ಆಗ ಮೈಸೂರು ರಾಜ್ಯದಲ್ಲಿ ಊದುಬತ್ತಿ ತಯಾರಿಕೆ ಮತ್ತು ಮಾರಾಟ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮುದ್ದಣ್ಣ ಬ್ರಾಂಡ್‌ನ ತುಂಬಾನೇ ದೊಡ್ಡ ಬೋರ್ಡ್ (ರಸ್ತೆ ಅಗಲದ್ದು) ಒಂದು ಚಿಕ್ಕ ಪೇಟೆಯಲ್ಲಿ ನೋಡಿದ್ದ ನೆನಪು ನನಗಿದೆ. ಪ್ರಕಾಶ ನಗರ, ಶ್ರಿರಾಮಪುರದ ಪ್ರತಿ ಮನೆಯ ಮುಂದೂ ಎಲ್ಲಾ ವಯಸ್ಸಿನ ಹೆಂಗಸರು ಊದು ಬತ್ತಿ ಹೊಸೆಯುತ್ತಾ ಕುಳಿತಿರುತ್ತಿದ್ದ ಗುಂಪನ್ನು ಕಾಣಬಹುದಿತ್ತು. ಅದೆಷ್ಟೋ ಸಾವಿರ ಕಡ್ಡಿ ಹೊಸೆದರೆ ಕೆಲವು ಆಣೆ ಕೂಲಿ. ಸಂಸಾರ ತೂಗಿಸುವಲ್ಲಿ ಮಹಿಳೆಯರೂ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ

ಹೋದ ಸಂಚಿಕೆಯಲ್ಲಿ ವಿ ಸೀ ಹಾಗೂ ಅನಂತಮೂರ್ತಿ ಅವರ ನಡುವಿನ ಒಂದು ಪುಟ್ಟ ಪ್ರಸಂಗ ಹೇಳಿದೆ. ನಂತರ ವೈದ್ಯರು ಬಂದರು, ಸತ್ತಿದ್ದಾರೆ ಎಂದು ಡಿಕ್ಲೇರ್ ಆದ ತಾತ ಮಧ್ಯರಾತ್ರಿ ಎದ್ದು ಕೋಲು ಊರಿಕೊಂಡು ನಡೆದದ್ದು ಆಯ್ತು. ತಾತ ಕೊನೆಗೂ ದೇವರ ಪಾದ ಸೇರಿದ್ದು ಹೇಳಿದೆ. (ಆಗ ಸ್ಮಶಾನದಲ್ಲಿ ಹೆಣ ಸುಡಲು ವೈದ್ಯರ ಸರ್ಟಿಫಿಕೇಟ್ ಬೇಕಿತ್ತೋ ಇಲ್ಲವೋ ತಿಳಿಯದು… ಅಂತ ನನ್ನ ಸಂಶಯ ತೋಡಿಕೊಂಡಿದ್ದೆ.)

ಅಂದಹಾಗೆ ವಿ ಸೀ ಅವರಿಗೂ ಎಂ. ವಿ. ಸೀತಾರಾಮಯ್ಯ ಅವರಿಗೂ ನನ್ನ ಸ್ನೇಹಿತರಲ್ಲಿ ಬಾರಿ ಕನ್ಫ್ಯುಷನ್ನು. ಎಂ ವಿ ಸೀ ಅಂದರೆ ಅದೇ ಶಬರಿ ಬರೆದವರು ಅಲ್ಲವೇ, ಅದೇ ಮಗಳನ್ನು ಕಳಿಸುವ ಹಾಡು ಬರೆದು ನಮ್ಮನ್ನೆಲ್ಲಾ ಅಳಿ ಸಿದವರು ತಾನೇ ಅಂತ ಕೇಳ್ತಾರೆ. ಶಬರಿ ಮತ್ತು ಅಳುವ ಹಾಡು ಬರೆದವರು ವಿ ಸೀ ಅವರು. ಎಂ ವಿ ಸೀ ಅಂದರೆ ರಾಘವ ಹೆಸರಲ್ಲಿ ಬರೀತಿದ್ದರು. ಅವರ ಕನಸೇ ಬಿಎಂ ಶ್ರೀ ಪ್ರತಿಷ್ಠಾನ ಅಂತ ವಿವರ ಕೊಡ್ತಾ ಇರ್ತೀನಿ.. ಸೀತಾರಾಮಯ್ಯ ಹೆಸರಿನವರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು ಆಗಲಿಲ್ಲ, ಇವರ ಅಂದರೆ ನನ್ನ ಗೆಳೆಯರ ಪುಣ್ಯ ಅನಿಸಿದೆ!
ಈಗ ಮುಂದೆ.

ರಾಜಾಜಿನಗರದಲ್ಲಿ ಇಂಡಸ್ಟ್ರಿಯಲ್ ಟೌನ್ ಬಿಟ್ಟರೆ ಮತ್ತೊಂದು ಪ್ರಖ್ಯಾತ ಕಾರ್ಖಾನೆ ಎಂದರೆ GKW. ಇದು ಈಗಿನ ರಾಜಕುಮಾರ್ ರಸ್ತೆಯ ತುತ್ತ ತುದಿಯಲ್ಲಿ ಇತ್ತು. GKW ಅಂದರೆ ಗೆಸ್ಟ್, ಕೀನ್, ವಿಲಿಯಮ್ಸ್ ಅಂತ. ಸುಮಾರು ದೊಡ್ಡ ಕಾರ್ಖಾನೆ ಅದು. ಆರೇಳು ಸಾವಿರ ಉದ್ಯೋಗಿಗಳು ಇದ್ದರು. ಆದರೆ ಇದ್ದಕ್ಕಿದ್ದ ಹಾಗೆ ಎಂಬತ್ತು ತೊಂಬತ್ತರ ದಶಕದಲ್ಲಿ ಆ ಕಾರ್ಖಾನೆ ಮುಚ್ಚಿತು. ಟ್ರೇಡ್ ಯೂನಿಯನ್ ಗಲಾಟೆ ಹೆಚ್ಚಾಗಿ ಬೊಂಬಾಯಿಗೆ ಶಿಫ್ಟ್ ಆಯಿತು ಎಂದು ಅವರಿವರು ಮಾತಾಡಿಕೊಂಡರು.

ಅದಕ್ಕೆ ತುಸು ಹತ್ತಿರದಲ್ಲಿ ಕಿರ್ಲೋಸ್ಕರ್ ಕಂಪನಿ ಇತ್ತು. ದೊಡ್ಡ ಖಾಸಗಿ ಕಾರ್ಖಾನೆ ಅದು. ಅದೂ ಸಹ ಮುಚ್ಚಿ ಅಲ್ಲಿ ಅಂಗಡಿ ಸಮೂಹ, ಮೆಟ್ರೋ ಹುಟ್ಟಿತು. ಕಿರ್ಲೋಸ್ಕರ್ ಹತ್ತಿರವೇ ಇದ್ದ ಒಂದು ಸ್ಥಳಕ್ಕೆ ಮಿಲ್ಕ್ ಕಾಲೊನಿ ಎಂದು ಹೆಸರು ಇತ್ತು. ನಿಧಾನಕ್ಕೆ ಈ ಹೆಸರು ಕಣ್ಮರೆಯಾಗುತ್ತಿದೆ. ಇಂಡಸ್ಟ್ರಿಯಲ್ ಟೌನ್‌ನಲ್ಲಿ ಸುಮಾರು ಸಣ್ಣ ಪುಟ್ಟ ಕಾರ್ಖಾನೆಗಳು ಇದ್ದು ಹೇರಳವಾದ ಉದ್ಯೋಗಾವಕಾಶಗಳನ್ನು ಒದಗಿಸಿತ್ತು. ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಅಂತ ದೊಡ್ಡವರು ಹೇಳುತ್ತಿದ್ದರು. ಸುಮಾರು ಮಹಿಳೆಯರು ಅಲ್ಲಿ ಉದ್ಯೋಗ ಮಾಡುತ್ತಿದ್ದರು ಮತ್ತು ಸಂಜೆ ಆಗುತ್ತಿದ್ದ ಹಾಗೆ ಹೆಂಗಸರು ಗುಂಪು ಗುಂಪಾಗಿ ಮನೆ ಮುಟ್ಟಲು ದೌಡಾಯಿಸುತ್ತಿದ್ದರು. ಸಂಸಾರದ ನೊಗಕ್ಕೆ ಸರಿಸಮನಾಗಿ ಹೆಂಗಸರೂ ದುಡಿಯುತ್ತಿದ್ದ ನೋಟ ಈಗಲೂ ಆಗಾಗ ಕಣ್ಣ ಮುಂದೆ ಹಾದು ಹೋಗುತ್ತದೆ. ಇಂಡಸ್ಟ್ರಿಯಲ್ ಟೌನ್ ನಿಧಾನಕ್ಕೆ ಮೊದಲಿನ ಕಳೆ ಕಳೆದುಕೊಂಡಿತು. ಅಲ್ಲಿನ ಇಂಡಸ್ಟ್ರಿಗಳು ಮದುವೆ ಛತ್ರಗಳಾದವು. ಶ್ರೀರಾಮಪುರ ಹಾಗೂ ಪ್ರಕಾಶ ನಗರದ ಮಹಿಳೆಯರು ರಾಜಾಜಿನಗರದ ಮಹಿಳೆಯರಷ್ಟು ಓದಿದವರಲ್ಲ. ಆಗಲೇ ಅಂದರೆ ಐವತ್ತು ಅರವತ್ತು ವರ್ಷ ಮೊದಲೇ ವರ್ಕ್ ಫ್ರಮ್ ಹೋಂ ಕಂಡುಹಿಡಿದ ಜನ ಅವರು. ಅಷ್ಟಾಗಿ ವಿದ್ಯೆ ಇಲ್ಲದ ಅವರು ಸಣ್ಣ ಕೈಗಾರಿಕೆಗಳತ್ತ ಒಲವು ತೋರದೆ ಸಂಪೂರ್ಣ ಗೃಹ ಕೈಗಾರಿಕೆಗೆ ಮೊರೆ ಹೋಗಿದ್ದರು. ಇಲ್ಲಿ ಕಾಣುತ್ತಿದ್ದ ಊದುಬತ್ತಿ ಹೊಸೆಯುವ ಕೆಲಸ ನಾನು ರಾಜಾಜಿನಗರದಲ್ಲಿ ನೋಡೆ ಇಲ್ಲ! ಹಾಗೆ ನೋಡಿದರೆ ಸುಮಾರು ಕೆಲಸಗಳು ವರ್ಕ್ ಫ್ರಮ್ ಹೋಂ ಗುಂಪಿಗೆ ಸೇರಿದವು. ಹಪ್ಪಳ, ಸಂಡಿಗೆ, ಮೆಣಸಿನಪುಡಿ ತಯಾರಿ, ಹೂವು ಕಟ್ಟೋದು, ಮನೆಯಲ್ಲೇ ಹೊಲಿಗೆ ಮೆಶೀನು ಇಟ್ಟುಕೊಂಡು ವ್ಯಾಪಾರ ಮಾಡುವವರು… ಹೀಗೆ ಸುಮಾರು ವೃತ್ತಿಗಳು ವರ್ಕ್ ಫ್ರಮ್ ಹೋಂ…..ಗಳು ? ಈಗ ಕ್ಯಾಟರಿಂಗ್ ಸಹ ಗೃಹ ಉದ್ಯಮವಾಗಿ ಒಳ್ಳೆಯ ಆದಾಯ ತರುತ್ತಿದೆ.

ರಾಜಾಜಿನಗರದ ಮೊದಲ ಪ್ರಸೂತಿ ಗೃಹ, ನರ್ಸಿಂಗ್ ಹೋಂ ಇ ಎಸ್ ಐ ಎದುರು ಇತ್ತು. ಅದರ ಹೆಸರು ಗಾಯತ್ರಿ ಮೆಟರ್ನಿಟಿ ಹೋಂ. ಶ್ರೀ ಸಿ ಜಿ ಗುಂಡೂರಾವ್ ಮತ್ತು ಡಾ. ಸಿ ಜಿ ಕಮಲಮ್ಮ ಅವರು ಅದನ್ನು ನಡೆಸುತ್ತಿದ್ದರು. ಡಾ. ಕಮಲಮ್ಮ ಅವರೇ ಮುಖ್ಯ ವೈದ್ಯರು. ಇವರ ಮಗ ಸಿ ಜಿ ಗೋಪಾಲಸ್ವಾಮಿ, ಇವರ ತಮ್ಮ ಕುಮಾರಸ್ವಾಮಿ ನಮ್ಮ ಗೆಳೆಯರು. ಸುಮಾರು ನಮಗೆ ತಿಳಿದವರ ಕೂಸುಗಳು ಇಲ್ಲೇ ಜನ್ಮ ತಳೆದದ್ದು. ಅದರಿಂದ ಅಣ್ಣ ತಮ್ಮ ಇಬ್ಬರಿಗೂ ಸುಮಾರು ಪುಟ್ಟವರು ದೊಡ್ಡವರಾದ ಮೇಲೂ ಸಹ ಗೊತ್ತಿದ್ದರು.

ರಾಜಾಜಿನಗರದಲ್ಲಿ ಆಗ ಇದ್ದ ದೇವಸ್ಥಾನಗಳು ತುಂಬಾ ಕಡಿಮೆ ಎಂದೇ ಹೇಳಬೇಕು. ಮೂರನೇ ಬ್ಲಾಕಿನ ಇ ಎಸ್ ಐ ಆಸ್ಪತ್ರೆ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನ, ನಾಲ್ಕನೇ ಬ್ಲಾಕ್‌ನ ರಾಮಮಂದಿರ ದೇವಸ್ಥಾನ ಇವು ಹಳೆಯವು.

ರಾಮ ಮಂದಿರ ದ ಬಗ್ಗೆ ಕೆಲವು ಮಾಹಿತಿ: ರಾಮ ಮಂದಿರ ಇರುವ ಈಗಿನ ಸ್ಥಳ ಆಗಿನ ಸಿ ಐ ಟಿ ಬೀ ಯ ಅಧ್ಯಕ್ಷರಾಗಿದ್ದ ದೀನ ದಯಾಳು ನಾಯ್ಡು ಅವರು ಅಲಾಟ್ ಮಾಡಿದ್ದು. ಅದಕ್ಕೆ ಮೊದಲು ರಾಜಾಜಿನಗರದಲ್ಲಿನ ಆಸ್ತಿಕರ ಮನೆ ಮುಂದೆ ಚಪ್ಪರ ಹಾಕಿ ದೇವರನ್ನು ಸ್ಥಾಪನೆ ಮಾಡುತ್ತಿದ್ದರು. ರಾಮೋತ್ಸವ ಹಾಗೂ ಇತರ ಹಬ್ಬಗಳು ನಡೆಯುತ್ತಿತ್ತು. 1961 ರಲ್ಲಿ ಈಗಿನ ಜಾಗ ಸುಪರ್ದಿಗೆ ಬಂದ ನಂತರ ರಾಮಮಂದಿರ ಕಾಲಾನು ಕಾಲಕ್ಕೆ ವಿಸ್ತಾರಗೊಂಡಿತು. ಆರೇಳು ವರ್ಷಗಳಲ್ಲಿ ಬಿಡುವೇ ಇಲ್ಲದ ಹಾಗೆ ಕಾರ್ಯಕ್ರಮಗಳು. ಹರಿಕತೆ, ಸಂಗೀತ, ಭಜನೆ ಹೀಗೆ ವೈವಿಧ್ಯಮಯ. ಇಲ್ಲಿ ಕುಮಾರವ್ಯಾಸ ಭಾರತ ವಾಚನವೂ ಆಗುತ್ತಿತ್ತು.

ನನ್ನ ಗೆಳೆಯ ಶ್ರೀ ಶ್ರೀರಾಮ್ ಹೀಗೆ ಹೇಳುತ್ತಾರೆ… “ಆ ಸಮಯದಲ್ಲಿ ರಾಜಾಜಿನಗರದ ರಾಮಮಂದಿರದಲ್ಲಿ ದಿನಾಲೂ ಯಾವುದಾದರೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. (ರಾಮೋತ್ಸವ ಕಾರ್ಯಕ್ರಮಗಳಂತೂ ಅಭೂತ ಪೂರ್ವವಾಗಿ ನಡೆಯುತ್ತಿದ್ದವು). ಸಂಗೀತಗಾರರು, ಭಜನಾ ಮಂಡಳಿಗಳು, ವಿದ್ವಾಂಸರು ಆಗಮಿಸಿ ಕಾರ್ಯಕ್ರಮ ಕೊಡುತ್ತಿದ್ದರು. ಆ ಸರಣಿಯಲ್ಲಿ ಶ್ರೀ ಹೊಸಹಳ್ಳಿ ಕೇಶವಮೂರ್ತಿಯವರ ಕಾವ್ಯ ವಾಚನ ಮತ್ತು ಶ್ರೀ ಮತ್ತೂರು ಕೃಷ್ಣಮೂರ್ತಿ ಅವರ ವ್ಯಾಖ್ಯಾನ ಜನರಿಗೆ ತುಂಬಾ ಹಿಡಿಸಿತ್ತು. ಇದು ಚೆನ್ನಾಗಿ ನಡೆದಿದ್ದು ಅವರೂ ಹೆಚ್ಚಿನ ದಿನಗಳ ಕಾಲಾವಕಾಶ ಕೋರುತ್ತಿದ್ದರು. ಆದರೆ ಬೇರೆಯವರಿಗೂ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಅನಿವಾರ್ಯತೆ ಇದ್ದುದರಿಂದ ಮಂಡಳಿಯವರು ಅವರಿಗೆ ಅನುಮತಿ ನೀಡಲಿಲ್ಲ. (ಈ ವಿಷಯದಲ್ಲಿ ರಾಮ ಮಂದಿರ ಆಡಳಿತ ಮಂಡಳಿ ಬಹಳ ಜನಗಳ ವಿರೋಧ ಕಟ್ಟಿಕೊಂಡಿತು).

ಈ ಸಂದರ್ಭದಲ್ಲಿ ಸಮಾನ ಮನಸ್ಕರೆಲ್ಲಾ ಸೇರಿ ಈ ಜನಪ್ರಿಯ ಕಾವ್ಯವಾಚನ – ವ್ಯಾಖ್ಯಾನ ಕಾರ್ಯಕ್ರಮ ಮುಂದುವರಿಸಬೇಕೆಂಬ ಇರಾದೆಯಿಂದ ಈಗಿನ ಕುಮಾರವ್ಯಾಸ ಮಂಟಪದ ಜಾಗದಲ್ಲಿ ಒಂದು ತಾತ್ಕಾಲಿಕ ವ್ಯವಸ್ಥೆ ಮಾಡಿ ಕಾರ್ಯಕ್ರಮ ಮುಂದುವರಿಸಿದರು. ಜನರ ಪ್ರೋತ್ಸಾಹದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ವರ್ಷ ಪೂರ್ತಿ ನಡೆಯುವಂತಾಗಿ ಹೆಚ್ಚಿನ ಅನುಕೂಲತೆಗಳು ದೊರೆತವು. ನಾನೂ ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ವತ್ತಿನ ಆನಂದ ಅನುಭವಿಸಿದ್ದೇನೆ. ಆಗಿನ ರಾಜಾಜಿನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರ ಇರಲಿಲ್ಲ.” (ಶ್ರೀ ಮತ್ತೂರು ಕೃಷ್ಣಮೂರ್ತಿ ಅವರು ಭಾರತೀಯ ವಿದ್ಯಾ ಭವನ ಬೆಂಗಳೂರು ಶಾಖೆಯ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಅವರ ಭೇಟಿ ಆಗುತ್ತಿತ್ತು. ಈ ವಿಷಯ ಮುಂದೆ ತಿಳಿಸುತ್ತೇನೆ.)

ಸಂಸಾರದ ನೊಗಕ್ಕೆ ಸರಿಸಮನಾಗಿ ಹೆಂಗಸರೂ ದುಡಿಯುತ್ತಿದ್ದ ನೋಟ ಈಗಲೂ ಆಗಾಗ ಕಣ್ಣ ಮುಂದೆ ಹಾದು ಹೋಗುತ್ತದೆ. ಇಂಡಸ್ಟ್ರಿಯಲ್ ಟೌನ್ ನಿಧಾನಕ್ಕೆ ಮೊದಲಿನ ಕಳೆ ಕಳೆದುಕೊಂಡಿತು. ಅಲ್ಲಿನ ಇಂಡಸ್ಟ್ರಿಗಳು ಮದುವೆ ಛತ್ರಗಳಾದವು. ಶ್ರೀರಾಮಪುರ ಹಾಗೂ ಪ್ರಕಾಶ ನಗರದ ಮಹಿಳೆಯರು ರಾಜಾಜಿನಗರದ ಮಹಿಳೆಯರಷ್ಟು ಓದಿದವರಲ್ಲ. ಆಗಲೇ ಅಂದರೆ ಐವತ್ತು ಅರವತ್ತು ವರ್ಷ ಮೊದಲೇ ವರ್ಕ್ ಫ್ರಮ್ ಹೋಂ ಕಂಡುಹಿಡಿದ ಜನ ಅವರು.

ರಾಮಮಂದಿರದ ಕಾರ್ಯಕಾರಿ ಸಮಿತಿಯಲ್ಲಿದ್ದ ಶ್ರೀ ಕೆ ವಿ ಸುಬ್ಬರಾಯ ಅವರು ಕಾರ್ಯಕ್ರಮದ ರೂವಾರಿ ಆಗಿದ್ದರು. ಕಾರ್ಯಕ್ರಮ ನಿರೂಪಣೆ, ಸ್ವಾಗತ ವಂದನಾರ್ಪಣೆ ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಸುತ್ತಿದ್ದರು. ಇವರ ಮಗ ನನ್ನ ಗೆಳೆಯ ಕೆ ಎಸ್ ಶ್ರೀರಾಮ್ (bgml ನಲ್ಲಿ ಉನ್ನತ ಸ್ಥಾನದಲ್ಲಿದ್ದು ನಿವೃತ್ತರು). ಅವರು ಅವರ ತಂದೆಯವರ ಹಾಗೂ ರಾಮಮಂದಿರದ ಫೋಟೋಗಳನ್ನು ಒದಗಿಸಿದ್ದಾರೆ.

(ಕೆ ವಿ ಸುಬ್ಬರಾಯರು)

ಶ್ರೀ ಮತ್ತೂರು ಕೃಷ್ಣಮೂರ್ತಿ ಅವರು ಮುಂದೆ ಹಲವು ಸಂಘ ಸಂಸ್ಥೆಗಳ ಸ್ಥಾಪಕರು. ಭಾರತೀಯ ವಿದ್ಯಾಭವನ, ಬೆಂಗಳೂರು ಇದರ ಮುಖ್ಯಸ್ಥರಾಗಿ ಇವರು ಮಾಡಿರುವ ಕೆಲಸಗಳು ನೂರ್ಕಾಲ ನೆನಪಿನಲ್ಲಿ ಇರುವಂತಹುದು. ಈಗಿನ ಮಹಾಲಕ್ಷ್ಮಿ ಲೇಔಟ್‌ನ ಆಂಜನೇಯ ದೇವಸ್ಥಾನದ ವಿಗ್ರಹ ಮೊದಲು ಗುಡ್ಡದ ಮೇಲಿನ ಒಂದು ಬಂಡೆ. ಅದರ ಬಳಿ ಆಟ ಆಡುತ್ತಿದ್ದೆವು. ನೋಡ ನೋಡುತ್ತಿದ್ದ ಹಾಗೆ ಒಂದು ದಿನ ಆ ಬಂಡೆಯ ಮೇಲೆ ದೇವರ ಚಿತ್ರ ಯಾರೋ ಬರೆದರು. ನಿಧಾನಕ್ಕೆ ಕೆಲವು ಯುವಕರು ಸೇರಿ ದೇವಸ್ಥಾನದ ಕನಸು ಕಂಡರು. ಚಂದಾ ಎತ್ತಿದರು. ಸರ್ಕಾರವನ್ನು ಸಂಪರ್ಕಿಸಿದರು ಮತ್ತು ನಿಧಾನಕ್ಕೆ ದೇವಸ್ಥಾನ ಈಗಿನ ರೂಪು ಪಡೆಯಿತು. ಈಗ ಅದು ಎಷ್ಟು ಫೇಮಸ್ ಆಗಿದೆ ಅಂದರೆ ಹೊರಗಿನ ಪ್ರವಾಸಿಗಳಿಗೆ ಬೆಂಗಳೂರು ಪ್ರದರ್ಶನ ಅಂದರೆ ಸೈಟ್ ಸೀಯಿಂಗ್‌ನಲ್ಲಿ ಪ್ರಮುಖ ಸ್ಥಾನ ಇದಕ್ಕಿದೆ. ಅದೇ ರೀತಿ ಸಮೀಪದ ಇಸ್ಕಾನ್ ದೇವಸ್ಥಾನಕ್ಕೂ ಸಹ. ನಾನು ನನ್ನ ವೃತ್ತಿ ಜೀವನದ ನಿವೃತ್ತಿ ನಂತರದ ಕೊನೆಯ ಅಂಕವಾಗಿ bel ಪ್ರೊಬೇಷನರಿ ಇಂಜಿನಿಯರ್ಸ್ ಹಾಸ್ಟೆಲ್ ವಾರ್ಡನ್ ಆಗಿದ್ದೆ. ಆಗ ಹೊರ ರಾಜ್ಯಗಳಿಂದ ಬಂದಿದ್ದ ಇಂಜಿನಿಯರ್‌ಗಳನ್ನು ಇಸ್ಕಾನ್‌ಗೆ ಒಂದೆರೆಡು ಬಾರಿ ಕರೆದೊಯ್ದಿದ್ದೆ. ಕೃಷ್ಣ ಮಂದಿರದ ಸುತ್ತಲೂ ಕರೆದೊಯ್ದು ಅವರ ಸಾಮಾಜಿಕ ಕಾರ್ಯವನ್ನು ಅಲ್ಲಿದ್ದ ಮ್ಯಾನೇಜರ್ ವಿವರಿಸಿದರು, ದೇಣಿಗೆ ಕೊಟ್ಟರೆ ಸ್ವೀಕರಿಸುವುದಾಗಿ ತಿಳಿಸಿದರು. ಅಲ್ಲಿನ ಅವರ ಸಾಮಾಜಿಕ ಕಾರ್ಯ ಕಂಡು ಖುಷಿ ಅನಿಸಿತ್ತು. ನಮ್ಮ ಹುಡುಗರೂ ಸಹ ಪ್ರಭಾವಿತರಾದರು, ಖುಷಿಯಿಂದ ಸಾಕಷ್ಟು ದೇಣಿಗೆ ಕೊಟ್ಟರು.

ಇಸ್ಕಾನ್ ದೇವಸ್ಥಾನ ಸಹ ಮೊದಲು ಒಂದು ಪುಟ್ಟ ಗುಡ್ಡ. ಕೃಷ್ಣ ಭಕ್ತರು ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪಂಥ ಆರಂಭಿಸಿದರು(International Society for Krishna Consciousness). ಇದು ಭಾರತಕ್ಕೂ ಹಬ್ಬಿತು. ಆರಂಭವಾದ ಹೊಸತರಲ್ಲಿ ನಮ್ಮ ಊದುಬತ್ತಿಯ ಟೆಕ್ನಿಕಲ್ ನಾಲೆಜ್ ಕದಿಯಲು ಇದು ಹುಟ್ಟಿತು ಎನ್ನುವ ಗುಸು ಗುಸು ಸುದ್ದಿಯಿತ್ತು. ಆಗ ಮೈಸೂರು ರಾಜ್ಯದಲ್ಲಿ ಊದುಬತ್ತಿ ತಯಾರಿಕೆ ಮತ್ತು ಮಾರಾಟ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮುದ್ದಣ್ಣ ಬ್ರಾಂಡ್‌ನ ತುಂಬಾನೇ ದೊಡ್ಡ ಬೋರ್ಡ್ (ರಸ್ತೆ ಅಗಲದ್ದು) ಒಂದು ಚಿಕ್ಕ ಪೇಟೆಯಲ್ಲಿ ನೋಡಿದ್ದ ನೆನಪು ನನಗಿದೆ. ಪ್ರಕಾಶ ನಗರ, ಶ್ರಿರಾಮಪುರದ ಪ್ರತಿ ಮನೆಯ ಮುಂದೂ ಎಲ್ಲಾ ವಯಸ್ಸಿನ ಹೆಂಗಸರು ಊದು ಬತ್ತಿ ಹೊಸೆಯುತ್ತಾ ಕುಳಿತಿರುತ್ತಿದ್ದ ಗುಂಪನ್ನು ಕಾಣಬಹುದಿತ್ತು. ಅದೆಷ್ಟೋ ಸಾವಿರ ಕಡ್ಡಿ ಹೊಸೆದರೆ ಕೆಲವು ಆಣೆ ಕೂಲಿ. ಸಂಸಾರ ತೂಗಿಸುವಲ್ಲಿ ಮಹಿಳೆಯರೂ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು. ಹೊಸದರಲ್ಲಿ ಪಿಲ್ಲು(tuft) ಜುಟ್ಟು ಬಿಟ್ಟ, ಹಣೆ ತುಂಬಾ ಮುದ್ರೆ ಒತ್ತಿಕೊಂಡ, ತಿಲಕ ಇರಿಸಿದ ಕಚ್ಚೆ ಪಂಚೆ ಉಟ್ಟು ಕೊರಳಿಗೆ ತಬಲಾ ನೇತು ಹಾಕಿಕೊಂಡ, ಕನ್ನಡ ದೇವರ ನಾಮವನ್ನು ಇಂಗ್ಲಿಷ್‌ನಲ್ಲಿ ಹಾಡು ಹಾಡುತ್ತಾ ತಬಲಾ ಬಾರಿಸುತ್ತಾ ಕುಣಿಯುತ್ತಾ ಸಾಗುವ ಕೆಂಪಗಿನ ಅಮೆರಿಕನ್ ಭಕ್ತರನ್ನು ಕಣ್ಣು ಬಾಯಿ ಬಿಟ್ಟು ಇಡೀ ಊರಿನ ಜನತೆ ರಸ್ತೆಯ ಎರಡೂ ಬದಿಯಲ್ಲಿ ನಿಂತು ನೋಡುತ್ತಿತ್ತು. ಫಾರಿನ್‌ವವರೂ ನಮ್ಮ ದೇವರನ್ನ, ಅದರಲ್ಲೂ ಕೃಷ್ಣನನ್ನು ಪೂಜೆ ಮಾಡ್ತಾರೆ ಅಂತ ಖುಷಿ ಪಡ್ತಾ ಇದ್ದರು. ನಾವೂ ಸಹ ಖುಷಿ ಪಡುತ್ತಿದ್ದೆವು.

(ಇಸ್ಕಾನ್‌)

ಇಸ್ಕಾನ್‌ನಿಂದ (ಅಂದರೆ ಕೃಷ್ಣ ಪಂಥ)ಯುವ ಜನತೆಗೆ ಡ್ರಗ್ಸ್ ಚಟ ಹತ್ತಿತು ಎನ್ನುವ ಆರೋಪ ಸಹ ಇತ್ತು. ದೇವಾನಂದ್, ಜೀನತ್ ಅಮಾನ್ ನಟನೆಯ ಒಂದು ಪ್ರಖ್ಯಾತ ಸಿನಿಮಾದಲ್ಲಿ ಹರೇ ರಾಮ ಹರೇ ಕೃಷ್ಣ ಭಜನೆ ಮಾಡುತ್ತಾ ಭಂಗಿ ಸೇದುವ ಯುವಕರ ಚಿತ್ರಣ ಸಹ ಇತ್ತು. ಈ ಆರೋಪ, ಸುದ್ದಿ, ಪ್ರಚಾರ… ಈಗ ಅದೆಲ್ಲವನ್ನೂ ಮೀರಿ ಇಸ್ಕಾನ್ ಬೆಳೆದಿದೆ. ಇಡೀ ಪ್ರಪಂಚದಾದ್ಯಂತ ತನ್ನ ಭಕ್ತರನ್ನು, ಶಾಖೆಗಳನ್ನು ಹೊಂದಿದೆ. ಕೃಷ್ಣ ಭಗವಾನನ ಪ್ರಚಾರ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಶಾಲಾ ಮಕ್ಕಳಿಗೆ ಆಹಾರ ಪೂರೈಕೆ ಜತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಇಸ್ಕಾನ್ ನಡೆಸುತ್ತಿದೆ. ಹಣ ಹೆಚ್ಚು ಸೇರಿದಹಾಗೆ ಅಧಿಕಾರದ ಗದ್ದುಗೆ ಹಿಡಿಯಲು ಅಪಾರ ಪೈಪೋಟಿ ಸಹಾ ಇದೆ. ಕೋರ್ಟುಗಳಲ್ಲಿ ದಾವೆ ಹೂಡಿ ನ್ಯಾಯ ಕೇಳಲಾಗಿದೆ..

ನನ್ನ ಕೆಲವು ಯುವ ಸ್ನೇಹಿತರು ಇಸ್ಕಾನ್ ಭಕ್ತರು. ಚಿಕ್ಕ ವಯಸ್ಸಿಗೇ ಅದರತ್ತ ಸಂಪೂರ್ಣ ಆಕರ್ಷಿತರಾದವರು. ಹುಟ್ಟು ಹೆಸರನ್ನು ಬಿಟ್ಟು ಹೊಸ ಹೆಸರು ಅದರ ಬಾಲಕ್ಕೆ ದಾಸ ಎಂದು ಸೇರಿಸಿಕೊಂಡಿದ್ದಾರೆ. ಸಂಗೀತ, ತಬಲಾ, ಹಾರ್ಮೋನಿಯಂ ಮುಂತಾದ ವಾದ್ಯ ಕಲಿತು ಹಾಡು ಸಹ ಶ್ರುತಿ ಲಯ ಬದ್ಧವಾಗಿ ತನ್ಮಯರಾಗಿ ಹಾಡುತ್ತಾರೆ. ಅವರ ಶ್ರದ್ಧೆ ಮತ್ತು ಕಮಿಟ್‌ಮೆಂಟ್ ಕಂಡಾಗ ಹೃದಯ ತುಂಬಿ ಬರುತ್ತೆ. ಆರ್ ಎಸ್ ಎಸ್ ಹುಡುಗರ ಹಾಗೂ ಎಪ್ಪತ್ತರ ದಶಕದ ಕಮ್ಯುನಿಸ್ಟ್ ಕಾರ್ಡ್ ಹೋಲ್ಡರ್‌ಗಳ ಬದ್ಧತೆ ನೆನಪಿಗೆ ಬರುತ್ತೆ. ಕಮ್ಯುನಿಸ್ಟ್ ಕಾರ್ಡ್ ಹೋಲ್ಡರ್ ಅಂದರೆ ಆಗ ಅದು ಪ್ರಾಥಮಿಕ ಸದಸ್ಯತ್ವ.

ನನ್ನ ಸ್ನೇಹಿತ ಶ್ರೀ ಶ್ರೀವತ್ಸ ಮೊದಲನೇ ಬ್ಲಾಕಿನ ಬಗ್ಗೆ ಹೀಗೆ ಬರೆಯುತ್ತಾರೆ.. “ನಮ್ಮ ಆ ದಿನಗಳ ನೆನಪು ಭಾರೀ ಖುಷಿ ಕೊಡುತ್ತೆ. ಗಾಂಧಿ ಸ್ಟೋರ್ಸ್ ಹೆಸರಿನ ಒಂದು ತರಕಾರಿ ಅಂಗಡಿ ಗೋಕುಲ್ ಹೋಟೆಲ್ ಎದುರು (ಮೊದಲು ಇದು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮನೆ)ಇದೆ. ಶ್ರೀ ಚಕ್ರವರ್ತಿ ಐಯ್ಯಂಗಾರ್ ಅವರು ಉಚಿತ ಸಂಸ್ಕೃತ ತರಗತಿ ನಡೆಸುತ್ತಿದ್ದರು. ಹುತ್ತದ ವೆಂಕಟೇಶ್ವರ ದೇವಸ್ಥಾನ ಇಲ್ಲಿನ ಮನೆಯಲ್ಲಿತ್ತು. ಅದು ಈಗ ಬಸವೇಶ್ವರ ನಗರದಲ್ಲಿದೆ …

ಇಸ್ಕಾನ್ ಎದುರೂ ಒಂದು ದೇವಸ್ಥಾನ ಇದೆ. ಮೊದಲನೇ ಬ್ಲಾಕ್‌ನಲ್ಲಿ ಒಂದು ಶಿವ ದೇವಾಲಯ ಇದೆ. ವೆಸ್ಟ್ ಕಾರ್ಡ್ ರಸ್ತೆ ಶುರು ಆದನಂತರ ಅಲ್ಲೂ ದೇವಾಲಯ ಬಂದವು. ಮೊದಲನೇ ಬ್ಲಾಕ್ ಸಮೀಪ ಆವನಿ ಶಂಕರ ಮಠ ಬಂದಿತು. ಜೂಗನಹಳ್ಳಿಯಲ್ಲಿ ಗ್ರಾಮದೇವತೆಯ ದೇವರ ಗುಡಿ ಇದ್ದವು . ಅಲ್ಲೂ ಒಂದು ಆಂಜನೇಯ ಸ್ವಾಮಿ ದೇವಸ್ಥಾನ ಇತ್ತು. ರಾಮಕುಮಾರ್ ಮಿಲ್ ಹಿಂಭಾಗ ಪುರಂದರ ದೇವಸ್ಥಾನ ಬಂದಿದ್ದು ಹೇಳಿದ್ದೆ.

(ಮುಂದುವರೆಯುವುದು…)