ಅಲ್ಲಿನ ಬಹುತೇಕರು ಫೋನ್ ಮಾಡಿದಾಗ ಕೇಳುವ ಮೊದಲ ಪ್ರಶ್ನೆ ಇದು! ನಾನು ಎಲ್ಲಿರುವೆ ಅಂತ ತಿಳಿದುಕೊಂಡು ಹೊಲದಲ್ಲಿ ಏನಾದರೂ ಮಾಡಲು ಹೊರಟಿರಬಹುದೆ? ಎಂಬಂತಹ ಸಂಶಯ ಸೃಷ್ಟಿ ಮಾಡುವನಂತಹ ಪ್ರಶ್ನೆ ಅದು. ಹೀಗಾಗಿ ನಿರಾತಂಕವಾಗಿ ಎಲ್ಲಿದ್ದೀನಿ ಎಂಬ ವಿಷಯ ಹೇಳಿದೆ. ಅದಕ್ಕೆ “ನಿಮ್ಮ ಹೊಲದಾಗ ಯಾರೋ ಬೋರ್ ಹೊಡಿಯಾಕ್ ಹತ್ಯಾರ ನೋಡ್ರಿ..” ಅಂದ. ನನ್ನ ಕೇಳದೆ ನನ್ನ ಹೊಲದಲ್ಲಿ ಬೋರು ಹೊಡೀತಾರೆಯೇ? ಹೊಡಿಲಿ ಬಿಡ್ರಿ ಅಂದೆನಾದರೂ, ನಾನಿಲ್ಲದಾಗ ಏನೋ ನಡಿತಿದೆ ಅಂತ ಅನಿಸಿ ಕೂಡಲೇ ಹೊಲದ ಕಡೆಗೆ ಲಗುಬಗೆಯಿಂದ ಹೊರಟೆ..
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಹೊಲದಲ್ಲಿ cctv ಹಾಕಿಸಬೇಕು ಅಂತ ತಲೆಯಲ್ಲಿ ಬಂದ ಕ್ಷಣದಿಂದ ಅದರ ಬಗ್ಗೆ ಅಲ್ಲಿಲ್ಲಿ ವಿಚಾರಿಸತೊಡಗಿದೆ. ದಾಸನಕೊಪ್ಪದಲ್ಲಿ ಒಬ್ಬರು ಡೀಲರ್ ಸಿಕ್ಕರು. ಹೊಲದಾಗ ಹಾಕೋದು ಅಂದ್ರ ಕ್ಯಾಮೆರಾದಿಂದ ಕ್ಯಾಮೆರಾಕ್ಕ ಉದ್ದsಕ ಕೇಬಲ್ ಎಳೀಬೇಕು ಅಂದರು. ಏನೇನೋ ದೋಚುವ ಕಳ್ಳರಿಗೆ ಕೇಬಲ್ ಕತ್ತರಿಸುವುದು ಅಷ್ಟು ದೊಡ್ಡ ಕೆಲಸವೆ? ಹಾಗೆ ಕತ್ತರಿಸಿಬಿಟ್ಟರೆ ಅವರು ಕ್ಯಾಮೆರಾವನ್ನೇ ಕದ್ದರೂ ನನಗೆ ಗೊತ್ತಾಗದು. Wireless system ಇಲ್ಲವೇ ಅಂತ ಕೇಳಿದಕ್ಕೆ ಅವರಿಂದ ಸೂಕ್ತ ಉತ್ತರ ದೊರಕಲಿಲ್ಲ. ಹೀಗೆಯೇ ವಿಚಾರಿಸುತ್ತಿದ್ದಾಗ ನನ್ನ ಸ್ನೇಹಿತರು ಹಾಗೂ dragon fruit ಬೆಳೆಗಾರರು ಆದ ರಾಜ್ ಹಾಲಪ್ಪ ಅವರು ಸೋಲಾರ್ ಕ್ಯಾಮೆರಾವನ್ನು ಸೂಚಿಸಿದರು. ಅದಕ್ಕೊಂದು sim ಅಳವಡಿಸುತ್ತಾರೆ. ಹೀಗಾಗಿ ಅದಕ್ಕೆ ಕೇಬಲ್ ಅವಶ್ಯಕತೆ ಇರಲಿಲ್ಲ, ಅದೂ ಅಲ್ಲದೆ ಸೋಲಾರ್ ಫಲಕ ಇರುವ ಕಾರಣ ವಿದ್ಯುತ್ ಸಂಪರ್ಕ ಕೂಡ ಬೇಕಿರಲಿಲ್ಲ. ಅದೊಂದು ಸೂಕ್ತ ಸಲಹೆ ಅನಿಸಿತು. ಕೂಡಲೇ ಅವರು ಸೂಚಿಸಿದ್ದ ವ್ಯಕ್ತಿಯ ಬಳಿ ವಿಚಾರಿಸಿದೆ. ಅವರು ಒಂದು ಕ್ಯಾಮೆರಾ ಸೆಟ್ ಗೆ 12000 ಅಂತಲೂ ಅಲ್ಲಿ ಒಂದೇ ಕ್ಯಾಮೆರಾ ಹಾಕುವುದಕ್ಕಿಂತ ಎರಡು ಕ್ಯಾಮೆರಾ ಎದುರುಬದುರು ಇದ್ದರೆ ಒಳ್ಳೆಯದು ಅಂತ ಹೇಳಿದರು. ಅದೂ ನಿಜವೇ. ಒಂದೇ ಕ್ಯಾಮೆರಾ ಹಾಕಿದಾಗ ಕಳ್ಳರು ಅದನ್ನೇ ಕಿತ್ತುಕೊಂಡು ಹೋದರೆ ಏನು ಮಾಡೋದು. ಹೀಗಾಗಿ ಅದನ್ನು ಕಾಯಲು ಇನ್ನೊಂದು ಕ್ಯಾಮೆರಾ ಬೇಕೆಬೇಕಿತ್ತು. ಎರಡೂ ಸೇರಿ 25000 ಖರ್ಚು. ಅವುಗಳನ್ನು ಕೂಡಿಸಲು 15 ಅಡಿಯ ಎರಡು ಉದ್ದನೆಯ ಕಬ್ಬಿಣದ ಕಂಬಗಳು, ಕೆಳಗೆ ಬುನಾದಿಗೆ concrete. ಇದೆಲ್ಲ ಸೇರಿ ಇನ್ನೊಂದಿಷ್ಟು ಖರ್ಚು. ಇದೊಂದುತರಹದ ಸನ್ಯಾಸಿ ಸಂಸಾರ ಇದ್ದಂತೆ! ಸಧ್ಯಕ್ಕೆ ಇದರ ಸಹವಾಸ ಬೇಡ ಮುಂದೆ ನೋಡೋಣ ಅಂತ ಅನಿಸಿತು. ಯಾಕೆಂದರೆ ದುಡ್ಡು ಹಾಕಿ ದುಡ್ಡು ತೆಗೆಯುವ ಇರಾದೆ ನನಗಿರಲಿಲ್ಲ. ದುಡ್ಡು ಮಾಡಲು ಬೇರೆ ಅನೇಕ ಮಾರ್ಗಗಳು ಇದ್ದೇ ಇವೆಯಲ್ಲ. ಕೃಷಿ ಅಂದರೆ ಅದೊಂದು ವ್ಯಾಪಾರ ಅಲ್ಲ, ಅಧ್ಯಾತ್ಮ, ಜೀವನ ಶೈಲಿ ಎಂದು ನಂಬಿದವನು ನಾನು.
ಹಾಗೆಯೇ ಯೋಚಿಸುತ್ತಾ ನನ್ನ ಮನೆಯ ಕಡೆ ಹೊರಟಿದ್ದೆ. ದಾರಿಯಲ್ಲಿ ಬದರಿ ಕಂಡ. ಅವಂದೊಂದು ಟ್ರಾಕ್ಟರ್ ಇದೆ. ಅವನ ಮಗನೂ ಟ್ಟ್ರ್ಯಾಕ್ಟರ್ ಹೊಡಿತಾನೇ. ಅದು ಬದರಿ ಅವರ ವಂಶಪಾರಂಪರ್ಯವಾದ ಕಸುಬು ಅನಿಸುತ್ತೆ. ಹೊಸದಾಗಿ ಬೆಳೆ ಹಾಕುವಾಗ ಇಲ್ಲವೇ ಬೆಳೆ ಕಟಾವು ಆದ ಮೇಲೊ ಟ್ರಾಕ್ಟರ್ನಲ್ಲಿ ಉಳುಮೆ ಮಾಡಿಸುವುದು ಮಾಮೂಲಿ. ಅದಕ್ಕೆ ಆಡುಭಾಷೆಯಲ್ಲಿ ಟ್ಟ್ರ್ಯಾಕ್ಟರ್ ಹೊಡೆಸುವುದು ಅಂತ ಹೇಳುತ್ತಾರೆ. ಹಳ್ಳಿಯಲ್ಲಿ ಹೀಗೆ ಟ್ರಾಕ್ಟರ್ ಹೊಡೆಯುವವರು ತುಂಬಾ ಜನ ಇದ್ದಾರೆ. ನಾನು ವ್ಯವಸಾಯ ಮಾಡಬೇಕು ಅಂದುಕೊಂಡಿದ್ದು ನೈಸರ್ಗಿಕ ಕೃಷಿ ಪದ್ಧತಿ, ಅದರಲ್ಲಿ ಉಳುಮೆ ಮಾಡುವುದು ನಿಷಿದ್ಧ! ಆದರೂ ನಾನಿನ್ನೂ ನನ್ನ ಭೂಮಿಯನ್ನು ಅಷ್ಟು ಸನ್ನದ್ಧಗೊಳಿಸಿಲ್ಲವಾಗಿದ್ದರಿಂದ ಟ್ರಾಕ್ಟರ್ ಹೊಡೆಸುವುದು ನನಗೂ ಅನಿವಾರ್ಯವೇ ಆಗಿತ್ತು ಆಗ. ಟ್ಟ್ರ್ಯಾಕ್ಟರ್ ಹಿಂದೊಂದು ರಂಟೆ ಇರುತ್ತೆ. ಅದು ತುಂಬಾ ಭಾರ. ಅದು ತುಂಬಾ ವೇಗವಾಗಿ ತಿರುಗುತ್ತಾ ಭೂಮಿಯನ್ನು ಬಗೆದು ತಿರುವಿ ಹಾಕುತ್ತಾ ಹೋಗುತ್ತೆ. ಅದರ ಅಡಿಗೆ ಕಲ್ಲನ್ನೊಂದು ಬಿಟ್ಟು ಏನೇ ಸಿಕ್ಕರೂ ಅದನ್ನು ಪುಡಿ ಪುಡಿ ಮಾಡುವ ಶಕ್ತಿ ಅದಕ್ಕಿದೆ. ಹೀಗಾಗಿ ಯಾವುದೇ ಭೂಮಿಯನ್ನು ಹದಗೊಳಿಸಲು ಇದೊಂದು ವಿಧಾನ ಬಳಸುತ್ತಾರೆ. ಆದರೆ ಭೂಮಿಯಲ್ಲಿನ ಒಂದು ಜೀವಸಂಕುಲವನ್ನು ಅಲ್ಲೋಲ ಕಲ್ಲೋಲ ಮಾಡಿಹಾಕುತ್ತೆ. ಭೂಮಿಯ ಮೇಲಿನ ಪದರದ ಮಣ್ಣು ಜೀವಂತವಾಗಿರುತ್ತೆ. ಕೆಳಗೆ ಹೋದಂತೆ ಪೋಷಕಾಂಶಗಳು ಇದ್ದರೂ ಜೀವಂತಿಕೆ ಇರುವುದಿಲ್ಲ. ಜೀವಂತಿಕೆ ಅಂದರೆ ಜೀವಾಣುಗಳು, ಕ್ರಿಮಿಕೀಟಗಳು ಇತ್ಯಾದಿ. ಹೀಗಾಗಿ ಹೆಚ್ಚು ಹೆಚ್ಚು ಆಳಕ್ಕೆ ಉಳುಮೆ ಮಾಡಿದರೆ ಮಣ್ಣಿನ ಆರೋಗ್ಯವನ್ನು ನಮ್ಮ ಕೈಯಿಂದ ನಾವೇ ಹಾಳು ಮಾಡಿದಂತೆ. ಮೊದಲೆಲ್ಲ ಎತ್ತಿನಲ್ಲಿ ರಂಟೆ ಹೊಡೆಯುತ್ತಿದ್ದರಲ್ಲ ಅಷ್ಟೇ ಮಾಡಬೇಕು.
ತುಂಬಾ ಹಿಂದೆ ಅವನ ಬಳಿ ಟ್ಟ್ರ್ಯಾಕ್ಟರ್ ಹೊಡೆಸಿದ್ದ ನೆನಪಾಯ್ತು. ಆದರೆ ಹೋದ ವರ್ಷ ನಾವು ಭತ್ತವನ್ನು ಬಿತ್ತುವಾಗ ಬೇರೆ ಯಾರನ್ನೋ ಕರೆಸಿದ್ದೆ. ದಾರಿಯಲ್ಲಿ ನನ್ನನ್ನು ಕಂಡ ಕೂಡಲೇ ಅವನು ನಮಸ್ಕಾರ ರೀ ಆರಾಮ ಅದೀರಿ? ಅಂತ ನನ್ನ ಸ್ಕೂಟರ್ಗೆ ಅಡ್ಡ ನಿಂತದ್ದನ್ನು ನೋಡಿದರೆ ಅವನು ನನ್ನ ಜೊತೆ ಮಾತಾಡಲೇಬೇಕು ಎಂಬ ಉತ್ಸಾಹದಲ್ಲಿ ಇದ್ದಂತೆ ಕಂಡಿತು.
“ಮತ್ತೇನರಿ ಬದರಿ ಆರಾಮ ಇದ್ದೀರಿ?” ಅಂದೆ.
“ಅರಾಮು ನೋಡ್ರಿ. ಅಂದಂಗ ನಿಮ್ಮ ಹೊಲಕ್ಕ ನಮ್ಮ ಟ್ಟ್ರ್ಯಾಕ್ಟರ್ ಆಗುದಿಲ್ಲೇನು?” ಎಂಬ ಒಗಟಿನಂತಹ ಪ್ರಶ್ನೆ ಕೇಳಿದ.
ಅರ್ಥ ಆಗಲಿಲ್ಲ ಅಂದೆ.
“ಹೋದ ಸಲ ಭತ್ತ ಬಿತ್ತಿದಾಗ ಬ್ಯಾರೆಯವರ ಕಡೆ ಟ್ಟ್ರ್ಯಾಕ್ಟರ್ ಹೊಡಿಸಿದಿರಿ. ನಮ್ಮ ಟ್ಟ್ರ್ಯಾಕ್ಟರ್ ಕರಸಬಹುದಿತ್ತಲ್ಲ!?” ಅಂದ. ಓಹೋ ಈಗ ನನಗೆ ಅವನ ಧಾಟಿ ಅರ್ಥವಾಗಿತ್ತು.
“ನಮಗ ಬೇಕಾದಾಗ ಯಾರು ಸಿಗತಾರ ಅವರ ಹತ್ತಿರ ಮಾಡಿಸಿದಿವಿ…” ಅಂದೆ.
“ನಿಮ್ಮ ಹೊಲ ಮೊದಲ ಭಟ್ಟರದಿತ್ತು. ಅವರು ಕಾಯಂ ನನ್ನ ಹತ್ರ ಟ್ಟ್ರ್ಯಾಕ್ಟರ್ ಹೊಡಸತಿದ್ರು. ನೀವು ಬ್ಯಾರೆಯವರನ್ನ ಕರೆದುಕೊಂಡು ಬಂದ್ರ ಹೆಂಗರಿ?” ಅವನ ಈ ಮಾತುಗಳು ನನಗೆ ತುಂಬಾ ಕೆರಳುವಂತೆ ಮಾಡಿತು. ಆದರೂ ಸಮಾಧಾನದಿಂದ “ಮುಂದಿನ ಸಲ ನೋಡೋಣ” ಅಂದೆ.
ಭೂಮಿಯ ಮೇಲಿನ ಪದರದ ಮಣ್ಣು ಜೀವಂತವಾಗಿರುತ್ತೆ. ಕೆಳಗೆ ಹೋದಂತೆ ಪೋಷಕಾಂಶಗಳು ಇದ್ದರೂ ಜೀವಂತಿಕೆ ಇರುವುದಿಲ್ಲ. ಜೀವಂತಿಕೆ ಅಂದರೆ ಜೀವಾಣುಗಳು, ಕ್ರಿಮಿಕೀಟಗಳು ಇತ್ಯಾದಿ. ಹೀಗಾಗಿ ಹೆಚ್ಚು ಹೆಚ್ಚು ಆಳಕ್ಕೆ ಉಳುಮೆ ಮಾಡಿದರೆ ಮಣ್ಣಿನ ಆರೋಗ್ಯವನ್ನು ನಮ್ಮ ಕೈಯಿಂದ ನಾವೇ ಹಾಳು ಮಾಡಿದಂತೆ. ಮೊದಲೆಲ್ಲ ಎತ್ತಿನಲ್ಲಿ ರಂಟೆ ಹೊಡೆಯುತ್ತಿದ್ದರಲ್ಲ ಅಷ್ಟೇ ಮಾಡಬೇಕು.
“ಅಲ್ರೀ ನಿಮ್ಮನ್ನ ನಂಬಿಕೊಂಡು ನಾವು ಟ್ಟ್ರ್ಯಾಕ್ಟರ್ ತೊಗೊಂಡೇವಿ. ನೀವು ಹಿಂಗ ಮಾಡಿದರ ಹೆಂಗ. ಹಂಗ ಆಗುದಿಲ್ಲ. ಟ್ಟ್ರ್ಯಾಕ್ಟರ್ ನಾವs ಹೊಡಿಬೇಕು…” ನನಗೆ ಅವನ ಈ ಮಾತುಗಳನ್ನು ಕೇಳಿ ತುಂಬಾ ಕೋಪ ಬಂತು. ಇದೊಳ್ಳೆ ಕತೆ ಆಯ್ತಲ್ಲ. ನಾನೇನು ಇವನ ಬಳಿಯೇ ಟ್ಟ್ರ್ಯಾಕ್ಟರ್ ಹೊಡೆಸುವೆ ಅಂತ ಇವನಿಗೆ ಬರೆದುಕೊಟ್ಟಿದ್ದೆನಾ? ಆದರೂ ಅವನ ಜೊತೆ ವಾದಿಸುವುದು ನನಗೆ ಇಷ್ಟವಿರಲಿಲ್ಲ. ಅದು ನನ್ನ ಸಮಯ ವ್ಯರ್ಥ ಮಾಡಿಕೊಂಡಂತೆ. ಹೀಗಾಗಿ ಹೇಗೋ ಅಲ್ಲಿಂದ ಕಳಚಿಕೊಂಡೆ. ಹಳ್ಳಿಯಲ್ಲಿ ಒಂದು ವ್ಯವಸ್ಥೆ ಇರುತ್ತದೆ. ಕೆಲವು ಅಲಿಖಿತ ನಿಯಮಗಳು ಇರುತ್ತವೆ. ಅವುಗಳು ಅರ್ಥವಾಗಲು ಗ್ರಾಮವಾಸ್ತವ್ಯ ಅತ್ಯವಶ್ಯಕ. ಹಾಗಂತ ಆ ನಿಯಮಗಳಿಗೆ ನಾವು ಬದ್ಧರಾಗಿ ಇರಬೇಕು ಅಂತಿಲ್ಲ. ಇಂತಹ ಸನ್ನಿವೇಶಗಳನ್ನು ನಿರ್ವಹಿಸುವ ಜಾಣ್ಮೆ ನಮ್ಮಲ್ಲಿ ಇರಬೇಕು ಅಷ್ಟೇ. ಆ ಜಾಣ್ಮೆಯನ್ನು ಮೈಗೂಡಿಸಿಕೊಳ್ಳಲು ತಾಳ್ಮೆ ತುಂಬಾ ಬೇಕು!
*****
ಹಳ್ಳಿಯಲ್ಲಿ ಸಮಾನ ಮನಸ್ಕ ರೈತರ ಹುಡುಕಾಟ ಮುಂದುವರೆಸಿದ್ದೆ. ಆಗ ಮೊಟ್ಟ ಮೊದಲು ಸಿಕ್ಕವರೆ ಪ್ರಶಾಂತ್. ಇನ್ನೊಬ್ಬ ಸ್ನೇಹಿತರ ಮೂಲಕ ಅವರ ಪರಿಚಯ ಆಯ್ತು. ಅವರ ಹೊಲ ಬಿಸಲಕೊಪ್ಪದಲ್ಲಿ ಇದೆ. ಅವರು ಕೂಡ ನನ್ನಂತೆಯೇ ಸಾಫ್ಟವೇರ್ನವರು. ಅದೊಂದು ಜಾತಿ ಸೂಚಕದಂತೆಯೇ ಆಗಿಬಿಟ್ಟಿದೆ ಈಗ! ತುಂಬಾ ಹಿಂದೆ ಕೂಡ ವರ್ಣಗಳು ಸೃಷ್ಟಿಯಾಗಿದ್ದು ಹೀಗೆಯೇ ಅಲ್ಲವೇ? ಕುಂಬಾರ ಕೆಲಸ ಮಾಡುವವರು ಕುಂಬಾರ ಆಗಿದ್ದರು ಹಾಗೆಯೇ ಈಗ ಸಾಫ್ಟವೇರ್ ನವರದು ಕೂಡ ಒಂದು ವರ್ಣ ಅಂತ ಹೇಳಬಹುದೇನೋ! ಹೀಗಾಗಿ ನಮ್ಮಿಬ್ಬರ ನಡುವೆ ಒಂದು ಬಾಂಧವ್ಯ ಏರ್ಪಟ್ಟಿತ್ತು! ಸಾಫ್ಟವೇರ್ ನನ್ನ ಪೂರ್ವಾಶ್ರಮ ಆಗಿತ್ತಾದರೂ ಕೃಷಿ ನಮ್ಮಿಬ್ಬರ ನಡುವೆ ಒಂದು ಲಿಂಕ್ ಆಗಿತ್ತು. ಆದರೆ ಅವರು ಇನ್ನೂ ಕೆಲಸ ಮಾಡುತ್ತಲೇ ಕೃಷಿ ಮಾಡುತ್ತಿದ್ದರು. ಅವರ ಊರಿನಲ್ಲಿ ಅವರ ಹಳೆಯ ಅಡಿಕೆ ತೋಟಗಳೂ ಇದ್ದವು. ಇವರು ಸಿರಸಿಯಲ್ಲಿ ಮನೆ ಮಾಡಿಕೊಂಡು, ಅಲ್ಲಿಂದಲೇ work from home ಮಾಡುತ್ತಾ ತಮ್ಮ ತೋಟಗಳಿಗೆ ಹೋಗಿ ಬಂದು ಮಾಡುತ್ತಿದ್ದರು. ಬಿಸಲುಕೊಪ್ಪದ ಜಮೀನಿನ ನಾಲ್ಕು ಎಕರೆ ಕ್ಷೇತ್ರದಲ್ಲಿ ಮಹಾಗನಿ ಗಿಡಗಳನ್ನು ಬೆಳೆಸುತ್ತಿದ್ದರು. ಮಧ್ಯದಲ್ಲಿ ಕೆಲವು ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಹಾಕಿದ್ದರು. ಒಂದು ಜಾತಿಯ ಅರಿಶಿನ ಬೆಳೆಯನ್ನೂ ಬೆಳೆಸಿದ್ದರು. ಅವರ ಜೊತೆಗೆ ಅವರ ತೋಟ ನೋಡಲು ಹೋಗಿದ್ದೆ. ಜೊತೆಗೆ ಶಂಭುಲಿಂಗ ಮಾವ ಕೂಡ ಬಂದಿದ್ದರು. ಅವರಿಗೂ ಈ ಸಾಫ್ಟವೇರ್ ಹುಡುಗರ ಚಟುವಟಿಕೆಗಳು ತುಂಬಾ ಅಚ್ಚರಿ ಮೂಡಿಸಿದ್ದವು. ಒಟ್ಟಿನಲ್ಲಿ ಪ್ರಶಾಂತ್ ನನಗಿಂತ ಒಂದೆರಡು ಹೆಜ್ಜೆ ಮುಂದಿದ್ದರು. ಅವರಿಗೂ ಕೂಡ ಹಲವಾರು ಕಟು ಅನುಭವಗಳು ಆಗಿದ್ದರೂ ಕೂಡ ಉತ್ಸಾಹದಿಂದ ಮುಂದುವರೆದು ತಕ್ಕಮಟ್ಟಿಗೆ ಒಳ್ಳೆಯ ಪ್ರಗತಿ ಸಾಧಿಸಿದ್ದರು.
ಅವರು ಮಾಡುತ್ತಿದ್ದ ಕೃಷಿಗೆ ಅರಣ್ಯ ಕೃಷಿ ಅಂತ ಹೇಳಬಹುದು. ಅಲ್ಲಿ ಕಾಡು ಮರಗಳನ್ನು ಬೆಳೆಸಿ ಎಷ್ಟೋ ವರ್ಷಗಳ ನಂತರ ಅವುಗಳಿಂದ ಆದಾಯ ನಿರೀಕ್ಷೆ ಮಾಡಬಹುದು. ಇದರಲ್ಲಿ ನಿರ್ವಹಣೆ ಅಷ್ಟೊಂದು ಇರುವುದಿಲ್ಲವಾದರೂ, ಮೊದಲ ಎರಡು ವರ್ಷಗಳಾದರೂ ಆರೈಕೆ ಮಾಡಬೇಕು. ಇದೊಂದು ತರಹದ long term investment ಇದ್ದಂತೆ. ಹಲವಾರು ಜಾತಿಯ ಕಾಡು ಮರಗಳನ್ನು ಬೆಳೆಸಿ ಅಲ್ಲೊಂದು ಕಾಡಿನ ತರಹದ ವಾತಾವರಣ ಸೃಷ್ಟಿ ಮಾಡಬಹುದು. ಹಾಗಾದಾಗ ಅದು ಹಲವಾರು ಜೀವಿಗಳ ವಾಸಸ್ಥಾನವಾಗಿ, ಆ ಪುಟ್ಟ ಮಾನವ ನಿರ್ಮಿತ ಕಾಡು ತನ್ನನ್ನು ತಾನೇ ನಿರ್ವಹಣೆ ಮಾಡಿಕೊಳ್ಳಲು ತೊಡಗುತ್ತದೆ. ಯಾವುದಕ್ಕೂ ಅಲ್ಲೊಂದು ವೈವಿಧ್ಯತೆ ಇರಬೇಕು. ಒಂದೇ ತರಹದ ಮರಗಿಡಗಳು ಇದ್ದಷ್ಟೂ ಸಮಸ್ಯೆಗಳು ಜಾಸ್ತಿ. ಎಷ್ಟೋ ಸಲ ಒಂದೇ ವಿಧದ ಕಾಡು ಮರಗಳನ್ನು ಹಾಕಿ ಅದರ ನಿರ್ವವಹಣೆ ಮಾಡಲಾಗದೆ ಕಷ್ಟಪಡುವವರು ಇದ್ದಾರೆ. ರೋಗಗಳು, ಕ್ರಿಮಿ-ಕೀಟಗಳ ಸಮಸ್ಯೆ ಒಂದಾದರೆ ಕಳ್ಳರ ಕಾಟ ಇನ್ನೊಂದು ದೊಡ್ಡ ಸಮಸ್ಯೆ! ಅದು ಹೆಚ್ಚಾಗಿ ಶ್ರೀಗಂಧದ ಗಿಡಗಳನ್ನು ಹಾಕುವವರು ಅನುಭವಿಸುವುದನ್ನು ಕೇಳಿದ್ದೆ. ಭತ್ತದ ಹುಲ್ಲು ಬಿಡದ ಜನ ಗಂಧದ ಮರಗಳನ್ನು ಬಿಟ್ಟಾರೆಯೆ?!
ಅಂತೂ ಒಬ್ಬರಾದರೂ ಸಿಕ್ಕರಲ್ಲ ಎಂಬ ಖುಷಿಯಲ್ಲಿ ನಾನಿದ್ದೆ. ಹತ್ತಿರದಲ್ಲೇ ಇರುವ ನಾವು ಒಬ್ಬರಿಗೊಬ್ಬರು ಸಹಾಯ ಮಾಡುತ್ತೇವೊ ಬಿಡುತ್ತೇವೊ, ಗ್ರಾಮ ಡ್ರಾಮಾಯಣದ ಕಷ್ಟ ಸುಖಗಳು, ಅನುಭವಗಳನ್ನಾದರೂ ಮುಂದೊಮ್ಮೆ ಹಂಚಿಕೊಂಡೇವು ಅನಿಸಿತು. ಪರಸ್ಥಳದಲ್ಲಿ ಹೀಗೊಂದು ಸಾಹಸ ಮಾಡುವಾಗ ಒಂದು ತರಹದ ಏಕಾಂಗಿತನ ಕಾಡುತ್ತದೆ. ನಮಗಲ್ಲಿ support ಗೆ ಯಾರೋ ಒಬ್ಬರು ಇದ್ದಾರೆ ಎಂಬ ಭಾವನೆಯೇ ಸಾಕಷ್ಟು ಧೈರ್ಯ ಕೊಡುತ್ತದೆ.
ಪ್ರಶಾಂತ ಅವರ ಹೊಲ ನೋಡಿಕೊಂಡು ಶಂಭುಲಿಂಗ ಮಾವನ ಮನೆಯಲ್ಲಿ ಚಾ ಕುಡಿಯುತ್ತಾ ಕೂತಿದ್ದೆ. ಅಷ್ಟರಲ್ಲಿ ಗುಡ್ಡಪ್ಪನ ಫೋನ್ ಬಂತು.
“ಎಲ್ಲಿ ಅದೀರಿ?” ಅಂದ. ಅಲ್ಲಿನ ಬಹುತೇಕರು ಫೋನ್ ಮಾಡಿದಾಗ ಕೇಳುವ ಮೊದಲ ಪ್ರಶ್ನೆ ಇದು! ಆ ಪ್ರಶ್ನೆ ನನ್ನನ್ನು ಮೊದಲೆಲ್ಲಾ ತುಂಬಾ ವಿಚಾರಕ್ಕೆ ಈಡು ಮಾಡುತ್ತಿತ್ತು। ಯಾಕೆ ಹಾಗೆ ಕೇಳಿರಬಹುದು? ನಾನು ಎಲ್ಲಿರುವೆ ಅಂತ ತಿಳಿದುಕೊಂಡು ಹೊಲದಲ್ಲಿ ಏನಾದರೂ ಮಾಡಲು ಹೊರಟಿರಬಹುದೆ? ಎಂಬಂತಹ ಸಂಶಯ ಸೃಷ್ಟಿ ಮಾಡುವನಂತಹ ಪ್ರಶ್ನೆ ಅದು. ಆದರೆ ಅದು ಈಗೀಗ ರೂಢಿಯಾಗಿತ್ತು. ಹೀಗಾಗಿ ನಿರಾತಂಕವಾಗಿ ಎಲ್ಲಿದ್ದೀನಿ ಎಂಬ ವಿಷಯ ಹೇಳಿದೆ. ಅದಕ್ಕೆ ಉತ್ತರವಾಗಿ ಗುಡ್ಡಪ್ಪ “ನಿಮ್ಮ ಹೊಲದಾಗ ಯಾರೋ ಬೋರ್ ಹೊಡಿಯಾಕ್ ಹತ್ಯಾರ ನೋಡ್ರಿ..” ಅಂದ. ನನ್ನ ಕೇಳದೆ ನನ್ನ ಹೊಲದಲ್ಲಿ ಬೋರು ಹೊಡೀತಾರೆಯೇ? ಹೊಡಿಲಿ ಬಿಡ್ರಿ ಅಂದೆನಾದರೂ, ನಾನಿಲ್ಲದಾಗ ಏನೋ ನಡಿತಿದೆ ಅಂತ ಅನಿಸಿ ಕೂಡಲೇ ಹೊಲದ ಕಡೆಗೆ ಲಗುಬಗೆಯಿಂದ ಹೊರಟೆ..
“ಎಲ್ಲಿ ಅದೀರಿ” ಎಂಬ ಪ್ರಶ್ನೆ ಮತ್ತೆ ನನ್ನನ್ನು ಕಾಡತೊಡಗಿತ್ತು!
(ಮುಂದುವರಿಯುವುದು..)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
Enjoyed reading this!
ಜಯಶ್ರೀನಿವಾಸ, ತಮ್ಮ ಅನಿಸಿಕೆ ಕೇಳಿ ಖುಷಿಯಾಯ್ತು. ಧನ್ಯವಾದಗಳು ????????
ಈ ಬರಹದಲ್ಲಿ ತಿಳಿಸಿದಂತೆ ಉಪಕರಣ ರಂಟೆ ಆಲ್ಲಾ, ಅದು ರೋಟೋವೇಟರ್
ವೀರೇಶ್, ಕನ್ನಡದಲ್ಲಿ ಹಾಗೆ ಅನ್ನಬಹುದೇನೋ ಅಂದುಕೊಂಡಿದ್ದೆ . ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!
Enjoy Reading this series. Gives the Idea about the village life and how to deal with folks there ..
ಮೇಧಾ, ತಮ್ಮ ಅನಿಸಿಕೆ ಕೇಳಿ ಖುಷಿಯಾಯ್ತು! ಧನ್ಯವಾದಗಳು. ಹೌದು ಹಳ್ಳಿಯ ಬದುಕು ನಾವಂದುಕೊಂಡಷ್ಟು ಸುಲಭವಾಗಿಲ್ಲ. 🙂