ಇಲ್ಲಿನ ಪ್ರಬಂಧಗಳು ಅನೇಕ ಹೊಸ ವಿಷಯ ಕಲಿಸಿಕೊಡುವುದರ ಜೊತೆಗೆ ನಮ್ಮೊಳಗೆ ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ನಾವು ಎಷ್ಟೋ ಬಾರಿ ಸೆಕ್ಸಿಸ್ಟ್, ಕ್ಯಾಸ್ಟಿಸ್ಟ್ ಜೋಕುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿದ್ದರೆ ಇನ್ನೂ‌ ಕೆಲವೊಮ್ಮೆ ಅಪ್ರಯತ್ನಪೂರ್ವಕಾಗಿ ಬರುತ್ತದೆ. ಈಗಲೂ ಬರವಣಿಗೆಯಲ್ಲಿ ನಾನು ಇಂತಹ ಪದಗಳ ಬಳಸುವುದು ಕಮ್ಮಿಯಾದರೂ ಆತ್ಮೀಯ ಗೆಳೆಯರೊಟ್ಟಿಗೆ ಮಾತಾಡುವಾಗ ಕ್ಯಾಸ್ಟಿಸ್ಟ್ ಅಲ್ಲದಿದ್ದರೂ ಸೆಕ್ಸಿಸ್ಟ್ ಬೈಗಳುಗಳು ಅಪ್ರಯತ್ನಪೂರ್ವಕವಾಗಿ ಬರುತ್ತವೆ. ಮುಂದಾದರೂ ಅದನ್ನು ಕಮ್ಮಿ ಮಾಡಬೇಕು ಎಂದು ಇವರ ಬರಹಗಳ ಓದಿದಾಗ ಅನ್ನಿಸಿದೆ.
ಓದುವ ಸುಖ ಅಂಕಣದಲ್ಲಿ ಡಾರ್ಕ್ ಹ್ಯೂಮರ್ ಕುರಿತಾದ ಪುಸ್ತಕದ ಪರಿಚಯ ಮಾಡಿಸಿದ್ದಾರೆ ಗಿರಿಧರ್‌ ಗುಂಜಗೋಡು

ನಾನು ಸಾಮಾಜಿಕ ಜಾಲತಾಣದಲ್ಲಿ ಕುತೂಹಲದಿಂದ ಹಿಂಬಾಲಿಸುವ ವ್ಯಕ್ತಿಗಳಲ್ಲಿ ಶ್ರೀಹರ್ಷ ಒಬ್ಬರು. ಕೆಂಡಸಂಪಿಗೆಯ ಓದುಗರಿಗೆ ಅವರು ಅಪರಿಚಿತರಲ್ಲ. ಬಹುಶಃ ನಾನು ಕೂಡಾ ಅವರ ಬರಹಗಳನ್ನು ಮೊದಲು ಓದಿದ್ದು ಕೆಂಡಸಂಪಿಗೆಯಲ್ಲಿಯೇ ಇರಬೇಕು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಇವರು ಆಸ್ಟ್ರೇಲಿಯಾದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ಬರಹಗಳು ಯಾಕಿಷ್ಟ? ಅಂತ ನನ್ನನ್ನು ಕೇಳಿದರೆ ನಾನು ಮೊದಲು ಅವರ ಲಲಿತ ಪ್ರಬಂಧ ಸಂಕಲನ ‘ಡಾರ್ಕ್ ಹ್ಯೂಮರ್’ ಓದಿ ಅನ್ನುತ್ತೇನೆ.

(ಶ್ರೀಹರ್ಷ)

ನನ್ನ ಸೀಮಿತ ಓದಿನ ಅನುಭವದಲ್ಲಿ ಹೇಳಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಇತ್ತೀಚಿಗಿನ ದಿನಗಳಲ್ಲಿ‌ ಬಹಳ ಒಳ್ಳೆಯ ಬರಹಗಳು ಬರುತ್ತಿವೆ. ನೇರವಾಗಿ ವಿಷಯಕ್ಕಿಳಿದು ಆಸಕ್ತಿಕರವಾಗಿ ವಿಸ್ತರಿಸಿ ಬರೆಯುವವರು ಬಹಳ. ಇನ್ನೂ ಕೆಲವರು ವಿಜ್ಞಾನಕ್ಕೆ ಸಂಬಂಧಪಟ್ಟ ಅಂಶವನ್ನು ಇಟ್ಟುಕೊಂಡು ಚಂದದ ಕತೆಗಳನ್ನು ಬರೆಯುತ್ತಾರೆ. ಆದರೆ ವೈಜ್ಞಾನಿಕ ಲಲಿತ ಪ್ರಬಂಧ ಬರೆಯೋರು ಅಪರೂಪ‌ (ತಂತ್ರಜ್ಞಾನದ, ಐಟಿ ಜೀವನದ ಎಳೆಯುಳ್ಳ ಪ್ರಬಂಧಗಳನ್ನು ವಸುಧೇಂದ್ರ ಮತ್ತು ಕೆಲವರು ಅವರು ಬರೆದಿದ್ದರೂ ಅವುಗಳಿಗಿಂತ ಇವು ಬಹಳ ಭಿನ್ನ). ಈ ಶೈಲಿಯ ಬರಹ ನನಗೆ ಈ ಕ್ಷಣ ಇವರ ಹೆಸರು ಬಿಟ್ಟು ಬೇರೆಯವರ ನೆನಪಾಗುತ್ತಿಲ್ಲ. ಇಲ್ಲಿ ವಿಜ್ಞಾನ + ತಂತ್ರಜ್ಞಾನ + ಮನಃಶಾಸ್ತ್ರ+ ಪ್ರಬಂಧದ ವಿಶಿಷ್ಟ ರೀತಿಯ ಕಾಂಬಿನೇಶನ್ ಇದೆ. ಲಲಿತ ಪ್ರಬಂಧ ಅತ್ಯಂತ ಸರಳವಾಗಿ ಚಂದದ ಭಾಷೆಯಲ್ಲಿ ಒಂದು ವಿಷಯದ ಬಗೆಗೆ ವಿವರಣೆಯನ್ನು ತೆಳುಹಾಸ್ಯದೊಂದಿಗೆ ಕಟ್ಟಿಕೊಡುತ್ತವೆ. ಇಲ್ಲಿ ಪ್ರಬಂಧಕ್ಕೆ ಸ್ವಲ್ಪ ವಿಜ್ಞಾನ ಮತ್ತು ತಂತ್ರಜ್ಞಾನ, ಡಾರ್ಕ್ ಹ್ಯೂಮರ್ ಇತ್ಯಾದಿ ಬೆರೆಸಿ ಒಂದು ಒಳ್ಳೇ ಕಾಕ್‌ಟೈಲ್ ಮಾಡಿ ಕ್ಲಿಷ್ಟಕರವಾದ ವಿಷಯಗಳನ್ನು ಬಹಳ ಬೇಗ ತಲೆಯೊಳಗೆ ಇಳಿಯುವಂತೆ ಮಾಡಿದ್ದಾರೆ‌. ಆದರೆ ಯಾವುದನ್ನೂ ಅತಿ ಮಾಡದೇ ಒಂದು ಹದಕ್ಕೆ ಬೆರೆಸಿದ್ದಾರೆ. ಆದುದರಿಂದ ಇವು ಕಿಕ್ಕೇರಿಸುತ್ತವೆಯೇ ವಿನಃ ಆಮ್ಲೇಟ್ ಹಾಕಿಸುವುದಿಲ್ಲ. ಕನ್ನಡದ ಮಟ್ಟಿಗೆ ಇದೊಂದು ಹೊಸರೀತಿಯ ಪ್ರಯೋಗ.

ಇಲ್ಲಿನ ಪ್ರಬಂಧಗಳು ಅನೇಕ ಹೊಸ ವಿಷಯ ಕಲಿಸಿಕೊಡುವುದರ ಜೊತೆಗೆ ನಮ್ಮೊಳಗೆ ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ನಾವು ಎಷ್ಟೋ ಬಾರಿ ಸೆಕ್ಸಿಸ್ಟ್, ಕ್ಯಾಸ್ಟಿಸ್ಟ್ ಜೋಕುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿದ್ದರೆ ಇನ್ನೂ‌ ಕೆಲವೊಮ್ಮೆ ಅಪ್ರಯತ್ನಪೂರ್ವಕಾಗಿ ಬರುತ್ತದೆ. ಈಗಲೂ ಬರವಣಿಗೆಯಲ್ಲಿ ನಾನು ಇಂತಹ ಪದಗಳ ಬಳಸುವುದು ಕಮ್ಮಿಯಾದರೂ ಆತ್ಮೀಯ ಗೆಳೆಯರೊಟ್ಟಿಗೆ ಮಾತಾಡುವಾಗ ಕ್ಯಾಸ್ಟಿಸ್ಟ್ ಅಲ್ಲದಿದ್ದರೂ ಸೆಕ್ಸಿಸ್ಟ್ ಬೈಗಳುಗಳು ಅಪ್ರಯತ್ನಪೂರ್ವಕವಾಗಿ ಬರುತ್ತವೆ. ಮುಂದಾದರೂ ಅದನ್ನು ಕಮ್ಮಿ ಮಾಡಬೇಕು ಎಂದು ಇವರ ಬರಹಗಳ ಓದಿದಾಗ ಅನ್ನಿಸಿದೆ.

ಹಾಗಂತ ಬೈಯೋದನ್ನು ನಿಲ್ಲಿಸಲು ಸಾಧ್ಯವೇ? ನನಗೊಬ್ಬ ದಾವಣಗೆರೆಯ ಗೆಳೆಯನಿದ್ದ. ಅವನು ಬೈಯೋದು ಕೇಳೋಕೇ ಚಂದ. ಬಹುಶಃ ಕರ್ನಾಟಕದಲ್ಲಿ ಬಹಳ ಅದ್ಭುತವಾಗಿ ಬೈಯ್ಯೋದ್ರಲ್ಲಿ ಅವರು ನಿಪುಣರು ಅಂತ ಅನ್ನಿಸ್ತದೆ. ಇವರು ಕೂಡಾ ಆ ಊರಿನವರೇ. ಇವರು ಕೂಡಾ ಅದ್ಭುತವಾಗಿ ಬೈತಾರೆ. ಆದರೆ ಅತ್ಯಂತ ಸೂಕ್ಷವಾಗಿ ರಸವತ್ತಾಗಿ ಬೈತಾರೆ. ಅವರ ಬರಹಗಳ ಜೊತೆ ಅವರ ಬೈಗಳುಗಳ ಅಭಿಮಾನಿ ಕೂಡಾ. ಮತ್ತು ನಾವು ಬಳಸೋ ಅನೇಕ ಬೈಗುಳಗಳು ಡಾರ್ಕ್ ಹ್ಯೂಮರಿನ ಭಾಗವಾಗಿದೆ. ಡಾರ್ಕ್ ಹ್ಯೂಮರ್ ಹೆಸರಿನ ಪ್ರಬಂಧ ಓದಿದ ನಂತರ ಈ ಬಗ್ಗೆ ಬಹಳ ಹುಡುಕಾಟ ನಡೆಸಲು ಸಾಧ್ಯವಾಯಿತು (ಅವರ ಬರಹಗಳಲ್ಲೂ ಡಾರ್ಕ್ ಹ್ಯೂಮರ್ ದಂಡಿಯಾಗಿ ಸಿಗುತ್ತದೆ). ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ಡಾರ್ಕ್ ಹ್ಯೂಮರ್ ಮಾಡಿರುತ್ತೇವೆ. ಒಮ್ಮೆ ನಾನು ನನ್ನ ಗೆಳೆಯನೊಬ್ಬನ್ನು ‘ಲೋ ಚೂತ್ಯಾ’ ಅಂತ ಕರೆದೆ. ಅವನು ಕೂಡಲೇ ‘ನಮ್ಮಂಗೆ ಸಿ ಸೆಕ್ಷನ್ ಆಗಿದ್ದೋ ಗುಬಾಲ್, ನಾನು ಚೂತ್ಯಾ ಅಲ್ಲ. ಬೇಕಾದರೆ ಸಿಸ್ಯಾ ಅಂತ ಕರಿ’ ಅಂದ. ಆದರೆ ಇದಕ್ಕೆ ಡಾರ್ಕ್ ಹ್ಯೂಮರ್ ಎಂದು ಕರೆಯುವುದು ಈ ಬರಹ ಓದಿದ ಮೇಲೇ ಗೊತ್ತಾಯಿತು. ಇದು ಸರಿಯೋ ತಪ್ಪೋ ಅನ್ನೋ ವಿಶ್ಲೇಷಣೆ ಆಮೇಲೆ, ಆದರೆ ಇಂಥದ್ದೊಂದು ಪ್ರಬೇಧ ಇದೆ ಎಂದು ಗೊತ್ತಾಗುತ್ತದೆ. ಇಲ್ಲಿನ ಕೆಲವೊಂದು ವಿಷಯಗಳು ಕೆಲವರಿಗೆ ಅರಗಿಸಿಕೊಳ್ಳುವುದು ಕಷ್ಟ ಆದರೂ ಪ್ರಯತ್ನಪಡಲು ಸಲಹೆ ನೀಡುತ್ತೇನೆ.

ಇಲ್ಲಿರುವ ಎಲ್ಲಾ ಪ್ರಬಂಧಗಳೂ ಒಂದಕ್ಕಿಂದ ಒಂದು ವಿಭಿನ್ನ ವಿಷಯಗಳೆಡೆ ನಮ್ಮ ಆಸಕ್ತಿ ಕೆರಳಿಸುತ್ತವೆ. ಕೆಲವು ಹೊಟ್ಟೆ ಹುಣ್ಣಾಗುವಂತೆ ನಗಿಸಿದರೆ ಕೆಲವು ನಮ್ಮನ್ನು ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ಜಾತಿ ಪ್ರಜ್ಞೆಯ ಕುರಿತಾದ ಬರಹ ಈ ಪೈಕಿ ಬರುತ್ತದೆ. ನಾನು ಜಾತಿ ಬಿಟ್ಟವಲ್ಲ, ಆದರೆ ಚಿಕ್ಕಂದಿನಿಂದ ಬಂದ ಆಚರಣೆಗಳ ಪದ್ಧತಿಗಳ ಮೀರುವ ಅವಕಾಶ ತಾನಾಗೇ ಬಂದಾಗ ಅಥವಾ ಓದಿನ ಮೂಲಕ ಮೀರುವ ಮನಸ್ಸು ಬಂದಾಗ ಕೆಲವನ್ನು ಮೀರಲು ಹಿಂಜರಿದವನೂ ಅಲ್ಲ. ಅವರ ಈ ಬರಹ ಜಾತಿ ಮತ್ತು ಜನಾಂಗೀಯತೆ ವಿಷಯದಲ್ಲಿ ನನ್ನನ್ನು ಒರೆಗೆ ಹಚ್ಚುವಂತೆ ಪ್ರೇರೇಪಿಸಿತು.

ಹಾಗೆ ನೋಡಿದರೆ ವೈಚಾರಿಕವಾಗಿ ನನ್ನ ಕೆಲವು ವಿಚಾರಗಳು ಬಹಳ ಅವರದರೊಡನೆ ಹೊಂದಿಕೊಂಡರೆ ಇನ್ನು‌ ಕೆಲವು ವಿಚಾರಗಳಲ್ಲಿ ನನಗೆ ತೀವ್ರತರವಾದ ಭಿನ್ನಾಭಿಪ್ರಾಯಗಳಿವೆ. ಆ ಭಿನ್ನಾಭಿಪ್ರಾಯಗಳುಳ್ಳ ವಿಷಯಗಳನ್ನೂ ಅಷ್ಟೇ ಆಸಕ್ತಿಯಿಂದ ಓದುತ್ತೇನೆ.

ಇಲ್ಲಿ ವಿಜ್ಞಾನ + ತಂತ್ರಜ್ಞಾನ + ಮನಃಶಾಸ್ತ್ರ+ ಪ್ರಬಂಧದ ವಿಶಿಷ್ಟ ರೀತಿಯ ಕಾಂಬಿನೇಶನ್ ಇದೆ. ಲಲಿತ ಪ್ರಬಂಧ ಅತ್ಯಂತ ಸರಳವಾಗಿ ಚಂದದ ಭಾಷೆಯಲ್ಲಿ ಒಂದು ವಿಷಯದ ಬಗೆಗೆ ವಿವರಣೆಯನ್ನು ತೆಳುಹಾಸ್ಯದೊಂದಿಗೆ ಕಟ್ಟಿಕೊಡುತ್ತವೆ. ಇಲ್ಲಿ ಪ್ರಬಂಧಕ್ಕೆ ಸ್ವಲ್ಪ ವಿಜ್ಞಾನ ಮತ್ತು ತಂತ್ರಜ್ಞಾನ, ಡಾರ್ಕ್ ಹ್ಯೂಮರ್ ಇತ್ಯಾದಿ ಬೆರೆಸಿ ಒಂದು ಒಳ್ಳೇ ಕಾಕ್‌ಟೈಲ್ ಮಾಡಿ ಕ್ಲಿಷ್ಟಕರವಾದ ವಿಷಯಗಳನ್ನು ಬಹಳ ಬೇಗ ತಲೆಯೊಳಗೆ ಇಳಿಯುವಂತೆ ಮಾಡಿದ್ದಾರೆ‌.

ಇವರ ಈ ಪುಸ್ತಕ ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಪ್ರಬಂಧ ಸಂಕಲನಗಳಲ್ಲಿ ಒಂದು. ಇವುಗಳನ್ನು ಒಂದೇ ಬಾರಿ ಓದಿ ಪಕ್ಕಕ್ಕೆ ಇಟ್ಟಿಲ್ಲ. ಕೆಲ ಬರಹಗಳನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ನಾನು ಬೇಜಾರಾದಾಗಲೆಲ್ಲ ನನ್ನ ಕೆಲ ಫೇವರೇಟ್ ಸಿನಿಮಾಗಳ ಆಯ್ದ ದೃಷ್ಯಗಳನ್ನು ನೋಡುತ್ತೇನೆ. ಅದೇ ರೀತಿ ಕೆಲ ಪುಸ್ತಕಗಳ ಆಯ್ದ ಭಾಗಗಳನ್ನು ಓದುತ್ತೇನೆ. ಈ ಪಟ್ಟಿಯಲ್ಲಿ ಇವರ ಎರಡು ಪುಸ್ತಕಗಳು ಸ್ಥಾನ ಪಡೆದಿವೆ.

ಹರ್ಷ ಬರೆದ ಪ್ರಬಂಧಗಳನ್ನು ಬಹಳ ದಿನಗಳಿಂದ ಓದುತ್ತಿದ್ದರೂ ಕತೆ ಬರೆಯುವ ವಿಷಯ ಗೊತ್ತಿರಲಿಲ್ಲ. ಅದಕ್ಕೆ ಅವರ ಕಥಾಸಂಕಲನ ‘ಉದಕ ಉರಿದು’ ಬಗ್ಗೆ ಕುತೂಹಲವಿದ್ದರೂ ಒಂದೇ ಸಿಟ್ಟಿಂಗಿನಲ್ಲಿ ಮುಗಿಯುವಷ್ಟು ಚನ್ನಾಗಿದೆಯೆಂದೂ ಪುಸ್ತಕದಲ್ಲಿನ ಪಾತ್ರಗಳು ಮತ್ತೆ ಮತ್ತೆ ಕಾಡುತ್ತವೆಯೆಂಬ ಕಲ್ಪನೆ ಇರಲಿಲ್ಲ. ಮಧ್ಯೆ ಅನಿವಾರ್ಯ ಕೆಲಸ‌ ಬಂದ ಕಾರಣ ಅರ್ಧಕ್ಕೆ ನಿಲ್ಲಿಸಿ ಎರಡು ಸಿಟ್ಟಿಂಗಿನಲ್ಲಿ ಮುಗಿಸಬೇಕಾಯಿತು.

ಇಲ್ಲಿ ಎರಡು ತರಹದ ಕತೆಗಳಿವೆ. ಒಂದು ಅವರ ತವರಾದ ದಾವಣಗೆರೆ ಸೀಮೆಯದು. ಇನ್ನೊಂದು ಅವರು ನೆಲೆನಿಂತ ಆಸ್ಟ್ರೇಲಿಯಾದ ಮತ್ತು ಕೆಲಸ ಮಾಡುವ ಕಾರ್ಪೋರೇಟ್ ಕ್ಷೇತ್ರದ ಕತೆಗಳು.

ಮಧ್ಯ ಕರ್ನಾಟಕ ನನಗೆ ಬಹಳ ಪರಿಚಿತ ಜಾಗವಲ್ಲ, ಒಂದೆರಡು ಬಾರಿ ಹೊನ್ನಾಳಿಗೆ ಹೋಗಿದ್ದು ಬಿಟ್ಟರೆ ಆ ಭಾಗದ ಗೆಳೆಯರ ಮೂಲಕವೇ ಅದು ಪರಿಚಿತ. ಅತ್ತ ಮಲೆನಾಡಲ್ಲದ, ಇತ್ತ ಉತ್ತರ ಕರ್ನಾಟಕವಲ್ಲದ, ಹಳೆಮೈಸೂರು ಕೂಡಾ ಅಲ್ಲದ ಆದರೆ ಈ ಎಲ್ಲಾ ಭಾಗಗಳ ಮಿಶ್ರಣದಂತೆ ಅಲ್ಲಿನ ಗೆಳೆಯರ ನೋಡಿದಾಗ ಅನ್ನಿಸಿದೆ. ಈ ಹೊತ್ತಿಗೆಯ ಹೆಚ್ಚಿನ ಕಥೆಗಳು ಆ ಭಾಗದಲ್ಲೇ ನಡೆಯುವುದರಿಂದ ಓದಲು ಬೇರೆಯೇ ತರಹದ ಅನುಭವ ಕೊಡುತ್ತದೆ. ಸುಂದರವಾದ ದಾವಣಗೆರೆ ಭಾಷೆ ಮನಸೆಳೆಯುತ್ತದೆ.

ಆದರೆ ಕತೆಗಳು ಲಾಲಿತ್ಯಕ್ಕಿಂತ ಬಂಡಾಯ ಸ್ವರೂಪದ್ದಾಗಿವೆ. ಸಮಾಜದ ಓರೆ ಕೋರೆಗಳನ್ನು, ಆತ್ಮವಂಚಕ ನಡುವಳಿಕೆ, ಆಳವಾಗಿ ಬೇರೂರಿರುವ ಜಾತೀಯತೆ, ವಸಾಹತುಶಾಹಿತ್ವ, ಜನಾಂಗೀಯತೆ ಮುಂತಾದ ವಿಚಾರಗಳನ್ನು ಅತ್ಯಂತ ತೀಕ್ಷ್ಣವಾಗಿ ವಿಮರ್ಶೆ ಮಾಡುತ್ತದೆ. ಒಂದೊಂದು ಕತೆಗಳ ಪಾತ್ರಗಳೂ ಮತ್ತೆ ಮತ್ತೆ ಕಾಡುತ್ತವೆ. ಎಷ್ಟೇ ಅರ್ಹತೆಯಿದ್ದರೂ ಕೇವಲ ಜಾತಿಯ ಕಾರಣಕ್ಕೆ ಒಳ್ಳೆ ಹಣ ಸಂಪಾದನೆ ಮಾಡಿದರೂ ಅಧಿಕಾರ ಗಳಿಸಿಕೊಳ್ಳದ ಕಾಂಟ್ರಾಕ್ಟರ್ ಗುತ್ತೆಪ್ಪನವರ ಪಾತ್ರ, ಸಮಾಜಕ್ಕೆ ಅತಿಯಾಗಿ ತೊಡಗಿಸಿಕೊಂಡು ವ್ಯವಸ್ಥೆಯ ದುಷ್ಟತನಕ್ಕೆ ಬಲಿಯಾದ ಶಾಮಣ್ಣ ಮೇಷ್ಟ್ರು, ಅತ್ಯಂತ ಕಪಟಿ ವ್ಯಾಪಾರ ಬುದ್ಧಿಯ ಶರ್ಮಾ, ತನ್ನದೇ ನೆಲದಲ್ಲಿ ಪರಕೀಯನಾಗಿ ಸತ್ತ ಬಾಲದುರ್ರಿ, ವಿಶಾಲ ಹೃದಯಿಗಳೋ ಅಥವಾ ಸಂಕುಚಿತ‌ ಮನಸ್ಸಿನವರೋ ಅಂತ ಅರ್ಥ ಮಾಡಿಕೊಳ್ಳಲು ಗೊಂದಲ ಮೂಡಿಸುವ ವೇದಮೂರ್ತಿ ಹೀಗೆ ಪ್ರತೀ ಕಥೆಗಳಲ್ಲೂ ನೆನಪಿನಲ್ಲುಳಿಯುವ ಪಾತ್ರಗಳಿವೆ.

ಉತ್ತಮ ಕಥಾಸಂಕಲದಲ್ಲಿ ಪ್ರತಿ ಕತೆ ಓದಿದಮೇಲೆ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಕತೆಗಳ ಫೀಲ್ ಮಾಡಬೇಕು ಅಂದುಕೊಳ್ತೀನಿ. ಆದರೆ ಒಂದು ಓದಿದಂತೆ ಇನ್ನೊಂದು ಇನ್ನೂ ಚನ್ನಾಗಿರಬಹುದೆನ್ನುವ ನಿರೀಕ್ಷೆಯಲ್ಲಿ ಓದದೇ ಇರಲಾಗುವುದಿಲ್ಲ. ಕೆಲವೊಂದು ಕತೆಗಳ ಅಂತ್ಯ ಹೀಗಿರಬಾರದಿತ್ತು ಅಂತ ಅನ್ನಿಸಿತು. ಇನ್ನೊಂದೆರಡು ಕತೆಗಳ ಪಾತ್ರಗಳು ಹಾಗೆ ಹೇಳಿದ್ದರೆ ಇನ್ನೂ ಚನ್ನಾಗಿತ್ತಲ್ಲವೇ ಅಂತ ಅನ್ನಿಸಿತು. ಆದರೂ ಲೇಖಕನ ಸ್ವಾತಂತ್ರ್ಯ. ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ ನನಗೆ ಬೇಕಾದಂತೆ ಮನಸ್ಸಿನಲ್ಲಿ ಬೇರೆ ಬೇರೆ ನಿರೂಪಣೆ ಮಾಡಿಕೊಳ್ಳುವ ಸ್ವಾತಂತ್ರ್ಯ ನನಗಿದ್ದೇ ಇದೆ.

ಮಲ್ಟಿಪ್ಲೆಕ್ಸಿನಲ್ಲಿ ಒಂದು ಸಿನಿಮಾ ಟಿಕೇಟಿನ ಬೆಲೆಗೆ ಅಥವಾ ಅಲ್ಲಿ ತಿನ್ನುವ ಒಂದು ಪಾಪ್ ಕರ್ನ್ ಡಬ್ಬಿಗಿಂತ ಕಮ್ಮಿ ಬೆಲೆಯಲ್ಲಿ ಅವರ ಎರಡೂ ಪುಸ್ತಕಗಳು ಸಿಗುತ್ತವೆ. ನಿಜಕ್ಕೂ ಸಂಗ್ರಹಯೋಗ್ಯವಾದ ಪುಸ್ತಕಗಳು. ಎರಡನ್ನೂ ಖರೀದಿಸಿ. ಎರಡೆಲ್ಲಾ ಓದಲು ತಾಳ್ಮೆಯಿಲ್ಲ ಒಂದೇ ತಗೋಳೋದು ಅಂದರೆ ಬೇರೆ ದಾರಿಯಿಲ್ಲದೇ ಡಾರ್ಕ್ ಹ್ಯೂಮರ್ ತೆಗೆದುಕೊಳ್ಳಿ ಅನ್ನುತ್ತೇನೆ.