Advertisement
ನಂಬಿ ಕೆಟ್ಟವರಿಲ್ಲವೋ ಮನುಜ….: ಬಸವನಗೌಡ ಹೆಬ್ಬಳಗೆರೆ ಸರಣಿ

ನಂಬಿ ಕೆಟ್ಟವರಿಲ್ಲವೋ ಮನುಜ….: ಬಸವನಗೌಡ ಹೆಬ್ಬಳಗೆರೆ ಸರಣಿ

ಅವನ ಮಾತು ಕೇಳಿದ ಮನಸ್ಸು ಇನ್ನೊಂದು ರೀತಿ ಯೋಚನೆ ಮಾಡಲು ಶುರು ಮಾಡ್ತು. ಸುಮ್ಮನೇ ಕೆಲಸಕ್ಕೆ ಸೇರದೇ ಮೆಡಿಕಲ್ ರೆಪ್ ಕೆಲಸದಲ್ಲಿ ಮುಂದುವರೆದರೆ ಹೇಗೆ? ಎಂದು ಯೋಚಿಸಿದೆ. ಇದಕ್ಕೆ ಪೂರಕವಾಗಿ ಹಲವಾರು ನನ್ನ ಮೆಡಿಕಲ್ ರೆಪ್ ಗೆಳೆಯರು ಅಲ್ಲಿ ಪೆನ್ಶನ್ ಇಲ್ವಂತೆ. ಸುಮ್ನೇ ಇಲ್ಲೇ ಇದ್ಬಿಡು ಎಂದರು. ನಾನು ಇದೇ ರೀತಿ ಮಾಡಬೇಕು ಎಂದುಕೊಂಡರೆ ನಮ್ಮ ಸಂಬಂಧಿಕರು ಇದಕ್ಕೆ ಒಪ್ಪಲಿಲ್ಲ. ಸರ್ಕಾರಿ ಕೆಲಸ ಸಿಗೋಕೂ ಪುಣ್ಯ ಮಾಡಿರಬೇಕು ಈ ರೀತಿ ಮಾಡಿ ತಿನ್ನೋ ಅನ್ನದಾಗೆ ಕಲ್ಲು ಹಾಕಿಕೊಳ್ಳಬೇಡ ಎಂದರು.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆರಡನೆಯ ಕಂತು ನಿಮ್ಮ ಓದಿಗೆ

ಒಬ್ಬ ವೈದ್ಯರು ನನಗೆ ಶರ್ಟ್ ಗಿಫ್ಟ್ ಕೊಟ್ಟು ಇದನ್ನು ಮುಂದಿನ ಬಾರಿ ಬರುವಾಗ ಹಾಕಿಕೊಂಡು ಬಾ ಎಂದು ಹೇಳಿದರು. ಅದನ್ನು ಖುಷಿಯಿಂದಲೇ ತೆಗೆದುಕೊಂಡು ನಾನು ದಾವಣಗೆರೆಗೆ ಹಿಂತಿರುಗಿದೆ. ಇದಾಗಿ ಹದಿನೈದು ದಿನಗಳ ತರುವಾಯ ನಾನು ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಹೋಗಬೇಕು ಆ ವೈದ್ಯರನ್ನು ಸಂದರ್ಶಿಸಬೇಕು ಎಂದುಕೊಂಡೆ. ಇದಕ್ಕಾಗಿ ಬಸ್ ಸ್ಟ್ಯಾಂಡಿಗೆ ಹೋಗಿ ಬಸ್ ಹತ್ತಬೇಕು ಎನ್ನುವಷ್ಟರಲ್ಲಿ ನನಗೆ ಸರ್ಕಾರಿ ಶಿಕ್ಷಕರ ಕೆಲಸಕ್ಕಾಗಿ ಬರೆದ ಸಿಇಟಿ ಫಲಿತಾಂಶ ಬರುವ ಸುದ್ದಿ ತಿಳಿಯಿತು. ನಮ್ಮ ಬ್ಯಾಚಿಗೆ ಆ ಸಮಯದಲ್ಲಿ ನಾವು ಎಲ್ಲಿ ಸಿಇಟಿ ಬರೆದಿದ್ದೆವೋ ಅಲ್ಲಿಯೇ ಹೋಗಿ ಫಲಿತಾಂಶ ನೋಡಿಕೊಂಡು ಬರಬೇಕಾಗಿತ್ತು. ನಾನು ಚಿಕ್ಕಬಳ್ಳಾಪುರದಲ್ಲಿ ಬರೆದಿದ್ದರಿಂದ ನಾನು ಅಲ್ಲಿಗೆ ಹೋಗಬೇಕಾಗಿತ್ತು. ನನಗೆ ಫಲಿತಾಂಶ ಏನಾಗಿರಬಹುದು ಎಂದು ತುಂಬಾ ಟೆನ್ಶನ್ ಆಗಿತ್ತು. ನಾನು ದಾವಣಗೆರೆ ಉಪನಿರ್ದೇಶಕರ ಆಫೀಸ್‌ನ ಬಳಿ ಹೋಗಿ ಈ ಜಿಲ್ಲೆಯ ಫಲಿತಾಂಶ ನೋಡಿದೆ. ನಾನು ತೆಗೆದ ಅಂಕಗಳಿಗಿಂತ ಕಡಿಮೆ ಅಂಕಗಳಿಗೆ ಕೆಲಸ ಸಿಗುವಂತಿತ್ತು. ಆಗ ನನಗೆ ತುಂಬಾ ಬೇಸರವಾಯ್ತು ಸಿಇಟಿಯನ್ನು ಇದೇ ಜಿಲ್ಲೆಯಲ್ಲೇ ಬರೆದಿದ್ದರೆ ಕೆಲಸ ಸ್ವಂತ ಜಿಲ್ಲೆಯಲ್ಲಿಯೇ ಸಿಗುತ್ತಿತ್ತು. ಎಂಥ ಕೆಲಸವಾಯ್ತು ಎಂದುಕೊಂಡೆ. ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂದುಕೊಂಡು ಸುಮ್ಮನಾದೆ.

ನಾವು ಯಾವಾಗ್ಲೂ ಇದೇ ರೀತೀನೆ ಮಾಡೋದು. ಯಾವುದೇ ಕೆಲಸವಾಗಲೀ ಮಾಡೋ ಮುನ್ನ ಯೋಚನೆ ಮಾಡೋದಿಲ್ಲ. ಆದರೆ ನಂತರ ಯೋಚನೆ ಮಾಡ್ತೀವಿ. ಇನ್ನೂ ಕೆಲವರಿರುತ್ತಾರೆ. ಯಾವುದೇ ಕೆಲಸ ಮಾಡಬೇಕಾದ್ರೆ ಬಹಳ ಜನರ ಅನಿಸಿಕೆ ಕೇಳ್ತಾರೆ. ನಾನು ಅರ್ಜಿ ಹಾಕೋ ಮುನ್ನ ಕೆಲವರನ್ನು ಕೇಳಿದ್ದೆ. ನಿಮಗೆ ತಮಾಷೆ ಅನಿಸಬಹುದು. ದೇವರ ಅಪ್ಪಣೆ (ಪ್ರಸಾದ) ಕೇಳಿದ್ದೆ. ಇದು ಬೇರೆ ಯಾರೂ ಅಲ್ಲ. ನನ್ನ ಗೆಳೆಯನೊಬ್ಬನ ಅಮ್ಮನ ಮೇಲೆ ದೇವರು ಬರುತ್ತದೆ ಎಂದು ನಾನು ಕೇಳಿದ್ದೆ. ಅವರನ್ನೇ ಕೆಲಸದ ಬಗ್ಗೆ ಕೇಳಿದ್ದೆ. ನನ್ನ ಈ ನಂಬಿಕೆಗೂ ಒಂದು ಕಾರಣ ಇದೆ. ನಾನು ಶಿಕ್ಷಕ ಕೋರ್ಸ್ ಮುಗಿಸಿಬಂದಾಗಿನಿಂದ ಸಿಇಟಿ ಪರೀಕ್ಷೆಗೆ ತುಂಬಾ ಓದಿದ್ದೆ. ದಿನಕ್ಕೆ ಏನಿಲ್ಲವೆಂದರೂ 15 ತಾಸು ಓದುತ್ತಿದ್ದೆ. ಬರೀ ಓದುವುದೊಂದೇ ಕೆಲಸ. ಓದಲು ಊರ ಹೊರಗಿನ ನನ್ನ ಗೆಳೆಯನ ತೋಟಕ್ಕೆ ಹೋಗುತ್ತಿದ್ದೆ. ಅಲ್ಲಿಯೇ ಅವರ ಮನೆಯಿತ್ತು. ಹೀಗೆ ಒಮ್ಮೆ ಓದುತ್ತಿರುವಾಗ ನನ್ನ ಗೆಳೆಯನ ಅಮ್ಮ ಸುಮ್ಮನೇ ಯಾಕೆ ಓದ್ತೀಯಾ? ನಿನಗೆ ಕೆಲಸ ಸಿಗೋಲ್ಲ ಎಂದು ಹೇಳಿದರು. ನನಗೆ ತುಂಬಾ ಸಿಟ್ಟು ಬಂದು ಯಾವುದೇ ಕಾರಣಕ್ಕೂ ಕೆಲಸ ಮಿಸ್ ಆಗಲು ಬಿಡುವುದಿಲ್ಲ. ಪಕ್ಕಾ ಕೆಲಸ ತೆಗೆದುಕೊಂಡೇ ತೆಗೆದುಕೊಳ್ತೀನಿ ಎಂದು ಚಾಲೆಂಜ್ ಮಾಡಿದ್ದೆ. ಆದರೆ ಮೊದಲನೇ ಸಲ ಕೆಲಸ ಸಿಗದಿದ್ದಾಗ ನನಗೆ ನನ್ನ  ಗೆಳೆಯನ ಅಮ್ಮನ ಮಾತು ನೆನಪಾಗಿ ಅವರ ಬಳಿ ಹೋಗಿ ಮೊದಲೇ ಅದು ಹೇಗೆ ನನ್ನ ಭವಿಷ್ಯ ಹೇಳಿದಿರಿ ಎಂದು ಕೇಳಿದೆ. ಅದಕ್ಕವರು ಅವರ ಮೇಲೆ ದೇವರು ಬರುವ ವಿಷಯ ಹೇಳಿದರು. ಇದಕ್ಕಾಗಿ ಮತ್ತೊಮ್ಮೆ ಅವರ ಹತ್ತಿರ ಹೋಗಿ ಭವಿಷ್ಯವನ್ನು ಕೇಳಿದೆ. ಆಗ ನೀನು ಮನೆ ಬಾಗಿಲಲ್ಲಿ ಬರೆದರೂ ಕೆಲಸ ಸಿಗುತ್ತೆ ಅನುಮಾನವೇ ಬೇಡ ಎಂದು ಹೇಳಿದಾಗ ತುಂಬಾ ಖುಷಿಯಾಯ್ತು. ಆದರೆ ಅವರ ಮಾತು ಕೇಳಿ ದಾವಣಗೆರೆ ಜಿಲ್ಲೆಗೆ ಅರ್ಜಿ ಹಾಕದೇ ಚಿಕ್ಕಬಳ್ಳಾಪುರಕ್ಕೆ ಹಾಕಿದ್ದೆ. ಫಲಿತಾಂಶ ನೋಡಿದಾಗ ಮತ್ತೊಮ್ಮೆ ಅವರ ಮಾತು ನೆನಪಾಯ್ತು.

ನನಗೆ ಚಿಕ್ಕಬಳ್ಳಾಪುರಕ್ಕೆ ಹೋಗಿ ಫಲಿತಾಂಶ ನೋಡಿಕೊಂಡು ಬರಲು ಕನಿಷ್ಟ ಎಂದರೂ ಸಂಜೆಯಾದರೂ ಆಗುತ್ತಿತ್ತು. ಇದಕ್ಕಾಗಿ ನಾನು ನಮ್ಮ ಮನೆಯ ಓನರ್ ಬಳಿ ಹೋಗಿ ನನ್ನ ಫಲಿತಾಂಶದ ಕುತೂಹಲ ವ್ಯಕ್ತಪಡಿಸಿದೆ. ಅವರು ನನಗೆ ಆ ಊರಲ್ಲೊಬ್ಬರು ಪರಿಚಿತರಿದ್ದಾರೆ. ನೋಡಿ ಹೇಳಲು ತಿಳಿಸುತ್ತೇನೆ ಎಂದು ಅವರಿಗೆ ಕರೆ ಮಾಡಿದರು. ನನಗೆ ಆಗ ತುಂಬಾ ಸಂತಸವಾಗಿ ಅವರಿಗೆ ನನ್ನ ಹೆಸರು, ನೋಂದಣಿ ಸಂಖ್ಯೆ ತಿಳಿಸಿದೆ. ಅವರು ಸ್ವಲ್ಪ ಸಮಯದ ನಂತರ ಅವರಿಗೆ ಕರೆ ಮಾಡಿ ಕೆಲಸ ಸಿಕ್ಕ ವಿಷಯವನ್ನು ತಿಳಿಸಿದರು. ನನಗೆ ಆಗ ಸ್ವರ್ಗಕ್ಕೆ ಮೂರೇ ಗೇಣು ಎಂಬತಾಯ್ತು. ಆದರೆ ದೃಢೀಕರಣಕ್ಕೆ ಆ ದಿನವೇ ರಾತ್ರಿ ಅಲ್ಲಿಗೆ ಹೋಗಲು ತೀರ್ಮಾನಿಸಿ ಹೋದೆ. ನಾನು ಚಿಕ್ಕಬಳ್ಳಾಪುರಕ್ಕೆ ಹೋದಾಗ ಅದು ಇನ್ನೂ ಜಿಲ್ಲೆಯಾಗಿರಲಿಲ್ಲ. ಅದು ಕೋಲಾರ ಜಿಲ್ಲೆಯಲ್ಲಿತ್ತು. ಆದರೆ ಶೈಕ್ಷಣಿಕ ಜಿಲ್ಲೆಯಾಗಿತ್ತು. ದಾವಣಗೆರೆಯಲ್ಲಿದ್ದ ನನಗೆ ಅದನ್ನು ನೋಡಿ ಅಷ್ಟು ಖುಷಿ ಅನಿಸಲಿಲ್ಲ. ಆದರೆ ಸರ್ಕಾರಿ ಕೆಲಸ ಸಿಗೋದೇ ಅದೃಷ್ಟ ಎಂದುಕೊಂಡು ಮಾರನೇ ದಿನ ವಾಪಸ್ ಆದೆ.

ಮೆಡಿಕಲ್ ರೆಪ್ ಕೆಲಸದಲ್ಲಿ ಇದ್ದುದ್ದರಿಂದ ನಾನು ಸಂದರ್ಶನದ ಲೆಟರ್ ಸಿಗೋವರೆಗೂ ಈ ಕೆಲಸ ಬಿಡಬಾರದೆಂದುಕೊಂಡೆ. ಈಗ ನಾನು ಕೆಲಸದಲ್ಲಿ ಅಷ್ಟು ಆಸಕ್ತಿ ತೋರಿಸುತ್ತಿರಲಿಲ್ಲ. ತುಂಬಾ ಖುಷಿಯಲ್ಲಿ ಇರುತ್ತಿದ್ದುದನ್ನು ಗಮನಿಸಿದ ಒಬ್ಬ ಮೆಡಿಕಲ್ ರೆಪ್ ಏನಯ್ಯಾ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದೀಯ?  ಮೆಡಿಕಲ್ ಸೇಲ್ ನಲ್ಲಿ ಶೇಕಡಾ 100 ಸಾಧಿಸಿದ್ದೀಯಾ? ಎಂದು ಕೇಳಿದ. ಅದಕ್ಕೆ ನಾನು ಇಲ್ಲ ನನಗೆ ಸರ್ಕಾರಿ ಕೆಲಸ ಸಿಕ್ಕಿದೆ ಎಂದೆ. ಹೌದಾ? ಸಂಬಳವೆಷ್ಟಿದೆ? ಎಂದು ಕೇಳಿದ. ನಾನು 5 ಸಾವಿರ ಇರಬಹುದು ಎಂದೆ. ಆಗ ಅಷ್ಟೇ ಇತ್ತು. ಅದಕ್ಕವನು ನನಗೆ ವೇತನ ಹೊರತುಪಡಿಸಿಯೇ ಇನ್ಸೆಂಟಿವ್ ಎಂದು ತಿಂಗಳಿಗೆ 40 ಸಾವಿರ ಬರುತ್ತದೆ. ನಾನೇ ಇಷ್ಟು ಖುಷಿಯಾಗಿಲ್ಲ. ನೀನು ಬರೀ 5 ಸಾವಿರಕ್ಕೆ ಇಷ್ಟೊಂದು ಖುಷಿ ಪಡ್ತೀಯ ಎಂದಾಗ  ನಾನು ಸುಮ್ಮನಾದೆ.

ಅವನ ಮಾತು ಕೇಳಿದ ಮನಸ್ಸು ಇನ್ನೊಂದು ರೀತಿ ಯೋಚನೆ ಮಾಡಲು ಶುರು ಮಾಡ್ತು. ಸುಮ್ಮನೇ ಕೆಲಸಕ್ಕೆ ಸೇರದೇ ಮೆಡಿಕಲ್ ರೆಪ್ ಕೆಲಸದಲ್ಲಿ ಮುಂದುವರೆದರೆ ಹೇಗೆ? ಎಂದು ಯೋಚಿಸಿದೆ. ಇದಕ್ಕೆ ಪೂರಕವಾಗಿ ಹಲವಾರು ನನ್ನ ಮೆಡಿಕಲ್ ರೆಪ್ ಗೆಳೆಯರು ಅಲ್ಲಿ ಪೆನ್ಶನ್ ಇಲ್ವಂತೆ. ಸುಮ್ನೇ ಇಲ್ಲೇ ಇದ್ಬಿಡು ಎಂದರು. ನಾನು ಇದೇ ರೀತಿ ಮಾಡಬೇಕು ಎಂದುಕೊಂಡರೆ ನಮ್ಮ ಸಂಬಂಧಿಕರು ಇದಕ್ಕೆ ಒಪ್ಪಲಿಲ್ಲ. ಸರ್ಕಾರಿ ಕೆಲಸ ಸಿಗೋಕೂ ಪುಣ್ಯ ಮಾಡಿರಬೇಕು ಈ ರೀತಿ ಮಾಡಿ ತಿನ್ನೋ ಅನ್ನದಾಗೆ ಕಲ್ಲು ಹಾಕಿಕೊಳ್ಳಬೇಡ ಎಂದರು. ಅವರ ಮಾತಿಗೆ ಬೆಲೆ ಕೊಟ್ಟು ನಾನು ಕೆಲಸಕ್ಕೆ ಹೋಗಲು ನಿರ್ಧರಿಸಿದೆ. ಆದರೆ ಸರ್ಕಾರಿ ಕೆಲಸ ಸಿಕ್ಕ ವಿಷಯವನ್ನು ನಮ್ಮ ಕಂಪೆನಿಯವರಿಗೆ ತಿಳಿಸಲಿಲ್ಲ.


ಈ ಅವಧಿಯಲ್ಲಿ ನಮಗೆ ನೇಮಕಾತಿ ಆದೇಶ ಕೊಡುವುದು ತಡವಾಯಿತು. ಅಲ್ಲಿಯವರೆಗೂ ನಾನು ಮೆಡಿಕಲ್ ರೆಪ್ ಕೆಲಸ ಮಾಡಿಕೊಂಡು ಮುಂದುವರೆಯಬೇಕೆಂದು ಬಯಸಿದ್ದೆ. ಆದರೆ ಒಮ್ಮೆ ನಮ್ಮ ಮ್ಯಾನೇಜರ್ ಕೆಲಸದ ವಿಷಯದಲ್ಲಿ ನನಗೆ ಏನೋ ಹೇಳಿದರು ಅನ್ನೋ ಕಾರಣಕ್ಕೆ ನನಗೆ ನೇಮಕವಾದ ವಿಷಯವನ್ನು ಅವರಿಗೆ ತಿಳಿಸಿದೆ. ಅವರು ತಕ್ಷಣ ನನ್ನಿಂದ ರಾಜೀನಾಮೆ ಪತ್ರ ಬರೆಯಿಸಿ ಅದನ್ನು ಫ್ಯಾಕ್ಸ್ ಮಾಡಲು ಹೇಳಿದರು. ನಾನು ಅದೇ ರೀತಿ ಮಾಡಿದೆ. ನನಗೆ ಆಗ ಕಂಪೆನಿಯಿಂದ ಬರಬೇಕಿದ್ದ ಸರಿಸುಮಾರು 10 ಸಾವಿರ ಹಣಕ್ಕೂ ನಾನೇ ತಡೆ  ಮಾಡಿಕೊಂಡೆ. ಇದಕ್ಕೆಂದೇ ನನಗೆ ಅವರು ಕಳುಹಿಸಿದ್ದ ಸ್ಯಾಂಪಲ್ ಮೆಡಿಸಿನ್ಸ್‌ಗಳನ್ನು ವಾಪಾಸ್ ಕಳಿಸಲಿಲ್ಲ. ಬದಲಾಗಿ ಅವಶ್ಯಕತೆ ಇರುವ ಬಡ ರೋಗಿಗಳಿಗೆ ಕೊಡಿ ಎಂದು ವೈದ್ಯರಿಗೆ ಕೊಟ್ಟೆ.

ಕೋಪದಲ್ಲಿ ಕೊಯ್ದುಕೊಂಡ ಮೂಗು ಕೋಪ ಶಮನವಾದ ಮೇಲೆ ಬರೋಲ್ಲ ಅನ್ತಾರಲ್ಲ ಹಾಗಾಯ್ತು ನನ್ನ ಕಥೆ. ತಾಳ್ಮೆ ಎನ್ನೋದು ಬಹಳ ಮುಖ್ಯ. ‘ತಾಳಿದವನು ಬಾಳಿಯಾನು’ ಎಂಬಂತೆ ಇದನ್ನು ಕಳೆದುಕೊಂಡರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನನಗೆ ಖರ್ಚಿಗೆ ಸಾಕಷ್ಟು ಹಣ ಇರುತ್ತಿಲ್ಲವಾದರೂ ನಮ್ಮ ಓನರ್ ಮನೆಯಲ್ಲಿಯೇ ಇರುತ್ತಿದ್ದೆನಾದ್ದರಿಂದ ನನಗೆ ಹಣದ ಅವಶ್ಯಕತೆ ಹೆಚ್ಚು ಇರಲಿಲ್ಲ.

ಸರ್ಕಾರಿ ನೌಕರಿ ಸಿಕ್ಕಿದೆ ಅಂತಾ ಗೊತ್ತಾದ ಮೇಲೆ ಬಹಳ ಜನ ನಮ್ಮನ್ನು ನೋಡೋ ರೀತಿಯೇ ಬದಲಾಯ್ತು. ಕೆಲವರಂತೂ ತುಂಬಾ ಗೌರವ ಕೊಡಲು ಶುರು ಮಾಡಿದರು. ಆದರೆ ನನಗೆ ಏನೂ ಇಲ್ಲದಿದ್ದಾಗಲೂ ನನ್ನನ್ನು ಗೌರವದಿಂದ ಕಂಡವರನ್ನು ನೋಡಿದರೆ ನನಗೆ ಬಹಳ ಖುಷಿ. ನಾನೂ ಸಹ ಇಂತಹವರೊಡನೆಯೇ ಹೆಚ್ಚು ಕ್ಲೋಸ್ ಆಗಿ ಇರಲು ಬಯಸುತ್ತಿದ್ದೆನೆ ಹೊರತು ನಮ್ಮ ಸ್ಟೇಟಸ್‌ಗೆ ಬೆಲೆ ಕೊಡುವವರನ್ನು ನಾನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ.

ನಾನು ಸರ್ಕಾರಿ ಕೆಲಸ ಸಿಕ್ಕಿದರೆ ಸಾಕು ಲೈಫ್ ಸೆಟ್ಲ್ ಆಗಿಬಿಡುತ್ತೆ. ಮುಂದೆ ಲೈಫ್ ಬಿಂದಾಸ್ ಆಗಿರುತ್ತೆ ಅಂದ್ಕೊಂಡಿದ್ದೆ. ಆದರೆ ಮುಂದೆಯೂ ಸಹ ತುಂಬಾ ಹೋರಾಟ ಮಾಡಬೇಕಾಯಿತು. ಅವನ್ನು ನಾನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳೋಕೆ ಇಷ್ಟಪಡ್ತೀನಿ.

ಕೊನೇ ಮಾತಾಗಿ ನಾವು ಯಾರ ಬಗ್ಗೆಯೇ ಆಗಲಿ, ಯಾವುದೇ ಸಂದರ್ಭಗಳೇ ಆಗಲೀ, ವ್ಯಕ್ತಿಗಳ ನಂಬಿಕೆಗಳ ಬಗ್ಗೆಯಾಗಲೀ  ನಮ್ಮ ಮೂಗಿನ ನೇರಕ್ಕೆ ಮಾತನಾಡೋಕೆ ಹೋಗ್ತೀವಿ. ಇದನ್ನು ನಾವು ಮಾಡಬಾರದು. ದೇವರ ನಂಬಿಕೆಯ ವಿಷಯದಲ್ಲಿ ನಾನೂ ಮೊದಲು ಬೇರೆಯವರನ್ನು ಅಣಕ ಮಾಡುತ್ತಿದ್ದೆ. ‘ನಂಬಿ ಕೆಟ್ಟವರಿಲ್ಲವೋ ಮನುಜ’ ಎಂಬಂತೆ ಕೊನೆಗೆ ನಾನೇ ನಂಬುವಂತಹ ಸಂದರ್ಭ ಬಂತು ಎಂಬುದಕ್ಕೆ ಕೊನೇ ಮಾತನ್ನು ಹೇಳಬೇಕೆನಿಸಿತು. ಅವರವರ ನಂಬಿಕೆ ಅವರಿಗೆ ಅಷ್ಟೇ!

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ