ಆಕ್ರೋಶದ ತೀವ್ರತೆಯಿದ್ದರೂ ಹಿಂಸೆ-ಪ್ರತೀಕಾರದ ಸೋಂಕಿಲ್ಲದ, ಸ್ವಮರುಕ ಪೂರ್ವಾಗ್ರಹಗಳ ಭಾರವಿಲ್ಲದ ಹದವಾದ ಮನಸ್ಥಿಯನ್ನು ತೋರುವುದರಿಂದ ಅದು ನಿಜವಾದ ಅರ್ಥದಲ್ಲಿ ‘ನೆಲದ ಕರುಣೆಯ ಕಾವ್ಯ’ವಾಗಿದೆ. ಇದನ್ನು ವಿಸ್ತರಿಸಿ ಹೇಳುವುದಾದರೆ, ಬದುಕು ಎಷ್ಟೇ ನಿರ್ದಯವಾಗಿದ್ದರೂ, ವ್ಯವಸ್ಥೆ ಎಷ್ಟು ಬರ್ಬರವಾಗಿದ್ದರೂ ವಸಂತನನ್ನು ಹಡೆದು ಮನುಷ್ಯ ಸಮಾಜಕ್ಕೆ ತಾಯ್ತನದ ಪ್ರೀತಿ ವಾತ್ಸಲ್ಯಗಳನ್ನು ಊಡಿಸುವ ಹಂಬಲವಿರುವ ಕಾರಣದಿಂದ ಇಲ್ಲಿನ ಕಾವ್ಯಕ್ಕೆ ನೆಲದ, ಪ್ರಕೃತಿಯ, ಇನ್ನೊಬ್ಬರ ನೋವಿಗೆ ಮಿಡಿಯುವ ಮನುಷ್ಯರ ಒಡಲಿಂದ ಚಿಮ್ಮುವ ಕರುಣೆಯ ಗುಣವಿದೆ.
ಎಸ್.‌ ಸಿರಾಜ್‌ ಅಹಮದ್‌ ಬರೆಯುವ ಅಂಕಣ

 

ಹೊಸ ಕವಿಯೊಬ್ಬನ ಕಾವ್ಯ ಎಷ್ಟೇ ಬಿರುಸಿನ ಯುವಕಾವ್ಯವಾಗಿದ್ದರೂ ಅದಕ್ಕೆ ಒಂದು ಬಗೆಯ ನಿರಂತರತೆ ಹಾಗೂ ತನ್ನ ಸಾಹಿತ್ಯ ಪರಂಪರೆಯೊಂದಿಗಿನ ಸಾತತ್ಯದ ಸಂಬಂಧ ಇದ್ದೇ ಇರುತ್ತದೆ. ಸಹಜವಾಗಿಯೋ ಅಥವಾ ಬಹಳ ಪ್ರಜ್ಞಾಪೂರ್ವಕವಾಗಿಯೋ ಅವನು ತನ್ನ ಕಾವ್ಯ ಪರಂಪರೆಯ ಭಿತ್ತಿಯೊಳಗಿನ ಕಾಳಜಿಗಳನ್ನು ವಿಭಿನ್ನ ರೀತಿಯಲ್ಲಿ ಪುನರ್ರಚಿಸುತ್ತ ಅದಕ್ಕೆ ಹೊಸ ವಿಸ್ತಾರವನ್ನು ಒದಗಿಸುವ ಕ್ರಿಯೆಯಲ್ಲಿ ತೊಡಗಿರುತ್ತಾನೆ. ವೀರಣ್ಣ ಮಡಿವಾಳರ ಕವನಗಳನ್ನು ಓದುವಾಗ ಬಂಡಾಯದ ಭರಾಟೆಯ ಆದರ್ಶಗಳು, ಚಳವಳಿಯ ಉದಾತ್ತವಾದ ಕನಸುಗಳು, ಕ್ರಾಂತಿಯ ಉಗ್ರಹಂಬಲಗಳು ನಿಧಾನಕ್ಕೆ ದ್ರವೀಕರಣಗೊಂಡು ಹೊಸ ರೂಪು ಪಡೆದು- ಯಾವ ಕಾವ್ಯವೆಂಬುದು ಸಮಾಜದ ಜೊತೆಗಿನ ಏರುದನಿಯ ಜಗಳವಾಗಿತ್ತೋ, ಭೀಕರವಾದ ಕದನವಾಗಿತ್ತೋ- ಅದು ನಿಧಾನಕ್ಕೆ ಸಮಾಜದ ಆತ್ಮಸಾಕ್ಷಿಯ ಜೊತೆಗಿನ ವಾಗ್ವಾದವಾಗಿ, ಅಂತಃಕರಣದಿಂದ ಹೊರಹೊಮ್ಮುವ ನುಡಿಯಾಗಿ ಕಾಣಿಸುತ್ತದೆ.

ಅದಕ್ಕಾಗಿಯೇ ವೀರಣ್ಣ ಅವರ ಕಾವ್ಯ ಕ್ರಾಂತಿಯ ಕಹಳೆಯನ್ನು ಊದುವುದಕ್ಕಿಂತ ಮುಖ್ಯವಾಗಿ, ಹಸಿರು ವಸಂತನನ್ನು ಹಡೆಯುವ ತೀವ್ರ ಹಂಬಲವನ್ನು ತೋರುತ್ತದೆ. ಕವಿ ಎಲ್ಲೋ ಕೆಂಪುಕ್ರಾಂತಿ ವಸಂತನ ಹಸಿರಾಗಿ ಹೊರಹೊಮ್ಮುವುದೇನೋ ಎಂಬ ನಿರೀಕ್ಷೆಯಲ್ಲಿದ್ದಾನೆ. ನಮಗೆಲ್ಲ ಗೊತ್ತಿರುವಂತೆ, ಕ್ರಾಂತಿಯ ಪಲ್ಲಟಕ್ಕಿಂತ ವಸಂತನ ಸಾವಧಾನದ ಆದರೆ ನಿರಂತರವಾದ ರೂಪಾಂತರ, ಹೊಸಹುಟ್ಟು ಹೆಚ್ಚು ಬಾಳಿಕೆಯುಳ್ಳದ್ದು. ಇಂಥ ತಾಳಿಕೆಯ, ಅಂತಃಕರಣದ ಹಾಗೂ ಸಾವಧಾನದ ಗುಣವಿರುವ ಕಾರಣದಿಂದಲೇ ಮೊಗಳ್ಳಿ ಗಣೇಶ ಅವರ ಈಚಿನ ಕವನಗಳಲ್ಲಿ, ಎನ್ಕೆ ಹನುಮಂತಯ್ಯ, ಸುಬ್ಬು ಹೊಲೆಯಾರ್, ವೀರಣ್ಣ ಮಡಿವಾಳರ ಕವನಗಳಲ್ಲಿ ದಲಿತ ಬಂಡಾಯದ ಕಾವ್ಯ ಹೊಸ ಚಹರೆ-ವಿಸ್ತಾರಗಳನ್ನು ಕಾಣಬಹುದಾಗಿದೆ. ಇಲ್ಲಿ ಪದೇ ಪದೇ ಕಾಣಿಸುವ ತಥಾಗತ, ಗಾಂಧಿ ಮೊದಲಾದವರ ನೆರಳುಗಳು ಈ ತಲೆಮಾರಿನ ಕಾವ್ಯಕ್ಕೆ ಬೇರೊಂದು ಆಯಾಮವನ್ನು ದೊರಕಿಸಿಕೊಟ್ಟಿವೆ.

ಹಾಗೆ ನೋಡಿದರೆ, 2014ರಲ್ಲಿ ಪ್ರಕಟಗೊಂಡ ವೀರಣ್ಣ ಅವರ ‘ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ’ ಎಂಬ ಸಂಕಲನ, ಅವರ ಮೊದಲ ಪ್ರಶಸ್ತಿ ವಿಜೇತ ಸಂಕಲನ ‘ನೆಲದ ಕರುಣೆಯ ದನಿ’ (2010) ಸಂಕಲನಕ್ಕಿಂತ ಹೆಚ್ಚು ತೀವ್ರವಾಗಿ ನಮ್ಮನ್ನು ಕಲಕುವಂತಿದೆ. ಎರಡನೆಯ ಕವನಸಂಕಲನವೇ ಅವರ ಕಾವ್ಯದ ಮುಖ್ಯ ಕಾಳಜಿಗಳನ್ನು ಬಹಳ ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನದಲ್ಲಿದೆ. ವೀರಣ್ಣನವರೇ ಹೇಳುವ ಹಾಗೆ ಈ ಎರಡನೇ ಕವನಸಂಕಲನವನ್ನೇ ಅವರು ಮೊದಲು ಬರೆದದ್ದು. ಆದರೆ ಅದು ಪ್ರಕಟವಾಗಲಿಲ್ಲ ಎಂಬುದು ಬೇರೆ ಮಾತು. ಕೇವಲ “ಈ ಜಗದಲ್ಲಿ ಹಸಿವೊಂದೇ ಎಲ್ಲವನ್ನೂ ಮಾಡುತ್ತಿಲ್ಲ”, “ಬೇಗುದಿಗೆ ಬಡತನವೇ ಕಾರಣವಲ್ಲ” ಎಂಬ ಮಾತುಗಳಿಂದ ಶುರುವಾಗುವ ಅವರ ಖಂಡಕಾವ್ಯ ಸಮಾಜದ ಬಲು ಭಾರವಾದ ನೋವಿನ ಮೂಟೆಗಳನ್ನು ಹೊರುತ್ತ ತಲ್ಲಣಿಸುವಂತಿದೆ. ಈ ತಲ್ಲಣ ಯಾತನೆಯ ವಿವರಗಳು ನೋವು, ಬವಣೆಗಳ ನಿರ್ದಿಷ್ಟ ವ್ಯಾಖ್ಯೆಯನ್ನೇ ವಿಸ್ತಾರಗೊಳಿಸಿದಂತಿದೆ.

ಸಂಕಲನದ ಹಲವು ಕವನಗಳಲ್ಲಿ ಬಡತನ, ಜಾತಿ ಶ್ರೇಣೀಕರಣ, ಅಸಮಾನತೆ, ದುರ್ಬಲ ವರ್ಗಗಳ ಅಸಹಾಯಕತೆಯ ವಿವರಗಳೊಂದಿಗೆ ಇಡೀ ಮನುಷ್ಯ ಸಮಾಜವನ್ನು ಕಂಗಾಲಾಗಿಸುತ್ತ ದಿಗ್ಭ್ರಾಂತಿಗೆ ತಳ್ಳುತ್ತಿರುವ ವಿನಾಶಕಾರಿ ಶಕ್ತಿಗಳ ಅಟಾಟೋಪವನ್ನು ಗ್ರಹಿಸುವ ವಿಸ್ತೃತ ಗ್ರಹಿಕೆಯೂ ಕಾಣಿಸುತ್ತದೆ. ಹಸಿರ ಬಸಿರು ಸತ್ತು ಹೋದ ನೆಲ, ನೇಗಿಲು ಹೊತ್ತವನ ಬಲಿಕೇಳುತ್ತಿರುವ ಭೂಮಿ, ಆಕಳು ಕಟ್ಟುವ ಹಗ್ಗವೇ ರೈತನ ಕೊರಳಿಗೆ ನೇಣಿನ ಕುಣಿಕೆಯಾಗುವ ವ್ಯಂಗ್ಯ, ಎಷ್ಟು ರಾಸಾಯನಿಕ ಹಾಕಿದರೂ ಶತಮಾನಗಳಿಂದ ಬತ್ತಿ ಹೋಗಿರುವ ರೈತನ ನಗು, ಗುಡಿಸಿಲಿಲ್ಲದ ರಾಜ್ಯದ ನಿರ್ಮಾಣಕ್ಕಾಗಿ ದೈತ್ಯ ಹಲ್ಲಿನ ಯಂತ್ರದ ದವಡೆಗೆ ಬಡವರನ್ನು ನೂಕಿರುವ ನಾಡಪ್ರಭುಗಳ ಕ್ರೌರ್ಯ -ಹೀಗೆ ಕಳೆದ ಕೆಲವು ದಶಕಗಳಲ್ಲಿ ನಾಡು ಅನುಭವಿಸುತ್ತಿರುವ ಹಲವು ಬಗೆಯ ಬವಣೆಗಳ ವಿಸ್ತಾರವಾದ ಚಿತ್ರಣವನ್ನು ಅವರ ಕಾವ್ಯ ನಮ್ಮ ಮುಂದಿಡುತ್ತದೆ.

‘ನೆಲದ ಕರುಣೆಯ ದನಿ’ ಎಂಬ ಪದ್ಯದಲ್ಲಿ “ಯಾರೋ ಹಚ್ಚಿದ ಕಿಚ್ಚಿಗೆ/ ಮನೆ ಉರಿಯುತ್ತಿರುವಾಗ ಈ ಮರುಭೂಮಿಯಲ್ಲಿ/ಮಳೆ ನೀರು ಹುಡುಕುತ್ತೇನೆ/ಸಮುದ್ರದ ನೀರು ಕುಡಿದು ಬದುಕಲೆತ್ನಿಸುತ್ತೇನೆ/ಸಿಹಿ ನೀರಿಗೆಲ್ಲ ವಿಷ ಬೆರೆಸಲಾಗಿದೆ/ಸಾವಿರ ಮೀನುಗಳು ಸತ್ತ ಸುದ್ದಿಗೆ/ನನ್ನೂರ ಕೆರೆ ಸಾಕ್ಷಿ ನುಡಿಯಿತು (ನೆಲದ ಕರುಣೆಯ ದನಿ). ಇಲ್ಲಿ ಊರಿಗೆ ಕಿಚ್ಚು ಹಚ್ಚುವವರು, ಸಿಹಿ ನೀರಿಗೆ ವಿಷ ಬೆರೆಸಿ ಸಾವಿರ ಮೀನುಗಳ ಮಾರಣಹೋಮ ಮಾಡುವವರು, ಕೇವಲ ಜಾತಿ ಅಂತಸ್ತು ಅಧಿಕಾರದ ದರ್ಪದಿಂದ ಕೊಬ್ಬಿದ ಖೂಳರಲ್ಲ. ಬದಲಾಗಿ ಅವರು ಇಡೀ ಮನುಷ್ಯ ಸಮಾಜವನ್ನು, ಸೃಷ್ಟಿಯ ಜೀವಜಾಲವನ್ನು ಸರ್ವನಾಶಮಾಡುವ ವಿನಾಶಕಾರಿ ಶಕ್ತಿಗಳಾಗಿದ್ದಾರೆ. ಇಂಥವರ ವಿರುದ್ಧ ವೀರಣ್ಣನವರ ಕಾವ್ಯ ಮಾತನಾಡುವುದರಿಂದ ಅವರ ಕಾವ್ಯದಲ್ಲಿ ಪ್ರಸ್ತಾಪವಾಗಿರುವ ಯಾತನೆಗಳ ವ್ಯಾಖ್ಯೆಗೆ ಸಿಕ್ಕಿರುವ ವಿಸ್ತಾರ ದೊಡ್ಡದು.

ಅವರ ಇನ್ನೊಂದು ಕವಿತೆಯಲ್ಲಿ “ನಿಂತಿರುವ ಕಂಬಗಳ ಮೈ ಸವರಿದರೆ ರಕ್ತಗಂಬನಿ ಒಸರುತ್ತದೆ ಈ ಕತ್ತಲ ರಾತ್ರಿ ನೆನಪಿಸಿಕೊಂಡರೆ ಊರಿಗೆ ಊರನ್ನೇ ಅಪರಾಧಿ ಸ್ಥಾನದಲ್ಲಿರಿಸಬೇಕಾಗುತ್ತದೆ” ಎಂಬ (‘ಒಂದು ಹೂವು ಒಂದು ಹಾವು’- ನೆಲದ ಕರುಣೆಯ ದನಿ) ಮಾತುಗಳಿವೆ. ಹೀಗೆ ವಿಶಾಲವಾದ ಜನಸಮುದಾಯಗಳ ಬದುಕನ್ನು ಅತಂತ್ರಗೊಳಿಸಿ ನಿರ್ನಾಮ ಮಾಡಲು ಹೊಂಚುಹಾಕುವ ಸಾಮಾಜಿಕ, ರಾಜಕೀಯ ವ್ಯವಸ್ಥೆಯ ವಿರುದ್ಧ ಅದರ ಯೋಜನೆಗಳ ವಿರುದ್ಧ ಕನಲುತ್ತ ಇಡೀ ಸಮಾಜವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನ್ಯಾಯ ಕೇಳುತ್ತಲೇ- ಭೂಮಿಯ ಮೇಲಿನ ಪ್ರತಿ ಹನಿಯ ಪ್ರಶ್ನಿಸಿದರೆ/ ಪರಂಪರೆ ಸುರಿಸಿದ ಕಂಬನಿ ಉತ್ತರಿಸುತ್ತದೆ/ ಸಾಗರವಲ್ಲ ಅದು ನಮ್ಮ ಬೆವರ ಕಣ್ಣೀರು” (‘ನೆಲದ ಕರುಣೆಯ ದನಿ ’- ನೆಲದ ಕರುಣೆಯ ದನಿ ಸಂಗ್ರಹದಲ್ಲಿ) ಎಂಬ ಸಾಲುಗಳಲ್ಲಿ ವೀರಣ್ಣನವರ ಕಾವ್ಯದಲ್ಲಿ ಒಂದು ಕೇರಿಯ, ಜಾತಿಯ, ಸಮೂಹದ ಅಳಲುಗಳು ಮಾತ್ರ ಕಾಣಿಸದೆ ವರ್ತಮಾನದ ಸಂಕಟಗಳಲ್ಲಿ ಮುಳುಗೇಳುತ್ತಿರುವ ಎಲ್ಲರ ಅಳಲೂ ಇಲ್ಲಿ ದಾಖಲಾಗಿರುವಂತೆ ಕಾಣಿಸುತ್ತದೆ.

ಕೇವಲ “ಈ ಜಗದಲ್ಲಿ ಹಸಿವೊಂದೇ ಎಲ್ಲವನ್ನೂ ಮಾಡುತ್ತಿಲ್ಲ”, “ಬೇಗುದಿಗೆ ಬಡತನವೇ ಕಾರಣವಲ್ಲ” ಎಂಬ ಮಾತುಗಳಿಂದ ಶುರುವಾಗುವ ಅವರ ಖಂಡಕಾವ್ಯ ಸಮಾಜದ ಬಲು ಭಾರವಾದ ನೋವಿನ ಮೂಟೆಗಳನ್ನು ಹೊರುತ್ತ ತಲ್ಲಣಿಸುವಂತಿದೆ.

ಮುಂದುವರೆದು “ಅಲ್ಲಿ ವೃತ್ತವೊಂದು ಮಗ್ಗಲು ಬದಲಿಸಿದಾಗ/ ಗುಬ್ಬಿ ಮರಿ ಗೋಳಾಡುತ್ತದೆ/ ದಿನದ ಸೂರ್ಯ ಮತ್ತೆ ಸತ್ತರೂ ನನ್ನವ್ವ ತುತ್ತೇ ತರುತ್ತಿಲ್ಲ” ಎಂಬ ಸಾಲುಗಳಲ್ಲಿ ಜಾಗತಿಕ ತಾಪಮಾನದ ಸಂಕಟವನ್ನೂ, ಗುಬ್ಬಿಯ ಕಷ್ಟವನ್ನು- ಅದರಷ್ಟೇ ಅಸಹಾಯಕನಾಗಿರುವ ಮನುಷ್ಯನಿಗೆ ತುತ್ತು ತಪ್ಪಿಹೋಗುತ್ತಿರುವ ಬವಣೆಯನ್ನೂ- ಏಕ ಕಾಲಕ್ಕೆ ಇಲ್ಲಿನ ಕಾವ್ಯಧ್ವನಿಸುವುದರಿಂದ ವೀರಣ್ಣನವರ ಕಾವ್ಯದ ವಿಷಾದ ಹೆಚ್ಚು ಗಾಢವಾಗಿದೆ.

ವೀರಣ್ಣ ಇತರರ ಹಾಗೆ ಕವಿತೆಗಳನ್ನು ಬರೆದಿದ್ದರೂ ಎರಡನೆಯ ಸಂಕಲನದಲ್ಲಿರುವ ಕವಿತೆಗಳ ಗೊಂಚಲನ್ನು ಖಂಡಕಾವ್ಯ ಎಂದು ಕರೆದಿದ್ದಾರೆ. ತಮ್ಮ ಕವಿತೆಗಳನ್ನು ಅವರು ಖಂಡಕಾವ್ಯ ಎಂದು ಕರೆಯುವ ಔಚಿತ್ಯವೇನು ಹಾಗೂ ಅವರ ಕಾವ್ಯದಲ್ಲಿ ನಿರಂತರವಾಗಿ ಕಾಣುವ ಅಳಲಿನ, ಊಳಿಡುವ ದನಿಗೂ ಇರುವ ಸಂಬಂಧವೇನು ಎಂಬ ಎರಡೂ ಪ್ರಶ್ನೆಗಳಿಗೆ ಜೊತೆಯಾಗಿಯೇ ಉತ್ತರವನ್ನು ಕಂಡುಕೊಳ್ಳುವ ಅಗತ್ಯವಿದೆ ಎನ್ನಿಸುತ್ತದೆ. ವೀರಣ್ಣನವರ ಒಟ್ಟು ಕವಿತೆಗಳನ್ನು ಗಮನಿಸಿದಾಗ, ಜಗತ್ತು ತನ್ನ ಕ್ರೌರ್ಯಕ್ಕೆ, ಹಿಂಸೆಗೆ ಮತ್ತೆ ಮತ್ತೆ ತಾಜಾ ಉದಾಹರಣೆಗಳನ್ನು ಸೇರಿಸುತ್ತಲೇ ಇದೆ ಎಂಬ ತೀವ್ರ ವಿಷಾದ ಇಲ್ಲಿ ಹರಿದಾಡುವುದನ್ನು ಕಾಣಬಹುದು. ಅದಕ್ಕಾಗಿಯೇ ಇಲ್ಲಿನ ಕಾವ್ಯ ಕೇವಲ ವ್ಯಕ್ತಿಯ, ಜಾತಿಯ ಸಮುದಾಯದ ಶೋಕಗೀತೆಯಾಗಿರದೆ ಮನುಷ್ಯಸಮಾಜದ ಅಖಂಡ ದುಃಖ ಪರಂಪರೆಗಳಿಗೆ, ಹತಾಶೆಗಳಿಗೆ ದನಿಯಾಗುವ ಹಂಬಲದಿಂದ ಹೊರಡುವುದರಿಂದ ಅದು ಕೇವಲ ಕವಿತೆಯಾಗದೆ ಆಳವಾದ ಪರಿಣಾಮವನ್ನು ಬೀರುವ ಖಂಡಕಾವ್ಯದ ಸ್ವರೂಪವನ್ನು ಪಡೆದುಕೊಂಡಿದೆ ಎನ್ನಿಸುತ್ತದೆ.

ತನ್ನ ಕಾವ್ಯವನ್ನು “ಕೋಗಿಲೆಯ ಒಡಲೊಳಗೆ ಉಳಿದ ಪದ” ಎಂದು ಬಣ್ಣಿಸಿಕೊಳ್ಳುವ ವೀರಣ್ಣ ಅವರ ಬರಹದಲ್ಲಿ ಬಂಡಾಯದ ಧಾಟಿಯಲ್ಲಿ ನ್ಯಾಯ ಕೇಳುವ ಹಕ್ಕು ಮಂಡಿಸುವ ಇರಾದೆಯನ್ನೂ ಸಹ ಕಾಣಬಹುದು. ಬಂಡಾಯದ ಧಾಟಿಯನ್ನು ಅವರ ಕಾವ್ಯ ಪೂರ್ಣವಾಗಿ ಬಿಟ್ಟುಕೊಟ್ಟಿಲ್ಲ. ಗಮನಿಸಬೇಕಾದದ್ದೆಂದರೆ “ಮೊದಲ ಬಾರಿಗೆ /ಲೋಕದ ಅದಾಲತ್ತಿನಲಿ/ನ್ಯಾಯ ಕೇಳಬೇಕು…… ಸಾಧ್ಯವಾದರೆ ನಮಗೆ ಸಿಗದಿರುವ ರೊಟ್ಟಿಯಲಿ ಕೋಟ್ಯನುಕೋಟಿ ದೇವತೆಗಳಿಗೆ ಪಾಲು ನೀಡಬೇಕು” (ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ ಪು.38 ) ಎಂದು ಹೊರಡುವ ಕಾವ್ಯದಲ್ಲಿ ಅಬ್ಬರದ ಕ್ಲೀಷೆಗಳಿಲ್ಲ. ಆಕ್ರೋಶದ ತೀವ್ರತೆಯಿದ್ದರೂ ಹಿಂಸೆ-ಪ್ರತೀಕಾರದ ಸೋಂಕಿಲ್ಲದ, ಸ್ವಮರುಕ ಪೂರ್ವಾಗ್ರಹಗಳ ಭಾರವಿಲ್ಲದ ಹದವಾದ ಮನಸ್ಥಿಯನ್ನು ತೋರುವುದರಿಂದ ಅದು ನಿಜವಾದ ಅರ್ಥದಲ್ಲಿ ‘ನೆಲದ ಕರುಣೆಯ ಕಾವ್ಯ’ವಾಗಿದೆ. ಇದನ್ನು ವಿಸ್ತರಿಸಿ ಹೇಳುವುದಾದರೆ, ಬದುಕು ಎಷ್ಟೇ ನಿರ್ದಯವಾಗಿದ್ದರೂ, ವ್ಯವಸ್ಥೆ ಎಷ್ಟು ಬರ್ಬರವಾಗಿದ್ದರೂ ವಸಂತನನ್ನು ಹಡೆದು ಮನುಷ್ಯ ಸಮಾಜಕ್ಕೆ ತಾಯ್ತನದ ಪ್ರೀತಿ ವಾತ್ಸಲ್ಯಗಳನ್ನು ಊಡಿಸುವ ಹಂಬಲವಿರುವ ಕಾರಣದಿಂದ ಇಲ್ಲಿನ ಕಾವ್ಯಕ್ಕೆ ನೆಲದ, ಪ್ರಕೃತಿಯ, ಇನ್ನೊಬ್ಬರ ನೋವಿಗೆ ಮಿಡಿಯುವ ಮನುಷ್ಯರ ಒಡಲಿಂದ ಚಿಮ್ಮುವ ಕರುಣೆಯ ಗುಣವಿದೆ.

ದುರಂತವೇನೆಂದರೆ ವಸಂತನನ್ನು ಹಡೆಯಬೇಕಾದ ಈ ಸಮಾಜ ಬಂಜರಾಗಿದೆ, ಅದರೊಳಗಿನ ಹಸಿರು ಬತ್ತಿಹೋಗಿದೆ ಎಂಬ ಅರಿವೂ ಸಹ ಕವಿಗೆ ಇದೆ. ಹಾಗಾಗಿ ವೀರಣ್ಣನವರ ಕಾವ್ಯದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಚೈತ್ರ, ನವಿಲು, ವಸಂತ ಮೊದಲಾದ ರಮ್ಯಕಾವ್ಯದ ಪರಿಕರಗಳು ನಾವು ಬದುಕುತ್ತಿರುವ ಸಾಮಾಜಿಕ ಸಂದರ್ಭದ ವಾಸ್ತವದ ಕಠೋರವ್ಯಂಗ್ಯವನ್ನು ಎತ್ತಿ ಹಿಡಿಯಲು ಯಶಸ್ವಿಯಾಗುತ್ತವೆಯೇ ವಿನಾ ಹುಸಿ ರಮ್ಯತೆಗೆ ಕಾರಣವಾಗುವುದಿಲ್ಲ ಎಂಬುದು ಮುಖ್ಯಸಂಗತಿಯಾಗಿದೆ.

ತಮ್ಮ ಖಂಡಕಾವ್ಯದ ಇನ್ನೊಂದು ಕಡೆ “ಮುಗಿಲ ಅಳು/ಒಂದೇ ಸಮನೆ ಆದಿಯಿಂದಲೂ/ಮಲಿನಗೊಂಡ ಮನುಷ್ಯಲೋಕ/ಶುದ್ಧೀಕರಿಸಿದ ದಿನ ಯಾವಾಗ ಬರುವುದೋ/ ಊರ ತುಂಬ ಕಣ್ಣೀರು/ಪರಂಪರೆಯ ಬತ್ತಳಿಕೆ ಖಾಲಿಯಾಗಿರಬಹುದೆ? ಈಗ ಈ ಕೈಯಲಿ/ ಹೊಸ ಹಾಡಿನ ಹತಿಯಾರ/ದುಃಖಗಳ ಬೇಟೆಯಾಡಲು”(ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ ಪು.36 ) ಎಂಬ ಸಾಲುಗಳನ್ನು ಗಮನಿಸಿದರೆ ಕಾವ್ಯವೆಂಬುದು ಕವಿಗೆ ಬಹಳ ರಮ್ಯವಾದ ಆಯ್ಕೆಯಾಗಿ, ಸುಖಾನುಭವದ ಸಾಧನವಾಗಿ ಕಾಣುವುದಿಲ್ಲ. ಕವಿಯ ದುಃಖವೇನೆಂದರೆ, ದೌರ್ಜನ್ಯ, ಅಸಮಾನತೆ, ಅನ್ಯಾಯ ಮೊದಲಾದ ನಿರಂತರ ದುಃಖದ ದುಷ್ಟ ಪರಂಪರೆಗಳನ್ನು ಬೇಟೆಯಾಡಲು ತನ್ನ ಹಾಡಿನ ಹತಿಯಾರು ಬಳಸಿದಷ್ಟೂ ಅದು ಬೇಟೆಯಾಡಬೇಕಾದ ಮೃಗಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬುದೇ ಆಗಿದೆ. ಹೆಚ್ಚುತ್ತಲೇ ಇರುವ ದುಃಖ ದೌರ್ಜನ್ಯಗಳ ಮೊತ್ತ ಹಾಗೂ ಅದನ್ನು ಬೇಟೆಯಾಡುತ್ತಲೇ ಇರುವ, ಅದರ ವಿರುದ್ಧ ಸೆಣೆಸುತ್ತಲೇ ಇರುವ ಹಾಡುಗಳ ಹತಿಯಾರು- ಇವುಗಳ ನಡುವಿನ ಸೆಣೆಸಾಟ ತೀವ್ರವಾಗುತ್ತಲೇ ಇರುವುದರಿಂದ ವೀರಣ್ಣನವರ ಕಾವ್ಯಕ್ಕೆ ಕರುಳು ಇರಿಯುವ ವ್ಯಂಗ್ಯ ಹಾಗೂ ಕನಲಿಕೆಯ ಗುಣಗಳಿವೆ.
ವೀರಣ್ಣನವರ ಕಾವ್ಯದಲ್ಲಿ, ದಲಿತ ಕಾವ್ಯದಲ್ಲಿ ಈಗಾಗಲೇ ಬಹುಚರ್ಚಿತವಾಗಿರುವ ನವಿಲಿನ ಉಲ್ಲೇಖಗಳು, ನವಿಲು ನೆಲತೊರೆದ ವಿವರಗಳು ಬರುತ್ತವೆ.

ನವಿಲ ಧ್ಯಾನ
ಮೈಗಣ್ಣಿನ
ನವಿಲ ಪ್ರತಿಕಣ್ಣಿನಲ್ಲೂ
ಗೌತಮನ ಬಿಂಬ

ಒಂದು ದಿನ
ನನ್ನ ಕಳೇಬರದ ಕಣ್ಣು ಕೇಳುತ್ತದೆ
ಬದಲಾಯಿತೆ ಲೋಕ
ಬದಲಿಸಬಹುದೆ ಪ್ರಪಂಚ
ಬದಲಾಗದೆ ಜಗತ್ತು

ಮೈಗಣ್ಣಿನ
ಪಕ್ಷಿಯ ಪ್ರತಿ ಕಣ್ಣಿನಲೂ
ಇಂಡಿಯಾದ ಸೃಷ್ಟಿತ ಅವಘಡಗಳಲ್ಲಿ
ಆಹುತಿಯಾದವರ ಬಿಂಬ
ನಾಟ್ಯವೋ ನರ್ತನವೋ

ಒಂದು ದಿನ
ನನಗೂ ಅಂತಿಮ ಸೋಲಾಗಿ
ಕಾಲದೊಳಗೆ ಲೀನವಾಗುವಾಗ
ಕಳೇಬರದ ಕಣ್ಣು ಮಾರ್ದನಿಸುತ್ತದೆ
ಹೌದು ಲೋಕ ನಮ್ಮಂತಾಗುತ್ತದೆ
ನಂಬಿಕೆಯಿರಲಿ. (ನೆಲದ ಕರುಣೆಯ ಹಾಡು)

ವೀರಣ್ಣನವರಿಗೆ ತಮ್ಮ ಕಾವ್ಯದಲ್ಲಿ ಬರುವ ನವಿಲು ರಮ್ಯತೆಯ ಆದರ್ಶವಾಗಿರುವಂತೆ, ಸ್ವತಃ ತನ್ನ ಕಾವ್ಯದ ಮಾದರಿಯೂ ಹೌದು. ಆ ಕಾವ್ಯ ಹೇಗಿರಬೇಕು / ಹೇಗಿದೆಯೆಂದರೆ ಅದು ಮೈಯೆಲ್ಲ ಕಣ್ಣಾಗಿ ನಿರಂತರವಾಗಿ ಸಮಾಜದ ಅವಘಡಗಳನ್ನೆಲ್ಲ ಪ್ರತಿಬಿಂಬಿಸುತ್ತಲೇ ಇರಬೇಕು. ಹೀಗೆ ಕಾವ್ಯ ನಿರಂತರವಾಗಿ ಸಮಾಜದ ಅವಘಡಗಳನ್ನು ಪ್ರತಿಬಿಂಬಿಸುವುದು ಅದರ ನಿತ್ಯ ಆದರ್ಶವೂ-ನಿತ್ಯ ದುರಂತವೂ ಆಗಿದೆ. ಅದರ ಜೊತೆಯಲ್ಲೇ ಸಮಾಜದ ಕೆಡುಕುಗಳನ್ನು ಪ್ರತಿಬಿಂಬಿಸುವಾಗ ಅಲ್ಲಿ ನಿರಂತರವಾಗಿ ಗೌತಮನ ಚಹರೆಗಳೂ ಮರುಕಳಿಸುವಂತಿರಬೇಕು ಎಂದು ವೀರಣ್ಣನವರ ಕಾವ್ಯ ಮತ್ತೆ ಮತ್ತೆ ಹೇಳುವುದರಿಂದ ಅಲ್ಲಿರುವ ಮಣ್ಣಿನ ಮೂಲಗುಣವೇ ಬೇರೆಯದು ಅನ್ನಿಸುತ್ತದೆ.