ಇಲ್ಲಿ ನಿಶ್ಶಬ್ದ

ಇಲ್ಲಿ ನಿಶ್ಶಬ್ದ
ಆದರೆ ಸದ್ದುಗಳು
ಸಂಜೆ ಮಲ್ಲಿಗೆ ಹೂವು
ಅಲರಿಗೆ ಲಾಲಿ ತೂಗುವ ಹಾಗೆ
ಪಾರಿಜಾತದ ಹವಳದ ತೊಟ್ಟು
ಮೆಲ್ಲನೆ
ಎಲೆಯ ಕೆನ್ನೆಯ ಸವರಿದ ಹಾಗೆ

ಚಂದಿರನೇ ಬಾ
ಈ ಕೊಳದ ನಸುಗತ್ತಲಿನ
ಮೌನದಲೆಗಳಿಗೆ
ಈ ಮರದ ಮರ್ಮರ ತಾಪಕ್ಕೆ
ಈ ನೈದಿಲೆ ಹೂವಿನ
ಬೆಳ್ಳನೆ ದಳಗಳಿಗೆ
ತಂಪು ತಂಪಾಗಿ
ನಿಶೆಯೇ ಬಾ
ನಿನ್ನ ಕರಿಸೆರಗಿನ
ಮೌನ ಸಾಂತ್ವನದಲ್ಲಿ
ನಿನ್ನ ತಾರೆಗಳ ಮಿಣುಕಿನಲಿ
ನಾ ಮರಳಿ ಮಗುವಾಗುವೆ

ಪಾರಿಜಾತದ ಗಂಧ
ಅಂಗಳದಲ್ಲೊಂದು
ಪಾರಿಜಾತದ ಘಮಲು
ಮುಟ್ಟಿದರೆ ಬಾಡಿ ಹೋದೀತು
ಕನಸ ಪಕಳೆಗಳು ನಲುಗಿ ಹೋದೀತು

ತುದಿ ಬೆರಳಿಗಂಟಿದ ಪರಾಗದ ಸ್ಪರ್ಶವೇ
ಅರಳಿಸಿ ಬಿಡು ಜೀವದಲಿ
ರಾಗವನ್ನು
ಒಡಲಿನಲಿ ಚೈತನ್ಯದ ಚಿಲುಮೆಯನ್ನು

ಸಂಜೆ ಗತ್ತಲಿನ ಮೌನವೇ
ತಣಿಸಿಬಿಡು
ಒಡಲುರಿಯ ಬೇಗೆಯನ್ನು
ಬಾನ ಕಾವಳದ ರೌದ್ರವನ್ನು

ಜಯಶ್ರೀ ಬಿ ಕದ್ರಿ ಕವಯಿತ್ರಿ ಮತ್ತು ಆಂಗ್ಲ ಉಪನ್ಯಾಸಕಿ.
ಮೂಲತಃ ಕಾಸರಗೋಡಿನವರು.
ಈಗ ಇರುವುದು ತುಮಕೂರು ಜಿಲ್ಲೆ ಹುಳಿಯಾರಿನಲ್ಲಿ.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)