ಪುಟ್ಟ ಹಣತೆ

ಇನ್ನೊಂದಷ್ಟು ವರುಷ ನೀನಿರಬಾರದಿತ್ತೆ?
ನಿನ್ನ ಮುದ್ದು ಸೊಸೆ ನಿನ್ನ ನೆರೆದ ಕೂದಲಿಗೆ ಜಡೆಯೆಣೆಯುತ್ತಿದ್ದಳು,
ನಿನ್ನ ಮೊಮ್ಮಕ್ಕಳು ಸುಮ್ಮನಾದರು ಒಮ್ಮೆ ನಿನ್ನ ತೊಡೆಯೇರುತ್ತಿದ್ದವು,
ನಾ ಕಂಡ ನೆಮ್ಮದಿ ಅವಕ್ಕೂ ದಕ್ಕುತ್ತಿದ್ದವೇನೊ?!

ಇನ್ನೊಂದಷ್ಟು ವರುಷ ನೀನಿರಬಾದಿತ್ತೆ?
ನಿನ್ನಿಷ್ಟ ಧಾರಾವಾಹಿಯ ಪುಟ್ಟಗೌರಿಗೆ ಮಗುವಾಗುತ್ತಿತ್ತು
ಅಪ್ಪುವಿನ ಹೊಸ ಸಿನಿಮಾ ನಿನಗೆ ಖುಷಿ ಕೊಡುತ್ತಿತ್ತು
ಮಂತ್ರಾಲಯ ರಾಘವೇಂದ್ರನಿಗೆ ಮುದುಕಿಯ ಹೊಸ ಹರಕೆಗಳ ಕಂಡು ನಗು ಬರುತ್ತಿತ್ತೇನೊ?!

ಇನ್ನೊಂದಷ್ಟು ವರುಷ ನೀನಿರಬಾದಿತ್ತೆ,
ನಿನ್ನ ಕಿವುಡು ಕಿವಿಗಳಿಗೆ ಅದೆಂತದೋ ಮಷಿನ್ ಬರುತ್ತಿತ್ತು,
ಸೂಜಿ ದಾರ ಪೋಣಿಸಲು ಪರದಾಡುವ ನಿನ್ನ ಕಣ್ಣಿಗೆ ಕನ್ನಡಕವಿರುತ್ತಿತ್ತು,
ಹೊಸ ವಾಷಿಂಗ್ ಮಷೀನ್‌ ಒಗೆದ ಬಟ್ಟೆಗಳ ಕಂಡು ಕೆನ್ನೆಗೆ ಚಿನ್ನದ ಮುತ್ತಿಡುತ್ತಿದ್ದೇನೊ?!

ನೀನಿರಬೇಕಿತ್ತು,
ನಾ ಬರುವ ದಿಕ್ಕ ಕಾದು ನಡುರಾತ್ತಿಯಲ್ಲೂ ಗಕ್ಕನೆ ಕದ ತೆರೆಯಲು,
“ಏನು ತಿಂದೆ?” ಎಂಬ ಕೊನೆಯೇ ಕಾಣದ ಪ್ರಶ್ನೆ ಕೇಳಲು,
ನಾ ನಿನಗೆ ಸೀರೆ ತಂದ ದಿನ ಕಣ್ತುಂಬಿ
ಅಪ್ಪನ ನೆನಸಿ ಕೆನ್ನೆಗೆ ಮುತ್ತಿಡುವಾಗ ಬಿಸಿ ಕಣ್ಣ ಹನಿಯಾಗಲು

ನೀ,
ದಿಢೀರನೆ ಬಿಟ್ಟು ಹೋಗುವೆಯೆಂದು ನನಗೆಲ್ಲಿ ಗೊತ್ತು,
ಅನಾಥಭಾವ ಬರುವುದು ಹೊತ್ತಲ್ಲದ ಹೊತ್ತು,
ನೂರು ಹೆಣ್ಣು ಜೀವವು ನೀಡಲಾರವು ನಿನ್ನ ಮಮತೆ,
ನಾನೀಗ ಎಣ್ಣೆ ಕಾಣದ ಪುಟ್ಟ ಹಣತೆ.

ಜಯರಾಮಚಾರಿ ಮೂಲತಃ ಮೈಸೂರಿನವರು. ಬೆಳೆದದ್ದು ಬೆಂಗಳೂರು
ಸಧ್ಯ ನಮ್ಮ ಮೆಟ್ರೊದಲ್ಲಿ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ
“ಕರಿಮುಗಿಲ ಕಾಡಿನಲಿ: ಕಥಾ ಸಂಕಲನ ಇವರ ಪ್ರಕಟಿತ ಪುಸ್ತಕ
ಓದು ಮತ್ತು ಸಿನಿಮಾ ಇವರ ಹವ್ಯಾಸವಾಗಿದ್ದು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ