ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಹಾಸ್ಟೆಲ್ ವಿಚಿತ್ರ ಅನುಭವ ಕೊಡತೊಡಗಿತು. ಇಲ್ಲಿ ಬೆಳಗ್ಗೆ ಆರಕ್ಕೆ ಕಡ್ಡಾಯವಾಗಿ ಏಳಬೇಕಿತ್ತು. ಎದ್ದು ಓದಿಕೊಳ್ಳುವುದು ಒತ್ತಟ್ಟಿಗಿರಲಿ ಪ್ರತಿಯೊಬ್ಬರೂ ಭಟ್ಟರು ನೇಮಿಸಿದ ಕೆಲಸಗಳನ್ನ ಮಾಡಬೇಕಿತ್ತು. ಕುಳ್ಳಗೆ ದಪ್ಪಗೆ ಮೀಸೆಬಿಟ್ಟಿದ್ದ ಹನುಮಂತನೆಂಬ ಭಟ್ಟನಿದ್ದ. ಹೇಳಿದ ಕೆಲಸ ಮಾಡದವರನ್ನ ಆತ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದ. ಬೆಳಗಿನ ಊಟಕ್ಕೆ ಮುಂಚೆ ಯಾರ್ಯಾರು ಏನೇನು ತಪ್ಪು ಮಾಡಿದರೆಂದು ವಿಚಾರಣೆ ನಡೆಸಿ, ಮೂಲೆಯಲ್ಲಿ ಸದಾ ನಿಂತಿರುತ್ತಿದ್ದ ಉದ್ದನೆಯ ಸಿದ್ದರಾಮಣ್ಣನನ್ನು(ಕೋಲನ್ನ) ತೆಗೆದುಕೊಂಡು ದನಕ್ಕೆ ಬಡಿಯುವಂತೆ ಬಡಿಯುತ್ತಿದ್ದ.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಒಂಭತ್ತನೆಯ ಕಂತು.

 

ಚಿಕ್ಕನಾಯಕನಹಳ್ಳಿ ದೇಶಿಯ ವಿದ್ಯಾಪೀಠ ಶಾಲೆ ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಶಾಲೆ. ಇಲ್ಲಿ ನಮ್ಮಪ್ಪನಾದಿಯಾಗಿ ಹಲವು ತಲೆಮಾರುಗಳು ವಿದ್ಯೆ ಕಲಿತ ಇತಿಹಾಸವಿದೆ. ಈ ಶಾಲೆಯ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಗಾಂಧಿ ಟೋಪಿಯನ್ನು ತೊಡಬೇಕು. ಅಲ್ಲಿನ ಶಿಕ್ಷಕರುಗಳು ನನ್ನ ಮಾರ್ಕ್ಸ್‌ ಕಾರ್ಡ್ ನೋಡಿ ಈತ ಎಂಟನೇ ತರಗತಿಯಲ್ಲಿ ಇಂಗ್ಲೀಷ್ ಮೀಡಿಯಮ್ ಓದಿ ಬಂದಿದ್ದರೂ ಪರವಾಗಿಲ್ಲ, ಒಂಭತ್ತಕ್ಕೆ ಕನ್ನಡ ಮೀಡಿಯಮ್‌ನಲ್ಲೇ ಓದಲಿ ಎಂದು ಸಲಹೆ ನೀಡಿದರು. ನಮ್ಮಪ್ಪ ಯಾವಾಗ ‘ಇಲ್ಲ ಸಾ ಇದೊಂದು ಆಗ್ಲೆ ಬೇಕು’ ಎಂದು ಹಠ ಹಿಡಿಯಿತೊ ‘ಯಂಗಾರ ನಿಮ್ಮನೆ ಹಾಳ್ ಮಾಡ್ಕ ಹೋಗ್ರಿ, ಅಂತೂ ಸ್ಕೂಲಿಗೆ ಕೆಟ್ಟೆಸ್ರು ತಪ್ಪಿದ್ದಲ್ಲ’ ಎಂದು ಇಂಗ್ಲಿಷ್ ಮೀಡಿಯಮ್‌ಗೆ ಸೇರಿಸಿಕೊಂಡರು. ಜೇಪಿ ಕನ್ನಡ ಮೀಡಿಯಮ್‌ಗೆ ಸೇರಿಕೊಂಡ. ಆಗಿನ ಕಾಲಕ್ಕೆ ಅತ್ಯಂತ ಪ್ರತಿಷ್ಠಿತ ಸ್ಕೂಲ್ ಆಗಿದ್ದ ಡಿ.ವಿ.ಪಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದರು. ಇಂಗ್ಲಿಷ್‌ನ ‘ಎ’ ಇಂದ ಹಿಡಿದು ‘ಹೆಚ್’ ವರೆಗೂ ಸೆಕ್ಷೆನ್‌ಗಳಿದ್ದವು. ತಾಲ್ಲೂಕ್ಕಿನಲ್ಲಿದ್ದ ಕ್ಲಾಸ್ ಒನ್ ಅಧಿಕಾರಿಗಳಿಂದ ಹಿಡಿದು ಡಾಕ್ಟರ್ಸ್, ಇಂಜಿನಿಯರ್ಸ್, ಶಿಕ್ಷಕರುಗಳೆಲ್ಲ ತಮ್ಮ ಮಕ್ಕಳನ್ನ ಇಲ್ಲೇ ಓದಿಸುತ್ತಿದ್ದರು. ಡಿವಿಪಿ ಏಡೆಡ್ ಸ್ಕೂಲ್ ಆದ್ದರಿಂದ ಫೀಸ್ ಕಡಿಮೆ ಇದ್ದು ಕೂಲಿಕಾರ್ಮಿಕರು, ಬೀದಿ ವ್ಯಾಪಾರಿಗಳು, ಸಂತೆ ಸಾಬ್ರು ಇತ್ಯಾದಿಗಳೂ ಸಹ ತಮ್ಮ ಮಕ್ಕಳನ್ನ ಡಿವಿಪಿಗೆ ಸೇರಿಸಲು ಅನುಕೂಲವಾಗಿತ್ತು.

ನನ್ನ ವಿದ್ಯೆಯ ಮಟ್ಟ ಪರೀಕ್ಷಿಸಲು ಇಲ್ಲೂ ಕೂಡ ಒಂದೆ ಪ್ರಶ್ನೆ ಸಾಕಾಗಿತ್ತು. ಶಾಲೆಗೆ ಅಡ್ಮಿಷನ್ ಆಗಿ ಮಧ್ಯಾಹ್ನದ ಹೊತ್ತಿಗೆ ಒಂಭತ್ತನೆ ತರಗತಿ ‘ಸಿ’ ಸೆಕ್ಷನ್‌ಗೆ ಪಾದಾರ್ಪಣೆ ಮಾಡಿದೆ. ಹೊಸದಾಗಿ ಬಂದ ಹುಡುಗ ಎಂಬ ಕಾರಣಕ್ಕೆ ಎಲ್ಲರ ಗಮನ ನನ್ನ ಕಡೆಗಿತ್ತು. ಕಪ್ಪಗೆ ದೊಪ್ಪಗಿದ್ದ ಮೇಷ್ಟ್ರೊಬ್ಬರು ಬಾಯಿತುಂಬ ಎಲೆ ಅಡಿಕೆ ಹಾಕಿಕೊಂಡು ಭೌತಶಾಸ್ತ್ರದ ಪ್ರಯೋಗ ಮಾಡುತ್ತಿದ್ದರು. ನನ್ನನ್ನ ನೋಡಿದ್ದೆ ಅವರಿಗೆ ನನ್ನ ಪೂರ್ವಜ್ಞಾನ ಪರೀಕ್ಷಿಸಬೇಕೆನಿಸಿ, ಇಂಗ್ಲಿಷ್‌ನಲ್ಲಿ ವಿಜ್ಞಾನದ ಸರಳ ಪ್ರಶ್ನೆಯೊಂದನ್ನ ನನ್ನ ಕಡೆಗೆ ಎಸೆದರು. ನನಗದರ ತಳಬುಡ ತಿಳಿಯದೆ ಸುಮ್ಮನೆ ನಿಂತಿದ್ದೆ. ಪಾಪ ಮೇಷ್ಟ್ರು ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆ ಅರ್ಥ ಆಗಿರಲಿಕ್ಕಿಲ್ಲ ಎಂದು ಅದನ್ನೆ ಕನ್ನಡದಲ್ಲೂ ಕೇಳಿ ನೋಡಿದರು. ಆಗಲೂ ನನ್ನ ಉತ್ತರ ಮೊದಲಿನಂತೆಯೇ ಇತ್ತು. ಬೇಸರಿಸಿಕೊಂಡ ಮೇಷ್ಟ್ರು ಕೈಮುಗಿದು ಕೂತುಕೊಳ್ಳುವಂತೆ ಸನ್ನೆ ಮಾಡಿದರು. ನಾನು ಕೂತೆ. ಉಳಿದ ಹುಡುಗರು ಪಳ್ಳನೆ ನಕ್ಕರು.

ಸ್ಕೂಲ್ ಹೊಸದಾದರೇನಂತೆ ಇಲ್ಲೂ ಕೂಡ ನಮ್ಮ ಊಟ ವಸತಿಗೆ ಆಧಾರ ಗೌರ್ಮೆಂಟ್ ಹಾಸ್ಟೆಲ್ಲೆ ಆಗಿತ್ತು. ಅಪ್ಪ ಹಾಸ್ಟೆಲ್ಗೆ ಅಪ್ಲಿಕೇಷನ್ ಹಾಕಿ ಹೋಗಿತ್ತು. ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಸೀಟ್ ಅನೌನ್ಸ್‌ ಆಗುವುದು ತಡವಾಗಿತ್ತು. ಅಲ್ಲಿವರೆಗೂ ಚಿ.ನಾಹಳ್ಳಿಯಿಂದ ಎಂಟು ಕಿಲೋಮೀಟರ್ ದೂರದಲ್ಲಿದ್ದ ಕಂಟಲಗೆರೆಯಿಂದಲೇ ಅಪ್ ಅಂಡ್ ಡೌನ್ ಮಾಡತೊಡಗಿದೆವು. ತುಂಬ ದಿನ ಬಸ್‌ನಲ್ಲಿ ಓಡಾಡಿದ ನಂತರ ಹಾಸ್ಟೆಲ್ ಸೀಟ್ ಸಿಕ್ಕಿತು. ಮಾಮೂಲಿಯಂತೆ ಇಲ್ಲಿಯೂ ಅಪ್ಪ ನನ್ನನ್ನೂ ತಮ್ಮನನ್ನು ಕರೆದುಕೊಂಡು ಬಂದು ನೂರು ರೂ ಕಾಷನ್ ಮನಿ ಕಟ್ಟಿ ಟ್ರಂಕು-ತಟ್ಟೆ, ಬೆಡ್‌ಶೀಟ್ ಎಲ್ಲವನ್ನೂ ಕೊಡಿಸಿ ಬಿಟ್ಟು ಹೋಯಿತು. ಇಲ್ಲಿ ನನಗೆ ಲಂಬಾಣಿ ಜಾತಿಯ ಬಸಂತ ಮತ್ತು ಪುಟ್ಟರಾಜ ನಾಯ್ಕ ಎಂಬ ಹುಡುಗರು ಜೊತೆಯಾದರು. ಐವತ್ತು ವಿದ್ಯಾರ್ಥಿಗಳಿದ್ದ ಇಡೀ ಹಾಸ್ಟೆಲ್‌ನಲ್ಲಿ ಇಂಗ್ಲಿಷ್ ಮೀಡಿಯಮ್ ಓದುತ್ತಿದ್ದವರು ಅವರಿಬ್ಬರೇ ಆಗಿದ್ದರು. ಮೂರನೆಯವನು ನಾನಾದೆ.

ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಹಾಸ್ಟೆಲ್ ವಿಚಿತ್ರ ಅನುಭವ ಕೊಡತೊಡಗಿತು. ಇಲ್ಲಿ ಬೆಳಗ್ಗೆ ಆರಕ್ಕೆ ಕಡ್ಡಾಯವಾಗಿ ಏಳಬೇಕಿತ್ತು. ಎದ್ದು ಓದಿಕೊಳ್ಳುವುದು ಒತ್ತಟ್ಟಿಗಿರಲಿ ಪ್ರತಿಯೊಬ್ಬರೂ ಭಟ್ಟರು ನೇಮಿಸಿದ ಕೆಲಸಗಳನ್ನ ಮಾಡಬೇಕಿತ್ತು. ಕುಳ್ಳಗೆ ದಪ್ಪಗೆ ಮೀಸೆಬಿಟ್ಟಿದ್ದ ಹನುಮಂತನೆಂಬ ಭಟ್ಟನಿದ್ದ. ಹೇಳಿದ ಕೆಲಸ ಮಾಡದವರನ್ನ ಆತ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದ. ಬೆಳಗಿನ ಊಟಕ್ಕೆ ಮುಂಚೆ ಯಾರ್ಯಾರು ಏನೇನು ತಪ್ಪು ಮಾಡಿದರೆಂದು ವಿಚಾರಣೆ ನಡೆಸಿ, ಮೂಲೆಯಲ್ಲಿ ಸದಾ ನಿಂತಿರುತ್ತಿದ್ದ ಉದ್ದನೆಯ ಸಿದ್ದರಾಮಣ್ಣನನ್ನು(ಕೋಲನ್ನ) ತೆಗೆದುಕೊಂಡು ದನಕ್ಕೆ ಬಡಿಯುವಂತೆ ಬಡಿಯುತ್ತಿದ್ದ. ಅಂಗೈಗೆ ಕೊಟ್ಟು ಸಾಲದಾದಾಗ ಅಂಗೈಯನ್ನು ಹಿಮ್ಮುಕವಾಗಿಸಿ ಗೆಣ್ಣು ಊದಿಕೊಳ್ಳುವಂತೆ ಕೊಡುತ್ತಿದ್ದ. ಅದೂ ತೃಪ್ತಿ ಆಗದಾಗ ಮೊಣಕಾಲು ಮೊಣಕೈಗೆಲ್ಲ ಕೊಡುತ್ತಿದ್ದ. ಹುಡುಗರು ಅವನ ಏಟು ತಾಳಲಾರದೆ ಪಣಿ ಪಣಿನೆ ಕುಣಿದಾಡುತ್ತಿದ್ದರು. ಕೈ ಕಾಲ ಮೇಲೆಲ್ಲ ಬರೆಗಳು ಬಿದ್ದಿರುತ್ತಿದ್ದವು. ಈ ಹನುಮಂತನ ಕ್ರೂರ ವರ್ತನೆ ಕಂಡು ನನಗೆ ಆಶ್ಚರ್ಯ ಭಯ ಎರಡೂ ಆಗುತ್ತಿತ್ತು. ತಿಪಟೂರಿನಲ್ಲಿ ವಾರ್ಡನ್ ಕೂಡ ಎಂದೂ ಈ ರೀತಿ ವಿಪರೀತವಾಗಿ ವರ್ತಿಸುತ್ತಿರಲಿಲ್ಲ. ಅವರೇನಾದರೂ ಶಿಕ್ಷಿಸಿದ್ದಾರೆಂದರೆ ಅದಕ್ಕೆ ಸೂಕ್ತ ಕಾರಣವಿರುತ್ತಿತ್ತು. ಇಲ್ಲಿ ವಾರ್ಡನ್ ನೆಪಮಾತ್ರನಂತಿದ್ದು ಎಲ್ಲವೂ ಹನುಮಂತನ ಮಯವಾಗಿತ್ತು. ಆತನು ಕೊಡುವ ಶಿಕ್ಷೆಗಳಿಗೆ ಅರ್ಥವೇ ಇರುತ್ತಿರಲಿಲ್ಲ. ಹುಡುಗರು ಅವನ ಆಕ್ರೋಷಕ್ಕೆ ಬಲಿ ಆಗುತ್ತಿದ್ದರು.

ಹಾಸ್ಟೆಲ್‌ನಲ್ಲಿ ಕೊಡುತ್ತಿದ್ದ ಊಟ ತಿಂಡಿಯ ಗುಣಮಟ್ಟ ಅತ್ಯಂತ ಶೋಚನೀಯವಾಗಿತ್ತು. ಇಲ್ಲಿನ ವಿದ್ಯಾರ್ಥಿಗಳು ಅದಾವುದನ್ನೂ ಪ್ರಶ್ನಿಸುತ್ತಿರಲಿಲ್ಲ. ನಮಗೆ ಎರಡೂ ಕಡೆಯ ಅನುಭವವಿದ್ದುದರಿಂದ ಕೊಡುವ ಸೌಲಭ್ಯಗಳನ್ನು ಕಂಪೇರ್ ಮಾಡಿ ನೋಡಲು ಸಾಧ್ಯವಾಗುತ್ತಿತ್ತು. ಜೊತೆಗೆ ನಮ್ಮ ಸಹಗೆಳೆಯರೊಂದಿಗೆ ಇಲ್ಲಿನ ಕೊರತೆಗಳನ್ನು ಸಣ್ಣ ಪ್ರಮಾಣದಲ್ಲಿ ಚರ್ಚಿಸುತ್ತ ಅಸಮಧಾನ ಹೊರ ಹಾಕುತ್ತಿದ್ದೆವು. ನಾವು ಹೀಗೆ ಮಾತನಾಡುವುದನ್ನ ಕೆಲ ಹುಡುಗರು ಅಡುಗೆ ಭಟ್ಟರಿಗೆ ಇಂಚಿಂಚೂ ಬಿಡದೆ ರವಾನಿಸುತ್ತಿದ್ದರು. ಶಂಕರಮ್ಮ ಎಂಬ ಮಧ್ಯ ವಯಸ್ಸಿನ ಕರ್ರಗಿದ್ದ ಹೆಂಗಸು ಮುಖ್ಯ ಅಡುಗೆಯವರಾಗಿದ್ದರು. ಆಕೆಗೆ ನಮ್ಮ ತಕರಾರಿನ ವಿಷಯ ತಿಳಿದು ಹಟ್ಟಿಯಲ್ಲಿ ಹೆಂಗಸರು ಯಾರನ್ನೊ ಬೈದುಕೊಳ್ಳುವಂತೆ ನಮ್ಮನ್ನುದ್ದೇಶಿಸಿ ಬೈದುಕೊಳ್ಳುತ್ತಿದ್ದಳು. ಅವರ ಹಿಂಬಾಲಕ ಕೆಲ ಹುಡುಗರು ‘ಆಂಟಿ ನಮ್ಮ ತಾಯಾಣೆ ನಾವಂತು ಅಲ್ಲ’ ಎಂದು ಸ್ವಾಮಿ ನಿಷ್ಠೆ ತೋರುತ್ತಿದ್ದರು. ಆಗ ಶಂಕ್ರಮ್ಮ ‘ನಿಮ್ಮುನ್ನೆಲ್ಲ ಯಾಕನ್ನನ, ಅದರಲ್ಲ ಆ ತಿಪಟೂರ ಕೆಡಿಸಿ ಬಂದರು, ಅಲ್ಲಿ ಕೆಡಿಸಿತ್ತು ಸಾಲ್ದು ಅಂತ ಇಲ್ಲು ಕೆಡ್ಸಕೆ ಬಂದವ್ರೆ’ ಎಂದು ನಮಗೆ ಕೇಳುವಂತೆಯೇ ಚುಚ್ಚುತ್ತಿದ್ದಳು. ಉಣ್ಣುವಾಗ ತಿನ್ನುವಾಗಲಂತೂ ನಮ್ಮನ್ನುದ್ದೇಶಿಸಿಯೇ ಕೆಲವು ವಿಶೇಷ ನುಡಿಗಟ್ಟುಗಳನ್ನು ಬಳಸುತ್ತಿದ್ದಳು. ಇದರಿಂದಾಗಿ ಭಟ್ಟರೆ ತಂದೆ ತಾಯಿ ಎಲ್ಲವೂ ಎಂದುಕೊಂಡಿದ್ದ ಬಹುತೇಕ ಹುಡುಗರಿಗೆ ನಮ್ಮ ಸಹವಾಸ ಮಾಡಿದರೆ ಗೌರವ ಸಿಗಲ್ಲವೆಂದು ಅನಿಸಿ, ನಮ್ಮನ್ನ ವಿಚಿತ್ರವಾಗಿ ನೋಡುತ್ತ ದೂರ ಮಾಡಿದ್ದರು.

ಆಚಾರಿಯ ಕಣ್ಣೀರು

ಇದು ಹೀಗೆ ಇರುವಾಗ.. ಊರಿಗೆ ಬಂದ ಒಂದು ಭಾನುವಾರ ಚಿನಾಹಳ್ಳಿ ಹಾಸ್ಟೆಲ್‌ನಲ್ಲಿ ನಮಗಾಗುತ್ತಿರುವ ಅವಮಾನವನ್ನೆಲ್ಲ ಡಿಗ್ರಿ ಓದುತ್ತಿದ್ದ ಕೋಮಲಕ್ಕ ಮತ್ತು ಅಪ್ಪನ ಬಳಿ ಹೇಳಿಕೊಂಡೆವು. ಅವರೂ ಕೂಡ ಚಿಂತೆಗೀಡಾದರು. ಅಲ್ಲಿಂದ ಹಾಸ್ಟೆಲ್ಗೆ ಬಂದರೆ, ಅದೇ ಬದುಕು ಮತ್ತೆ ಮುಂದುವರೆದಿತ್ತು. ಒಂದು ದಿನ ಬೆಳ್ಳಂ ಬೆಳಗ್ಗೆ ವಾರ್ಡನ್ ನಿರಂಜನಾಚಾರಿ ಕೊಠಡಿಯ ಮುಂದೆ ಪ್ರತ್ಯಕ್ಷರಾದರು. ನಾವಿನ್ನು ಎದ್ದಿರಲೇ ಇಲ್ಲ. ಕುಳ್ಳಗೆ, ಸದಾ ಇನ್‌ಷರ್ಟ್‌ ಮಾಡಿರುತ್ತಿದ್ದ ಆತ ಅಂದು ಯಾವ ಇನ್‌ಷರ್ಟು ಇಲ್ಲದೆ ಮಕವನ್ನೂ ತೊಳೆಯದೆ ಬಂದಿದ್ದ. ಮಕದಲ್ಲಿ ಗಲಿಬಿಲಿ ಕಾಣಿಸುತ್ತಿತ್ತು. ಬಂದವರೆ ನನ್ನನ್ನು ತಮ್ಮನನ್ನು ಆಫೀಸ್ ರೂಮಿಗೆ ಬರುವಂತೆ ಕೇಳಿಕೊಂಡರು. ಸರಿ ನಾವು ಹೋದೆವು. ರೂಮು ಪ್ರವೇಶಿಸಿದ ತಕ್ಷಣ ಕೂತಿದ್ದ ಕುರ್ಚಿಯಿಂದ ಮೇಲೆದ್ದು ಕರ್ಚಿಪ್‌ನಲ್ಲಿ ಮಕ ಒತ್ತಿಕೊಳ್ಳುತ್ತ ‘ಯಾಕಿಂತ ಕೆಲಸ ಮಾಡಿರಿ, ನಾನೇನ್ ನಿಮಿಗೆ ದ್ರೋಹ ಮಾಡಿದ್ದೆ’ ಎಂದು ಕಣ್ಣೀರಾಕತೊಡಗಿದರು. ನಾವು ತಬ್ಬಿಬ್ಬು! ಏನೂ ಅರ್ಥ ಆಗಲಿಲ್ಲ. ‘ಯಾಕ್ ಸರ್, ಏನಾಯ್ತು ಸರ್, ನಾವೇನ್ ಮಾಡಿವು’ ಕೇಳುತ್ತ ಹೋದೆ. ಇದರಲ್ಲಿ ಜಯಪ್ರಕಾಶ್ ಯಾರು? ಕೇಳಿದ. ತಮ್ಮನ ಕಡೆ ತೋರಿಸುತ್ತ ಅವನೆ ಎಂದೆ. ಅವನು ಈ ಕೆಲಸ ಮಾಡಿರಲಿಕ್ಕಿಲ್ಲ, ನೀನೆ ಮಾಡಿರದು ಎಂದ. ಅವರ ಧನಿಯಲ್ಲಿ ಸೋತ ಭಾವವಿತ್ತು. ‘ಏನ್ನ ಸರ್?’ ಮತ್ತೆ ಕೇಳಿದೆ. ಜೋಬಿನಲ್ಲಿ ಮಡಚಿಟ್ಟುಕೊಂಡು ತಂದಿದ್ದ ಪ್ರಜಾಪ್ರಗತಿ ಪೇಪರನ್ನು ಟೇಬಲ್ ಮೇಲೆ ಹರಡಿದ. ಅದರಲ್ಲಿ ಹಾಸ್ಟೆಲ್ ಕರ್ಮಕಾಂಡ ಹೆಸರಿನಲ್ಲಿ ಇಲ್ಲಿನ ನಮ್ಮಗಳ ಪರಿಸ್ಥಿತಿಯನ್ನ ಇಂಚಿಂಚೂ ವಿವರಿಸಲಾಗಿತ್ತು.

ಹುಡುಗರ ಪಾಲಿನ ಯಮಧೂತ ಹನುಮಂತ ಕೊಡುತ್ತಿದ್ದ ಶಿಕ್ಷೆಗಳಿಂದ ಹಿಡಿದು ಶಂಕ್ರಮ್ಮನ ಬೈಗುಳಗಳು, ಊಟ ತಿಂಡಿಯಲ್ಲಿ ಕಾಳು ತರಕಾರಿ ಇರಲಿ ಉಪ್ಪು ಕಾರವೂ ಇಲ್ಲದಿರುವುದನ್ನ ಕಂಡಂತೆ ವಿವರಿಸಲಾಗಿತ್ತು. ಅಂತಿಮವಾಗಿ ಈ ವಾರ್ಡನ್ ಮತ್ತು ಭಟ್ಟರಿಂದ ವಿಧ್ಯಾರ್ಥಿಗಳಿಗೆ ಬಿಡುಗಡೆ ಇಲ್ಲವೆ ಎಂದು ಪ್ರಶ್ನಿಸುತ್ತ ಕೂಡಲೆ ಮೇಲಧಿಕಾರಿಗಳು ಗಮನ ಹರಿಸಬೇಕೆಂದು ವಿನಂತಿಸಲಾಗಿತ್ತು.

ತಾಲ್ಲೂಕ್ಕಿನಲ್ಲಿದ್ದ ಕ್ಲಾಸ್ ಒನ್ ಅಧಿಕಾರಿಗಳಿಂದ ಹಿಡಿದು ಡಾಕ್ಟರ್ಸ್, ಇಂಜಿನಿಯರ್ಸ್, ಶಿಕ್ಷಕರುಗಳೆಲ್ಲ ತಮ್ಮ ಮಕ್ಕಳನ್ನ ಇಲ್ಲೇ ಓದಿಸುತ್ತಿದ್ದರು. ಡಿವಿಪಿ ಏಡೆಡ್ ಸ್ಕೂಲ್ ಆದ್ದರಿಂದ ಫೀಸ್ ಕಡಿಮೆ ಇದ್ದು ಕೂಲಿಕಾರ್ಮಿಕರು, ಬೀದಿ ವ್ಯಾಪಾರಿಗಳು, ಸಂತೆ ಸಾಬ್ರು ಇತ್ಯಾದಿಗಳೂ ಸಹ ತಮ್ಮ ಮಕ್ಕಳನ್ನ ಡಿವಿಪಿಗೆ ಸೇರಿಸಲು ಅನುಕೂಲವಾಗಿತ್ತು.

ಎಲ್ಲವನ್ನೂ ಓದಿ ಮುಗಿಸುವವರೆಗೂ ನಮ್ಮನ್ನೇ ದಿಟ್ಟಿಸುತ್ತ ಮೌನವಾಗಿದ್ದ ನಿರಂಜನಾಚಾರಿ, ಇದೆಲ್ಲ ನಿಜನ? ಕೇಳಿದರು. ಆ ವಯಸ್ಸಿನಲ್ಲೂ ಅದೆಲ್ಲಿತ್ತೊ ಧೈರ್ಯ ‘ಹೌದು ಇದೆಲ್ಲೆವೂ ನಿಜ, ಇದನ್ನು ಬರೆದದ್ದು ನಾನೆ’ ಎಂದು ಆತನ ಮುಂದೆ ಮರು ಮಾತಾಡದೆ ಸಮರ್ಥಿಸಿಕೊಂಡೆ. ಈ ರೀತಿ ನೇರಾ ನೇರಾ ಒಪ್ಪಿಕೊಳ್ಳುವುದನ್ನ ನಿರೀಕ್ಷಿಸದಿದ್ದ ಆತ ದಿಗ್ಬ್ರಾಂತನಾದ. ‘ಸರಿ ಇದೆಲ್ಲವನ್ನ ಮೊದಲೆ ನನಗೆ ತಿಳಿಸಬೇಕಿತ್ತಲ್ಲವೆ? ಪತ್ರಿಕೆಯಲ್ಲಿ ಬರೆಯುವ ಅವಶ್ಯಕತೆ ಏನಿತ್ತು? ನನಗೂ ಹೆಂಡ್ತಿ ಮಕ್ಳು ಇದಾರೆ. ನಮ್ಮುನ್ನ ಬೀದಿಪಾಲು ಮಾಡಬೇಕು ಅಂತನ ನಿಮ್ಮಾಸೆ. ಇಲ್ಲಿ ಬಂದಿರ ಸುದ್ದಿಯಿಂದ ಮೇಲಧಿಕಾರಿಗಳು ನನ್ನ ಕೆಲ್ಸಕ್ಕೆ ಕುತ್ತು ತರ್ತರೆ ಆಗ ನಿಮಿಗೆ ಸಮಧಾನ ಆಗ್ಲಿ’ ಎಂದು ಕಣ್ಣೀರಾಗತೊಡಗಿದ. ಖಡಕ್ ಇನ್‌ಷರ್ಟ್‌ನ ನಮಗಿಂತಲೂ ಅದೆಷ್ಟೋ ಪಾಲು ಹಿರಿಯನಾದ ವಾರ್ಡನ್ ಹೀಗೆ ಕಣ್ಣೀರಾಕುತ್ತಿರುವುದರಿಂದ ಹುಡುಗರಾದ ನಮಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದಾಯಿತು. ಆತ ಅದೆಷ್ಟು ಕೊರಗಿ ಮರುಗಿ ಸೊರಗಿದರೂ ನಮ್ಮ ನಿಲುವಿನಲ್ಲಿ ಬದಲಾವಣೆ ಕಾಣಲೇ ಇಲ್ಲ. ಅಂತಿಮವಾಗಿ ಆತ ಅಡುಗೆ ಮನೆಯಿಂದ ಭಟ್ಟರನ್ನ ಬರ ಹೇಳಿದ. ಏನೂ ಗೊತ್ತಿರದ ಅವರು ಅದೇ ವೀರಾವೇಷದಿಂದ ಆಫೀಸ್ ರೂಮ್ ಪ್ರವೇಶಿಸಿದರು. ಹನುಮಂತ ಮತ್ತು ಶಂಕ್ರಮ್ಮರನ್ನು ಕುರಿತು, ಪತ್ರಿಕೆಯಲ್ಲಿನ ಅವರ ಭಾಗವನ್ನು ಮಾತ್ರ ಓದಿ ಹೇಳಿ ನೀವು ಹೀಗೆಲ್ಲ ಶಿಕ್ಷಿಸಬಹುದೆ? ನಿಮ್ಮಿಂದಾಗಿ ಇವತ್ತು ನಮ್ಮೆಲ್ಲರಿಗೂ ಕುತ್ತು ಬಂತು ಎಂದು ಬಾಯಿಗೆ ಬಂದಂತೆ ರೇಗತೊಡಗಿದ. ಹನುಮಂತ ಕರಗಿ ಹೋದರೆ, ಶಂಕ್ರಮ್ಮ ಅಳುತ್ತಲೆ ಸೆರಗ ಮೂಗಿಗೊಡ್ಡಿ ಮುಸುಗುಡತೊಡಗಿದಳು. ಕೆಂಡಾ ಮಂಡಲನಾದ ವಾರ್ಡನ್ ನೀವು ಮಾಡಿದ ತಪ್ಪಿಗೆ ಇವರ ಬಳಿ ಸಾರಿ ಕೇಳಿ ಎಂದು ಹೊಸ ವರಸೆ ತೆಗೆದ. ಮುಂಗೋಪಿಯಾಗಿದ್ದ ಹನುಮಂತ ತನ್ನ ಎರೆಡೂ ಕೈಗಳನ್ನ ಜೋಡಿಸಿ ‘ನಿಮ್ಮ ಸವಾಸ್ ಬರಲ್ಲ ಕಣ್ರಪ್ಪ ಇನ್ಮೇಲೆ’ ಎಂದು ದಡಿದಡಿನೆ ಹೊರಟು ಹೋದ. ಶಂಕ್ರಮ್ಮಳೂ ಗೊಣಗುತ್ತಲೇ ಹನುಮಂತನನ್ನು ಹಿಂಬಾಲಿಸಿದಳು.

ಅದೇ ಹೊತ್ತಿಗೆ ನಿರಂಜನಾಚಾರಿಯ ಆಪ್ತಮಿತ್ರ ಕಾಲೇಜ್ ಹಾಸ್ಟೆಲ್ ನಡೆಸುತ್ತಿದ್ದ ಲಕ್ಷ್ಮಣ್ಣ ಎಂಬ ಮತ್ತೊಬ್ಬ ವಾರ್ಡನ್ ಆಫೀಸ್ ರೂಮ್ ಪ್ರವೇಶಿಸಿದ. ಯಾವಾಗಲೂ ಜೊತೆಯಲ್ಲಿರುತ್ತಿದ್ದ ಅವರಿಬ್ಬರು ಹಕ್ಕಬುಕ್ಕರೆಂದೇ ಖ್ಯಾತರಾಗಿದ್ದರು. ಒಬ್ಬರಿಗಿಂತ ಒಬ್ಬರು ಐನಾತಿ ಎಂದು ಗುರುತಿಸಿಕೊಂಡಿದ್ದರು. ಲಕ್ಷ್ಮಣ್ಣ ಬಂದವನೆ, ‘ಇವ್ರು ಒಳ್ಳೆ ಹುಡುಗ್ರು, ಇವ್ರ ಮಾವ ಎಲ್ಲ ನನಿಗೆ ಪರಿಚಯದವರೆ, ಆ ಲಂಬಾಣಿ ಹುಡುಗ್ರ ಜೊತೆ ಸೇರಿ ಹಾಳಾಗಿ ಹೋಗವ್ರೆ’ ಎನ್ನುತ್ತ ‘ಪಾಪ ಆಚಾರಿಗೆ ಇನ್ನ ಪ್ರೊಬೇಷನರಿ ಪಿರಿಯಡ್ ಕೂಡ ಆಗಿಲ್ಲ. ಈ ಟೈಮಲ್ಲೆ ಇಂಗೆ ಕಂಪ್ಲೇಂಟ್ ಬಂದ್ರೆ ಕೆಲಸದಿಂದ ತೆಗೆದಾಕಿಬಿಡ್ತರೆ, ಸರ್ಕಾರದವ್ರು ದುಡ್ಡಾಕದು ಯಾವಾಗ್ಲೊ ಏನೊ ಕೈಯಿಂದ ದುಡ್ಡಾಕಿ ಸಾಲ ಸೂಲ ಮಾಡಿ ಹಾಸ್ಟ್ಲು ನೆಡುಸ್ತಾ ಅವ್ನೆ, ಈ ಟೈಮಲ್ಲಿ ಇಂಗೆ ಮಾಡ್ಬಾರ್ದಾಗಿತ್ತು, ನನ್ಗಾರ ಹೇಳಿದ್ರೆ, ನಾನ್ ಸರಿ ಮಾಡುಸ್ತಿರ್ಲಿಲ್ವ?’ ಎಂದು ಹೆಗಲ ಮೇಲೆ ಕೈಯಾಕಿ ವಕಾಲತ್ತು ವಹಿಸಿದ.

ಲಕ್ಷ್ಮಣ್ಣ ಹೇಳದ್ರಲ್ಲಿ ಒಂದರ್ಧ ನಿಜ ಇತ್ತು. ಆಚಾರಿ ಮೇಲೆ ಯಾವಾಗ ಸರಿಯಾಗಿ ನೆಡುಸ್ತಿಲ್ಲ ಅಂತ ಕಂಪ್ಲೆಂಟ್ ಬಂತೊ, ಅದನ್ನೆ ಕಾಯ್ತಿದ್ದ ಮೇಲಧಿಕಾರಿಗಳು ಇದನ್ನೆ ಕುಟ್ಟು ಮಾಡ್ಕೆಂಡು ಆಚಾರಿಯಿಂದ ಈಗ ಪಡೆಯುತ್ತಿರುವ ಪರ್ಸಂಟೇಜ್ ಜೊತೆಗೆ ಇನ್ನ ಹೆಚ್ಚಿಗೆ ಪೀಕುವ ಅಪಾಯವಿತ್ತು. ಹಾಗಾಗಿ ಮಕ್ಕಳಿಗೆ ಮಾಡಿ ಹಾಕಿದಂತೆಯೂ ಅಲ್ಲ, ಇತ್ತ ಆಚಾರಿನೂ ತಿಂದಗಲ್ಲ, ಮಧ್ಯದವ್ರಿಗೆ ಲಾಭ ಆದಂಗಾತು ಎಂಬುದು ಲಕ್ಷ್ಮಣ್ಣನ ಒಟ್ಟಾರೆ ತಾತ್ಪರ್ಯವಾಗಿತ್ತು.

ಅಂತು ಇಂತು ನೀವು ಹೇಗೆ ಹೇಳ್ತಿರೊ ಹಾಗೆ ಹಾಸ್ಟೆಲ್ ನಡೆಸ್ತಿನಿ, ಮೇಲಧಿಕಾರಿಗಳು ಬಂದು ಕೇಳಿದರೆ ವಾರ್ಡನ್ದೇನು ತಪ್ಪಿಲ್ಲ ಎಂದು ಹೇಳಿಸಿಕೊಳ್ಳುವ ಮಟ್ಟಿಗೆ ಸಂಧಾನ ಏರ್ಪಟ್ಟಿತು. ಆಫೀಸ್ ರೂಮಿಂದ ಹೊರಬರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿ ಎಲ್ಲಾ ವಿದ್ಯಾರ್ಥಿಗಳಿಗೂ ಹರಡಿ ಅವರೆಲ್ಲ ನಮ್ಮನ್ನ ವಿಶೇಷವಾಗಿ ಗಮನಿಸುತ್ತಿದ್ದರು. ಹನುಮಂತನಂತೂ ಊಟದ ಹಾಲಿಗೆ ಬಂದು ತಾನು ಮಡಗಿದ್ದ ಕೋಲನ್ನ ಎಲ್ಲರ ಎದುರಿಗೇ ಮುರಿದು ಹಾಕಿ ‘ಇನ್ಮೇಲೆ ನೀವು ಓದಿರ ಬಿಟ್ರ ಏನ್ನೂ ಕೇಳಲ್ಲ, ನಮ್ಮ ಕೆಲ್ಸ ಎಷ್ಟೈತ ಅಷ್ಟ್ ಮಾಡ್ಕೆಂಡು ಹೋಗ್ತಿನಿ, ಯಾರ್ ಯಂಗಾರ ಹಾಳಾಗೋಗ್ರಿ’ ಎಂದು ಘೋಷಣೆ ಮಾಡಿಬಿಟ್ಟ.

ಆ ದಿನ ಮಧ್ಯಾಹ್ನ ಶಾಲೆಯಲ್ಲಿದ್ದಾಗ ಕರೆ ಬಂತು. ಹೊರಗಡೆ ಅದೆ ಹಕ್ಕಬುಕ್ಕರಿದ್ದರು. ಸಮಾಜ ಕಲ್ಯಾಣಾಧಿಕಾರಿಗಳು ಮತ್ತು ಇ.ಒ ಸಾಹೇಬ್ರು ದಿನಪತ್ರಿಕೆಯಲ್ಲಿನ ಸುದ್ದಿ ನೋಡಿ ಸತ್ಯಾಸತ್ಯತೆ ಪರಿಶೀಲಿಸಿ ವಾರ್ಡನ್ ಮೇಲೆ ಕ್ರಮ ಕೈಗೊಳ್ಳಲು ನಮ್ಮನ್ನು ಕರೆದುಕೊಂಡು ಬರುವಂತೆ ಹೇಳಿ ಕಳಿಸಿದ್ದರು. ಬಿ.ಹೆಚ್‌. ರೋಡ್‌ನ ಕೆ.ಇ.ಬಿ ಹತ್ತಿರವಿದ್ದ ತಾಲ್ಲೂಕ್ ಪಂಚಾಯ್ತಿ ಇ.ಒ ಆಫೀಸ್ಗೆ ಕರೆದುಕೊಂಡು ಹೋದರು. ಹೋಗುವ ದಾರಿಯಲ್ಲಿ ಲಕ್ಷ್ಮಣ್ಣ ‘ಆಚಾರಿ ಬೆಳಿಗ್ಗಿಂದ ಮಕನೂ ತೊಳೆದಿಲ್ಲ, ಊಟನೂ ಮಾಡಿಲ್ಲ, ಆತನನ್ನ ರಕ್ಷಿಸೋದು ಬಿಡೋದು ನಿಮ್ಮ ಕೈಲಿದೆ’ ಎಂದು ಹೇಳಿಕೊಂಡು ಹೋದ. ಇ.ಒ. ಕಛೇರಿಯಲ್ಲಿ ನಮಗೆ ಆದರದ ಆತಿಥ್ಯ ಕಾದಿತ್ತು. ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ನಾವು ನಿಂತೆ ಇದ್ದೆವು. ಕೊನೆಗೂ ಬಲವಂತವಾಗಿ ಕುಳ್ಳಿರಿಸಿದರು. ಇ.ಒ. ಪತ್ರಿಕೆಯನ್ನು ತೋರಿಸುತ್ತ ‘ಇದರಲ್ಲಿ ಬರೆದಿರುವುದೆಲ್ಲ ನಿಜನ?’ ಕೇಳಿದರು. ಹೌದು ಸರ್ ನಿಜ. ಮತ್ತೊಮ್ಮೆ ಕೇಳಿದರು ‘ಹಾಸ್ಟೆಲ್‌ನಲ್ಲಿ ಏನೇನು ತೊಂದರೆ ಇದೆ?’. ಈಗ ಉಳಿದ ವಿಷಯಗಳೆಲ್ಲ ಗೌಣವಾಗಿ ಹನುಮಂತ ಹೊಡೆಯುವುದು ಬಡಿಯುವುದೇ ಮುನ್ನೆಲೆಗೆ ಬಂತು. ಸರಿ ನೀವು ಹೊರಡಿ ಎಂದರು. ಹಕ್ಕಬುಕ್ಕರು ಅಲ್ಲೆ ನಿಂತಿದ್ದರು.

ಆ ದಿನದ ರಾತ್ರಿ ಊಟದಲ್ಲೇ ಸಾಕಷ್ಟು ಮಾರ್ಪಾಡುಗಳಾಗಿದ್ದವು. ಮೊಟ್ಟೆ ಬಾಳೆಹಣ್ಣು ಒಟ್ಟಿಗೆ ಬಂದಿದ್ದವು. ಎರೆಡೆರಡು ಸರ್ತಿ ಅನ್ನವನ್ನ ಕೇಳಿ ಹಾಕಿದರು. ಇತರೆ ಹುಡುಗರಿಗೆ ನಿಧಾನಕ್ಕೆ ಇದೆಲ್ಲ ಆಗಿದ್ದು ಸರಿ ಅನಿಸತೊಡಗಿತು. ಪತ್ರಿಕೆಯಲ್ಲಿ ಕತೆ ಕವನ ಬರೆಯುವ ಹವ್ಯಾಸವಿದ್ದ ನಮ್ಮಕ್ಕ, ನಮ್ಮಗಳ ವ್ಯಥೆಯನ್ನೆಲ್ಲ ಕೇಳಿದ ಮೇಲೆ ತಮ್ಮ ಜಯಪ್ರಕಾಶನ ಹೆಸರಿನಲ್ಲಿ ಪತ್ರಿಕೆಯಲ್ಲಿ ಪ್ರಶ್ನಿಸಿದ್ದ ಆ ಸುದ್ದಿ ಮುಂದಿನ ನಮ್ಮ ಹಾಸ್ಟೆಲ್ ಜೀವನವನ್ನ ಬೇರೊಂದು ಬಗೆಯಲ್ಲಿ ರೂಪಿಸಿದ್ದು ಸುಳ್ಳಲ್ಲ. ಹಾಸ್ಟೆಲ್ಗೆ ಬಡಿದಿದ್ದ ಗ್ರಹಣವನ್ನೂ ತಕ್ಕ ಮಟ್ಟಿಗೆ ಬಿಡಿಸಿತ್ತು.