Advertisement
ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ

ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ

ಗುರುತು

ಗುರುತಾಯಿತೇ ಎಂದಳು ಮೊನ್ನೆ ಸಿಕ್ಕವಳು;
ಎದುರಿಗೇ ನಿಂತಿದ್ದಳು, ಪರಿಚಿತಳೇ ? ನಕ್ಕಳು
ಹಳೆಯ ರೂಪಕದಲ್ಲಿ ಹೂವು ಬಿರಿದಂತೆ
ತಬ್ಬಿಬ್ಬಾಗಿ ನೋಡಿದೆ: ಉರಿದ ಜ್ವಾಲೆ
ಆರಿ ಕಣ್ಣಲ್ಲಿ ನಿಗಿನಿಗಿ ಕೆಂಡವೂ ಉಳಿಯದೆ
ಬಿಟ್ಟ ಬೂದಿಯಲ್ಲಿ ಹೆಜ್ಜೆ ಗುರುತುಗಳೂ ಇರಲಿಲ್ಲ
ಮೈಬಣ್ಣದಲ್ಲಿ ಎಷ್ಟೊ ಬಣ್ಣಗಳು ಬೆರೆತು ಉಳಿದ
ಬಣ್ಣಕ್ಕೆ ಚಹರೆಯೇ ಇದ್ದಂತಿರಲಿಲ್ಲ;

ಕಾಲದ ರಭಸದ ಓಟಕ್ಕೆ ಸಿಕ್ಕಿ ನಜ್ಜುಗುಜ್ಜಾಗಿದ್ದಳು
ರಭಸದ ಚೆಂಡು ನೆಲಕ್ಕೆ ಬಡಿದು ಮುಗಿಲಿಗೆ ಹಾರಿ
ಎಲ್ಲಿ ಮಾಯವಾಯಿತು? ಗಾಳಿ ತುಂಬಿದ ಬೆಲೂನು
ದಿಕ್ಕು ದೆಸೆಯಿಲ್ಲದೆ ಏರೇರಿ ಮುಗಿಲ ಹಾದಿಯಲ್ಲಿ
ಕಾಣುತ್ತ ಕಾಣುತ್ತ ಚುಕ್ಕೆಯಾಗಿ ಮತ್ತೆ ಮಾಯವಾಗಿ

ಯಾವ ದಾರಿ, ಯಾವ ಗುರುತು, ಗುರುತಾಯಿತೇ
ಎಂದರೆ ಯಾವ ಗುರುತು? ಬಾಲ್ಯಕೊಂದು ಗುರುತು
ಯೌವನದ ರಭಸ ತುಳುಕಿದರೆ ಮತ್ತೊಂದು, ಮುಂದೆ
ಹಾದಿ ಕವಲೊಡೆದು ಎತ್ತ ಪಯಣವೊ, ಹೇಳಲಿ ಹೇಗೆ
ಎದುರು ನಿಂತವಳು ಯಾರೆಂದು, ಯಾವ ಗುರುತೆಂದು?

ಮಾತು, ಮಾತಿನ ಗತ್ತು ಗೊತ್ತು ಎನ್ನುವಂತೆ, ಗೊತ್ತಿರದಂತೆ
ಅರ್ಥದ ಬೆನ್ನುಹತ್ತಿದರೆ, ಯಾವುದಕ್ಕೆ ಏನು ಅರ್ಥ, ಅನರ್ಥ
ಅಪಾರ್ಥ, ತಿಳಿದಿತ್ತೆ ಪಾರ್ಥನಿಗೆ ತಾನು ಬಿಟ್ಟ ಬಾಣದ ಹಾದಿ
ನೆತ್ತರ ಕೆಸರಲ್ಲಿ ಹೂತ ಚಕ್ರವ ಎತ್ತುತ್ತಿದ್ದ ಕರ್ಣನ ಎದೆಯಾಳದ
ಉಸಿರ ಬಡಿತ? ನೋಟದಲ್ಲೆ ನಗು ತುಳುಕಿಸಿದ ಕೃಷ್ಣನ ಕುಹಕ?

ನಗುತ್ತಲೇ ಇದ್ದಳು ನನ್ನ ಗೊಂದಲಕ್ಕೆ, ಆ ನಗುವಿನಲ್ಲಿತ್ತೆ
ಈಕೆಯ ಗುರುತು? ಮತ್ತೆ ಮತ್ತೆ ಕಣ್ಣಿಟ್ಟು ನೋಡಿದರೆ
ನಗುವು ನಗುವಾಗಿರಲಿಲ್ಲ, ನೋವಿನಲಿ ಅದ್ದಿ ತೆಗೆದ ಬಣ್ಣವನು
ಹೊದ್ದ ಚಾದರದಂತೆ ಕಂಡು ಎದುರು ನಿಂತವಳು ಮಾಯಾವಿ-
ಯಂತೆ ಕಂಡಿತು. ಕಾಣವುದು, ಕಾಣಿಸುವುದು, ಗೋಚರಿಸುವುದು
ಎಷ್ಟೊ ಪದಗಳ ಹಿಡಿದೆಳೆದರೂ ಗುರುತಿನ ಎಳೆಯೇ ಸಿಕ್ಕಲಿಲ್ಲ

ನನ್ನ ಗುರುತಿರಬೇಕು ಅವಳಿಗೆ, ಹಗುರಾಗಿ ಹತ್ತಿರ ಬಂದು ಕೈ
ಕುಲಕಿ ಕೇಳಿದಳಲ್ಲ, ಗುರುತಾಯಿತೇ ಎಂದು? ಅವಳ ನಗೆಯಲ್ಲೂ
ನನ್ನ ಗುರುತು ಇದ್ದಂತಿತ್ತು, ಎಷ್ಟು ಸುಲಭ, ಸರಳ ಗುರುತೆಂಬುದು
ಯಾವುದು ನನ್ನ ಗುರುತು? ಯಾವುದು ನನ್ನ ಚಹರೆ? ಕಣ್ಣೆ, ಮೂಗೇ,
ಚರ್ಮದ ಬಣ್ಣವೇ, ಮಾತೆಂಬ ಮಾತಿನ ಗತ್ತೆ, ಅರ್ಥವಾಗದ ಸುಳಿಯೇ?

ಸುಮ್ಮನೇ ನೋಡುತ್ತ ನಿಂತೆ, ನಗಬೇಕೆಂದರೂ ನಗುವಿನ ನೆರಳೂ ಸುಳಿಯಲಿಲ್ಲ

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ