ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು. ಕೊಕ್ಕೆಯನ್ನು ಯಥಾವತ್ತಾಗಿ ಮೊದಲಿದ್ದ ಜಾಗೆಗೆ ಮುಟ್ಟಿಸಿ, ಓಡೋಡಿ ಮನೆಗೆ ಬಂದಳು.
ನಾಗರೇಖಾ ಗಾಂವಕರ ಬರೆದ ವಾರದ ಕತೆ ಜರಿಲಂಗ ಮತ್ತು ಸಣ್ಣು

 

ತಟ್ಟಿಯಲ್ಲಿ ಕಟ್ಟಿದ ಕರು ಒಂದೇ ಸಮನೇ ಅಂಬಾ ಕೂಗುತ್ತಲೇ ಇತ್ತು. ತಾಯಿಯನ್ನು ಮೇಯಲು ಬಿಟ್ಟು ಕರುವನ್ನು ಕಟ್ಟಿ ಹಾಕಲು ಮಗಳು ಸಣ್ಣುಗೆ ಹೇಳಿ ಕುಶಲಿ ಕೆಲಸಕ್ಕೆ ಹೋಗಿದ್ದಾಳೆ. ಉಗಾದಿ ಆಗಿಂದ ಏನಾದರೊಂದು ನೆವ ತೆಗೆದು ತಕರಾರು ಮಾಡುತ್ತಿದ್ದಾನೆ. ಆತನಿಗೆ ನಾಲ್ಕೇಟು ಬಾರಿಸಲೇ ಎನ್ನುವಷ್ಟು ಕೋಪ ಬಂದರೂ ಸಣ್ಣು ತಡೆದುಕೊಂಡೇ ಆತನನ್ನು ಓಲೈಸುತ್ತಿದ್ದಾಳೆ. ‘ಅಂವ ಸಣ್ಣವ, ಅರಿಯದ ಕೂಸು’ ಆಗಾಗ ಅವ್ವ ಹೇಳುತ್ತಲೇ ಇರುತ್ತಾಳೆ.

ಅವ್ವ ಬರುವ ಮುನ್ನ ಅಂಗಳವನ್ನೆಲ್ಲಾ ಸಾರಿಸಿಡಬೇಕು. ‘ಇಂವನ ಕಾಟ ಬ್ಯಾರೆ’. ಗಂಜಿ ಬೇಯಿಸಲಿಟ್ಟಿದ್ದು ಹದ ಬೆಂದಿಲ್ಲ. ಅದಾದ್ರೂ ಆಗಿದ್ರೆ ಉಗಾದಿಗೆ ಬಡಿಸಿ ಆತನ ಮಲಗಿಸಬಹುದಿತ್ತು. “ಅಕ್ಕಾ ಬಡಿಸ್ತಿಯೇನೇ? ಹಚಿವ್ಯಾತಿದೆ. ತಿನ್ನುಕೆ ಏನಾರು ಕುಡೇ” ನಾಲ್ಕರ ಪೋರ ಪದೇ ಪದೇ ಆಕೆಯ ಪೀಡಿಸುತ್ತಿದ್ದರೆ, ಹನ್ನೆರಡರ ಬಾಲೆ ಸರಿಯಾಗಿ ಹೊತ್ತದ ಒಲೆಯನ್ನು ಪುರ್ ಪುರ್ ಎಂದು ಊದುತ್ತ, ಸ್ವಲ್ಪ ಹೊತ್ತಿದೊಡನೆ ಚರಿಗೆ ಹಿಡಿದು ಬಾವಿಯಿಂದ ಕೊಡ ನೀರು ಸೇದು ತಂದು ಕಲ್ಲಿನ ಬಾನಿ ತುಂಬಿಸುತ್ತಿದ್ದಾಳೆ.

ಉಗಾದಿ ಹೊಟ್ಟೆಹಿಡಿದು ಪದೇಪದೇ ಹಸಿವೆಂದು ಗೊಣಗುತ್ತ, ಅಳಲು ಶುರು ಮಾಡಿದ. ಆಕೆಗೆ ಬೇರೆ ಉಪಾಯಗಾಣಲಿಲ್ಲ. ಅರೆಬರೆ ಬೆಂದ ಗಂಜಿಯ ತಟ್ಟೆಗೆ ಸುರಿದು ಉಪ್ಪು ಮೆಣಸು ನುರಿದು ಕೊಟ್ಟಳು. ಉಗಾದಿ ಮೃಷ್ಟಾನ್ನದಂತೆ ಚಪ್ಪರಿಸತೊಡಗಿದ.

“ಮಗಾ, ಬೈಸರಿಗೆ ದ್ಯಾವ್ರ ಮೆರವಣಿಗೆ ಬರುದು, ಆಂಗಳಾ ಚೆಗಣಿ ಹಾಕ್ ಬಗೀಲೆ ಸರ್ಸಿಡು ಆಗಾ.”. ಎಂದು ಅವ್ವ ಹೇಳಿದ್ದು ನೆನಪಾಯ್ತು ಆಕೆಗೆ.

“ಉಗಾದಿ ಇಕಾ ಇಲ್ಲೆ ಉಣ್ತೆ ಕುತ್ಕಂಡಿರು, ನಾ ಅಂಗ್ಳಾ ಸರ್ಸುಕೆ ಸೆಗಣಿ ತಗಂಬತ್ತಿ, ಏನಾ? ಮತ್ತಿಲ್ಲರೂ ಹೋಗ್ವೆ ಮತ್ತೇ? ಆವ್ವಿಗೆ ಹೇಳ್ತಿ ನೋಡು!” ಸಣ್ಣು ಸಣ್ಣಗೆ ಆತನಿಗೆ ಹೆದರಿಸಿ ಸೆಗಣಿಬುಟ್ಟಿ ಹಿಡಿದು ತಟ್ಟಿ ಕಡೆ ನಡೆದಳು. ನೋಡಿದರೆ ತಟ್ಟಿಯಲ್ಲಿ ಸೆಗಣಿ ಇಲ್ಲ. ಗೊಬ್ಬರಕುಳಿ ಕೆದಕುವುದೆಂದರೆ ಆಕೆಗೆ ಹೇಸಿಗೆ. ಇಷ್ಟುದ್ದದ್ದ ಗೊಬ್ಬರ ಹುಳುಗಳು ಅದರಲ್ಲೆಲ್ಲಾ ಮಿಡುಕಾಡುವುದು ಕಂಡರೆ ಆಕೆಗೆ ಮೈಮೇಲೆಲ್ಲಾ ಮುಳ್ಳುಗಳೇಳುತ್ತವೆ. ಹಂಗೇ ಬಯಲಿಗೆ ಹೋದರೆ ಅಷ್ಟುದ್ದಕ್ಕೂ ಸಾಕಷ್ಟು ಕೊಂಚ ಒಣಗಿದ ಸೆಗಣಿ ಸಿಗುವುದು.

ಸಣ್ಣು ತಡಮಾಡಲಿಲ್ಲ. ತನ್ನ ಮಾಸಿದ ಲಂಗವ ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಕಳೆಬೆಳೆದ ಬಯಲಿನಗುಂಟ ನಡೆದಳು. ಅಲ್ಲಲ್ಲಿ ಬಿದ್ದ ಸೆಗಣಿ ಉಂಡೆಗಳ ಎತ್ತಿ ಬುಟ್ಟಿಗೇರಿಸತೊಡಗಿದಳು. “ಅಕ್ಕೋ, ಬ್ಯಾಗೇ ಬಾರೇ… ಮನಿಕಡೆ ಯಾರೋ ಬಂದಿರು” ಉಗಾದಿ ಕರೆಯುತ್ತಿದ್ದ. ಮನೆಹೊರಗಿನ ಕಲ್ಲುಮರಿಗೆಯ ನೀರಲ್ಲಿ ಕೈಕಾಲು ತೊಳೆದು ಬಂದವಳಿಗೆ ಒಮ್ಮೆಲೆ ಆತನ ಕಂಡು ನಾಚಿಕೆಯಾಯ್ತು. ಅವ ಆಕೆಯ ಶಾಲೆಯ ಗೆಳತಿ ಸುವರ್ಣಳ ಅಣ್ಣ. ಸುವರ್ಣಳ ಅಕ್ಕನ ಮದುವೆ ಗೊತ್ತಾಗಿದೆ ಎಂದು ಆಕೆ ಹೇಳಿದ್ದು ನೆನಪಾಯ್ತು. ಬೇಗಬೇಗ ಬುಟ್ಟಿ ಮನೆ ಹಿಂದೆ ಇಟ್ಟು ಬಂದವಳಿಗೆ ಲಗ್ನ ಪತ್ರಿಕೆ ಕೊಟ್ಟು, ಒಂದು ಮುದ್ದಾದ ನಗೆಯನ್ನೆಸೆದು ಮದುವೆಗೆ ಬರುವಂತೆ ಸಹಜವಾಗಿ ಹೇಳಿ ಹೋದ ಆ ಹುಡುಗ. ಸಣ್ಣುವಿನ ಕಣ್ಣುಗಳಲ್ಲೋ ಮಾಯಕದ ಪೊರೆ ಅವಳಿಗರಿವಿಲ್ಲದೇ ಕಟ್ಟಿಕೊಂಡಿತು. ಮದುವೆಗೆ ಹೋಗುವ ಆಶೆ ಬೆಟ್ಟದಂತೆ ಬೆಳೆಯತೊಡಗಿತು.

‘ಉಗಾದಿ ಉಂಡ್ಕಂಡೀ ಮಲಿಕಾ, ಹಾ ಏನಾ…. ಅಲ್ಲಿ ಕಂಬಳಿ ಇತ್ತ ನೋಡಾ. ಚಾಪೆ ಹಾಕಂಡಿ ಮಲಿಕಣೋ, ಚುರುಕ ಇಂವಾ ಅಂದ ಹೇಳ್ಬೇಕ್ ನೋಡು ಯಾರರೂವಾ. ನಾ ಸೆಗಣಿ ಹಾಕಿ ಬತ್ತಿ. ಅವ್ವಿ ಬರುವಂಕ್ರಿಗೆ ಸೆಗಣಿ ಸರ್ರ್ಸಿಡುಕೆ ಹೇಳಿದು, ನಾ ಸರ್ರ್ಸಿಕಂಡೇರ್ವೆ. ಕಡೀಗೀ ಮಿಂದೆ ಬಂದ್ ಉಣ್ವೆ, ಮೈಯೆಲ್ಲಾ ಗಲೀಜಾಗೀದು.” ಎನ್ನುತ್ತಾ ಸಣ್ಣು ಅಂಗಳಕ್ಕಿಳಿದಳು.

ಬುಟ್ಟಿಯಿಂದ ತೊಪ್ಪನೆ ಅಂಗಳಕ್ಕೆ ಸೆಗಣಿ ಸುರಿದ ರಭಸಕ್ಕೆ ಬಾಯಿವರೆಗೂ ಹಾರಿದ ಸೆಗಣಿಯನ್ನು ಕೈಯಿಂದ ಒರೆಸಿಕೊಂಡು, ನೀರು ಹಾಕಿ ಕಾಲಿನಿಂದ ತೊಪತೊಪನೆ ಗುದ್ದಿ ಸೆಗಣಿಯನ್ನು ತೆಳ್ಳಗೆ ಪಾಯಸದಂತೆ ಹದ ಮಾಡಿದಳು. ಕೈಯಲ್ಲಿ ಹಿಡಿಸೂಡಿ ಹಿಡಿದು ಮಣ್ಣು ಎದ್ದಲ್ಲೆಲ್ಲಾ ಮೆತ್ತಿಮತ್ತಿ ಹಾಕತೊಡಗಿದಳು. ಕರಿ ಸೆಗಣಿಯಲ್ಲಿ ಅದ್ದಿ ನಿಂತ ತನ್ನ ಕಪ್ಪುಕಾಲುಗಳು ಇಂದೇಕೋ ಬೆಳ್ಳಬೆಳ್ಳಗೆ ಕಾಣುತ್ತಿರುವುದು ಸೆಗಣಿಯನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿತು. ಮತ್ತೊಮ್ಮೆ ಮದುವೆಗೆ ಹೋಗುವುದಕ್ಕಾಗಿ ಮನ ಕುಣಿಯಿತು. ಆದರೆ ಮದುವೆಗೆ ಹೋಗಲು ತನ್ನಲ್ಲಿ ಯಾವ ಬಟ್ಟೆಯೂ ಇಲ್ಲ. ಮತ್ತೀಗ ತಾನು ದೊಡ್ಡವಳಾಗಿರುವೆ. ಲಂಗ ರವಿಕೆ ಇದ್ದರೆಷ್ಟು ಚೆನ್ನಾಗಿರುತ್ತಿತ್ತು. ಏನು ಮಾಡಲಿ ಎನ್ನುವ ಯೋಚನೆಗೆ ಆಕೆಗೆ ತಟ್ಟನೇ ಹೊಳೆದದ್ದು ಅಮೋಘಳ ಜರಿ ಲಂಗ ರವಿಕೆ.

ಅಷ್ಟು ದೂರಕ್ಕೆ ಕಣ್ಣು ಹಾಯಿಸಿದಳು. ರಾಮದಾಸ ನಾಯಕರ ಮನೆಬಳಿಗೆ ತಂತಿ ಮೇಲೆ ಹರಹಿದ ರಾಶಿ ಬಟ್ಟೆಗಳು ಕಣ್ಣು ಕುಕ್ಕಿದವು. ಆ ಎಲ್ಲ ಬಟ್ಟೆಗಳ ನಡುವೆ ಅದೊಂದು ಮೊನ್ನೆ ಗಣಪತಿ ಹಬ್ಬದ ಮಾರನೆ ದಿನ ನಾಯಕರ ಒಬ್ಬಳೇ ಮಗಳು ಅಮೋಘ ಹಾಕಿಕೊಂಡು ಬಂದಿದ್ದಳು. ಆಕೆ ಪಕ್ಕದೂರಿನಲ್ಲಿ ಕಲಿಯುತ್ತಿದ್ದಾಳೆ. ತನ್ನಮ್ಮ ಆಕೆಯನ್ನು ನೋಡಿ ಮೆಚ್ಚಿ ಹೇಳುತ್ತಿದ್ದ ಮಾತು ಕಿವಿಯಲ್ಲಿ ಊದಿದಂತಾಗುತ್ತಲೇ ಇರುತ್ತದೆ. “ಆತಕಾಲಕ್ಕೆ ಬೋತಕಾಲಕ್ಕೆ [ಆಗೊಮ್ಮೆ ಈಗೊಮ್ಮೆ]ಬತ್ತೀದು ಮಗಾ. ಪಾಪ. ಅದೆಂಥಕೇ ಹಾಕಿರೇನೋ? ಬ್ಯಾರೇ ಕಡೀಗೆ ಕಲಿಯುಕೆ? ಇಲ್ಲಿ ಇಲ್ಲೂ ಇಲ್ಲಾಗೀತೇ ಶಾಲಿ? ಆ ಮಗಾ ಪಾಪ ಇಡೀ ದೀನೇ ಓದ್ತಿರದು. ಇಲ್ಲಿಗೇ ಬಂದ್ರೂ ಹಾ..” ಎಂದು ಕೊಂಡಾಡಿದಾಗೆಲ್ಲ ತನಗೇಕೆ ಕೋಪಬರುವುದೆಂದು ಆಕೆಗೆ ಗೊತ್ತಿಲ್ಲ. ಆದರೂ ಆ ಬಟ್ಟೆ ತೊಟ್ಟ ದಿನ ಆಕೆ ಎಷ್ಟೊಂದು ಕಳೆ ಕಳೆಯಾಗಿ ಕಾಣುತ್ತಿದ್ದಳು. ಕುಂಕುಮ ಬಣ್ಣದ ಜರಿ ಲಂಗ, ತೆಳುಬಂಗಾರದ ಬಣ್ಣದ ರವಿಕೆ ಮೇಲೊಂದು ಸೆರಗು, ಹೊದ್ದ ಆಕೆ ಆ ದಿನ ಥೇಟ್ ಸಿನಿಮಾ ಹಿರೋಯಿನ್ ಹಾಗೆ ಕಂಡಿದ್ದಳು. ಲಂಗ ತುಸು ಎತ್ತಿಹಿಡಿದು ಆಕೆ ನಡೆಯುತ್ತಿದ್ದರೆ ಜರಿಲಂಗದ ಸುತ್ತ ಇದ್ದ ನವಿಲುಗಳ ಚಿತ್ತಾರ ತಾನಾಗಿಯೇ ಎದ್ದು ಆಡಿದಂತೆ ಕಾಣಿಸುತ್ತಿತ್ತು.
ಆ ಲಂಗ ರವಿಕೆ ನನ್ನದಾಗಿದ್ದರೆ, ನಾನೂ ಹಾಗೇ…..

ಮನೆಹೊರಗಿನ ಕಲ್ಲುಮರಿಗೆಯ ನೀರಲ್ಲಿ ಕೈಕಾಲು ತೊಳೆದು ಬಂದವಳಿಗೆ ಒಮ್ಮೆಲೆ ಆತನ ಕಂಡು ನಾಚಿಕೆಯಾಯ್ತು. ಅವ ಆಕೆಯ ಶಾಲೆಯ ಗೆಳತಿ ಸುವರ್ಣಳ ಅಣ್ಣ. ಸುವರ್ಣಳ ಅಕ್ಕನ ಮದುವೆ ಗೊತ್ತಾಗಿದೆ ಎಂದು ಆಕೆ ಹೇಳಿದ್ದು ನೆನಪಾಯ್ತು.

“ಅಕ್ಕೋ. ಯಾಕೆನೋ ಹೊಟ್ಟೀಲಿ ಕಲಸದಂಗ್ಹೆ ಆತೀದೂ. ಬಯಲಕಡಿಗೆ ಹೋತಿನೇ”…. ಎನ್ನುತ್ತಾ ಉಗಾದಿ ಚೆಂಬು ಹಿಡಿದು ಹೊರಟೇ ಬಿಟ್ಟ. ಸಣ್ಣು ಬೇಗ ಬೇಗನೇ ಸೆಗಣಿ ಹಾಕತೊಡಗಿದಳು. ಸೆಗಣಿ ಹಾಕಿದ ದಿನವೆಲ್ಲ ಮಳೆಗೆ ಹೊಟ್ಟೆಕಿಚ್ಚು ಬಂದಂತೆ ಒಮ್ಮೆ ಹನಿಸಿ ಹೋಗುವುದು ಸಾಮಾನ್ಯ. ಆಗಲೇ ಕರಿ ಮೋಡಗಳು ಬಾನಲ್ಲಿ ಒಟ್ಟಾಗತೊಡಗಿದ್ದವು.

ಮತ್ತೆ ಸಣ್ಣು ಆ ವಠಾರದೆಡೆಗೆ ದೃಷ್ಟಿ ಬಿಟ್ಟಳು. ಆ ಲಂಗ ಕಾಣುತ್ತ… ಹೇಗಾದರೂ ಸರಿ, ಒಮ್ಮೆ ತೊಟ್ಟುಕೊಳ್ಳದೇ ಇರಲಾರೆ. ಲಂಗ ಆಕೆಯದ್ದಾದರೇನು? ಅದೆಷ್ಟು ಸಲ ಆಕೆಯ ಅಮ್ಮ ನನ್ನವ್ವ ತಂದ ಪಳದಿಗೆ ಹಾಕುವ ಜುಮ್ಮನಕಾಯಿಯನ್ನು ಬೇಡಿಪಡೆದಿಲ್ಲ. ತಾನು ಲಂಗ ಬೇಡಿದರಾಯಿತು. ಆದರೆ ಆಕೆ ಕೊಡದೇ ಹೋದರೆ? ಆಕೆಯ ಅಪ್ಪ ಬೈದು ಹಂಗಿಸಿದರೆ? ಬೇಡ. ಎಂದುಕೊಂಡಳು.

ಮನಸ್ಸು ನಿಲ್ಲುತ್ತಿಲ್ಲ. ಸೆಗಣಿ ಹಾಕಿಯಾಗಿತ್ತು. ಕೈಕಾಲು ತೊಳೆದುಕೊಂಡಳು. ನಿಧಾನವಾಗಿ ತಮ್ಮ ಮನೆಯ ಪಕ್ಕಕ್ಕೆ ಇರುವ ರಾಮದಾಸ ನಾಯಕರ ಮನೆ ಕಡೆ ಪಾಗಾರದ ಹತ್ತಿರ ಬಂದಳು. ರಜಾ ದಿನವಾದ ಕಾರಣ ದೊಡ್ಡ ಮನೆಯ ಜನವೆಲ್ಲ ಟಿ.ವ್ಹಿ. ನೋಡುತ್ತಲೋ, ಅಥವಾ ಗಡದ್ದಾಗಿ ನಿದ್ರಿಸುತ್ತಲೋ ಇರುವುದು ಆಕೆಗೆ ಗೊತ್ತು. ಕೆಲವೊಮ್ಮೆ ಸಿನೇಮಾ ನೋಡಲು, ಧಾರವಾಹಿ ನೋಡಲು ಆಗಾಗ ಹೋಗುತ್ತಿದ್ದ ಮನೆ ಅದು.
ತಮ್ಮ ವಠಾರದ ಮೂಲೆಯಲ್ಲಿ ಗೇರುಗಿಡಕ್ಕೆ ತಗುಲಿಸಿಟ್ಟ ಕೊಕ್ಕೆ ತೆಗೆದುಕೊಂಡಳು. ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು. ಕೊಕ್ಕೆಯನ್ನು ಯಥಾವತ್ತಾಗಿ ಮೊದಲಿದ್ದ ಜಾಗೆಗೆ ಮುಟ್ಟಿಸಿ, ಓಡೋಡಿ ಮನೆಗೆ ಬಂದಳು.

ಎದೆಯೊಳಗೆ ಗುಟುಕು ನೀರಿರಲಿಲ್ಲ. “ಏ ಸಣ್ಣು ಇದೇನೇ ಮಾಡ್ತೀವೆ, ಯಾರಾರೂ ನೋಡಿ ಹೇಳಕುಟ್ರೆ ಏನ ಮಾಡ್ವೇ? ಮಳ್ಳ ಹಿಡದಿದೆಯೇನೇ?” ಒಳಮನಸ್ಸು ನುಡಿಗೊಡುತ್ತಿದ್ದರೂ ಆಕೆ ಕೇಳುವ ಸ್ಥಿತಿಯಲ್ಲಿರಲಿಲ್ಲ. ಮನೆಯೊಳಗೆ ಹೋಗಲು ಇಷ್ಟವಾಗಲಿಲ್ಲ. ಜೋಪಡಪಟ್ಟಿ ಮನೆಯ ಮುಂದೆ ತೆಂಗಿನ ಗಿಡದ ಬುಡದಲ್ಲಿ ಹಳ್ಳದಿಂದ ತಂದ ಹಾಸುಗಲ್ಲು ಹಾಸಿ ಸುತ್ತೆಲ್ಲಾ ತೆಂಗಿನ ಸೋಗೆ ಹೆಣೆದು ಕಟ್ಟಿದ ಬಡವರ ಮನೆಯ ನಾಣಿಗೆ ಮನೆ. ಆ ಕಡೆ ಹೋದಳು. ನಾಣಿಗೆ ಕಲ್ಲಿನ ಮೇಲೆ ಬಂದು ನಿಂತು ಸಮಾಧಾನಿಸಿಕೊಂಡಳು. ಬಟ್ಟೆ ತೊಡಬೇಕೆನ್ನಿಸಿತು. ಆದರೆ ಮೈಯೆಲ್ಲಾ ಸೆಗಣಿಯ ವಾಸನೆ ಬಡಿಯುತ್ತಿದೆ. ಏನು ಮಾಡೋಣ? ಮಿಂದು ಆಮೇಲೆ ಹಾಕಿನೋಡಬೇಕು ಎಂದೆನ್ನಿಸಿತು. ಆದರೆ ಅಷ್ಟರಲ್ಲಾಗಲೇ ತಡವಾಗಿದೆ. ತಂದೆತಾಯಿ ಬರುವ ಹೊತ್ತು. ಒಮ್ಮೆ ಹೀಗೆ ಹಾಕಿಕೊಂಡು ನೋಡುವೆ ಎನ್ನುತ್ತಾ ತನ್ನ ಹಳೆಯ ಲಂಗ ಬಿಚ್ಚಿ ಜರಿ ಲಂಗ ತೊಟ್ಟಳು. ಆನಂದ ಉಮ್ಮಳಿಸಿ ಬರುತ್ತಿತ್ತು. “ಅಂಯ್ಯ…. ಒಂದ ಕನ್ನಡಿನರೂ ಇದ್ರೆ, ನೋಡ್ಕಂತಿದ್ದೆ.” ಎನ್ನುತ್ತಾ ಒಮ್ಮೆ ಸುತ್ತ ಜೋರಾಗಿ ತಿರುಗಿದಳು. ನವಿಲುಗಳು ತನ್ನ ಮೊಣಕಾಲ ಮೇಲೆ ಕುಣಿದಂತೆ ಅನ್ನಿಸಿತು.

ಆದರೆ ಆ ಜೋರಿಗೆ ಕಾಲಿನ ಹಿಮ್ಮಡಿ ನಾಣಿಗೆಗೆ ಹಾಸಿದ ಎರಡು ಹಾಸುಗಲ್ಲಿನ ನಡುವಿನ ಸಂದಿನಲ್ಲಿ ಸಿಕ್ಕಿಬಿಟ್ಟಿತು. ವಿಪರೀತ ಗಾಬರಿಯಾಗಿ ಉಲ್ಟಾ ತಿರುಗಿದಳು. ಕಾಲು ಒಳಗೆ ಮುರಿದಂತೆ ಅನ್ನಿಸಿತು, ಹೊರಬರುತ್ತಿಲ್ಲವೆಂದು ಜೋರಾಗಿ ಎಳೆದ ರಭಸಕ್ಕೆ ಎಳೆಎಲುಬು ಲಟಕ್ ಎಂದಿತು. ಶರೀರವೀಡಿ ನೋವು ಸಂಚರಿಸಿದಂತೆ ಸಣ್ಣು ನೋವುತಾಳದೇ “ಅಂಯ್ಯ.. ಅವ್ವಾ.. ಸತ್ತೇಂ..” ಎಂದು ಬೊಬ್ಬಿರಿಯುವಂತೆ ಕೂಗಬೇಕೆಂದುಕೊಂಡವಳು ಮೈಮೇಲಿನ ಲಂಗದ ನೆನಪಾಗಿ ಬಾಯಿತೆರೆದರೂ ಸದ್ದು ಹೊರಬಿಡಲಿಲ್ಲ. ಕಣ್ಣುಗಳಿಂದ ಧಾರಾಕಾರ ನೀರು ಸುರಿಯುತ್ತಿತ್ತು. ಹಾಗೇ ಲಗುಬಗೆಯಿಂದ ಲಂಗವನ್ನು ಹೇಗೋ ಮಾಡಿ ಕಳೆದಳು. ಹಳೆಯ ಲಂಗ ತೊಟ್ಟುಕೊಳ್ಳುತ್ತಿದ್ದಂತೆ ಅವ್ವನ ದನಿ ಕೇಳಿಬಂತು.. “ ಇಬೂ, ಸಣ್ಣುನೇಯಾ ಇಟ್ ಚೆಂದಾಗಿ ಸೆಗಣಿ ಹಾಕೀದು. ಇಳಗುತ್ತಿ ಅಂದ್ಕಂಡ್ರೇ ನನ್ನ ಮಗಳು ಈಗೇ ಹುಷಾರಾಗಿದು. ಮಗಾ ಎಲ್ಲಿಂವ್ಯೇ?” ಎಂದು ಕರೆಯುತ್ತಿದ್ದರೆ, ಸಣ್ಣು ಓಗೊಡಲಿಲ್ಲ. ಕುಶಲಿ ಆಚೀಚೆ ಹುಡುಕತೊಡಗಿದಳು.

ಅಪ್ಪನ ದನಿ “ಇಲ್ಲೇ ಎಲ್ಲೋ ಆಡುಕೇ ಹೋಗಿರೇನಾ… ಉಗಾದಿನೂ ಕಾಣುಕಲಾ” ಎನ್ನುತ್ತಾ ನಾಣಿಗೆಯ ಕಡೆಯೇ ದ್ವನಿ ಹತ್ತಿರವಾದಂತೆ ಅನ್ನಿಸಿತು. ನಾಣಿಗೆಗೆ ಮರೆಮಾಡಲೆಂದು ಕಟ್ಟಿದ ತೆಂಗಿನ ಸೋಗೆಯ ತೂತುಗಳಿಂದ ಕಣ್ಣು ಹಾಯಿಸಿದಳು. ಆತ ನಾಣಿ ಕಡೆಗೆ ಬರುತ್ತಿದ್ದ. ಆಕೆ ತಡಮಾಡಲಿಲ್ಲ. ನೋವಿನ ಉಸಿರಿಗೆ ಕೈಅದುಮಿ ಹಿಡಿದುಕೊಂಡು ಒಂದೇ ಗುಪ್ಪಿಗೆ ಬಚ್ಚಲಿಂದ ಕೊಟ್ಟಿಗೆ ಹಿಂದಿನ ಗೊಬ್ಬರ ಕುಳಿಯ ಹತ್ತಿರ ಬಂದಿದ್ದಳು. ಬಾಯಿಮುಚ್ಚಿ ಅಳುತ್ತಲೇ ಗೊಬ್ಬರ ಕುಳಿಯಲ್ಲಿ ಕೈಯಿಂದಲೇ ಬೆದಕಿ ಕೆದರಿ ಸಣ್ಣಹೊಂಡ ಮಾಡಿದಳು. ಗೊಬ್ಬರ ಹುಳುಗಳು ಮಿಡುಕಾಡಿ ಹೊರಬರುತ್ತಿದ್ದರೆ ಬೆಳಿಗ್ಗೆ ಚಾ ಜೊತೆ ತಿಂದ ಬಟರು ಹೊರಬರುವಂತೆ ವಾಕರಿಕೆ ಬರುತ್ತಿತ್ತು. ಆದರೆ ಅದನ್ನು ನೋಡುತ್ತಾ ಕುಳಿತರೆ ಆಗದೆಂದು ಕೈತಾಗುತ್ತಲೆ ಮಿಣಿಮಿಣಿ ಎನ್ನುವ ದಪ್ಪಹುಳುಗಳ ಮುಟ್ಟಿಮುಟ್ಟಿಯೇ ಅದೆಷ್ಟು ಬೇಗ ಹೊಂಡ ಬಗೆದಳೆಂದರೆ ನಿಮಿಷಾರ್ಧದಲ್ಲಿ ಚೆಂದದ ಜರಿ ಲಂಗ ಆ ಹೊಂಡದಲ್ಲಿ ಮುದುರಿ ಕುಳಿತಿತು. ಅದರ ಮೇಲೆ ಯಾರಿಗೂ ಊಹೆ ಬರದಂತೆ ಪುನಃ ಕೊಳೆತ ಗೊಬ್ಬರದ ಉಂಡೆಗಳು ಪೇರಿಸಲ್ಪಟ್ಟವು. ಪಸೆಯಾರಿದ ನಾಲಗೆಯನ್ನು ತುಟಿಯಿಂದ ಸವರುತ್ತಾ, ನೋವಿಗೆ ಉಕ್ಕುತ್ತಿರುವ ಕಣ್ಣೀರು ಒರೆಸಿಕೊಳ್ಳುತ್ತಾ ಕುಂಟುತ್ತಾ ನಾಣಿಗೆಗೆ ಬಂದಳು. ನಾಣಿಗೆ ಕಡೆಯೇ ಬರುತ್ತಿದ್ದ ಅಪ್ಪ ಮಳೆಯ ಸುಣುಕು ಸಿಕ್ಕಂತಾಗಿ ಮನೆಕಿಬಳಿಗೆ ಸೌದೆ ಜೋಡಿಸತೊಡಗಿದ್ದನ್ನು ನೋಡಿದಳು. ಈಗ ಅಪಾದಮಸ್ತಕ ನೋವು ಹಿಂಡಲಾರಂಭಿಸಿದಂತೆ ತಡೆಯಲಾಗಲಿಲ್ಲ.

“ಅವ್ವಾ … ನಾ ಸತ್ನೇ… ಅವ್ವಾ.. ಕಾಲು ಉರಿಯಾತೀದೆ.. ಅವ್ವೋ..” ಅನ್ನುತ್ತಾ ಬಚ್ಚಲಿನ ಕಲ್ಲಿನ ಮೇಲೆ ಕುಸಿದು ಕುಳಿತಳು. ಮಕ್ಕಳಿಬ್ಬರೂ ಆಡಲು ಹೋಗಿರಬಹುದೆಂದು ಗೃಹಿಸಿದ ಹೆತ್ತವರು ಒಮ್ಮೆಲೆ ಎದ್ದ ಪ್ರಲಾಪಕ್ಕೆ ಬೆಚ್ಚಿಬಿದ್ದರು. ಓಡೋಡಿ ಬಂದರು. ಆಕೆಯ ಎತ್ತಿ ಉಪಚರಿಸತೊಡಗಿದರು. ಉಗಾದಿಯೂ ಖಾಲಿತಂಬಿಗೆ ಹಿಡಿದು ಬಂದವನು ಅಕ್ಕನ ಆರ್ತನಾದ ನೋಡಿ ಅಳತೊಡಗಿದ.
ಗೊಬ್ಬರ ಗುಂಡಿಯಲ್ಲಿ ಚೆಂದದ ಲಂಗದ ಒಳಗೆ ಗೊಬ್ಬರ ಹುಳುಗಳು ಗೂಡುಕಟ್ಟುತ್ತಿದ್ದರೆ, ಸಣ್ಣುವಿನ ಹಿಮ್ಮಡಿಯ ಗಂಟು ಊದುತ್ತಾ ಹೋಗುತ್ತಿತ್ತು.