ಅವನು ಅಪರಿಚಿತ ಭಾವದಲ್ಲಿ ಕಾವಲುಮನೆ ಕಟ್ಟಡದ ಸುತ್ತಲೂ ಒಮ್ಮೆ ನೋಟ ಹರಿಸಿದ. ಇದನ್ನು ಯಾರು, ಯಾವಾಗ ಕಟ್ಟಿಸಿದರೋ? ಯಾವ ತಲೆಕೆಟ್ಟ ಮನುಷ್ಯ ಇದರ ವಿನ್ಯಾಸ ರೂಪಿಸಿದನೋ? ಮೂರು ಮನೆವಾಳ್ತೆಗಳು ಇರಲು ಅನುಕೂಲವಾಗುವ ಹಾಗೆ ಹೇಗೇಗೋ ಕೋಣೆಗಳನ್ನು ಹೊಂದಿಸಿ ಈ ಕಾವಲುಮನೆಯನ್ನು ಕಟ್ಟಲಾಗಿದೆ. ಆದರೆ ಇದಕ್ಕೆ ಸರಿಯಾದ ಕಿಟಿಕಿಗಳಾಗಲೀ, ಬಾಗಿಲುಗಳಾಗಲೀ ಇಲ್ಲ. ಕೆಲವು ಕೋಣೆಗಳಲ್ಲಿಯಂತೂ ನಡುಮಧ್ಯಾಹ್ನವೂ ಕತ್ತಲೆ ತುಂಬಿರುತ್ತದೆ. ಇದಕ್ಕೆ ಸುಣ್ಣಬಣ್ಣ ಬಳಿದಿರುವುದು ಯಾವ ಕಾಲಕ್ಕೋ.
ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್‌ ಅವರ ಕಾದಂಬರಿಯನ್ನು ಡಾ. ಗೀತಾ ಶೆಣೈ “ಅದೃಷ್ಟ” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

 

ಅವನು ಪ್ಲ್ಯಾಂಟೇಶನ್ನಿಂದ ನಡೆದು ಬರುವಾಗ ದಾರಿಯ ಎಡಬದಿಯ ಕಾಡಿನಿಂದ ಕೈಗತ್ತಿಯ ಠಣ್ ಠಣ್ ಸದ್ದು ಕೇಳಿ ಬಂತು. ಅವನು ಅದನ್ನು ನಿರ್ಲಕ್ಷ್ಯ ಮಾಡಿದ. ಈ ಊರಿನ ಜನ ನೋಡಲು ಪೆದ್ದು ಪೆದ್ದಾಗಿ, ಮುಗ್ಧರ ಹಾಗೆ. ಆದರೆ ಗಾರ್ಡ್ ಇವರಲ್ಲಿ ಯಾರನ್ನಾದರೂ ವಿಚಾರಿಸಲು ಹೋದರೆ, ಅವನ ಮೇಲೆ ಕತ್ತಿ ಎತ್ತಿ ಜಗಳವಾಡಲು, ಹೊಡೆಯಲು ಹಿಂಜರಿಯುವವರಲ್ಲ.

ನೆಲದ ಧೂಳಿನಲ್ಲಿ ಹೊರಳಾಡುತ್ತಿದ್ದ ವಿಧವಿಧದ ಹಕ್ಕಿಗಳು ಅವನ ಹೆಜ್ಜೆ ಸಪ್ಪಳಕ್ಕೆ ದಿಕ್ಕುಪಾಲಾಗಿ ಹಾರಿ ಹೋದವು. ಒಂದೆಡೆ ಎರಡು ಮುಂಗುಸಿಗಳು ಒಂದರ ಹಿಂದೆ ಇನ್ನೊಂದು ಓಡಿ ಹೋದವು. ಉಮಾ ಇದ್ದಾಗ ಮುಂಗುಸಿಯೊಂದು ಕಾವಲುಮನೆಯ ಹತ್ತಿರ ಸುತ್ತಾಡುತ್ತಿತ್ತು. ಅದು ದೃಷ್ಟಿಗೆ ಬಿದ್ದರೆ ಉಮಾ ಬೇಗಬೇಗನೆ ಒಳಗೆ ಹೋಗಿ ಮುಷ್ಟಿಯಲ್ಲಿ ಕಾಳು ತಂದು ಅದರ ಮುಂದೆ ಚೆಲ್ಲುತ್ತಿದ್ದಳು. ಅದು ಕುಟುಕುಟು ಸದ್ದಿನೊಂದಿಗೆ ಅದನ್ನು ತಿನ್ನುವಾಗ ಅವಳು ಬಾಗಿಲಿನ ಮರೆಯಲ್ಲಿ ನಿಂತು ನೋಡುತ್ತಿದ್ದಳು. ನೋಡಲು ನನ್ನನ್ನೂ ಕರೆಯುತ್ತಿದ್ದಳು. ಮುಂಗುಸಿ ಹತ್ತಿರ ಇದ್ದರೆ ನಾಗರಹಾವು ಬರುವುದಿಲ್ಲವೆಂದು ಹೇಳುತ್ತಿದ್ದಳು.

ಅದು ನಿಜ, ಹಿಂದೆ ಒಂದೂ ನಾಗರಹಾವು ದೃಷ್ಟಿಗೆ ಬಿದ್ದದ್ದಿಲ್ಲ. ಆದರೆ ಇತ್ತೀಚಿಗೆ ಅರಿಸಿನ ಬಣ್ಣದ ಸರ್ಪವೊಂದು ಕಾವಲುಮನೆಯ ಹತ್ತಿರ ಓಡಾಡುತ್ತಿದೆ. ಕೆಲವೊಮ್ಮೆ ಮನೆಯ ಮೋರಿಯ ಬಳಿ, ಛಾವಣಿಯ ತೊಲೆಯ ಮೇಲೆ ಕಾಣಿಸಿಕೊಂಡದ್ದು ಇದೆ. ಹತ್ತಿರ ಹೋದರೆ ಫುಸ್ ಎನ್ನುತ್ತಾ ಹೆಡೆ ಬಿಚ್ಚುತ್ತದೆ.

(ಮಹಾಬಳೇಶ್ವರ ಸೈಲ್‌)

ಹಾಗೆ ವಿನಾಯಕ ಕಾಡಿಗೆ, ಕಾಡಿನ ಜಂತುಗಳಿಗೆ ಎಂದೂ ಹೆದರಿದವನೇ ಅಲ್ಲ. ಅವನು ಹದಿನಾರನೇ ವಯಸ್ಸಿನಲ್ಲಿ ಕಾಡಿಗೆ ಬಂದವನು. ಮೊದಲು ಪ್ಲ್ಯಾಂಟೇಶನ್ನಿನ ಕೂಲಿಯಾಳಾಗಿ, ಆಮೇಲೆ ಗಾರ್ಡ್ ಆಗಿ. ಒಮ್ಮೆ ಕೆಲಸದಾಳುಗಳಿಗೆ ಪಗಾರ ವಿತರಿಸಲು ಬಾಂದಿ ರೇಂಜರ್ ಬಂದಿದ್ದರು. ವಿನಾಯಕ ಪಗಾರ ಪಡೆಯುವಾಗ ಕನ್ನಡದಲ್ಲಿ ಅಚ್ಚುಕಟ್ಟಾಗಿ ಸಹಿ ಹಾಕಿರುವುದನ್ನು ನೋಡಿ, ರೇಂಜರ್ ಅವನನ್ನು ವಿಚಾರಿಸಿದ್ದರು, “ನೀನು ಎಷ್ಟು ಕಲಿತಿರುವೆ?”

ವಿನಾಯಕ ತಾನು `ಏಳನೆಯ ಕ್ಲಾಸ್ ಪಾಸ್’ ಆಗಿರುವುದಾಗಿ ಹೇಳಿದಾಗ, ಅವರು ಅವನ ಕೈಯಲ್ಲಿ ಒಂದು ಅರ್ಜಿ ಬರೆಯಿಸಿಕೊಂಡು ಹೋದರು ಮತ್ತು ಆರು ತಿಂಗಳಲ್ಲಿ ಅವನನ್ನು ಗಾರ್ಡ್ ಆಗಿ ನೇಮಿಸಿದರು.

ಇವತ್ತಿಗೂ ವಿನಾಯಕ ಆ ಬಾಂದಿ ರೇಂಜರರಿಗೆ ಕೃತಜ್ಞನಾಗಿದ್ದಾನೆ. ಅವರು ನಿವೃತ್ತರಾದಾಗ, ಐವತ್ತು ಮೈಲಿ ದೂರ ಪ್ರಯಾಣ ಬೆಳೆಸಿ ಶಿರ್ಸಿಗೆ ಹೋದ ವಿನಾಯಕ ಅವರ ಕಾಲಿಗೆ ನಮಸ್ಕರಿಸಿ ಬಂದಿದ್ದನು. ಅವರ ಸಾಮಾನುಗಳನ್ನು ಗಾಡಿಯಲ್ಲಿ ತುಂಬಿಸುವಾಗ ವಿನಾಯಕನಿಗೆ ಅಳು ಬಂದಿತ್ತು.

ಅವನು ಕಾವಲುಮನೆ ತಲುಪಿದಾಗ ಕತ್ತಲೆ ಆವರಿಸಿತ್ತು. ಅವನು ಧರಿಸಿದ ಕಾಕಿ ಉಡುಪನ್ನು ತೆಗೆದು ಗೂಟದ ಮೊಳೆಗೆ ನೇತಾಡಿಸಿದ. ಆ ಕಾಕಿ ಉಡುಪಿನಿಂದ ಬೆವರಿನ ವಾಸನೆ ಹೊರಸೂಸುತ್ತಿತ್ತು. ಅದರ ಗುಂಡಿಗಳು ಸರಿಯಾದ ಸ್ಥಾನದಲ್ಲಿರಲಿಲ್ಲ. ಅಲ್ಲಲ್ಲಿ ಹೊಲಿಗೆಯೂ ಬಿಚ್ಚಿಕೊಂಡಿತ್ತು. ಅವನು ಎಷ್ಟೋ ದಿನಗಳಿಂದ ಅದೇ ಉಡುಪನ್ನು ಧರಿಸಿ ಕೆಲಸಕ್ಕೆ ಹೋಗುತ್ತಿದ್ದಾನೆ.

ಅವನು ಹೊರಗೆ ಬಂದು ಜಗಲಿಯ ಸ್ಟೂಲಿನ ಮೇಲೆ ಕುಳಿತುಕೊಂಡ. ಮೊಣಗಂಟಿನವರೆಗೆ ಬರುವ ಪಟ್ಟೆಪಟ್ಟೆಯ ಒಳಚಡ್ಡಿಯನ್ನು ಧರಿಸಿ, ಬರಿಮೈಯಲ್ಲಿ ಅವನು ಕುಳಿತಿದ್ದ. ಸೊರಗಿದ ಕೊಳಕು ದೇಹ, ಸಪ್ಪೆ ಮೋರೆ, ಅಳುತ್ತಿರುವ ಹಾಗೆ ಒದ್ದೆಯಾಗಿರುವ ಕಣ್ಣಂಚು. ರಾತ್ರಿಯಡುಗೆ ಮಾಡುವುದಕ್ಕೆ ಅವನಲ್ಲಿ ಉಮೇದೇ ಇರಲಿಲ್ಲ.

ಅವನು ಅಪರಿಚಿತ ಭಾವದಲ್ಲಿ ಕಾವಲುಮನೆ ಕಟ್ಟಡದ ಸುತ್ತಲೂ ಒಮ್ಮೆ ನೋಟ ಹರಿಸಿದ. ಇದನ್ನು ಯಾರು, ಯಾವಾಗ ಕಟ್ಟಿಸಿದರೋ? ಯಾವ ತಲೆಕೆಟ್ಟ ಮನುಷ್ಯ ಇದರ ವಿನ್ಯಾಸ ರೂಪಿಸಿದನೋ? ಮೂರು ಮನೆವಾಳ್ತೆಗಳು ಇರಲು ಅನುಕೂಲವಾಗುವ ಹಾಗೆ ಹೇಗೇಗೋ ಕೋಣೆಗಳನ್ನು ಹೊಂದಿಸಿ ಈ ಕಾವಲುಮನೆಯನ್ನು ಕಟ್ಟಲಾಗಿದೆ. ಆದರೆ ಇದಕ್ಕೆ ಸರಿಯಾದ ಕಿಟಿಕಿಗಳಾಗಲೀ, ಬಾಗಿಲುಗಳಾಗಲೀ ಇಲ್ಲ. ಕೆಲವು ಕೋಣೆಗಳಲ್ಲಿಯಂತೂ ನಡುಮಧ್ಯಾಹ್ನವೂ ಕತ್ತಲೆ ತುಂಬಿರುತ್ತದೆ. ಇದಕ್ಕೆ ಸುಣ್ಣಬಣ್ಣ ಬಳಿದಿರುವುದು ಯಾವ ಕಾಲಕ್ಕೋ. ಈಗಂತೂ ಆ ಸುಣ್ಣ ಅಲ್ಲಲ್ಲಿ ಕಿತ್ತು ಬಂದಿದೆ. ರೋಗಕ್ಕೆ ತುತ್ತಾಗಿ ಮೈಮೇಲೆ ಹುಣ್ಣು ಕಾಣಿಸುವ ಹಾಗೆ ಗೋಡೆಯ ಮೇಲೆ ಗುಂಡಿಗಳು ಬಿದ್ದಿವೆ. ನಾಲ್ಕೂ ದಿಕ್ಕಿನಲ್ಲಿ ಹಬ್ಬಿರುವ ಗಿಡಮರಗಳ ದಟ್ಟವಾದ ತಂಪು ನೆರಳು ಮತ್ತು ಅದರ ನಡುವೆ ಕೈಕಟ್ಟಿ ಕೂತಿರುವ ಹಾಗೆ ಈ ಕಾವಲುಮನೆ. ಯಾವಾಗಲಾದರೂ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿದರೆ ಈಗಲೇ ಈ ಮನೆ ಕುಸಿದು ಭೂಮಿ ಮೇಲೆ ಬೀಳಬಹುದೆಂದು ವಿನಾಯಕನಿಗೆ ಅನಿಸುವುದು. ಆಮೇಲೆ ಉಳಿಯುವುದು ತೊಲೆ ಕಂಬಗಳು ಮಾತ್ರ.

ಆದರೆ ಎರಡು ವರ್ಷಗಳ ಹಿಂದಿನವರೆಗೆ ಇದೇ ಕಾವಲುಮನೆ ಅವನಿಗೆ ಬೆಚ್ಚಗಿನ ಆಶ್ರಯವೆನಿಸುತ್ತಿತ್ತು. ನಾಲ್ಕು ಕೋಣೆಗಳನ್ನು ಬಳಸಬಹುದಾಗಿದ್ದರೂ, ಅವರು ಎರಡೇ ಕೋಣೆಗಳಲ್ಲಿ ತಮ್ಮ ಸಂಸಾರ ಹೂಡಿದ್ದರು; ಒಂದು ಅಡುಗೆಗೆ, ಮತ್ತೊಂದು ಎದ್ದು, ಕುಳಿತು, ಮಲಗಿಕೊಳ್ಳುವುದಕ್ಕಾಗಿ. ಚಿಕ್ಕ ಚೊಕ್ಕ ಸಂಸಾರ. ಮೂರು ಹಿತ್ತಾಳೆಯ ಬೋಗುಣಿಗಳು, ಒಂದು ತಾಮ್ರದ ತಪ್ಪಲೆ, ಮೂರು ಹಿತ್ತಾಳೆಯ ತಟ್ಟೆಗಳು ಮತ್ತು ಒಂದು ತಾಮ್ರದ ತಂಬಿಗೆ-ಬಿಂದಿಗೆ, ಕೊಡಗಳು ಮಾತ್ರ ದೊಡ್ಡ ಆಕಾರದವು. ತಿಕ್ಕಿ ತಿಕ್ಕಿ ಹೊಳಪಾಗಿಸಿರುವ ಪಾತ್ರೆಪಗಡಗಳು. ಉಮಾ ಸೊಂಟದಲ್ಲಿ ಬಿಂದಿಗೆ ಮತ್ತು ಕೈಯಲ್ಲಿ ಕೊಡ ಹಿಡಿದು ಬರುವಾಗ ಅವಳ ಆ ಸುಮಂಗಲಿ ರೂಪವನ್ನು ನೋಡಿ ಅವನು ಮೈಮರೆಯುತ್ತಿದ್ದ.
ಅವರಿಬ್ಬರಿಗೂ ಒಂದೇ ಚಾದರ ಮತ್ತು ಒಂದೇ ಕಂಬಳಿ. ರಾತ್ರಿ ಮಲಗುವಾಗ ಅವರು ಜೊತೆಯಾಗಿ ಕಂಬಳಿ ಮತ್ತು ಚಾದರದಲ್ಲಿ ಸುತ್ತಿಕೊಂಡು ಒಂದೇ ಹಾಸಿಗೆಯ ಮೇಲೆ ಮಲಗುತ್ತಿದ್ದರು. ಆ ಅಪೂರ್ವ ಬೆಚ್ಚಗಿನ ನೆನಪು ಈಗ ವಿನಾಯಕನನ್ನು ಸದಾ ಕಾಡುತ್ತಿರುತ್ತದೆ.

ಕೆಲವೊಮ್ಮೆ ಅವನಿಗೆ ಸಿಟ್ಟು ಬರುವುದು. ಎಲ್ಲವನ್ನೂ ಎತ್ತಿಕೊಂಡು ನೆಲಕ್ಕೆ ಅಪ್ಪಳಿಸಬೇಕು, ಹೊರಗೆ ಎಸೆದು ಬಿಡಬೇಕು – ಹೀಗೆಲ್ಲಾ ಅನಿಸುವುದು ಇದೆ. ಹಾಳಾದವಳು, ದೇವರು ಕಳುಹಿಸಿಕೊಟ್ಟ ಹಾಗೆ ಬಂದಳು ಮತ್ತು ನನ್ನನ್ನು ಬೆಂಕಿಯಲ್ಲಿ ಬೇಯಲು ಬಿಟ್ಟು ಹೊರಟು ಹೋದಳು. ಅವನು ಏನೇನೋ ಬೈಯ್ಯುತ್ತಿರುತ್ತಾನೆ. ಆ ಬೈಗಳು ತನಗಾಗಿಯೋ ಅಥವಾ ಸತ್ತು ಹೋಗಿರುವ ಹೆಂಡತಿಗಾಗಿಯೋ, ಅಥವಾ ಅದು ದೇವರಿಗೆ ಸಲ್ಲಬೇಕೋ ಯಾವುದೂ ಗೊತ್ತಾಗುವುದಿಲ್ಲ.

ಶಿದ್ಧಿ ಯಮನಪ್ಪನ ಮಗ ಕಾವಲುಮನೆ ಮುಂದಿನಿಂದ ಜಾನುವಾರುಗಳನ್ನು ತೆಗೆದು ಕೊಂಡು ಹೋಗುತ್ತಿದ್ದನು. ಅದರಲ್ಲಿ ಒಂದು ಎತ್ತು ವಿನಾಯಕ ಮನೆಯ ಮುಂದೆ ಬೆಳೆಸಿದ ಬೆಂಡೆ ಮಡಿಯ ಬಳಿ ಬಂದು ಗಿಡಗಳಿಗೆ ಬಾಯಿ ಹಾಕಲು ನೋಡಿತು. ಅಷ್ಟರಲ್ಲಿ ಯಮನಪ್ಪನ ಮಗ ತಕ್ಷಣ ಓಡಿ ಬಂದು ಆ ಎತ್ತನ್ನು ಕರೆದುಕೊಂಡು ಹೋದ. ಆದರೆ ವಿನಾಯಕ ಅವನ ಮೇಲೆ ಸುಮ್ಮನೆ ರೇಗಿದ. “ಹಡಬೆ ನನ್ಮಗನೇ, ಜಾನುವಾರುಗಳನ್ನು ಸರಿಯಾಗಿ ಕಾಯಲು ಆಗದಿದ್ದರೆ, ಕೊಂಡೊಯ್ದು ಹುಲಿಯ ಬಾಯಿಗೆ ಕೊಡೋ.”

ಆ ಹುಡುಗ ಮುಂದೆ ಸರಿದು ವಿನಾಯಕನನ್ನು ಅಣಕಿಸಿ ಹೇಳಿದ, “ನಿನಗೆ ಮನೆ ಸಾರಿಸಲು ಸೆಗಣಿ ಕೊಡುವುದೇ ಇಲ್ಲ. ಕುಂಯ್ಯ್ ಗಾರ್ಡ್ ಮಾಮಾ.”
ವಿನಾಯಕ ಅವನನ್ನು ನೋಡುತ್ತಾ ಮೌನವಾಗಿ ನಿಂತುಕೊಂಡ. ಸ್ವಲ್ಪ ಹೊತ್ತು ತರಗೆಲೆಗಳ ಮೇಲೆ ಜಾನುವಾರುಗಳು ಓಡುವ ಸದ್ದು ಕೇಳಿ ಬರುತ್ತಿತ್ತು. ಕ್ರಮೇಣ ಎಲ್ಲವೂ ಶಾಂತವಾಯಿತು.

ಅವನು ಸ್ನಾನ ಮಾಡುವೆನೆಂದುಕೊಂಡು ಕೊಡ ತರಲು ಎದ್ದು ನಿಂತ. ಅಕಸ್ಮಾತ್ ಅವನ ದೃಷ್ಟಿ ಜಗಲಿಯ ಇನ್ನೊಂದು ಮೂಲೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದಿರುವ ಬಟ್ಟೆಗಂಟಿನ ಕಡೆಗೆ ಹರಿಯಿತು. ಅಲ್ಲಿ ಅವನು ಸಾಗವಾನಿ ಬೀಜಗಳ ಎರಡು ಚೀಲಗಳನ್ನು ಒರಗಿಸಿ ಇಟ್ಟಿದ್ದ. ಅದರ ಮುಂದೆಯೇ ಆ ಬಟ್ಟೆಗಂಟು ಬಿದ್ದುಕೊಂಡಿತ್ತು ಮತ್ತು ಅಲ್ಲೊಬ್ಬ ಅಪರಿಚಿತ ಹೆಂಗಸೂ ಇದ್ದಳು! ವಿನಾಯಕ ಆಶ್ಚರ್ಯಚಕಿತನಾಗಿ ಮೆಲ್ಲ ಮೆಲ್ಲಗೆ ಹೆಜ್ಜೆ ಇಡುತ್ತಾ ಹತ್ತಿರ ಹೋದ. ಅಲ್ಲಿ ಮಲಿನ ವಸ್ತ್ರದಲ್ಲಿ ಕಟ್ಟಿದ ಒಂದು ಗಂಟು, ಅದಕ್ಕೆ ನೇತಾಡಿಸಿದ ಒಂದು ಚೀಲ, ಅದರ ಹತ್ತಿರ ಬಳಸಿ ಹಳೆಯದಾಗಿರುವ ಬಟ್ಟಲು ಮತ್ತು ಒಂದು ಸಣ್ಣ ಅಲ್ಯುಮಿನಿಯಂ ತಟ್ಟೆ ಇತ್ತು. ಅದರ ಹತ್ತಿರವೇ ಹುಚ್ಚಿಯ ಹಾಗೆ ಕಾಣುವ ಸೊರಗಿದ ದೇಹದ ಹೆಂಗಸೊಬ್ಬಳು ಮುದುರಿ ಮಲಗಿದ್ದಳು. ಅವಳು ಸತ್ತಿದ್ದಾಳೋ, ಬದುಕಿದ್ದಾಳೋ ಎನ್ನುವುದನ್ನು ಅಂದಾಜಿಸುತ್ತಾ ವಿನಾಯಕ ಸ್ವಲ್ಪ ಹೊತ್ತು ಅಲ್ಲಿಯೇ ನಿಂತುಕೊಂಡ. ಅಕಸ್ಮಾತ್ ಅವಳು ಕಣ್ಣು ತೆರೆದಳು. ಆಮೇಲೆ ಅವಳು ಬಾಯಿಯ ಸುತ್ತಲಿನ ಚರ್ಮವನ್ನು ಅಗಲಿಸಿ ಕೋಪ ಪ್ರದರ್ಶಿಸಿದಳು. ಮೌನವಾಗಿ ಮುಸಿಮುಸಿ ನಗಲಾರಂಭಿಸಿದಳು. ಒಂದು ವಿಧದ ಭಯಾನಕ ಸನ್ನಿವೇಶ! ನಿಜ ಹೇಳುವುದಾದರೆ, ಅವಳು ನಗುತ್ತಿರುವಳೋ ಅಥವಾ ಅಳುತ್ತಿರುವಳೋ ಎಂಬುದು ವಿನಾಯಕನಿಗೆ ಸರಿಯಾಗಿ ಗೊತ್ತಾಗಲಿಲ್ಲ. ಒಮ್ಮೆ ನಗುತ್ತಿರುವ ಹಾಗೆ ತೋರಿದರೆ, ಮತ್ತೊಮ್ಮೆ ಅಳುತ್ತಿರುವ ಹಾಗೆ ಕಾಣುತ್ತಿತ್ತು. ಅವಳ ಅಳು ನಗುವಿನ ಆಟವನ್ನು ವೀಕ್ಷಿಸುತ್ತಾ ಅವನು ಚಲಿಸದೆ ಇನ್ನೂ ಸ್ವಲ್ಪ ಹೊತ್ತು ಅಲ್ಲಿಯೇ ನಿಂತ.
ಆಮೇಲೆ ಇದ್ದಕ್ಕಿದ್ದಂತೆ ಎಚ್ಚರ ಮೂಡಿದ ಹಾಗೆ ಅವಳನ್ನು ಓಡಿಸಲು ಏರುಧ್ವನಿಯಲ್ಲಿ, “ಹಯ್ ಹಯ್.. ಇಲ್ಲಿಂದ ಹೋಗಮ್ಮಾ..” ಎನ್ನುತ್ತಾ ಅವನು ಗಲಾಟೆ ಮಾಡಿದ. ಅವಳು ಮೇಲೇಳದಿರುವುದನ್ನು ನೋಡಿ ಅವನು ಒಳಗೆ ಹೋಗಿ ಒಂದು ಕೋಲು ತಂದ. ಆ ಕೋಲನ್ನು ನೆಲದ ಮೇಲೆ ಕುಟ್ಟಿದ.

ಹುಚ್ಚಿ ನೆಲದ ಮೇಲೆ ಕೈಯೂರಿ ಏಳತೊಡಗಿದಳು. ಈಗ ಅವಳ ಅಳು ನಗು ನಿಂತು ಹೋಗಿದ್ದವು. ಅವಳಲ್ಲಿ ಎದ್ದು ನಿಲ್ಲಲು ತ್ರಾಣ ಇರಲಿಲ್ಲ. ಸೊರಗಿರುವ ಅವಳ ಕೈಕಾಲು ಕಡ್ಡಿಯಂತಿದ್ದವು. ಮೈ ಬಿಳಿಚಿಕೊಂಡಿತ್ತು. ಗಂಟುಕಟ್ಟಿದ ಕೂದಲಿನಲ್ಲಿ ಕೊಳೆ ತುಂಬಿತ್ತು.

ಅವಳು ಎದ್ದೇಳುವ ಪ್ರಯತ್ನದಲ್ಲಿದ್ದಾಗ ವಿನಾಯಕನಿಗೆ ಅನಿಸಿತು, ಅವಳು ಬತ್ತಿ ಹೋಗಿರುವ ಕಣ್ಣುಗಳಿಂದ ತನ್ನಲ್ಲಿ ಬೇಡುತ್ತಿದ್ದಾಳೆ, `ನನ್ನನ್ನು ಓಡಿಸಬೇಡ, ನನ್ನಲ್ಲಿ ಕರುಣೆ ತೋರು!’

ಆದರೆ ವಿನಾಯಕ ನಿಷ್ಠೂರದಿಂದ, `ಹೋಗೇ ಹೋಗೇ..” ಎನ್ನುತ್ತಾ ಅವಳನ್ನು ಓಡಿಸತೊಡಗಿದ. ಅವಳು ಎದ್ದು ನಿಂತು ತನ್ನ ಬಟ್ಟೆ ಗಂಟನ್ನು ಕೈಗೆತ್ತಿಕೊಂಡು ಆತುರದಿಂದ ಹೆಜ್ಜೆ ಹಾಕುತ್ತಾ ಮನೆ ಮುಂದಿನ ಜಾಲಿಮರದ ಕೆಳಗೆ ಹೋಗಿ ನಿಂತಳು.

ವಿನಾಯಕ ಏರುಧ್ವನಿಯಿಂದ ಹೇಳಿದ, “ಢೋಂಗಿ, ಕಪಟವಾಡಿ ತೋರಿಸುತ್ತಿದ್ದಾಳೆ, ಇಲ್ಲಿಂದ ಹೊರಟು ಹೋಗೇ…”

ಅವನು ಕೊಡ ಮತ್ತು ಬಟ್ಟೆ ತರಲೆಂದು ಒಳಗೆ ಹೋದ. ಸ್ವಲ್ಪ ಹೊತ್ತು ಬಿಟ್ಟು ಹೊರಗೆ ಬಂದು ನೋಡಿದರೆ, ಆ ಹುಚ್ಚಿ ಮತ್ತೆ ಬಂದು ಜಗಲಿಯಲ್ಲಿ ಕುಳಿತಿದ್ದಾಳೆ. ವಿನಾಯಕ ಮತ್ತೆ ಕೋಲು ತಂದು ಅವಳ ಮುಂದೆ ಆಡಿಸುತ್ತಾ ಅವಳನ್ನು ಹೊರಗಟ್ಟಿದ. ಅವಳು ಗಂಟನ್ನು ಕಂಕುಳಲ್ಲಿ ಎತ್ತಿ ಹಿಡಿದು ಜಗಲಿಯಿಂದ ಕೆಳಗಿಳಿದಳು. ಜಾಲಿಮರವನ್ನು ಹಾದು ಕಾಲು ದಾರಿ ಹಿಡಿದು ಗಿಡಬಳ್ಳಿಗಳ ಮರೆಯಲ್ಲಿ ಕಾಣದಾದಳು.

ಅವನು ಕಾವಲುಮನೆ ತಲುಪಿದಾಗ ಕತ್ತಲೆ ಆವರಿಸಿತ್ತು. ಅವನು ಧರಿಸಿದ ಕಾಕಿ ಉಡುಪನ್ನು ತೆಗೆದು ಗೂಟದ ಮೊಳೆಗೆ ನೇತಾಡಿಸಿದ. ಆ ಕಾಕಿ ಉಡುಪಿನಿಂದ ಬೆವರಿನ ವಾಸನೆ ಹೊರಸೂಸುತ್ತಿತ್ತು. ಅದರ ಗುಂಡಿಗಳು ಸರಿಯಾದ ಸ್ಥಾನದಲ್ಲಿರಲಿಲ್ಲ. ಅಲ್ಲಲ್ಲಿ ಹೊಲಿಗೆಯೂ ಬಿಚ್ಚಿಕೊಂಡಿತ್ತು. ಅವನು ಎಷ್ಟೋ ದಿನಗಳಿಂದ ಅದೇ ಉಡುಪನ್ನು ಧರಿಸಿ ಕೆಲಸಕ್ಕೆ ಹೋಗುತ್ತಿದ್ದಾನೆ.

ವಿನಾಯಕ ಸ್ನಾನ ಮಾಡಲು ಬಾವಿಯ ಬಳಿ ಹೋದ. ಕೊಡದಲ್ಲಿ ನೀರು ಸೇದಿ, ಮೈಮೇಲೆ ನೀರು ಸುರಿಸುತ್ತಾ, ತಿಕ್ಕಿ ತಿಕ್ಕಿ ಸ್ನಾನ ಮಾಡಿದ. ಬಾವಿಯೆಂದರೆ ಅದೊಂದು ಆಳವಾದ ಹೊಂಡ. ಅದರ ಕಟ್ಟೆ ಒಂದು ಬದಿಯಲ್ಲಿ ಕುಸಿದು ಅಲ್ಲಿ ಗಿಡಗಂಟಿಗಳು ಸೊಂಪಾಗಿ ಬೆಳೆದಿದ್ದವು. ಒಮ್ಮೆ ಅವನು ನೀರು ಸೇದುವಾಗ ಗಿಡದ ಮೇಲಿನ ಅರಣೆಯೊಂದು ಅವನ ಕೈ ಮೇಲೆ ಏರಿ ಬಂದಿತ್ತು. ಉಮಾ ನೀರು ಸೇದುವಾಗ ಅವನು ಗಿಡಗಳನ್ನೆಲ್ಲಾ ಕತ್ತರಿಸಿ ಹಾಕಿದ್ದ. ಈಗ ಅದು ಮತ್ತೆ ಬೆಳೆದು ನಿಂತಿದೆ.

ಅವನು ಸ್ನಾನ ಮುಗಿಸಿ ಒಂದು ಕೈಯಲ್ಲಿ ಕೊಡ, ಇನ್ನೊಂದರಲ್ಲಿ ಒದ್ದೆ ಬಟ್ಟೆಗಳನ್ನು ಹಿಡಿದು ಮನೆಯ ಹತ್ತಿರ ಬಂದ. ನೋಡಿದರೆ ಆ ಹುಚ್ಚಿ ಮತ್ತೆ ಬಂದು ಜಗಲಿಯಲ್ಲಿ ಕುಳಿತಿದ್ದಾಳೆ.

ವಿನಾಯಕ ಸ್ವಲ್ಪ ಹೊತ್ತು ಅವಳನ್ನು ನೋಡುತ್ತಾ ನಿಂತುಕೊಂಡ. ಇನ್ನು ಅವಳಲ್ಲಿ ಏನು ಹೇಳಬೇಕೆಂದು ಅವನಿಗೆ ತೋಚಲಿಲ್ಲ. ಈಗ ರಾತ್ರಿಯಾಗಿದೆ, ಅವಳು ಎಲ್ಲಿಗೆ ಹೋಗಬೇಕು? ಅವನು ಮೆಲ್ಲಮೆಲ್ಲನೆ ಮೆಟ್ಟಿಲು ಹತ್ತಿ ಜಗಲಿಗೆ ಬಂದ. ಬಟ್ಟೆಗಳನ್ನು ಒಣಗಿಸಲು ಜಗಲಿಯ ಹಗ್ಗದ ಮೇಲೆ ಹರಡುವಾಗ ಆ ಹುಚ್ಚಿಯ ಕಡೆಗೆ ಸರಿಯಾಗಿ ನೋಡಿದ. ಪ್ರಾಯದವಳೋ, ವಯಸ್ಸಾದವಳೋ, ಬಿಳಿಯೋ, ಕಪ್ಪೋ ಏನೂ ಗೊತ್ತಾಗುತ್ತಿರಲಿಲ್ಲ. ಅವಳ ಇಡೀ ದೇಹ ಕೊಳೆ ಕೊಳೆಯಾಗಿತ್ತು. ಮೈಮೇಲಿನ ಸೀರೆ, ರವಿಕೆ ಹರಿದುಹೋಗಿ ಅಲ್ಲಲ್ಲಿ ಸಂದು ಬಿಟ್ಟಿದ್ದವು. ಆದರೆ ಹರಿದ ಆ ಸೀರೆಯ ಜರಿಯಂಚು ಅವನ ಗಮನವನ್ನು ಸೆಳೆಯಿತು. ಆ ಸೀರೆ ಹೊಸದಾಗಿರುವಾಗ ಬೆಲೆಬಾಳುತ್ತಿರಬೇಕು. ರವಿಕೆಯೂ ಕೂಡ ಉತ್ತಮ ದರ್ಜೆಯ ಬಟ್ಟೆಯದ್ದಾಗಿತ್ತು. ಆದರೆ ಅದು ಈಗ ಹಳೆಯದಾಗಿ ಚಿಂದಿಯಾಗಿತ್ತು; ಗುಂಡಿಗಳು ಅವುಗಳ ಸ್ಥಾನದಲ್ಲಿ ಇರಲಿಲ್ಲ.

ಯಾರಿವಳು? ಈ ದೂರದ ಕಾಡಿನೂರಿಗೆ ಎಲ್ಲಿಂದ ಬಂದಳು?

ಯಾರೇ ಇರಲಿ, ನನಗೆ ಯಾಕೆ ಬೇಕು? ಇವತ್ತಿನ ಒಂದು ರಾತ್ರಿ ಮಾತ್ರ, ನಾಳೆ ಅವಳನ್ನು ಈ ಕಾಡಿನ ಆಚೆಬದಿ ಕರೆದುಕೊಂಡು ಹೋಗಿ ಓಡಿಸಿ ಬರುತ್ತೇನೆ. ಸರಕಾರಿ ಮನೆಯೆಂದರೆ ಎಲ್ಲರಿಗೂ ಸಸಾರವಾಗಿ ಕಾಣುತ್ತದೆ, ಇಲ್ಲಿಯ ಹುಚ್ಚಿಗೆ ಕೂಡ!

ಅವನು ಒಳಗೆ ಹೋಗಿ ಚಿಮಿಣಿ ದೀಪ ಹಚ್ಚಿದ. ಒಲೆಗೆ ಕಟ್ಟಿಗೆ ಒಡ್ಡಿ ಕಡ್ಡಿ ಗೀರಿದ. ಆಮೇಲೆ ಒಲೆಯ ಮೇಲೆ ಪಾತ್ರೆಯಲ್ಲಿ ಅನ್ನಕ್ಕೆ ನೀರಿಟ್ಟು ಸ್ವಲ್ಪ ಹೊತ್ತು ಒಲೆಯ ಮುಂದೆ ಕಾಲು ಮಡಚಿ ಕುಳಿತು ಒಲೆಯ ಬೆಂಕಿಯಲ್ಲಿ ಬೀಡಿ ಹಚ್ಚಿ ಸೇದತೊಡಗಿದ. ಆಮೇಲೆ ಅವನು ಎದ್ದು ಬಂದು ತುರಿಮಣೆಯಲ್ಲಿ ಕಾಯಿ ತುರಿದ, ಅದಕ್ಕೆ ಮೆಣಸಿನ ಖಾರ, ಕೊತ್ತಂಬರಿ ಹಾಕಿ ಒರಳುಕಲ್ಲಿನಲ್ಲಿ ಮಸಾಲೆ ಅರೆದ. ಮೊನ್ನೆ ಅವನಿಗೆ ಯಾರೋ ಜಿಂಕೆಯ ಒಣಮಾಂಸ ತಂದುಕೊಟ್ಟಿದ್ದರು. ಅದರಿಂದ ಎರಡು ತುಂಡು ತೆಗೆದುಕೊಂಡು ಅದಕ್ಕೆ ಅರೆದ ಮಸಾಲೆ ಸೇರಿಸಿ ಅವನು ಹುಮಣ ತಯಾರಿಸಿದ.
ಅವನು ಊಟ ಮುಗಿಸಿ ಬೇಗನೆ ಮಲಗಿದ. ನಾಲ್ಕೂ ಕಡೆ ಹರಡಿದ ಕತ್ತಲೆ, ಆ ಕತ್ತಲೆಯಲ್ಲಿ ಇನ್ನೂ ಹೆಚ್ಚು ಘನವಾಗಿ ತೋರುವ ಕಾಡಿನಲ್ಲಿ ಹೊರಗೆ ಹೋಗುವ ಪ್ರಮೇಯವೇ ಇಲ್ಲ. ನಿದ್ದೆ ಬರುವವರೆಗೆ ಹಾಸಿಗೆಯಲ್ಲಿ ಮುದುರಿ ಮಲಗುವುದು.

ಉಮಾ ಇದ್ದಾಗ ರಾತ್ರಿ ದೀರ್ಘವಾದಷ್ಟು ಒಳ್ಳೆಯದೆನಿಸುತ್ತಿತ್ತು. ಆದರೆ ಈಗ ರಾತ್ರಿ ಕಳೆಯುವುದೇ ದುಸ್ಸಹವಾಗಿದೆ. ಅದು ಜಿಗಣೆಯಂತೆ ರಕ್ತವನ್ನು ಹೀರಿ ಜೀವಕ್ಕೆ ಉರಿ ಹತ್ತಿಸಿ, ಮುಂಜಾವನ್ನು ಕೆಂಪಾಗಿಸಿ ದೂರ ಸರಿಯುತ್ತದೆ.

“ಉಮಾ, ಈ ಕಾಡು ನಿನಗೆ ಭಯ ಹುಟ್ಟಿಸುವುದಿಲ್ಲವೇನು?” ಅವನು ಅವಳಲ್ಲಿ ಕೇಳುತ್ತಿದ್ದ.

“ನೀನು ಇರುವಲ್ಲಿ ಕಾಡು ಎನ್ನುವುದು ಇರುವುದೇ?” ಇದು ಅವಳ ಉತ್ತರ.

ಅವಳು ತನ್ನಲ್ಲಿ ಇಟ್ಟಿರುವ ನಂಬಿಕೆಯಿಂದ ಅವನ ಎದೆ ತುಂಬಿ ಬರುತ್ತಿತ್ತು.

ಆದರೆ ಅವಳು ಹೋಗಿಯೇ ಬಿಟ್ಟಳು. ನನ್ನನ್ನು ಅನಾಥನಾಗಿ, ಒಂಟಿಯಾಗಿ ಮಾಡಿ ಹೋದಳು. ಅವನು ಹಾಸಿಗೆಯಲ್ಲಿ ಕೈಕಾಲು ಬಡಿದು, ಮುಷ್ಟಿ ಬಿಗಿದು, ಸಿಟ್ಟು, ದುಃಖವನ್ನು ನುಂಗುವ ಪ್ರಯತ್ನ ನಡೆಸಿದ.

ಹೊರಗೆ ಆ ಹುಚ್ಚಿಯ ಸುಳಿವು ಸ್ವಲ್ಪವೂ ಇರಲಿಲ್ಲ. ಆದರೆ ರಾತ್ರಿಹುಳುಗಳ ಚೀರಾಟ, ದೂರದ ಕಾಡಿನಲ್ಲಿ ಜಿಂಕೆ ಅರಚುವ ಧ್ವನಿ ಕೇಳಿ ಬರುತ್ತಿತ್ತು. ಕಾವಲುಮನೆಯ ಯಾವುದೋ ಕೋಣೆಯ ಗೋಡೆಯ ಮೇಲೆ ಗೂಬೆ ಕುಳಿತು ಅಳುತ್ತಿತ್ತು. ಆ ಹೂಂಕಾರದಿಂದ ಎಲ್ಲೆಡೆ ಭಯ ಹರಡಿಕೊಂಡಿತ್ತು.
ಹುಚ್ಚಿ ಹೊರಗೆ ಇದ್ದಾಳೆಯೇ? ಉಳಿದ ಅನ್ನವನ್ನು ತಟ್ಟೆಗೆ ಹಾಕಿ ಅವಳಿಗೆ ಕೊಡಬಹುದಿತ್ತು… ಬೇಡ, ಸಾಯಲಿ. ಆ ಉಸಾಬರಿ ನನಗ್ಯಾಕೆ. ಅವಳು ನನಗೆ ಏನಾಗಬೇಕು? ನಾಳೆ ಅಲ್ಲಿ ಸತ್ತು ಬಿದ್ದರೆ ಎಳೆದುಕೊಂಡು ಹೋಗಿ ಪೊದೆಗೆ ಬಿಸಾಡಿ ಬಂದರಾಯಿತು.

ಅವಳು ಯಾರು? ಎಲ್ಲಿಯವಳು? ಎಲ್ಲಿಂದ ದಾರಿ ತಪ್ಪಿ ಈ ಕಾಡಿಗೆ ಬಂದು ಬಿದ್ದಿದ್ದಾಳೆ? ಮನುಷ್ಯರದು ಹೇಳಲು ಆಗುವುದಿಲ್ಲ. ತಲೆಯ ನರವೊಂದು ಹಾನಿಗೊಂಡರೆ ಹೀಗೆ ಹುಚ್ಚು ಹಿಡಿದು ತಿರುಗಾಡುವುದೇ! ಉಮಾ ರಕ್ತಸ್ರಾವದಿಂದ ತಟಕ್ಕನೆ ಹೋಗಲಿಲ್ಲವೇನು? ಮನುಷ್ಯನೆಂದರೆ ಕೆಸುವಿನ ಎಲೆಯ ಮೇಲಿನ ನೀರಹನಿಯ ಹಾಗೆ.

ಹಾಗಿದ್ದರೂ, ಅವನು ಹಠದಿಂದ ನಿಷ್ಠೂರನಾಗಿ ಹಾಗೆಯೇ ಮಲಗಿಕೊಂಡೇ ಇದ್ದ. ಅವನಿಗೆ ನಿದ್ದೆ ಹತ್ತಿತು.

ಅವನು ಬೆಳಗ್ಗೆ ಎದ್ದು ಹೊರಗೆ ಬಂದ. ಹುಚ್ಚಿ ಸತ್ತು ಬಿದ್ದ ಹಾಗೆ ಮೌನವಾಗಿ ಮಲಗಿದ್ದಳು. ಅವಳ ಎದೆ ಮಾತ್ರ ಮೆತ್ತಗೆ ಮೇಲೆ ಕೆಳಗೆ ಚಲಿಸುತ್ತಿತ್ತು. ಅವನು ಅವಳನ್ನು ಸರಿಯಾಗಿ ನೋಡಿದ. ಇವಳು ಭಿಕ್ಷೆ ಬೇಡುವ ಹುಚ್ಚಿಯಲ್ಲ. ಸೋತು ಸೊರಗಿದ ದೇಹ, ಮಲಿನವಾದ ಉಡುಪು ಇರುವುದೇನೋ ನಿಜ, ಆದರೆ ರೇಶ್ಮೆ ವಸ್ತ್ರ ಹಳೆಯದಾಗಿ ಚಿಂದಿಯಾದ ಹಾಗೆ ಮನೆತನ, ರೂಪದ ಛಾಯೆ ಇದೆ ಇವಳಲ್ಲಿ; ಇವಳು ಯಾರಿರಬಹುದು?

ಬೆಳಗ್ಗೆ ಹಾಲು ತೆಗೆದುಕೊಂಡು ಬಂದ ಪುತ್ತೂವಿನ ಮಗ ವಿನಾಯಕನ ಪಾತ್ರೆಗೆ ಹಾಲು ಸುರಿಯುತ್ತಾ ಹುಚ್ಚಿಯನ್ನು ನೋಡಿ ಹೇಳಿದ, “ಇವಳು ಇಲ್ಲಿಗೆ ಹೇಗೆ ಬಂದು ಮುಟ್ಟಿದಳು? ನಿನ್ನೆ ಇವಳನ್ನು ಸಿದ್ಧರಾಮಣ್ಣನ ಅಂಗಡಿಯ ಹತ್ತಿರ ಡ್ರೈವರ್ ಮತ್ತು ಕ್ಲಿನರ್ ಟ್ರಕ್‍ನಿಂದ ಕೆಳಗೆ ಇಳಿಸಿದ್ದರು.
ಯಲ್ಲಾಪುರದಿಂದ ಬರುವಾಗ ಇವಳು ಕಳ್ಳತನದಿಂದ ಟ್ರಕ್‍ನಲ್ಲಿ ಕುಳಿತಿದ್ದಳಂತೆ. ನೋಡಿದ ಕೂಡಲೇ ಅವರು ಅವಳಿಗೆ ಹೊಡೆದು ಓಡಿಸಿದ್ದಾರೆ.”
ವಿನಾಯಕ ವಿಶೇಷ ದೃಷ್ಟಿಯಿಂದ ಅವಳನ್ನೇ ನೋಡುತ್ತಾ ನಿಂತುಕೊಂಡ. ಆದರೆ ಅವನಿಗೆ ಅವಳಲ್ಲಿ ಕನಿಕರ ಹುಟ್ಟಲಿಲ್ಲ.

ಅವನು ಎಣಿಸಿ ಐದು ಜೋಳದ ರೊಟ್ಟಿಯನ್ನು ತಯಾರಿಸಿದ. ಒಂದನ್ನು ಚಹಾ ಜೊತೆ ತಿಂದ. ಉಳಿದ ನಾಲ್ಕನ್ನು ಬುತ್ತಿಯಲ್ಲಿ ಕಟ್ಟಿಕೊಂಡ. ಮೊನ್ನೆ ಪ್ಲ್ಯಾಂಟೇಶನ್ನಿಂದ ಬರುವಾಗ ಅವನು ಕೇಶವಭಟ್ಟರ ಹಿರಿಮನೆಯಿಂದ ನಾಲ್ಕು ಬಾಳೆಕಾಯಿ ಬೇಡಿ ತಂದಿದ್ದ. ಆ ಎರಡು ಬಾಳೆಕಾಯಿಗಳನ್ನು ಕತ್ತರಿಸಿ ಅದರಿಂದ ಪಲ್ಯ ಮಾಡಿದ್ದ. ಬಾಳೆಕಾಯಿಯ ಖಾರ ಪಲ್ಯ ಮತ್ತು ಜೋಳದ ರೊಟ್ಟಿಗಳು.

ಒಲೆಯ ಮೇಲೆ ರೊಟ್ಟಿ ಕಾಯಿಸುವಾಗ ಅವನಿಗೆ ಹುಚ್ಚಿ ನೆನಪಾಗಿದ್ದಳು. ಆದರೆ ಅವನು ಅವಳ ಅಸ್ತಿತ್ವವನ್ನು ಮರೆಯುವ ಪ್ರಯತ್ನದಲ್ಲಿದ್ದ. ನನ್ನನ್ನು ಪರೀಕ್ಷೆ ಮಾಡಲು ಯಾರೋ ಕಳುಹಿಸಿಕೊಟ್ಟ ಹಾಗೆ ಇವಳು ಇಲ್ಲಿಗೆ ಯಾಕೆ ಬಂದಳು. ನನಗೆ ಇವಳು ಸೇರುವುದಿಲ್ಲ, ಇವಳಿಗೆ ಒಂದು ತೊಟ್ಟು ನೀರು ಕೂಡ ಕೊಡಲಾರೆ.

ಅವನು ಅದೇ ಮಲಿನ ಕಾಕಿಉಡುಪನ್ನು ದೇಹಕ್ಕೇರಿಸಿದ. ಬುತ್ತಿಯನ್ನು ಕೈಗೆತ್ತಿಕೊಂಡ. ಹೆಗಲ ಮೇಲೆ ರೇನ್ ಕೋಟು ಎಸೆದು ಹೊರಡಲು ಸಿದ್ಧನಾದ. ಯಾವಾಗಲೋ ಸರಕಾರ ಅವನಿಗೆ ಮಳೆಗಾಗಿ ಆ ರೇನ್ ಕೋಟ್ ನೀಡಿತ್ತು. ಆದರೆ ಈಗ ಬೇಸಿಗೆ ದಿನಗಳಲ್ಲಿಯೂ ಅವನು ಅಭ್ಯಾಸಬಲದಿಂದ ಆ ರೇನಕೋಟನ್ನು ಹೆಗಲಿಗೇರಿಸುತ್ತಾನೆ. `ಇವನಿಗೆ ಹಿಂದೆ ಕೆಲಸದಾಳು ಆಗಿದ್ದಾಗ ಕಂಬಳಿ ಹೊದ್ದು ರೂಢಿಯಾಗಿತ್ತಲ್ಲ, ಅದಕ್ಕಾಗಿಯೇ ಹೀಗೆ’ ಎಂದು ಗಾರ್ಡ್‍ಗಳು ಮಾತನಾಡಿಕೊಳ್ಳುತ್ತಾ ನಗುವುದಿತ್ತು.

ಅವನು ಜಗಲಿಗೆ ಬರುವಾಗ ಹುಚ್ಚಿ ಎದ್ದು ಕುಳಿತಿದ್ದಳು. ತಲೆಗೆ ಕೈಹಾಕಿ ಕೂದಲನ್ನು ಪರಪರನೆ ಕೆರೆಯುತ್ತಿದ್ದಳು. ಅವನು ಕಾಣಿಸಿದ ಕೂಡಲೇ ಅವಳು ಭಿಕ್ಷೆ ಬೇಡುವ ಹಾಗೆ ಕೈಯನ್ನು ಮುಂದೆ ಚಾಚಿದಳು.

ಅವಳ ನಡುಗುವ ಕೈಯಲ್ಲಿ ಹಸಿವಿನ ನೈಜ ಸೆಳೆತ, ಅವಳ ತೆರೆದ ನಿರ್ಜೀವ ಕಣ್ಣುಗಳ ಹಿಂದೆ ಹಸಿವಿನ ಪ್ರಾಮಾಣಿಕತೆ ಇರುವಂತೆ ವಿನಾಯಕನಿಗೆ ಅನಿಸಿತು. ಅವಳ ಇರುವಿಕೆಯನ್ನು ಹುಚ್ಚು ಎಂದುಕೊಂಡು ತಳ್ಳಿ ಬಿಡಬಹುದು ಆದರೆ ಅವಳ ಹಸಿವೆ ಮಾತ್ರ ದಿಟವಾಗಿತ್ತು, ಅಪ್ಪಟವಾಗಿತ್ತು!
ಅವಳ ಕಣ್ಣ ರೆಪ್ಪೆಗಳು ವೇಗವಾಗಿ ಬಡಿದುಕೊಳ್ಳುತ್ತಾ ಅದರಲ್ಲಿ ಜೀವಸಂಚಾರವಾದ ಹಾಗೆ, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿರುವ ಹಾಗೆ ಅವನಿಗೆ ಕಂಡಿತು.

ಸ್ವಲ್ಪ ಹೊತ್ತು ಅಷ್ಟೇ. ಮರುಕ್ಷಣವೇ ಅವಳ ಆ ಬಾಯಿಯ ಸುತ್ತಲಿನ ಚರ್ಮವನ್ನು ಅಗಲಿಸಿ ಅಳುವ ನಗುವ ಆಟ ಶುರುವಾಯಿತು. ಮತ್ತೊಮ್ಮೆ ಅವನು ಅವಳು ನಿಜವಾಗಿಯೂ ನಗುತ್ತಿರುವಳೋ, ಅಳುತ್ತಿರುವಳೋ ಎನ್ನುವುದನ್ನು ಕಂಡು ಹಿಡಿಯುವ ಪ್ರಯತ್ನವನ್ನು ನಡೆಸಿದ. ಅವನಿಗೆ ಖಂಡಿತವಾಗಿ ತಿಳಿಯಿತು, ಅವಳು ನಗುತ್ತಿಲ್ಲ, ಅಳುತ್ತಿದ್ದಾಳೆ.

ಅವನು ಬೇಗಬೇಗನೇ ಕೈಯಲ್ಲಿದ್ದ ಬುತ್ತಿಯನ್ನು ಬಿಚ್ಚಿದ, ಅದರಿಂದ ಎರಡು ರೊಟ್ಟಿಗಳನ್ನು ಹೊರತೆಗೆದ., ಅದರ ಮೇಲೆ ಬಾಳೆಕಾಯಿ ಪಲ್ಯವನ್ನಿಟ್ಟು, ಅವಳ ಮುಂದಿದ್ದ ತಟ್ಟೆಯಲ್ಲಿ ಅದನ್ನು ಎಸೆದ, ಒಳಗೆ ಹೋಗಿ ತಂಬಿಗೆಯಲ್ಲಿ ನೀರು ತುಂಬಿ ತಂದ. ಅವಳ ಬಟ್ಟಲಲ್ಲಿ ನೀರು ಹಾಕಲು ನೋಡಿದರೆ ಅದು ಒಡೆದು ಹೋಗಿ, ಸೋರುತ್ತಿತ್ತು. ಆಮೇಲೆ ಅವನು ಮೂಲೆಯಲ್ಲಿ ತೊಲೆಗೆ ನೇತಾಡಿಸಿದ ಅಂಚಿಲ್ಲದ ಅನಾಮಲ್ ತಟ್ಟೆಯನ್ನು ತಂದ. ಅದನ್ನು ಹುಚ್ಚಿಯ ಮುಂದೆ ಇಟ್ಟು ಅದರಲ್ಲಿಯೇ ನೀರು ಸುರಿದ.

ತಂಬಿಗೆ ಒಳಗಿಟ್ಟು ಬಾಗಿಲೆಳೆದು ಅವನು ಕಾಡಿನತ್ತ ಹೆಜ್ಜೆ ಹಾಕಿದ.

ಆ ಅನಾಮಲ್ ತಟ್ಟೆಯನ್ನು ಅವನ ಹೆಂಡತಿ, ಉಮಾ ಅಲ್ಲಿ ನೇತಾಡಿಸಿ ಇಟ್ಟಿದ್ದಳು. ಉಮಾ ತೀರಿಕೊಂಡ ಬಳಿಕ ಇವತ್ತೇ ಅವನು ಅದಕ್ಕೆ ಕೈಹಾಕಿದ್ದ. ಉಮಾ ಬಹಿಷ್ಠೆಯಾಗಿ ಹೊರಗೆ ಕುಳಿತಿರುವಾಗ ಅದೇ ತಟ್ಟೆಯಲ್ಲಿ ಉಣ್ಣುತ್ತಿದ್ದಳು. ಆಮೇಲೆ ಮೂರು ದಿನ ಕಳೆದು ಸ್ನಾನ ಮಾಡಿ ಬಂದು ಆ ತಟ್ಟೆಯನ್ನು ಅದೇ ರೀತಿ ತೊಲೆಗೆ ಸಿಕ್ಕಿಸಿ ಇಡುತ್ತಿದ್ದಳು.

….ಅವಳು ತನ್ನ ಮುಟ್ಟಿನ ದಿನಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಿದ್ದಳು! ಮೂರು ದಿನ ಸೀರೆ ಸುತ್ತಿಕೊಂಡು ಹೊರಕೋಣೆಯ ಮೂಲೆಯೊಂದರಲ್ಲಿ ಮುದುಡಿ ಮೌನವಾಗಿ ಕುಳಿತುಕೊಳ್ಳುವುದು. ಕುಳಿತಲ್ಲಿಂದಲೇ ನನಗೆ `ಅದು ಮಾಡು’, `ಇದು ಮಾಡು’ ಎಂದು ಆಜ್ಞೆ ಹೊರಡಿಸುವುದು. ನಾನು ತಪ್ಪಿದರೆ ಸಿಟ್ಟಾಗುವುದು, ಅಣಕಿಸಿ ನಗುವುದು. ನಾನು ಅವಳ ಹತ್ತಿರ ನಿಲ್ಲುವ ಹಾಗಿರಲಿಲ್ಲ. ಊಟ ಬಡಿಸುವಾಗಲೂ, ನಾನು ಸೌಟನ್ನು ಮೇಲೆತ್ತಿ ದೂರದಿಂದ ಬಡಿಸಬೇಕು.

ಮೂರು ದಿನ ಕಳೆದ ಬಳಿಕ ಅವಳು ನಸುಕಿನಲ್ಲಿ ಎದ್ದು ಹೊರಗೆ ಹೋಗುತ್ತಿದ್ದಳು. ಉಟ್ಟ ಬಟ್ಟೆ, ಹಾಸಿ ಮಲಗಿದ ಬಟ್ಟೆ, ಕೈತಪ್ಪಿ ತಾಗಿದ ಎಲ್ಲವನ್ನೂ ಒಗೆದು ಹಾಕುವಳು. ಆಮೇಲೆ ಒದ್ದೆ ಬಟ್ಟೆಯಲ್ಲಿ ಬಂದು ಒಗೆದ ಬಟ್ಟೆಗಳನ್ನು ಒಣಗಿಸಲು ಹರಡಿ, ಬಿಸಿ ಸ್ನಾನ ಮಾಡಲು ಬಚ್ಚಲಿಗೆ ಹೋಗುವಳು. ಆ ದಿನಗಳಲ್ಲಿ ನಾನು ಹಂಡೆ ತುಂಬಾ ನೀರನ್ನು ಬಿಸಿಯಾಗಿ ಕಾಯಿಸಿ ಇಡುತ್ತಿದ್ದೆ.

ನಾನು ಖುಷಿಯಾಗಿ ಗುಣಗುಣಿಸಿದರೆ ನನ್ನ ಮೇಲೆ ರೇಗುವುದು. `ನೀವು ಮೌನವಾಗಿ ಸಾಣೆಕಲ್ಲಿನಲ್ಲಿ ಗಂಧ ಮತ್ತು ಅರಿಶಿನ ತೇದು ಕೊಡಿ ನೋಡೋಣ’ ಎಂದು ಹೇಳುವುದು.

ಅವಳು ಸ್ನಾನ ಮುಗಿಸಿ ಬರುವಾಗ ನಾನು ಗಂಧ ಮತ್ತು ಅರಿಶಿನವನ್ನು ತೇದು ಬಟ್ಟಲಲ್ಲಿ ತುಂಬಿಡುತ್ತಿದ್ದೆ. ಅವಳು ಆ ಗಂಧ ಮತ್ತು ಅರಿಶಿನವನ್ನು ದೇಹಕ್ಕೆ ಹಚ್ಚಿ ಶುದ್ಧಳಾಗಿಯೇ ಮನೆಯೊಳಗೆ ಬರುವಳು. ಹಾಗೆ ಬರುವಾಗಲೂ ಕೈಯಲ್ಲಿ ಶೆಗಣಿ ಮುದ್ದೆ ಹಿಡಿದು ಸಾರಿಸುತ್ತಾ ಬರುತ್ತಿದ್ದಳು.
ಆಮೇಲೆ ಅವಲಕ್ಕಿ ಕಲಸಿ, ಚಹಾ ಮಾಡುವಳು. ನಾವಿಬ್ಬರು ಜೊತೆಯಾಗಿ ಚಹಾ ಕುಡಿಯಲು ಕುಳಿತುಕೊಳ್ಳುತ್ತಿದ್ದೆವು. ಆಗ ಅವಳ ಮೈಯಿಂದ ಅಪರೂಪದ ಸುಗಂಧ ಹೊರಹೊಮ್ಮುತ್ತಿತ್ತು. ಅವಳ ಬಿಚ್ಚಿರುವ ಒದ್ದೆ ಕೂದಲಿಗೆ ಮೂಗು ಹಚ್ಚಿ ಪರಿಮಳ ಹೀರಬೇಕೆನ್ನುವ ಬಯಕೆ ನನ್ನಲ್ಲಿ ಮೂಡುತ್ತಿತ್ತು. ಅವಳ ಆ ಸ್ನಾನವೆಂದರೆ ಪ್ರತಿ ತಿಂಗಳು ಕಾಣಿಸಿಕೊಳ್ಳುವ ಸಂಭ್ರಮವಾಗಿರುತ್ತಿತ್ತು.

ಒಮ್ಮೆ ಅವಳು ಮುಟ್ಟಾಗಲಿಲ್ಲ. ತನಗೆ ದಿನ ಮುಂದೆ ಹೋಗಿದೆ ಎನ್ನುವ ಅರಿವು ಅವಳಲ್ಲಿ ಸಂತೋಷವನ್ನು ಅರಳಿಸಿತ್ತು.

(ಡಾ. ಗೀತಾ ಶೆಣೈ)

ಆದರೆ ಮುಟ್ಟಿನ ದಿನ ಮುಂದೆ ಹೋಗಿರುವುದೇ ಅವಳ ಜೀವಕ್ಕೆ ಕರಾಳವೆನಿಸಿತು. ಅವಳಿಗೆ ಮಗುವಾಗುವ ಸೂಚನೆ ಬೇಡವಿತ್ತು. ಅವಳು ತಿಂಗಳು ತಿಂಗಳು ಮುಟ್ಟಾಗುವುದೇ ಒಳ್ಳೆಯದಿತ್ತು. ಮಕ್ಕಳು ಮರಿಗಳು ಯಾಕೆ ಬೇಕಿತ್ತು.

ಊರಿನವರ ಹೆಂಡತಿಯರು ಇಲ್ಲವೇ? ಏಳೆಂಟು ಮಕ್ಕಳನ್ನು ಹೆತ್ತು ಚುರುಕಾಗಿ ಇರುವವರು. ಇವಳಿಗೇ ಸಾವು ಬರಬೇಕಿತ್ತೇನು?

ಒಮ್ಮೆ ಬೇಡ ಬೇಡವೆಂದು ಹೇಳಿದರೂ, ನನ್ನನ್ನು ಹತ್ತಿರದ ಬೆಟ್ಟಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಕಲ್ಲಿನ ಮೇಲೆ ಮೂಡಿರುವ ಹಸುವಿನ ಹೆಜ್ಜೆ ಗುರುತು ನೋಡುವುದಕ್ಕೆ ಮತ್ತು ಅಲ್ಲಿಯ ಈಶ್ವರ ಲಿಂಗದ ಪೂಜೆ ಮಾಡುವುದಕ್ಕಾಗಿ. ಆ ಎತ್ತರದ ಬೆಟ್ಟವನ್ನು ಹತ್ತಿ ದೇಹಕ್ಕೆ ತುಂಬಾ ಸುಸ್ತಾಗಿತ್ತು. ಯಾವಾಗಲೂ ದೇವರದೇ ಸ್ಮರಣೆ ಅವಳಿಗೆ. ಅಮಾವಾಸ್ಯೆ ಹುಣ್ಣಿಮೆಗಳ ಮತ್ತು ದೇವರುದಿಂಡರದೇ ಸುದ್ದಿ ಬಾಯಲ್ಲಿ.

ದೇವರು ದಿಂಡರು ಎಲ್ಲವೂ ಸುಳ್ಳು.. ಪ್ರತಿಯೊಂದೂ ಢೋಂಗಿಯೇ!

ಅವನ ಜೀವಕ್ಕೆ ಕಡುಬೇಸರ ಹತ್ತಿದಂತಾಯಿತು. ಪ್ಲ್ಯಾಂಟೇಶನ್ನಿಗೆ ಹೋಗುವುದೇ ಬೇಡವೆಂದು ಕಾಣತೊಡಗಿತು. ಕಾಡಿನೊಳಗೆ ನುಗ್ಗಿ ಯಾವುದಾದರೂ ಮರದ ಬುಡದಲ್ಲಿ ಸುಮ್ಮನೆ ಬಿದ್ದುಕೊಳ್ಳಬೇಕು. ಇಲ್ಲದ್ದಿದರೆ ಪೊದೆಯ ಬಳ್ಳಿಗಳನ್ನು ಕಿತ್ತು ಮರಕ್ಕೆ ನೇಣು ಹಾಕಿಕೊಳ್ಳಬೇಕು!
ಮುಂದಿನಿಂದ ಇಬ್ಬರು ನಡೆದು ಬರುತ್ತಿದ್ದರು. ಒಬ್ಬನ ಕೈಯಲ್ಲಿ ದೊಡ್ಡ ಕತ್ತಿ ಇತ್ತು. ವಿನಾಯಕ ಅವನ ಮೇಲೆ ರೇಗಿದ, “ಕತ್ತಿ ಹಿಡಿದು ತಿರುಗಾಡುತ್ತಿರುವೆ ಕತ್ತಿ ಹಿಡಿದು! ಕಾಡನ್ನೆಲ್ಲಾ ಹಾಳು ಮಾಡಿಬಿಡು. ಎಲ್ಲವನ್ನು ಕತ್ತರಿಸಿ ಬಿಸಾಡಿ ಬಿಡು. ನಾನು ಬೆನ್ನು ತಿರುಗಿಸಿ ಹೋಗುವುದನ್ನೇ ಕಾಯುತ್ತಾ, ಇಡೀ ಕಾಡನ್ನು ಕತ್ತರಿಸಿ ಹಾಕಲು ನೋಡುವೆ ನೀನು! ನಿನ್ನ ಮೇಲೆ ನಾನು ಕೇಸ್ ಹಾಕುವೆ. ನಿನ್ನನ್ನು ಬಿಡುವುದಿಲ್ಲ. ನೀವೆಲ್ಲಾ ಕಳ್ಳರ ಹಾಗೆ ಅಡಗಿ ತಿರುಗಾಡುತ್ತೀರಿ.”

ಅವರು ಅವನನ್ನು ಆಶ್ಚರ್ಯದಿಂದ ನೋಡಿದರು. ಆಮೇಲೆ ಅವರಲ್ಲಿ ಒಬ್ಬ ಸಿಟ್ಟಾದ. “ಏನೋ, ನಿನ್ನ ತಲೆಗಿಲೆ ಏನಾದರೂ ಕೆಟ್ಟು ಹೋಗಿದೆಯಾ? ಸರಕಾರಿ ಮನುಷ್ಯನೆಂದು ನಿನ್ನನ್ನು ನಾನು ಬಿಟ್ಟು ಬಿಡುತ್ತೇನೆ. ಏನೇನೋ ಮಾತನಾಡುತ್ತಿರುವೆಯಲ್ಲ, ಯಾವುದೋ `ಹುಚ್ಚು ಮಂಗ’ ಇವನು.”
ವಿನಾಯಕ ಮಾತನಾಡಲಿಲ್ಲ, ಸುಮ್ಮನಿದ್ದ.

… ಆ ಹುಚ್ಚಿ ಯಾರಿರಬಹುದು? ಯಾವ ಲೋಕದಿಂದ ಬಂದವಳು? ಜರಿಯಂಚಿನ ಸೀರೆ ಮತ್ತು ಮಕಮಲ್ಲಿನ ರವಿಕೆ ತೊಟ್ಟಿರುವಳಲ್ಲ. ಹಣೆಯ ಮೇಲೆ ಕುಂಕುಮವಿಡುತ್ತಿದ್ದ ಬಿಳಿ ಗುರುತು ಇದೆ. ದೇವರೇ ಮನುಷ್ಯರನ್ನು ಯಾವ ಸ್ಥಿತಿಗೆ ತಂದೊಡ್ಡುವೆ ನೀನು!

ದಾರಿಯ ಬದಿಯಲ್ಲಿರುವ ರಾಮರಾಯ ಭಟ್ಟರ ಹಿರಿಮನೆಯ ತೋಟದಲ್ಲಿ ಆಳು ಮರದಿಂದ ಅಡಿಕೆ ಕೀಳುತ್ತಿದ್ದ. ವಿನಾಯಕ ಅಲ್ಲಿಗೆ ಹೋಗಿ “ಎರಡು ಅಡಿಕೆ ಇತ್ತ ಬಿಸಾಡೋ,” ಎಂದು ಕೇಳಿದ.

ಅಡಿಕೆ ಹೆಕ್ಕುತ್ತಿದ್ದ ಆಳು ಕೆಂಪು ಬಣ್ಣದ ನಾಲ್ಕು ಹಣ್ಣಡಿಕೆಗಳನ್ನು ಅವನತ್ತ ತಳ್ಳಿದ. ಅದರಲ್ಲಿ ಒಂದನ್ನು ಕಲ್ಲಿನ ಮೇಲಿಟ್ಟು ತುಂಡು ಮಾಡಿ, ಅದನ್ನು ಬಾಯಿಗೆ ಹಾಕಿದ ವಿನಾಯಕ.

ಅಡಿಕೆ ಮರವನ್ನೇರಿದ್ದ ಆಳು ಕೆಳಗೆ ನಿಂತವನಲ್ಲಿ ವಿಚಾರಿಸಿದ, “ಅವನೇ ಅಲ್ಲವೇ ಆ ಗಾರ್ಡ್, ಕಳೆದ ಬಾರಿ ಅವನ ಹೆಂಡತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಸತ್ತು ಹೋಗಿದ್ದು.”

“ಅವನೇ ಇವನು. ಹೆಂಡತಿ ಸತ್ತಂದಿನಿಂದ ಅವನ ಜೀವ ಸ್ಥಿಮಿತದಲ್ಲಿ ಇಲ್ಲ.”

ಇಂದು ವಿನಾಯಕ ಪ್ಲ್ಯಾಂಟೇಶನ್ನಿನಲ್ಲಿ ಮೌನವಾಗಿಯೇ ಇದ್ದನು. ಕೆಲಸದಾಳುಗಳು ಕೂಡ ಅವನಲ್ಲಿ ಬೇಕಾಬಿಟ್ಟಿ ಮಾತನಾಡಲು ಹೋಗಿರಲಿಲ್ಲ. ಆದರೆ ಒಬ್ಬ ಆಳು ಕಿವಿಯ ಮೇಲಿನ ಬೀಡಿಯನ್ನು ತೆಗೆದು ಅವನಿಗೆ ಕೊಡುವಾಗ ಇಷ್ಟೇ ಹೇಳಿದ, “ಆಗಸದಿಂದ ಉದುರಿ ಕಾಡಿನಲ್ಲಿ ಬಿದ್ದ ಹಾಗಾಗಿದೆ ಮನುಷ್ಯನ ಗತಿ. ಯಾರ ನಶೀಬಿನಲ್ಲಿ ಏನು ಬರೆದಿದೆಯೋ ಯಾರು ಹೇಳಬಲ್ಲರು? ಈಗ ನನ್ನ ಉದಾಹರಣೆಯನ್ನೇ ನೋಡು ಹಾವು ಕಚ್ಚಿದಾಗ ಮೂರು ತಂಬಿಗೆ ರಕ್ತ ಕಾರಿದ್ದೆ. ಆದರೂ ಬದುಕಿ ಉಳಿದೆನಲ್ಲ? ಎಲ್ಲವೂ ಅದೃಷ್ಟದ ಆಟ!”

ರಕ್ತದ ಹೆಸರು ತೆಗೆದ ಕೂಡಲೇ ವಿನಾಯಕನಿಗೆ ಭಯವೆನಿಸಿತು. ಜೀವ ತಳಮಳಿಸಿತು.

(ಕೃತಿ: ಅದೃಷ್ಟ (ಕಾದಂಬರಿ), ಕೊಂಕಣಿ ಮೂಲ: ಮಹಾಬಳೇಶ್ವರ ಸೈಲ್‌, ಕನ್ನಡಕ್ಕೆ: ಡಾ. ಗೀತಾ ಶೆಣೈ, ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಲೆ: 90/-)