ನಮಗೂ ಒಂದು ದಿನ ಅದೃಷ್ಟ ಖುಲಾಯಿಸಿ ಬಿಟ್ಟಿತು. ಸೆಕ್ಯುರಿಟಿಯ ಮನಕರಗಿ ಓನರ್ ಇಲ್ಲದ ಸಮಯ ನೋಡಿ ನಮ್ಮನ್ನು ಒಳ ಬಿಟ್ಟಿದ್ದ. ಆ ಸೌಂಡು, ಜಗಮಗ, ರಾಟೆ, ಆಟಗಳು, ಸರ್ಕಸ್‍ನ ಪ್ರಾಣಿಗಳ ಸದ್ದು, ನಗರಿಗರು ಅಲ್ಲಲ್ಲೆ ನಿಂತು ತಿನ್ನುತ್ತಿದ್ದ ತಿನಿಸುಗಳು, ಇವೆಲ್ಲ ಅತ್ಯಾಕರ್ಷಕವಾಗಿದ್ದವು. ಅವನ್ನೆಲ್ಲ ಅನುಭವಿಸಲು ದುಡ್ಡಿಲ್ಲದ ನಾವು ನೋಡಿಯೇ ಹೆಚ್ಚು ಥ್ರಿಲ್ ಆಗುತ್ತಿದ್ದೆವು. ಈಗ ಅವೆಲ್ಲ ಕೈಗೆಟುಕುವಂತೆಯೇ ಇದ್ದರೂ, ಅವನ್ನೆಲ್ಲ ಆಡುವ ಧೈರ್ಯವನ್ನು, ಮನಸ್ಸನ್ನು ಕಳೆದುಕೊಂಡಿದ್ದೇವೆ. ಆದರೆ ಬಾಲ್ಯದ ಬಯಕೆಗಳು ಮಾತ್ರ ಹಾಗೆ ನಿಂತಿವೆ.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನ.

 

ಒಮ್ಮೆ ನಮ್ಮ ಹಾಸ್ಟೆಲ್ ಹಿಂಬದಿಯಲ್ಲಿದ್ದ ಬಾಯ್ಸ್ ಹೈಸ್ಕೂಲ್ ಫೀಲ್ಡ್ ನಲ್ಲಿ (ಈಗಿರುವ ಸ್ಟೇಡಿಯಮ್) ಬೃಹತ್ ಆದ ವಸ್ತುಪ್ರದರ್ಶನ ಏರ್ಪಟ್ಟಿತ್ತು. ತಿಂಗಳುಗಟ್ಟಲೆ ಬೀಡುಬಿಟ್ಟಿದ್ದ ಅದಕ್ಕೆ ಸಾರ್ವಜನಿಕರು ಬಿಟ್ಟಿಯಾಗಿ ನುಗ್ಗಬಾರದೆಂದು ಸುತ್ತಲೂ ಶೀಟಿನಿಂದ ಕೃತಕವಾದ ದೊಡ್ಡ ಕಾಂಪೌಂಡ್ ನಿರ್ಮಾಣ ಮಾಡಿ ಟಿಕೆಟ್ ವ್ಯವಸ್ಥೆ ಮಾಡಿದ್ದರು. ದೂರದಿಂದ ನೋಡಿದರೆ ಅದರೊಳಗಿದ್ದ ರಾಟೆ, ಕೊಲಂಬಸ್, ರೈಲು, ಸರ್ಕಸ್ ಮುಂತಾದವುಗಳ, ಅರ್ಧದಿಂದ ಮೇಲ್ಪಟ್ಟ ಭಾಗ ಮಾತ್ರ ಕಾಣಿಸುತ್ತಿತ್ತು. ಅವುಗಳು ಜಗಮಗಿಸವ ಬಣ್ಣ ಬೆಳಕಿನಿಂದ ಕಂಗೊಳಿಸುತ್ತಿದ್ದವು. ಪ್ರತಿನಿತ್ಯ ಅಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಧ್ವನಿ ರಂಗುರಂಗಾಗಿ ಕೇಳಿಸುತ್ತ ನಮ್ಮನ್ನು ಇನ್ನಿಲ್ಲದಂತೆ ಸಮ್ಮೋಹಿಸಿತ್ತು.

ಸಂಜೆಯ ಊಟವಾದ ತಕ್ಷಣ ಹಾಸ್ಟೆಲ್ ಹುಡುಗರೆಲ್ಲ ಅಲ್ಲಿನ ಪ್ರವೇಶದ್ವಾರದ ಮುಂದೆ ಜಮಾಯಿಸುತ್ತಿದ್ದೆವು. ಹೆಂಡತಿ ಮಕ್ಕಳೊಂದಿಗೆ ಬರುತ್ತಿದ್ದ ನಗರವಾಸಿಗಳು ಅಲ್ಲಿ ನಿಲ್ಲದೆ ಟಿಕೆಟ್ ತೆಗೆದುಕೊಂಡು ಒಳ ಹೋಗುತ್ತಿದ್ದರು. ಬಿಡಿಗಾಸಿಲ್ಲದ ನಮ್ಮನ್ನು ಅಲ್ಲಿನ ಸೆಕ್ಯುರಿಟಿ ಒಳ ಬಿಡುವುದಿರಲಿ, ಪ್ರವೇಶದ್ವಾರದ ಅಕ್ಕಪಕ್ಕ ನಿಲ್ಲಲೂ ಬಿಡದೆ ಓಡಿಸುತ್ತಿದ್ದನು. ಸೆಕ್ಯುರಿಟಿ ಬಾಯಿ ಮಾಡಿದಾಗ ಚದುರುತ್ತಿದ್ದ ನಾವು ಮತ್ತೆ ಹಾಗೆ ಜಮಾಯಿಸುತ್ತಿದ್ದೆವು. ಕೆಲ ಹುಡುಗರು ಹಿಂಬದಿಯಿಂದ ಹೋಗಿ ತಗಡಿನ ಶೀಟಿನ ಸಂದಿಯಲ್ಲಿ ಕಣ್ಣಿಕ್ಕಿ ಒಳಗಿನ ರಂಗನ್ನು ಕಣ್ತುಂಬಿಕೊಂಡು ಬಂದು ರಾತ್ರಿ ಮಲಗುವಾಗ ವಿವರಿಸುತ್ತಿದ್ದರು.

ನಮಗೂ ಒಂದು ದಿನ ಅದೃಷ್ಟ ಖುಲಾಯಿಸಿ ಬಿಟ್ಟಿತು. ಸೆಕ್ಯುರಿಟಿಯ ಮನಕರಗಿ ಓನರ್ ಇಲ್ಲದ ಸಮಯ ನೋಡಿ ಒಳ ಬಿಟ್ಟಿದ್ದ. ಒಳಗೆ ಹೋದ ನಮಗೆ ಸ್ವರ್ಗವೇ ಕಣ್ ಮುಂದೆ ಇದೆಯೆನಿಸಿತು. ಆ ಸೌಂಡು, ಜಗಮಗ, ರಾಟೆ, ಆಟಗಳು, ಸರ್ಕಸ್‍ನ ಪ್ರಾಣಿಗಳ ಸದ್ದು, ನಗರಿಗರು ಅಲ್ಲಲ್ಲೆ ನಿಂತು ತಿನ್ನುತ್ತಿದ್ದ ತಿನಿಸುಗಳು, ಇವೆಲ್ಲ ಅತ್ಯಾಕರ್ಷಕವಾಗಿದ್ದವು. ಅವನ್ನ ಮುಟ್ಟಿ ಆಡಿ ತಿಂದು ಅನುಭವಿಸುತ್ತಿದ್ದವರಿಗೆ ತೃಪ್ತಿ ಸಿಗುತ್ತಿತ್ತೊ ಇಲ್ಲವೊ ತಿಳಿಯದು, ಆದರೆ ಅವನ್ನೆಲ್ಲ ಅನುಭವಿಸಲು ದುಡ್ಡಿಲ್ಲದ ನಾವು ನೋಡಿಯೇ ಹೆಚ್ಚು ಥ್ರಿಲ್ ಆಗುತ್ತಿದ್ದೆವು. ಈಗ ಅವೆಲ್ಲ ಕೈಯಳತೆಯಲ್ಲೇ ಇದ್ದರೂ, ಅವನ್ನೆಲ್ಲ ಆಡುವ ಧೈರ್ಯವನ್ನು,ಮನಸ್ಸನ್ನು ಕಳೆದುಕೊಂಡಿದ್ದೇವೆ. ಆದರೆ ಬಾಲ್ಯದ ಬಯಕೆಗಳು ಮಾತ್ರ ಹಾಗೆ ನಿಂತಿವೆ.

ಭಗತ್, ರೋಹಿತ್ ಸಾಹಸಗಾಥೆ
ಶಾಲೆಗೆ ಕದ್ದು ತಿರುಗುವುದರಲ್ಲಿ ನಮ್ಮೆಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದವರು ಮಾವನ ಮಗ ಭಗತ್ ಮತ್ತು ಚಿಕ್ಕಪ್ಪನ ಮಗ ರೋಹಿತ್. ಅವರು ಈಗಲೂ ಕುತೂಹಲದಿಂದ ನೆನೆಯುವ ಬಾಲ್ಯದ ಸಾಹಸಗಾಥೆಯೊಂದು ಹೀಗಿದೆ.

ನಮ್ಮ ಚಿಕ್ಕಪ್ಪ ಶಾಲೆಯೊಂದರಲ್ಲಿ ಮೇಷ್ಟ್ರಾಗಿದ್ದರಿಂದ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ತಿಳಿಯಲು ಆಗಿಂದಾಗ್ಗೆ ಶಾಲೆಗೆ ಭೇಟಿ ನೀಡುತ್ತಿದ್ದರು. ಅವರ ಇತ್ತೀಚಿನ ಭೇಟಿಗಳಲ್ಲಿ ಕಿರಿ ಮಗ ರೋಹಿತ್ ಶಾಲೆಗೆ ತಪ್ಪಿಸಿಕೊಳ್ಳುತ್ತಿರುವುದು ತಿಳಿದು ಬಂದಿತ್ತು. ತಲೆಕೆಡಿಸಿಕೊಂಡ ಮೇಷ್ಟ್ರು, ‘ಮಗ ಎಲ್ಲೋಗುತ್ತಾನೆ, ಯಾರ ಸಂಗ ಬಿದ್ದಿದ್ದಾನೆ’ ಎಂಬುದನ್ನು ಪತ್ತೆಹಚ್ಚಲು ಒಂದು ದಿನ ಮಧ್ಯಾಹ್ನವೇ ಹುಡುಕಿಕೊಂಡು ಬಂದಿದ್ದರು. ಮಾಮೂಲಿನಂತೆ ತರಗತಿಯಲ್ಲಿ ಮಗ ಇಲ್ಲ. ಮಗನನ್ನು ಹುಡುಕಲು ಬಾಡಿಗೆ ಸೈಕಲ್ ತೆಗೆದುಕೊಂಡು ಕಾಲೇಜು ಓದುತ್ತಿದ್ದ ಅಣ್ಣನಮಗ ವೆಂಕಟೇಶ್‍ನನ್ನೂ ಕುಳ್ಳಿರಿಸಿಕೊಂಡು ತಿಪಟೂರೆಲ್ಲ ಹುಡುಕಿದರೂ ಪತ್ತೆ ಆಗಿಲ್ಲ. ಕೊನೆಗೆ ನಗರದ ಹೊರ ವಲಯದ ರೈಲ್ವೇ ಟ್ರಾಕ್ ಮೇಲೆ ಯಾರೋ ಇಬ್ಬರು ನಡೆದು ಹೋಗುತ್ತಿದ್ದರೆಂಬ ಸುಳಿವರಿತು ಸೈಕಲ್ ಅತ್ತಗೆ ತುಳಿಯತೊಡಗಿತು. ದೂರದಿಂದ ಕಂಡ ಹುಡುಗರು ಹತ್ತಿರಾಗುವಷ್ಟರಲ್ಲಿ ಮಂಗ ಮಾಯ! ಅಪ್ಪ ಹಿಂಬಾಲಿಸಿ ಬರುತ್ತಿರುವುದನ್ನ ಕಂಡು ಭಯಬಿದ್ದ ಹುಡುಗರು ದೊಡ್ಡ ಪೊದೆಯೊಳಗೆ ಅವಿತುಕೊಂಡಿದ್ದರಂತೆ. ಮೇಷ್ಟ್ರು ಬೈದುಕೊಂಡು ಇವರ ಮುಂದೆಯೇ ಹಾದು ಹೋಗುವಾಗ ಉಸಿರು ಬಿಗಿ ಹಿಡಿದು ಗಪ್ ಚುಪ್ಪಾಗಿ ಕುಳಿತಿದ್ದರಂತೆ. ಮೇಷ್ಟ್ರು ಯಾರೂ ಕಾಣಲಿಲ್ಲವೆಂದು ಮುಂದಡಿ ಇಟ್ಟ ತಕ್ಷಣ ಉಪಾಯವಾಗಿ ಎದ್ದು ಹಿಂದಿನ ದಾರಿಯಲ್ಲಿ ಓಡ ತೊಡಗಿದರಂತೆ. ಸಪ್ಪಳ ಕೇಳಿ ಹಿಂತಿರುಗಿ ನೋಡಲಾಗಿ ರೋಹಿತ್, ಭಗತ್ ಓಡುತ್ತಿರುವುದು ಕಂಡಿದೆ. ‘ನಿಲ್ರೊ ಬೋಳಿ ಮಕ್ಳ’ ಎಂದು ಮೇಷ್ಟ್ರು ಶಕ್ತಿ ಮೀರಿ ಅಟ್ಟಿಸಿಕೊಂಡು ಹೋದರೂ, ಮಕ್ಕಳ ಓಟವೇ ಹೆಚ್ಚಾಗಿ, ಕೈಗೆ ಸಿಗದಾಗಿದ್ದರು.

ತಲೆಕೆಡಿಸಿಕೊಂಡ ಮೇಷ್ಟ್ರು, ‘ಮಗ ಎಲ್ಲೋಗುತ್ತಾನೆ, ಯಾರ ಸಂಗ ಬಿದ್ದಿದ್ದಾನೆ’ ಎಂಬುದನ್ನು ಪತ್ತೆಹಚ್ಚಲು ಒಂದು ದಿನ ಮಧ್ಯಾಹ್ನವೇ ಹುಡುಕಿಕೊಂಡು ಬಂದಿದ್ದರು. ಮಾಮೂಲಿನಂತೆ ತರಗತಿಯಲ್ಲಿ ಮಗ ಇಲ್ಲ. ಮಗನನ್ನು ಹುಡುಕಲು ಬಾಡಿಗೆ ಸೈಕಲ್ ತೆಗೆದುಕೊಂಡು ಕಾಲೇಜು ಓದುತ್ತಿದ್ದ ಅಣ್ಣನಮಗ ವೆಂಕಟೇಶ್‍ನನ್ನೂ ಕುಳ್ಳಿರಿಸಿಕೊಂಡು ತಿಪಟೂರೆಲ್ಲ ಹುಡುಕಿದರೂ ಪತ್ತೆ ಆಗಿಲ್ಲ.

ಅಲ್ಲಿಂದ ತಪ್ಪಿಸಿಕೊಂಡ ಭಗತ್ ಮತ್ತು ರೋಹಿತ್ ಹಾಸ್ಟೆಲ್ ಕಟ್ಟಡಕ್ಕೆ ಅಂಟಿಕೊಂಡಂತಿದ್ದ ಧ್ವಜ ಕಟ್ಟೆಯ ಪೈಪ್ ಹಿಡಿದುಕೊಂಡು ಬಿಲ್ಡಿಂಗ್ ಮೇಲಕ್ಕೆ ಹತ್ತಿ ಅವಿತುಕೊಂಡಿದ್ದರು. ಸುತ್ತಾಡಿ ಸಾಕಾಗಿ ಮತ್ತೆ ಹಾಸ್ಟೆಲ್ ಹತ್ತಿರ ಬಂದ ಮೇಷ್ಟ್ರಿಗೆ ಅದು ಹೇಗೊ ಮಕ್ಕಳು ಮೆಟ್ಟಿಲಿಲ್ಲದಿರುವ ಬಿಲ್ಡಿಂಗ್ ಮೇಲಕ್ಕೆ ಹತ್ತಿರುವ ಸುಳಿವು ಸಿಕ್ಕಿದೆ. ಇಳಿಯುವಂತೆ ಒಂದೆರೆಡು ಬಾರಿ ವಾರ್ನ್ ಮಾಡಿದರೂ ಇಲ್ಲ. ತಾವಾಗಿಯೇ ಇಳಿಯಬಹುದೆಂದು ಭಾವಿಸಿ ಕಾದರೂ ಇಲ್ಲ. ಮಕ್ಕಳು ಹೆದರಿ ಕೆಳಕ್ಕಿಳಿಯುತ್ತಿಲ್ಲವೆಂದು ಭಾವಿಸಿ ಉಪಾಯವಾಗಿ ಸೈಕಲ್ ದೂಕಿಕೊಂಡು ಹೋದವರಂತೆ ಹೋಗಿ, ಬೇರೊಂದು ದಾರಿಯಲ್ಲಿ ಬಂದು ಹಾಸ್ಟೆಲ್ ರೂಮು ಹೊಕ್ಕು ಕಾದಿದ್ದಾರೆ. ಮರ್ಮವರಿತಿದ್ದ ಮಕ್ಕಳು ಆಗಲೂ ಜಪ್ಪಯ್ಯ ಅಂದಿಲ್ಲ. ಸಂಜೆ ಸಮೀಪಿಸಿದೆ. ಶಾಲೆ ಮುಗಿಸಿಕೊಂಡು ಹಾಸ್ಟೆಲ್‍ಗೆ ವಾಪಾಸ್ಸಾಗುತ್ತಿದ್ದ ಹುಡುಗರು ಸಿಕ್ಕಿ ಬಿದ್ದ ಕಳ್ಳರನ್ನು ಹಿಡಿಯುವ ಸ್ವಾರಸ್ಯಕರ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಬ್ಯಾಗ್ ಸಮೇತ ಹಾಗೆ ನಿಂತಿದ್ದರು. ಅಡುಗೆ ಭಟ್ಟರು ಹುಡುಗರನ್ನು ಇಳಿಸಲು ತಮ್ಮ ಗಡುಸು ಧ್ವನಿಯನ್ನೂ ಸೇರಿಸಿದರು. ಸಾರ್ವಜನಿಕರು ವಿನೋದವನ್ನು ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರಿದರು. ಮಕ್ಕಳನ್ನು ಕೆಳಕ್ಕಿಳಿಸಲು ಮಾಡಿದ ಸತತ ಪ್ರಯತ್ನಗಳೂ ವಿಫಲವಾದಾಗ, ಕೊನೆಗೆ ಮೇಷ್ಟ್ರು ಅಲ್ಲೆ ಇದ್ದ ಒಂದಿಬ್ಬರು ಹುಡುಗರನ್ನ ಮೇಲಕ್ಕೆ ಹತ್ತಿ ನೋಡಿರಿ ಎಂದರು.

ಕಾದುಕೊಂಡವರಂತೆ ಪಟಪಟನೆ ಮೇಲಕ್ಕತ್ತಿದ ಹುಡುಗರು ಸುತ್ತಮುತ್ತಲೂ ನೋಡಿ ಉತ್ತರವಾಗಿ ‘ಇಲ್ಲಿ ಯಾರು ಇಲ್ಲ’ ಅಂದಿದ್ದಾರೆ. ಈ ಮಾತಿನಿಂದ ಎಲ್ಲರಿಗೂ ಪರಮಾಶ್ಚರ್ಯ! ಅಪರಾಧಿಗಳನ್ನು ರಕ್ಷಿಸಲು ಸುಳ್ಳು ಹೇಳುತ್ತಿದ್ದಾರೆಂದು ಭಾವಿಸಿದ ಮೇಷ್ಟ್ರು, ತನ್ನ ನಂಬಿಕಸ್ಥ ಇನ್ನಿಬ್ಬರನ್ನು ಹತ್ತಿಸಿ ಕೇಳಿದ್ದಾರೆ. ಅವರಿಂದಲೂ ಬಂದ ಉತ್ತರ ಮೇಲಿನದ್ದೆ ಆದಾಗ ಬೇಸತ್ತ ಮೇಷ್ಟ್ರು ‘ನನ್ನ ಪಾಲಿಗೆ ಮಗ ಹುಟ್ಟಿಲ್ಲ ಎಂದು ಕೊಳ್ಳುತ್ತೇನೆ’ ಎಂದು ನೊಂದುಕೊಂಡು ತನ್ನೂರಿಗೆ ಹೋಗುವ ಕೊನೆ ಬಸ್ ಹಿಡಿಯಲು ಸೈಕಲ್ ಏರಿದರು.

ಯಾವಾಗ ಜನ ಕಿಕ್ಕಿರಿಯುತ್ತಿರುವುದು ಜೋರಾಯಿತೊ.. ಇನ್ನೂ ಹೆದರಿದ ಹುಡುಗರು ಕಟ್ಟಡದ ಹಿಂಬದಿಯಲ್ಲಿದ್ದ ಮಳೆ ನೀರು ಹೋಗಲು ಬಿಟ್ಟಿರುವ ನೀರಿನ ಪೈಪನ್ನು ಹಿಡಿದು ಅಪಾಯಕಾರಿಯಾಗಿ ಜಾರಿ ಪಕ್ಕದಲ್ಲಿದ್ದ ಮತ್ತೊಂದು ಬಿಲ್ಡಿಂಗ್ ಹತ್ತಿ ಇಲ್ಲಿನ ಪ್ರಹಸನವನ್ನೆಲ್ಲ ನೋಡುತ್ತಿದ್ದರಂತೆ! (ಪರಿಸ್ಥಿತಿ ತಿಳಿಯಾದ ನಂತರ ಹೀಗೆಂದು ಹೇಳಿಕೊಂಡು ಸಂಭ್ರಮ ಪಟ್ಟಿದ್ದರು)

ತಿಪಟೂರು ಬಿಟ್ಟೆವು
ಆ ವರ್ಷದ ಬೇಸಿಗೆ ರಜೆ ಬಂದೇ ಬಿಟ್ಟಿತು. ಊಟವಿಲ್ಲದ ಹಾಸ್ಟೆಲ್‍ನಲ್ಲಿ ಇದ್ದೇನು ಮಾಡುವುದು. ಎಲ್ಲ ಹುಡುಗರಂತೆ ನಾವು ಕೂಡ ನಮ್ಮ ನಮ್ಮ ಊರು ತಲುಪಿದೆವು. ನಾವೆಲ್ಲ ಪರೀಕ್ಷೆ ಮುಗಿಸಿಕೊಂಡು ಊರು ತಲುಪಿದ ಎಷ್ಟೋ ದಿನಕ್ಕೆ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗುತ್ತಿತ್ತು. ನಗರಿಗರು ಮಾತ್ರ ರಜೆಯಲ್ಲೂ ಫಲಿತಾಂಶ ನೋಡಲು ಹೋಗಿ ಬರುತ್ತಿದ್ದರು. ಹಾಸ್ಟೆಲ್ ಹುಡುಗರಂತೂ ಮತ್ತೆ ಅತ್ತ ತಲೆ ಹಾಕುತ್ತಿದ್ದುದು ಶಾಲೆ ಪ್ರಾರಂಭವಾದ ಅದೆಷ್ಟೋ ದಿನಗಳ ನಂತರ. ಪಾಸಾಗಿದ್ದರೆ ಮುಂದುವರೆಯುತ್ತಿದ್ದರು, ಫೈಲ್ ಆಗಿದ್ದರೆ ಟಿಸಿ ತೆಗೆದುಕೊಂಡು ಹೋಗಿ ಊರು ಸೇರುತ್ತಿದ್ದರು.

ಎಂಟನೇ ತರಗತಿಯನ್ನು ಇಂಗ್ಲಿಷ್ ಮೀಡಿಯಮ್‍ನಲ್ಲಿ ಪರೀಕ್ಷೆ ಬರೆದು ಬಂದಿದ್ದ ನಾನು ಅದರ ಫಲಿತಾಂಶಕ್ಕಾಗಿ ಹಿಂದೆಂದಿಗಿಂತಲೂ ಹೆಚ್ಚಾಗಿ ಹೆದರಿದ್ದೆ. ಪ್ರತಿ ತಿಂಗಳು ನಡೆಯುತ್ತಿದ್ದ ಪರೀಕ್ಷೆಗಳಲ್ಲಿ ಎಂದೂ ಒಂದಂಕಿ ದಾಟದ ನನ್ನ ಅಂಕಗಳು ಈ ಹೆದರಿಕೆಗೆ ಕಾರಣವಾಗಿತ್ತು. ಆ ವರ್ಷದ ಫಲಿತಾಂಶ ಬಂದೇ ಬಿಟ್ಟಿತು. ನಮ್ಮ ನೆಂಟರ ಹುಡುಗರಲ್ಲಿ ಕೆಲವರು ಆರು ಏಳನೇ ತರಗತಿಗೆಲ್ಲ ನಪಾಸಾಗಿದ್ದರು. ಆಗಲೇ ಮುಳುಗುವ ಎಲ್ಲ ಅರ್ಹತೆಯಿದ್ದ ನನಗೆ ಆಶ್ಚರ್ಯಕರ ರೀತಿಯಲ್ಲಿ ಮೂವತ್ತು ಅಂಕ ಕೊಟ್ಟು ತೇಲಿಸಿದ್ದರು. ಈ ವಿಷಯ ಕಾಡ್ಗಿಚ್ಚಿನಂತೆ ಊರಲ್ಲಿನ ನಮ್ಮ ಸಂಬಂಧಿಕರಿಗೆಲ್ಲ ಹರಡಿ ಅವರೆಲ್ಲ ಆಡಿಕೊಳ್ಳುವಂತಾಯಿತು.

ಅಷ್ಟು ಹೊತ್ತಿಗಾಗಲೆ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿ ಪಾಸಾಗಿದ್ದ ನಮ್ಮ ಅಕ್ಕ (ಕೋಮಲ) ಊರಿಗೆ ಮತ್ತು ಕುಟುಂಬಕ್ಕೆ ಕೀರ್ತಿ ತಂದಿತ್ತು. ಪದವಿ ಓದಲು ಚಿನಾಹಳ್ಳಿ ಕಾಲೇಜಿಗೆ ಸೇರಿಕೊಂಡಿದ್ದ ಕೋಮಲಕ್ಕನಿಗೆ ತಮ್ಮಂದಿರ ಶೈಕ್ಷಣಿಕ ಸ್ಥಿತಿ ಅಧೋಗತಿಗೆ ಇಳಿದಿರುವ ಕಾರಣಗಳ ವಾಸನೆ ಬಡಿದಿತ್ತು. ತಿಪಟೂರು ಬಿಡಿಸಿದರೆ ಮಾತ್ರ ಇವರು ಉದ್ಧಾರವಾಗಲು ಸಾಧ್ಯ ಎಂಬುದ ಮನಗಂಡು ಅಪ್ಪನಿಗೆ ದುಂಬಾಲು ಬಿದ್ದಿತ್ತು. ಅದರಂತೆ ಶಾಲೆ ಪ್ರಾರಂಭವಾದ ತಕ್ಷಣ ಅಪ್ಪ ತನ್ನೆಲ್ಲಾ ಕೆಲಸಗಳನ್ನೂ ಬಿಟ್ಟು, ಒಂದು ದಿನ ನಮ್ಮನ್ನು ತಿಪಟೂರಿಗೆ ಕರೆದುಕೊಂಡು ಬಂದು ಅಲ್ಲಿಂದ ಟಿಸಿ ಪಡೆದುಕೊಂಡು ಬಂತು. ಪ್ರತಿಷ್ಟಿತ ಶಾಲೆಗೆ ಅಪಕೀರ್ತಿ ತರುವುದರಲ್ಲಿ ಭರವಸೆ ಹುಟ್ಟಿಸಿದ್ದ ನಮ್ಮಗಳನ್ನ ಅಲ್ಲಿನ ಶಿಕ್ಷಕರು ಅತ್ಯಂತ ಉತ್ಸಾಹದಿಂದ ಬೀಳ್ಕೊಟ್ಟರು.

(ಚಿತ್ರ: ಸಂತೋಷ್ ಮತ್ತಿಘಟ್ಟ)