ಹೌದು. ಅವನಿಗೆ ಸಂತೋಷಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ, ಅಮ್ಮನ ಜೊತೆ ಅವನೊಬ್ಬನೇ ಇದ್ದದ್ದರಿಂದ ಬಹಳ ಸಂತೋಷವಾಗಿತ್ತು. ಇದ್ದಕಿದ್ದ ಹಾಗೆ, ಇಷ್ಟೆಲ್ಲ ಭಯಂಕರ ತಿಂಗಳುಗಳ ನಂತರ ಅವನ ಮನಸ್ಸು ಬಹಳ ಮೃದುವಾಗಿತ್ತು. ಅಮ್ಮನ ಕಾಲಿಗೆ ಬಿದ್ದ, ಅಮ್ಮನ ಪಾದಕ್ಕೆ ಮುತ್ತಿಟ್ಟ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತರು. ಈಗ ಅವಳಿಗೆ ಆಶ್ಚರ್ಯವಿರಲಿಲ್ಲ, ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

ಭಾಗ ಆರು: ಏಳನೆಯ ಅಧ್ಯಾಯ

ಅದೇ ದಿನ ಸಂಜೆ, ಆರು ಗಂಟೆಯ ನಂತರ ರಾಸ್ಕೋಲ್ನಿಕೋವ್ ತನ್ನ ತಾಯಿ, ತಂಗಿಯರು ಇದ್ದ ಬಕಲೇವ್ ವಸತಿ ಗೃಹದ ಹತ್ತಿರ ಬಂದಿದ್ದ. ಇಬ್ಬರು ಹೆಂಗಸರಿಗೂ ರಝುಮಿಖಿನ್ ಅಲ್ಲಿ ವಸತಿ ಏರ್ಪಾಟು ಮಾಡಿದ್ದ. ಮಹಡಿಯ ಮೆಟ್ಟಿಲ ಬಾಗಿಲು ರಸ್ತೆಗೇ ಮುಖ ಮಾಡಿತ್ತು. ರಾಸ್ಕೋಲ್ನಿಕೋವ್ ನಡಿಗೆಯ ವೇಗ ತಗ್ಗಿಸುತ್ತ ಹೋಗಲೋ ಬೇಡವೋ ಎಂದು ಇನ್ನೂ ಯೋಚನೆ ಮಾಡುತ್ತಿದ್ದ. ಇಡೀ ಜಗತ್ತನ್ನೇ ಕೊಡುತ್ತೇನೆಂದರೂ ವಾಪಸು ಹೋಗಬಾರದೆಂದು ತೀರ್ಮಾನ ಮಾಡಿದ್ದ. ‘ಪರವಾಗಿಲ್ಲ, ಅವರಿಗೆ ಇನ್ನೂ ಏನೂ ಗೊತ್ತಿಲ್ಲ. ನಾನು ವಿಚಿತ್ರ ಅಂತ ಆಗಲೇ ಹೇಗೂ ತೀರ್ಮಾನ ಮಾಡಿಕೊಂಡಿದ್ದಾರೆ,’ ಅಂದುಕೊಂಡ. ಇಡೀ ರಾತ್ರಿ ಮಳೆಯಲ್ಲೇ ಕಳೆದದ್ದರಿಂದ ಅವನ ಬಟ್ಟೆಯೆಲ್ಲ ಕೊಳಕಾಗಿ, ಹರಿದು, ಚಿಂದಿಯಾಗಿದ್ದವು. ಅವನ ಮುಖ ದಣಿವಿನಿಂದ, ಕೆಟ್ಟ ಹವೆಯಿಂದ, ಸುಮಾರು ಇಪ್ಪತ್ತ ನಾಲ್ಕು ಗಂಟೆಗಳಷ್ಟು ಕಾಲ ಅವನು ತನ್ನೊಡನೆ ತಾನೇ ಘರ್ಷಣೆ ನಡೆಸಿದ್ದರಿಂದ ಅಂದಗೆಟ್ಟಿತ್ತು. ಇಡೀ ರಾತ್ರಿ ಒಂಟಿಯಾಗಿ ಕಳೆದಿದ್ದ. ಕೊನೆಯ ಪಕ್ಷ ಗಟ್ಟಿ ನಿರ್ಧಾರ ಮಾಡಿದ್ದ.

ಬಾಗಿಲು ತಟ್ಟಿದ. ಅಮ್ಮ ಬಾಗಿಲು ತೆಗೆದಳು. ದುನ್ಯಾ ಇರಲಿಲ್ಲ. ಕೆಲಸದ ಹುಡುಗಿ ಕೂಡ ಇರಲಿಲ್ಲ. ಬಾಗಿಲು ತೆಗೆದ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಗೆ ತನ್ನ ಮಗನನ್ನು ಕಂಡ ಸಂತೋಷ, ಆಶ್ಚರ್ಯಗಳಿಂದ ಮಾತೇ ಹೊರಡಲಿಲ್ಲ. ಅವನ ಕೈ ಹಿಡಿದು ರೂಮಿನೊಳಕ್ಕೆ ಎಳಕೊಂಡಳು.

‘ಓಹೋ, ಬಂದೆಯಾ, ಬಾ, ಬಾ!’ ಸಂತೋಷದಿಂದ ತೊದಲುತ್ತ ಮಾತಾಡಿದಳು. ‘ದಯವಿಟ್ಟು ಸಿಟ್ಟು ಮಾಡಿಕೊಳ್ಳಬೇಡಪ್ಪಾ, ಇಷ್ಟು ಪೆದ್ದು ಪೆದ್ದಾಗಿ ಅಳತಾ ನಿನ್ನ ಒಳಕ್ಕೆ ಕರೀತಿದೇನೆ ಅಂತ. ನಾನು ಅಳತಾ ಇಲ್ಲ, ನಾನು ನಗತಾ ಇದೀನಿ. ಅಳತಾ ಇದೀನಿ ಅಂದುಕೊಂಡೆಯಾ? ಇಲ್ಲಪ್ಪಾ. ಖುಷಿ ಆಗತಾ ಇದೆ. ನಾನು ಪೆದ್ದಿ ಕಣ್ಣಲ್ಲಿ ನೀರು ಬಂದು ಬಿಡತ್ತೆ. ನಿಮ್ಮಪ್ಪ ಸತ್ತಾಗಿನಿಂದ ಹೀಗೇ. ಎಲ್ಲಾದಕ್ಕೂ ಅಳತೇನೆ. ಕೂತುಕೋಪ್ಪಾ. ತುಂಬ ಸುಸ್ತಾಗಿರಬೇಕು. ನೋಡಿದರೇ ಗೊತ್ತಾಗತ್ತೆ. ಬಟ್ಟೆ ಎಲ್ಲಾ ಕೊಳೆ ಆಗಿದೆ.’

‘ನಿನ್ನೆ ಮಳೆಗೆ ಸಿಕ್ಕಿದೆ, ಅಮ್ಮಾ…’ ರಾಸ್ಕೋಲ್ನಿಕೋವ್ ಮಾತಾಡಲು ಪ್ರಯತ್ನಪಟ್ಟ.

‘ಬೇಡಾಪ್ಪಾ! ನೀನು ಬಂದ ತಕ್ಷಣ ಪ್ರಶ್ನೆ ಕೇಳಕ್ಕೆ ಶುರುಮಾಡಿದೆ ಅಂದುಕೊಂಡೆಯಾ? ನಾನು ಹೆಂಗಸು, ಹಳೇ ಅಭ್ಯಾಸ. ಚಿಂತೆ ಮಾಡಬೇಡ. ಅರ್ಥ ಆಗತ್ತೆ ನನಗೆ. ನನಗೆ ಎಲ್ಲಾ ಅರ್ಥ ಆಗತ್ತೆ ಈಗ. ಇಲ್ಲಿಗೆ ಬಂದು ಜಾಣೆ ಆಗಿದೇನೆ. ಇಲ್ಲಿ ಜನ ಹೇಗೆ ಮಾತಾಡತಾರೆ, ಇರತಾರೆ ಎಲ್ಲ ಗೊತ್ತಾಗಿದೆ ನನಗೆ. ನಿನಗೆ ಏನೇನು ಕೆಲಸ ಇರತ್ತೋ, ಎಲ್ಲೆಲ್ಲಿಗೆ ಹೋಗಬೇಕಾಗತ್ತೋ ಎಲ್ಲಾನೂ ನನಗೆ ಹೇಳು ಅಂತ ಕೇಳಬಾರದು ಅಂತ ತೀರ್ಮಾನ ಮಾಡಿದೇನೆ. ಏನೇನು ವ್ಯವಹಾರವೋ ಏನೇನು ಯೋಚನೆ ನಿನ್ನ ತಲೇಲ್ಲಿದೆಯೋ ದೇವರಿಗೇ ಗೊತ್ತು. ಏನು ಯೋಚನೆ ಮಾಡತಿದೀಯ ಅಂತ ನಾನು ಯಾಕೆ ನಿನ್ನ ತಿವಿದು ತಿವಿದು ಕೇಳಲಿ? ಈಗ ನಾನು ಜಾಣೆ… ಅಯ್ಯೋ ದೇವರೇ! ಯಾಕೆ ಹೀಗೆ ಅಂಡು ಸುಟ್ಟ ಬೆಕ್ಕಿನ ಹಾಗೆ ಅತ್ತ ಇತ್ತ ಓಡಾಡತಾ ಹುಚ್ಚಿ ಥರ ಬಡಬಡಿಸತಾ ಇದೇನೆ?… ಗೊತ್ತಾ ರೋದ್ಯಾ, ಪೇಪರಿನಲ್ಲಿ ನೀನು ಬರೆದಿದ್ದ ಲೇಖನ ಓದತಾ ಇದ್ದೆ. ರಝುಮಿಖಿನ್ ತಂದುಕೊಟ್ಟಿದ್ದ. ಅದನ್ನ ನೋಡಿದ ತಕ್ಷಣ ನನಗೆ ಗೊತ್ತಾಯಿತು ನಾನೆಂಥ ಪೆದ್ದೀ ಅಂತ. ಓಹೋ, ನನ್ನ ಮಗ ಎಲ್ಲ ಸಮಸ್ಯೆಗೆ ಪರಿಹಾರ ಹುಡುಕುತಾ ಇದಾನೆ! ಅವನ ತಲೆಗೆ ಹೊಸ ವಿಚಾರ ಬಂದಿವೆ, ಅದನ್ನ ಯೋಚನೆ ಮಾಡತಾ ಇರಬಹುದು, ನಾನು ನೋಡಿದರೆ ಮಗನಿಗೆ ಹಿಂಸೆ ಕೊಟ್ಟು ಅವನ ಮನಸು ಕೆಡಿಸತಾ ಇದೀನಿ ಅಂದುಕೊಂಡೆ. ನೀನು ಬರೆದದ್ದು ಓದತಾ ಇದೀನಿ, ಅದರಲ್ಲಿ ಎಷ್ಟೋ ನನಗೆ ಅರ್ಥ ಆಗಲ್ಲ ಅನ್ನು. ಹಾಗೇ ಇರಬೇಕಲ್ಲವಾ, ನಾನು ನಿನ್ನಷ್ಟು ಓದಿದವಳಲ್ಲ.’

‘ಎಲ್ಲಿ, ಲೇಖನ ತೋರಿಸಮ್ಮಾ!’

ರಾಸ್ಕೋಲ್ನಿಕೋವ್ ನಿಯತಕಾಲಿಕವನ್ನು ಕೈಗೆತ್ತಿಕೊಂಡು ತನ್ನ ಲೇಖನದ ಮೇಲೆ ಕಣ್ಣಾಡಿಸಿದ. ಅವನಿದ್ದ ಪರಿಸ್ಥಿತಿ, ಅವನ ಮನಸ್ಸು ಹೇಗೇ ಇದ್ದರೂ ತನ್ನ ಮೊದಲ ಲೇಖನ ಅಚ್ಚಾಗಿ ಬಂದುದನ್ನು ಕಾಣುವ ಲೇಖಕ ಅನುಭವಿಸುವಂಥ ವಿಚಿತ್ರವಾದ ಸವಿಯಾದ ನೋವಿನ ಭಾವವನ್ನು ಅನುಭವಿಸಿದ. ಅಲ್ಲದೆ, ಅವನಿಗಿನ್ನೂ ಇಪ್ಪತ್ತ ಮೂರು ವರ್ಷ. ಈ ಭಾವ ಸ್ವಲ್ಪ ಹೊತ್ತು ಮಾತ್ರವಿತ್ತು. ಕೆಲವು ಸಾಲು ಓದುತ್ತಿದ್ದ ಹಾಗೇ ಎದೆ ಹಿಂಡಿದ ಹಾಗಾಯಿತು. ಕಳೆದ ತಿಂಗಳುಗಳಲ್ಲಿ ಅವನ ಮನಸಿನಲ್ಲಿ ನಡೆದಿದ್ದ ಹೊಯ್ದಾಟ, ಹೋರಾಟಗಳೆಲ್ಲ ಮತ್ತೆ ಒಮ್ಮೆಗೇ ಎದ್ದು ಬಂದವು. ಸಿಟ್ಟಿನಿಂದ, ಅಸಹ್ಯದಿಂದ ಪೇಪರನ್ನು ಮೇಜಿನ ಮೇಲೆ ಎಸೆದ.

‘ನಾನು ಪೆದ್ದಿ ಇರಬಹುದು ರೋದ್ಯಾ, ಆದರೂ ನನಗೆ ಗೊತ್ತು, ಬಹಳ ಬೇಗ ನೀನು ಎಲ್ಲರಿಗಿಂತ ದೊಡ್ಡ ಮನುಷ್ಯ ಆಗದೆ ಇರಬಹುದು, ವಿದ್ಯಾವಂತರ ಲೋಕದಲ್ಲಿ ಒಬ್ಬ ದೊಡ್ಡ ಮನುಷ್ಯ ಖಂಡಿತ ಆಗತೀಯ. ನಿನ್ನಂಥವನನ್ನ ಹುಚ್ಚ ಅಂದುಕೊಳ್ಳತಾರಲ್ಲಾ, ಹ್ಞಾಂ! ನಿನಗೆ ಗೊತ್ತಿಲ್ಲ, ನಿನ್ನ ಹುಚ್ಚ ಅಂದುಕೊಂಡಿದ್ದರು! ಕ್ರಿಮಿಗಳು! ಜನಕ್ಕೆ ಬುದ್ಧಿವಂತರು ಅರ್ಥ ಆಗಲ್ಲ! ದುನ್ಯಾ ಕೂಡ ನಿನ್ನ ಹುಚ್ಚ ಅಂದುಕೊಳ್ಳಕ್ಕೆ ಶುರುಮಾಡಿದ್ದಳು—ನೋಡು ಮತ್ತೆ! ನಿಮ್ಮಪ್ಪ ಕೂಡ ಪೇಪರಿಗೆ ಎರಡು ಸಾರಿ ಕಳಿಸಿದ್ದರು—ಮೊದಲು ಪದ್ಯ (ನಿಮ್ಮಪ್ಪನ ನೋಟ್‍ ಬುಕ್ಕು ಇನ್ನೂ ನನ್ನ ಹತ್ತಿರ ಇದೆ, ಯಾವತ್ತಾದರೂ ತೋರಿಸತೇನೆ) ಆಮೇಲೆ ಒಂದು ದೊಡ್ಡ ಕಥೆ (ಅದನ್ನ ನಾನೇ ದುಂಡು ಅಕ್ಷರದಲ್ಲಿ ಕಾಪಿ ಮಾಡಿಕೊಡತೇನೆ ಅಂತ ಕೇಳಿಕೊಂಡಿದ್ದೆ) ಅವು ಪ್ರಿಂಟಾಗಲಿ ಅಂತ ಇಬ್ಬರೂ ಪ್ರಾರ್ಥನೆ ಮಾಡಿದ್ದೆವು. ಪ್ರಿಂಟಾಗಲೇ ಇಲ್ಲ. ನನಗೆ ಎಷ್ಟು ದುಃಖ ಆಯಿತು ಗೊತ್ತಾ, ರೋದ್ಯಾ, ಹೋದ ವಾರ ನಿನ್ನ ಬಟ್ಟೆಗಳನ್ನ ನೋಡಿದಾಗ, ನಿನ್ನ ಮನೆ ನೋಡಿದಾಗ, ನೀನು ಮಾಡುವ ಊಟ ನೋಡಿದಾಗ. ನಾನು ಪೆದ್ದಿ ನೋಡು, ಅದಕ್ಕೇ ಹೀಗೆ ದುಃಖ. ಅಲ್ಲಾ, ನೀನು ಮನಸ್ಸು ಮಾಡಿದರೆ ನಿನಗೆ ಬೇಕಾದ್ದನ್ನೆಲ್ಲ ತಕ್ಷಣ ಮಾಡಿಕೊಳ್ಳಬಹುದು. ನಿನಗೆ ಅಂಥ ಒಳ್ಳೆ ಮನಸಿದೆ, ಬುದ್ಧಿ ಇದೆ. ನೀನು ಹೀಗಿದ್ದೀಯ ಅಂದರೆ ನಿನ್ನ ಮನಸ್ಸು ಬೇರೆ ಯಾವುದೋ ಮುಖ್ಯ ವಿಚಾರದಲ್ಲಿ ಮುಳುಗಿದೆ ಅಂತ…’

‘ದುನ್ಯಾ ಇನ್ನೂ ಮನೆಗೆ ಬಂದಿಲ್ಲವಾ ಅಮ್ಮಾ?’

‘ಇಲ್ಲ, ರೋದ್ಯಾ. ಎಷ್ಟೋ ಸಲ ನನ್ನ ಒಬ್ಬಳನ್ನೇ ಬಿಟ್ಟು ಎಲ್ಲಿಗೋ ಹೊರಟು ಹೋಗತಾಳೆ. ರಝುಮಿಖಿನ್, ದೇವರು ಒಳ್ಳೆಯದು ಮಾಡಲಿ ಅವನಿಗೆ, ಬಂದು ನನ್ನ ಜೊತೆ ಕೂತಿದ್ದು ನಿನ್ನ ವಿಚಾರ ಮಾತಾಡತಾನೆ. ಅವನಿಗೆ ನಿನ್ನ ಮೇಲೆ ತುಂಬ ಪ್ರೀತಿ, ತುಂಬ ಗೌರವ. ಹಾಗಂತ ನಿನ್ನ ತಂಗಿಗೆ ನಿನ್ನ ಮೇಲೆ ಪ್ರೀತಿ ಇಲ್ಲ ಅಂತಲ್ಲ. ಅವಳ ಸ್ವಭಾವ ಅವಳಿಗೆ, ನನ್ನದು ನನಗೆ. ಅವಳ ಹತ್ತಿರ ಏನೇನೋ ಗುಟ್ಟು ಇವೆ. ನನ್ನ ಹತ್ತಿರ ಮಾತ್ರ ನಿಮ್ಮಿಬ್ಬರಿಗೂ ಗೊತ್ತಿಲ್ಲದೆ ಇರುವ ಗುಟ್ಟು ಯಾವುದೂ ಇಲ್ಲ. ನನಗೆ ಗೊತ್ತು, ದುನ್ಯಾ ತುಂಬ ಜಾಣೆ. ನಿನ್ನ ಮೇಲೂ ನನ್ನ ಮೇಲೂ ಪ್ರೀತಿ ಇದೆ… ಆದರೂ ಇದೆಲ್ಲ ಹೋಗಿ ಎಲ್ಲಿಗೆ ಮುಟ್ಟುತ್ತೋ ಏನೋ. ನೀನು ಬಂದಿದ್ದು ಬಹಳ ಖುಷಿ ಆಯಿತು, ರೋದ್ಯಾ. ನಿನ್ನ ನೋಡಕ್ಕೆ ಅವಳೂ ಇರಬೇಕಾಗಿತ್ತು. ಅವಳು ಬರಲಿ, ಕೇಳತೇನೆ, ‘ನಿಮ್ಮಣ್ಣ ಬಂದಿದ್ದ, ನೀನು ಎಲ್ಲಿಗೆ ಹೋಗಿದ್ದೆ?’ ಅಂತ. ನನಗೆ ತುಂಬ ಕಷ್ಟ ಕೊಡಬೇಡಪ್ಪಾ. ನಿನಗೆ ಆದಾಗೆಲ್ಲ ಬಾ ಮನೆಗೆ, ಆಗದೆ ಇದ್ದರೆ ಏನು ಮಾಡಕ್ಕಾಗತ್ತೆ ಹೇಳು? ಕಾಯತಾ ಇರತೇನೆ. ನಿನಗೆ ನನ್ನ ಮೇಲೆ ಪ್ರೀತಿ ಇದೆ ಅಂತ ಗೊತ್ತು. ಅಷ್ಟು ಸಾಕು ನನಗೆ. ನೀನು ಬರೆದದ್ದೆಲ್ಲ ಓದತಾ ಇರತೇನೆ. ಎಲ್ಲಾರೂ ನಿನ್ನ ಬಗ್ಗೆ ಮಾತಾಡೋದು ಕೇಳತೇನೆ. ಆವಾಗ ಇವಾಗ ನನ್ನ ನೋಡಕ್ಕೆ ನೀನೇ ಬರತೀಯ—ಇದಕ್ಕಿಂತ ಇನ್ನೇನು ಬೇಕು? ಈ ನಿನ್ನಮ್ಮನನ್ನ ಸಮಾಧಾನ ಮಾಡಕ್ಕೆ ಅಂತಲೇ ಈಗ ಬಂದಿದ್ದೀಯಲ್ಲಾ…’

ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ತಟ್ಟಕ್ಕನೆ ಅಳುವುದಕ್ಕೆ ಶುರು ಮಾಡಿದಳು.

‘ನೋಡಿದೆಯಾ ನನ್ನ ಬುದ್ದೀನ! ಪೆದ್ದಿ ನಾನು! ದೇವರೇ, ಯಾಕೆ ಹೀಗೆ ಇಲ್ಲೇ ಕೂತಿದೇನೆ!’ ಅನ್ನುತ್ತ ತಟ್ಟನೆ ಎದ್ದಳು. ‘ಕಾಫಿ ಇದೆ, ನಿನಗೆ ಕೊಡಲೇ ಇಲ್ಲ! ಎಂಥಾ ಸ್ವಾರ್ಥಿ ಮುದುಕಿ ನಾನು! ಒಂದೇ ನಿಮಿಷ, ಒಂದೇ ನಿಮಿಷ! ತರತೇನೆ!’

‘ಇರಲಿ ಬಿಡಮ್ಮಾ. ಹೋಗತಾ ಇದೀನಿ. ನಾನು ಬಂದಿದ್ದು ಅದಕ್ಕಲ್ಲ. ಕೇಳು ನನ್ನ ಮಾತು, ಪ್ಲೀಸ್.’
ಪುಲ್ಚೇರಿಯ ವಿಧೇಯಳಾಗಿ ಅವನ ಹತ್ತಿರಕ್ಕೆ ಹೋದಳು.

‘ಅಮ್ಮಾ, ಏನೇ ಆಗಲಿ, ನನ್ನ ಬಗ್ಗೆ ನಿನ್ನ ಕಿವಿಗೆ ಯಾವುದೇ ಸುದ್ದಿ ಬೀಳಲಿ, ನನ್ನ ಬಗ್ಗೆ ಯಾರು ಏನೇ ಹೇಳಲಿ, ನೀನು ಮಾತ್ರ ನನ್ನ ಮೇಲೆ ಈಗ ಇರುವಂಥ ಪ್ರೀತಿ ಇಟ್ಟುಕೊಂಡೇ ಇರತೀಯ ಅಲ್ಲವೇನಮ್ಮಾ?’ ತುಂಬು ಮನಸಿನಿಂದ, ಆಡುತ್ತಿರುವ ಮಾತನ್ನು ತೂಕ ಮಾಡಿ ಆಡದೆ, ಪದಗಳ ಬಗ್ಗೆ ಯೋಚನೆ ಮಾಡದೆ ಕೇಳಿದ.

‘ರೋದ್ಯಾ, ರೋದ್ಯಾ, ಎಂಥಾ ಮಾತು ಕೇಳತೀಯಪ್ಪಾ? ಏನಾಗಿದೆ ನಿನಗೆ? ನಿನ್ನ ಬಗ್ಗೆ ಯಾರು ಏನು ಹೇಳಕ್ಕೆ ಬರತಾರೆ? ಯಾರು ಏನು ಹೇಳಿದರೂ ನಂಬಲ್ಲ ನಾನು. ಅವರನ್ನ ಓಡಿಸಿಬಿಡತೇನೆ.’

‘ಅಮ್ಮಾ, ನನಗೆ ಯಾವಾಗಲೂ ನಿನ್ನ ಮೇಲೆ ತುಂಬಾ ಪ್ರೀತಿ, ಅದು ಹಾಗೇ ಇರತ್ತೆ ಅಂತ ನಿನಗೆ ಹೇಳಿ ಹೋಗಕ್ಕೆ ಬಂದೆ. ನಾವಿಬ್ಬರೇ ಇದ್ದಿದ್ದು ಒಳ್ಳೆಯದಾಯಿತು. ದುನ್ಯಾ ಇಲ್ಲದೆ ಇದ್ದಿದ್ದೂ ಒಳ್ಳೆಯದಾಯಿತು. ನಿನಗೆ ದುಃಖ ಆಗಬಹುದು, ಆದರೂ ಈ ನಿನ್ನ ಮಗ ನಿನ್ನ ತುಂಬ ಪ್ರೀತಿ ಮಾಡತಾನೆ, ಅವನ ಮೇಲೆ ಇರೋಕ್ಕಿಂತ ಹೆಚ್ಚು ಪ್ರೀತಿ ಅವನಿಗೆ ನಿನ್ನ ಮೇಲಿದೆ ಅನ್ನೋದು ಹೇಳಕ್ಕೆ ಬಂದೆ. ನಾನು ಕ್ರೂರಿ, ನಿನ್ನ ಮೇಲೆ ನನಗೆ ಪ್ರೀತಿ ಇಲ್ಲ ಅಂತೆಲ್ಲ ನೀನು ಅಂದುಕೊಂಡಿದ್ದರೆ ಅದೆಲ್ಲ ಸುಳ್ಳು. ನಿನ್ನ ಮೇಲೆ ಇರುವ ಪ್ರೀತಿ ಯಾವತ್ತೂ ಕಮ್ಮಿ ಆಗಲ್ಲ. ಸಾಕು… ಸರಿ. ಈ ಕೆಲಸ ಮೊದಲು ಮಾಡಬೇಕು, ಇಲ್ಲಿಂದ ಶುರು ಮಾಡಬೇಕು ಅಂದುಕೊಂಡೆ…’

ಪುಲ್ಚೇರಿಯ ಮೌನವಾಗಿ ಅವನನ್ನು ಅಪ್ಪಿ ಸದ್ದಿಲ್ಲದೆ ಅಳುತ್ತಿದ್ದಳು.

‘ಯಾಕಪ್ಪಾ ರೋದ್ಯಾ? ಏನಾಗತಿದೆ?’ ಕೊನೆಗೂ ಕೇಳಿದಳು. ‘ನಮ್ಮನ್ನ ನೋಡಿ ನೋಡಿ ನಿನಗೆ ಸಾಕಾಗಿ ಹೋಗಿದೆ ಅಂದುಕೊಂಡಿದ್ದೆ ಇಷ್ಟು ದಿನ. ಈಗ ಗೊತ್ತಾಗತಾ ಇದೆ ನಿನಗೆ ಏನೋ ಆಗತ್ತೆ, ದೊಡ್ಡ ದುಃಖ ಬರತ್ತೆ, ಅದಕ್ಕೇ ನೋವು ಪಡತಾ ಇದೀಯ ಅಂತ. ಬಹಳ ದಿನದಿಂದ ಹೀಗನ್ನಿಸತಾ ಇತ್ತು, ರೋದ್ಯಾ. ಇದನ್ನೆಲ್ಲ ಈಗ ನಿನಗೆ ಹೇಳಬಾರದು. ಆದರೂ,.. ಇದೇ ವಿಷಯ ಯೋಚನೆ ಮಾಡತಾ ರಾತ್ರಿ ಹೊತ್ತು ನನಗೆ ನಿದ್ದೇನೇ ಬರಲ್ಲ. ನಿನ್ನ ತಂಗಿ ಕೂಡ ನಿನ್ನೆ ಇಡೀ ರಾತ್ರಿ ನಿದ್ದೆ ಮಾಡಿಲ್ಲ. ಸನ್ನಿ ಹಿಡಿದು ಏನೇನೋ ಬಡಬಡಿಸತಾ ಇದ್ದಳು. ನನ್ನ ಕಿವೀಗೆ ಏನೇನೋ ಬಿತ್ತು, ಅರ್ಥ ಆಗಲಿಲ್ಲ. ಇವತ್ತು ಬೆಳಿಗ್ಗೆ ಎದ್ದಾಗ ಯಾರೋ ನನಗೆ ಮರಣದಂಡನೆ ಕೊಟ್ಟಿದಾರೆ ಅನ್ನಿಸತಾ ಇತ್ತು—ಈಗ ನಿನ್ನ ಈ ಮಾತು! ರೋದ್ಯಾ, ರೋದ್ಯಾ, ಏನಾಯಿತಪ್ಪಾ? ಎಲ್ಲಿಗಾದರೂ ಹೊರಟು ಹೋಗತಿದ್ದೀಯಾ, ಹೇಗೆ?

‘ಹೊರಟು ಹೋಗತಾ ಇದೇನೆ.’

‘ಅನ್ನಿಸಿತ್ತು ನನಗೆ! ನಿನ್ನ ಜೊತೆ ಬರಲಾ? ಅದೂ ನಿನಗೆ ಇಷ್ಟ ಇದ್ದರೆ ಮಾತ್ರ. ದುನ್ಯಾಗೆ ನಿನ್ನ ಮೇಲೆ ಪ್ರೀತಿ. ತುಂಬಾ. ಮತ್ತೆ ಸೋಫ್ಯಾ, ಅವಳೂ ನಮ್ಮ ಜೊತೆ ಬರಬಹುದು, ನೀನು ಬೇಕು ಅಂದರೆ. ಅವಳನ್ನೂ ನಾನು ಮಗಳ ಥರಾ ನೋಡಿಕೊಳ್ಳತೇನೆ. ರಝುಮಿಖಿನ್ ನಮಗೆ ಸಹಾಯ ಮಾಡತಾನೆ… ಸರಿ.. ಎಲ್ಲಿಗೆ… ಎಲ್ಲಿಗೆ ಹೋಗತಾ ಇದೀಯ?’

‘ಬರತೇನಮ್ಮಾ.’

‘ಏನು? ಇವತ್ತೇ! ಈಗಲೇ!’ ಶಾಶ್ವತವಾಗಿ ಮಗನನ್ನು ಕಳೆದುಕೊಳ್ಳುತ್ತಿದ್ದೇನೆ ಅನ್ನುವ ಹಾಗೆ ಚೀರಿದಳು.

‘ಇಲ್ಲಮ್ಮ, ಆಗಲ್ಲ. ಹೋಗಬೇಕು ನಾನು. ಹೋಗಲೇಬೇಕು.’

‘ನಾನೂ ನಿನ್ನ ಜೊತೆ ಬರಬಾರದಾ?’

‘ಬೇಡಮ್ಮ. ದೇವರ ಮುಂದೆ ನನಗೋಸ್ಕರ ಪ್ರಾರ್ಥನೆ ಮಾಡು. ನಿನ್ನ ಪ್ರಾರ್ಥನೆ ದೇವರಿಗೆ ಮುಟ್ಟತ್ತೆ.;

‘ಆಶೀರ್ವಾದ ಮಾಡತೀನಪ್ಪಾ. ದೇವರು ಒಳ್ಳೆಯದು ಮಾಡಲಿ! ದೇವರೇ, ಏನಪ್ಪಾ ಇದು!’

ಹೌದು. ಅವನಿಗೆ ಸಂತೋಷಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ, ಅಮ್ಮನ ಜೊತೆ ಅವನೊಬ್ಬನೇ ಇದ್ದದ್ದರಿಂದ ಬಹಳ ಸಂತೋಷವಾಗಿತ್ತು. ಇದ್ದಕಿದ್ದ ಹಾಗೆ, ಇಷ್ಟೆಲ್ಲ ಭಯಂಕರ ತಿಂಗಳುಗಳ ನಂತರ ಅವನ ಮನಸ್ಸು ಬಹಳ ಮೃದುವಾಗಿತ್ತು. ಅಮ್ಮನ ಕಾಲಿಗೆ ಬಿದ್ದ, ಅಮ್ಮನ ಪಾದಕ್ಕೆ ಮುತ್ತಿಟ್ಟ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತರು. ಈಗ ಅವಳಿಗೆ ಆಶ್ಚರ್ಯವಿರಲಿಲ್ಲ, ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ನನ್ನ ಮಗನಿಗೆ ತೀರ ಭಯಂಕರವಾದದ್ದು ಏನೋ ಆಗುತ್ತಿದೆ ಅನ್ನುವುದು ಗೊತ್ತಾಗಿತ್ತು. ಭಯಂಕರವಾದದ್ದು ಆಗುವ ಹೊತ್ತು ಬಂದಿದೆ ಅನ್ನುವುದು ತಿಳಿದಿತ್ತು.

ಏನು ಯೋಚನೆ ಮಾಡತಿದೀಯ ಅಂತ ನಾನು ಯಾಕೆ ನಿನ್ನ ತಿವಿದು ತಿವಿದು ಕೇಳಲಿ? ಈಗ ನಾನು ಜಾಣೆ… ಅಯ್ಯೋ ದೇವರೇ! ಯಾಕೆ ಹೀಗೆ ಅಂಡು ಸುಟ್ಟ ಬೆಕ್ಕಿನ ಹಾಗೆ ಅತ್ತ ಇತ್ತ ಓಡಾಡತಾ ಹುಚ್ಚಿ ಥರ ಬಡಬಡಿಸತಾ ಇದೇನೆ?… ಗೊತ್ತಾ ರೋದ್ಯಾ, ಪೇಪರಿನಲ್ಲಿ ನೀನು ಬರೆದಿದ್ದ ಲೇಖನ ಓದತಾ ಇದ್ದೆ. ರಝುಮಿಖಿನ್ ತಂದುಕೊಟ್ಟಿದ್ದ. ಅದನ್ನ ನೋಡಿದ ತಕ್ಷಣ ನನಗೆ ಗೊತ್ತಾಯಿತು ನಾನೆಂಥ ಪೆದ್ದೀ ಅಂತ.

‘ರೋದ್ಯಾ, ನನ್ನ ಚೊಚ್ಚಲು ಮಗನಪ್ಪಾ ನೀನು,’ ಬಿಕ್ಕುತ್ತ ಮಾತಾಡಿದಳು. ‘ನೀನು ಪುಟ್ಟ ಮಗುವಾಗಿದ್ದಾಗಲೂ ಹೀಗೇ ನನ್ನ ಹತ್ತಿರ ಓಡಿ ಬರತಿದ್ದೆ, ಹೀಗೇ ನನ್ನ ಅಪ್ಪಿಕೊಳ್ಳುತ್ತಿದ್ದೆ. ಈಗಲೂ ಹಾಗೇ ಇದೀಯ. ನಿಮ್ಮಪ್ಪ ಇದ್ದಾಗ, ನಮಗೆ ಬಹಳ ಕಷ್ಟ ಬಂದಿದ್ದಾಗ ನೀನು ಇದೀಯ ಅನ್ನುವುದೇ ನಮಗೆ ದೊಡ್ಡ ಖುಷಿ. ನಿಮ್ಮಪ್ಪನನ್ನ ಮಣ್ಣು ಮಾಡಿ ಬಂದಮೇಲೆ ನಾವಿಬ್ಬರೂ ಎಷ್ಟು ಸಲ ಅವರ ಸಮಾಧಿ ಮುಂದೆ ಕೂತು, ಈಗ ಮಾಡತಿರುವ ಹಾಗೆ ಅಪ್ಪಿಕೊಂಡು ಅತ್ತಿಲ್ಲ. ಇಷ್ಟೊಂದು ಯಾಕೆ ಅಳತಾ ಇದೇನೆ ಅಂದರೆ ಈ ಅಮ್ಮನ ಮನಸಿಗೆ ಗೊತ್ತಾಗಿದೆ, ನನ್ನ ಮಗನಿಗೆ ಏನೋ ಕೆಟ್ಟದ್ದು ಆಗತ್ತೆ. ಅವತ್ತು ಸಾಯಂಕಾಲ, ನಿನ್ನ ಮೊದಲು ರೂಮಿನಲ್ಲಿ ನೋಡಿದೆನಲ್ಲಾ ಆಗಲೇ ಅನಿಸಿತ್ತು—ಜ್ಞಾಪಕ ಇದೆಯಾ, ಆಗ ತಾನೇ ನಾವು ಬಂದಿದ್ದೆವು. ನಿನ್ನ ಕಣ್ಣು ನೋಡಿದ ತಕ್ಷಣ ಎಲ್ಲಾ ಗೊತ್ತಾಯಿತು. ನನ್ನ ಎದೆ ಹಿಂಡಿ ಹೋಯಿತು. ಮತ್ತೆ ಇವತ್ತು, ಬಾಗಿಲು ತೆಗೆದಾಗ, ನಿನ್ನ ನೋಡಿ, ಕೆಟ್ಟ ಗಳಿಗೆ ಬಂದಿದೆ ಅನ್ನಿಸತು. ರೋದ್ಯಾ, ರೋದ್ಯಾ, ಈಗಲೇ ಹೋಗತಾ ಇಲ್ಲ ತಾನೇ?’

‘ಇಲ್ಲ.’

‘ಮತ್ತೆ ಬರತೀಯ, ಅಲ್ಲವಾ?’

‘ಹ್ಞೂಂ…ಬರತೇನೆ.’

‘ರೋದ್ಯಾ, ಸಿಟ್ಟು ಮಾಡಿಕೊಳ್ಳಬೇಡಪ್ಪ, ನಿನ್ನ ಏನೂ ಕೇಳಲ್ಲ. ಕೇಳಕ್ಕೆ ಧೈರ್ಯ ಇಲ್ಲ. ಎರಡೇ ಮಾತು—ದೂರ ಹೋಗತಾ ಇದೀಯಾ?’

‘ಬಹಳ ದೂರ.’

‘ಏನಿದೆ ಅಲ್ಲಿ, ಕೆಲಸ, ಉದ್ಯೋಗ, ಏನಿದೆ?’

‘ದೇವರು ಏನು ಇಟ್ಟಿರತಾನೋ ಅದು… ಪ್ರಾರ್ಥನೆ ಮಾಡಮ್ಮಾ…’
ರಾಸ್ಕೋಲ್ನಿಕೋವ್ ಬಾಗಿಲಿಗೆ ಹೋದ. ಅಮ್ಮ ಅವನನ್ನು ಬಿಗಿಯಾಗಿ ಹಿಡಿದು ಹತಾಶಳಾಗಿ ದಿಟ್ಟಿಸಿದಳು. ಅವಳ ಮುಖದಲ್ಲಿ ಭೀತಿಯಿತ್ತು. ವಿಕಾರವಾಗಿತ್ತು.

‘ಸಾಕು, ಅಮ್ಮಾ…’ ಅಂದ ರಾಸ್ಕೋಲ್ನಿಕೋವ್. ಮನೆಗೆ ಬರುವ ತೀರ್ಮಾನ ಮಾಡಬಾರದಾಗಿತ್ತು ಅಂದುಕೊಂಡ.

‘ಹೋಗೇ ಬಿಡತೀಯೇನಪ್ಪಾ? ಹೋಗೇ ಬಿಡತೀಯಾ? ಬರತೀಯಾ… ನಾಳೆ ಬರತೀಯಾ?’

‘ಬರತೇನೆ, ಬರತೇನೆ. ಗುಡ್‍ ಬೈ.’
ಕೊನೆಗೂ ಅವಳಿಂದ ಬಿಡಿಸಿಕೊಂಡು ಹೊರಟ.

ತಾಜಾ ಸಂಜೆ. ಬೆಚ್ಚಗಿತ್ತು, ಹಿತವಾದ ಬಿಸಿಲಿತ್ತು. ವಾತಾವರಣ ಸ್ವಚ್ಛವಾಗಿತ್ತು. ರಾಸ್ಕೋಲ್ನಿಕೋವ್ ತನ್ನ ಮನೆಗೆ ಹೊರಟಿದ್ದ. ಆತುರವಿತ್ತು. ಸೂರ್ಯ ಮುಳಗುವುದರೊಳಗೆ ಎಲ್ಲ ಮುಗಿಸಬೇಕು ಅಂದುಕೊಂಡಿದ್ದ. ಅಲ್ಲಿಯ ತನಕ ಯಾರನ್ನೂ ನೋಡುವ ಮನಸ್ಸು ಇರಲಿಲ್ಲ. ಮನೆಗೆ ಹೋಗುತ್ತ ಗಮನಿಸಿದ. ನಸ್ತಾಸ್ಯ ಮಾಡುತ್ತಿದ್ದ ಕೆಲಸ ಬಿಟ್ಟು ಅವನನ್ನೇ ದಿಟ್ಟಿಸುತ್ತಿದ್ದಳು. ಕಣ್ಣಿನಲ್ಲೇ ಅವನನ್ನು ಹಿಂಬಾಲಿಸುತ್ತಿದ್ದಳು. ‘ಮನೆಯಲ್ಲಿ ಯಾರೂ ಇರದಿದ್ದರೆ ಸಾಕು,’ ಅಂದುಕೊಂಡ. ಪೋರ್ಫಿರಿಯನ್ನು ನೆನೆದು ಅಸಹ್ಯ ಪಟ್ಟುಕೊಂಡ. ರೂಮಿನ ಬಾಗಿಲು ತೆಗೆದಾಗ ದುನ್ಯಾ ಕಂಡಳು. ಒಬ್ಬಳೇ ಕೂತಿದ್ದಳು. ಯೋಚನೆಯಲ್ಲಿ ಮುಳುಗಿದ್ದಳು. ಅವಳು ಬಹಳ ಹೊತ್ತಿನಿಂದ ಕಾಯುತ್ತಿದ್ದ ಹಾಗಿತ್ತು. ಅವನು ಹೊಸ್ತಿಲ ಹತ್ತಿರವೇ ನಿಂತ. ಅವಳು ಬೆದರಿ, ಸೋಫಾದಿಂದ ಎದ್ದು ನೆಟ್ಟಗೆ ಅವನೆದುರು ಬಂದು ನಿಂತಳು. ಅವಳ ನೋಟದಲ್ಲಿ ಭಯವಿತ್ತು, ಸಮಾಧಾನಗೊಳ್ಳದ ದುಃಖವಿತ್ತು. ಅವಳಿಗೆ ಎಲ್ಲ ಗೊತ್ತಾಗಿದೆ ಅನ್ನುವುದು ಆ ನೋಟದಿಂದಲೇ ತಿಳಿಯಿತು ಅವನಿಗೆ.

‘ಒಳಕ್ಕೆ ಬರಲೋ, ಹಾಗೇ ಹೊರಟು ಹೋಗಲೋ?’ ಅನುಮಾನದಿಂದ ಕೇಳಿದ.

‘ಇಡೀ ದಿನ ಸೋನ್ಯಾ ಜೊತೆಯಲ್ಲಿದ್ದೆ. ಇಬ್ಬರೂ ನೀನು ಬರತೀಯ ಅಂತ ಕಾಯತಾ ಇದ್ದೆವು. ನೀನು ಅಲ್ಲಿಗೆ ಬಂದೇ ಬರತೀಯ ಅನಿಸಿತ್ತು.’
ರಾಸ್ಕೋಲ್ನಿಕೋವ್ ಒಳಕ್ಕೆ ಹೋಗಿ, ಸೋಫಾದ ಮೇಲೆ ಕೂತ. ದಣಿದು ಹೋಗಿದ್ದ.

‘ಸುಸ್ತಾಗಿದೆ, ದುನ್ಯಾ. ನಿಜವಾಗಲೂ. ಈ ಹೊತ್ತಿನಲ್ಲಿ ಪೂರಾ ಎಚ್ಚರವಾಗಿರಬೇಕು ಅಂದುಕೊಂಡಿದ್ದೆ. ಸುಧಾರಿಸಿಕೊಳ್ಳತೇನೆ.; ಅನುಮಾನಪಡುತ್ತ ಅವಳನ್ನು ನೋಡಿದ.

‘ರಾತ್ರಿಯೆಲ್ಲಾ ಎಲ್ಲಿದ್ದೆ?’

‘ಸರಿಯಾಗಿ ಜ್ಞಾಪಕ ಇಲ್ಲ, ತಂಗೀ. ಕೊನೆಗೂ ಮನಸ್ಸು ಮಾಡಬೇಕು ಅಂತ ನಡೆದೆ, ನೇವಾ ಹೊಳೆಯ ಹತ್ತಿರ ಎಷ್ಟೋ ಸಲ ಹೋದೆ. ಅಷ್ಟು ಜ್ಞಾಪಕ ಇದೆ. ಅಲ್ಲಿ ಮುಗಿಸಬೇಕು ಅಂತಿದ್ದೆ… ಆಗಲಿಲ್ಲ.ʼ ಪಿಸು ದನಿಯಲ್ಲಿ ಹೇಳಿದ. ಮತ್ತೆ ಅನುಮಾನದಿಂದ ಅವಳನ್ನು ನೋಡಿದ.

‘ದೇವರು ದೊಡ್ಡವನು. ನಮಗೆ ಇದ್ದಿದ್ದು ಅದೇ ಭಯ, ಸೋನ್ಯಾಗೆ, ನನಗೆ. ಇನ್ನೂ ಬದುಕಿನ ಮೇಲೆ ನಂಬಿಕೆ ಇದೆ ಅಂತಾಯಿತು. ಸದ್ಯ ದೇವರು ದೊಡ್ಡವನು!’

ರಾಸ್ಕೋಲ್ನಿಕೋವ್ ಕಹಿಯಾಗಿ ನಕ್ಕ.
‘ನನಗೆ ನಂಬಿಕೆ ಇರಲಿಲ್ಲ. ಈಗ ಅಮ್ಮನ ಹತ್ತಿರ ಹೋಗಿ ಅತ್ತೆ. ಇಬ್ಬರೂ ತಬ್ಬಿಕೊಂಡು ಅತ್ತೆವು. ನನಗೆ ನಂಬಿಕೆ ಇಲ್ಲ. ಆದರೂ ನನಗೋಸ್ಕರ ಪ್ರಾರ್ಥನೆ ಮಾಡಮ್ಮಾ ಅಂದೆ. ಎಲ್ಲಾ ಹೇಗೆ ನಡೆಯುತ್ತೋ ದೇವರಿಗೇ ಗೊತ್ತು ದುನ್ಯಾ. ನನಗೆ ಏನೂ ಗೊತ್ತಿಲ್ಲ.’

‘ಅಮ್ಮನ ಹತ್ತಿರ ಹೋಗಿದ್ದೆಯಾ? ಹೇಳಿದೆಯಾ?’ ದುನ್ಯಾ ಬೆದರಿ ಕೇಳಿದಳು. ‘ಹೇಳಕ್ಕೆ ಹೇಗೆ ಧೈರ್ಯ ಬಂತು ನಿನಗೆ?’

‘ಇಲ್ಲ ಅಮ್ಮನಿಗೆ ಹೇಳಲಿಲ್ಲ… ಬಾಯಿ ಬಿಟ್ಟು ಹೇಳಲಿಲ್ಲ. ಆದರೂ ಅವಳಿಗೆ ಗೊತ್ತಾಯಿತು. ನಿನ್ನೆ ರಾತ್ರಿ ನಿದ್ದೆಯಲ್ಲಿ ನೀನು ಹೇಳಿದ್ದು ಕೇಳಿಸಿಕೊಂಡಳಂತೆ. ಅರ್ಧಂಬರ್ಧ ಅರ್ಥವಾಯಿತಂತೆ. ನಾನು ಹೋಗಬಾರದಾಗಿತ್ತೋ ಏನೋ. ಯಾಕೆ ಹೋದೆನೋ. ಗೊತ್ತಿಲ್ಲ. ನಾನು ದುಷ್ಟ, ದುನ್ಯಾ.’

‘ದುಷ್ಟ, ಆದರೂ ಹೋಗಿ ನೋವು ಪಡುವುದಕ್ಕೆ ಸಿದ್ಧವಾಗಿದೀಯ. ಹೋಗತಾ ಇದೀಯ ತಾನೇ?’

‘ಹ್ಞೂಂ. ಈಗಲೇ. ಆದರೂ, ಈ ನಾಚಿಕೆ ತಪ್ಪಿಸಿಕೊಳ್ಳಬೇಕು ಅಂತಲೇ ಮುಳುಗಿ ಸಾಯಕ್ಕೆ ಹೊರಟಿದ್ದೆ, ದುನ್ಯಾ. ಸೇತುವೆ ಮೇಲೆ ನಿಂತು ಯೋಚನೆ ಮಾಡಿದೆ. ನಾನು ಗಟ್ಟಿಗನಾಗಿರುವುದು ನಿಜವಾಗಿದ್ದರೆ ಈ ನಾಚಿಕೆಗೂ ಹೆದರಬಾರದು ನಾನು ಅಂದುಕೊಂಡೆ. ಇದು ಅಭಿಮಾನವಾ, ದುನ್ಯಾ?’

‘ಹೌದು, ರೋದ್ಯಾ, ಅಭಿಮಾನ.’
ಆರಿ ಹೋಗಿದ್ದ ಅವನ ಕಣ್ಣಿನಲ್ಲಿ ಮತ್ತೆ ಬೆಳಕು ಹೊತ್ತಿದ ಹಾಗಿತ್ತು. ತನಲ್ಲಿ ಇನ್ನೂ ಅಭಿಮಾನವಿದೆ ಎಂದು ಸಂತೋಷವಾದ ಹಾಗಿತ್ತು.

‘ನನಗೆ ನೀರು ನೋಡಿ ಭಯ ಆಗಿ ಬಂದು ಬಿಟ್ಟೆ ಅನಿಸತ್ತಾ, ದುನ್ಯಾ?’ ಅವಳ ಮುಖ ನೋಡುತ್ತ ವಿಕಾರವಾಗಿ ನಗುತ್ತ ಕೇಳಿದ.

‘ಸಾಕು, ರೋದ್ಯಾ! ಸಾಕೂ!’ ದುನ್ಯಾ ಕಹಿಯಾಗಿ ಅಂದಳು.
ಬಹಳ ಹೊತ್ತು ಮೌನವಿತ್ತು. ತಲೆ ತಗ್ಗಿಸಿ ನೆಲ ನೋಡುತ್ತ ಕೂತಿದ್ದ. ದುನ್ಯಾ ಟೇಬಲ್ಲಿನ ಇನ್ನೊಂದು ಪಕ್ಕದಲ್ಲಿ ನಿಂತು ಅವನು ನೋಡುತ್ತ ನೋವುಪಡುತ್ತಿದ್ದಳು. ಅವನು ಇದ್ದಕಿದ್ದ ಹಾಗೆ ಎದ್ದ.

‘ಹೊತ್ತಾಯಿತು. ಹೋಗತೇನೆ. ಹೋಗಿ. ಒಪ್ಪಿಕೊಳ್ಳತೇನೆ. ಶರಣಾಗತಿ. ಗೊತ್ತಿಲ್ಲ ಏನೂ.’
ಅವಳ ಕೆನ್ನೆಯ ಮೇಲೆ ದೊಡ್ಡ ಕಂಬನಿ ಉದುರುತ್ತಿದ್ದವು.

‘ಅಳತಾ ಇದೀಯಾಮ್ಮಾ. ನನ್ನ ಕೈ ಹಿಡಿದು ಸಹಾಯ ಮಾಡಲ್ಲವಾ?’

‘ಅನುಮಾನಾನಾ?’
ಅವಳು ಭದ್ರವಾಗಿ ಅಪ್ಪಿಕೊಂಡಳು.

‘ನೋವು ಪಡುತ್ತ ಸಫರ್ ಮಾಡಕ್ಕೆ ಹೋಗತಾ ಇದೀಯ. ಅದರಿಂದ ನಿನ್ನ ಅರ್ಧ ಅಪರಾಧ ತೊಳೆದು ಹೋಗಿದೆ, ಅಲ್ಲವಾ?’ ಅನ್ನುತ್ತ ಅವನಿಗೆ ಬಿಗಿಯಾಗಿ ಒತ್ತಿಕೊಂಡು ಅತ್ತಳು, ಮುತ್ತಿಟ್ಟಳು.

‘ಅಪರಾಧ? ಯಾವ ಅಪರಾಧ?’ ಇದ್ದಕಿದ್ದ ಹಾಗೆ ಸಿಟ್ಟಿನಿಂದ ಕೂಗಿದ. ‘ದುಷ್ಟ ಅಪಾಯಕಾರೀ ಹೇನನ್ನ ಹೊಸಕಿ ಹಾಕಿದೆ. ಬಡ್ಡಿಗೆ ಸಾಲಕೊಡುವ ಗಿರವಿಯಂಗಡಿ ಮುದುಕಿ, ಯಾರಿಗೂ ಉಪಯೋಗಕ್ಕೆ ಬರದವಳು. ಅಂಥವಳನ್ನ ನಲವತ್ತು ಸಾರಿ ಕೊಂದರೂ ಕ್ಷಮೆ ಇರತ್ತೆ ಬಡವರ ರಕ್ತ ಹೀರತಿದ್ದಳು. ಅವಳನ್ನ ಕೊಂದದ್ದು ಅಪರಾಧಾನಾ? ನನಗೆ ಹಾಗೆ ಅನಿಸಿಲ್ಲ, ಅದನ್ನ ತೊಳೆದುಕೊಳ್ಳುವ ಯೋಚನೆಯೂ ಇಲ್ಲ. ಯಾಕೆ ಎಲ್ಲರೂ ನನ್ನ ಎಲ್ಲಾ ಕಡೆಯಿಂದಲೂ ತಿವಿದು ತಿವಿದು ‘ಅಪರಾಧ! ಅಪರಾಧ!’ ಅನ್ನುತಿದ್ದೀರಿ? ನನ್ನ ಹೆದರುಪುಕ್ಕಲುತನ ಎಷ್ಟು ಅಸಂಬದ್ಧ ಅಂತ ಈಗ ತಿಳೀತಾ ಇದೆ. ಈ ಅನಗತ್ಯ ನಾಚಿಕೆಯಲ್ಲ ಬೇಡ ಅಂತ ತೀರ್ಮಾನ ಮಾಡಿದೆ. ನನಗೆ ಬುದ್ಧಿ ಇಲ್ಲ, ಜಾಣತನ ಇಲ್ಲ. ನನಗೆ ಲಾಭ ಆಗಲಿ ಅಂತ ಸೂಚನೆ ಕೊಟ್ಟನಲ್ಲ ಆ ಪೋರ್ಫಿರಿ ಅದಕ್ಕೇ ಹೀಗೆ ಅಂತ ಕಾಣತ್ತೆ…’

‘ಅಣ್ಣಾ, ಏನು ಹೇಳತಾ ಇದೀಯ, ಅಣ್ಣಾ! ನೀನು ರಕ್ತ ಹರಿಸಿದೆ!’ ದುನ್ಯಾ ಹತಾಶಳಾಗಿ ಚೀರಿದಳು.

‘ಯಾರು ತಾನೇ ರಕ್ತ ಹರಿಸಲ್ಲ, ಈ ಜಗತ್ತಿನಲ್ಲಿ ರಕ್ತದ ಪ್ರವಾಹಾನೇ ಹರಿದಿದೆ. ಶಾಂಪೇನ್ ಚೆಲ್ಲಾಡುವ ಹಾಗೆ ರಕ್ತ ಚೆಲ್ಲಾಡಿದಾರೆ. ಹಾಗೆ ಮಾಡಿದವರ ತಲೆಯ ಮೇಲೆ ಕಿರೀಟ ಇಟ್ಟು ಅವರನ್ನ ಮನುಷ್ಯಕುಲದ ಉದ್ಧಾರಮಾಡಿದವರು ಅಂತ ಕರೆದಿದ್ದಾರೆ. ಸ್ವಲ್ಪ ಗಮನಕೊಟ್ಟು ನೋಡು. ಜನಕ್ಕೆ ಒಳ್ಳೆಯದಾಗಲಿ ಅಂತ ಇಷ್ಟಪಟ್ಟೆ. ಈ ಒಂದು ಪೆದ್ದುತನದ ಬದಲು ನೂರು, ಸಾವಿರ ಒಳ್ಳೆಯ ಕೆಲಸ ಮಾಡಬಹುದಾಗಿತ್ತು. ಪೆದ್ದುತನ ಕೂಡ ಅಲ್ಲ. ಅಸಡ್ಡಾಳವಾಗಿ ಮಾಡಿದ ಕೆಲಸ. ನನ್ನ ಇಡೀ ಐಡಿಯ ಪೆದ್ದು ಐಡಿಯ ಅಲ್ಲ. ಈಗ ಸೋತಾಗ ಹಾಗೆ ಕಾಣತ್ತೆ. ಸೋತದ್ದೆಲ್ಲ ಪೆದ್ದು ತಾನೇ! ಈ ಪೆದ್ದು ಕೆಲಸ ಮಾಡಿ ನಾನು ಸ್ವತಂತ್ರನಾಗಬೇಕು, ಸಂಪಾದನೆಯ ಮೊದಲ ಹಜ್ಜೆ ಇಡಬೇಕು, ಆಮೇಲೆ ಅಗಾಧವಾದ ಉಪಯುಕ್ತ ಕೆಲಸಗಳನ್ನು ಮಾಡಬಹುದು ಅಂದುಕೊಂಡೆ… ಆದರೆ, ನೋಡು, ಮೊದಲ ಹೆಜ್ಜೆಯನ್ನೇ ತಡಕೊಳ್ಳಕ್ಕೆ ಆಗಲಿಲ್ಲ! ಅಂಥಾ ಸ್ಕೌಂಡ್ರಲ್ ನಾನು! ಅದು ಪಾಯಿಂಟು! ಹಾಗಿದ್ದರೂ ನೀನು ನೋಡಿದ ಹಾಗೆ ನೋಡಲ್ಲ ನಾನು ಈ ಕೆಲಸವನ್ನ. ಗೆದ್ದಿದ್ದರೆ ಕಿರೀಟ ಸಿಗತಿತ್ತು, ಈಗ ಬೋನಿಗೆ ಬೀಳಕ್ಕೆ ಹೋಗತಾ ಇದೇನೆ.’

‘ಏನು ಹೇಳತಾ ಇದೀಯಣ್ಣಾ! ಹಾಗಲ್ಲ, ಅದು.’

‘ಆಹಾ, ನಾನು ಮಾಡಿದ ಕೆಲಸಕ್ಕೆ ಚೆಲುವಾದ ಆಕಾರ ಇರಲಿಲ್ಲ! ಸೈನ್ಯವು ಮುತ್ತಿಗೆ ಹಾಕುವಾಗ ಜನರ ಮೇಲೆ ಬಾಂಬು ಎಸೆಯುವುದು ಅಚ್ಚುಕಟ್ಟಾದ ಕೆಲಸ ಅಂತ ಯಾಕೆ ತಿಳಿದಿದ್ದಾರೋ ಗೊತ್ತಿಲ್ಲ. ಅಚ್ಚುಕಟ್ಟಿನ ಬಗ್ಗೆ ಯೋಚನೆ ಮಾಡುವುದೇ ದೌರ್ಬಲ್ಯದ ಮೊದಲ ಕುರುಹು. ಇದು ಇಷ್ಟು ಚೆನ್ನಾಗಿ ಇವತ್ತಿಗೆ ಮೊದಲು ಯಾವತ್ತೂ ಅರಿವಾಗಿರಲಿಲ್ಲ. ನಾನು ಮಾಡಿದ್ದು ಯಾಕೆ ಅಪರಾಧ ಅಂತ ಈಗಲೂ ಗೊತ್ತಾಗಿಲ್ಲ! ಈಗ ಇರುವಷ್ಟು ದೃಢವಾಗಿ ನಾನೆಂದೂ ಇರಲಿಲ್ಲ!…’

ಅವನ ಬಿಳಿಚಿದ, ಬತ್ತಿದ ಕೆನ್ನೆಗೆ ಬಣ್ಣ ಕೂಡ ಬಂದಿತ್ತು. ಕೊನೆಯ ಮಾತು ಹೇಳುತ್ತಿರುವಾಗ ಇದ್ದಕಿದ್ದ ಹಾಗೆ ದುನ್ಯಾಳನ್ನು ನೋಡಿದ್ದ. ಅವಳ ಕಣ್ಣಿನಲ್ಲಿ ಅಪಾರ ನೋವು ಕಂಡು ತಟ್ಟನೆ ಎಚ್ಚರಗೊಂಡ. ಈ ಇಬ್ಬರು ಹೆಂಗಸರಿಗೆ ದುಃಖ ತಂದಿದ್ದೇನೆ, ಕೊನೆಗೂ ನನ್ನಿಂದಲೇ ಅಲ್ಲವಾ ಇವರಿಗೆ ಈ ದುಃಖ ಅನ್ನಿಸಿತು.

‘ದುನ್ಯಾ! ನಾನು ತಪ್ಪು ಹೇಳಿದ್ದರೆ, ಕ್ಷಮಿಸು. (ನಾನು ತಪ್ಪಿದ್ದರೆ ಕ್ಷಮೆ ನನಗೆ ಇಲ್ಲ ಅಂತಾಗಿದ್ದರೂ ಸರಿ). ಗುಡ್‍ ಬೈ! ನನ್ನ ಮಾತು ನೀನು ಒಪ್ಪದೆ ಇದ್ದರೂ ಪರವಾಗಿಲ್ಲ. ಹೊತ್ತು ಬಂದಿದೆ. ನನ್ನ ಹಿಂದೆ ಬರಬೇಡ. ದಯವಿಟ್ಟು. ನಾನಿನ್ನೂ…ಈಗ ಹೊರಡು, ಈಗಲೇ. ಪ್ಲೀಸ್, ಅಮ್ಮನ ಜೊತೆ ಇರು. ಒಂದು ನಿಮಿಷಾನೂ ಅವಳನ್ನ ಬಿಟ್ಟಿರಬೇಡ. ನಾನು ಹೊರಟಾಗ ಎಷ್ಟು ಕಳವಳಪಟ್ಟಳು ಅಂದರೆ, ಅವಳು ಬದುಕಲ್ಲ ಅನ್ನಿಸಿತು. ಅಮ್ಮ ಸಾಯತಾಳೆ, ಅಥವಾ ಅವಳಿಗೆ ಹುಚ್ಚು ಹಿಡಿಯತ್ತೆ! ರಝುಮಿಖಿನ್ ನಿನ್ನ ಜೊತೆ ಇರತಾನೆ. ಅವನಿಗೆ ಹೇಳಿದೇನೆ… ನನ್ನ ನೆನೆದು ಅಳಬೇಡ. ನಾನು ಕೊಲೆಗಾರ ಆಗಿದ್ದರೂ ಜೀವನ ಪೂರ್ತಿ ಧೈರ್ಯವಾಗಿರಕ್ಕೆ, ಪ್ರಾಮಾಣಿಕವಾಗಿರಕ್ಕೆ ಪ್ರಯತ್ನ ಪಡತೇನೆ. ಯಾವತ್ತಾದರೂ ನನ್ನ ಹೆಸರು ನಿನ್ನ ಕಿವೀಗೆ ಬೀಳತ್ತೆ. ಸಾಧಿಸತೇನೆ… ಸರಿ, ಗುಡ್‍ ಬೈ…’ ದುನ್ಯಾಳ ಕಣ್ಣಲ್ಲಿ ವಿಚಿತ್ರ ಭಾವ ಕಂಡು ಕೊನೆಯ ಮಾತುಗಳನ್ನು ವಾಗ್ದಾನಗಳನ್ನು ಆತುರವಾಗಿ ಹೇಳಿ ಮುಗಿಸಿದ. ‘ಯಾಕೆ ಅಳತಾ ಇದೀಯ? ಅಳಬೇಡ, ಅಳಬೇಡ, ನಾವೇನೂ ಶಾಶ್ವತವಾಗಿ ದೂರ ಹೋಗತಾ ಇಲ್ಲ… ಆಹ್, ಹೌದು, ತಾಳು, ಮರೆತಿದ್ದೆ!…’

ಟೇಬಲ್ಲಿನ ಹತ್ತಿರ ಹೋದ. ಧೂಳು ಮೆತ್ತಿದ್ದ ಪುಸ್ತಕದ ಹಾಳೆಗಳನ್ನು ತಿರುವಿ ಅದರಲ್ಲಿದ್ದ ವಾಟರ ಕಲರ್ ಚಿತ್ರ ತೆಗೆದುಕೊಂಡ. ಅದು ಓನರಮ್ಮನ ಮಗಳ ಚಿತ್ರ. ಅವನು ಮದುವೆಯಾಗಬೇಕಾಗಿದ್ದ ಹುಡುಗಿಯದ್ದು. ಜ್ವರ ಬಂದು ಸತ್ತು ಹೋಗಿದ್ದಳು. ಕಾನ್ವೆಂಟ್ ಮಠ ಸೇರಬೇಕು ಅಂದುಕೊಂಡಿದ್ದಳಲ್ಲ, ಅದೇ ಹುಡುಗಿಯ ಚಿತ್ರ. ಹುಡುಗಿಯ ಭಾವ ತುಂಬಿದ ರೋಗಗ್ರಸ್ತ ಮುಖವನ್ನು ಕೆಲವು ಕ್ಷಣ ನೋಡಿದ. ಚಿತ್ರಕ್ಕೆ ಮುತ್ತಿಟ್ಟು ದುನ್ಯಾಳ ಕೈಗೆ ಕೊಟ್ಟ.

‘ಆ ವಿಚಾರ ಅವಳ ಜೊತೆ ತುಂಬ ಮಾತಾಡತಿದ್ದೆ. ಅವಳ ಜೊತೆ ಮಾತ್ರ ಅಂಥ ಮಾತು ಆಡತಿದ್ದೆ,’ ಸ್ವಲ್ಪ ಹೊತ್ತು ಯೋಚನೆ ಮಾಡಿ ಮತ್ತೆ ಹೇಳಿದ: ‘ನಾನು ಮಾಡಿದೆನಲ್ಲ ಅಂಥ ರಾಕ್ಷಸ ಕೆಲಸ ಕೂಡ ಮಾಡತೇನೆ ಅಂತ ಅವಳ ಹತ್ತಿರ ಹೇಳಿಕೊಂಡಿದ್ದೆ. ಅಯ್ಯೋ, ದುಃಖ ಪಡಬೇಡ. ನಿನ್ನ ಹಾಗೇ ಅವಳು ಕೂಡ ನಾನು ಅಂಥ ಕೆಲಸ ಮಾಡುವುದನ್ನ ಒಪ್ಪಿರಲಿಲ್ಲ. ಸದ್ಯ, ಅವಳು ಬದುಕಿಲ್ಲ ಅನ್ನುವುದೇ ಸಂತೋಷ. ಮುಖ್ಯ ಏನಪ್ಪಾ ಅಂದರೆ ಎಲ್ಲ ಮುಗಿದು ಹೋಗತ್ತೆ. ನನ್ನ ಬದುಕು ಮುರಿದು ತುಂಡಾಗತ್ತೆ,’ ವಿಷಾದದಲ್ಲಿ ಅದ್ದಿಹೋದ. ‘ಸಿದ್ಧವಾಗಿದ್ದೇನಾ? ನಾನೇ ಅದನ್ನು ಬಯಸಿದ್ದೇನಾ? ಈ ಪರೀಕ್ಷೆ ಮುಖ್ಯ ಅನ್ನತಾರೆ! ಅರ್ಥವಿರದ ಇಂಥ ಪರೀಕ್ಷೆಗಳು ಯಾಕೆ? ಶಿಕ್ಷೆ ಅನುಭವಿಸಿದ ಮೇಲೆ ನನಗೆ ಚೆನ್ನಾಗಿ ಅರ್ಥವಾಗತ್ತಾ? ಇಪ್ಪತ್ತು ವರ್ಷ ಕಠಿಣ ಶಿಕ್ಷೆ ಅನುಭವಿಸಿ, ನಜ್ಜುಗುಜ್ಜಾಗಿ, ನೋವುಪಟ್ಟು, ಮೂರ್ಖನ ಹಾಗೆ ಮುದುಕನಾಗಿ ಶಕ್ತಿ ಕುಂದಿದ ಮೇಲೆ ಈಗ ತಿಳಿದಿರುವುದಕ್ಕಿಂತ ಬೇರೆ ಇನ್ನೇನಾದರೂ ತಿಳಿಯುವುದು ಇರತ್ತಾ? ಇಂಥದಕ್ಕೆ ಯಾಕೆ ಒಪ್ಪಿಕೊಂಡೆ ಈಗ? ಇವತ್ತು ಬೆಳಗಿನ ಜಾವ ನೇವಾ ಹೊಳೆಯ ಸೇತುವೆ ಮೇಲೆ ನಿಂತಿದ್ದಾಗ ನಾನು ಸ್ಕೌಂಡ್ರಲ್ ಅಂತ ಗೊತ್ತಿತ್ತು!’

ಕೊನೆಗೆ, ಇಬ್ಬರೂ ಬೇರೆ ಬೇರೆ ದಿಕ್ಕಿಗೆ ಹೊರಟರು. ದುನ್ಯಾಗೆ ಬಹಳ ಕಷ್ಟವಾಗಿತ್ತು. ಆದರೂ ಅಣ್ಣನ ಮೇಲೆ ಪ್ರೀತಿ ಇತ್ತು! ಹೊರಟಳು. ಐವತ್ತು ಹೆಜ್ಜೆ ನಡೆದು, ಇನ್ನೊಂದು ಸಾರಿ ತಿರುಗಿ ನೋಡಿದಳು. ಅವನು ಇನ್ನೂ ಕಾಣುತ್ತಿದ್ದ. ರಸ್ತೆಯ ಮೂಲೆಗೆ ತಲುಪಿದಾಗ, ಅವನೂ ತಿರುಗಿ ನೋಡಿದ. ಕೊನೆಯ ಬಾರಿಗೆ. ಅವಳು ತನ್ನನ್ನು ನೋಡುತ್ತಿರುವುದು ಗಮನಿಸಿ ಅಸಹನೆಯಿಂದ ರೇಗಿ, ಹೋಗುವಂತೆ ಕೈ ಬೀಸಿದ, ತಟ್ಟನೆ ಹೊರಟು ಬಿಟ್ಟ.

‘ನಾನು ದುಷ್ಟ, ಗೊತ್ತು’ ಅಂದುಕೊಂಡ. ಸಿಟ್ಟು ಮಾಡಿಕೊಂಡು ದುನ್ಯಾಳತ್ತ ಕೈ ಬೀಸಿದ್ದನ್ನು ನೆನೆದುಕೊಂಡು ನಾಚಿದ. ‘ಅವರೆಲ್ಲ ಯಾಕೆ ನನ್ನ ಅಷ್ಟೊಂದು ಪ್ರೀತಿ ಮಾಡತಾರೆ. ನಾನು ಅಯೋಗ್ಯ! ನಾನೊಬ್ಬನೇ ಇದ್ದಿದ್ದರೆ ಚೆನ್ನಾಗಿರತಿತ್ತು. ಅಥವಾ ನನ್ನ ಪ್ರೀತಿ ಮಾಡುವವರು ಯಾರೂ ಇಲ್ಲದಿದ್ದರೆ ಚೆನ್ನಾಗಿರತಿತ್ತು! ಅದು ಯಾವುದೂ ಸಾಧ್ಯ ಇಲ್ಲ! ಇನ್ನು ಹದಿನೈದು, ಇಪ್ಪತ್ತು ವರ್ಷದಲ್ಲಿ ನನ್ನ ಮನಸ್ಸು ದೀನವಾಗಿ, ಜನದ ಮುಂದೆ ಮೊಳಕಾಲೂರಿ ಕುಂಯ್‍ಗುಡುತ್ತೇನೋ? ನನ್ನ ಪ್ರತಿಮಾತಿಗೂ ಜನ ದರೋಡೆಕೋರ, ಕೊಲೆಗಾರ ಅನ್ನಬಹುದೋ? ಹೌದು! ಅದಕ್ಕೇ ಈಗ ಗಡೀಪಾರು ಮಾಡತಾರೆ, ಅವರಿಗೆ ಬೇಕಾದ್ದು ಅದೇ… ಈ ಬೀದಿಯಲ್ಲಿ ದಡಬಡಸಿ ಹೋಗತಾ ಇರೋರು ಒಬ್ಬೊಬ್ಬರೂ ಸ್ಕೌಂಡ್ರಲ್‍ಗಳೇ, ಒಬ್ಬೊಬ್ಬರೂ ದರೋಡೆಕೋರರೇ. ಪೆದ್ದರಿಗಿಂತ ದಡ್ಡರೇ! ನನಗೆ ಗಡೀಪಾರು ಆಜ್ಞೆ ಬರಲಿ, ಒಬ್ಬೊಬ್ಬರೂ ಉದಾತ್ರ ಘನವಂತರ ಹಾಗೆ ರೇಗಿ, ನನ್ನ ಬೈಯುತ್ತಾರೆ! ಥೂ! ಇವರನ್ನೆಲ್ಲ ಕಂಡರೆ ದ್ವೇಷ ನನಗೆ!’

ಆಳವಾದ ಯೋಚನೆಯಲ್ಲಿ ಮುಳುಗಿದ: ಅದು ಹೇಗೆ ಅವನು ಅಪರಾಧಿಯಾಗಿ ಶಿಕ್ಷೆ ಅನುಭವಿಸಿ ವಿನಯ ಬೆಳೆಸಿಕೊಂಡು, ಒಂದಿಷ್ಟೂ ವಿಚಾರ ಮಾಡದೆ ಎಲ್ಲರ ಎದುರಿಗೆ ಶರಣಾಗುತ್ತಾನೆ? ಯಾಕಾಗಬಾರದು? ಅಲ್ಲ, ಆಗಬೇಕಾದ್ದೇ ಹಾಗೆ. ಇಪ್ಪತ್ತು ವರ್ಷದ ಕಠಿಣ ಶಿಕ್ಷೆ ಅವನನ್ನು ಪೂರಾ ಮುಗಿಸಿಗಿಡುವುದಿಲ್ಲವೇ? ನೀರು ಕೂಡಾ ಕಲ್ಲನ್ನು ನಿಧಾನವಾಗಿ ಸವೆಸಿಬಿಡುತ್ತದೆ. ಹಾಗಿದ್ದರೆ ಬದುಕಬೇಕು ಯಾಕೆ? ಇದೆಲ್ಲಾ ಗೊತ್ತಿದ್ದರೂ ಪುಸ್ತಕದಲ್ಲಿ ಬರೆದಿಟ್ಟ ಹಾಗೇ ಆಗತ್ತೆ ಅಂತ ಗೊತ್ತಿದ್ದರೂ ನಾನು ಯಾಕೆ ಈಗ ತಪ್ಪೊಪ್ಪಿಕೊಳ್ಳುವುದಕ್ಕೆ ಹೋಗುತ್ತಿದ್ದೇನೆ?

ಅವತ್ತು ಸಾಯಂಕಾಲದಿಂದ ನೂರನೆಯ ಬಾರಿಯೋ ಏನೋ ಆ ಪ್ರಶ್ನೆ ಕೇಳಿಕೊಳ್ಳುತ್ತಿದ್ದ. ಆದರೂ ಹೋಗುತ್ತಿದ್ದ.