ತಾವರೆ

ತಂಗಾಳಿ ಮುತ್ತಿಕ್ಕೆ
ಕೊಳ ಕಂಪಿಸಿತು
ಕಿರುದೆರೆಗಳೆದ್ದು
ತಾವರೆಯು ನಕ್ಕಿತು

ಕೊಳದ ಕನ್ನಡಿಯಲ್ಲಿ
ಶಿಷ್ಯರ ಬಿಂಬ ಕಂಡು
ಬುದ್ಧಗುರುವಿನ ಮೌನ
ತುಟಿಬಿರಿದು ಅರಳಿತು
ಇನ್ನೊಂದು ತಾವರೆ

ಕೊಳಕ್ಕಿಳಿದ ಶಿಷ್ಯನೊಬ್ಬ
ಕಮಲದ ದಂಟನ್ನು
ಮುರಿದು ಹೂತಂದು
ಅರ್ಪಿಸಿದ ಗುರುವಿಗೆ

ಕರುಣಾಳು ಬುದ್ಧನ
ಕಣ್ಣಂಚಿನಲಿ ನೀರು
ಗೋಣು ಮುರಿದ
ತಾವರೆಯ ಕಂಡು

ಮೃದುವಾಗಿ ನೇವರಿಸಿ
ಕಂಬನಿಯನೊರೆಸಿದ
ದಳದಳದಲ್ಲಿ ನೀರಹನಿ
ಮುತ್ತಾಗಿ ಹೊಳೆದು

ಗುರುವಿನ ಕಣ್ಣಂಚಿನ ನೀರು
ಶಿಷ್ಯರೆದೆಯಲ್ಲಿ ಜಿನುಗಿ
ಕೊಳಗಳೆದ್ದವು ಒಳಗೆ
ಅಲ್ಲಿ ಅರಳಿದವು ತಾವರೆ

ಪದ್ಮಾಸನ ಭಂಗಿಯಲಿ
ದಳದಳದ ಮೇಲೆ ಕುಳಿತ
ಗುರು ನಗುತಿದ್ದ
ತಾವರೆಯೆ ತಾನಾಗಿ

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ

 

(ಕಲಾಕೃತಿ: ರೂಪಶ್ರೀ ಕಲ್ಲಿಗನೂರ್)