ಮುಟ್ಟು ನಿಲ್ಲುವ
ಸಮಯದಲಿ
ಕೆಳಹೊಟ್ಟೆಯಲಿ ಕೂಸು
ಕದಲುವ ಕನವರಿಕೆಯಾಗುತಿದೆ..

*

ತುಟಿಯ ತುದಿಯಿಂದ ತುಳುಕಿದ
ಮುತ್ತುಗಳ ಗುಂಪೊಂದು
ಅವನ ಹುಡುಕಿ ಹೊರಟಿವೆ..

*

ಪ್ರತಿ ರಾತ್ರಿಗಳೂ ಕತ್ತಲಿಗೆ
ಒಡ್ಡಿಕ್ಕೊಳ್ಳುತ್ತವೆ ಜಗದ ಪಾಲಿಗೆ.
ನಕ್ಷತ್ರದೂರಿಗೆ ನಾವು ಜೊತೆಯಾಗಿ ನಡೆದದ್ದು
ತಿಳಿಯಲೇ ಇಲ್ಲ ಸಧ್ಯ ಯಾರಿಗೂ.

*

ಒಂಟಿ ಹೆಣ್ಣು ಮಲಗಿದ್ದ ಹಾಸಿನಲ್ಲಿ
ಹಸಿಹಸಿ ವೀರ್ಯದ
ವಾಸನೆ.
ಕಾಮನೊಂದಿಗೆ
ಕನಸಿನೂರಿನ ಹಾದಿ
ಸಾಗಿದ್ದು ತಿಳಿದದ್ದು
ಸೂರ್ಯ
ನೇವರಿಸಿದ ಮೇಲೆ.

*

ನಾಳೆಗಳ ಕುರಿತು ಹೇಳದಿರು ಗೆಳೆಯನೆ.
ಇಲ್ಲೊಂದು ಹೂವು
ಅರಳಿದ ಮರುಘಳಿಗೆಯೆ
ಅತಿ ಗಾಳಿ ಸಹಿತ
ಆಲಿಕಲ್ಲು ಮಳೆ.

*

ಜಗದೆಲ್ಲಾ ಹೆಣ್ಣುಗಳ ಕಣ್ಣಿಗೆ
ಅಷ್ಟಾವಕ್ರನನ್ನಾಗಿಸು
ಅವನ.
ಕವಿತೆ ಹುಟ್ಟುವಾಗೊಮ್ಮೆ
ಕಣ್ಣೂ ತುಳುಕಿ
ನೋಯುವ ಸುಖದ ವಿವರಣೆ
ನೀಡುತ್ತದೆ.
ನಾ ಹೇಗಿದ್ದರೂ ರಾಜನ ಮಡದಿಯೇ.!

ಗರಿ ತಾಕಿದಂತೆ ತಾಕಿಬಿಡು
ನನ್ನವನೆ.!
ಜಗದ ಜನರೆದುರಿಗೆ
ಬರಿಯ ಪರಿಚಿತರಂತೆ
ಕುಳಿತಾಗ ಸನಿಹ ನಾವು.!
ಕನಲಿದ್ದು ನಿನಗೆ ಮಾತ್ರ ತಿಳಿವ
ಸುಖವ ಉಳಿಸು ನನಗಾಗೆ.

*

ಕಣ್ಣುಜ್ಜುತ್ತಾ
ಉದುರಿದ ಪಾರಿಜಾತಗಳ
ಸೆರಗಲ್ಲಿಡುವಾಗ
ಅನಾಯಾಸ ಹರಡಿದ ಹೆರಳ
ತುರುಬಾಗಿಸಿಕೊಳ್ಳುತ್ತೇನೆ.
ಪಾರಿಜಾತದ ಘಮಲು
ಅವನ ಪತರಗುಡಿಸಿದ್ದು
ಹಸಿಹಸಿ ಎದೆಯಲಿದೆ.

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)