ರಾತ್ರಿಗಳು ಗಾಯವಾಗಿವೆ

ಮತ್ತೆ ಮತ್ತೆ ನಿನ್ನ ಹುಡುಕುವುದನು
ಆಗಾಗ ನಿನ್ನ ನೆನೆಯುವುದನು
ಈಗೀಗ ಬಿಟ್ಟು, ಬಿಟ್ಟಿದ್ದೇನೆ
ಬಳಲಿಕೆಯ ಭಾವಗಳು
ಬೆಂಡಾಗಿ, ತುಂಡಾಗಿ
ಕನಸು ಕನವರಿಕೆಯಲಿ
ರಾತ್ರಿಗಳು ಗಾಯವಾಗಿವೆ
ತುಂಬು ಬಸುರೆಯ ಹಗಲುಗಳು
ಬೇನೆ ಹೆರುತ್ತಿವೆ

ಬೇಡವಾದ ದುಃಸ್ವಪ್ನ ಧುತ್ತನೆ ಎದುರಾಗಿ
ದೂರ ದೂಡಿದಷ್ಟೂ
ಎದೆಯ ಮೇಲೇರಿ ಅಧರ ಬೆವರಾಡಿ
ಭಯದ ಮರಣ ಶಾಸನ ಬರೆಯುತ್ತಿದೆ
ಹೆಗಲು ಮುಟ್ಟಿಕೊಳ್ಳಲೂ ಜೀವ ಭಯ
ಬಳಸಾಡುತ್ತಿದೆ
ಹಗಲಿರುಳ ಕಡಲು ದಾಟುವುದೆಂದರೆ…
‘ಯಾರೂ ಅರಿಯದ ವೀರ’ ಸಾವು ಗೆದ್ದಂತೆ
ಸೋಲು, ಗೆಲುವಿನ ಮೂಲ ಹಿಡಿದು ಹೊರಟವನ
ಕಾಲಲ್ಲಿಯ ನಾಯಿಗೆರೆ ಅಳುಕಿದಂತೆ
ಹೂತ ಮುದಕಿಯ ಕಣ್ಣಲ್ಲಿ
ಕಾಳರಾತ್ರಿ ಚಿತ್ರ ಬಿಡಿಸಿದಂತೆ

ಚೆಲ್ಲಾಪಿಲ್ಲೆ ಆದ ಬದುಕು ಹಾಸಿಗೆ
ಸರಿ ಮಾಡುವುದರಲ್ಲಿಯೇ
ಸಮಯ ವ್ಯಯ, ಕ್ಷಯವಾಗಿ
ಹಯ ಕುರಪುಟಗಳ ಸದ್ದು
ಎಲ್ಲೋ ಕೇಳಿದಂತೆ
ಮೋಹನ ಮುರಳಿಯ ಕರೆಗೆ
ನರನಾಡಿಗಳಲಿ ಪ್ರೇಮರಸ ಹರಿದಾಡಿ
ದೂರ ತೀರವ ಕಣ್ಣ ಬೆಳಕಿನಲ್ಲಿಯೇ ಕಂಡಂತೆ
ಸಾವು ಮರೆತಂತೆ

ಸದಾಶಿವ ದೊಡಮನಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಹಾಗೂ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಧರೆ ಹತ್ತಿ ಉರಿದೊಡೆ’ , ‘ನೆರಳಿಗೂ ಮೈಲಿಗೆ’, ದಲಿತ ಸಾಹಿತ್ಯ ಸಂಚಯ’, ‘ಪ್ರತಿಸ್ಪಂದನ’, ‘ಇರುವುದು ಒಂದೇ ರೊಟ್ಟಿʼ (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.