ಮೊಗ್ಗು ಮತ್ತು ಮಸೆದ ಮಚ್ಚು

ಜಾಗ್ರತೆ ಮಾಡಿ ಹುಡುಕಿ
ಹೆಕ್ಕಿಕೊಂಡ ಒಂದು
ಸೋವಿ ಏಕಾಂತದಲ್ಲಿ
ನಮ್ಮ ಬಟ್ಟಲಲ್ಲಿದ್ದಿದ್ದು
ಇಬ್ಬನಿ ಬಿಂದುಗಳಾರದ
ಒಂದು
ಬೊಗಸೆ ಮೊಗ್ಗು
ನೆಲ ತಾಕಿದರೆ
ಎಲೆಯೊಡೆವ ಸೊಕ್ಕಿನ
ಎಂಟು ಗಟ್ಟಿ ಬೀಜ
ಮತ್ತು ಎರಡೂ ಬದಿ
ಸವೆದು ಚೂಪಾಗಿಸಿದ ಮಚ್ಚು.

ಉತ್ತು ಹದವೆಬ್ಬಿಸಿದ
ಜರುಗು ಭೂಮಿಗೆ
ಸುಕ್ಕು ಹಣೆಯಿಂದಿಳಿದ
ಉಪ್ಪು ತೊಟ್ಟಿಕ್ಕಿ
ಕತ್ತರಿಸಿದ ಗೇಣು
ಕಡ್ಡಿ ಊರಿ
ನೆಲ ಬಗೆದು
ಮಣ್ಣು ನೆನೆಯಿಟ್ಟು
ಹತ್ತು ಹುಣ್ಣಿಮೆ
ಹತ್ತು ಅಮಾವಾಸ್ಯೆ ಕಾದರೆ
ಮೊಗ್ಗು ಕಚ್ಚುತ್ತವೆ
ದಳ ಉದುರಿ
ಉಳಿದವು ಗಟ್ಟಿ ಬೀಜ

ಬೆವರು ಭೂಮಿ ಭಾನು ಬೀಜ
ಮತ್ತು
ಒಂದು ಆದಿಮ ಪ್ರೇಮ

ಏನನ್ನೂ
ಮಾಡಬಹುದಿತ್ತು
ಆ ಹೊತ್ತಿನಲ್ಲಿ
ನಮ್ಮನಮ್ಮ ಅಹಮ್ಮುಗಳನ್ನು
ಬದಿಗಿಡುವುದು
ತ್ರಾಸವೇನಿರಲಿಲ್ಲ

ನಾವು ಮೊಗ್ಗೆಯನ್ನು
ಹುರಿವ ಬಿಸಿಲಲ್ಲಿ ಹೊರಗಿಟ್ಟು
ಬೀಜವನ್ನೂ ಸಾವಕಾಶ
ಉಪ್ಪುನೀರಿಗೆ ನೆನೆಯಿಟ್ಟು
ಸಿಕ್ಕಿದ ಬೆಣಚುಗಲ್ಲು ಕುಟ್ಟಿ
ಹುಡಿ ಮಾಡಿ
ಮಚ್ಚು ಮತ್ತಷ್ಟು ಉಜ್ಜಿ
ನಾಳೆಗಳ
ಬರಮಾಡಿಕೊಂಡೆವು

ತುಸು ತಾಕಿದರೂ ಛಿಲ್ಲನೆ
ನೆತ್ತರು ಚಿಮ್ಮುವಂತ
ಮಸೆದ ತುದಿಯಿಂದ
ಮೊಗ್ಗು ಮತ್ತು
ಗಟ್ಟಿ ಬೀಜಗಳನ್ನು
ಕತ್ತರಿಸಿ
ನಮ್ಮ ಸುಖದ ನಾಳೆಗಳ
ಕುರಿತು ಮಾತಾಡುತ್ತಿದ್ದೇವೆ
ಈಗ
ಮಜವೆನಿಸುತ್ತಿದೆ.