ಒಂಟಿಯಲ್ಲ ಬಿಡು….
ಯಾರದೋ ಮರೆತ ನೆನಪಾಗಿ
ನನ್ನದೇ ನೆರಳಿಗೆ ಜೊತೆಯಾಗಿ
ಮರೆತ ಹುಡುಗನ ಹಾಡಾಗಿ
ನಾನು ನಾನೇ, ನನ್ನದೇ ಪಾಡಿಗೆ
ಎಗ್ಗಿಲ್ಲ ಬಿಡು ಭರವಸೆಯ ಬೀಡು
ಮೈ ಕಾವಿನಲಿ ಮೊಟ್ಟೆಯೊಡೆದು ಹುಟ್ಟಿ
ಕಟ್ಟೀತು ಭಾವಗಳ ಎಳೆ ಎಳೆಗಳ ಹೆಕ್ಕಿ
ಕಲ್ಪನೆಗಳ ಹೊಸದೊಂದು ಗೂಡು
ಹುಲ್ಲೋ, ಎಲೆಯೋ ಮತ್ತೊಂದು ಹಕ್ಕಿಯ ಪುಕ್ಕವೋ
ಎಲ್ಲವೂ ತಳಕೆ ಮೆತ್ತನೆಯ ಹಾಸು
ಕೂಗು, ತಕರಾರು, ಕ್ರೌರ್ಯಗಳಿಲ್ಲದ
ಹಸಿರ ಮರೆಯಲ್ಲಿ ಹೊಮ್ಮಿಸಿ ಹೊಸದೊಂದು ಹಾಡು
ದೂರದ ಸಾಲು ಬೆಟ್ಟ, ತೇಲುವ ಬಿಳಿ ಮೋಡ,
ಆಗಸದ ಖಾಲಿ ನೀಲಿ ಕಪ್ಪಾದ ರಾತ್ರಿ
ಅಸೂಯೆ ಪಟ್ಟಾವು ನೋಡಿ
ಹೊಳೆವ ಒಂಟಿ ಶುಭ್ರ ನಕ್ಷತ್ರ
ಸತ್ವವಿತ್ತೋ ಇಲ್ಲವೋ ಪ್ರೀತಿಗದು
ವಿಧಿಯೊಡನೆ ಆಯ್ಕೆಯಂತೂ ಇತ್ತು
ಕಟೆದ ಬದುಕ ಹಳತು ಕೂಡ
ಹೊತ್ತೇ ಹುಟ್ಟಿತ್ತು ಒಂದು ಹೊಸ ಅವಕಾಶ
ಜೀವನದ ದಾರಿ ಬೆಳೆದೀತು
ಜೊತೆಯಾದಾವು ಇಕ್ಕೆಲಗಳು
ಒಂಟಿಯಲ್ಲ ಬಿಡು
ಕವಲೊಡೆದ ನಮ್ಮ ಹಾದಿಗಳು
ಕೂಡದಿರಲಿ ಮತ್ತೆ….
ಲೇಖಕಿ ಮತ್ತು ದಂತವೈದ್ಯೆ. ಮೂಲತಃ ತುಮಕೂರಿನವರು. ಕಳೆದ ಹದಿನೈದು ವರ್ಷಗಳಿಂದ ಇಂಗ್ಲೆಂಡ್ ನಿವಾಸಿ. ಬಾಲಕಿಯಾಗಿರುವಾಗಲೇ ಬರೆಯಲು ತೊಡಗಿದ್ದವರು ಈಗ ಇಂಗ್ಲೆಂಡಿನ ಕನ್ನಡಕೂಟಗಳ ಒಡನಾಟದಲ್ಲಿ ಮತ್ತೆ ಬರವಣಿಗೆ ಮುಂದುವರೆಸಿದ್ದಾರೆ.