ತಾವೋ ಚಿಂತನೆಯ ನೈಸರ್ಗಿಕ ಕನ್ನಡಿಯಾಗಿರುವ ಸಾಹಿತ್ಯಿಕ ತತ್ತ್ವಶಾಸ್ತ್ರದ ಡೇವಿಡ್ ಫೋಸ್ಟರ್ ವ್ಯಾಲೇಸ್ ಅವರ ಮಾತಿನಲ್ಲಿ, ಜನರಿಗೆ ತಾವೋ ಅರಿವಿನ ಪೂರ್ವನಿಶ್ಚಿತ ಕ್ರಮ ಎಂದರೆ “ಅನನ್ಯವಾಗಿ, ಸಂಪೂರ್ಣವಾಗಿ, ಸ್ವಯಂ ತಾನೇ ಆಗಿ ಏಕಾಂಗಿಯಾಗಿ ದಿನ ಮತ್ತು ದಿನವಿಡೀ” ಜೀವಿಸುವುದು. ಆದರೆ ನಾವು ಆಳವಾದ ಮತ್ತು ಸಾರ್ವತ್ರಿಕವಾದ ಭ್ರಮೆಯಲ್ಲಿ ಸಿಲುಕಿಕೊಂಡಿರುವುದರಿಂದಲೇ ವಿಶಾಲವಾದ ಬ್ರಹ್ಮಾಂಡದ ಕೇವಲ ಭಾಗವೆಂದು ತಿಳಿದಿದ್ದರೂ, ಏಳು ಶತಕೋಟಿ ಇತರ ಮಾನವ ಜೀವಗಳನ್ನು ಅವಧರಿಸಿರುವ ಬೃಹತ್ ಸಂಕೀರ್ಣ ಗ್ರಹದಲ್ಲಿ ಬದುಕುತ್ತಿರುವುದರ ಹೊರತಾಗಿಯೂ, ನಾವು ವಿಶ್ವದ ಕೇಂದ್ರ ಎಂಬ ನಿಜಕ್ಕೂ ಹುಚ್ಚು ಗ್ರಹಿಕೆಯೊಂದಿಗೆ ಮುಂದುವರಿಯುತ್ತೇವೆ.
ಆರ್. ವಿಜಯರಾಘವನ್ ಲೇಖನ

 

ತಾವೋ ತೆಹ್ ಜಿಂಗ್ ಕನ್ನಡದಲ್ಲಿ ಈಗಾಗಲೇ ಒಂದಕ್ಕಿಂತ ಹೆಚ್ಚು ರೂಪಗಳಲ್ಲಿ ಬಂದಿದೆ. ಇದು ನಾನು ಈಚೆಗೆ ಓದಿದ ಇಂಗ್ಲಿಷ್ ರೂಪದ ಅನುವಾದದಿಂದ ಹೆಕ್ಕಿದ ಸೂಕ್ತಗಳು. ಈ ಹಿಂದೆ ಇನ್ನೊಂದು ಅನುವಾದವನ್ನು ಕನ್ನಡಿಸಿದ್ದೆ. ಅದು ನನ್ನ ‘ಪೀನಿ ಹೂ’ ಸಂಕಲನದಲ್ಲಿದೆ. ಅದರ ಪುಟ್ಟ ಟಿಪ್ಪಣಿ ಇದು.

ತಾವೋನ ಮೈಪರಚಿಕೊಂಡು ಓದಬಾರದು. ಅದನ್ನು ಅಗೆದು ನೋಡಬಾರದು. ಇದು ಅಧ್ಯಯನದ ವಸ್ತುವಾದ ಕಾವ್ಯವಲ್ಲ. ಅದು ‘ಎಲ್ಲ ಯೋಚನೆಗಳು/ತೀರಿಹೋದಾಗ/ನಾನು ಕಾಡಿನೊಳಕ್ಕೆ ಹೋದೆ/ಒಂದು ರಾಶಿ ಹಳದಿ ಹೂಗಳ ಕೊಯ್ದೆʼ – ಎಂಬಂತೆ, ‘ಬೀಗ ಹಾಕಿದ ಕೋಣೆ/ಸೂರ್ಯನಿಲ್ಲದ ಚಳಿಗಾಲದ ದಿನ/ಮನಸ್ಸೆಲ್ಲೋ ಅಲ್ಲೇ ಮನೆʼ – ಎಂಬಂತೆ, ‘ಪಾಚಿ ಬೆಳೆದ/ಕಲ್ಲು ಸಂದುಗಳ ನಡುವೆ/ದಾರಿ ಮಾಡಿಕೊಂಡು ಸಾಗುವ/ಸಣ್ಣ ನೀರ ಝರಿಯಂತೆ/ನಾನೂ ಸದ್ದಿಲ್ಲದೆ/ತಿಳಿಯಾಗಿದ್ದೇನೆ/ಪಾರದರ್ಶಕವಾಗಿದ್ದೇನೆʼ- ಎಂಬಂತೆ ಇರುವ ಕವಿತೆಗಳು.

ಹಿಂದೆಂದಿಗಿಂತಲೂ ತಾವೋ ಮಾರ್ಗ ಇಂದು ಪ್ರಸ್ತುತ ವಿಚಾರ, ಅದರ ಬಗ್ಗೆ ಸೀರಿಯಸ್ಸಾಗಿ ಚಿಂತಿಸುವುದು ಅಗತ್ಯವೆಂದು ಅನ್ನುವ ಮಾತು ನಮಗೆ ಕೇಳಿ ಕೇಳಿ ಬರುತ್ತದೆ. ಈ ಏನನ್ನಾದರೂ ಕುರಿತು ಚಿಂತಿಸುವುದು ಅಗತ್ಯವೆಂಬ ಮಾತನ್ನು ತಾವೋ ಬಲ್ಲ ಯಾರೊಂದಿಗಾದರೂ ಹೇಳಿದರೆ ಫಕ್ಕನೆ ನಕ್ಕುಬಿಟ್ಟಾರು. ತಾವೋ ಎನ್ನುವುದು ವಿಶ್ವವನ್ನು ಕುರಿತ ಅರಿವು, ಅತ್ತಲಿನ ಹಾದಿ, ಅದರ ಬಗ್ಗೆ ಚಿಂತಿಸುವುದಲ್ಲ. ಇದರ ಹಾದಿಯಲ್ಲಿ ನಡೆಯುವವರು ತಮ್ಮ ಬದುಕನ್ನು ಬದುಕಲು ಹಚ್ಚಿಕೊಂಡಿರುತ್ತಾರೆ. ತಾವೋ ಎನ್ನುವುದು ಜ್ಞಾನವೃದ್ಧ ಮಂದಿ ಕೂತು ಚರ್ಚಿಸಿದ ಪರಿಣಾಮ, ಅದಕ್ಕೆ ತಾವೋ ಎಂಬ ಹೆಸರನ್ನು ಕೊಟ್ಟಿದ್ದು, ಅನಂತರ ಅದರ ಬಗ್ಗೆ ವಿಚಾರ ಮಾಡಿದ ಹಾನ್ ವಂಶದ ಚರಿತ್ರಕಾರನೊಬ್ಬ ಅದನ್ನು ಶಕ್ತಿಯ, ಸಾಮರ್ಥ್ಯದ ಎಂದರೆ ತಪ್ಪಾದೀತೇನೋ- ಇದು ಪ್ರಕ್ರಿಯೆಯ ಪುಸ್ತಕ. ಈ ಶಕ್ತಿಯ ಪ್ರಕ್ರಿಯೆಯ ಪುಸ್ತಕ ಎನ್ನುವುದು ಹಾಗೆ ಸಂಕಲಿಸಲ್ಪಟ್ಟ ತಾವ್ ಚಿಂಗ್ ಮತ್ತು ತೇವ್ ಚಿಂಗ್ ಎಂಬ ಎರಡು ಪುಸ್ತಕಗಳು ಕೂಡಿದ ಆಧಾರ ಗ್ರಂಥ. ಇವು ಯುದ್ಧನಿರತ ರಾಜ್ಯಗಳ ಕಾಲದಲ್ಲಿ ಹುಟ್ಟಿಕೊಂಡ ತಾತ್ವಿಕ ಜಿಜ್ಞಾಸೆಗಳು ಮತ್ತು ಕಂಡುಕೊಂಡ ಉತ್ತರಗಳು. ಕನ್ಫೂಷಿಯಸ್‍ ನ ಮಾರಲಿಸ್ಟಿಕ್ ತತ್ವಗಳಿಗೆ ವಿರುದ್ಧವಾಗಿ ತಾವೋ ಮನುಷ್ಯನ ಎಲ್ಲ ವಿಷಮ ಸ್ಥಿತಿಗಳಿಗೂ ಅವನು ನಿಸರ್ಗಾನುಸಾರಿಯಾಗಿ ವಿಶ್ವಾನುಸಾರಿಯಾಗಿ ಇಲ್ಲದಿರುವುದೇ ಕಾರಣವೆಂದು ಹೇಳುತ್ತದೆ.

ಯುದ್ಧದ ಕಾರಣಗಳನ್ನು, ಪರಿಣಾಮಗಳನ್ನು ಗಮನಿಸಿದರೆ ತಾವೋ ಮನುಷ್ಯನ ಮನಸ್ಸು ಕಂಡುಕೊಂಡ ಅತ್ಯಂತ ಸಂಗತವಾದ ಜೀವನಕ್ರಮ ಎಂದು ಹೇಳಬಹುದು. ಇಲ್ಲಿ ಸೃಷ್ಟಿಯಿದೆ-ಸೃಷ್ಟಿಕರ್ತನಿಲ್ಲ. ಶೂನ್ಯವಿದೆ-ವಿಕಾರ ತುಂಬಿದ ಮನಸ್ಸಿಲ್ಲ. ಇದರಲ್ಲಿ ವ್ಯಕ್ತವಾಗುವ ಶಕ್ತಿಯು ಮನುಷ್ಯನ ಪ್ರವೇಶವಿಲ್ಲದೆ ಉದ್ಭವವಾಗುವ ತನ್ನೊಳಗಿನ ಚೈತನ್ಯ. ಇದರ ಶಕ್ತಿ, ಯಾವನೊಬ್ಬ ತಾವೋ ಅನುಸಾರಿಯಾಗಿ ಬದುಕುವ ಪ್ರಕ್ರಿಯೆಯಲ್ಲಿದೆ. ಕಡೆಯದ ಕಾಷ್ಠ ಮತ್ತು ತುಂಬಿರದ ಬಟ್ಟಲು ಇಲ್ಲಿನ ಬಹು ಮುಖ್ಯವಾದ ರೂಪಕಗಳು.

ತಾವೋ ಇಂದಿನ ವೇಗ ಸಂಸ್ಕೃತಿಯ ಉಬ್ಬಸರೋಗಕ್ಕೆ ವಿಶ್ವದತ್ತ ದಿವ್ಯೌಷಧಿ. ಯುದ್ಧದಾಹಿ, ಅಧಿಕಾರದಾಹಿ, ಧನದಾಹಿಗಳು, ತರತಮವಾದಿಗಳು ಹೀಗೆ ಕಂಟಕರೆಲ್ಲರ ವಂಶಗಳು ದಿನದಿನಕ್ಕೂ ವೃದ್ಧಿಯಾಗುತ್ತಿರುವಾಗ ಕಿವಿಗಳಿಗೆ, ತನ್ಮೂಲಕ ಮನಸ್ಸಿನ ಒಳಕೋಣೆಗಳಿಗೆ ತಲುಪಬೇಕಾದದ್ದು ತುಂಬಿದ ತಾವೋದ ಖಾಲಿ ಬಟ್ಟಲಿನ ವಿವೇಕ. ಈ ವಿವೇಕಮಧು ಕೊಡಗಟ್ಟಲೆ ನಮ್ಮ ಮುಂದಿದೆ.

ಈ ಮೊದಲು ಹೇಳಿದಂತೆ ತಾವೋ ತೆಹ್ ಚಿಂಗ್ ನಲ್ಲಿನ ಎಂಭತ್ತೊಂದು ಅಧ್ಯಾಯಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಮೇಲಿನ ಭಾಗ ಮತ್ತು ಕೆಳಗಿನ ಭಾಗ. ಮೇಲಿನ ಭಾಗದಲ್ಲಿನ, 1 ರಿಂದ 37 ಅಧ್ಯಾಯಗಳು “ತಾವೋ” ಪದದಿಂದ ಪ್ರಾರಂಭವಾಗುತ್ತವೆ. ಇದನ್ನು ತಾವೋ ಚಿಂಗ್ (ಕ್ಲಾಸಿಕ್ ಆಫ್ ತಾವೋ ) ಎಂದು ಕರೆಯಲಾಗುತ್ತದೆ. ಕೆಳಗಿನ ಭಾಗದಲ್ಲಿನ 38 ರಿಂದ 81 ಅಧ್ಯಾಯಗಳು “ಶಾಂಗ್ ತೆಹ್” (ಅತಿ ಉನ್ನತ ಸದ್ಗುಣ) ಪದಗಳಿಂದ ಪ್ರಾರಂಭವಾಗುತ್ತವೆ. ಇದನ್ನು ತೆಹ್ ಚಿಂಗ್ (ಕ್ಲಾಸಿಕ್ ಆಫ್ ವರ್ಚ್ಯೂ) ಎಂದು ಕರೆಯಲಾಗುತ್ತದೆ. ತಾವೋ ಚಿಂಗ್ ಮತ್ತು ತೆಹ್ ಚಿಂಗ್ ಸೇರಿದ ಸಂಪೂರ್ಣ ಕೃತಿಯೇ ತಾವೋ ತೆಹ್ ಚಿಂಗ್. ಇದು ರಚಿಸಲ್ಪಟ್ಟ ಎರಡು ಸಾವಿರದ ನಾನೂರು ವರ್ಷಗಳ ನಂತರವೂ ತಾವೋ ತೆ ಚಿಂಗ್ ನ ಸ್ವಯಂ-ಅರಿವಿನ ಪಾಠಗಳು ನಮಗೆ ಎಂದಿಗಿಂತಲೂ ಹೆಚ್ಚಿಗೇ ಬೇಕು.

ತಾವೋ ತೆ ಚಿಂಗ್‌ ನ ಮೂಲದ ಬಗ್ಗೆ ಸಂಪೂರ್ಣ ನಿಶ್ಚಿತತೆಯೊಂದಿಗೆ ಸ್ವಲ್ಪವೇ ಹೇಳಬಹುದು. ಒಮ್ಮತದ ಪ್ರಕಾರ ಇದನ್ನು 400BC ಯಲ್ಲಿ ಒಬ್ಬ ಲಾವೋಜಿ ಬರೆದಿದ್ದಾರೆ. ಲಾವೋಜಿ ಎಂದರೆ ಸರಳವಾಗಿ “ಓಲ್ಡ್ ಮಾಸ್ಟರ್” ಎಂದು. ಲೇಖಕನ (ಅಥವಾ ಲೇಖಕರ) ನಿಜವಾದ ಹೆಸರು ಎಂದೆಂದಿಗೂ ಕಳೆದುಹೋಗಿದೆ. ತಾವೋ ತೆ ಚಿಂಗ್ ಎನ್ನುವುದನ್ನು “ಪೂರ್ಣತೆಯ ಮಾರ್ಗ” ಎಂದು ಸ್ಥೂಲವಾಗಿ ಅನುವಾದಿಸಲಾಗಿದೆ. ಅದರ ಎಂಭತ್ತೊಂದು ವಚನಗಳಲ್ಲಿ ಜಗತ್ತಿನಲ್ಲಿ ಒಳ್ಳೆಯತನ ಮತ್ತು ಸಮಗ್ರತೆ-ಪೂರ್ಣತೆ-ಯೊಂದಿಗೆ ಹೇಗೆ ಬದುಕಬೇಕು ಎಂಬುದರ ಕುರಿತು ಒಂದು ಸಿದ್ಧಾಂತವನ್ನು ನೀಡುತ್ತದೆ: ಅಂತಹ ವಿಷಯ ಅಸಾಧ್ಯವೆಂದು ಅನೇಕ ಜನರು ನಂಬುವ ಜಗತ್ತಿನಲ್ಲಿ ಒಂದು ಪ್ರಮುಖ ವಿವೇಕವಿದು. ತಾವೋ ತೆ ಚಿಂಗ್‌ ನಷ್ಟು ಹಳೆಯ ಪಠ್ಯಗಳು ಅನುವಾದ ಮತ್ತು ವ್ಯಾಖ್ಯಾನ ಎರಡರ ಸಮಸ್ಯೆಗಳಿಗೆ ಒಳಪಟ್ಟಿರುತ್ತವೆ. ಪ್ರಸಿದ್ಧ ಮೂಲ ಪಠ್ಯದ ಮೊದಲನೆಯ ಪದ್ಯ ನೂರಕ್ಕೂಹೆಚ್ಚು ಆವೃತ್ತಿಗಳಲ್ಲಿ ದೊರೆಯುತ್ತದೆ.

ಅನುವಾದಕರ ಪೈಕಿ ಆಧುನಿಕ ಪ್ರೇಕ್ಷಕರಿಗೆ ನಾಲ್ಕನೇ ಶತಮಾನದ ಮನಸ್ಸಿನ ಹೆಚ್ಚು ಅಮೂರ್ತವಾದ ರೂಪಕಗಳನ್ನು ಅರ್ಥೈಸುವಲ್ಲಿ ಸ್ಟೀಫೆನ್‌ ಮಿಚೆಲ್ ಗಮನಾರ್ಹವಾದ ಕೆಲಸವನ್ನು ಮಾಡುತ್ತಾನೆ. ಆದಾಗ್ಯೂ, ಇದು ನಿಜಕ್ಕೂ ಮಿಚೆಲ್‌ ನ ಬುದ್ಧಿವಂತಿಕೆಯಾಗಿದೆ, ಲಾವೋಜಿಯದಲ್ಲ. ಈ ಪದಗಳ ಮೂಲಕ ಹೊಳೆಯುತ್ತಿರುವುದು ಅದೇ ಎಂಬ ಅಭಿಪ್ರಾಯವಿದೆ.

ಅನೇಕ ಓದುಗರು ತಾವೋ ತೆ ಚಿಂಗ್‌ ನ ತತ್ತ್ವಶಾಸ್ತ್ರದಿಂದ ಮನಸಿನ ಹಿತ, ಆರಾಮಕ್ಕಿಂತ ಹೆಚ್ಚಿನ ಕೋಪವನ್ನು ಪಡೆಯುತ್ತಾರೆ. ಆ ಮೊದಲ ಸಾಲು ಪ್ರಸಿದ್ಧ ಝೆನ್ ಕೋನ್ – ತಾರ್ಕಿಕತೆಯ ಅಸಮರ್ಪಕತೆಯನ್ನು ಪ್ರದರ್ಶಿಸಲು ಮತ್ತು ಜ್ಞಾನವನ್ನು ಪ್ರಚೋದಿಸಲು ಝೆನ್ ಬೌದ್ಧಧರ್ಮದಲ್ಲಿ ಬಳಸಲಾಗುವ ಒಂದು ವಿರೋಧಾಭಾಸದ ಉಪಾಖ್ಯಾನ ಅಥವಾ ಒಗಟು- “ಒಂದು ಕೈ ಚಪ್ಪಾಳೆಯ ಶಬ್ದ ಯಾವುದು?” ಅನ್ನು ಹೋಲುತ್ತದೆ. ಏಕೆಂದರೆ ಅದು ಸಮಾನಾಂತರ ತಾತ್ವಿಕ ಸಂಪ್ರದಾಯದಿಂದ ಹುಟ್ಟಿಕೊಂಡಿದೆ ಮತ್ತು ಅದೇ ಉದ್ದೇಶವನ್ನು ಪೂರೈಸಲು ಅಸ್ತಿತ್ವದಲ್ಲಿದೆ. ತಾವೋ ತತ್ತ್ವಶಾಸ್ತ್ರದಲ್ಲಿ ಅ-ಕ್ರಿಯೆಯು ಮನಸ್ಸಿನ ದೊಡ್ಡ ಉತ್ತರಿಸಲಾಗದ ಪ್ರಶ್ನೆಗಳಿಗೆ ಉತ್ತರಿಸುವ ಕಡ್ಡಾಯ ಅಗತ್ಯವಾಗಿದೆ. “ಹೆಸರಿಸಲಾಗದವು ಶಾಶ್ವತವಾಗಿ ನಿಜವಾಗಿವೆ. ಹೆಸರಿಸುವುದು ಎಲ್ಲಾ ನಿರ್ದಿಷ್ಟ ವಸ್ತುಗಳ ಮೂಲವಾಗಿದೆ.” ಮಿಚೆಲ್ ಅವರ ಅನುವಾದದ ಎರಡನೇ ಸಾಲು ಅ-ಕ್ರಿಯೆಯ ಸ್ವರೂಪವನ್ನು ತೆರೆಯುತ್ತದೆ.

ಯುದ್ಧದ ಕಾರಣಗಳನ್ನು, ಪರಿಣಾಮಗಳನ್ನು ಗಮನಿಸಿದರೆ ತಾವೋ ಮನುಷ್ಯನ ಮನಸ್ಸು ಕಂಡುಕೊಂಡ ಅತ್ಯಂತ ಸಂಗತವಾದ ಜೀವನಕ್ರಮ ಎಂದು ಹೇಳಬಹುದು. ಇಲ್ಲಿ ಸೃಷ್ಟಿಯಿದೆ-ಸೃಷ್ಟಿಕರ್ತನಿಲ್ಲ. ಶೂನ್ಯವಿದೆ-ವಿಕಾರ ತುಂಬಿದ ಮನಸ್ಸಿಲ್ಲ. ಇದರಲ್ಲಿ ವ್ಯಕ್ತವಾಗುವ ಶಕ್ತಿಯು ಮನುಷ್ಯನ ಪ್ರವೇಶವಿಲ್ಲದೆ ಉದ್ಭವವಾಗುವ ತನ್ನೊಳಗಿನ ಚೈತನ್ಯ.

ನಾವು ನಮ್ಮ ಜಗತ್ತನ್ನು ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳನ್ನು ಹೆಸರಿಸುವ ಮೂಲಕವೇ ಗ್ರಹಿಸಲು ಒಗ್ಗಿಕೊಂಡಿರುತ್ತೇವೆ. ಆದರೆ ನಾವು ಎಲ್ಲವನ್ನು ಗೀಳಿನಿಂದ ಹೆಸರಿಸುವುದನ್ನು ನಿಲ್ಲಿಸಿ ಬದಲಿಗೆ ಅರಿವಿನಲ್ಲಿ ವಿಶ್ರಮಿಸಿದರೆ? ತಾವೋ ತೆ ಚಿಂಗ್ ಕಾಲ ಕಾಲದಲ್ಲಿ ಏನು ಮಾಡುತ್ತದೆ ಎಂದರೆ ನಾವು ಜಾಗೃತ ಸ್ಥಿತಿಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾದರೆ, ವಸ್ತುಗಳನ್ನು ಹೆಸರಿಸುವಲ್ಲಿ ಕಡಿಮೆ ತೊಡಗಿಕೊಂಡರೆ ನಾವು ಎಲ್ಲವನ್ನೂ ಹೇಗೆ ನೋಡಬಹುದು – ಎಂಬುದನ್ನು ನಮಗೆ ತೋರಿಸುತ್ತದೆ.

“ಮಾಡದಿರುವುದು ಎನ್ನುವುದನ್ನು ಅಭ್ಯಾಸ ಮಾಡಿ, ಎಲ್ಲವೂ ಜಾರಿಗೆ ಬರುತ್ತವೆ.” ಇದು ಮೂರನೆಯ ಪದ್ಯದಿಂದ ತೆಗೆದುಕೊಂಡ ಒಂದು ಅನುವಾದ ಭಾಗ. ಕೆಲಸಕ್ಕೆ ಒತ್ತುಕೊಡುವ ಉತ್ಪಾದಕತೆಯ ಗೀಳಿನ ಆಧುನಿಕ ಮನಸ್ಸಿಗೆ ನಿಜಕ್ಕೂ ಧರ್ಮದ್ರೋಹಿ, ಪಾಶಂಡಿ ಎಂದು ತೋರುತ್ತದೆ. ಬಹುಶಃ ನಾವು ಹೆಚ್ಚು ಜಾಗೃತರಾಗಿದ್ದರೆ, ನಾವು ಕಡಿಮೆ ಚಿಂತೆ ಮಾಡುತ್ತೇವೆ.

ಆಗಲೇ ನಿಜವಾಗಿ ಏನು ಮಾಡಬೇಕೆಂಬುದನ್ನು ಸರಿಯಾಗಿ ನೋಡಬಹುದು. ಆದರೆ ತಾವೋ ತೆ ಚಿಂಗ್ ಅನ್ವಯ ನಾವು ತಿಳಿದಿರಬೇಕಾದ ಮುಖ್ಯ ವಿಷಯ ಪ್ರಪಂಚವಲ್ಲ, ಅದು ನಮ್ಮ ಆತ್ಮ. ನಮ್ಮ ಸ್ವಯಂ ಅರಿವು ಅಥವಾ ಆತ್ಮಜ್ಞಾನ. ನಾವೆಲ್ಲರೂ ಈ ಪದವನ್ನು ತಿಳಿದಿದ್ದೇವೆ. ಆದರೆ ಇದರ ಅರ್ಥವೇನೆಂದು ನಮಗೆ ನಿಜವಾಗಿಯೂ ತಿಳಿದಿದೆಯೇ? “ಜಗತ್ತನ್ನು ನೀವೇ ಎಂಬಂತೆ ಪ್ರೀತಿಸಿ; ನಂತರ ನೀವು ಎಲ್ಲದರ ಕುರಿತು ಕಾಳಜಿ ವಹಿಸಬಹುದು” ಎಂದು ತಾವೋ ತೆ ಚಿಂಗ್‌ನ ಹದಿಮೂರನೇ ಪದ್ಯ ಮುಗಿಯುತ್ತದೆ.

ನಮ್ಮ ಆತ್ಮವನ್ನು ಕುರಿತು ನಾವು ಎಷ್ಟು ಕಾಳಜಿ ವಹಿಸುತ್ತೇವೆಯೋ ಹಾಗೆಯೇ ಎಲ್ಲ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಹೇಗಿರುತ್ತದೆ?- ತಾವೋ ಚಿಂತನೆಯ ನೈಸರ್ಗಿಕ ಕನ್ನಡಿಯಾಗಿರುವ ಸಾಹಿತ್ಯಿಕ ತತ್ತ್ವಶಾಸ್ತ್ರದ ಡೇವಿಡ್ ಫೋಸ್ಟರ್ ವ್ಯಾಲೇಸ್ ಅವರ ಮಾತಿನಲ್ಲಿ, ಜನರಿಗೆ ತಾವೋ ಅರಿವಿನ ಪೂರ್ವನಿಶ್ಚಿತ ಕ್ರಮ ಎಂದರೆ “ಅನನ್ಯವಾಗಿ, ಸಂಪೂರ್ಣವಾಗಿ, ಸ್ವಯಂ ತಾನೇ ಆಗಿ ಏಕಾಂಗಿಯಾಗಿ ದಿನ ಮತ್ತು ದಿನವಿಡೀ” ಜೀವಿಸುವುದು. ನಾವು ದೈಹಿಕವಾಗಿ ಏಕಾಂಗಿಯಾಗಿರುವುದರಿಂದ ಮಾತ್ರವೇ ಅಲ್ಲ, ಒಂಟಿತನವು ಜನಸಂದಣಿಯಲ್ಲಿಯೂ ಭರಿಸಲು ಅಸಾಧ್ಯವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಆದರೆ ನಾವು ಆಳವಾದ ಮತ್ತು ಸಾರ್ವತ್ರಿಕವಾದ ಭ್ರಮೆಯಲ್ಲಿ ಸಿಲುಕಿಕೊಂಡಿರುವುದರಿಂದಲೇ ವಿಶಾಲವಾದ ಬ್ರಹ್ಮಾಂಡದ ಕೇವಲ ಭಾಗವೆಂದು ತಿಳಿದಿದ್ದರೂ, ಏಳು ಶತಕೋಟಿ ಇತರ ಮಾನವ ಜೀವಗಳನ್ನು ಅವಧರಿಸಿರುವ ಬೃಹತ್ ಸಂಕೀರ್ಣ ಗ್ರಹದಲ್ಲಿ ಬದುಕುತ್ತಿರುವುದರ ಹೊರತಾಗಿಯೂ, ನಾವು ವಿಶ್ವದ ಕೇಂದ್ರ ಎಂಬ ನಿಜಕ್ಕೂ ಹುಚ್ಚು ಗ್ರಹಿಕೆಯೊಂದಿಗೆ ಮುಂದುವರಿಯುತ್ತೇವೆ.

“ಮಾಸ್ಟರ್ ಆಡಳಿತ ನಡೆಸಿದಾಗ, ಅವನು ಅಸ್ತಿತ್ವದಲ್ಲಿದ್ದಾನೆ ಎಂದು ಜನರಿಗೆ ಅಷ್ಟೇನೂ ತಿಳಿದಿರುವುದಿಲ್ಲ. ಮುಂದಿನದು ನಾವೇ ಪ್ರೀತಿಸುವ ನಾಯಕ. ಮುಂದೆ, ನಾವು ಭಯಪಡುವವನು. ಅತೀ ಕೆಟ್ಟವನು ಜನರಿಂದ ತಿರಸ್ಕರಿಸಲ್ಪಟ್ಟವನು. ನೀವು ಜನರನ್ನು ನಂಬದಿದ್ದರೆ, ನೀವು ಅವರನ್ನು ವಿಶ್ವಾಸಾರ್ಹರಲ್ಲದವರನ್ನಾಗಿ ಮಾಡುತ್ತೀರಿ. ಮಾಸ್ಟರ್ ಮಾತನಾಡುವುದಿಲ್ಲ, ಅವನು ಕೆಲಸ ಮಾಡುತ್ತಾನೆ. ಅವನ ಕೆಲಸ ಮುಗಿದ ನಂತರ ಜನರು, ‘ಏನದ್ಭುತ: ಅದನ್ನು ನಾವೇ ಮಾಡಿದ್ದೇವೆ, ನಾವೇ ಮಾಡಿದ್ದೇವೆ!’

ತಾವೋ ಟೆ ಚಿಂಗ್‌ನ ಹದಿನೇಳನೇ ಶ್ಲೋಕವು ಪಠ್ಯದ ಸ್ಥಿರ ವಿಷಯಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಇತರರನ್ನು ಸಮಗ್ರತೆಯಿಂದ ಹೇಗೆ ಮುನ್ನಡೆಸುವುದು ಎನ್ನುವುದದು. ಸ್ವಯಂ ಜಾಗೃತಿಯನ್ನು ಪ್ರದರ್ಶಿಸುವ ನಾಯಕರ ಬದಲಿಗೆ ಸಮಾಜ ಆಯ್ಕೆ ಮಾಡುತ್ತಿರುವುದು ವಿರುದ್ಧ ಶಕ್ತಿಗಳನ್ನು. ಇಂತಹ ಶಕ್ತಿಗಳಲ್ಲಿ ಸಮೂಹ-ಮಾಧ್ಯಮ ಭೂದೃಶ್ಯವು ಅತಿದೊಡ್ಡ ಮತ್ತು ಅತ್ಯಂತ ಭೀಕರವಾಗಿ ವಿರೂಪಗೊಂಡ ಅಹಂಕಾರಗಳ ಉಳಿವಿಗೆ ಒಲವು ತೋರುತ್ತದೆ

“ನೀವು ಮಹಾನ್ ಪುರುಷರನ್ನು ಅತಿಯಾಗಿ ಗೌರವಿಸಿದರೆ, ಜನರು ಶಕ್ತಿಹೀನರಾಗುತ್ತಾರೆ.” ಆಧುನಿಕ ಭ್ರಷ್ಟಾಚಾರಗಳಿಂದ ನಾವು ಕಲಿಯಬೇಕಾದದ್ದು ಅಪಾತ್ರರು ನಾಯಕರಾಗಿ ಹೆಚ್ಚು ಗೌರವಿಸಲ್ಪಡುತ್ತಿದ್ದಾರೆ. ಅವರು ಅಧಿಕಾರದ ಅನಿವಾರ್ಯ ಉಪ-ಉತ್ಪನ್ನ, ಸಮಾಜದ ಮೇಲ್ಮೈಯಲ್ಲಿ ರೂಪುಗೊಳ್ಳುವ ಮತ್ತು ನಾಯಕತ್ವದ ನೋಟವನ್ನು ಅನುಕರಿಸುವ ಶುದ್ಧ ಅಹಂಕಾರದ ಕಲ್ಮಶ.

ತಾವೊ ತೆ ಚಿಂಗ್ 2,400 ವರ್ಷಗಳಷ್ಟು ಹಳೆಯದಾದ ಜ್ಞಾಪನವಾಗಿದೆ. ಇಂದು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ವಯಂ-ಅರಿವಿನ, ಆತ್ಮಜ್ಞಾನದ ಅಭ್ಯಾಸ ಮಾಡಲು ಮತ್ತು ನಮ್ಮ ಸ್ವಂತ ಶಕ್ತಿಯನ್ನು ಅವಲಂಬಿಸಲು ಆಯ್ಕೆ ಇದೆ. ಅದು ನಮ್ಮಲ್ಲಿ ಕೆಲವರಿಗೆ ಸಾಂತ್ವನ ನೀಡುವ ಬದಲು ಅಸಹ್ಯವಾದ ಎಚ್ಚರದ ಕರೆಯಂತೆ ಬರಬಹುದು. ವ್ಯಾಲೇಸ್ ಹೇಳಿದಂತೆ: “ಇದನ್ನು ಮಾಡುವುದು ಊಹಿಸಲಾಗದಷ್ಟು ಕಷ್ಟ. ವಯಸ್ಕ ಪ್ರಪಂಚದ ದಿನ ದಿನದಲ್ಲಿ ಪ್ರಜ್ಞಾಪೂರ್ವಕವಾಗಿ ಮತ್ತು ಜೀವಂತವಾಗಿರಲು ಕಡು ಕಷ್ಟ.” ಅದು ಎಷ್ಟು ಕಷ್ಟವೋ, ನಾವು ಅದನ್ನು ಓದಿದ ಕ್ಷಣಗಳಿಗೆ, ತಾವೊ ತೆ ಚಿಂಗ್ ಕನಿಷ್ಠ ಇದು ಸಾಧ್ಯವೆಂದು ತೋರುತ್ತದೆ.

ಆಯ್ದ ಕವಿತೆಗಳು

1
ತಾವೋ ಕುರಿತು ಮಾತನಾಡಬಹುದು,
ಆದರೆ ಶಾಶ್ವತ ತಾವೊ ಕುರಿತು ಮಾತನಾಡಲಾಗದು.
ಹೆಸರುಗಳಿಗೆ ಹೆಸರಿಡಬಹುದು, ಆದರೆ ಶಾಶ್ವತಕ್ಕೆ ಅಲ್ಲ.
ಸ್ವರ್ಗ ಮತ್ತು ಭೂಮಿಯ ಹುಟ್ಟಿನ ಮೂಲವಾಗಿ, ಇದಕ್ಕೆ ಹೆಸರಿಲ್ಲ:
ಎಲ್ಲ ವಸ್ತುಗಳ “ತಾಯಿ” ಯಾಗಿ ಇದನ್ನು ಹೆಸರಿಸಬಹುದು.
ಎಂದೆಂದಿಗೂ ಅಪ್ರಕಟವಾಗಿರುವ ಅದರ
ನಿಕ್ಷಿಪ್ತ ಸಾರವನ್ನು ನಾವು ಕಾಣಬೇಕು:
ಯಾವಾಗಲೂ ಪ್ರಕಟವಾಗುವ ಅದರ
ಬಾಹ್ಯ ಅಂಶಗಳನ್ನುಸಹ ಕಾಣಬೇಕು.
ಇವೆರಕ್ಕೂ ಭಿನ್ನ ನಾಮಗಳಿದ್ದರೂ
ಒಂದೇ ಮೂಲದಿಂದ ಪ್ರವಹಿಸುತ್ತವೆ
ಇವೆರಡನ್ನೂ ವಿಸ್ಮಯಗಳೆಂದು
ರಹಸ್ಯಗಳೆಂದು ಕರೆಯಲಾಗುತ್ತದೆ.
ರಹಸ್ಯಗಳ ರಹಸ್ಯವು ಎಲ್ಲಾ ಸಾರಗಳಿಗೂ ಬಾಗಿಲು.

2
ತಾವೊ ಖಾಲಿ ಬಟ್ಟಲಿನಂತೆ
ಅದು ಬಳಕೆಯಲ್ಲಿರುವಾಗ ಭರ್ತಿ ಮಾಡಲಾಗುವುದಿಲ್ಲ ಎಂದೆಂದಿಗೂ
ಅದು ನಿರಾಳ, ಆಳವಳೆಯಲಾಗದುದು.
ಎಲ್ಲ ವಸ್ತುಗಳ ಆಕರವೆಂದು ತೋರುವುದು

ಅದು ಎಲ್ಲಾ ಹರಿತ ಅಲಗುಗಳನ್ನು ಮೊಂಡಾಗಿಸುತ್ತದೆ
ಎಲ್ಲಾ ಕಗ್ಗಂಟುಗಳನ್ನು ಬಿಡಿಸುತ್ತದೆ
ಎಲ್ಲಾ ಜ್ಯೋತಿಗಳನ್ನು ಸಮರಸಗೊಳಿಸುತ್ತದೆ,
ಜಗತ್ತನ್ನು ಬಂಧವೊಂದರಲ್ಲಿ ಒಂದುಗೂಡಿಸುತ್ತದೆ.

ಇದನ್ನು ಆಳದಲ್ಲಿ ಮರೆಮಾಚಲಾಗಿದೆಯಾದರೂ
ಇದು ಎಂದೆಂದಿಗೂ ಅಸ್ತಿತ್ವದಲ್ಲಿ ಇರುವುದೆಂದು ತೋರುತ್ತದೆ

ಅದು ಯಾರ ಮಗು ಎಂದು ನನಗೆ ಗೊತ್ತಿಲ್ಲ
ಇದು ಎಲ್ಲರ ವೈಶ್ವಿಕ ಪೂರ್ವಜ, ಎಲ್ಲ ವಸ್ತುಗಳ ತಂದೆ
ಎಂದು ತೋರುತ್ತದೆ .

3
ಪೂರ್ಣತೆಗೆ ಅಂಟಿಕೊಳ್ಳುವುದಕ್ಕಿಂತ
ಕಾಲದ ಹರಿವಲ್ಲಿ ನಿಲ್ಲುವುದು ತುಂಬಾ ಒಳ್ಳೆಯದು!

ಕತ್ತಿಯನ್ನು ಬಡಿಯುವುದನ್ನು, ಹರಿತಗೊಳಿಸುವುದನ್ನು ಮುಂದುವರಿಸು.
ಅಲಗನ್ನು ಹೆಚ್ಚು ಕಾಲ ಕಾಪಾಡಿಕೊಳ್ಳಲಾಗುವುದಿಲ್ಲ.

ಮನೆಯನ್ನು ಚಿನ್ನ ಮುತ್ತು ರತ್ನಗಳಿಂದ ತುಂಬಿಸು,
ಅದನ್ನು ಇನ್ನು ಕಾಪಾಡಲು ಸಾಧ್ಯವಿಲ್ಲ.

ನಿಮ್ಮ ಸಂಪತ್ತು ಮತ್ತು ಗೌರವಗಳನ್ನು ಕಾಣುವಂತಿಡು.
ನೀವು ವಿಪತ್ತುಗಳ ಬೆಳೆ ಮಾತ್ರವೇ ಕೊಯ್ಯುವಿರಿ.

ಸ್ವರ್ಗದ ದಾರಿ ಇಲ್ಲಿದೆ:
ನಿಮ್ಮ ಕೆಲಸವನ್ನು ನೀವು ಮಾಡಿ ನಿವೃತ್ತರಾಗಿ!

4
ಮೂವತ್ತು ಅರೆಕಾಲುಗಳು ಒಂದೇ ಗುಂಭದಲ್ಲಿ ಒಟ್ಟುಗೂಡುತ್ತವೆ
ಗುಂಭಮಧ್ಯದ ರಂಧ್ರದ ಮೇಲೆ ಬಂಡಿಯ ಉಪಯೋಗ ನಿಲ್ಲುತ್ತದೆ.

ಮಣ್ಣಿನ ಉಂಡೆಯಿಂದ ಪಾತ್ರೆಯನ್ನು ತಯಾರಿಸುತ್ತೇವೆ
ಪಾತ್ರೆಯೊಳಗಿನ ಖಾಲಿ ಜಾಗವೇ ಅದನ್ನು ಉಪಯುಕ್ತವಾಗಿ ಮಾಡುತ್ತದೆ

ಕೋಣೆಗೆ ಬಾಗಿಲು ಕಿಟಕಿಗಳನ್ನು ತಯಾರಿಸುತ್ತೇವೆ;
ಅಲ್ಲಿನ ಖಾಲಿ ಸ್ಥಳಗಳೇ ಕೊಠಡಿಯನ್ನು ವಾಸಿಸಲು ಯೋಗ್ಯವಾಗಿ ಮಾಡುತ್ತದೆ.

ಹೀಗಾಗಿ, ಮೂರ್ತವು ಸ್ಪಷ್ಟವಾದ ಪ್ರಯೋಜನಗಳನ್ನು ಹೊಂದಿದ್ದರೆ,
ಅಮೂರ್ತವಾಗಿದ್ದು ಅದನ್ನು ಉಪಯುಕ್ತವಾಗಿಸುತ್ತದೆ

5
ಅಪಕೀರ್ತಿಯನ್ನು ಮಧುರವಾದ ಅಚ್ಚರಿಯನ್ನಾಗಿ ಸ್ವಾಗತಿಸಿ.
ವಿಪತ್ತುಗಳನ್ನು ನಿಮ್ಮ ಸ್ವಂತ ದೇಹವೆಂಬಂತೆ ಮೆಚ್ಚಿಕೊಳ್ಳಿ.
ನಾವೇಕೆ ಅಪಕೀರ್ತಿಯನ್ನು ಮಧುರವಾದ ಅಚ್ಚರಿಯನ್ನಾಗಿ
ಸ್ವಾಗತಿಸಬೇಕು?

ಏಕೆಂದರೆ ಬಡತನದ ಬದುಕು ವರದಾನವಾಗಿದೆ:
ಅದನ್ನು ಪಡೆಯುವುದು ಆಹ್ಲಾದಕರ ವಿಸ್ಮಯ,
ಹಾಗೆಯೇ ಅದನ್ನು ಕಳೆದುಕೊಳ್ಳುವುದೂ!
ಅದಕ್ಕಾಗಿಯೇ ನಾವು ಅಪಕೀರ್ತಿಯನ್ನು
ಆಹ್ಲಾದಕರವಾದ ಆಶ್ಚರ್ಯವಾಗಿ ಸ್ವಾಗತಿಸಬೇಕು.

“ನಾವೇಕೆ ವಿಪತ್ತುಗಳನ್ನು
ನಮ್ಮ ಸ್ವಂತ ದೇಹವೆಂಬಂತೆ ಮೆಚ್ಚಿಕೊಳ್ಳಬೇಕು?”
ಏಕೆಂದರೆ ನಮ್ಮ ದೇಹವು
ನಮ್ಮ ವಿಪತ್ತುಗಳ ಮೂಲವಾಗಿದೆ.
ನಮಗೆ ದೇಹವೇ ಇಲ್ಲದಿದ್ದರೆ,
ನಾವು ಯಾವ ವಿಪತ್ತುಗಳನ್ನು ಹೊಂದಬಹುದು?

ಆದ್ದರಿಂದ, ತನ್ನ ದೇಹವನ್ನು ಪ್ರಪಂಚಕ್ಕೆ ನೀಡಲು
ಸಿದ್ಧರಿರುವವನಿಗಷ್ಟೇ ಜಗತ್ತನ್ನು ಒಪ್ಪಿಸವುದು ಯೋಗ್ಯವಾಗಿದೆ.
ಪ್ರೀತಿಯಿಂದ ಅದನ್ನು ಮಾಡಬಲ್ಲವನು ಮಾತ್ರ
ವಿಶ್ವದ ಪಾರುಪತ್ತೇದಾರನಾಗಲು ಅರ್ಹನು.

6
ನೋಡುವಿರಿ ಆದರೆ ನೀವು ಅದನ್ನು ಕಾಣಲು ಸಾಧ್ಯವಿಲ್ಲ!
ಇದರ ಹೆಸರು ನಿರಾಕಾರ.

ಅದನ್ನು ಕೇಳುವಿರಿ ಆದರೆ ನೀವು ಅದನ್ನು ಆಲಿಸಲು ಸಾಧ್ಯವಿಲ್ಲ!
ಇದರ ಹೆಸರು ನಿಶ್ಶಬ್ದ.

ಅದನ್ನು ಗ್ರಹಿಸಬಲ್ಲಿರಿ ಆದರೆ ನೀವದನ್ನು ಹೊಂದಲು ಸಾಧ್ಯವಿಲ್ಲ!
ಇದರ ಹೆಸರು ಅಭೌತಿಕ.

ಈ ಮೂರು ಗುಣಲಕ್ಷಣಗಳ ಆಳವರಿಯಲಾಗದು.
ಆದ್ದರಿಂದ ಅವು ಒಂದಾಗಿ ಮೇಳೈಸುತ್ತವೆ.
ಇದರ ಮೇಲಣ ರೂಹು ಬೆಳಗುತ್ತಿಲ್ಲ:
ಅದರ ಅಡಿಭಾಗವು ಮಂಕಾಗಿಲ್ಲ.
ಹೆಸರಿಸಲಾಗದದು

ಅದು ವಸ್ತುಗಳ ಪರಿಧಿಯನ್ನು ಮೀರಿ
ಹಿಂದಿರುಗುವವರೆಗೆ ನಿರಂತರವಾಗಿ ಚಲಿಸುತ್ತಲಿರುತ್ತದೆ.
ನಾವು ಅದನ್ನು ನಿರಾಕಾರದ ಆಕಾರವೆಂದು,
ಚಿತ್ರರಹಿತ ಚಿತ್ರವೆಂದು ಕರೆಯುತ್ತೇವೆ.
ನಾವು ಇದನ್ನು ಅವಿವರಣೀಯ ಮತ್ತು ಕಲ್ಪನಾತೀತ
ಎಂದು ಕರೆಯುತ್ತೇವೆ.

ಅದನ್ನು ಎದುರಿಸು
ಅದರ ಮುಖವನ್ನು ನೋಡಲಾಗದು.
ಅದನ್ನು ಅನುಸರಿಸು
ಅದರ ಬೆನ್ನನ್ನು ಕಾಣಲಾಗುವುದಿಲ್ಲ!
ಆದರೂ, ಈ ಸಮಯಾತೀತ ತಾವೊನಿಂದ ಸಜ್ಜಿತರಾಗಿ
ನೀವು ಪ್ರಸ್ತುತ ವಾಸ್ತವಗಳನ್ನು ಅರಿತುಕೊಳ್ಳಬಹುದು.
ಮೂಲವನ್ನು ತಿಳಿದುಕೊಳ್ಳುವುದು ತಾವೊ ಎಡೆಗೆ ದೀಕ್ಷೆ.