ಲಿಂಗ್ಸಾನ್ಆನ್ನ ಬ್ರೆಡ್ಡು

ಇಲ್ಲಿನ ಬುಧವಾರದ
ಸಂಜೆಪೇಟೆಯ
ಕಡೆಯ, ಮೂಲೆಯ ಅಂಗಡಿಯಲ್ಲಿ
ನಿಂತವಳೆ
ಲಿಂಗ್ಸಾನ್ಆನ್!
ಸುತ್ತಹರಡಿದ
ಹಸಿರು, ಕೆಂಪು, ನೀಲಿಕುವ್ವೆ ಮಿಠಾಯಿಗಳು
ಪಕ್ಕಕ್ಕೆ ಪೇರಿಸಿಟ್ಟ ಬ್ರೆಡ್ಡಿನ ಬಾರುಗಳು!
ಮೊಂಡುಮೂಗಿನ, ಗುಂಡುಮುಖದ
ಚಪಟ್ಟೆ ನಿತಂಬಗಳ ಚೀನಿ ಹುಡುಗಿ!
ಪಕ್ಕಕ್ಕೆ ಹಚ್ಚಿಟ್ಟ ಲಾಟೀನಿನ
ಹಳದಿ ಬೆಳಕಲ್ಲಿ ಅವಳು
ಹೊಳೆವ ಹೊಂಬಣ್ಣದ ಸುರಸುಂದರಿ!

ಲಿಂಗ್ಸಾನ್ ಆನ್ನ ಬ್ರೆಡ್ಡು
ಸಂಜೆಪೇಟೆಗೇನೆ ಪ್ರಸಿದ್ದಿ!
ಅವರಜ್ಜಿ ಮುದುಕಿ,
ಚೀನಾದ ಮಾವೋತ್ಸುಂಗನ
ಮಹಾಕ್ರಾಂತಿಗೆ ನಲುಗಿ
ದೇಶಬಿಟ್ಟು
ಓಡಿಬರುವಾಗ
ಅವಳ, ಮನೆಯ ಹಿಂದಿನ
ಕುನ್ಲೂನ್ಬೆಟ್ಟಗಳ
ಹೆಮ್ಮರಗಳಲ್ಲಿ ಬೆಳೆದ, ಶಿಲೀಂದ್ರವನ್ನು
ಹೊತ್ತುತಂದು,
ಬಾರ್ಲಿಯ ಹಿಟ್ಟಿನಲ್ಲಿ ಮೆದುವಾಗಿ ಕದಡಿ
ಮನೆಯ ಹಿತ್ತಿಲ ಕಾವು ಕುಲುಮೆಯಲ್ಲಿ
ರಬ್ಬರ್ ಮರದಸೌದೆಯ ಕೆಂಡದಲ್ಲಿ
ಹದವಾಗಿ ಬೇಯಿಸಿದ ಬ್ರೆಡ್ಡು!
ಮುದುಕಿಯ ಚರ್ಮದ ಸುಕ್ಕಿನ ಸ್ಟೇಬಲು ಮೆದು!

ಹೋದ ಬುಧವಾರದ
ಸಂಜೆಪೇಟೆಯಲ್ಲಿ
ಲಿಂಗ್ಸಾನ್ ಆನ್ ಬಳಿ
ಎರಡು ಬಾರು ಬ್ರೆಡ್ಡುಕೊಂಡು
ಅವಳ ಕಣ್ಣಲ್ಲಿ ಕಣ್ಣು ನೆಟ್ಟಾಗ!
ಅವಳೇ ಮೆಲ್ಲಗೆ ಉಸಿರಿದ್ದು
ಯಾವತ್ತಾದರೂ, ರಾತ್ರಿಯೂಟಕ್ಕೆ
ಕರೆದರೆ
ನಾ ಇಲ್ಲವೆನ್ನುವವಳಲ್ಲ!

ಮಂಗೋಲಿಯಾದ ಸೂರ್ಯಕಾಂತಿ ಬೀಜಗಳು

ಕೌಲಾಲುಂಪುರದ ಈ ಮಳೆಗಾಲದ
ಮಬ್ಬು ಸಂಜೆಯಲ್ಲಿ
ಮನೆಯ ಬಾಲ್ಕನಿಯಲ್ಲಿ ಕುಳಿತು
ಚಳಿಮೋಡಗಳ ಅಲೆದಾಟ ನೋಡುವುದು
ಒಂದು ಮುದ.
ಕೆಂಪು ಪೊಟ್ಟಣದ ಒಳಗುಳಿದ
ಉಪ್ಪು ಸವರಿ ಮೆತ್ತಗೆ ಹುರಿದ
ಮಂಗೋಲಿಯಾದ ಸೂರ್ಯಕಾಂತಿ ಬೀಜಗಳು
ಸಿಪ್ಪೆ ಕಳೆದು ಬಾಯಲ್ಲಿ ಬಿದ್ದಾಗ!

ಮಂಗೋಲಿಯಾ, ರಷ್ಯಾದೇಶಗಳ ಮಧ್ಯದಲ್ಲಿ ಅವಿತ
ಬೈಕಲ್ ಸರೋವರದ ಬಳಿಯ
ಸಣ್ಣಹಳ್ಳಿಯ, ಫಲವತ್ತಾದ ಮಣ್ಣಿನ
ಮೊಂಡುಮೊಲೆಯ, ತುಂಡು ಸುಂದರಿಯರ
ಕೈಯಲ್ಲಿ ಬಿತ್ತಿ, ಬೆಳೆದ
ಸೂರ್ಯಕಾಂತಿ ಹೂಗಳು
ಚಳಿಗಾಲದ ಸಣ್ಣಹಿಮ
ಶುರುವಾದಾಗ
ಫಳಫಳನೆ ಹೂವಿನ ದಳ ಕಳೆದು,
ಕಪ್ಪುಕಣ್ಣಿನ ಬೀಜಗಳೆಲ್ಲ
ಉಳಿದು
ದಪ್ಪ ಸೆಣಬಿನ ಚೀಲಗಳಲ್ಲಿ ಕುಳಿತು
ದೇಶ ಕಳೆದು
ಚೀನಾದೇಶದ ಬೀಜಿಂಗಿನ
ಬಂದರಲ್ಲಿ, ಉಸ್ಸೆಂದು ಅಲೆದು
ಹಡಗನ್ನು ಏರಿ
ದೇಶದೇಶಗಳ ಲಂಘಿಸಿ
ಪೀನಾಂಗ್ಯಿನ ದಡಸೇರಿ
ಇಪೋದ ಉರಿಹಟ್ಟಿಗಳ ಕಾದ ಬಾಣಲೆಯಲ್ಲಿ
ಹದವಾಗಿ ಹುರಿದು
ಬೀಜದ ಫಲವೆಲ್ಲ ಕಳೆದು
ಕೆಂಪು ಪಟ್ಟಣ ಸೇರಿ
ಮೊಹರಾಗಿ
ಜೀವ, ಜಲ, ಕಾಲ, ದೇಶ!

ಮತ್ತೆ ಒಂದು ದಿನ!
ಇದೆ ಮುಂಗಾರ ಮಳೆಗಾಲದ ಸಂಜೆಯಲ್ಲಿ
ಹೂವಿನ ಕುಂಡದಲ್ಲಿ
ಬಿದ್ದ ಸಿಪ್ಪೆಗಳಡಿಯಲ್ಲಿ
ಎದ್ದ
ಮಂಗೋಲಿಯಾದ ಸೂರ್ಯಕಾಂತಿ ಬೀಜವೊಂದು
ಮೊಳಕೆಯೊಡೆದು
ಮೊರದಗಲ ಎಲೆಯರಲಿಸಿ
ಹೂವ ಬಿರಿದು
ಸೂರ್ಯನ ನೋಡಿ ನಕ್ಕಾಗ
ಕಾಲ, ದೇಶ, ಜಲ, ಜೀವ!

ನರೇಂದ್ರ ಶಿವನಗೆರೆ ವೃತ್ತಿಯಲ್ಲಿ ವಿಜ್ಞಾನದ ಶಿಕ್ಷಕರು.
ಸಾಹಿತ್ಯ ಮತ್ತು ಪ್ರಪಂಚದ ಸಿನಿಮಾ ಬಗ್ಗೆ ತುಂಬಾ ಆಸಕ್ತಿ.
ಕಳೆದ ಹತ್ತು ವರ್ಷಗಳಿಂದ ದೇಶ ಬಿಟ್ಟು ಅಲೆಮಾರಿ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)