ಕಾಳಿಕಾದೇವಿ ಅಷ್ಟಭುಜಗಳಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿ ತಾನು ಸಂಹರಿಸಿದ ದೈತ್ಯನ ಮೇಲೆ ಕುಳಿತಿದ್ದಾಳೆ. ಶಿಲ್ಪದ ಪ್ರಭಾವಳಿಯಲ್ಲಿ ಬೇತಾಳಗಣಗಳು ಆಯುಧಗಳನ್ನು ಹಿಡಿದು ನರ್ತಿಸುತ್ತಿರುವಂತೆ ರೂಪಿಸಿರುವುದು ಸ್ವಾರಸ್ಯಕರವಾಗಿದೆ. ಗರ್ಭಗುಡಿಯ ಬಾಗಿಲವಾಡದ ಮೇಲೆ ಕಾಳಿಯ ಮುಖವನ್ನು ಚಿತ್ರಿಸಿದೆ. ಉಳಿದ ಗರ್ಭಗುಡಿಗಳಲ್ಲಿ ಭೈರವನ ಮೂರ್ತಿಯನ್ನೂ ಶಿವಲಿಂಗವನ್ನೂ ಇರಿಸಲಾಗಿದೆ. ಶಿವಲಿಂಗದ ಎದುರಿಗೆ ನವರಂಗದಲ್ಲಿ ಚಿಕ್ಕದೊಂದು ನಂದಿಯೂ ಇದೆ. ಹಿಂದೆ ಇಲ್ಲಿ ಪೂಜೆಸಲ್ಲುತ್ತಿದ್ದಿತೆಂದು ಹೇಳಲಾದ ವಿಷ್ಣುವಿನ ಮೂರ್ತಿ ಈಗ ಉಳಿದಿಲ್ಲ.
ಟಿ.ಎಸ್.‌ ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಪ್ಪತೈದನೆಯ ಕಂತು

ಹೊಯ್ಸಳ ದೇವಾಲಯಗಳ ಗರ್ಭಗುಡಿಯ ಮೇಲಿನ ಶಿಖರವನ್ನು ಕೂಟ ಎಂದು ಕರೆಯುತ್ತಾರೆ. ಎಷ್ಟು ಗರ್ಭಗುಡಿಗಳಿರುತ್ತವೆಯೋ ಅಷ್ಟು ಶಿಖರಗಳು. ಒಂದೇ ಶಿಖರವಿದ್ದರೆ ಏಕಕೂಟ ದೇವಾಲಯ. ಎರಡು ಶಿಖರಗಳಿದ್ದರೆ ದ್ವಿಕೂಟ. ಬಹಳಷ್ಟು ಹೊಯ್ಸಳ ದೇಗುಲಗಳು ತ್ರಿಕೂಟ ದೇವಾಲಯಗಳು. ದೇಗುಲಕ್ಕೆ ಹಿಂದೊಮ್ಮೆ ಶಿಖರಗಳಿದ್ದು ಕಾಲಾಂತರದಲ್ಲಿ ಕುಸಿದು ಬಿದ್ದುಹೋಗಿದ್ದರೂ ಗರ್ಭಗುಡಿಗಳ ಸಂಖ್ಯಾನುಸಾರ ಗುರುತಿಸಬಹುದು. ಅಪೂರ್ವಕ್ಕೊಮ್ಮೆ ನಾಲ್ಕೈದು ಶಿಖರಗಳಿರುವುದೂ ಉಂಟು. ಉದಾಹರಣೆಗೆ, ಮಂಡ್ಯ ಜಿಲ್ಲೆಯ ಗೋವಿಂದನಹಳ್ಳಿಯಲ್ಲಿ ಪಂಚಕೂಟ ದೇಗುಲವಿದ್ದರೆ, ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯಲ್ಲಿ ಚತುಷ್ಕೂಟ ಅಂದರೆ ನಾಲ್ಕು ಶಿಖರಗಳುಳ್ಳ ದೇವಾಲಯವನ್ನು ಕಾಣಬಹುದು.

ಹಾಸನದಿಂದ ಬೇಲೂರಿಗೆ ಹೋಗುವ ದಾರಿಯಲ್ಲಿ ಹದಿನೈದು ಕಿಲೋಮೀಟರ್ ದೂರ ಸಾಗಿದರೆ ದೊಡ್ಡಗದ್ದವಳ್ಳಿ ತಲುಪಬಹುದು. ಮುಖ್ಯರಸ್ತೆಯಿಂದ ಎಡಕ್ಕೆ ಹೊರಳುವ ದಾರಿಯಲ್ಲಿ ಗುಡ್ಡದ ಮೇಲಿನಿಂದಲೇ ದೊಡ್ಡಗದ್ದವಳ್ಳಿಯ ದೇವಾಲಯದ ವಿಶಿಷ್ಟ ಗೋಪುರಗಳು ಕಾಣಿಸುತ್ತವೆ. ಹೊಯ್ಸಳ ದೇವಾಲಯ ನಿರ್ಮಾಣದ ಬಹು ಪ್ರಾಚೀನ ಮಾದರಿಯನ್ನು ಇಲ್ಲಿ ಕಾಣಬಹುದು. ವಿಷ್ಣುವರ್ಧನನ ಆಳ್ವಿಕೆಯ ಕಾಲದಲ್ಲೇ ಕಟ್ಟಲಾದ ಈ ಗುಡಿಯನ್ನು ಕ್ರಿ.ಶ. 1113 ರಲ್ಲಿ ವರ್ತಕನಾದ ಕುಲ್ಲಹ ರಾಹುತ ಮತ್ತವನ ಪತ್ನಿ ಸಹಜಾದೇವಿಯವರು ಕಟ್ಟಿಸಿದರಂತೆ. ಈಗ ಮಹಾರಾಷ್ಟ್ರದಲ್ಲಿರುವ ಕೊಲ್ಹಾಪುರದ ಲಕ್ಷ್ಮೀ ದೇವಾಲಯದ ಮಾದರಿಯಲ್ಲೇ, ಗದುಂಬಳ್ಳಿ ಎಂದು ಕರೆಸಿಕೊಳ್ಳುತ್ತಿದ್ದ ಈ ಗ್ರಾಮವನ್ನು ಅಭಿನವ ಕೊಲ್ಹಾಪುರ ಅಗ್ರಹಾರವಾಗಿ ರೂಪಿಸಿದರಂತೆ. ಮುಂದೆಯೂ ಹೊಯ್ಸಳ ಅರಸರು ಈ ದೇಗುಲಕ್ಕೆ ದಾನದತ್ತಿಗಳನ್ನು ನೀಡಿದ್ದಾರೆ.

ಈ ದೇವಾಲಯ ಅನೇಕ ಕಾರಣಗಳಿಂದ ವಿಶಿಷ್ಟವೆನಿಸುತ್ತದೆ. ನಾಲ್ಕು ಶಿಖರಗಳ ಗುಡಿ ಎನ್ನುವುದೇ ಮೊದಲ ವಿಶೇಷ. ದೇವಾಲಯಕ್ಕೆ ಪ್ರವೇಶಿಸುವ ಮುಖ್ಯಬಾಗಿಲಲ್ಲಿ ಮುಖಮಂಟಪ. ಸೊಗಸಾದ ಕಂಬಗಳು. ಒರಗಿ ಕುಳಿತುಕೊಳ್ಳಲು ಕಕ್ಷಾಸನ. ದೇವಾಲಯದ ಪ್ರಾಕಾರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಚಿಕ್ಕ ಚಿಕ್ಕ ಗುಡಿಗಳಿದ್ದು ಅವಕ್ಕೂ ಶಿಖರಗಳಿವೆ. ಈ ಚಿಕ್ಕ ಗುಡಿಗಳ ಬಾಗಿಲುವಾಡದ ಮೇಲೆ ಲಕ್ಷ್ಮಿಯ ಚಿತ್ರವಿದ್ದರೂ ಒಳಗುಡಿಯಲ್ಲಿ ಹಿಂದೆ ಯಾವ ಶಿಲ್ಪವಿತ್ತೋ ಗೊತ್ತಿಲ್ಲ.

ಶಿಖರಗಳ ವಿನ್ಯಾಸವೂ ಸರಳ, ಆದರೆ ಆಕರ್ಷಕ. ಮೂರು ಶಿಖರಗಳು ಮೆಟ್ಟಿಲುಗಳ ರೂಪದ ಏಳೆಂಟು ಪಟ್ಟಿಗಳನ್ನು ಹೊಂದಿದ್ದರೆ ಮುಖ್ಯದೇವತೆಯಗುಡಿಯ ಶಿಖರವು ಮಾತ್ರ ಚಿಕ್ಕಚಿಕ್ಕ ಗೋಪುರಗಳಂತಹ ವಿನ್ಯಾಸವನ್ನು ಹೊಂದಿದೆ. ಎಲ್ಲ ಶಿಖರಗಳ ಶುಕನಾಸಿ ಎಂದರೆ ಮುಂಚಾಚಿದ ಭಾಗದ ಮೇಲೆ ಹೊಯ್ಸಳ ಲಾಂಛನ. ಸಿಂಹದೊಂದಿಗೆ ಸೆಣಸುತ್ತಿರುವ ಸಳನ ವಿಗ್ರಹಗಳು. ಎಲ್ಲ ಶಿಖರಗಳ ಮೇಲೂ ಆಕರ್ಷಕವಾದ ಕಲ್ಲಿನ ಕಳಶಗಳಿವೆ.

ಹೊಯ್ಸಳ ದೇವಾಲಯಗಳಲ್ಲಿ ಲಕ್ಷ್ಮೀದೇವತೆಗಾಗಿ ನಿರ್ಮಿತವಾದ ಏಕೈಕ ದೇಗುಲವಿದು. ಸ್ಥಾನಕ ಎಂದರೆ ನಿಂತಿರುವ ಭಂಗಿಯಲ್ಲಿರುವ ಲಕ್ಷ್ಮಿಯು ಚತುರ್ಭುಜೆಯಾಗಿದ್ದು ಅಭಯಹಸ್ತದಲ್ಲಿ ಜಪಮಾಲೆಯನ್ನೂ ಉಳಿದ ಕೈಗಳಲ್ಲಿ ಶಂಖ, ಚಕ್ರ, ಗದೆಗಳನ್ನೂ ಧರಿಸಿದ್ದಾಳೆ. ಶಿಲ್ಪದ ಎರಡು ಬದಿಗಳಲ್ಲಿ ಸೇವಕಿಯರಿದ್ದಾರೆ. ಆದರೆ, ಶಿಲ್ಪದ ಸುತ್ತ ತೋರಣವಿಲ್ಲದಿರುವುದರಿಂದ ವಿಗ್ರಹ ಸ್ವಲ್ಪ ಚಿಕ್ಕದಾಗಿ ಕಾಣುತ್ತದೆ.

ದೇವಾಲಯದೊಳಕ್ಕೆ ಬರುತ್ತಿರುವಂತೆಯೆ ನವರಂಗದ ಎಡಭಾಗದಲ್ಲಿ ಎದುರುಬದುರಾಗಿ ನಿಂತ ಬೇತಾಳಗಳು ಕಾಣಸಿಗುತ್ತವೆ. ಎಡಭಾಗದ ಗರ್ಭಗುಡಿಯಲ್ಲಿರುವ ಕಾಳಿದೇವತೆಯ ದ್ವಾರಪಾಲಕರಾದ ಈ ಬೇತಾಳವಿಗ್ರಹಗಳ ಎತ್ತರ, ಆಕಾರಗಳು ಅಚ್ಚರಿಮೂಡಿಸುತ್ತವೆ. ಮೇಲುಸೂರಿಗೆ ತಲೆತಾಗುವಂತೆ ನಿಂತ ಏಳಡಿ ಎತ್ತರದ ಈ ನಗ್ನ ವಿಗ್ರಹಗಳು ಕೆದರಿದ ತಲೆ, ಹೊರಚಾಚಿಕೊಂಡ ಕಣ್ಣುಗಳು, ದೊಡ್ಡ ಕರ್ಣಕುಂಡಲಗಳು, ಜೋತಾಡುವ ನಾಲಗೆ, ಎದೆಯ ಮೂಳೆಗಳು, ಬಲಗೈಯಲ್ಲಿ ದೊಡ್ಡಕತ್ತಿ, ಎಡಗೈಯಲ್ಲಿ ಹಿಡಿದ ರುಂಡ ಮೊದಲಾಗಿ ಭಯಮೂಡಿಸುವಂತೆ ಚಿತ್ರಿತವಾಗಿವೆ.

(ಫೋಟೋಗಳು: ಲೇಖಕರವು)

ಕಾಳಿಕಾದೇವಿ ಅಷ್ಟಭುಜಗಳಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿ ತಾನು ಸಂಹರಿಸಿದ ದೈತ್ಯನ ಮೇಲೆ ಕುಳಿತಿದ್ದಾಳೆ. ಶಿಲ್ಪದ ಪ್ರಭಾವಳಿಯಲ್ಲಿ ಬೇತಾಳಗಣಗಳು ಆಯುಧಗಳನ್ನು ಹಿಡಿದು ನರ್ತಿಸುತ್ತಿರುವಂತೆ ರೂಪಿಸಿರುವುದು ಸ್ವಾರಸ್ಯಕರವಾಗಿದೆ. ಗರ್ಭಗುಡಿಯ ಬಾಗಿಲವಾಡದ ಮೇಲೆ ಕಾಳಿಯ ಮುಖವನ್ನು ಚಿತ್ರಿಸಿದೆ. ಉಳಿದ ಗರ್ಭಗುಡಿಗಳಲ್ಲಿ ಭೈರವನ ಮೂರ್ತಿಯನ್ನೂ ಶಿವಲಿಂಗವನ್ನೂ ಇರಿಸಲಾಗಿದೆ. ಶಿವಲಿಂಗದ ಎದುರಿಗೆ ನವರಂಗದಲ್ಲಿ ಚಿಕ್ಕದೊಂದು ನಂದಿಯೂ ಇದೆ. ಹಿಂದೆ ಇಲ್ಲಿ ಪೂಜೆಸಲ್ಲುತ್ತಿದ್ದಿತೆಂದು ಹೇಳಲಾದ ವಿಷ್ಣುವಿನ ಮೂರ್ತಿ ಈಗ ಉಳಿದಿಲ್ಲ.

ಒಳದೇಗುಲದ ಬಾಗಿಲಲ್ಲಿರುವ ದ್ವಾರಪಾಲಕರ ವಿಗ್ರಹಗಳನ್ನು ಹೊರತುಪಡಿಸಿ ದೇವಾಲಯದ ಸುತ್ತಲಿನ ಭಿತ್ತಿಗಳ ಮೇಲೆ ಶಿಲ್ಪಗಳೇನೂ ಇಲ್ಲ. ಆದರೆ ಕಿರುಗಂಬಗಳು, ಸಿಂಹಮುಖ ಹಾಗೂ ಗೋಪುರದಂತಹ ಸರಳರಚನೆಗಳಿಂದಲೇ ದೇವಾಲಯ ಆಕರ್ಷಕವಾಗಿ ಕಾಣುವಂತೆ ರೂಪಿಸಲಾಗಿದೆ.

ಪೂಜಾವಿಧಿಗಳನ್ನು ಶ್ರದ್ಧೆಯಿಂದ ನೆರವೇರಿಸಿದ ಅರ್ಚಕರು ನಾವು ಕೊಡಹೋದ ಹಣವನ್ನು ಸ್ವೀಕರಿಸಲು ಸುತರಾಂ ಒಪ್ಪಲಿಲ್ಲ. ಮುಂದಿನ ಸಲ ಬರುವಾಗ ಸಾಧ್ಯವಾದರೆ ದೇವರ ದೀಪಕ್ಕಾಗಿ ಎಣ್ಣೆ ತಂದುಕೊಡಿ ಎಂದುಬಿಟ್ಟರು. ಅವರ ವೃತ್ತಿನಿಷ್ಠೆಯನ್ನು ಕಂಡು ಸಂತೋಷಪಡಬೇಕೋ, ಗತವೈಭವದ ಶ್ರೇಷ್ಠ ಮಾದರಿಗಳಾಗಿ ಉಳಿದುಕೊಂಡಿರುವ ನಮ್ಮ ದೇಗುಲಗಳ ವರ್ತಮಾನದ ದುಸ್ಥಿತಿಯ ಬಗೆಗೆ ವಿಷಾದಪಡಬೇಕೋ ತಿಳಿಯಲಿಲ್ಲ.