ಹಿಂದಿನಿಂದ ಬಾಣ ಬಿಟ್ಟ ರಾಮನನ್ನು ಮೂದಲಿಸುವಾಗ ಶೇಣಿಯವರೂ ರಾಮನನ್ನು ಸಂಪೂರ್ಣವಾಗಿ ನಿರಾಕಾರ ಮಾಡಿದರೂ ಜಬ್ಬಾರ ಇಲ್ಲಿ ಆತನ ಕುಲದ ಶ್ರೇಷ್ಠತೆಯನ್ನು ನೆನಪಿಸುತ್ತಲೇ ಇಂತಹ ಹೀನ ಕೆಲಸದಿಂದ ಅಂತಹ ದೊಡ್ದಕುಲದ ಮಾನ ಹೋಯಿತಲ್ಲ ಎನ್ನುವದನ್ನ ಪಾರ್ಥಿಸುಬ್ಬನ ಕಾವ್ಯದ ಒಳಧಾಟಿಯೊಂದಿಗೇ ಅರ್ಥಹೇಳುವಲ್ಲಿ ಇವರ ಸೃಜನಶೀಲತೆ ಅಭಿವ್ಯಕ್ತವಾಗುತ್ತದೆ. ತನ್ನ ಹಾಗೂ ರಾವಣನ ಮೈತ್ರಿಯ ಕುರುಹನ್ನು ಪೀಠಿಕೆಯಲ್ಲಿ ತರುತ್ತಲೇ ಅದು ಸರಿಯಲ್ಲವೇನೋ ಎನ್ನುವದನ್ನು ಅರ್ಥದಲ್ಲಿ ವಿವರಿಸದೇ ಪ್ರೇಕ್ಷಕರಿಗೆ ಆ ಭಾವ ತಲುಪಿಸುವ ಕಾವ್ಯ ಗುಣ ಇವರ ಎದುರಿನಲ್ಲಿ ರಾಮನಾಗಿ ಅರ್ಥಹೇಳುವ ಸಂದರ್ಭಗಳಲ್ಲಿ ನಾನೇ ಮಾರು ಹೋಗಿದ್ದುಂಟು.
ತಾಳಮದ್ದಲೆ ಕಲಾವಿದ ಜಬ್ಬಾರ್ ಸಮೋ ಅವರನ್ನು ಕುರಿತು ನಾರಾಯಣ ಯಾಜಿ ಬರಹ

 

1989ರ ಧೋದೋ ಎಂದು ಸುರಿಯವ ಮಳೆಗಾಲದಲ್ಲೊಂದು ದಿನ. ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಎನ್ನುವ ಪುಟ್ಟ ಊರಿನಲ್ಲಿ ನಡೆಯುತ್ತಿರುವ ತಾಳಮದ್ದಳೆ ಸ್ಪರ್ಧೆ ನೋಡಲು ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಆ ದಿನದ ಪ್ರಸಂಗ ‘ಪಂಚವಟಿ’. ಶೂರ್ಪನಖಾ ಮನಭಂಗ ಇದರವಸ್ತು. ಶೇಣಿ ಗೋಪಾಲಕೃಷ್ಣ ಭಟ್ಟರು ಬಹುಜನಪ್ರಿಯ ವೇಷ ಘೋರ ಶೂರ್ಪನಖಾ. ವೇದಿಕೆಯಮೇಲೆ ಭಾಗವತರು

ಭೋರ್ಗರೆವ ರಕ್ಕಸರ ದಂಡು ಬಾಯ್ಬಿಟ್ಟೊದರೆ
ನಿರ್ಘೋಷದಬ್ಬರದ ಗಮಕದಾರ್ಭಟೆಯ
ಸಿಡಿಲಬ್ಬರದ ಬೊಬ್ಬೆಯಿಂ ಶೂರ್ಪನಖೆ
ಬಂದಳಾ ಕಾನನಕೆ ಕುಲಗೇಡಿ

ಎಂದು ಹಾಡುತ್ತಿರುವಂತೆಯೇ ಸಾಧಾರಣ ಎತ್ತರದ ಕಟ್ಟುಮಸ್ತಾದ ದೇಹದ ಕಪ್ಪುಬಣ್ಣದ ಯುವಕನೋರ್ವ ವೇದಿಕೆಯಲ್ಲಿ ಕಾಣಿಸಿಕೊಂಡ. ಪದ್ಯ ಮುಗಿಯುತ್ತಿದ್ದಂತೇ ಅದೆಲ್ಲಿತ್ತೋ ಆ ಮಿಂಚಿನ ಸ್ವರ! ರಾವಣನ ತಂಗಿಯಾದ ಘೋರ ಶೂರ್ಪನಖಾಳ ಅಂತರಂಗದ ತುಮುಲ ಗೊಂದಲ ಅಸಹಾಯಕತೆಯೆಲ್ಲ ಒಂದರ ಹಿಂದೊಂದರಂತೆ ಮಾತುಗಳ ರೂಪದಲ್ಲಿ ಪ್ರೇಕ್ಷಕರ ಕಿವಿಗೆ ಅಪ್ಪಳಿಸುತ್ತಿರುವಂತೆ ಇಡಿ ಸಭೆಯಲ್ಲಿ ಸಿಡಿಮಿಂಚು. ಅದುತನಕದ ಪರಂಪರೆಯ ಶೇಣಿಯವರ ಅರ್ಥಕ್ಕಿಂತ ಭಿನ್ನವಾಗಿ ಲಂಕೇಶನ ತಂಗಿಯಾಗಿಯೂ ಕಾಡುಪಾಲಾಗಬೇಕಾದ ದುರ್ದೈವಿ ಹೆಣ್ಣಿನ ಭಾವನೆಗಳನ್ನು ಮೊಗೆದುಕೊಟ್ಟ ಈ ತರುಣ ಯಾರು ಎನ್ನುವ ಕುತೂಹಲ! ಪ್ರಸಂಗಮುಗಿಯುತ್ತಿದ್ದಂತೆ ತಿಳಿದದ್ದು “ಅಂವ ಒಬ್ಬ ಬ್ಯಾರಿ ಮಾರಾಯಾ ಹೆಸರು ಜಬ್ಬಾರ ಅಂತೆ” ಎಂದರೆ ಇನ್ನೊಬ್ಬರು ಹೌದಾ? ನಿಜವಾ? ಎನ್ನುತ್ತಿದ್ದಂತೆ ಆ ತಾಳಮದ್ದಳೆಯಲ್ಲಿ ನಿರ್ಣಾಯಕರಾಗಿ ಕುಳಿತಿದ್ದ ಖ್ಯಾತ ವಿದ್ವಾಂಸ ಕೊರ್ಗಿ ವೆಂಕಟೇಶ ಉಪಾಧ್ಯಾಯರು ತಮ್ಮ ಸ್ಥಾನವನ್ನೂ ಮರೆತು ಶೂರ್ಪನಖಾಳ ನಿಜವಾದ ಅಂತರಂಗದ ಅವತರಣಿಕೆ ಇಂದಾಯ್ತು ಎಂದು ಬಾಯ್ತುಂಬಾ ಹೊಗಳಿದರು. ಆ ದಿನವೇ ಯಕ್ಷಗಾನಕ್ಕೊಬ್ಬ ಹೊಸ ತಾರೆ “ಜಬ್ಬಾರ ಸಮೋ” ಎನ್ನುವವರ ಉದಯವಾಯ್ತು. ಇಂದು ಶೇಣಿ ಸಾಮಗರಂತವರಿಲ್ಲ. ಆದರೆ ಜಬ್ಬಾರ ಸಮೋ ಒಬ್ಬ ಇದ್ದಾರೆಂತ ತಿಳಿದರೆ ಸಾಕು. ದ.ಕ. ಉ.ಕ. ಸಾಗರ ಶಿವಮೊಗ್ಗ, ಬೆಂಗಳೂರು, ಮುಂಬೈ ಹೀಗೆ ಯಕ್ಷಗಾನ ಆಸಕ್ತ ವಲಯದಲ್ಲೆಲ್ಲಾ ಹೌಸ್ ಫುಲ್ ಗ್ಯಾರಂಟಿ.

ಕಲೆಗೆ ಧರ್ಮ ಜಾತಿಗಳ ಗಡಿಯಿಲ್ಲ. ಏಕೆಂದರೆ ಅದು ಭಾವ ಸಂಬಂಧಿಯಾದದ್ದು. ಇವತ್ತು ದೇವಿ ಮಹಾತ್ಮೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಬರೆದ ಕವಿ ದೇವಿದಾಸ ಹಿಂದುಳಿದ ವರ್ಗಕ್ಕೆ ಸೇರಿದವ. ಈ ಪ್ರಸಂಗ ಎಷ್ಟು ಜನಪ್ರಿಯವೆಂದರೆ ವರ್ಷಕ್ಕೆ ಸುಮಾರು ಒಂದು ನೂರು ಆಖ್ಯಾಯಿಕೆಯಾದರೂ ಕಟೀಲಿನ ಮೇಳಗಳೊಂದೆ ಆಡುತ್ತಾರೆ. ಸಂಸ್ಕೃತದ ಪಾರಾಯಣಕ್ಕಿಂತಲೂ ಈ ಪ್ರಸಂಗ ಜನರಿಗೆ ಆಡುಭಾಷೆಯಲ್ಲಿ ತಲುಪುವದಾದದ್ದರಿಂದ ಈ ಆಟವನ್ನು ಆರಾಧನೆಯ ಭಾವದಿಂದಲೇ ನೋಡುತ್ತಾರೆ. (ಈ ಪ್ರಸಂಗವನ್ನೂ ಮಡಿ ಮಾಡಿ ಅದರಲ್ಲಿರುವ ಕಲೆಯನ್ನು ಹಿಂದೆ ಸರಿಸಿದ್ದು ಕವಿಗಾದ ವ್ಯಂಗ್ಯವೇ ಸರಿ) ಹಾಗೇ ಯಕ್ಷಗಾನಕ್ಕೆ ಅನ್ಯಮತೀಯರ ಪ್ರವೇಶ ಹೊಸತೇನೂ ಅಲ್ಲ. ಈಗ ಅರವೊತ್ತು ಎಪ್ಪತ್ತು ವರ್ಷಗಳ ಹಿಂದೆಯೇ ಎಹ್. ಎಚ್. ಒಡೆಯರ್ ಎನ್ನುವವರು ಅರ್ಥಧಾರಿಗಳಾಗಿ, ಸಂಘಟಕರಾಗಿ ಆ ಕಾಲದ ಅಳಿಕೆ ರಾಮಯ್ಯ ರೈ, ಶೇಣಿ, ಪೆರ್ಲ, ಮಂದಾರ ಕೇಶವಭಟ್ಟರಂತವರೊಟ್ಟಿಗೆ ಸಮದಂಡಿಯಾಗಿ ಅರ್ಥಹೇಳಿದ್ದರಂತೆ. ಕ್ರಿಶ್ಚಿಯನ್ ಬಾಬು ಎನ್ನುವವಾರು ಸುರತ್ಕಲ ಮೇಳದಲ್ಲಿ ಬಹು ಜನಪ್ರಿಯ ವೇಷಧಾರಿಯಾಗಿದ್ದರು. ದೇವಿಮಹಾತ್ಮೆಯ ಇವರ ಮಧು, ಕೈಟಭ, ಚಂಡ ಮುಂಡ ಮುಂತಾದವುಗಳು ಇಂದಿಗೂ ಬಹು ಪ್ರಸಿದ್ಧ ಪಾತ್ರಗಳಾಗಿ ಉಳಿದಿವೆ. ಅದೇ ರೀತಿ ಬಡಗಿನಲ್ಲಿಯೂ ಮಹಮ್ಮದ ಎನ್ನುವರು ಮೊದಲ ವೇಷಧಾರಿಯಾಗಿ ಮೇಳವೊಂದರ ಸಂಘಟಕರಾಗಿಯೂ ಹೆಸರು ಮಾಡಿದ್ದಾರೆ. ಆದರೆ ಜಬ್ಬಾರ ಸಮೋ ಭಿನ್ನರಾಗಿ ನಿಲ್ಲುವದು ವಿಷಯ ನಿರೂಪಣೆ, ಪೌರಾಣಿಕ ಚೌಕಟ್ಟಿನಲ್ಲಿ ಕಡೆದು ನಿಲ್ಲಿಸುವ ಪಾತ್ರಗಳು, ಶುದ್ಧವಾದ ಕನ್ನಡದ ಶೈಲಿ ಮತ್ತು ಎದುರು ಪಾತ್ರದಾರಿಗಳನ್ನು ಗೌರವಿಸುವಿಕೆಗಳಿಂದಾಗಿ.

ದಕ್ಷಿಣ ಕನ್ನಡದ ಗಡಿ ಭಾಗವಾದ ಸಂಪಾಜೆ ಇವರ ಹುಟ್ಟೂರು. ಸಂಪಾಜೆ ಎಂದರೆ ಅದು ಯಕ್ಷಗಾನವನ್ನು ಗಟ್ಟಿಯಾಗಿ ಉಸಿರಾಡುವ ಸ್ಥಳ. ಇಂದೂ ಕೂಡ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಕಿಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಯಕ್ಷೋತ್ಸವಕ್ಕೆ ಹತ್ತಾರು ಸಾವಿರ ಜನ ಮುಗಿಬಿದ್ದು ನೋಡಲು ಬರುತ್ತಾರೆ. ಇಲ್ಲಿನ ಕಲ್ಲು ಕಲ್ಲಿನ ಮೇಲೂ ತೆಂಕಿನ ಹಿರಿಯ ಅರ್ಥದಾರಿಗಳಾದ ಶೇಣಿ, ಪೆರ್ಲ, ಸಾಮಗ, ಕುಂಬಳೆ ಹೀಗೆ ಹಿರಿಯರಿಂದ ಹಿಡಿದು ಕಿರಿಯರ ತನಕದ ಅರ್ಥವೈಭವಗಳ ಚರ್ಚೆ ನಿರಂತರ ಆಗುತ್ತಲೇ ಇರುತ್ತದೆ. ಮಾತಿನ ಲೋಕದ ಮಹಾಕವಿಗಳಾದ ಈ ಪೂರ್ವ ಸೂರಿಗಳ ಪ್ರಭಾವ ಇಲ್ಲಿನ ಮೂವರು ಬಾಲಕರನ್ನೂ ಆಕರ್ಷಿಸಿತ್ತು. ಓರ್ವ ಶಿವಪ್ಪ ಆಚಾರ್ಯ, ಮತ್ತೊಬ್ಬ ಮಾಥ್ಯೂ ಮಸ್ಕರೇನಸ್ ಇನ್ನೋರ್ವ ಜಬ್ಬಾರ. ಯಕ್ಷಗಾನದ ಅಭಿರುಚಿ ಇವರಿಗೆ ಸಹಜ-ಸರಳ-ಸಾಮಾನ್ಯ. ಮೊದಲಿನ ಇಬ್ಬರು ಯಕ್ಷಗಾನದ ಹುಚ್ಚು ಅಭಿಮಾನಿಗಳಾದರೆ, ಜಬ್ಬಾರ ಸಮೋ ಯಕ್ಷಗಾನದ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದರು. ಅವರೇ ಹೇಳಿಕೊಳ್ಳುವಂತೆ ಯಕ್ಷಗಾನದ ಕುರಿತಾದ ಆಸಕ್ತಿಯೂ, ಇವರ ವಯಸ್ಸೂ ಒಟ್ಟೊಟ್ಟಿಗೇ ಬೆಳೆಯಿತು.

ಇಂತಹ ಸಂಪಾಜೆಯ ಮೊಯಿದ್ದಿನ್ ಮತ್ತು ಬೀಪಾತಿಮಾ ಇವರ ಐದನೇ ಮಗ ಜಬ್ಬಾರ ಹುಟ್ಟಿದ್ದು ಬೆಳೆದದ್ದು ಓದಿದ್ದು ಇಲ್ಲಿಯೇ. ಆಗ ಈಗಿನಂತೆ ಉಸಿರುಕಟ್ಟುವ ವಾತಾವರಣ ಇಲ್ಲದ ಕಾರಣ ಆಟ ಎಲ್ಲರನ್ನೂ ಸೆಳೆಯುತ್ತಿತ್ತು. ನೆರೆ ಕೆರೆಯರೊಟ್ಟಿಗೆ ಆರನೆಯ ವಯಸ್ಸಿಗೇ ಆಟನೋಡಲು ಓಡುತ್ತಿದ್ದರು. ಆಗ ಅದೇನು ತಕರಾರು ಮಾಡುವಂತಹ ವಿಷಯ ಯಾವ ಜಾತಿಯವರಲ್ಲೂ ಇರಲಿಲ್ಲ. ಸೌಹಾರ್ದಯುತ ಸಾಮರಸ್ಯದ ಸಾಮಾಜಿಕ ಸನ್ನಿವೇಶವಿದ್ದುದೂ ಆಸಕ್ತಿ ಮೂಡಲು ಕಾರಣ. ಶೇಣಿಯವರ ಬಪ್ಪನಾಡು ಕ್ಷೇತ್ರದ ಬಪ್ಪ ಬ್ಯಾರಿಯನ್ನು ಹಿಂದುಗಳಂತೆ ಮುಸ್ಲಿಮರೂ ನೋಡಿ ಆನಂದಿಸುತ್ತಿದ್ದರು. (ಅದೇ ಟ್ಯಾಬ್ಲೋದ ಕಾರಣದಿಂದ ಮಂಗಳೂರು ಈಗ ಕೆಲ ವರ್ಷಗಳ ಹಿಂದೆ ಹೊತ್ತಿ ಉರಿಯಿತು ಎನ್ನುವದು ನಾವು ಕಾಲಗತಿಯಲ್ಲಿ ಹಿಂದೆಬಿದ್ದಿರುವ ವ್ಯಂಗ್ಯ!)

ಶಾಲೆಯಲ್ಲಿ ಆರನೆಯ ತರಗತಿಯಲ್ಲಿ ಇವರ ಗುರುಗಳಾದ ನಾರಾಯಣ ನಾವಡ ಎನ್ನುವವರು ಈ ಹುಡುಗನಿಗೆ ಪ್ರಹ್ಲಾದ ಚರಿತ್ರೆಯಲ್ಲಿ ಪ್ರಹ್ಲಾದನ ಗುರು “ಶಂಡ-ಅಮರ್ಕ” ವೇಷ ಹಾಕಿಸಿ ರಂಗಸ್ಥಳಕ್ಕೆ ಕಳುಹಿಸಿದ್ದು ಮೊದಲ ರಂಗ ಪ್ರವೇಶ. ಬಾಯಿಪಾಠ ಮಾಡಿದ ಅರ್ಥ ಹೇಳುವದರ ಒಳಗಾಗಿ ಒಮ್ಮೆ ಒಳ ಹೋದರೆ ಸಾಕು ಎನ್ನುವ ಅನುಭವ, ದೇಹವಿಡೀ ಬೆವೆತ! ಶಿಕ್ಷಕ ಭಾಗವತ ದಾಮೋದರ ಗೌಡ ಭೇಷ್ ಎಂದದ್ದು ಕೇಳಿ ಮೈಯೊಳಗೇ ಪುಳಕ! ಅಲ್ಲಿಂದಾಚೆ ದೊಡ್ಡ ತಾಳಮದ್ದಳೆ ಕೂಟದ ಖಾಯಂ ಪ್ರೇಕ್ಷಕ. ಅವರ ವಾಘ್ಝರಿಯ ಆರಾಧಕ.

ಮನೆಯಿಂದ ಶಾಲೆಗೆ ಹೋಗುವಾಗ ಬರುವಾಗಲೆಲ್ಲಾ ಆ ಸಂಭಾಷಣೆಗಳನ್ನು ಸಂಪಾಜೆಯ ಗಿರಿ ಕೊಳ್ಳಗಳಲ್ಲಿ ಅನುರಣಿಸುವಹಾಗೆ ದೊಡ್ಡದಾಗಿ ಹೇಳಿಕೊಳ್ಳುವಷ್ಟರಮಟ್ಟಿಗೆ ಈ ರಂಗದ ಗೀಳು. ಹಾದಿಹೋಕರೆಲ್ಲಾ ಈ ಬ್ಯಾರಿಗೆ ಹುಚ್ಚೋ ಹೇಗೆ ಎನ್ನುವಷ್ಟರ ಮಟ್ಟಿಗೆ ತಾಳಮದ್ದಳೆಯ ಹುಚ್ಚು. ಅದೇ ಹೊತ್ತಿಗೆ ಮಾಸ್ತರರು ತೋರಿಸಿದ ಇಪ್ಪತ್ತೈದು ಪೈಸೆಗೆ ಸಿಗುವ ಚಂದಮಾಮದಿಂದ ರಾಮಾಯಣ ಮಹಾಭಾರತದ ಪುರಾಣಪಾತ್ರಕಗಳ ಪ್ರವೇಶ ಇವರ ಮನದಲ್ಲಿ ಆಯಿತು. ಆ ಪತ್ರಿಕೆಯ ಬೆಲೆ ಈಗ ರೂ. 30/- ಆದಾಗಲೂ ಇವರ ಅನನ್ಯ ಸಂಬಂಧಿ. ಈಗ ಇವರ ಮಕ್ಕಳೂ ಹಟಕ್ಕೆ ಬಿದ್ದು “ಅಪ್ಪಾ ಚಂದಮಾಮ ಬಂತಾ” ಎಂದು ಕೇಳುವದನ್ನಾ ಕಂಡಾಗ ಈ ಹುಡುಗರೂ ಯಕ್ಷಗಾನಕ್ಕೆ ಬರಬಹುದಾ ಎಂದು ಯಾವದೋ ಆಸೆ ಇವರ ಮನದಲ್ಲಿ ಮೂಡಿ ಮರೆಯಾಗುತ್ತದೆಯಂತೆ.

ಪ್ರಸಂಗ ಮುಗಿಯುತ್ತಿದ್ದಂತೆ ತಿಳಿದದ್ದು “ಅಂವ ಒಬ್ಬ ಬ್ಯಾರಿ ಮಾರಾಯಾ ಹೆಸರು ಜಬ್ಬಾರ ಅಂತೆ” ಎಂದರೆ ಇನ್ನೊಬ್ಬರು ಹೌದಾ? ನಿಜವಾ? ಎನ್ನುತ್ತಿದ್ದಂತೆ ಆ ತಾಳಮದ್ದಳೆಯಲ್ಲಿ ನಿರ್ಣಾಯಕರಾಗಿ ಕುಳಿತಿದ್ದ ಖ್ಯಾತ ವಿದ್ವಾಂಸ ಕೊರ್ಗಿ ವೆಂಕಟೇಶ ಉಪಾಧ್ಯಾಯರು ತಮ್ಮ ಸ್ಥಾನವನ್ನೂ ಮರೆತು ಶೂರ್ಪನಖಾಳ ನಿಜವಾದ ಅಂತರಂಗದ ಅವತರಣಿಕೆ ಇಂದಾಯ್ತು ಎಂದು ಬಾಯ್ತುಂಬಾ ಹೊಗಳಿದರು.

ಜಬ್ಬಾರ ಸಮೋ ಅವರಿಗೆ ಓರ್ವ ಮುಸ್ಲಿಂ ಅಂತ ಹೇಳುತ್ತಾನಲ್ಲಾ ಎಂದು ಜನಪ್ರಿಯತೆ ಬಂತೆಂದು ತಿಳಿಯಬೇಕಿಲ್ಲ. ಪ್ರಾರಂಭದಲ್ಲಿ ಪ್ರೇಕ್ಷಕರಲ್ಲಿ ಈ ಭಾವನೆ ಇದ್ದಿರಬಹುದಾದರೂ ಹಾಗೆ ಬಂದವರನ್ನು ತನ್ನ ಮಾತಿನ ವೈಖರಿಯಿಂದ ಮೋಡಿಮಾಡಿದುದು ಇವರ ಕಲಾವಂತಿಕೆಯೇ ಕಾರಣ. ನಾಯಕ, ಖಳನಾಯಕ, ಪ್ರತಿನಾಯಕ ಹೀಗೆ ನಾನಾ ಸ್ತರದ ಪಾತ್ರಗಳೊಳಗೆ ತಾನೂ ಒಂದಾಗುತ್ತಾ, ಅರ್ಥದಾಳದೊಳಗಿನ ಅರ್ಥದ ಮಂಟಪ ಕಟ್ಟುವದು ಜಬ್ಬಾರರ ವಿಶೇಷ. ಇವರ ವಾಲಿ ಬಹು ಪ್ರಸಿದ್ಧ ಪಾತ್ರ. ಸುಗ್ರೀವನ ಮೇಲಿನ ತನ್ನ ಬಾತ್ರ ಪ್ರೇಮಕ್ಕೆ ಆತ ಹೇಗೆ ದ್ರೋಹ ಬಗೆದ ಎನ್ನುವದನ್ನು ವಿವರಿಸುವ ಹೊತ್ತಿಗೆ ಕುವೆಂಪುರವರ “ರಾಮಾಯಣ ದರ್ಶನಂ” ಕಾವ್ಯದ ಪ್ರಭಾವ ಬಂದು ಹೋಗುತ್ತಾದರೂ ಅದರ ಯಥಾ ನಕಲಲ್ಲ.

ಹಿಂದಿನಿಂದ ಬಾಣ ಬಿಟ್ಟ ರಾಮನನ್ನು ಮೂದಲಿಸುವಾಗ ಶೇಣಿಯವರೂ ರಾಮನನ್ನು ಸಂಪೂರ್ಣವಾಗಿ ನಿರಾಕಾರ ಮಾಡಿದರೂ ಜಬ್ಬಾರ ಇಲ್ಲಿ ಆತನ ಕುಲದ ಶ್ರೇಷ್ಠತೆಯನ್ನು ನೆನಪಿಸುತ್ತಲೇ ಇಂತಹ ಹೀನ ಕೆಲಸದಿಂದ ಅಂತಹ ದೊಡ್ದಕುಲದ ಮಾನ ಹೋಯಿತಲ್ಲ ಎನ್ನುವದನ್ನ ಪಾರ್ಥಿಸುಬ್ಬನ ಕಾವ್ಯದ ಒಳಧಾಟಿಯೊಂದಿಗೇ ಅರ್ಥಹೇಳುವಲ್ಲಿ ಇವರ ಸೃಜನಶೀಲತೆ ಅಭಿವ್ಯಕ್ತವಾಗುತ್ತದೆ. ತನ್ನ ಹಾಗೂ ರಾವಣನ ಮೈತ್ರಿಯ ಕುರುಹನ್ನು ಪೀಠಿಕೆಯಲ್ಲಿ ತರುತ್ತಲೇ ಅದು ಸರಿಯಲ್ಲವೇನೋ ಎನ್ನುವದನ್ನು ಅರ್ಥದಲ್ಲಿ ವಿವರಿಸದೇ ಪ್ರೇಕ್ಷಕರಿಗೆ ಆ ಭಾವ ತಲುಪುಸುವ ಕಾವ್ಯ ಗುಣ ಇವರ ಎದುರಿನಲ್ಲಿ ರಾಮನಾಗಿ ಅರ್ಥಹೇಳುವ ಸಂದರ್ಭಗಳಲ್ಲಿ ನಾನೇ ಮಾರು ಹೋಗಿದ್ದುಂಟು. ವರ್ತಮಾನದ ತಾಳಮದ್ದಳೆಯಲ್ಲಿ ಒಣ ತರ್ಕಗಳಾಗಿ ಮಾರ್ಪಟ್ಟ ಈ ಪ್ರಸಂಗದ ರಸಭಾವವನ್ನು ಜಬ್ಬಾರರು ಗುರುತಿಸುವದು ರಾಮ

“ಮುಂದಿನ್ನು ಬದುಕಬೇಕೆಂಬ ಆಸೆ ಇದ್ದರೆ
ಹಿಂದೆ ಕರೆವೆ ಬಾಣವನು ಅದು ನೋಯದಂತೆ”

ಎನ್ನುವ ಮಾತನ್ನು ಹೇಳಿದಾಗ. ಅಲ್ಲಿಂದ ಇಡೀ ವಾಲಿಯ ಅಂತರಂಗದ ನಿವೇದನೆ ಮತ್ತು ಆತ್ಮ ವಿಶ್ಲೇಷಣೆ ವೀರ ಮತ್ತು ಕರುಣ ರಸದ ಮಿಳಿತಕ್ಕೊಂದು ಉದಾಹರಣೆಯನ್ನಾಗಿಸಬಹುದು.

“ಕರುಣ ವಿದ್ದರೆ ಸಾಕೋ. . . ”

ಎನ್ನುತ್ತಾ ತನ್ನ ಪೀಠಿಕೆಯಲ್ಲಿ ತಾನೇ ಕಟ್ಟಿದ ವಾಲಿಯ ಮುಖದ ಹಿಂದಿನ ದೋಷಗಳನ್ನು ತಾವೇ ಅನಾವರಣ ಮಾಡಿಬಿಡುತ್ತಾರೆ. ಇಲ್ಲಿ ಡಿ.ವಿ.ಜಿ.ಯವರ ರಾಮನ ಸಮರ್ಥನೆ ಹಾಗೆ ಬಂದು ಹೀಗೆ ಹಾದುಹೋಗುವದಾದರೂ ಅದು ಜಬ್ಬಾರರದೇ ಕೊಡುಗೆ ಎನ್ನುವಷ್ಟು ಅವರ ಅರ್ಥದಲ್ಲಿ ಬೀಸಿದೆ.

ಕಳೆದ ವರ್ಷ ಕರ್ಕಿಯಲ್ಲಿ ನಡೆದ ಇದೇ ತಾಳಮದ್ದಳೆಯನ್ನು ಕೇಳಿದ ಖ್ಯಾತ ವೈದಿಕ ವಿದ್ವಾಂಸ ನಾರಾಯಣ ಶಾಸ್ತ್ರಿ ಬುಚ್ಚನ್ (ಖ್ಯಾತ ಅರ್ಥದಾರಿಗಳೂ ಕೂಡಾ) ಇದು ವಾದ ಭೂಮಿಕೆಯಾಗದೇ ಕಥನ ಕಟ್ಟುವಿಕೆಯಾಯಿತು ಎಂದು ಮನಬಿಚ್ಚಿ ಹರಸಿದ್ದನ್ನು ನೆನಪಿಸಬಹುದು. ಅದೇರೀತಿ ಅವರ “ಕೃಷ್ಣ ಸಂಧಾನದ” ದುರ್ಯೋಧನನೂ ಹಾಗೆ, ದೇವಿದಾಸನ ಈ ಕೃತಿ ಕುಮಾರವ್ಯಾಸನ ಕಾವ್ಯವನ್ನು ಆಧರಿಸಿದೆ.

ದ್ಯೂತದಲ್ಲಿ ಸೋತದ್ದನ್ನು ಧೃತರಾಷ್ಟ್ರನಿಂದ ವರದ ಮುಖೇನ ಪಡೆದಮೇಲೆ ಅಲ್ಲಿನ ತನಕದ ದ್ವೇಷ ಪರಿಸಮಾಪ್ತಿಯಾಗಬೇಕಾಗಿತ್ತಲ್ಲ ಆದರೆ ಹಾಗಾಗದೇ ಪಾಂಡವರು ವರವನ್ನೂ ಪಡೆದು ಪ್ರತಿಜ್ಞೆಯನ್ನೂ ಉಳಿಸಿ ದ್ವೇಷಸಾಧಿಸಿದ್ದು ಹೇಗೆ ಸರಿ ಎನ್ನುತ್ತಲೇ ಕೌರವ ವಿಜೃಂಭಿಸುತ್ತಾನೆ. ಆದರೆ ಕೊನೆಗೆ ಈ ಎಲ್ಲದರಲ್ಲೂ ತಾನು ಹೇಗೆ ತಪ್ಪಿದೆ ಎನ್ನುವದನ್ನು ಕೃಷ್ಣನಿಗೆ ರಣವೀಳ್ಯವನ್ನು ಕೊಡುವಾಗ ಹೇಳಿದರೂ ಅಲ್ಲೂ ಛಲದಂಕಮಲ್ಲನಾಗಿಯೇ ಇವರ ಕೌರವ ಕಾಣಿಸಿಕೊಳ್ಳುತ್ತಾನೆ. ಹೀಗೆ ಪ್ರತಿನಾಯಕನ ಪಾತ್ರದಲ್ಲಿ ಮಿಂಚುವ ಇವರು ಭೀಷ್ಮ ಪಾತ್ರಮಾಡುವಾಗ ಭಕ್ತಿರಸವನ್ನೂ, ಅಸಹಾಯಕತೆಯನ್ನೂ ಪಾಂಡವರು ಧರಣಿಯನ್ನು ಆಳುವದು ಯೋಗ್ಯ ಎನ್ನುವ ಭಾವವನ್ನೂ ಅಷ್ಟೇ ಸಮರ್ಥವಾಗಿ ವಿಶ್ಲೇಷಿಸುತ್ತಾರೆ.

(ಚಿತ್ರ ಕೃಪೆ: ಶಿವಪ್ರಸಾದ್ ಹಳುವಳ್ಳಿ)

ಯಕ್ಷಗಾನದ ಪಾತ್ರಗಳನ್ನು ಮಾಡುವ ಹೊತ್ತಿಗೆ ಈ ರೀತಿ ಪರಕಾಯ ಪ್ರವೇಶ ಮಾಡುವಾಗ ಧರ್ಮ ಎನ್ನುವದು ಇವರಿಗೆ ತಾಡದೇ ಮತ್ತು ಕಾಡದೇ ಕಲೆ ಮತ್ತು ಕಾವ್ಯ ಅನುಭವಕ್ಕೆ ಬರುತ್ತದೆ ಎನ್ನುತ್ತಾರೆ. ಅದೇ ರೀತಿ ತನ್ನ ಸಮುದಾಯದವರೂ ಕೂಡಾ ಈ ಕುರಿತು ಯಾರೂ ಆಪೇಕ್ಷಿಸಿಲ್ಲ ಎನ್ನುತ್ತಾರೆ.

ರೇಷ್ಮೆ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಜಬ್ಬಾರರಿಗೆ ಸುಹೈಲ್ ಮತ್ತು ತುಫೈಲ್ ಇಬ್ಬರು ಅವಳಿ ಜವಳಿ ಮಕ್ಕಳಿದ್ದಾರೆ. ಇಬ್ಬರೂ ಪಿ.ಯು.ಸಿ. ಪ್ರಥಮ ವರ್ಷ ಮುಗಿಸಿ ದ್ವಿತೀಯ ವರ್ಷದ ತಯಾರಿಯಲ್ಲಿದ್ದಾರೆ. ಮಗಳು ಫಿದಾ ಆರನೆಯ ತರಗತಿ ಮುಗಿಸಿ ಏಳನೆಯ ತರಗತಿಗೆ ಹೋಗುವ ಸಿದ್ಧತೆಯಲ್ಲಿದ್ದಾಳೆ. ಮಕ್ಕಳನ್ನೆಲ್ಲಾ ಕನ್ನಡ ಮಾಧ್ಯಮದಲ್ಲೇ ಓದಿಸುತ್ತಿರುವದು, ಅವರಿಗಿರುವ ಕನ್ನಡದ ಮೇಲಿನ ಪ್ರೇಮಕ್ಕಾಗಿ. ಮಡದಿ ಜೀನತ್ ಇವರ ತಾಳಮದ್ದಳೆಯ ತಿರುಗಾಟದಲ್ಲಿ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುವಾಕೆ.

ಒಂದು ಗಟ್ಟಿ ಪರಂಪರೆಯ ಪ್ರಭಾವ, ಅರ್ಥದಾರಿಕೆಯಲ್ಲಿ ಹೊಸತನ ಮೆರೆದ ಶೇಣಿ, ಕುಂಬ್ಳೆ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಡಾ. ಜೋಶಿ ವೇಷ ಕಟ್ಟಿಸಿ ಈ ಬ್ಯಾರಿಯನ್ನು ರಂಗಸ್ಥಳಕ್ಕೆ ದೂಡಿದ ಗುರು ಶ್ರೀ ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟ ಇವರನ್ನೆಲ್ಲಾ ಸದಾ ಸ್ಮರಿಸಿಯೇ ತಾನು ಅರ್ಥ ಹೇಳುವದು ಎನ್ನುತ್ತಾರೆ ಅವರು. ಜನಪ್ರಿಯತೆಯೆನ್ನುವದು ಕಲಾವಂತಿಕೆಯನ್ನು ಬೆಳೆಸಲು ಸಹಾಯಕವೇ ಹೊರತು ತಲೆಗೇರಿಕೊಳ್ಳಲಿಕ್ಕಲ್ಲ ಎನ್ನುವ ವಿನಮ್ರಭಾವ ಇವರ ಸ್ಥಾಯೀ. ಸಾದ್ಯವಾದರೆ ಒಮ್ಮೆ ಈ ಬ್ಯಾರಿಯ ಅರ್ಥಕೇಳಿ.