ಗಣಿತದ ಮೇಷ್ಟ್ರ ಮಗ ನಮ್ಮ ತರಗತಿಯಲ್ಲಿದ್ದ. ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನಮಗೆ ಮೊದಲೇ ತಂದುಕೊಡುವಂತೆ ಅವನ ಬೆನ್ನುಹತ್ತಿದೆವು. ಮೊದಲಿಗೆ ಅವನು ಒಪ್ಪಲಿಲ್ಲ. ಕಡೆಗೆ ಅಂತೂ ಇಂತೂ ಅವನಿಂದ ಪ್ರಶ್ನೆಪತ್ರಿಕೆಗಳನ್ನು ವಸೂಲಿ ಮಾಡಿದೆವು. ಅದನ್ನು ಇಡೀ ತರಗತಿಗೆ ಹಂಚಿಬಿಟ್ಟೆವು. ಪರೀಕ್ಷೆಯಲ್ಲಿ ಪವಾಡಸದೃಶ ಎನ್ನುವಂತೆ ಎಲ್ಲರೂ ನೂರಕ್ಕೆ ನೂರು ಪಡೆದರು. ಮೇಷ್ಟ್ರಿಗೆ ಈ ಫಲಿತಾಂಶದ ಬಗ್ಗೆ ಅನುಮಾನ ಹುಟ್ಟಿತು. ಅವರು ತಮ್ಮ ಮಗನನ್ನು ವಿಚಾರಿಸಿದರು. ಅವನು ನಿಜ ಒಪ್ಪಿಕೊಂಡುಬಿಟ್ಟ. ಪರಿಣಾಮವಾಗಿ ಇಡೀ ತರಗತಿ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಯಿತು. ಎರಡನೆಯ ಸಾರಿ ನಡೆದ ಪರೀಕ್ಷೆಯಲ್ಲಿ ಗಣಿತದ ಮೇಷ್ಟ್ರ ಮಗ ಮತ್ತು ನಾನು ಅನುತ್ತೀರ್ಣರಾದೆವು.
ಹೇಮಾ ಎಸ್. ಅನುವಾದಿಸುವ ಅಕಿರ ಕುರೊಸಾವನ ಆತ್ಮಕಥೆಯ ಪುಟ

 

ಮಾಧ್ಯಮಿಕ ಶಾಲೆಯ ಎರಡನೆಯ ವರ್ಷದಲ್ಲಿದ್ದಾಗ ನಾಣು ಮಹಾನ್ ತಂಟೆಕೋರನಾಗಿದ್ದೆ. ಕಾಂಟೊ ಭೂಕಂಪದಲ್ಲಿ ಕೆಕಾ ಶಾಲೆಯ ಕಟ್ಟಡವು ಸುಟ್ಟುಹೋಗಿತ್ತು. ಆಗ ಉಶಿಗೋಮ್-ಕಾಗುರಾಜಾಕಾದ ಹತ್ತಿರದಲ್ಲಿದ್ದ ತಂತ್ರಜ್ಞಾನ ಶಾಲೆಗೆ ಸ್ಥಳಾಂತರಗೊಂಡೆವು. ಅದು ರಾತ್ರಿ ಶಾಲೆಯಾದ್ದರಿಂದ ಬೆಳಗಿನ ಹೊತ್ತು ನಾವದನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿಯಿರಲಿಲ್ಲ. ಎರಡನೆಯ ವರ್ಷದ ನಾಲ್ಕು ವಿಭಾಗದವರನ್ನು ಒಟ್ಟಿಗೆ ಸಭಾಂಗಣದಲ್ಲಿ ತುಂಬಿದರು. ಸಭಾಂಗಣದಲ್ಲಿ ಹಿಂದೆ ಕೂತವರಿಗೆ ಮೇಷ್ಟ್ರು ಮೂಗನಿರಬೇಕು ಅನ್ನಿಸುತ್ತಿತ್ತು. ಅವರ ದನಿ ಹಿಂದೆ ಕುಳಿತವರಿಗೆ ಕೇಳಿಸುತ್ತಲೇ ಇರಲಿಲ್ಲ. ನಾನು ಕೂಡ ಹಿಂದಿನ ಸಾಲಿನಲ್ಲಿಯೇ ಕೂತಿದ್ದೆ. ಓದಿಗಿಂತ ತುಂಟಾಟಗಳಲ್ಲಿ ಹೆಚ್ಚಿಗೆ ಮುಳುಗಿದ್ದೆ.

ವರ್ಷದ ನಂತರ ಶಿರಾಯಾಮದಲ್ಲಿ ಶಾಲೆಯನ್ನು ಪುನಃ ಕಟ್ಟಲಾಯಿತು. ನನ್ನ ತುಂಟತನಗಳು ಕಡಿಮೆಯಾಗುವ ಬದಲು ಇನ್ನಷ್ಟು ಹೆಚ್ಚಿತ್ತು. ತಂತ್ರಜ್ಞಾನ ಶಾಲೆಯಲ್ಲಿದ್ದಾಗ ನನ್ನ ತುಂಟಾಟಗಳು ಅಪಾಯಕಾರಿಯಾಗಿರಲಿಲ್ಲ. ಆದರೆ ಹೊಸ ಶಾಲೆಯಲ್ಲಿ ಮಾಡಿದ ತುಂಟಾಟಗಳು ಅಪಾಯಕಾರಿಯಾಗಿದ್ದವು. ಒಮ್ಮೆ ರಸಾಯನಶಾಸ್ತ್ರದ ತರಗತಿಯಲ್ಲಿ ಡೈನಮೆಟ್ ಮಾಡುವುದನ್ನು ಕಲಿತೆವು. ಡೈನಮೆಟ್ ಮಾಡಲು ಬೇಕಾಗುವ ಎಲ್ಲ ವಸ್ತುಗಳನ್ನು ಸೇರಿಸಿ ಬೀರ್ ಬಾಟಲಿಗೆ ತುಂಬಿ ಅದನ್ನು ತೆಗೆದುಕೊಂಡು ಹೋಗಿ ನಮ್ಮ ಮೇಷ್ಟ್ರ ಮೇಜಿನ ಮೇಲಿಟ್ಟಿದ್ದೆ. ಅದರಲ್ಲಿ ಏನಿದೆ ಎಂದು ಅವರಿಗೆ ತಿಳಿದಾಗ ಅವರ ಮುಖ ಬಿಳಿಚಿಕೊಂಡಿತು. ಅವರದನ್ನು ಹುಷಾರಾಗಿ ಹೊರಗೆ ತೆಗೆದುಕೊಂಡು ಹೋಗಿ ಶಾಲೆಯ ಉದ್ಯಾನದಲ್ಲಿದ್ದ ಹೊಂಡದೊಳಗೆ ಹಾಕಿದರು. ಕೆಕಾ ಶಾಲೆಯ ಆ ಹೊಂಡದಲ್ಲಿ ಇಂದಿಗೂ ಆ ಬಾಟಲು ಶಾಂತವಾಗಿ ನಿದ್ರಿಸುತ್ತಿರಬಹುದು.

ಮತ್ತೊಮ್ಮೆ ಪ್ರಶ್ನೆ ಪತ್ರಿಕೆಗಳನ್ನು ಪಡೆಯುವ ಸಾಹಸಕ್ಕೆ ಕೈಹಾಕಿದೆ. ಗಣಿತದ ಮೇಷ್ಟ್ರ ಮಗ ನಮ್ಮ ತರಗತಿಯಲ್ಲಿದ್ದ. ಅವನು ಕೂಡ ಗಣಿತದಲ್ಲಿ ಹಿಂದುಳಿದವನು. ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನಮಗೆ ಮೊದಲೇ ತಂದುಕೊಡುವಂತೆ ಅವನ ಬೆನ್ನುಹತ್ತಿದೆವು. ನನ್ನ ಕೆಲ ಸ್ನೇಹಿತರೊಟ್ಟಿಗೆ ಅವನನ್ನು ಶಾಲೆಯ ಹಿಂಬದಿಗೆ ಕರೆದುಕೊಂಡು ಹೋದೆವು. ಮೊದಲಿಗೆ ಅವನು ಒಪ್ಪಲಿಲ್ಲ. ಕಡೆಗೆ ಅಂತೂ ಇಂತೂ ಅವನಿಂದ ಪ್ರಶ್ನೆಪತ್ರಿಕೆಗಳನ್ನು ವಸೂಲಿ ಮಾಡಿದೆವು. ಅದನ್ನು ಇಡೀ ತರಗತಿಗೆ ಹಂಚಿಬಿಟ್ಟೆವು. ಪರೀಕ್ಷೆಯಲ್ಲಿ ಪವಾಡಸದೃಶ ಎನ್ನುವಂತೆ ಎಲ್ಲರೂ ನೂರಕ್ಕೆ ನೂರು ಪಡೆದರು. ಮೇಷ್ಟ್ರಿಗೆ ಈ ಫಲಿತಾಂಶದ ಬಗ್ಗೆ ಅನುಮಾನ ಹುಟ್ಟಿತು. ಅವರು ತಮ್ಮ ಮಗನನ್ನು ವಿಚಾರಿಸಿದರು. ಅವನು ನಿಜ ಒಪ್ಪಿಕೊಂಡುಬಿಟ್ಟ. ಪರಿಣಾಮವಾಗಿ ಇಡೀ ತರಗತಿ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಯಿತು. ಎರಡನೆಯ ಸಾರಿ ನಡೆದ ಪರೀಕ್ಷೆಯಲ್ಲಿ ಗಣಿತದ ಮೇಷ್ಟ್ರ ಮಗ ಮತ್ತು ನಾನು ಅನುತ್ತೀರ್ಣರಾದೆವು.

ಒಮ್ಮೆ ನಾನು ಮಾಡದೆ ಇದ್ದ ತುಂಟತನದ ಕೆಲಸವನ್ನು ನನ್ನ ಮೇಲೆ ಆರೋಪಿಸಲಾಯಿತು. ಆ ಸಿಟ್ಟಿಗೆ ಅಡಿಯಲ್ಲಿ ಮೊನಚಾಗಿದ್ದ ಬೇಸ್ ಬಾಲಿನ ಶೂಗಳನ್ನು ಹಾಕಿಕೊಂಡು ಲೆಕ್ಚರ್ ರೂಮಿನ ಮೇಜುಗಳ ಮೇಲೆ ಓಡಾಡಿದ್ದೆ. ಅದನ್ನು ಮಾಡಿದ್ದು ನಾನೆಂದು ಮಾತ್ರ ಒಪ್ಪಿಕೊಳ್ಳಲಿಲ್ಲ. ನಂತರ ವರ್ತನೆಗೆ ನೀಡಲಾಗುವ ಅಂಕಗಳಲ್ಲಿ ನನ್ನ ಅಂಕಗಳು ಕಡಿಮೆಯಾಗದಿದ್ದನ್ನು ನೋಡಿ ಅಚ್ಚರಿಯಾಯಿತು.

ಮೂರನೆಯ ವರ್ಷದ ಕೊನೆಯ ಹೊತ್ತಿಗೆ ಮಿಲಿಟರಿ ತರಬೇತಿಯು ಪಠ್ಯಕ್ರಮದ ಭಾಗವಾಯಿತು. ಮಿಲಿಟರಿ ಕ್ಯಾಪ್ಟನ್ ಒಬ್ಬರನ್ನು ನಮ್ಮ ಶಾಲೆಗೆ ನೇಮಿಸಲಾಯಿತು. ನಮ್ಮಿಬ್ಬರ ನಡುವೆ ಹೊಂದಾಣಿಕೆಯಾಗಲಿಲ್ಲ. ತುಂಟ ಗೆಳೆಯನೊಬ್ಬ ಆ ಕ್ಯಾಪ್ಟನ್ ಹೊತ್ತೊಯ್ಯುತ್ತಿದ್ದ ಟಿನ್ ತೋರಿಸಿ ಅದರಲ್ಲಿ ಗನ್ ಪೌಡರ್ ಇರುವುದಾಗಿ ಹೇಳಿದ. ಅದರ ಮೇಲೆ ಏನಾದರೂ ಎತ್ತಿಹಾಕಿದರೆ ದೊಡ್ಡದಾಗಿ ಸದ್ದಾಗುತ್ತದೆ ಎಂದು ಹೇಳಿದ. ಆ ಕೆಲಸ ಮಾಡಲು ಯಾರಿಗೂ ಧೈರ್ಯವಿರಲಿಲ್ಲ. ನೀನೇ ಹೋಗಿ ಮಾಡು ಎಂದು ಅವನನ್ನು ಕಿಚಾಯಿಸಿದೆ. “ನನಗೆ ಅಷ್ಟು ಧೈರ್ಯವಿಲ್ಲ ನೀನು ಮಾಡುವೆಯಾ ಕುರೊ ಚಾನ್?” ಅಂತ ತಿರುಗಿಸಿ ನನಗೆ ಸವಾಲೆಸೆದ.

ಸವಾಲನ್ನು ನಿರಾಕರಿಸದೆ “ಆಯ್ತು” ಅಂದೆ. ಶಾಲೆಯ ಮೆಟ್ಟಿಲುಗಳು ಸುರುಳಿಯಾಕಾರದಲ್ಲಿತ್ತು. ಆ ಕ್ಯಾನನ್ನು ಮೆಟ್ಟಿಲುಗಳ ಹತ್ತಿರ ಇಟ್ಟುಬಂದೆ. ದೊಡ್ಡ ಕಲ್ಲೊಂದನ್ನು ಎರಡನೆಯ ಮಹಡಿಗೆ ಹೊತ್ತುಕೊಂಡು ಹೋಗಿ ಅಲ್ಲಿಂದ ಅದರ ಮೇಲೆಸೆದೆ. ನಾವು ಊಹಿಸಿದ್ದಕ್ಕಿಂತ ದೊಡ್ಡದಾಗಿ ಕಿವಿಗಡಚಿಕ್ಕುವಂತೆ ಸದ್ದಾಯಿತು.

ಡೈನಮೆಟ್ ಮಾಡಲು ಬೇಕಾಗುವ ಎಲ್ಲ ವಸ್ತುಗಳನ್ನು ಸೇರಿಸಿ ಬೀರ್ ಬಾಟಲಿಗೆ ತುಂಬಿ ಅದನ್ನು ತೆಗೆದುಕೊಂಡು ಹೋಗಿ ನಮ್ಮ ಮೇಷ್ಟ್ರ ಮೇಜಿನ ಮೇಲಿಟ್ಟಿದ್ದೆ. ಅದರಲ್ಲಿ ಏನಿದೆ ಎಂದು ಅವರಿಗೆ ತಿಳಿದಾಗ ಅವರ ಮುಖ ಬಿಳಿಚಿಕೊಂಡಿತು. ಅವರದನ್ನು ಹುಷಾರಾಗಿ ಹೊರಗೆ ತೆಗೆದುಕೊಂಡು ಹೋಗಿ ಶಾಲೆಯ ಉದ್ಯಾನದಲ್ಲಿದ್ದ ಹೊಂಡದೊಳಗೆ ಹಾಕಿದರು.

ಅದರ ಸದ್ದಿನ ಪ್ರತಿಧ್ವನಿ ಅಡಗುವ ಮೊದಲೇ ಮಿಲಿಟರಿ ಕ್ಯಾಪ್ಟನ್ ನನ್ನ ಮೇಲೆ ಸಿಟ್ಟಿನಿಂದ ಉರಿದುಬಿದ್ದ. ನಾನು ಸೈನಿಕನಲ್ಲವಾದ್ದರಿಂದ ಆತ ನನ್ನ ಮೇಲೆ ಕೈಮಾಡುವಂತಿರಲಿಲ್ಲ. ಸೀದಾ ಪ್ರಾಂಶುಪಾಲರ ಕೊಠಡಿಗೆ ಎಳೆದೊಯ್ದ. ಅಲ್ಲಿ ಬಾಯಿಗೆ ಬಂದಂತೆ ಬೈಯ್ದ. ಮಾರನೆಯ ದಿನ ನಮ್ಮಪ್ಪನನ್ನು ಶಾಲೆಗೆ ಬರಲು ಹೇಳಿಕಳಿಸಿದರು. ಆತನ ಮಿಲಿಟರಿ ಸೇವೆ ಈ ವಿಷಯದಲ್ಲಿ ಪ್ರಭಾವ ಬೀರಿತು ಅನ್ನಿಸುತ್ತದೆ. ನನ್ನನ್ನು ಶಾಲೆಯಿಂದ ಕಿತ್ತು ಹಾಕುತ್ತಾರೆ ಎಂದುಕೊಂಡಿದ್ದೆ. ಹಾಗೇನೂ ಆಗಲಿಲ್ಲ. ನನ್ನ ವಿರುದ್ಧ ಯಾವುದೇ ಶಿಸ್ತಿನ ಕ್ರಮಗಳನ್ನು ಜರುಗಿಸದೆ ಬಿಟ್ಟುಬಿಟ್ಟರು. ಆ ಮಿಲಿಟರಿ ಕ್ಯಾಪ್ಟನ್ ಬೈದಾಗ ಪ್ರಾಂಶುಪಾಲರು ಅಲ್ಲೇ ಇದ್ದರು. ಆದರೆ ಅವರು ನನ್ನ ಮೇಲೆ ಕೋಪಗೊಂಡಿದ್ದು ನೆನಪಿಲ್ಲ. ಬಹುಶಃ ನನ್ನಪ್ಪ ಮತ್ತು ಪ್ರಾಂಶುಪಾಲರು ಕಡ್ಡಾಯ ಮಿಲಿಟರಿ ಶಿಕ್ಷಣವನ್ನು ವಿರೋಧಿಸುತ್ತಿದ್ದರು ಎಂದು ಈಗ ಅದನ್ನು ನೆನಪಿಸಿಕೊಂಡಾಗ ಅನ್ನಿಸುತ್ತಿದೆ.

ಶಿಕ್ಷಕರು ಮತ್ತು ಮಿಲಿಟರಿ ಮಂದಿಯಲ್ಲಿ ಕೂಡ ಈ ನಿಯಮಗಳನ್ನು ವಿರೋಧಿಸುತ್ತಿದ್ದವರಿದ್ದರು. ಮೆಜಿ಼ ಯುಗಕ್ಕೂ ಆ ನಂತರದ ತೈಶೊ ಮತ್ತು ಶೋವಾ ಯುಗಕ್ಕೂ ಬಹಳ ವ್ಯತ್ಯಾಸವಿದೆ. ಮೆಜಿ಼ ಯುಗದಲ್ಲಿ ಮಿಲಿಟರಿ ಮತ್ತು ವ್ಯಾಪಾರಿ ವರ್ಗದ ಪ್ರಾಬಲ್ಯವಿತ್ತು. ಧರ್ಮಾಂಧತೆ, ದುರಭಿಮಾನಗಳು ತೈಶೊ ಮತ್ತು ಶೋವಾ ಯುಗಗಳ ಪ್ರಧಾನ ಲಕ್ಷಣವಾಗಿತ್ತು. ನನ್ನಪ್ಪ ಮೆಜಿ ಯುಗದ ಮಿಲಿಟರಿ ವ್ಯಕ್ತಿ. ಆತ ಸಮಾಜವಾದವನ್ನು ದ್ವೇಷಿಸುತ್ತಿದ್ದ. 1923ರಲ್ಲಿ ಪ್ರಸಿದ್ಧ ಕ್ರಾಂತಿಕಾರಿ ಒಸುಗಿ ಸಕೆ ಮತ್ತಿತರರನ್ನು ಮಿಲಿಟರಿಯವರು ಕೊಂದು ಹಾಕಿದಾಗ ಅವರಿಗೆ ಕೇವಲ ಹತ್ತು ವರ್ಷದ ಸಜೆಯನ್ನು ವಿಧಿಸಲಾಯಿತು. ಆಗ ನಮ್ಮಪ್ಪ ಸಿಟ್ಟಲ್ಲಿ “ಎಂಥ ಹುಚ್ಚರಿವರು? ಏನಂದುಕೊಂಡಿದಾರೆ ಇವರೆಲ್ಲ?” ಎಂದರು. ಈ ಮಿಲಿಟರಿ ಕ್ಯಾಪ್ಟನ್ ನೊಂದಿಗೆ ನನ್ನ ಸಂಬಂಧ ಕುರೊಡಾ ಶಾಲೆಯಲ್ಲಿ ತಚಿಕಾವಾ ಅವರ ನಂತರ ಬಂದಿದ್ದ ಮೇಷ್ಟ್ರ ಜೊತೆಗೆ ಇದ್ದ ಸಂಬಂಧದಂತೆಯೇ ಇತ್ತು. ಆತ ಹೇಳಿಕೊಟ್ಟಿದ್ದನ್ನೆಲ್ಲ ನಾನು ಮಾಡಿತೋರಿಸಲಿ ಎಂದು ಕರೆಯುತ್ತಿದ್ದ. ಆತನಿಗೆ ಅದರಲ್ಲೇನೋ ವಿಚಿತ್ರ ಸಂತೋಷ. ನಾನೆಂದೂ ಆ ರೀತಿಯ ಕೆಲಸಗಳಿಗೆ ಹೇಳಿಮಾಡಿಸಿದ ಹುಡುಗನಲ್ಲ. ಆದರೂ ಅವುಗಳನ್ನು ಕೆಟ್ಟದಾಗಿಯಾದರೂ ಮಾಡಲು ಹೋಗಿ ನಗೆಪಾಟಲಿಗೆ ಈಡಾಗುತ್ತಿದ್ದೆ.. ಅದನ್ನು ನೋಡಿ ಆತ ಸಂತೋಷಪಡುತ್ತಿದ್ದ.

ಇದರಿಂದ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ ಹಳೆಯ ಶೈಲಿಯ ಚೀನಿ ಗದ್ಯದಲ್ಲಿ ಪತ್ರವೊಂದನ್ನು ಬರೆದು ಶಿಕ್ಷಕರು ಮತ್ತು ಪೋಷಕರ ನಡುವಿನ ಸಂವಹನಕ್ಕೆ ಇಟ್ಟಿದ್ದ ಪುಸ್ತಕದಲ್ಲಿ ಇಟ್ಟೆ. “ಈ ಹುಡುಗನಿಗೆ ಹೃದಯದ ತೊಂದರೆಯಿದೆ. ಆದ್ದರಿಂದ ದಯವಿಟ್ಟು ಈತನ ಕೈಯಲ್ಲಿ ಭಾರವಾದ ರೈಫಲ್ ಗಳಂತಹ ವಸ್ತುಗಳನ್ನು ಎತ್ತಿಸಬೇಡಿ” ಎಂದು ಬರೆದು ನಮ್ಮ ತಂದೆಯವರ ಮುದ್ರೆಯೊತ್ತಿ ಅದನ್ನು ಆ ಮಿಲಿಟರಿ ಕ್ಯಾಪ್ಟನ್ ಕೈಗಿತ್ತೆ. ಆತನ ಮುಖ ಹುಳ್ಳಗಾಯಿತು. ಅದರಲ್ಲಿ ಹೇಳಿದ ಮಾತನ್ನು ಒಪ್ಪಿಕೊಂಡ. ಆಮೇಲೆ ಎಂದೂ “ನೇರವಾಗಿ ಗುರಿ ಇಡು, ಮಂಡಿಯೂರಿ ಶೂಟ್ ಮಾಡು!” ಅಥವ “ಶತ್ರು ನಿನ್ನ ಬಲಭಾಗದ ಹತ್ತಿರವಿದ್ದಾನೆ ಮಲಗಿ ಶೂಟ್ ಮಾಡು!” ಅಂತೆಲ್ಲ ನನಗೆ ಆಜ್ಞಾಪಿಸಲಿಲ್ಲ.

ರೈಫಲ್ ಹೆಚ್ಚು ಭಾರವಾಗಿರುತ್ತಿತ್ತು. ಅದನ್ನು ನೇರ ಹಿಡಿಯಬೇಕಿತ್ತು. ಆತ ನನ್ನನ್ನು ನಾಯಕನಾಗಿ ತರಬೇತಿಗೊಳಿಸಲು ಎಳೆದೊಯ್ದ. ನಾನು ಹೇಳಿದ ಮಾತಿನಂತೆ ತಕ್ಷಣ ಇಡೀ ತರಗತಿ ಮಾಡಬೇಕಿತ್ತು. ಆದರೆ ನನ್ನೆಲ್ಲ ಆಜ್ಞೆಗಳು ವಿರೋಧಾಭಾಸಗಳಿಂದ ಕೂಡಿರುತ್ತಿತ್ತು, ಇಲ್ಲವೇ ಸಮಯಕ್ಕೆ ಸರಿಯಾಗಿ ನೆನಪಾಗುತ್ತಿರಲಿಲ್ಲ. ಇದರ ಪರಿಣಾಮಗಳು ವಿಚಿತ್ರವಾಗಿರುತ್ತಿದ್ದವು. ನನ್ನ ಸಹಪಾಠಿಗಳಿಗೆ ಇದೊಂಥರ ಮಜವಾಗಿದೆ ಅನ್ನಿಸುತ್ತಿತ್ತು. ನಾನು ಸರಿಯಾಗಿಯೇ ಹೇಳಿದ್ದರು ಕೂಡ ಅವರು ವಿರುದ್ಧ ದಿಕ್ಕಿನಲ್ಲಿ ನಡೆದುಹೋಗುತ್ತಿದ್ದರು. ತಪ್ಪಾಗಿ ಹೇಳಿದ್ದರಂತೂ ಅದನ್ನು ಅದ್ಭುತವಾಗಿ ಶಿರಸಾವಹಿಸಿ ಪಾಲಿಸಿಬಿಡುತ್ತಿದ್ದರು. ಉದಾಹರಣೆಗೆ “ಫಾರ್ವಡ್ ಮಾರ್ಚ್!” ಅಂದಾಗ ಅವರು ರೈಫಲ್ಗಳನ್ನು ಹೆಗಲಮೇಲಿಟ್ಟು ಮುಂದಕ್ಕೆ ನಡೆಯಬೇಕು. ಬದಲಿಗೆ ಅವರೆಲ್ಲ ರೈಫಲ್ ಗಳನ್ನು ತಮ್ಮ ಹಿಂದೆ ನೆಲದ ಮೇಲೆ ಎಳೆದುಕೊಂಡು ನಡೆಯುತ್ತಿದ್ದರು. ಅದರಲ್ಲೂ ಗೋಡೆಯತ್ತ ನಡೆದುಹೋಗುವಾಗ ಅವರ ಉತ್ಸಾಹ ಮೇರೆಮೀರುತ್ತಿತ್ತು. ನಾನು ಹೆದರಿ ತಕ್ಷಣಕ್ಕೆ ದಿಕ್ಕು ಬದಲಿಸಲು ಹೇಳದಿದ್ದರೆ ಅವರೆಲ್ಲ ಖುಷಿಯಾಗಿ ಗೋಡೆಯನ್ನೇ ಹತ್ತಲು ಹೋಗಿಬಿಡುತ್ತಿದ್ದರು. ಅವರನ್ನು ತಡೆಯಲು ಸಾಧ್ಯವಾಗದೆ ಸುಮ್ಮನಾಗಿಬಿಡುತ್ತಿದ್ದೆ. ಮಿಲಿಟರಿ ಕ್ಯಾಪ್ಟನ್ ಏನೇ ಹೇಳಿದರೂ ಕಿವಿಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಇದರಿಂದ ಇನ್ನಷ್ಟು ಉತ್ತೇಜಿತರಾಗಿ ನನ್ನ ಸಹಪಾಠಿಗಳು ನನ್ನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು. ಕೆಲವರಂತೂ ಬೂಟುಕಾಲುಗಳಲ್ಲಿ ಗೋಡೆಯನ್ನೇ ಅಳೆಯಲು ಮುಂದಾಗಿಬಿಡುತ್ತಿದ್ದರು. ಆ ಕ್ಯಾಪ್ಟನ್ ನನ್ನ ಮುಂದಿನ ಆಜ್ಞೆ ಏನಿರುತ್ತದೋ ಎಂದು ಗಾಬರಿಯಿಂದ ಕಾಯುತ್ತ ನಿಂತಿರುತ್ತಿದ್ದ.

ನನ್ನನ್ನು ಮುಜುಗರಕ್ಕೆ ಒಳಪಡಿಸುವುದು ತಮ್ಮ ಉದ್ದೇಶವಲ್ಲ. ಆ ಮಿಲಿಟರಿ ಕ್ಯಾಪ್ಟನ್ ನ ಸಣ್ಣತನವನ್ನು ಹೀಗಳೆಯುವುದಕ್ಕೆ ಹೀಗೆ ಮಾಡುತ್ತಿರುವುದಾಗಿ ನನ್ನ ಸಹಪಾಠಿಗಳು ಹೇಳಿದರು. ಅವರ ಈ ಉದ್ದೇಶ ಮಿಲಿಟರಿ ಶಿಕ್ಷಣದ ಇನ್ಸ್ಪೆಕ್ಟರ್ ಬಂದಾಗ ಹೆಚ್ಚು ನಿಚ್ಚಳವಾಗಿ ಪ್ರಕಟವಾಯಿತು. ಇನ್ಸ್ಪೆಕ್ಟರ್ ಎದುರಿಗೆ ನಾವು ಆಕ್ರಮಣದ ಅಣುಕು ಪ್ರದರ್ಶನವೊಂದನ್ನು ಮಾಡಿ ತೋರಿಸಬೇಕಿತ್ತು. ನಮ್ಮ ತಂಡದ ಅವಕಾಶಕ್ಕಾಗಿ ಕಾಯುತ್ತಿದ್ದಾಗ “ಇವತ್ತು ನಾವು ಏನು ಅಂತ ಆ ಕ್ಯಾಪ್ಟನ್ ಗೆ ತೋರಿಸೋಣ. ಇನ್ಸ್ಪೆಕ್ಟರ್ ಮುಂದೆ ದೊಡ್ಡ ಮಣ್ಣಿನಗುಂಡಿಯಿದೆ. ಅಲ್ಲಿಗೆ ಹೋದಾಗ ನಾನು ಡೌನ್ ಅಂತ ಹೇಳುತ್ತೇನೆ. ಎಲ್ಲರೂ ಸರಿಯಾಗಿ ಮಾಡಿ” ಅಂತ ನನ್ನ ಸಹಪಾಠಿಗಳಿಗೆ ಹೇಳಿದೆ. ಅವರೆಲ್ಲ ತಲೆಯಾಡಿಸಿದರು. “ಛಾರ್ಜ್!” ಅಂತ ಹೇಳಿದ್ದೆ ತಡ ಅವರೆಲ್ಲ ಒಂದೇ ಸಮ ಓಡತೊಡಗಿದರು. ಮಣ್ಣಿನ ಗುಂಡಿ ಹತ್ತಿರವಾಗುತ್ತಿದ್ದಂತೆ “ಡೌನ್!” ಅಂದೆ. ಎಲ್ಲರೂ ಅದರಲ್ಲಿ ದಬದಬ ಬಿದ್ದರು. ಅವರು ಬಿದ್ದ ರಭಸಕ್ಕೆ ಪಿಚಕ್ ಅಂತ ಮಣ್ಣಿನ ಕೆಸರು ಹಾರಿತು. ನಾವೆಲ್ಲ ಮಣ್ಣಿನ ಬೊಂಬೆಗಳಾಗಿಬಿಟ್ಟಿದ್ದೆವು. “ಸಾಕು” ಅಂತ ಇನ್ಸ್ಪೆಕ್ಟರ್ ಸಿಟ್ಟಿನಲ್ಲಿ ಅಬ್ಬರಿಸಿದರು. ತಕ್ಷಣ ಅವರ ಪಕ್ಕದಲ್ಲಿ ಅಟೆಂನ್ಷನ್ ಭಂಗಿಯಲ್ಲಿ ನಿಂತಿದ್ದ ಕ್ಯಾಪ್ಟನ್ ಮುಖ ನೋಡಿದೆ. ಅವರ ಮುಖ ಇಂಗು ತಿಂದ ಮಂಗನಂತಾಗಿತ್ತು. ಆ ಶಾಲೆ ಬಿಡುವವರೆಗೂ ನಮ್ಮ ನಡುವಿನ ಘರ್ಷಣೆ ಸಾಗುತ್ತಲೇ ಇತ್ತು. ನನ್ನ ಬಂಡುಕೋರತನದ ಎರಡನೆಯ ಹಂತ ಈ ಸಂಬಂಧದಲ್ಲಿತ್ತು ಅಂತ ಈಗ ಅನ್ನಿಸುತ್ತಿದೆ. ಹರೆಯದ ನನ್ನೆಲ್ಲ ಸಿಟ್ಟು, ಸೆಡವು, ಬಂಡುಕೋರತನ ಈ ವ್ಯಕ್ತಿಯೊಂದಿಗೆ ಮಾತ್ರವಿತ್ತು. ಆ ಸಮಯದಲ್ಲಿ ನನ್ನ ಮನೆಯವರೊಂದಿಗಾಗಲಿ ಇಲ್ಲವೆ ಇತರರೊಂದಿಗಾಗಲಿ ಯಾವ ಘರ್ಷಣೆಗಳು ಇರಲಿಲ್ಲ. ಈ ಮಿಲಿಟರಿ ಕ್ಯಾಪ್ಟನ್ ನನ್ನು ಮಾತ್ರ ದ್ವೇಷಿಸುತ್ತಿದ್ದೆ.

ಕೆಕಾ ಶಾಲೆಯಿಂದ ಪದವೀಧರನಾದಾಗ ನನ್ನ ತರಗತಿಯಲ್ಲಿ ನಾನೊಬ್ಬ ಮಾತ್ರ ಮಿಲಿಟರಿ ಶಿಕ್ಷಣದಲ್ಲಿ ಅನುತ್ತೀರ್ಣನಾಗಿದ್ದೆ. ಮಿಲಿಟರಿ ಶಿಕ್ಷಣದ ಪ್ರಮಾಣಪತ್ರ ಕೂಡ ಸಿಗಲಿಲ್ಲ. ಕ್ಯಾಪ್ಟನ್ ಏನಾದರೂ ಅನ್ನಬಹುದೆಂಬ ಭಯದಿಂದ ಪದವಿಪ್ರಧಾನ ಸಮಾರಂಭಕ್ಕೆ ಹೋಗದೆ ಮನೆಯಲ್ಲಿಯೇ ಉಳಿದೆ. ಆಮೇಲೆ ಹೋಗಿ ಡಿಪ್ಲೊಮೊ ಪ್ರಮಾಣಪತ್ರ ತೆಗೆದುಕೊಂಡು ಬರುವಾಗ ಆತ ಶಾಲೆಯ ಗೇಟಿನಲ್ಲಿಯೇ ಕಾಯುತ್ತಿದ್ದರು. ಆತ ನನ್ನ ಹಾದಿಗೆ ಅಡ್ಡಹಾಕಿ “ದ್ರೋಹಿ!” ಎಂದು ಚೀರಿದ. ಅಲ್ಲಿ ಹೋಗುತ್ತಿದ್ದವರು ಆಶ್ಚರ್ಯದಿಂದ ನಮ್ಮ ಕಡೆ ನೋಡಿದರು. ಆತನಿಗೆ ತಿರುಗಿಸಿ ಬೈಯಲು ಸಿದ್ಧನಾಗಿಯೇ ಬಂದಿದ್ದೆ. ಅರೆಕ್ಷಣ ಕೂಡ ತಡಮಾಡದೆ “ಶಾಲೆಯಿಂದ ಪದವೀಧರನಾಗಿ ಹೊರಬಂದಿದ್ದೇನೆ. ನೀವಿನ್ನೂ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೀರಿ. ನನ್ನನ್ನು ಬೈಯಲು ನಿಮಗೆ ಅಧಿಕಾರವಿಲ್ಲ. ನನ್ನ ನಿಮ್ಮ ಸಂಬಂಧ ಮುಗಿದ ಕತೆ!” ಎಂದು ನನ್ನ ಪ್ರಮಾಣಪತ್ರವನ್ನು ಅವನ ಮುಖದ ಮುಂದೆ ಆಡಿಸಿದೆ. ಆತನ ಮುಖ ಬಿಳುಚಿಕೊಂಡಿತು. ಒಂದಷ್ಟು ದೂರ ಹೋದ ಮೇಲೆ ತಿರುಗಿನೋಡಿದೆ. ಆತ ಇನ್ನೂ ಅಲ್ಲೇ ನಿಂತಿದ್ದ.