ನಮ್ಮ ಹೆಂಚಿನ ಮನೆಯಲ್ಲಿ ಜೇಡರ ಬಲೆ ತೆಗೆಯುವುದೇ ಕಡು ಕಷ್ಟದ ಕೆಲಸ. ತೆಗೆದ ಒಂದೇ ವಾರಕ್ಕೆ ಇಲ್ಲಿ ಒಕ್ಕಲೇ ಇಲ್ಲ ಎನ್ನುವಷ್ಟು ಜೇಡರಬಲೆ ತುಂಬಿ ಬಿಡುತ್ತಿದ್ದವು. ಆಗೆಲ್ಲಾ ಒಂದು ಮಾತಿತ್ತು. “ಗಂಡಸರು ಜೇಡರ ಬಲೆ ತೆಗೆದರೆ ಜೇಡ ಬಲೆ ಕಟ್ಟುವುದು ನಿಲ್ಲಿಸುವುದಂತೆ” ಅಂತ. ಆದರೆ ಇದೆಷ್ಟು ಸುಳ್ಳು ಅಂದರೆ ನಾನು ಬಲೆ ತೆಗೆದ ಮೂರನೇ ದಿನಕ್ಕೆ ಮತ್ತೆ ಜೇಡಗಳು ಬಲೆ ಕಟ್ಟಲು ತೊಡಗುತ್ತಿದ್ದವು. ಬಹುಶಃ ಯಾರೋ ಮುತ್ತಾತನ ಕಾಲದ ಚತುರ ಅಜ್ಜಿಯೊಬ್ಬಳು, ಕೆಲಸ ಮಾಡದೆ ಸೋಂಬೇರಿಗಳಂತೆ ಬೀಳುವ ಗಂಡಸರಿಗೆ ಪಾಠ ಕಲಿಸಲು ಈ ತತ್ವ ಉಂಟು ಮಾಡಿದ್ದಿರಬೇಕು. ಹೀಗಂತ ಹೇಳಿದರೆ ಉಮ್ಮ ಬಿದ್ದು ಬಿದ್ದು ನಗುತ್ತಾರಷ್ಟೇ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ

 

ಪ್ರವಾದಿ ಮುಹಮ್ಮದರು ಶತ್ರುಗಳ ಉಪಟಳ ತಾಳಲಾರದೆ ಮಕ್ಕಾ ಬಿಟ್ಟು ಮದೀನಾಗೆ ಹಿಜಿರಾ ಹೊರಡುವ ದಾರಿಯಲ್ಲಿದ್ದರು. ಮರುಭೂಮಿ ಗುಡ್ಡಗಾಡು ಪ್ರದೇಶದಲ್ಲಿ ಸಶಸ್ತ್ರ ಶತ್ರು ಸೇನೆ ಅವರನ್ನು ಹುಡುಕುತ್ತಿತ್ತು. ವಿಶ್ರಾಂತಿಗಾಗಿ ಒಂದು ಗುಹೆ ಗೊತ್ತುಪಡಿಸಿ ಸಹಚರರಾದ ಅಬೂಬಕ್ಕರ್ ಅವರೊಂದಿಗೆ ತಂಗಿದರು. ಹುಡುಕುತ್ತಿದ್ದ ಶತ್ರುಗಳಿಗೆ ಈ ಗುಹೆಯೂ ಕಂಡಿತು. ಎಲ್ಲಾ ಗುಹೆಗಳನ್ನು ಪರೀಕ್ಷಿಸುತ್ತಾ ಶತ್ರುಗಳು ಜಾಲಾಡುತ್ತಿರಬೇಕಾದರೆ ಜೇಡವೊಂದು ಬಂದು ತಥಾಕಥಿತ ಗುಹೆಯ ಬಾಗಿಲಿಗೆ ಬಲೆ ನೇಯ್ದು ಬಿಟ್ಟಿತು.

ಗುಹೆ ಹುಡುಕಿ ಬಂದವರಿಗೆ ಈ ಗುಹೆಯೊಳಗಿರಬಹುದೆಂದು ಅನ್ನಿಸಲಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಜೇಡರ ಬಲೆಗಳು ಅತೀ ದುರ್ಬಲವಾದುದು. ಮನುಷ್ಯನಂತಹ ದೈತ್ಯರು ಹಾದು ಹೋಗುವಾಗಲೇ ಅದು ಹರಿದು ಹೋಗುವುದು. ಸದ್ಯ ಬಲೆಗಳು ಅಡ್ಡಲಾಗಿ ಹಾದು ಹೋಗಿ ಒಳಗಿದ್ದಾರೆ ಎಂಬುವ ಸುಳಿವೂ ಕೊಡದಂತೆ ಜೇಡ ರಕ್ಷಿಸಿತಂತೆ. ಈ ಚರಿತ್ರೆ ಹೇಳುವ ಉಮ್ಮನಿಗೂ ಕೇಳಿಸಿಕೊಳ್ಳುವ ನಮಗೂ ತುಂಬಾ ಖುಷಿ. ಇದೇ ಕಾಳಜಿಯಿಂದ ಉಮ್ಮ ಜೇಡವನ್ನು ಕೊಲ್ಲಬಾರದು ಎನ್ನುವರು.

ನಮ್ಮ ಹೆಂಚಿನ ಮನೆಯಲ್ಲಿ ಜೇಡರ ಬಲೆ ತೆಗೆಯುವುದೇ ಕಡು ಕಷ್ಟದ ಕೆಲಸ. ತೆಗೆದ ಒಂದೇ ವಾರಕ್ಕೆ ಇಲ್ಲಿ ಒಕ್ಕಲೇ ಇಲ್ಲ ಎನ್ನುವಷ್ಟು ಜೇಡರಬಲೆ ತುಂಬಿ ಬಿಡುತ್ತಿದ್ದವು. ಮತ್ತೆ ಒಂದು ಉದ್ದ ಕೋಲಿನ ಕೊನೆಗೆ ಹಿಡಿಸೂಡಿ ಕಟ್ಟಿ ಗೋಡೆ ಉಜ್ಜುವ ವ್ಯವಧಾನ ಹೇಳುವುದೇ ಬೇಡ. ಆಗೆಲ್ಲಾ ಒಂದು ಮಾತಿತ್ತು. “ಗಂಡಸರು ಜೇಡರ ಬಲೆ ತೆಗೆದರೆ ಜೇಡ ಬಲೆ ಕಟ್ಟುವುದು ನಿಲ್ಲಿಸುವುದಂತೆ” ಅಂತ. ಆದರೆ ಇದೆಷ್ಟು ಸುಳ್ಳು ಅಂದರೆ ನಾನು ಬಲೆ ತೆಗೆದ ಮೂರನೇ ದಿನಕ್ಕೆ ಮತ್ತೆ ಜೇಡಗಳು ಬಲೆ ಕಟ್ಟಲು ತೊಡಗುತ್ತಿದ್ದವು. ಬಹುಶಃ ಯಾರೋ ಮುತ್ತಾತನ ಕಾಲದ ಚತುರ ಅಜ್ಜಿಯೊಬ್ಬಳು, ಕೆಲಸ ಮಾಡದೆ ಸೋಂಬೇರಿಗಳಂತೆ ಬೀಳುವ ಗಂಡಸರಿಗೆ ಪಾಠ ಕಲಿಸಲು ಈ ತತ್ವ ಉಂಟು ಮಾಡಿದ್ದಿರಬೇಕು. ಹೀಗಂತ ಹೇಳಿದರೆ ಉಮ್ಮ ಬಿದ್ದು ಬಿದ್ದು ನಗುತ್ತಾರಷ್ಟೇ.

ಆ ದಿನ ಮಸೀದಿಯಲ್ಲಿ ಕಥಾ ಪ್ರಸಂಗವಿತ್ತು. ಹಾಗಂದರೆ ಗತಕಾಲದ ಚಾರಿತ್ರಿಕ ವ್ಯಕ್ತಿತ್ವಗಳ ಕುರಿತು ಹಾಡು ಕಥೆಗಾರಿಕೆ ಮೂಲಕ ಚರಿತ್ರೆಗಳನ್ನು ಹೇಳುವ ಕಾರ್ಯಕ್ರಮ. ಈಗ ಇಂಥ ಕಾರ್ಯಕ್ರಮ ನಡೆಯುವುದು ಬಹಳ ಕಡಿಮೆಯೇ. ಅಂದು ಚರಿತ್ರೆ ಹೇಳಲು ಬಂದವರು ಕೇರಳದ ಕೋಝಿಕ್ಕೋಡಿನವರು. ಅವರ ಕಥಾ ಪ್ರಸಂಗಕ್ಕೆ ಒಂದಿಬ್ಬರು ಹಾಡುಗಾರರು, ಅವರು ಹಾಡಿ ಮುಗಿಯುವುದೊರಳಗೆ ಇವರು ಅದ್ಭುತವಾಗಿ ಕಥೆ ಆರಂಭಿಸಿ ಬಿಡುವವರು. ಆ ನೀಳ್ಗತೆಗಳು ಹುಣ್ಣಿಮೆ ಚಂದ್ರನನ್ನು ನಡು ರಾತ್ರಿಯವರೆಗೂ ಒಂಟಿಯಾಗಿಸದಷ್ಟು ದೀರ್ಘವಾಗಿ ನಡೆಯುತ್ತಿತ್ತು. ಮುಗಿಸಿ ಬರುವ ನಮಗೆಲ್ಲಾ ಖುಷಿಯೋ ಖುಷಿ.

ಆ ದಿನ ಲುಕ್ಮಾನುಲ್ ಹಕೀಮರ ಕಥೆ ಇತ್ತು. ಪ್ರಾಚೀನ ಕಾಲದ ಒಬ್ಬ ಸಂತ ಗುಲಾಮರ ಕಥೆಯದು. ಅವರೊಬ್ಬರು ಮಾರಕ ವ್ಯಾಧಿಯನ್ನು ಆಧ್ಯಾತ್ಮಿಕ ಮತ್ತು ಗಿಡಮೂಲಿಕೆಗಳಿಂದ ಗುಣಪಡಿಸುವ ಹಕೀಮರು. ಅವರ ಊರಲ್ಲಿ ಯಾರೋ ಒಬ್ಬರಿಗೆ ಪಾಂಡುವಿನಂತಹ ಬಿಳುಚಿಕೊಳ್ಳುವ ರೋಗ ಬಂದಿತ್ತಂತೆ. ಯಾರ ಬಳಿ ಹೋದರೂ ಗುಣವಾಗದು. ಕೊನೆಗೆ ತಲುಪಿದ್ದು ಹಕೀಮರ ಬಳಿಗೆ. ಅವರು ಕೊನೆಯ ಮದ್ದೆಂಬಂತೆ ಇಂತಿಂಥ ದಿನದಲ್ಲಿ ಆ ಬೆಟ್ಟದ ಮೇಲೆ ಒಬ್ಬಂಟಿಯಾಗಿ ಹೋಗಬೇಕೆಂದು, ಅಲ್ಲಿಗೆ ಆ ದಿನ ಜೇಡವೊಂದು ಸರ್ಪದೊಂದಿಗೆ ಸೆಣಸಾಡುತ್ತಾ ಇರುವುದೆಂದೂ, ಕೊನೆಗೆ ಅದರ ಕಡಿತಕ್ಕೆ ಹಾವು ಸಾಯುವುದೆಂದೂ, ಹಾಗೆ ಕಡಿದ ಜೇಡದಿಂದ ನಿನಗೆ ಕಡಿಸಿಕೊಂಡರೆ ನಿನ್ನ ರೋಗ ಗುಣವಾಗುವುದೆಂದೂ ಸಲಹೆಯಿತ್ತರು. ಅದು ಹಾಗೆಯೇ ಜರುಗಿ ರೋಗವು ಸಂಪೂರ್ಣ ಗುಣವಾಯಿತೆಂಬ ಅದ್ಭುತ ಚರಿತ್ರೆಯದು.

ಆ ದಿನ ರಾತ್ರಿ ಕಾರ್ಯಕ್ರಮ ಮುಗಿದು ಮನೆಗೆ ಬರಬೇಕಾದರೆ ಮನೆಯ ಗೇಟಿನ ಬಳಿ ಕಾಲು ಎಡವಿತು. ಅಂಗಾತ ಬಿದ್ದವನಿಗೆ ಕೈ ಮುಟ್ಟಿ ನೆಲದ ಮೇಲೆ ಜಾರಿ ಚರ್ಮ ಕಿತ್ತು ಹೋಯಿತು. ಆ ರಾತ್ರಿಯಲ್ಲಿ ನನ್ನ ವೇದನೆ, ಆರ್ತನಾದ ಹೇಳ ತೀರದು. ಮೊಣಕೈ ಚರ್ಮ ಸಣ್ಣಗೆ ಕಿತ್ತು ಬಂದು ರಕ್ತ ಹರಿಯತೊಡಗಿತು. ಅಪರಾತ್ರಿ ಮನೆಯಲ್ಲಿ ಬ್ಯಾಂಡೇಜು ಇರಲಿಲ್ಲ. ರಾತ್ರೋರಾತ್ರಿ ಆಸ್ಪತ್ರೆಗೂ ಹೋಗುವಂತಿಲ್ಲ. ಏನು ಮಾಡುವುದು, ಅಂತ ಚಿಂತಿಸುತ್ತಿರುವಾಗಲೇ ಉಮ್ಮ ಅಡುಗೆ ಮನೆ ಕಡೆ ತೆರಳಿದರು. ಬಿಳಿಯ ಉಣ್ಣೆಯಂತಹದೆನೋ ತಂದು ರಕ್ತ ಸುರಿಯುತ್ತಿರುವ ಗಾಯದ ಮೇಲೆ ಒತ್ತಿ ಇಟ್ಟರು. ರಕ್ತ ಅಲ್ಲಿಗೆ ನಿಂತಿತು. ನನಗೂ ಸ್ವಲ್ಪ ಹೆದರಿಕೆ ಹೊರಟು ಹೋಗಿತ್ತು. ಬೆಳಗ್ಗೆ ಏಳುವುದರೊಳಗಾಗಿ ಗಾಯ ಒಣಗಿದಂತಿತ್ತು. ನಾನೂ ಕುತೂಹಲದಿಂದಲೇ ಉಮ್ಮನಲ್ಲಿ ಕೇಳಿದ್ದೆ, “ಆ ರಾತ್ರಿ ಬಿಳಿಯ ಬ್ಯಾಂಡೇಜು ತಂದರಲ್ಲ, ಅದೇನು”.

ಅಂದು ಚರಿತ್ರೆ ಹೇಳಲು ಬಂದವರು ಕೇರಳದ ಕೋಝಿಕ್ಕೋಡಿನವರು. ಅವರ ಕಥಾ ಪ್ರಸಂಗಕ್ಕೆ ಒಂದಿಬ್ಬರು ಹಾಡುಗಾರರು, ಅವರು ಹಾಡಿ ಮುಗಿಯುವುದೊರಳಗೆ ಇವರು ಅದ್ಭುತವಾಗಿ ಕಥೆ ಆರಂಭಿಸಿ ಬಿಡುವವರು. ಆ ನೀಳ್ಗತೆಗಳು ಹುಣ್ಣಿಮೆ ಚಂದ್ರನನ್ನು ನಡು ರಾತ್ರಿಯವರೆಗೂ ಒಂಟಿಯಾಗಿಸದಷ್ಟು ದೀರ್ಘವಾಗಿ ನಡೆಯುತ್ತಿತ್ತು. ಮುಗಿಸಿ ಬರುವ ನಮಗೆಲ್ಲಾ ಖುಷಿಯೋ ಖುಷಿ.

“ಅದು ಜೇಡನ ಬಲೆಯಲ್ಲಿ ಸಿಗುವ ಬಿಳಿಯ ಹತ್ತಿಯಂತಹ ಪೊರೆ” ಅಂದಿದ್ದರು. ಒಂದೆರೆಡು ಬಾರಿ ಪರೀಕ್ಷಿಸಲೆಂದೇ ನಾನೂ ಅದನ್ನು ಕಿತ್ತು ತೆಗಿದಿದ್ದೆ. ಒಳಗೆ ಸಣ್ಣ ಮೊಟ್ಟೆಗಳಂತಹ ಬಿಳಿಯ ಹರಳೇನೋ ಕಂಡಿತ್ತು. ಅದು ಜೇಡನದ್ದೋ, ಇತರ ಯಾವುದೋ ಕೀಟ ನಿರ್ಮಿಸಿದ್ದೋ ಕರಾರುವಕ್ಕಾಗಿ ನಾನರಿಯೆ.

ಜೇಡ ಒಂದು ವಿಶಿಷ್ಟ ಪ್ರಬೇಧ. ಜಗತ್ತಿನಲ್ಲಿ ೪೦ ಸಾವಿರಕ್ಕೂ ಹೆಚ್ಚು ಪ್ರಭೇಧಗಳನ್ನು ಗುರ್ತಿಸಲಾಗಿದೆ. ನಾನು ವಿಹಾರಕ್ಕಾಗಿ ಬೆಳಗ್ಗೆ ನಡೆದುಕೊಂಡು ಹೋಗುವ ಕಾಡು ದಾರಿಯಲ್ಲೇ ಸುಮಾರು ಜಾತಿಯನ್ನು ನೋಡಿದ್ದೇನೆ. ಕೆಲವೊಂದು ಬೂದು ಬಣ್ಣದವುಗಳು, ಕೆಂಪು ಮತ್ತು ಕಪ್ಪು ಚುಕ್ಕಿಗಳಿರುವಂತದ್ದು. ಸಣಕಲು ಬಡವನಂತಹ ಜೇಡ. ಹೀಗೆ ಎಷ್ಟೆಷ್ಟೋ. ಇವುಗಳು ಕೀಟಭಕ್ಷಕ ಜೀವಿಗಳಾದ್ದರಿಂದ ಹಲವರ ತಪ್ಪು ತಿಳುವಳಿಕೆ ಹೀಗಿರುತ್ತದೆ. ಅವುಗಳು ಕೀಟಗಳನ್ನು ಹಿಡಿದು ಇಡೀಯಾಗಿಯೇ ಭಕ್ಷಿಸುವಂತವುಗಳೆಂದು.

ಒಮ್ಮೆ ನಾನು ಅಜ್ಜನ ತೋಟದ ನಡುವೆ ನಡೆಯುತ್ತಿರಬೇಕಾದರೆ ಚಂದದ ಚಿಟ್ಟೆಯೊಂದು ಹಾರುತ್ತಿತ್ತು. ಕುಷಿಯಿಂದ ನಾನು ಅದರ ಹಿಂದೆ ಓಡುತ್ತಿದ್ದೆ. ರಾವಣ ಮಾಯಾಜಿಂಕೆಯ ವೇಷ ಧರಿಸಿದಂತೆ ಅದು ಎಲ್ಲೆಲ್ಲೋ ಕಾಡಿನ ಮಧ್ಯೆ ನನ್ನನ್ನು ಹಿಂಬಾಲಿಸುವಂತೆ ಮಾಡುತ್ತಿತ್ತು. ಆದರೆ ಅಚಾನಕ್ಕಾಗಿ ಗಾಳಿಯಲ್ಲಿ ತೇಲಿದಂತೆ ಒಮ್ಮೆಲೆ ನಿಂತು ಬಿಟ್ಟಿತು. ಅರೇ, ಇದು ಹೇಗೆ ಸಾಧ್ಯವೆಂದು ಅವಾಕ್ಕಾಗಿ ನಾನೂ ಹತ್ತಿರಕ್ಕೆ ಬಂದೆ. ಕೈಗಟುಕದ ಎತ್ತರದಲ್ಲಿ ಚಿಟ್ಟೆ ಗಾಳಿಯಲ್ಲಿ ಕೊಸರಾಡುತ್ತಾ ರೆಕ್ಕೆ ಬಡಿಯಲಾಗದೆ ಚಡಪಡಿಸುತ್ತಿತ್ತು. ಕೆಳಗೂ ಬೀಳದೆ ಇದು ಯಾವುದೋ ಗುರುತ್ವಾಕರ್ಷಣ ಬಲ ಕಡಿದುಕೊಂಡ ಪ್ರದೇಶದಲ್ಲಿ ಸಿಲುಕಿದೆ ಎಂದು ನಾನು ತಿಳಿದೆ. ಇನ್ನಷ್ಟು ಹತ್ತಿರವಾದಾಗ ಮರದ ನೆರಳಲ್ಲಿ ಸ್ಪಷ್ಟವಾಯಿತು. ಯಾವುದೋ ಜೇಡರ ಬಲೆಯಲ್ಲಿ ಅದು ಸಿಕ್ಕಿ ಹಾಕಿಕೊಂಡಿತ್ತು. ಅಷ್ಟರಲ್ಲೇ ಸ್ಕೇಟಿಂಗ್ ಪಟುವಿನಂತೆ ಆ ಜೇಡ ಎಲ್ಲಿತ್ತೋ ಗೊತ್ತಿಲ್ಲ. ರೊಯ್ಯನೆ ಜಾರುತ್ತಾ ಚಿಟ್ಟೆಯ ಬಳಿ ಬಂತು. ಏನೋ ಗುಟ್ಟು ಹೇಳುವಂತೆ ಅಪ್ಪಿ ಹಿಡಿಯಿತು. ನಾಲ್ಕು ಬಾರಿ ಕೊಸರಾಡಿದ ಚಿಟ್ಟೆ ನಿಶ್ಚಲವಾಯಿತು. ಸುಮಾರು ಹೊತ್ತು ಆ ಚಂದದ ಚಿಟ್ಟೆಯನ್ನು ನೋಡುತ್ತಾ ಮನೆಗೆ ಬಂದೆ. ಮಾರನೇ ದಿನವೂ ನಾನು ಅಲ್ಲಿಗೆ ಬಂದೆ. ಚಿಟ್ಟೆ ಜೀರ್ಣಗೊಂಡಂತೆ ಅದರ ಮೈಯ ಕವಚ ಉಳಿಯುವಂತೆ ಕರಗಿ ಹೋಗಿತ್ತು. ನನ್ನ ಆಶ್ಚರ್ಯಕ್ಕೆ ಪಾರವಿರಲಿಲ್ಲ.

ನನಗೆ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವಿದ್ದುದರಿಂದ ನನಗೆ ತುಂಬಾ ದಿನ ರಾತ್ರಿ ಜೇಡವೇ ಕಾಡುತ್ತಿತ್ತು. ವಾಸ್ತವದಲ್ಲಿ ಜೇಡಗಳು ಬಲೆಗೆ ಸಿಕ್ಕಿ ಹಾಕಿಕೊಂಡ ಪ್ರಾಣಿಯ ಮೇಲೆ ವಿಷ ಪ್ರೋಷಣೆಗೈಯ್ದು ಕೊಲ್ಲುತ್ತದೆಯಂತೆ. ತೀಕ್ಷ್ಣ ವಿಷದಿಂದ ಅವು ಸಾಯುವುದಲ್ಲದೆ ಅವುಗಳ ಮಾಂಸ ಮಜ್ಜೆಗಳು ದ್ರವವಾಗಿ ಪರಿವರ್ತನೆ ಹೊಂದುತ್ತದೆಯಂತೆ. ಹಾಗೇ ಆ ದ್ರವವನ್ನು ಸುರ್ರೆಂದು ಸ್ಟ್ರಾದಲ್ಲಿ ಕುಡಿಯುವಂತೆ ಜೇಡಗಳು ಕುಡಿಯುತ್ತವಂತೆ. ಬ್ರೆಝಿಲ್ ಕಾಡುಗಳಲ್ಲಿ ಕಾಣ ಸಿಗುವ ದೊಡ್ಡ ಜೇಡಗಳಲ್ಲಿ ಮನುಷ್ಯನನ್ನೇ ಕೊಂದು ಹಾಕುವಷ್ಟು ವಿಷವಿರುವುದೆಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕಾಂಬೋಡಿಯ ದೇಶದಲ್ಲಿ ಜೇಡಗಳನ್ನು ಹುರಿದು ತಿನ್ನುತ್ತಾರಂತೆ. ಕೆಲವರು ಮರದ ಬೊಂಬುಗಳೊಳಗೆ ಬೇಯಿಸಿ ಖಾದ್ಯದಂತೆ ತಿನ್ನುತ್ತಾರೆ. ಈ ವರದಿ ಓದಿದ ಬಳಿಕ ನಾನು ಬ್ಯಾಂಬೂ ಬಿರಿಯಾನಿ (ಬಿದಿರು ಬಿರಿಯಾನಿ) ಯನ್ನು ತಿನ್ನುವುದು ಕಡಿಮೆ ಮಾಡಿದ್ದೇನೆ!

ಸಣ್ಣವನಿರುವಾಗ ಒಮ್ಮೆ ಕಳ್ಳ ಪೋಲಿಸು ಆಟವಾಡುತ್ತಿರ ಬೇಕಾದರೆ ಗುಡ್ಡಗಳ ಹತ್ತಿಳಿದು ಬರುತ್ತಿದ್ದೆವು. ನಮ್ಮೋರಗೆಯ ಗೆಳೆಯನೊಬ್ಬ ಆಟವಾಡಲು ಬಂದಿದ್ದ. ಅವನು ಆ ದಿನಗಳಲ್ಲಿ ಹಾಲಿವುಡ್ ಸಿನೆಮಾಗಳನ್ನು ನೋಡುತ್ತಿದ್ದವನು. ನಮಗೆ ಇಂಗ್ಲೀಷು ಕುಟ್ಟಿ ಹಾಕಿದರೂ ಬಾರದಷ್ಟು ಕಷ್ಟ. ಆಗ ಏನಾಯಿತೆಂದರೆ ನನಗೆ ಒಂದೇ ಸಮನೆ ಮೈ ತುರಿಸತೊಡಗಿತು. ನಾನು ಆಟ ಮುಗಿಸಿ ಅವನ ಬಳಿ ಬಂದೆ. “ಯಾಕೋ ಮೈ ತುರಿಸುತ್ತಿದೆ, ಬೊಕ್ಕೆ ಎದ್ದಿದೆ ನೋಡು” ಅಂದೆ. ಆಗಷ್ಟೇ ಕಣ್ಣ ಹಾಳೆಗೆ ಅಂಟಿದ ಜೇಡನ ಬಲೆಗಳು ಬಿಡಿಸಿಕೊಳ್ಳುತ್ತಿದ್ದೆ. ಅಷ್ಟರಲ್ಲೇ “ಹೇಯ್ ನೋಡು, ನೋಡು” ಎನ್ನುತ್ತಾ ನನ್ನ ಭುಜದಲ್ಲಿ ನಡೆಯುತ್ತಿದ್ದ ದೊಡ್ಡ ಜೇಡವನ್ನು ತೆಗೆದು ಹಾಕಿದ.

ಆಗಲಷ್ಟೇ ಸ್ಪೈಡರ್ ಮ್ಯಾನ್ ಮೂವಿ ನೋಡಿದ್ದ ಅವನು ನನ್ನಲ್ಲಿ ಭೀತಿ ಹುಟ್ಟಿಸಿದ. “ನೋಡು ಈ ಬೊಕ್ಕೆ ಜೇಡನ ರೂಪಕ್ಕೆ ತಿರುಗುತ್ತೆ, ಮತ್ತೆ ಮೈ ಮೇಲೆಲ್ಲಾ ತುಂಬಾ ಜೇಡನ ರೂಪಗಳು ಬರುತ್ತೆ” ಎಂದೆಲ್ಲಾ ಹೆದರಿಸಿದ. ನನಗೆ ಅಳು ಬರುವುದೊಂದೇ ಬಾಕಿ. ಮನೆಗೆ ಹೋಗಿ ಉಮ್ಮನಿಗೆ ತೋರಿಸಿದೆ. “ಅಲ್ಲಿಲ್ಲಿ ಮಂಗನಂತೆ ಮರ ಮರ ಹಾರುತ್ತಾ ಸುತ್ತಾಡಿಕೊಂಡಿದ್ದರೆ ಹೀಗೆಯೇ ಆಗುವುದು” ಎಂದು ಅರಿಶಿನ ಹಚ್ಚಿ ಬಿಟ್ಟರು. ಒಂದೇ ದಿನಕ್ಕೆ ಬೊಕ್ಕೆ ಶಮನವಾಯಿತು. ಕೊನೆಗೂ ನಾನು ಸ್ಪೈಡರ್ ಮ್ಯಾನ್ ಆಗದೇ ನಿಮಗೆ ಕಥೆ ಹೇಳುವವನಾಗುಳಿದೆ.

 

(ಫ್ಯೂಚರ್ಡ್ ಚಿತ್ರಕೃಪೆ: ವಿಪಿನ ಬಾಳಿಗ)