ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ. ಪದ್ಮಿನಿಗೆ ಬದುಕಿನ ವಾಸ್ತವದ ಅರಿವು ಬರುವದು ಆತ ನಡೆಸುವ ಅನಾಥಮಕ್ಕಳ ಆಶ್ರಮವನ್ನು ನೋಡಿದಾಗ.
ಕುಸುಮಾ ಆಯರಹಳ್ಳಿ ಕಾದಂಬರಿ “ದಾರಿ”ಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ

ಶಿಥಿಲಗೊಂಡ ಮಾನವೀಯ ಸಂಬಂಧಗಳ ನಡುವೆ ಗಾಂಧೀಜಿಗಾಗಿ ಹಂಬಲಿಸುವ ಕನಸುಗಳು

ದಾರಿಯಿದೆ ಎಂದ ಮೇಲೆ ಅಲ್ಲಿ ಯಾರಾದರು ಕೆಲವೊಂದಿಷ್ಟು ಜನ ಕೆಲವೊಂದಿಷ್ಟು ಕಾಲ ನಿರಂತರವಾಗಿ ಓಡಾಡುತ್ತಿರಬೇಕು. ಯಾರೋ ಒಬ್ಬನೇ ಹೋಗುವದು ದಾರಿಯಾಗುವದಿಲ್ಲ. ಹಾಗಂತ ಎಲ್ಲಾ ದಾರಿಯೂ ಗುರಿಯನ್ನು ತಲುಪುತ್ತದೆ ಅಂತಲೂ ಅರ್ಥವಲ್ಲ. ಇದ್ದಲ್ಲೇ ಇರುವ ದಾರಿ ಹಲವು ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ. ಸುಮ್ಮನೆ ಬಿದ್ದೂ ಇರುತ್ತದೆ. ಗುರಿಯನ್ನು ತಲುಪುವ ದಾರಿಯೋ ಹಾದಿ ತಪ್ಪಿಸಿದ ದಾರಿಯೋ; ಅದು ಯಾವುದೇ ಆದರೂ ಆ ದಾರಿಯಮೇಲೆ ಹುಲ್ಲೂ ಸಹ ಬೆಳೆಯುವದಿಲ್ಲ. ಹಾಗೆ ಬೆಳೆದರೆ ಅದು ದಾರಿಯಾಗುವದಿಲ್ಲ. ಒಮ್ಮೊಮ್ಮೆ ದಾರಿ ಗೊಂದಲವನ್ನು ಉಂಟು ಮಾಡುತ್ತದೆ. ಹಲವಾರು ದಾರಿಗಳು ಒಂದನ್ನೊಂದು ಅಡ್ಡವೋ ಓರೆಯಾಗಿಯೋ ಸಾಗಿದಾಗ ಎಲ್ಲಿಗೆ ಯಾವದಿಕ್ಕಿಗೆ ಹೋಗಬೇಕೆನ್ನುವದನ್ನು ಅವು ತಿಳಿಸುವದಿಲ್ಲ. ನಾವೇ ಊಹಿಸಿ ಇಲ್ಲವೇ ದಾರಿಯನ್ನು ತಿಳಿದವರ ಹತ್ತಿರ ಕೇಳಿ ತಿಳಿದು ಸಾಗಬೇಕಾಗುತ್ತದೆ. ನಾವೇ ಸ್ವತಃ ದಾರಿಯನ್ನು ನಿರ್ಮಿಸಲೂಬಹುದು. ಅಂತಹ ದಾರಿ ತನ್ನ ಗುರುತನ್ನು ಇರಿಸಿಕೊಳ್ಳಬೇಕಾದರೆ ಆ ದಾರಿಯಮೇಲೆ ನಮ್ಮನ್ನು ಹಿಂಬಾಲಿಸುವ ಪ್ರಾಣಿಯೋ ಮನುಷ್ಯನೋ ಇರಬೇಕಾಗುತ್ತದೆ. ಗುರಿಯ ಅರಿವಿರುವವನಿಗೂ ದಾರಿಯ ಪರಿಚಯ ಬೇಕೇ ಬೇಕು. ಆತ ಹಾರಿ ತನ್ನ ಗುರಿ ಮುಟ್ಟಲಾರ. ದಾರಿಯನ್ನುವದು ತುಳಿದ ಪಾದಗಳ ಒಂದಿಷ್ಟು ಮೊತ್ತವೂ ಹೌದು. ಉತ್ತರ ಸಿಕ್ಕಿತೋ ಇಲ್ಲವೋ ಅದನ್ನು ತಿಳಿಯುವದು ವರ್ತಮಾನದಲ್ಲಿ ಅಲ್ಲ. ಭೂತಕಾಲಕ್ಕೆ ಸರಿದು ಹೋದ ಇತಿಹಾಸಗಳ ಓದಿನಿಂದ. ಅದರ ಕುರಿತು ಆಸಕ್ತಿ ಇರುವವರಿಗೆ ಮಾತ್ರ; ಅದಿಲ್ಲದೇ ಇರುವವರು ಕುರಿ ಕುರುಬನನ್ನು ಅನುಸರಿಸಿದಂತೆ ಸರಿಸಿ ಸಾಗುವುದಷ್ಟೆ.

ಕುಸುಮಾ ಆಯರಹಳ್ಳಿಯವರ ಚೊಚ್ಚಲ ಕಾದಂಬರಿ “ದಾರಿ” (ಛಂದ ಪ್ರಕಾಶನ) ಓದಿದಾಗ ಅನಿಸಿದ ಭಾವನೆಗಳು ಇವು. ಒಂದು ಅರ್ಥದಲ್ಲಿ ಲೇಖಕಿಯೇ ಅನೇಕ ರೂಪಗಳನ್ನು ತಳೆದು ಗುರಿ ಮುಟ್ಟುವ ದಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಲೇಖಕರ ಮಾತಿನಲ್ಲಿ ಅವರೇ ಹೇಳಿಕೊಂಡಂತೆ ಅವರ ಈ ಹುಡುಕಾಟ ಅವರ ಕಾಲೇಜುದಿನಗಳಿಂದಲೂ ಆರಂಭವಾಗಿದೆ. ಹಲವಾರು ಸಿದ್ಧಾಂತಗಳ ಸಮೂಹವನ್ನು ಸೇರಿ ತೊಡಗಿಕೊಂಡ ಅವರ ಹುಡುಕಾಟ ಇನ್ನೂ ಮುಂದುವರಿದಿದೆ. ಈ ಹುಡುಕಾಟ ಅವರದ್ದೊಂದೇ ಅಲ್ಲ. ನಾನೂ ಸಹ ಇಂತಹುದೇ ಹುಡುಕಾಟದಲ್ಲಿ ತಲೆಕೆಡಿಸಿಕೊಂಡ ದಿನಗಳ ನೆನಪಾಯಿತು. ಸಿದ್ಧಾಂತಗಳ ಕುರುಡು ನಂಬಿಕೆಯಲ್ಲಿ ಸಾಗಿದಾಗ ಅದು ತೋರಿಸಿದ ಯಾವುದನ್ನೋ ನಮ್ಮ ಗುರಿಯೆಂದು ಭಾವಿಸುತ್ತೇವೆ. ಕೆಲಕಾಲ ಕಳೆದಮೇಲೆ ನಮ್ಮ ಸ್ವಂತಿಕೆಯನ್ನು ಉಪಯೋಗಿಸಿ ಈ ಸಿದ್ಧಾಂತಗಳ ಬೇಲಿಯಾಚೆ ಬಂದು ಅವಲೋಕಿಸಿದಾಗ ಅದುತನಕದ ನಮ್ಮ ಅರಸುವಿಕೆಯೆನ್ನುವುದು ನಾವು ಏರಿದ ಬಿಸಿಲು ಕುದುರೆಯಾಗಿ ತೋರುತ್ತದೆ. ಕಾದಂಬರಿಯನ್ನು ಬರೆಯುವಾಗ ಕಥೆಯನ್ನು ಹಿಡಿದು ಅದರ ಭಾವದ ಮೂಲಕ ಸಾಗುವ ಕ್ರಿಯೆಯೊಂದಿದೆ. ಈ ಮಾರ್ಗದಲ್ಲಿ ಕಥೆಯೇ ಕರ್ತೃವಿಗೆ ಮಾರ್ಗವನ್ನು ತೋರಿಸುತ್ತಾ ಹೋಗುತ್ತದೆ. ಇನ್ನೊಂದು ಹಲವು ಆದರ್ಶಗಳನ್ನು ತುಂಬಿಕೊಂಡ ವ್ಯಕ್ತಿ ಅದರ ಒಂದು ಆದರ್ಶದ ಥೀಮನ್ನು ಹಿಡಿದು ಅದರಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಂಡು ಹೋಗುವದೊಂದು. ಇಲ್ಲಿ ಕುಸುಮಾ ಎರಡನೆಯ ಮಾರ್ಗವನ್ನು ಹಿಡಿದಿದ್ದಾರೆ. ನಗರದ ಥಳುಕಿನ ಬಳುಕಿನ ಬದುಕನ್ನು ಅನುಭವಿಸಿ ಮತ್ತೆ ಹಳ್ಳಿಗೆ ಹೋಗಿ ತಣ್ಣಗೆ ಬದುಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಗರಕ್ಕೆ ಹೊಂದಿಕೊಂಡಿರುವ ಹಳ್ಳಿ ಈಗ ಮೊದಲಿನ ಸಹಬಾಳ್ವೆಯ ಹಳಿಯಾಗಿ ಉಳಿದಿಲ್ಲ. ಇಲ್ಲಿನ ಕತೆಯಲ್ಲಿ ಬರುವ ನಂಜನಗೂಡಿನ ಸಮೀಪದ ಬಿಳಿಕೆರೆಯೆನ್ನುವ ಹಳ್ಳಿಯೊಂದೇ ಅಲ್ಲ. ಬಿಜಾಪುರ ಜಿಲ್ಲೆಯ ತುತ್ತತುದಿಯ ಚಾಂದಕವಟೆಯಂತ ಕುಗ್ರಾಮದ ಸ್ಥಿತಿಯೂ ಹೌದು. ಮೊದಲೆಲ್ಲ ಊರಿಗೆ ಅಪರಿಚತರು ಯಾರಾದರೂ ಸಂಜೆವೇಳೆಗೆ ಬಂದರೆ ತಮ್ಮ ಮನೆಗೆ ಕರೆದೊಯ್ದು ಉಪಚರಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಈಗ ಪ್ರೇಕ್ಷಣೀಯ ಸ್ಥಳದ ಪ್ರತಿಮನೆಯೂ ಹೋಮ್ ಸ್ಟೇ ಆಗಿದೆ. ಮನೆಯ ಮಕ್ಕಳೇ ಬಂದರೂ ಪುಕ್ಕಟೇ ಕೊಡಬೇಕಲ್ಲ ಎನ್ನುವ ಮನೋಭಾವವನ್ನು ಗಮನಿಸಬಹುದು.

ಈ ಕಾದಂಬರಿಯಲ್ಲಿ ನಾಯಕ ಮತ್ತು ಕೇಂದ್ರೀಕೃತ ಪಾತ್ರಗಳು ಇಂತವೇ ಅಂತ ಇಲ್ಲ. ಪ್ರಕಾಶ ಪತ್ರಕರ್ತನಾಗಿದ್ದು ಕೆಲಸ ಕಳೆದುಕೊಂಡು ತಮ್ಮ ಹಳ್ಳಿ ಬಿಳಿಕೆರೆಗೆ ಬಂದಿದ್ದಾನೆ. ಆತನ ಹೆಂಡತಿ ಪದ್ಮಿನಿ ಕಿರುತೆರೆಯಲ್ಲಿ ಖ್ಯಾತ ನಟಿ, ಪ್ರತಿಭಾನ್ವಿತೆ ಕೂಡಾ. ಆಕೆಯ ತಾಯಿ ರಮಾ, ಪದ್ಮಿನಿಯ ತಂದೆ ಚಂದ್ರಣ್ಣ, ಜನಪರನಾಯಕ ದಲಿತ ಎನ್ನುವ ಕಾರಣಕ್ಕೆ ಸ್ವಲ್ಪ ಕೀಳರಿಮೆ ಇರುವ ಜವರಪ್ಪ ಈ ಎಲ್ಲರ ನಡುವೆ ಕಥೆ ಸಾಗುತ್ತದೆ. ಈ ಕಾದಂಬರಿಯ ಪ್ರತಿ ಪಾತ್ರಗಳೂ ಹೀಗೆ ಯಾರ ಯಾರದೋ ಹಿಂದೆ ಸಾಗಿ ನಂತರ ಅದಲ್ಲ ತಮ್ಮ ಪಥ ಎಂದು ಸರಿದು ಮತ್ತೆ ಗುರಿ ಮುಟ್ಟದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಚಂದ್ರಣ್ಣನಂತಹ ಕೆಲವರಿಗೆ ತಮ್ಮ ಮಿತಿಯ ಅರಿವಾಗಿ ಸರಿದು ಮೌನದಲ್ಲಿ ಸವೆದು ಹೋದ ದಾರಿಯನ್ನು ಸರಿಮಾಡುವತ್ತ ಲಕ್ಷ ಹರಿಸುತ್ತಾರೆ.

(ಕುಸುಮಾ ಆಯರಹಳ್ಳಿ)

ಪ್ರಕಾಶನದು ಮತ್ತು ಪದ್ಮಿನಿಯದು ಪ್ರೇಮವೋ ಅಥವಾ ಆಕರ್ಷಣೇಯೋ ಎನ್ನುವದು ಗೊತ್ತಾಗುವದರೊಳಗೆ ಅವರ ಮದುವೆ ಆಗಿಹೋಗಿದೆ. ಪದ್ಮಿನಿ ಅನೇಕ ಸಲ ಈ ಸಂಬಂಧವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಾಗಂತ ಪ್ರಕಾಶನ ಕುರಿತು ಆಕೆಗೆ ತಿರಸ್ಕಾರವೂ ಇಲ್ಲ. ಅವನ ಬದುಕಿನ ರೀತಿಯನ್ನು ಬದಲಾಯಿಸಲೂ ಆಕೆ ಪ್ರಯತ್ನ ಪಡುತ್ತಿಲ್ಲ. ಹಾಗಾಗಿ ಆತ ಬೆಂಗಳೂರನ್ನು ಬಿಟ್ಟು ಊರಿನಲ್ಲಿ ನೆಲೆಸುವ ನಿರ್ಧಾರವನ್ನು ಕೈಗೊಂಡಾಗ ಅದನ್ನು ಪ್ರತಿಭಟಿಸುವದಿಲ್ಲ. “ಪದ್ಮಿನಿಗೆ ಪ್ರಕಾಶ ಹೋದಮೇಲೆ ಹೊಸದೊಂದು ನಿರಾಳ ಉಂಟಾದದ್ದು ಯಾಕೆಂದೂ ಹೊಳೆಯುವದಿಲ್ಲ. ತಾವಿಬ್ಬರೂ ಮದುವೆಯಾದದ್ದು ವಯೋಸಹಜ ಮೋಹ ಮತ್ತು ಪರಸ್ಪರರಿಗಿದ್ದ ತಾತ್ಕಾಲಿಕ ತಪ್ಪು ಲೆಕ್ಕಾಚಾರಗಳಿಂದ ಅಂತ ಬಹಳಸಲ ಅನಿಸಿದೆ ಇಬ್ಬರಿಗೂ” ಎನ್ನುವಲ್ಲಿ ಇಡೀ ಕಾದಂಬರಿಯ ಕಥಾ ಹಂದರವನ್ನು ಬಿಡಿಸಿಟ್ಟಿದ್ದಾರೆ. ಆಕೆಗೆ ಅದಾಗಲೇ ಜೈಸನ್ ಎನ್ನುವ ಪ್ಯಾಷನ್ ಶೋ ಸಂಘಟಿಸುವನ ಜೊತೆ ಬ್ರೇಕ್-ಅಪ್ ಆಗಿ ಬಳಲಿದ ಮನಕ್ಕೆ ಸಿಕ್ಕವ ಪ್ರಕಾಶನಾಗಿದ್ದ.

ಊರಿಗೆ ಬಂದ ಪ್ರಕಾಶ ಅಲ್ಲೇ ಇರುತ್ತೇನೆ ಎಂದಾಗ ಮೊದಲು ಶಾಕ್ ಆಗುವದು ಅವರ ಮನೆಮಂದಿಗೆ. ಊರಿನಿಂದ ಬೆಂಗಳೂರಿಗೆ ಹೋದವರು ಎಂದರೆ ಅವರು ತಿರುಗಿ ಬರಲಾರರು ಹಾಗಾಗಿ ಅವರ ಪಾಲಿನ ಆಸ್ತಿ ತಮಗೇ ಎಂದುಕೊಂಡವರಿಗೆ ಆತ ಊರಲ್ಲೇ ಖಾಯಂ ಆಗಿ ಉಳಿಯುತ್ತಾನೆ ಎಂದಾಗ ತಮ್ಮ ತುತ್ತನ್ನು ಕಸಿಯಲು ಬಂದವನಾಗಿ ಕಾಣಿಸುತ್ತಾನೆ. ಪ್ರಕಾಶನಿಗೆ ಊರಲ್ಲಿ ಸುಧಾರಣೆ ಮಾಡಬೇಕು ಎನ್ನುವ ಆದರ್ಶದ ವಿನಾಃ ಬೇರೇನೂ ಮನಸ್ಸಿನಲ್ಲಿಲ್ಲ. ತನ್ನೂರಿನ ಜನರಿಗೆ ಕಾಡುವ ವೃದ್ಧಾಪ್ಯವೇತನ, ಉತ್ತಮ ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು ಇಂತಹ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೊಂದು ನೆಮ್ಮದಿಯ ಬದುಕನ್ನು ಕಲ್ಪಿಸುವುದು ಉದ್ದೇಶ. ಇಲ್ಲಿ ಆತನಿಗೆ ಪದ್ಮಿನಿಯ ಮಾವ ಚಂದ್ರಣ್ಣ ಹಿಂದಿನಿಂದ ಸ್ಪೂರ್ತಿಯಾಗುತ್ತಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರಿಗೆ ಅವರ ಮಕ್ಕಳೇ ವಂಚಿಸಿ ಆಸ್ತಿ ಲಪಟಾಯಿಸಿದಾಗ ಬೇಸರಪಟ್ಟು ಹೊನ್ನಕುಡುಕಿ ಎನ್ನುವ ಹಳ್ಳಿಯಲ್ಲಿ ಸ್ನೇಹಿತನೇ ಕೊಟ್ಟ ತೋಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇಲ್ಲೆಲ್ಲಾ ಆಗಾಗ ಬರುವ ಗುರುಗಳು ಮತ್ತು ಸ್ವಾಮಿಗಳು ಬೈರಪ್ಪನವರ ಗೃಹಭಂಗದ ಪ್ರಭಾವವನ್ನು ಸೂಕ್ಷ್ಮವಾಗಿ ಬೀರಿದರೂ ಅದರ ಅರಿವಾಗಿ ತಕ್ಷಣ ಈ ಪ್ರಭಾವವಲಯದಿಂದ ಕುಸುಮಾ ತಪ್ಪಿಸಿಕೊಳ್ಳುತ್ತಾರೆ. ಪ್ರಕಾಶ ಪದ್ಮಿನಿಯನ್ನು ಮದುವೆಯಾಗುವ ಹಿಂದಿನ ಪ್ರಾಮಾಣಿಕ ನಿಲುವನ್ನು ತಿಳಿದ ತಕ್ಷಣ ಚಂದ್ರಣ್ಣ ಆತನನ್ನು ಅಪ್ಪಿ ಬೀಳ್ಕೊಡುವ ಸನ್ನಿವೇಶದಲ್ಲಿಯೇ ಪ್ರಕಾಶನ ಬದುಕಿನಲ್ಲಿ ಚಂದ್ರಣ್ಣನ ಆದರ್ಶಗಳು ಹೊಕ್ಕಿಕೊಂಡವೆನಿಸುತ್ತದೆ.

ಈ ಅನೇಕ ಸಮಸ್ಯೆಗಳು ಮತ್ತು ಆಗಾಗ ಪವರ್-ಕಟ್ಟಿನಲ್ಲಿಯೇ ಬದುಕು ಸವೆಸುವ ಹಳ್ಳಿಯ ಜನರಿಗೆ ನಗರದ ತಳಕು ಬೆಳಕಿನ ಕನಸು ಸಹಜ. ಹಾಗಂತೆ ಸರಕಾರ ಕೊಡುವ ಎಲ್ಲವೂ ಅನುಭವಿಸುವದು ತಮ್ಮ ಹಕ್ಕು; ಕೊನೆಗೆ ಪುಕ್ಕಟೇ ಸಿಗುವ ಕುಡಿಯುವ ನೀರನ್ನೂ ಸಹ ಪೋಲುಮಾಡಬಹುದು ಎನ್ನುವ ಮನೋಭಾವ ಹಳ್ಳಿಗಳಲ್ಲಿದೆ ಎನ್ನುವುದನ್ನು ಲೇಖಕಿ ಸೂಕ್ಷ್ಮವಾಗಿ ತೆರೆದಿಡುತ್ತಾ ಹೋಗುತ್ತಾರೆ. ಹಳ್ಳಿಗರಿಗೆ ಇದು ತಪ್ಪು ಎಂದು ಯಾವತ್ತಿಗೂ ಅನಿಸುತ್ತಿಲ್ಲ. ಕಾರಣ ಅಜ್ಞಾನ. ಗೆಳೆಯ ರಾಜಣ್ಣ ಹಳ್ಳಿಗಳಲ್ಲಿರುವ ಜಾತಿ ರಾಜಕೀಯದ ಸೂಕ್ಷ್ಮತೆಯನ್ನು ತಿಳಿಸಿ ಅದರ ಸಹವಾಸ ಬೇಡವೆಂದರೂ ಅದನ್ನು ಸುಧಾರಿಸುವ ಹುಚ್ಚು ಪ್ರಕಾಶನಿಗೆ. ತನ್ನೂರಿನ ಜನರ ನಿಜವಾದ ಬವಣೆಗಳ ಬಗ್ಗೆ ಜಾಗೃತಿಮೂಡಿಸಿ ಅವರನ್ನು ಗಾಂಧೀಜಿ ಕಂಡ ಕನಸಿನ ಕಡೆಗೆ ಒಯ್ಯಬೇಕೆನ್ನುವದು ಆತ ಕಂಡ ಕನಸು. ಹಳ್ಳಿಗಳಲ್ಲಿ ಯಾರ ಯಾರ ಸಮಸ್ಯೆಗಳು ಯಾವ ರೀತಿಯವು ಎನ್ನುದು ತಿಳಿದಿರುವದು ಅಂಗನವಾಡಿ ಕಾರ್ಯಕರ್ತೆಯರಿಗೆ. ಹಾಗಾಗಿ ಅಲ್ಲಿ ಸಿಗುವ ಮಂಗಳ ಲಗ್ನವಾಗಿ ಅಷ್ಟೇ ಶೀಘ್ರವಾಗಿ ಗಂಡನನ್ನು ಕಳೆದುಕೊಂಡು ತವರುಮನೆ ಸೇರಿದವಳು. ಮೊದಲೊಮ್ಮೆ ಪ್ರಕಾಶನಿಗಾಗಿ ಮನಸ್ಸಿನಲ್ಲಿಯೇ ಮಂಡಿಗೆ ತಿಂದವಳು. ಆತ ಗಗನ ಕುಸುಮ ಎಂದು ಮೌನವಾಗಿ ಇದ್ದು ಬೇಜವಾಬುದಾರಿ ಅಣ್ಣನಿರುವ ತವರುಮನೆಯಲ್ಲಿ ಅತ್ತಿಗೆಯೊಂದಿಗೆ ಹೊಂದಿಕೊಂಡು ಇರುವವಳು. ಕ್ಯಾಮರಾ ಮುಂದೆ ಅಭಿನಯಿಸುವ ಕಲಾವಿದೆ ನಿರ್ದೇಶಕಕ ಕೈಗೊಂಬೆ; ಅಭಿನಯವೆಲ್ಲ ಪರಪುಟ್ಟ. ಆದರೆ ಸ್ವಚ್ಛಂದವಾಗಿ ಹಾಡುವ ಮನಸ್ಸಿನ ನೋವುಗಳನ್ನು ಮರೆಯುವ ಹಳ್ಳಿಯ ಕುಸುಮ ಪ್ರಕಾಶನ ಎದೆಯೊಳಗೆ ಅವಿತುಕೊಳ್ಳಲು ಪ್ರಾರಂಭಿಸುತ್ತಾಳೆ.

ಪದ್ಮಿನಿ ಕಿರುತೆರೆಯಲ್ಲಿ ಖ್ಯಾತ ನಟಿ, ಪ್ರತಿಭಾನ್ವಿತೆ ಕೂಡಾ. ಆಕೆಯ ತಾಯಿ ರಮಾ, ಪದ್ಮಿನಿಯ ತಂದೆ ಚಂದ್ರಣ್ಣ, ಜನಪರನಾಯಕ ದಲಿತ ಎನ್ನುವ ಕಾರಣಕ್ಕೆ ಸ್ವಲ್ಪ ಕೀಳರಿಮೆ ಇರುವ ಜವರಪ್ಪ ಈ ಎಲ್ಲರ ನಡುವೆ ಕಥೆ ಸಾಗುತ್ತದೆ. ಈ ಕಾದಂಬರಿಯ ಪ್ರತಿ ಪಾತ್ರಗಳೂ ಹೀಗೆ ಯಾರ ಯಾರದೋ ಹಿಂದೆ ಸಾಗಿ ನಂತರ ಅದಲ್ಲ ತಮ್ಮ ಪಥ ಎಂದು ಸರಿದು ಮತ್ತೆ ಗುರಿ ಮುಟ್ಟದ ದಾರಿಯಲ್ಲಿ ಸಾಗುತ್ತಿರುತ್ತಾರೆ.

ಪದ್ಮಿನಿಗೆ ಹಿಂದಿಯಿಂದ ಬಂದ ನಿರ್ದೇಶಕ ವಿಜಯ ಇಷ್ಟವಾಗುತ್ತಾನೆ. ಆತ ಈಕೆಯ ಜೊತೆ ವೃತ್ತಿಬಾಂಧವ್ಯದ ಹೊರತೂ ಬೇರೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳುವದಿಲ್ಲ. ಆತನಿಗೆ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರಬೇಕಿದೆ. ಅವಕಾಶಕ್ಕಾಗಿ ಕಾದಿದ್ದಾನೆ. ತನಗೆ ಇಷ್ಟವಾದವರನ್ನೆಲ್ಲ ಸೆಳೆಯುವ ಪದ್ಮಿನಿಗೆ ಆತ ಒಗಟಾಗಿಬಿಡುತ್ತಾನೆ. ಆತನನ್ನು ಒಲಿಸಿಕೊಳ್ಳುವದಕ್ಕಾಗಿ ಈಕೆ ಪ್ರಯತ್ನಿಸಿದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಾರಳು. ಜೊತೆಯಾಗಿ ಹೋಗುವ, ಕೃಷ್ಣ ಭವನದ ಕಾಪಿಕುಡಿಯುವ, ಸೆಲ್ಫಿ ತೆಗೆದುಕೊಳ್ಳುವ ಹೀಗೆ ಪದ್ಮಿನಿಗೆ ವಿಜಯನ ಹುಚ್ಚು ಏರಿಬಿಡುತ್ತದೆ. ಒಮ್ಮಿಂದೊಮ್ಮೆಲೇ ಆತನಿಗೆ ತನ್ನ ಕನಸಿನ ಅವಕಾಶ ಸಿಕ್ಕಿದಾಗ ಈಕೆಗೆ ಪಾರ್ಟಿಕೊಟ್ಟು ಉತ್ತರಾಖಂಡಕ್ಕೆ ಹಾರಿಬಿಡುತ್ತಾನೆ. ವಿಜಯ ಇಲ್ಲದ ಬದುಕು ಪದ್ಮಿನಿಗೆ ಶೂನ್ಯವಾಗಿಬಿಡುತ್ತದೆ. ಹೀಗೆ ಎರಡು ಕೋನಗಳಿಂದ ಕಥೆ ಸಾಗುತ್ತಿದ್ದರೂ ಮೂಲ ಆಶಯವಾದ ಗ್ರಾಮವೃದ್ಧಿಯ ದಿಕ್ಕಿನಲ್ಲಿ ಸ್ವಲ್ಪವೂ ಅಲುಗಾಡುವದಿಲ್ಲ. ಪ್ರಕಾಶನಿಗೆ ಜೊತೆಗೂಡುವ ದಲಿತ ಜವರಪ್ಪ ಕೊನೆಯವರೆಗೂ ಇಷ್ಟವಾಗುತ್ತಾನೆ. ದಲಿತತನವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಶಿಕ್ಷಕ ಶಂಕರರಿನಿಗೆ ತನ್ನ ಮಗಳು ಇನ್ನೊಂದು ಬಣವಾದ ಹುಡುಗ ಮಂಜನೊಡನೇ ಓಡಿಹೋಗಿರುವದನ್ನು ಸಹಿಸಿಕೊಳ್ಳಲಾಗುವದಿಲ್ಲ. ಜಾತಿ ರಾಜಕಾರಣ ಹಳ್ಳಿಯನ್ನು ವಿಷಮಯ ಮಾಡಿರುವದನ್ನು ಅಂಬೇಡ್ಕರ ಮತ್ತು ಬಸವಣ್ಣನ ಪ್ರತಿಮೆಗೆ ಅದೇ ಸಮಾಜದವರು ಮಾಡಿ ಅದನ್ನು ಕೋಮುಗಲಭೆಗೆ ಅಸ್ತ್ರವಾಗಿಸುವ ವಸ್ತು ಸಹಜವಾಗಿ ಮೂಡಿಬಂದಿದೆ.

ಈ ನಡುವೆ ಹಳ್ಳಿಯಲ್ಲಿಯೂ ವ್ಯಾಪಿಸಿರುವ ಕೈಗಾರಿಕೆಗಳು ತಮ್ಮ ಜವಾಬುದಾರಿಯನ್ನು ಮರೆತು ಹಳ್ಳಿಯ ನೀರು ಮತ್ತು ಮಣ್ಣನ್ನು ವಿಷಮಯವಾಗಿಸುತ್ತಿವೆ. ಅವುಗಳ ಭೂಮಿಯ ದಾಹದಿಂದ ಇನ್ನುಳಿದ ಭೂಮಿಯನ್ನು ಹಣದ ಆಮಿಷವನ್ನು ಒಡ್ಡಿ ವಶಪಡಿಸಿಕೊಳ್ಳುತ್ತಾ ಇವೆ. ಈ ಎಲ್ಲ ಸಮಸ್ಯೆಗಳಿಗೆ ಸಹಜ ಕೃಷಿಯೇ ಉತ್ತರ ಎನ್ನುವದನ್ನು ತೋರಿಸಿಕೊಡಬೇಕೆನ್ನುವದು ಪ್ರಕಾಶನ ಇಚ್ಚೆ. ಆ ಕಾರಣಕ್ಕಾಗಿಯೇ ಪ್ರಕಾಶ ಮನೆಯ ಪಾಲನ್ನು ತೆಗೆದುಕೊಳ್ಳಲು ಬಯಸುವದು; ಆಗ ಮನೆಯವರು ಮತ್ತು ಮದುವೆಯಾದ ಅತ್ತೆ ಎಲ್ಲ ಒಂದಾಗಿ ಪ್ರಕಾಶನಿಗೆ ಕೇವಲ ಒಂದೆಕರೆ ಜಮೀನು ಸಿಗುವಂತೆ ನೋಡಿಕೊಳ್ಳುತ್ತಾರೆ. ಈ ಮದ್ಯೆ ಸಮಾನ ಮನಸ್ಕರೆಲ್ಲರ ಧಾರವಾಡದ ಸಮಾವೇಶ, ಅಲ್ಲಿ ಪತ್ರಕರ್ತೆ ಚರಿತಾಳ ಪ್ರವೇಶ ಇವೆಲ್ಲ ಮಂಗಳಳ ಬದುಕಿನಲ್ಲಿ ಹೊಸ ಬೆಳಕನ್ನು ತೋರಿಸಿ ಧೈರ್ಯವನ್ನು ತುಂಬುವ ಕೆಲಸವಾಗುತ್ತದೆ. ಹಳ್ಳಿಯಲ್ಲಿ ಇದ್ದವರಿಗೆ ನಗರಕ್ಕೆ ವಲಸೆ ಹೋಗುವ ತಲಬು. ಅವರೆಲ್ಲರೂ ತಮ್ಮ ಪಾಲಿನ ಆಸ್ತಿಯನ್ನು ಕೈಗಾರಿಕೆಗೆ ಮಾರಿ ನಗರ ಸೇರುತ್ತಾರೆ. ರಿಯಲ್ ಎಸ್ಟೇಟ್ ದಂಧೆಯ ಕರಾಳ ಮುಖ ದೇವಿಕೆರೆ ಸ್ವಾಮಿಯ ಕೊಲೆಯೋ ಆತ್ಮಹತ್ಯೆಯವರೆಗೂ ತಂದು ನಿಲ್ಲಿಸುತ್ತದೆ.

ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ. ಪದ್ಮಿನಿಗೆ ಬದುಕಿನ ವಾಸ್ತವದ ಅರಿವು ಬರುವದು ಆತ ನಡೆಸುವ ಅನಾಥಮಕ್ಕಳ ಆಶ್ರಮವನ್ನು ನೋಡಿದಾಗ. ಮಕ್ಕಳ ಆನಂದದಲ್ಲಿ ಆಕೆಯ ಚೆಲ್ಲುಚೆಲ್ಲಿನ ಜೀವನ ಒಂದು ಸ್ಥಿರತೆಗೆ ಬರುತ್ತದೆ. ಇತ್ತ ಪ್ರಕಾಶನಿಗೆ ತನ್ನ ಹೋರಾಟದ ಹಾದಿಯಲ್ಲಿಯೇ ಮಂಗಳಾ ಸಹ ಹತ್ತಿರವಾಗುತ್ತಾಳೆ. ಪ್ರಕಾಶ ತನ್ನ ಈ ಸಂಬಂಧವನ್ನು ಮಗ ನಿನಾದನ ಆಲೋಚನೆಯಿಂದ ಹೆಂಡತಿಗೆ ಹೇಳುವ ಧೈರ್ಯ ಮಾಡಲಾರ. ಇತ್ತ ಮಂಗಳಳನ್ನೂ ಬಿಡಲಾರ. ಈ ಧ್ವಂದ್ವವೇ ಆತನ ಹೋರಾಟದ ಬದುಕಿನಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ.

ಪ್ರಕಾಶ ಇಷ್ಟವಾಗುವದು ಆತ ತಾನೇ ನಾಯಕನಾಗಬೇಕೆಂದು ಹೊರಟಿಲ್ಲ. ಆತನಿಗೆ ಊರವರೇ ಅವರ ಸಮಸ್ಯೆಗಳ ಕುರಿತು ಹೋರಾಡಬೇಕಾಗಿದೆ. ಈತ ಕೇವಲ ಮಾರ್ಗದರ್ಶಕನಾಗಿರಬೇಕೆಂದುಕೊಳ್ಳುತ್ತಾನೆ. ಊರವರಿಗೆ ಕಾರ್ಖಾನೆಯ ವಿಷದಿಂದ ಚರ್ಮರೋಗ ಕಾಣಿಸಿಕೊಂಡಾಗ ಮಲಗಿದ್ದ ಜನರನ್ನು ಎತ್ತಿ ಅವರಲ್ಲಿ ವಿಷಮ ಪರಿಸ್ಥಿತಿಯ ಅರಿವು ಮೂಡಿಸುವ ಯತ್ನಮಾಡುತ್ತಾನೆ. ಸರಕಾರ ಮತ್ತು ವ್ಯವಸ್ಥೆ ಎಲ್ಲವೂ ಕಾರ್ಖಾನೆಯ ಒಟ್ಟಿಗೆ ಇರುವದರಿಂದ ಮಾಹಿತಿಗಳು ಸುಲಭವಾಗಿ ಸಿಗುವದಿಲ್ಲ. ಈ ನಡುವೆ ಪ್ರಕಾಶನ ಮೇಲೆ ಹಲ್ಲೆಯಾಗುತ್ತದೆ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದ್ದರೂ ಚಳುವಳಿಯ ದಿಕ್ಕು ತಪ್ಪಬಾರದೆನ್ನುವ ಕಾರಣಕ್ಕೆ ಆತ ಅದು ತಾನೇ ಬೈಕಿನಿಂದ ಬಿದ್ದ ಅಪಘಾತ ಎಂದೇ ಹೇಳುತ್ತಾನೆ. ಪರಿಸರದ ಅನಾಹುತಕ್ಕೆ ಈ ಸಾರಿ ಮಂಗಳಾಳ ಸರದಿ. ಆಕೆಯೂ ವಾಂತಿ ಬೇಧಿಗೆ ಬಲಿಯಾಗುತ್ತಾಳೆ.

ಕುಸುಮಾ ಅವರದು ಇದು ಚೊಚ್ಚಲ ಕಾದಂಬರಿ. ಆದರೆ ಅವರ ಬರಹಗಳನ್ನು ಮತ್ತು ಅಂಕಣಗಳನ್ನು ಓದುತ್ತಿರುವ ನನಗೆ ಅವರ ನಿರೂಪಣೆಯ ಪ್ರಕಾರವನ್ನು ಆಯ್ದುಕೊಂಡಿರುತ್ತಾರೆ. ಎಲ್ಲಿಯೋ ನೀರಸವಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಯಾವುದೋ ಒಂದು ವಿಷಯಗಳನ್ನು ಎತ್ತಿಕೊಂಡು ಪರಿಣಾಮವನ್ನು ಇಮ್ಮಡಿಗೊಳಿಸುವದು ಅವರ ಶೈಲಿ. ಮೈಸೂರಿನ ಗ್ರಾಮ್ಯ ಭಾಷೆಯ ಸೊಗಸನ್ನು ಚನ್ನಾಗಿ ದುಡಿಸಿಕೊಳ್ಳಬಲ್ಲರು. ಇಲ್ಲಿ ಗ್ರಾಮ್ಯ ಭಾಷೆಯೂ ಇದೆ; ಮತ್ತು ಬೆಂಗಳೂರಿನ ಕನ್ನಡವೂ ಇದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳು ಮುಖಾಮುಖಿಯಾಗುವ ಸನ್ನಿವೇಶದಲ್ಲಿ ಇನ್ನೇನು ಸ್ಪೋಟಗೊಂಡು ಬಿಡುತ್ತದೆ ಎನ್ನುವಾಗ ಅದು ಅಲ್ಲಿಂದ ಜಾರಿ ಬಿಡುತ್ತದೆ. ಮಂಗಳಾ ಮತ್ತು ಪ್ರಕಾಶನ ಸಂಬಂಧ ಬಹಿರಂಗವಾಗುವ ಸನ್ನಿವೇಶವಿರಬಹುದು ಇಲ್ಲವೇ ಪದ್ಮಿನಿಗೆ ಅವರಿಬ್ಬರ ವಿಷಯದ ಕುರಿತು ದ್ಯಾವಮ್ಮ ಹೇಳಿದಾಗ ಆಕೆ ಮಂಗಳಳನ್ನು ಭೇಟಿಯಾಗುವ ಸನ್ನಿವೇಶವಿರಬಹುದು. ಪಾತ್ರಗಳು ಇಡೀ ಕಾದಂಬರಿಯುದ್ದಕ್ಕೂ ಆ ರೀತಿಯ ಸಂಗರ್ಷಕ್ಕೆ ಕಾರಣವಾಗುವದೇ ಇಲ್ಲ. ತಣ್ಣಗೆ ಕಥೆಯನ್ನು ಸಾಗಿಸಿಬಿಡುತ್ತಾರೆ. ಇದಕ್ಕೆ ಕಾರಣ ಕಥೆಯನ್ನು ತೆಗೆದುಕೊಂಡು ಹೀಗೆ ಹೋಗಬೇಕೆನ್ನುವ ಕಥೆಗಾರನ ನಿಲುವು.

ಕಥಾ ಹಂದರವನ್ನು ನಿರ್ಮಿಸಿಕೊಂಡಿರುವದು ಗಾಂಧೀಜಿಯ ಕನಸಿನ ಗ್ರಾಮರಾಜ್ಯವನ್ನು ಕಟ್ಟಿಕೊಳ್ಳಬೇಕೆಂದು. ಹಾಗಂತ ಆಧುನಿಕ ಭಾರತಕ್ಕೆ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರಾಕರಿಸುವದಿಲ್ಲ. ಪರಿಸರಕ್ಕೆ ಮತ್ತು ಮನುಕುಲದ ಬದುಕಿಗೆ ಆಪತ್ತು ಬರಲೇ ಬಾರದಂತೆ ಕಾಳಜಿವಹಿಸಬೇಕೆನ್ನುತ್ತಾನೆ. ಕೈಗಾರಿಕೆಗಳನ್ನು ಸ್ಥಾಪಿಸುವಾಗ ಕಟ್ಟುನಿಟ್ಟಾದ ನಿಯಮಗಳನ್ನು ಮತ್ತು ತ್ಯಾಜ್ಯ ವಿಲೇವಾರಿಯನ್ನು ಅದು ಎಷ್ಟೇ ಖರ್ಚಿನದಾದರೂ ಅಳವಡಿಸಿಕೊಳ್ಳಬೇಕೆನ್ನುವದು ಪ್ರಕಾಶನ ಮತ. ತನ್ನ ಗಂಡನ ಕನಸಿಗೆ ಮಂಗಳ ಸರಿಯಾದ ಜೊತೆಯಾಗಬಹುದೆನ್ನುವದು ಅರಿವಾದಾಗ ಪದ್ಮಿನಿ ತೋರುವ ಸಹನೆ ಮತ್ತು ನಿಲುವು ಅದುತನಕದ ಆಕೆಯ ವ್ಯಕ್ತಿತ್ವವನ್ನು ಬದಲಾಯಿಸಿ ಪ್ರಕಾಶನೇ ಆಕೆಯ ಎದುರು ಕುಬ್ಜನಾಗಿಬಿಡುತ್ತಾನೆ. ಆಕೆಯೊಳಗಿನ ವಿಜಯ ಅಚ್ಚಳಿಯದೇ ಉಳಿದಿದ್ದಾನೆ. ಆಕೆಯ ಈ ಪ್ರೇಮದ ಮುಂದೆ “ನನ್ನ ಕಲ್ಪನೆಯ ವಿಜಯ ಎಷ್ಟೊಂದು ಅಗಾಧವಾಗ್ ಬೆಳ್ದಿದಾನೆ ಅಂದ್ರೆ ನಿಜವಾದ ಅವನು ಬಂದ್ರೂ ಒಂತರಾ ಕುಬ್ಜನಾಗಿ ಕಂಡುಬಿಡಬಹುದಾ?” ಎನ್ನುವಲ್ಲಿ ಪದ್ಮಿನಿ ಕಾದಂಬರಿಯನ್ನು ಮೀರಿ ಬೆಳೆದುಬಿಡುತ್ತಾಳೆ. ಹೆತ್ತು ಸಾಕಲು ಕಷ್ಟಪಟ್ಟ ಅಮ್ಮ ದೂರಸಾಗಿದ್ದಾಳೆ. ಕಟ್ಟಿಕೊಂಡ ಗಂಡನ ಎದೆಯಲ್ಲಿ ತನಗೆ ಜಾಗವಿಲ್ಲ. ಆದರೆ ಬಾಲ್ಯದಲ್ಲಿ ತನ್ನಿಂದ ದೂರವಿದ್ದ ಅಪ್ಪ ಹತ್ತಿರವಾಗುತ್ತಿದ್ದಾನೆ. ಅನಾಥ ಮಕ್ಕಳ ಖುಷಿಯಲ್ಲಿ ತನ್ನ ಅನಾಥಪ್ರಜ್ಞೆಯನ್ನು ಮರೆಯುವ ಭಾಗ ಪರಿಣಾಮಕಾರಿಯಾಗಿದೆ. ಇಡೀ ಕಾದಂಬರಿಯುದ್ದಕ್ಕೂ ಮೊಬೈಲ್ ತುಂಬಾ ಸಾಂಕೇತಿಕವಾಗಿ ತನ್ನ ಇರವನ್ನು ಗುರುತಿಸಿಕೊಳ್ಳುತ್ತದೆ. ಬಾಹ್ಯಸ್ವರೂಪದ ವಿಜಯನ ಗುರುತಿನ ಮೊಬೈಲ್ ಕಳೆದುಹೋಗಿದೆ. ಎದೆಯಗೂಡಿನಲ್ಲಿ ಉಳಿಸಿಕೊಳ್ಳುವದು ಆಕೆಗಿಷ್ಟ. ಹೊಸದೊಂದು ಸಿನೇಮಾದಲ್ಲಿನ ನಾಯಕಿಯ ಪಾತ್ರದ ಹೊಸ ಕರೆ ಬಂದಾಗ ತಾನೇ ಆ ಮೊಬೈಲನ್ನು ಎಸೆದು ಬಂಧನವನ್ನು ಕಳೆದುಕೊಳ್ಳುತ್ತಾಳೆ. ಇತ್ತ ಪ್ರಕಾಶ ಮತ್ತು ಮಂಗಳ ಇಬ್ಬರ ಬದುಕಿನಲ್ಲಿಯೂ ಮೊಬೈಲ್ ಸೇತುವಾಗಿದೆ. ಆದರೆ ಇಲ್ಲಿ ಮೊಬೈಲಿನ ಒಡತಿ ಮಂಗಳ ಇನ್ನಿಲ್ಲ. ಪ್ರಕಾಶ ಮಾತಾಡಬೇಕೆಂದು ಕರೆಮಾಡಿದರೆ ಒಡತಿಯಿಲ್ಲದ ಮೊಬೈಲ್ ಪ್ರಕಾಶನ ಪಕ್ಕದಲ್ಲೇ ರಿಂಗಣಿಸುತ್ತದೆ. ಸಿದ್ಧಾಂತವನ್ನು ಹೇಳಬೇಕೆನ್ನುವ ಕತೆಗಾರ್ತಿಯನ್ನು ಮೀರಿ ಕಥೆ ಬೆಳೆಯುವದು ಈ ಸಂದರ್ಭದಲ್ಲಿಯೇ. ಸಂಸಾರದಲ್ಲಿ ಏರುಪೇರಾದರೆ ವಿರಕ್ತರೇ ಅದಕ್ಕೆ ಪರಿಹಾರ ನೀಡಬಲ್ಲರೆನ್ನುವದು ಅವರ ನಿಲುವು. ವಿವರಗಳಿರಬೇಕಾದ ಕಡೆ ಕಥೆಯನ್ನು ಹಾರಿಸುವದು ಸೀದಾ ಹೇಳಬಹುದಾದ ಕಡೆ ಸುತ್ತುಬಳಸಿ ಹೇಳುವ ಅನೇಕ ಸಂಗತಿಗಳು ನಡುವೆಯೂ ಕಥೆಯನ್ನು ಬಿಗಿಯಾಗಿಸಿಕೊಳ್ಳಲು ಮುಂದಾಗುತ್ತಾರೆ.

ಗ್ರಾಮ ಬದುಕಿನಲ್ಲಿ ಪ್ರೇಮಚಂದ ಮುನ್ಷಿಯವರ ಕಾದಂಬರಿ “ಸದ್ಗತಿ” ಎನ್ನುವದನ್ನು ಸತ್ಯಜಿತ್ ರೇಯವರ ನಿರ್ದೇಶನದಲ್ಲಿ ನಿರ್ಮಿಸಿದ Deliverance ಎನ್ನುವ ಚಲನಚಿತ್ರ ನೆನಪಿಗೆ ಬಂತು. 1935ರ ಸುಮಾರಿಗೆ ಇದ್ದ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಭೀಕರತೆ ಮರೆಯಲಾರದ್ದು. ಇಂದಿಗೂ ಅದರ ಕೆಲ ಬೇರುಗಳು ಹಳ್ಳಿಯಲ್ಲಿ ಹಾಗೇ ಉಳಿದು ಸಾಮಾಜಿಕ ಸ್ವಾಸ್ಥ್ಯವನ್ನು ಹೇಗೆ ಹಾಳುಮಾಡುತ್ತಿವೆ ಎನ್ನುವ ಕಳಕಳಿ ಈ ಕಾದಂಬರಿಯನ್ನು ಓದಿದಾಗ ನೆನಪಾಗಿ ಸುಮ್ಮನೆ ಪುಸ್ತಕವನ್ನು ಮಡಚಿಟ್ಟೆ.

(ಕೃತಿ: ದಾರಿ (ಕಾದಂಬರಿ), ಲೇಖಕರು: ಕುಸುಮಾ ಆಯರಹಳ್ಳಿ, ಪ್ರಕಾಶನ: ಛಂದ ಪ್ರಕಾಶನ, ಪುಟಗಳು: 323, ಬೆಲೆ : ರೂ. 395/-)