ದಂಡೆಯ ಮರ್ಮರ

ದುಃಖಿಸುತ್ತಿದೆ ದಂಡೆ
ಕಳೆದು ಹೋದುದ ನೆನೆದು

ಅಪ್ಪ ಇದೇ ದಂಡೆಯಲ್ಲಿ ನಡೆದು ನಿಂತು ಕುಳಿತು
ಮಗನಿಗೆ ನಾಲ್ಕು ಮಾತು ಹೇಳಿದ್ದರು

ಇಲ್ಲೇ, ಇದೇ ಜಾಗದಲ್ಲಿ ಅವಳು
ಕುಣಿದು ಕುಪ್ಪಳಿಸಿ, ಚಿತ್ರ ಬರೆದು ಹಾಡಿ ನಕ್ಕು ನಲಿದು
ಹಠಾತ್ ಮರೆಯಾಗಿ ಬಿಟ್ಟಿದ್ದಳು

ಅಬ್ಬರದ ಗುಡುಗು
ಮುಗಿಲ ಸೀಳುವ ಮಿಂಚು
ಎದೆ ಸೀಳುವ ಸಿಡಿಲ ಅರ್ಭಟಕೆ
ಊರನ್ನೇ ಹೊತ್ತೊಯ್ವ
ಹುಚ್ಚೆದ್ದ ಮಳೆಗೆ; ದಂಡೆ
ಅಡ್ಡಡ್ಡ ಉದ್ದುದ್ದು ಸೊಟ್ಟಂಬಟ್ಟ ಕೊರೆದು
ಮಗು ಬಿಡಿಸಿದ ಚಿತ್ರದಂತಾಗಿತ್ತು

ಮುಗಿಲು ಕಡಲು ಮಾತಾಡಿಕೊಂಡು, ಸಂಚು ಮಾಡಿ ಕೂಗಾಡಿದ ಹೊಡೆತಕೆ
ನಿಡುಚಾಚಿ ಬಿದ್ದ ಉದ್ದದ ದಂಡೆಗೆ; ಎದ್ದೆದ್ದು ಬೀಳುವ ಅಲೆಗಳ ಮೂಲಕ ಏಟು ಕೊಟ್ಟಿದ್ದವು

ಹೀಗೆ …ಬಿರು ಬೀಸಿನಿಂದ ಮೈಚಲ್ಲಿ ಒಂಚೂರೂ ಅಳುಕಿಲ್ಲದೆ ಹಾದರವ ಆಡಿಕೊಳ್ಳುವ ಜನರ ಮಾತಿಗೆ ದಂಡೆ ಕಿವಿ ಆನಿಸಿ ಕೇಳುತ್ತಲೇ ಇತ್ತು

ಯಾರ ನೋವಿನ ಮೇಲೆ ಇನ್ನಾರದ್ದೋ ಸವಾರಿ
ಯಾರದೋ ಪ್ರೀತಿಯ
ಹತ್ತಾರು ರೀತಿ ಬಗೆಬಗೆದು ಚಪ್ಪರಿಸುವ ಜ‌ನಕೆ ಒಂಚೂರು ನಾಚಿಕೆಯ ಶಬುದ ತಟ್ಟದಿರುವುದ ಕಂಡ
ದಂಡೆ ನಾಚುತ್ತಿತ್ತು

ಇಲ್ಲಿ ಯಾರದೋ ಬದುಕಿಗೆ ಇನ್ನಾರೋ ಶರಾ ಬರೆಯಲು ಹೊರಡುವುದು,
ದಿಕ್ಕಿಲ್ಲದ ಊರಿಗೆ ” ಧೋ ” ಎಂದು ಮಳೆ ಸುರಿದು ಮಾಯವಾಗುವುದು ಕಂಡ ದಂಡೆ ದಿಗ್ಭ್ರೆಮೆಗೊಂಡಿತು
ದಿಗ್ಭ್ರಮೆಗೊಂಡಿತು
ಮುಗಿಲು ಮೌನ ತಾಳಿತು