನ್ನು ಬೋಧಿಸಿ, ಅವರಿಗೆ ಇಂಗ್ಲೆಂಡ್‌ನ ಪ್ರಾಣಿಗಳು ಎನ್ನುವ ಪ್ರಾಣಿಗೀತೆಯನ್ನು ಹೇಳಿಕೊಟ್ಟು ಕೆಲವು ದಿನಗಳಲ್ಲಿ ಪ್ರಾಣಬಿಡುತ್ತದೆ. ಆ ಕನಸು ತೀರಾ ಅನಿರೀಕ್ಷಿತವಾಗಿ ನನಸಾಗುತ್ತದೆ. ಒಂದು ದಿನ ಕುಡುಕ ಜೋನ್ಸ್‌ನನ್ನು ಅವನ ಪರಿವಾರವನ್ನು ಪ್ರಾಣಿಗಳು ತಿವಿದು ತಳ್ಳಿ ಹೊರಹಾಕಿ ಇನ್ನು ಮೇಲೆ ಮೇನರ್ ಫಾರ್ಮ್ ಆಗಿದ್ದುದು ಎನಿಮಲ್ ಫಾರ್ಮ್ ಆಯಿತೆಂದು ಘೋಷಿಸಿ ಪ್ರಾಣಿಪ್ರಭುತ್ವವನ್ನು ಅಸ್ತಿತ್ವಕ್ಕೆ ತರುತ್ತವೆ. ಮಾನವನಿಂದ ಮುಕ್ತರಾದ ಸಂಭ್ರಮದಲ್ಲಿ ಸಮಾನತೆ ಹಾಗೂ ಸಹಕಾರಗಳ ಆದರ್ಶ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡುತ್ತವೆ. ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿಶಾಲಿಗಳಾದ ಹಂದಿಗಳು ತಕ್ಷಣವೇ ನೇತಾರರಾಗಿ ಪ್ರಾಣಿಸಿದ್ಧಾಂತ (animalism)ದ ತತ್ವಗಳನ್ನು ರೂಪಿಸಿ, ಪ್ರಾಣಿಪ್ರಭುತ್ವದ ಸಂವಿಧಾನವನ್ನು ರಚಿಸುತ್ತವೆ. ಫಾರ್ಮ್‌ನ ಗೋಡೆಯ ಮೇಲೆ ಬರೆಯಲಾಗುವ ಏಳು ಕಟ್ಟಳೆಗಳು (seven commandments) ಈ ಸಿದ್ಧಾಂತದ ಪ್ರಣಾಳಿಕೆಗಳಾಗಿವೆ. ಅವುಗಳಲ್ಲಿ ಪ್ರಧಾನವೆಂದರೆ ಎಲ್ಲಾ ಪ್ರಾಣಿಗಳು ಸಮಾನ, ನಾಲ್ಕು ಕಾಲಿನ ಮೇಲೆ ನಡೆಯುವ ಪ್ರಾಣಿಗಳು ಒಳ್ಳೆಯವು ಎರಡು ಕಾಲಿನ ಮೇಲೆ ನಡೆಯುವವು (ಮನುಷ್ಯರು) ಕೆಟ್ಟವರು, ಯಾವ ಪ್ರಾಣಿಯೂ ಮದ್ಯವನ್ನು ಕುಡಿಯಬಾರದು ಇತ್ಯಾದಿಗಳಿವೆ. ಬಹುಪಾಲು ಪ್ರಾಣಿಗಳಿಗೆ ಓದು, ಬರಹ ಬರುವುದಿಲ್ಲವಾದ್ದರಿಂದ ಈ ಸೂತ್ರಗಳನ್ನು ಬಾಯಿಪಾಠ ಮಾಡಿಕೊಳ್ಳುತ್ತವೆ.

ಫಾರ್ಮ್‌ನ ಎಲ್ಲಾ ಕೆಲಸಗಳನ್ನು ಮೊದಲಿಗಿಂತ ಶ್ರಮ ಹಾಗೂ ಶ್ರದ್ಧೆಗಳಿಂದ ಮಾಡುತ್ತ ಅದನ್ನು ಸಮೃದ್ಧಗೊಳಿಸಿ ಪ್ರಾಣಿಗಳು ತಮ್ಮ ಸ್ವಾತಂತ್ರ್ಯದ ಬಗ್ಗೆ ಅಭಿಮಾನಪಡುತ್ತವೆ. ಆದರೆ ಈ ಆದರ್ಶ ಪ್ರಜಾಪ್ರಭುತ್ವಕ್ಕೆ ಅದರ ಹುಟ್ಟಿನಿಂದಲೇ ಕಂಟಕಪ್ರಾಯವಾಗಿ ಬೆಳೆಯುವುದೆಂದರೆ ನಾಯಕತ್ವಕ್ಕಾಗಿ ನೆಪೋಲಿಯನ್ ಮತ್ತು ಸ್ನೋಬಾಲ್ ಎನ್ನುವ ಹಂದಿಗಳ ಮಧ್ಯದ ಪೈಪೋಟಿ. ಸ್ಟಾಲಿನ್ ಹಾಗೂ ಟ್ರಾಟ್‌ಸ್ಕಿಯವರನ್ನು ನೆನಪು ತರುವ ಈ ಪೈಪೋಟಿಯಲ್ಲಿ ಸ್ನೋಬಾಲ್ ಇಡೀ ಫಾರ್ಮ್ ಅನ್ನು ಯಾಂತ್ರೀಕರಣಗೊಳಿಸಿ, ಅಲ್ಲಿ ಒಂದು ಗಾಳಿಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಅವುಗಳ ಮೂಲಕ ಪ್ರಾಣಿಗಳ ಬದುಕಿಗೆ ಆರಾಮವನ್ನು ತರುವ ಧೋರಣೆಯುಳ್ಳವನು. ನೆಪೋಲಿಯನ್ ಮಾತ್ರ ತನ್ನ ವೈಯಕ್ತಿಕ ವರ್ಚಸ್ಸು ಹಾಗೂ ಪ್ರಾಣಿಗಳ ಮೇಲೆ ಬೆದರಿಕೆಯಿಂದಾದರೂ ಹಿಡಿತ ಇಟ್ಟುಕೊಳ್ಳುವ ಉದ್ದೇಶವುಳ್ಳವನು. ಅದಕ್ಕಾಗಿ ಆಗಲೇ ಫಾರ್ಮ್‌ನಲ್ಲಿ ಹುಟ್ಟಿದ ನಾಯಿಮರಿಗಳನ್ನು ಯಾರಿಗೂ ಗೊತ್ತಾಗದಂತೆ ಪ್ರತ್ಯೇಕವಾಗಿ ಬೆಳೆಸಿ ಅವುಗಳನ್ನು ಅತ್ಯಂತ ಹಿಂಸ್ರಪಶುಗಳನ್ನಾಗಿ ತನ್ನ ಬೆಂಗಾವಲಿಗೆ ಇಟ್ಟುಕೊಂಡಿದ್ದಾನೆ. ವಿಶೇಷವೆಂದರೆ ಶ್ರಮದ ಎಲ್ಲಾ ಕೆಲಸಗಳನ್ನು ಉಳಿದ ಪ್ರಾಣಿಗಳು ಮಾಡಿದರೆ ಕ್ರಮೇಣವಾಗಿ ಹಂದಿಗಳು ಕೇವಲ ಬೌದ್ಧಿಕ ಕೆಲಸಗಳನ್ನು ನಿರ್ವಹಣೆ ಹಾಗೂ ಸೈದ್ಧಾಂತಿಕ ಬೋಧನೆಯ ಕೆಲಸವನ್ನು ಮಾಡುತ್ತ ಬುದ್ಧಿಜೀವಿ ವರ್ಗವಾಗಿ ಹೆಚ್ಚಿನ ಸವಲತ್ತು ಹಾಗೂ ಅಧಿಕಾರಗಳನ್ನು ಕಬಳಿಸಿಕೊಳ್ಳುತ್ತವೆ. ಈ ಮಧ್ಯ ಪ್ರಾಣಿಗಳು ಮಾಡಿದ ಆರ್ಥಿಕ ಪ್ರಗತಿ ಹಾಗೂ ಗಾಳಿಯಂತ್ರದ ಪ್ರಗತಿಯಿಂದ ಆತಂಕದಲ್ಲಿರುವ ಜೋನ್ಸ್ ಮತ್ತು ಅವನ ಸಂಗಡಿಗರು ಫಾರ್ಮಿನ ಮೇಲೆ ದಾಳಿ ಮಾಡುತ್ತಾರೆ. ಆದರೆ ಸ್ನೋಬಾಲ್‌ನ ಧೈರ್ಯ ಹಾಗೂ ಇತರ ಪ್ರಾಣಿಗಳ ಹೋರಾಟದಿಂದಾಗಿ ಈ ಮೊದಲ ಕಾಳಗದಲ್ಲಿ ಪ್ರಾಣಿಗಳೇ ಜಯಸಾಧಿಸುತ್ತವೆ. ಸ್ನೋಬಾಲ್‌ನಿಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ. ದಾಳಿಯಲ್ಲಿ ಮುರಿದುಬಿದ್ದ ಗಾಳಿಯಂತ್ರದ ಕಟ್ಟಡವನ್ನು ಮತ್ತೆ ಪ್ರಾಣಿಗಳು ಕಟ್ಟತೊಡಗುತ್ತವೆ. ಹೆಚ್ಚಿನ ಶ್ರಮ, ಆಹಾರದ ಕೊರತೆ ಇವೆಲ್ಲವುಗಳನ್ನೂ ಸಹಿಸಿಕೊಂಡು ಪ್ರಾಣಿಪ್ರಭುತ್ವದ ಬಗೆಗಿನ ಹೆಮ್ಮೆಯಿಂದಾಗಿ ಪ್ರಾಣಿಗಳು ಜೀವನ ಸಾಗಿಸುತ್ತವೆ. ಈ ಅಮಾಯಕ ವಿನೀತ ಪ್ರಾಣಿಗಳಲ್ಲಿ ಮುಖ್ಯರಾದವರು ಬಾಕ್ಸರ್ ಮತ್ತು ಕ್ಲಾವರ್ ಬಲಶಾಲಿ ಕುದುರೆಗಳು. ಅದರಲ್ಲೂ ಬಾಕ್ಸರ್‌ನಂತೂ ಹೆಚ್ಚು ಕೆಲಸ; ನಾಯಕನಿಗೆ ಸಂಪೂರ್ಣ ವಿಧೇಯತೆಯ ಪಾತ್ರವನ್ನು ವ್ರತದಂತೆ ಪಾಲಿಸುತ್ತಾನೆ.

ಮತ್ತೆ ಗಾಳಿಯಂತ್ರದ ಪ್ರಗತಿಯಿಂದಾಗಿ ಸ್ನೋಬಾಲ್ ವರ್ಚಸ್ಸು ಹೆಚ್ಚಾಗಿದ್ದನ್ನು ಸಹಿಸದ ನೆಪೋಲಿಯನ್ ತನ್ನ ಬೆಂಗಾವಲಿನ ಕ್ರೂರ ನಾಯಿಗಳಿಂದ ದಾಳಿ ಮಾಡಿಸಿ ಸ್ನೋ ಬಾಲ್‌ನನ್ನು ಫಾರ್ಮ್‌ನಿಂದ ಹೊಡೆದೋಡಿಸಿ ತಾನೇ ನಾಯಕನಾಗುತ್ತಾನೆ. ಪ್ರಾಣಿಗಳ ಸಮಾನತೆಯ ಆದರ್ಶದ ಪ್ರಜಾಪ್ರಭುತ್ವ ಹೀಗೆ ಸರ್ವಾಧಿಕಾರದತ್ತ ಹೊರಳತೊಡಗುತ್ತದೆ. ಹಿಟ್ಲರ್‌ನ ಪ್ರಚಾರ ಮಂತ್ರಿಯಾಗಿದ್ದ ಗೋಬೆಲ್ಸ್‌ನನ್ನೂ ಮೀರುವ ರೀತಿಯಲ್ಲಿ ಸ್ಕ್ವೀಲರ್ ಎನ್ನುವ ಹಂದಿ ನೆಪೋಲಿಯನ್‌ನ ಪರವಾಗಿ ಹಾಗೂ ಓಡಿಹೋದ ಸ್ನೋ ಬಾಲ್‌ನ ವಿರುದ್ಧ ಪ್ರಚಾರ ಮಾಡುತ್ತಾನೆ. ಕ್ರಮೇಣವಾಗಿ ಪ್ರಾಣಿಪ್ರಭುತ್ವದಲ್ಲಿ ಶ್ರಮಜೀವಿ ಪ್ರಾಣಿಗಳ ವರ್ಗ ಹಾಗೂ ನೆಪೋಲಿಯನ್‌ನ ಸುತ್ತಲಿನ ಬುದ್ಧಿಜೀವಿ ವರ್ಗಗಳು ಪ್ರತ್ಯೇಕಗೊಂಡು ಪ್ರಾಣಿಗಳು ಆತಂಕ, ಹೆದರಿಕೆ, ಭೀತಿ ಮತ್ತು ಭ್ರಮೆಗಳಲ್ಲಿ ಬದುಕಲಾರಂಭಿಸುತ್ತವೆ. ಆರ್‌ವೆಲ್ ತನ್ನ ಅದ್ಭುತವಾದ ವಿಡಂಬನಾಶಕ್ತಿಯಿಂದ ಫಾರ್ಮ್‌ನಲ್ಲಿ ಆಗುವ ಪಲ್ಲಟಗಳನ್ನು ವ್ಯಂಗ್ಯದಿಂದ ವರ್ಣಿಸುತ್ತಾನೆ. ಬರಬರುತ್ತಾ ಹಂದಿಗಳು ಮನುಷ್ಯರ ವರ್ತನೆಗಳನ್ನು ಅನುಕರಿಸುತ್ತಾ ಸಹ-ಪ್ರಾಣಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾ ನೆಪೋಲಿಯನ್‌ನ ಸರ್ವಾಧಿಕಾರವನ್ನು ಸಮರ್ಥಿಸಲಾರಂಭಿಸುತ್ತವೆ.

ಎಷ್ಟರಮಟ್ಟಿಗೆಯೆಂದರೆ ಕ್ರಮೇಣವಾಗಿ ಗೋಡೆಯ ಮೇಲೆ ಬರೆದಿದ್ದ ಏಳು ಕಟ್ಟಳೆಗಳನ್ನು ಉಳಿದ ಪ್ರಾಣಿಗಳಿಗೆ ಗೊತ್ತಾಗದಂತೆ ತಿದ್ದುಪಡಿ ಮಾಡತೊಡಗುತ್ತವೆ. ಉದಾಹರಣೆಗೆ ನೆಪೋಲಿಯನ್ ಮತ್ತು ಅವನ ಪ್ರಭಾವಿ ಹಂದಿ ಗೆಳೆಯರು ಮದ್ಯವನ್ನು ಕುಡಿಯಲಾರಂಭಿಸಿದ ಮೇಲೆ ಯಾವ ಪ್ರಾಣಿಯೂ (ಅತಿಯಾಗಿ) ಮದ್ಯವನ್ನು ಕುಡಿಯಬಾರದು ಎಂದು ತಿದ್ದುಪಡಿಯಾಗುತ್ತದೆ. ಫಾರ್ಮಿನ ಉತ್ಪಾದನೆಗಳನ್ನು ಮಾರಾಟ ಮಾಡುವ ಹೆಸರಿನಲ್ಲಿ ಸುತ್ತಮುತ್ತಲಿನ ಫಾರ್ಮ್‌ಗಳ ಮಾಲೀಕರ ಜೊತೆಗೆ ಸ್ನೇಹ ಬೆಳೆಸುವ ನೆಪೋಲಿಯನ್ ಅವರನ್ನು ಫಾರ್ಮಿಗೆ ಆಹ್ವಾನಿಸಿ ಅವರ ಜೊತೆಗೆ ಮದ್ಯ ಮತ್ತು ಇಸ್ಪೀಟುಗಳ ಪಾರ್ಟಿಗಳನ್ನು ನಡೆಸುತ್ತಾನೆ. ಇತ್ತ ಫಾರ್ಮ್‌ನ ಇತರ ಪ್ರಾಣಿಗಳ ಬದುಕು ಅವಿರತ ಶ್ರಮ, ಹಸಿವು, ಚಳಿ ಇವುಗಳಿಂದ ದುರ್ಭರವಾಗುತ್ತ ಹೋಗುತ್ತದೆ. ಕೆಲಸ ಮಾಡುತ್ತಾ ಗಾಯಗೊಂಡ ಬಾಕ್ಸರ್‌ನನ್ನು ಕಟುಕರಿಗೆ ಮಾರಿಬಂದ ಹಣದಲ್ಲಿ ಹಂದಿಗಳು ಮದ್ಯದ ಮೇಜವಾನಿ ಮಾಡುತ್ತವೆ. ವರ್ಷಗಳು ಕಳೆದಂತೆ ಪ್ರಾಣಿಗಳಿಗೆ ಪ್ರಾಣಿಪ್ರಭುತ್ವದ ಸೂತ್ರಗಳೇ ಮರೆತುಹೋಗುತ್ತವೆ. ಕೊನೆಗೆ ಒಂದುದಿನ ಹಂದಿಗಳು ಮನುಷ್ಯರಂತೆ ಬಟ್ಟೆ ಧರಿಸಿ ಎರಡು ಕಾಲುಗಳ ಮೇಲೆ ನಡೆಯತೊಡಗುತ್ತವೆ. ಆಗ ಪ್ರಾಣಿಪ್ರಭುತ್ವದ ಕೊನೆಯ ಪ್ರಣಾಳಿಕೆಗೆ ತಿದ್ದುಪಡಿಯಾಗುತ್ತದೆ. ಎಲ್ಲಾ ಪ್ರಾಣಿಗಳು ಸಮಾನರು; ಆದರೆ ಕೆಲವು ಪ್ರಾಣಿಗಳು ಇತರರಿಗಿಂತ ಹೆಚ್ಚು ಸಮಾನರು.  ವ್ಯವಸ್ಥಿತ ಪ್ರಚಾರ, ಸಿದ್ಧಾಂತದ ಭ್ರಮೆ ಹಾಗೂ ಹಿಂಸೆಯ ಬೆದರಿಕೆಯಿಂದ, ಎನಿಮಲ್ ಫಾರ್ಮ್ ಸರ್ವಾಧಿಕಾರಿ ಪ್ರಭುತ್ವವಾಗಿ ಕೊನೆಗೊಳ್ಳುತ್ತದೆ.

ಸಮಾನತೆಯ ಆದರ್ಶಗಳನ್ನು ಅವುಗಳನ್ನು ನಂಬಿ ಕಟ್ಟಿಕೊಂಡಿದ್ದ ಸಿದ್ಧಾಂತಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು, ರಾಜಕೀಯ ವ್ಯವಸ್ಥೆಯೊಂದು ತನ್ನ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಳೆದುಕೊಂಡು ಸರ್ವಾಧಿಕಾರಿ ವ್ಯವಸ್ಥೆಯಾಗುವ ದುರಂತವನ್ನು ಈ ಕಾದಂಬರಿ ವಿಡಂಬಿಸಿ ವರ್ಣಿಸುವ ರೀತಿ ಅದ್ವಿತೀಯವಾಗಿದೆ. ಇಪ್ಪತ್ತನೇ ಶತಮಾನದ ಕ್ರೂರ ರಾಜಕೀಯ ಪ್ರಭುತ್ವಗಳ ವಾಸ್ತವಗಳನ್ನು ಪ್ರಾಣಿಗಳ ಕತೆಯ ಮೂಲಕ ಆರ್‌ವೆಲ್ ವಿವರಿಸುತ್ತಾನೆ. ಅಷ್ಟು ಮಾತ್ರವಲ್ಲ, ನಮ್ಮ ಇಂದಿನ ರಾಜಕೀಯವನ್ನು ಸಂಕೇತಿಸಬಲ್ಲ ಶಕ್ತಿ ಈ ಕಾದಂಬರಿಗಿದೆ. ದಮನಕಾರಿ ವರ್ಗವನ್ನು ಹೊರಹಾಕಿ ಕ್ರಾಂತಿಯ ಹೆಸರಲ್ಲಿ ಅಧಿಕಾರಕ್ಕೆ ಬಂದ ವರ್ಗವೊಂದು ತಾನೇ ಸರ್ವಾಧಿಕಾರಿಯಾಗಿ ಪ್ರಜೆಗಳ ಪೀಡಕನಾಗುವುದರ ದುರಂತ ಈ ಕಾದಂಬರಿಯಲ್ಲಿದೆ. ಈ ಕೃತಿ ಒಂದು ಮಾಯಾಕನ್ನಡಿಯಂತೆ ಎಲ್ಲಾ ಭ್ರಷ್ಟ, ಅಧಿಕಾರಕೇಂದ್ರಿತ ವ್ಯವಸ್ಥೆಗಳನ್ನು, ಸಿದ್ಧಾಂತಗಳನ್ನೂ ವಿಡಂಬಿಸುತ್ತದೆ.

ಮೇರಿ ಶೆಲಿಯ `ಫ್ರ್ಯಾಂಕಿನಸ್ಟೈನ್’

ಹತ್ತೊಂಬತ್ತನೆಯ ಶತಮಾನದ ಕ್ರಾಂತಿಕಾರಿ ಚಿಂತಕನಾದ ವಿಲಿಯಮ್ ಗೊಡ್‌ವಿನ್ ಮತ್ತು ಯುರೋಪಿನ ಪ್ರಥಮ ಶ್ರೇಷ್ಠ  ಸ್ತ್ರೀವಾದಿ ಕೃತಿಯನ್ನು ಬರೆದ ಮೇರಿ ವೊಲ್ಸಟನ್ ಕ್ರಾಫ್ಟ್ ದಂಪತಿಗಳ ಮಗಳಾದ ಮೇರಿ ಶೆಲಿ, `ಫ್ರ್ಯಾಂಕಿನಸ್ಟೈನ್’ ಕಾದಂಬರಿಯನ್ನು ಬರೆದಾಗ ಅವಳಿಗೆ ೨೧ ವರ್ಷವೂ ಆಗಿರಲಿಲ್ಲ. ಪ್ರಸಿದ್ಧ ಕವಿ ಪರ‍್ಸಿ ಶೆಲಿಯೊಂದಿಗೆ ಓಡಿಹೋಗಿ ಮದುವೆಯಾದ ಅವಳು ಈ ಕಾದಂಬರಿಯನ್ನು ಬರೆದದ್ದು ‘ಯಾರು ಅತ್ಯಂತ ಭಯಾನಕ ಬರೆಯುತ್ತಾರೆ’ ಎನ್ನುವ ಪಣವನ್ನು ಗೆಲ್ಲುವುದಕ್ಕಾಗಿ. ೧೮ನೇ ಶತಮಾನದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕಾದಂಬರಿ ಪ್ರಕಾರದ ಉದಯವಾದ ನಂತರ ವಾಸ್ತವವಾದಿ ಕಾದಂಬರಿಯೇ ಪ್ರಧಾನ ಮಾದರಿಯಾಯಿತು. ಆದರೆ, ಕಾದಂಬರಿಯ ಉದಯವಾದದ್ದೇ ಆ ಶತಮಾನದಲ್ಲಿ ವಿಸ್ತಾರಗೊಂಡ ಶಿಕ್ಷಿತ, ವಿರಾಮವುಳ್ಳ ಮಧ್ಯಮವರ್ಗದ ಮನರಂಜನೆಗಾಗಿ ಎನ್ನುವುದನ್ನು ಮರೆಯಬಾರದು. ಹೀಗಾಗಿ ಆಗ ಮುನ್ನೆಲೆಗೆ ಬಂದ ಜನಪ್ರಿಯ ಕಾದಂಬರಿ ಪ್ರಕಾರಗಳಲ್ಲಿ ಮುಖ್ಯವಾದದ್ದು ಭಯಾನಕ ಕಾದಂಬರಿ ಅಥವಾ ಗಾಥಿಕ್ ಕಾದಂಬರಿ. ಅನಿರೀಕ್ಷಿತ ತಿರುವುಗಳು ಭಯಾನಕ ಘಟನೆಗಳು ಹಾಗೂ ಭೀಭತ್ಸ ಪಾತ್ರಗಳಿರುವ ಗಾಥಿಕ್ ಕಾದಂಬರಿಯನ್ನು ಬರೆದಿರುವುದರಲ್ಲಿ ಮಹಿಳಾ ಲೇಖಕಿಯರದೇ ಮೇಲುಗೈ ಎನ್ನುವುದು ವಿಶೇಷ.

ಜನಪ್ರಿಯ ಸಂಸ್ಕೃತಿಯ ಒಂದು ಪ್ರಧಾನ ಕಲಾತ್ಮಕ ರೂಪವಾಗಿ ಮತ್ತು ನಾಗರಿಕ ಸಭ್ಯತೆ, ತಾರ್ಕಿಕತೆ ಇವೇ ಮೌಲ್ಯಗಳನ್ನು ನೆಚ್ಚಿಕೊಂಡಿದ್ದ ಆ ಕಾಲದ ಸಂಸ್ಕೃತಿಯ ಇನ್ನೊಂದು ಮುಖದ ಅಭಿವ್ಯಕ್ತಿಯಾಗಿ ಗಾಥಿಕ್ ಕಾದಂಬರಿ ಬೆಳೆಯಿತು. ಸಭ್ಯ ನಾಗರಿಕತೆಯ ಅವ್ಯಕ್ತ ಭಯಗಳು, ಅತೃಪ್ತ ಕಾಮನೆಗಳು ಗಾಥಿಕ್ ಕಾದಂಬರಿಯ ಭೀಭತ್ಸ ಅಂಶಗಳ ಮೂಲಕ ವ್ಯಕ್ತವಾದವು. ಮೇರಿ ಶೆಲಿಯ ಫ್ರ್ಯಾಂಕಿನ್‌ಸ್ಟೈನ್ ಕಾದಂಬರಿ ಜನಪ್ರಿಯ ಪ್ರಕಾರವೊಂದನ್ನು ಗಂಭೀರವಾದ ತಾತ್ವಿಕ ಚಿಂತನೆಗೆ ಬಳಸಿಕೊಳ್ಳುತ್ತದೆ, ಮಾತ್ರವಲ್ಲ ನಮ್ಮ ಇಂದಿನ ಶತಮಾನದ ಅನುಭವಗಳಿಗೂ ಸಂಕೇತವಾಗಬಲ್ಲ ಆಧುನಿಕ ಪುರಾಣವೊಂದನ್ನು ಸೃಷ್ಟಿಸುತ್ತದೆ. ೨೧ ವರ್ಷ ವಯಸ್ಸಿನ ಮೇರಿ ಪಂದ್ಯ ಗೆಲ್ಲಲು ಬರೆದ ಕೃತಿಯ ಜನಪ್ರಿಯತೆ ಎಂಥದ್ದೆಂದರೆ ಅದು ಕನ್ನಡವೂ ಸೇರಿದಂತೆ ಜಗತ್ತಿನ ಹಲವು ಭಾಷೆಗಳಿಗೆ ಅನುವಾದವಾಗಿದೆ. ಅದನ್ನು ಆಧರಿಸಿ ೩೭ ಚಲನಚಿತ್ರಗಳು ಬಂದಿವೆ. ‘ಫ್ರ್ಯಾಂಕಿನ್‌ಸ್ಟೈನ್’ ಮತ್ತು ‘ಫ್ರ್ಯಾಂಕಿನ್‌ಸ್ಟೈನ್ ಮಾನ್‌ಸ್ಟರ್’ (Frankinstein Monster) ಎನ್ನುವ ಪದಗಳು ಇಂಗ್ಲಿಷ್ ಭಾಷೆಯ ಶಬ್ದಕೋಶಕ್ಕೆ ಸೇರಿಕೊಂಡಿವೆ.

ಕಾದಂಬರಿಯ  ವಿಚಿತ್ರ, ರೋಚಕ ಕಥೆಯನ್ನು ನಮಗೆ ಹೇಳುವವನು ಇಂಗ್ಲೆಂಡ್‌ನಿಂದ ಹೊರಟು ಉತ್ತರ ಧ್ರುವದ ರಹಸ್ಯಗಳನ್ನು ಭೇದಿಸಲು ಹೊರಟ ವಾಲ್ಟನ್ ಎನ್ನುವ ಸಾಹಸಿ. ಹಿಮಗಡ್ಡೆಗಳ ನಡುವೆ ಅವನ ಹಡಗು ಸಿಲುಕಿದಾಗ ಒಂದು ವಿಚಿತ್ರವನ್ನು ಅವನು ಕಾಣುತ್ತಾನೆ. ವಿಚಿತ್ರ ರೂಪದ ದೈತ್ಯನೊಬ್ಬ ಹಿಮತೆಪ್ಪವೊಂದನ್ನು ಏರಿ ವೇಗವಾಗಿ ಹೋಗುತ್ತಿರುತ್ತಾನೆ. ನಂತರ ಅಂಥದ್ದೇ ತೆಪ್ಪವೊಂದರಲ್ಲಿ ಅವನನ್ನು ಹಿಂಬಾಲಿಸಿ ಬಂದವನೊಬ್ಬ ಬಸವಳಿದು ಪ್ರಜ್ಞೆತಪ್ಪಿ ವಾಲ್ಟನ್‌ನ ಆಶ್ರಯ ಪಡೆಯುತ್ತಾನೆ. ಇವನೇ ಕಾದಂಬರಿಯ ದುರಂತ ನಾಯಕನಾದ ಫ್ರ್ಯಾಂಕಿನ್‌ಸ್ಟೈನ್. ಅವನು ವಾಲ್ಟನ್‌ನಿಗೆ ಹೇಳುವ ಕತೆಯೇ ಈ ಕಾದಂಬರಿ. ಸ್ವಿಟ್ಜರ್‌ಲೆಂಡ್‌ನ ವಿಯೆನ್ನಾ ನಗರದ ಶ್ರೀಮಂತ ಕುಟುಂಬವೊಂದರಲ್ಲಿ ಹುಟ್ಟಿದ ಅವನು ಒಂದು ಸಾರಿ ಸಿಡಿಲಿನ ಪ್ರಚಂಡ ರೂಪವನ್ನು ನೋಡಿ, ಇಂಥ ಸಂಗತಿಗಳ ಹಿಂದಿರುವ ಸೃಷ್ಟಿಯ ರಹಸ್ಯಗಳನ್ನು ಅರಿಯಬೇಕೆಂದು ಹಳೆಯ ಕಾಲದಲ್ಲಿ ವೈಜ್ಞಾನಿಕವೆಂದು ಕರೆಯಲಾಗಿದ್ದ ಗ್ರಂಥಗಳನ್ನು ಓದುತ್ತಾನೆ. ಆನಂತರ ಇಂಗೋಲ್‌ಸ್ಟಾಟ್ ವಿಶ್ವವಿದ್ಯಾಲಯದಲ್ಲಿ ಪ್ರಾಥಮಿಕ ವಿದ್ಯಾರ್ಥಿಯಾಗುತ್ತಾನೆ. ಧರ್ಮ ಹಾಗೂ ಸಮಾಜಗಳು ಇಂದಿಗೂ ನಿಷೇಧಿಸಬಯಸುವ ಜೀವದ ಸೃಷ್ಟಿಯ ವೈಜ್ಞಾನಿಕ ವಿಧಾನವನ್ನು ಕಂಡುಹಿಡಿಯಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ತನ್ನ ಪ್ರಯೋಗಶಾಲೆಯಲ್ಲಿ ಒಬ್ಬಂಟಿಯಾಗಿ ತೀವ್ರ ಆವೇಶದಿಂದ ಕೆಲಸ ಮಾಡುತ್ತಾನೆ.

ಫ್ರ್ಯಾಂಕಿನ್‌ಸ್ಟೈನ್‌ಗೆ ಪೂರ್ತಿ ಗೊತ್ತಾಗದಿದ್ದರೂ ಅವನು ಬಯಸುತ್ತಿರುವುದು ಸೃಷ್ಟಿಕರ್ತನಾದ ದೇವರಿಗೆ ಸಮಾನವಾದ ಸೃಷ್ಟಿಕರ್ತನಾಗಲು; ಮನುಷ್ಯಜೀವಿಯನ್ನು ವಿಜ್ಞಾನದ ಮೂಲಕ ಸೃಷ್ಟಿಸಿ, ಸೃಷ್ಟಿಶಕ್ತಿಯ ರಹಸ್ಯವನ್ನು ವಿಜ್ಞಾನದ ಮೂಲಕ ಗೆಲ್ಲಲು; ಮನುಷ್ಯನ ಬುದ್ಧಿಶಕ್ತಿಯ ಮೇಲೆ ಇರುವ ಅಂತಿಮ ಎಲ್ಲೆಯನ್ನು ಮೀರಲು. ಕಾದಂಬರಿಯ ಉಪಶೀರ್ಷಿಕೆಯಲ್ಲಿ ಮೇರಿ ಶೆಲಿ ಅವನನ್ನು ಮಾಡನ್ ಪ್ರೊಮೀಥಿಯಸ್ ಎಂದು ಕರೆದಿದ್ದಾಳೆ. ಗ್ರೀಕ್ ಪುರಾಣ ಕತೆಯಲ್ಲಿ ದೇವರುಗಳು ಮನುಷ್ಯರಿಂದ ಬಚ್ಚಿಟ್ಟಿದ್ದ ಅಗ್ನಿಯನ್ನು ಕದ್ದು ತಂದ ಪ್ರೊಮೀಥಿಯಸ್ ಅವರಿಂದ ಶಾಪ ಪಡೆಯುತ್ತಾನೆ. ಇನ್ನೊಂದು ಪುರಾಣ ಕತೆಯಲ್ಲಿ ಇಕಾರಸ್ ತನ್ನ ತಂದೆಯಾದ ಡೆಡಲಸ್‌ನ ತಂತ್ರಜ್ಞಾನದ ಸಹಾಯದಿಂದ ಹಾರುವುದನ್ನು ಕಲಿತು ತನ್ನ ಅತಿ ಆಕಾಂಕ್ಷೆಯಿಂದ ಸಮುದ್ರದಲ್ಲಿ ಬೀಳುತ್ತಾನೆ. ಜರ್ಮನ್ ಐತಿಹ್ಯವೊಂದನ್ನು ಆಧರಿಸಿ ಕ್ರಿಸ್ಟಫರ್ ಮಾರ್ಲೋವ್ ೧೬ನೇ ಶತಮಾನದಲ್ಲಿ ಬರೆದ ‘ಡಾಕ್ಟರ್ ಫಾಸ್ಟಸ್’ ನಾಟಕದಲ್ಲಿ ಫಾಸ್ಟಸ್ ಜ್ಞಾನ ಹಾಗೂ ಶಕ್ತಿಗಳ ಅಪರಿಮಿತ ಹಂಬಲಕ್ಕಾಗಿ ತನ್ನ ಆತ್ಮವನ್ನು ಸೈತಾನನಿಗೆ ಬರೆದುಕೊಡುತ್ತಾನೆ.. ಈ ಎಲ್ಲಾ ನಾಯಕರುಗಳ ಹಾಗೆ ಫ್ರ್ಯಾಂಕಿನ್‌ಸ್ಟೈನ್ ಕೂಡ ಮನುಷ್ಯನ ಸೃಜನಶೀಲತೆಯ ಮೇಲಿರುವ ನಿರ್ಬಂಧಗಳನ್ನು ಮೀರಲು ಹೋಗಿ ದುರಂತಕ್ಕೆ ಒಳಗಾಗುತ್ತಾನೆ.

ನಿರಂತರ ಪ್ರಯೋಗಗಳಿಂದ ಜೀವದ ರಹಸ್ಯವನ್ನು ಕಂಡುಹಿಡಿಯುತ್ತಾನೆ. ಅದನ್ನು ಸಾಧಿಸುವ ಅವಸರದಲ್ಲಿ ಮೂಳೆ, ಮಾಂಸಗಳನ್ನು ದೈತ್ಯಾಕಾರದಲ್ಲಿ ಜೋಡಿಸಿ ಭೀಭತ್ಸ ರೂಪದ ದೈತ್ಯನೊಬ್ಬನ ಆಕೃತಿಯನ್ನು ರಚಿಸಿ ಅದಕ್ಕೆ ಜೀವ ಕೊಡುತ್ತಾನೆ. ವ್ಯಂಗ್ಯವೆಂದರೆ, ಆ ದೈತ್ಯ ಆತ್ಮನಿಗೆ ಜೀವ ಬಂದು ಅದು ಚಲಿಸತೊಡಗಿದಕೂಡಲೇ ಫ್ರ್ಯಾಂಕಿನ್‌ಸ್ಟೈನ್‌ನಿಗೆ ತನ್ನ ಅಪೂರ್ವ ಸಾಧನೆಯ ಬಗ್ಗೆ ಹೆಮ್ಮೆಯ ಬದಲಾಗಿ ಆ ವಿಕೃತರೂಪಿ ದೈತ್ಯನ ಬಗ್ಗೆ ಅಸಹ್ಯ, ಹೆದರಿಕೆಗಳು ಅನ್ನಿಸುತ್ತದೆ. ತನ್ನ ಸೃಷ್ಟಿಯಾದ ಆ ಜೀವಿಯನ್ನು ತಿರಸ್ಕರಿಸಿ ಅವನನ್ನು ಅನಾಥನ ಹಾಗೆ ಬಿಟ್ಟು ತಾನು ಮಾಡಿದ ಅವೈಜ್ಞಾನಿಕ ಸಾಧನೆಗೆ ಹೆದರಿ ಆರೋಗ್ಯ ಕಳೆದುಕೊಳ್ಳುತ್ತಾನೆ.

ಆದರೆ, ಅವನ ಸೃಷ್ಟಿಯಾದ ದೈತ್ಯನಿಗೆ ಈಗ ಜೀವ ಬಂದಿದೆ. ನಿಧಾನವಾಗಿ ತನ್ನ ಶರೀರದ ಅನುಭವವನ್ನು ಪಡೆದ ಬೈಬಲ್ಲಿನ ಆಡಮ್‌ನಂತೆ, ಹೊಸ ಜಗತ್ತಿನ ಮೊದಲ ಪ್ರಜೆಯಂತೆ ಈ ಭೂಮಿಯ ಅನುಭವಗಳನ್ನು ಪಡೆಯತೊಡಗುತ್ತಾನೆ. ಸಮಾಜದ ಅನ್ಯಾಯದಿಂದಾಗಿ ಕಾಡಿನಲ್ಲಿ ವಾಸ ಮಾಡುತ್ತಿರುವ ಕುಟುಂಬವೊಂದರ ಮನುಷ್ಯಜೀವಿಗಳನ್ನು ಹತ್ತಿರದಿಂದ ನೋಡಿ ಮನುಷ್ಯರ ಬಗ್ಗೆ ಆದರ ಪ್ರೀತಿಗಳನ್ನು ಕಲಿಯುತ್ತಾನೆ. ಅವರನ್ನು ಅಭ್ಯಾಸ ಮಾಡಿ ಭಾಷೆಯನ್ನು ಕಲಿಯುತ್ತಾನೆ. ಓದಲೂ ಕಲಿಯುತ್ತಾನೆ. ಅವರಿಗೆ ಗೊತ್ತಾಗದಂತೆ ಸಹಾಯ ಮಾಡುತ್ತಾನೆ. ಹೆಚ್ಚು ಕಡಿಮೆ ಶಿಕ್ಷಿತ ಮನುಷ್ಯನಂತಾಗುವ ದೈತ್ಯನಿಗೆ ಈಗ ತನ್ನ ಒಬ್ಬಂಟಿತನ ಬಾಧಿಸತೊಡಗುತ್ತದೆ. ಆ ಮನುಷ್ಯಜೀವಿಗಳ ಸಂಗಾತಿಯಾಗಬೇಕೆಂಬ ಹಂಬಲದಿಂದ ಅವರೆದುರು ಪ್ರತ್ಯಕ್ಷನಾಗುತ್ತಾನೆ. ಆದರೆ, ಅವನ ಭೀಭತ್ಸ ಕುರೂಪಿ ಆಕೃತಿಯಿಂದ ಭಯಗೊಂಡ ಅವರು ಅವನನ್ನು ತಿರಸ್ಕರಿಸುತ್ತಾರೆ. ಇದರಿಂದಾಗಿ ದೈತ್ಯನಿಗೆ ಆಗುವ ಮಾನಸಿಕ ಆಘಾತ ಎಷ್ಟು ಪ್ರಬಲವಾಗಿರುತ್ತದೆಯೆಂದರೆ ಮನುಷ್ಯಜೀವಿಗಳ ವಿರುದ್ಧ ಅವನಲ್ಲಿ ಹಗೆಯ ಭಾವನೆ ಹಿಂಸೆಯ ರೂಪ ತಾಳುತ್ತದೆ. ಮನುಷ್ಯನಂತಾಗಿಯೂ, ಮನುಷ್ಯರಿಂದ ಹೇಸಿಗೆ, ತಿರಸ್ಕಾರವನ್ನು ಮಾತ್ರ ಪಡೆಯುವ ಅವನು ತನ್ನ ಸೃಷ್ಟಿಕರ್ತನಾದ ಫ್ರ್ಯಾಂಕಿನ್‌ಸ್ಟೈನ್ ಮೇಲೆಯೇ ತನ್ನ ದ್ವೇಷಸಾಧಿಸತೊಡಗುತ್ತಾನೆ. ತನಗೂ ಅರ್ಥವಾಗದ ಆವೇಶದಲ್ಲಿ ಅವನ ಪುಟ್ಟ ತಮ್ಮನನ್ನು ಕೊಲ್ಲುತ್ತಾನೆ. ಆ ಕೊಲೆಯ ಆರೋಪವು ಕುಟುಂಬದ ಜೊತೆಗೇ ಬೆಳೆದ ಜಸ್ಟಿನ್‌ಳ ಮೇಲೆ ಬರುವಂತೆ ಮಾಡುತ್ತಾನೆ. ಇನ್ನಾರಿಗೆ ಗೊತ್ತಾಗದಿದ್ದರೂ ಇದು ತಾನು ಸೃಷ್ಟಿಸಿದ ದೈತ್ಯನ ಕೆಲಸವೇ ಎಂದು ಶಂಕಿಸುವ ಫ್ರ್ಯಾಂಕಿನ್‌ಸ್ಟೈನ್ ವಿಹ್ವಲನಾಗುತ್ತಾನೆ. ಅಪರಾಧಿ ಭಾವನೆ ಹಾಗೂ ಅಸಹಾಯಕತೆಯಿಂದಾಗಿ ಪದೇಪದೇ ಗಂಭೀರವಾದ ಅನಾರೋಗ್ಯಕ್ಕೀಡಾಗುತ್ತಾನೆ. ಕೊನೆಗೂ ಅವನನ್ನು ಭೇಟಿಯಾಗುವ ದೈತ್ಯ ತನ್ನ ಕತೆಯನ್ನು ಹೇಳಿಕೊಳ್ಳುತ್ತಾನೆ. ತನ್ನನ್ನು ವಿನಾಕಾರಣ ದ್ವೇಷಿಸುವ, ಅಸಹ್ಯಪಟ್ಟು ತಿರಸ್ಕರಿಸುವ ಮನುಷ್ಯರೇ ನಿಜವಾದ ಅಪರಾಧಿಗಳು ಎಂದು ವಾದಿಸುತ್ತಾನೆ. ಅವನ ಹಳಹಳಿಯೆಂದರೆ ಒಬ್ಬಂಟಿತನ. ಈಗ ಅವನ ಕೋರಿಕೆಯೆಂದರೆ ಅವನಿಗಾಗಿ ಫ್ರ್ಯಾಂಕಿನ್‌ಸ್ಟೈನ್ ಒಬ್ಬಳು ಸಂಗಾತಿಯನ್ನು ಸೃಷ್ಟಿಸಬೇಕು. ಹಾಗೆ ಮಾಡಿದರೆ ಅವಳೊಂದಿಗೆ ತಾನು ಮನುಷ್ಯರಿಂದ ದೂರಹೋಗಿ ಬದುಕುತ್ತೇನೆಂದು ಪ್ರಮಾಣ ಮಾಡುತ್ತಾನೆ.

ಕೊಲೆ  ಮಾಡಿದ್ದರೂ ದೈತ್ಯನ ಅಹವಾಲಿನಲ್ಲಿ ಸತ್ಯವಿದೆ. ಆದರೆ ಸೃಷ್ಟಿ ಮಾಡಿದ ಮೇಲೆ ತನ್ನ ಜವಾಬ್ದಾರಿಯಿಂದ ಕೈತೊಳೆದ ಫ್ರ್ಯಾಂಕಿನ್‌ಸ್ಟೈನ್‌ನಿಗೆ  ದೈತ್ಯನ ಬಗ್ಗೆ ಕ್ರೋಧ ಹಾಗೂ ಅಸಹ್ಯದ ಹೊರತಾಗಿ ಏನೂ ಅನ್ನಿಸುವುದಿಲ್ಲ. ಆದರೆ ಅವನಿಂದಾಗಬಹುದಾದ ಅಪಾಯಗಳನ್ನು ತಪ್ಪಿಸಲು ಅವನ ಸಂಗಾತಿಯೊಬ್ಬಳನ್ನು ಸೃಷ್ಟಿಸಲು ಒಪ್ಪಿಕೊಳ್ಳುತ್ತಾನೆ. ಅದಕ್ಕಾಗಿ ಇಂಗ್ಲೆಂಡ್‌ಗೆ ಬಂದು ಮತ್ತೆ ಅಧ್ಯಯನ ಹಾಗೂ ಪ್ರಯೋಗಗಳಲ್ಲಿ ತೊಡಗುತ್ತಾನೆ. ಆದರೆ ಇನ್ನೊಬ್ಬಳು ದೈತ್ಯಳನ್ನು ಸೃಷ್ಟಿಮಾಡುವುದರ ಪರಿಣಾಮಗಳಿಂದ ಹೆದರಿ ಹಾಗೆ ಮಾಡುವುದಿಲ್ಲವೆಂದು ನಿರ್ಧರಿಸುತ್ತಾನೆ. ಇದು ಗೊತ್ತಾದ ದೈತ್ಯ ಅವನ ಜೀವನದ ನೆಮ್ಮದಿಯನ್ನೇ ನಾಶಮಾಡುವ ಪಣತೊಡುತ್ತಾನೆ. ಮೊದಲು ಫ್ರ್ಯಾಂಕಿನ್‌ಸ್ಟೈನ್‌ನ ಜೀವದ ಗೆಳೆಯನನ್ನು, ಆಮೇಲೆ ಅವನ ಮದುವೆಯ ಮೊದಲ ರಾತ್ರಿಯಂದು ಅವನ ಬಾಳ ಸಂಗಾತಿ ಎಲಿಜಬೆತ್‌ಳನ್ನು ಕೊಲ್ಲುತ್ತಾನೆ. ಈಗ ಸೃಷ್ಟಿಕರ್ತ ಫ್ರ್ಯಾಂಕಿನ್‌ಸ್ಟೈನ್ ಮತ್ತು ಅವನ ಸೃಷ್ಟಿಯಾದ ದೈತ್ಯ ಮುಗಿಯಲಾರದ ದ್ವೇಷ ಹಾಗೂ ಹಗೆಯ ಸಂಬಂಧದಲ್ಲಿ ಬಂಧಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡ ಫ್ರ್ಯಾಂಕಿನ್‌ಸ್ಟೈನ್ ದೈತ್ಯನನ್ನು ಕೊಲ್ಲುವ ತನ್ನ ಜೀವನದ ಕೊನೆಯ ಉದ್ದೇಶವನ್ನು ಹಿಂಬಾಲಿಸಿ ಉತ್ತರ ಧ್ರುವಕ್ಕೆ ಬಂದಿದ್ದಾನೆ. ಆದರೆ, ಬಳಲಿಹೋದ ಅವನು ವಾಲ್ಟನ್‌ನ ಹಡಗಿನಲ್ಲಿ ಕೊನೆಯುಸಿರೆಳೆಯುತ್ತಾನೆ. ಅವನ ಶವದ ಬಳಿ ಬಂದ ದೈತ್ಯ ತನ್ನ ತೀವ್ರವಾದ ಭಾವನೆಗಳನ್ನು ವಾಲ್ಟನ್‌ನಿಗೆ ವ್ಯಕ್ತಪಡಿಸಿ ತಾನು ಅಗ್ನಿ ಪ್ರವೇಶ ಮಾಡಿ ಅಸಹನೀಯವಾದ ತನ್ನ ಜೀವನಕ್ಕೆ ವಿದಾಯ ಹೇಳುತ್ತೇನೆಂದು ತಿಳಿಸಿ ಹೊರಟುಹೋಗುತ್ತಾನೆ.

ವಿಚಿತ್ರ ತಿರುವಿನ ಈ ಭೀಭತ್ಸ ಆಧುನಿಕ ಪುರಾಣ ಅಪಾರವಾದ ಅರ್ಥವಂತಿಕೆ ಹೊಂದಿದೆ. ೧೮೧೭ರಲ್ಲಿ ಮೇರಿ ಶೆಲಿ ಇದನ್ನು ಬರೆದಾಗ ೧೭ನೇ ಶತಮಾನದ ಕೊನೆಯ ಭಾಗದಿಂದ ಬೆಳೆಯುತ್ತಾ ಬಂದ ಆಧುನಿಕ ವಿಜ್ಞಾನ ಆ ಯುಗದ ಜ್ಞಾನಪರ್ವದ ಬೆಂಬಲದಿಂದಾಗಿ ಬಲಿಷ್ಠವಾಗತೊಡಗಿತ್ತು. ವಿಜ್ಞಾನ ಮನುಷ್ಯನಿಗೆ ಅಗಾಧವಾದ ಶಕ್ತಿ ಹಾಗೂ ಅಧಿಕಾರಗಳನ್ನು ತಂದುಕೊಡುತ್ತದೆ ಎನ್ನುವ ನಂಬಿಕೆ ಬೆಳೆದಿತ್ತು. ಇಂಥ ಸಂದರ್ಭದಲ್ಲಿ ವಿಜ್ಞಾನದಿಂದ ಬಂದ ಈ ಹಮ್ಮಿನಿಂದಾಗಿ ದೇವರಿಗೆ ಸೆಡ್ಡು ಹೊಡೆಯುವ ಮನುಷ್ಯ ತರಬಹುದಾದ ದುರಂತಗಳನ್ನು ಈ ಕಾದಂಬರಿ ಸೂಚಿಸುತ್ತದೆ. ಅಲ್ಲದೇ ಸೃಷ್ಟಿಮಾಡಿ ತನ್ನ ಜವಾಬ್ದಾರಿಯನ್ನು ತಿರಸ್ಕರಿಸುವುದರ ದುರಂತ ಪರಿಣಾಮಗಳನ್ನು ಗುರುತಿಸುತ್ತದೆ.

ಆಧುನಿಕ ವಿಜ್ಞಾನ ಭಸ್ಮಾಸುರನಂತೆ ವಿನಾಶಕಾರಿಯಾಗಬಲ್ಲದು ಎನ್ನುವುದನ್ನು ಆ ಕಾಲದಲ್ಲಿಯೇ ಈ ಕೃತಿ ಗ್ರಹಿಸಿತು. ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಅವಳಿಗಳ ಸೃಷ್ಟಿಮಾಡಿದಾಗ (ಕ್ಲೋನಿಂಗ್) ಜೈವಿಕ ತಂತ್ರಜ್ಞಾನದ ಇತಿಮಿತಿಗಳ ಬಗ್ಗೆ ನಡೆದ ಚರ್ಚೆ ಈ ಕೃತಿಯಲ್ಲಿ ಬೀಜರೂಪದಲ್ಲಿದೆ. ಬುದ್ಧಿಶಕ್ತಿ ಹಾಗೂ ನೈತಿಕ ಜವಾಬ್ದಾರಿಯ ಸಂಬಂಧಗಳನ್ನು ಫ್ರ್ಯಾಂಕಿನ್‌ಸ್ಟೈನ್‌ನ ದ್ವಂದ್ವಗಳ ಮೂಲಕ ಈ ಕೃತಿ ಶೋಧಿಸುತ್ತದೆ. ದೈತ್ಯನ ಪ್ರಕಾರ ಅವನು ಮೂಲತಃ ಕ್ರೂರಿಯಲ್ಲ. ಮನುಷ್ಯ ಸಮಾಜದ ನಡವಳಿಕೆ ಅವನನ್ನು ಹಾಗೆ ಮಾಡುತ್ತದೆ. ಮೇರಿ ಶೆಲಿಯ ಪತಿಯೂ ಸೇರಿದಂತೆ ಇಂಗ್ಲೆಂಡ್‌ನ ರೋಮ್ಯಾಂಟಿಕ್ ಕವಿ-ಚಿಂತಕರು ಫ್ರೆಂಚ್ ತತ್ವಜ್ಞಾನಿ ರೂಸೋ ಪ್ರಭಾವದಲ್ಲಿ ಇಂಥದ್ದೇ ನಂಬಿಕೆ ಹೊಂದಿದ್ದರು. ಆದ್ದರಿಂದಲೇ ಹಲವು ಕೊಲೆಗಳನ್ನು ಮಾಡುವ ದೈತ್ಯನ ಆತ್ಮಸಮರ್ಥನೆಯಲ್ಲಿ ಸ್ವಲ್ಪ ಸತ್ಯವೂ ಕಾಣುತ್ತದೆ.

ಈ ಕಾದಂಬರಿಯನ್ನು ವಿಮರ್ಶಿಸುತ್ತಾ ಸ್ತ್ರೀವಾದಿಗಳು  ಸೃಷ್ಟಿಸುವ ಅಹಂಕಾರ ಮಾತ್ರ ಬೇಕು, ಪಾಲಿಸುವ ಜವಾಬ್ದಾರಿ ಬೇಡ ಎನ್ನುವ  ಫ್ರ್ಯಾಂಕಿನ್‌ಸ್ಟೈನ್ ಪುರುಷಕೇಂದ್ರಿತ  ಅಹಂನ ಸಂಕೇತವಾಗಿದ್ದಾನೆ. ಇದೇ ಅಹಂ ಆಧುನಿಕ ವಿಜ್ಞಾನದ ಮೂಲಕ ಪ್ರಕೃತಿಯೆನ್ನುವ ಸ್ತ್ರೀಶಕ್ತಿಯನ್ನು ಇಂದು ನಾಶಮಾಡುತ್ತಿದೆ. ಕುರೂಪಿ ಎಂದ ಮಾತ್ರಕ್ಕೆ ಹೆತ್ತ ಮಗುವನ್ನು ಯಾವ ತಾಯಿಯಾದರೂ ತಿರಸ್ಕರಿಸಿದ್ದಾಳೆಯೇ? ಮೇರಿ ಶೆಲಿಯ ಭೀಭತ್ಸ ದೈತ್ಯ ಇಂಥ ಹಲವಾರು ಪ್ರಶ್ನೆಗಳನ್ನು ಈಗಲೂ ಕೆದಕುತ್ತಲಿದ್ದಾನೆ.

ಈ ಕಾದಂಬರಿಯನ್ನು ಕನ್ನಡಕ್ಕೆ ಶಾಮಲಾ  ಮಾಧವ ಅವರು ಅನುವಾದಿಸಿದ್ದಾರೆ.

ಸಲ್ಮಾನ್ ರಶ್ದಿಯ ಮಿಡ್ನೈಟ್ಸ್ ಚಿಲ್ಡ್ರನ್

ಭಾರತಕ್ಕೆ ಮೊದಲ ಬುಕರ್ ಪ್ರಶಸ್ತಿಯನ್ನು ತಂದು ಆನಂತರ ‘ಬುಕರ್ ಆಫ್ ಬುಕರ್ಸ್’ ಪ್ರಶಸ್ತಿಯನ್ನು ಪಡೆದುಕೊಂಡು ಭಾರತೀಯರ ಇಂಗ್ಲಿಷ್ ಕಾದಂಬರಿ ಪ್ರಕಾರವನ್ನು ಇಡೀ ಜಗತ್ತು ಗಂಭೀರವಾಗಿ ಗಮನಿಸುವಂತೆ ಮಾಡಿದ್ದು ಸಲ್ಮಾನ್ ರಶ್ದಿಯ ‘ಮಿಡ್ನೈಟ್ಸ್ ಚಿಲ್ಡ್ರನ್’ ಕಾದಂಬರಿ. ರಾಜಾರಾವ್, ಆರ್.ಕೆ.ನಾರಾಯಣ ಮುಂತಾದವರ ಸಾಧನೆಯ ನಂತರವೂ ಭಾರತೀಯ ಇಂಗ್ಲಿಷ್ ಕಾದಂಬರಿ ನಿರೂಪಣೆಯ ಕ್ರಮಗಳಲ್ಲಿ ಹಾಗೂ ಭಾಷೆಯ ಬಳಕೆಯಲ್ಲಿ ಸ್ವಂತಿಕೆಯನ್ನು ಸಾಧಿಸಿರಲಿಲ್ಲ. ನೈಜೀರಿಯಾದ ಅಚಿಬಿ, ವೋಲೆ ಸೋಯಿಂಕಾ ಮತ್ತು ಅನೇಕರು ಇಂಗ್ಲಿಷ್ ಭಾಷೆಯನ್ನು ತಮ್ಮ ಸೃಜನಶೀಲ ಅವಶ್ಯಕತೆಗಳಿಗೆ ತಕ್ಕಂತೆ, ಅದು ತಮ್ಮದೇ ಭಾಷೆಯೆನ್ನುವಂತೆ ಪ್ರಯೋಗಶೀಲವಾಗಿ ಬಳಸಿಕೊಂಡರೆ ರಾಜಾರಾವ್, ದೇಸಾಯಿ ಇವರ ಹೊರತಾಗಿ ಬಹುಪಾಲು ಭಾರತೀಯ ಕಾದಂಬರಿಕಾರರು ಪಶ್ಚಿಮದ ಓದುಗರಿಗೆ ಸುಲಭವಾಗಿ ಅರ್ಥವಾಗಬಲ್ಲ ಪ್ರಮಾಣೀಕೃತ (standard) ಇಂಗ್ಲಿಷ್ ನಲ್ಲಿ ಬರೆದರು. 1936ರಲ್ಲಿ ಪ್ರಕಟವಾದ ‘ಕಾಂತಾಪುರ’ ಕಾದಂಬರಿಗೆ ಬರೆದ ಅದ್ಭುತವಾದ ಮುನ್ನುಡಿಯಲ್ಲಿ ಕನ್ನಡಿಗ ರಾಜಾರಾಯರು ಬರೆದಿದ್ದರು; ನಾವು ಬ್ರಿಟಿಷರ ಹಾಗೆ ಬರೆಯಲಾರೆವು; ನಾವು ಬ್ರಿಟಿಷರ ಹಾಗೆ ಬರೆಯಬಾರದು ಇದು ಭಾರತೀಯ ಇಂಗ್ಲಿಷ್ ಸಾಹಿತ್ಯದ ಪ್ರಣಾಳಿಕೆಯಾಗಬೇಕಾಗಿತ್ತು. ‘ಕಾಂತಾಪುರ’ ಕಾದಂಬರಿಯಲ್ಲಿ ಆ ಹೆಸರಿನ ಹಳ್ಳಿಯ ಹೆಣ್ಣುಮಗಳೊಬ್ಬಳು ಕನ್ನಡದಲ್ಲಿ ಕತೆ ಹೇಳಿದ್ದನ್ನು ಇಂಗ್ಲಿಷ್ ನ ವ್ಯಾಕರಣ ಹಾಗೂ ರಚನೆಗಳನ್ನು ಮುರಿದು ರಾಜಾರಾಯರು ಆದಷ್ಟೂ ಕನ್ನಡದ ಆಡುಮಾತಿನ ಲಯಗಳನ್ನು ಅನುಸರಿಸಿ ಅಭಿವ್ಯಕ್ತಿಸುತ್ತಾರೆ. ಸಲ್ಮಾನ್ ರಶ್ದಿಯ ಕಾದಂಬರಿಯು ಈ ಪ್ರಯೋಗಶೀಲ ಸ್ವಂತಿಕೆಯನ್ನು ಸಮಗ್ರವಾಗಿ ಯಶಸ್ವಿಯಾಗಿ ಸಾಧಿಸುತ್ತದೆ. ಉರ್ದು, ಹಿಂದುಸ್ತಾನಿ ಹಾಗೂ ಮುಂಬಾಯಿ ಹಿಂದಿಯ ನುಡಿಗಟ್ಟುಗಳನ್ನು, ಆಡುಮಾತಿನ ಸೊಗಡನ್ನು ರಶ್ದಿ ಇಂಗ್ಲಿಷ್ ನ ಸ್ವೀಕೃತ ಮಾದರಿಗಳನ್ನು ಮುರಿದು ಇಂಗ್ಲಿಷ್ ನಲ್ಲಿಯೇ ಓದುಗರಿಗೆ ಕೊಡುತ್ತಾರೆ. ಅಲ್ಲದೇ ಎಪ್ಪತ್ತರ ದಶಕದ ಹೊತ್ತಿಗೆ ಪಶ್ಚಿಮದಲ್ಲಿ ಜನಪ್ರಿಯವಾಗಿದ್ದ ಮಾಂತ್ರಿಕ ವಾಸ್ತವವಾದದ ತಂತ್ರವನ್ನು ಲೇವಡಿ, ಹಾಸ್ಯ, ಅಣಕು ಇವೆಲ್ಲವುಗಳ ಜೊತೆಗೆ ಬಳಸಿಕೊಳ್ಳುತ್ತಾರೆ. ಜನಪ್ರಿಯ ಹಿಂದಿ ಚಲನಚಿತ್ರಗಳ ತಂತ್ರಗಳನ್ನು ಗಂಭೀರ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಾರೆ.

‘ಮಿಡ್ ನೈಟ್ಸ್ ಚಿಲ್ಡ್ರನ್’ ಕಾದಂಬರಿ 1947ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡ ಭಾರತದ ಕತೆಯನ್ನು ತುರ್ತು ಪರಿಸ್ಥಿತಿ ಕೊನೆಗೊಳ್ಳುವ ಕಾಲದವರೆಗೆ ಅನ್ಯೋಕ್ತಿ ವಿಧಾನವನ್ನು (allegory) ಬಳಸಿಕೊಂಡು ಹಾಸ್ಯ ಹಾಗೂ ಲೇವಡಿಯ ಧಾಟಿಯಲ್ಲಿ ಹೇಳುತ್ತದೆ. ಕಾದಂಬರಿಯ ನಾಯಕ-ನಿರೂಪಕನಾದ ಸಲೀಮ್ ಸಿನಾಯ್ ನ ಅಜ್ಜನಾದ ಆಡಂ ಅಜೀಜ್ ನ ಕಥೆಯೂ ಇಲ್ಲಿ ಬರುವುದರಿಂದ ಸ್ವಾತಂತ್ರ್ಯಪೂರ್ವ ಕಾಲದ ಜಲಿಯನ್ ವಾಲಾಬಾಗ್ ನಂಥ ಘಟನೆಗಳೂ ಕಾದಂಬರಿಯ ವ್ಯಾಪ್ತಿಗೆ ಬರುತ್ತವೆ. ಸಾಮ್ರಾಜ್ಯಶಾಹಿವಿರೋಧಿ ಹೋರಾಟದಿಂದ ಪಡೆದುಕೊಂಡ ಅಮೂಲ್ಯವಾದ ಸ್ವಾತಂತ್ರ್ಯವನ್ನು ಭಾರತವು ರಾಜಕೀಯ ದಿವಾಳಿತನ, ಭ್ರಷ್ಟಾಚಾರ, ಧರ್ಮ-ಭಾಷೆಗಳನ್ನು ಹಿಂಸಾ ರಾಜಕೀಯವನ್ನಾಗಿ ಬಳಸಿಕೊಂಡ ಧುರೀಣರ ಲಂಪಟತನ ಇವುಗಳಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಸಾಂಕೇತಿಕವಾಗಿ ಕಳೆದುಕೊಂಡಿದ್ದನ್ನು ಕಾದಂಬರಿಯು ಸಲೀಮ್ ನ ವೈಯಕ್ತಿಕ ಜೀವನದ ಮೂಲಕ ವಿವರಿಸುತ್ತಿದೆ. ಹೀಗಾಗಿ ಅವನ ವೈಯಕ್ತಿಕ ಬದುಕಿನ ಬಿರುಕುಗಳು, ದುರಂತಗಳು, ಅಧಃಪತನ ಬಾರತದ ಅಧಃಪತನದ ಸಂಕೇತಗಳಾಗುತ್ತವೆ. ಆದರೆ, ಇದನ್ನು ಗಂಭೀರವಾದ ಐತಿಹಾಸಿಕ ವಿಶ್ಲೇಷಣೆಯೆಂದು ಓದಲಾಗದು. ಲಘುವಾದ ಶೈಲಿಯಲ್ಲಿ ಭಾರತದ ಸಾರ್ವಜನಿಕ-ರಾಜಕೀಯ ಘಟನೆಗಳನ್ನು ವಿಡಂಬಿಸುತ್ತಾ, ಅತಿಶಯೋಕ್ತಿ ಬಳಸಿಕೊಂಡು ಅವುಗಳನ್ನು ನಿರೂಪಕನ ಬದುಕಿಗೆ ಜೋಡಿಸಿಕೊಂಡು ರಶ್ದಿ ಕಾದಂಬರಿಯನ್ನು ಕಟ್ಟುತ್ತಾರೆ.

ಈ ಕಾದಂಬರಿಯ ಮುಖ್ಯ ಕಥೆ ಶುರುವಾಗುವುದು ಅತ್ಯಂತ ಸಿನಿಮೀಯ ರೀತಿಯಲ್ಲಿ. ಸಿನಾಯಿ ದಂಪತಿಗಳಿಗೆ ಹುಟ್ಟಿದ ಕೂಸನ್ನು ವೀ ವಿಲಿವಿಂಕಿ ಮತ್ತು ವಿನಿಟಾ ದಂಪತಿಗಳಿಗೆ ಹುಟ್ಟಿದ ಕೂಸಿನ ಜೊತೆ ನರ್ಸ್ ಮೇರಿ ಅದಲುಬದಲು ಮಾಡುತ್ತಾಳೆ. ಹೀಗಾಗಿ ಕಾದಂಬರಿಯ ನಿರೂಪಕ ಸಲೀಮ್ ಸಿನಾಯಿ ಸಿನಾಯಿ ದಂಪತಿಗಳ ಮಗನಲ್ಲ. ಅವರಿಗೆ ಹುಟ್ಟಿದ ಮಗ ಮುಂದೆ ಶಿವಾ ಎನ್ನುವ ಹೆಸರಿನಲ್ಲಿ ಬೆಳೆದು ಸಲೀಮನ ಶತ್ರುವಾಗುತ್ತಾನೆ. ಭಾರತದಂಥ ದೇಶದಲ್ಲಿ ಗುರುತಿನ ಪ್ರಶ್ನೆಯ ಜಟಿಲತೆಯನ್ನು ರಶ್ದಿ ಹೀಗೆ ವಿಡಂಬಿಸುತ್ತಾರೆ. ಯಾಕೆಂದರೆ, ಸಲೀಮ್ ನ ಜೈವಿಕ ತಂದೆ ಒಬ್ಬ ಇಂಗ್ಲಿಷ್ ಮನುಷ್ಯ. ಎಲ್ಲ ಗುರುತುಗಳೂ ಮಿಶ್ರತಳಿಯ ಗುರುತುಗಳೇ ಎನ್ನುವುದನ್ನು ಕಾದಂಬರಿ ಹೇಳುತ್ತದೆ. ವಿಶೇಷವೆಂದರೆ ಸಲೀಮ್, ಶಿವಾ ಮತ್ತು ಅಂಥ ಅನೇಕ ಶಿಶುಗಳು ಆಗಸ್ಟ್ 15ರ ಮಧ್ಯರಾತ್ರಿಗೆ ಸರಿಯಾಗಿ ಹುಟ್ಟಿ ಮಧ್ಯರಾತ್ರಿಯ ಮಕ್ಕಳಾಗಿ ಎಲ್ಲರೂ ವಿಶೇಷವಾದ ಅತೀಂದ್ರಿಯ ಶಕ್ತಿ ಪಡೆದಿರುತ್ತಾರೆ. ಅಲ್ಲದೇ ಅವರು ಒಬ್ಬರನ್ನೊಬ್ಬರು ಮಾನಸಿಕವಾಗಿ ಸಂಪರ್ಕಿಸಬಲ್ಲರು ಕೂಡ. ಅದಕ್ಕೇ ಸಲೀಮ್ ಅವರನ್ನೆಲ್ಲಾ ಪರಸ್ಪರ ಸಂಪರ್ಕಕ್ಕೆ ತಂದ ಎಮ್.ಸಿ.ಸಿ(ಮಿಡ್ ನೈಟ್ ಚಿಲ್ಡ್ರೆನ್ಸ್ ಕ್ಲಬ್)ಯನ್ನು ಸ್ಥಾಪಿಸುತ್ತಾನೆ. ಸಲೀಮ್ ನ ಹುಟ್ಟಿನ ವಿಶಿಷ್ಟ ಗಳಿಗೆಯಿಂದಾಗಿ ಅವನ ಜೀವನದ ಘಟನೆಗಳು ಸ್ವತಂತ್ರ ಭಾರತದ ಮುಖ್ಯ ಘಟನೆಗಳೊಂದಿಗೆ ಬಿಡಿಸಲಾಗದಂತೆ ಕೂಡಿಕೊಂಡಿವೆ. ಉದ್ದೇಶಪೂರ್ವಕವಾಗಿ ಅವನ ಜೀವನದ ಅಸಂಗತ-ಕಾಮಿಕ ಘಟನೆಗಳನ್ನು ಭಾರತ ರಾಷ್ಟ್ರದ ಘಟನೆಗಳ ಅನ್ಯೋಕ್ತಿಯಾಗಿ ರಶ್ದಿ ವಿವರಿಸುತ್ತಾರೆ. ಉದಾಹರಣೆಗೆ ಶಾಲೆಯಲ್ಲಿ ಸಲೀಮ್ ನ ಸಹಪಾಠಿಗಳು ಅವನ ಮುಂದೆಲೆಯ ಕೂದಲನ್ನು ಕಿತ್ತಿ ಬೋಳಾಗಿಸುತ್ತಾರೆ. ಇದು ಭಾರತದಿಂದ ಕಾಶ್ಮೀರದ ಒಂದು ಭಾಗವನ್ನು ಕಿತ್ತುಕೊಂಡಿದ್ದರ ದ್ಯೋತಕವಾಗಿದೆ. ಸಲೀಮ್ ನ ತಂಗಿ ಅದ್ಭುತ ಗಾಯಕಿಯಾಗಿ ಪಾಕಿಸ್ತಾನದ ಮಿನುಗುತಾರೆಯಾಗುತ್ತಾಳೆ. ಒಂದು ಔತಣಕೂಟದಲ್ಲಿ ಪಾಕಿಸ್ತಾನದ ಸೇನಾನಾಯಕರು ಒಳಸಂಚನ್ನು, ಯುದ್ಧದ ಯೋಜನೆಯನ್ನು ಅಂತಿಮಗೊಳಿಸುತ್ತಾರೆ. ಕಾದಂಬರಿಯ ಕೊನೆಯ ಭಾಗದಲ್ಲಿ ಬೈತಲೆಯ ಒಂದು ಅಂಚಿನಲ್ಲಿ ಬಿಳಿಕೂದಲುಳ್ಳ ‘ವಿಧವೆ’ ಸಲೀಮ್ ನನ್ನು ಸೇರಿದಂತೆ ಎಲ್ಲಾ ಮಧ್ಯರಾತ್ರಿಕ ಮಕ್ಕಳ ಬೇಟೆಯಾಡಿ ಅವರನ್ನು ನಿಷ್ಕ್ರಿಯಗೊಳಿಸುತ್ತಾಳೆ. ನಮ್ಮ ಸ್ವಾತಂತ್ರ್ಯದ ಮೌಲ್ಯಗಳನ್ನು ತುರ್ತು ಪರಿಸ್ಥಿತಿಯ ಮೂಲಕ ಇಂದಿರಾ ಗಾಂಧಿ ನಾಶಮಾಡಲು ಯತ್ನಿಸಿದುದರ ಸಂಕೇತ ಇದಾಗಿದೆ.

ಹೀಗೆ ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಘಟನೆಗಳು ಪ್ರಮುಖ ವ್ಯಕ್ತಿಗಳು ಛದ್ಮವೇಷದಲ್ಲಿ ಕಾದಂಬರಿಯ ಉದ್ದಕ್ಕೂ ಬರುತ್ತಾರೆ. ಸೂಕ್ಷ್ಮವಾಗಿ ಓದಿದರೆ ಈ ಕಾಲದ ರೋಗಗಳಾದ ಕೋಮುವಾದ, ಭಾಷಾ ದುರಭಿಮಾನ, ಹಿಂಸೆ, ಭ್ರಷ್ಟಾಚಾರ ಇವೆಲ್ಲವುಗಳನ್ನೂ ರಶ್ದಿ ಸೂಕ್ಷ್ಮವಾಗಿ ವರ್ಣಿಸಿದ್ದಾರೆ. ಅವರ ಲಘುವಾದ ಧಾಟಿಯ ಹಿಂದೆ ಅಪಾರ ಕ್ರಿಯಾಶೀಲತೆಯುಳ್ಳ ಭಾರತ ರಾಷ್ಟ್ರ ತನಗೆ ದೊರಕಿದ ಸ್ವಾತಂತ್ರ್ಯವನ್ನು ಅಪಮೌಲ್ಯಗೊಳಿಸಿಕೊಂಡು ಆತ್ಮವಿನಾಶದತ್ತ ಸಾಗಿರುವುದರ ಬಗ್ಗೆ ಗಾಢವಾದ ವಿಷಾದವಿದೆ. ಸಲೀಮ್ ನ ಒಂದು ಕ್ಷುಲ್ಲಕ ಮಾತಿನಿಂದಾಗಿ ಭಾಷಾವಾರು ರಾಜ್ಯ ವಿಭಜನೆಯಾಗುವುದನ್ನು ಅವರು ವಿಡಂಬಿಸುತ್ತಾ ಹೇಳುತ್ತಾರೆ: ನಾವು ಪದಗಳ(ಭಾಷೆಯ) ಗೋಡೆಗಳಿಂದ ವಿಭಜಿತರಾಗಿದ್ದೇವೆ. ಹಾಗೆಯೇ ಇಂದಿರಾ ಮತ್ತು ಸಂಜಯರು ಕೊಳಗೇರಿಯ ಬಡವರ ಮೇಲೆ ಮಾಡಿದ ದಾಳಿಗಳು ಹಾಗೂ ಒತ್ತಾಯದ ಸಂತಾನಹರಣಗಳು ಕಾದಂಬರಿಯಲ್ಲಿ ಪ್ರಬಲವಾಗಿ, ಸಾಂಕೇತಿಕವಾಗಿ ವರ್ಣಿತವಾಗಿವೆ.

ಕತೆ ನಿರೂಪಿಸುತ್ತಿರುವ ಸಲೀಮ್ ಸಿನಾಯಿ ಈಗ ಕ್ರಮೇಣವಾಗಿ ದೇಹದ ಭಾಗಗಳು ಕಳಚಿಕೊಳ್ಳುತ್ತಾ ಸಾವಿನ ನಿರೀಕ್ಷೆಯಲ್ಲಿ ಕತೆ ಹೇಳುತ್ತಿದ್ದಾನೆ. ಕೇಳುತ್ತಿರುವವಳು ಅವನ ಪ್ರೇಯಸಿ ಪದ್ಮಾ. ಹೀಗೆ ಕಾಂತಾಸಮ್ಮತಿ ಶೈಲಿಯಲ್ಲಿ ನಿರೂಪಿತವಾದ ಕತೆ ಮುಗಿಯುವಾಗ ಸಲೀಮ್ ನ ಮಗ ಗಣೇಶ್ (ಇದೂ ಕೂಡಾ ಅಕ್ರಮ ಸಂಬಂಧದ ಫಲ) ಕೊನೇಪಕ್ಷ ನೆನಪುಗಳನ್ನು ಉಳಿಸಬಹುದಾದ ಮುಂದಿನ ತಲೆಮಾರಿನ ಪ್ರತಿನಿಧಿಯಾಗಿದ್ದಾನೆ.

ಕಾದಂಬರಿಯ ಆಕರ್ಷಣೆ ಇರುವುದು ಅದರ ಲವಲವಿಕೆಯ ಭಾಷೆಯಲ್ಲಿ; ವಾಸ್ತವ, ಕಲ್ಪನೆ, ವಿಡಂಬನೆ ಇವೆಲ್ಲವುಗಳನ್ನು ಖಿಚಡಿ ಮಾಡಿ ರಶ್ದಿ ಬಡಿಸುವ ರೀತಿಯಲ್ಲಿ; ಭಾರತದ ದೇಶೀ ಭಾಷೆಗಳ ಲಯಗಳನ್ನು ಚಿತ್ರಕಶಕ್ತಿಯನ್ನು ಇಂಗ್ಲಿಷ್ ಇಷ್ಟು ಸಮರ್ಥವಾಗಿ ವ್ಯಕ್ತಪಡಿಸಬಹುದಲ್ಲಾ ಎನ್ನುವ ಅಚ್ಚರಿಯನ್ನು ನಮ್ಮಲ್ಲಿ ಮೂಡಿಸುವುದರಲ್ಲಿ. ಸಲೀಮ್ ನ ಮಾತಿನಲ್ಲಿಯೇ ಹೇಳುವುದಾದರೆ ಕಾದಂಬರಿಯ ಉದ್ದೇಶವೆಂದರೆ The Chutnification of history! ಸ್ವಾತಂತ್ರ್ಯೋತ್ತರ ಭಾರತದ ಅಸಂಗತ ದುರಂತ ಚರಿತ್ರೆ ಇಲ್ಲಿ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕುಗಳ ಚಟ್ನಿಯಾಗಿ ಬಂದಿದೆ. ಸಲ್ಮಾನ್ ರಶ್ದಿ ಭಾರತೀಯ ಭಾಷೆಗಳಲ್ಲಿ ಬಂದ ಸಾಹಿತ್ಯಗಳ ಬಗ್ಗೆ ಮೂರ್ಖತನದ ಅಹಂಕಾರದ ಮಾತುಗಳನ್ನಾಡಿ ಎಲ್ಲರ ದ್ವೇಷ ಸಂಪಾದಿಸಿಕೊಂಡ. ಆದರೆ ಅವನೆಂಥ ಸ್ವಂತಿಕೆಯುಳ್ಳ ಬರಹಗಾರ ಎನ್ನುವುದಕ್ಕೆ ಈ ಕಾದಂಬರಿಯೇ ಸಾಕ್ಷಿ.