ದೀಪೋಲಿ ಪರ್ಬ ಯಾವಾಗ ಬಲಿಯೇಂದ್ರ..?

ತಲೆಗೆ ಸುತ್ತಿದ ದೊಡ್ಡ ಬಿಳಿ ಮುಂಡಾಸು, ಬಿಳಿ ಶರಟು, ಮುಂಡು ಉಟ್ಟ ಉದ್ದ ಮೀಸೆಯ ಬಲಿಯೆಂದ್ರ ಪಾಡ್ದನ ಹೇಳುತ್ತ ಬರುವ ‘ಬಲಿಯಂದ್ರ’ ನಮ್ಮ ಕೋಟೆ ಗ್ರಾಮಕ್ಕೆ ಪ್ರವೇಶ ಮಾಡಿದನೆಂದರೆ ಇನ್ನು ದೀಪಾವಳಿ, ಬಲಿಪಾಡ್ಯಮಿಗೆ ಎರಡು ಅಥವಾ ಮೂರು ದಿನಗಳಿರುವುದೆಂದು ಅರ್ಥ. ಅವನ ಒಂದು ಬಗಲಲ್ಲಿ ಉದ್ದದ ತಂತಿ ಇರುವ ಗುಮಟೆ. ಇನ್ನೊಂದು ಬಗಲಲ್ಲಿ ಜೋಳಿಗೆ. ಅವನು ಹಾಡುವುದರ ಅರ್ಥ ಕೇಳಬೇಕಿದ್ದರೆ ಅಪ್ಪಿ ಪೂಜಾರ್ತಿಯನ್ನೋ, ಇಲ್ಲ ನನ್ನ ಗೆಳೆಯ ಯಾದು ಯಾನೆ ಯಾದವನ ಅಪ್ಪ ಕಾಡ್ಯ ಪೂಜಾರಿಯನ್ನೋ ಕೇಳಬೇಕು. ಆದರೆ ಅವನ ಗುಮುಟೆಯಲ್ಲಿ ಹೊರಡುವ ಡುಂಯ್… ಗುಂಯ್ ಶಬ್ದ ಒಂದು ರೀತಿಯಲ್ಲಿ ತೆಂಗಿನ ಮರದ ಎಳೇ ಸಿರಿ ಒಲಿಯನ್ನು ತಿನ್ನುವ ಕಪ್ಪು ಕರುಡಿಗೆ(ವಜ್ರ ದುಂಬಿ) ಹಾರುವಾಗ ಮೂಡುವ ಗುಂಯ್… ಸದ್ದಿನಂತೆ ತುಂಬ ಇಂಪಾಗಿತ್ತು. ಅವನು ಮೊದಲು ಕೋಟೆ ಬೀಡಿನ ಮನೆಗೆ ಹೋಗಿ ಅಲ್ಲಿ ಡುಂಯ್‌ಗುಡುತ್ತಾ ಹಾಡುವಾಗ ಬೀಡಿನ ಮಾಡೇರ ದೊಡ್ಡ ಕರಿನಾಯಿ ಅದೇನೋ ದೊಡ್ಡ ಆಪತ್ತು ಬಂತೆಂಬಂತೆ ಇಡೀ ಹಳ್ಳಿ ಎಚ್ಚರಾಗುವಂತೆ ಬೊಗಳತೊಡಗುತ್ತದೆ. ಅಲ್ಲಿ ಕೊಟ್ಟ ಪಡಿ ಅಕ್ಕಿಯನ್ನು ಜೋಳಿಗೆಯಲ್ಲಿ ತುಂಬಿಸಿಕೊಂಡು ಬಯಲು ಗದ್ದೆಯ ಕಟ್ಟ ಪುಣಿಯಲ್ಲಿ ನಡೆದು ಬರುವಾಗ ಗ್ರಾಮದ ಎಲ್ಲ ನಾಯಿಗಳೂ ಒಟ್ಟಾಗಿ ಕರ್ಕಶವಾಗಿ ಕೂಗುತ್ತ, ಬೊಗಳುತ್ತ ಅವನಿಗೆ ಸ್ವಾಗತ ನೀಡುತ್ತವೆ.

ಬಲಿಯೆಂದ್ರ ತೋಡಿನ ಪಾಪು ದಾಟಿ ದೇಜುಮಾಸ್ಟ್ರ ಮನೆಯ ಎದುರಿನ ನಮ್ಮ ತೆಂಗಿನ ತೋಟದ ಮೆಟ್ಟಿಲು ಹತ್ತಿ ಬರುವಾಗ ಊರ ಚಳ್ಳೆ ಪಿಳ್ಳೆ ಮಕ್ಕಳೆಲ್ಲ ಸಾಲುಗಟ್ಟಿ ಅವನ ಹಿಂದೆ ‘ಓ… ಬಲಿಯಂದ್ರ, ಓ..” ಎಂದು ಕೂಗುತ್ತ ಮೆರವಣಿಗೆ ಬರ ತೊಡಗಿದಾಗ ಅವನಿಗೆ ಮುಜುಗರ, ಕಿರಿಕಿರಿಯಾಗಿ “ಒರ ಪೋಪರಾ ಇಜ್ಜಾ ಜೋಕುಲೆ…” ಎಂದು ಗದರಿಸುವನು. ಅವನ ಗದರಿಕೆಗೆ ಸೊಪ್ಪು ಹಾಕದ ಪಡ್ಡೆ ಹುಡುಗರು ಅವನನ್ನು ರೇಗಿಸುವುದಕ್ಕಾಗಿಯೇ “ದೀಪೋಲಿ ಪರ್ಬ ಯಾವಾಗ ಬಲಿಯೆಂದ್ರ..?” ಎಂದು ಕೇಳುತ್ತಾರೆ. ಅವನೆಲ್ಲಿಯಾದರೂ ಅವರ ಪ್ರಶ್ನೆಗೆ ಉತ್ತರಿಸಿದರೆ ಮತ್ತೊಂದು ಪ್ರಶ್ನೆ ತಯಾರಾಗಿರುತ್ತಿತ್ತು, “ಸೈತಿನಕ್ಲೆ ಪರ್ಬ, ಇತ್ತಿನಕ್ಲೆ ಪರ್ಬ ಯಾವಾಗ? ” ಆದರೆ ಇದೆಲ್ಲ ಮಸಲತ್ತು ತಿಳಿದ ಅವನು ಈ ಮಕ್ಕಳೊಂದಿಗೆ ಮಾತಾಡಿ ಏನೂ ಉಪಯೋಗವಿಲ್ಲವೆಂದು ತೀರ್ಮಾನಿಸಿ ಸುಮ್ಮನೆ ನಡೆಯುತ್ತಿರುತ್ತಾನೆ. ನಾಯಿಗಳು ಬೊಗಳುತ್ತಿದ್ದಂತೆ ಮಕ್ಕಳು ಅವನ ಹಿಂದೆ ಬಾಲದಂತೆ ಸಾಲು ಕಟ್ಟಿ ಓ… ಎಂದು ಕೂಗುತ್ತಿದ್ದಂತೆ ತಾಳ್ಮೆಯ ಸಾಕಾರ ಮೂರ್ತಿಯಂತೆ ಬಲಿಯಂದ್ರ ನಡೆಯುತ್ತಾನೆ.

ಊರು ಪ್ರವೇಶ ಮಾಡಿದ ಅವನು ಆರಿಸಿದ ಕೆಲವು ಮನೆಗಳಿಗೆ ಮಾತ್ರ ಪ್ರವೇಶಿಸಿ ಬಲಿಯಂದ್ರ ಪಾಡ್ದನದ ಕೆಲವು ಸೊಲ್ಲನ್ನು ಹಾಡುತ್ತಾನೆ. ಅವನು ಮೊದಲು ಹೋಗುವುದು ನಮ್ಮ ತೋಟದ ಗಡಿಗೆ ತಾಗಿಯೇ ಇರುವ ಯಾದುನ ಮನೆಗೆ. ಅವನ ತಂದೆ ಕಾಡ್ಯ ಪೂಜಾರಿ ಊರ ಗುರಿಕಾರ. ತೆಂಗಿನಮರದಿಂದ ಕಳ್ಳು ತೆಗೆದು ಕಾಡ್ಯ ಪೂಜಾರಿ ಕೆಳಗಿಳಿದು ಬಂದವನೇ ಮೊದಲು ಮಕ್ಕಳನ್ನು ಗದರಿಸಿ ಓಡಿಸಿದ. ಒಂದೇ ಸವನೆ ಕೂಗುತ್ತಿದ್ದ ತನ್ನ ನಾಯಿಗೂ ಚೂ… ಹಚಾ… ಎಂದು ಜೋರು ಮಾಡಿ ಕಲ್ಲೆಸೆವಂತೆ ನಟಿಸಿ ದೂರ ಅಟ್ಟಿದ. ಸೊಂಟಕ್ಕೆ ಕಟ್ಟಿದ ಪಟ್ಟಿಯ ಕೊಕ್ಕೆಯಲ್ಲಿ ನೇತಾಡುವ ದೊಡ್ಡ ಸೋರೆಕಾಯಿಯಿಂದ ಮಾಡಿದ ಕಳ್ಳಿನ ಅಂಡೆಯನ್ನು ತೆಗೆದಿಟ್ಟ.. ತೆಂಗಿನ ಎಳೇ ಹೂ ಕೊಂಬನ್ನು ಸವರುವ, ಕಮ್ಯುನಿಸ್ಟ್ ಲಾಂಚನದಲ್ಲಿರುವ ಕತ್ತಿಯಂತಹ ಹರಿತವಾದ ತರ್ಕತ್ತೆ ಎಂಬ ಕತ್ತಿ, ಸವರುವ ಮುಂಚೆ ಸರಿಯಾಗಿ ನೀರಾ ಇಳಿಯವಂತೆ ಕೊಂಬಿಗೆ ನಯವಾಗಿ ಬಡಿಯವ ಎಲುಬಿನಿಂದ ತಯಾರಿಸಿದ ಸುತ್ತಿಗೆ ಎರಡೂ ಸೊಂಟಕ್ಕೆ ಕಟ್ಟಿದ ಪಟ್ಟಿಯಲ್ಲಿ ನೇತಾಡುತ್ತಿದ್ದವು. “ಗುರ್‍ಕಾರ್‍ಲೆಗ್ ನಮಸ್ಕಾರ” ಎನ್ನುತ್ತ ಬಲಿಯೆಂದ್ರ ಅವರ ಮನೆಯ ಜಗಲಿಯಲ್ಲಿ `ಉಸ್ಸಪ್ಪಾ..’ ಎನ್ನುತ್ತಾ ಕೂತ. ಕಾಡ್ಯಣ್ಣ ಗಂಭೀರವಾಗಿ ಅವನತ್ತ ನೋಡಿ `ಹೂಂ… ನಮಸ್ಕಾರ…’ ಎಂದ. ಅಂಡೆಯನ್ನು ಎರಡು ಕಾಲುಗಳ ಮಧ್ಯೆ ಇಟ್ಟುಕೊಂಡು, ಉದ್ದ ಕೋಲಿನ ತುದಿಗೆ ಕಟ್ಟಿದ ಬ್ರಶ್‌ನಂತಹ `ಬುರುಸ್’ ಅನ್ನು ಅಂಡೆಯೊಳಗೆ ಹಾಕಿ ಮೊಸರು ಕಡೆಯವಂತೆ ಎರಡು ಅಂಗೈಯ ಮಧ್ಯೆ ಇಟ್ಟು ಸ್ವಲ್ಪ ಹೊತ್ತು ಗರ ಗರ ತಿರುಗಿಸಿ ನಂತರ ಕಳ್ಳನ್ನು ಮಣ್ಣಿನ ಮಡೆಕೆಗೆ ಸುರಿದ. ಕಳ್ಳು ನೋಡಿ ಮೀಸೆ ತಿರುವುತ್ತ ಬಲಿಯೆಂದ್ರ ನಕ್ಕಾಗ ಕಾಡ್ಯ ಪೂಜಾರಿಗೆ ಅವನ ಇಂಗಿತ ತಿಳಿಯಿತು. ಜಗಲಿಯಲ್ಲಿ ಕೂತಲ್ಲೇ ತನ್ನ ಗುಮಟೆಯ ಸರಿಗೆಯನ್ನು ಮೀಟಿ ಡುಂಯ್.. ಗುಂಯ್ ಮಾಡುತ್ತಾ ಬಲಿಯಂದ್ರ ಪಾಡ್ದನ ಹಾಡತೊಡಗಿದ. ನನಗೆ ಅದರ ಒಂದು ಶಬ್ದವೂ ತಿಳಿಯಲಿಲ್ಲ. ಒಂದೆರಡು ನಿಮಿಷ ಹಾಡಿ ಮತ್ತೆ ನಿಲ್ಲಿಸಿದ. ಕಾಡ್ಯ ಪೂಜಾರಿಯ ಮಗಳು ಮೀನ ಕನ್ನಡಿ ವಾಡರ್‍ಲು ಮಾಡಿದ ಪುಟ್ಟ ಹೂಜಿಯಂತಹ ಕುಪ್ಪಿಯಲ್ಲಿ `ಒಂದು ಕುಪ್ಪಿ’ ಕಳ್ಳು, ಅದನ್ನು ಕುಡಿಯಲು ಮೊಗೆಯುವುದಕ್ಕೆ ಒಂದು ಗ್ಲಾಸು, ಜೊತೆಗೆ ಒಂದಿಷ್ಟು ಉಪ್ಪಿನಕಾಯಿ ತಟ್ಟೆಯಲ್ಲಿ ತಂದು ಅವನ ಮುಂದಿಟ್ಟಳು.. ಅಲ್ಲೆಲ್ಲ ಕಳ್ಳಿನ ವಾಸನೆ ಗವ್ವನೆ ಹಬ್ಬಿತು. ನನಗೆ ಉಸಿರು ಕಟ್ಟುವಂತಾದರೂ ಕಾಡ್ಯ ಪೂಜಾರಿಯಿಂದ ಬಲಿಯಂದ್ರನ ಬಗ್ಗೆ ಕೇಳುವ ಉತ್ಸಾಹದ ಮುಂದೆ ಅದೆಲ್ಲ ಯಾವುದೂ ಗಣನೆಗಿಲ್ಲ. ಬಲಿಯಂದ್ರ ಕುಪ್ಪಿಯ ಕಳ್ಳನ್ನು ಗ್ಲಾಸಿಗೆ ಸುರಿದು ಕುಡಿದ. ತನ್ನ ಉದ್ದದ ಮೀಸೆಯನ್ನು ಬೆರಳಿಂದ ತೀಡಿ, ಅದೇ ಬೆರಳಿಂದ ಉಪ್ಪಿನಕಾಯಿ ಸೀಂಟಿ ತೆಗೆದು ನಾಲಗೆಗೆ ತಗಲಿಸಿ ಚಪ್ಪರಿಸಿದ. ಸೀಟುತ್ತ ಸವಿಯತ್ತ, ನಾಲಗೆ ತಟ್ಟಿ ಚಪ್ಪರಿಸುತ್ತ ಇಷ್ಟಿಷ್ಟೇ ಕುಪ್ಪಿಯ ಕಳ್ಳು ಕುಡಿದು ಖಾಲಿ ಮಾಡಿದ ಬಲಿಯಂದ್ರ ಡರ್ರನೆ ತೇಗು ಬಿಟ್ಟ. ಮತ್ತಷ್ಟು ಹುಳಿವಾಸನೆ ಗಾಳಿಯಲ್ಲಿ ತೇಲಿ ಬಂತು. ಕಾಡ್ಯ ಪೂಜಾರಿಯ ಹೆಂಡತಿ ಗಂಗೆ ಪೂಜಾರತಿ ಗೆರಸೆಯಲ್ಲಿ ಒಂದು ಪಾವಿನಷ್ಟು ಅಕ್ಕಿ ತಂದು ಬಲಿಯಂದ್ರನ ಮುಂದಿಟ್ಟಳು. ಜೋಳಿಗೆಗೆ ಅಕ್ಕಿ ತುಂಬಿಸಿಕೊಂಡು ಗುಮಟೆ ಹಿಡಿದುಕೊಂಡು ಇನ್ನೊಂದು ಮನೆಕಡೆ ಬಲಿಯಂದ್ರ ಹೊರಟು ನಿಂತ.

ಮತ್ತೆ ನಾಯಿಗಳು, ಪಡ್ಡೆ ಮಕ್ಕಳ ಗದ್ದಲ ಶುರುವಾಯಿತು. ನನ್ನನ್ನು ಕಂಡು ಗಂಗಕ್ಕ ” ಬಲ, ಮಗ ಉಲಾಯಿ ಬಲ್ಲ..” ಎಂದು ನನ್ನನ್ನು `ಎಂಕ್ಲೆ ಗುರ್‍ಕುಲೆ ಮಗೆ..’ ಎಂದು ನನ್ನನ್ನು ಹೊರಟು ನಿಂತ ಬಲಿಯಂದ್ರನಿಗೆ ಪರಿಚಯಿಸುತ್ತ ಮನೆಯ ಒಳಗೆ ಕರೆದಳು. ನನಗೆ ಕಳ್ಳಿನ ವಾಸನೆಯಲ್ಲಿ ನಿಲ್ಲಲಾಗದೆ “ಇನ್ನೊಮ್ಮೆ ಬರ್ತೇನೆ..” ಎಂದು ಅಲ್ಲಿಂದ ಹೊರಟೆ. ಬಲಿಯೆಂದ್ರನ ಬಗ್ಗೆ ಕೇಳಬೇಕೆಂದುಕೊಂಡದ್ದೂ ಮರೆತು ಹೋಗಿತ್ತು. ಗಂಗೆ ಪೂಜಾರತಿ ” ಒಂದು ಓಲೆ ಬೆಲ್ಲವಾದ್ರೂ ತಿಂದು ಹೋಗು ಮಗಾ..” ಎಂದು ಕರೆದಳು. ನಾನಾಗಲೇ ಹೊರಟು ಬಿಟ್ಟಿದ್ದೆ. ಕಳ್ಳಿನ ರೂಪದಲ್ಲಿರುವಾಗ ಕೆಟ್ಟ ವಾಸನೆ ಹರಡುತ್ತದೆ. ಆದರೆ ಈ ತೆಂಗಿನ ಮರದ ನೀರಾವನ್ನು ಬೇಯಿಸಿ ಮಾಡುವ ಓಲೆ ಬೆಲ್ಲದ ಕಂಪು ಅದೆಷ್ಟು ಆಪ್ಯಾಯಮಾನಕರವಾದದ್ದು! ಎಷ್ಟೊಂದು ರುಚಿ! ನಾನು ಹೊರಟು ನಿಂತದ್ದು ಕಂಡ ಗಂಗೆ ಪೂಜಾರತಿ “ದೀಪೋಲಿ ಪರ್ಬಕ್ಕೆ ಬಾ ಮಗೂ..” ಎಂದು ಹೇಳಲು ಮರೆಯಲಿಲ್ಲ.

`ಊರಿಡೀ ನಡುಗುವಂತಾ ಕದೋನಿ ಕೊಡಿಸುತ್ತೇನೆ` ಎಂದ ಬಾಪಾ 

ಎಲ್ಲ ಹಬ್ಬಗಳಿಗಿಂತ ದೀಪಾವಳಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಹೆಚ್ಚು ಸಡಗರ. ಹೊಸ ಬಟ್ಟೆಗಳನ್ನು ಖರೀದಿಸುವುದು, ಪಟಾಕಿಗಳನ್ನು ಖರೀದಿಸುವುದು. ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ ಇವುಗಳನ್ನೆಲ್ಲ ಸಂಜೆ ಆಟದ ಬಯಲಲ್ಲಿ ವಿವರವಾಗಿ ಗೆಳೆಯರೊಂದಿಗೆ ಹೇಳಿಕೊಂಡು ಸಂಭ್ರಮ ಪಡುವುದು. ಗೆಳೆಯರೆಲ್ಲ ತಮ್ಮ ದೀಪಾವಳಿ ಖರೀದಿಯ ಬಗ್ಗೆ ನನಗೆ ವಿವರ ನೀಡುವುದು, ತಮ್ಮ ಮನೆಗೆ ನನ್ನನ್ನೂ ಕರಕೊಂಡು ಹೋಗಿ ಅವುಗಳನ್ನೆಲ್ಲ ತೋರಿಸಿ ಖುಷಿಪಡುವಾಗ ಮುಸ್ಲಿಮರಿಗೂ ದೀಪಾವಳಿ ಹಬ್ಬ ಇರಬೇಕಾಗಿತ್ತು ಎಂದು ನನಗೆ ಅನ್ನಿಸುತ್ತಿತ್ತು. ಮೂರು ದಿನಗಳ ವೈಭವದ ಈ ಹಬ್ಬಕ್ಕೆ ನಡೆಸುವ ತಯಾರಿಯಲ್ಲೇ ಹೆಚ್ಚಿನ ಸಂಭ್ರಮ, ಖುಷಿ ಅಡಗಿರುವುದು. ಆಟದ ಬಯಲಲ್ಲಿ ಹಬ್ಬದ ತಯಾರಿಯ ವಿವರಗಳು ಬರುವಾಗ ಶೀನ ಕೇಳಿದ್ದ
“ನೀನು ಏನೆಲ್ಲ ಖರೀದಿ ಮಾಡದ್ದಿಯಾ?”
“ನಮಗೆ ದೀಪಾವಳಿ ಹಬ್ಬ ಇಲ್ಲವಲ್ಲಾ? ನಮ್ಮ ಹಬ್ಬಗಳು ಬೇರೆ..” ಎಂದು ನಾನು ಪೆಚ್ಚಾಗಿ ಉತ್ತರಿಸಿದ್ದೆ.
“ಅದಕ್ಕೇ ಇರಬೇಕು ನಿಮ್ಮನ್ನು ಬ್ಯಾರಿಗಳು ಅಂತ ಕರೆಯೂದು” ಎಂದಿದ್ದ ಶೀನ ಗಂಭೀರವಾಗಿ!
ಗೆಳೆಯರೆಲ್ಲ ಗೊಳ್ಳೆಂದು ನಕ್ಕಿದ್ದರು.
ನಾನು ಪೆಚ್ಚಾದದ್ದು ಕಂಡು ನೊಂದ ಯಾದು “ನಿನಗೆ ಹಬ್ಬವಿಲ್ಲದಿದ್ದರೇನಾಯಿತು, ಹಬ್ಬದ ದಿನ ನಾನು ಪಟಾಕಿ ಸುಡುವಾಗ ಕರೆಯುತ್ತೇನೆ. ನೀನು ನಮ್ಮ ಮನೆಗೆ ಬಂದುಬಿಡು. ಈವತ್ತು ನಮ್ಮಪ್ಪ ಗೂಡುದೀಪ ಮಾಡುತ್ತಾರೆ. ನಾಳೆ ನಿನಗೆ ತೋರಿಸುತ್ತೇನೆ” ಎಂದು ಸಮಾಧಾನ ಮಾಡಿ, ನನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದ.

ಮನೆಗೆ ಹೋದವನೇ ಅಮ್ಮನೊಂದಿಗೆ `ಊರಲ್ಲಿ ಎಲ್ಲರೂ ಹಬ್ಬ ಮಾಡುವಾಗ ನಾವು ಕೂಡ ಯಾಕೆ ಮಾಡಬಾರದು?’ ಎಂದು ಕೇಳಿದೆ. ಅಮ್ಮ ನಕ್ಕು “ಹಬ್ಬ ಯಾವುದಾದರೂ ಮಾಡುವುದೇನು? ಹೊಸ ಬಟ್ಟೆ ಹಾಕೂದು, ಬಗೆಬಗೆಯ ತಿಂಡಿ ಮಾಡಿ ತಿನ್ನೋದು ಅಷ್ಟೇ ಅಲ್ಲವಾ? ಅದನ್ನು ನಾವು ಕೂಡ ಮಾಡೋಣಂತೆ.” ಎಂದಿದ್ದಳು.

ರಾತ್ರಿ ಇಶಾ ನಮಾಜು ಮುಗಿಸಿ ಎಂದಿನಂತೆ ಬಾಪ ಮನೆಗೆ ಬಂದಾಗ ಈ ಬಗ್ಗೆ ಚರ್ಚೆ ನಡೆಯಿತು. `ಊರಲ್ಲಿ ಎಲ್ಲರೂ ಹಬ್ಬದ ಖುಷಿಯಲ್ಲಿ ಮುಳುಗಿರುವಾಗ ನಮ್ಮ ಮಕ್ಕಳಿಗೂ ಆಸೆ ಅಲ್ಲವಾ?’ ಎಂದ ಅಮ್ಮನ ಶಿಫಾರಸು ಬಾಪನಿಗೆ ಒಪ್ಪಿಗೆಯಾಗಿರಬೇಕು. ಸುಮ್ಮನೆ `ಅದೇನು ಮಾಡುತ್ತಿಯಾ ಮಾಡು’ ಎಂದರು. ಊಟ ಮಾಡಿ ಅದೇನೋ ಕಿತಾಬನ್ನು ಹಿಡಿದುಕೊಂಡು ಹಾಸಿಗೆಗೆ ಒರಗಿ ನಿದ್ದೆ ಬರುವ ತನಕ ಸ್ವಲ್ಪ ಹೊತ್ತು ಓದುತ್ತಿರುವುದು ಬಾಪಾನ ಅಭ್ಯಾಸ. ನಾನು ಅಳುಕುತ್ತಲೇ ಬಳಿಗೆ ಹೋಗಿ ನಿಂತೆ. ನಾನು ಪೆಚ್ಚಾಗಿ ನಿಂತಿರುವುದು ಕಂಡ ಬಾಪ, “ನಿನಗೆ ಪಟಾಕಿ ಬಿಡುವ ಆಸೆಯಾಗ್ತಿದೆ ಅಲ್ವ ಮೋನೇ ?” ಎಂದರು. ನಾನು ತಲೆಯಾಡಿಸಿದೆ. “ಅದೆಂತಾದ್ದೋ ಪಟಾಕಿ, ಇಸ್ಸಿ… ಟಸ್ ಪುಸ್ ಅನ್ನುವಂತಾದ್ದು! ನಿನಗೆ ನಮ್ಮ ಊರಿಡೀ ನಡುಗುವಂತಾ ಕದೋನಿ ಕೊಡಿಸುತ್ತೇನೆ, ನೋಡು, ತೆಂಗಿನ ಮರದಷ್ಟೆತ್ತರ ಹೂಮಳೆಗೆರೆವ ದುರುಸು, ಆಕಾಶದಲ್ಲಿ ಬಣ್ಣದ ರಂಗೋಲಿ ಹಾಕುವ ಆಕಾಶ ಬಾಣ ಕೊಡಿಸುತ್ತೇನೆ. ನೀನ್ಯಾಕೆ ಯೋಚಿಸ್ತಿಯೋ?” ಎಂದರು. ನನಗೆ ಸುಂದರ ಸ್ವಪ್ನವೊಂದನ್ನು ಕಂಡಂತಾಯಿತು. “ಆದರೆ ಒಂದು ಷರತ್ತು ಈ ವರ್ಷ ಮಾತ್ರ, ಮುಂದಿನ ವರ್ಷಕೂಡ ಬೇಕು ಅಂದರೆ ತರುವುದು ಸಾಧ್ಯವಾಗ್ಲಿಕ್ಕಿಲ್ಲ ಮಾರಾಯ, ಯಾಕೆಂದರೆ ಅಗ್ರಹಾರ ದೇವಸ್ಥಾನದ ಉತ್ಸವಕ್ಕೆ ಅಂತ ಮಾಡಿದ ಬಿರುಸು ಬಾಣಗಳ ಸ್ಯಾಂಪಲ್ಲು ಬಾರಕೂರಿನಿಂದ ಬರುತ್ತದೆ. ಅದು ಹೇಗಿದೆ ಅಂತ ನೋಡಬೇಕಲ್ಲಾ, ಒಂದು ವೇಳೆ ಟುಸ್..ಪುಸ್ ಆಗಿಬಿಟ್ಟರೆ ಉತ್ಸವಕ್ಕೆ ಸೇರಿದ ಸಾವಿರಾರು ಜನರ ಮಧ್ಯೆ ಮರ್ಯಾದೆ ಹೋಗುವ ಪಂಚಾತ್ಗೆ ನೋಡು. ಸ್ಯಾಂಪಲ್ಲು ನಾಳೆ ಬರುತ್ತೋ ಇಲ್ಲ, ನಾಡಿದ್ದು ಬರುತ್ತದೋ ಗೊತ್ತಿಲ್ಲ.” ಎಂದರು. ಎಲ್ಲ ಶರತ್ತಿಗೂ ನಾನು ಖುಷಿಯಿಂದ ಒಪ್ಪಿದ್ದೆ.

ನಮ್ಮಜ್ಜಿ ಮನೆ ಬಾರಕೂರಲ್ಲಿ ಉತ್ಸವಗಳಿಗೆ ಬೇಕಾದ ಬಣ್ಣ ಬಣ್ಣದ ಬಾಣ ಬಿರುಸು, ಕದೋನಿ, ಗರ್ನಾಲು ತಯಾರಿಸುವ ಲೈಸನ್ಸು ಮಾವನ ಹೆಸರಲ್ಲಿ ಇತ್ತು.. ನನ್ನ ತಂದೆಯವರಿಗೆ ಇವುಗಳನ್ನು ಕಟಪಾಡಿಯ ಆಸುಪಾಸಿನವರಿಗೆ ಮಾರಾಟ ಮಾಡುವ ಲೈಸನ್ಸು ಇತ್ತು. ಪೇಟೆಯಲ್ಲಿ ಒಂದು ಕೋಣೆಯ ಅಂಗಡಿಯೂ ಬಾಡಿಗೆಗೆ ಇತ್ತು. ಆಗಾಗ ನಮ್ಮೂರ ಆಸುಪಾಸಿನ ದೇವಸ್ಥಾನಗಳ ಉತ್ಸವಗಳಿಗೆ, ಭೂತ ಕೋಲ, ನೇಮಗಳಿಗೆ, ಕಂಬಳ ಮುಂತಾದ ಕಡೆಗಳಲ್ಲಿ ಬಿಡುವ ವೈಭವದ ಬಿರುಸು ಬಾಣಗಳು ಬೇಕಾದಾಗ ಬಾಪನನ್ನು ಸಂಪರ್ಕಿಸುತ್ತಾರೆ. ಅವರ ಕೋರಿಕೆಗಳನ್ನು ಪಡೆದು ಬಾರಕೂರಿನಿಂದ ತರಿಸಿ ಸರಬರಾಜು ಮಾಡುತ್ತಿದ್ದರು. ಕಟಪಾಡಿ ಅಗ್ರಹಾರದ ದೇವಸ್ಥಾನದ ಉತ್ಸವಕ್ಕೆ ಇಂತಹ ಕೋರಿಕೆ ಬಂದಾಗ ಬಾರಕೂರಿನಿಂದ ಸ್ಯಾಂಪಲ್ ಬಿರುಸುಬಾಣಗಳು ತಂದೆಯವರಿಗೆ ಕಳುಹಿಸಿದ್ದರು. ನಾನಂತೂ ಸುದ್ದಿ ಸಿಕ್ಕಿದ ಮರುದಿನವೇ ಊರಿನ ಎಲ್ಲರಿಗೂ ಸುದ್ದಿ ತಲಪಿಸಿ ಆಗಿತ್ತು.

ದೀಪಾವಳಿಯ ಕಡುಬಿಗೆ ಪರಿಮಳದ ಅರಿಶಿನ ಎಲೆ 

ಅಮ್ಮನ ತಯಾರಿ ಎಂದಿನಂತೆ ಭರ್ಜರಿ ನಡೆದಿತ್ತು. ದೀಪಾವಳಿಯಂದು ಕೊಯ್ಯಲು ತಯಾರಾಗುವಂತೆ ಅವಳು ಪ್ರತೀ ವರ್ಷ ಮೊದಲ ಮಳೆ ಬೀಳುವಾಗ ಅರಸಿನದ ತಾಯಿ ಬೀಜಗಳನ್ನು ಬತ್ತದ ಹುಲ್ಲಿನಲ್ಲಿ ಕಟ್ಟಿಟ್ಟ ಗಂಟನ್ನು ಬಿಚ್ಚಿ ನಮ್ಮ ತೋಟದಲ್ಲಿ ಮಣ್ಣು ಹದಮಾಡಿ, ಹಟ್ಟಿ ಗೊಬ್ಬರ ಹಾಕಿ, ಎರಡು ದರೆ ಮಾಡಿ ನಾನೂ ಅವಳು ಸೇರಿ ನೆಡುವುದು ವಾಡಿಕೆ. ಅದೀಗ ದೀಪಾವಳಿ ಹಬ್ಬಕ್ಕೆ ಉದ್ದುದ್ದ ಎಲೆಗಳು ತಯಾರಾಗಿ ನಿಂತಿವೆ. ದೀಪಾವಳಿ ಹಬ್ಬದಲ್ಲಿ ಅರಸಿನದೆಲೆಯನ್ನು ಸುತ್ತಿದ ಸಿಹಿ ಹೂರಣದ ಕಡುಬು ಎಲ್ಲರೂ ಮಾಡಲೇಬೇಕು. ಅವಳು ಈ ಘಮ ಘಮ ಪರಿಮಳದ ಅರಸಿನದ ಎಲೆಗಳನ್ನು ಕೊಯ್ದು ಹತ್ತು ಹದಿನೈದು ಎಲೆಗಳ ಕಟ್ಟು ಮಾಡಿ ನೆರೆಮನೆಯವರಿಗೆ ಕೊಟ್ಟು ದೀಪಾವಳಿಯ ಸಿಹಿ ಹೂರಣದ ಕಡುಬು ಮಾಡುವುದಕ್ಕೆ ನೆರವಾಗುತ್ತಾಳೆ. ನಮ್ಮ ದನದ ಹಟ್ಟಿಯ ಹತ್ತಿರ ಎತ್ತರೆತ್ತರ ಬೆಳೆದ ಪತ್ರೊಡೆ ಕೆಸುವಿನ ಎಲೆಯನ್ನು ಕೊಂಡುಹೋಗಲು ಬ್ರಾಹ್ಮಣರ ಕೇರಿಯ ಮಕ್ಕಳು ಬಂದರೆ ಅವರಿಗೆ ಕೊಯ್ಯಲು ನೆರವಾಗುತ್ತಾಳೆ. ಅವರಿಗೆ ಬೇಕಾದರೆ ನಮ್ಮ ತೋಟದ ದಕ್ಷಿಣದ ಭಾಗದಲ್ಲಿ ಬೆಳೆಸಿದ ಬಾಳೆಯ ಎಲೆಗಳನ್ನು ಕೊಯ್ದು ಕೊಡುತ್ತಾಳೆ. ನೆರೆಮನೆಯಲ್ಲೆಲ್ಲ ಹಬ್ಬದ ತಿಂಡಿಗಳು ಮಾಡುತ್ತಿರುವಾಗ ನಮಗಾಗಿ ಪಾಯಸ, ಕೊಟ್ಟೆ ಕಡುಬು, ಮುಂಡಗನ ಎಲೆಯ ಕೊಟ್ಟೆಯಿಂದ ಮಾಡುವ `ಮೂಡೆ’ ಮಾಡಿ ಕೋಳಿ ಸಾರಿನ ಜೊತೆಗೆ ತಿನ್ನಿಸುವಳು.

ದೀಪಾವಳಿ ಹಬ್ಬದ ದಿನ ಪ್ರತೀ ಮನೆಯಲ್ಲೂ ಬಣ್ಣದ ಕಾಗದಗಳನ್ನು ಅಂಟಿಸಿ ಎತ್ತರಕ್ಕೆ ಏರಿಸಿ ಕಟ್ಟಿದ ಗೂಡುದೀಪ ನೋಡಲು ಸುಂದರವಾಗಿರುತ್ತದೆ. ಪಟ್ಟಣದಲ್ಲಿ ಇರುವಂತೆ ಮನೆಯ ಆವರಣದಲ್ಲೆಲ್ಲ ದೀಪಗಳನ್ನು ಸಿಂಗರಿಸುವ ಕ್ರಮ ನಮ್ಮೂರಲ್ಲಿ ಇರಲಿಲ್ಲ. ತುಳಸಿ ಕಟ್ಟೆಯ ಸುತ್ತ ಹತ್ತಾರು ಹಣತೆಯ ದೀಪಗಳನ್ನು ಉರಿಸುವುದು ವಾಡಿಕೆ. ನಂತರ ಮೂಲದ ಮನೆಗಳಲ್ಲಿ ಕುಟುಂಬದವರೆಲ್ಲ ಸೇರಿ ಭೂತಗಳಿಗೆ ಗಣಗಣ ಗಂಟೆ ಬಾರಿಸುತ್ತ ಪೂಜೆ. ರೈತರು ತಮ್ಮ ಗದ್ದೆಗಳಿಗೆ ದೊಂದಿ ದೀಪಗಳನ್ನಿಟ್ಟು ಬಲಿಯಂದ್ರನನ್ನು ಕರೆಯುವುದು ಸಂಜೆ ಹೊತ್ತು ಎಲ್ಲೆಡೆಗಳಿಂದಲೂ ಕೇಳಿಬರುತ್ತದೆ.

“ಓ ಬಲಿಯಂದ್ರ, ಓ ಬಲಿಯಂದ್ರ ಓ… ಪೊಟ್ಟು ಗಟ್ಟಿ, ಪೊಟ್ಟು ಬಜಿಲ್ ಕೂ….” ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟ ತ್ಯಾಗದ ಮೂರ್ತಿ ಬಲಿ ಚಕ್ರವರ್ತಿ ಮತ್ತೆ ಭೂಮಿಗೆ ಬಂದು ಗದ್ದೆಗಳಲ್ಲಿ ಸಮೃದ್ಧಿಯನ್ನು ತಾರೆಂದು ಮೂರು ಬಾರಿ ಬಲಿಯಂದ್ರನನ್ನು ರೈತರ ಮನೆ ಮುಂದೆ ಮತ್ತು ಗದ್ದೆಗಳಲ್ಲಿ ಕರೆಯುವ ಮುಗಿಲು ಮುಟ್ಟುವ ಕೂಗು ಇಡಿ ಊರು ತುಂಬ ಕೇಳಿಬರುತ್ತದೆ. ಇದು ಮುಗಿದ ಕೂಡಲೇ ಪಟಾಕಿ ಪಟಪಟನೆ ಸಿಡಿಯುತ್ತದೆ, ಸುರುಸುರು ಕಡ್ಡಿ, ಬಿರುಸು ಬಾಣಗಳು, ನೆಲ ಚಕ್ರಗಳು ಹರಿದಾಡುತ್ತವೆ. ಊರಿಡೀ ಗದ್ದಲ ಗೌಜಿ ತುಂಬಿರುತ್ತದೆ. ಉಳಿದ ಸಮಯದಲ್ಲಿ ಸ್ವಲ್ಪವೇ ಸದ್ದಾದರೂ ಬೊಬ್ಬಿಡುವ ನಾಯಿಗಳು ಮನುಷ್ಯರ ಈ ಗಲಾಟೆಗೆ, ಪಟಾಕಿ ಸಿಡಿಮದ್ದಿನ ಆರ್ಭಟಕ್ಕೆ ಹೆದರಿ ದೀಪಾವಳಿಯ ದಿನ ಮೂಲೆ ಸೇರಿ ಗಪ್‌ಚುಪ್ಪಾಗಿ ಕೂತಿರುತ್ತವೆ. ಕಾಗೆಗಳ ಎಂದಿನ ಕೂಗಾಟವೂ ಬಂದಾಗಿರುತ್ತವೆ. ಹಕ್ಕಿಗಳ ಗೂಡು ಸೇರುವ ಚಿಲಿಪಿಲಿ ಹಾಡುಗಳೂ ಕೇಳಿಬರುವುದಿಲ್ಲ.

ನಮಗೂ ದನಗಳಿಗೂ ಅರಿಶಿನದ ಕಡುಬು 

ಈ ಗೌಜಿ ಗಮ್ಜಾಲಿನಲ್ಲಿ ಪಾಲ್ಗೊಳ್ಳದೆ ಇರುವವರೆಂದರೆ ನಮ್ಮ ಮನೆ ಮತ್ತು ಇನ್ನೊಂದು ವಿನ್ನಿಯ ಮನೆ ಎರಡೇ. ವಿನ್ನಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್. ಅವನು ಕೂಡ ದೀಪಾವಳಿಯ ಸಂದರ್ಭದಲ್ಲಿ ಅಪ್ಪನೊಂದಿಗೆ ಕಾಡಿ ಬೇಡಿ ಹಣ ವಸೂಲಿ ಮಾಡಿ ಪಟಾಕಿ, ಬಿರುಸು, ಬಾಣ ತಂದು ಇಡುತ್ತಾನೆ. ಎಲ್ಲರೂ ಪಟಾಕಿಗಳನ್ನು ಸುಟ್ಟು ಖಾಲಿಯಾದಾಗ ವಿನ್ನಿ ತನ್ನಲ್ಲಿರುವ ಬಿರುಸುಬಾಣಗಳಿಗೆ ಒಂದೊಂದಾಗಿ ಬೆಂಕಿ ಕೊಟ್ಟು ಎಲ್ಲರ ಗಮನ ಸೆಳೆದು ಖುಷಿಯಾಗುತ್ತಾನೆ..

ಹಬ್ಬದ ದಿನ ಬೆಳಗ್ಗೆಯೇ ಶೀನನ ಮನೆಯಿಂದ `ಖಂಡುಗೆ’ ಕಾಣೆ ಮೀನು, ಗಂಗೆ ಪೂಜಾರ್ತಿಯ ವಾಲೆಬೆಲ್ಲದ ಕಟ್ಟು, ಜೊತೆಗೆ ಒಂದಷ್ಟು ಹೊದ್ದಳು (ಬತ್ತದ ಪಾಪ್ ಕಾರ್ನ್), ನರ್ಸಿ ಅಕ್ಕನ ಮನೆಯಿಂದ ಎರಡು ಸೇರು ಅವಲಕ್ಕಿ, ಜೊತೆಗೆ ಉಂಡೆ ಬೆಲ್ಲ. ದೇಜು ಮಾಸ್ಟ್ರ ಹೆಂಡತಿ ತಂದ ಬಾಳೆ ಹಣ್ಣು ಮುಂಡಕ್ಕಿ ಪುರಿ, ಲಡ್ಡು, ಇನ್ನೂ ಅನೇಕ ರೀತಿಯ ತಿಂಡಿ ತಿನಸುಗಳು ಬರುತ್ತಲೇ ಇದ್ದವು. `ಇದೆಲ್ಲ ಯಾಕೆ ಮಾರಾಯ್ರೆ’ ಎನ್ನುತ್ತ ಅಮ್ಮ ಅವುಗಳನ್ನು ತೆಗೆದುಕೊಂಡು ಅವರಿಗೆ ಅರಸಿನದೆಲೆಯ ಕಟ್ಟುಗಳನ್ನು ಹಂಚುತ್ತಾಳೆ. ಅವರು ಕೊಟ್ಟದ್ದನ್ನು ಕೆಡದಂತೆ ಒಳ್ಳೆಯ ಡಬ್ಬಿಯಲ್ಲಿ ತುಂಬಿಸಿಟ್ಟುಕೊಳ್ಳುತ್ತಿದ್ದಳು. ಮುಂದೆ ನಾವು ತಿಂಗಳುಗಟ್ಟಳೆ ಇಟ್ಟು ತಿನ್ನುತ್ತಿದ್ದೆವು..

ಆ ವರ್ಷ ದೀಪಾವಳಿಯ ಎರಡನೇ ದಿನ ಬಾಪ ಹೇಳಿದಂತೆ ರಾತ್ರಿ ಮನೆಗೆ ಬರುವಾಗ ಚೀಲತುಂಬ ಗರ್ನಾಲು, ಬಿರುಸು ಬಾಣಗಳನ್ನು ತಂದಿದ್ದರು. ನಾವೆಲ್ಲ ಮನೆಯ ಅಂಗಳದಲ್ಲಿ ಸೇರಿದೆವು. ಬಾಪ ಮೊದಲು ನಾಲ್ಕು ಗರ್ನಾಲಿಗೆ ಬೆಂಕಿ ಕೊಟ್ಟರು. ಅದು ಡಂ… ಡಂ… ಎಂದು ದೊಡ್ಡ ಸದ್ದು ಮಾಡುವಾಗ ಸುದ್ದಿ ತಿಳಿದ ಊರ ಹಲವು ಮಂದಿ ಮಕ್ಕಳೊಂದಿಗೆ ಬಂದು ನಮ್ಮ ಅಂಗಳದಲ್ಲಿ ಸೇರಿದರು. ನಾನು ಜಂಭದಿಂದ ಬೀಗಿ ಆಚೀಚೆ ಓಡುತ್ತ ಬಾಪಾನಿಗೆ ನೆರವಾಗುತ್ತಿದ್ದೆ. ನಮ್ಮ ಎದುರು ಮನೆಯ ಯಾದು ಬಂದು ನನ್ನ ಜೊತೆಗೆ ಸೇರಿಕೊಂಡದ್ದು ನನಗೆ ಇನ್ನಷ್ಟು ಖುಷಿಯಾಗಿತ್ತು. ಯಾಕೆಂದರೆ ನಾಳೆ ಆಟದ ಮೈದಾನದಲ್ಲಿ ನಡೆದ ಸಂಗತಿಗಳನ್ನು ಸ್ನೇಹಿತರೊಂದಿಗೆ ಹೇಳುವಾಗ ಸಾಕ್ಷಿಗೆ ಯಾರಾದರೂ ಬೇಕಲ್ಲಾ! ಬಾಪ ಮಣ್ಣಿನ ಕುಂಡದಲ್ಲಿ ತಯಾರಿಸಲಾದ ಬಿರುಸನ್ನು ಅಂಗಳದಲ್ಲಿಟ್ಟು ಎಲ್ಲರೂ ದೂರದಲ್ಲಿ ನಿಲ್ಲುವಂತೆ ಸೂಚಿಸಿ ಅದಕ್ಕೆ ಬೆಂಕಿ ಕೊಟ್ಟರು. ಸ್ವಲ್ಪ ಹೊತ್ತಿನಲ್ಲೇ ಅದು ಸುಂಯ್… ಸದ್ದು ಮಾಡುತ್ತ ಬೆಳಕಿನ ಹೂಗಳನ್ನು ಕಾರುತ್ತ ಎತ್ತರೆತ್ತರಕ್ಕೆ ತೆಂಗಿನ ಮರದೆತ್ತರಕ್ಕೆ ಏರುತ್ತ ಮಾರುದ್ದ ಬೆಳಕು ಸುತ್ತಲೂ ಹರಡಿ ತಣ್ಣಗಾಯಿತು. ನಂತರದಲ್ಲಿ ಹೊಗೆ ಕಾರಿ ಗಂಧಕ ಸುಟ್ಟ ವಾಸನೆ ಅಲ್ಲೆಲ್ಲ ಹಬ್ಬಿತು. ಇನ್ನೊಂದು `ಬಿಗಿಲು’ ಅನ್ನುವ ಹೆಸರಿನ ಬಿದಿರ ಅಂಡೆಯಲ್ಲಿ ಮಾಡಿದ ಹೂ ಕುಂಡವನ್ನು ನೆಲದಲ್ಲಿ ಹುಗಿದು ನಿಲ್ಲಿಸಿ ಬಾಪ ಬೆಂಕಿಕೊಟ್ಟರು. ಅದು ಕೂ…. ಎಂದು ಕೂಗುತ್ತ ಬಣ್ಣ ಬಣ್ಣದ ಕಿಡಿಗಳನ್ನು ಕಾರುತ್ತ ಬೆಳಕು ಹರಡುತ್ತ ಎತ್ತರಕ್ಕೆ ಜಿಗಿದು ಕೆಳಗಿಳಿದು ಆರಿತು. ಸ್ವಲ್ಪ ಹೊತ್ತಿನಲ್ಲೇ ಮತ್ತೆ ತನ್ನಷ್ಟಕ್ಕೆ ಇನ್ನೊಮ್ಮೆ ಕೂಗುತ್ತ ಬಣ್ಣದ ಕಿಡಿಗಳನ್ನು ಹಾರಿಸುತ್ತ ಮತ್ತೆ ಮೇಲಕ್ಕೇರಿ ಕೆಳಗಿಳಿಯಿತು. ಹೀಗೆ ಮೂರು ಬಾರಿ ಮೇಲಕ್ಕೆ ಏರಿ ಕೆಳಗಿಳಿದು ಎಲ್ಲರ ಮನಸ್ಸನ್ನು ಸೂರೆಗೊಂಡಿತು.

ವಿಶೇಷವೆಂದರೆ ಪಟಾಕಿ ಸುಡುವುದರ ಬಗ್ಗೆ ಕ್ಲಾಸಿನಲ್ಲಿ ಪಾಠದ ಮಧ್ಯೆ ಸುಮ್ಮನೆ ದಂಡಕ್ಕೆ ಎಂದು ಬೋಧಿಸಿದ್ದ ನಮ್ಮ ನೆರೆಮನೆಯ ದೇಜು ಮಾಸ್ಟ್ರು ತಮ್ಮ ಮಕ್ಕಳು ಕೃಷ್ಣ, ಲಕ್ಷ್ಮಣ, ಪುಟ್ಟ ಮಗು ಮಾರುತಿಯರನ್ನು ಕರೆದುಕೊಂಡು ಬಂದು ನಮ್ಮ ತಂದೆಯವರ ಜೊತೆಗೆ ನಿಂತು ಉತ್ಸವವನ್ನು ನೋಡಿದಂತಾಯಿತೆಂದು ಹೇಳಿಕೊಂಡು, ಖುಷಿ ಪಟ್ಟುಕೊಂಡು, ನಮ್ಮ ಸಂತೋಷದಲ್ಲಿ ಭಾಗಿಯಾಗಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಮ್ಮ ಸುಡು ಮದ್ದು ಬಿರುಸು ಬಾಣಗಳ ವೈಭವವನ್ನು ಸವಿದ ಊರವರು ಮುಂದೆ ವರ್ಷಗಟ್ಟಲೆ ಈ ದೀಪಾವಳಿಯನ್ನು `ಗುರುಕುಲೆ ಇಲ್ಲದ ದೀಪೋಲಿ’ ಎಂತಲೇ ನೆನಸಿ ಕೊಳ್ಳುತ್ತಿದ್ದರು.

ದೀಪಾವಳಿಯ ಮೂರನೇ ದಿನ ನಮ್ಮೂರ ಪೇಟೆಯಲ್ಲಿ ಅಯುಧ ಪೂಜೆ, ಅಂಗಡಿ ಪೂಜೆಗಳು ನಡೆಯುತ್ತಿದ್ದರೆ ಹಳ್ಳಿಯಲ್ಲಿ ಗೋಪೂಜೆ ನಡೆಯುತ್ತದೆ. ಗೋ ಪೂಜೆಯ ಮುಂಚಿನ ದಿನ ಅಮ್ಮ ಹಟ್ಟಿಯಲ್ಲಿರುವ ನಮ್ಮ ದನ ಕರುಗಳಿಗೆ ಹುಲ್ಲು ಹಾಕಿ ಬಂದು ನಾಳೆ ಈ `ಮೂಕ ಪ್ರಾಣಿಗಳ ಹಬ್ಬ’ ಎಂದು ಸಡಗರ ಪಡುತ್ತ ಅಕ್ಕಳೊಂದಿಗೆ ಸೇರಿ ದನಗಳಿಗೆ ತಿನ್ನಿಸಲು ಅರಸಿನದೆಲೆಯ ಕಡುಬು ಮಾಡುತ್ತಾಳೆ. ನೆನಸಿಟ್ಟ ಅಕ್ಕಿಯನ್ನು ರಾತ್ರಿ ಅರೆದು ದಪ್ಪದ ಹಿಟ್ಟು ಮಾಡಿ ಅದನ್ನು ಅರಸಿನದೆಲೆಗೆ ಹರಡಿ ಅದರ ಮೇಲೆ ಕಾಯಿತುರಿ, ಬೆಲ್ಲ, ಹುರಿದ ಎಳ್ಳು ಹಾಕಿದ ಹೂರಣವನ್ನು ಹಾಕಿ ಮಡಚಿ ಇಡ್ಲಿ ಮಾಡುವ `ತೊಂದುರ’ಲ್ಲಿಟ್ಟು ನೀರಿನ ಹಬೆಯಲ್ಲಿ ಬೇಯಿಸುತ್ತಾಳೆ.

ಮರುದಿನ ಬೆಳಗ್ಗೆ ಎದ್ದು ಎಂದಿನಂತೆ ಹಟ್ಟಿಯಲ್ಲಿ ದನಗಳಿಗೆ ಅಕ್ಕ ಅಕ್ಕಚ್ದು ಹುಲ್ಲು ಹಾಕಿದ್ದು ಅವು ತಿನ್ನುತ್ತಿದ್ದಂತೆ ಸೆಗಣಿ ಎತ್ತಿ ಸ್ವಚ್ಚ ಮಾಡುತ್ತಾಳೆ. ಅಮ್ಮ ಬೆಳಗ್ಗಿನ ನಮಾಜು ಮುಗಿಸಿ ಗಂಗೆ ದನದ ಹಾಲು ಕರೆಯತ್ತಾಳೆ. ನಂತರ ದನಗಳನ್ನು ಹಟ್ಟಿಯಿಂದ ಹೊರತಂದು ನಾವು ಉತ್ಸಾಹದಿಂದ ದನಗಳ ಮೈತೊಳೆದು ಅಂಗಳದ ಕೈದೋಟದಲ್ಲಿ ಬೆಳೆದ ದಾಸವಾಳ, ನಂದಿಬಟ್ಟಲ, ಶಂಕಪುಷ್ಪಿ ಹೂಗಳ ಮಾಲೆ ಮಾಡಿ ನಮ್ಮ ಮೂರೂ ದನಗಳ ಕುತ್ತಿಗೆಗೆ ತೊಡಿಸಿದೆವು. ಅಕ್ಕ ಜೇಡಿ ಮಣ್ಣನ್ನು ಕಲಸಿ ಮಾಡಿದ ಬಣ್ಣಕ್ಕೆ ತೆಂಗಿನ ಕಾಯಿಯ ಖಾಲಿ ಗೆರಟೆಯ ಬಾಯನ್ನು ಅದ್ದಿ ದನಗಳ ಮೈ ತುಂಬ ಅಲ್ಲಲ್ಲಿ ಒತ್ತಿ ಉರುಟುರುಟು ಚಿತ್ತಾರ ಮೂಡಿಸಿದೆವು. ಅಮ್ಮ ಬುಟ್ಟಿಯಲ್ಲಿ ರಾತ್ರಿ ಮಾಡಿಟ್ಟ ಅರಸಿನದೆಲೆಯ ಸಿಹಿ ಕಡುಬುಗಳ ಜೊತೆಗೆ ಬಾಳೆಎಲೆಯಲ್ಲಿ ಮಾಡಿದ ಗಟ್ಟಿ ಕಡುಬುಗಳನ್ನು ತಂದಳು. ಅಮ್ಮ, ನಾನು ಅಕ್ಕ ಎಲ್ಲರೂ ಉತ್ಸಾಹದಿಂದ ಕಡುಬುಗಳನ್ನು ದನಗಳಿಗೆ ತಿನ್ನಿಸಿದೆವು. ದನಗಳು ಎಲೆಗಳ ಸಮೇತ ಕಡುಬುಗಳನ್ನು ಗಬಗಬನೆ ತಿಂದು ಎಂದಿಲ್ಲದ ಹೊಸ ರುಚಿ ಸವಿದು ತಲೆಯಲ್ಲಾಡಿಸಿ ಖುಷಿ ಪಟ್ಟವು.

ನಮ್ಮ ಅಂದಿನ ಬೆಳಗ್ಗಿನ ನಾಷ್ಟಕ್ಕೆ ಕೂಡ ಅದೇ ಅರಸಿನದೆಲೆಯಲ್ಲಿ ಮಾಡಿದ ಸಿಹಿ ಹೂರಣದ ಕಡುಬು. ಅರಸಿನದೆಲೆಯ ಸುವಾಸನೆಯ ಜೊತೆಗೆ ಕಡುಬಿನ ಸವಿ ಬೆರೆತು ತಿನ್ನಲು ರುಚಿಯಾಗಿತ್ತು. ನಮಗೂ ದನಗಳಿಗೂ ಅಂದಿನ ಬೆಳಗ್ಗಿನ ನಾಷ್ಟಾದಲ್ಲಿ ವ್ಯತ್ಯಾಸವೆಂದರೆ ದನಗಳು ಕಡುಬನ್ನು ಅದಕ್ಕೆ ಸುತ್ತಿದ ಎಲೆಗಳ ಜೊತೆಗೇನೆ ತಿಂದು ಸವಿದಿದ್ದರೆ ನಾವು ಎಲೆಯನ್ನು ಬಿಡಿಸಿ ತೆಗೆದು ಕಡುಬು ಮಾತ್ರ ತಿಂದಿದ್ದೆವು. ನಂತರ ಅಮ್ಮ ಹೇಳಿದಂತೆ ದನಗಳನ್ನು ನಾನು ಮತ್ತು ಅಕ್ಕ ಸೇರಿ ಅಟ್ಟಿಕೊಂಡು ಪಳ್ಳಿಗುಡ್ಡೆಯ ಮೈದಾನದ ಗೋಮಾಳಕ್ಕೆ ಹೋಗಿ ಒಂದೆರಡು ಗಂಟೆ ಹುಲ್ಲು ಮೇಯಿಸಿ ಹಿಂದಕ್ಕೆ ಕರತಂದೆವು.